ನಿರುತ್ತರ

ಚಿತ್ರ: ಮಂಗಳಾ ಶೆಟ್ಟಿ

“ನಾನು ಏನು ಬೇಕಾದ್ರೂ ಮಾಡ್ತೇನೆ. ಹೆಂಡ್ತಿ ಮಕ್ಳಿಗೆ ಹೊಡೀತೇನೆ. ಬಡೀತೇನೆ. ಅದನ್ನು ಕೇಳ್ಲಿಕ್ಕೆ ಅವರ್ಯಾರು? ನೀವು ನನ್ನನ್ನೊಮ್ಮೆ ಬಿಡಿ ಪಟೇಲ್ರೇ. ಆಮೇಲೆ ನೋಡಿ, ನಾನು ಅವ್ರಿಗೆ ಹೇಗೆ ಬುದ್ಧಿ ಕಲಿಸ್ತೇನೆ ಅಂತ”
ಆ ಬೊಬ್ಬೆಯನ್ನು ಕೇಳಿ ಅಪ್ಪು ಹೌಹಾರಿ ಎಚ್ಚೆತ್ತ. ಯಾರದು ಈ ರಾತ್ರಿಯಲ್ಲಿ? ಅಪ್ಪನ ದನಿಯಂತಿದೆಯಲ್ಲಾ. ಅವನು ಪಕ್ಕಕ್ಕೆ ಹೊರಳಿ ನೋಡಿದ. ಅಮ್ಮ ನನಗಿಂತ ಮೊದಲೇ ಎದ್ದು ಬಾಗಿಲು ತೆರೆದಿದ್ದಾಳೆ. ಅವಳ ಹಿಂದಿನಿಂದ ಇಣುಕಿ ಅಪ್ಪುವೂ ಹೊರಗೆ ನೋಡಿದ. ಅಪ್ಪನನ್ನು ನೋಡುತ್ತಲೇ ಅವನಿಗೆ ವಾಕರಿಕೆ ಬಂದಂತಾಯಿತು. ಮೈಮೇಲೆ ಇಡೀ ಕೆಸರುಕೊಚ್ಚೆ; ರಾಡಿನೀರು. ನೆಲಕ್ಕೆ ಬೀಳದಂತೆ ಅವನನ್ನು ಆಧರಿಸಿ ಹಿಡಿದ ಪಟೇಲರ ಅಂಗಿಯಲ್ಲೂ ಕೆಸರು.
“ಅಂಗಡಿಯ ಕೃಷ್ಣನಿಗೀಗ ಭಾರೀ ಸೊಕ್ಕು ಬಂದಿದೆ. ಹಿಂದಿನ ಬಾಕಿ ತೀರಿಸದಿದ್ರೆ ಇನ್ಮುಂದೆ ಸಾಮಾನು ಕೊಡೂದಿಲ್ಲಂತೆ. ಆಗ ಅಲ್ಲಿದ್ದ ಗಂಗು ಮತ್ತು ಕಣ್ಣಪ್ಪು ಹೇಳಿದ್ದೇನು ಗೊತ್ತುಂಟ? ‘ನಿನ್ನ ಹೆಂಡತಿಯನ್ನು ಕಳಿಸು. ಮೊಟ್ಟೆ ಮಾತ್ರವಲ್ಲ ಮೀನು-ಕೋಳಿ ಎಲ್ಲ ನಾವೇ ತೆಗ್ದು ಕೊಡ್ತೇವೆ’ ಅಂತ. ನನ್ನ ಹೆಂಡತಿಯ ಬಗ್ಗೆ ಮಾತಾಡ್ಲಿಕ್ಕೆ ಅವರು ಯಾರು? ಥ್ಫೂ! ಸೂಳೇಮಕ್ಳು. ಏ ಪಟೇಲ್ರೇ… ನೀವು ನನ್ನನ್ನು ತಡೆಯದಿರ್ತಿದ್ರೆ ಕೊಂದೇ ಬಿಡ್ತಿದ್ದೆ ಆ ನಾಯಿಗಳನ್ನು”
ತೇಲುಗಣ್ಣು ಬಿಡುತ್ತಾ ತೊದಲುತ್ತಿದ್ದ ಅಪ್ಪನನ್ನೇ ಎವೆಯಿಕ್ಕದೆ ನೋಡುತ್ತಿದ್ದ ಅಪ್ಪು. ಗುದ್ದು ತಿಂದು ಬಾತುಕೊಂಡ ಬಲಗಣ್ಣು. ಕೆಳದುಟಿ ಹರಿದು ಜಿನುಗುವ ನೆತ್ತರು. ಅಲ್ಲಲ್ಲಿ ಹರಿದು ಕಿತ್ತು ಬಂದ ಅಂಗಿ. ಹಾಗಿದ್ದರೆ ಲುಂಗಿ? ಅವಮಾನದಿಂದ ಕುಗ್ಗಿದ ಅಮ್ಮ ನಿಧಾನಕ್ಕೆ ತಲೆಯೆತ್ತಿ ಪಟೇಲನನ್ನು ದೈನ್ಯದಿಂದ ನೋಡಿದಳು. “ಪರ್ವಾಗಿಲ್ಲ ರಾಧೇ, ಆದದ್ದಾಯ್ತು. ಮರ್ತುಬಿಡು. ನೀನೀಗ ಇವನನ್ನು ಒಳಗೆ ಕರ್ಕೊಂಡು ಹೋಗು” ಎಂದು ಹೆಚ್ಚೇನೂ ಮಾತನಾಡದೆ ಹೊರಟುಹೋದರು. ಪಡಿಪ್ಪುರೆ ದಾಟುವವರೆಗೂ ಅಮ್ಮ ಪಟೇಲರನ್ನೇ ನೋಡುತ್ತಿದ್ದು ಅವರು ಅಲ್ಲಿಂದ ಕಣ್ಮರೆಯಾದ ತಕ್ಷಣ ಅಪ್ಪನತ್ತ ಬಗ್ಗಿ ಬೊಬ್ಬಿರಿದಳು. “ನೀವು ಹಾಳಾಗಿ ಹೋಗಿ. ನಿಮ್ಮಿಂದಾಗಿ ಮರ್ಯಾದೆಯೆಲ್ಲ ಬೀದಿಪಾಲು. ನೀವು ನಾಳೆಯೇ ನಮಗೊಂದಿಷ್ಟು ವಿಷ ಕೊಟ್ಬಿಡಿ. ನಾನೂ ಮಗನೂ ಸತ್ತು ಮಣ್ಣು ತಿಂದ ಮೇಲೆ ಹೇಗೆ ಬೇಕೋ ಹಾಗೆ ಬಿದ್ದಿರಿ.” ಜಗಲಿಯ ಮೇಲೆ ಕವುಚಿ ಬಿದ್ದುಕೊಂಡಿದ್ದ ಅಪ್ಪ ತಲೆಯನ್ನು ಮಾತ್ರ ಮೆಲ್ಲನೆ ಮೇಲೆತ್ತಿ “ಹೆಹೆ”ಎಂದ. ಬಾಯಿಯಿಂದ ಬೊಟ್ಟು ಬೊಟ್ಟಾಗಿ ಜೊಲ್ಲಿಳಿಯಿತು. ”ವಿಷ ತಗೊಳ್ಳಲಿಕ್ಕಿರೋ ಹಣ ನಿನ್ನಪ್ಪ ಕೊಡ್ತಾನ?” ಇದನ್ನು ಕೇಳುತ್ತಲೇ ಅಮ್ಮನ ಕೋಪ ಇನ್ನಷ್ಟು ಏರಿತು. “ನಿಮ್ಮನ್ನು ನಾನು…” ಎಂದು ಧುಮುಗುಟ್ಟಿಕೊಂಡು ಬಚ್ಚಲುಮನೆಗೆ ನುಗ್ಗಿ ಬಾಲ್ದಿಯಲ್ಲಿ ತಣ್ಣೀರು ತುಂಬಿ ತಂದು ಅಪ್ಪನ ತಲೆಗೆ ದಳದಳ ಸುರಿಯುತ್ತಾ ಹೇಳಿದಳು. “ಕುಡ್ದೂ ಕುಡ್ದೂ ಪ್ರಾಣ ಕಳ್ಕೋತೀರಿ ನೀವು.” ಅಪ್ಪ ಅವಳನ್ನೊಮ್ಮೆ ತಿರಸ್ಕಾರದಿಂದ ನೋಡಿ “ಹಾಗಿದ್ರೆ ಒಳ್ಳೇದಾಯ್ತು. ಆಮೇಲೆ ನಿಂಗೆ ಮಜವಾಗಿರಬಹುದಲ್ಲ” ಎಂದ. ಅಮ್ಮ ಪೆಚ್ಚಾದಂತೆ ತೋರಿತು. ಅವಳ ಹಣೆಯಲ್ಲಿ ಬೆವರಹನಿಗಳು ಸಾಲುಗಟ್ಟುತ್ತಿರುವುದನ್ನು ಅಪ್ಪು ಚಿಮಿಣಿ ದೀಪದ ಬೆಳಕಿನಲ್ಲಿ ಕಂಡ. ಅಡಿಯಿಂದ ಮುಡಿವರೆಗೂ ನಡುಗುತ್ತಾ ನಿಂತಿದ್ದ ಅಮ್ಮ ಇದ್ದಕ್ಕಿದ್ದಂತೆ ಕೆರಳಿ ಅಪ್ಪನ ತಲೆಯ ಹತ್ತಿರವೇ ಬಾಲ್ದಿಯನ್ನು ಕುಕ್ಕಿ ಬಿರುಗಾಳಿಯಂತೆ ಒಳಗೆ ಹೋದಳು. “ನನ್ನ ಮೇಲೆ ಪ್ರೀತಿ ಇದ್ದೇನೂ ಅಲ್ಲವಲ್ಲ ನೀನಿಲ್ಲಿ ಇನ್ನೂ ಉಳ್ಕೊಂಡಿರೋದು? ಮನೆ ಬಿಟ್ಟು ಹೋದ್ರೆ ನಿನ್ನನ್ನು ನೋಡಿಕೊಳ್ಲಿಕ್ಕೆ ಬೇರೆ ಯಾರೂ ಇಲ್ಲ ಅಂತಲ್ವೋ?” ಎಂದಾಗ ಅಪ್ಪು ತನ್ನ ಅಮ್ಮನ ಬಾಯಿಯಿಂದ ಬರಬಹುದಾದ ಬಿರುಸಿನ ಮಾತುಗಳನ್ನು ಊಹಿಸಿ ಕಿವಿ ಮುಚ್ಚಿಕೊಂಡ. ಆ ಬಳಿಕ ಸದ್ದೇನೂ ಕೇಳದಿದ್ದಾಗ ಮೆಲ್ಲನೆ ಕಿವಿಯಿಂದ ಕೈ ತೆಗೆದು ನೋಡಿದ. ಅಪ್ಪ ಮಲಗಿದಲ್ಲಿಂದಲೇ ಬಳಬಳನೆ ಕಾರುತ್ತಿದ್ದುದು ಕಾಣಿಸಿತು.

ಅಪ್ಪು ಎಚ್ಚರಗೊಂಡಾಗ ಬೆಳಕು ಹರಿದು ಎಷ್ಟೋ ಹೊತ್ತಾಗಿತ್ತು. ಹೇ! ಅಮ್ಮ ನನ್ನನ್ನು ಏಕೆ ಎಬ್ಬಿಸ್ಲಿಲ್ಲ? ಎಂದುಕೊಳ್ಳುತ್ತಾ ಹಲ್ಲುಜ್ಜಲೆಂದು ಮನೆಯ ಹಿಂಬದಿಗೆ ಹೋದ. ಈಗಾಗಲೇ ತಡವಾಗಿರುವುದರಿಂದ ಬಾಳೆಬುಡಕ್ಕೆ ಉಚ್ಚೆ ಹೊಯ್ಯುತ್ತಲೇ ಹಲ್ಲುಜ್ಜಿ ಮುಗಿಸಿದ. ಆ ಬಳಿಕ ಸೀದಾ ಅಡುಗೆಕೋಣೆಗೆ ಹೊಕ್ಕು ‘ಚಾಯ’ ಎಂದ. ಆದರೆ ಅಮ್ಮ ಅವನ ಮುಖವನ್ನೇ ನೋಡಲಿಲ್ಲ. ಅಪ್ಪ ನಸುಕಲ್ಲೇ ಎದ್ದು ಕೆಲಸಕ್ಕೆ ಹೋಗಿದ್ದರಿಂದ ‘ಅಮ್ಮಾ ನಂಗೆ ದೋಸೆ ಕೊಡು’ ಎಂದು ಜೋರಾಗಿಯೇ ಹೇಳಿದ. ಆದರೆ ತಟ್ಟೆಗೆ ಬಿದ್ದದ್ದು ದೋಸೆಯಲ್ಲ; ಅವಲಕ್ಕಿ. ಇದೇನಿದು ಎಂಬಂತೆ ಮೂತಿ ಸೊಟ್ಟಗೆ ಮಾಡಿದ ಅಪ್ಪು “ದೋಸೆ ಎಲ್ಯುಂಟು? ದೋಸೆ ಬೇಕು ನಂಗೆ ದೋಸೆ” ಎಂದು ಹಟ ಮಾಡತೊಡಗಿದ. “ಇದಿಷ್ಟೇ ಇಲ್ಲಿರೋದು. ಬೇಡಾಂದ್ರೆ ತಂಗಳುಂಟು. ತಿನ್ನು.” ಎಂದು ಗದರಿದಾಗ ಅಪ್ಪು ಬಾಯಿ ಮುಚ್ಚಿಕೊಂಡ. ಅಮ್ಮನನ್ನು ನುಂಗುವಂತೆ ನೋಡುತ್ತಾ ಅವಲಕ್ಕಿಯನ್ನು ಬಾಯಿಗೆ ಹಾಕಿಕೊಂಡ. ಅವಲಕ್ಕಿಯಂತೆ ಅವಲಕ್ಕಿ! ಯಾರಿಗೆ ಬೇಕಿದು? ರುಚಿಯೂ ಇಲ್ಲ. ಹೊಟ್ಟೆಯೂ ತುಂಬೂದಿಲ್ಲ. ಥೂ! ಇದೆಂಥ ಚಾಯ? ಹಾಲೂ ಇಲ್ಲ. ಸಕ್ಕರೆಯೂ ಇಲ್ಲ.
ತಿಂದು ಕೈ ತೊಳೆದು ಒಣಗುವ ಮೊದಲೇ ಅಪ್ಪು ಕಿಟಿಕಿಯ ಸರಳುಗಳೆಡೆಯಲ್ಲಿಟ್ಟಿದ್ದ ಚೆಂಡನ್ನು ತಗೊಂಡು ನೇರ ಗದ್ದೆಯ ಕಡೆಗೆ ಓಡಿದ. ಬೇಸಿಗೆಗೆ ಬಿರುಕುಬಿಟ್ಟ ಆ ಖಾಲಿ ಗದ್ದೆಯಲ್ಲಿ ನಂದು, ಅಪ್ಪಿ, ಉಣ್ಣಿ, ವಿನು ಮೊದಲಾದವರು ಮುಟ್ಟಾಟ ಆಡುತ್ತಿದ್ದರು. ಅವರನ್ನು ಕಾಣುತ್ತಲೇ ಅಪ್ಪುವಿನ ಉತ್ಸಾಹ ಹೆಚ್ಚಿತು. ಅವರ ಕೇಕೆಯನ್ನೂ ಮೀರಿಸುವಂತೆ “ಏ… ನಿಲ್ಲಿಸ್ರೋ… ಚೆಂಡು ತಂದಿದ್ದೇನೆ ಬನ್ನಿ. ಲಗೋರಿ ಆಡುವಾ.” ಎಂದು ಕಟ್ಟಪುಣಿಯನ್ನು ಹತ್ತಿ ಗದ್ದೆಯೊಳಕ್ಕೆ ಹಾರಿಯೇ ಬಿಟ್ಟ. ಒಮ್ಮೆಲೆ ಆಟವನ್ನು ನಿಲ್ಲಿಸಿಬಿಟ್ಟ ಮಕ್ಕಳು ಅಪ್ಪುವನ್ನೇ ಒಂದು ಕ್ಷಣ ದಿಟ್ಟಿಸಿದರು. ಇವರೇಕೆ ತನ್ನನ್ನು ಅಪರಿಚಿತರಂತೆ ನೋಡುತ್ತಿದ್ದಾರೆ ಎಂದೆನಿಸುತ್ತಿದ್ದಂತೆ ಅಪ್ಪುವಿನ ಮುಖ ಅವನಿಗರಿವಿಲ್ಲದಂತೆ ಸಣ್ಣದಾಗತೊಡಗಿತು. ಎರಡಿಂಚು ಹಿಗ್ಗಿದ್ದ ತುಟಿ ಬಂದ್ ಆಯಿತು. “ಬೇಕಿದ್ರೆ ಅವನೊಬ್ನೇ ಆಟವಾಡ್ಲಿ. ನೀವು ನನ್ನ ಮನೆಗೆ ಬನ್ನಿ. ನಾವು ಅಲ್ಲಿ ಆಡುವ” ನಂದೂ ತನ್ನ ಕೀರಲು ದನಿಯಲ್ಲಿ ಚೀರಿ ಅಲ್ಲಿಂದ ಕಾಲ್ತೆಗೆಯುತ್ತಿದ್ದಂತೆ ಮಿಕ್ಕವರೂ ಅವನನ್ನು ಹಿಂಬಾಲಿಸಿದರು. ಏನೊಂದೂ ಅರ್ಥವಾಗದೆ ಪಿಳಿಪಿಳಿ ನೋಡುತ್ತಿದ್ದ ಅಪ್ಪು “ಏ… ನಿಲ್ರೋ… ನಾನೂ ಬರ್ತೇನೆ…” ಎಂದು ಅವಳ ಹಿಂದೆಯೇ ನಡೆದ. ಜೊತೆ ಸೇರಲೆಂದು ಓಡಿದ. ಆದರೆ ಅವರು ಅಪ್ಪುವಿನ ಕೈಗೆ ಸಿಗದಷ್ಟು ವೇಗವಾಗಿ ಓಡಿದರು.
“ಹೇಯ್”
ಊರಿಡೀ ಮೊಳಗುವಂಥ ದನಿ ಕಿವಿಗಪ್ಪಳಿಸುತ್ತಲೇ ಅಪ್ಪು ಥಕ್ಕಾಗಿ ನಿಂತುಬಿಟ್ಟ. ಕಣ್ಣು ಬಿಟ್ಟು ನೋಡಿದರೆ
ಅಯ್ಯೋ! ಸುಕುಮಾರಣ್ಣ!
ತಾನೀಗ ಗೇಟು ದಾಟಿ ಅವನ ಮನೆಯ ಅಂಗಳಕ್ಕೆ ತಲುಪಿದ್ದೇನೆ ಎಂದು ಅಪ್ಪುವಿಗೆ ಹೊಳೆದದ್ದು ಅಗಲೇ.
“ನೀನಿಲ್ಲಿ ಕಾಲಿಟ್ರೆ ಜಾಗ್ರತೆ!”
ಸುಕುಮಾರನ ತೋರು ಬೆರಳು ಅಪ್ಪುವನ್ನು ನಿಂತಲ್ಲೇ ಕೀಲಿಸಿಬಿಟ್ಟಿತು. ಅರೆಕ್ಷಣ ಬೆಪ್ಪನಂತೆ ನಿಂತಿದ್ದವನು ಸುಕುಮಾರನ ಕೆಂಗಣ್ಣ ನೋಟವನ್ನು ಎದುರಿಸಲಾಗದೆ ನೆಟ್ಟಗೆ ತನ್ನ ಮನೆಯತ್ತ ನಡೆದ. ಆಮೇಲೆ ತಿರುಗಿಯೂ ನೋಡದೆ ಓಡಿದ.
ಅಡುಗೆ ಕೋಣೆಯೊಳಗೆ ಅರೆಯುವ ಸದ್ದು ಕೇಳಿಸುತ್ತಿತ್ತು. ಅಪು ್ಪಮಾತಿಲ್ಲದೆ ಮೆಟ್ಟಲಿನ ಮೇಲೆ ಕುಳಿತ. ಥಟ್ಟನೆ ನೆನಪಾಯಿತು ಆ ಘಟನೆ.
ಕಳೆದವಾರ ಅಪ್ಪನೂ ಸುಕುಮಾರಣ್ಣನೂ ಎದುರು ಬದುರಾಗಿ ಕುಳಿತು ಹರಟೆ ಕೊಚ್ಚುತ್ತಾ ಕಳ್ಳು ಕುಡಿಯುತ್ತಿದ್ದರು. ತಲೆಗೆ ಮತ್ತೇರುತ್ತಿದಂತೆ ಮಾತಿನ ಬಿಸಿಯೂ ಏರುತ್ತಿತ್ತು. ಮಾತಿಗೆ ಮಾತು ಬೆಳೆಯಿತು. ಸುಕುಮಾರಣ್ಣನಿಗೆ ರೇಗಿತು. ಅವನ ಹೆಂಡತಿ ಇಂದಿರೆಯ ಜೊತೆಗೆ ಅಪ್ಪ ಇನ್ಯಾರದ್ದೋ ಹೆಸರೆತ್ತಿ ‘ಏಹ್ಹೆಹೆಹೇ’ ಎಂದು ನಕ್ಕದ್ದೇ ಅದಕ್ಕೆ ಕಾರಣ.
“ಇಗಾ ಬೇಡ ನಾರಾಯಣಾ. ಹಾಗೆಲ್ಲ ಹೇಳ್ತಿದ್ರೆ ನಂಗೂ ಸುಮಾರು ಹೇಳಲಿಕ್ಕುಂಟು ನೋಡು.” ಎಂದ ಬೆದರಿಕೆಯ ದನಿಯಲ್ಲಿ. ಅಷ್ಟು ಹೊತ್ತಿಗೆ ಅವರೆದುರು ನಿಂತಿದ್ದ ಅಮ್ಮ ಫಕ್ಕನೆ ಅಡುಗೆಕೋಣೆಯ ಬಾಗಿಲ ಬದಿಗೆ ಸರಿದು ಬೇಡ ಬೇಡವೆಂಬಂತೆ ಸನ್ನೆ ಮಾಡಿದಳು.
“ಏನೋ? ಏನು ಹೇಳಲಿಕ್ಕುಂಟೋ ನಿನಗೆ? ಹೇಳೋ. ಈಗ್ಲೇ ಹೇಳು ಧೈರ್ಯವಿದ್ರೆ…”
ಅಷ್ಟೇ ಸಾಕಾಯಿತು ಸುಕುಮಾರಣ್ಣನಿಗೆ. ಅಮ್ಮನನ್ನೇ ಒಂಥರಾ ನೋಡುತ್ತಾ ತುಟಿ ಕೊಂಕಿಸಿ ನಕ್ಕು “ನಿನ್ನ ಹೆಂಡತಿ ಭಾರೀ…” ಎನ್ನುತ್ತಿದ್ದಂತೆ ಅಪ್ಪನ ಬಲಗೈ ಸುಕುಮಾರಣ್ಣನ ಕನ್ನೆಯ ಮೇಲೆ ಅಪ್ಪಳಿಸಿತ್ತು. ಏಟು… ಏಟು… ಏಟಿನ ಮೇಲೆ ಏಟು. ಪಟಾಕಿ ಸಿಡಿದಂಥ ಸದ್ದುಗಳು. ಸುಕುಮಾರಣ್ಣ ಹೊಡೆದದ್ದೆಲ್ಲ ಗಾಳಿಗೇ ಹೋಯಿತು. ಕೊನೆಗೆ ಅವನು ಸೋತು “ಬೋಳೀಮಗನೆ ನೀನು ಒಂದು ದಿನ ನಂಗೆ ಒಬ್ಬನೇ ಸಿಗುತ್ತೀಯಲ್ಲ. ಆಗ ನೋಡಿಕೊಳ್ತೇನೆ.” ಎಂದು ಕುಂಟುತ್ತಾ ಮನೆಗೆ ಹೋದ. ಆ ಬಳಿಕವೂ ಅಪ್ಪ ಎಷ್ಟೋ ಹೊತ್ತಿನವರೆಗೆ ಅವನನ್ನು ಬೈಯುತ್ತಲೇ ಇದ್ದ.
“ಅಯ್ಯಯ್ಯೋ ನಂಗೆ ಇದೆಲ್ಲ ಹೇಗೆ ಮರ್ತು ಹೋಯ್ತೋ” ಅಪ್ಪು ಪರಿತಪಿಸಿದ. ಆಗಲೇ ಅವನಿಗೆ ಪಟೇಲ ಮಾಮನ ನೆನಪಾದದ್ದು.
ಅಪ್ಪು ತನ್ನ ಅಪ್ಪನಿಗಿಂತಲೂ ಹೆಚ್ಚು ನೆಚ್ಚಿಕೊಂಡದ್ದು ಪಟೇಲ ಮಾಮನನ್ನೇ. ಅಪ್ಪ ಬೆಳಗ್ಗೆ ಎದ್ದು ಕೆಲಸಕ್ಕೆಂದು ಬಸ್ಸಿಗೆ ಹೋದರೆ ಹಿಂತಿರುಗಿ ಬರುವುದು ರಾತ್ರಿಯಲ್ಲೇ. ಅಮ್ಮನಿಗಾದರೋ ಮನೆಯಲ್ಲಿ ಕೈತುಂಬ ಕೆಲಸ. ಹಾಗಾಗಿ ಅವನು ತನ್ನ ಹೆಚ್ಚಿನ ವೇಳೆಯನ್ನು ಕಳೆಯುತ್ತಿದ್ದು ಪಟೇಲ ಮಾಮನ ಮನೆಯಲ್ಲೇ. ಅವರ ಎರಡಂತಸ್ತಿನ ಮನೆಯೊಳಗೆ ಓಡಾಡುವುದೆಂದರೆ ಅವನಿಗೆ ತುಂಬಾ ಇಷ್ಟ. ಅಡಿಕೆ ತೋಟ, ತೆಂಗಿನ ಹಿತ್ತಿಲುಗಳಲ್ಲಿ ತಿರುಗಾಡದಿದ್ದರಂತೂ ನಿದ್ದೆಯೇ ಬಾರದು. ಪಟೇಲ ಮಾಮನ ಬೈಕಿನಲ್ಲಿ ಕುಳಿತು ಸುತ್ತು ಹೊಡೆಯದಿದ್ದರೂ ಆದೀತು. ಮೊಬೈಲಿನಿಂದ ಫೊಟೋ ಹೊಡೆಸಿಕೊಳ್ಳದಿದ್ದರೂ ನಡೆದೀತು. ಆದರೆ ಅವರ ಕೈಯಿಂದ ಚಿಪ್ಸ್, ಕೋಡುಬಳೆ, ಚಕ್ಕುಲಿ ಅಥವಾ ಮಿಠಾಯಿಗಳು ಸಿಗದೆ ಅವನು ಅಲ್ಲಿಂದ ಹೋಗುತ್ತಿರಲಿಲ್ಲ.
ಆದರೆ ಪಟೇಲ ಮಾಮನಲ್ಲಿಗೆ ಹೋದಾಗ ಅವರ ಮನೆಯ ಬಾಗಿಲಿಗೆ ಬೀಗ.
ರಾತ್ರಿಯಾಗಿತ್ತು. ಅಪ್ಪುವವಿಗೆ ಚಾದರ ಹೊದೆಸಿಬಿಟ್ಟು ಪಕ್ಕದಲ್ಲೇ ಮಲಗಿದ ಅಮ್ಮ ಹೇಳಿದಳು. “ಮಗಾ ನಾಳೆ ನಿನ್ನ ಕೈಯಲ್ಲೊಂದು ಕಾಗದ ಕೊಡ್ತೇನೆ. ನೀನು ಕೂಡ್ಲೇ ಅದನ್ನು ಪಟೇಲರಿಗೆ ಕೊಡ್ಬೇಕು.” ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ಅಮ್ಮ ತಡೆ ತಡೆದು ಹೇಳಿದಾಗ ಅಪ್ಪುವಿಗೆ ಆಶ್ಚರ್ಯವಾಯಿತು. ಅಷ್ಟೇಯಾ? ಅದನ್ಯಾಕೆ ಗುಟ್ಟಾಗಿ ಹೇಳೋದು? ಎಂದುಕೊಳ್ಳುತ್ತಾ ಕೇಳಿದ “ಆ ಕಾಗದದಲ್ಲೇನುಂಟು ಅಮ್ಮಾ?” ಅಮ್ಮನ ಮುಖಭಾವ ಒಮ್ಮೆಲೆ ಬದಲಾಯಿತು. “ನೋಡು ನೀನು ಹೆಚ್ಚೇನೂ ಕೇಳ್ಬೇಕಾಗಿಲ್ಲ. ಹೇಳಿದ ಹಾಗೆ ಮಾಡ್ತೀಯೋ ಇಲ್ವೋ?” ಎಂದಳು ಗಂಭೀರಳಾಗಿ. ಯಾರೂ ಒಪ್ಪದ ಕೆಲಸ ನನ್ನಿಂದ ಆಗಲಿದೆ ಎಂಬ ಹೆಮ್ಮೆಯಿಂದ ಅಪ್ಪು “ಹೂಂ ಅದಕ್ಕೇನಂತೆ?” ಎಂದ. ದೀಪದ ಬೆಳಕಿನಲ್ಲಿ ಅಮ್ಮನ ಮುಖ ಬೆಳಗಿತು. ಅವಳು ಅಪ್ಪುವನ್ನು ಪ್ರೀತಿಯಿಂದ ತಬ್ಬಿ “ನಾಳೆ ಬೆಳಗ್ಗೆಯೇ ಕಾಗದ ಕೊಡ್ತೇನೆ ನಿನ್ನತ್ರ” ಎನ್ನುತ್ತಾ ಅವನ ಗಲ್ಲ ಹಿಡಿದು ಮುದ್ದಿಸಿದಳು.
ಮರುದಿವಸ ಅಪ್ಪು ಕಾಗದವನ್ನು ತೆಗೆದುಕೊಂಡು ಪಟೆಲನ ಮನೆಗೆ ಹೋದ. ‘ಮಾಮ ಈಗ ಈಸಿಚೇರಿನಲ್ಲಿ ಕೂತು ಪೇಪರ್ ಒದ್ತಾ ಇರಬಹುದು. ಸದ್ದಿಲ್ಲದೆ ಹತ್ರ ಹೋಗಿ ಹಿಂದಿನಿಂದ ‘ಭೊಕ್’ ಅಂತ ಹೆದರಿಸ್ಬೇಕು.’ ಎಂದು ಲೆಕ್ಕ ಹಾಕುತ್ತಾ ಅಂಗಳಕ್ಕೆ ಬಂದರೆ ಅಲ್ಲಿ ಮಾಮನಿಲ್ಲ. ಒಳಗಿನಿಂದ ದೋಸೆ ಹೊಯ್ಯುವ ಸದ್ದು ಕೇಳಿಸುತ್ತಿತ್ತು. ಹೆಚ್ಚೇನೂ ಯೋಚಿಸದೆ ಅಪ್ಪು ‘ಮಾಮಾ’ ಎನ್ನುತ್ತಾ ಸೀದಾ ಒಳಗೆ ಹೋದ. ಅವನ ಕೈಯಲ್ಲಿ ಕಾಗದವನ್ನು ಕಂಡದ್ದೇ ಮಾಮ ಆತುರ ಆತುರವಾಗಿ ಅವನ ಹತ್ತಿರ ಬಂದು “ಅಮ್ಮ ಕೊಟ್ಟದ್ದ? ಇಲ್ಲಿ ಕೊಡು.” ಎಂದು ಹೆಚ್ಚು ಕಡಿಮೆ ಅವನಿಂದ ಎಳೆದುಕೊಂಡೇ ಬಿಟ್ಟರು. ಅದನ್ನು ಓದುತ್ತಾ ಹೋದಂತೆ ಅವರ ಮುಖದಲ್ಲಿ ನಗೆ ಅರಳಿದ್ದು ಕಂಡು ಅಂಥದ್ದೇನಂಟು ಅದರಲ್ಲಿ ಎಂದು ಅಪ್ಪುವಿಗೆ ಸಂಶಯವಾಯಿತು. “ಏನು ಮಾಮಾ? ಎಂತ ಬರೆದಿದೆ ಅದ್ರಲ್ಲಿ?” ಅಂದಾಗ ಮಾಮ ಒಮ್ಮೆ ಬೆಚ್ಚಿ “ಹ್ಞಾ… ಅದು… ಅದೂ… ಹೊಸ ಮನೆ ಕಟ್ಟಿಸಿಕೊಡ್ಬೇಕು ಅಂತ ಬರೆದ ಕಾಗದ”
“ಮನೆ? ಯಾರಿಗೆ?”
“ಮತ್ತೆ ಇನ್ಯಾರಿಗೆ? ನಿಮಗೇ. ಈ ಮನವಿಯನ್ನು ನಾನು ಪಂಚಾಯತ್‍ಗೆ ಕೊಟ್ಟು ನಿಮಗೊಂದು ಹೊಸ ಮನೆ ಕಟ್ಟಿಸುವ ಏರ್ಪಾಡು ಮಾಡ್ತೇನೆ. ಹಹ್ಹಾ”
ನಂಗೆ ಹೊಸ ಮನೆ! ಅಪ್ಪುವಿಗೆ ಕುಣಿಯಬೇಕೆನಿಸಿತು. ಒಮ್ಮೆ ಒದ್ದರೆ ಇಡೀ ಮುರಿದು ಬೀಳುವಂತಿದೆ ನಮ್ಮ ಮನೆ. ಹಾಗಾಗಿ ಒಳ್ಳೆ ಗಟ್ಟಿಮುಟ್ಟಾದ ಮನೆಯೇ ಬೇಕು ನಮಗೆ. ತಾರಸಿಯದ್ದಾಗಿರಬೇಕು. ಗೋಡೆಗೆ ಚಂದದ ಬಣ್ಣ ಹೊಡೆದಿರಬೇಕು. ಓಡಿ ಆಡಲು ಒಳಗೆ ತುಂಬಾ ಜಾಗ ಬೇಕು. ಪಟೇಲ ಮಾಮನ ಮನೆಯಷ್ಟೇ ದೊಡ್ಡದಿರಬೇಕು. ಎರಡಂತಸ್ತಿನದ್ದಾಗಿರಬೇಕು.
“ದೋಸೆ ತಿಂತೀಯಾ ಅಪ್ಪೂ?” ಮಾಮನ ದನಿ ಕೇಳಿ ಎಚ್ಚೆತ್ತ ಅಪ್ಪು ಅವರ ಹತ್ತಿರವೇ ಕುಳಿತು ತುಪ್ಪದ ದೋಸೆಯನ್ನು ಚಪ್ಪರಿಸುತ್ತಾ ತಿಂದ. ತಿಂದು ಕೈ ತೊಳೆದಾದ ಬಳಿಕ ಮಾಮ “ನೀನೀಗ ಮನೆಗೆ ಹೋಗು ಅಪ್ಪೂ. ನಂಗೆ ಅರ್ಜೆಂಟಾಗಿ ತೋರಣಕಟ್ಟೆಗೆ ಹೋಗ್ಲಿಕ್ಕುಂಟು” ಎಂದಾಗ ಅಪ್ಪುವಿಗೆ ಬೇಸರವಾದರೂ ಬೈಕಿನಲ್ಲಿ ಕೂರಬಹುದಲ್ಲ ಎಂದೆನಿಸಿ ಖುಷಿಯಾಯಿತು. ಮಾಮ ಬೈಕ್ ಚಾಲೂ ಮಾಡಿದ ಬಳಿಕ “ಬಾ ಅಪ್ಪೂ ಕೂತ್ಕೋ” ಎನ್ನುವ ಮೊದಲೇ ಅವನು ಅದನ್ನೇರಿ ಕುಳಿತ. ಅಂಗಳಕ್ಕೆ ಸುತ್ತು ಹೊಡೆಯುವಾಗಲಂತೂ ದಿಗ್ವಿಜಯಕ್ಕೆ ಹೊರಟ ವೀರನಂತಿತ್ತು ಅಪ್ಪುವಿನ ಮುಖ. ಒಂದೆರಡು ಸುತ್ತು ಹೊಡೆದ ಮೇಲೆ ಬೈಕ್ ನೇರವಾಗಿ ಅಪ್ಪುವಿನ ಮನೆಗೆ ಓಡಿತು. ಅಲ್ಲೇ ಅಂಗಳದಲ್ಲಿ ನಿಂತಿದ್ದಳು ಅಮ್ಮ. ಬೈಕನ್ನು ನಿಲ್ಲಿಸಿದ ಮಾಮ ಅವಳನ್ನು ನೋಡಿ ಮುಗುಳ್ನಕ್ಕ. ಅಮ್ಮನೂ ಮುಖ ಅರಳಿಸಿ ನಕ್ಕು ಬದಿಗೆ ಸರಿದಳು. ಅವಳು ಪಟೇಲಮಾಮನನ್ನು ನೋಡಿ ನಕ್ಕದ್ದು ಮೊದಲ ಬಾರಿಯೇನೂ ಅಲ್ಲ. ನೀರು ತರಲೆಂದು ಅವಳು ಬಾವಿಯ ಹತ್ತಿರ ಹೋಗುವಾಗ ಪಟೇಲಮಾಮನೂ ಅಲ್ಲೇ ಇರುತ್ತಿದ್ದ. ನೀರು ಸೇದಿದ ಮೇಲೆ ಅಮ್ಮ ಕೊಡಪಾನವನ್ನು ಎತ್ತಿ ಸೊಂಟದ ಮೇಲೆ ಹಾಕಿಕೊಂಡಾಗ ಅವಳ ಹತ್ತಿರ ಏನೇನೋ ಮಾತನಾಡಲಾರಂಭಿಸುತ್ತಿದ್ದ. ಪಡಿಪ್ಪುರೆವರೆಗೂ ಮಾತನಾಡುತ್ತಾ ಬರುತ್ತಿದ್ದ ಮಾಮನ ಜೊತೆ ನಗುನಗುತ್ತಾ ಹೆಜ್ಜೆಹಾಕುವ ಅಮ್ಮನನ್ನು ನೋಡಲೆಷ್ಟು ಚಂದ! ಆದರೆ ಮನೆಗೆ ತಲುಪಿದಾಗ ಅಪ್ಪನೆಲ್ಲಾದರೂ ಕಣ್ಣೆದುರಿಗಿದ್ದರೆ ಅವಳ ವರಸೆಯೇ ಬೇರೆ. ಮೋರೆ ಬೀಗಿಸಿಕೊಂಡು ಭುಸುಗುಡುತ್ತಾ ಒಳಗೆ ಧಾವಿಸಿ, ಕೊಡಪಾನವನ್ನು ಎತ್ತಿ ಕುಕ್ಕಿ, ಪಾತ್ರೆಗಳ ಮೇಲೆ ಪಾತ್ರೆಗಳನ್ನು ಒಗೆದು, ದಿಮಿಧ್ಧಿಮಿ ಎಂದು ಕಾಲಪ್ಪಳಿಸುತ್ತಾ ಬಂದು ಹೊರಗಿನ ಕೆಲಸಕ್ಕೆ ಅಣಿಯಾಗುತ್ತಿದ್ದಳು. ತುಸು ಹಿಂದೆ ಅಷ್ಟೂ ಸುಂದರವಾಗಿ ನಗುತ್ತಾ ಬಂದ ಅಮ್ಮ ಇವಳೇನಾ ಎಂದು ಅಪ್ಪುವಿಗೆ ಆಶ್ಚರ್ಯವಾಗುತ್ತಿತ್ತು. ಅದೇನೆ ಇರಲಿ. ಅಮ್ಮನ ಮುಖದಲ್ಲೆಂದೂ ನಗೆಯಿರಲಿ ಎಂದು ಅವನ ಮನಸ್ಸು ಹಾರೈಸುತ್ತಿತ್ತು.
ಆಕ್ಸಿಲರೇಟರನ್ನು ಹಿಡಿದ ಪಟೇಲ ಮಾಮನ ಬಲಗೈಯಡಿಯಲ್ಲಾಗಿ ನುಸುಳಿ ಕೆಳಗಿಳಿದ ಅಪ್ಪು ಖುಷಿಯಿಂದ ‘ಡ್ರೂ…’ ಎನ್ನುತ್ತಾ ತನ್ನ ಮನೆಯೊಳಗೆ ನುಗ್ಗುತ್ತಿದ್ದಂತೆ ಎದುರು ಕುಳಿತಿದ್ದವನನ್ನು ಕಂಡು ಗಕ್ಕನೆ ನಿಂತುಬಿಟ್ಟ.
ಸುಕುಮಾರಣ್ಣ!
ಅವನನ್ನು ನೋಡುತ್ತಲೇ ಭಯ-ಆಶ್ಚರ್ಯಗಳ ಬದಲಾಗಿ ಕೆಂಡದಂಥ ಕೋಪ ಬರತೊಡಗಿತು ಅಪ್ಪುವಿಗೆ. ಅವನ ಮನೆಗೆ ಹೋಗಿದ್ದಕ್ಕೆ ನನ್ನನ್ನು ಬೈದು ಓಡಿಸಿದ ಸುಕುಮಾರಣ್ಣನೀಗ ನನ್ನ ಮನೆಗೆ ಬಂದು ಕೂತದ್ದು ಯಾಕೆ? ಅಪ್ಪು ಅವನನ್ನು ಸುಟ್ಟುಬಿಡುವಂತೆ ನೋಡಿದ. ಆದರೆ ಸುಕುಮಾರ ಅದನ್ನು ನೋಡಿಯೂ ನೋಡದಂತೆ ಮಾಡಿ “ರಾಧೇ… ನಾನಿನ್ನು ಬರ್ತೇನೆ” ಎನ್ನುತ್ತಾ ಹೊರಗಿಳಿದ. ಆಗ ಅಲ್ಲಿದ್ದ ಅಮ್ಮ “ಇಷ್ಟು ಬೇಗ?” ಎಂದಾಗ ಅಪ್ಪು ಇನ್ನಷ್ಟು ಕುದಿದ. ಹೊರಟವನನ್ನು ಹಿಡಿದು ನಿಲ್ಲಿಸಿ ಮತ್ತೂ ಕುಣುಕುಣು ಮಾತಾಡ್ತಾ ನಿಲ್ಲ್ಲೋದು ಯಾಕೆ? ಹತ್ತು ನಿಮಿಷ ಅದೂ ಇದೂ ಮಾತಾಡಿ ಒಳಗೆ ಬಂದ ಅಮ್ಮನನ್ನು ಬೈಯುವಂತೆ ದನಿ ಏರಿಸಿ ಕೇಳಿದ. “ಸುಕುಮಾರಣ್ಣ ಯಾಕೆ ಇಲ್ಲಿಗೆ ಬಂದದ್ದು?”
ಮಗನ ಬೊಬ್ಬೆ ಕೇಳಿ ಅಮ್ಮ ತಬ್ಬಿಬ್ಬಾದಳು. ಮರುಕ್ಷಣವೇ ಕೋಪಗೊಂಡು “ಓಹೋ! ನೀನೂ ಸುರುಮಾಡಿ ಬಿಟ್ಯಾ ನಿನ್ನಪ್ಪನ ಹಾಗೆ? ಮನುಷ್ಯರಾದೋರು ಇಲ್ಲಿಗೆ ಬರ್ಬಾರ್ದು, ಬಂದು ಮಾತಾಡ್ಬಾರ್ದು ಅಂತ ಉಂಟಾ? ಸುಕುಮಾರ ಬಂದ್ರೆ ಏನಾಯ್ತೀಗ? ಅವ ಒಳ್ಳೆಯವ. ನಿನ್ನಪ್ಪ ಇಲ್ಲದ ಹೊತ್ತಲ್ಲಿ ಅವ ನಂಗೆ ಎಷ್ಟು ಸಹಾಯ ಮಾಡಿದ್ದಾನೆ. ಗೊತ್ತುಂಟ?”
“ಎಂತ ಸಹಾಯ?”
“ಅದೆಲ್ಲ ಹೇಳಿದ್ರೆ ನಿಂಗೆ ಅರ್ಥವಾಗ್ಲಿಕ್ಕಿಲ್ಲ.”
ಹಾಗೆನ್ನುವಾಗ ಅಬ್ಬ! ಅದೆಷ್ಟು ಕೆಂಪಾಗಿತ್ತು ಅಮ್ಮನ ಮುಖ! ಹುಂ! ಅವಳದ್ದೊಂದು ನಗು. ಕಳ್ಳಿಯ ಹಾಗೆ!

ಅಪ್ಪು ನಿದ್ದೆಯಿಂದ ಎಚ್ಚೆತ್ತು ಫಕ್ಕನೆ ಕಣ್ಣುಬಿಟ್ಟ. ದೀಪವಿಲ್ಲದ ಕೋಣೆಯಿಡೀ ಕತ್ತಲಿನಿಂದ ಕೂಡಿತ್ತು. ನಿದ್ದೆಗಣ್ಣಿನಿಂದ ತಡಕಾಡುತ್ತಾ ಅಮ್ಮನ ಕಡೆಗೆ ಕೈಚಾಚಿದ. ಅಬ್ಬ! ಸಿಕ್ಕಿತು! ಆದರೆ ಇದೇನಿದು? ಅಮ್ಮನ ಎದೆಯ ಮೇಲೊಂದು ಕೈ! ಯಾರದ್ದಿದು? ಒರಟೊರಟಾಗಿದೆಯಲ್ಲ! ಇಡೀ ರೋಮ ರೋಮ! ಅಪ್ಪು ಸರಕ್ಕನೆ ಕೈಯನ್ನು ಹಿಂದಕ್ಕೆಳೆದುಕೊಂಡ. ಭಯ ಇನ್ನಷ್ಟು ಏರಿತು. “ಅಮ್ಮಾ” ಎನ್ನುವಷ್ಟರಲ್ಲಿ ಅವಳು ಯಾರೊಂದಿಗೋ ಪಿಸುಗುಟ್ಟಿದಂತಾಯಿತು. ದೀರ್ಘವಾದ ಉಸಿರಿನ ಸದ್ದು! ಬಳೆಗಳ ಗಿಲಿಗಿಲಿ. ಅಪ್ಪು ಅಳತೊಡಗಿದ. ‘ಮಗಾ ಮಗಾ’ ಎಂದು ಮೈ ತಟ್ಟಿದಂತಾಯಿತು. ದನಿ ಅಮ್ಮನದ್ದೇ. ‘ಶ್… ನಿದ್ದೇಲಿ ಕನವರಿಸಿದ್ದರಬೇಕು’ ಎಂದು ಪಿಸುಗುಟ್ಟಿತು ಇನ್ನೊಂದು ದನಿ! ಯೇ… ಯಾರದು? ಅಪ್ಪು ಮಲಗಿದಲ್ಲೇ ಒದ್ದಾಡತೊಡಗಿದ. ಅಮ್ಮ ಅವನ ಮೇಲೆ ಕೈ ಹಾಕಿ ಮಲಗಿದಳು. ಅಪ್ಪುವಿಗೆ ಆ ಅಪ್ಪುಗೆಯು ಕಿರಿಕಿರಿಯನ್ನು ಉಂಟುಮಾಡಿದ್ದು ಅದೇ ಮೊದಲ ಬಾರಿ! ಅವಳ ಬೆವರ ವಾಸನೆ ಅಸಹ್ಯವೆನಿಸಿತು. ಅಲ್ಲಿಂದ ಹೊರಳಿ ದೂರವಾದ ಮೇಲೆಯೇ ಅವನಿಗೆ ಮತ್ತೆ ಮಂಪರು ಕವಿದದ್ದು. ಹಾಗಾಗಿಯೇ ಇರಬೇಕು, ಕ್ರಮೇಣ ಹಿಂಬಾಗಿಲು ತೆರೆದ ಸದ್ದಾದದ್ದು, ‘ಶ್… ಕತ್ತಲೆ ಜಾಗ್ರತೆ…’ ಎಂದು ಅಮ್ಮ ಪಿಸುಗುಟ್ಟಿದ್ದು ಭ್ರಮೆಯೋ ನಿಜವೋ ಎಂದರಿಯಲಾಗದೆ ಹೋದದು.್ದ
ಎಲ್ಲೋ ಏಟುಗಳು ಬೀಳುತ್ತಿವೆಯಲ್ಲ ಎಂದೆನಿಸಿ ಅಪ್ಪು ಕಣ್ಣು ತೆರೆದದ್ದೇ ತಡ ಅವನ ಎದೆಯೊಮ್ಮೆ ಜೋರಾಗಿ ಬಡಿದು ಕಂಗಾಲುಗೊಂಡಿತು. ಎದುರಲ್ಲಿ ನಿಂತಿದ್ದಾನೆ ಅಪ್ಪ! ಭುಗ್ಗನೆ ಉರಿಯುತ್ತಿದೆ ದೀಪ! ಅಮ್ಮನ ತುರುಬನ್ನು ಹಿಡಿದು ನಿಂತ ಭಂಗಿ, ಕೈ ಎತ್ತಿ ಇಳಿಸುವ ರಭಸ, ಉರಿಯುಗುಳುವ ಕಣ್ಣುಗಳು ಎಲ್ಲವೂ ಅಪ್ಪುವಿನ ಎದೆಯಲ್ಲಿ ಭಯವನ್ನು ಹುಟ್ಟಿಸಿದವು. ಅಂತೆಯೇ ಎಲ್ಲಿಲ್ಲದ ಸಿಟ್ಟನ್ನೂ. ಛಿ! ಒಂದಕ್ಷರ ಮಾತಾಡದೆ ಸುಮ್ಮನೇ ಪೆಟ್ಟು ತಿನ್ನಲು ನಾಚಿಕೆಯಾಗುವುದಿಲ್ವಾ ಅಮ್ಮನಿಗೆ?
“ಹಾಗಿದ್ರೆ… ಹಾಗಿದ್ರೆ… ನಾನು ಕೇಳಿದ್ದೆಲ್ಲ…” ಕಚ್ಚಿದ ಹಲ್ಲುಗಳೆಡೆಯಿಂದ ಅಪ್ಪನ ಮಾತುಗಳು ಜರ್ಜರಿತವಾಗಿ ಹೊರಬಿದ್ದವು.
“ಹೌದು ನಿಜ.” ಅಷ್ಟೇ ಗಟ್ಟಿಯಾಗಿ ಉತ್ತರಿಸಿದಳು ಅಮ್ಮ,
ಅದನ್ನು ಕೇಳಿದ್ದೇ ಅಪ್ಪ ಮೊದಲು ತನ್ನ ಎದೆಗೊಮ್ಮೆ ಹೊಡೆದುಕೊಂಡ. ನಂತರ ಅಮ್ಮನಿಗೆರಡು ಹೊಡೆದ. ಏನೇನೋ ಬೊಬ್ಬೆ ಹಾಕಿದ. ಕೈ ಸೋತು ಒದ್ದ. ಕಾಲು ಸೋತು ಹೊಡೆದ. ಎಷ್ಟು ಹೊಡೆದರೂ ಅಮ್ಮ ನೆಲಕ್ಕೆ ಬೇರೂರಿದವಳಂತೆ ಅಲ್ಲೇ ಗಟ್ಟಿಯಾಗಿ ನಿಂತಿರುವುದನ್ನು ಕಂಡು ಅಪ್ಪ ಏದುಸಿರು ಬಿಡುತ್ತಾ ತಾನೇ ಏಟು ತಿಂದವನಂತೆ ಬಸವಳಿದು ಖಾಲಿಗೋಣಿಯಂತೆ ನೆಲಕ್ಕೆ ಕುಕ್ಕರಿಸಿದ. “ನನ್ನನ್ನು ಕೊಲ್ಲು… ಕೊಲ್ಲು” ಎಂದು ಹಣೆ ಹಣೆ ಚಚ್ಚಿಕೊಳ್ಳುತ್ತಾ ಅಮ್ಮನನ್ನು ನೋಡಿದ. ಅವಳು ಯಾವ ಭಾವನೆಯೂ ಇಲ್ಲದೆ ನಿಂತಿದ್ದಳು. ಅದನ್ನು ಕಂಡು ಅಪ್ಪನ ಕೋಪ ಇನ್ನಷ್ಟು ಏರಿ
“ಸಾಕು. ನಿಮ್ಗೆಲ್ಲ ಮಾಡಿದ್ದು ಹೆಚ್ಚಾಯ್ತು. ಇನ್ನಿಲ್ಲ ನಿಮ್ಗಿಲ್ಲಿ ಜಾಗ. ಇಬ್ರೂ ನಡೀರಿ ಇಲ್ಲಿಂದ” ಎಂದ ಮರುಕ್ಷಣವೇ ನೆಲಕ್ಕೆ ಕುಟ್ಟಿತಟ್ಟಿ ಒಮ್ಮೆಲೇ ಜಿಗಿದೆದ್ದು ಬೆಂಕಿ ಕಾರುವವನಂತೆ “ಮುಗಿಸಿಬಿಡ್ತೇನೆ. ಇವತ್ತಿಗೇ ಎಲ್ಲ ಮುಗಿಸಿಬಿಡ್ತೇನೆ” ಎಂದು ಗಂಟಲ ನರಗಳು ಹರಿಯುವಂತೆ ಕೂಗುತ್ತಾ ಅಂಗಳಕ್ಕೆ ನೆಗೆದು, ಪಡಿಪ್ಪುರೆ ದಾಟಿ ದುಡದುಡು ನಡೆದ.
“ಅಮ್ಮಾ… ನೋಡು ಪಟೇಲಮಾಮನಲ್ಲಿಗೆ ಹೋಗ್ತಿದ್ದಾನೆ ಅಪ್ಪ”
ಅಮ್ಮನ ಕೈ ಹಿಡಿದು ಅಲುಗಿಸುತ್ತಾ ಹೇಳಿದಾಗ ಅವಳು ಕಿಡಿತಗುಲಿದಂತೆ ಎಚ್ಚೆತ್ತು “ಏ ದೇವರೇ” ಎಂದು ಹೌಹಾರಿ ಅತ್ತ ಕಡೆ ಓಡಿದಳು. ಏನೆಂದರಿಯದೆ ಏಕೆಂದರಿಯದೆ ಅಪ್ಪು ಕೂಡಾ ಅವಳ ಹಿಂದೆ ಓಡಿದ. ಅಪ್ಪ ಅದಾಗಲೇ ಪಟೇಲ ಮಾಮನ ಅಂಗಳಕ್ಕೆ ತಲುಪಿದ್ದ. ಚಾವಡಿಯಲ್ಲಿ ನಿಂತುಕೊಂಡು ಬೆರಗುಗಣ್ಣಿನಿಂದ ತನ್ನನ್ನೇ ನೋಡುತ್ತಿರುವ ಪಟೇಲಮಾಮನನ್ನು ಕಂಡು ಅಪ್ಪ ‘ಸ್ವಾಮೀ’ ಎನ್ನಲಿಲ್ಲ. ಜಗಲಿಯ ಮೇಲೆ ಕೂರಲಿಲ್ಲ.
“ಇಗೊಳ್ಳಿ ನನ್ನ ಮದುವೆಗೆ ಅಂತ ನೀವು ಕೊಟ್ಟ ಸಾಲ” ಜೇಬಿನಿಂದ ತೆಗೆದ ಹಣವನ್ನು ಮುಷ್ಠಿಯಲ್ಲಿ ಹಿಡಿದು ಪಟೇಲಮಾಮನೆದುರು ಚಾಚುತ್ತಾ ಅಪ್ಪನೆಂದ “ಇವತ್ತಿಗೆ ಮುಗೀತು ನಿಮ್ಮ ಋಣ” ಆಗ ಮಾಮ ಬೆಚ್ಚಿ “ಅಯ್! ನಾನಿದನ್ನು ಸಾಲವಾಗಿ ಕೊಟ್ಟಿದ್ದಲ್ಲ ನಾರಾಯಣಾ” ಎಂದ. ಆದರೂ ಅಪ್ಪ ಕೇಳದೆ ಹಣವನ್ನು ಅವರ ಕೈಗೆ ತುರುಕಲು ಹೋದ. ಇಲ್ಲ ಇಲ್ಲವೆಂದು ಹಿಂದಕ್ಕೆ ಸರಿದಾಗ ಅದನ್ನು ಅಲಕ್ಷ್ಯದಿಂದ ಜಗಲಿಯ ಮೇಲೆ ಎಸೆದ. ಅದು ನೆಲಕ್ಕೆ ಬಿದ್ದು ಚದುರುತ್ತಲೇ ಪಟೇಲಮಾಮನ ಮೋರೆ ಗಂಟಿಕ್ಕಿತು. ಮುಷ್ಠಿ ಬಿಗಿಯಿತು. ಅಪ್ಪನಿಗೆ ಈಗ ಬೀಳುತ್ತದೆ ಏಟು. ಅಪ್ಪು ಭೀತಿಯಿಂದ ಉಸಿರು ಬಿಗಿಹಿಡಿದು ನೋಡಿದ. ಅಯ್ಯೋ! ಮಾಮನ ಮುಖದಲ್ಲೂ ಇಂಥ ಕ್ರೂರ ಸಿಟ್ಟು?! ಅವರು ಸರ್ಪದಂತೆ ಮುಖ ಹೊರಳಿಸಿ ಅಮ್ಮನತ್ತ ನೋಡಿದಾಗಲಂತೂ ಅಪ್ಪುವಿನ ಇದ್ದಬದ್ದ ಧೈರ್ಯವೂ ಸೋರಿಹೋಯಿತು. ಅಗ ಅವಳು ಬೇಡ ಬೇಡವೆಂಬಂತೆ ಕೈ ಅಲುಗಿಸುತ್ತಾ ಸೆರಗನ್ನು ಬಾಯಿಗೆ ತುರುಕಿಕೊಂಡಳು. ಅದನ್ನು ನೋಡುತ್ತಲೇ ಮಾಮನ ಮುಖದ ಗಂಟುಗಳು ನಿಧಾನಕ್ಕೆ ಸಡಿಲಗೊಂಡವು. ತನ್ನನ್ನು ಸುಟ್ಟುಬಿಡುವಂತೆ ದಿಟ್ಟಿಸುತ್ತಿದ್ದ ಅಪ್ಪನನ್ನು ನೋಡಿ ಮೆಲ್ಲಗೆ ನಕ್ಕರು. ಕ್ಷಣಮಾತ್ರವೂ ತಡಮಾಡದೆ ಅವನ ಕೈಗಳನ್ನು ಹಿಡಿದು ಕಿವಿಯಲ್ಲೇನೋ ಪಿಸುಗುಟ್ಟಿದರು. ಅದನ್ನು ಕೇಳುತ್ತಿದ್ದಂತೆ ಅಪ್ಪನ ಮುಖ ಬಿಗಡಾಯಿಸಿತು. ಕಟಕಟನೆ ಹಲ್ಲು ಕಡಿದು ಭುಸುಗುಟ್ಟುತ್ತಾ “ಮೊದಲು ಅವನನ್ನು ಕೊಚ್ಚಿಹಾಕ್ತೇನೆ ಆ ಬೇವಾರ್ಸಿಯನ್ನು” ಎಂದು ಕಾಲಪ್ಪಳಿಸುತ್ತಾ ಓಡಿದ್ದು ಸುಕುಮಾರನ ಮನೆಗೆ!
ಇದ್ದಕ್ಕಿದ್ದಂತೆ ರಾತ್ರಿಯ ನೀರವವನ್ನು ಭೇದಿಸುವಂತೆ ಆರ್ತನಾದವೊಂದು ಕೇಳಿ ಬಂತು. ನೋಡಿದರೆ ಸುಕುಮಾರ ಕುಂಡೆಗೆ ಕಾಲುಕೊಟ್ಟು ಓಡುತ್ತಿದ್ದಾನೆ. ಯಾವುದೋ ನಾಯಿಗಳೂ ಹಿಂಬಾಲಿಸುತ್ತಿವೆ. ಅವುಗಳ ನಡುವೆ ಜಾಗ ಮಾಡಿಕೊಂಡು ಅಪ್ಪ ಅವನನ್ನು ಅಟ್ಟಿಸುತ್ತಿದ್ದಾನೆ. ಪಟೇಲಮಾಮ ಕೂಡಲೆ ಓಡಿ ಪಡಿಪ್ಪುರೆಯಲ್ಲಿ ನಿಂತು “ನಾರಾಯಣಾ… ಏ ನಾರಾಯಣಾ ನಿಂಗ್ಯಾಕೋ ಬೇಡದ ಕೆಲಸ? ಸುಕುಮಾರನನ್ನು ಬಿಟ್ಟುಬಿಡು. ಹೀಗೆಲ್ಲ ಮಾಡಕೂಡದು.” ಎಂದೆಲ್ಲ ಕೂಗಾಡಿದರು. ಅದರೆ ಅದನ್ನು ಕೇಳಿಸಿಕೊಳ್ಳಲು ಯಾರಿದ್ದರು ಅಲ್ಲಿ? ಒಂದು ಕ್ಷಣ ತಲೆ ತಗ್ಗಿಸಿ ನಿಂತುಕೊಂಡಿದ್ದ ಪಟೇಲಮಾಮ ನಿಧಾನಕ್ಕೆ ತಲೆಯೆತ್ತಿ ಅಮ್ಮನನ್ನೇ ನೋಡುತ್ತಾ ಒಂಥರಾ ನಕ್ಕರು. ಮನದಲ್ಲೇನೋ ನಿಶ್ಚಯಿಸಿಕೊಂಡವರಂತೆ ತಲೆ ಅಲುಗಿಸುತ್ತಾ ಅವರಿಬ್ಬರೂ ಓಡಿದ ಕಡೆಗೆ ವೇಗವಾಗಿ ನಡೆದರು. ಇದೆಲ್ಲಾ ಏನು ಎಂದು ಕೇಳಬೇಕೆನ್ನುವಷ್ಟರಲ್ಲಿ ಅಪ್ಪುವಿನ ಕೈ ಹಿಡಿದೆಳೆಕೊಂಡು ಮನೆಗೆ ಕರೆದೊಯ್ದಾಗಿತ್ತು ಅಮ್ಮನಿಗೆ.
ಮಧ್ಯರಾತ್ರಿ ಇನ್ನೂ ಮೀರಿರಲಿಲ್ಲ. ಹೊರಗಡೆ ಚಪ್ಪಲಿಗಳ ಸದ್ದಾಗುತ್ತಲೇ ಅಪ್ಪು ಸಂಶಯಗೊಂಡ. ’ಅಮ್ಮ ಅಮ್ಮ’ ಎಂದು ನಡುಗುತ್ತಾ ಅವಳ ಮೈಗೆ ಮೈ ಒತ್ತಿ ಕುಳಿತ. ಕದ ತಟ್ಟಿದ ಸದ್ದಾಯಿತು. ’ಶ್… ಹೆದರ್ಬೇಡ’ ಎಂದು ಅವನ ತಲೆಸವರಿ ಬಾಗಿಲು ತೆರೆದಳು.
“ರಾಧೇ ಅನಾಹುತವಾಯ್ತು. ಸೇತುವೆಯಲ್ಲಿ ಓಡ್ತಿದ್ದಾಗ ನಾರಾಯಣ ಕಾಲು ಜಾರಿ ನದಿಗೆ ಬಿದ್ದು…” ಹೊತ್ತಿಸಿದ ದೀಪದ ಬೆಳಕಿನಲ್ಲಿ ಪಟೇಲ ಮಾಮನ ಮುಖದ ಆತಂಕ ಎದ್ದು ಕಾಣುತ್ತಿತ್ತು.
“ಏ ದೇವರೇ ಇದು ಹೇಗಾಯ್ತು? ಅಯ್ಯೋ ನಾನಿನ್ನು ಏನು ಮಾಡ್ಲಿ?”
ಬೆಚ್ಚಿ ಬೆವರಿ ಬಡಬಡಿಸುತ್ತಿರುವ ಅಮ್ಮನನ್ನು ಕಂಡು ಹೆದರಿದ ಅಪ್ಪು ಹೆದರುತ್ತಾ ಹತ್ತಿರ ಬಂದು “ಏನಾಯ್ತಮ್ಮಾ ಏನಾಯ್ತಮ್ಮಾ?” ಎಂದು ಅವಳ ಸೀರೆ ಹಿಡಿದು ಎಳೆಯತೊಡಗಿದ. ಮೈ ಮೇಲಿನ ಪರಿವೆಯೇ ಇಲ್ಲದಂತೆ ಬಾಗಿಲ ಚೌಕಟ್ಟನ್ನು ಹಿಡಿದು ನಿಂತಿದ್ದ ಅವಳಿಗೆ ಎಚ್ಚರಗೊಳ್ಳಲು ಕೆಲವು ನಿಮಿಷಗಳೇ ಬೇಕಾದವು. ಆ ಬಳಿಕ ಅವಳು ಅಪ್ಪುವನ್ನು ಅನಾಮತ್ತಾಗಿ ಎತ್ತಿಕೊಂಡು ಮಲಗುವ ಕೋಣೆಗೆ ಹೋಗಿ, ಚಾಪೆಯಲ್ಲಿ ಮಲಗಿಸಿ “ಮಗಾ ನೀನಿನ್ನು ನಿದ್ದೆ ಮಾಡು. ಒಮ್ಮೆಯೂ ಎದ್ದು ಹೊರಗೆ ಬರ್ಬಾರ್ದು. ಎಲ್ಲಾದ್ರೂ ಬಂದ್ರೆ ನೋಡು ಅಲ್ಲಿ ಸುಕುಮಾರಣ್ಣನಿದ್ದಾನೆ ಮಾಮನ ಹಿಂದೆ” ಎಂದು ಬೆದರಿಸುವಂತೆ ಹೇಳಿದಳು. ಸುಕುಮಾರಣ್ಣ! ಅಪ್ಪುವಿನ ಎದೆ ಧಸಕ್ಕೆಂದಿತು.
ನಂಗೆ ಚಾದರ ಹೊದೆಸಿಬಿಟ್ಟು ಅಮ್ಮ ಒಬ್ಳೇ ಹೊರಗೆ ಹೋದದ್ದೇಕೆ? ಅಪ್ಪನನ್ನೇಕೆ ಕಾಣುವುದಿಲ್ಲ? ಅಪ್ಪುವಿನ ಹಣೆಯಲ್ಲಿ ಬೆವರೊಡೆಯಿತು. ಅಪ್ಪನ ಮೇಲಿನ ಕೋಪದಲ್ಲಿ ಸುಕುಮಾರಣ್ಣ ಅಮ್ಮನಿಗೇನಾದರೂ ಮಾಡಿದರೆ? ಅವನ ಕಣ್ಣು ಕತ್ತಲೆಗಟ್ಟಿತು. ಲಗುಬೆಗೆಯಿಂದ ಎದ್ದವನೇ ಕಿಟಿಕಿಯ ಬಳಿಗೆ ಓಡಿ ಬಂದು “ಅಮ್ಮಾ ಒಳಗೆ ಬಾ” ಎಂದು ಪಿಸುಗುಟ್ಟಿದ. ಆದರೆ ಅಮ್ಮ ಅಲ್ಲಿರಲಿಲ್ಲ. ಅಂಗಳದ ಆಚೆಗಿನ ಮಾವಿನ ಮರದಡಿಯಲ್ಲಿ ಪಟೇಲ ಮಾಮನ ಜೊತೆ ಮಾತನಾಡುತ್ತಿದ್ದಳು. ಅಪ್ಪು ಅಂಗಳದ ಸುತ್ತಲೂ ಕಣ್ಣಾಡಿಸಿದ. ಪಟೇಲ ಮಾಮ ಅಮ್ಮನ ಬಳಿಯಿಂದ ಹೊರಟು ಹೋಗುವುದನ್ನೇ ಕಾಯ್ತಾ ಎಲ್ಲಾದ್ರೂ ಹೊಂಚು ಹಾಕಿ ಕೂತಿರಬಹುದಾ? ಅಥವಾ ನಾನು ಹೊರಗೆ ಬರ್ಬಾರ್ದು ಅಂತ ಅಮ್ಮ ಸುಳ್ಳು ಹೇಳಿದ್ದಾಗಿರಬಹುದ? ಅಪ್ಪು ಬಾಗಿಲನ್ನು ತೆರೆಯಲು ಪ್ರಯತ್ನಿಸಿದ. ಹೊರಗಿನಿಂದ ಚಿಲಕ ಹಾಕದಿದ್ದರೂ ಅವನಿಗೆ ತೆರೆಯಲಾಗದಷ್ಟು ಭದ್ರವಾಗಿತ್ತು ಬಾಗಿಲು. ಸಾಕಷ್ಟು ಎಳೆದಾಡಿ ಸೋತ. ಅಮ್ಮನನ್ನು ಕರೆದರೆ ಖಂಡಿತ ಸಿಕ್ಕೀತು ಬೈಗಳು. ಹಾಗಾಗಿ ಅಪ್ಪು ಕಿಟಿಕಿಗೆ ಮುಖ ಕೊಟ್ಟು ಅವರನ್ನೇ ಗಮನಿಸತೊಡಗಿದ.
ಅಮ್ಮ ಮತ್ತು ಪಟೇಲ ಮಾಮನ ನಡುವೆ ವಾಗ್ವಾದ ನಡೆಯುತ್ತಿತ್ತು. ಮಾಮನೊಡನೆ ಮಾತಾಡುವಾಗ ಮೊದಲ ಬಾರಿಗೆ ಅಮ್ಮನ ಕಣ್ಣು ಕೆಂಪಾದುದನ್ನು ಅಪ್ಪು ಗಮನಿಸಿದ. ಅವಳು ಬಿಕ್ಕಳಿಸುತ್ತಾ ಪಟೇಲನನ್ನು ಬೈಯುತ್ತಿದ್ದಳು. ಮೊದಲು ಅವನು ರಾಧೆಯಲ್ಲಿ ಏನೋ ಹೇಳಿ ಸಮಾಧಾನ ಮಾಡಿದ. ಮತ್ತೇನನ್ನೋ ಹೇಳಹೊರಟಾಗ ಅವಳು ಎರಡೂ ಕೈಗಳಿಂದ ಕಿವಿಮುಚ್ಚಿ ಮುಂದೇನನ್ನೂ ಕೇಳಲಾರೆ ಎಂಬಂತೆ ತಲೆಯನ್ನು ಬಲವಾಗಿ ಅತ್ತಿತ್ತ ಆಡಿಸಿದಳು. ಆಗ ಮಾಮನೂ ಕೋಪಗೊಂಡಂತೆ ಕಂಡಿತು. “ನಂಬ್ತಿದ್ರೆ ನಂಬು. ಬಿಡ್ತಿದ್ರೆ ಬಿಡು. ನಾನು ಹೇಳಿದ್ದಂತೂ ನಿಜ” ಎಂದರು ಗಟ್ಟಿಯಾಗಿ. ಅದನ್ನು ಕೇಳಿದ ಕೂಡಲೇ ಅಮ್ಮ ಕೆರಳಿ ಮಾಮನ ಕೊರಳಪಟ್ಟಿ ಹಿಡಿದು ಜಗ್ಗಿ “ನನ್ನ ಮುಖವನ್ನೇ ನೋಡಿ ಹೇಳಿ ನೋಡುವಾ ನನ್ನ ಗಂಡನನ್ನು ನದಿಗೆ ತಳ್ಳಿದ್ದು ಸುಕುಮಾರನೇ ಅಂತ?” ಎಂದು ಅವರ ಕಣ್ಣಲ್ಲಿ ಕಣ್ಣಿಟ್ಟು ಸುಟ್ಟುಬಿಡುವಂತೆ ನೋಡಿದಳು. ಮಾಮನ ಮೋರೆ ಇನ್ನಿಲ್ಲದಂತೆ ಕಂಪಿಸತೊಡಗಿತು. “ಇಲ್ಲ. ಸುಕುಮಾರ ಹಾಗೆ ಮಾಡ್ಲಿಕ್ಕಿಲ್ಲ. ಖಂಡಿತಾ ಮಾಡ್ಲಿಕ್ಕಿಲ್ಲ” ಅಮ್ಮ ಹಟ ಹಿಡಿದವಳಂತೆ ಹೇಳಿದಳು. ಇದನ್ನು ಕಂಡು ಅಪ್ಪುವಿಗೆ ಎಲ್ಲಿಲ್ಲದ ಸಿಟ್ಟು ಬಂತು. ‘ಅಮ್ಮನಿಗೀಗ ಯಾಕೆ ಸುಕುಮಾರಣ್ಣನ ಚಿಂತೆ? ಅವನ ಹೆಸರು ಹೇಳ್ಕೊಂಡು ಮಾಮನ ತಲೆ ತಿನ್ನೋದ್ಯಾಕೆ? ಎಂದು ತನ್ನಲ್ಲೇ ಗೊಣಗಿಕೊಂಡ. ನದಿಯಲ್ಲೀಗ ಭಾರೀ ನೆರೆಯಂತೆ! ಅಯ್ಯೋ… ಅಪ್ಪನಿಗೆ ಈಜಲು ಗೊತ್ತುಂಟೋ ಇಲ್ವೋ… ಥಟ್ಟನೆ ಮೂಡಿದ ಯೋಚನೆಗೆ ಅವನ ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಅಪ್ಪ ಕೈಕಾಲು ಬಡಿಯುತ್ತಾ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ದೃಶ್ಯ ಅವನ ಕಣ್ಣ ಮುಂದೆ ತೇಲಿ ಮೈ ಥರಗುಟ್ಟಿತು. ದೇಹವೆಲ್ಲ ವಿಕಾರವಾಗಿ ಬಾತುಕೊಂಡು… ಕಣ್ಣು ಬಾಯಿ ಅಗಲವಾಗಿ ತೆರೆದುಕೊಂಡು ಅಂಗಾತ… ಅಯ್ಯೋ ಅಪ್ಪ? ಮನಸ್ಸನ್ನು ಮುತ್ತಿದ ಹಾಳು ಯೋಚನೆಗಳನ್ನು ತೊಡೆದು ಹಾಕುವಂತೆ ಅಪ್ಪು ಗಲಗಲನೆ ತಲೆಯಲ್ಲಾಡಿಸಿದ. ಆಗಲೇ ಅವನಿಗೊಂದು ವಿಚಾರ ಹೊಳೆದದ್ದು. ಸೇತುವೆಯ ಎರಡೂ ಬದಿಗಳಲ್ಲಿ ಕಬ್ಬಿಣದ ಹಿಡಿಕೆಗಳುಂಟಲ್ಲ. ಹಾಗಿದ್ದ ಮೇಲೆ ಅಪ್ಪ ಕಾಲು ಜಾರಿ ನದಿಗೆ ಬೀಳೋದು ಹೇಗೆ? ಸುಕುಮಾರಣ್ಣನಿಗಂತೂ ಅಪ್ಪನನ್ನು ಎತ್ತಿ ಎಸೆವ ತಾಕತ್ತಿಲ್ಲ. ಅವನು ಪಟೇಲ ಮಾಮನಂತೆ ಬಲಶಾಲಿಯಲ್ಲವಲ್ಲ. ಆಮೇಲೆಯೇ ಅವನ ಮನಸ್ಸಿಗೊಂದಿಷ್ಟು ಸಮಾಧಾನವಾದದ್ದು. ಆದರೂ ಒಳಗಿನ ನಡುಕ ನಿಂತಿರಲಿಲ್ಲ.
“ನೀನೀಗ ಅವತ್ತಿನ ರಾಧೆಯಾಗಿ ಉಳಿದಿಲ್ಲ ರಾಧೇ…”
ಮಾಮನ ದನಿ ಭಾರವಾಗಿತ್ತು. ಅದನ್ನು ಕೇಳುತ್ತಲೇ ಅವರ ಕೊರಳಪಟ್ಟಿಯ ಮೇಲಿದ್ದ ಅಮ್ಮನ ಕೈ ತಾನಾಗಿಯೇ ಸಡಿಲಗೊಂಡಿತು. ಅವಳು ಕಣ್ಣೊರೆಸುತ್ತಾ ಪಟೇಲನಿಗೆ ಬೆನ್ನು ಕೊಟ್ಟು ನಿಂತು ಅಲ್ಲೇ ಇದ್ದ ಮಾವಿನ ಮರಕ್ಕೆ ತಲೆ ಒರಗಿಸಿ “ಇದೆಲ್ಲ ಹೇಗಾಯ್ತು ಅಂತ ನಂಗೊತ್ತು. ಯಾಕೆ ಹೀಗಾಯ್ತು ಅಂತಲೂ ಗೊತ್ತು.” ಎನ್ನುತ್ತಾ ಗದ್ಗದಳಾದಳು. ಮಾಮನು ಮಾತಿಲ್ಲದೆ ಅವಳ ಹಿಂದೆ ಬಂದು “ನೋಡು ರಾಧೇ ನೀನು ಇಲ್ಲಸಲ್ಲದ್ದು ಯೋಚಿಸಿ ತಲೆಬಿಸಿ ಮಾಡಿಕೊಳ್ಬೇಡ. ಆದದ್ದಾಯ್ತು. ಇನ್ನು ಮುಂದಿನದ್ದನ್ನು ಯೋಚಿಸು” ಎಂದಾಗ ಅವಳದ್ದು ಮೌನವೇ ಉತ್ತರವಾಗಿತ್ತು. ಆಗ ಮಾಮನು ಬೇಸತ್ತವನಂತೆ ಹಣೆಗೆ ಕೈ ಹಚ್ಚಿ “ನೀನಂತೂ ತುಂಬಾ ಬದಲಾಗಿಬಿಟ್ಟೆ ರಾಧೇ. ನಿಂಗೆ ಇಷ್ಟೆಲ್ಲಾ ಉಪಕಾರ ಮಾಡಿದ ನನಗಿಂತಲೂ ಸುಕುಮಾರನೇ ಹೆಚ್ಚಾಗಿಬಿಟ್ಟ ಅಲ್ವ? ಆದ್ರೆ ನಂಗೆ ನೀನು ಬೇರೆಯವಳಲ್ಲ. ಹೊರಗಿನವಳೂ ಅಲ್ಲ. ನಿಂಗೆ ಇಷ್ಟವಿದ್ರೂ ಇಲ್ಲದಿದ್ರೂ ನಾನು ನಿನ್ನ ಕೈ ಬಿಡುವವನಲ್ಲ” ಎಂದು ಉದ್ವೇಗಗೊಳ್ಳುತ್ತಿದ್ದ ತಕ್ಷಣವೇ ಪಟೇಲನಿಗೆ ಗಂಟಲೊತ್ತಿದಂತಾಗಿ ಮಾತು ನಿಲ್ಲಿಸಿದ. ರಾಧೆ ಕೆಳತುಟಿಯನ್ನು ಕಚ್ಚಿ ಹಿಡಿದು, ಮೈ ತಿರುಗಿಸಿ ಕೆಲವು ಹೆಜ್ಜೆ ಮುಂದಿಡುವಷ್ಟರಲ್ಲಿ ಅವನು ನಿಂತಲ್ಲಿಂದಲೇ ಕೈಚಾಚಿ ಅವಳ ಭುಜವನ್ನು ಹಿಡಿದ. ಅವಳು ಗಕ್ಕನೆ ನಿಂತಳು. ಆದರೆ ಕತ್ತು ತಿರುವಿ ನೋಡಲಿಲ್ಲ. ಪಟೇಲನ ಮುಖದಲ್ಲಿ ನಿರಾಶೆ ಕವಿಯಿತು. ಅದಕ್ಕಿಂತಲೂ ಹೆಚ್ಚಾಗಿ ಅವ್ಯಕ್ತ ಭಯ. ಒಂದೆರಡು ಕ್ಷಣಗಳ ಕಾಲ ಮೌನ.
“ರಾಧೇ… ನಾನೂ ಒಬ್ಬ ಮನುಷ್ಯನಲ್ವಾ?”
ವೇದನೆಯಿಂದ ನರಳುಂತಿತ್ತು ಪಟೇಲನ ದನಿ. ಆದರೂ ರಾಧೆ ಮಾತನಾಡಲಿಲ್ಲ. ಒಂದಿಷ್ಟು ಅಲುಗಾಡಲೂ ಇಲ್ಲ. ಮಾಮನ ಕೈ ಇನ್ನೂ ಅಮ್ಮನ ಭುಜದ ಮೇಲೆಯೇ ಇದೆ. ಅಪ್ಪುವಿನ ಮೈಯೊಳಗೆ ಏನೇನೋ ಆಗತೊಡಗಿತು. ಮಾಮನ ಮೇಲೆ ಮೊದಲ ಬಾರಿಗೆ ಏನೋ ಒಂಥರಾ ಅಸಮಾಧಾನ- ಅಸಹ್ಯ ಭಾವನೆಗಳು ಹುಟ್ಟಿಕೊಂಡವು. ಇದು ಯಾವುದರ ಪರಿವೆಯಿಲ್ಲದೆ ಮಾಮ ನೀಳವಾದ ಉಸಿರು ಚೆಲ್ಲಿ “ರಾಧೇ… ನಿನ್ನ ಮತ್ತು ಅಪ್ಪುವಿನ ಭವಿಷ್ಯದ ಬಗ್ಗೆ ಯಾವುದೇ ಚಿಂತೆ ಬೇಡ. ನಾನು ಏನೇ ಮಾಡ್ತಿದ್ರೂ ಅದು ನಿಮ್ಮಿಬ್ರ ಒಳ್ಳೇದಕ್ಕೇ. ಕಲಿಯೋದ್ರಲ್ಲಿ ಅಪ್ಪು ಹಿಂದೆ ಇದ್ರೇನಾಯ್ತು? ಅದಕ್ಕೆ ಹೊರತಾದ ವಿಷಯಗಳಲ್ಲಿ ತುಂಬಾ ಆಸಕ್ತಿಯುಂಟು ಅವನಿಗೆ. ಅಷ್ಟೇ ಅಲ್ಲ ನನ್ನ ಕಾಲ ಕಳೆದ ಬಳಿಕ ತೋಟ, ಹಿತ್ತಿಲು, ಆಸ್ತಿಪಾಸ್ತಿಗಳೆಲ್ಲ ಇನ್ಯಾರಿಗೆ ಮತ್ತೆ? ಎಷ್ಟೇ ಆದ್ರೂ ಅವನು ನಮ್…”ಎನ್ನುತ್ತಿದ್ದಂತೆ ರಾಧೆ ಒಮ್ಮೆಲೇ ಅವಾಕ್ಕಾಗಿ ಉಸಿರನ್ನು ಒಳಕ್ಕೆಳೆದುಕೊಂಡಳು. ನಿಂತಲ್ಲೇ ಕಣ್ಣುಬಾಯಿ ಬಿಟ್ಟುಕೊಂಡು ಸನ್ನಿ ಹಿಡಿದವಳಂತೆ ನಡುಗತೊಡಗಿದ ಅವಳನ್ನು ಕಂಡು ‘ಅರೆ! ಇದ್ದಕ್ಕಿದ್ದಂತೆ ಇದೇನಾಯ್ತು ಅಮ್ಮನಿಗೆ?’ ಎಂದು ಅಪ್ಪು ದಿಗಿಲುಗೊಂಡ. “ಅಯ್ಯೋ ಇಲ್ಲಾ ಇಲ್ಲಾ” ಎಂದು ಎರಡೂ ಕೈಗಳಿಂದ ಕಿವಿಮುಚ್ಚಿ ಗಟ್ಟಿಯಾಗಿ ಚೀರಿದಾಗಲಂತೂ ಅವನ ತಳ ಕುಸಿದಂತಾಗಿ ಕಿಟಿಕಿಯ ಸರಳುಗಳನ್ನು ಬಿಗಿಯಾಗಿ ಹಿಡಿದು ಸಾವರಿಸಿಕೊಂಡ. ಭೂತ ಕಂಡಂತೆ ಹೆದರಿದ ಅಮ್ಮ ದುಸುಬುಸನೆ ಉಸಿರು ಬಿಡುತ್ತಾ ಮನೆಯ ಕಡೆಗೆ ಓಡಿ ಬರತೊಡಗಿದಾಗ ತನ್ನ ಕರುಳಲ್ಲಿ ಸೇರಿಕೊಂಡ ನಡುಕವನ್ನು ಹೇಗೆ ತಡೆಯುವುದೆಂದು ಗೊತ್ತಾಗದೆ ತಬ್ಬಿಬ್ಬಾದ ಅಪ್ಪು ಮಲಗುವ ಕೋಣೆಗೆ ಹೋಗಿ ಏನೂ ತಿಳಿಯದವನಂತೆ ಚಾಪೆಯ ಮೇಲೆ ಬಿದ್ದು ಮುಸುಕೆಳೆದುಕೊಂಡ. ಧಡಾರನೆ ಬಾಗಿಲು ತೆರೆದು ಒಳಗೆ ಬಂದ ಅಮ್ಮ ನನ್ನ ಮಗ್ಗುಲಲ್ಲೇ ಬೋರಲು ಬಿದ್ದು ಅತ್ತುಬಿಟ್ಟದ್ದೇಕೆ? ಆಸ್ತಿ ಕೊಡ್ತೇನೆ ಅಂತ ಮಾಮ ಹೇಳಿದಾಗ ಅವಳಿಗೇಕೆ ಸಂತೋಷವಾಗಲಿಲ್ಲ? ಪ್ರಶ್ನೆಗಳು ತಲೆ ತುಂಬಾ ಮುತ್ತಿಕೊಂಡದ್ದರಿಂದ, ಅಪ್ಪ ಕಾಣೆಯಾಗಿರುವ ವಿಚಾರವು ಪ್ರಜ್ಞೆಯ ತಳದಲ್ಲಿ ಮೈ ಹೊರಳಿಸುತ್ತಿದ್ದರಿಂದ ಅಪ್ಪುವಿನ ನಿದ್ದೆ ದೂರವೇ ಉಳಿಯಿತು.

********

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ನಿರುತ್ತರ”

  1. JANARDHANRAO KULKARNI

    ಕಥೆ ಚನ್ನಾಗಿದೆ. ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ

  2. ಮಹೇಶ್ವರಿ ಯು

    ಕತೆ ಯನ್ನು ಅಪ್ಪುವಿನ ದೃಷ್ಟಿಕೋನದಿಂದ ಹೆಣೆದ ಬಗೆ ಮನ ಮುಟ್ಟುತ್ತದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter