ಹೊಂಗಿರಣ

ಚಿತ್ರ: ಮಂಗಳಾ ಶೆಟ್ಟಿ

ಸಮಯ ಓಡುತ್ತಿತ್ತು. ಭಾಗ್ಯಾ ಕೈಗಡಿಯಾರದ ಕಡೆಗೆ ನೋಡಿಕೊಂಡಳು. `ತಡವಾಗಿದೆ, ಕಂಪನಿಯ ಬಸ್ಸು ಸಿಗುವುದೋ ಇಲ್ಲವೋ...?' ಎಂದು ಗೊಣಗಿಕೊಳ್ಳುತ್ತಾ ಫ್ಯಾಕ್ಟರಿಗೆ ಹೋಗುವ ಕಂಪನಿಯ ಬಸ್ಸು ನಿಲ್ಲುವ ನಿಲುಗಡೆಯ ಸ್ಥಳದತ್ತ ದಾಪುಗಾಲಿಡತೊಡಗಿದಳು.
"ಮೇಡಂ, ಐದು ನಿಮಿಷಗಳ ಹಿಂದೇನೇ ನಿಮ್ಮ ಬಸ್ಸು ಹೋಯಿತು. ನೀವಿವತ್ತು ಯಾಕೋ ಲೇಟು?" ಭಾಗ್ಯಾ ಬಸ್ಟಾಪಿಗೆ ಬರುತ್ತಲೇ ದಿನಾಲೂ ಅಲ್ಲಿ ಭಾಗ್ಯಾಳೊಂದಿಗೆ ಬೇರೆ ಬಸ್ಸಿಗಾಗಿ ದಾರಿ ಕಾಯುವ ಅವಳದೇ ವಯಸ್ಸಿನ ಹುಡುಗಿ ಪೂರ್ಣಿಮಾ ಹೇಳಿದಾಗ ದಿಗಿಲುಗೊಂಡಳು. 
"ಹೌದಾ...?" ಎಂದೆನ್ನುವಷ್ಟರಲ್ಲಿ ಪೂರ್ಣಿಮಾಳ ಬಸ್ಸು ಬಂತು. ಭಾಗ್ಯಾಳಿಗೆ ಬೈ ಹೇಳಿ ಕೈಯಾಡಿಸುತ್ತಾ ಪೂರ್ಣಿಮಾ ಬಸ್ಸೇರಿದಾಗ ಭಾಗ್ಯಾ ಅಧೀರಳಾದಳು. 
ಅಲ್ಲಿಂದ ನಾಲ್ಕು ಕಿಮೀ ದೂರದ, `ಪೃಥ್ವಿ ಗಾರ್ಮೆಂಟ್ಸ್' ಫ್ಯಾಕ್ಟರಿಯಲ್ಲಿ ಭಾಗ್ಯಾ ಕೆಲಸ ಮಾಡುವುದು. ಬೆಳಿಗ್ಗೆ ಒಂಭತ್ತು ಗಂಟೆಗೆ ಆ ಪಾಯಿಂಟ್‍ಗೆ ಫ್ಯಾಕ್ಟರಿಯ ಬಸ್ಸು ಬರುತ್ತಿತ್ತು. ಆ ಸ್ಥಳದಲ್ಲಿ ಭಾಗ್ಯಾ ಒಬ್ಬಳೇ ಬಸ್ಸು ಹತ್ತುವುದು. ಇಂದು ಮನೆಯಿಂದ ಅಲ್ಲಿಗೆ ಬರುವಷ್ಟರಲ್ಲಿ ಒಂಭತ್ತು ಹತ್ತಾಗಿತ್ತು. ಆ ಕಡೆಗೆ ಅಟೋಗಳು ಓಡಾಡುವುದೂ ಕಡಿಮೇನೇ? ಭಾಗ್ಯಾ ಗಲಿಬಿಲಿಗೊಂಡಳು. ಗಾಬರಿಗೂ ಬಿದ್ದಳು. ಉಸಿರಾಟ ಒಂದಿಷ್ಟು ಜೋರಾಗಿ ಎದೆಯ ಏರಿಳಿತ ಶುರುವಾಯಿತೆನ್ನಿ. `ಸರಿ, ಆಗಿದ್ದು ಆಗಿ ಹೋಗಿದೆ. ಈಗೇನು ಮಾಡುವುದು? ಫ್ಯಾಕ್ಟರಿಯ ಕಡೆಗಿನ ಸರಕಾರಿ ಬಸ್ಸುಗಳನ್ನು ಹಿಡಿಯಲು ಬಸ್ನಿಲ್ದಾಣಕ್ಕೆ ಹೋಗುವುದು, ಅಲ್ಲಿ ತಕ್ಷಣ ಬಸ್ ಸಿಗದಿದ್ದರೆ ತುಂಬಾ ತಡವಾಗಿ ಬಿಡುತ್ತದೆ. ಫ್ಯಾಕ್ಟರಿಯ ಸೈರನ್ ಮೊಳಗುವುದಕ್ಕಿಂತ ಮುಂಚೆ ಹೋದರೆ ಮರ್ಯಾದೆ. ಮೊದಲೇ ಬಾಸ್ ತುಂಬಾ ಸ್ಟ್ರಿಕ್ಟ್. ಅಷ್ಟೇ ಖಡಕ್! ನೂರಾರು ಕನಸುಗಳನ್ನು ಹೊತ್ತುಕೊಂಡು ಫ್ಯಾಕ್ಟರಿಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿದ್ದಾರೆ. ಇವತ್ತೊಂದು ದಿನ ಗೈರಾದರೆ ಸುಮ್ಮನೇ ಹಾಜರಾತಿ ಕಡಿಮೆ ಆಗುತ್ತೆ. ಯಾವುದಾದರೂ ಅಟೋ ಹಿಡಿದು ಹೋದರೆ ಫ್ಯಾಕ್ಟರಿಯ ಸಮಯಕ್ಕೆ ಹೋಗಬಹುದು. ಅಟೋ ಚಾರ್ಜ್ ತುಂಬಾ ದುಬಾರಿಯಾಗಬಹುದು. ದುಡ್ಡು ಹೋದರೆ ಹೋಗಲಿ. ಅಟೋ ಹಿಡಿದು ಹೋಗುವುದೇ ಲೇಸು' ಎಂದು ಮನದಲ್ಲಿಯೇ ಮಥಿಸಿಕೊಂಡ ಭಾಗ್ಯಾ ಅಟೋಗಳಿಗಾಗಿ ಕಣ್ಣಾಡಿಸಿದಳು. 

ಫ್ಯಾಕ್ಟರಿಯ ಕಡೆಗೆ ಹೋಗುವ ರಸ್ತೆಯಲ್ಲಿ ದೌಡಾಯಿಸುತ್ತಿದ್ದ ಅಟೋಗಳಿಗೆ ಕೈಮಾಡಿದಳು. ಒಂದೆರಡು ಅಟೋಗಳು ಪ್ರಯಾಣಿಕರಿಲ್ಲದೇ ಚಲಿಸುತ್ತಿದ್ದರೂ ನಿಲ್ಲಲಿಲ್ಲ. ಒಂದೆರಡು ಅಟೋಗಳು ಹೇಗೋ ನಿಂತವು. ಅಟೋ ಚಾಲಕ ಹೇಳಿದ ಚಾರ್ಜ್ ತುಂಬಾ ಅತಿ ಎನಿಸಿತು. ಅವಳ ಆ ದಿನದ ಸಂಪಾದನೆಯ ಅರ್ಧದಷ್ಟಾಗುತ್ತಿತ್ತು. ಒಬ್ಬಿಬ್ಬರು ಅಟೋ ನಿಲ್ಲಿಸಿದರೂ, `ಅಲ್ಲಿಗೆ ಹೋಗುವುದಿಕ್ಕಾಗುವುದಿಲ್ಲ' ಎಂದೆನ್ನುತ್ತಾ ಮುನ್ನಡೆದಿದ್ದರು. ಆಗ ಭಾಗ್ಯಾ ನಿಜವಾಗಿಯೂ ದಿಗಿಲು ಬಿದ್ದಳು. ಅಷ್ಟರಲ್ಲಿ ಕಾರೊಂದು ಅವಳ ಮುಂದೆಯೇ ತುಸು ದೂರ ಮುಂದೆ ಹೋಗಿ ನಂತರ ರಿವರ್ಸ ಗೇರಿನಲ್ಲಿ ನಿಧಾನವಾಗಿ ಅವಳ ಸಮೀಪ ಬಂದಾಗ ಭಾಗ್ಯಾಳಿಗೆ ಗೊತ್ತಾಯಿತು, ಅದು ಅವಳ ಬಾಸ್‍ದು ಎಂದು. `ಅರೇ ಬಾಸ್ ಕಾರು...' ಎಂದು ಮನದೊಳಗೇ ಉದ್ಘರಿಸಿದಳು. ಕಾರು ಅವಳ ಪಕ್ಕ ನಿಲ್ಲುತ್ತಲೇ ಕಿಟಕಿಯ ಗ್ಲಾಸ್ ತೆರೆಯಿತು. ಅವಳ ಬಾಸ್ ಪೃಥ್ವಿ ಕಾರಲ್ಲಿ ಬಂದು ಕುಳಿತುಕೊಳ್ಳಲು ಹೇಳಿದ. ಭಾಗ್ಯಾ ಫೃಥ್ವಿಗೆ ನಮಸ್ಕರಿಸುತ್ತಾ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಹೋದಾಗ ಮುಂದೆಯೇ ಕುಳಿತುಕೊಳ್ಳಲು ಹೇಳಿದ. `ಥ್ಯಾಂಕ್ಸ್ ಸರ್' ಎಂದೆನ್ನುತ್ತಾ, ಮುಜುಗರಪಟ್ಟುಕೊಳ್ಳುತ್ತಾ ಮುಂದಿನ ಸೀಟಿನಲ್ಲಿ ಮುದುಡಿಕೊಂಡು ಕುಳಿತಳು. 
"ಆರಾಮಾಗಿ ಸರಿಯಾಗಿ ಕುಳಿತುಕೊಳ್ಳಿರಿ. ಯಾಕೆ ಬಸ್ ಮಿಸ್ಸಾಯಿತಾ...?"
"ಹೌದ್ರೀ ಸರ್. ಐದು ನಿಮಿಷದಲ್ಲಿ ಬಸ್ಸು ಮಿಸ್ಸಾಯಿತು. ಅಟೋ ಹಿಡಿದುಕೊಂಡು ಹೋಗಬೇಕೆಂದೆ. ಕೆಲವೊಬ್ಬರು ಆ ಕಡೆಗೆ ಬರುವುದಿಲ್ಲವೆಂದರು, ಕೆಲವೊಬ್ಬರು ನಿಲ್ಲಿಸಲೇ ಇಲ್ಲ, ಕೆಲವೊಬ್ಬರು ಬಹಳಷ್ಟು ಹಣ ಕೇಳಿದರು. ಏನು ಮಾಡಬೇಕೆಂಬ ಯೋಚನೆಯಲ್ಲಿದ್ದೆ. ಅಷ್ಟರಲ್ಲಿ ಆಪದ್ಬಾಂಧವರಾಗಿ ನೀವು ಬಂದಿರಿ. ನಿಮ್ಮದು ದೊಡ್ಡ ಮನಸ್ಸು ಸರ್. ನನ್ನಂಥಹ ಯಕಶ್ಚಿತ್ ಕೆಲಸಗಾರಳನ್ನು ಕಾರಿನಲ್ಲಿ ಕರೆದುಕೊಂಡು ಹೊರಟಿದ್ದೀರಿ." 
"ನೀವು ಏನು ಹೇಳಿದ್ರಿ...? ಯಕಶ್ಚಿತ್ ಕೆಲಸಗಾರಳು ಅಂತ ತಾನೇ...? ನಿಮ್ಮಂಥಹ ಕೆಲಸಗಾರರ ಪ್ರಾಮಾಣಿಕ ಬೆವರಿನ ದುಡಿಮೆಯಿಂದ ಇವತ್ತು ನಾನು ಈ ಕಾರಿನಲ್ಲಿ ಓಡಾಡುತ್ತಿದ್ದೇನೆ ಎಂದರೆ ತಪ್ಪಾಗಲಾರದು. ಇರಲಿ, ನಿಮ್ಮ ಹೆಸರು ಏನ್ರೀ...?"
"ಭಾಗ್ಯಾ ಸರ್."
"ತುಂಬಾ ಮುದ್ದಾದ ಹೆಸರು. ನೀವೇನು ಓದಿದ್ದೀರಿ?" 
"ಸರ್, ನಾನು ಬಿಎಸ್ಸಿ ಪಾಸಾಗಿದ್ದೇನೆ. ಬಿಎಡ್ ಮಾಡಿಕೊಂಡು ಟೀಚರ್ ನೌಕರಿಗೆ ಪ್ರಯತ್ನಿಸಬೇಕೆಂದುಕೊಂಡಿದ್ದೆ..."
"ಬಿಎಸ್ಸಿ ಪದವೀಧರರಾ...? ಓಹ್ ಗ್ರೇಟ್! ಮತ್ತೆ ಯಾಕೆ ಬಿಎಡ್ ಮಾಡಿಕೊಳ್ಳಲಿಲ್ಲ...? ಪದವೀಧರರಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲೇಕೆ ಕೆಲಸಕ್ಕೆ ಬಂದಿರುವಿರಿ?"
"ಹೀಗೇ ಕೌಟುಂಬಿಕ ತಾಪತ್ರಯ ಸರ್. ಅಲ್ಲಿ, ಇಲ್ಲಿ ನೌಕರಿಗೆ ಅರ್ಜಿ ಹಾಕಿದೆ. ಎಲ್ಲೂ ಕೆಲಸ ಸಿಗಲಿಲ್ಲ. ಮನೆಯಲ್ಲಿ ಅಮ್ಮ ಒಂದಿಷ್ಟು ಹೊಲಿಗೆ ಕೆಲಸ ಮಾಡುತ್ತಾಳೆ. ಅಪಘಾತವೊಂದರಲ್ಲಿ ಅಪ್ಪನ ಕಾಲಿಗೆ ಊನವಾಗಿದೆ. ಒಬ್ಬ ತಮ್ಮ, ಒಬ್ಬ ತಂಗಿ ಇದ್ದಾರೆ. ಅಮ್ಮನ ಹೊಲಿಗೆ ಆದಾಯದಿಂದ ಮನೆ ನಡೆಯುತ್ತಿದೆ. ನಾನೂ ಒಂದಿಷ್ಟು ಹೊಲಿಗೆ ಕಲಿತಿದ್ದರಿಂದ ನಿಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಸಿಕ್ಕಿದೆ ಸರ್. ಕುಟುಂಬದ ಜವಾಬ್ದಾರಿಗೆ ನಾನೂ ಹೆಗಲು ಕೊಟ್ಟಿದ್ದೇನೆ."
 "ಹೌದಾ...?" ಎಂದೆನ್ನುತ್ತಾ ಪೃಥ್ವಿ ಭಾಗ್ಯಾಳ ಕಡೆಗೊಮ್ಮೆ ಕುಡಿನೋಟ ಬೀರಿದ. `ಬಳುಕುವ ಬಳ್ಳಿಯಂಥಹ, ತೆಳ್ಳನೆಯ ಮೈಕಟ್ಟಿನ ಚೆಂದದ ಹುಡುಗಿ ಭಾಗ್ಯಾ' ಎಂದಂದುಕೊಂಡ ಮನದಲ್ಲೇ.
"ನೀವು ಯಾವ ಸೆಕ್ಷನ್‍ದಲ್ಲಿ ಕೆಲಸ ಮಾಡುತ್ತಿರುವುದು...?"
"ಮಕ್ಕಳ ಫ್ರಾಕ್ ಹೊಲಿಯುವ ಸೆಕ್ಷನ್‍ದಲ್ಲಿ ಸರ್." ಅಷ್ಟರಲ್ಲಿ ಫ್ಯಾಕ್ಟರಿ ಬಂತು. ಫ್ಯಾಕ್ಟರಿಯ ಗೇಟ್ ದಾಟುತ್ತಲೇ ಭಾಗ್ಯಾ ಕಾರಿನಿಂದಿಳಿದು ಪೃಥ್ವಿಗೆ ಕೃತಜ್ಞತಾಭಾವದಿಂದ ಮತ್ತೊಮ್ಮೆ ಧನ್ಯವಾದ ಹೇಳಿ ತನ್ನ ಕೆಲಸಕ್ಕೆ ಹೊರಟಳು. ಭಾಗ್ಯಾ ಬಾಸ್ ಕಾರಿನಲ್ಲಿ ಬಂದಿದ್ದು ಒಂದಿಷ್ಟು ಕೆಲಸಗಾರರ ಗಮನಕ್ಕೆ ಬಂದು ಹುಬ್ಬೇರಿಸುವಂತೆ ಮಾಡಿತ್ತು. 
                    **** 
ಬಟ್ಟೆಗಳನ್ನು ವಿವಿಧ ವಿನ್ಯಾಸದಲ್ಲಿ ಕತ್ತರಿಸಿ ಕೊಡುವುದು ಫ್ಯಾಕ್ಟರಿಯ ಪರಿಣಿತ ಟೇಲರ್‍ಗಳ ಕೆಲಸ. ಕತ್ತರಿಸಿ ಕೊಟ್ಟಿದ್ದನ್ನು ಸರಿಯಾಗಿ ಹೊಲಿದು ಕೊಡುವುದು ಬೇರೆ ಕೆಲಸಗಾರರ ಕೆಲಸ. ಅಂಥಹ ಕೆಲಸಗಾರರಲ್ಲಿ ಭ್ಯಾಗ್ಯಾಳೂ ಒಬ್ಬಳು. ಅದೂ ಫ್ರಾಕ್ ಹೊಲಿಯುವ ಸೆಕ್ಷನ್‍ದಲ್ಲಿ. ಎಲ್ಲಾ ಸೆಕ್ಷೆನ್‍ಗಳಿಗೆ ಪೃಥ್ವಿ ಆಗಾಗ ರೌಂಡ್ಸ್ ಹೊಡೆಯುವುದು ಸಾಮಾನ್ಯ. ಭಾಗ್ಯಾಳ ಸೆಕ್ಷನ್‍ದಲ್ಲಿ ಕೆಲಸ ಮಾಡುವ ಸಮಯದಲ್ಲಿ ಅವಳನ್ನು ನೋಡಿದ್ದನಾದರೂ ಹೆಚ್ಚಿನ ಗಮನ ಕೊಟ್ಟಿರಲಿಲ್ಲ. ಆ ಸೆಕ್ಷನ್‍ದ ಸೂಪರ್‍ವೈಜರ್ ಆಗಾಗ ಅಲ್ಲಿ ಕೆಲಸ ಮಾಡುವವರ ಕಾರ್ಯಕ್ಷಮತೆಯ ಬಗ್ಗೆ ಪೃಥ್ವಿಗೆ ವರದಿ ಒಪ್ಪಿಸುತ್ತಿದ್ದ. ಭಾಗ್ಯಾಳ ಕೆಲಸದ ಬಗ್ಗೆ ಸೂಪರ್‍ವೈಜರ್‍ನ ಮೆಚ್ಚುಗೆಯ ಮಾತುಗಳನ್ನು ಕೇಳಿಸಿಕೊಂಡಿದ್ದನಾದರೂ ಖುದ್ದಾಗಿ ಅವಳ ಕೆಲಸವನ್ನು ಪರಿಶೀಲಿಸಿರಲಿಲ್ಲ ಪೃಥ್ವಿ.
ಎಂದಿನಂತೆ ಅಂದು ಭಾಗ್ಯಾ ತನ್ನ ಹೊಲಿಗೆ ಯಂತ್ರದಲ್ಲಿ ಮಾಸ್ಟರ್ ಟೇಲರ್ ಕತ್ತರಿಸಿಕೊಟ್ಟಿದ್ದ ಫ್ರಾಕನ್ನು ಹೊಲಿಯುವುದರಲ್ಲಿ ಮಗ್ನಳಾಗಿದ್ದಳು. ಆ ಶೆಡ್ಡಿನಲ್ಲಿ ಆರರಿಂದ ಹತ್ತು ವರ್ಷಗಳ ಮಕ್ಕಳಿಗೆ ಫ್ರಾಕ್ ಹೊಲಿಯುತ್ತಿದ್ದರು. ಭಾಗ್ಯಾಳ ಪಾಲಿಗೆ ಎಂಟು ವರ್ಷಗಳ ಮಕ್ಕಳಿಗೆ ಫ್ರಾಕ್ ಹೊಲಿಯುವ ಜವಾಬ್ದಾರಿ ಇತ್ತು. ಪೃಥ್ವಿ ಅದೇ ಸೆಕ್ಷನ್‍ಗೆ ರೌಂಡ್ಸ್‍ಗೆ ಬಂದಿದ್ದ. ಕೆಲಸಗಾರರೆಲ್ಲರೂ ಎದ್ದುನಿಂತು ಪೃಥ್ವಿಗೆ ನಮಸ್ಕಾರ ಹೇಳುತ್ತಾ ಅವನಿಗೆ ಸ್ವಾಗತ ಕೋರಿದ್ದರು. ಪ್ರತಿಯೊಬ್ಬರ ಕಾರ್ಯ ವೈಖರಿಯನ್ನು ಪರಿಶೀಲಿಸುತ್ತಾ ಅವರ ಹೊಲಿಗೆಯ ಗುಣಮಟ್ಟವನ್ನು ಪರಾಮರ್ಶಿಸತೊಡಗಿದ್ದ. ಹೀಗೆ ಪರಿಶೀಲಿಸುತ್ತಾ, ಪರಿಶೀಲಿಸುತ್ತಾ ಸೂಕ್ತ ಸಲಹೆ ಸೂಚನೆಗಳನ್ನು ಕೊಡುತ್ತಾ ಪೃಥ್ವಿ ಭಾಗ್ಯಾಳ ಹೊಲಿಗೆ ಯಂತ್ರದ ಹತ್ತಿರ ಬಂದ. ಅವನು ಸಮೀಪ ಬರುತ್ತಲೇ ಭ್ಯಾಗ್ಯಾ ಮತ್ತೊಮ್ಮೆ ಎದ್ದುನಿಂತು ವಿನೀತಭಾವದಲ್ಲಿ ಗೌರವ ನೀಡಿದಳು. ಅವಳು ಹೊಲಿಯುತ್ತಿದ್ದುದನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿ ಪೃಥ್ವಿ ಮುಂದೆ ಹೋಗುವವನಿದ್ದ.
"ಸರ್, ಒಂದು ವಿಷಯ. ತಮಗೆ ಸಮಯವಿದ್ದರೆ ಹೇಳುವೆ..." ಎಂದು ಮೆಲ್ಲಗೆ ಉಲಿದಳು ವಿನಮ್ರಳಾಗಿ ಮೊಗದಲ್ಲಿ ನಗೆಮಲ್ಲಿಗೆ ಸೂಸುತ್ತಾ.
"ಓಕೆ, ಓಕೆ. ಗೋ ಅಹೆಡ್." ಫೃಥ್ವಿ ಸಹ ಅಷ್ಟೇ ಕೂಲಾಗಿ ಹೇಳಿದ ಅವಳ ಚೆಲುವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುತ್ತಾ.
"ಸರ್, ಮಕ್ಕಳ ಈ ಫ್ರಾಕ್‍ಗಳ ಕುತ್ತಿಗೆ ಕೆಳಗಿನ ಮುಂಭಾಗದ ಡಿಸೈನನ್ನು ನಾವು ಇನ್ನೂ ಆಕರ್ಷಕವಾಗಿ ಹೊಲಿಯಬಹುದು. ಅದು ಈಗಿನ ಟ್ರೆಂಡ್ ಸಹ. ಮನೆಯಲ್ಲಿ ಅಮ್ಮ ಮತ್ತು ನಾನು ಅದೇ ರೀತಿಯ ಡಿಸೈನಿನ ಫ್ರಾಕ್ ಹೊಲಿಯುತ್ತಿದ್ದೇವೆ. ಈಗಿನ ಗ್ರಾಹಕರಿಂದ ಅದೇ ರೀತಿಯ ಫ್ರಂಟ್ ಲುಕ್‍ಗೆ ತುಂಬಾ ಡಿಮ್ಯಾಂಡ್ ಇದೆ..."
"ಹೌದಾ...? ಅದ್ಹೇಗೆ...? ಸ್ವಲ್ಪ ವಿವರಿಸುವಿಯಾ...?"
"ಸರ್, ಆ ರೀತಿಯ ಡಿಜೈನಿನ ಫ್ರಾಕೊಂದನ್ನು ನಾನು ತಂದಿದ್ದೇನೆ. ನನ್ನ ಪರ್ಸನಲ್ ಸಾಮಾನುಗಳ ಜೊತೆ ಅದು ಕೌಂಟರಿನಲ್ಲಿದೆ...?"
"ಹೌದಾ...? ಹಾಗಾದರೆ ಒಂದು ಕೆಲಸ ಮಾಡು. ನಾನು ಈ ರೌಂಡ್ಸ್ ಮುಗಿಸಿ ಇನ್ನರ್ಧ ಗಂಟೆಯಲ್ಲಿ ನನ್ನ ಚೇಂಬರಿನಲ್ಲಿ ಇರುತ್ತೇನೆ. ಅಲ್ಲಿಗೆ ನಮ್ಮ ಟೇಲರನ್ನು ಕರೆಸುತ್ತೇನೆ. ಆಗ ನೀನೂ ಅಲ್ಲಿಗೆ ಆ ಫ್ರಾಕಿನ ಜೊತೆಗೆ ಬಂದುಬಿಡು. ನೀನೇ ಟೇಲರಿಗೆ ಎಕ್ಸ್‍ಪ್ಲೇನ್ ಮಾಡಿಬಿಟ್ಟರೆ ಒಳ್ಳೆಯದು ಎಂದು ನನ್ನ ಅನಿಸಿಕೆ. ಓಕೇನಾ...?"
"ಸರಿ ಸರ್. ಹಾಗೇ ಮಾಡುವೆ." ಫೃಥ್ವಿ ಮುಂದೆ ಹೆಜ್ಜೆಹಾಕಿದ. 
ಭಾಗ್ಯಾ ತನ್ನ ಕೈಚೀಲದಲ್ಲಿದ್ದ ಫ್ರಾಕನ್ನು ತೆಗೆದುಕೊಂಡು ಪೃಥ್ವಿಯ ಚೇಂಬರಿಗೆ ಹೋಗುವಷ್ಟರಲ್ಲಿ ಟೇಲರ್ ರಾಜೂ ಸಹ ಬಂದ. ಪೃಥ್ವಿಯ ಟೇಬಲ್ ಮೇಲೆ ತಾನು ತಂದಿದ್ದ ಫ್ರಾಕನ್ನು ಹರವಿದಳು. `ಓಹ್! ತುಂಬಾ ಆಕರ್ಷಕ. ರಿಯಲೀ ಬ್ಯೂಟಿಫುಲ್!' ಎಂದು ಉದ್ಘರಿಸಿದ ಪೃಥ್ವಿ ಆ ಫ್ರಾಕನ್ನು ನೋಡುತ್ತಲೇ. ಭಾಗ್ಯಾಳ ಕಡೆಗೆ ಮೆಚ್ಚುಗೆಯ ನೋಟವನ್ನೂ ಹರಿಸಿದ. `ರಾಜೂ, ಹೇಗಿದೆಯೋ ಈ ಡಿಜೈನ್...?' ಎಂದೆನ್ನುತ್ತಾ ರಾಜೂನ ಮುಖ ದಿಟ್ಟಿಸಿದ. `ಸರ್, ನಿಜವಾಗಿಯೂ ತುಂಬಾ ಆಕರ್ಷಕವಾದ ಡಿಜೈನ್. ತುಂಬಾ ಇಷ್ಟವಾಯಿತು ಸರ್. ಅಷ್ಟೇ ಟ್ರೆಂಡಿಯಾಗಿಯೂ ಇದೆ. ಮಾರ್ಕೆಟ್ಟಿನಲ್ಲಿ ಒಳ್ಳೇ ಬೇಡಿಕೆ ಬರಬಹುದು' ಎಂದು ರಾಜೂ ಸಹ ತನ್ನ ಮೆಚ್ಚುಗೆ ವ್ಯಕ್ತಪಡಿಸಿದ. `ಭಾಗ್ಯಾ, ರಿಯಲೀ ಸೂಪರ್! ಈ ಡಿಜೈನನ್ನು ನಮ್ಮ ಫ್ಯಾಕ್ಟರಿಯಲ್ಲಿ ತಕ್ಷಣ ಶುರುಮಾಡೋಣ. ರಾಜೂ, ಮೊದಲು ಆರರಿಂದ ಹತ್ತು ವರ್ಷದ ಮಕ್ಕಳಿಗೆ ಈ ಡಿಜೈನ್ ಸ್ಟಾರ್ಟ ಮಾಡೋಣ. ಏನಂತೀದಿ...?' `ಒಳ್ಳೆಯದು ಸರ್. ಹಾಗೇ ಮಾಡೋಣ.' `ಹಾಗಾದರೆ ಇದನ್ನು ತೆಗೆದುಕೊಂಡು ಹೋಗಿ ಉಳಿದ ನಿನ್ನ ಫ್ರೆಂಡ್ಸ್‍ಗೆ ನಾನು ಹೇಳಿರುವೆಂದು ಹೇಳಿ ಕಟಿಂಗ್ ಕೆಲಸ ಶುರುಮಾಡಿಬಿಡು.' `ಓಕೇ ಸರ್' ಎಂದೆನ್ನುತ್ತಾ ರಾಜೂ ಹೊರಟ. ಭಾಗ್ಯಾಳೂ, `ಸರ್ ನಾನು ಬರುವೆ' ಎಂದಾಗ, `ಭಾಗ್ಯಾ, ನೀವು ಒಳ್ಳೇ ಐಡಿಯಾ ಕೊಟ್ಟಿರುವಿರಿ. ಕಂಪನಿಯ ವತಿಯಿಂದ ನಿಮಗೆ ಧನ್ಯವಾದಗಳು ಮತ್ತು ಅಭಿನಂದನೆಗಳು. ಹೇಗೂ ವಿಜಯದಶಮಿ ಮತ್ತು ದೀಪಾವಳಿ ಹಬ್ಬಗಳು ಸಮೀಪದಲ್ಲೇ ಇವೆ. ಅಷ್ಟರಲ್ಲಿ ಈ ಟ್ರೆಂಡಿಯ ಫ್ರಾಕನ್ನು ಮಾರುಕಟ್ಟೆಗೆ ಬಿಟ್ಟುಬಿಡೋಣ. ಮಾರ್ಕೆಟ್ಟಿನಲ್ಲಿ ಹೇಗೆ ಓಡುತ್ತೆ ಅಂತ ಗಮನಿಸೋಣ. ಅದೇನೇ ಇರಲಿ, ನಮ್ಮ ಕಂಪನಿಗೆ ಒಂದೊಳ್ಳೆಯ ಡಿಜೈನ್ ಕೊಟ್ಟಿದ್ದಕ್ಕೆ ಮತ್ತೆಮ್ಮೊ ಥ್ಯಾಂಕ್ಸ್. ದೀಪಾವಳಿಗೆ ನಿಮಗೊಂದು ಒಳ್ಳೇ ಗಿಫ್ಟನ್ನೂ ಕೊಡೋಣ.' `ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಸರ್. ಗಿಫ್ಟ್‍ನ್ನು ಎಕ್ಸಪೆಕ್ಟ್ ಮಾಡುವವಳಲ್ಲ ನಾನು. ಕಂಪನಿಗೆ ಒಳ್ಳೇ ಮಾರುಕಟ್ಟೆ ಸಿಕ್ಕರೆ ಸಾಕು ಅಷ್ಟೇ. ಜನರಿಗೆ ಮೆಚ್ಚಿಗೆಯಾದರೆ ನಾನು ಧನ್ಯಳು. ಥ್ಯಾಂಕ್ಯೂ ಸರ್' ಎಂದೆನ್ನುತ್ತಾ ಭಾಗ್ಯಾ ಹಂಸಗಮನೆಯಾಗಿ ಪೃಥ್ವಿಯ ಚೇಂಬರಿನಿಂದ ಮೆಲ್ಲಗೇ ಹೆಜ್ಜೆ ಹಾಕಿದಳು.
                    **** 
ಭಾಗ್ಯಾ ಫೃಥ್ವಿಯ ಚೇಂಬರಿಗೆ ಹೋಗಿ ಬಂದಿದ್ದು ಅವಳ ಶೆಡ್ಡಿನಲ್ಲಿದ್ದ ಬಹಳಷ್ಟು ಕೆಲಸಗಾರರಿಗೆ ಸುದ್ದಿಯಾಗಿಬಿಟ್ಟಿತು. 
"ಏನೇ ಭಾಗ್ಯಾ, ಬಾಸ್ ಚೇಂಬರಿಗೆ ಹೋಗಿದ್ದೆಯಂತೆ...? ಹೇಗಿತ್ತು ಟ್ರೀಟ್‍ಮೆಂಟ್...? ತುಂಬಾ ಹುಷಾರು ಕಣೇ. ಬಾಸ್ ಜಂಟ್ಲಮನ್ ಅಲ್ಲ. ಅವನೊಬ್ಬ ಕಾಮ ಪಿಪಾಸು. ನಿನ್ನಂಥಹ ಬಳುಕುವ ಬಳ್ಳಿಯನ್ನು ಅವನು ಹಾಗೇ ಸುಮ್ಮನೇ ಮಾತಾಡಿಸಿರಲಿಕ್ಕಿಲ್ಲ. ನಿನ್ನ ಮೈಕೈ ಮುಟ್ಟಿ-ತಟ್ಟಿ ಮಾತಾಡಿಸಿರಬೇಕಲ್ಲ...? ಹೆಂಗಸರ ಎದೆಯ ಮೇಲೆ ಕೈಯಾಡಿಸಿ ಮಾತಾಡಿಸುವ ಚಾಳಿ ಅವನಿಗಿದೆ. ಕಣ್ಣುಗಳಂತೂ ಹೆಣ್ಣಿನ ದೇಹದ ಮೇಲೇ ಹರಿದಾಡುತ್ತಿರುತ್ತವೆ. ಅವನ ಕಾಮಾಸಕ್ತಿಗೆ ರೋಸಿಹೋಗಿ ಅವನ ಹೆಂಡತಿ ಬದುಕಿ ಉಳಿದಿದ್ದೇ ದೊಡ್ಡ ಮಾತು. ಎಂಥಹ ಚೆಂದದ ಹುಡುಗಿ ಅವಳು! ಕೈತೊಳೆದುಕೊಂಡು ಮುಟ್ಟಬೇಕು ಎಂಬಂತಿದ್ದಳು. ರತಿಯ ಪ್ರತಿರೂಪವೇ ಅವಳು. ಇವನ ಹೆಣ್ಣುಬಾಕತನಕ್ಕೆ ಬೇಸತ್ತು ಇವನಿಂದ ಡೈವೋರ್ಸ ತೊಗೊಂಡುಬಿಟ್ಟಳು. ಪಾಪ ಅನಿಸುತ್ತೆ ಅವಳನ್ನು ಕಂಡರೆ. ತುಂಬಾ ಚಿತ್ರಹಿಂಸೆ ಕೊಟ್ಟುಬಿಟ್ಟ ಈ ಮನುಷ್ಯ. ಇವನಿಗೆ ಬಹಳಷ್ಟು ಜನ ಹೆಣ್ಣುಗಳೊಡನೆ ಸಂಬಂಧವಿದೆ. ಘನಘೋರ ಪಾಪಿ! ನೀನು ಕಂಪನಿಗೆ ಕೆಲಸಕ್ಕೆ ಸೇರುವ ಮುಂಚೆಯಷ್ಟೇ ವಿಚ್ಛೇದನವಾಗಿದೆ. ಇನ್ನೊಂದು ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದಾನೆ. ಇವನ ಬಗ್ಗೆ ಗೊತ್ತಿದ್ದವರು ಹೆಣ್ಣು ಕೊಡಲು ಮನಸ್ಸು ಮಾಡುತ್ತಿಲ್ಲ. ನೀನಿನ್ನೂ ಎಳೆ ನಿಂಬೆಕಾಯಿ. ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬುವ ವಯಸ್ಸು ನಿನ್ನದು. ಹುಷಾರಾಗಿರು...!" ಎಂದು ಅವಳ ಜೊತೆಗೆ ಕೆಲಸ ಮಾಡುವ ಮಾಲಾ ಒಂದೇ ಸಮನೆ ಬಡಬಡಿಸಿದಳು. ಭಾಗ್ಯಾಳಿಗಿಂತ ಮಾಲಾ ಆರೇಳು ವರ್ಷ ದೊಡ್ಡವಳು. ಸರ್ವೀಸಿನಲ್ಲೂ ಸೀನಿಯರ್. ಐದು ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿರುವ, ಇನ್ನೂ ಮದುವೆಯಾಗದ, ಮದುವೆ ವಯಸ್ಸು ಮೀರಿದ, ಮೂವತ್ತರ ಆಜು-ಬಾಜುವಿನ ಹುಡುಗಿ. ಮಾಲಾಳ ಮಾತುಗಳನ್ನು ಕೇಳಿಸಿಕೊಂಡ ಭಾಗ್ಯಾಳಿಗೆ ಪೆಚ್ಚೆನಿಸಿತು. ಎದೆ ಒಂದರೆಕ್ಷಣ ಧಸಕ್ಕೆಂದಿತು. ಅವಳು ಕೆಲಸಕ್ಕೆ ಸೇರಿ ಈಗಷ್ಟೇ ವರ್ಷವಾಗುತ್ತಿದೆ. ಯೋಚನೆಯಲ್ಲಿ ಬಿದ್ದಿತು ಅವಳ ಮನಸ್ಸು. `ಪೃಥ್ವಿ ಸರ್ ಹೀಗೆ ಬಿಹೇವ್ ಮಾಡುತ್ತಾರಾ...? ಅವರೊಂದಿಗೆ ಅಂಥಹ ಕೆಟ್ಟ ಅನುಭವವಂತೂ ನನಗಾಗಿಲ್ಲ. ಅವರು ಹಾಗಂತ ನನಗೆ ಅನಿಸಿಯೂ ಇಲ್ಲ. ಮೊನ್ನೆ ಅವರ ಜೊತೆಗೆ ಕಾರಲ್ಲಿ ಬರುವಾಗಲೂ ತುಂಬಾ ಸಭ್ಯರಂತೆಯೇ ಕಂಡರಲ್ಲ? ಮಾಲಾ ನೋಡಿದರೆ ಹೀಗೆ ಮಾತಾಡುತ್ತಾಳೆ. ಯಾವುದು ಸರಿ, ಯಾವುದು ತಪ್ಪು? ಒಂದೂ ಅರ್ಥವಾಗುತ್ತಿಲ್ಲ. ಆದರೂ ನಾನು ಹುಷಾರಾಗಿರುವುದಂತೂ ಲೇಸು' ಎಂದಂದುಕೊಂಡಳು ಭಾಗ್ಯಾ.
"ಮಾಲಾ, ನೀನು ಹೇಳುತ್ತಿರುವುದು ನಿಜವಾ...?"
"ನಾನಂತೂ ಸುಳ್ಳು-ಪಳ್ಳು ಹೇಳೋ ಹೆಣ್ಣಲ್ಲ?"
"ಹೌದಾ...? ನಿನಗೆ ಇಂಥಹ ಕೆಟ್ಟ ಅನುಭವ ಆಗಿದೆಯೇ...? ಬಾಸ್ ಇಷ್ಟು ಅನುಚಿತವಾಗಿ ವರ್ತಿಸಿದ್ದಾರೆಯೇ ನಿನ್ನೊಂದಿಗೆ...? ಅವರು ಇಂಥಹ ಗೋಮುಖ ವ್ಯಾಘ್ರರೇ...?"
"ಭಾಗ್ಯಾ, ಆ ತರಹದ ಅನುಭವ ನನಗಾಗಿಲ್ಲ."
"ಮತ್ತೆ...?"
"ಅದೇ ಈ ಶೆಡ್ಡಿನ ಮೂಲೆಯಲ್ಲಿ ಕೆಲಸ ಮಾಡುವ ನನ್ನ ಗೆಳತಿ ರಂಜಿತಾ ಹಾಗಂತ ಹೇಳಿದ್ದು."
"ಹೌದಾ...? ಹಾಗಾದರೆ ಅವಳನ್ನೇ ವಿಚಾರಿಸುವೆ" ಎಂದೆನ್ನುತ್ತಾ ಭಾಗ್ಯಾ ರಂಜಿತಾಳ ಹತ್ತಿರ ಹೋಗಿ ಮಾಲಾ ಹೇಳಿದ್ದನ್ನು ಹೇಳಿದಳು. ಅವಳೂ, `ಭಾಗ್ಯಾ, ಖುದ್ದಾಗಿ ನನಗೆ ಈ ಅನುಭವ ಆಗಿಲ್ಲ. ಹಾಗಂತ ಇನ್ನೊಂದು ಶೆಡ್ಡಿನಲ್ಲಿ ಕೆಲಸ ಮಾಡುವ ನನ್ನ ಗೆಳತಿ ಕುಸುಮಾ ಹೇಳಿದ್ದು' ಎಂದು ಇನ್ನೊಬ್ಬಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದಳು. ಊಟದ ಸಮಯದಲ್ಲಿ ಭಾಗ್ಯಾ ಕುಸುಮಾಳೊಂದಿಗೂ ವಿಚಾರಣೆಯನ್ನು ಮುಂದುವರಿಸಿದಳು. 
"ಅಯ್ಯೋ ಭಾಗ್ಯಾ, ಬಾಸ್ ನನ್ನೊಂದಿಗೆ ಯಾವತ್ತೂ ಅನುಚಿತವಾಗಿ ವರ್ತಿಸಿಲ್ಲ. ನನ್ನ ಗೆಳತಿ ಸೌಂದರ್ಯಾ ಹೇಳಿದ್ದ ಸಂಗತಿಯನ್ನು ನಾನು ರಂಜಿತಾಳಿಗೆ ಹೇಳಿದ್ದೆ ಅಷ್ಟೇ." ಕುಸುಮಾ ತನ್ನ ಮೈದಾನಕ್ಕೆ ಬಂದಿದ್ದ ಚೆಂಡನ್ನು ಸೌಂದರ್ಯಾಳ ಮೈದಾನಕ್ಕೆ ಎಸೆದು ಸುಮ್ಮನಾದಳು. ಸೌಂದರ್ಯ ಇನ್ಯಾರದೋ ಹೆಸರು ಹೇಳಿದಳು.
ತುಸು ಹೊತ್ತಿನಿಂದ ಅವರಿಂದ ಇವರು, ಇವರಿಂದ ಅವರ ಹತ್ತಿರ ಸುಳಿದಾಡುತ್ತಿದ್ದ ಭಾಗ್ಯಾಳ ಜೋಲು ಮುಖವನ್ನು ಕಂಡ ನಲವತ್ತರ ಆಜು-ಬಾಜುವಿನ ವಯಸ್ಸಿನ ಲಕ್ಷ್ಮಿ ಅವಳನ್ನು ತನ್ನ ಹತ್ತಿರ ಕರೆದು ವಿಚಾರಿಸಿದಳು. ಭಾಗ್ಯಾ ವಿವರಿಸಿದ ಎಲ್ಲವನ್ನೂ ಕೇಳಿಸಿಕೊಂಡ ಲಕ್ಷ್ಮಿ, `ಭಾಗ್ಯಾ, ಈ ಭೋಸುಡಿಯರ ಮಾತನ್ನು ನಂಬಬೇಡ. ನಾನು ಸುಮಾರು ಹದಿನೈದು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಬಾಸ್ ದೇವರಂಥಹ ಮನುಷ್ಯ. ಇಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಅಕ್ಕ-ತಂಗಿಯರಂತೆ ನೋಡಿಕೊಳ್ಳುತ್ತಿದ್ದಾರೆ. ಈ ತಾಟಗಿತ್ತಿಯರು ಕೆಲಸ ಮಾಡದೇ ಹಣವನ್ನು ಗಳಿಸಬೇಕೆನ್ನುವ ಪ್ರವೃತ್ತಿಯವರು. ತಮ್ಮ ಪಾಲಿನ ಕೆಲಸವನ್ನು ಸರಿಯಾಗಿ ಮಾಡದ ರಣಹೇಡಿಗಳು! ಬರೀ ಒನಪು, ವಯ್ಯಾರಗಳಿಂದ ಬಾಸ್‍ನನ್ನು ಬುಟ್ಟಿಗೆ ಹಾಕಿಕೊಳ್ಳಬೇಕೆಂದು ಪ್ರಯತ್ನಿಸಿ ಅವರಿಂದ ಛೀಮಾರಿ ಹಾಕಿಸಿಕೊಂಡವರು. ಇವರಿಗೆ ಕೆಲಸದಲ್ಲಿ ನಿಷ್ಠೆ ಇಲ್ಲ. ತಪ್ಪು ತಪ್ಪು ಕೆಲಸ ಮಾಡಿ ಬಾಸ್‍ನ ಕೈಗೆ ಸಿಕ್ಕಾಕಿಕೊಂಡು ನರಳಿದವರು. ಬೇರೆ ಯಾರಾದರೂ ಬಾಸ್ ಆಗಿದ್ದರೆ ಮುಲಾಜಿಲ್ಲದೇ ಇವರನ್ನು ಹೊರಗೆ ಹಾಕುತ್ತಿದ್ದರು. ಅಯ್ಯೋ ಪಾಪ ಅಂತ ಇಲ್ಲೇ ಉಳಿಸಿಕೊಂಡಿದ್ದಕ್ಕೆ ಈ ಸೋಗಲಾಡಿಯರು ಬಾಸ್‍ಗೆ ಮಾಡುತ್ತಿರುವ ದ್ರೋಹ ಇದು. ಇವರೆಲ್ಲ ಕಂಡಲ್ಲಿ ಕಾಲೆತ್ತುವ ಬೀಡಾಡಿ ನಾಯಿಗಳಿದ್ದಂತೆ. ಹಾಲಿನಂಥ ಮನುಷ್ಯ ನಮ್ಮ ಬಾಸ್. ನೀನೇನೂ ತಲೆ ಕೆಡಿಸಿಕೊಳ್ಳಬೇಡ. ಇಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ. ಕೆಲಸಗಾರರ ಹಿತಾಸಕ್ತಿಯನ್ನು ಬಾಸ್ ಯಾವಾಗಲೂ ಮನ್ನಿಸುವ ಶ್ರೇಷ್ಠ ಗುಣದವರು.' ಲಕ್ಷ್ಮಿ ತುಂಬಾ ಖಡಕ್ಕಾಗಿಯೇ ಹೇಳಿದಾಗ ಭಾಗ್ಯಾಳ ಎದೆಯೊಳಗಿನ ತಾಕಲಾಟ ಶಾಂತವಾಗಿತ್ತು. 
"ಹೌದಾ ಲಕ್ಷ್ಮಕ್ಕ...? ಈ ಮಾಲಾ, ರಂಜಿತಾ, ಕುಸುಮಾ, ಸೌಂದರ್ಯಾ ಅವರ ಮಾತುಗಳನ್ನು ಕೇಳಿಸಿಕೊಂಡು ನಾನು ತುಂಬಾ ಹೆದರಿದ್ದೆ. ಇಲ್ಲಿ ಕೆಲಸ ಮಾಡುವುದೋ, ಬಿಡುವುದೋ ಎಂಬ ಗೊಂದಲದಲ್ಲಿದ್ದೆ. ತೊಳಲಾಟದಲ್ಲಿತ್ತು ಮನಸ್ಸು. ನಿಮ್ಮ ಮಾತನ್ನು ಕೇಳಿಸಿಕೊಂಡ ನಂತರ ನನಗೆ ಸಮಾಧಾನವಾಗಿದೆ. ಬಾಸ್ ಅಂಥಹವರಲ್ಲ ಎಂದು ನಾನು ಹೇಳಿದ್ದನ್ನು ಇವರ್ಯಾರೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ತಮ್ಮದೇ ತುತ್ತೂರಿ ಊದಿ ನನ್ನ ತಲೆ ಕೆಟ್ಟ ಮೊಸರು ಗಡಿಗೆಯಂತಾಗುವಂತೆ ಮಾಡಿದ್ದರು." ಒಂದಿಷ್ಟು ಭಾವುಕಳಾಗಿ ಮಾತಾಡಿದಳು ಭಾಗ್ಯಾ. ಲಕ್ಷ್ಮಿ ಅವಳ ತಲೆ ನೇವರಿಸಿ ಧೈರ್ಯ ತುಂಬಿದರು. 
"ಅಕ್ಕಾ, `ಇವರ ಹೆಣ್ಣುಬಾಕತನಕ್ಕೆ ಬೇಸತ್ತು ಇವರ ಹೆಂಡತಿ ಡೈವೋರ್ಸ ತೆಗೆದುಕೊಂಡರು' ಹಾಗೆ, ಹೀಗೆ ಅಂತ ಹೇಳಿದಳಲ್ಲ ಮಾಲಾ, ಇದು ನಿಜವೇ...?"
"ಓಹ್! ಇವರ ಹೆಂಡತಿಯ ಬಗ್ಗೆಯೂ ಆ ಚಿನಾಲಿ ಹೇಳಿದಳಾ...? ಸರಿ, ಸತ್ಯ ಏನಂತ ನಾನು ಹೇಳುವೆ. ಬಾಸ್ ಹೆಂಡತಿ ರತಿಯಂತೇ ಇದ್ದುದೇನೋ ನಿಜವೇ. ನಾನು ಆಗಲೇ ಹೇಳಿದೆನಲ್ಲ, ನಮ್ಮ ಬಾಸ್ ಹಾಲಿನಂಥಹ ಮನಸ್ಸಿನವರು ಅಂತ. ಅವರ ಹಾಲಿನಂಥಹ ಮನಸ್ಸಿನಲ್ಲಿ ಅವಳು ಹುಳಿಹಿಂಡಿ ಅವರ ಜೀವನವನ್ನೇ ಬರ್ಬಾದ್ ಮಾಡಿಬಿಟ್ಟಳು. ಅವಳೂ ಬಹಳಷ್ಟು ಓದಿಕೊಂಡವಳೇ. ಆದರೆ ಅವಳ ಚಾಳಿ ಸುಮಾರು. ಸ್ವಾತಂತ್ರ್ಯ ಅಂದರೆ ಸ್ವೇಚ್ಛಾಚಾರ ಎಂದಂದುಕೊಂಡವಳು. ಕಾಲೇಜಿನಲ್ಲಿ ಅವಳಿಗೆ ಬಹಳಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದರಂತೆ. ಕಾಲೇಜಿನಲ್ಲೇ ಅವಳು ಹಲವು ಹುಡುಗರ ಜೊತೆಗೆ ಮೈಸುಖ ಉಂಡವಳು. ಮದುವೆಯ ನಂತರವೂ ತನ್ನ ಹಳೆಯ ಬಾಯ್ ಫ್ರೆಂಡ್ಸ್ ಜೊತೆಗೆ ಲವ್ವಿ-ಡವ್ವಿ ಮುಂದುವರಿಸಿದಳು. ಜೊತೆಗೆ ಮದ್ಯವ್ಯಸನಿಯೂ. ಮನೆಯಲ್ಲೇ ಸಿಕ್ಕಾಬಟ್ಟೆ ಕುಡಿಯುತ್ತಿದ್ದಳಂತೆ. ಇವಳ ಸ್ವೇಚ್ಛಾಚಾರ, ಕೊಳಚೆ ನೀರಿನಂಥಹ ನಡತೆಗೆ ಬೇಸತ್ತು ಬಾಸ್ ಅವಳಿಂದ ವಿಚ್ಛೇದನಕ್ಕೆ ಮುಂದಾಗಿದ್ದು. ಅವಳೇನೋ ಖುಷಿಖುಷಿಯಿಂದ ವಿಚ್ಛೇದನಕ್ಕೆ ಒಪ್ಪಿಕೊಂಡು ಸಾಕಷ್ಟು ಹಣವನ್ನೂ ಬಾಸ್‍ನಿಂದ ಎಳೆದುಕೊಂಡಳಂತೆ. ಅವಳು ದೂರವಾದರೆ ಸಾಕು ಎಂದು ಬಾಸ್ ಅವಳಿಂದ ಬಿಡುಗಡೆ ಪಡೆದುಕೊಂಡರು. `ಈ ಹೆಣ್ಣುಗಳೇ ಹೀಗೆ...' ಎಂದುಕೊಂಡಿರುವ ಬಾಸ್ ಮರುಮದುವೆಯಾಗಲು ಮನಸ್ಸು ಮಾಡುತ್ತಿಲ್ಲ. ಎಂಥಹ ಸರಳ, ಸಜ್ಜನಿಕೆಯ ವ್ಯಕ್ತಿಗೆ ಎಂಥಹ ಕಠೋರ ಶಿಕ್ಷೆ ನೋಡು. ಕಾಲ ಎಲ್ಲವನ್ನೂ ಮರೆಸುತ್ತದೆಯಂತೆ. ಕಾದು ನೋಡಬೇಕು. ನಮ್ಮ ಬಾಸ್ ಬಾಳಲ್ಲಿ ಆದಷ್ಟು ಬೇಗ ಬೆಳಕು ಮೂಡಲಿ ಎಂದು ಹಾರೈಸುವುದಷ್ಟೇ ನಮ್ಮ ಕೆಲಸ. ಈ ಬೀಡಾಡಿ ನಾಯಿಗಳು ಇನ್ನೂ ಬಾಸ್ ಜೀವನದ ಜೊತೆಗೆ ಆಟವಾಡುತ್ತಿದ್ದಾರೆ. ಈ ಹುಡುಗಿಯರ ಮುಖ ಕಂಡರೆ ನನ್ನ ಮೈಉರಿಯುತ್ತಿದೆ. ಆ ದೇವರು ಇಂಥಹವರಿಗ್ಯಾಕೆ ಕಠಿಣ ಶಿಕ್ಷೆ ಕೊಡುತ್ತಿಲ್ಲ?" ಲಕ್ಷ್ಮಿ ಒಂದೇ ಉಸುರಿನಲ್ಲಿ ಬಡಬಡಿಸಿದಳು.
"ಬಾಸ್ ಇಷ್ಟೆಲ್ಲಾ ನೋವನ್ನು ಅನುಭವಿಸಿದ್ದಾರೆಯೇ...? ಅವರೆದೆಯೊಳಗೆ ಜ್ವಾಲಾಮುಖಿಯೇ ತುಂಬಿದೆ. ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಆ ದೇವರು ಒಳ್ಳೆಯವರಿಗೇ ಹೆಚ್ಚು ತ್ರಾಸು ಕೊಡುತ್ತಾನೆನ್ನುವುದು ಇದೇ ಏನೋ?"
"ಹೌದಮ್ಮಾ ಭಾಗ್ಯಾ...?"
"ಲಕ್ಷ್ಮಕ್ಕಾ, ಇಲ್ಲಿ ನೀವೇ ನನಗೆ ಮಾರ್ಗದರ್ಶಕಳು."
"ನೀನು ಮೊದಲೇ ಜಾಣೆ. ಕೆಲಸದಲ್ಲಿ ನಿನಗೆ ಶ್ರದ್ಧೆ ಇದೆ. ಪರಿಶ್ರಮದಿಂದ ಕೊಟ್ಟ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿರುವಿ. ನಮ್ಮ ಬಾಸ್‍ಗೆ ನಿನ್ನ ಕೆಲಸದ ಬಗ್ಗೆ ಮೆಚ್ಚುಗೆ ಇದೆ. ಮೇಲಾಗಿ ಇಂದು ನೀನು ಪ್ರಜೆಂಟ್ ಮಾಡಿದ ಫ್ರಾಕ್‍ನ ಹೊಸ ಡಿಜೈನ್ ಬಾಸ್‍ಗೆ ತುಂಬಾ ಇಷ್ಟವಾಗಿದೆ ಅಂತ ಅನಿಸುತ್ತೆ. ನೀನಿನ್ನು ಗೆಲ್ಲುವ ಕುದುರೆ ಈ ಕಂಪನಿಯಲ್ಲಿ. ನೀನು ಅಷ್ಟೇ ಗುಣವಂತೆ ಎಂದು ನಾನು ಕಂಡುಕೊಂಡಿದ್ದೇನೆ. ಶುಭವಾಗಲಿ." ಲಕ್ಷ್ಮಿ ಭಾಗ್ಯಾಳನ್ನು ಹಾಡಿ ಹೊಗಳಿದಳು. ಲಕ್ಷ್ಮಿಯ ಮಾತುಗಳಿಗೆ ಭಾಗ್ಯಾ ಭಾವುಕಳಾಗಿ ಸಂಭ್ರಮಿಸಿದಳು.  
ಭಾಗ್ಯಾ ಅಂದೇ ಮಾಲಾ, ರಂಜಿತಾ, ಕುಸುಮಾ, ಸೌಂದರ್ಯಾ ಅವರಿಗೆ ಒಂದಿಷ್ಟು ಬಿಸಿ ಮುಟ್ಟಿಸಿಯೂ ಬಂದಳು. `ಇನ್ನೊಮ್ಮೆ ಈ ರೀತಿಯ ಸುಳ್ಳು ಸುದ್ದಿಯನ್ನು ಹರಡಲು ಪ್ರಯತ್ನಿಸಿದರೆ ಅದರ ಪರಿಣಾಮ ಎದುರಿಸಲು ನೀವು ತಯಾರಿರಬೇಕಾಗುತ್ತದೆ ಹುಷಾರ್!' ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿಬಂದಳು.
ಭಾಗ್ಯಾ ಮತ್ತು ಲಕ್ಷ್ಮಿಯರ ನಡುವೆ ಅಂದು ಅಂಕುರಿಸಿರಿದ ಅವಿನಾಭಾವ ಸಂಬಂಧ ಹೆಮ್ಮರವಾಗಿ ಬೆಳೆಯತೊಡಗಿತು. 
                ****  
ವಿಜಯದಶಮಿ ಹಬ್ಬ ಇನ್ನೂ ಒಂದು ತಿಂಗಳು ಇರುವಾಗಲೇ ಹೊಸ ಡಿಜೈನಿನ ಫ್ರಾಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಹೊಸ ಟ್ರೆಂಡಿ ಫ್ರಾಕ್ ಗ್ರಾಹಕರಿಂದ ಒಳ್ಳೆಯ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳತೊಡಗಿತು. ವಿಜಯದಶಮಿ ಹಬ್ಬದಲ್ಲಂತೂ ವಿಜೃಂಭಿಸತೊಡಗಿತು. ದೀಪಾವಳಿಯ ಸಮಯದಲ್ಲಿ ಆ ಡಿಜೈನ್‍ಗೆ ಅತೀ ಹೆಚ್ಚಿನ ಬೇಡಿಕೆ ಬಂದಿತು. ಪೃಥ್ವಿ ಮತ್ತು ಅವನ ಕುಟುಂಬದವರಿಗೆ ಖುಷಿಯೋ ಖುಷಿ. ಭಾಗ್ಯಾಳ ಸಂತಸ, ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ. ಅಕ್ಷರಶಃ ಭಾಗ್ಯಾ ಚಿಕ್ಕ ಮಗುವಿನಂತೆ ಕುಪ್ಪಳಿಸಿ ಕುಣಿದು ಸಂಭ್ರಮಿಸಿದಳು. ಪೃಥ್ವಿ ಕಂಪನಿಯ ನೌಕರರು, ಕೆಲಸಗಾರರ ಜೊತೆಗೆ ಸಂತಸ ಹಂಚಿಕೊಂಡರು. ಫ್ಯಾಕ್ಟರಿಯಲ್ಲಿ ಭರ್ಜರಿಯಾಗಿ ವಿಜಯೋತ್ಸವವನ್ನು ಆಚರಿಸಿದರು. ಬಹಿರಂಗ ಸಮಾರಂಭ ಏರ್ಪಡಿಸಿ ಭಾಗ್ಯಾಳನ್ನು ಹಾಡಿಹೊಗಳುವುದಲ್ಲದೇ ಕಂಪನಿಯ ಸಕಲ ಕೆಲಸಗಾರರೆಲ್ಲರಿಗೂ ಮೆಚ್ಚುಗೆ ಸೂಚಿಸಿದರು. ಹಬ್ಬಕ್ಕೆಂದು ಎಲ್ಲರಿಗೆ ಕಂಪನಿಯ ವತಿಯಿಂದ ಉಡುಗೊರೆಯನ್ನೂ ಕೊಟ್ಟರು. ಭಾಗ್ಯಾಳಿಗೆ ಒಂದು ಭರ್ಜರಿ ಸೀರೆ, ಎರಡೆಳೆ ಬಂಗಾರದ ಸರದ ವಿಶೇಷ ಉಡುಗೊರೆಯ ಪ್ಯಾಕೆಟ್ಟನ್ನೂ ಕೊಡಲಾಯಿತು. ಬೇಡವಾಗಿದ್ದರೂ ಭಾಗ್ಯಾ ಒಲ್ಲದ ಮನಸ್ಸಿನಿಂದ ಸ್ವೀಕರಿಸಿ ಅವರ ಮನಸ್ಸನ್ನು ಸಂತಸ ಪಡಿಸಿದಳು. ಭಾಗ್ಯಾ ಕಂಪನಿಯ ಐಕಾನ್ ಆಗಿಬಿಟ್ಟಳು.
                    **** 
"ಭಾಗ್ಯಾ, ನಿನಗೊಂದು ಗುಡ್ ನ್ಯೂಜ್ ಇದೆ ಕಣೇ. ನಿನ್ನ ಜೀವನದ ಭಾಗ್ಯದ ಬಾಗಿಲು ತೆರೆಯುವ ಕಾಲ ಬಂದಿದೆ..." ಲಕ್ಷ್ಮಿ ಫೋನಲ್ಲಿ ಮಾತಿಗೆ ಪೀಠಿಕೆ ಹಾಕಿದಳು.
"ಮತ್ತೆ ಫ್ಯಾಕ್ಟರಿಯಲ್ಲಿ ಏನೂ ಹೇಳಲಿಲ್ಲ...?" ಕುತೂಹಲವಿತ್ತು ಭಾಗ್ಯಾಳೆದೆಯಲ್ಲಿ.
"ಈಗಷ್ಟೇ ವಿಷಯ ಗೊತ್ತಾಯಿತು. ಅದಕ್ಕೇ..."
"ಅದೇನಕ್ಕ ಅಂಥಹ ವಿಷಯ...?"
"ನಮ್ಮ ಕಂಪನಿಯ ಓನರ್ ಪೃಥ್ವಿಗೆ ನೀನು ಇಷ್ಟವಾಗಿರುವಿಯಂತೆ... ನಿನಗೂ ಪೃಥ್ವಿ ಇಷ್ಟವಾಗಿದ್ದರೆ ಮದುವೆಯ ಬಗ್ಗೆ ಮಾತಾಡುತ್ತಾರಂತೆ." 
"..." ತುಸು ಹೊತ್ತಿನ ಮೌನ. ಭಾಗ್ಯಾಳಿಂದ ಪ್ರತಿಕ್ರಿಯೆ ಬರಲಿಲ್ಲ.
"ಯಾಕೆ ನಿನಗೆ ಬಾಸ್ ಇಷ್ಟವಾಗಲಿಲ್ಲವಾ...? ಅಥವಾ ಎರಡನೇ ಸಂಬಂಧ ಅಂತ...?"
"ಅಕ್ಕಾ, ಈಗಾಗಲೇ ನಾನು ಮದುವೆ ಮಾಡಿಕೊಂಡು ವಿಧವೆಯಾಗಿರುವ ಹೆಣ್ಣು ಹುಡುಗಿ..."
"ಹೌದಾ...?"
"ಅಕ್ಕಾ, ನನ್ನದು ಬಾಲ್ಯ ವಿವಾಹ. ನನಗೆ ಹದಿಮೂರನೇ ವಯಸ್ಸಿನಲ್ಲಿ ಸೋದರಮಾವನೊಂದಿಗೆ ಮದುವೆಯಾಯಿತು. ಹದಿನಾಲ್ಕಕ್ಕೆ ದೊಡ್ಡವಳಾದೆ. ಪ್ರಸ್ತ ಇನ್ನೇನು ಒಂದು ವಾರವಿದ್ದಾಗ ನನ್ನ ಗಂಡನೆನ್ನುವವ ರಸ್ತೆ ಅಪಘಾತವೊಂದರಲ್ಲಿ ಕೊನೆಯುಸಿರೆಳೆದ. ಕಂಠಮಟ ಕುಡಿದು ಬೈಕ್ ಓಡಿಸುತ್ತಿದ್ದನಂತೆ." ನಿಟ್ಟುಸಿರೊಂದು ಹೊರಬಿದ್ದಿತು ಭಾಗ್ಯಾಳೆದೆಯಿಂದ. ಮತ್ತೆ ತುಸು ಹೊತ್ತು ಮೌನ.
"ನಿನ್ನೆದೆಯೊಳಗೂ ಇಂಥಹ ಜ್ವಾಲಾಮುಖಿ ತಾಂಡವವಾಡುತ್ತಿದೆಯಾ...? ಅಯ್ಯೋ ಪಾಪ! ದಾಂಪತ್ಯ ಸುಖವೇನೆಂದು ಅರಿಯದ ಮುನ್ನವೇ ವಿಧವೆಯಾಗಿಬಿಟ್ಟೆಯಾ...? ಕ್ರೂರ ವಿಧಿ. ಸುಮ್ಮನೇ ನಿನ್ನ ಮನಸ್ಸಿಗೆ ನೋವಾಗುವಂತೆ ಮಾಡಿದೆ. ಸಮಾಧಾನ ಮಾಡಿಕೋ. ನೀನೊಂದು ಅನಾಘ್ರಾಣಿತ ಸುಂದರ ಕುಸುಮ. ಈಗಲೂ ನೀನು ಮದುವೆಯಾಗಬಹುದು."
"ಅಕ್ಕಾ, ಅದರ ಬಗ್ಗೆ ಯೋಚಿಸಿಲ್ಲ." 
"ಬಾಸ್ ಮತ್ತು ಅವರ ಮನೆಯವರು ಒಪ್ಪಿದರೆ ನೀನು, ನಿಮ್ಮ ಮನೆಯವರು ಹೂಂ ಅನ್ನಬಹುದೇ...?"
"ಅವರೋ ಆಲದ ಹೆಮ್ಮರ. ನಾನೋ ಯಕಶ್ಚಿತ್..."
"ಆಲದ ಹೆಮ್ಮರವನ್ನು ಒಂದು ಬಳ್ಳಿಯೂ ಬಲವಾಗಿ ತಬ್ಬಿಕೊಂಡು ಅದರ ಜೊತೆಜೊತೆಗೇ ಬೆಳೆದು ತುತ್ತತುದಿ ಮುಟ್ಟುವುದನ್ನು ನನ್ನ ಕಣ್ಣಾರೆ ನೋಡಿದ್ದೇನೆ. ಒಳ್ಳೆಯ ಅವಕಾಶ ಕೂಡಿಬಂದಿದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳಬೇಡ. ನಿನ್ನ ತಂದೆ-ತಾಯಿಯವರನ್ನು ಒಪ್ಪಿಸುವ ಜವಾಬ್ದಾರಿ ನನ್ನದು."
"ಅಲ್ಲ ಅಕ್ಕಾ, ಅದೂ..."
"ಅದೂ ಇಲ್ಲ, ಇದೂ ಇಲ್ಲ. ಅವರು ಹೂಂ ಅಂದರೆ ನೀನು ಸುಮ್ಮನೇ ಗೋಣಾಡಿಸು ಅಷ್ಟೇ."
"ಆಲೋಚಿಸಿ ಹೇಳುವೆ ಅಕ್ಕಾ."
"ಆಲೋಚಿಸುವುದಕ್ಕೇನಿದೆ...? ಸುಮ್ಮನೇ ಹೂಂ ಅನ್ನು." ಭಾಗ್ಯಾ ಪ್ರತಿಕ್ರಿಯಿಸದೇ ಸುಮ್ಮನಿದ್ದುಬಿಟ್ಟಳು.

                    ****
 ಒಂದು ವಾರವಾಗಿತ್ತೇನೋ? ಭಾಗ್ಯಾಳಿಗೆ ಪೃಥ್ವಿಯೇ ನೇರವಾಗಿಯೇ ಫೋನಾಯಿಸಿದ. ಅವಳ ಕೈಹಿಡಿಯುವ ತನ್ನ ಮನದಿಂಗಿತ ತಿಳಿಸಿದ. ಅಷ್ಟರಲ್ಲಾಗಲೇ ಅವಳು ತನ್ನ ಹೆತ್ತವರೊಂದಿಗೆ ವಿಷಯ ಚರ್ಚಿಸಿದ್ದಳು. `ದೈವೇಚ್ಛೆ ಇದ್ದರೆ ಆಗಲಿ' ಎಂದು ಅವರು ತಮ್ಮ ನಿರ್ಧಾರ ತಿಳಿಸಿದ್ದರು. ಹೀಗಾಗಿ ಭಾಗ್ಯಾ, `ಸರಿ ಬಾಸ್, ನಾನು ನಿಮ್ಮೆದೆಯೊಳಗೆ ತೂರಿಕೊಳ್ಳಲು ಸಿದ್ಧ' ಎಂದಾಗ ಪೃಥ್ವಿ ಸಂತಸದ ಪರಾಕಾಷ್ಠೆಯಲ್ಲಿ ಸಂಭ್ರಮಿಸಿದ. ಭಾಗ್ಯಾಳ ಬಾಳಲ್ಲಿ ಹೊಂಗಿರಣದ ಉದಯವಾಗಿತ್ತು.

* ಶೇಖರಗೌಡ ವೀ ಸರನಾಡಗೌಡರ್, 
ತಾವರಗೇರಾ-583279, ತಾ : ಕುಷ್ಟಗಿ, ಜಿ : ಕೊಪ್ಪಳ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಹೊಂಗಿರಣ”

  1. JANARDHANRAO KULKARNI

    ಕಥೆಯ ಶೈಲಿ ಚೆನ್ನಾಗಿದೆ. ಓದಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು.

  2. A lovely story with heart touching narration.A sweet ending with a message that the good work and deeds always gives success to living . Congratulations sir👍👍🎉🎉

  3. ಪಿ. ಜಯರಾಮನ್

    ಕಥೆ ತುಂಬಾ ಚನ್ನಾಗಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿರುವಿರಿ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter