ರಂಗನಾಯಕನ ಜೀವನರಂಗದ ತೆರೆ ಸರಿಸುವ “ಮೋಹನತರಂಗ “

ಮನುಷ್ಯನ ಅಭಿರುಚಿಗಳು ಅವನು ಮಾಡುವ ಸಾಧನೆಗೆ ಮೂಲ ಪ್ರೇರಣೆಯಾಗಿರುತ್ತವೆ. ವಿಭಿನ್ನ ಕ್ಷೇತ್ರಗಳಲ್ಲಿ ಆಸಕ್ತಿಯುಳ್ಳ ವ್ಯಕ್ತಿಯ ಕಾರ್ಯಕ್ಷಮತೆ  ಹಲವು ದಿಕ್ಕಿನಲ್ಲಿ ಹಂಚಿಹೋದರೆ ಒಂದು ಕ್ಷೇತ್ರದ ತಜ್ಞತೆಗೆ ಬಾಧಕವಾಗಬಹುದು ಅಥವಾ  ಪರಿಪೂರ್ಣ ಸಾಧನೆಗೆ ತೊಡಕಾಗಬಹುದು ಎಂಬುದು ಸಾಮಾನ್ಯ ನಂಬಿಕೆ . ಆದರೆ ತನ್ನ ಆಸಕ್ತಿಯ ಅನೇಕ ಕ್ಷೇತ್ರಗಳಲ್ಲಿ ಸಂಪೂರ್ಣ ತಲ್ಲೀನರಾಗಿ ಸಾಧನೆಯ ಶಿಖರವನ್ನೇರುವುದು ಮತ್ತು ತಾನು ಪ್ರವೇಶಿಸಿದ ಕ್ಷೇತ್ರಗಳಲ್ಲಿ ಸೈ ಎನಿಸಿಕೊಳ್ಳುವುದು ಕೆಲವರಿಗೆ ಮಾತ್ರ ಸಾಧ್ಯ. ಹಾಗೆ ಅನಿಸಿಕೊಳ್ಳಲು ಆ ವ್ಯಕ್ತಿಯ ಅಪರಿಮಿತ ಶ್ರಮ ಮತ್ತು ಕೆಲಸದ ಮೇಲಿನ ಶ್ರದ್ಧೆಯೂ ಕಾರಣವಾಗಿರುತ್ತದೆ. ಅಂತಹ ವ್ಯಕ್ತಿಗಳಲ್ಲಿ ಮುಂಬೈಯ ಖ್ಯಾತ ರಂಗಕರ್ಮಿ ಮೋಹನ್ ಮಾರ್ನಾಡ್ ಅವರು ಕೂಡ ಒಬ್ಬರೆಂದು ಅವರ ವ್ಯಕ್ತಿ ಚಿತ್ರಣ ಬರೆದ ಅನಿತಾ ಪೂಜಾರಿ ತಾಕೋಡೆ ಅವರ ‘ ಮೋಹನತರಂಗ’ ಕೃತಿಯಿಂದ ವೇದ್ಯವಾಗುತ್ತದೆ. ಕನ್ನಡ ವಾಙ್ಮಯ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಅನಿತಾ ಅವರು ನಾಟಕ , ಜಾಹೀರಾತು ಕ್ಷೇತ್ರ , ಕಂಠದಾನ, ನಿರ್ದೇಶನ, ಚಿತ್ರನಿರ್ಮಾಣ ಮತ್ತು ಬರವಣಿಗೆಯಲ್ಲಿ ಹೆಸರು ಮಾಡಿರುವ  ಮೋಹನ್ ಮಾರ್ನಾಡ್ ಅವರ ವಿಭಿನ್ನ ಕೌಶಲಗಳ ಕುರಿತು ಸಾದ್ಯಂತ ಮಾಹಿತಿಯನ್ನು ‘ಮೋಹನತರಂಗ’ ದಲ್ಲಿ  ಒದಗಿಸಿದ್ದಾರೆ.

‘ಮೋಹನತರಂಗ’ ಕೃತಿಯು ಅನಿತಾ ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ ತಮ್ಮ ಎಂ.ಎ. (ಕನ್ನಡ) ಅಧ್ಯಯನದ ಅಂಗವಾಗಿ ಸಿದ್ಧಪಡಿಸಿದ ಸಂಪ್ರಬಂಧವಾಗಿದೆ . ಮುಂಬೈ ವಿವಿ ಕನ್ನಡ ವಿಭಾಗದ ಮುಖ್ಯಸ್ಥರು ಮತ್ತು  ಮಾರ್ಗದರ್ಶಕರೂ ಆದ ಡಾ.  ಜಿ.ಎನ್. ಉಪಾಧ್ಯ ಅವರ ಮುಂಬೈ ತುಳು ಕನ್ನಡಿಗ ಸಾಧಕರ ಸಾಹಸ-ಸಾಧನೆಗಳು ದಾಖಲಾಗಬೇಕು, ತನ್ಮೂಲಕ ಇತರರಿಗೂ ಪ್ರೇರಣೆಯಾಗಬೇಕು ಎಂಬ ಆಶಯದಂತೆ ಅನೇಕರ ಜೀವನಸಾಧನೆಗಳು ಈಗಾಗಲೇ ಲಿಖಿತ ರೂಪದಲ್ಲಿ ಹೊರಬಂದಿವೆ. ‘ಮೋಹನತರಂಗ’ದ ಬೆನ್ನುಡಿಯಲ್ಲಿ ಡಾ.ಉಪಾಧ್ಯ ಅವರು, ‘ ಮುಂಬೈಯಲ್ಲಿನ ಕಲಾವಿದರ ಕುರಿತು ಅಧ್ಯಯನ ಮಾಡುವವರಿಗೆ ಇದೊಂದು ಒಳ್ಳೆಯ ಆಕರ ಗ್ರಂಥವಾಗಬಲ್ಲದು ‘ ಎಂದಿರುವುದು ಕೃತಿಯ ಮೇಲ್ಮೆಯನ್ನು ಎತ್ತಿಹಿಡಿದಂತಾಗಿದೆ.

‘ಮೋಹನ್ ಮಾರ್ನಾಡ್ ಒಬ್ಬ ಕಲಾವಿದ ಮಾತ್ರವಲ್ಲ, ಅವರೊಬ್ಬ ಸಾಂಸ್ಕೃತಿಕ ವ್ಯಕ್ತಿ ‘ ಎಂಬ ರಂಗತಜ್ಞ ಡಾ. ಭರತ್ ಕುಮಾರ್ ಪೊಲಿಪು ಅವರ ಮುನ್ನುಡಿಯ ಮಾತು ‘ಮೋಹನತರಂಗ’ವನ್ನು ಓದಿ ಮುಗಿಸಿದ ವಾಚಕರಿಗೂ ಸತ್ಯವೆನಿಸುವುದು. ರಂಗಸಾಧಕನ ನಿಕಟವರ್ತಿಯಾಗಿ ಡಾ.ಭರತ್ ಕುಮಾರ್ ಅವರು   ಮೋಹನ್ ಅವರ ವ್ಯಕ್ತಿತ್ವದ ವಿವಿಧ ಮಗ್ಗಲುಗಳನ್ನು ಪರಿಚಯಿಸುವ ಮೂಲಕ ‘ತೆರೆ ಸರಿಯುವ ಮುನ್ನ’ ಪ್ರವೇಶಿಕೆಯನ್ನು ಉಚಿತ ರೀತಿಯಲ್ಲಿ ಮಾಡಿಕೊಟ್ಟಿದ್ದಾರೆ.

ಮೂಲತಃ ಕವಿಯಾಗಿರುವ ಅನಿತಾ ಅವರ ಕಾವ್ಯಮಯ ನಿರೂಪಣೆಯಲ್ಲಿ   ಮೋಹನ್ ಅವರ ಜೀವನಕಥನ ಸಾಗಿದ್ದು  ಓದುಗರ ಮನದಲ್ಲಿ ಅವರ ಹೋರಾಟದ ಬದುಕು ಆರ್ದ್ರತೆಯನ್ನು ಉಕ್ಕಿಸುವಲ್ಲಿ ಸಫಲವಾಗಿದೆಯೆಂದೇ ಹೇಳಬೇಕು. ಮೋಹನ್ ಅವರ ಬಾಲ್ಯ, ಅವರ ಆಸಕ್ತಿಗಳು,  ಮುಂಬೈಗೆ ಬಂದ ನಂತರ ಎದುರಿಸಿದ ಸವಾಲುಗಳು,  ಅವುಗಳನ್ನು ನಿಭಾಯಿಸುತ್ತಾ , ಸಾಧನೆಯ ಹಾದಿಯಲ್ಲಿ ಎದುರಾದ ಕಂಟಕಗಳನ್ನು ನಿವಾರಿಸಿದ ಪರಿ,  ವಿವಿಧ ಕ್ಷೇತ್ರಗಳಲ್ಲಿ ತನ್ನ ಛಲ, ಶ್ರದ್ಧೆ,  ಪರಿಶ್ರಮ, ಸಾಹಸಗಳಿಂದ ಛಾಪು ಮೂಡಿಸಿದ ಅವರ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಅನಿತಾ ಅವರು  ತನ್ನ ಕೃತಿಯಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಾ ಹೋಗುತ್ತಾರೆ.
ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ಶಕ್ತಿ  ಅವರ ನಿರೂಪಣ ಶೈಲಿಗಿದೆ. ಮೋಹನ ಅವರ ಮುಖ್ಯ ಅಭಿವ್ಯಕ್ತಿ ಮಾಧ್ಯಮವಾದ ನಾಟಕಗಳ ವಿಶ್ಲೇಷಣೆ ಕೃತಿಯ ಮಿತಿಯಾದರೆ, ಅವರ ಅಂಕಣ ಬರಹ ‘ ವಾಕ್ ಆಂಡ್ ಟಾಕ್ ‘ ನ ಉದಾಹರಣೆಗಳಲ್ಲಿ ಮೋಹನ್ ಅವರ  ಸ್ವತ್ವ, ಆಲೋಚನಾಲಹರಿ, ಚಿಂತನಾವಿಧಾನಗಳು ಅನಾವರಣಗೊಂಡಿವೆ.  ಕತೆ, ಕಾದಂಬರಿಗಳ ಪರಿಚಯಾತ್ಮಕ ಲೇಖನಗಳು , ನಗೆಹನಿಗಳ ಉದಾಹರಣೆಗಳು ಅವರ ಲೇಖನಿಯ ಸಾಮಾರ್ಥ್ಯವನ್ನು ಬಯಲುಮಾಡಿವೆ. ಕಿರುತೆರೆಯ ಸಂಘರ್ಷ ಮತ್ತು ಜನಾನುರಾಗದ ಹರ್ಷ, ಎರಡರ ಸವಿಯೂ ಬದುಕಿಗೆ ಹೊಸ ಅರ್ಥ ದೊರಕಿಸಿ ಕೊಟ್ಟಿರುವುದನ್ನು ಕೃತಿಕಾರರು ದೃಷ್ಟಾಂತಗಳ ಮೂಲಕ ವಿವರಿಸಿದ್ದಾರೆ. ಮೋಹನ್ ಅವರೊಂದಿಗಿನ ಮಾತುಕತೆಯಲ್ಲಿ ಅನಿತಾ ಅವರಿಗೆ ಕಲಾವಿದನ ಒಳಮನಸ್ಸಿನ ಕೋಣೆಗಳಲ್ಲಿ ಅವಿತಿದ್ದ ಕೆಲ ಮಾತುಗಳನ್ನು ಹೊರಗೆಳೆಯಲು ಸಾಧ್ಯವಾಗಿದೆ.

ಮೋಹನಾಂತರಂಗದ ಬಿಂಬ ಅವರ ಒಡನಾಡಿಗಳ ಮಾತುಗಳಲ್ಲಿ ಪ್ರತಿಫಲಿಸಿದೆ. ಪ್ರತಿಷ್ಠಿತ ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಮೋಹನ್ ಮಾರ್ನಾಡ್ ಅವರಿಗೆ ಸಂದ ಅನೇಕ ಪ್ರಶಸ್ತಿ ಪುರಸ್ಕಾರಗಳ ಯಾದಿ  ಅನುಬಂಧ-1ರಲ್ಲಿದೆ .

‘ ಈ ಕೃತಿಯಲ್ಲಿ ಮೋಹನ್ ಅವರ ವಿಭಿನ್ನ ಕೌಶಲಗಳ ಸಂಪೂರ್ಣ ಚಿತ್ರಣ ಒದಗಿಸಲಾಗಿಲ್ಲ, ಏಕೆಂದರೆ ಅವರ ಬಗೆಗಿನ ಮಾಹಿತಿಯನ್ನು ಸಂಗ್ರಹಿಸುವುದೇ ಒಂದು ಸವಾಲಿನ ಕೆಲಸವಾಗಿತ್ತು.’ ಎನ್ನುತ್ತ ಅನಿತಾ ಅವರು ತಮ್ಮ  ಮಿತಿಗಳ ಕುರಿತು ವಿನಮ್ರರಾಗುತ್ತಾರೆ. ಆದರೂ ಅವರನ್ನು  ಬಲ್ಲ ಮೂಲಗಳಿಂದ  ಮಾಹಿತಿಯನ್ನು  ಶ್ರಮಪೂರ್ವಕವಾಗಿ ಕಲೆ ಹಾಕಿ ಅಷ್ಟೇ ಅಚ್ಚುಕಟ್ಟಾಗಿ ಜೋಡಿಸಿ ಗ್ರಂಥ ರೂಪದಲ್ಲಿ ಪ್ರಕಟಿಸಿರುವುದು ಅನಿತಾ ಅವರ ಹೆಗ್ಗಳಿಕೆಯಾಗಿದೆ. ಜಾಹೀರಾತು, ಕಂಠದಾನ ಮುಂತಾದ ವಿರಳ ಕ್ಷೇತ್ರಗಳಲ್ಲಿ ವಿಪುಲ ಅವಕಾಶ ಮತ್ತು ಜ್ಞಾನ ಪಡೆಯುವ ಆಸಕ್ತರಿಗೆ ಸ್ವಲ್ಪ ಮಟ್ಟಿಗೆ ಈ ಕೃತಿ ನೆರವಾಗಬಲ್ಲದು.

ಕರ್ನಾಟಕ ಸಂಘ, ಮುಂಬೈ ಇದರ ಪ್ರಕಾಶನದಲ್ಲಿ ‘ಮೋಹನತರಂಗ’ ಕೃತಿ ಬೆಳಕು ಕಂಡಿದೆ. ಒಂದು ಮಾದರಿಯ ರೀತಿಯಲ್ಲಿ  ಜೀವನಕಥನ ರಚಿಸಿದ ಅನಿತಾ ಪೂಜಾರಿ ತಾಕೋಡೆ ಅವರಿಗೆ ಅಭಿನಂದನೆಗಳು.

ಸವಿತಾ ಅರುಣ್ ಶೆಟ್ಟಿ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ರಂಗನಾಯಕನ ಜೀವನರಂಗದ ತೆರೆ ಸರಿಸುವ “ಮೋಹನತರಂಗ “”

  1. Very nicely written article Weare all proud to read and understand so many fact that we were not aware about the legend sriMohanji
    His contribution toKannadat theater is in imaginable his discipline and dedication in his functioning is known fact to we all
    My best wishes stands for dear brother Mohan

  2. Vishwanath Karnad

    Ruchikaravada aapta anisikegalu
    .hageye Anita awara Mohana taranga kratigondu sarala olanota
    Anita, Savita…abhinandane.

  3. Adv R.M. Bhandari

    You have written this Mohana Taranga after taking too much hard work n pain and accordingly appreciated your efforts 👍👍👍
    Good going Anita n keep it up this spirit of good writing in future also. Best wishes👍👍👍

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter