ನೆರಳಿಗಂಟಿದ ನೆನಪು

*ಪುಸ್ತಕ ಪರಿಚಯ*

*ಕೃತಿ ಶೀರ್ಷಿಕೆ:  ನೆರಳಿಗಂಟಿದ ನೆನಪು(ಗಜಲ್ ಸಂಕಲನ)*
*ಲೇಖಕರು: ಶಿವಕುಮಾರ ಮೋ.ಕರನಂದಿ ಮೊ.೮೯೭೧೦೨೨೪೩೦*
*ಪ್ರಕಾಶಕರು: ಕರನಂದಿ ಪ್ರಕಾಶನ ಗುಳೇದಗುಡ್ಡ ೫೮೭೨೦೩*
*ಪ್ರಕಟಿತ ವರ್ಷ:       ೨೦೨೩.      ಬೆಲೆ ೯೯₹*
*ಪುಸ್ತಕ ಖರೀದಿಸಲು ಸಂಪಕಿ೯ಸ ಬೇಕಾದ ಮೊ.೮೯೭೧೦೨೨೪೩೦*

ಕರ್ನಾಟಕದಲ್ಲಿಯೇ ಸುಂದರವಾದ ಖಣಗಳಿಗೆ ಮತ್ತು ಪ್ರಸಿದ್ಧಿ ರಂಗಭೂಮಿ ಕಲಾವಿದರಿಗೆ ಹೆಸರುವಾಸಿಯಾದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದವರಾದ ಶಿವಕುಮಾರ ಕರನಂದಿ ಯವರು ವೃತ್ತಿಯಲ್ಲಿ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಸಾಹಿತಿ ಸಂಘಟಕರಾಗಿ ಅನೇಕ ಸಾಹಿತ್ಯ ಸಂಘಟನೆಗಳ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ . ಸಾಹಿತ್ಯ ಲೋಕಕ್ಕೆ ಈಗಾಗಲೇ *ಮೌನ ಮಾತಾದಾಗ*  ಎಂಬ ಕವನ ಸಂಕಲನ ಹಾಗೂ *ಗಾಲಿಬ್ ನಿನಗೊಂದು  ಸಲಾಂ*  ಎಂಬ ಸಂಪಾದಿತ ಗಜಲ್ ಕೃತಿಗಳನ್ನು ಪ್ರಕಟಿಸಿ ಚಿರಪಚಿತರಾಗಿದ್ದಾರೆ .ಈಗ ಇವರು *ನೆರಳಿಗಂಟಿದ ನೆನಪು* ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ  ಓದುಗರ ಬೊಗಸೆಯಲ್ಲಿ ಇಟ್ಟಿದ್ದಾರೆ.

 ಉರ್ದು ಕಾವ್ಯ ಸಾಹಿತ್ಯದ ರಾಣಿಯಾದ ಗಜಲ್ ಇಂದು ಕನ್ನಡದ ಅನೇಕ ಕವಿ ಹೃದಯದಲ್ಲಿ ಅರಳುತ್ತಾ ಕರ್ನಾಟಕದ ತುಂಬೆಲ್ಲಾ ತನ್ನ ಮಾದಕ ಘಮಲನ್ನು ಹರಡುತ್ತಿದೆ .ಗಜಲ್ ಗಳಲ್ಲಿ ಪ್ರೀತಿ, ಪ್ರೇಮ ,ಅನುರಾಗ ,ಮೋಹ, ಸಂಧಾನ, ಕಾಯುವಿಕೆ ,ವಿರಹ ಭಾವ ಕಡಲು ಉಕ್ಕುತ್ತಿದ್ದರು ಇದರಲ್ಲಿ ವಿರಹದ ಕಂಬನಿಯ ತೀವ್ರತೆಯೇ ಹೆಚ್ಚಾಗಿರುತ್ತದೆ. ಓದುಗರ ಮನ ಮಿಡಿಯುತ್ತದೆ, ಹೃದಯ ಮತ್ತೆ ಆ ನೋವನ್ನು ಗುನುಗುನಾಯಿಸುತ್ತಾ ಸಾಗುತ್ತದೆ .ಭಾಷೆಯ ಮೃದುತ್ವ  ಛಂದಸ್ಸು  ,ಲಯ ,ಗೇಯತೆ, ನವಿರಾದ ಭಾವಗಳ ಪ್ರತಿಮೆ ,ರೂಪಗಳೊಂದಿಗೆ ಕೂಡಿರುತ್ತದೆ .ಕವಿ ಹೇಳಬೇಕಾದುದ್ದನ್ನು ರೂಪಕಗಳು ಹಾಗೂ ಪ್ರತಿಮೆಗಳು ಹೇಳುತ್ತವೆ .ಓದುಗರ ಹೃದಯವನ್ನು ಗೆಲ್ಲುತ್ತವೆ  ಮತ್ತು ಚಿಂತನೆಗೆ ಹಚ್ಚುತ್ತವೆ  ತಲ್ಲಣ ಗಳಿಸುತ್ತವೆ. ಗಜಲ್ ಓದುವುದಕ್ಕಿಂತ ಸಂಗೀತಕ್ಕೆ ಅಳವಡಿಸಿದಾಗ ಅದರ ಭಾವ ಲಹರಿಯಲ್ಲಿ ಮನ  ತೇಲಾಡುತ್ತದೆ. ಇದು ಶರಣ ಸಂಸ್ಕೃತಿ ಹಾಗೂ ಸೂಫಿ ಸಂಸ್ಕೃತಿಯಂತೆ ಶರಣ ಸತಿ ಲಿಂಗಪತಿ ಎಂಬ ಭಾವದೊಂದಿಗೆ ದೇವರೊಂದಿಗೆ ಸಂಧಾನ ಮಾಡುತ್ತ ತನ್ನನ್ನು ತಾನು ಅರಿತುಕೊಳ್ಳುತ್ತ ಪರವಶ ಗೊಳ್ಳುವಂತೆ ಮಾಡುತ್ತದೆ .ಗಜಲ್ ಲೌಕಿಕದಿಂದ ಅಲೌಕಿಕದ  ಕಡೆಗೆ ಕೊಂಡೊಯ್ಯುತ್ತದೆ .ಇಂದು ಗಜಲ್ ಅನೇಕ ವಿಷಯಗಳಲ್ಲಿ ಬರೆಯುತ್ತಿರುವುದು ಓದುಗರ ಮೆಚ್ಚುಗೆಯನ್ನು ಪಡೆಯುತ್ತಿದೆ. ಇದು ಉರ್ದು ಕಾವ್ಯ ಸಾಹಿತ್ಯವಾದರೂ ಇಂದು ಭಾರತದ ಎಲ್ಲಾ ಭಾಷೆಗಳಲ್ಲಿಯೂ ಗಜಲ್ ರಚನೆ ಆಗುತ್ತಿದ್ದು ಕಂಡುಬಂದಿದೆ.

*ನೆರಳಿಗಂಟಿದ ನೆನಪು* ಗಜಲ್ ಸಂಕಲನದ ನೆನಪಿನ ಜಾಡು ಹಿಡಿದು ಸಾಗುವುದೇ ಒಂದು ಸಂತಸದ ವಿಷಯವಾಗಿದೆ. ಮನುಷ್ಯ ಸದಾ ಪ್ರೀತಿಯ, ಮೋಹದ ನೆನಪಿನ ಬುತ್ತಿಯನ್ನು ಬಿಚ್ಚಿ ಮತ್ತೆ ಮತ್ತೆ ಅದನ್ನು ಸವಿಯುತ್ತಾ ಮೆಲಕು ಹಾಕುವುದನ್ನು ಇಷ್ಟಪಡುತ್ತಾನೆ .ಈ ಜಗತ್ತನ್ನು ದೇವರು ಪ್ರೇಮಕ್ಕಾಗಿಯೇ ಸೃಷ್ಟಿಸಿದ್ದಾನೆ ದ್ವೇಷಕ್ಕಾಗಿ ಅಲ್ಲ ಎಂದು ಗಜಲ್  ಸಾಹಿತ್ಯ ಹೇಳುತ್ತದೆ .ನಾವು ಪ್ರೀತಿಸುವ ವಸ್ತು ಅಥವಾ ವ್ಯಕ್ತಿ ಸದಾ ನಮ್ಮೊಂದಿಗೆ ಇದ್ದರೆ ಪ್ರೀತಿಯ ಮಹತ್ವ ಗೊತ್ತಾಗುವುದಿಲ್ಲ ,ಪ್ರೀತಿಸುವವರು ದೂರಾದಾಗ ವಿರಹದಲ್ಲಿ ಹೃದಯ ಬೆಂದಾಗ ಪ್ರೀತಿಯ ಮಹತ್ವ ಗೊತ್ತಾಗುತ್ತದೆ, ವಿರಹದ ತೀವ್ರತೆಯು ಪ್ರೀತಿಯನ್ನು ಹೆಚ್ಚಿಸುತ್ತದೆ. ಶಿವಕುಮಾರ ಕರನಂದಿಯವರು ತಮ್ಮ *ತಖಲ್ಲುಸ್*  (ಕಾವ್ಯನಾಮ) *ಶಿವ* ಎಂದು ಗಜಲ್ ದ ಮಕ್ತಾದಲ್ಲಿ  ಬಳಿಸಿದ್ದಾರೆ. ಕೆಲವು ಗಜಲ್ ಗಳ ಮಕ್ತಾದಲ್ಲಿ ಇವರ ತಖಲ್ಲುಸ್ ಸಮಂಜಸವಾಗಿ ಹೊಂದಿ ಕೊಂಡು ಗಜಲ್ ದ ಮಕ್ತಾದ ತೂಕ ಹೆಚ್ಚಿಸಿದೆ.

*ನೆರಳಿಗಂಟಿದ ನೆನಪು* ಗಜಲ್ ಸಂಕಲನಕ್ಕೆ ಸತೀಶ ಕುಲಕರ್ಣಿ ಹಿರಿಯ ಸಾಹಿತಿಗಳು ಹಾವೇರಿ ಇವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ. ಡಾ.ಬಾಳಾಸಾಹೇಬ ಲೋಕಾಪುರ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು ದೆಹಲಿ ಇವರು ತುಲನಾತ್ಮಕವಾದ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ವಿಮರ್ಶಕರು, ಸಾಹಿತಿಗಳು, ಅನೇಕರಿಗೆ ಗಜಲ್ ರಚನೆಗೆ ಮಾರ್ಗದರ್ಶನ ಮಾಡಿದ ಗುರುಗಳಾದ ಶ್ರೀ ಅಬ್ದುಲ್ ಹೈ ತೋರಣಗಲ್ಲು ಇವರು ಮುದ್ರಣ ಕ್ಕಿಂತ ಮುಂಚಿತವಾಗಿ ಗಜಲ್ ಗಳನ್ನು ಓದಿ ವಿಮರ್ಶಾತ್ಮಕ ಅನಿಸಿಕೆಗಳನ್ನು ಬರೆದಿದ್ದಾರೆ, ಇನ್ನೊಬ್ಬ ವಿಮರ್ಶಕರಾದ ಡಾ.ವೈ.ಎಂ.ಯಾಕೊಳ್ಳಿ ಸವದತ್ತಿ ಇವರು ಸಂಕಲನದ ಬಗ್ಗೆ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. ಶ್ರೀ ಲಕ್ಷ್ಮಣ ಬಾದಾಮಿ ಸಾಹಿತಿಗಳು, ಗಜಲ್ ಕವಿಗಳಾದ ಯು ಸಿರಾಜ್ ಅಹ್ಮದ್ ಸೊರಬ ಹಾಗೂ ಪ್ರಭಾವತಿ ದೇಸಾಯಿ ವಿಜಯಪುರ ,ಇವರೆಲ್ಲ ಗಜಲ್ ಗಳನ್ನು ಓದಿ ಅನಿಸಿಕೆಗಳನ್ನು ಬರೆದಿದ್ದಾರೆ.ಸಂಕಲನದ ಮುಖಪುಟವನ್ನು ಕಲಾಕಾರರಾದ ಟಿ.ಎಫ್. ಹಾದಿಮನಿ ಅವರು ಸುಂದರವಾಗಿ ಚಿತ್ರಿಸಿ ಸಂಕಲನದ ಅಂದವನ್ನು ಹೆಚ್ಚಿಸಿದ್ದಾರೆ ಜೊತೆಗೆ  ಪುಸ್ತಕ ದ ಪುಟ ವಿನ್ಯಾಸವನ್ನು ಪ್ರಮೋದ್ ಸಾಗರ ಅವರು ಸೊಗಸಾಗಿ ಮಾಡಿ ಸಂಕಲನದ ಸೌಂದರ್ಯ ಹೆಚ್ಚಿದ್ದಾರೆ. 

*ನೆರಳಿಗಂಟಿದ ನೆನಪು* ಗಜಲ್ ಸಂಕಲನದಲ್ಲಿ ಒಟ್ಟು 51 ಗಜಲ್ ಗಳಿದ್ದು  ಇಲ್ಲಿ ಪ್ರೀತಿ, ಪ್ರೇಮ ,ಮೋಹ, ವ್ಯಾಮೋಹಗಳ ಜೊತೆಗೆ ವಿರಹದ ಆದ್ರತೆಯ ತೀವ್ರತೆಯನ್ನು ಹೇಳುವ ಮತ್ತು ಸಮಾಜದ ವ್ಯವಸ್ಥೆಯನ್ನು  ತೋರಿಸುವ ಅನೇಕ ಗಜಲ್ ಗಳು  ಸಂಕಲನದಲ್ಲಿ ಇದ್ದು ಓದುಗರಿಗೆ ಚಿಂತನೆಗೆ ಹಚ್ಚುತ್ತವೆ.

*ಪ್ರೀತಿಯು ತುಂಬಿದ ಕೊಳದಂತೆ ಚೆಲುವೆ*
*ಮೊಗೆದಷ್ಟು ಹುಟ್ಟುವ ಒರತೆಯಂತೆ ಚೆಲುವೆ*

ಈ ಗಜಲ್ ದಲ್ಲಿ ಕವಿ ಪ್ರೀತಿಯೆಂಬುದು ಎಂತಹದು ಅದು ಸದಾ ತುಂಬಿತುಳುಕುವ ಕೊಳದಂತೆ ಮತ್ತು ಅನುಭವಿಸಿದಷ್ಟು ಬರಿದಾಗದ  ಒರತೆಯಂತೆ ಎಂದು ತನ್ನ ಸಂಗಾತಿಗೆ ಸುಂದರವಾಗಿ ಹೇಳಿದ್ದಾರೆ. ಮೇಲ್ನೋಟಕ್ಕೆ ಹಳ್ಳ ಬರಿದಾದಂತೆ ಕಂಡರೂ ನಾವು ಒರತೆ ತೆಗೆದಾಗ ಅದರಲ್ಲಿ ಸಿಹಿಯಾದ ತಂಪಿನ ಶುದ್ಧ ಬತ್ತದ ನೀರು ಬರುತ್ತದೆ .ಹಾಗೆ ಪ್ರೀತಿ ಕಣ್ಣಿಗೆ ಕಾಣದಿದ್ದರೂ ಸದಾ ಹೃದಯ ಒರತೆಯಲ್ಲಿ ವಸರುತ್ತದೆ. ಪ್ರೀತಿಯಂಬುದು ಅಕ್ಷಯ ಇದ್ದಂತೆಂಬ ಭಾವತುಂಬಿದ ಗಜಲ್.

*ನಿನಗಾಗಿಯೇ ಮುಸ್ಸಂಜೆಯ ತುಸು ಬೆಳಕಿನಲ್ಲಿ ಕಾದಿರುವೆ*
*ಮಂದವಾಗಿ ಉರಿಯುವ ಕಂದೀಲಿನ ಬೆಳಕಿನಲ್ಲಿ ಕುಳಿತಿರುವೆ*

ಇಲ್ಲಿ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯ ಬರುವಿಗಾಗಿ ಕಾದು ಕುಳಿತ ದೃಶ್ಯವನ್ನು ಕಣ್ಣಿಗೆ  ಕಟ್ಟುವಂತೆ ಗಜಲ್ ದಲ್ಲಿ ಹೇಳುತ್ತಾ ಸಾಗುತ್ತಾರೆ ಕವಿ. ಮುಸ್ಸಂಜೆ ಮಬ್ಬು ಬೆಳಕಲಿ ಅವಳ ಬರುವಿಗಾಗಿ ಕಾತರಿಸಿ ಕಾಯುತ್ತಾ ಕುಳಿತಿದ್ದಾನೆ. ಉರಿಯುವ ಕಂದೀಲು ಬಯಲ ಗಾಳಿಗೆ ಹೊಗೆ ಸುತ್ತಿ ಮಂದವಾಗಿ ಬೆಳಗುತಿದೆ, ಹೃದಯ ತಳಮಳ ಹೆಚ್ಚುತಿದೆ,ಹಕ್ಕಿಗಳು ಮಿಲನಕ್ಕಾಗಿ ಗೂಡು ಸೇರುತ್ತಿವೆ. ಬಾನ ಬಾಗಿಲಿಗೆ ಅಶ್ವಿನಿ ನಕ್ಷತ್ರವು ಬಲಗಾಲಿಟ್ಟು ಒಳ ಬಂದು ಬೆಳಗುತ್ತಿದೆ ,ಆದರೂ ನೀನು ಬರಲಿಲ್ಲ. ನಿನ್ನ ದಾರಿ ಕಾಯುತ್ತಾ ಕುಳಿತಿರುವೆನೆಂದು ಗಜಲ್ ದಲ್ಲಿ ಕಾಯುವಿಕೆಯ ತೀವ್ರತೆಯನ್ನು ಕವಿ ಸುಂದರವಾಗಿ ರೂಪಕ ಗಳೊಂದಿಗೆ ವ್ಯಕ್ತ ಪಡಿಸಿದ್ದಾರೆ 

*ಸುಕ್ಕುಗಟ್ಟಿದ ಚರ್ಮಕೆ ಗೊತ್ತಿದೆ ಬೇಕಿದ್ದರೆ ಕೇಳು*
*ಕತ್ತಲೆ ಹೊತ್ತ ಚಪ್ಪರಕೆ ಗೊತ್ತಿದೆ ಬೇಕಿದ್ದರೆ ಕೇಳು*

ಇದು ಒಂದು ಸಮಾಜಮುಖಿ ಗಜಲ್ ಆಗಿದ್ದು ಸಮಾಜದಲ್ಲಿನ ದುಡಿಯುವ ಕಾರ್ಮಿಕರ ಜೀವನ ಬಗ್ಗೆ, ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ,ದುಡಿದರೂ ಹೊಟ್ಟೆಗೆ ಅನ್ನ ಸಿಗದೆ  ವಲಸೆ ಹೋಗುವ ಹಳ್ಳಿಯ ರೈತರ ಬಗ್ಗೆ ಮಾಮಿ೯ಕವಾಗಿ ಈ ಗಜಲ್  ದಲ್ಲಿ ಕವಿ ನಿರೂಪಿಸಿದ್ದಾರೆ . ಇದರಿಂದ ಕವಿ ಬಡವರ ಬಗ್ಗೆ ಸಮಾಜದಲ್ಲಿ ಆಗುವ ಅನ್ಯಾಯದ ಬಗ್ಗೆ ಕಳಕಳಿ ಇರುವುದು ಗೊತ್ತಾಗುತ್ತದೆ.

*ಕನಸ ಕಣ್ಣಗಳ ಚೆಲುವೆ ಒಲವ ಮೂಟೆ ಇರಿಸಿ ಹೊರಿಸಿ ಹೋದೆಯಾ*
*ಹೇಳದೆ ಬತ್ತಿದ ನೆನಪ ಕೊಳದಲಿ ಕರಗಿಸಿ ಮುಳಗಿಸಿ ಹೋದೆಯಾ*

ಇದು ಒಂದು ವಿರಹದ ತೀವ್ರತೆಯನ್ನು ತೋರಿಸುವ ಗಜಲ್ ,ಪ್ರೀತಿಯ ಸಂಗಾತಿ ದೂರಾದಾಗ ಮನದಲ್ಲಿ ಹೇಳುವ ಭಾವನೆಗಳನ್ನು ಸುಂದರವಾಗಿ ಹಿಡಿದಿಟ್ಟಿದ್ದಾರೆ ಕವಿ . ಕನಸ ಕಣ್ಣಿನ ಚೆಲುವೆ ಒಲವ ಉಣಸಿ ಹೇಳದೆ ಕೇಳದೆ ಎಲ್ಲಿ ಹೋದೆ, ನಿನ್ನ ಕನವರಿಕೆಯಲ್ಲಿ ಮಧು ಕುಡಿಯುತ್ತಾ ದಿನ ಕಳೆಯುತ್ತಿರುವೆ ,ನಿನ್ನೊಂದಿಗೆ ಕಳೆದ ಮಧುರ ಗಳಿಗೆಗಳ ನೆನಪಿನಲ್ಲಿ ಬದುಕುತ್ತಿರುವೆ .ಮನದಲ್ಲಿ ಹಚ್ಚಿದ ಒಲವ ದೀಪ ಏಕೆ ಆರಿಸಿ ಹೋದೆ ಎಂದು ಕವಿ ವಿರಹದ ನೋವನ್ನು  ಹಂಚಿಕೊಂಡಿದ್ದಾರೆ.

*ಕನಸಿನ ಹೃದಯದ ಗೋಪುರ ಒದ್ದು ಹೋದವಳು*
*ಕುಸಿದ ಅವಶೇಷಗಳಡಿ ನರಳುವಂತೆ ಮಾಡಿದವಳು*

ಇದು ಒಂದು ಭಗ್ನ ಪ್ರೇಮಿಯ ಆಲಾಪದ ಗಜಲ್ ಆಗಿದೆ ಪ್ರೀತಿಯನ್ನು ಧಿಕ್ಕರಿಸಿ ಹೋದ ಪ್ರಿಯತಮೆಗಾಗಿ ನೊಂದ ಪ್ರಿಯಕರ ಹೇಳುವ ಮಾತುಗಳಿವು. ನನ್ನ ಹೃದಯದಲ್ಲಿ ಕಟ್ಟಿದ  ಕನಸಿನ ಪ್ರೀತಿಯ ಗೋಪುರ ಒದ್ದು ದಿಕ್ಕರಿಸಿ  ಹೋದೆ. ಉಳಿದ ಅವಶೇಷಗಳಡಿಯಲ್ಲಿ ಸಿಲುಕಿ ನರಳುವಂತೆ ಮಾಡಿದೆಯಲ್ಲ ಎಂದು ತನ್ನ ಮನದ ತಳಮಳವನ್ನು ಸೊಗಸಾಗಿ ರೂಪಕಗಳಿಂದ ನಿವೇದಿಸಿಕೊಂಡಿದ್ದಾರೆ ಕವಿ.

ಶಿವಕುಮಾರ್ ಕರನಂದಿಯವರ *ನೆರಳಿಗಂಟಿದ  ನೆನಪು* ಗಜಲ್ ಸಂಕಲನದಲ್ಲಿ ಪ್ರೀತಿ ,ಪ್ರೇಮ ,ವಿರಹ ,ಸಮಾಜದ ಕಳಕಳಿ ಯನ್ನು ತೋರಿಸುವ ಇನ್ನೂ  ಅನೇಕ ಗಜಲ್ ಗಳಿದ್ದು ಓದಿಸಿಕೊಂಡು ಹೋಗುತ್ತವೆ. ಓದುಗರಿಗೆ ತೃಪ್ತಿಯನ್ನು ಕೊಡುತ್ತವೆ. ಇವರಿಂದ ಇನ್ನೂ ಉತ್ತಮವಾದ ಅನೇಕ ಗಜಲ್ ಗಳ ಸಂಕಲನಗಳು ಪ್ರಕಟವಾಗಲೆಂದು ಶುಭ ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುಗೆ .

* ಪ್ರಭಾವತಿ  ಎಸ್ ದೇಸಾಯಿ 
ವಿಜಯಪುರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter