ಮುಂದಿನ ರಾಜ ಯಾರು…?

ಸಾಮಾನ್ಯ ಪ್ರಜೆಗಳಾದ ನಮ್ಮನ್ನು ಹಲವಾರು ಶತಮಾನಗಳ ಕಾಲ ರಾಜ ಮಹಾರಾಜರೇ ಆಳಿದ್ದಾರೆ. ಈಗ ಹೆಸರಿಗೆ ಪ್ರಜಾಪ್ರಭುತ್ವ ಇದೆ. ಆದರೆ ನಮ್ಮ ಮಾನಸಿಕ ಮನೋಭಾವನೆ ಇನ್ನೂ ಪೂರ್ತಿ ಬದಲಾಗಿಲ್ಲ. ಆಗ ರಾಜರು ಆಳುತ್ತಿದ್ದರು. ಈಗ ನಮ್ಮನ್ನು ಆಳುವವರು ರಾಜಕೀಯ ನಾಯಕರು ಅಷ್ಟೇ…ಆದರೆ ಆಳಿಸಿಕೊಳ್ಳುವವರು ಆಗಲೂ – ಈಗಲೂ ನಾವೇ ನಾವು.

ಹುಲಿ ಹೊಟ್ಟೆಯಲ್ಲಿ ಹುಲಿ, ಮೇಕೆ ಹೊಟ್ಟೆಯಲ್ಲಿ ಮೇಕೆ ಹುಟ್ಟುವುದು ಎಷ್ಟು ಸತ್ಯವೋ ರಾಜನ ಮಗ ರಾಜನಾಗುವದು, ಬಡವನ ಮಗ ಬಡವನಾಗುವದು ಕೂಡ ಅಷ್ಟೇ ಸತ್ಯ…ಸೂರ್ಯನು ಪೂರ್ವದಲ್ಲಿ ಉದಯಿಸುವದನ್ನು ನಿಲ್ಲಿಸುವವರೆಗೆ ಇದು ಹೀಗೇ… ಹಲ್ಲೆಲ್ಲ ಬಿದ್ದು, ಬೆನ್ನು ಬಾಗಿ, ನಡೆಯಲು ಆಗದೆ, ಕೈ ಕಾಲು ಸ್ವಾಧೀನ ಕಳೆದುಕೊಂಡು, ವಯಸ್ಸಿನ ಪ್ರಭಾವದ ಜೊತೆ ಮತಿ ನಶಿಸಿದರೂ ಮಹಾರಾಜ ರಾಜ್ಯಭಾರ ಮಾತ್ರ ಯಾರಿಗೂ ಬಿಡೋದಿಲ್ಲ ಪಾಪ!…ಹಾಗೆಯೇ ಪ್ರಜೆಗಳನ್ನು ನಿರ್ಗತಿಕರಾಗಿ ಇರಲು ಅವರು
ಬಿಡುವುದಿಲ್ಲ. ಬದಲಾಗಿ ರಾಜ್ಯದ ಹಣ, ವಜ್ರ – ವೈಢೂರ್ಯ, ಸಂಪತ್ತು, ದರ್ಪ – ದೌಲತ್ತು, ಅಧಿಕಾರ ಎಲ್ಲವನ್ನೂ ‘ ನಾನಿರುವುದೇ ನಿಮಗಾಗಿ, ನೀವೇ ನನ್ನ ದೇವರು ‘ ಎಂದು ಪ್ರಜೆಗಳನ್ನು ಉದ್ದೇಶಿಸಿ ಹಳೇ ಸ್ಲೋಗನ್ ಮತ್ತೆ ಮತ್ತೆ ಹೇಳುತ್ತ ಮಗನಿಗೆ ‘ ಯುವ ರಾಜ ‘ ಪಟ್ಟ ಕಟ್ಟಿ ರಾಜ್ಯಭಾರ ಆತನಿಗೆ ವಹಿಸಿ ರಾಜ ಕಣ್ಣು ಮುಚ್ಚುವುದು ಅನೇಕ ಶತಮಾನಗಳಿಂದ ಈ ನಾಡಿನಲ್ಲಿ ನಡೆದು ಬಂದ ಭವ್ಯ ಪರಂಪರೆ. ಹೀಗಾಗಿ ರಾಜನ ಮಗ ರಾಜನಾಗುತ್ತಾನೆ…ಅವನ ಮೊಮ್ಮಗ ಕೂಡ ಮುಂದೆ ರಾಜನಾಗಿ ಮೆರೆಯುತ್ತಾನೆ.

ಆದರೆ ದುರದೃಷ್ಟವಶಾತ್ ಒಂದು ರಾಜ್ಯಕ್ಕೆ ಇಂತಹ ಅವಕಾಶ ಬರಲಿಲ್ಲ. ಕಾರಣ ಆ ರಾಜನಿಗೆ ಸಂತಾನ ಭಾಗ್ಯವೇ ಇರಲಿಲ್ಲ. ಅಲ್ಲಿಯ ರಾಜನಿಗೆ ಮಕ್ಕಳೇ ಇರದಿದ್ದರಿಂದ ಆ ರಾಜ್ಯದ ಮಂತ್ರಿ ಮಹೋದಯರು ಮತ್ತು ಆಡಳಿತಾಧಿಕಾರಿಗಳು ದಿಗಿಲಿಗೆ ಬಿದ್ದರು. ಚಿಂತಾಕ್ರಾಂತರಾದರು.

ರಾಜ್ಯಕ್ಕೆ ರಾಜನೇ ಇಲ್ಲದಿದ್ದರೆ ಅಲ್ಲಿಯ ಪ್ರಜೆಗಳು ಅನಾಥರಾಗಿಬಿಡುತ್ತಾರೆ. ಹಾಗೆಯೇ ಬಿಟ್ಟರೆ ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತದೆ. ಅಲ್ಲದೆ ಶತ್ರುಗಳು ಆ ರಾಜ್ಯವನ್ನು ವಶಪಡಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಆ ರಾಜ್ಯದ ಮಹಾ ಗುರುಗಳು ಹಾಗೂ ಸೀನಿಯರ್ ಮಂತ್ರಿ ಶ್ರೀ ಗುಂಡಣ್ಣ ಹಳೇ ಕಾಲದಿಂದ ಬಂದ ಸರ್ವ ಸಮ್ಮತ ಪದ್ಧತಿಯನ್ನು ಜಾರಿಗೊಳಿಸಲು ಮುಂದಾದರು.

ಕಂಭದಂತಹ ಕಾಲುಗಳು, ಬೃಹದಾಕಾರದ ಕಿವಿಗಳು, ಭಾರೀ ಶರೀರ, ಚಿಕ್ಕ ಕಣ್ಣುಗಳು, ಎತ್ತರದ ಸೊಂಡಿಲು ಹಾಗೂ ಆ ದೇಹಕ್ಕೆ ಏನೂ ಮ್ಯಾಚ್ ಆಗದ ಪುಟ್ಟ ಬಾಲದ ‘ ಗಜರಾಜ ‘ ನನ್ನು ಅರಮನೆಗೆ ಕರೆತರಲು ಮಾವುತನಿಗೆ ಆಜ್ಞಾಪಿಸಿದರು ಸೀನಿಯರ್ ಮಂತ್ರಿ ಶ್ರೀ ಗುಂಡಣ್ಣ. ಗಜರಾಜ ಅಥ್ಲೆಟಿಕ್ ಸ್ಪೀಡಿನಲ್ಲಿ ಓಡಿ ಬರಲಾಗದೆ ನಿಧಾನವಾಗಿ ‘ ರಾಜ ಗಾಂಭಿರ್ಯದಿಂದ ‘ ಬಂದು ಸೀನಿಯರ್ ಮಂತ್ರಿ ಶ್ರೀ ಗುಂಡಣ್ಣನ ಮುಂದೆ ಸೊಂಡಿಲನ್ನು ಎತ್ತಿ ನಮಸ್ಕರಿಸಿ ” ಏನು ಸಾರ್ ಬರಲು ಹೇಳಿದ ಕಾರಣ…?” ಎಂದು ವಿನಮ್ರವಾಗಿ ಪ್ರಶ್ನಿಸಿದ.

” ನಿನ್ನಿಂದ ಒಂದು ಮಹತ್ಕಾರ್ಯ ಆಗಬೇಕಾಗಿದೆ. ಅದೇನೆಂದರೆ ಈ ರಾಜ್ಯಕ್ಕೆ ಹೊಸ ರಾಜನನ್ನು ಹುಡುಕಿ ಕೊಡುವ ದೊಡ್ಡ ಜವಾಬ್ದಾರಿ ಈಗ ನಿನ್ನ ಹೆಗಲಿನ ಮೇಲೆ ಹಾಕಿದ್ದೇವೆ …” ಎಂದರು ಸೀನಿಯರ್ ಮಂತ್ರಿ ಶ್ರೀ ಗುಂಡಣ್ಣ.

” ವಂಶ ಪಾರಂಪರ್ಯವಾಗಿ ನಾವು ರಾಜರನ್ನು ನಮ್ಮ ಭುಜದ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದ್ದೇವೆ. ಅದು ನಮ್ಮ ಕರ್ತವ್ಯ ಎಂದು ಭಾವಿಸಿ ಸೇವೆಗೈದಿದ್ದೇವೆ.
ರಾಜಾಜ್ಞೆ ಪಾಲಿಸುವದಷ್ಟೆ ನನಗೆ ಗೊತ್ತು… ಆದರೆ ಸಮರ್ಥ ರಾಜನನ್ನು ಹುಡುಕಿ ಆರಿಸುವ ಕಠಿಣ ಕೆಲಸವನ್ನು ನಾನು ಮಾಡುತ್ತೇನೆ ಎಂಬ ಭರವಸೆ ನನಗೆ ಇಲ್ಲ.”ಎಂದು ಸಂದೇಹ ವ್ಯಕ್ತಪಡಿಸಿದ ಗಜರಾಜ.

” ನೋ ಪ್ರಾಬ್ಲಮ್… ಡೊಂಟ್ ವರಿ …ನಿನ್ನ ಹಿಂದೆ ನಾವಿದ್ದೇವೆ…ಇವೊತ್ತಿನಿಂದ ಹದಿನೈದು ದಿನ ಇಡೀ ರಾಜ್ಯವೆಲ್ಲಾ ಸುತ್ತಾಡು. ಪ್ರಚಾರ ಮಾಡಿ ಜನರ ನಾಡಿ ಮಿಡಿತವನ್ನು ತಿಳಿದುಕೋ…ಅವರಿವರ ಸರ್ವೇ ರಿಪೋರ್ಟ್ಗಳನ್ನು ನಂಬಬೇಡ! ನೀನೇ ಖುದ್ದಾಗಿ ಓಡಾಡಿ ಒಳ್ಳೆಯ ರಾಜನನ್ನು ಆಯ್ಕೆ ಮಾಡು. ನಾವು ಹೇಳಿದ ದಿನ ನಿನ್ನ ಸೊಂಡಿಲಿಗೆ ಒಂದು ಹೂವಿನ ಹಾರ ಕೊಡುತ್ತೇವೆ ಅದನ್ನು ನೀನು ಯಾರ ಕೊರಳಿಗೆ ಹಾಕುತ್ತಿಯೋ ಅವರೇ ನಮ್ಮ ರಾಜರು ಆ ಕ್ಷಣದಿಂದ…” ಎಂದು ವಿವರವಾಗಿ ಹೇಳಿದರು ಸೀನಿಯರ್ ಮಂತ್ರಿ ಶ್ರೀ ಗುಂಡಣ್ಣ. ನೆರೆದ ಎಲ್ಲಾ ಅಧಿಕಾರಿಗಳು, ಸೈನಿಕರು ಹಾಗೂ ರಾಜನ ಒಡ್ಡೋಲಗದವರು ಅದಕ್ಕೆ ಚಪ್ಪಾಳೆ ಮೂಲಕ ಒಪ್ಪಿಗೆ ಸೂಚಿಸಿದರು

” ಸರಿ… ಇನ್ನೂ ಹದಿನೈದು ದಿನಗಳಿವೆಯಲ್ಲ..ನೋಡೋಣ.
ಒಳ್ಳೆಯ ವ್ಯಕ್ತಿಯನ್ನು ಆರಿಸಲು ನನ್ನ ಯೋಗ್ಯತೆ ಮೀರಿ ಪ್ರಯತ್ನ ಮಾಡುತ್ತೇನೆ ” ಎಂದು ಹಿರಿಯ ಮಂತ್ರಿಗಳಿಗೆ ಪ್ರಾಮಿಸ್ ಮಾಡಿ ಮನೆ ದಾರಿ ಹಿಡಿದ ಗಜರಾಜ.

ಅಂದು ರಾತ್ರಿ ತಾನು ಸರಿಯಾದ ರಾಜನನ್ನು ಆರಿಸುತ್ತೇನೆಯೋ ಇಲ್ಲವೋ ಎಂಬ ದೀರ್ಘ ಆಲೋಚನೆಯಲ್ಲಿ ಮುಳುಗಿದ್ದ ಗಜರಾಜನಿಗೆ ನಿದ್ದೆಯೇ ಬರಲಿಲ್ಲ. ಆ ಸರಿ ರಾತ್ರಿಯಲ್ಲಿ ಯಾರೋ ತನ್ನ ಹತ್ತಿರ ಬಂದದ್ದು ತನ್ನ ಪುಟ್ಟ ಕಣ್ಣಿಗೆ ದೊಡ್ಡ ಚಿತ್ರವಾಗಿ ಕಂಡು ಬಂತು. ” ಯಾರು ನೀನು..ಈ ರಾತ್ರಿಯಲ್ಲಿ ಇಲ್ಲಿ ನಿನಗೇನು ಕೆಲಸ?..” ಎಂದು ಅಸಹನೆಯಿಂದ ಪ್ರಶ್ನಿಸಿದ ಗಜರಾಜ.

ಅದಕ್ಕೆ ಉತ್ತರವಾಗಿ ಆತ ” ಮೈ ಡಿಯರ್ ಎಲಿಫೆಂಟ್ಆ ವೇಶ ಬೇಡ. ನಿನ್ನ ಸಲುವಾಗಿ ಐದಾರು ಬಾಳೆ ಹಣ್ಣಿನ ದೊಡ್ಡ ಗೊನೆಗಳನ್ನೇ ತಂದಿರುವೆ. ನೀನು ಸಮಾಧಾನದಿಂದ ಹೊಟ್ಟೆ ತುಂಬಾ ಅದನ್ನು ಮೊದಲು ತಿನ್ನು.” ಎಂದ.

” ನೀನು ಯಾರು? ನಿನ್ನನ್ನು ಎಂದೂ ಈ ಮುಂಚೆ ನೋಡಿಲ್ಲ,ಇದ್ದಕ್ಕಿದ್ದ ಹಾಗೆ ನನ್ನ ಮೇಲೆ ಯಾಕಿಷ್ಟು ಪ್ರೀತಿ ನಿನಗೆ ?” ಎಂದು ಪ್ರಶ್ನಿಸಿದ ಗಜರಾಜ ಆ ಹೊಸ ವ್ಯಕ್ತಿಯನ್ನು.

” ರಾಜನನ್ನು ಆಯ್ಕೆ ಮಾಡುವ ನಿನಗೆ ನಾನು ಸಹಾಯ ಮಾಡಲೆಂದೇ ಬಂದೆ. ನಾನು ರಾಜ ಮನೆತನದವನು ಅಲ್ಲ. ಆದರೆ ರಾಜ ವಂಶದವನು ಅಷ್ಟೇ. ಅಲ್ಲದೆ ಎಲ್ಲ ವಿಷಯದಲ್ಲಿ ರಾಜನಾಗುವ ಅರ್ಹತೆ ನನಗೆ ಇದೆ. ಅಂದು ಸೊಂಡಿಲಲ್ಲಿ ಹಿಡಿಯುವ ಹಾರವನ್ನು ನನ್ನ ಕೊರಳಿಗೆ ಹಾಕು…ಮರೆಯಬೇಡ.” ಎಂದಿತು ಆ ವ್ಯಕ್ತಿ.

” ಒಹೋ.. ಅದಕ್ಕೇ ಈತ ನನಗೆ ಲಂಚವಾಗಿ ಬಾಳೆ ಹಣ್ಣಿನ ಗೊನೆಗಳನ್ನು ತಂದು ಕೊಟ್ಟಿರುವುದು..” ಎಂದು ಮನದಲ್ಲೇ ಅಂದುಕೊಂಡು ಸುಮ್ಮನೆ ನಿಂತ ಗಜರಾಜ.

“ನೀನು ಲಂಚ ಅಂತ ಭಾವಿಸಬೇಡ. ಏನೋ ನಿನ್ನ ಹೊಟ್ಟೆಯನ್ನು ಒಂದು ಸಲುವಾದರು ತುಂಬುವಂತೆ ಮಾಡಿದರೆ ಪುಣ್ಯ ಬರುತ್ತೆ ಎಂದು ಅನಿಸಿತು. ಇನ್ನು ನಾನು ಬರ್ತೀನಿ. ಆದರೆ ಅಂದು ಹೂವಿನ ಹಾರ ನನ್ನ ಕೊರಳಿಗೆ ಹಾಕುವುದನ್ನು ಮಾತ್ರ ಮರಿಬೇಡ ಗುಡ್ ನೈಟ್ ” ಎಂದು ಹೇಳಿ ಆತ ಹೊರಟು ಹೋದ.

ಹಾಗೆ ಒಂದು ದಿನ ಕಳೆಯಿತು. ಮರು ದಿನ ರಾತ್ರಿ ಮತ್ತೊಬ್ಬ ಬಂದ ಗಜರಾಜನನ್ನು ಭೇಟಿ ಮಾಡಲು. ” ಏನು ವಿಷಯ? ” ಎಂದು ಗಜರಾಜ ಕೇಳಿದ.

” ಏನಿಲ್ಲ…ನಿನಗೆ ಕಬ್ಬಿನ ಜಲ್ಲೆ ಅಂದರೆ ತುಂಬಾ ಇಷ್ಟ ಅಂತ ನನಗೆ ಗೊತ್ತು…ಅದಕ್ಕೆ ನಿನಗಾಗಿ ಒಂದು ದೊಡ್ಡ ಚಕ್ಕಡಿಯಲ್ಲಿ ಅವೆಲ್ಲ ತುಂಬಿ ತಂದಿರುವೆ. ನೀನು ಗಡದ್ದಾಗಿ ತಿಂದು, ಕಣ್ತುಂಬ ನಿದ್ದೆ ಮಾಡು” ಎಂದು ಹೋಗುವಾಗ ” ನಾನು ಕೂಡ ರಾಜ ವಂಶಕ್ಕೆ ಸೇರಿದವನು. ನನಗೂ ರಾಜನಾಗಲು ಎಲ್ಲಾ ರೀತಿ ಅರ್ಹತೆ ಇದೆ. ರಾಜನಾಗಿ ಈ ರಾಜ್ಯದ ಪ್ರಜೆಗಳಿಗಾಗಿ ಹಗಲೂ ರಾತ್ರಿ ಸೇವೆ ಮಾಡುವ ಭಾಗ್ಯ ಕರುಣಿಸು. ಅಂದು ನೀನು ಹೂವಿನ ಹಾರ ಮಾತ್ರ ನನ್ನ ಕೊರಳಿಗೇ ಹಾಕಬೇಕು. ಆ ಹಾರಕ್ಕಾಗಿ ನಾನು ತಲೆ ಬಗ್ಗಿಸಿ ನಿಂತಿರುತ್ತೇನೆ. ಹಾಗೆ ನೀನು ಮಾಡಿದರೆ ನಾನು ಅದಕ್ಕೆ ಪ್ರತಿಫಲವಾಗಿ ನನ್ನ ದೊಡ್ಡ ಕಬ್ಬಿನ ಗದ್ದೆಯಲ್ಲಿ ಬೆಳೆದ ಕಬ್ಬು ಜಲ್ಲೆಯನ್ನು ದಿನವೂ ತಂದು ನೀನು ಜೀವನಪೂರ್ತಿ ತಿನ್ನುವ ಏರ್ಪಾಟು ಮಾಡುತ್ತೇನೆ ಎಂದು ಭರವಸೆ ಕೊಡುತ್ತೇನೆ…” ಎಂದು ಕೈ ಬೀಸಿ ಟಾಟಾ ಹೇಳುತ್ತ ಹೊರಟ ಆತ.

ಮತ್ತೆ ಮರುದಿನ ಇನ್ನೊಬ್ಬ ಅಭ್ಯರ್ಥಿ ಹಾಜರಾದ. ಜೊತೆಗೆ ತಾನು ತಂದ ಎಲೆಕೋಸು, ಕ್ಯಾರೆಟ್, ಬೀಟ್ ರೂಟ್, ಮೂಲಂಗಿ ಹಾಗೂ ಸೌತೆ ಕಾಯಿಗಳ ಮೂಟೆಯನ್ನು ಬಿಚ್ಚಿ ಗಜರಾಜನ ಮುಂದೆ ಬಿಚ್ಚಿ ಇಟ್ಟು ವಿನೀತನಾಗಿ ನಮಸ್ಕರಿಸಿ ” ತಾನು ಕೂಡ ರಾಜನಾಗುವ ಅಭ್ಯರ್ಥಿಯೇ…ಮತ್ತು ತನಗೆ ರಾಜನಾಗಲು ಇರುವ ಅರ್ಹತೆಯ ಪಟ್ಟಿ ಓದಿದ. ದಯಮಾಡಿ ತನ್ನ ಕೊರಳಿಗೆ ಮಾಲೆ ಹಾಕುವುದರ ಮೂಲಕ ರಾಜಾನಾಗುವ ಅಪೂರ್ವ ಅವಕಾಶ ಒದಗಿಸಬೇಕು ..” ಎಂದು ಮತ್ತೊಮ್ಮೆ ಕೈ ಮುಗಿದು ವಿನಮ್ರವಾಗಿ ಬೇಡಿಕೊಂಡ ಅಂದು ಹಾಜರಾದ ಅತಿಥಿ – ಕಂ – ಅಭ್ಯರ್ಥಿ.

ರಾಜನಾಗಬೇಕೆಂಬ ಆಸೆಯಿಂದ ದಿನಕ್ಕೊಬ್ಬರು ರಾತ್ರಿಯಲ್ಲಿ ತನ್ನನ್ನು ರಹಸ್ಯವಾಗಿ ಭೇಟಿಯಾಗಿ ‘ ಆಶೆ – ಆಮಿಷ ‘ ಒಡ್ಡುವವರು ಹೆಚ್ಚಾದರು ಎಂದು ಗಜರಾಜನಿಗೆ ಸ್ಪಷ್ಟವಾಗಿ ಅರ್ಥವಾಯಿತು. ಅಲ್ಲಿಯವರೆಗೆ ತನ್ನ ಬಗ್ಗೆ ಎಂದೂ ತೋರದ ಕಾಳಜಿ – ಪ್ರೀತಿ ಧಿಡೀರ್ ಎಂದು ಉಕ್ಕಿ ಹರಿದು ಹೆಚ್ಚಾಗಲು ‘ ರಾಜನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ‘ ತನಗೆ ಇದೆ ಎಂದು ಅರಿವಾಗೇ ಅಭ್ಯರ್ಥಿಗಳು ಸಾಲುಗಟ್ಟಿದ್ದಾರೆ ಎಂದು ಗೊತ್ತಾಯಿತು ಗಜರಾಜನಿಗೆ .

ಬಹಿರಂಗ ಸಭೆಗಳಲ್ಲಿ ತಾನು ಹೇಗಾದರೂ ಮಾಡಿ ರಾಜನಾಗಬೇಕೆಂಬ ಆಸೆಯಿಂದ (ದುರಾಸೆಯಿಂದ!) ಅಭ್ಯರ್ಥಿಗಳು ಹಿಂದು ಮುಂದು ನೋಡದೆ ನೀಡುವ ಆಶ್ವಾಸನೆಗಳು – ಗ್ಯಾರಂಟಿಗಳು, ಉಚಿತ – ಖಚಿತ ಭರವಸೆಗಳು, ನೂರಾರು ‘ ಬಾಡಿಗೆ ‘ ಹಿಂಬಾಲಕರನ್ನು ಕರೆತಂದು ಸಭೆಗಳನ್ನು ಅದ್ದೂರಿಯಾಗಿ ಏರ್ಪಡಿಸಿ, ಅವುಗಳಲ್ಲಿ ಮಾಡಿದ ದೊಡ್ಡ ದೊಡ್ಡ ಭಾಷಣಗಳನ್ನು ದಿನವೂ ತಪ್ಪದೇ ಕೇಳಿದ. ಅದರಲ್ಲೂ ಎದುರಾಳಿಗಳು ಬಾಯಿಗೆ ಬಂದಂತೆ ಬಯ್ದದ್ದು ಹಗಲೂ ರಾತ್ರಿ ಕೇಳಿ ಕೇಳಿ ಗಜರಾಜನ ಕಿವಿಯಿಂದ ನೀರು ಅಲ್ಲದೆ ನಿಧಾನವಾಗಿ ರಕ್ತ ಕೂಡ ಸೋರತೊಡಗಿತು. ರಾಜನಾಗಬೇಕೆಂಬ (ಅಧಿಕಾರದ) ಮಹದಾಸೆಯಿಂದ ಚಿತ್ರ ವಿಚಿತ್ರ ಆಮಿಷಗಳನ್ನು ಒಡ್ಡುವ ರೀತಿ ನೋಡಿಯೇ ಗಾಬರಿಯಿಂದ ಮಾನಸಿಕ ಕ್ಷೋಭೆ – ಖಿನ್ನತೆಗೆ ಒಳಗಾದ ಗಜರಾಜ.

ಯಾವ ಆಶಾಸ್ವನೆಗಳು, ಭರವಸೆಗಳು ಭವಿಷ್ಯದಲ್ಲಿ ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಗಜರಾಜನಿಗೆ ಚೆನ್ನಾಗಿ ಗೊತ್ತು. ಎಲ್ಲರೂ ಹಸಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು . ಅಂಗೈಯಲ್ಲೇ ಸ್ವರ್ಗ ತೋರಿಸುವವರು… ರಾಜನಾಗಿ ಖಜಾನೆಯನ್ನು ಕೊಳ್ಳೆ ಹೊಡೆಯಲು ಸಿದ್ಧರಾಗಿ ನಿಂತ ದರೋಡೆಕೋರರಂತೆ ಒಂದು ಕ್ಷಣ ಕಂಡರು ಗಜರಾಜನಿಗೆ. ಪ್ರಜೆಗಳಿಗೆ ಏನೂ ಮಾಡದೇ ತಾವೇ ಸಂಪತ್ತು ಗುಡ್ಡೆ ಹಾಕಲು ಹೊಂಚು ಹಾಕಿ ಕೂತಂತೆ ಭಾಸವಾಯಿತು ಗಜರಾಜನಿಗೆ. ಜನರಿಗೆ ಪ್ರಾಮಾಣಿಕ ಸೇವೆ ಮಾಡುವ ಲಕ್ಷಣಗಳುಳ್ಳ ಒಬ್ಬ ರಾಜನೂ ಕಾಣಲಿಲ್ಲ. ಇದು ಈ ರಾಜ್ಯದ ದೌರ್ಭಾಗ್ಯ!

ಯಾರನ್ನು ರಾಜನಾಗಿ ಆಯ್ಕೆ ಮಾಡಿ ಆತನ ಕೊರಳಿಗೆ ಹಾರ ಹಾಕಬೇಕೋ ಗೊತ್ತಾಗದೆ ಹಗಲೂ ರಾತ್ರಿ ಯೋಚಿಸಿ – ಆಲೋಚಿಸಿ ತಲೆ ಚಿಟ್ಟು ಹಿಡಿದು ಒಂದು ದಿನ ತನ್ನ ಸೊಂಡಿಲನ್ನು ಎದುರಿನ ಗೋಡೆಗೆ ಜೋರಾಗಿ ಚಚ್ಚಿಕೊಂಡು ನೆಲಕ್ಕೆ ಕುಸಿದು ಪ್ರಾಣ ಬಿಟ್ಟ ಗಜರಾಜ!

ಕಾಲ ಯಾವುದಾದರೇನು? ರಾಜನನ್ನು ಯಾವುದೇ
ಆಮಿಷಕ್ಕೆ ಒಳಗಾಗದೆ ಆಯ್ಕೆ ಮಾಡುವುದು ಅಷ್ಟು ಸುಲಭವಲ್ಲ ಎನ್ನುವ ಗಜರಾಜನ ದೃಷ್ಟಾಂತ ನಮ್ಮ ಕಣ್ಣ ಮುಂದೆ ಇದೆ. ಅದೇ ರೀತಿ ಇಂದು ನಮ್ಮನ್ನು ಆಳುವವರನ್ನು ಆಯ್ಕೆ ಮಾಡುವುದು ಕೂಡ ತುಂಬಾ ಕಠಿಣದ ಸವಾಲು.

ಓಟು ಎನ್ನುವ ಆಯುಧವನ್ನು ಸರಿಯಾಗಿ ಮತದಾರ ಉಪಯೋಗಿಸದಿದ್ದರೆ ಆತನ ಭವಿಷ್ಯವಷ್ಟೇ ಅಲ್ಲ ದೇಶದ ಅಭಿವೃದ್ಧಿಗೆ ಕೂಡ ಅದು ಮಾರಕ !

  *****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮುಂದಿನ ರಾಜ ಯಾರು…?”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter