ಹೌದು.. ! ಶಾಂತಕ್ಕ ಬದಲಾಗಿದ್ದಾಳೆ…

ಚಿತ್ರ: ಮಂಗಳಾ ಶೆಟ್ಟಿ

ನಾನು ನೋಡುತ್ತಲೇ ಇದ್ದೇನೆ ! ಹೌದು ಅವಳು ಬದಲಾಗಿದ್ದಾಳೆ ! ಅಥವಾ ನನ್ನ ಕಣ್ಣುಗಳಿಗೆ ಹಾಗೇ ಕಾಣುತ್ತಿರಬೇಕು ! ಮೊದಲಿನಂತೆ ಅಳುಮುಂಜಿಯಂತೆ ಅಳುವುದಿಲ್ಲ, ಕನಸುಗಳ ಗೋಪುರ ನನಸಾಗಬೇಕೆಂಬ ಇರಾದೆ ಇದ್ದಂತಿಲ್ಲ. ಹಾಂ ! ಇರಾದೆ ಇದೆ. ಅವಳಿಗೆ ಅವಳ ಮೇಲಲ್ಲ, ತನ್ನವರ ಬಾಳಿನ ನಾಳೆಗಳ ಮೇಲೆ ! ಅಬ್ಬಾ.. ಹೇಗೆ ಸಾಧ್ಯವೋ.. ಇಷ್ಟೊಂದು ನಿಸ್ವಾರ್ಥತೆ ಅದೇ ಮನಸ್ಸಿನಲ್ಲಿ ಚಿಗುರೊಡೆಯಲು ?
ಈಗೀಗ ಅವಳು ಗೋಗರೆಯುವುದಿಲ್ಲ. ಹಾಗೆಂದು ಅಳುವುದನ್ನು ನಿಲ್ಲಿಸಿಯೇ ಬಿಟ್ಟಿದ್ದಾಳೆ ಎಂದು ಮಾತ್ರ ಹೇಳಲಾರೆ ? ಅದೇ ಮಸಿ ಹಿಡಿದ ಮಾಡಿನ ಕೆಳಗೆ ನಿಂತು ಅಳುತ್ತಾಳೆ. ಫಕ್ಕನೆ ಯಾರನ್ನಾದರೂ ನೋಡಿದರೆ ಸೀರೆಯ ಸೆರಗಿನ ತುದಿಯಿಂದ ಕಣ್ಣೊರೆಸುತ್ತಾ, “ಅಬ್ಬಾ.. ಈ ಮಾಡು ಕುಂಬಾಯಿದು ಹೇಳಿ ಕಾಣ್ತು. ರಿಪೇರಿಗೆ ಆಚ ಮನೆ ಚೋಮನ ಬಪ್ಪಲೆ ಹೇಳೆಕ್ಕು” ಎಂದು ಅಳುವಿನ ಕಾರಣವನ್ನು ಮುಚ್ಚಿಹಾಕುತ್ತಾಳೆ.

ಮದುವೆಯಾದ ಹೊಸತರಲ್ಲಿ ಆಕೆ ಅತ್ತದ್ದಕ್ಕೆ ಲೆಕ್ಕವಿಲ್ಲವಂತೆ. ಹೊಸದಾದ ಪರಿಸರದಲ್ಲಿ ಹೊಂದಿಕೊಳ್ಳಲು ಹೆಣಗಾಡುವ ನನ್ನನ್ನು ಕಂಡಾಗಲೆಲ್ಲ ಶಾಂತಕ್ಕನ ಗುಣಗಾನ ಮಾಡುತ್ತಿದ್ದರು ನನ್ನವರು. ಆಗೆಲ್ಲಾ ಮನೆಯಲ್ಲೇ ಕೂತು ಉದಾಸೀನತೆ ಆವರಿಸಿದಾಗ ನನ್ನ ಸವಾರಿ ಶಾಂತಕ್ಕನ ಮನೆಯ ಕಡೆ ಸಾಗುತ್ತಿತ್ತು. ನನ್ನನ್ನು ಕಂಡಾಗಲೆಲ್ಲಾ ಪ್ರೀತಿಯಿಂದ ಸತ್ಕರಿಸುವ ಅವಳ ಮಮತೆಯನ್ನು ಮರೆಯಲು ಸಾಧ್ಯವೇ ಹೇಳಿ ? ಹೀಗೆ ಒಡನಾಟ ಹೆಚ್ಚೆಚ್ಚು ಆದಂತೆ ನಮ್ಮೀರ್ವರಲ್ಲಿ ಆತ್ಮೀಯತೆ ಮನೆ ಮಾಡಿದ್ದು ಮಾತ್ರವಲ್ಲದೆ ಶಾಂತಕ್ಕ ತನ್ನ ಮನೆಯ ಆಗು - ಹೋಗುಗಳ ಕುರಿತು ಚಾಚೂ ತಪ್ಪದೇ ವರದಿ ಒಪ್ಪಿಸುತ್ತಿದ್ದಳು. ವಿವಾಹವಾದ ದಿನಗಳ ಬಗ್ಗೆ ಕಣ್ತುಂಬಿಕೊಂಡು ಅವಳೇ ಹೇಳಿದ ಮಾತುಗಳು ಖಂಡಿತಾ ಮರೆಯಲು ಸಾಧ್ಯವಿಲ್ಲವಷ್ಟೇ ? “ಈಗಿನ ಹಾಂಗೆ ಆವಾಗ ಎಲ್ಲಿತ್ತು ಮಗಾ, ಎಲ್ಲ ಆನೇ ಮಾಡಿದ್ದು. ಯಾರೂ ಇತ್ತಿದವಿಲ್ಲೆ. ಕೂಡು ಕುಟುಂಬ, ಬಡತನಕ್ಕೆ ಮಕ್ಕಳು ಹೆಚ್ಚು ಹೇಳಿದ ಹಾಂಗೆ ಎಂಗ ಎಂಟೂ ಕೂಸುಗಳೇ. ಒಂದು ಮಾಣಿ ಇತ್ತಿದನಡ್ಡ, ಅದೆಂತದೋ ಎರಡು ವರ್ಷ ಆವುತ್ತಿದ್ದ ಹಾಂಗೆ ಹೋದ ಹೇಳಿ ಅಮ್ಮ ಹೇಳಿದ ನೆನಪು. ಇನ್ನು ಕೂಸುಗಳ ವಿಷ್ಯಕ್ಕೆ ಬಂದ್ರೆ ಮದುವೆಗೆ ವರ ಬಂದ್ರೆ ಮುಗುತ್ತು. ಮದುವೆ ಮಾಡಿ ಕೊಡುದೇ ! ಮನೆ ಹೇಂಗೆ ? ಜನ ಹೇಂಗೆ ಎಲ್ಲಾ ನೋಡುವ ಕ್ರಮವೇ ಇಲ್ಲೆ. ಎಲ್ಲಾ ಧಾರೆ ಮುಗುದು ಗಂಡನ ಮನೆಗೆ ಬಂದಪ್ಪಗಲೇ ಗೊಂತಪ್ಪದು. ಆಮೇಲೆ ಆದ್ರೂ ಗೊಂತಾಗಿ ಎಂತ ಮಾಡುಲಿದ್ದು ? ಕಷ್ಟವಾ - ಸುಖವಾ .. ಉಸಿರಿಪ್ಪನ್ನಾರ ಜೀಕಿಕೊಂಡು ಹೋಪದು. ಇಲ್ಲದ್ರೆ ಮರ್ಯಾದೆ ಹೋಪದು ಎನ್ನ ತವರಿಂದೇ ಅಲ್ದಾ ?” ಎಂದು ಹೇಳಿ ಒಮ್ಮೆ ಅತ್ತಿದ್ದಳು. ಹೆಮ್ಮೆ ಎನಿಸಿತು, ಶಾಂತಕ್ಕ ಕೇವಲ ನನ್ನ ಒಡನಾಡಿ ಮಾತ್ರವಲ್ಲದೇ ಅದಕ್ಕೂ ಮಿಗಿಲಾದ ಉತ್ತಮ ಸ್ಥಾನದಲ್ಲಿ ನನಗೆ ಕಂಡುಬಂದಳು. ಅದೇ ಕೊನೆ, ನಾ ಅವಳ ಕಣ್ಣಲ್ಲಿ ಕಂಬನಿ ನೋಡಿದ್ದು. ನಂತರವೂ ಅತ್ತಿರಬೇಕು, ಏಕಾಂತದ ಆ ನೀರವ ಇರುಳುಗಳಲ್ಲಿ. ಯಾರಿದ್ದರು ಅವಳ ಬಳಿ ಆಗೆಲ್ಲಾ ? ಬಹುಶಃ ಗಂಡ ಎನಿಸಿಕೊಂಡವನ ನಿದಿರೆಯ ಗೊರಕೆಯ ಸದ್ದುಗಳಷ್ಟೇ ಅವಳ ನೋವಿಗೆ ಸಾಕ್ಷಿಯಾಗಿದ್ದಿರಬೇಕು !

ಅವಳು ಈಗಿನ ಮಾಡರ್ನ್ ಹುಡುಗಿಯರ ಹಾಗಲ್ಲ ನೋಡಿ. ಆಧುನೀಕ ಸ್ಥಿತಿ ಗತಿಗಳ ಬಗೆಗೆ ಕೇಳಿದರೆ ಮೂಗಿಗೆ ಬೆರಳಿಡುತ್ತಿದ್ದಳು. ಒಂದು ಬಾರಿ ಶಾಂತಕ್ಕನನ್ನು ಕೇಳಿದ್ದೆ, “ಶಾಂತಕ್ಕ ಎಲ್ಲೇ ಮಗಳು ರಮಾ ಕಾಂಬಲೇ ಇಲ್ಲೆ ? ಪೇಟೆಗೆ ಹೋಯಿದಾ ಕಲಿವಲೆ ? ದೂರ ಹೋಯಿದು ?“ ಕೇಳಿದ ಪ್ರಶ್ನೆಗೆ ಬಂದ ಉತ್ತರ ಎಂತಹವರವನ್ನಾದರೂ ಮನ ಮಿಡಿಸುವ ಹಾಗಿತ್ತು ! “ಅಯ್ಯೋ ಎನಗೆ ಗೊಂತಿಲ್ಲೆ ಸಣ್ಣಕ್ಕ, ಅದೆಂತದೋ ಕಾಲೇಜಿಲಿ ಹೊಸಬರ Day ಇದ್ದಡ್ಡ. ಅದಕ್ಕೆ ಅದೆಂತದೋ Wakeup ಮಾಡುಲೆ ಹೋಯಿದು. ಇಲ್ಲೇ ಆಚೆ ಬದಿಯ ರಸ್ತೆಲಿ ಹೊಸ ಅಂಗಡಿಯೊಂದು ಮೊನ್ನೆ ಮೊನ್ನೆ ಶುರು ಆಯಿದು ಅಲ್ದಾ ಅಲ್ಲಿಗೆ“ ಇಷ್ಟು ಹೇಳಿ ನಿಟ್ಟುಸಿರಿಟ್ಟಳು ಶಾಂತಕ್ಕ. ಗೊಂದಲ ನನ್ನ ಮನಸ್ಸಿಗೆ ಅಲೆ ಅಲೆಯಾಗಿ ಅಪ್ಪಳಿಸಿತು. ಆಮೇಲೆ ತಿಳಿದದ್ದು ಅದು Wakeup ಅಲ್ಲ Makeup ಎಂದು. ಹಾಂ ! ಮರೆತಿದ್ದೆ, ಕಳೆದ ವಾರವಷ್ಟೇ ಅಲ್ಲೊಂದು ಹೊಸ ಃBeauty parlour ಶುರುವಾಗಿತ್ತು ಅಂತ ! ಕೆಲಸದ ಗಡಿಬಿಡಿಯಲ್ಲಿ ಮರೆತು ಹೋದ ವಿಚಾರವೊಂದನ್ನು ಶಾಂತಕ್ಕ ಮತ್ತೆ ನೆನಪಿಸಿದ್ದಳು.

ಇದೀಗ ಆಧುನೀಕರಣದ ಗಾಳಿ ಹಳ್ಳಿ ಹಳ್ಳಿಗಳಿಗೂ ಬೀಸಲು ಶೂರುವಾಗಿದ್ದು ಮಾತ್ರವಲ್ಲದೇ ಜನರ ಜೀವನದ ಆಗು ಹೋಗುಗಳ ಮೇಲೆಯೂ ಗಾಢ ಪ್ರಭಾವವನ್ನು ಬೀರಿತ್ತು ಎಂದರೆ ಅತಿಶಯೋಕ್ತಿಯಾಗಲಾರದು. ಹಲವಾರು ಫಂಡ್ ಗಳ ಮೊತ್ತ, ದಾನಿಗಳ ನಿಧಿಯಿಂದ ಆರಿಸಿದ ಮೊತ್ತ, ಹಲವು ಸಮಾಜ ಸೇವಾ ಸಂಘಟನೆಗಳ ಯೋಚನಾ ಲಹರಿಯ ಫಲವಾಗಿ ಇದೀಗ ಹಳ್ಳಿಗಳಿಗೂ ಉದ್ದುದ್ದ ಡಾಂಬಾರ್ ರಸ್ತೆಗಳು, ಬೀದಿಗೊಂದರಂತೆ ವಿದ್ಯುತ್ ಅಥವಾ ಸೌರವಿದ್ಯುತ್ ಕಂಬಗಳು, ಅಂತರ್ಜಾಲ ಸಂಪರ್ಕ, ಸಾರಿಗೆ - ಸಂವಹನ ವ್ಯವಸ್ಥೆ, ಹತ್ತು ಹನ್ನೊಂದು ಕಿಲೋಮೀಟರಿಗೊಂದರಂತೆ ಮಾಲ್ ಗಳ ಸೌಲಭ್ಯ ಎಲ್ಲವೂ ಕೂಡ ಲಭ್ಯವಾಗುವಂತಿರುತ್ತಿದ್ದರೂ ಕೂಡ ಅವುಗಳ ಬಾಳಿಕೆ ಎಷ್ಟು ಎಂಬುದನ್ನು ತಿಳಿಯಬೇಕಾದರೆ ಸಂಜೆಯ ತಂಗಾಳಿ ಸೇವನೆಗೆಂದು ಹಳ್ಳಿಗೊಂದು ಸುತ್ತು ಹಾಕಿ ಬರಲೇಬೇಕು. ಇದೂ ಸಾಲದೆಂಬಂತೆ ದಟ್ಟ ಕಾನನಗಳನ್ನು ಹೇಳ ಹೆಸರಿಲ್ಲದಂತೆ ಕೆಡಹಿ ವಿಶಾಲ ಬಯಲನ್ನಾಗಿ ಪರಿವರ್ತಿಸಿ ಮೊಬೈಲ್ ಟವರುಗಳ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಂಡದ್ದೂ ಕೂಡ ಗ್ರಾಮಗಳು ಬದಲಾಗುತ್ತಿವೆ ಎಂಬುದಕ್ಕೆ ಸ್ಪಷ್ಟ ನಿದರ್ಶನದಂತೆ ತೋರುತ್ತಿತ್ತು.

ಇಂತಹ ಗಡಿಬಿಡಿ ಬದುಕಿನ ನಡುವೆ ಕೂಡ ಶಾಂತಕ್ಕ ಓರ್ವ ಜವಾಬ್ದಾರಿಯುತ ಮನೆಯ ಒಡತಿಯಾಗಿದ್ದಳು ಎಂಬುದನ್ನು ನಾನಂತೂ ಎರಡು ಮಾತಿಲ್ಲದೇ ಒಪ್ಪುತ್ತೇನೆ. ಒಂದೊಮ್ಮೆ ನನಗೇ ಹೇಳಿದ್ದಳು, “ಮಗಳಿಂಗೆ ಓದು ಮುಗುತ್ತಾ ಬಂತು. ಇನ್ನೇನು ಬಪ್ಪ ತಿಂಗಳು ಪರೀಕ್ಷೆ ಮುಗಿಸಿ ಬತ್ತು. ಇವಕ್ಕೆ ಹೇಳಿದ್ದೆ ಒಂದು ಒಳ್ಳೆಯ ಮಾಣಿಯ ನೋಡೆಕ್ಕು ಹೇಳಿ. ತಲೆಗೆ ಹಾಕಿಕೊಂಡಿದವಾ ಇಲ್ಯಾ ಗೊಂತಿಲ್ಲೆ ! ಆದರೆ ಹೀಂಗೆ ಒಂದು ಮಾತು ಅವರ ಕಿವಿಗೆ ಹಾಕಿದೆ, ನೋಡುವ ಎಂತ ಮಾಡ್ತವು ಹೇಳಿ” ಆಸೆ ತುಂಬಿದ ಕಂಗಳಲ್ಲಿ ಹೇಳಿದಾಗ ಮಗಳ ಮೇಲಿನ ಪ್ತೀತಿಯೊಂದೇ ಎದ್ದು ಕಾಣುತ್ತಿತ್ತು. 
ಇದಾಗಿ ಎರಡು ತಿಂಗಳು ನಾ ಆ ಕಡೆ ಹೋಗಿದ್ದಿಲ್ಲ. ನನ್ನದೇ ಮನೆ, ಕುಟುಂಬ ಅಂತ ಜವಾಬ್ದಾರಿ ಇರುತ್ತದೆ ಅಲ್ಲವೇ ? ತೋಟದಲ್ಲಿ ಬುಡ ಬಿಡಿಸುವುದು, ಮದ್ದು ಬಿಡುವುದು, ಅಡಿಕೆ ತೆಗೆಸುವುದು.. ಹೀಗೆ ಹತ್ತು ಹಲವು ಕೆಲಸಗಳಲ್ಲಿ ನಾ ಎಷ್ಟು ಕಳೆದುಹೋಗಿದ್ದೆನೆಂದರೆ ನನ್ನದೇ ಆದ ಕೆಲವು ಹವ್ಯಾಸಗಳಿಗೆ ಕೂಡ ಸಮಯ ಕೊಡಲಾಗದಷ್ಟು.

ಅದ್ಯಾಕೋ ಒಂದು ದಿನ ಆ ಕಡೆ ಹೋಗಿದ್ದೆ. ಮನೆಯ ಅಂಗಳದಲ್ಲಿ ಹೊಸತಾದ ಕಾರ್ ಒಂದು ನಿಂತಿತ್ತು. ಕಾರಿನ ಡಿಕ್ಕಿಗೆ ಅದೇ ಕೆಲಸದಾಳು ಚೋಮ ಬಾಳೆ ಗೊನೆಗಳನ್ನು, ಉಪ್ಪಿನಕಾಯಿ ಭರಣಿಗಳನ್ನು. ತರಕಾರಿ - ಹಣ್ಣುಗಳನ್ನು ತುಂಬುತ್ತಿದ್ದ. ಅವನಿಗೆ ಮಾರ್ಗದರ್ಶನ ನೀಡುವಂತೆ ಶಾಂತಕ್ಕನ ಪತಿ ಶ್ರೀಪತಿ ರಾಯರು ಜೊತೆಗೇ ಇದ್ದರು. ಹಿಂದಿನಿಂದ ಮಗಳು ರಮಾ ತನ್ನದೇ ಆದ ಲಗೇಜ್ ಸಮೇತ ಹೊರ ಬಂದಳು. ಮೊದಲಿನಂತಿರಲಿಲ್ಲ ಅವಳೀಗ ! ಕಂಡದ್ದಕ್ಕೋ ಏನೋ ಬಲವಂತದ ನಗುವೊಂದು ಅವಳ ಮುಖದಲ್ಲಿ ಹಾದು ಹೋಯಿತು. ಏನೋ ಆಗಿದೆ ? ಒಳ ಮನಸ್ಸು ಎಚ್ಚರಿಸಿತು. ಮತ್ತೆ ಅಲ್ಲಿ ನಿಲ್ಲಲು ನನ್ನಿಂದ ಆಗಲಿಲ್ಲ.

ಸೀದಾ ಹೊರಟದ್ದೇ ಶಾಂತಕ್ಕನ ಅಡುಗೆ ಮನೆಗೆ. ಹೌದು ! ಅದೇ ತಾನೇ ಅವಳ ಅರಮನೆ. ಮದುವೆ ಆದ ನಂತರ ಅವಳು ತನ್ನ ಜೀವನದ ಬಹುಪಾಲನ್ನು ಕಳೆದದ್ದು ಅದೇ ಕೋಣೆಯಲ್ಲಿ ತಾನೇ ? ಶಾಂತಕ್ಕ ಇರಲಿಲ್ಲ ! ಅಥವಾ ನನಗೆ ಕಾಣಲಿಲ್ಲವೋ ಏನೋ ? ಹಳೆ ಕಾಲದ ಕೋಣೆ, ಮೂಲೆಯಲ್ಲಿ ಕಿಟಕಿ ಅಂತ ಒಂದು ಇತ್ತಾದರೂ ಸೂರ್ಯ ರಶ್ಮಿಯು ಅದನ್ನು ಮುಟ್ಟದಂತೆ ತಡೆಯೊಡ್ಡಲು ಬೃಹತ್ ಹೆಮ್ಮರಗಳಿಂದಾವೃತ್ತ ಕಾಡು ಪ್ರದೇಶ ಅದಕ್ಕೆ ತಾಗಿಕೊಂಡಿತ್ತು. ಕರೆಂಟ್ ಇದ್ದಂತೆ ತೋರಲಿಲ್ಲ.. ಇದ್ದರೂ ಶಾಂತಕ್ಕನ ಬಾಳು ಬೆಳಗುತ್ತದೆ ಏನು ? ಅದು ಅವಳ ಹಣೆಬರಹ ಇರಬೇಕು ಎಂದುಕೊಂಡೇ “ಶಾಂತಕ್ಕ..” ಕೂಗಿ ಕರೆದೆ. ನಿಶ್ಯಬ್ಧ ! ಮತ್ತೊಮ್ಮೆ ಕರೆದೆ.. ಕೇಳದೇ ಇದ್ದಿರಬೇಕು. ಪಾಪ ವಯಸ್ಸು ಐವತ್ತೈದರ ಹತ್ತಿರ ಆಗಿರಬಹುದು ಅಂದುಕೊಂಡೇ.. “ಶಾಂತಕ್ಕ..” ಎಂದು ಮತ್ತೊಮ್ಮೆ ಕರೆಯುವ ಮುನ್ನ ಓಗೊಟ್ಟಳು.. “ಯಾ..ರೂ..? ಓ ಸಣ್ಣಕ್ಕ..ಎಂತ ಕೂಸೇ ? ಬಾಳ ದಿನ ಆತು ನೀ ಇತ್ತ ಕಡೆ ಬಾರದ್ದೇ. ಮನೇಲಿ ಎಲ್ಲವೂ ಸೌಖ್ಯ ಅಲ್ದಾ ?” ಎನ್ನುತ್ತಾ ಕುಶಲೋಪರಿ ವಿಚಾರಿಸಿದಳು. “ಎಂಗ ಎಲ್ಲವೂ ಭಗವಂತನ ಕೃಪೆಂದ ಆರಾಮ ಶಾಂತಕ್ಕ. ನೀ ಹೇಂಗಿದ್ದೆ ? ಹೆರ ನಿಂತ ಆ ಹೊಸ ಕಾರು ಯಾರದ್ದು ? ಎಂತಾತು ?” ಎಂದು ಕಳಕಳಿಯಿಂದ ಮಾತನಾಡಿದೆ. ಮಾತನಾಡಲಿಲ್ಲ ಶಾಂತಕ್ಕ. ಮುಗುಳು ನಕ್ಕು, “ಆಸರಿಂಗೆ ಎಂತಕ್ಕು ಕೂಸೇ ?” ಪ್ರಶ್ನಿಸಿದಳು. ಮಾತು ಬದಲಾಯಿಸುವ ಹುನ್ನಾರವೇ ಅಂದುಕೊಂಡು, “ಶಾಂತಕ್ಕ ಆನು ಕೇಳಿದಕ್ಕೆ ಹೇಳು” ಅಂದೆ.

ಸೆರಗಿನ ತುದಿಯಿಂದ ಕಣ್ಣೊರೆಸಿಕೊಂಡು ಮನೆಯ ಹಂಚನ್ನು ದಿಟ್ಟಿಸಿದಳು. ಸೋನೆ ಮಳೆ ತೊಟ್ಟಿಕ್ಕುತ್ತಿತ್ತು ! ಶಾಂತಕ್ಕನ ಕಂಬನಿಗೆ ಸಾಥ್ ನೀಡುವಂತೆ. “ಎಂತ ಹೇಳಲಿ ಸಣ್ಣಕ್ಕ ? ಮಗಳು ರಮಾ .. ರಮಾ ಇದ್ದಲ್ದಾ ಕೊನೆಗೂ ಪೇಟೆ ಕೂಸೇ ಆಗಿ ಹೋತು. ಮೊನ್ನೆ ಮೊನ್ನೆ ಫೋನ್ ಮಾಡಿ ಮನೆಗೆ ಬತ್ತೆ ಹೇಳಿತ್ತು. ಆನು ಖುಷಿಲಿ ಇತ್ತಿದೆ. ಇವಕ್ಕೂ ಹೇಳಿತ್ತಿದೆ, ಮಾಣಿ ಕಡೆಯವಕ್ಕೆ ಹೇಳೆಕ್ಕು ಹೇಳಿ. ತಲೆಯಾಡಿಸಿ ಒಪ್ಪಿಗೆ ಸೂಚಿಸಿತ್ತಿದ್ದವು ಕೂಡ. ಮಗಳು ಬಂದದ್ದೇ ವಿಷಯ ಪ್ರಸ್ತಾಪ ಮಾಡಿದ ಕೂಡಲೇ ಕೋಪಲ್ಲಿ ಸಿಡುದು, ಅದರದ್ದೇ ಕಥೆ ಹೇಳಿತ್ತು. ಏನಾತೋ ಮಾರನೇ ದಿನವೇ ಬ್ಯಾಗೆಲ್ಲ ಕಟ್ಟಿಕೊಂಡು ಪೇಟೆಗೆ ಹೋದ ಜನ ಬಪ್ಪಗ ಒಂದು ದೊಡ್ಡ ಅಘಾತವನ್ನೇ ಹೊತ್ತು ತರೆಕ್ಕಾ ? ನೋಡು, ಇದೆಲ್ಲಾ ಅದರ ಪ್ರಭಾವ..” ಎನ್ನುತ್ತಲೇ ಅತ್ತು ಬಿಟ್ಟರು ಮನದ ತುಮುಲಗಳು ಬತ್ತಿ ಹೋಗಲಿ ಎನ್ನುವಂತೆ. ಎದೆ ಧಸಕ್ಕೆಂದಿತು. ಶಾಂತಕ್ಕನಂತಹ ತಾಯಿ ರಮಾಳಿಗೆ ದೊರೆತದ್ದೇ ಪುಣ್ಯ. ಅಂತಹುದರಲ್ಲಿ ರಮಾ ಹೀಗೇಕೆ ಮಾಡಿದಳು ? ಪ್ರಶ್ನೆ ಅಲೆ ಅಲೆಯಾಗಿ ಎದ್ದಿತ್ತು ನನ್ನ ಮನೋಭೂಮಿಕೆಯಲ್ಲಿ. ಉತ್ತರವಾಗಿ ಕಣ್ಣಮುಂದೆ ರಮೇಶ್ ಯಾದವ್ ನಿಂತಿದ್ದ. “ಅತ್ತೆ ಹೊತ್ತಾಯಿತು. ಬರಲೇ ..?” ಸದ್ವಿನಯದಿಂದ ಸಂಭಾಷಿಸಿದರೂ ಕೂಡ ಕೋಪ ನನ್ನಲ್ಲಿ ಉಕ್ಕಿ ಬಂತು. ಇಷ್ಟೊಂದು ವಿನಯದಿಂದ ಮಾತಾಡೋ ಇವನೇಕೆ ರಮಾಳಿಗೆ ತಿಳಿ ಹೇಳುವಲ್ಲಿ ವಿಫಲನಾದ ? ಪ್ರಶ್ನೆಗೆ ಉತ್ತರ ಹುಡುಕುವಂತೆ ತಲ್ಲೀಣಳಾದಾಗಲೇ ಶಾಂತಕ್ಕ ಮುಂದುವರೆಸಿದಳು, “ರಮಾ ಇವನನ್ನು ಮದ್ವೆ ಆತು ಹೇಳಿ ಎನಗೆಂತ ಬೇಸರ ಇಲ್ಲೆ ಸಣ್ಣಕ್ಕ. ಈಗಿನ ಕೂಸು, ಅವರ ಆಸೆ – ಕನಸು ಎಂತದೋ ಯಾರಿಗೆ ಗೊಂತು ? ಆದರೂ ಮದ್ವೆಗೆ ಮೊದಲು ಒಂದು ಮಾತು ಎಂಗೊಗೆ ಹೇಳಿರೆ ಎಂತಾವುತ್ತಿತ್ತು ? ಇಷ್ಟು ದಿನ ಎನ್ನದೇ ಲೋಕಲ್ಲಿ ಎನ್ನ ಆಸೆಗಳ, ಕನಸುಗಳ ಇಂಗಿಸಿ ದುಡುದ ಎನಗೆ ಇದೊಂದು ದೊಡ್ಡ ವಿಷಯವೇ ಅಲ್ಲ ಅಲ್ದಾ ಸಹಿಸುಲೆ ?’ ಇಷ್ಟು ಹೇಳುವ ಹೊತ್ತಿಗೆ ಅಳು ಒತ್ತರಿಸಿ ಬಂತು. ಮತ್ತೆ ಮಾತನಾಡಿಸಲಿಲ್ಲ. ಒಂದೆರಡು ಸಮಾಧಾನದ ಮಾತುಗಳನ್ನು ಆಡಿ ಮರಳಿ ಬಂದೆ ನನ್ನ ಮನೆಗೆ. ಕರುಳ ಕುಡಿ ಮಾಡಿದ ನೋವು ನನ್ನ ನಾಲ್ಕು ಮಾತುಗಳಿಂದ ಮಾಸೀತೇ ಎಂದು ಮನಸ್ಸಿನಲ್ಲಿ ನನ್ನನ್ನು ನಾನು ಪ್ರಶ್ನಿಸಿಕೊಂಡೆ .. ಉತ್ತರ ಸಿಗಲಿಲ್ಲ, ಸುಮ್ಮನಾದೆ.

ಅದಾಗಲೇ ರಾತ್ರಿ ಕಳೆದಿತ್ತು. ಒಂದೇ ಸಮನೆ ಅಳುತ್ತಿದ್ದ ಮಗಳು ದೇವಿಕಾಳನ್ನು ಇವರು ಜೋಗುಳ ಹಾಡುತ್ತಾ ಮಲಗಿಸಿದರು. ಎಂದಿಗಿಂತ ತುಸು ವಿಚಿತ್ರವಾಗಿ ಕೂತಿದ್ದ ನನ್ನನ್ನು ಮತ್ತೆ ಮಾತನಾಡಿಸುವ ಪ್ರಯತ್ನ ಮಾಡಲಿಲ್ಲ ನನ್ನವರು. ಎಷ್ಟೇ ಆದರೂ ಹತ್ತು ವರುಷಗಳ ದಾಂಪತ್ಯವಲ್ಲವೇ ನಮ್ಮದು ? ನೆರೆಹೊರೆಯವರು ಮದುವೆಯಾಗಿ ಎರಡು ವರುಷವಾಗುವಾಗಲೇ ಗುಸು ಗುಸು ಶುರು ಮಾಡಿದ್ದರೂ ಅವುಗಳಿಗೆಲ್ಲ ಸೆಡ್ಡು ಹೊಡೆದು ಅತೀ ಪ್ರೀತಿಯಿಂದ ನೋಡಿಕೊಂಡ ನನ್ನವರು ಏಳು ವರ್ಷಗಳ ಬಳಿಕ ನಾನು ಗರ್ಭಿಣಿಯಾದಾಗ ಅದೆಷ್ಟು ಕಳಕಳಿಯಿಂದ ನೋಡಿಕೊಂಡರೆಂದರೆ ಹೇಳಿಕೊಳ್ಳುವುದಕ್ಕೂ ಹೆಮ್ಮೆ ಆಗುತ್ತದೆ. ಇವರೆಂದರೆ  ಕೇವಲ ನನ್ನವರು ಮಾತ್ರವಲ್ಲ..ಸರ್ವಸ್ವವೂ ಇವರೇ ನನ್ನ ಬಾಳಿಗೆ ಎಂದು. ಇಂತಹ ಸಂಗಾತಿಯನ್ನು ಏಳು ಹೆಜ್ಜೆಗಳ ಬಂಧನದಲ್ಲಿ ಬೆಸೆದ ಆ ಭಗವಂತನಿಗೆ ನಾ ಸದಾ ಕೃತಜ್ಞಳು. ಕಣ್ಣಂಚಿನಿಂದ ಸುರಿಯುತ್ತಿದ್ದ ಕಂಬನಿ ಇವರಿಗೆ ಕಂಡಿರಬೇಕು ! ತಲೆಯನ್ನು ನೇವರಿಸಿ ಮಗುವಿನಂತೆ ಮಡಿಲಿನಲ್ಲಿ ತುಂಬಿಕೊಂಡು, “ಅನೂ.. ಎಂತಾತೇ ? ಯಾರಾದ್ರೂ ಎಂತಾದ್ರೂ ಹೇಳಿದವಾ ?” ಎನ್ನುತ್ತಾ ಕೇಳಿದ ಪ್ರಶ್ನೆಗೆ ಅದೇನಾಯಿತೋ ? ನಡೆದ ಅಷ್ಟೂ ಘಟನೆಗಳನ್ನು ಚಾಚೂ ತಪ್ಪದೇ ವರದಿ ಒಪ್ಪಿಸಿದೆ. ನಿಟ್ಟುಸಿರಿಟ್ಟು, “ಅಯ್ಯೋ ಇಷ್ಟಕ್ಕೆಲ್ಲಾ ಅಳ್ತವಾ ಅನು ? ಇದು ನಮ್ಮ ಕಾಲ ಅಲ್ಲ ಅಲ್ದಾ ?ಜಗತ್ತು ತುಂಬಾ ಮುಂದೆ ಹೋಯಿದು. ಈ ಪ್ರೀತಿ - ಪ್ರೇಮ ಎಷ್ಟು ಗಾಢ ಹೇಳಿದರೆ ಈಗಿನ ಮಕ್ಕ ಅಪ್ಪ ಅಮ್ಮಂಗಿಂತಲೂ ಹೆಚ್ಚಾಗಿ ಇಂತಹ ಮೋಡಿಗೆ ಸಿಲುಕಿ ಅದರಲ್ಲೇ ಭವಿಷ್ಯದ ಸುಖ ಕಾಣ್ತವು. ಆ ಸುಖ ಬಾಳಿನ ಪೂರ್ತಿ ಉಳಿತ್ತು ಕೂಡ ಕೆಲವರ ಪಾಲಿಂಗೆ. ಆದರೆ ಕೆಲವೊಮ್ಮೆ ನೋಡು ಯೋಚನೆ ಬುಡಮೇಲು ಆದಪ್ಪಗ ನೆನಪಾವುತ್ತು, ಅಪ್ಪ ಅಮ್ಮ ಹೇಳಿಕೊಂಡು ಬತ್ತವು. ಹೆತ್ತವು, ನೋಡಿಕೊಂಡು ಸುಮ್ಮನಿರುತ್ತವಾ ? ಆದರಿಸಿ ಮತ್ತೆ ಮನೆಗೆ ಸೇರ್ಸುತ್ತವು. ಬಿಡು ಈ ವಿಚಾರವ.. ನಿನಗೆ ಗೊಂತೂ ಆಗ ಹೇಳಿರೆ, ತೀರಾ ಮುಗ್ಧೆ ನೀನು. ಆದರೂ ನಮ್ಮ ಮಗಳು ದೇವಿಕಾ ಇದ್ದಲ್ಲದಾ ? ಅದು ಹೀಂಗೆಲ್ಲ ಅಲ್ಲ. ಆದರೂ ವಯಸ್ಸು ಕೇಳ್ತಾ ? ಒಂದು ವೇಳೆ ಹಾಂಗೆಂತಾದರೂ ಆದರೆ ನಾವೇ ಹೊಂದಿಕೊಂಬ. ನಮ್ಮ ಮಗಳು ಅಲ್ದಾ ? ಸಂತೋಷವಾಗಿ ಇದ್ದರೆ ಸಾಕು. ಆದರೆ ನೀ ಹೇಳಿದ ಶಾಂತಕ್ಕನ ಪರಿಸ್ಥಿತಿ ನವಗೆ ಬಪ್ಪದು ಬೇಡ. ಮಗಳು ಪ್ರಾಯಕ್ಕೆ ಬಪ್ಪಗ ಕೂರಿಸಿಕೊಂಡು ಹೇಳಿಬಿಡುವ, ಏನೇ ಮಾಡ್ತರೂ ನೂರು ಸರ್ತಿ ಯೋಚಿಸಿ ಮುಂದುವರೆಯೆಕ್ಕು ಹೇಳಿ. ಶಾಂತಕ್ಕನನ್ನೇ ಬೇಕರೆ ಉದಾಹರಣೆಯಾಗಿ ಕೊಡವ ಕೂಡ. ಅರ್ಥ ಅಕ್ಕು ಅದಕ್ಕೆ, ಎಷ್ಟೇ ಆದರೂ ನಿನ್ನ ಮಗಳು ಅಲ್ದಾ ?” ಭವಿಷ್ಯದ ಮುಂದಾಲೋಚನೆ ಇವರಿಗೆ ತುಸು ಹೆಚ್ಚೇ ಇದ್ದಂತೆ ಕಂಡಿತು. ಮನಸ್ಸು ನಿರಾಕರಿಸದೇ “ಹೂಂ” ಗುಟ್ಟಿತು.

ಕಾಲ ಓಡುತ್ತಿತ್ತು. ಶಾಂತಕ್ಕ ಇದೀಗ ಅಜ್ಜಿ ಆಗುವ ಸಂಭ್ರಮದಲ್ಲಿ ಇದ್ದಂತೆ ಕಂಡಿತು. ಒಮ್ಮೆ ನಾನೇ ಆ ಕಡೆ ಹೋದಾಗ ಸಂತೋಷದಿಂದ ಹೇಳಿದ್ದಳು, “ಏ ಸಣ್ಣಕ್ಕ ಕೇಳಿಲ್ಲಿ, ನಮ್ಮ ರಮಾ ಬಸುರಿ. ಅದೂ ಕೂಡ ಎಷ್ಟು ವರ್ಷದ ನಂತರ ನೋಡು. ನಿಂಗೆ ಗೊಂತಿದ್ದಲ್ದಾ ? ಪಾಪ ಮಾಡದ ಚಿಕಿತ್ಸೆ ಇಲ್ಲೆ, ಹೇಳಿಕೊಳ್ಳದ್ದ ಹರಕೆ ಅಂತೂ ಇಲ್ಲವೇ ಇಲ್ಲೆ. ಕೊನೆಗೂ ಎನ್ನ ಮಗಳ ಮಡಿಲು ತುಂಬಿತ್ತು ನೋಡು ದೇವರ ದಯೆಂದ. ಸುಮ್ಮನೆಯಾ ಮತ್ತೆ ಆನು ನಂಬುವ ದೇವರ ಮಹಿಮೆ ಹೇಳಿರೆ.. ಬಾಣಂತನಕ್ಕೆ ಇಲ್ಲೇ ¨ಪ್ಪಲೆ ಹೇಳಿದ್ದೆ. ಅದು ಪೇಟೆ ಅಲ್ಲದಾ, ಅಲ್ಲಿ ಯಾರಿದ್ದವು ಬೇಕನ್ನೇ ?ಅಳಿಯನ ಅಪ್ಪ ಅಮ್ಮ ಅದೆಂತದೋ ವಿದೇಸಲ್ಲಿ ಇಪ್ಪದಡ್ಡ. ಸುಮ್ಮನೆ ಗುರುತು ಪರಿಚಯ ಇಲ್ಲದ ಜನಂಗಳ ಮಧ್ಯೆ ಮಗು - ಬಾಣಂತಿ ಯಾಕೆ ಇರೆಕ್ಕು ? ಒಂದೇ ಮಗಳು ಬೇರೆ. ಅದಕ್ಕೆ ಇಲ್ಲಿಗೇ ಬಪ್ಪಲೆ ಹೇಳಿದ್ದು. ಮೊನ್ನೆ ಸೀಮಂತ ಆತು. ಇವು ಹೋಯಿದವು ಕರಕೊಂಡು ಬಪ್ಪಲೆ, ಇನ್ನೇನು ಬಪ್ಪ ಹೊತ್ತು. “ ಎನ್ನುತ್ತಾ ಬೊಚ್ಚು ಬಾಯಿ ಬಿಟ್ಟು ನಕ್ಕಾಗ ಹೆಮ್ಮೆ ಅನಿಸಿತು. “ಹೋ ಶಾಂತಕ್ಕ, ಅಂಬಗ ನೀ ಅಜ್ಜೆ ಆವುತ್ತೆ ಹೇಳು” ತಮಾಷೆಯಿಂದ ಹೇಳಿದೆ. ಬಿಡುವವಳಾ ಶಾಂತಕ್ಕ, “ಏ ನೀ ಕೂಡ ಹಾಂಗೆ ಅಲ್ದಾ ? ಮಗಳು ಬೆಳೆದು ನಿಂತಿದು. ಆದಷ್ಟು ಬೇಗ ಒಂದು ಮಾಣಿ ನೋಡು” ಹಿರಿಜೀವ ಕೊಟ್ಟ ಸಲಹೆಗೆ ಬದ್ಧಳಾಗಿ ತಲೆಯಾಡಿಸಿ ಮನೆಯತ್ತ ಹೊರಟಿದ್ದೆ. ತೋಟದಲ್ಲೇ ಇದ್ದ ನನ್ನವರು ಜೊತೆಯಾದರು. “ಗಂಟೆ ಒಂದು ಆತು. ದೂರ ಹೋದ್ದು ? ಬಾ ಊಟಕ್ಕೆ ಹೋಪ, ಮಗಳು ಕಾಯ್ತಾ ಇಕ್ಕು ಅಲ್ದಾ ಅನು.. “ ಕೈಹಿಡಿದು ನನ್ನವರು ಹೇಳಿದಾಗ ಸಂತಸದಿಂದ ತಲೆಯಾಡಿಸಿ ಹೊರಟೆ. ಮಗಳು ದೇವಿಕಾ ಮನೆಯ ಅಂಗಳದಲ್ಲೇ ನಿಂತು ನಮಗಾಗಿ ನಿರೀಕ್ಷಿಸುತ್ತಿದ್ದಳೋ ಎಂಬಂತೆ, “ಹೋ ಬಂದಿರಾ..ಬನ್ನಿ ಊಟಕ್ಕೆ ಬಾಳೆ ಇಡ್ತೆ. ಹೊತ್ತು ಮಾಡಿರೆ ತಣಿಗು. ಅಮ್ಮ.. ನೀ ದೂರ ಹೋದ್ದು, ಅಪ್ಪಂಗೂ ಹೇಳದ್ದೇ ?” ಗೊಣಗುತ್ತಲೇ ಅಡಗೆ ಮನೆಯತ್ತ ಹೆಜ್ಜೆ ಹಾಕಿದಳಾದರೂ ಹೆಗಲೆತ್ತರಕ್ಕೆ ಬೆಳೆದು ನಿಂತ ಮಗಳನ್ನು ಕಂಡ ನನ್ನ ಮಾತೃ ಹೃದಯಕ್ಕೆ ಸಾರ್ಥಕ ಭಾವ ಬಂದೊದಗಿದಂತೆ ಮುಖದಲ್ಲಿ ನಗು ಮೂಡಿತು.
ಊಟದ ನಂತರ ವಿಶ್ರಾಂತಿ ನೆಪದಲ್ಲಿ ಹೊರಗೆ ಅಡ್ಡಾಡುತ್ತಿದ್ದ ನನ್ನನ್ನು ಇವರು ಕಳಕಳಿಯಿಂದ ವಿಚಾರಿಸಿದರು. “ಏನ್ ಬಾರಿ ಖುಷಿಲಿದ್ದೆ ಅನು ? ಅತ್ತೆ ಅಪ್ಪ ಯೋಚನೆ ಏನಾದ್ರೂ ಮಾಡಿದ್ಯಾ ಹೇಂಗೆ?” ತಮಾಷೆಯ ಮಾತು ಅದಾದರೂ ಕೂಡ ಜವಾಬ್ದಾರಿಯ ನುಡಿಗಳು ಅದರಲ್ಲಿದ್ದವು. ಮರುಮಾತಿಲ್ಲದೇ ಶಾಂತಕ್ಕನ ಸಂಭ್ರಮವನ್ನು ಅರುಹಿದೆ. ನಸು ನಗು ಇವರ ತುಟಿಯಂಚಿನಲ್ಲಿ ಹಾದು ಹೋದದ್ದನ್ನು ಕಂಡು ಮೌನಿಯಾದೆ. ಏನೋ ನೆನಪಿಸಿಕೊಂಡವರಂರೆ, “ಕಾಲಾಯ ತಸ್ಯೈ ನಮಃ” ಸವಿನುಡಿಯೊಂದನ್ನು ಹೇಳಿ ತೋಟದತ್ತ ಹೊರಟರು.

ಕೊಂಚ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಶುರುವಾಯಿತು. “ಇಷ್ಟೊಂದು ಮುಗಿಲು ತುಂಬಿರುವಾಗ ತೋಟಕ್ಕೆ ಹೋಗುವ ಗಡಿಬಿಡಿ ಏನಿತ್ತು ಇವರಿಗೆ” ನನ್ನ ಪಾಡಿಗೆ ನಾನು ಗೊಣಗಿದೆ. ತಕ್ಷಣಕ್ಕೆ ಶಾಂತಕ್ಕ ನೆನಪಾದರು. “ಶಾಂತಕ್ಕ ಗಟ್ಟಿಗಿತ್ತಿ” ಒಳ ಮನಸ್ಸು ಉದ್ಘೋಷಿಸಿತ್ತು. ಜೀವನದ ಪಯಣದಲ್ಲಿ ಸುಖ ದುಃಖಗಳ ಜೊತೆ ಜೀಕಿದ ಆಕೆ ಇಂದು ವೃದ್ದಾಪ್ಯದ ಸನಿಹದಲ್ಲಿದ್ದಳು. ಗಂಡನ ಕಿರಿಕಿರಿ, ಮಗಳ ಹುಚ್ಚು ಕಾಮನೆ, ನನಸಾಗದ ತನ್ನ ಅದೆಷ್ಟೋ ಕನಸುಗಳು, ಸಲ್ಲದ ಬಯಕೆಗಳು, ಈಡೇರದ ಕಳಕಳಿಯ ಮಾತುಗಳು..ಇವೆಲ್ಲದರ ನಡುವೆ ಈಜಿ ಈಜಿ ಕೊನೆಗೂ ಗೆಲುವನ್ನು ಸಾಧಿಸಿದ್ದಳೊ ಎಂಬಂತೆ ಭಾಸವಾಯಿತು. ಅಜ್ಜಿ ಆಗುವ ಸಂಭ್ರಮವನ್ನು ಸ್ವತಃ ಆಕೆಯೇ ಹೇಳಿಕೊಂಡದ್ದು ನನ್ನೀ ಮನದ ತರ್ಕಕ್ಕೆ ಪುರಾವೆ ನೀಡಿತ್ತು. ಅದೇ ಮಸಿ ಹಿಡಿದ ಮಾಡು, ಆಕಸ್ಮಿಕ ನೋವುಗಳು, ಅಪರಾಧಿ ಕಂಬನಿಗಳು, ಮನೆಯ ಒಡತಿಯಾದರೂ ಒಗ್ಗದ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬದುಕು ಸಾಗಿಸಿದ್ದ ಆಕೆಯ ಛಲ - ಧೈರ್ಯಗಳನ್ನೂ ಮರೆಯಲುಂಟೇ ? ಒಂದು ತರಹದ ಆದರ್ಶ ಬಾಳುವೆ ಆಕೆಯದ್ದು ನನಗಂತೂ. ತಾನು ಎಷ್ಟೇ ನೊಂದರೂ ತನ್ನಿಂದ ತವರು ಕಣ್ಣೀರು ಹಾಕುವಂತೆ ಆಗಲೇಬಾರದು ಎಂದು ಶಪಥ ಮಾಡಿದವಳಂತೆ ದುಡಿದ ಶಾಂತಕ್ಕ ಇದೀಗ ನಿಜಕ್ಕೂ ಮನೆಯವರ ಗೌರವಕ್ಕೆ ಪಾತ್ರಳಾದದ್ದು ಮಾತ್ರವಲ್ಲದೇ ಈ ವಯಸ್ಸಿನಲ್ಲಿ ತಂದುಕೊಂಡ ಉತ್ಸಾಹ ಕೂಡ ಅದರ ಫಲವೇ ಇರಬೇಕು ಅಂದುಕೊಂಡೆ. ಮೊದಮೊದಲು ಮನಸಾರೆ ಅತ್ತು, ಆ ನಂತರದಲ್ಲಿ ತಾನೊಬ್ಬಳೇ ನೋವುಗಳನ್ನು ನುಂಗಿ ತನ್ನ ಬದುಕಿನ ಸ್ಥಿತಿಯನ್ನು ದೂರಿದರೂ ಈಗ ಮಾತ್ರ ಶಾಂತಕ್ಕ ನೆಮ್ಮದಿಯ ನೆಲೆ ಕಂಡಿದ್ದಳು, ಅದೂ ಕೂಡ ಬಾಳಿನ ಮುಸ್ಸಂಜೆಯಲ್ಲಿ.

ಹೌದು, ಸುಳ್ಳಲ್ಲ “ಶಾಂತಕ್ಕ ನಿಜಕ್ಕೂ ಈಗ ಬದಲಾಗಿದ್ದಾಳೆ “. ಹಲವಾರು ವರ್ಷಗಳಿಂದ ಮನದಲ್ಲಿ ನಡೆಯುತ್ತಿದ್ದ ತುಮುಲಗಳಿಗೆ ಕೊನೆಗೂ ಮುಕ್ತಾಯವೊಂದು ದೊರಕಿದಂತಾಯಿತು. ಅದು ಕೂಡ ಸುಖಾಂತ್ಯದಲ್ಲಿ. ಶಾಂತಕ್ಕ ಹಿಡಿದ ಬದುಕಿನ ನೊಗ ಕೊನೆಗೂ ಸವೆದು, ಕುಸಿದು ಹೋಗಲಿಲ್ಲ. ಆಕೆಯ ಜೀವನದ ಆಗು - ಹೋಗುಗಳಿಗೆ ಸಾಕ್ಷಿಯಾಗಿದ್ದ ನನ್ನ ಮನಸ್ಸು ತೃಪ್ತಿಯ ನಗುವೊಂದನ್ನು ಬೀರಿತು. ಕಣ್ಣಂಚು ಈ ಬಾರಿ ಮತ್ತೊಮ್ಮೆ ತೇವಗೊಂಡಿತ್ತು. ಹಾಂ ! ಆನಂದ ಬಾಷ್ಪವಾಗಿ.. ಆಗಷ್ಟೇ ನಾ ಗೊಣಗಿದ ಮಾತುಗಳನ್ನು ಕೇಳಿಸಿಕೊಂಡವರಂತೆ ಮಳೆಗೆ ನೆನೆದು ಒದ್ದೆಯಾಗಿ ಒಳ ಬರುತ್ತಿದ್ದ ನನ್ನವರು ಈ ಬಾರಿ ನನ್ನ ಕಂಗಳಿಂದ ಒಸರುತ್ತಿದ್ದ ಕಂಬಿಯನ್ನು ಒರೆಸಲಿಲ್ಲ. ಬದಲಾಗಿ ಮುಗುಳು ನಗುತ್ತಾ ನಿಂತಿದ್ದರು. ಅದೇ ಮಂದಹಾಸ ! ಥೇಟ್ ನನ್ನ ವಧು ಪರೀಕ್ಷೆಗೆಂದೇ ಬಂದಿದ್ದ ಅದೇ ನಿಲುವಿನಲ್ಲಿ. ಮಾಸದ ಅದೇ ನಗು, ನನಗಾಗಿ ಹಂಬಲಿಸುವ ಅದೇ ಚಿಗುರು ಪ್ರೀತಿ..

-	. 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಹೌದು.. ! ಶಾಂತಕ್ಕ ಬದಲಾಗಿದ್ದಾಳೆ…”

  1. ಡಾ. ಸುಭಾಷ್ ಪಟ್ಟಾಜೆ

    ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧವು ಹಲವು ಕಾರಣಗಳಿಂದ ಶಿಥಿಲವಾಗಿ ಬೇರ್ಪಡುತ್ತಿರುವ ಈ ಸಂದರ್ಭದಲ್ಲಿ, ನಿಸರ್ಗದಿಂದ ದೂರ ಸರಿಯುತ್ತಾ ನಗರವಾಸಿಗಳಾದಂತೆಲ್ಲ ನಿಸ್ಸಾರವೂ ನಿರ್ವೀರ್ಯವೂ ಆಗಿರುವ ಯಾಂತ್ರಿಕ ಬದುಕನ್ನು ಸವೆಸುತ್ತಿರುವ ಈ ಹೊತ್ತಿನಲ್ಲಿ, ಹಿರಿಯರ ಪಾಲಿಗೆ ಹಳಹಳಿಕೆ, ಕೊರಗುಗಳು ಇದ್ದರೂ ಬದಲಾದ ಸಂದರ್ಭವನ್ನು ಅರ್ಥ ಮಾಡಿಕೊಂಡು, ಅಳು ನುಂಗಿ ನಗು ನಕ್ಕು, ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ಸಮಾಧಾನವನ್ನು ತಂದುಕೊಳ್ಳುವ ಮನೋಭಾವವು ಮುಖ್ಯವಾಗುತ್ತದೆ. ವೃದ್ಧ ತಾಯಿಯ ಕುರಿತು ಹೊಸ ತಲೆಮಾರು ಪ್ರೀತಿ ಕಾಳಜಿಗಳನ್ನು ತೋರಿ ತಾವು ಅಲಕ್ಷಿತರಲ್ಲ ಎಂಬ ಭಾವನೆಯನ್ನು ಮೂಡಿಸಬೇಕಾದ ಅಗತ್ಯವನ್ನು ಧ್ವನಿಸುವ ಕತೆಯು ಮಾನವೀಯ ಸಂಬಂಧಗಳನ್ನು ಅರಿತು ಬದುಕಿದರೆ ಅದುವೇ ಸ್ವರ್ಗ ಎಂಬ ವಿಚಾರವನ್ನು ವ್ಯಕ್ತಪಡಿಸುತ್ತದೆ. ಆಧುನಿಕ ಬದುಕಿನ ವಾಸ್ತವವನ್ನು ತಿಳಿದು ಬದುಕುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಹಿರಿಯರಿಗೆ ಕಿರಿಯರ ಮೇಲಿರುವ ಅಪನಂಬಿಕೆ, ಕಿರಿಯರಿಗೆ ಹಿರಿಯರ ಮೇಲಿರುವ ಅಸಮಾಧಾನ – ತಿರಸ್ಕಾರ, ತಲೆಮಾರುಗಳ ಅಂತರ, ಪೀಳಿಗೆಗಳ ನಡುವಿನ ಸಂಘರ್ಷಗಳಲ್ಲಿ ಕಿರಿಯರ ಹೊಸ ಚಿಂತನೆಗಳನ್ನು ಅರಿಯಲಾರದೆ ಹಿರಿಯರು ಜಡವಾಗುತ್ತಿದ್ದಾರೆ. ಮನುಷ್ಯರ ನಡುವಿನ ಗೋಡೆಗಳು, ಮನಸ್ಸಿನ ನಡುವಿನ ಕಂದರಗಳನ್ನು ಕೂಡಿಸುವ ಸೇತುವೆಯನ್ನು ಕಟ್ಟಬೇಕಲ್ಲದೆ ಸಂಬಂಧಗಳನ್ನು ಕಡಿದುಕೊಂಡು ಏಕಾಕಿಯಾಗಬಾರದು. ಮಕ್ಕಳಿಗೂ ಅವರದ್ದೇ ಆದ ನೆಲೆ ಬೆಲೆಗಳು ಇವೆ. ಹಿರಿಯರು ಅವರನ್ನು ತಮ್ಮ ಭೂತಕಾಲಕ್ಕೆ ಕಟ್ಟಿ ಹಾಕುವುದು ಸರಿಯಲ್ಲ ಎಂಬುದನ್ನು ಮನಗಾಣಬೇಕಾದ ಅಗತ್ಯವನ್ನು ಮಾಗಿದ ನೋಟದೊಂದಿಗೆ ಕತೆಯು ತನ್ನ ಪುಟ್ಟ ಚೌಕಟ್ಟಿನೊಳಗೆ ಸೂಕ್ಷ್ಮಾತಿ ಸೂಕ್ಷ್ಮ ವಿವರಗಳನ್ನು ಓದುಗರ ತೆಕ್ಕೆಗೆ ಸಿಗುವಂತೆ ಜಾಣ್ಮೆಯಿಂದ ನೇಯ್ದ ಕೌಶಲ, ಶಾಂತಕ್ಕನನ್ನು ಸತ್ವಭರಿತ ಪಾತ್ರವಾಗಿ ಕಡೆದಿಟ್ಟ ರೀತಿ, ಶಾಂತಕ್ಕ, ನಿರೂಪಕಿ – ರಮಾ, ದೇವಿಕಾ ಎಂಬ ಮೂರು ತಲೆಮಾರುಗಳನ್ನು ಅಳವಡಿಸಿದ ವಿಧಾನದ ಮೂಲಕ ಗಮನಾರ್ಹವೆನಿಸಿಕೊಂಡಿದ್ದು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವ ಯೋಗ್ಯತೆಯನ್ನು ಪಡೆದುಕೊಂಡಿದೆ.

    1. ಧರ್ಮಾನಂದ ಶಿರ್ವ

      ಹಳ್ಳಿ ಪರಿಸರದ ನಿಷ್ಕಲ್ಮಶ ಬದುಕಿನ ನಡುವೆ ಬೀಸಿದ ಆಧುನೀಕತೆಯ ಗಾಳಿಗೆ ಮೈಯೊಡ್ಡಿ ಮನಸ್ಸನ್ನು ಎಲ್ಲ ಆಯಾಮಕ್ಕೆ ಒಗ್ಗಿಸಿಕೊಂಡ ಶಾಂತಕ್ಕನ ಜೀವನ ವಿಧಾನ ಕಥೆಯ ಸತ್ವವನ್ನೆಲ್ಲ ಹೀರಿಕೊಂಡು ಹೆಮ್ಮರವಾಗಿ ಹರಡಿದ ರೀತಿ ಮನೋಜ್ಞವಾಗಿದೆ.
      ಅಭಿನಂದನೆಗಳು.

    2. ನಯನ. ಜಿ. ಎಸ್

      ಕಥೆಯೊಂದರ ಸಾರ್ಥಕತೆ ಅಡಗಿರುವುದು ಓದುಗರು ನೀಡುವ ಇಂತಹಾ ಪ್ರತಿಕ್ರಿಯೆಗಳಿಂದಲೇ ಅಲ್ಲದೇ ಮತ್ತಿನ್ನೇನು ?

      ಬರಹಗಾರನೊಬ್ಬ ಬರೆದ ಬರಹವು ಅದೇ ಭಾವವನ್ನು ಹೊತ್ತು ಓದುಗರ ಹೃದಯವನ್ನು ಸ್ಪರ್ಶಿಸುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಓದುಗರ ಅಭಿರುಚಿ, ಆಸಕ್ತಿ ಕೂಡ ಭಿನ್ನವೇ ಹೌದಷ್ಟೇ.

      ತಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯಿತು ಸುಭಾಷ್ ಅವರೇ. ಮೆಚ್ಚುಗೆಯ ನುಡಿಗಳಿಗೆ ಎಂದಲ್ಲ. ಬದಲಿಗೆ ಕಥಾ ಒಡಲನ್ನು ನಾನು ಹೆಣೆದ ಭಾವನೆಯಿಂದಲೇ ವಿಮರ್ಶಿಸಿದ ಬಗೆಗೆ. ಯಾವುದೇ ಬರಹವಿರಲಿ ಅಲ್ಲಿ ಬರಹಗಾರ / ಬರಹಗಾರ್ತಿಯರಿಗೆ ತೃಪ್ತ ಭಾವ ಬರಲೇಬಾರದು. ಕಾರಣ ಸಾಹಿತ್ಯ ಎಂಬುದು ಅಗಾಧವಾದ ಕ್ಷೇತ್ರ. ಈ ನೆಲೆಯಲ್ಲಿ ಮುಂದುವರೆದಾಗಲೇ ನಾವು ಕೂಡ ಬೆಳೆಯುವುದಕ್ಕೆ ಸಾಧ್ಯ.

      ಆಧುನಿಕತೆ, ಯಾಂತ್ರೀಕರಣ, ಜಾಗತೀಕರಣದಂತಹ ಬದಲಾವಣೆಗಳು ಬದುಕಿನ ದಿಕ್ಕನ್ನೂ ಕೂಡ ಬದಲಾಯಿಸಿರುವುದು ಒಪ್ಪಲೇಬೇಕಾದ ಕಟು ಸತ್ಯ. ಆದರೆ ಈ ಸತ್ಯವನ್ನು ಅರಿತು, ಅದಕ್ಕೆ ಹೊಂದಿಕೊಂಡು ಬದುಕುವ ಬಗೆ ನಮ್ಮದೇ ತತ್ವಗಳಿಗೆ ವೇದ್ಯವಾದಾಗ ಬದುಕು ತಾನಾಗಿಯೇ ಬದುಕನ್ನು ಪಡೆಯುತ್ತದೆ. ಕಣ್ಣ ಮುಂದೆ ಅನಾವರಣಗೊಂಡ ವಾಸ್ತವವನ್ನು ಒಪ್ಪದೇ ಎಂದೋ ಘಟಿಸಿದ ಭೂತವನ್ನು ನೆನೆದು ಇಂದನ್ನೂ, ನಾಳೆಯನ್ನೂ ನಿರರ್ಥಕಗೊಳಿಸಿದರೆ ಏನು ಚೆಂದ ಹೇಳಿ ? ಪರಸ್ಪರರನ್ನು ಅರ್ಥೈಸಿಕೊಂಡು, ನಮ್ಮತನವನ್ನೂ ಉಳಿಸಿಕೊಂಡು, ಪರರ ಹಿತಾಸಕ್ತಿಗಳನ್ನೂ ಮಾನವೀಯ ನೆಲೆಯಲ್ಲಿ ತಿಳಿದು ಅವುಗಳ ದೋಷವನ್ನು ತಿದ್ದಿ ಬದುಕಬೇಕೇ ವಿನಃ ಹಿಂದೆ ನಡೆದು ಹೋದ ಸ್ಥಿತಿಗಳನ್ನೇ ಇಲ್ಲಿ ಎರಕ ಹೊಯ್ಯುವ ಯತ್ನ ಮಾಡಿದರೆ ಬದುಕಿನ ಸ್ಥಿತಿ ಏಕಾಂಗಿತನ ಮಾತ್ರ.

      ತುಂಬಾ ಮಾತನಾಡಿದೆ ಕಾಣುತ್ತದೆ. ಏನೇ ಇರಲಿ, ಮುಕ್ತವಾದ ತಮ್ಮ ಈ ಪ್ರತಿಕ್ರಿಯೆ ನನ್ನ ಮನವನ್ನು ತಲುಪಿತು ಸುಭಾಷ್ ಅವರೇ. ಪ್ರೋತ್ಸಾಹಿಸಿದಕ್ಕೆ ಅನಂತ ವಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter