ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರು ಬರೆದ ಪುಸ್ತಕಗಳ ಸಂಖ್ಯೆ 41ಕ್ಕೇರಿದೆ!! ಶಹಬ್ಬಾಸ್ ಜೋಕಟ್ಟೆ.
ಮುಂಬಯಿಯ ‘ಕರ್ನಾಟಕ ಮಲ್ಲ’ ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿರುವ ಜೋಕಟ್ಟೆ ಪ್ರತೀ ಸಲ ಊರಿಗೆ ಅಥವಾ ಬೆಂಗಳೂರಿಗೆ ಬಂದಾಗ ನಾವು ತಪ್ಪದೆ ಭೇಟಿಯಾಗುತ್ತೇವೆ. ಮತ್ತು ಪ್ರತೀ ಸಲ ಬಂದಾಗಲೂ ಅವರ ಪ್ರಕಟಿತ ಹೊಸ ಪುಸ್ತಕಗಳನ್ನು, ಇದು ನನ್ನ 20ನೇ ಪುಸ್ತಕ,ಇದು 36ನೆಯದು ಎನ್ನುತ್ತಾ ಕೊಡುತ್ತಾರೆ. ಸಾಧಾರಣವಾಗಿ ಅವರ ಎಲ್ಲಾ ಕತೆ ಕವಿತೆ ಲೇಖನಗಳನ್ನು ಬಿಡಿ ಬಿಡಿಯಾಗಿ ಪ್ರಕಟವಾದಾಗಲೇ ನನಗೆ ಕಳಿಸುತ್ತಾರೆ.ಹಾಗಾಗಿ ಪುಸ್ತಕ ರೂಪದಲ್ಲಿ ಬಂದಾಗ ಸುಮ್ಮನೆ ಪುಟ ತಿರುವಿ, ಹಿಂದೆ ಓದದಿರುವ ಲೇಖನಗಳನ್ನು ಮಾತ್ರ ಓದುತ್ತೇನೆ.
ಜೂನ್ ಎರಡನೇ ವಾರ ಬೆಂಗಳೂರಿನಲ್ಲಿ ನಾವಿಬ್ಬರೂ ಭೇಟಿಯಾದಾಗ ಅವರ 40 ಮತ್ತು 41ನೇ ಕೃತಿಯನ್ನು ಕೊಟ್ಟರು. ಅವರ ಕೃತಿಗಳಲ್ಲಿ 5ಕಥಾಸಂಕಲನ, ಸಮಗ್ರ ಕತೆಗಳು,2ಕವನ ಸಂಕಲನ,4ಪ್ರವಾಸ ಕಥನ,4ಸಂಪಾದಿತ ಕೃತಿಗಳು,25ಕ್ಕೂ ಹೆಚ್ಚು ವಿವಿಧ ವಿಷಯಗಳ ಕುರಿತು ಲೇಖನಗಳ ಸಂಗ್ರಹ ಸೇರಿವೆ. ಕೇವಲ ಸಂಖ್ಯಾ ದೃಷ್ಟಿಯಿಂದ ಮಾತ್ರವಲ್ಲ ವಸ್ತು ವಿಷಯ ವೈವಿಧ್ಯ ಗಳ ದೃಷ್ಟಿಯಿಂದಲೂ ಜೋಕಟ್ಟೆಯವರ ಅಷ್ಟೂ ಕೃತಿಗಳು ಅತ್ಯಂತ ವೈಶಿಷ್ಟ್ಯಪೂರ್ಣ, ಗಮನಾರ್ಹ ಮತ್ತು ಮೌಲಿಕವಾದವು.
ವಿಷಯ ವೈವಿಧ್ಯಗಳ ವಿಚಾರಕ್ಕೆ ಬಂದರೆ ಜೋಕಟ್ಟೆಯವರು ನಿಜಕ್ಕೂ ಒಬ್ಬ ಅದ್ಭುತ ಲೇಖಕ. ಅವರ ವ್ಯಾಪಕ ವಿಷಯ ಸಂಗ್ರಹ,ಲೇಖನ ಬರೆಯುವ ವೇಗ ಅಚ್ಚರಿಯುಂಟುಮಾಡುತ್ತವೆ. 3-4 ವರ್ಷಗಳ ಹಿಂದೆ ಬೆಂಗಳೂರಿನ ಸಂಜೆವಾಣಿ ಪತ್ರಿಕೆಯ ದೀಪಾವಳಿ ವಿಶೇಷಾಂಕ ತಂದಾಗ ಅದರಲ್ಲಿ ಸಿನಿಮಾವನ್ನು ಒಳಗೊಂಡಂತೆ ಸುಮಾರು 15 ಲೇಖನಗಳನ್ನು ಜೋಕಟ್ಟೆಯವರೇ ಬರೆದಿದ್ದು ಬಹುಶಃ ಅದೊಂದು ದಾಖಲೆಯೇ ಇರಬಹುದು. ಜೋಕಟ್ಟೆಯವರ ಬರವಣಿಗೆಯ ವೇಗಕ್ಕೆ ಇದೊಂದೇ ಉದಾಹರಣೆ ಸಾಕು.
ಅವರ ಲೇಖನಗಳ ವಸ್ತು ವಿಷಯ ಎಷ್ಟು ವೈವಿಧ್ಯಮಯ ಅನ್ನುವುದಕ್ಕೆ “ದೇವರುಗಳ ನ್ಯಾಯಾಲಯ”ಅನ್ನುವ 40ನೇ ಕೃತಿಯನ್ನೇ ನೋಡಬಹುದು. 472 ಪುಟಗಳ( ಪುಸ್ತಕದ ಬೆಲೆ 460/-)ಈ ಪುಸ್ತಕದಲ್ಲಿ ಅವರೇ ಹೇಳುವ ಹಾಗೆ ಮೊದಲ ಭಾಗದಲ್ಲಿ 25 ‘ರೋಚಕ’ ಲೇಖನಗಳಿವೆ.!! ( ಒಟ್ಟು – 75) ಕೆಲವು ಲೇಖನಗಳ ಶೀರ್ಷಿಕೆಗಳನ್ನು ಗಮನಿಸಿದರೂ ಸಾಕು.ಲೇಖನಗಳು ಅದೆಷ್ಟು ರೋಚಕವಾಗಿರಬಹುದೆನ್ನುವ ಸೂಚನೆ ಸಿಗುತ್ತದೆ.”ಸಾವಿನ ನಿರೀಕ್ಷೆ ಯಲ್ಲಿರುವವರಿಗೆ ಕೊಠಡಿಗಳು”,”ಇಲ್ಲಿದೆ ದೇವರುಗಳ ನ್ಯಾಯಾಲಯ”,”ಮುಂಬಯಿನ ಚೋರ್ ಬಜಾರ್”, “ಕುತೂಹಲ ಹುಟ್ಟಿಸುವ ಜೈಲ್ ಟೂರಿಸಂ “, ಡ್ರಗ್ಸ್ ಮಾರುಕಟ್ಟೆಯಲ್ಲಿ ಬುದ್ಧ, ಶಿವಾಜಿ ದಲಾಯಿಲಾಮಾರಿಗೆ ಡಿಮಾಂಡ್!”, “ಉರಿಯುವ ಚಿತೆಗಳ ಪಕ್ಕ ನಗರ ವಧುಗಳ ನೃತ್ಯ”.. ಹೀಗೇ ರೋಚಕ ವಸ್ತು ವಿಷಯಗಳ ಲೇಖನಗಳ ಸರಮಾಲೆ ಸಾಗುತ್ತದೆ.
ಇನ್ನು,ಜೋಕಟ್ಟೆಯವರ 41ನೇ ಕೃತಿ-‘ಎಲ್ಲಿಗೋ ಪಯಣ ಯಾವುದೋ ದಾರಿ ‘.ಇದು ಕೊರೋನಾ ಕಾಲದಲ್ಲಿ ಮತ್ತು ನಂತರದಲ್ಲಿ ಬರೆದ ಲೇಖನಗಳ ಸಂಗ್ರಹ.ಕೊರೋನಾ ಕಾಲದ ಮುಂಬಯಿಯ ಪಾರ್ಶ್ವ ನೋಟದ ಜೊತೆಗೆ ಇತರ ವೈವಿಧ್ಯ ವಿಚಾರ, ವ್ಯಕ್ತಿ ಪರಿಚಯ ಸಂದರ್ಶನಗಳೂ ಇದರಲ್ಲಿವೆ.
ಅವರ 41 ಕೃತಿಗಳನ್ನೂ ಓದಿದರೆ,ಆಡು ಮುಟ್ಟದ ಸೊಪ್ಪಿಲ್ಲ, ಜೋಕಟ್ಟೆ ಲೇಖನ ಬರೆಯದ ವಿಷಯಗಳೇ ಇಲ್ಲ ಎನ್ನಬಹದೇನೋ ಅನಿಸುತ್ತದೆ. ಇವುಗಳಲ್ಲಿ ಹೆಚ್ಚಿನವು ಪತ್ರಿಕೆಯ ತುರ್ತಿಗಾಗಿ ಬರೆದ ಅವಸರದ ಲೇಖನಗಳಾಗಿರುವುದರಿಂದ ಸರಳ ಮಾಹಿತಿಗಳು ಮಾತ್ರ ದೊರೆಯುತ್ತವೆ. ಸಾಹಿತ್ಯದ ಕುರಿತು ಲೇಖನಗಳಲ್ಲಿ ಕೂಡಾ ತೀರ ಗಂಭೀರವಾಗಿ, ವೈಚಾರಿಕ ಸಂಘರ್ಷಗಳ ಆಳಕ್ಕಿಳಿದು ಸಮಗ್ರ ವಾಗಿ ಚರ್ಚಿಸದೆ, ವಿಷಯದ ಮೇಲ್ ಸ್ತರದ ನೋಟಗಳನ್ನಷ್ಟೇ ಕಾಣಿಸುತ್ತಾರೆ. ಆದರೆ, ಸಾಹಿತಿ ಲೇಖಕರು ಸಾಮಾಜಿಕ ವ್ಯಕ್ತಿಗಳ ಸಂದರ್ಶನದ ಸಂದರ್ಭದಲ್ಲಿ ಮತ್ತು ತಮ್ಮ ಪ್ರವಾಸ ಕಥನಗಳಲ್ಲಿ ಈ ಮಿತಿಯನ್ನು ಮೀರುವ ಪ್ರಯತ್ನ ಮಾಡುತ್ತಾರೆ. ಜೋಕಟ್ಟೆ ಮೂಲತಃ ಓರ್ವ ಅತ್ಯಂತ ಕುತೂಹಲಿಯಾದ ಪತ್ರಕರ್ತನಾಗಿರುವುದೂ ಇದಕ್ಕೆ ಕಾರಣವಿರಬಹುದು. ಜೋಕಟ್ಟೆಯವರು ಪ್ರವಾಸ ಪ್ರಿಯರು.ಈಗಾಗಲೇ ನಾಲ್ಕು ಪ್ರವಾಸ ಕಥನಗಳನ್ನು ಪ್ರಕಟಿಸಿದ್ದಾರೆ. ‘ಮಾವೋವಾದಿಗಳ ಹಿಂದೂ ರಾಷ್ಟ್ರ -ನೇಪಾಳ’ ಅನ್ನುವ ಅವರ ಪ್ರವಾಸ ಕಥನ ಪುಸ್ತಕಕ್ಕೆ 2012ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಯೂ ಲಭಿಸಿದೆ.
ಜೋಕಟ್ಟೆಯವರ ಬರೆಯುವ ಕೈಗಳಿಗೆ ಇನ್ನಷ್ಟು ಕಸುವು ದೊರೆಯಲಿ.ಕೃತಿಗಳ ಸಂಖ್ಯೆ ಶತಕ ದಾಟಲಿ ಎಂದು ಹಾರೈಸುತ್ತೇನೆ.
“ದೇವರುಗಳ ನ್ಯಾಯಾಲಯ ಮತ್ತು ಸ್ಮಶಾನದಲ್ಲಿ ನೃತ್ಯ”
ಲೇ: ಶ್ರೀನಿವಾಸ ಜೋಕಟ್ಟೆ,
ಪ್ರ.ಮುದ್ರಣ: 2022 ಪುಟಗಳು: 472,
ಬೆಲೆ: ರೂ.460/-
ಪ್ರ: ಶ್ರೀ ರಾಮ ಪ್ರಕಾಶನ, ಮಂಡ್ಯ
(9448930173)]
——
“ಎಲ್ಲಿಗೋ ಪಯಣ, ಯಾವುದೋ ದಾರಿ”
ಲೇ: ಶ್ರೀನಿವಾಸ ಜೋಕಟ್ಟೆ,
ಪ್ರ.ಮುದ್ರಣ: 2022, ಪುಟಗಳು: 240
ಬೆಲೆ: ರೂ. 250/-
ಪ್ರ; ಸಾಹಿತ್ಯ ಸುಗ್ಗಿ, ಬೆಂಗಳೂರು
(9740066842) ]
—-
2 thoughts on “ಜೋಕಟ್ಟೆಯವರ ಪುಸ್ತಕ ಲೋಕ : ‘ದೇವರುಗಳ ನ್ಯಾಯಾಲಯ….’ ಮತ್ತು ‘ಎಲ್ಲಿಗೋ ಪಯಣ …..’”
Congrats, Dear Shrinivas jokatte. You have created a nische for yourself in the field of kannada book writing. It is not very easy, to write a books in these days of so many developments in and around the world. Inspite of your busy shedule and adverse situations, you have created 41 books is an amazing act ! That shows your never ending, passion, and commitment for the jourlasm, which is imbibed in your blood. We mumaikars are dreaming of one Booker award for kannada, and all best, sir. Keep that spirt and passion for ever and ever.
Congratulations to Sri Srinivas Jokatte, Excellent ,may God bless you write more books & get many awards..
Harsha Adoor Rao
Mumbai.