ಪ್ರಾಂಜಲ ಮತದಾರ

ಅದೊಂದು ನಗರದ ಮಧ್ಯದಲ್ಲಿರುವ ಸುಂದರವಾದ ಪಾರ್ಕ್. ವಾಕಿಂಗ್ ಸಲುವಾಗಿ ಕೆಲವರು ಬಂದರೆ, ಹಲವರು ಜಾಗಿಂಗ್ ಮಾಡಲು ಅಲ್ಲಿಗೆ ಬರುತ್ತಾರೆ. ಬೆಳ್ಳಂಬೆಳಿಗ್ಗೆ ಹಾಗೂ ಇಳಿಯ ಸಂಜೆ ಹೊತ್ತಿನಲ್ಲಿ ಪಾರ್ಕ್ ತುಂಬಾ ಜನವೋ ಜನ…ಓಡಾಡಿ ಸುಸ್ತಾದವರು ಕೂತು ವಿಶ್ರಾಂತಿ ತೆಗೆದುಕೊಳ್ಳಲೆಂದು ಅಲ್ಲಲ್ಲಿ ಸಿಮೆಂಟಿನ ಬೆಂಚುಗಳನ್ನು ಹಾಕಿದ್ದಾರೆ. ಒಬ್ಬೊಬ್ಬರು ಪಕ್ಷೇತರ ಅಭ್ಯರ್ಥಿಗಳಂತೆ ಒಂಟಿಯಾಗಿ ಕೂತಿದ್ದರೆ ಮತ್ತೆ ಕೆಲವರು ಪಕ್ಷದ ಅಭ್ಯರ್ಥಿಗಳ ಬೆಂಬಲಿಗರ ತರಹ ಅಲ್ಲಲ್ಲಿ ಜೊತೆಯಾಗಿ ಕೂತು ಹರಟೆ ಹೊಡೆಯುತ್ತ ಟೈಮ್ ಪಾಸ್ ಮಾಡುತ್ತಿದ್ದಾರೆ.

ಹೆಚ್ಚು ವಾಕಿಂಗ್ – ಜಾಗಿಂಗ್ ಮಾಡಿ ಸುಸ್ತಾದವರು, ಶುಗರ್ – ಬಿ ಪಿ ಗ್ರಾಫ್ ಏರಿದವರ ಹೃದಯ ಲಬ್ ಡಬ್ ಎಂದು ಜೋರಾಗಿ ಬಡಿದುಕೊಳ್ಳಲು ಶುರುವಿಟ್ಟುಕೊಂಡಾಗ, ಅವರ ಎಪ್ಪತ್ತು, ಎಂಭತ್ತು ಮತ್ತು ತೊಂಬತ್ತು ಕೇಜಿಯ ಭಾರೀ (ಸ್ಥೂಲ) ಶರೀರಕ್ಕೆ ರೆಸ್ಟ್ ಕೊಡಲು ಅವರೆಲ್ಲ ಆಶ್ರಯಿಸುವುದು ಸಿಮೆಂಟಿನ ಬೆಂಚುಗಳೆ!…ಆ ಮಣ ಭಾರವನ್ನು ಹಗಲೂ ರಾತ್ರಿ ಹೊತ್ತು ಹೊತ್ತು ಕ್ರಮೇಣ ಆ ಬೆಂಚುಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಸುಳ್ಳಲ್ಲ…

ಪಾರ್ಕಿನ ಒಳಗೆ ಒಬ್ಬ ಸೂಟು ಬೂಟಿನ ದೊಡ್ಡ ಆಸಾಮಿ ಬಂದ. ಅಮಾವಾಸ್ಯೆ ರಾತ್ರಿಯ ಕಡು ಕಪ್ಪಾದ ಬಣ್ಣದ ಕಟ್ಟು ಮಸ್ತಾದ ವಜ್ರ ಶರೀರ…ತೂಕ ಸುಮಾರು ಒಂದು ಟನ್ ಇರಬಹುದೇನೋ…ತುಂಬಾ ಬಳಲಿದಂತಿದ್ದ ಆತ ತುಸು ಹೊತ್ತು ವಿಶ್ರಾಂತಿ ಪಡೆಯಲು ಅಲ್ಲಿರುವ ಬೆಂಚುಗಳತ್ತ ದೃಷ್ಠಿ ಹಾಯಿಸಿದ. ಅನತಿ ದೂರದಲ್ಲಿ ಖಾಲಿ ಇದ್ದ ಬೆಂಚು ಕಂಡು ಕೂಡಲೇ ರಾಜಕೀಯ ಚತುರ ನಂತೆ ಓಡಿ ಹೋಗಿ ಅದನ್ನು ಆಕ್ರಮಿಸಿದ. ಸ್ವಲ್ಪ ಸಮಯದಲ್ಲೇ ‘ ಎರಡು ಕಾಲಿರುವ ‘ ಇಬ್ಬರು ಮನುಷ್ಯರು ಬೇರೆ ಎಲ್ಲೂ ಖಾಲಿ ಇರದಿದ್ದರಿಂದ ಆ ದೊಡ್ಡ ಆಸಾಮಿ ಕೂತ ಬೆಂಚಿನ ಮೇಲೆಯೆ ಕುಳಿತರು.

ಆ ಇಬ್ಬರು ‘ ಲೋ ಕ್ಲಾಸ್ ಸಿಟಿಜನ್ಸ್ ‘ ನೋಡಿ ಭಾರೀ ಶರೀರದ ಮಾಲೀಕ ಸ್ವಲ್ಪ ಸಂಕೋಚದಿಂದ ಸರಿದು ಮುದುಡಿ ಕೂತ…ಪಕ್ಕದಲ್ಲಿ ಆಸಿನರಾದ ವ್ಯಕ್ತಿಗಳಲ್ಲಿ ಜಾಸ್ತಿ ಮಾತನಾಡುವ ಒಬ್ಬಾತ ಸುಮ್ಮನಿರದೆ ‘ ಗಜ ಶರೀರ ‘ ದವನನ್ನು ಕುತೂಹಲದಿಂದ ಕೇಳಿದ…” ಯಾರು ಸಾರ್ ತಾವು…ತಮ್ಮನ್ನೆಂದು ಪಾರ್ಕಿನಲ್ಲಿ ಈ ಮೊದಲು ನೋಡಿಲ್ಲ… ? “.

” ನಾನು ಇಂತಹ ಸಾಧಾರಣ ‘ ಗಾಂಧಿ ಪಾರ್ಕ್ ‘ ಗೆ ಎಂದೂ ಬಂದಿಲ್ಲ. ಪಕ್ಕದ ರಸ್ತೆಯಲ್ಲಿ ನನ್ನ ಕಾರು ಕೆಟ್ಟು ನಿಂತಿದೆ. ಇಲ್ಲೇ ಹತ್ತಿರದ ಕಾರ್ ಮೆಕ್ಯಾನಿಕ್ ಶೆಡ್ಡಿಗೆ ಬಿಟ್ಟಿರುವೆ. ಅಲ್ಲಿ ಎ. ಸಿ ಇಲ್ಲ…ಹೀಗಾಗಿ ಒಳ್ಳೆಯ ಗಾಳಿ ಸಲುವಾಗಿ ಇಲ್ಲಿಗೆ ಬಂದೆ. ಅದಿರಲಿ… ನಾನೊಬ್ಬ ಶ್ರೀಮಂತ ಅಂತ ನಿನಗೆ ಗೊತ್ತಾ…?” ಎಂದು ಗರ್ವದಿಂದ ಒಮ್ಮೆ ಒಣ ಕೆಮ್ಮು ಕೆಮ್ಮಿ, ಎರಡೂ ತೋಳುಗಳನ್ನು ಮೇಲಕ್ಕೆ ಎತ್ತಿದ… ನಾಯಿ ಕುತ್ತಿಗೆಗೆ ಹಾಕುವ ಸೈಜಿನ ದಪ್ಪದ ಬಂಗಾರದ ನೆಕ್ ಚೈನ್, ಕೈನ ಹತ್ತು ಬೆರಳುಗಳನ್ನು ಮುತ್ತಿಟ್ಟ ಉಂಗುರಗಳು, ಮುಂಗೈಯನ್ನು ಅಪ್ಪಿದ ದೊಡ್ಡ ಬ್ರಾಸ್ ಲೆಟ್… ಕಪ್ಪು ಬಾಯಿ ಅರ್ಧ ಮುಚ್ಚಿದರೂ ಒಳಗಿನಿಂದ ಫಳ ಫಳ ಹೊಳೆಯುವ ಸ್ವರ್ಣ ಲೇಪಿತ ಹಲ್ಲುಗಳು… ಎಲ್ಲದರಿಂದಲೂ ತಾನು ಶ್ರೀಮಂತ ಎಂದು ಜಾಹೀರು ಮಾಡುವ ಉದ್ದೇಶ ಆತನದು.

” ಹೌದಾ ಸರ್…ನಾನು ಚಂದ್ರಣ್ಣ ಅಂತ…ಪಕ್ಕಾ ಮಿಡಲ್ ಕ್ಲಾಸ್ ವರ್ಗಕ್ಕೆ ಸೇರಿದವನು.” ಎಂದು ಒಬ್ಬಾತ ಹಲ್ಕಿರಿಯುತ್ತ ತನ್ನನ್ನು ತಾನು ಪರಿಚಯಿಸಿಕೊಂಡ. ಅಷ್ಟರಲ್ಲಿ ಇಬ್ಬರ ಮಾತುಗಳನ್ನು ಕೇಳಿ ಮುಗುಳು ನಗೆ ಬೀರಿದ ಪಕ್ಕದಲ್ಲಿ ಕೂತ ಆಸಾಮಿ.

ಆತನ ಕೊಳಕಾದ ವೇಷ ಭೂಷಣಗಳನ್ನು ನೋಡುತ್ತಾ ” ನೀನು ಯಾರು…? ” ಎಂದು ಅಸಹನೆಯಿಂದ ಪ್ರಶ್ನಿಸಿದ ಶ್ರೀಮಂತ. ” ನನ್ನನ್ನು ನೋಡಿದರೆ ಯಾರು ಅಂತ ಗೊತ್ತಾಗುವುದಿಲ್ಲವಾ ಸಾರ್… ನಾನು ‘ ಪೂರ್ ಫೆಲೋ ಗುಂಡಣ್ಣ ‘ ಎಂದು ” ಉತ್ತರಿಸಿತು ಸಣಕಲು ಪ್ರಾಣಿ.

ನಂತರ ಮೂವರಿಗೆ ಮಾಡಲು ಬೇರೆ ಕೆಲಸ ಇರದಿದ್ದರಿಂದ ಕ್ಷಣ ಕಾಲ ಬೆರೆತು ಒಂದಾದರು. ಮಾತುಗಳು ಹತ್ತಿರದಲ್ಲಿ ಬಂದ ಚುನಾವಣೆ ಸುತ್ತಾ ಗಿರಕಿ ಹೊಡೆಯತೊಡಗಿದವು.

” ಬರೋ ಚುನಾವಣೆಯಲ್ಲಿ ಯಾವ ಪಾರ್ಟಿಗೆ ಮೆಜಾರಿಟಿ ಬರುತ್ತದೆ… ಯಾರು ಗೆಲ್ಲುತ್ತಾರೆ ಎಂದು ನನ್ನನ್ನು ಕೇಳಿ?…ನಾನು ಹೇಳುತ್ತೇನೆ…. ಈ ರಾಜಕೀಯ ಪಕ್ಷಗಳಿಗೆ ಎಲೆಕ್ಷನ್ ಫಂಡ್ ಅಂತ ಕೊಡೋದು ನಾವೇ…ನಾವು ನಿಮ್ಮಂತೆ ಸಾಮಾನ್ಯರಲ್ಲ…ದೊಡ್ಡ ಉದ್ಯಮಿಗಳು… ಕಾರ್ಪೊರೇಟ್ ಗಳು… ಬಡಾ (ಭಂಡ) ಗುತ್ತಿಗೆದಾರರು… ಕೋಟಿಗಟ್ಟಲೆ ಹಣವನ್ನು ಅಡ್ಡ ದಾರಿಯಲ್ಲಿ ಸಂಪಾದನೆ ಮಾಡಿ…ಸಾವಿರಾರು ಕೋಟಿ ಬ್ಯಾಂಕಿನಿಂದ ಸಾಲ ಪಡೆದು ಬ್ಯಾಂಕಿಗೆ ‘ ಉಂಡೆ ನಾಮ ‘ ತಿಕ್ಕಿ ಮರು ಪಾವತಿ ಮಾಡದೇ ವಿದೇಶಗಳಿಗೆ ಹಾರುವುದು ನಾವೇ ತಿಳಿಯಿತಾ …ನಿಜ ಹೇಳಬೇಕೆಂದರೆ ನಾವು ಪ್ರಜಾಪ್ರಭುತ್ವದಲ್ಲಿ ‘ ಕಿಂಗ್ ಮೇಕರ್ಸ್ ‘ ಗೊತ್ತಾ ನಿಮಗೆ….” ಎಂದು ಗರ್ವದಿಂದ ಕಾಲರ್ ಎಗರಿಸುತ್ತ ನುಡಿದ ಶ್ರೀಮಂತ.

” ಏನು ಹೇಳುತ್ತೀರಿ ಸಾರ್…
ನೀವಲ್ಲ ನಾವು ಕಿಂಗ್ ಮೇಕರ್ಸ್! …ನಮ್ಮಂತಹ ಬಡವರು ಇರದಿದ್ದರೆ ಸರ್ಕಾರಕ್ಕೆ ‘ ಅಡ್ರೆಸ್ ‘ ಎಲ್ಲಿರುತ್ತಿತ್ತು ಹೇಳಿ ಸಾರ್?… ಭರವಸೆಗಳು, ಆಶ್ವಾಸನೆಗಳು, ಸಬ್ಸಿಡಿಗಳು, ಫ್ರೀ ಮನೆಗಳು, ಪಿಂಚಣಿಗಳು, ಅಲ್ಲದೆ ಸರ್ಕಾರದ ನೂರೆಂಟು ಯೋಜನೆಗಳನ್ನು ನಾವಿಲ್ಲದಿದ್ದರೆ ಯಾರಿಗೆ ತಲುಪಿಸುತ್ತೀರಿ ನೀವು?. ಹೀಗಾಗಿ ಯಾವ ಸರ್ಕಾರಕ್ಕಾದರೂ ನಾವೇ ಬೆನ್ನೆಲುಬು, ಆಧಾರ ಸ್ತಂಭ! ನಾವು ಓಟು ಹಾಕಿದರೆ ಮಾತ್ರ ನೀವು ನಾಯಕರು. ಗೆದ್ದ ಬಳಿಕ ಯಾವ ಪಕ್ಷಕ್ಕೂ ಬಹುಮತ ಬರದೆ ಇದ್ದರೆ ನಿಮಗೆ ಸಾಲು ಸಾಲು ‘ ರಿಸಾರ್ಟ್ ‘ಯಾತ್ರೆಗಳು. ನಮ್ಮಂತಹ ಬಡ ಮತದಾರರ ಕೈಗೆ ಮಾತ್ರ ಕೊಬ್ಬರಿ ಚಿಪ್ಪು! ಇದು ನಿಜ ತಾನೇ …ನೀವು ಚುನಾವಣೆಯ ವ್ಯಾಪಾರಕ್ಕೆ ಬಂಡವಾಳ ಹಾಕಿ ಗೆದ್ದ ಬಳಿಕ ಕೋಟಿಗಟ್ಟಲೆ ಹಣ ಬಾಚಿಕೊಳ್ಳಲು ಸರ್ಕಾರದಿಂದ ಆರಂಭಿಸುವ ಯಾವುದೇ ಯೋಜನೆಗಳಿಗಾದರೂ ನಮ್ಮಂತಹ ಫಲಾನುಭವಿಗಳು ಬೇಕೆ ಬೇಕು…” ಎಂದು ಜೋರಾಗಿ ಕಂಠ ಪಾಠ ಮಾಡಿದಂತೆ ಒಂದೇ ಗುಕ್ಕಿನಲ್ಲಿ ಹೇಳಿ ನಿಟ್ಟುಸಿರಿಟ್ಟ ಬಡವ ಗುಂಡಣ್ಣ.

ಶ್ರೀಮಂತನತ್ತ ಮುಖ ತಿರುಗಿಸಿ ” ನೀವು ಹೇಳೋದು ನಿಜ ಸಾರ್…ಸರ್ಕಾರವನ್ನು ಏರ್ಪಡಿಸುವುದು ನೀವೇ…ಬೇಡವಾದಾಗ ಬೀಳಿಸೋದು ಕೂಡ ನೀವೇ. ನಾವು ಮ(ಮಾ)ಧ್ಯಮ ವರ್ಗದವರು. ‘ ಒಂಭತ್ತಕ್ಕೆ ಏರುವುದಿಲ್ಲ, ಆರಕ್ಕೆ ಇಳಿಯುವುದಿಲ್ಲ ‘. ನಮ್ಮಲ್ಲಿ ಹೆಚ್ಚಿನವರು ಸರ್ಕಾರವನ್ನು ಮತ್ತು ವ್ಯವಸ್ಥೆಯನ್ನು ಹಿಗ್ಗಾ ಮುಗ್ಗಾ ಜಾಲ ತಾಣದಲ್ಲಿ ಹಗಲೂ ರಾತ್ರಿ ಟೀಕೆ ಮಾಡುತ್ತಾ ಕುಳಿತಿರುತ್ತಾರೆ… ಆದರೆ ಮತದಾನ ಮಾಡುವ ದಿನ ಭಾರೀ ಬಿಸಿಲು, ಮಕ್ಕಳಿಗೆ ಹುಷಾರಿಲ್ಲ, ಅರ್ಜೆಂಟ್ ಆಗಿ ಅಂದೇ ಆಗಲೇ ( ಕೂಡಲೇ) ಮಾಡುವ ಕೆಲಸ, ಇತ್ಯಾದಿ ಕುಂಟು ನೆಪ ಹೇಳಿ ಹೆಚ್ಚಿನವರು ಅದರಲ್ಲೂ ಮಹಾ ಪಾಲಿಕೆಯ ‘ ಪ್ರಭುದ್ದ ಮತದಾರರು ‘ ಮನೆ ಬಿಟ್ಟು ಹೊರಗೇ ಬರೋದಿಲ್ಲ ಪಾಪ… ಎಲ್ಲ ಪಕ್ಷಗಳ ಹಣೆ ಬರಹ ಇಷ್ಟೇ ಎಂದು ನಮ್ಮಷ್ಟಕ್ಕೆ ನಾವೇ ನಿರ್ಧರಿಸುತ್ತೇವೆ. ನಮ್ಮಲ್ಲಿ ಎಲ್ಲರೂ ಜಾಣರೆ ಸಾರ್! ಹೀಗಾಗಿ ಒಂದೇ ಪಕ್ಷಕ್ಕೆ ನಾವು ಸಾಮೂಹಿಕವಾಗಿ ಎಂದೂ ಮತ ಹಾಕುವುದಿಲ್ಲ. ಸರ್ಕಾರವನ್ನು ಏರ್ಪಾಟು ಮಾಡುವಷ್ಟು ಶಕ್ತಿ ನಮಗಿಲ್ಲ…ಆದರೆ ಅದನ್ನು ಭುಜದ ಮೇಲೆ ಬೇಕಾದರೆ ಹೊತ್ತುಕೊಂಡು’ ಕರಗ ‘ ದಂತೆ ಮೆರೆಸುವ ತಾಕತ್ತು ನಮಗಿದೆ.
ಕರೆಂಟ್ ಬಿಲ್, ಆದಾಯ ತೆರಿಗೆ, ನಳದ ಬಿಲ್, ಮನೆ ತೆರಿಗೆ, ರಸ್ತೆ ತೆರಿಗೆ, ಇನ್ನಿತರ ಸರ್ಕಾರದ ಟ್ಯಾಕ್ಸುಗಳನ್ನು ಚಾಚೂ ತಪ್ಪದೆ ನಾವು ಕಟ್ಟುತ್ತೇವೆ. ಬ್ಯಾಂಕಿನ ಸಾಲವನ್ನು ಸರಿಯಾಗಿ ಮರು ಪಾವತಿ ಮಾಡುತ್ತೇವೆ. ಸಾಲ ಮನ್ನಾ ಮಾಡಿ ಎಂದು ಯಾವತ್ತೂ ಕೇಳುವುದಿಲ್ಲ.
ಬೆಲೆ ಏರಿಕೆ ಅಯ್ತೆಂದು ಒಂದೆರಡು ದಿನ ಬೇಜಾರು ಮಾಡಿಕೊಂಡರೂ ಬೇಗ ಮರೆತು ಹೋಗುತ್ತೇವೆ. ಕಾರಣ ನಮಗೆ ಜಾಣ ಮರೆವು! ನಮ್ಮ ಘನ ಸರ್ಕಾರ ಬಡವರನ್ನು ಅಭಿವೃದ್ಧಿ ಪಥದತ್ತ ಒಯ್ಯುವ ನೂರಾರು ಸ್ಕೀಮುಗಳಿಗೆ, ರಸ್ತೆ ಕಾಮಗಾರಿ, ಕುಡಿಯುವ ನೀರು ಇತ್ಯಾದಿ ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ನೆರವಾಗಲೆಂದು ನಾವು ತಪ್ಪದೆ ಎಲ್ಲಾ ಬಗೆಯ ಕಂದಾಯ ಕಟ್ಟುತ್ತೇವೆ. ಅದಕ್ಕಾಗಿ ಸರ್ಕಾರ ಎಷ್ಟೇ ಸಾಲ ಮಾಡಲಿ, ತೀರಿಸಲು ನಾವು ಸದಾ ಸಿದ್ಧರಿದ್ದೇವೆ!. ಶ್ರೀಮಂತರು ಹೊಡೆದು ತಿನ್ನಬಹುದು, ಬಡವರು ಬೇಡಿ ತಿನ್ನಬಹುದು. ಆದರೆ ನಾವು ಎರಡರ ನಡುವಿನ ‘ ತ್ರಿಶಂಕು ಸ್ವರ್ಗ ‘ ದವರು. ಯಾರನ್ನೂ ಕಾಡದೆ, ಬೇಡದೆ ಮರ್ಯಾದೆಗೆ ಅಂಜಿ ಬದುಕುವವರು. ನಮಗೇ ಅಂತ ಸರ್ಕಾರದ ಯಾವುದೇ ಯೋಜನೆಗಳು ಇರದಿದ್ದರೂ, ನಿಜ ಅರ್ಥದಲ್ಲಿ ಕಾಲ ಕಾಲಕ್ಕೆ ತೆರಿಗೆ ಕಟ್ಟಿ ಸರಕಾರದ ತಿಜೋರಿ ತುಂಬಿಸಿ ಆರ್ಥಿಕ ಚೇತನ ನೀಡುವವರು ನಾವೇ ಸಾರ್!…” ಹೀಗೆಂದು ಮಧ್ಯಮ ವರ್ಗದ ಚಂದ್ರಣ್ಣ ತನ್ನ ‘ ಅಂತರಂಗ ‘ ವನ್ನು ಹೊರಗೆ ತೆರೆದಿಟ್ಟ.

ಬಡವ – ಮಧ್ಯಮ ವರ್ಗಕ್ಕೆ ಸೇರಿದ ಇಬ್ಬರು ಪ್ರತಿನಿಧಿಗಳ ಅನಿಸಿಕೆಯ (ಅಧಿಕ ಪ್ರಸಂಗದ!) ಮಾತುಗಳನ್ನು ಕೇಳಿ ಅರೆಕ್ಷಣ ದುರುಗುಟ್ಟಿ ನೋಡಿದ ಶ್ರೀಮಂತ ತನ್ನ ಸೋಡಾ ಕಣ್ಣುಗಳ ದಪ್ಪನೆಯ ಚಸ್ಮಾದಿಂದ.

ಆಗ ಸುಮ್ಮನೆ ಕೂಡದ ವಾಚಾಳಿ ಬಡವ ಗುಂಡಣ್ಣ ಅಭ್ಯಾಸ ಬಲದಿಂದ ಮತ್ತೆ ಮಾತು ಮುಂದುವರೆಸಿದ. ” ಸಾರ್ ನಾವಿರದಿದ್ದರೆ ಸರ್ಕಾರಕ್ಕೆ ಕೆಲಸವೇ ಇಲ್ಲ!…ಯಾವ ಪಕ್ಷದ ಸಭೆಗಳು ಇದ್ದರೂ ಜೀಪು, ಕಾರು, ಟ್ರ್ಯಾಕ್ಟರ್ ಹತ್ತಿಕೊಂಡು ಉರಿ ಬಿಸಿಲಲ್ಲಿ ಹೋಗಿ ಮೆರವಣಿಗೆಯಲ್ಲಿ ದಿನಗೂಲಿಯಾಗಿ
ಹಾಜರಾಗುವವರು ನಾವು…ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ಕೊಡುವ ಆಶ್ವಾಸನೆಗಳೆಲ್ಲ ನಮಗಾಗಿ ಅಲ್ಲವೇ!… ಅಲ್ಲದೆ ‘ ಮತ ಭಿಕ್ಷೆ ‘ ಎಂದು ಬೇಡುವುದು ನೀವೆಲ್ಲ ನಮ್ಮನ್ನೇ ತಾನೇ… ಮಧ್ಯಮ ವರ್ಗದ ಮತದಾರರು ಗುಂಪು ಗುಂಪಾಗಿ ಒಬ್ಬರಿಗೇ ಎಂದೂ ಓಟು ಹಾಕುವುದಿಲ್ಲ…ಆದರೆ ನಾವು ಹಣ, ಹೆಂಡ, ಬಟ್ಟೆ ಬರೆ, ಬಿಟ್ಟಿ ವಸ್ತುಗಳು, ಇತ್ಯಾದಿ ಚುನಾವಣೆಗೆ ನಿಂತ ಉಮೇದುವಾರರಿಂದ ಪಡೆದು ನಿಯತ್ತಾಗಿ ಅವರಿಗೆ ಓಟು ಹಾಕುತ್ತೇವೆ. ನಮ್ಮ ಒಗ್ಗಟ್ಟಿನಲ್ಲಿ ಬಲವಿದೆ… ನಮಗೆ ಓದು ಬೇಕಾಗಿಲ್ಲ… ಮಾಡೋದಕ್ಕೆ ಕೆಲಸ ಬೇಡ… ಪುಕ್ಕಟೆ ಸ್ಕೀಮುಗಳು ಇದ್ದರೆ ಸಾಕು ಬದುಕುವುದಕ್ಕೆ!
ಬಡವನಾಗಿದ್ದಕ್ಕೆ ನನಗೆ ಚಿಂತೆ ಇಲ್ಲ…ಬದಲಾಗಿ ಈ ದೇಶದ ಪ್ರಜಾ ಪ್ರಭುತ್ವವನ್ನು ಕಾಪಿಟ್ಟು ಕಾಪಾಡುತ್ತಿರುವದಕ್ಕೆ ಹೆಮ್ಮೆ ಇದೆ! ನಿಜ ಹೇಳಬೇಕೆಂದರೆ ‘ ನಮ್ಮಿಂದ, ನಮಗಾಗಿ ಮತ್ತು ನಮ್ಮವರಿಂದಲೇ ಸರ್ಕಾರ ‘ ಬದುಕಿರುವುದು.. ಸಂಪೂರ್ಣ ಬಡತನ ನಿರ್ಮೂಲನೆ ಆದರೆ ಮುಂದೆ ನೀವು ಏನು ಮಾಡಬೇಕು?. ಅದಕ್ಕಾಗಿ ಇಂತಹ ಯೋಜನೆಗಳು ಆಕಾಶದಲ್ಲಿನ ‘ ಸೂರ್ಯ – ಚಂದ್ರ ‘ ರಂತೆ ಶಾಶ್ವತವಾಗಿ ಸದಾ ಚಾಲ್ತಿಯಲ್ಲಿ ಇರಬೇಕು… ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ ಆಚರಿಸಲು ಮತದಾರ ಐದು ವರ್ಷಕ್ಕೊಮ್ಮೆ ಅಲ್ಲ, ಪ್ರತೀ ವರ್ಷ ಆಚರಿಸುವ ಹಾಗೆ ಚುನಾವಣೆಗಳು ಬರಬೇಕು ಸಾರ್… ನಾವು ಬದುಕಬೇಕು. ನಾವು ಬದುಕಲು ನೀವಿರಬೇಕು… ನಿಮ್ಮಂತಹ ನಾಯಕರು ಮತ್ತು ನಮ್ಮಂತಹ ಪ್ರಾಂಜಲ ಬಡ ಮತದಾರರು ರೈಲಿನ ಎರಡು ಸಮಾನಾಂತರ ಹಳಿಗಳು ಇದ್ದಂತೆ…ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ. ನಮ್ಮದು – ನಿಮ್ಮದು ಎಂದೆಂದೂ ಬಿಡಲಾರದ ಅವಿನಾವ ಸಂಬಂಧ್ …ಗೊತ್ತಾಯಿತೇ ಸಾರ್…”ಎಂದು ಪ್ರಜಾಪ್ರಭುತ್ವದಲ್ಲಿ ಬಡವನಾಗಿ ಉಳಿಯುವದರ ನಿಜ ಅರ್ಥವನ್ನು ವಿವರಿಸಿದ ಪೂರ್ ಫೆಲೋ ಗುಂಡಣ್ಣ.

ಇದ್ದಕ್ಕಿದ್ದಂತೆ ಧಪ್ಪೆಂದು ಜೋರಾದ ಗಾಳಿ – ಮಳೆ ಶುರುವಾಯ್ತು… ಮೊದಲು ಶ್ರೀಮಂತ ನಂತರ ಮಧ್ಯಮ ವರ್ಗದ ಚಂದ್ರಣ್ಣ ಆಕಾಶದೆಡೆ ನೋಡುತ್ತಾ ಪಾರ್ಕಿನಿಂದ ಓಡುತ್ತಾ ಹೊರ ನಡೆದರು.

ಬಿಸಿಲು, ಮಳೆ ಮತ್ತು ಬಿರುಗಾಳಿಯೊಂದಿಗೆ ಬೆರೆತು ಸದಾ ಜೀವನ ಸಾಗಿಸುವ ಬಡವ ಗುಂಡಣ್ಣ ಮಾತ್ರ ಯಾವುದಕ್ಕೂ ಜಗ್ಗದೆ ಪಾರ್ಕಿನ ಮೇಲೆಯೇ ನಿರುಮ್ಮಳವಾಗಿ ಕುಳಿತುಬಿಟ್ಟ!.
*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಪ್ರಾಂಜಲ ಮತದಾರ”

  1. N.K.Dalabanjan

    The very good analysis of the present situation prevailing in the society. The chain between ,the poor, the he middle class citizen and the rich (politician) is well discribed.It seems that there is no end for this in near future.Hearty congratulations 🎉🎉

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter