ಕಾ.ತ.ಚಿಕ್ಕಣ್ಣ
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಕಾ.ತ.ಚಿಕ್ಕಣ್ಣನವರ ಮಹತ್ವಾಕಾಂಕ್ಷೆಯ ಕಾದಂಬರಿ ‘ಮಳೆಬಯಲು’. ಅವರು ಗ್ರಾಮ ಭಾರತದ ಸ್ಥಿತ್ಯಂತರದ ಚಿತ್ರಣವನ್ನು ಈ ದೀರ್ಘ ಕಥನದಲ್ಲಿ ತುಂಬ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಈ ಕಥಾನಕ ಮೇಲ್ನೋಟಕ್ಕೆ ಸಂಪ್ರದಾಯ ಮತ್ತು ಆಧುನಿಕತೆಗಳ ಸಂಘರ್ಷದ ಕಥನದಂತೆ ಕಂಡರೂ ಕೂಡ ತುಂಬ ಸಂಕೀರ್ಣವಾದ ಕಥಾವಸ್ತುವನ್ನು ಹೊಂದಿದೆ. ‘ಮಳೆಬಯಲು’ ಕೇವಲ ಕೆಂಬಾರೆಹಟ್ಟಿ ಮತ್ತು ಕೆಂಬಾರೆಪುರದ ಸ್ಥಿತ್ಯಂತರದ ಕಥನವಲ್ಲ. ಇದು ಭಾರತದ ಯಾವುದೇ ರಾಜ್ಯದ, ಯಾವುದೇ ಜಿಲ್ಲೆಯ, ಯಾವುದೇ ತಾಲೂಕಿನ, ಯಾವುದೇ ಗ್ರಾಮದ ಸ್ಥಿತ್ಯಂತರದ ಕಥನವಾಗಬಹುದಾದಂತಹ ಕಾದಂಬರಿ.
ಕಳೆದ ಶತಮಾನದ ತೊಂಬತ್ತರ ದಶಕ ಭಾರತದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಗಳು ಮತ್ತು ಸುಧಾರಣೆಗಳನ್ನು ಉಂಟು ಮಾಡಿತು. ಆಧುನೀಕರಣ ಮತ್ತು ಜಾಗತೀಕರಣಗಳು ಭಾರತದ ಮೇಲೆ ಮಾಡಿದ ಪ್ರಭಾವ ಅಪಾರ. ಭಾರತದ ಹಳ್ಳಿಗಳು, ಪಟ್ಟಣಗಳು, ನಗರಗಳು, ಮಹಾನಗರಗಳು ಮತ್ತು ಮೆಟ್ರೋ ನಗರಗಳಲ್ಲಿ ವಾಸಿಸುವ ಕೋಟ್ಯಂತರ ಜನ ಭಾರತೀಯರ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳು ಮತ್ತು ಸುಧಾರಣೆಗಳು ಉಂಟಾದವು. ಭಾರತದ ಜನಸಂಖ್ಯೆಯಲ್ಲಿ ಬಹುಪಾಲು ಆವರಿಸಿರುವ ಬಡ, ಕೆಳ ಮಧ್ಯಮ, ಮಧ್ಯಮ, ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದ ಜನರ ಜೀವನಶೈಲಿಯಲ್ಲಿ ಸಾಕಷ್ಟು ವ್ಯತ್ಯಾಸಗಳುಂಟಾದವು.
ಭಾರತದ ಒಟ್ಟಾರೆ ಆದಾಯದಲ್ಲಿ ಶೇಕಡ ಐವತ್ತರಷ್ಟು ಕೃಷಿಯಿಂದಲೇ ಬರುತ್ತಿತ್ತು. ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡ ಅರವತ್ತೈದರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ವ್ಯಕ್ತಿಗಳ ತಲಾದಾಯ ಮತ್ತು ದೇಶದ ಒಟ್ಟಾರೆ ಆದಾಯ ಕಡಿಮೆಯಿತ್ತು. ತೊಂಬತ್ತರ ದಶಕದಲ್ಲಿ ಶ್ರೀಯುತ ಪಿ. ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಎಲ್.ಪಿ.ಜಿ. ಅಥವಾ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಗಳು ದೇಶವನ್ನು ಆರ್ಥಿಕ ಅಭಿವೃದ್ಧಿಯೆಡೆಗೆ ತೆಗೆದುಕೊಂಡು ಹೋದದ್ದು ನಿಜವಾದರೂ ಕೂಡ ಅದರಿಂದ ಕೆಲವು ದುಷ್ಪರಿಣಾಮಗಳುಂಟಾದವು ಎಂಬುದು ಸುಳ್ಳಲ್ಲ.
ಕೃಷಿ ಮತ್ತು ಗುಡಿ ಕೈಗಾರಿಕೆಗಳು ಆಧುನೀಕರಣ ಹಾಗೂ ಜಾಗತೀಕರಣದ ದಾಳಿಗೆ ತುತ್ತಾಗಿ ತತ್ತರಿಸಿದವು. ಇವುಗಳಿಂದ ಬರುವ ಆದಾಯ ತುಂಬ ಕಡಿಮೆಯಾಯಿತು. ಕೃಷಿ ಮತ್ತು ಗುಡಿ ಕೈಗಾರಿಕೆಯನ್ನೇ ನೆಚ್ಚಿ ಬದುಕುತ್ತಿದ್ದ ಕೋಟ್ಯಂತರ ರೈತರು ಮತ್ತು ಕೂಲಿ ಕಾರ್ಮಿಕರು ಬದುಕು ಸಾಗಿಸಲು ಸಾಧ್ಯವಾಗದೇ ಕಂಗಾಲಾದರು. ಅನಕ್ಷರಸ್ಥರು ಮತ್ತು ಬಡವರಾದ ಇಂತಹ ಬಹುಸಂಖ್ಯಾತ ರೈತರು ಮತ್ತು ಕೂಲಿ ಕಾರ್ಮಿಕರು ಹೊಸ ಬದುಕನ್ನರಸಿ ಮಹಾನಗರಗಳತ್ತ ಮುಖ ಮಾಡಿದರು. ಹೀಗೆ ಶುರುವಾದ ವಲಸೆ ಬರುಬರುತ್ತಾ ಹೆಚ್ಚುತ್ತಲೇ ಹೋಯಿತು. ಇಂತಹ ವಲಸಿಗರು ಅತ್ತ ಗ್ರಾಮ್ಯ ಸಂಸ್ಕೃತಿಯನ್ನು ಬಿಡಲಾಗದೇ, ಇತ್ತ ನಗರ ಸಂಸ್ಕೃತಿಗೆ ಹೊಂದಿಕೊಳ್ಳಲಾಗದೇ ಒದ್ದಾಡುವಂತಾಯಿತು. ಮುಂದೆ ಇಂತಹ ಜನರು ಮಹಾನಗರಗಳ ವಿಸ್ತರಣದಂತಿರುವ ಪಾಳು ಜಾಗಗಳಲ್ಲಿ ಒಟ್ಟಾಗಿ ವಾಸಿಸತೊಡಗಿದರು. ನಗರ ಪ್ರದೇಶದ ಸುಸಂಸ್ಕೃತ ಜನರು ಇಂತಹ ಜಾಗಗಳಿಗೆ ಸ್ಲಮ್ಮುಗಳೆಂದು ಕರೆಯತೊಡಗಿದರು.
ಕೆಂಬಾರೆಹಟ್ಟಿಯೆಂಬ ಗ್ರಾಮ ಮತ್ತು ಮಹಾನಗರದ ವಿಸ್ತರಣದಂತಿರುವ ಕೆಂಬಾರೆಪುರವೆಂಬ ಸ್ಲಮ್ಮಿನ ಜನರ ಬದುಕಿನ ಏಳು-ಬೀಳುಗಳು, ಸುಖ-ದುಃಖಗಳು ಮತ್ತು ಹೋರಾಟದ ಬದುಕಿನ ಕಥನವೇ ‘ಮಳೆಬಯಲು’. ಮೈದಾನಪ್ಪ ಮತ್ತು ದೇವರಸಯ್ಯರು ಕೆಂಬಾರೆಹಟ್ಟಿ ಮತ್ತು ಕೆಂಬಾರೆಪುರದ ಸ್ಥಿತ್ಯಂತರಕ್ಕೆ ಸಾಕ್ಷಿಭೂತರಾಗಿದ್ದಾರೆ. ಮೈದಾನಪ್ಪನ ನೆನಪುಗಳಲ್ಲಿ ಸ್ವಗತದಂತೆ ಅನಾವರಣಗೊಂಡಿರುವ ಕೆಂಬಾರೆಹಟ್ಟಿಯ ಚಿತ್ರ ಓದುಗರ ಮನಸ್ಸಿನಲ್ಲಿ ಸಹ ಅಚ್ಚೊತ್ತುವಂತಿದೆ. ಕೆಂಬಾರೆಹಟ್ಟಿಯ ಹೊಲ-ಗದ್ದೆಗಳು, ಕೆರೆ-ಕಟ್ಟೆಗಳು, ಗುಡಿ-ಗುಂಡಾರಗಳು, ಊರ ಬೀದಿಗಳು, ಮನೆಗಳು, ಕೆಂಬಾರೆಹಟ್ಟಿಯ ವಿವಿಧ ಬಗೆಯ ಜನರು, ಅವರ ಜೀವನದ ಕಥೆಗಳು ಮೈದಾನಪ್ಪನ ಪ್ರಜ್ಞೆಯಲ್ಲಿ ಸಜೀವಗೊಳ್ಳುತ್ತವೆ. ಮೈದಾನಪ್ಪ ಹಳ್ಳಿಗನಾದರೂ ಪ್ರಜ್ಞಾವಂತ ಮತ್ತು ಸಹೃದಯಿ. ಬದಲಾದ ಕೆಂಬಾರೆಹಟ್ಟಿ ಮತ್ತು ಅಲ್ಲಿನ ಜನರ ರೀತಿ-ನೀತಿಗಳು ಅವನನ್ನು ವಿಚಲಿತಗೊಳಿಸಿವೆ. ಕೆಂಬಾರೆಹಟ್ಟಿಯಿಂದ ಕೆಂಬಾರೆಪುರಕ್ಕೆ ವಾಸ್ತವ್ಯ ಬದಲಾಯಿಸಿದರೂ ಅವನಿಗೆ ನೆಮ್ಮದಿಯಿಲ್ಲ. ಸುಖ-ದುಃಖ ಏನೇ ಬರಲಿ ನಮ್ಮೂರೇ ನಮಗೆ ಚೆಂದ ಎಂದು ಮತ್ತೆ ಕೆಂಬಾರೆಹಟ್ಟಿಗೆ ಮರಳುತ್ತಾನೆ. ಮೈದಾನಪ್ಪನಿಗೆ ಹಳೆಯ ಕೆಂಬಾರೆಹಟ್ಟಿಯನ್ನು ಮರೆಯುವುದು ಸಾಧ್ಯವಾಗುವುದಿಲ್ಲ. ಅವನು ನಾಸ್ತಾಲಜಿಕನಂತೆ ಮತ್ತೆ ಮತ್ತೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತಾನೆ.
ಕೆಂಬಾರೆಪುರದ ನಿರ್ಮಾತೃವಾದ ದೇವರಸಯ್ಯ ಮೈದಾನಪ್ಪನಿಗಿಂತ ಹೆಚ್ಚು ವಾಸ್ತವ ಪ್ರಜ್ಞೆ ಮತ್ತು ವ್ಯವಹಾರ ಜ್ಞಾನವಿರುವ ಮನುಷ್ಯ. ಕೆಂಬಾರೆಹಟ್ಟಿಯಲ್ಲಿ ಬದುಕು ದುಸ್ತರವಾದಾಗ ಅವನು ಅಲ್ಲಿಂದ ನಗರಕ್ಕೆ ವಲಸೆ ಹೋಗಿ ಬದುಕು ಕಟ್ಟಿಕೊಳ್ಳುತ್ತಾನೆ. ಕೆಂಬಾರೆಹಟ್ಟಿಯ ಜೊತೆ ಜೊತೆಗೆ ವಿವಿಧ ಪ್ರದೇಶಗಳಿಂದ ಬಂದ ಹತ್ತು ಹಲವು ವಲಸಿಗರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾನೆ. ನಿಧಾನವಾಗಿ ಕೆಂಬಾರೆಹಟ್ಟಿಯ ಮತ್ತೊಂದು ರೂಪದಂತೆ (ರೆಪ್ಲಿಕಾ) ಕೆಂಬಾರೆಪುರ ರೂಪುಗೊಳ್ಳುತ್ತದೆ.
ಗ್ರಾಮೀಣ ಪ್ರದೇಶವಾದ ಕೆಂಬಾರೆಹಟ್ಟಿಯ ಜನರಲ್ಲಿ ನಗರೀಕರಣದ ಪ್ರಭಾವ ಹೆಚ್ಚಾಗಿ ಕಂಡುಬಂದರೆ, ನಗರ ಪ್ರದೇಶದ ವಿಸ್ತರಣದಂತಿರುವ ಕೆಂಬಾರೆಪುರದ ಜನರಲ್ಲಿ ಗ್ರಾಮ್ಯ ಸಂಸ್ಕೃತಿಯನ್ನು ಜೀವಂತ ಉಳಿಸಿಕೊಳ್ಳುವ ಪ್ರಯತ್ನ ಕಂಡುಬರುತ್ತದೆ. ಒಟ್ಟಿನಲ್ಲಿ ಕೆಂಬಾರೆಹಟ್ಟಿ ಮತ್ತು ಕೆಂಬಾರೆಪುರದಲ್ಲಿ ಆಧುನೀಕರಣ ಮತ್ತು ಜಾಗತೀಕರಣಗಳು ಉಂಟು ಮಾಡಿದ ತೀವ್ರ ಪ್ರಭಾವವನ್ನು ಕಾಣಬಹುದು
ಕೆಂಬಾರೆಹಟ್ಟಿ ಮತ್ತು ಕೆಂಬಾರೆಪುರದಲ್ಲಿ ಹತ್ತು ಹಲವು ಬಗೆಯ ಜನರಿದ್ದಾರೆ ಮತ್ತು ಅವರೆಲ್ಲರಿಗೂ ಒಂದೊಂದು ಕಥೆಯಿದೆ. ಈ ಕಾದಂಬರಿಯಲ್ಲಿ ಬರುವ ಪಾರ್ವತಿ ಮತ್ತು ಸಿದ್ದಾಪ್ಪಾಜಿಯವರ ಪ್ರಣಯ ಕಥೆ ಗಮನ ಸೆಳೆಯುತ್ತದೆ. ಪಾರ್ವತಿ ಮತ್ತು ಸಿದ್ದಪ್ಪಾಜಿ ಒಲಿದು ಒಂದಾದವರು. ಅವರು ಮದುವೆಯ ಕಟ್ಟಳೆಗೆ ಒಳಗಾಗದಿದ್ದರೂ ಗಂಡ-ಹೆಂಡತಿಯರಂತೆ ಅನ್ಯೋನ್ಯದಿಂದ ಬಾಳುತ್ತಿದ್ದಾರೆ. ಅವರಿಬ್ಬರನ್ನು ಬೆಸೆದ ಕೊಂಡಿಯಂತಿರುವ ಪುಟ್ಟ ಮಗಳು ರತಿಯಿದ್ದಾಳೆ. ಇದೊಂದು ತರಹದ ಲಿವಿಂಗ್ ಟುಗೆದರ್ ಸಂಬಂಧದಂತೆ ಕಂಡರೂ ಈ ಸಂಬಂಧ ನಿಂತಿರುವುದು ಪ್ರೀತಿಯ ಮೇಲೆಯೇ ಹೊರತು ಸ್ವಾರ್ಥದ ಮೇಲಲ್ಲ. ಮಹಾನಗರಗಳಲ್ಲಿ ಕಂಡುಬರುವ ಸುಶಿಕ್ಷಿತ ಮತ್ತು ಮೇಲ್ವರ್ಗದವರ ನಡುವಿರುವ ಲಿವಿಂಗ್ ಟುಗೆದರ್ ಸಂಬಂಧಕ್ಕಿಂತ ಇದು ಹೆಚ್ಚು ಅರ್ಥಪೂರ್ಣವಾದುದು.
ಕೆಂಬಾರೆಹಟ್ಟಿ, ಕೆಂಬಾರೆಪುರ ಯಾವುದೇ ಇರಲಿ ನಮ್ಮ ದೇಶದಲ್ಲಿ ಯಾವುದೂ ರಾಜಕೀಯಕ್ಕೆ ಹೊರತಲ್ಲ. ಕೆಂಬಾರೆಪುರದಲ್ಲಿ ಇನ್ನೂರಾ ಐವತ್ತು ಓಟುಗಳಿವೆಯೆಂಬ ಕಾರಣಕ್ಕಾಗಿ ಕೆಲವು ಪುಢಾರಿಗಳಿಗೆ ಕೆಂಬಾರೆಪುರ ಮುಖ್ಯವಾಗಿ ಕಾಣುತ್ತದೆ. ಓಟುಗಳ ಆಸೆಗಾಗಿಯೇ ಕೆಂಬಾರೆಪುರವನ್ನು ಮಹಾನಗರದ ಭಾಗವೆಂದು ಅಧಿಕೃತವಾಗಿ ಘೋಷಿಸಲಾಗುತ್ತದೆ. ಮತದಾರರನ್ನು ಓಲೈಸಲು ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲಾಗುತ್ತದೆ. ಕೆಂಬಾರೆಪುರದ ಹೊಸ ತಲೆಮಾರಿನ ಜನರಿಗೆ ಕೆಂಬಾರೆಪುರದಲ್ಲಿರುವ ಹಳೆಯ ತಲೆಮಾರಿನ ಜನರು ಮತ್ತು ಅವರಲ್ಲಿರುವ ಹಳ್ಳಿಗತನ ತೀವ್ರ ಅಸಹನೆಯನ್ನುಂಟುಮಾಡಿದೆ. ಕೆಂಬಾರೆಪುರದ ನಿರ್ಮಾತೃವಾದ ದೇವರಸಯ್ಯನೇ ಈಗ ಮೂಲೆಗೆ ಸರಿದಿದ್ದಾನೆ.
ಇತ್ತ ಕೆಂಬಾರೆಪುರವೆಂಬ ರೆಪ್ಲಿಕಾದ ಒರಿಜಿನಲ್ ರೂಪದಂತಿರುವ ಕೆಂಬಾರೆಹಟ್ಟಿಯ ಸ್ಥಿತಿಯೇನೂ ಭಿನ್ನವಾಗಿಲ್ಲ. ಉತ್ತಮ ಫಸಲು ಕೊಡುತ್ತಿದ್ದ ಜಮೀನುಗಳು ಈಗ ಕೃಷಿ ಮಾಡುವವರಿಲ್ಲದೆ ಪಾಳು ಬಿದ್ದಿವೆ. ಹಳ್ಳಿಯ ಜನ ಬೆಳಿಗ್ಗೆ ಲಾರಿಗಳಲ್ಲಿ ಹತ್ತಿ ಕೆಲಸಕ್ಕೆ ಹೋದರೆ ಮತ್ತದೇ ಲಾರಿಗಳಲ್ಲಿ ಸಂಜೆಯ ಹೊತ್ತಿಗೆ ಹಿಂದಿರುಗುತ್ತಾರೆ. ನೆಮ್ಮದಿಯಾಗಿ ಜೀವಿಸುವಷ್ಟು ಹಣ ಈಗ ಅವರಿಗೆ ದೊರೆಯುತ್ತಿದೆ. ಹೊರ ಊರಿನ ಜನ ಬಂದು ಕೆಂಬಾರೆಹಟ್ಟಿಯಲ್ಲಿ ಜಮೀನು ಕೊಳ್ಳುತ್ತಿದ್ದಾರೆ. ಕೆಂಬಾರೆಹಟ್ಟಿಯವರು ಇರುವ ಜಮೀನುಗಳಲ್ಲಿ ಕೃಷಿ ಮಾಡಲಾಗದೆ ಪರ ಊರುಗಳಿಗೆ ಹೋಗಿ ಕೂಲಿ-ನಾಲಿ ಮಾಡಿ ಬದುಕುತ್ತಿದ್ದಾರೆ. ಮೈದಾನಪ್ಪನಂತಹ ಕೆಲವೇ ಕೆಲವರಿಗೆ ಮಾತ್ರ ಇದರ ಕುರಿತು ವಿಷಾದವಿದೆ. ಉಳಿದ ಬಹುತೇಕ ಜನರು ಕಾಲಕ್ಕೆ ತಕ್ಕಂತೆ ಬದಲಾಗಿ ಬದುಕುತ್ತಿದ್ದಾರೆ.
ನಮ್ಮ ದೇಶದ ಲಕ್ಷಾಂತರ ಹಳ್ಳಿಗಳು ಕೃಷಿಮೂಲ ಸಂಸ್ಕೃತಿಯಿಂದ ರೂಪುಗೊಂಡಂತಹವು. ಭಾರತದ ಆತ್ಮವೇ ಹಳ್ಳಿಗಳಲ್ಲಿದೆ ಎಂಬ ಗಾಂಧೀಜಿಯವರ ಮಾತೇ ಅಸತ್ಯವಾಗಬಹುದಾದ ಆತಂಕದ ಪರಿಸ್ಥಿಯುಂಟಾಗಿರುವುದು ನಿಜಕ್ಕೂ ಖೇದದ ಸಂಗತಿ. ಆಧುನೀಕರಣ ಮತ್ತು ಜಾಗತೀಕರಣಗಳಿಂದ ಸಾಕಷ್ಟು ಪ್ರಯೋಜನಗಳಾಗಿವೆ ಅದೇ ರೀತಿ ಸಾಕಷ್ಟು ಹಾನಿಯೂ ಉಂಟಾಗಿದೆ. ವಿಶೇಷವಾಗಿ ಗ್ರಾಮ ಭಾರತದಲ್ಲುಂಟಾದ ಸಾಂಸ್ಕೃತಿಕ ಪಲ್ಲಟಗಳು ತೀವ್ರ ಆಘಾತವುಂಟುಮಾಡುವಷ್ಟು ಪರಿಣಾಮಕಾರಿಯಾಗಿವೆ.
ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕರಾದ ಯು.ಆರ್.ಅನಂತಮೂರ್ತಿ ಮತ್ತು ಮಲಯಾಳಂ ಲೇಖಕ ಎಂ.ಟಿ.ವಾಸುದೇವನ್ ನಾಯರ್ ಅವರು ಗ್ರಾಮೀಣ ಭಾರತದಲ್ಲುಂಟಾದ ಸಾಂಸ್ಕೃತಿಕ ಪಲ್ಲಟಗಳ ಕುರಿತು ತಮ್ಮ ಅನೇಕ ಬರಹಗಳು, ಭಾಷಣಗಳು ಮತ್ತು ಸಂದರ್ಶನಗಳಲ್ಲಿ ಸಾಕಷ್ಟು ಚರ್ಚಿಸಿದ್ದಾರೆ. ಈ ಮಹಾನ್ ಲೇಖಕರು, “ಭಾರತದ ಗ್ರಾಮ್ಯ ಸಂಸ್ಕೃತಿಯೆಂಬುದು ನಮ್ಮ ಮುಂದಿನ ತಲೆಮಾರುಗಳ ಜನರಿಗೆ ಇತಿಹಾಸದ ಪುಸ್ತಕಗಳಲ್ಲಿ ಮಾತ್ರ ಸಿಗುವಂತಾಗಬಹುದೇ?” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಂದು ಗ್ರಾಮ ಭಾರತ ಅಂತಹ ಆತಂಕ ನಿಜವಾಗುವ ಕಾಲಘಟ್ಟದಲ್ಲಿರುವುದು ವಿಷಾದದ ಸಂಗತಿ.
ಕೃಷಿಮೂಲ ಸಂಸ್ಕೃತಿಯಿಂದ ರೂಪುಗೊಂಡ ಭಾರತದ ಬಹುಪಾಲು ಹಳ್ಳಿಗಳ ಸ್ಥಿತ್ಯಂತರ ಮತ್ತು ಸಾಂಸ್ಕೃತಿಕ ಪಲ್ಲಟಗಳ ಕಥನವನ್ನು ಚಿಕ್ಕಣ್ಣನವರು ‘ಮಳೆಬಯಲು’ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಕೆಂಬಾರೆಹಟ್ಟಿ ಮತ್ತು ಕೆಂಬಾರೆಪುರಗಳು ಆಧುನೀಕರಣ ಮತ್ತು ಜಾಗತೀಕರಣಗಳ ದಾಳಿಗೆ ಸಿಕ್ಕು ರೂಪಾಂತರಗೊಂಡ ಭಾರತದ ಅಸಂಖ್ಯ ಹಳ್ಳಿಗಳನ್ನು ಪ್ರತಿನಿಧಿಸುವಂತಿವೆ. ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಮನುಷ್ಯ ಬದಲಾಗಲೇಬೇಕಾಗುತ್ತದೆ. ಕೆಲವು ಬದಲಾವಣೆಗಳು ಒಳಿತನ್ನುಂಟುಮಾಡಿದರೆ, ಕೆಲವು ಬದಲಾವಣೆಗಳು ಕೆಡುಕನ್ನುಂಟುಮಾಡುತ್ತವೆ. ಆಧುನೀಕರಣ ಮತ್ತು ಜಾಗತೀಕರಣಗಳ ಪ್ರಭಾವವನ್ನು ನಾವು ಸ್ಪಷ್ಟವಾಗಿ ಕಾಣಬೇಕಾದರೆ ದಕ್ಷಿಣ ಭಾರತದ ಹಳ್ಳಿಗಳಲ್ಲಿ ಸಂಚರಿಸಬೇಕಾಗುತ್ತದೆ. ಅಭಿವೃದ್ಧಿಯ ವಿಷಯದಲ್ಲಿ ಉತ್ತರ, ಮಧ್ಯ ಮತ್ತು ಈಶಾನ್ಯ ಭಾರತದ ಭಾಗಗಳಿಗಿಂತ ತುಂಬ ಮುಂದಿರುವ ದಕ್ಷಿಣ ಭಾರತದ ಹಳ್ಳಿಗಳ ಚಿತ್ರಣ ಕಳೆದ ಮೂರು ದಶಕಗಳಲ್ಲಿ ತುಂಬ ಬದಲಾಗಿದೆ.
ತಮಿಳಿನ ಪ್ರಸಿದ್ಧ ಲೇಖಕರೊಬ್ಬರಿಗೆ ಎಂಬತ್ತು ವರ್ಷ ತುಂಬಿದ ಸವಿನೆನಪಿಗೆ ಅವರ ಶಿಷ್ಯರು ಮತ್ತು ಅಭಿಮಾನಿಗಳು ಸೇರಿ ಒಂದು ಅಭಿನಂದನ ಗ್ರಂಥ ಅರ್ಪಿಸುವ ಮತ್ತು ಅವರ ಕುರಿತು ಒಂದು ಸಾಕ್ಷ್ಯಚಿತ್ರ ನಿರ್ಮಿಸುವ ಯೋಜನೆಯನ್ನು ರೂಪಿಸಿದರು. ಸಹಜವಾಗಿಯೇ ಹಿರಿಯ ಲೇಖಕರಿಗೆ ತಾವು ಹುಟ್ಟಿ ಬೆಳೆದ ಹಳ್ಳಿಯನ್ನು ನೋಡುವ ಆಸೆಯಿತ್ತು. ಹಿರಿಯ ಲೇಖಕರನ್ನು ಹಳ್ಳಿಗೆ ಕರೆದುಕೊಂಡು ಹೋದಾಗ ಅವರಿಗೆ ಆಘಾತ ಕಾದಿತ್ತು. ಆ ಹಳ್ಳಿ ಈಗ ಒಂದು ಪುಟ್ಟ ಪಟ್ಟಣವಾಗಿತ್ತು. ಊರ ಮಧ್ಯದಲ್ಲಿದ್ದ ಆಲದಮರದ ಜಾಗದಲ್ಲಿ ಒಂದು ಸೂಪರ್ ಮಾರ್ಕೆಟ್ ಅಂಗಡಿ ತಲೆಯೆತ್ತಿ ನಿಂತಿತ್ತು. ಅವರು ಹುಟ್ಟಿ ಬೆಳೆದ ಮನೆಯಿರುವ ಜಾಗದಲ್ಲಿ ಕೆಲವು ಅಂಗಡಿಸಾಲುಗಳಿದ್ದವು. ಅವರು ಯಾವ ಹಳ್ಳಿಯನ್ನು ತಮ್ಮ ಕಥೆಗಳಲ್ಲಿ ಜೀವಂತವಾಗಿ ಚಿತ್ರಿಸಿ, ಓದುಗರ ಮನಸ್ಸು ಗೆದ್ದಿದ್ದರೋ ಆ ಹಳ್ಳಿ ವಾಸ್ತವದಲ್ಲಿ ಸಂಪೂರ್ಣ ನಾಶವಾಗಿ, ಹೆಸರಷ್ಟೇ ಉಳಿದಿತ್ತು. ಆ ಲೇಖಕರಿಗಾದ ಆಘಾತ ಎಷ್ಟು ತೀವ್ರವಾಗಿತ್ತೆಂದರೆ ಸಾಕ್ಷ್ಯಚಿತ್ರ, ಅಭಿನಂದನ ಗ್ರಂಥ ಮತ್ತು ಸಮಾರಂಭದ ಯೋಜನೆಯೇ ರದ್ದಾಯ್ತು. ಈ ಘಟನೆ ನಡೆದ ಕೆಲವೇ ತಿಂಗಳುಗಳಲ್ಲಿ ಅವರು ತೀರಿಕೊಂಡರು. ಈ ನೈಜ ಘಟನೆಗೂ ‘ಮಳೆಬಯಲು’ ಕಾದಂಬರಿ ಧ್ವನಿಸುವ ವಿಷಾದಕ್ಕೂ ಅಂತಃಸಂಬಂಧವಿದೆ.
‘ಮಳೆಬಯಲು’ ಕಾದಂಬರಿಯಲ್ಲಿ ಬರುವ ಕೆಂಬಾರೆಹಟ್ಟಿ ಮತ್ತು ಕೆಂಬಾರೆಪುರ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿವೆ. ಮೈದಾನಪ್ಪ, ದೇವರಸಯ್ಯ, ನಿಂಗಮ್ಮ, ತಾಯಮ್ಮ, ಪಾರ್ವತಿ, ಸಿದ್ದಪ್ಪಾಜಿ, ಮರಿದ್ಯಾವಣ್ಣ ಸೇರಿದಂತೆ ಹಲವು ಪಾತ್ರಗಳು ಜೀವಂತ ವ್ಯಕ್ತಿಗಳಂತೆಯೇ ಕಾಣುತ್ತವೆ. ಕಥೆಯ ನಿರೂಪಣೆಯ ಓಘ ಮತ್ತು ಕಾವ್ಯಾತ್ಮಕ ಭಾಷಾಶೈಲಿ ಈ ಕಾದಂಬರಿಯನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ಇಂತಹ ಒಂದು ಗಟ್ಟಿಯಾದ ಕಥಾವಸ್ತುವನ್ನು ನಿರ್ವಹಿಸುವಾಗ ಲೇಖಕನಿಗೆ ಪ್ರತಿಭೆ ಮತ್ತು ಅಪಾರ ತಾಳ್ಮೆಯಿರಬೇಕಾಗುತ್ತದೆ. ಚಿಕ್ಕಣ್ಣನವರಲ್ಲಿ ಕಾದಂಬರಿಕಾರನಿಗಿರಬೇಕಾದ ಕಲೆಗಾರಿಕೆ ಮತ್ತು ಸಮಾಜಶಾಸ್ತ್ರಜ್ಞನಿಗಿರಬೇಕಾದ ಸಂಯಮ ಎರಡೂ ಇವೆ.
ಚಿಕ್ಕಣ್ಣನವರ ಕಾವ್ಯಾತ್ಮಕ ಭಾಷಾಶೈಲಿ ತುಂಬ ಸೊಗಸಾಗಿದೆ. ಕಾದಂಬರಿಯ ಕೆಲವು ಭಾಗಗಳು ಕಥನಕಾವ್ಯವನ್ನು ನೆನಪಿಗೆ ತರುವಂತಿವೆ. ಈ ದೀರ್ಘ ಕಥನದಲ್ಲಿ ಕೆಲವು ಕಡೆ ವಿವರಣೆಗಳು ಅಗತ್ಯಕ್ಕಿಂತ ಹೆಚ್ಚಾಗಿ ಬಂದಿವೆ. ಜಾನಪದ ಶೈಲಿಯ ಕಥಾನಕದಂತೆ ಕಾಣುವ ಕಾದಂಬರಿಯ ನಿರೂಪಣೆ ಒಮ್ಮೊಮ್ಮೆ ಕಥನವನ್ನು ಬದಿಗೆ ಸರಿಸುವಂತೆ ಮಾಡುತ್ತದೆ. ಇಂತಹ ಒಂದೆರಡು ನಗಣ್ಯವೆನ್ನಬಹುದಾದ ದೋಷಗಳನ್ನು ಹೊರತುಪಡಿಸಿದರೆ ‘ಮಳೆಬಯಲು’ ತುಂಬ ಚೆನ್ನಾಗಿದೆ.
ಹಳೆ ಮೈಸೂರು ಪ್ರದೇಶದ ಗ್ರಾಮೀಣ ಸಂಸ್ಕೃತಿಯನ್ನು ಪೂರ್ಣ ಪ್ರಮಾಣದಲ್ಲಿ ಸಜೀವವಾಗಿ ಮತ್ತು ಸಾರವತ್ತಾಗಿ ಚಿತ್ರಿಸಿದ ಶ್ರೇಯಸ್ಸು ಡಾ.ಬೆಸಗರಹಳ್ಳಿ ರಾಮಣ್ಣನವರಿಗೆ ಸಲ್ಲುತ್ತದೆ. ಎಚ್.ಎಲ್.ನಾಗೇಗೌಡ, ಜೀ.ಶಂ.ಪರಮಶಿವಯ್ಯ, ಸುಧಾಕರ ಮತ್ತು ಕಾಳೇಗೌಡ ನಾಗವಾರರು ಹಳೆ ಮೈಸೂರು ಭಾಗದ ಗ್ರಾಮ್ಯ ಸಂಸ್ಕೃತಿಯ ಸೊಬಗನ್ನು ತಮ್ಮ ಕಥೆಗಳಲ್ಲಿ ಅನಾವರಣ ಮಾಡಿದ್ದರೂ ಕೂಡ ಅದರ ಪೂರ್ಣ ಫಲವನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ಚಿಕ್ಕಣ್ಣನವರು ಮಾತ್ರ ಈ ವಿಷಯದಲ್ಲಿ ಆ ಭಾಗದ ಎಲ್ಲ ಲೇಖಕರಿಗಿಂತ ನಾಲ್ಕು ಹೆಜ್ಜೆ ಮುಂದಿದ್ದಾರೆ. ಡಾ.ಬೆಸಗರಹಳ್ಳಿ ರಾಮಣ್ಣನವರ ನಂತರ ಹಳೆ ಮೈಸೂರು ಪ್ರದೇಶದ ಗ್ರಾಮೀಣ ಸಂಸ್ಕೃತಿಯ ಸೊಬಗು ಮತ್ತು ಭಾಷೆಯ ಸೊಗಡನ್ನು ತಮ್ಮ ಕಥನದಲ್ಲಿ ಜೀವಂತಗೊಳಿಸಿದ ಲೇಖಕ ಕಾ.ತ.ಚಿಕ್ಕಣ್ಣ.
ನಿಧಾನಗತಿಯಲ್ಲಿ ಅವಸಾನದಂಚಿಗೆ ಸರಿಯುತ್ತಿರುವ ಕೃಷಿಮೂಲ ಸಂಸ್ಕೃತಿ, ಗ್ರಾಮ ಭಾರತದ ಸ್ಥಿತ್ಯಂತರ ಮತ್ತು ಸಾಂಸ್ಕೃತಿಕ ಪಲ್ಲಟಗಳನ್ನು ತುಂಬ ವಿಷಾದದಿಂದ ದಾಖಲಿಸುವ ‘ಮಳೆಬಯಲು’ ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಬಂದ ಮಹತ್ವದ ಕಾದಂಬರಿಗಳಲ್ಲೊಂದು. ಕಾ.ತ.ಚಿ. ಅವರ ಹೆಸರು ಚಿಕ್ಕಣ್ಣನಾದರೂ ಕಥನದಲ್ಲಿ ಅವರು ದೊಡ್ಡಣ್ಣ. ಕನ್ನಡ ಓದುಗರು ಪ್ರತಿಭಾ ಸಂಪನ್ನರಾದ ಚಿಕ್ಕಣ್ಣನವರಿಂದ ಎಪಿಕ್ ಕಾದಂಬರಿಯೊಂದನ್ನು ಖಂಡಿತ ನಿರೀಕ್ಷಿಸಬಹುದು.
*******
1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ‘ಚಿಕ್ಕಣ್ಣನವರ ಮಳೆಬಯಲು’”
ಉತ್ತಮ ಒಳನೋಟ. ಸಮಕಾಲೀನ ಸಾಹಿತ್ಯ ಕೃತಿಗಳಿಗೆ ಸಂದ ಸಕಾರಾತ್ಮಕ ಸ್ಪಂದನೆ.