ಮಹತ್ವದ ವಿಮರ್ಶಾ ಕೃತಿ – ‘ವಿನೂತನ ಕಥನ ಕಾರಣ’

*ವಿನೂತನ ಕಥನ ಕಾರಣ* 
ಡಾ. ಬಿ. ಜನಾರ್ದನ ಭಟ್
ಪ್ರಕಾಶಕರು: ಶ್ರೀರಾಮ ಪ್ರಕಾಶನ.
ಮೊದಲ ಮುದ್ರಣ: ೨೦೨೩
ಬೆಲೆ: ರೂ. 525

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸೃಜನೇತರ ಸಾಹಿತ್ಯ ಪ್ರಕಾರವಾಗಿ ವಿಮರ್ಶೆಯನ್ನು ಪರಿಗಣಿಸಿದ್ದರೂ ಸೃಜನಶೀಲತೆ ಇಲ್ಲದೆ ಯಾವುದೇ ಕೃತಿಯ ಕಲಾತ್ಮಕತೆಯನ್ನು ತೆರೆದಿಡಲು ಸಾಧ್ಯವಾಗದು. ಇತರ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದರೆ ವಿಮರ್ಶಾ ಕ್ಷೇತ್ರ ಮತ್ತಷ್ಟು ಮಗದಷ್ಟು ವಿಸ್ತಾರವಾಗುವ ಅಗತ್ಯವಿದೆ. ಪ್ರತಿವರ್ಷ ಸಾಗರೋಪಾದಿಯಲ್ಲಿ ಕೃತಿಗಳು ಹೊರಬರುತ್ತಿದ್ದರೂ ಅವುಗಳಿಗೆ ಸೂಕ್ತ ಪ್ರಾತಿನಿಧ್ಯತೆ ಮತ್ತು ನೆಲೆ ಒದಗಿಸಲು ಆ ಸಾಹಿತ್ಯ ಸಾರ್ವಜನಿಕವಾಗಿ ಚರ್ಚೆ ಆಗಬೇಕಾಗಿದೆ. ಕೃತಿಕಾರ ಮತ್ತು ಸಹೃದಯ ಇವರಿಬ್ಬರ ನಡುವೆ ಸೇತುವೆ ಕಟ್ಟುವುದು ಬಹಳ ಮುಖ್ಯವಾಗಿದೆ. ಇವೆಲ್ಲ ಸಾಧ್ಯವಾಗಬೇಕಾದರೆ ಕೃತಿಯನ್ನು ವಿಮರ್ಶೆಗೊಳಪಡಿಸಿ ಆಕೃತಿಯು ದ್ವನಿಸುವ ಒಳನೋಟಗಳನ್ನು, ಅಂತ ಸತ್ವಗಳನ್ನು, ಬಹುರೂಪಗಳನ್ನು ಮಥಿಸಿ ಅದರಿಂದ ಆ ಕೃತಿಯ ಸಾಧಕ ಬಾಧಕಗಳನ್ನು ಹೊರ ತೆಗೆದು ಬರಹಗಾರರಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಬೇಕು. ಆ ಮೂಲಕ ಓದುಗರಿಗೆ ಆ ಕೃತಿಯನ್ನು ತಲುಪಿಸಬೇಕು ನಮ್ಮ ಕನ್ನಡ ಸಾಹಿತ್ಯದ ಮಟ್ಟಿಗೆ ನೋಡಿದಾಗ ಇತರ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದಾಗ ವಿಮರ್ಶೆ ವಿರಳವೆನ್ನಬಹುದು. ಅದರ ಕೊರತೆ ಎದ್ದು ಕಾಣುತ್ತದೆ. ಇಂತಹ ಕೊರತೆಯನ್ನು ನೀಗಿಸುವಲ್ಲಿ ಶ್ರಮಿಸುತ್ತಿರುವ ಹಲವಾರು ವಿಮರ್ಶಕರಲ್ಲಿ ಡಾ. ಜನಾರ್ದನ ಭಟ್ ಕೂಡ ಪ್ರಮುಖರು.

ಡಾ. ಬಿ. ಜನಾರ್ದನ ಭಟ್ ಅವರು ಆಂಗ್ಲ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯ ಪ್ರಕಾರಗಳೆರಡರಲ್ಲೂ 90 ಕ್ಕೂ ಹೆಚ್ಚು ಫಸಲು ತೆಗೆದಿರುವ ಇವರ ಸಾಹಿತ್ಯ ಪಯಣ ಅತಿ ದೀರ್ಘವಾದುದಾಗಿದೆ. ಇವರು ಕನ್ನಡ ಸಾಹಿತ್ಯ ವಿಮರ್ಶೆ ಮತ್ತು ಪಾಶ್ಚತ್ಯ ವಿಮರ್ಶೆ ಹಾಗೂ ಕೃತಿ ವಿಮರ್ಶೆಗಳಲ್ಲಿ ಅಗಾಧ ಸಾಧನೆ ಮಾಡಿ ಆಕರ ಗ್ರಂಥಗಳ ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಬಹುಶೃತ ವಿದ್ವಾಂಸರು. ಭಾಷಾಂತರ ಅಧ್ಯಯನ ಒಂದು ಕೈಪಿಡಿ, ಸಾಹಿತ್ಯ ವಿಮರ್ಶೆ, ಪುಸ್ತಕ ವಿಮರ್ಶೆ, ವಿಶ್ವ ಸಾಹಿತ್ಯ, ಶಿಷ್ಯ ವಿಶಿಷ್ಟ, ದೇಶ ಸಾಹಿತ್ಯ, ಕೃತಿ ವಿಶ್ವಾ, ಕೃತಿ ನಮಸ್ಕಾರ, ವಿಶ್ವ ಸಾಹಿತ್ಯ ಕೋಶ ಸೇರಿದಂತೆ 30 ಕ್ಕೂ ಹೆಚ್ಚು ವಿಮರ್ಶಾ ಕೃತಿಗಳನ್ನು ವಿಮರ್ಶಾ ಕ್ಷೇತ್ರಕ್ಕೆ ನೀಡಿದ್ದು ಇದೀಗ ಮತ್ತೊಂದು ಹೊಸ ಸೇರ್ಪಡೆ 'ವಿನೂತನ ಕಥನ ಕಾರಣ'.

ಸಂಶೋಧನೆಯ ಅಧ್ಯಯನ ನಿರತ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವಿಮರ್ಶಾ ಸಾಹಿತ್ಯವಾಗಿ ಬಹಳ ಉಪಯುಕ್ತ ಕೃತಿಯಾಗಿದೆ. ಡಾ. ಜನಾರ್ದನ ಭಟ್ ಅವರ ವಿವಿಧ ಬಗೆಯ ಸಾಹಿತ್ಯ ಚಿಂತನೆ ಮತ್ತು ವಿಮರ್ಶಾ ಬರಹಗಳು ಈ ಹೊತ್ತಿಗೆಯಲ್ಲಿ ಒಗ್ಗೂಡಿವೆ.

ಇಲ್ಲಿರುವ ಬರಹಗಳು, ಸುಧೀರ್ಘವಾದ ಪ್ರೌಢ ಪ್ರಬಂಧಗಳಾಗಿವೆ. ಈ ಕೃತಿ ಜನಾರ್ದನ ಭಟ್ ಅವರ ವಿಮರ್ಶನ ಪ್ರಜ್ಞೆ, ಅವರ ಆಳವಾದ ಅಧ್ಯಯನದ ಫಲಿತವಾಗಿದೆ. ಬಹಳ ಸೂಕ್ಷ್ಮ ಸಂವೇದಿಯಾಗಿರುವ ಭಟ್ ಅವರು ಕೈಗೆ ಎತ್ತಿಕೊಂಡ ವಿಚಾರವನ್ನು ಚಿಂತನ ಮಂಥನಕ್ಕೊಳಪಡಿಸುವ ಶೈಲಿಯಲ್ಲಿ ಪ್ರಾಮಾಣಿಕತೆ, ವಸ್ತುನಿಷ್ಠತೆ ಎದ್ದು ಕಾಣುತ್ತದೆ. ವಿಶ್ವ ಸಾಹಿತ್ಯದ ಅನನ್ಯ ಅರಿವಿನ ಆಗರವಾಗಿರುವ ಜನಾರ್ದನ್ ಭಟ್ ಅವರು ನಮ್ಮ ಪ್ರಾದೇಶಿಕತೆ ಮತ್ತು ಭಾಷಾ ಸೊಗಡಿಗೆ ಒಗ್ಗಿಸಿಕೊಂಡು, ತಾತ್ವಿಕ ಕಲ್ಪನೆಗಳನ್ನು ರೂಪಿಸುತ್ತಾ ಸಾಗಿದ್ದಾರೆ. ಇವರ ಸಾಮಾನ್ಯ ನಿಲುವುಗಳು, ಧೋರಣೆಗಳು ಹೃದಯಸ್ಪರ್ಶಿಯಾಗಿ ಮೂಡಿಬಂದಿವೆ.

ವಿಷಯಗಳ ಮಂಡನೆಯಲ್ಲಿ ಗಟ್ಟಿ ದ್ವನಿಯನ್ನು, ಖಚಿತ ಮತ್ತು ನಿಖರ ಮಾಹಿತಿಗಳನ್ನು ವಸ್ತುನಿಷ್ಠವಾಗಿ ತೆರೆದಿಡುವ ಮೂಲಕ ಓದುಗರನ್ನು ಎದುರುಗೊಳ್ಳುತ್ತಾರೆ. ಹರಳುಗಟ್ಟಿದ ಅಧ್ಯಯನದ ಅನುಭವ ಸಾಂದ್ರತೆಯಲ್ಲಿ ಕೃತಿಯನ್ನು ವಸ್ತುನಿಷ್ಠವಾಗಿ ಅಳೆದು ತೂಗಿ ವಿಮರ್ಶೆ ಒಳಪಡಿಸುತ್ತಾ ಕೃತಿಯೊಂದಿಗೆ ಮುಖಾಮುಖಿಯಾಗುವ ಡಾ.ಬಿ. ಜನಾರ್ದನ ಭಟ್ ಅವರ ವಿಮರ್ಶೆ ಹೊಸ ದೃಷ್ಟಿಕೋನಗಳನ್ನು, ಆಯಾಮಗಳನ್ನು ಪರಿಚಯಿಸುತ್ತದೆ.

ಈ ಕೃತಿಯಲ್ಲಿ 'ನವಚಾರಿತ್ರಿಕತೆ - ಈ ಕಾಲದ ಸಾಹಿತ್ಯ ಚಳುವಳಿ', ಪ್ರಾಚೀನ ಗದ್ಯದಲಿ ಚಿತ್ರಿತವಾದ ಜೀವನ ಕ್ರಮಗಳು, ಭಕ್ತಿ ಅನುಭಾವ ಮತ್ತು ಅಲ್ಲಮ, ಡಿವಿಜಿಯವರ ಸಾಹಿತ್ಯ ಮೀಮಾಂಸೆ, ಗೋಕಾಕರ ಕಲಾ ಮೀಮಾಂಸೆ, ಕುವೆಂಪು ಮೂರು ಕಾವ್ಯ ಮೂರು ಸೃಷ್ಟಿ, ಕಾರಂತರ ಕಾದಂಬರಿಗಳ ರಚನಾ ವಿನ್ಯಾಸ, ಕಾರಂತರ ಬಾಲ ಸಾಹಿತ್ಯ, ಕಡಲ ತಡಿಯ ಕಥೆಗಳಲ್ಲಿ ಸ್ವಾತಂತ್ರ್ಯ ತೆರೆಗಳು, ಅನುವಾದ ಕ್ಷೇತ್ರಕ್ಕೆ ಗೋವಿಂದ ಪೈಗಳ ಕೊಡುಗೆ, ವಿಮರ್ಶೆಯ ಉಪಯುಕ್ತ ಪಾರಿಭಾಷಿಕ ಪದಗಳು, ಕನ್ನಡದಲ್ಲಿ ಲಿಮರಿಕ್ ಗಳು, ಗ್ರೀಕ್ ಸಾಹಿತ್ಯ, ಬೆರ್ಮರು ಏನಾದರು ಇವೆ ಮೊದಲಾದ 18 ವಿಮರ್ಶಾ ಲೇಖನಗಳಿವೆ.

ಇವುಗಳಲ್ಲಿ ಕೆಲವು ರಾಷ್ಟ್ರೀಯ ವಿಚಾರ ಸಂಕೀರ್ಣಗಳಲ್ಲಿ ಮಂಡಿಸಿದ ಲೇಖನಗಳು, ವಿವಿಧ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಿತ ಬರಹಗಳು ಮತ್ತು ಸಾಹಿತ್ಯ ಕೃತಿಗಳ ಅಧ್ಯಯನದ ಲೇಖನಗಳು ಒಳಗೊಳ್ಳುತ್ತವೆ. 'ನವಚಾರಿತ್ರಿಕತೆ' ಸುಮಾರು ನೂರು ಪುಟಗಳಷ್ಟು ದೀರ್ಘ ವಿಮರ್ಶಾ ಪ್ರಬಂಧ. ಇದು ಈ ಕಾಲದ ಸಾಹಿತ್ಯ ಚಳವಳಿ 'ನವಚಾರಿತ್ರಿಕತೆ' ಎಂದು ಸೋದಾಹರಣವಾಗಿ ಗುರುತಿಸುತ್ತದೆ.

ವಿಮರ್ಶಾ ಕ್ಷೇತ್ರದಲ್ಲಿ ತೊಡಗುವ ಯುವ ವಿಮರ್ಶಕರಿಗೆ ಅಗತ್ಯವಾದ ವಿಮರ್ಶೆಯ ಪಾರಿಭಾಷಿಕ ಪದಗಳ ವಿಶ್ಲೇಷಣೆಯನ್ನು ಒಳಗೊಂಡ ಲೇಖನ ಗಮನ ಸೆಳೆಯುತ್ತದೆ. ಇಲ್ಲಿ ಕಥೆ, ಕಾದಂಬರಿ, ಕಥಾ ಸಂವಿಧಾನ, ಸಂಕಥನ, ಐಡಿಯಾಲಜಿ, ಆಶಯ, ಪಾತ್ರ ಚಿತ್ರಣ, ನಿರೂಪಣೆಯ ತಂತ್ರಗಳು ,ಭಾಷಾ ಶೈಲಿ, ಸಂಕೇತಗಳನ್ನು ಕುರಿತು ಅವಲೋಕಿಸಬೇಕಾದ ಅಂಶಗಳು ಮತ್ತು ವಿಧಾನಗಳನ್ನು ಹಲವಾರು ನಿದರ್ಶನಗಳ ಮೂಲಕ ನಿರೂಪಿಸಿದ್ದಾರೆ.

ಜೊತೆಗೆ ಕಾವ್ಯ ರಚನೆಗಳಲ್ಲಿ ಇರಬೇಕಾದ ಲಕ್ಷಣಗಳನ್ನು ಪರಿಕಲ್ಪನೆಗಳನ್ನು ವಿವರಿಸಿತ್ತಾ ವಸ್ತು, ಕಾವ್ಯ ಶಿಲ್ಪ, ಕಾವ್ಯದ ಭಾಷೆ, ಪ್ರತಿಮೆ, ರೂಪಕ, ಕರ್ಷಣ, ವ್ಯಂಗ್ಯ, ವಿಡಂಬನೆ ಮತ್ತು ವಿರೋಧಾಭಾಸ, ಅಲಂಕಾರಗಳು, ರಸ ಛಂದಸ್ಸುಗಳ ಬಳಕೆಯನ್ನು ಅವಲೋಕಿಸುವ ಜೊತೆಗೆ ನಾಟಕದ ಪರಿಭಾಷಿಕ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ಇವುಗಳ ವ್ಯವಸ್ಥಿತ ಅಧ್ಯಯನ ಹೊಸ ಪೀಳಿಗೆಯ ವಿಮರ್ಶೆಗೆ ಉಪಯುಕ್ತವಾಗುತ್ತದೆ.

ವಚನಗಳು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯವಾದ ಕೊಡುಗೆಗಳಾಗಿವೆ. ಇವುಗಳನ್ನು ಅನುಭಾವಿಕ ಸಾಹಿತ್ಯವೆಂದು ಪರಿಗಣಿಸಲಾಗಿದೆ. ಅಲ್ಲಮಪ್ರಭುಗಳ ಸಾಧನೆಯನ್ನ ತುಂಬಾ ವಿಶ್ಲೇಷಣಾತ್ಮಕವಾಗಿ ಚರ್ಚಿಸುತ್ತಾ ಅವು ಅನುಭವ ಸಾಹಿತ್ಯಕ್ಕೆ ಹೇಗೆ ಮಾದರಿಯಾಗಬಲ್ಲವೂ ಎಂಬುದನ್ನು ಹಲವಾರು ವಚನಗಳ ಮೂಲಕ ಉಲ್ಲೇಖಿಸಿದ್ದಾರೆ. ಅಲ್ಲಮಪ್ರಭುಗಳು ಸಾಮಾನ್ಯವಾಗಿ ಅರ್ಥವಾಗುವ ಸಿದ್ಧ ಸಂಕೇತಗಳನ್ನು ಬಳಸಿದರೂ ಅದನ್ನು ಒಂದು ಸರಣಿ ರೂಪಕವನ್ನಾಗಿಸಿ ಹೊಸ ರೀತಿಯಲ್ಲಿ ತನ್ನ ಸ್ವಂತ ಅನುಭವವನ್ನು ಹೇಳಿದ್ದಾರೆ ಎಂಬುದು ಜನಾರ್ದನ ವರ ಅಭಿಮತವಾಗಿದೆ.

ಡಿವಿಜಿ ಅವರ ಸಾಹಿತ್ಯ ಸೇವೆಗಳು ಅನೇಕ. ಅದರಲ್ಲಿ ಡಾ. ಜನಾರ್ದನ ಭಟ್ ಅವರು ತಮ್ಮ ಪ್ರಬಂಧದಲ್ಲಿ ಇವರ ಸಾಹಿತ್ಯ ಮಿಮಾಂಸೆಯನ್ನ ಕುರಿತು ಚರ್ಚಿಸಿದ್ದಾರೆ. ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯ ಶಕ್ತಿ, ಕಾವ್ಯ ಸ್ವಾರಸ್ಯ ಕೃತಿಗಳ ಜೊತೆಗೆ ಪೀಠಿಕಾ ರೂಪದ ವಿಮರ್ಶೆಗಳ ಬಗ್ಗೆಯೂ ಆಮೂಲಾಗ್ರ ಮಾಹಿತಿಗಳನ್ನ ಹೊರ ತೆಗೆದಿದ್ದಾರೆ. ಅವರ ಸಾಹಿತ್ಯ ಮೀಮಾಂಸೆ, ಭಾರತೀಯ ಕಾವ್ಯ ಮೀಮಾಂಸೆಯ ಎಲ್ಲಾ ಪ್ರಸ್ತಾನಗಳನ್ನು ಸಮನ್ವಯಗೊಳಿಸಿಕೊಂಡ ಒಂದು ಬಗೆಯ ಮಾರ್ಗ ಸಂಪ್ರದಾಯವಾಗಿದೆ ಎಂದು ಗುರುತಿಸಿದ್ದಾರೆ. ಕಾವ್ಯ ಚಿಂತಕರ ಅಭಿಪ್ರಾಯಗಳನ್ನು ಬೇಕಾದಲ್ಲಿ ಸೇರಿಸಿಕೊಂಡು ತಮ್ಮದೇ ಆದ ಸಮಗ್ರ ಕಾವ್ಯ ಚಿಂತನೆಯೊಂದನ್ನು ರೂಪಿಸಿಕೊಂಡಿರುವುದು ಇವರ ವಿಮರ್ಶೆಯ ಪ್ರಮುಖ ಅಂಶವಾಗಿದೆ ಎಂದು ಡಾ. ಜನಾರ್ದನ ಭಟ್ ಗುರುತಿಸಿದ್ದಾರೆ.

'ಕುವೆಂಪು ಮೂರು ಕಾವ್ಯ ಮೂರು ಸೃಷ್ಟಿ' ಪ್ರಬಂಧದಲ್ಲಿ ಅವರ ಮಹಾಕಾವ್ಯಗಳಾದ ಶ್ರೀ ರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳ ಒಳನೋಟಗಳನ್ನು ಸೂಕ್ಷ್ಮವಾಗಿ ತೆರೆದಿಡುತ್ತಾ ಈ ಮೂರು ಕೃತಿಗಳು ಸ್ಥಳೀಯ ಸಮಾಜಗಳ ಮೌಡ್ಯ ಶೋಷಣೆಗಳನ್ನು ದೂರ ಮಾಡಿ ಸಂಸ್ಕೃತಿಯನ್ನು ಬೆಳೆಸುವ ಪ್ರಕ್ರಿಯೆಯನ್ನು ದಾಖಲಿಸುತ್ತವೆ ಮತ್ತು ರಾಷ್ಟ್ರೀಯತೆಯಲ್ಲಿ ಭದ್ರ ಬುನಾದಿಯ ಮೇಲೆ ಸ್ಥಳೀಯ ಸಮಾಜಗಳನ್ನು ಗಟ್ಟಿಗೊಳಿಸುವ ವಿಶಾಲ ದೃಷ್ಟಿಕೋನವನ್ನು ಹೊಂದಿದ್ದು ಅವು ಆಧುನಿಕ ಯುಗದ ರಾಷ್ಟ್ರೀಯ ಮಹಾಕಾವ್ಯಗಳಾಗಿವೆ ಎಂಬ ವಿಚಾರವನ್ನು ಭಟ್ ಅವರು ತಮ್ಮ ಪ್ರಬಂಧದಲ್ಲಿ ಮಂಡಿಸುತ್ತಾ ಕುವೆಂಪು ಅವರ ವಿಶ್ವಮಾನವ ಸಂದೇಶಕ್ಕೆ ಮತ್ತಷ್ಟು ಪುಷ್ಟಿ ತುಂಬಿದ್ದಾರೆ.

'ಕಾರಂತರ ಕಾದಂಬರಿಗಳ ರಚನಾ ವಿನ್ಯಾಸ'- ಶಿವರಾಮ ಕಾರಂತರ 'ಕನ್ಯಾ ಬಲಿ', 'ಮರಳಿ ಮಣ್ಣಿಗೆ', 'ಸರಸಮ್ಮನ ಸಮಾಧಿ' ಕಾದಂಬರಿಗಳನ್ನು ಪರಿಗಣಿಸಿ ರಾಚನಿಕ ವಿಮರ್ಶೆಯಲ್ಲಿ ಬಳಕೆ ಯಾಗಿರುವ ಭಾಷಾ ವಿಜ್ಞಾನದ ಪರಿಕಲ್ಪನೆಗಳನ್ನು ಬಳಸಿಕೊಂಡು ವಾಕ್ಯಗಳ ರಚನೆ ವಿನ್ಯಾಸವನ್ನು ಪರಾಮರ್ಶಿಸಿದ್ದಾರೆ. ಉದಾಹರಣೆಗಳ ಮೂಲಕ ಅನುಕ್ರಮಾತ್ಮಕ ವಿನ್ಯಾಸಗಳು, ಲಂಬಾತ್ಮಕ ವಿನ್ಯಾಸಗಳು‌ಮತ್ತು ಜಟಿಲ ವಿನ್ಯಾಸಗಳ ವಿಶ್ಲೇಷಣೆ ಮಾಡಿದ್ದಾರೆ. ಇಂತಹ ವಿನ್ಯಾಸಗಳ ರಚನೆಯಿಂದಾಗುವ ಪ್ರಯೋಜನಗಳು ಕಡಿಮೆ ಕುರಿತು ಸುಧೀರ್ಘವಾಗಿ ವಿವರಿಸಿದ್ದಾರೆ ಆಕೃತಿಗಳ ಸುಲಭವಾಗಿ ನೆರವಾಗುವ ಪರಿಯ ಮಾಹಿತಿಯು ಕಡಿಮೆಯದೇನಲ್ಲ.

 ಸಾಹಿತ್ಯ ಕ್ಷೇತ್ರಕ್ಕೆ ಕಾರಂತರ ಸೇವೆ ಅವಿಸ್ಮರಣೆವಾದದ್ದು. ಮಕ್ಕಳಿಗೆ ಸಮಾನತೆಯ ಜೀವನ ಪಾಠವಾಗಬೇಕೆಂಬುದು ಕಾರಂತರ ಅಭಿಮತ. ಅದಕ್ಕಾಗಿ ಬಾಲವನ, ಮಕ್ಕಳ ಕೂಟಗಳನ್ನು ರಚಿಸಿದರು. ಮಕ್ಕಳ ಸಾಹಿತ್ಯ ರಚನೆ, ಶಿಕ್ಷಣ ತಜ್ಞರಾಗಿ ಇವರ ಕೊಡುಗೆ ಬಹಳವಿದೆ. ಮಕ್ಕಳ ನಾಟಕಗಳು, ಮಕ್ಕಳಿಗಾಗಿ ಗದ್ಯ ಕೃತಿಗಳಿಗೆ ಪೂರಕ ಪಠ್ಯಗಳಾಗಿ ಬಾಲ ಸಾಹಿತ್ಯ ರಚನೆ ಸೇರಿದಂತೆ ಇವರ ಮಕ್ಕಳ ಸಮಗ್ರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವಲ್ಲಿ ಪ್ರಬಂಧ ತುಂಬಾ ಅರ್ಥಪೂರ್ಣವಾಗಿ, ಮಾಹಿತಿ ಪೂರ್ಣವಾಗಿ ಮೂಡಿಬಂದಿದೆ.

ಕನ್ನಡದ ವಾಗ್ದೇವಿಗೆ ಜ್ಞಾನಪೀಠ ಮುಕುಟ ತೊಡಗಿಸಿದ ವಿ ಕೃ ಗೋಕಾಕರ ಕಲಾ ಮೀಮಾಂಸೆ ಈ ಕೃತಿಯಲ್ಲಿರುವ ಮತ್ತೊಂದು ಮಹತ್ವಪೂರ್ಣ ಪ್ರಬಂಧವಾಗಿದೆ. ಕಲೆಯ ನೆಲೆ, ಸೌಂದರ್ಯ ಮೀಮಾಂಸೆ, ಕಲಾ ಸಿದ್ದಾಂತ, ಸಾಹಿತ್ಯ ವಿಮರ್ಶೆಯ ಕೆಲವು ತತ್ವಗಳು ಎಂಬ ನಾಲ್ಕು ಕೃತಿಗಳ ಮೂಲಕ ಇವರ ಸಾಮಾಜಿಕ ವಿಮರ್ಶಾ ತತ್ವಗಳು, ಸಿದ್ಧಾಂತಗಳು, ಒಳನೋಟಗಳು, ಕಲೆಯ ನೆಲೆಗಳನ್ನು ಧ್ವನಿ, ರಸಭಾವ, ಅರ್ಥ, ರೂಪ, ಔಚಿತ್ಯ ಎಂಬ ಆರು ಪ್ರಮುಖ ಹಂತಗಳಲ್ಲಿ ಅವರು ಪರಿಚಯಿಸಿರುವ ವಿಮರ್ಶೆಯನ್ನು ಸ್ಥೂಲವಾಗಿ ಅಭ್ಯಾಸಿಸಿ ಅಧ್ಯಯನಕಾರರಿಗೆ ನೆರವಾಗುವಂತೆ ರಚಿಸಿದ್ದಾರೆ.

ರಾಮಚಂದ್ರ ದೇವರ ಮೂರು ಕಥೆ ಮೂರು ಕವನಗಳು ಎಂಬ ಪ್ರಬಂಧವು ದಂಗೆಯ ಪ್ರಕರಣ, ಮೂಗೇಲ, ರೆಸಾರ್ಟ್, ಕಥೆಗಳನ್ನು ಹಾಗೂ ಅಪ್ಪು ಮಾವನ ಆರುಪ್ಪೆ ಕುರು, ಡೊಂಕು ಪ್ರಗಾಥ ಮತ್ತು ಮಾತನಾಡುವ ಮರ ಇವುಗಳನ್ನು ಅವರ ಬರವಣಿಗೆ ಮೂರು ಗಟ್ಟಗಳಲ್ಲಿ ಗುರುತಿಸಿದ್ದಾರೆ. ವಿಶ್ವ ಸಾಹಿತ್ಯದ ಅಮೂಲ್ಯ ಜ್ಞಾನ ಬಂಡಾರವಾದ ಡಾ. ಜನಾರ್ದನ ಭಟ್ ಅವರು ತಮ್ಮ ವಿಮರ್ಶೆಯಲ್ಲಿ ವಿದೇಶಿ ಸಾಹಿತ್ಯವನ್ನು ತೌಲನಿಕವಾಗಿ ಬಳಸಿಕೊಂಡಿರುವದನ್ನು ನಾವಿಲ್ಲಿ ಗಮನಿಸಬಹುದು. "ಒಡೆಯುವುದು ಕೆಡಹುವುದು, ಕಡಿಯುವುದು, ಕೊಲ್ಲುವುದು, ಲೋಕವನ್ನು ನೆಮ್ಮದಿಯತ್ತ ಕೊಂಡೊಯ್ಯುವ ಕ್ರಿಯೆಗಳಲ್ಲಿ, ಸಂಸ್ಕೃತಿಯ ಜೊತೆ ಸಂವಾದ ನಡೆಸಲು ಪ್ರಯತ್ನಿಸುವುದು ಮತ್ತು ವಿನಾಶಕಾರಿ ಕ್ರಿಯೆಗಳನ್ನು ತಡೆಗಟ್ಟಲು ಪ್ರಯತ್ನಿಸುವುದು ಪ್ರಜ್ಞಾವಂತರ ಆಯ್ಕೆ" ಎಂಬುದು ರಾಮಚಂದ್ರ ದೇವರ ಸಾಹಿತ್ಯದ ಉರುಳು ಎಂಬ ವಿಚಾರಗಳನ್ನ ತೆರೆದಿಟ್ಟಿದ್ದಾರೆ. ಅಂತಹ ಗುಣಗಳಿಂದ ಇವರ ಸಾಹಿತ್ಯದ ಅಧ್ಯಯನ ಬಹಳ ಮುಖ್ಯವಾಗುತ್ತದೆ ಎಂಬುದು ಡಾ. ಜನಾರ್ದನ ಭಟ್ ಅವರ ಅಭಿಮತ.

ಆ ಮನುಷ್ಯನ ಜೀವನ ಕ್ರಮ ಅಂದಿನಿಂದ ಇಂದಿನವರೆಗೂ ಹಲವಾರು ಸ್ಥಿತ್ಯಂತರಗಳನ್ನು ಕಾಣುತ್ತಲೇ ಬರುತ್ತಿದೆ. ಇವುಗಳ ಗುರುತಿಸುವಿಕೆಗೆ ಸಾಹಿತ್ಯ ನೆರವಾಗುತ್ತದೆ. ಆ ನೆಲೆಯಲ್ಲಿ ನಿಂತು ಚರ್ಚಿಸುವಾಗ ಈ ಹೊತ್ತಿಗೆಯಲ್ಲಿರುವ ಪ್ರಾಚೀನ ಗದ್ಯದಲಿ ಚಿತ್ರಿತವಾದ ಜೀವನ ಕ್ರಮಗಳು ಪ್ರಬಂಧ ನಮಗೆ ಪ್ರಾಚೀನ ಶಾಸನಗಳಿಂದ ಮೊದಲುಗೊಂಡು ಕನ್ನಡದ ಮೊದಲ ಗದ್ಯ ಕೃತಿ ವಡ್ಡಾರಾಧನೆ, ನಂತರ ಪಂಚತಂತ್ರದ ಕಥೆಗಳನ್ನು ಆಧರಿಸಿ ಮನುಷ್ಯನ ಜೀವನ ಮೌಲ್ಯಗಳು ಚರ್ಚಿಸುತ್ತದೆ. ಕರುನಾಡಿನಲ್ಲಿ 13ನೇ ಶತಮಾನದಲ್ಲಿಯೇ ಪ್ರವರ್ಧಮಾನಕ್ಕೆ ಬಂದ ಜೈನ ಧರ್ಮ ಜನಸಮುದಾಯದ ಮೇಲೆ ಬೀರಿದ ಪ್ರಭಾವ, ಜೈನ ಮತ್ತು ಹಿಂದೂ ಧರ್ಮಗಳ ಸಮನ್ವಯ ಪರಂಪರೆಯನ್ನು ಅಂದಿನವರ ಚಿಂತನೆ, ಆಲೋಚನೆಗಳನ್ನು ಪಂಪ, ರನ್ನ, ಜನ್ನರಾದಿಯಾಗಿ ಚಾಮುಂಡರಾಯರೆಲ್ಲರ ಕೃತಿಗಳ ಸಾರವನ್ನು ಹೆಕ್ಕಿ ತೆಗೆದು ಆ ಕೃತಿಗಳಲ್ಲಿ ವಿವರಿಸಿದ್ದಾರೆ.

ಕನ್ನಡದ ಖ್ಯಾತ ಕಥೆಗಾರರಾದ ಯಶವಂತ ಚಿತ್ತಾಲರ 'ಶಿಕಾರಿ' ಕಾದಂಬರಿಯ ಕಥಾವಸ್ತುವನ್ನು ಪಾಶ್ಚಾತ್ಯ ಕಥೆಗಾರರ ಇದೆ ತೆರೆನಾದ ವಸ್ತುವಿನೊಂದಿಗೆ ತೌಲನಿಕ ಅಧ್ಯಯನ ಮಾಡುವ ಪ್ರಬಂಧ ಮನುಷ್ಯರಿಂದ ಮನುಷ್ಯನ ಬೇಟೆ. ಮನುಷ್ಯನನ್ನು ಬೇಟೆಯಾಡುವುದು 'ಶಿಕಾರಿ'ಯ ಕಥೆ. ರಷ್ಯಾದ ಸಾಹಿತಿಗಳಾದ ದಾಸ್ತೋಯೆವಸ್ಕಿ ಬದುಕಿನಲ್ಲಿ ಕೂಡ ಇಂತಹ ಬೇಟೆಯಾಡುವ ಹೆಂಗಸರ ಪಾತ್ರವನ್ನು, ಅದರ ಪ್ರಭಾವ ಅವನ ಕೃತಿ ರಚನೆಯಲ್ಲಿ ವಹಿಸಿದ ಪಾತ್ರವನ್ನು ವರ್ಣಿಸುತ್ತದೆ. ಜೊತೆಗೆ ಕಾಪ್ಕನ ಕಥೆಗಳಲ್ಲೂ ಕಾಣುವುದು ನಿರಪರಾಧಿಯ ಚಿತ್ರಣ. ಇಂತಹ ಶೋಷಣೆ ಮನುಷ್ಯರಿಂದ, ವ್ಯವಸ್ಥೆಯಿಂದ ಉಂಟಾಗುತ್ತದೆ. ಇದಕ್ಕೆ ಪ್ರತಿಯಾಗಿ ಕುಂದೇರ ಅವರ ಕಥೆಗಳನ್ನು ಕೂಡ ಉದಾಹರಿಸಿದ್ದಾರೆ.

ಭಾರತದ ಚರಿತ್ರೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಥನಗಳದು ಅವಿಸ್ಮರಣೀಯ ಭಾಗ. ಪರಕೀಯರಿಂದ ಮುಕ್ತಿ ಪಡೆಯಲು ದೇಶದಾದ್ಯಂತ ನಡೆದ ಹೋರಾಟಗಳು, ಪ್ರತಿಭಟನೆಗಳು, ಸತ್ಯಾಗ್ರಹಗಳು ಅಸಂಖ್ಯಾತ. ಅದರಲ್ಲಿ ಕೆಲವು ಬೆಳಕಿಗೆ ಬಂದಿವೆ. ಮತ್ತೆ ಕೆಲವು ತೆರೆ ಮರೆಯಲ್ಲೆ ಉಳಿದುಬಿಟ್ಟಿವೆ. ಪ್ರಾದೇಶಿಕತೆಗಳಿಗೆ ಅನುಗುಣವಾಗಿ ಆಯಾ ಸ್ಥಳದ ಘಟನೆಗಳು ಸ್ಥಳೀಯರಿಗೆ ದಕ್ಕುತ್ತವೆ. ಕಡಲ ತಡಿಯ ಕಥೆಗಳಲ್ಲಿ ಸ್ವಾತಂತ್ರ್ಯದ ತೆರೆಗಳು ಎಂಬ ಈ ಪ್ರಬಂಧದಲ್ಲಿ ಜನಾರ್ದನ ಭಟ್ ಅವರು ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಮತ್ತು ಅವುಗಳು ಯಾವ ಯಾವ ಕಾಲಘಟ್ಟಗಳಲ್ಲಿ ಕಥೆಗಳಲ್ಲಿ ಸೇರಿವೆ ಮತ್ತು ಆ ಕಥೆಗಳನ್ನು ಹೇಳಿದ ಉದ್ದೇಶ, ಆಶಯಗಳನ್ನ ಗುರುತಿಸಿ ಅಮೂಲ್ಯವಾದ ಸಂಶೋಧನಾತ್ಮಕ ಪ್ರಬಂಧ ರಚಿಸಿದ್ದಾರೆ.‌ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಬ್ರಿಟಿಷರು ಸ್ವಾತಂತ್ರ್ಯ ಹೋರಾಟ ಬರಹಗಳನ್ನು ಪ್ರಕಟಿಸದಂತೆ ತಡೆಯುತ್ತಿದ್ದರಾದರೂ ಭಾರತದ ಗಂಡುಗಲಿಗಳು ಆ ವಿರೋಧಗಳನ್ನ ಮೆಟ್ಟಿ ಸಾಹಿತ್ಯ ರಚಿಸಿದ್ದಾರೆ. ಬ್ರಿಟಿಷರ ವಿರುದ್ಧದ ಗಾಂಧಿ ಯುಗದ ಹೋರಾಟಗಳಲ್ಲಿ ಕಡಲ ತೀರದ ದೇಶಾಭಿಮಾನಿಗಳ ಹೋರಾಟ ಮತ್ತು ದಾಖಲೆಯನ್ನು ಓದುಗರ ಮುಂದಿಟ್ಟಿದ್ದಾರೆ. ಕಡಲ ತಡಿಯ ಕೊಡುಗೆಗಳನ್ನು, ದಾಖಲಾದ ಕೃತಿಗಳ ಮೂಲಕ ವಿವರಿಸಿರುವುದು ಅವರು ತಮ್ಮ ಭಾಗದಾರರಿಗೆ ಸಲ್ಲಿಸಿದ ಗೌರವ ಎನ್ನಬಹುದು. ಇಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಥೆಗಳೆರಡನ್ನು ಹೋಲಿಸಿರುವುದು ವಿಶೇಷವಾದ ಸಂಗತಿಯಾಗಿದೆ.

 'ಅನುವಾದ ಕ್ಷೇತ್ರಕ್ಕೆ ಗೋವಿಂದ ಪೈಗಳ ಕೊಡುಗೆ' ಲೇಖನವು ಭಾರತದ ಮೊದಲ ರಾಷ್ಟ್ರ ಕವಿಗಳಾದ ಎಂ ಗೋವಿಂದ ಪೈಗಳ ಅನುವಾದ ಸಾಹಿತ್ಯದ ಭಿನ್ನ ದೃಷ್ಟಿಕೋನಗಳನ್ನು ಸವಿವರವಾಗಿ ಉದಾಹರಣೆಗಳ ಮೂಲಕ ಚಿತ್ರಿಸಿದ್ದಾರೆ. ನಾಟಕ, ಕಾವ್ಯ ಕೃತಿಗಳು ಮುಂತಾದ ಸಾಹಿತ್ಯ ಪ್ರಕಾರಗಳೊಂದಿಗೆ ಭಾಷಾಂತರ, ರೂಪಾಂತರ, ಪ್ರೇರಣೆ, ಮರು ನಿರೂಪಣೆ, ಸಂಕ್ಷೇಪಾನುವಾದ ಸೇರಿದಂತೆ ಕನ್ನಡ ಸಾಹಿತ್ಯದ ಅನುವಾದ ಕ್ಷೇತ್ರಕ್ಕೆ ಇವರ ಕೊಡುಗೆಗಳನ್ನು ದೀರ್ಘ ಪ್ರಬಂಧದ ಮೂಲಕ ಮಂಡಿಸಿದ್ದಾರೆ.

ಕನ್ನಡ ಸಾಹಿತ್ಯ ಸೇರುತ್ತಿರುವ ಹಲವಾರು ವಿದೇಶಿ ಸಾಹಿತ್ಯ ಪ್ರಕಾರಗಳಲ್ಲಿ ಇಂಗ್ಲಿಷ್ ನಾ ಲಿಮರಿಕ್ ಕಾವ್ಯ ಕೂಡ ವಿಶಿಷ್ಟವಾದಾಗಿದೆ.

*ಮೊದಲೆರಡು ಸಾಲಲ್ಲಿ ಇದ್ದರೆ ಸ*
 *ಐದನೇ ಸಾಲಲ್ಲೂ ಅದೇ ಪ್ರಾಸ*
 *ಮೂರು ನಾಕನೆ ಸಾಲಿಗೆ*
 *ಬೇರೆ ಪ್ರಾಸದ ಬೆಸುಗೆ*
*ಇದೇ ನೋಡಿ ಲಿಮರಿಕ್ ವಿನ್ಯಾಸ* 

ಈ ಮೇಲಿನ ಡುಂಡಿರಾಜರ ಲಿಮರಿಕ್ ಕಾವ್ಯದ ಮೂಲಕ ರಚನಾ ವಿನ್ಯಾಸವನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಒಂದು ಎರಡು ಮತ್ತು ಐದನೇ ಸಾಲಿನಲ್ಲಿ ಮೂರು ಮಾತ್ರೆಯ ಮೂರು ಗಣಗಳು ಇರುತ್ತದೆ. ಮೂರು ಮತ್ತು ನಾಲ್ಕನೇ ಸಾಲಿನಲ್ಲಿ ಬ ಪ್ರಾಸವಿದ್ದು ಮೂರು ಮೂರು ಮಾತ್ರೆಗಳ ಎರಡು ಗಣಗಳು ಇರುತ್ತವೆ ಎಂಬ ಮಾಹಿತಿಯೊಂದಿಗೆ ಕನ್ನಡ ಮತ್ತು ಇಂಗ್ಲಿಷ್ ನ ಅನೇಕ ಲಿಮರಿಕ್ ಕಾವ್ಯಗಳನ್ನು ಉಲ್ಲೇಖಿಸುತ್ತಾ ಈ ಸಾಹಿತ್ಯ ಪ್ರಕಾರದ ಬಗ್ಗೆ ಅಮೂಲ್ಯವಾದ ವಿಶ್ಲೇಷಣೆ ಮಾಡಿದ್ದಾರೆ. ನಾವು ಕನ್ನಡದಲ್ಲಿ ಶ್ಲೋಕಗಳನ್ನು ಬಳಸುವಂತೆ ಲಿಮರಿಕ್ ಗಳನ್ನು ಉಪನ್ಯಾಸಗಳಲ್ಲಿ ಬಳಸುವ ವಿಚಾರವನ್ನು ತಿಳಿಸಿದ್ದಾರೆ. ಸಮಾಜದ ವಿಮರ್ಶೆಗೆ ಒದಗಿಸಿರುವ ಅಕ್ಷರ-ವ್ಯಂಗ್ಯ ಚಿತ್ರಗಳಾಗಿಯೂ ಬಳಸುವ ಹಲವಾರು ಅಂಶಗಳನ್ನು ಉದಾಹರಣೆ ಸಹಿತ ನಿರೂಪಿಸಿದ್ದಾರೆ.

ಇಲ್ಲಿ ಒಂದು ಅಧ್ಯಾಯವನ್ನು ಹೊರತುಪಡಿಸಿ ಉಳಿದ ಲೇಖನಗಳು ಇತರರ ಸಾಹಿತ್ಯವನ್ನು ವಿವರಿಸಿಸುತ್ತಲೇ ವಿಮರ್ಶೆ ಮಾಡುವ ವಿಧಾನಗಳನ್ನು ಕಲಿಸುತ್ತಾ ಸಾಗುತ್ತವೆ. ಅಧ್ಯಯನ, ಮಾಹಿತಿ ಸಂಗ್ರಹಣೆ, ಸಂಗ್ರಹಿತ ವಿಚಾರಗಳ ಶೋಧನೆ, ಆಧಾರಗಳ ವಸ್ತುನಿಷ್ಠ ವಿಮರ್ಶೆ ಇವರ ವಿಮರ್ಶೆಯ ಮಾನದಂಡಗಳಾಗಿ ಕೃತಿಯ ಮೌಲ್ಯ ನಿರ್ಧರಿಸುತ್ತವೆ.

ಒಟ್ಟಾರೆ ಡಾ. ಜನಾರ್ದನ ಭಟ್ ಅವರ ಈ ಒಂದು ಕೃತಿ ಅರ್ಥಪೂರ್ಣವಾಗಿ ಮೂಡಿಬಂದಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುವೆ.
                      ********
                                       *ಅನುಸೂಯ ಯತೀಶ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಹತ್ವದ ವಿಮರ್ಶಾ ಕೃತಿ – ‘ವಿನೂತನ ಕಥನ ಕಾರಣ’”

  1. Dr Madhavi S Bhandary

    ವಿನೂತನ ಕಥನ ಕಾರಣ ಪುಸ್ತಕ ಪರಿಚಯಿಸಿ ಅದನ್ನು ಓದುವ ಆಸಕ್ತಿ ಹೆಚ್ಚಿಸಿದ ಅನಸೂಯಾರವರಿಗೆ ಧನ್ಯವಾದಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter