ಚಿತ್ರ: ಮಂಗಳಾ ಶೆಟ್ಟಿ
"ಎಲ್ರೂ ಬಂದೀರೇನ್ರವ್ವಾ...? ಯಾರಾದ್ರೂ ಬರೋರು ಇದ್ದಾರೇನು...? ಅಟೋ ಚಾಲೂ ಮಾಡ್ಲೇನ್ರವ್ವ..." ಎಂದೆನ್ನುತ್ತಾ ಅಟೋ ಮಾಲಕ, ಚಾಲಕ ಶಂಕ್ರಣ್ಣ ತನ್ನ ಅಟೋ ಏರಿ ಕುಳಿತು ಒಮ್ಮೆ ಹಿಂದಕ್ಕೆ ತಿರುಗಿ ನೋಡಿದ. ಮಲ್ಲವ್ವ, ಯಮುನವ್ವ, ಶಾಂಭವಿ, ಸುಧಾ, ಚೈತ್ರಾ, ರಂಗಮ್ಮ, ಗೀತಾ, ಫಾತಿಮಾ, ತಾಹಿರಾ, ಸಂಗೀತಾ, ಯಲ್ಲವ್ವ, ಹುಲಿಗೆಮ್ಮ, ಅಂಬಿಕಾ, ಭವಾನಿ ಕಂಡರು. `ಅಶ್ವಿನಿ ಬಂದಿಲ್ಲಲ್ಲ...? ಬರೋದಿಲ್ಲಂತ ಯಾರ್ಮುಂದಾದ್ರೂ ಹೇಳ್ಯಾಳೇನು...? ಬೇ ಮಲ್ಲವ್ವಕ್ಕ, ನಿನ್ಗೆ ಗೊತ್ತಿರ್ಬೇಕಲ್ಲ...?' ಎಂದೆನ್ನುತ್ತಾ ಶಂಕ್ರಣ್ಣ ಮಲ್ಲವ್ವನ ಕಡೆಗೆ ನೋಡತೊಡಗಿದ.
"ಲೇ ಶಂಕ್ರಾ, ಆಕಿ, `ಬರ್ತೀನಿ..., ಬರಂಗಿಲ್ಲ' ಅಂತ ಒಂದೂ ಹೇಳಿಲ್ಲ. ನಿಮ್ಗೆ ಯಾರಿಗಾದ್ರೂ ಏನಾರ ಹೇಳ್ಯಾಳೇನು ಅಶ್ವಿನಿ...?" ಎಂದೆನ್ನುತ್ತಾ ಮಲ್ಲವ್ವ ಉಳಿದವರ ಕಡೆಗೆ ನೋತೊಡಗಿದಳು.
"ಬೇ ಎತ್ತಿ, ಅಶ್ವಿನಿ ಮನೆ ನಿನ್ಮಗೆ ಸಮೀಪದಾಗೇ ಐತೆ. ಏನಾರ ಹೇಳಿದ್ರೆ ಅದು ನಿನ್ಗೇ ಹೇಳಿರ್ಬೇಕು. ನಮ್ಗಂತೂ ಆಕಿ ಕಂಡೇ ಇಲ್ಲ." ಸುಧಾ ಥಟ್ಟಂತ ಹೇಳಿದ್ಳು.
"ಅರೇ ಶಂಕ್ರಣ್ಣಾ, ಆ ಕಡೆ ನೋಡು. ಅಶ್ವಿನಿ ಓಡೋಡಿಕತಾ ಬರ್ಲಿಕತ್ಯಾಳ..." ಸಂಗೀತಾ ಹೇಳಿದಾಗ ಎಲ್ಲರ ದೃಷ್ಟಿ ಅಶ್ವಿನಿ ಬರುತ್ತಿರುವ ದಾರಿ ಕಡೆಗೆ ನೆಟ್ಟಿತು.
ಒಂದು ಕೈಯಲ್ಲಿ ಊಟದ ಕ್ಯಾರಿಯರ್, ಇನ್ನೊಂದು ಕೈಯಲ್ಲಿ ಕುರ್ಚಿಗಿ ಹಿಡಿದುಕೊಂಡು ಏದುಸಿರು ಬಿಡುತ್ತಾ ಓಡೋಡುತ್ತಾ ಬಂದ ಅಶ್ವಿನಿ ಅಟೋ ಏರಿದಳು.
"ಯಾಕಬೇ ತಡ ಆತಲ್ಲ...?" ಶಂಕ್ರಣ್ಣ ಕೇಳಿದ್ದಕ್ಕೆ, `ಶಂಕ್ರಣ್ಣಾ, ಗ್ಯಾಸ್ ನಿನ್ನೆನೇ ಮುಗ್ದೋಗಿತ್ತು. ತೊಗೊಂಡು ಬಾ ಅಂತ ನಿನ್ತಮ್ಮನಿಗೆ ಹೇಳಿದ್ದೆ. ಗ್ಯಾಸ್ ಬಾಳ ದುಬಾರಿ ಆಗೈತಿ. ನಮ್ಮಂಥ ಬಡವರಿಗೆ ಅಷ್ಟು ರೊಕ್ಕ ಕೊಟ್ಟು ಗ್ಯಾಸ್ ತರಾಕ ಆಗಂಗಿಲ್ಲ. ಸುಮ್ನೇ ಕಟಿಗಿ ಒಲಿಮ್ಯಾಲ ಅಡಿಗಿ ಮಾಡು ಅಂದ. ಕಟಿಗಿ ಒಲಿಮ್ಯಾಲೆ ಅಡಿಗಿ ಮಾಡಾಕ ತಟಗು ತಡ ಆತು' ಎಂದು ಅಶ್ವಿನಿ ಸಮಜಾಯಿಸಿ ನೀಡಿದಾಗ, `ಹೌದಾ, ಹಂಗಾದ್ರೆ ಗಾಡಿ ಚಾಲು ಮಾಡ್ತೀನಿ...' ಎಂದೆನ್ನುತ್ತಾ ಶಂಕ್ರಣ್ಣ ಅಟೋ ಚಾಲೂಮಾಡಿ ಎಕ್ಸಿಲರೇಟರ್ ಒತ್ತಿದ. ಅಟೋ ಮುಂದೆ ಚಲಿಸಿತು.
ಶಂಕ್ರಣ್ಣನ ಅಟೋ ಕನಕನಾಳಿನಿಂದ ಶಿವಗಿರಿಯ ಕಡೆಗೆ ಧಾವಿಸತೊಡಗಿತು. ಕನಕನಾಳಿನಿಂದ ಶಿವಗಿರಿಗೆ ಆರು ಕಿಮೀ ಅಷ್ಟೇ. ಶಂಕ್ರಣ್ಣ ಮೂವತ್ತರ ಆಜು-ಬಾಜುವಿನ ಯುವಕ. ದಿನಾಲೂ ಕನಕನಾಳಿನಿಂದ ಶಿವಗಿರಿಗೆ ಕೂಲಿಯಾಳುಗಳನ್ನು ಕರೆದುಕೊಂಡು ಹೋಗಿ ಕರೆದುಕೊಂಡು ಬರುವುದು ಅವನ ಕೆಲಸ. ಅಟೋ ಚಾಲನೆಯ ಜೊತೆಗೆ ತಾನೂ ಕೂಲಿ ಮಾಡುತ್ತಿರುವ ಮನುಷ್ಯ. ಅಟೋದ ಬಾಡಿಗೆಯೂ ಸಿಗುತ್ತಿತ್ತು. ಅವನ ಹೆಂಡತಿ ಶಾಂಭವಿ ಸಹ ಅವನ ಜೊತೆಗೆ ಕೆಲಸಕ್ಕೆ ಬರುತ್ತಿದ್ದಳು. ಶಿವಗಿರಿಯ ಸಾಹುಕಾರ್ ಶಿವಶಂಕರ್ ನಾಯಕರ ತೋಟದಲ್ಲಿ ಒಂದಲ್ಲ ಒಂದು ಕೆಲಸ ಸಿಗುತ್ತಿತ್ತು ದುಡಿಯುವ ಕೈಗಳಿಗೆ. ಸುಮಾರು ಅರವತ್ತು ಎಕರೆಗಳಷ್ಟು ಅವರ ಕುಟುಂಬದ ಜಮೀನು. ತೋಟದಲ್ಲಿ ಹೆಚ್ಚುಕಡಿಮೆ ಎಲ್ಲವೂ ಹಣ್ಣಿನ ಬೆಳೆಗಳು. ದಾಳಿಂಬೆ, ಪೇರಲ, ಮಾವು, ಪಪ್ಪಾಯ, ಡ್ರಾಗನ್ ಫ್ರೂಟ್, ಲಿಂಬೆ, ಮೋಸಂಬಿ, ಚಿಕ್ಕು ಹೀಗೆ ನಾನಾ ತರಹದ ಹಣ್ಣಿನ ಬೆಳೆಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಹಣ್ಣುಗಳನ್ನು ಕೀಳುವುದು... ಹೀಗೆ ಒಂದಲ್ಲ ಒಂದು ಕೆಲಸ ಇರುತ್ತಿತ್ತು ಇಡೀ ವರ್ಷ. ಕನಕನಾಳ್ ಶಿವಗಿರಿಗೆ ಸಮೀಪವೇ ಇದ್ದುದರಿಂದ ಹೆಣ್ಣಾಗಳನ್ನು ಅಲ್ಲಿಂದಲೇ ಕರೆಸುತ್ತಿದ್ದರು. ಎರಡು ಖಾಯಂ ಸಂಬಳದಾಳುಗಳೂ ತೋಟದಲ್ಲೇ ಮನೆಮಾಡಿಕೊಂಡಿದ್ದರು. ಶಿವಶಂಕರ್ ನಾಯಕರಿಗೆ ಕನಕನಾಳಿನ ಶಂಕ್ರಣ್ಣನ ಮೇಲೆ ವಿಶೇಷ ಅಭಿಮಾನವಿತ್ತು. ನಾಯಕರು ಹೇಳಿದ ಕೆಲಸಗಳನ್ನು ಅಚ್ಚುಕಟ್ಟಾಗಿ ತಪ್ಪದೇ ಮಾಡುತ್ತಿದ್ದ ಶಂಕ್ರಣ್ಣ. ಹೆಣ್ಣಾಳುಗಳನ್ನು ಜೋಡಿಸಿ ಕರೆದುಕೊಂಡು ಬರುವ ಚಾಕಚಕ್ಯತೆಯೂ ಅವನಿಗಿತ್ತು.
****
ಒಂದಿಷ್ಟು ಕರ್ಕಶವೇ ಎನ್ನುವ ಅಟೋದ ಶಬ್ದದ ಮಧ್ಯೆಯೂ ಹೆಣ್ಣುಮಕ್ಕಳ ಮಾತುಕತೆಗಳು ಎಗ್ಗಿಲ್ಲದೇ ಸಾಗಿದ್ದವು. ಹದಿನೆಂಟು ವಯಸ್ಸಿನ ಹುಡುಗಿಯರಿಂದ ಹಿಡಿದು ಐವತೈದರ ನಡು ವಯಸ್ಸಿನ ಹೆಣ್ಣುಮಕ್ಕಳೂ ಅಲ್ಲಿದ್ದರು. ಜಾತಿ, ಧರ್ಮದ ಭೇದವಿಲ್ಲದೇ ಶಂಕ್ರಣ್ಣನ ಅಟೋ ಏರುತ್ತಿದ್ದರು ಮಹಿಳೆಯರು. ಕೂಲಿಯಾಳುಗಳಲ್ಲಿ ಲಿಂಗಾಯಿತ, ವಾಲ್ಮೀಕಿ, ಕುರುಬರು, ಲಂಬಾಣಿ, ಮುಸ್ಲಿಂ ಇತರೆ ಜನಾಂಗದವರೂ ಇದ್ದರು. ಇಂದಿನ ತಂಡದಲ್ಲಿ ಅತೀ ಚಿಕ್ಕ ವಯಸ್ಸಿನ ತರುಣಿ ಎಂದರೆ ಹದಿನೆಂಟರ ಹರೆಯದ ಅಂಬಿಕಾ ಮತ್ತು ಹಿರಿವಯಸ್ಸಿನ ಮಹಿಳೆಯರು ಎಂದರೆ ಐವತ್ತೈದರ ಹರೆಯದ ಯಮುನವ್ವ ಮತ್ತು ಮಲ್ಲವ್ವ.
ಮಲ್ಲವ್ವನಿಗೂ, ಅಶ್ವಿನಿಗೂ ಆತ್ಮೀಯತೆ ಬಹಳ. ಮಲ್ಲವ್ವ ಲಿಂಗಾಯಿತರ ಹೆಣ್ಣುಮಗಳಾದರೂ ಆಕೆಗೆ ಬೇಡರ ಜನಾಂಗದ ಅಶ್ವಿನಿ ಎಂದರೆ ತುಂಬಾ ಅಚ್ಚುಮೆಚ್ಚು. ಇಪ್ಪತ್ತೆಂಟರ ಹರೆಯದ ಅಶ್ವಿನಿಗೆ ಮುದ್ದಾದ ಎರಡು ಮಕ್ಕಳೂ ಇವೆ. ಸಾದಾಗಪ್ಪು ಬಣ್ಣದ ಅಶ್ವಿನಿ ಚೆಲುವೆಯೇ. ಕಳೆಕಳೆಯಾಗಿರುವ ಆಕರ್ಷಕ ಮೈಮಾಟದ ಹೆಣ್ಣು. ಪಿಯು ಮೊದಲನೇ ವರ್ಷದವರೆಗೆ ಓದಿರುವ ಹೆಣ್ಣು ಅಶ್ವಿನಿ. ಗಂಡ ವಿಶ್ವನಾಥನಿಗೆ ಎರಡೆಕರೆ ಜಮೀನೂ ಇತ್ತು. ಅವನೂ ನಿತ್ಯ ಅವರಿವರ ಹೊಲಕ್ಕೆ ಕೂಲಿಗೆ ಹೋಗುವವನೇ. ಅಶ್ವಿನಿ ಅಟೋ ಏರಿದಾಗಿನಿಂದ ಮಲ್ಲವ್ವ ಅವಳನ್ನೇ ಗಮನಿಸುತ್ತಿದ್ದಳು. ಮಲ್ಲವ್ವನೊಂದಿಗೆ ಪಟಪಟ, ಚಟಚಟ ಅಂತ ಮಾತಾಡುವ ಅಶ್ವಿನಿ ಇಂದೇಕೋ ಮೌನ ಗೌರಿಯಂತೆ ಗಪ್ಪನೇ ಕುಳಿತಿದ್ದಳು. ಶಿವಗಿರಿ ಮುಟ್ಟುವವರೆಗೂ ಹೆಣ್ಣುಮಕ್ಕಳು ತಮಗೆ ಆತ್ಮೀಯರಾದವರ ಜೊತೆಗೆ ಹರಟುವುದು, ಕಷ್ಟ-ಸುಖ ಹಂಚಿಕೊಳ್ಳುವುದು ನಿತ್ಯದ ಕೆಲಸ. ಇಂದೂ ಸಹ ಎಲ್ಲರೂ ಮಾತುಕತೆಗಳಲ್ಲಿ ಮಗ್ನರಾಗಿದ್ದರು. ಮಲ್ಲವ್ವ ಅಶ್ವಿನಿಯ ಕಡೆಗೆ ದೃಷ್ಟಿ ಹರಿಸಿದಾಗ ಅವಳ ಚಿತ್ತ ಎತ್ತಲೋ ನೆಟ್ಟಿತ್ತು. ಭಾವಶೂನ್ಯಳಾಗಿ ಎಲ್ಲೋ ನೋಡುತ್ತಿದ್ದಳು. ಮುಖದಲ್ಲಿ ಚಿಂತೆ ಆವರಿಸಿದ ಭಾವವಿತ್ತು. `ಈ ಹುಡುಗಿ ಹಿಂಗ್ಯಾಕೈತಿ ಇವತ್ತು...? ಯಾಕಂತ ಕೇಳಿಬಿಡ್ಲ್ಯಾ...? ಬ್ಯಾಡ, ಬ್ಯಾಡ. ಎಲ್ಲರ ನಡುವೆ ಕೇಳೋದು ಅಷ್ಟಾಗಿ ಚೊಲೋ ಕಾಣಂಗಿಲ್ಲ. ಒಬ್ಬಳೇ ಇದ್ದಾಗ ಕೇಳೋದೇ ಒಳ್ಳೇದು' ಎಂದು ತನ್ನ ಮನದೊಳಗೇ ಅಂದುಕೊಂಡ ಮಲ್ಲವ್ವ ಸುಮ್ಮನೇ ಕುಳಿತು ಅಶ್ವಿನಿಯ ಮುಖದಲ್ಲಾಗುತ್ತಿದ್ದ ಭಾವನೆಗಳ ಏರಿಳಿತಗಳನ್ನು ಗಮನಿಸತೊಡಗಿದಳು. ಅಷ್ಟರಲ್ಲಿ ಶಿವಗಿರಿಯ ಶಿವಶಂಕರ್ ನಾಯಕರ ತೋಟವೂ ಬಂದಿತು.
"ಎಲ್ರೂ ಬೇಗ ಬೇಗ ಇಳಿರೆವ್ವಾ. ಜಲ್ದಿ ಜಲ್ದಿ ಮೇಕಪ್ ಮಾಡಿಕೊಂಡು ನಿಮ್ಮ ನಿಮ್ಮ ಕುರ್ಚಿಗಿ ತೊಗೊಂಡು ದಾಳಿಂಬೆ ಪ್ಲಾಟಿಗೆ ಹೊಂಡ್ರಿ. ಲಗೂನ ಕಳೆ ಕೀಳೋದು ಶುರುಮಾಡ್ರಿ. ಎಲ್ರೂ ಕೆಲಸದಾಗ ತಟಗು ಗಮನ ಇಟ್ಕೊಂಡು ಸ್ವಚ್ಛಾಗಿ ಕಸ ತೆಗಿರಿ. ಸಾಹುಕಾರ್ರು ಬಂದ್ರು ಅಂದ್ರೆ ನನ್ಗೆ ಕೈತೊಗೋತಾರೆ." ಅಟೋ ನಿಲ್ಲಿಸಿ ಶಂಕ್ರಣ್ಣ ಎಲ್ಲಾ ಹೆಣ್ಣು ಮಕ್ಕಳಿಗೆ ನಿರ್ದೇಶನ ನೀಡಿದ. ಮೇಕಪ್ ಮಾಡಿಕೊಳ್ಳುವುದೆಂದರೆ ಮಹಿಳೆಯರು ತಾವು ಉಟ್ಟುಕೊಂಡ ಸೀರೆ, ಲೆಗ್ಗಿನ್ಸ್ ಇಲ್ಲವೇ ನೈಟಿ ಮೇಲೆ ತುಂಬುತೋಳಿನ ಅಂಗಿ ತೊಟ್ಟುಕೊಂಡು, ತಲೆಗೊಂದು ಬಟ್ಟೆ ಕಟ್ಟಿಕೊಂಡು ಕೆಲಸಕ್ಕೆ ತಯಾರಾಗುವುದು ಎಂದರ್ಥ. ಎಲ್ಲರೂ ಬಡ ಬಡ ತಾವು ತಂದಿದ್ದ ಅಂಗಿಯನ್ನು ಹಾಕಿಕೊಂಡು, ತಲೆಗೆ ಬಟ್ಟೆ ಕಟ್ಟಿಕೊಂಡರು. ಸೀರೆ ಉಟ್ಟುಕೊಂಡ ಕೆಲವರು ಹೇರುಗಚ್ಛೆ ಹಾಕಿಕೊಂಡರು. ನಲವತ್ತರ ಮೇಲಿದ್ದವರು ಮಾತ್ರ ಸೀರೆ ಉಟ್ಟುಕೊಂಡು ಬರುವವರು. ಉಳಿದವರೆಲ್ಲ ನೈಟಿ, ಲೆಗ್ಗಿನ್ಸ್ ತೊಡುವವರೇ. ಕೈಯಲ್ಲಿ ಕುರ್ಚಿಗಿ ಹಿಡಿದುಕೊಂಡು ಎಲ್ಲರೂ ದಾಳಿಂಬೆ ಪ್ಲಾಟಿನತ್ತ ಹೆಜ್ಜೆ ಹಾಕತೊಡಗಿದರು.
****
ದಾಳಿಂಬೆ ಸಾಲಿಗೆ ಮಣ್ಣನ್ನು ಏರಿಸಿ ಬೆಡ್ ಹಾಕಿದ್ದರಿಂದ ಆ ಕಡೆಗೆ ಒಬ್ಬರು, ಈ ಕಡೆಗೆ ಒಬ್ಬರು ಎಂಬಂತೆ ಇಬ್ಬಿಬ್ಬರು ಒಂದು ಸಾಲಿಗೆ ಬೇಕಿತ್ತು. ಸಾಮಾನ್ಯವಾಗಿ ಮಲ್ಲವ್ವನ ಜೊತೆಗೇ ಅಶ್ವಿನಿ ಇರುತ್ತಿದ್ದಳು. ಕೆಲಸ ಶುರುವಾಯಿತು. ಎಲ್ಲರೂ ತಮತಮಗೆ ಬೇಕಿದ್ದ ಜೊತೆಗಾರರೊಂದಿಗೆ ಸಾಲುಗಳನ್ನು ಹಿಡಿದುಕೊಂಡಿದ್ದರು. ಎಲ್ಲರೂ ಪರಸ್ಪರ ಮಾತು ಮತ್ತು ಕೆಲಸದಲ್ಲಿ ಮಗ್ನರಾಗಿಬಿಟ್ಟರು. ಮಲ್ಲವ್ವ ಮೆಲುಧ್ವನಿಯಲ್ಲಿ ಅಶ್ವಿನಿಯ ಜೊತೆಗೆ ಮಾತಿಗೆ ಶುರುವಿಕ್ಕಿಕೊಂಡಳು.
"ಯಾಕ್ ಅಶ್ವಿನಿ ಒಂಥರ ಇದ್ದೀಯಲ್ಲ...? ಆರಾಮದೀ ತಾನೇ?"
"ಎತ್ತಿ, ನಾ ಆರಾಮಾಗೇ ಇದೀನಿ." ಅಶ್ವಿನಿ ಮಲ್ಲವ್ವನಿಗೆ ಎತ್ತಿ ಅಂತ ಕರಿತಿದ್ದರೆ ಮಲ್ಲವ್ವ ಅಶ್ವಿನಿಗೆ ಸೊಸಿಮುದ್ದು ಅಂತ ಕರೀತಿದ್ದಳು.
"ಅಲ್ಲಾ ಸೊಸಿಮುದ್ದು, ನಂಗಂತೂ ಹಾಂಗ್ ಕಾಣೋದಿಲ್ಲ ನೋಡು. ನೀ ಅಟೋ ಏರಿದಾಗಿಂದ ನೋಡ್ಲಕತ್ತೀನಿ, ನೀ ಪಿಟ್ಟಂತ ಒಂದು ಮಾತೂ ಆಡಿಲ್ಲ. ಯಾವ್ದೋ ಚಿಂತಿ ನಿನ್ನ ಮನಸ್ಸನ್ನು ಮುತ್ತಿಕೊಂಡು ಬಿಟ್ಟೈತಿ ಅಂತ ನಿನ್ನ ಮಾರಿ ನೋಡಿದ್ರೇ ಗೊತ್ತಾಗಿಬಿಡ್ತೈತಿ. ಖರೇ ಹೇಳು. ನನ್ಮುಂದೆ ಹೇಳೋಕೂ ಬ್ಯಾಸ್ರೇನು...?"
"ಎತ್ತೀ, ನಿನ್ಮಗ ಮತ್ತೆ ಬೆಂಗ್ಳೂರಿಗೆ ದುಡಿಯಾಕ ಹೋಗ್ತಾನಂತ..." ಕನಕನಾಳಿನ ಯುವಕರು ಬೆಂಗಳೂರು, ಮಂಗಳೂರು, ಗೋವಾ ಅಂತ ಆವಾಗಾವಾಗ ದುಡಿಯಲಿಕ್ಕೆ ಹೋಗುವುದು ಸಾಮಾನ್ಯ. ಬರಗಾಲ ಬಿದ್ದಾಗ ಊರಿಗೆ ಊರೇ ಗುಳೆ ಹೋಗುತ್ತದೆ.
"ಅಲ್ಲಬೇ ಎರಡು ವರ್ಷದಿಂದ ಮಳಿ ಚೊಲೋನೇ ಆಗ್ಲಿಕತ್ತೇದಲ್ಲ...? ಇಲ್ಲೇ ಬೇಕಾದಷ್ಟು ಕೆಲಸ ಐತೆಲ್ಲ?"
"ಹೋಗ್ಬೇಕಂತ ಹಟ ಹಿಡ್ಕೊಂಡು ಕುಂತಾನ. ಯಾರು ಹೇಳಿದ್ರೂ ಕೇಳವೊಲ್ಲ..."
"ಏನೋ ದುಡ್ದು ನಾಕು ದುಡ್ಡು ಮಾಡ್ಕೊಂಡು ಬರ್ಬೇಕಂತ ಆಸಿ ಇರ್ಬೇಕು. ನಿಂಗೊಂದೀಟು ಬಂಗಾರ-ಗಿಂಗಾರ ತರೋ ಆಸೆ ಇರ್ಬೇಕು ವಿಶ್ವನಾಥನಿಗೆ. ಹೋದ್ರೆ ಹೋಗಿ ಬರ್ಲಿ ಬಿಡು."
"ಅಲ್ಲಬೇ ಎತ್ತಿ, ನಾಕ್ ತಿಂಗ್ಳ ಹಿಂದಾನೇ ಹೋಗಿ ಬಂದಾನ. ಆವಾಗ ಮೂರು ತಿಂಗ್ಳು ಹೋಗಿದ್ದ. ಆದ್ರೆ ಈಗ ಇಲ್ಲೇ ಬೇಕಾದಂಗ್ ಕೆಲ್ಸ ಐತೆಲ್ಲ? ಕೂಲಿ-ನಾಲೀನೂ ಸಿಗ್ತಾವಲ್ಲ...? ಅಲ್ಲಿಗ್ಯಾಕ್ ಹೋಗ್ಬೇಕಂತ? ಇಲ್ಲೇ ಮಕ್ಳು-ಮರಿ ಮಾರಿ ನೋಡ್ಕೋಂತ ದುಡಿದ್ರೆ ಆಗಂಗಿಲ್ಲೇನು...? ಅದೂ ಅಲ್ದೇ...?"
"ಓಹೋ! ನನ್ಗೆ ಅರ್ಥ ಆತುಬಿಡು. ಯಾಕ್ ಸೊಸಿಮುದ್ದು ರಾತ್ರಿ ನನ್ಮಗ ನಿನ್ ಮಗ್ಗಲುದಾಗ ಇಲ್ಲಾ ಅಂದ್ರೆ ನಿನ್ಗೆ ನಿದ್ದಿ ಬರಂಗಿಲ್ಲೇನು...?"
"ನಿದ್ದಿಗೇನು ಧಾಡಿ...? ನಿನ್ಮಗ ಇದ್ರೂ ಬರ್ತೈತಿ, ಇಲ್ದಿದ್ರೂ ಬರತೈತಿ. ಹಗ್ಲೆಲ್ಲ ದುಡಿಯೋ ಜೀವಕ್ಕೆ ನಿದ್ದಿಗೇನು ಬರ...? ಯಾವಾಗ ಬೆನ್ನಿಗೆ ನೆಲ ಸಿಕ್ಕಿತೋ ಅಂತ ಜೀವ ಬಯಸುತಿರ್ತೈತಿ. ಆದ್ರೂ ಗಂಡ-ಹೆಂಡ್ತಿ ಅಂದ್ಮ್ಯಾಲೆ ಮಗ್ಗಲು ಮಗ್ಗಲುದಾಗೇ ಇದ್ರೇನೇ ಚೆಂದ ಅಲ್ವೇನತ್ತೀ...? ನೀನ್ಯಾವತ್ತಾದ್ರೂ ನಮ್ಮಾವನ್ ಬಿಟ್ಟು ಅದೀಯೇನು?"
"ನನ್ ಬುಡಕ್ಕೇ ನೀರು ಬಿಟ್ಟೆಲ್ಲಾ...? ನಮ್ದೇನವಾ ಆಗ್ಲೇ ಇಳಿ ವಯಸ್ಸು. ನಿಂದು ಈಗ ಏರುಗತಿಯಲ್ಲಿ ಐತೆ. ಹೌದು, ಅದಿರ್ಲಿ, ವಿಶ್ವನಾಥ ಬೆಂಗ್ಳೂರಿಗೆ ಹೋಗೋದ್ರಿಂದ ನಿನ್ಗೇನು ತ್ರಾಸು...?"
"ಅವ ಹೋದ್ ಬ್ಯಾರೆ ಮೂರು ತಿಂಗ್ಳು ಬೆಂಗ್ಳೂರಿಗೆ ಹೋಗಿದ್ನಲ್ಲ, ಆವಾಗ ಅವ ಕೈಯಾಗ ಕಾಸು ತಂದಿದ್ದು ಬರೀ ಹದಿನೈದು ಸಾವಿರ ಅಷ್ಟೇ. ಬೆಂಗ್ಳೂರಾಗ ದಿನಕ್ಕೆ ಆರು ನೂರರಿಂದ ಏಳು ನೂರು ರೂಪಾಯಿ ಕೂಲಿ ಕೊಡ್ತಾರಂತೆ. ಮೂರು ತಿಂಗ್ಳು ದುಡ್ದು ಬರೀ ಹದಿನೈದು ಸಾವಿರ ಉಳ್ಸಿಕೊಂಡು ಬರೋದು ಅಂದ್ರೆ ಏನರ್ಥ...? ದುಡಿದ ದುಡ್ಡು ಎಲ್ಲೋತು...?"
"ನಂಗೇನೂ ಗೊತ್ತಾಗವೊಲ್ತವ್ವಾ... ನೀನೇ ತಟಗು ಬಿಡ್ಸಿ ಹೇಳಲ್ಲ...?"
"ಎತ್ತಿ, ಬೆಂಗ್ಳೂರು, ಮಂಗ್ಳೂರು, ಗೋವಾ ಅಂತ ದುಡ್ಯಾಕ ಹೋಗ್ತಾರಲ್ಲ, ಹೋದವ್ರೆಲ್ಲ ಶೋಕಿಗೆ ಬಿದ್ದುಬಿಡ್ತಾರ ಅಂತ ನಾ ಕೇಳೀನಿ. ಬಾಯಿಚಟಕ್ಕೆ ಕಂಡಕಂಡದ್ದು ತಿನ್ನೋದು, ಫ್ಯಾಷನ್ನಿಗಾಗಿ ಕುಡಿಯೋದು ಎಲ್ಲಾ ಚಟ ಹಚ್ಕೊಂಡು ದುಡ್ದದ್ದನ್ನು ಖರ್ಚು ಮಾಡಿಕೊಂಡು ಬರ್ತಾರೆ. ಅದೂ ಅಲ್ದೇ ಇವ್ರಂಗೆ ಬ್ಯಾರೆ ಬ್ಯಾರೆ ಊರಿನಿಂದ ಯಾರ್ಯಾರೋ ದುಡ್ಯಾಕ ಬಂದಿರ್ತಾರೆ. ಗಂಡು, ಹೆಣ್ಣು ಇರ್ತಾರೆ. ಎಲ್ಲವನ್ನೂ ಬಿಟ್ಟು ತಯಾರಾಗಿ ಬಂದಂಥಹ ಹುಡುಗೇರು ಹುಡುಗರನ್ನು, ಒಬ್ಬಂಟಿ ಗಂಡಸರನ್ನು ಬುಟ್ಟಿಗೆ ಹಾಕಿಕೊಂಡು ಬಿಡ್ತಾರೆ ಅಂತ ಕೇಳೀನಿ. ಸಿಕ್ಕಿದ್ದೇ ಸಾಕು ಅಂತ ಎಲ್ಲಿ, ಬೇಕಲ್ಲಿ ಮೈಚೆಲ್ಲಿ ಸುಖಪಡ್ತಾರೆ. ಅದೇನೋ ಗಂಡ, ಹೆಂಡ್ತಿ, ಮಕ್ಳು ಅಂತ ಇಡೀ ಕುಟುಂಬದವರು ಹೋದಾಗ ಮಾತ್ರ ಒಂದೀಟು ದುಡ್ಡು ಉಳಿಸಿಕೊಂಡು ಬರೋಕೆ ಸಾಧ್ಯ. ನೀನೇ ನೋಡ್ಲಿಕತ್ತೀಯಲ್ಲ, ನಮ್ಮೂರಿನಿಂದ ವರ್ಷ ವರ್ಷ ಬಾಳಷ್ಟು ಜನ್ರು ದುಡ್ಯಾಕ ಹೋಗ್ತಾರ. ಆದ್ರೆ ದುಡಿದ ದುಡ್ಡನ್ನು ಉಳ್ಸಿಕೊಂಡು ಬಂದು ಯಾರ್ಯಾರು ಉದ್ಧಾರ ಆಗ್ಯಾರ ಹೇಳು? ಅವ್ರ ಹೆಂಡ್ರು, ಮಕ್ಳಿಗೆ ಇಲ್ಲಿ ದುಡಿಯೋದು ತಪ್ಪಂಗಿಲ್ಲ."
"ಅಶ್ವಿನಿ, ನೀನು ಹೇಳಿದ್ದು ಖರೇನೇ ಐತೆ. ಹೋದ್ಬ್ಯಾರೆ ಹೋದಾಗ ನಿನ್ಗಂಡ ಏನಾದ್ರೂ ಭಾನ್ಗಡಿ ಮಾಡ್ಕೊಂಡು ಬಂದಾನೇನು...? ನಾ ಹೀಂಗ್ ಕೇಳಿದ್ನೆಂತ ಸಿಟ್ಟಾಗಬ್ಯಾಡ ಮತ್ತೆ..." ಅಂಜಂಜುತ್ತಾ ಮಲ್ಲಮ್ಮ ಕೇಳಿದ್ಳು.
"ನನ್ಗೂ ಒಂಚೂರು ಅನುಮಾನ ಇತ್ತು. ನನ್ನ ಅನುಮಾನಕ್ಕೆ ಪುಷ್ಟಿ ಕೊಟ್ಟಂತೆ ವಿಶ್ವನಾಥನ ಜೊತಿಗೆ ಬೆಂಗ್ಳೂರಿಗೆ ಹೋಗಿದ್ದ ನಡುವಿನ ಮನೆ ರಾಜಣ್ಣ ಮೊನ್ನೆ ಮಾತಿಗೆ ಮಾತು ಬಂದಾಗ ಒಂದಿಷ್ಟು ಸಂಗತಿ ಹೇಳಿದ. ಇಲ್ಲಿಂದ ಕೆಲ್ಸ ಅಂತ ಹೋದವ್ರೆಲ್ಲರಿಗೆ ಕೆಲ್ಸ ಸಿಗೋದು ಕಟ್ಟಡ ಕಟ್ಟುವಲ್ಲಿ ಅಂತ ನಿನ್ಗೆ ಗೊತ್ತೈತಿ. ಕಲಬುರ್ಗಿ ಕಡೆಯಿಂದ ಬಂದ ಹುಡುಗಿಯೊಬ್ಬಳನ್ನು ನನ್ಗಂಡ ಬಾಳ ಬಾಳ ಹಚ್ಕೊಂಡಿದ್ನಂತೆ. ಆ ಹುಡುಗಿ ತುಪ್ಪದ ಗಡಿಗೆಯಂತೆ ಇದ್ಳಂತೆ. ಸೂಟಿ ಇದ್ದ ದಿನ ಇಬ್ರೂ ಜೊತೆಜೊತೆಯಾಗಿ ತಿರುಗಾಡ್ತಿದ್ರಂತೆ. ಅಂದ್ರೆ ಇವ ದುಡಿದ ಹಣ ಆ ಚಿನಾಲಿಯ ಎದಿಗೆ ಸುರ್ದು ಬಂದಿರ್ಬೇಕು ಅಂತ ನನ್ಗೆ ಅನುಮಾನ. ಸೀದಾ ಸೀದ ವಿಶ್ವನಾಥನನ್ನೇ ಕೇಳಿ ರಂಪಾಟ ಮಾಡ್ಕೋಬಾರ್ದು ಅಂತ ಎಲ್ಲವನ್ನೂ ನನ್ನೆದಿಯೊಳ್ಗೆ ನುಂಗಿಕೊಂಡು ಸುಮ್ನೇ ಅದೀನಿ. ಅದ್ಕೇ ಅವ ಮತ್ತೆ ಬೆಂಗ್ಳೂರಿಗೆ ಹೋಗೋದು ಬ್ಯಾಡ ಅಂತ ನಾ ಹೇಳ್ಲಿಕತ್ತೀನಿ..."
"ಹೌದಾ...? ಅವ್ನಿಗೇನು ಬಂದೈತಿ ಧಾಡಿ...? ನಿನ್ನಂಥ ಚೆಲುವಿ ಹೆಂಡ್ತಿ ಇಟ್ಕೊಂಡು ಯಾವ್ಳೋ ಬೇವರ್ಸಿ ಸೆರ್ಗು ಹಿಡ್ಯಾಕ ಅವ್ನಿಗೇನು ಕೇಡುಗಾಲ ಬಂದೈತಿ? ಹಾಲು ಹಳ್ಳವನ್ನು ಬಿಟ್ಟು ಈ ಹುಡುಗರು ಉಪ್ಪು ನೀರು ಕುಡ್ಯಾಕ ಯಾಕ್ ಹೋಗ್ತಾರೋ ಏನೋ? ಎಲ್ಲಾ ಕಲಿಗಾಲದ ಮಹಿಮೆ! ಥಳಕು ಬಳುಕಿನ ಈ ಹುಡುಗೇರು ಮೋಹದ ಕಡ್ಡಿ ಗೀರಿ ಹುಡುಗರ ಎದಿಯೊಳ್ಗೆ ಬೆಂಕಿ ಹಚ್ಚಿಬಿಡ್ತಾರೆ. ಹಾದರದ ನಗೆಬೀರಿ ಚಾದರ ಹಾಸಿಬಿಡ್ತಾರೆ. ಗಂಡಸರೋ ಅಲ್ಲಿ ಇಲ್ಲಿ ತುಳಿದ ಹೊಲಸನ್ನು ಅಲ್ಲಲ್ಲೇ ಒರ್ಸಿಕೊಂಡ್ಬಿಡ್ತಾರೆ. ಬೆಂಗ್ಳೂರಾಗ ಯಾವ್ದೋ ಓಣ್ಯಾಗ ಹೆಂಗ್ಸರು ಪೈಲ್ವಾನರ ಚಡ್ಡಿ ಹಾಕ್ಕೊಂಡು ಓಡಾಡ್ತರಂತೆ! ಹೌದೇನೇ ಅಶ್ವಿನಿ...?"
"ಹೌದು ಎತ್ತಿ, ನೀ ಹೇಳೋದು ನಿಜ ಐತಿ. ಈಗಿನ ಕಾಲಮಾನ ಬಾಳ ವಿಚಿತ್ರ ಐತೆ. ಎತ್ತಿ, ನೀನಾರ ಒಂದ್ಸಾರೆ ವಿಶ್ವನಾಥನಿಗೆ ಒಂದೀಟು ಬುದ್ಧಿವಾದ ಹೇಳಿದ್ರೆ ಚೊಲೋ ಐತೇನೋ...?"
"ಸೊಸಿಮುದ್ದು, ನಾ ಅವ್ನಿಗೆ ಸರಿಯಾಗಿ ಬುದ್ಧಿಮಾತು ಹೇಳ್ತೀನಿ ಬಿಡು. ನೀನೇನು ಚಿಂತಿ ಮಾಡ್ಬ್ಯಾಡ. ತುತ್ತಿನ ಕೂಳು ಇಲ್ಲೇ ಹೆಂಗಾದ್ರೂ ಹುಟ್ಟುತ್ತೆ ಬಿಡು."
"ಸರಿ ಎತ್ತಿ. ಕಾಲಿಗೆ ಚುಚ್ಚಿಕೊಂಡ ಮುಳ್ಳಿನ ತುದಿ ಒಳಗೇನೇ ಉಳಿದು ಆಗಾಗ್ಗೆ ಚುಚ್ಚುವಂತೆ ಈ ವಿಷ್ಯ ನನ್ನ ಎದೀನ ಕೊರೀಲಿಕತ್ಯಾದ. ಬದುಕು ಒಂಥರ ಬ್ಯಾಸ್ರ ಆಗಿಬಿಟ್ಟೈತಿ. ಈಗ ನಿನ್ಮಾತು ಕೇಳಿ ನನ್ ಮನ್ಸಿಗೆ ಒಂದೀಟು ಸಮಾಧಾನ ಆತು ನೋಡು." ಅಶ್ವಿನಿ ಬಾಯಿತುಂಬಾ ನಕ್ಕಾಗ ಮಲ್ಲವ್ವನಿಗೆ ಒಂದೀಟು ಹಿಗ್ಗಾಯಿತು.
ಅಷ್ಟೊತ್ತಿಗೆ ಊಟದ ಸಮಯವಾಯಿತು. ಹಿಡಿದ ಕೆಲಸ ನಿಲ್ಲಿಸಿ ಎಲ್ಲರೂ ಊಟಮಾಡಲು ಹೊರಟರು. ಎಲ್ಲರ ಕೆಲಸವನ್ನು ಮೇಲುಸ್ತುವಾರಿ ಮಾಡುತ್ತಿದ್ದ ತೋಟದ ಮೇಸ್ತ್ರಿ ತಿಮ್ಮಣ್ಣ, `ಏನ್ರೆವ್ವಾ, ಇವತ್ತು ಎಲ್ರವೂ ಕೆಲ್ಸಕ್ಕಿಂತ ಮಾತೇ ಬಾಳ ಆಗ್ಯಾವ. ಕೆಲ್ಸ ಸಾಗೇ ಇಲ್ಲ. ಸುಧಾ-ಚೈತ್ರಾ, ಸಂಗೀತಾ-ಗೀತಾ ಅವ್ರಂತೂ ಬಾಳ ಹಿಂದೆ ಬಿದ್ದಾರ. ಸಾಹುಕಾರ್ರು ಈಕಡೆ ಬಂದ್ರೆ ನನ್ನ ಮುಖದ ಮ್ಯಾಲೆ ಉಗಿತಾರೆ. ತಟಗು ಕೈಚಮತ ಆಗ್ಲಿ. ಊಟ ಮಾಡಿಬಂದ್ಮ್ಯಾಲೆ ಚಕಚಕ ಅಂತ ಕೆಲ್ಸ ಮಾಡ್ಬೇಕು. ಇಲ್ಲಾಂದ್ರೆ ಸಾಹುಕಾರ್ರು ಬ್ಯಾರೆ ಊರಿನ ಟೀಮ್ ಕರ್ಸಿಕೊಳ್ತಾರ ನೋಡ್ರಿ. ನಿಮ್ಮ ಅಟೋ ಶಂಕ್ರಣ್ಣನಿಗೂ ಕೈತೊಗೊಂಡಿದ್ರು ಸಾಹುಕಾರ್ರು. ನಡಿರಿ ನಡೀರಿ. ಬೇಗ, ಬೇಗ ಕೈತೊಳ್ಕೊಂಡು ಊಟಮಾಡ್ರಿ. ಸುಮ್ನೇ ಟೈಂಪಾಸ್ ಮಾಡ್ಬ್ಯಾಡ್ರಿ' ಎಂದು ಒಂದೀಟು ಧಮಕಿ ಹಾಕಿದ.
"ತಿಮ್ಮಣ್ಣಣ್ಣಾ, ಯಾರ್ ಚೊಲೋತ್ನಾಗಿ ಕೆಲ್ಸ ಮಾಡಂಗಿಲ್ಲ, ಅವ್ರಿಗೇ ಒಂದೀಟು ಸರ್ಯಾಗಿ ಹೇಳ್ರಿ. ಯಾರೋ ಒಬ್ಬಿಬ್ರು ಕೆಲ್ಸ ಸರ್ಯಾಗಿ ಮಾಡಂಗಿಲ್ಲ ಅಂತ ಎಲ್ಲಾರ್ನೂ ಒಂದೇ ತಕ್ಕಡ್ಯಾಗ ತೂಗಬ್ಯಾಡ್ರಿ." ಯಮುನವ್ವ ಒಂದಿಷ್ಟು ಗರಂ ಆಗೇ ಹೇಳಿದಳು.
"ಏ ಹುಡುಗೇರಾ, ನೀವು ಕೆಲ್ಸ ಚೊಲೋ ಮಾಡ್ಲಾರ್ದಕ್ಕೆ ಎಲ್ರಿಗೂ ಮಾತ್ ಬರ್ತವೆ. ಕಲ್ಲು ತಿಂದು ಕಲ್ಲು ಕರ್ಗಿಸಿಕೊಳ್ಳೋ ವಯಸ್ಸು ನಿಮ್ದು. ಹಂಗಾಮದ ಹುಡುಗೇರಾಗಿ ನೀವು ಬಡ ಬಡ ನಿಮ್ಮ ಸಾಲು ಮುಟ್ಟಿಸಿ ವಯಸ್ಸಾದ ನಮ್ಮಂಥೋರ ಸಾಲಿಗೆ ಎದ್ರು ಬರ್ಬೇಕು. ಅದು ಬಿಟ್ಟು ನಾವಾ ಮೊದ್ಲು ನಮ್ ಸಾಲು ಮುಟ್ಟಿಸಿ ನಿಮ್ಗೆ ಎದ್ರು ಬರ್ಬೇಕಾಗೈತಿ." ಯಲ್ಲವ್ವನೂ ತನ್ನ ಧ್ವನಿ ಸೇರಿಸಿದಳು.
"ಈ ಹಂಗಾಮದ ಹುಡುಗೇರಿಗೆ ಎಷ್ಟೇಳಿದ್ರೂ ಅಷ್ಟೇನೇ. ಹೇಳೋದ್ರಗೆ ಅರ್ಥವೇ ಇಲ್ಲ. ಹೇಳಿದ್ರೆ ಸುಮ್ನೇ ನಮ್ ಕಡೆಗೆ ಕೆಂಗಣ್ಣು ಮಾಡ್ಕೊಂಡು ನೋಡ್ತವೆ. ಪಟಪಟಾಂತ ಕೆಲ್ಸ ಮಾಡೋದೇ ಇಲ್ಲ" ಎಂದು ಮನಸ್ಸಿನೊಳಗೇ ಅಂದುಕೊಂಡು ಸುಮ್ಮನಿದ್ದುಬಿಟ್ಟಳು ಮಲ್ಲವ್ವ.
ಹುಡುಗಿಯರ್ಯಾರೂ ಪಿಟಕ್ಕೆನ್ನಲಿಲ್ಲ. ತಮ್ಮ ತಮ್ಮ ಮಾತಿನೊಳಗೆ ತಾವಿದ್ದರು.
****
ಊಟ ಮುಗಿಯುತ್ತಲೇ ಒಂದ್ಹತ್ತು ನಿಮಿಷ ಎಲ್ಲರೂ ಮಾತಿನ ಮಲ್ಲಿಯರಾದರು. ನಲವತ್ತರ ಮೇಲಿನ ಕೆಲವರು ತಮ್ಮ ಎಲಿ ಅಡಿಕೆ ಚೀಲ ತೆಗೆದು ಎಲಿ ಅಡಿಕೆ ಮೆದ್ದರು. ನಶಿ ತಿಕ್ಕುವವರು ತಮ್ಮ ಹಲ್ಲುಗಳನ್ನು ಕರ್ರಗೆ ಮಾಡಿಕೊಂಡರು. ಅಷ್ಟರಲ್ಲಿ ಮೇಸ್ತ್ರಿ ತಿಮ್ಮಣ್ಣ ಬಂದ. `ಊಟ ಮುಗಿತೇನ್ರವ್ವಾ...? ನಡಿರಿ, ನಡೀರಿ. ಬೇಗ ಬೇಗ ಸಾಲು ಹಿಡೀರಿ. ಒಂದೀಟು ಚಮತ್ ಮಾಡಿ ಕೆಲ್ಸ ಶುರುಮಾಡ್ರಿ. ಊಟ ಆತು ಅಂತ ಚೊಂಬು ಹಿಡ್ಕೊಂಡು ಹೊರ್ಕಡೆ ಹೋಗಾಕ ಶುರುಮಾಡ್ಬ್ಯಾಡ್ರಿ. ಶುರುಮಾಡಿದ್ರೆ ನೀವು ಒಬ್ರಾದ್ಮ್ಯಾಲೆ ಒಬ್ರು ಅಂತ ಜೋಡೀಲೇ ಪಾಳೆ ಹಚ್ತೀರಿ' ಎಂದೆನ್ನುತ್ತಾ ಎಲ್ಲರಿಗೂ ಕೆಲಸಕ್ಕೆ ಹಚ್ಚಿದ. ಸಾಲು ಹಿಡಿದ ಮೇಲೆ ಮತ್ತೆ ತಮ್ಮತಮ್ಮೊಳಗೆ ಗುಸುಗುಸು-ಪಿಸಪಿಸ ಮಾತುಗಳು ಶುರುವಾದವು.
ಮಲ್ಲವ್ವ, ಅಶ್ವಿನಿ ತಮ್ಮ ಸಾಲು ಹಿಡಿದು ಕಳೆ ಕೀಳಲು ಶುರುಮಾಡಿದರು.
"ಎತ್ತೀ, ಈ ಸುದ್ದಿ ನಿನ್ನ ಕಿವ್ಯಾಗ ಬಿದ್ದತೈನಬೇ...?"
"ಅಶ್ವಿನಿ, ಅದ್ಯಾವ ಸುದ್ದೀನೇ...?"
"ಅದೇ ಕೆರಿಹೊಲದ ಚಂಪಾಬಾಯಿ ಸುದ್ದಿ..."
"ಗೊತ್ತಿಲ್ಲ ಬಿಡೇ! ಅದೇನು ಸುದ್ದಿ? ಹೇಳಾರ ಹೇಳವ್ವ..."
"ಏಳೆಂಟು ತಿಂಗ್ಳ ಹಿಂದೆ ನಾಲ್ಕೈದು ಮನಿಯವ್ರು ಗಂಡ-ಹೆಂಡತಿ ಸೇರ್ಕೊಂಡು ಬೆಂಗ್ಳೂರಿಗೆ ದುಡ್ಯಾಕ ಹೋದ್ರಲ್ಲ, ಆವಾಗ ಈ ಚಂಪಾಬಾಯಿ ಮತ್ತೆ ಆಕಿ ಗಂಡ ಚಂದ್ರ್ಯಾನಾಯಕ ಇಬ್ರೂ ಹೋದ್ರು. ಕೆಲಸ ಅದೇ ಕಟ್ಟಡ ಕಟ್ಟುವಲ್ಲಿ. ನಾಲ್ಕು ತಿಂಗ್ಳ ಇಬ್ರೂ ಜೊತೆಯಾಗಿ ಅಲ್ಲೇ ಇದ್ರು. ಅಷ್ಟರಾಗ ಚಂದ್ರ್ಯಾನಾಯಕನ ಸಂಬಂಧಿಕರ ಮನ್ಯಾಗ ಯಾರಿಗೋ ಆರಾಮಿದ್ದಿಲ್ಲ ಅಂತ ತಿಳಿತಂತೆ. ಹೆಂಗೂ ಊರವರು ಚಂಪಾಬಾಯಿ ಜೊತಿಗೆ ಅದಾರಲ್ಲ ಅಂತ ಅವ್ಳನ್ನು ಅಲ್ಲೇ ಬಿಟ್ಟು ಚಂದ್ರ್ಯಾನಾಯಕ ಒಬ್ಬನೇ ಊರಿಗೆ ಬಂದ. ಊರಿಗೆ ಬಂದವ ಇಲ್ಲೇ ಉಳ್ಕೊಂಡ್ಬಿಟ್ಟ. ಯಾಕಂದ್ರೆ ಅವರ ಇಬ್ರು ಮಕ್ಳು ಅಜ್ಜಿ ಜೊತಿಗೆ ಇದ್ದವಲ್ಲ? ಚಂದ್ರ್ಯಾನಾಯಕ ಚಂಪಾಬಾಯಿಗೆ ಊರಿಗೆ ಬಂದುಬಿಡಲು ಫೋನಲ್ಲಿ ಹೇಳಿದ್ನಂತೆ. ಅವ್ಳು ಹೂಂ ಅಂದ್ಳಂತೆ. ಅಷ್ಟರಾಗ ಕೆಂಪುಕೆಂಪನೆಯ ಮೈಬಣ್ಣದ ಮೂವತ್ತೈದರ ಹರೆಯದ ಚಂಪಾಬಾಯಿ ತನಗಿಂತ ಕಿರಿವಯಸ್ಸಿನ ಮೇಸ್ತ್ರಿ ರಾಜೇಂದ್ರ ಎಂಬುವವನನ್ನು ಬುಟ್ಟಿಗೆ ಹಾಕ್ಕೊಂಡು ಬಿಟ್ಟಿದ್ಳಂತೆ ತನ್ನ ಒನಪು, ವಯ್ಯಾರದಿಂದ. ಅವಳ ಚೆಲುವಿನ ಚಿತ್ತಾರದ ಮೈಕಟ್ಟಿಗೆ ಮೇಸ್ತ್ರಿ ಮನಸೋತಿದ್ನಂತೆ. ಗಂಡನಿಂದ ಫೋನ್ ಬಂದ ಮರುದಿನ ಚಂಪಾಬಾಯಿ ಮೇಸ್ತ್ರಿಯ ಜೊತೆಗೆ ಓಡಿಹೋದಳಂತೆ. ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ಪ್ರೀತಿಸುವ ಗಂಡ, ಹದಿನೈದು, ಹನ್ನೆರ್ಡು ವರ್ಷದ ಎರ್ಡು ಮಕ್ಳೂ ಇದ್ದು ಪರ ಪುರುಷನೊಂದಿಗೆ ಓಡಿಹೋಗಿರುವ ಚಂಪಾಬಾಯಿ ಅದೆಷ್ಟು ತಯಾರಾಗಿರ್ಬೇಕು...?"
"ಹೌದೇನೇ ಅಶ್ವಿನಿ? ಆ ಕಡೆ ಓಣಿಯ ಸುದ್ದೀನೇ ಗೊತ್ತಾಗಂಗಿಲ್ಲ ನಮಗೆ. ಇಲ್ಲಿ ನಮ್ ಜೊತಿಗೆ ಕೆಲ್ಸಕ್ಕೆ ಬಂದಾಳಲ್ಲ, ಸುಧಾಳ ಕತಿಯೇನು ಕಡಿಮೆ ಐತೆ? ಇವ್ಳು ಮದುವೆಗೆ ಮುಂಚೇನೇ ತಮ್ಮೂರಿನ್ಯಾಗ ಪಕ್ಕದ ಮನಿ ಹುಡುಗನ ಜೊತಿಗೆ ಓಡಿಹೋಗಿದ್ಳಂತೆ. ಹದಿನೈದು ದಿನ ತನ್ನ ಗೆಣೆಕಾರನ ಜೊತಿಗೆ ಬಾಳೇವು ಮಾಡಿದ್ಳಂತೆ. ಹೆಂಗೋ ಅವರ ಪತ್ತೆ ಹಚ್ಚಿ ವಾಪಾಸು ಊರಿಗೆ ಕರ್ಕೊಂಡು ಬಂದ್ರಂತೆ. ಎರ್ಡೂ ಕುಟುಂಬಗಳ ನಡುವೆ ಅದೇನೋ ರಾಜಿ ಮಾಡಿದ್ರಂತೆ ಊರಿನ ಹಿರೇರು. ಇಬ್ರದೂ ಮದುವಿ ಮಾಡಿದ್ರೆ ಚೊಲೋ ಇತ್ತೇನೋ? ಆದ್ರೆ ಅವ್ರು ಹಂಗೆ ಮಾಡ್ಲಿಲ್ಲಂತೆ. ಸುಧಾಳ ಮನೆಯವ್ರೇ ಬ್ಯಾಡ ಅಂದ್ರಂತೆ. ಆಮ್ಯಾಗ ತಾಬಡಾ-ತೂಬಡಾ ನಮ್ಮೂರಿನ ಹುಡುಗನ ಜೊತಿಗೆ ಮದುವಿಮಾಡಿ ಕಳಿಸ್ಯಾರಂತೆ. ಎದಿಮ್ಯಾಲೆ ಮೊಲಿ ಮೂಡಿದ ಕೂಡ್ಲೇ ಕಂಡ ಕಂಡ ಹುಡುಗರ ಹಿಂದೆ ಓಡಿಹೋಗೋ ಈ ಹುಡುಗ್ಯಾರು ಕಂಡಲ್ಲಿ ಕಾಲೆತ್ತುವ ಬೀದಿ ನಾಯಿಗಳಿಗಿಂತ ಕೀಳು ನೋಡು ಅಶ್ವಿನಿ. ಹೆತ್ತ ತಂದೆ-ತಾಯಿಗಳ ಮಾನಮರ್ಯಾದೀನ ಬೀದಿ ಪಾಲು ಮಾಡಿ ಹೋಗೋ ಈ ಹುಡುಗ್ಯಾರನ್ ಕಂಡ್ರೆ ನನ್ನ ಮೈಯಾಗಿನ ರಕ್ತ ಕುದಿತೈತಿ ನೋಡು. ಮದುವ್ಯಾದ ಮ್ಯಾಲೆ ಆ ಸುಖ ಸಿಗ್ಲಿಕ್ಕಿಲ್ಲೇನು ಆ ಭೋಸುಡಿಯರಿಗೆ...?
ಮತ್ತೆ ಈ ಗೀತಾ ಅದಾಳಲ್ಲ, ಅವ್ಳೇನು ಕಡಿಮೆ ನೀರಿನ್ಯಾಗ ಮುಳುಗೋ ಹೆಂಗ್ಸಲ್ಲ. ಅವ್ಳ ಗಂಡ ದೇವ್ರಂಥ ಮನುಷ್ಯ. ಏನೋ ಸಂಸಾರ ತೂಗಿಸ್ಬೇಕು ಅಂತ ಮಂಗ್ಳೂರಿಗೆ ದುಡೀಲಿಕ್ಕೆ ಹೋಗಿದ್ನಲ್ಲ, ಆವಾಗ ಈ ಭೋಸುಡಿ ಪಂಚಾಯ್ತಿ ಮೆಂಬರ್ ಹಲ್ಕಟ್ ಸೋಮಣ್ಣಗ ಸೆರ್ಗು ಹಾಸಿದ್ಳಂತೆ. ಇದೆಂಥ ಕಾಲಾನೋ ಏನೋ? ಒಂದೂ ಅರ್ಥ ಆಗ್ಲಾರ್ದಂಗ ಆಗೇದ. ನಾವೂ ಒಂದ್ ಕಾಲಕ್ಕ ಹುಡುಗೇರೇ ಆಗಿದ್ವಿ. ಆದ್ರೆ ನಾವೆಂದೂ ಹೀಂಗ್ ಮಾಡ್ಲಿಲ್ಲ ಬಿಡು. ಈಗಿನ ಹುಡುಗೇರು ಅಷ್ಟೇ, ಮದುವ್ಯಾದವ್ರೂ ಅಷ್ಟೇ. ಶೀಲ ಅಂದ್ರೆ ಏನು ಅಂತಾರೆ. ಅದೇನು ನೋಡ್ಲಿಕ್ಕೆ ಕಾಣ್ತದೇನು ಅಂತ ಕೇಳ್ತಾರೆ. ಹೋಗ್ಲಿಬಿಡು. ಮಾಡಿದವ್ರ ಪಾಪ ಆಡಿದವರ ಬಾಯಾಗ ಅಂತ ಹೇಳ್ತಾರೆ. ನಾನ್ಯಾಕ ಅಂದು ನಿಷ್ಠುರ ಆಗ್ಬೇಕು? ಅವ್ರವರ ಜೀವನ ಅವ್ರಿಗೆ. ಇಂಥಹವ್ರ ಬಗ್ಗೆ ಮಾತಾಡಿ ನಾನು ನನ್ನ ಬಾಯಿನ ಹೊಲ್ಸು ಮಾಡಿಕೊಳ್ಳಾಕ ಹತ್ತೀನಿ ನೋಡು."
"ಎತ್ತಿ, ನೀ ಹೇಳೋದು ಖರೇ ಐತೆ ನೋಡು. ಹೋಗ್ಲಿಬಿಡು. ನೀನ್ಯಾಕೆ ಬ್ಯಾಸ್ರ ಮಾಡ್ಕೋತೀದಿ." ಹೀಗೇ ಅಶ್ವಿನಿ ಮತ್ತು ಮಲ್ಲವ್ವನ ನಡುವೆ ಮಾತುಕತೆಗಳು ಕಳೆಗಟ್ಟಿದ್ದವು ಇಡೀ ದಿನ. ಮಧ್ಯಾಹ್ನ ಎರ್ಡು ಗಂಟೆಯಾಗಿದ್ದೇ ಗೊತ್ತಾಗಲಿಲ್ಲ. ಅಷ್ಟೊತ್ತಿಗೆ ಅಟೋ ಶಂಕ್ರಣ್ಣ ಬಂದ.
"ಊರ್ಕಡೆಗೆ ಹೋಗಾನೇನ್ರವ್ವಾ...?" ಎಂದು ಶಂಕ್ರಣ್ಣ ಹೇಳಿದಾಗ, `ಹೋ' ಎಂದೆನ್ನುತ್ತಾ ಅಂದಿನ ಕೆಲಸ ಮುಗಿದ ಖುಷಿಯಲ್ಲಿ ಹರ್ಷೋದ್ಘಾರ ಮಾಡುತ್ತಾ ಎಲ್ಲರೂ ತಡಬಡಾಯಿಸಿ ತಮ್ಮ ತಮ್ಮ ಊಟದ ಕ್ಯಾರಿಯರ್ ತೆಗೆದುಕೊಂಡು ಅಟೋ ಏರಿದರು. ಅಟೋ ಕನಕನಾಳಿನ ಕಡೆಗೆ ದೌಡಾಯಿಸತೊಡಗಿತು.
****
ಅಟೋ ಇಳಿದು ಮನೆಗೆ ಹೋಗುವಾಗ ಅಶ್ವಿನಿ, `ಎತ್ತಿ, ಇವತ್ತು ಸಂಜೀಮುಂದ ತಪ್ಪದೇ ನಮ್ಮನಿಗೆ ಬರ್ಬೇಕು ನೀನು. ನಿನ್ಮಗನಿಗೆ ಒಂದೀಟು ತಿಳುವಳಿಕೆ ಹೇಳ್ಬೇಕು. ಮರಿಬ್ಯಾಡಬೇ...' ಎಂದೆನ್ನುತ್ತಾ ಮಲ್ಲವ್ವನ ಕಡೆಗೆ ಕೈಬೀಸುತ್ತಾ ತನ್ನ ಮನೆಯತ್ತ ಹೆಜ್ಜೆ ಹಾಕಿದಳು. ಬೆಳಿಗ್ಗೆ ಚಿಂತಾಕ್ರಾಂತವಾಗಿದ್ದ ಅವಳ ವದನ ಈಗ ಅರಳಿದ ಕೆಂದಾವರೆಯಂತಾಗಿತ್ತು.
ಸಂಧ್ಯಾ ಸಮಯ. ಆಗಷ್ಟೇ ಸೂರ್ಯ ಪಡುವಣ ದಿಕ್ಕಿನಲ್ಲಿ ಕೆಂಪಿನೋಕುಳಿ ಚೆಲ್ಲಿ ಮರೆಯಾಗಿದ್ದ. ಮಲ್ಲವ್ವ ಅಶ್ವಿನಿಯ ಮನೆಗೆ ಬಂದಾಗ ವಿಶ್ವನಾಥ ಮನೆಯಲ್ಲೇ ಇದ್ದ. ಗಂಡ-ಹೆಂಡತಿ ಇಬ್ಬರೂ ಆದರದಿಂದ ಸ್ವಾಗತಿಸಿದರು. `ಬಾರಬೇ ಚಿಗವ್ವ, ಬಾಳ ದಿನದ ಮ್ಯಾಲೆ ಅಪರೂಪಕ್ಕೆ ನಮ್ಮನಿಗೆ ಬಂದೀದಿ' ಎಂದು ವಿಶ್ವನಾಥ ಮಲ್ಲವ್ವನಿಗೆ ಸ್ವಾಗತ ಕೋರಿದರೆ, `ಎತ್ತಿ ಬಾ ಬಾ. ಬಡವರ ಮನೆಗೆ ದೇವ್ರು ಬಂದಂಗಾತು ನೋಡು' ಎಂದು ಅಶ್ವಿನಿ ಸ್ವಾಗತಿಸಿದಳು. ಅಶ್ವಿನಿ ಬಿಸಿ ಬಿಸಿ ಚಹ ಮಾಡಿಕೊಟ್ಟಳು. ಉಭಯ ಕುಷಲೋಪರಿಯ ನಂತರ ವಿಶ್ವನಾಥನೊಂದಿಗೆ ಮಾತಿಗೆ ಮುಂದಾದಳು ಮಲ್ಲವ್ವ.
"ಏನಪಾ ವಿಶ್ವನಾಥ, ಮತ್ತೆ ಬೆಂಗ್ಳೂರಿಗೆ ದುಡ್ಯಾಕ ಹೋಗ್ಬೇಕಂತ ಅಂದ್ಕೊಂಡೀಯಂತೆ...? ಹೌದೇನಪಾ...?"
"ಮೂರ್ನಾಲ್ಕು ಹುಡುಗರು ಕೂಡ್ಕೊಂಡು ಮತ್ತೆ ಬೆಂಗ್ಳೂರಿಗೆ ಹೋಗ್ಬೇಕಂತ ಅಂದ್ಕೊಂಡಿದ್ದೇನೋ ನಿಜ. ಆದ್ರೆ ಎರ್ಡು-ಮೂರು ದಿನದಿಂದ ಯಾಕೋ ಮನಸ್ಸಿಗೆ ಬ್ಯಾಡ ಅಂತ ಅನಿಸಿತು. ಅಲ್ಲಿ ಕೂಲಿ ಬಾಳ ಕೊಡ್ತಾರೆ ನಿಜ. ಅದ್ರಂಗ ನಮ್ಮಿಂದ ಕೆಲ್ಸಾನೂ ತೊಗೋತಾರೆ. ಆದ್ರೆ ದುಡ್ದ ದುಡ್ಡಿನ್ಯಾಗ ಬಾಳಷ್ಟು ಖರ್ಚು ಆಗಿಬಿಡ್ತದೆ. ಮೇಲಾಗಿ ಅಲ್ಲಿ ಊಟ ನನ್ಗೆ ಹಿಡ್ಸಂಗಿಲ್ಲ. ಅದೂ ಅಲ್ದೇ ನಾನಿಲ್ಲಾಂದ್ರೆ ಅಶ್ವಿನಿ, ಮಕ್ಳಿಗೆ ತ್ರಾಸು. ಅದ್ಕೇ ಜೊತೆಗಾರ ಹುಡುಗರಿಗೆ ನಾ ಬರೋದಿಲ್ಲ ಅಂತ ಒಂದೆರ್ಡು ತಾಸು ಹಿಂದೇನೇ ಹೇಳಿದೆ. ನಾ ಬೆಂಗ್ಳೂರಿಗೆ ಹೋಗೋದ್ರ ಬಗ್ಗೆ ಅಶ್ವಿನಿ ಹೇಳಿದ್ಳೇನು?"
"ಹೌದಪ್ಪಾ ಹೌದು. ಅಶ್ವಿನಿನೇ ಹೇಳಿದ್ಳು. ನೀ ಬೆಂಗ್ಳೂರಿಗೆ ಹೋಗ್ತೀದಿ ಅಂತ ಬಾಳ ಚಿಂತಿ ಮಾಡ್ಲಿಕತ್ತಿದ್ಳು. ಈಗ ನೀನೇ ಹೋಗಂಗಿಲ್ಲ ಅಂದ್ಮ್ಯಾಲೆ ಆಗ್ಲೇ ಅವ್ಳ ಮಾರಿಮ್ಯಾಲೆ ನಗೆ ನವಿಲು ಕುಣಿದಾಡ್ಲಿಕತ್ತೇದ ನೋಡು. ನೀವಿಬ್ರೂ ಗಂಡ-ಹೆಂಡ್ತಿ ಚೆಂದಾಗಿರ್ಬೇಕು ಅಂತ ಅನ್ನೋದು ನನ್ನಾಸೆ. ನಿನ್ಮಾತು ಕೇಳಿ ನನ್ಗೂ ಬಾಳ ಖುಷಿ ಆತು." ಮಲ್ಲವ್ವ ಹೇಳಿದಾಗ, `ಎತ್ತಿ, ನಿಮ್ಮಂಥ ಹಿರೇರು ನಮ್ಮ ಬೆನ್ನಿಗೆ ಇದ್ದರೆ ನಾವಿಬ್ರೂ ಚೆಂದಾಗೇ ಇರ್ತೀವಿ. ಎಲ್ಲಾ ನಿಮ್ಮ ಆಶೀರ್ವಾದ ಅಷ್ಟೇ' ಎಂದಳು. ಅಶ್ವಿನಿಯ ಮನದಲ್ಲಿ ಮುಸುಕಿದ್ದ ಚಿಂತೆಯ ಕಾರ್ಮೋಡ ಆಗಲೇ ಕರಗಿತ್ತು.
* ಶೇಖರಗೌಡ ವೀ ಸರನಾಡಗೌಡರ್,
ತಾವರಗೇರಾ-583279, ತಾ : ಕುಷ್ಟಗಿ, ಜಿ : ಕೊಪ್ಪಳ.
1 thought on “ಹೀಗೊಂದು ದಿನ…”
The story narration is really good ,Shekhar Gowdare, Keep it up