- ರಾಘವೇಂದ್ರ ಮಂಗಳೂರು
ಬೆಣ್ಣೆ ಕಳ್ಳ – ಪರ್ಸ್ ಕಳ್ಳ – ಚಿನ್ನ ಕಳ್ಳ – ಕಾಪಿರೈಟ್ ಕಳ್ಳ – ಹೃದಯ ಕಳ್ಳ – ರೇಶನ್ ಕಳ್ಳ – ಸೈಟ್ ಕಳ್ಳ…ಹೀಗೆ ಕಳ್ಳರಲ್ಲಿ ಹಲವಾರು ಬಗೆ. ಇನ್ನು ಮನೆ ಕಳ್ಳನನ್ನು ಆ ‘ ಮಹಾದೇವ ‘ ಕೂಡ ಹುಡುಕಿ ಕೊಡಲಾರ ಎಂಬ ಮಾತಿದೆ. ಕಳ್ಳ ಗುಂಡಣ್ಣ ಹೆಚ್ಚು ಓದಲಿಲ್ಲ. ನಿಜ ಹೇಳಬೇಕೆಂದರೆ ಕಳ್ಳತನಕ್ಕೂ ಓದಿಗೆ ಸಂಬಂಧವೇ ಇಲ್ಲ. ಹಿಂದಿನ ಕಾಲದ ‘ ಅರವತ್ನಾಲ್ಕು ‘ ವಿದ್ಯೆಗಳಲ್ಲಿ ಒಂದಾದ ‘ ದ್ಯೂತ ನೈಪುಣ್ಯ ‘ (ಕಪಟ – ಮೋಸ) ವಿದ್ಯೆಯಲ್ಲಿ ಗುಂಡಣ್ಣ ಪಾಂಡಿತ್ಯ ಪಡೆದಿದ್ದ. ಈಗ ‘ ಸರಸ್ವತಿ ‘ ಕೃಪ ಕಟಾಕ್ಷಗಿಂತಲೂ ‘ ಲಕ್ಷ್ಮಿ’ ಕಟಾಕ್ಷಕ್ಕೆ ತುಸು ಅಲ್ಲ ಅಮೂಲ್ಯ ಬೆಲೆ ಎಂದು ಈಗಷ್ಟೇ ಹುಟ್ಟಿದ ಹಸುಗೂಸಿಗೂ ಗೊತ್ತು.
ಓದು ಬರಹ ಗೊತ್ತಿಲ್ಲದವರ ಮೊದಲ ಆಯ್ಕೆ ಕಳ್ಳತನ. ಹುಟ್ಟಿದ ಪ್ರತೀ ಗಂಡಸು ಜೀವನ ಸಾಗಿಸಲು ಏನಾದರೂ ಘನಂದಾರಿ ಕೆಲಸ ಮಾಡಲೇಬೇಕು…ಕಳ್ಳತನ ಮಾಡುತ್ತಾ ಆರಾಮಾಗಿ ಜೀವನ ಸಾಗಿಸಬಹುದು ಎಂದು ನಂಬಿದ ಸಹಸ್ರಾರು ಜನರಲ್ಲಿ ಗುಂಡಣ್ಣನೂ ಒಬ್ಬ. ಆದರೆ ಗುಂಡಣ್ಣ ಅಷ್ಟೇ ಅಲ್ಲ ಯಾವ ಕಳ್ಳನೂ ಪಬ್ಲಿಕ್ ಆಗಿ ತಾನು ಕಳ್ಳ ಎಂದು ಹೇಳಿ ಕೊಳ್ಳುವುದಿಲ್ಲ. ಅದೇ ದುರಂತ!
ವಂಚನೆ, ಸುಲಿಗೆ, ಮೋಸ, ದಗುಲು ಬಾಜಿತನ, ನಂಬಿಕೆ ದ್ರೋಹ, ಸುಳ್ಳು ಹೇಳುವುದು, ಖೆಡ್ಡಾ ತೋಡುವದು ಇನ್ನೂ ಇತರ ಹತ್ತಾರು ಲಕ್ಷಣಗಳು ಗುಂಡಣ್ಣನಲ್ಲಿ ಅಡಕವಾಗಿದ್ದರೂ ಹೊರಗಿನ ಪ್ರಪಂಚಕ್ಕೆ ಗುಂಡಣ್ಣ ಒಬ್ಬ ಧೀಮಂತ ನೇತಾರ, ಒಬ್ಬ ಬಡವರ ಬಂಧು, ಒಬ್ಬ ಕ್ರಿಯಾಶೀಲ ಉದ್ಯಮಿ, ಒಬ್ಬ ಶಿಕ್ಷಣ ಪ್ರೇಮಿ, ಒಬ್ಬ ಉತ್ತಮ ಪೌರ, ಒಬ್ಬ ಶ್ರೀಮಂತ ಹಾಗೂ ಒಬ್ಬ ಸಮಾಜ ಸುಧಾರಕನಂತೆ ಕಾಣುತ್ತಿದ್ದ.
ನಿಜ ಹೇಳಬೇಕೆಂದರೆ ಗುಂಡಣ್ಣ ವಾಸ್ತವವಾಗಿ ‘ ಕಳ್ಳ ಗುಂಡಣ್ಣ ‘ ಎಂದು ಯಾರಿಗೂ ಗೊತ್ತಿಲ್ಲ. ಪ್ರಪಂಚ ತನ್ನಷ್ಟಕ್ಕೆ ತಾನು ಗುರುತಿಸಬೇಕು ಅಷ್ಟೇ… ಜಗತ್ತಿನಲ್ಲಿ ಹಲವಾರು (ಕಳ್ಳ) ವೃತ್ತಿಗಳಿವೆ. ಎಂ ಎಲ್ ಎ, ಎಂ ಪಿ, ಮಂತ್ರಿ, ಡಾಕ್ಟರ್, ಲಾಯರ್, ಐ ಎ ಎಸ್, ಕೆ ಎ ಎಸ್, ಸರ್ಕಾರಿ ಅಧಿಕಾರಿ ಎಂದು ‘ ನೇಮ್ ಪ್ಲೇಟ್ ‘ ಕೆಲವರು ಹಾಕಿಕೊಳ್ಳಬಹುದು. ಆದರೆ ಕಳ್ಳತನ ಮಾಡುವವರು ತಾವು ಮಾಮೂಲಿ ಕಳ್ಳ, ಜಾಣ ಕಳ್ಳ, ದರೋಡೆ ಕೋರ ಎಂದು ಮನೆ ಮುಂದೆ ಬೋರ್ಡ್ ಹಾಕಲು ಆಗುವದಿಲ್ಲ. ಅದರಂತೆ ‘ ವಿಸಿಟಿಂಗ್ ಕಾರ್ಡ್ ‘ ಮುದ್ರಿಸಿ ಜನರಿಗೆ ಹಂಚಲು ಗುಂಡಣ್ಣನಂತವರಿಗೆ ಸಾಧ್ಯವಾಗುವುದಿಲ್ಲ… ಇದೇ ಈ ವೃತ್ತಿಯ ವೀಕ್ ಪಾಯಿಂಟ್.
ಗುಂಡಣ್ಣನ ಪ್ರತಿಭೆಯನ್ನು, ಜನಪ್ರಿಯತೆಯನ್ನು ಮೊದ ಮೊದಲು ಯಾರೂ ಸರಿಯಾಗಿ ಗುರುತಿಸಿಲಿಲ್ಲ. ಯಾವುದಾದರೂ ನಾಡಿನ ಪ್ರಮುಖ ದಿನಪತ್ರಿಕೆ ತನ್ನ ಫೋಟೋ ಜೊತೆಗೆ ಸಂದರ್ಶನ ಕೂಡ ಪ್ರಕಟಿಸಿದರೆ ಚೆನ್ನಾಗಿರುತ್ತದೆ ಎಂದು ಆಗಾಗ್ಗೆ ಗುಂಡಣ್ಣನ ಮನಸು ಬಯಸುತಿತ್ತು. ಆದರೆ ತನ್ನಲ್ಲಿನ ಪ್ರತಿಭೆಯನ್ನು ಯಾವ ಪತ್ರಿಕೆಯೂ ಗುರುತಿಸದೇ ಇದ್ದದ್ದು ಸಹಜವಾಗಿ ಬೇಸರ ತಂದಿತು ಗುಂಡಣ್ಣನಿಗೆ.
ತನ್ನ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ ಎಂದರೆ ‘ ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳಲು ‘ ಒಂದು ಪತ್ರಿಕೆ ಹಾಗೂ ಟಿ ವಿ ಚಾನಲ್ ಅವಶ್ಯಕತೆ ಇದೆ ಎಂದು ಶ್ರೀಮಂತ ‘ ಜಾಣ ಗುಂಡಣ್ಣ ‘ ನಿಗೆ ಬೇಗ ಗೊತ್ತಾಯಿತು. ಇನ್ನು ತಡ ಮಾಡದೇ ‘ ರಾಜ್ಯೋತ್ಸವ ‘ ದ ಶುಭ ದಿನದಂದು ಒಂದು ಪ್ರಖ್ಯಾತ ದಿನಪತ್ರಿಕೆ ಹಾಗೂ ಟಿ ವಿ ವಾಹಿನಿಯನ್ನು ಖರೀದಿ ಮಾಡಿದ. ಇನ್ನು ಮರುದಿನದಿಂದ ವೀಕ್ಷಕರು ಮುಂಜಾನೆ ಬ್ರಷ್ ಬಾಯಲ್ಲಿ ಇಟ್ಟುಕೊಂಡಾಗಿನಿಂದ ರಾತ್ರಿ ಗೊರಕೆ ಹೊಡೆಯುವವರೆಗೆ ‘ ಗುಂಡಣ್ಣ ಸ್ತುತಿ ‘ (ಭಜನೆ) ನಿರಂತರವಾಗಿ ಟಿ ವಿ ನಲ್ಲಿ ಪ್ರಸಾರವಾಗುವಂತೆ ಏರ್ಪಾಟು ಮಾಡಿಕೊಂಡ. ಹಾಗೆಯೇ ದಿನ ಪತ್ರಿಕೆಯ ಮುಖ ಪುಟದಲ್ಲಿ ತನ್ನ ಫೋಟೋ ದಿನವೂ ಬರುವಂತೆ ವ್ಯವಸ್ಥೆ ಮಾಡಿದ. ನಂತರದ ದಿನಗಳಲ್ಲಿ ಗುಂಡಣ್ಣನ ಜನಪ್ರಿಯತೆಯ ಗ್ರಾಫ್ ಸರ್ರನೆ ಏರತೊಡಗಿತು. ಕೆಲವೇ ವರ್ಷಗಳಲ್ಲಿ ದೇಶದ ಪ್ರಮುಖ ಉದ್ಯಮಿ ಎಂದು ಗುರುತಿಸಲ್ಪಟ್ಟ.
ಒಂದು ಜೇಬಿನಲ್ಲಿ ಟಿ ವಿ ಮತ್ತೊಂದು ಜೇಬಿನಲ್ಲಿ ಪ್ರೆಸ್ ಇದ್ದರೆ ಅದರ ಕಿಕ್ ಮತ್ತು ಥ್ರಿಲ್ಲೇ ಬೇರೆ! ಅದರಿಂದಾಗಿ ದಿನವೂ ಎರಡೂ ಜೇಬುಗಳಲ್ಲಿ ಹಣ ತುಂಬಿ ತುಳಕತೊಡಗಿದವು. ಹಣ ಸಂಪಾದನೆಯ ದಾಹದ ಜೊತೆ ‘ ಕೊಳ್ಳಬಾಕತನ ‘ ಹುಚ್ಚು ಆರಂಭವಾಯಿತು ಕಳ್ಳ ಗುಂಡಣ್ಣನಿಗೆ. ಬಳಿಕ ಕಂಡ ಕಂಡದ್ದೆಲ್ಲಾ ಕೊಳ್ಳಲು ಶುರು ಮಾಡಿದ ಕಳ್ಳ ಗುಂಡಣ್ಣನನ್ನು ನೋಡಿ ಹಲವು ರಾಜ್ಯ ಸರ್ಕಾರಗಳಿಗೆ ಖುಷಿಯಾಯಿತು. ಗುಂಡಣ್ಣ ಪಕ್ಷ ಭೇದವಿಲ್ಲದೆ ಎಲ್ಲಾ ಪಕ್ಷಗಳಿಗೆ ಚುನಾವಣೆಗಳಿಗೆ ಭರ್ಜರಿ ‘ ಡೋನೇಶನ್ ‘ ನೀಡುತ್ತಿದ್ದ. ತನ್ನಲ್ಲಿದ್ದ ನಯಾ ಪೈಸೆ ಲಾಭ ತರದ ಸಂಸ್ಥೆಗಳ ಜೊತೆ ಆರ್ಥಿಕ ಬಲಾಡ್ಯ ಸಮೃದ್ಧಿ ಸಂಸ್ಥೆಗಳನ್ನು ಕೂಡ ಅತ್ಯಂತ ‘ ಸಸ್ತಾ ರೇಟಿಗೆ ‘ ಜಾಣ ಗುಂಡಣ್ಣನಿಗೆ ಸರ್ಕಾರಗಳು ಮಾರಿ ಕೈ ತೊಳೆದುಕೊಂಡು ಹಗುರಾದವು. ಸಂಸ್ಥೆಗಳ ಸಂಬಂಧಿತ ಅಧಿಕಾರಿಗಳು, ರಾಜ ಕಾರಣಿಗಳು ಮಾತ್ರ ‘ ಡೀಲ್ ‘ ನಿಂದಾಗಿ ದುಂಡಗಾದರು.
ಜಾಣ ಕಳ್ಳ ಗುಂಡಣ್ಣ ಒಂದು ಬಾರಿ ಯಾವುದೋ ದೇಶಕ್ಕೆ ‘ ದ್ವಿ – ಪಕ್ಷಿಯ ‘ ಚರ್ಚೆಗೆ ತನ್ನ ಸಂಸ್ಥೆಯ ಅಧಿಕಾರಿಗಳೊಂದಿಗೆ ಅರ್ಜೆಂಟ್ ಆಗಿ ಹೋಗಬೇಕಿತ್ತು. ಅದಕ್ಕಾಗಿ ಏರ್ ಪೋರ್ಟ್ ಗೆ ಬಂದರೆ ‘ ಸ್ವಲ್ಪ ತಡವಾಯಿತು ‘ ಎಂದು ವಿಮಾನ ಆಗಲೇ ಟೇಕ್ ಆಫ್ ಆಗಿ ಹೊರಟುಬಿಟ್ಟಿತ್ತು. ಈ ಪ್ರಮುಖ ವಿಷಯ ಎಲ್ಲ ಭಾಷೆಯ ಪತ್ರಿಕೆಗಳಲ್ಲಿ ಮತ್ತು ಟಿ ವಿ ಗಳಲ್ಲಿ ಡಿಬೇಟಿಂಗ್ ವಿಷಯವಾಗಿ ದೇಶದಾದ್ಯಂತ ಸದ್ದು ಮಾಡಿತು. ಇದನ್ನ ಸ್ವಯಂ – ಪ್ರತಿಷ್ಠೆಯಾಗಿ ಸ್ವೀಕರಿಸಿದ ಗುಂಡಣ್ಣ ಮರು ದಿನ ಆ ಜೆಟ್ ಏರ್ವೇಸ್ ಜೊತೆ ಅದು ನಿಂತ ವಿಮಾನ ನಿಲ್ದಾಣವನ್ನು ಕೂಡ ಖರೀದಿಸಿ ಇಡೀ ದೇಶವೇ ತನ್ನತ್ತ ದಿಗ್ಭ್ರಮೆಯಿಂದ ನೋಡುವಂತೆ ಮಾಡಿದ ಮತ್ತು ಆ ವಿಮಾನ ಸಂಸ್ಥೆಯ ಮೇಲೆ ಸೇಡು ತೀರಿಸಿಕೊಂಡ.
ಪುಣ್ಯಕ್ಕೆ ಗುಂಡಣ್ಣ ರೈಲು ಹತ್ತಲು ಬರಲಿಲ್ಲವೆಂದು
ರೈಲ್ವೇ ಮಂತ್ರಿಗಳು ನಿಟ್ಟುಸಿರು ಬಿಟ್ಟರು! ಇಲ್ಲದಿದ್ದರೆ ಕೆಲ ರೈಲುಗಳು ಮತ್ತು ಅವುಗಳ ಹಳಿಗಳು ಮರುದಿನ ಗುಂಡಣ್ಣನ ಪಾಲಾಗುತ್ತಿದ್ದವು!!
*****