ಅಪ್ಪಾ… ಎಲ್ಲಿದ್ದೀಯೋ…? ನನ್ನೂ ಕರ್ಕೊಂಡು ಹೋಗೋ…..

         "ಗುಡ್ ಮಾರ್ನಿಂಗ್ ಸರ್." 
	"ಗುಡ್ ಮಾರ್ನಿಂಗ್... ವೆರಿ ಗುಡ್ ಮಾರ್ನಿಂಗ್." 
	"ವೆರಿ ಗುಡ್ ಮಾರ್ನಿಂಗ್ ಒನ್ಸ್ ಅಗೇನ್ ನಿವೃತ್ತ ಬ್ಯಾಂಕ್ ಅಧಿಕಾರಿಗಳಿಗೆ, ಕನ್ನಡ ನಾಡಿನ ಸಾಹಿತಿವರ್ಯರಿಗೆ ಮತ್ತು ನಿಜ ಕೃಷಿಕರಿಗೆ."
	"ಬಹುಪರಾಕ್ ಬಹಳ ಆಯಿತು. ಇರಲಿ, ಮಂಚದ ಎದುರಿನಲ್ಲಿರುವ ಕುರ್ಚಿಗಳಲ್ಲಿ ಕುಳಿತುಕೊಳ್ಳಿರಿ. ಒಂದೆರಡು ನಿಮಿಷ ಅಷ್ಟೇ."
	"ಹೇಗಿದ್ದೀರಿ...?" 
	"ಹೀಗೇ ದಿನಗಳನ್ನು, ಗಳಿಗೆಗಳನ್ನು ಎಣಿಸುತ್ತಿದ್ದೀನಿ ಅಷ್ಟೇ."
	"ಹೀಗೇಕೆ ಅನ್ನುತ್ತಿರುವಿರಿ...? ಮನುಷ್ಯ ಅಂದ ಮೇಲೆ ಕಷ್ಟ-ಸುಖ, ನೋವು-ನಲಿವು ಇದ್ದದ್ದೇ..."	
	"ಅತಿಯಾದ ನೋವು ಮನಷ್ಯನ ಆತ್ಮಸ್ಥೈರ್ಯವನ್ನು ಕಡಿಮೆ ಮಾಡುತ್ತದೆ."
	"ಇರಲಿ, ಸಾಹಿತಿ ವರ್ಯರು ಏನೋ ಬರೆಯುತ್ತಿರುವ ಹಾಗಿದೆ...?"
	"ಏನೋ ಒಂಚೂರು ಅಷ್ಟೇ. ತೋಚಿದ್ದು ಗೀಚುತ್ತಿರುವೆ. ಹೀಗೇ ಆರಾಮ ಇಲ್ಲದಿರುವುದರಿಂದ ತೋಟದಲ್ಲಿ ಆಳುಗಳ ಜೊತೆಗೆ ಕೆಲಸಕ್ಕೆ ಹೋಗಿಲ್ಲ. ಇಬ್ಬರು ಮೊಮ್ಮಕ್ಕಳು ಶಾಲೆಗೆ ಹೋಗಿದ್ದಾರೆ. ಪುಟ್ಟ ಮೊಮ್ಮಗ ಮಲಗಿದ್ದಾನೆ. ಏನೋ ಒಂದಿಷ್ಟು ಸಮಯ ಸಿಕ್ಕಿದೆ, ಬರೆಯುತ್ತಿರುವೆ. ಏನೋ ಒಂಥರ ಹುಚ್ಚು ಈ ಬರೆಯುವ ಗೀಳು. ಇನ್ನೇನು ಒಂದೆರಡು ನಿಮಿಷ ಅಷ್ಟೇ. ಮೂರ್ನಾಲ್ಕು ಸಾಲುಗಳಿವೆ. ಮುಗಿಸೇ ನಿಮ್ಮೊಂದಿಗೆ ಮಾತಿಗಿಳಿವೆ."
	"ಸರಿ ಸರ್ ಅಷ್ಟೇ ಆಗಲಿ. ನಾವು ಕಾಯುತ್ತೇವೆ."
	"ನೀವು ಕುಡಿಯಲು ಏನು ತೊಗೋತೀರಿ...? ಚಹ, ಕಾಫಿ, ಕಷಾಯ, ಬ್ಲ್ಯಾಕ್ ಟೀ, ಗ್ರೀನ್ ಟೀ, ಲೆಮನ್ ಟೀ, ಎಳೆ ನೀರು, ತಾಜಾ ತಾಜಾ ಮಜ್ಜಿಗೆ, ಲಿಂಬೆ ಹಣ್ಣಿನ ಪಾನಕ ಅಥವಾ ತಾಜಾ ತಾಜಾ ಹಸುವಿನ ಹಾಲು...? ನಿಮಗಿಷ್ಟವಾದದ್ದನ್ನು ತಿಳಿಸಿದರೆ ತಕ್ಷಣ ಮಾಡಿಸುವೆ."
	"ಸುಮ್ಮನೇ ನಿಮಗೇಕೆ ತೊಂದರೆ...?"
	"ತೊಂದರೆ ಏನು ಬಂತು? ಅತಿಥಿ ಸತ್ಕಾರ ನಮ್ಮ ಕರ್ತವ್ಯ ಅಲ್ಲವೇ?"
	"ಹಾಗಾದರೆ ಹಸುವಿನ ಹಾಲು ಕೊಡಿರಿ." ಅಕ್ಷಯ್ ತಕ್ಷಣ ಕುಳಿತಲ್ಲಿಂದಲೇ ಮಡದಿ ಮಮತಾಳಿಗೆ ಕೂಗಿ ಮೂರು ಗ್ಲಾಸ್ ಹಸುವಿನ ಹಾಲನ್ನು ತರಲು ಹೇಳಿದ. ಹಾಲಿಗೆ ಒಂದಿಷ್ಟು ಬೆಲ್ಲ ಬೆರೆಸಿಕೊಂಡು ಬರಲೂ ಹೇಳಿದ. ಅಡುಗೆ ಮನೆಯಿಂದಲೇ ಮಮತಾ, `ತರ್ತೀನ್ರೀ' ಎಂದು ಹೇಳಿದಳು.
	"ಹೌದು, ತಾವು ಎಲ್ಲಿಂದ ಬಂದಿರುವಿರಿ...?" ಅಕ್ಷಯ್ ಬಂದಿದ್ದ ಅತಿಥಿಗಳನ್ನು ಪ್ರಶ್ನಿಸಿದ.
	"ನಾವು ಬಹಳ ದೂರದ ಊರಿನಿಂದ ಬಂದಿದ್ದೇವೆ."
	"ದೂರದ ಊರಿನಿಂದ ಅಂದರೆ...?"
	"ದೂರದ ಲೋಕದಿಂದ."
	"ಯಾವ ಲೋಕದಿಂದ...?"
	"ದೇವಲೋಕದಿಂದ."
	"ದೇವಲೋಕದಿಂದ...?"
	"ದೇವಲೋಕದ ಯಮಲೋಕದಿಂದ ಬಂದಿದ್ದೇವೆ." ಅಲ್ಲಿಯವರೆಗೆ ಅವರ ಬಗ್ಗೆ ಅಷ್ಟಾಗಿ ಗಮನ ಹರಿಸಿರದಿದ್ದ ಅಕ್ಷಯ್ ತಕ್ಷಣ ಅವರತ್ತ ತಿರುಗಿದ.
	"ಅಂದರೆ ನೀವು ಯಮದೂತರೇ...? ನೀವು ಯಮಕಿಂಕರು ತಾನೇ...?"
	"ಹೌದು, ನಾವು ಯಮಕಿಂಕರು."
	"ನಮ್ಮ ದೇಶದ ಸಿನಿಮಾ, ನಾಟಕ, ಕಿರು ತೆರೆಯ ಧಾರಾವಾಹಿ, ಯಕ್ಷಗಾನ, ಪುರಾಣದಲ್ಲಿ ಬಿಂಬಿಸುವ ವೇಷಭೂಷಣಗಳಲ್ಲಿ ಬರದೇ, ಇತ್ತೀಚಿನ ಮಾಮೂಲಿ ಮಾನವ ಸಹಜ ಉಡುಗೆ-ತೊಡುಗೆಗಳಲ್ಲಿ ಬಂದಿರುವಿರಾ...?"
	"ಹೌದು."
	"ನಿಮ್ಮ ಬಾಸ್ ಹೇಗಿದ್ದಾರೆ...?"
	"ಚೆನ್ನಾಗಿದ್ದಾರೆ."
	"ಅವರು ಬಂದಿಲ್ಲವೇ...?"
	"ಇಲ್ಲ ಬಂದಿಲ್ಲ ಸರ್. ನಮ್ಮನ್ನಷ್ಟೇ ಕಳುಹಿಸಿದ್ದಾರೆ."
	"ಇಲ್ಲಿಗೆ ಬಂದಿರುವ ಉದ್ದೇಶ...?"
	"ತಮ್ಮನ್ನು ಮಾತಾಡಿಸಿಕೊಂಡು ಸಾಧ್ಯವಾದರೆ ನಮ್ಮ ಜೊತೆಗೆ ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ."
	"ಹೇಗೆ ಬಂದಿದ್ದೀರಿ...? ಯಮರಾಜನ ಮುರಿಗೆ ಕೋಡಿನ ಮಹಿಷನ ಜೊತೆಗೆ ಬಂದಿದ್ದೀರಾ...?"
	"ತುಂಬಾ ದೂರ ಅಲ್ಲವೇ? ಅದಕ್ಕೇ ಮಹಿಷನ ಮೇಲೆ ಬರಲಿಲ್ಲ. ಸ್ಪೆಶಲ್ ಫ್ಲೈಟ್‍ನಲ್ಲಿ ಬಂದಿದ್ದೇವೆ."
	"ಹೌದಾ...? ಒಳ್ಳೆಯದು. ಅಂದರೆ ಕಾಲಕ್ಕೆ ತಕ್ಕಂತೆ ನೀವೂ ನಿಮ್ಮ ವಾಹನ, ಭಾಷೆ ಎಲ್ಲವನ್ನೂ ಬದಲಿಸಿಕೊಂಡಿರುವ ಹಾಗಿದೆ...?"
	"ಹೌದು ಸಾಹಿತಿವರ್ಯರೇ. ಮತ್ತೇನಾದರೂ ಕೇಳುವುದಿದೆಯೇ...?"
						****
	"ನೀವು ಬಂದಿದ್ದು ತುಂಬಾ ಸಂತೋಷ ತಂದಿದೆ ನನಗೆ."
	"ಹೌದೇ...? ಯಾಕೆಂದರೆ ನಮ್ಮನ್ನು ಯಾರೂ ಸಂತೋಷದಿಂದ ಸ್ವೀಕರಿಸುವುದಿಲ್ಲ ತಾನೇ...?"
	"ಖರೇ ಹೇಳಬೇಕಂದರೆ ನಾನು ನಿಮ್ಮ ಆಗಮನದ ನಿರೀಕ್ಷೆಯಲ್ಲಿಯೇ ಇದ್ದೆ. ನಿಮ್ಮ ಆಗಮನಕ್ಕೆ ಕಾತರಿಸಿ ಕಾಯುತ್ತಿದ್ದೆ."
	"ಹಾಗಾ...? ಅದ್ಹೇಗೆ ನಾವು ಬರುತ್ತೇವೆಂದು ನಿರೀಕ್ಷಿಸಿದ್ದಿರಿ...? ಯಮಕಿಂಕರರು ಎಂದರೆ ಎಲ್ಲರೂ ಭಯಭೀತರಾಗುತ್ತಿರುವಾಗ ನೀವು ಖುಷಿಪಟ್ಟಿದ್ದೇಕೆ...?"
	"ನಿಮಗೆ ಪ್ರತಿಯೊಬ್ಬ ಮನುಷ್ಯ ಜೀವಿಯ ತಳಬುಡ ಎಲ್ಲಾ ಗೊತ್ತು ಅಂತ ನನ್ನ ಅನಿಸಿಕೆ. ಹಾಗೆ ನನ್ನ ಬಗ್ಗೇನೂ ನಿಮಗೆ ಎಲ್ಲವೂ ಗೊತ್ತಿದೆ ಅಂತ ನಾನು ತಿಳಿದುಕೊಳ್ಳುವೆ. ನನ್ನ ಇಪ್ಪತ್ತನೆಯ ವಯಸ್ಸಿನಿಂದ ಅಂದರೆ ಸುಮಾರು ನಲವತ್ತೆಂಟು ವರ್ಷಗಳಿಂದ ನಾನು ಅಲರ್ಜಿಯ ಹಿಡಿತದಲ್ಲಿ ಸಿಕ್ಕು ವಿಲವಿಲ ಅಂತ ಒದ್ದಾಡುತ್ತಿರುವೆ. ಧೂಳದ ಅಲರ್ಜಿ, ಶೀತದ ಅಲರ್ಜಿ, ಊಟದಲ್ಲಿ ಅಲರ್ಜಿ, ಪರಾಗರೇಣುಗಳ ಅಲರ್ಜಿ ಹಾಗೇ ಹೀಗೆ ಅಂತ ನೂರೆಂಟು ಅಲರ್ಜಿಗಳಿಂದ ನರಳುತ್ತಿದ್ದೇನೆ. ಶೀತ, ನೆಗಡಿ, ವರ್ಷವಿಡೀ ಮೂಗಿನಲ್ಲಿ ಇಳಿಯುವ ಸಿಂಬಳ, ಮೂಗು ಕಟ್ಟುವಿಕೆ, ಕೆಮ್ಮು, ಕಫ, ಹಸಿರು ಕಫ, ಹಳದಿ ಕಫಗಳಿಂದಾಗುವ ಯಾತನೆ ಅನುಭವಿಸಿದವರಿಗೇ ಗೊತ್ತು. ಎದೆಯ ಶ್ವಾಸಕೋಶಗಳಲ್ಲಿ ಕಫ ಕಟ್ಟಿಕೊಂಡು ಉಸಿರಾಟ ನಿಂತಂತಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಮೂಗು ಕಟ್ಟುವಿಕೆಗಾಗಿ ಎರಡು ಸಾರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬರೀ ನೋವನ್ನು ಅನುಭವಿಸಿದ್ದನ್ನು ಬಿಟ್ಟರೆ ಮೂಗು ಕಟ್ಟುವಿಕೆಗೆ ಪರಿಹಾರ ಸಿಕ್ಕಿಲ್ಲ. ಅಂಥಹುದರಲ್ಲಿ ಹದಿನಾಲ್ಕು ವರ್ಷಗಳ ಹಿಂದೆ ಮೇಜರ್ ಥೈರಾಯಿಡ್ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಿಕೊಂಡದ್ದಾಗಿದೆ. ಎಂಟು ವರ್ಷಗಳ ಹಿಂದೆ ಎಂಜಿಯೋಪ್ಲಾಸ್ಟಿ ಮಾಡಿಸಿಕೊಂಡು ಹೃದಯದಲ್ಲಿ ಎರಡು ಸ್ಟೆಂಟ್‍ಗಳನ್ನು ಹಾಕಿಸಿಕೊಂಡು ಮಾತ್ರೆಗಳನ್ನು ಸೇವಿಸುತ್ತಾ ಟುಕು ಟುಕು ಅಂತ ದಿನಗಳನ್ನು ತಳ್ಳುತ್ತಿರುವೆ. ಈ ವರ್ಷ ಸತತ ಮೂರು ತಿಂಗಳುಗಳಿಂದ ನೆಗಡಿ, ಕೆಮ್ಮು, ಕಫಗಳ ಆರ್ಭಟಕ್ಕೆ ಸಿಲುಕಿ ನಲುಗುತ್ತಿದ್ದೇನೆ. ವೈದ್ಯರ ಸಲಹೆಯ ಮೇರೆಗೆ ಎಂಟಿಬಯೋಟಿಕ್ಸ್ ಮಾತ್ರೆಗಳನ್ನು ತಿಂದು ತಿಂದು ಸಾಕಾಗಿ ಹೋಗಿದೆ. ಹೋದವಾರ ಎರಡು ಮೂರು ದಿನ ಜ್ವರಗಳ ಬಾಧೆಯನ್ನೂ ಅನುಭವಿಸಿದೆ. ಬಹಳ ದಿನಗಳ ನಂತರ ಮೊದಲ ಸಲ ಜೀವನ ಸಾಕು ಎಂದೆನಿಸತೊಡಗಿದೆ. ಜೀವನೋತ್ಸಾಹ ಕಮರಿ ಹೋಗಿದೆ. ಅಂದು ಜ್ವರದ ತಾಪ ಹೆಚ್ಚಾಗಿತ್ತು. ಇಡೀ ರಾತ್ರಿ ನಿದ್ರೆ ಇಲ್ಲದೇ ಏನೇನೋ ಕನವರಿಸಿದೆ. ಅಪ್ಪ, ಅಮ್ಮನನ್ನು ತುಂಬಾ ಜ್ಞಾಪಿಸಿಕೊಂಡೆ. ಅಪ್ಪನೆಂದರೆ ನನಗೆ ತುಂಬಾ ಆತ್ಮೀಯ. ನಲವತ್ತೆರಡು ವರ್ಷಗಳ ಹಿಂದೆ ನಮ್ಮಿಂದ ದೂರವಾಗಿದ್ದ ಅಪ್ಪನನ್ನು ನೆನೆದು, `ಎಲ್ಲಿದ್ದೀಯೋ ಎಪ್ಪಾ...? ನನ್ನೂ ನೀನಿದ್ದಲ್ಲಿಗೆ ಕರ್ಕೊಂಡು ಹೋಗಿಬಿಡಲ್ಲ...?' ಎಂದು ಇಡೀ ರಾತ್ರಿ ಆಗಾಗ ಕನವರಿಸಿದೆ ನಿದ್ದೆ ಇಲ್ಲದೇ.
	ನನ್ನ ನರಳಾಟ ನೋಡಲಾರದೇ ಗಂಡು ಮಕ್ಕಳು ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ತಜ್ಞ ವೈದ್ಯರ ಹತ್ತಿರ ವಿವರವಾದ ತಪಾಸಣೆ ಮಾಡಿಸಿದರು. ರಕ್ತ ತಪಾಸಣೆ, ಮೂತ್ರ ತಪಾಸಣೆ, ಎಕ್ಸ್‍ರೇ, ಸ್ಕ್ಯಾನಿಂಗ್ ಅದೂ ಇದೂ ಅಂತ ಏನೇನೋ ಪರೀಕ್ಷೆ ಆಯಿತು. ಬಂದಿದ್ದ ವರದಿಗಳನ್ನು ಪರಿಶೀಲಿಸಿ ವೈದ್ಯರು, `ಶ್ವಾಸಕೋಶಗಳು ಎಪ್ಪತ್ತು ಪರ್ಸೆಂಟ್ ಡ್ಯಾಮೇಜ್ ಆಗಿವೆ. ಅಡ್ಮಿಟ್ ಆಗುವುದು ಒಳ್ಳೆಯದು. ಐಸಿಯುಗೆ ಸೇರಿಸುತ್ತೇವೆ. ವೆಂಟಿಲೇಟರ್ ಹಚ್ಚುತ್ತೇವೆ. ಇಲ್ಲವಾದರೆ ಜೀವ ಯಾವಾಗಲಾದರೂ ಗಾಳಿಯಲ್ಲಿ ಲೀನವಾಗಬಹುದು. ನಿಮ್ಮಿಷ್ಟ...' ಎಂದರು. ಮೆಡಿಕಲ್ ಇನ್ಸೂರೆನ್ಸ್ ಇದ್ದರೂ ಬೇಡವೆಂದು ವಾಪಾಸು ಮನೆಗೆ ಬಂದಿರುವೆ. ಇಂದಲ್ಲ, ನಾಳೆ ಹೋಗುವ ಜೀವಕ್ಕೆ ದುಬಾರಿ ಚಿಕಿತ್ಸೆ ಕೊಡಿಸುವ ಅವಶ್ಯಕತೆ ಇಲ್ಲ ಎಂದು ನನಗೆ ಅನಿಸಿತ್ತು. ಇನ್ಸೂರೆನ್ಸ್ ಕಂಪನಿಗೆ ಅನಾವಶ್ಯಕವಾಗಿ ನುಕ್ಸಾನು ಮಾಡುವ ಮನಸ್ಸು ನನಗಿರಲಿಲ್ಲ. ಅಪ್ಪನಲ್ಲಿ ಮಾಡಿಕೊಂಡಿದ್ದ ಮನವಿ ಸ್ವೀಕಾರವಾಗಿದೆ ಎಂದು ನಾನು ಸಂತಸಗೊಂಡೆ. ಈ ಒಂದು ಕಾರಣದಿಂದ ನಾನು ನಿಮ್ಮ ಆಗಮನವನ್ನು ನಿರೀಕ್ಷಿಸುತ್ತಿದ್ದೆ. ಇಂದಲ್ಲ, ನಾಳೆ ನೀವು ಬರುತ್ತೀರಿ ಎಂದು ಅಂದುಕೊಂಡಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ."
						****
	"ಸರ್, ಈ ನಿಮ್ಮ ಮೆಡಿಕಲ್ ರಿಪೋಟ್ಸ್ ಮೇಲೆ ಕಣ್ಣಾಡಿಸಬಹುದೇ...?" ಅಕ್ಷಯನ ಜೊತೆಗೆ ಮಾತಾಡುತ್ತಿದ್ದ ಯಮಕಿಂಕರನ ಜೊತೆಗಿದ್ದ ಇನ್ನೊಬ್ಬ ಯಮಕಿಂಕರ ವಿನೀತ ಭಾವದಲ್ಲಿ ಕೇಳಿದ.
	"ಧಾರಾಳವಾಗಿ. ನನ್ನ ಅಭ್ಯಂತರವೇನಿಲ್ಲ." ಆ ಯಮಕಿಂಕರ ಅಲ್ಲೇ ಮೇಜಿನ ಮೇಲಿದ್ದ ಮೆಡಿಕಲ್ ರಿಪೋರ್ಟ ಫೈಲನ್ನು ಕೈಗೆತ್ತಿಕೊಂಡು ಹೊರಗಡೆ ಹೆಜ್ಜೆ ಹಾಕಿದ. ಅಕ್ಷಯ್ ಮತ್ತೆ ಯಮಕಿಂಕರನ ಜೊತೆಗೆ ಮಾತಿಗಳಿದ.
	"ಪೂಜ್ಯರೇ, ನಾವಿನ್ನು ಹೊರಟು ಬಿಡೋಣವೇ...?" ಎಂದು ಅಕ್ಷಯ್ ಹೇಳುವಷ್ಟರಲ್ಲಿ ಮಮತಾ ಹಸುವಿನ ಹಾಲಿನ ಲೋಟಗಳೊಂದಿಗೆ ಬಂದಳು. ಅಕ್ಷಯ್ ಮತ್ತು ಅಲ್ಲಿದ್ದ ಯಮಕಿಂಕರನ ಕೈಗೆ ಲೋಟ ಕೊಟ್ಟು ಮತ್ತೊಂದನ್ನು ಹೊರಗೆ ಫೈಲಿನ ರಿಪೋಟ್ಸ್‍ಗಳಲ್ಲಿ ಮುಳುಗಿದ್ದ ಇನ್ನೊಬ್ಬನ ಕೈಗೆ ಉಳಿದಿದ್ದ ಲೋಟ ಕೊಟ್ಟು ಹೊರಟಳು.
	"ನಿಮಗೆ ನಮ್ಮೊಂದಿಗೆ ಬರಲು ಅಷ್ಟು ಖುಷೀನಾ...?" ಯಮಕಿಂಕರ ಮಮತಾ ಹೋಗುತ್ತಿದ್ದಂತೆ ಪ್ರಶ್ನಿಸಿದ.
	"ನನ್ನಿಂದ ಈ ಜಗತ್ತಿಗೆ ಇನ್ನೇನಾಗಬೇಕಿದೆ...? ನಾನೀಗ ಭೂತಾಯಿಗೆ ಭಾರ ಅಷ್ಟೇ. ದಿನಾಲೂ ಹಲವಾರು ವೇದನೆಗಳಲ್ಲಿ ನಲುಗಿ, ನಲುಗಿ, ಕೆಮ್ಮಿ ಕೆಮ್ಮಿ, ಕ್ಯಾಕರಿಸಿ ಕಫ ಉಗುಳಿ, ಉಗುಳಿ ಮಾನಸಿಕವಾಗಿ, ದೈಹಿಕವಾಗಿ ಒದ್ದಾಡುವುದಕ್ಕಿಂತ ಜೀವನದ ನಾಟಕ ರಂಗಕ್ಕೆ ತೆರೆ ಎಳೆಯುವುದೇ ಲೇಸು ಎಂದು ನಿರ್ಧರಿಸಿದ್ದೇನೆ."
	"ಭೂಲೋಕದ ಜೀವನದ ಮೇಲೆ ಒಂದಿಷ್ಟೂ ವ್ಯಾಮೋಹ ಇಲ್ಲವೇ...?" 
  	"ಅಂಥಹ ವ್ಯಾಮೋಹವೇನೂ ಇಲ್ಲ. ಇಷ್ಟು ವರ್ಷಗಳ ಜೀವನದಲ್ಲಿ ಎಲ್ಲವನ್ನೂ ಕಂಡಿದ್ದಾಗಿದೆ."
	"ಅಂಥಹ ವ್ಯಾಮೋಹವಿಲ್ಲ ಎಂದರೆ ಮತ್ತೆಂಥಹ ವ್ಯಾಮೋಹವಿದೆ...? ಎಲ್ಲೋ ಒಂಚೂರು ಯಾವುದೋ ವ್ಯಾಮೋಹ ಇರುವ ಹಾಗಿದೆ...?"
	"ಅದೇ ಈಗ ಬಂದಿದ್ದಳಲ್ಲ, ಜೀವನ ಸಂಗಾತಿ, ಅವಳ ಬಗ್ಗೆ ಒಂದಿಷ್ಟು ಚಿಂತೆ ಇದೆ. ನಲವತ್ತೈದು ವರ್ಷಗಳವರೆಗೆ ಇಬ್ಬರೂ ಜೊತೆಗೂಡಿಕೊಂಡು ಬಂದಿದ್ದೇವೆ. ಪರಸ್ಪರ ಅರಿತುಕೊಂಡು ಅವಲಂಬಿಸಿ ಜೀವನ ಸಾಗಿಸುತ್ತಿದ್ದೇವೆ. ಮಕ್ಕಳು ಮರಿಗಳು ಏನೋ ಇದ್ದಾರೆ. ನನ್ನ ಅಗಲಿಕೆಯಿಂದ ಅವಳು ಒಂದಿಷ್ಟು ದಿನ ತುಂಬಾ ನೋವು ಅನುಭವಿಸುತ್ತಾಳೆ."
	"ಹೌದಾ...? ಮತ್ತೆ... ಏನೇನೋ ಬರೆಯಬೇಕೆಂಬ ಸ್ಕೆಚ್ ಬೇರೆ ಹಾಕಿಕೊಂಡಿರುವ ಹಾಗಿದೆ...? ಬರವಣಿಗೆಯಲ್ಲಿ ಉತ್ಸಾಹ ಇನ್ನೂ ಪುಟಿದೆದ್ದು ಪುಟಿಯುತ್ತಿರುವ ಹಾಗಿದೆ...?"
	"ಆದರೇನು? ಎಲ್ಲದಕ್ಕೂ ಒಂದು ಕೊನೆ ಅಂತ ಇದೆಯಲ್ಲ...?"
	"ಇರಲಿ, ಇರಲಿ. ಮೊದಲು ನಿಮ್ಮ ಆರಾಧ್ಯ ದೈವ ಶಿವನ ಆದೇಶ ನಮ್ಮ ಬಾಸ್‍ಗೆ ಆಗಬೇಕು. ಆಗಷ್ಟೇ ನಮ್ಮ ಕೆಲಸ ಆರಂಭವಾಗುತ್ತದೆ."
	"ನಿಮ್ಮ ವೈದ್ಯಕೀಯ ವರದಿ ನೀವು ತುಂಬಾ ಕ್ರಿಟಿಕಲ್ ಎಂದು ಹೇಳಿತ್ತಲ್ಲ, ಅದರ ಪ್ರಕಾರ ನೀವು ಗೊಟಕ್ ಎಂದಿರಬೇಕು ಎಂದು ಅಂದುಕೊಂಡು ಬಂದಿದ್ದೇವೆ. ಆದರೆ ಇಲ್ಲಿ ನೋಡಿದರೆ ನೀವು ಹಾಯಾಗಿ ಏನನ್ನೋ ಬರೆಯುತ್ತಾ ಕುಳಿತಿರುವಿರಿ. ನಿಮ್ಮೊಳಗೆ ಅದೆಷ್ಟೋ ನೋವಿದ್ದರೂ ನಿಮ್ಮ ಜೀವನೋತ್ಸಾಹ ಕುಂದಿಲ್ಲ."
	"ಆದರೆ ನನಗೇಕೋ ಬೇಸರ ಎಂದೆನಿಸುತ್ತಿದೆ."
	ಅಷ್ಟರಲ್ಲಿ ಮೆಡಿಕಲ್ ರಿಪೋಟ್ರ್ಸ್ ಸ್ಟಡಿಮಾಡಲು ಹೊರಗೋಗಿದ್ದ ಯಮಕಿಂಕರ್ ತುಸು ಅವಸರದಲ್ಲೇ ಎನ್ನುವುದಕ್ಕಿಂದ ಧಾವಿಸಿಕೊಂಡೇ ಬಂದ ಎಂದೆನ್ನಬಹುದು. 
	"ಅಣ್ಣಾ, ನಾನು ಈ ಮೆಡಿಕಲ್ ರಿಪೋಟ್ರ್ಸ್‍ಗಳನ್ನೆಲ್ಲಾ ಕೂಲಂಕಶವಾಗಿ ಅಭ್ಯಾಸ ಮಾಡಿದೆ. ಎಕ್ಸ್‍ರೇ ಫಿಲ್ಮ್ಸ್, ಸ್ಕ್ಯಾನಿಂಗ್ ಫಿಲ್ಮ್ಸ್ ಎಲ್ಲಾ ತಾಳೆ ಮಾಡಿ ನೋಡಿದೆ. ಈ ರಿಪೋಟ್ರ್ಸ್ ಎಲ್ಲಾ ತಪ್ಪು ತಪ್ಪಾಗಿವೆ. ಸರ್‍ರ ಶ್ವಾಸಕೋಶಗಳ ಕಾರ್ಯಕ್ಷಮತೆ ಚೆನ್ನಾಗಿಯೇ ಇದೆ. ಅಷ್ಟರಲ್ಲಿ ಬಾಸ್ ಫೋನ್ ಸಹ ಬಂತು. ಯಮಲೋಕದಿಂದಲೇ ಅವರೂ ರಿಪೋಟ್ರ್ಸ್‍ಗಳನ್ನೆಲ್ಲಾ ಅಭ್ಯಾಸ ಮಾಡಿದರಂತೆ. ಅಷ್ಟರಲ್ಲಿ ಆಗಲೇ ಶಿವನಿಂದ ನಮ್ಮ ಬಾಸ್‍ಗೆ ಬುಲಾವ್ ಬಂದಿತ್ತಂತೆ. `ವರದಿಗಳೆಲ್ಲವೂ ತಪ್ಪು ತಪ್ಪಾಗಿವೆ. ಆ ಆಸ್ಪತ್ರೆ ಮತ್ತು ವೈದ್ಯರಿಗೆ ಒಂದಿಷ್ಟು ಬಿಸಿ ಮುಟ್ಟಿಸಿ ಬರಲು ನಮಗೆ ತಿಳಿಸಿದ್ದಾರಂತೆ' ಎಂದು ಬಾಸ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸರ್, ನೀವು ಆರೋಗ್ಯವಾಗಿಯೇ ಇದ್ದೀರಿ. ಏನೋ ಒಂದಿಷ್ಟು ಅಲರ್ಜಿಕ್ ನೆಗಡಿ, ಕೆಮ್ಮು ಅಷ್ಟೇ. ನಿಮ್ಮನ್ನು ಸುಮ್ಮಸುಮ್ಮನೇ ಅಡ್ಮಿಟ್ ಮಾಡಿಕೊಂಡು ಐಸಿಯು, ವೆಂಟಿಲೇಟರ್ ಅದೂ ಇದೂ ಅಂತ ಕೆಲವು ಲಕ್ಷಗಳಲ್ಲಿ ನಿಮ್ಮನ್ನು ಸುಲಿಗೆ ಮಾಡಬೇಕೆಂದು ಆಸ್ಪತ್ರೆಯ ವೈದ್ಯರು ಅಂದುಕೊಂಡಿರಬಹುದು ಅಷ್ಟೇ. ನೀವು ಆವಾಗಲೇ ಇವುಗಳನ್ನು ಹಿಡಿದುಕೊಂಡು ಸಕೆಂಡ್ ಒಪಿನಿಯನ್‍ಗೆ ಹೋಗಿದ್ದರೆ ಆ ಆಸ್ಪತ್ರೆ, ವೈದ್ಯರ ಬಂಡವಾಳ ಬಯಲಿಗೆ ಬರುತ್ತಿಲ್ಲದೇ ಸತ್ಯ ಏನೆಂದು ನಿಮಗೆ ಗೊತ್ತೂ ಆಗುತ್ತಿತ್ತು. ಡೋಂಟ್ ವರಿ ಸರ್. ಇನ್ನೊಂದು ವಾರದಲ್ಲಿ ಮೊದಲಿನಂತಾಗುತ್ತೀರಿ. ವಾತಾವರಣದಲ್ಲಿ ಒಂದಿಷ್ಟು ತೀವ್ರಗತಿಯ ಬದಲಾವಣೆಗಳು ಆಗುತ್ತಿರುವುದರಿಂದ ಹೀಗಾಗಿದೆ. ತುಸು ಅಲರ್ಜಿಕ್ ಇದ್ದವರಿಗೆ ಹೆಚ್ಚಿನ ಕಿರಿಕಿರಿ ಎಂದೆನಿಸುತ್ತಿರಬೇಕು ಅಷ್ಟೇ" ಎಂದು ಒಂದೇ ಸಮನೇ ಬಡಬಡಿಸಿದ ಯಮಕಿಂಕರ. ಅಕ್ಷಯ್ ಬಿಟ್ಟ ಕಣ್ಣುಗಳಿಂದ ಅವನನ್ನೇ ನೋಡತೊಡಗಿದ.
	"ಇಲ್ಲಪ್ಪ, ನಿಜವಾಗಿಯೂ ನನಗೆ ಜೀವನ ಸಾಕಾಗಿ ಹೋಗಿದೆ. ಕರೆದುಕೊಂಡು ಹೋಗಿಬಿಡಿರಿ." ಅಕ್ಷಯನ ಜೊತೆಗೆ ಮಾತಾಡುತ್ತಿದ್ದ ಯಮಕಿಂಕರನೂ ಆ ವೈದ್ಯಕೀಯ ವರದಿಗಳ ಮೇಲೆ ಕಣ್ಣಾಡಿಸಿದ.
	"ಸರ್, ಹಂಗೆಲ್ಲ ಮಾಡುವುದಕ್ಕಾಗುವುದಿಲ್ಲ. ಹಾಗೇನಾದರೂ ಅಚಾತುರ್ಯವಾದರೆ ಶಿವ ನಮಗೆ ತಕ್ಕ ಶಿಕ್ಷೆ ಕೊಡುತ್ತಾನೆ. ಜೊತೆಗೆ ನಮ್ಮ ಬಾಸ್ ಚರ್ಮ ಸುಲಿಯುವಂತೆ ಚಬಕದಿಂದ ಹೊಡೆಸುತ್ತಾನೆ. ನಿಮಗೆ ಇನ್ನೂ ಹತ್ತನ್ನೆರಡು ವರ್ಷಗಳ ಆಯುಷ್ಯವಿದೆ. ನಿಮ್ಮಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನೂ ಹಲವಾರು ಸಾಹಿತ್ಯ ಕೃತಿರತ್ನಗಳು ಹೊರಹೊಮ್ಮಬೇಕಿದೆ. ಮನಸ್ಸಿನಲ್ಲಿರುವ ಬೇಸರವನ್ನು ತೆಗೆದು ಹಾಕಿ ಆರಾಮವಾಗಿ ಇರಿ. ಆವಾಗ ನಾವು, ನೀವು ಮತ್ತೆ ಭೆಟ್ಟಿಯಾಗೋಣ. ಇನ್ನೇನು ಕೆಲವೇ ದಿನಗಳಲ್ಲಿ ನೀವು ಮೊದಲಿನಂತಾಗುವಿರಿ. ಬಿ ಹ್ಯಾಪಿ ಸರ್. ಮೇಡಂ ಮುಖ ನೋಡಿಕೊಂಡು ಸುಖವಾಗಿರಿ."
	"ಇನ್ನೂ ಹತ್ತನ್ನೆರಡು ವರ್ಷಗಳ ಆಯುಷ್ಯವಿದೆಯೇ ನನಗೆ...? ಭಾಪರೇ! ಈಗಲೇ ತುಂಬಾ ತೊಂದರೆಯಾಗಿದೆ. ಮುಂದೆ ಹೇಗಪ್ಪಾ ಜೀವನ ಎದುರಿಸುವುದು...?"
	"ಸರ್, ನೀವು ಹೀಗಂತೀರಲ್ಲ, ನಿಮಗಿಂತಲೂ ಅತೀ ವರ್ಸ್ಟ್ ಕಂಡೀಶನ್‍ನಲ್ಲಿರುವ ವ್ಯಕ್ತಿಗಳನ್ನು ಗಮನಿಸಿ ನೀವು ತಳೆದಿರುವ ಅಭಿಪ್ರಾಯವನ್ನು ಬದಲಿಸಿಕೊಳ್ಳಿರಿ. ಕೆಲವೊಂದು ಪಾಶ್ವವಾಯು ರೋಗಿಗಳು ಹಾಸಿಗೆಯಲ್ಲಿ ಮಲಗಿದಲ್ಲಿಯೇ ನರಕ ಸದೃಶ ಜೀವನವನ್ನು ಅನುಭವಿಸುತ್ತಾ ಹತ್ತನ್ನೆರಡು ವರ್ಷಗಳನ್ನು ತಳ್ಳುತ್ತಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಅಂಥಹವರಿಗೆ ಹೋಲಿಸಿದರೆ ನಿಮ್ಮ ತೊಂದರೆ ಏನೂ ಅಲ್ಲ ಅಂತ ನನ್ನ ಅನಿಸಿಕೆ. ನಗುನಗುತ್ತಾ ಖುಷಿಖುಷಿಯಿಂದ ಇದ್ದುಬಿಡಿ ಸರ್, ಎಲ್ಲವೂ ಸರಿ ಹೋಗುತ್ತದೆ."
	"ಹೀಗಂತೀರಾ...? ನಿಮ್ಮ ಆದೇಶ ಪಾಲಿಸದೇ ಬೇರೆ ದಾರೀನೇ ಇಲ್ಲವಲ್ಲ...? ಹಾಗೇ ಆಗಲಿ ಪೂಜ್ಯರೇ."
	"ನಾವೇನು ಪೂಜ್ಯರಲ್ಲ."
	"ಹಾಗೇಕೆ ಅನ್ನುವಿರಿ? ಭೂಮಿಯ ಮೇಲೆ ಮನುಷ್ಯ ಜೀವಿಯ ಉದ್ಭವವಾದಾಗಿನಿಂದ ನಿಮ್ಮ ಪಾತ್ರ ಮುಂದುವರಿದುಕೊಂಡು ಬಂದಿದೆ ಎಂಬುದು ನನ್ನ ಅನಿಸಿಕೆ. ಸೃಷ್ಟಿಕರ್ತನಿಗೆ ಸಮಾನ ವಯಸ್ಕರು ನೀವು. ಹೀಗೇ ನನ್ನ ಪ್ರಣಾಮಗಳನ್ನು ಸ್ವೀಕರಿಸಿಬಿಡಿರಿ. ನಿಮ್ಮ ಆಶೀರ್ವಾದ, ಅನುಗ್ರಹ ಈ ನರಮಾನವನ ಮೇಲೆ ಸದಾ ಇರಲಿ" ಎಂದೆನ್ನುತ್ತಾ ಅಕ್ಷಯ್ ಯಮಕಿಂಕರರಿಬ್ಬರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿಯೇ ಬಿಟ್ಟ.
	"ನೀವೂ ನಮಗೆ ಅಷ್ಟೇ ಪೂಜ್ಯರು. ನೀವೂ ಅದೆಷ್ಟೋ ಜನ್ಮಗಳನ್ನು ದಾಟಿಕೊಂಡು ಬಂದಿರುವ ಶ್ರೇಷ್ಠ ಮಾನವರು. ನಿಮಗೂ ನಮ್ಮ ನಮನಗಳು. ಶುಭವಾಗಲಿ" ಎಂದೆನ್ನುತ್ತಾ ಯಮಕಿಂಕರರಿಬ್ಬರೂ ಅಕ್ಷಯನ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿದಾಗ ಅದೊಂದು ಅವಿಷ್ಮರಣೀಯ ಗಳಿಗೆಯಾಯಿತು. ಪರಸ್ಪರ ತಬ್ಬಿಕೊಂಡು ಸಂಭ್ರಮಿಸಿದರು. 
	ಯಮಕಿಂಕರರು ಹೊರಡಲು ಹೆಜ್ಜೆ ಹಾಕಿದರು. ಇನ್ನೇನು ಕೋಣೆಯ ಬಾಗಿಲಿನ ಹತ್ತಿರ ಇದ್ದರು. ಅಷ್ಟರಲ್ಲಿ ಮಮತಾ ಬಾಗಿಲಲ್ಲಿ ಪ್ರತ್ಯಕ್ಷಳಾದಳು. ಪ್ರತಿಸಾರೆ ಯಾರಾದರೂ ಸಾಹಿತ್ಯಾಭಿಮಾನಿಗಳು, ಸಾಹಿತಿಗಳು ಮನೆಗೆ ಬಂದಾಗ ಅವರ ಪರಿಚಯವನ್ನು ತಪ್ಪದೇ ಮಮತಾಗೆ ಮಾಡಿಸುತ್ತಿದ್ದ ಅಕ್ಷಯ್. ಈ ಸಾರೆಯ ಈ ಅತಿಥಿಗಳ ಪರಿಚಯವನ್ನೇ ಮಾಡಿಸಲಿಲ್ಲವಲ್ಲ ಎಂಬ ಅಳುಕು ಅವಳ ಮನದಲ್ಲಿ ಇದ್ದದ್ದು ನಿಜ. ಅತಿಥಿಗಳಿಬ್ಬರೂ ಹೊರಡುವ ತರಾತುರಿಯಲ್ಲಿ ಇರುವುದನ್ನು ಗಮನಿಸಿದ ಮಮತಾ, `ರೀ, ಇವರು...? ಇವರ ಪರಿಚಯವನ್ನೇ ಮಾಡಿಕೊಡಲಿಲ್ಲವಲ್ಲ...? ನಿಮ್ಮ ಅಭಿಮಾನಿಗಳೇ ಅಥವಾ ಸಾಹಿತಿಗಳೇ? ಬಹಳ ಹೊತ್ತು ಇವರು ನಿಮ್ಮ ಜೊತೆಗೆ ಸಮಯ ಕಳೆದಿದ್ದಂತೂ ನಿಜ' ಎಂದು ಥಟ್ಟಂತ ಕೇಳಿಯೇ ಬಿಟ್ಟಳು.
	"ಬಾ ಬಾ ಮಮತಾ. ಮಾತಿನ ಗಡಿಬಿಡಿಯಲ್ಲಿ ಇವರನ್ನು ನಿನಗೆ ಪರಿಚಯಿಸುವುದನ್ನು ಮರೆತೇ ಬಿಟ್ಟಿದ್ದೆ. ಅಂದ ಹಾಗೆ ಇವರು... ಇವರು... ಯಮಲೋಕದಿಂದ ಬಂದಿರುವ ಯಮಕಿಂಕರರು..." ತೊದಲುತ್ತಾ ಅವರನ್ನು ಪರಿಚಯಿಸಿದ ಅಕ್ಷಯ್. ಅವಳ ಬಗ್ಗೆ ಅವರಿಗೆ ಹೇಳಿದ. ಮೂರ್ಛೆ ಸರದಿ ಮಮತಾಳದು. ಹೇಗೇ ಸಾವರಿಸಿಕೊಂಡಳು.
	"ಹಾಂ! ಏನಂದಿರೀ...?"
	"ಅದೇ ಮಮತಾ, ಇವರು ಯಮಕಿಂಕರರು" ಎಂದು ಹೇಳುತ್ತಾ ಅಕ್ಷಯ್ ಅವರ ಜೊತೆಗೆ ನಡೆಸಿದ್ದ ಮಾತುಕತೆಗಳನ್ನು ವಿವರಿಸಿದ. 
	"ತಾಯಿ, ನೀವು ಪರಮ ಶಿವಭಕ್ತರು. ನಿಮ್ಮ ಭಕ್ತಿಯ ಪವರ್ ತುಂಬಾ ದೊಡ್ಡದು. ಇವರನ್ನು ಸದ್ಯ ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ನಿಮ್ಮ ಪುಣ್ಯದ ಫಲ ಬಹಳ ಇದೆ. ನಿಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಿಯೇ ಇದೆ. ಎಲ್ಲವೂ ಒಳಿತಾಗುತ್ತದೆ ತಾಯಿ. ನಾವಿನ್ನು ಹೊರಡುತ್ತೇವೆ. ಶುಭವಾಗಲಿ" ಎಂದೆನ್ನುತ್ತಾ ಯಮಕಿಂಕರರು ದಾಪುಗಾಲು ಹಾಕುತ್ತಾ ಹೊರಟೇ ಬಿಟ್ಟರು. ನೋಡನೋಡುತ್ತಿದ್ದಂತೆ ಕಣ್ಮರೆಯಾಗಿಯೂ ಬಿಟ್ಟರು. ಅಕ್ಷಯ್, ಮಮತಾ ಪರಸ್ಪರ ಮುಖ ಮುಖ ನೋಡುತ್ತಾ ತಬ್ಬಿಬ್ಬಾಗಿ ನಿಂತುಕೊಂಡರು.
	
	*ಶೇಖರಗೌಡ ವೀ ಸರನಾಡಗೌಡರ್,

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಅಪ್ಪಾ… ಎಲ್ಲಿದ್ದೀಯೋ…? ನನ್ನೂ ಕರ್ಕೊಂಡು ಹೋಗೋ…..”

  1. I think this is a real life story. Man can only be live long life with his deeds but not by the medicine. Thanks for conveying message that one should be optimistic and do his duty without giving trouble to others with faith and love🙏🙏

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter