ಅದೊಂದು ಕೋರ್ಟ್ ಹಾಲ್. ಕರಿ ಕಪ್ಪು ಕೋಟು ಧರಿಸಿದ ಹಿರಿಯ, ಕಿರಿಯ (ಅ) ನ್ಯಾಯವಾದಿಗಳು ಅವರೊಂದಿಗೆ ಬಂದ ಕಕ್ಷಿದಾರರಿಂದ ಕೋರ್ಟ್ ಹಾಲ್ ಆಗಲೇ ತುಂಬಿ ತುಳುಕುತ್ತಿತ್ತು. ಆಗ ಸಮಯ ಸರಿಯಾಗಿ ಹನ್ನೊಂದು ಘಂಟೆ. ಇದ್ದಕ್ಕಿದ್ದಂತೆ ನಿಶ್ಯಬ್ದ ಆವರಿಸಿತು ಅಲ್ಲಿ. ಅದನ್ನು ಭೇದಿಸುತ್ತ ಜಡ್ಜ್ ಸಾಹೇಬರು ಬಂದು ಬೆಂಚನ್ನು ಅಲಂಕರಿಸಿದರು. ಆಗ ಅಲ್ಲಿ ಹಾಜರಿದ್ದ ಕಪ್ಪು ಕೋಟುಗಳು ಒಮ್ಮೆ ಎದ್ದು ಜಡ್ಜ್ ಅವರಿಗೆ ಗೌರವ ಸಲ್ಲಿಸಿ ಮತ್ತೆ ಕೂತವು. ಕೋರ್ಟ್ ಬೆಂಚ್ ಕ್ಲರ್ಕ್ ವಿಧೇಯನಾಗಿ ನಿಂತರೆ, ಜವಾನ ಬಾಗಿಲ ಹತ್ತಿರ ನಿಂತು ಜೋರಾಗಿ ಕೂಗಲು ಗಂಟಲು ಸರಿ ಪಡಿಸಿಕೊಂಡ.
ಬೋನಿನಲ್ಲಿ ನಿಂತವನು ಸುಮಾರು ಅರವತ್ತು ವಸಂತಗಳನ್ನು ಕಳೆದ ಬೊಕ್ಕ ತಲೆಯ ಖದ್ದರುಧಾರಿ… ನೂರಾರು ಕೋಟಿಗಳ ಅಸಲೀ ಶ್ರೀಮಂತ…ಎರಡು ಸಲ ಶಾಸಕನಾದ ರಾಜಕೀಯ ಅನುಭವಿ…ಆದರೆ ಅಫಿಡವಿಟ್ ನಲ್ಲಿ ಮಾತ್ರ ಕೇವಲ ಐದಾರು ಕೋಟಿ ಆಸ್ತಿ ಮಾತ್ರ ಎಂದು ಘೋಷಿಸಿದ ‘ ಸತ್ಯ ಹರಿಶ್ಚಂದ್ರ ‘. ದೊಡ್ಡ ಯುದ್ಧದಲ್ಲಿ ವಿರೋಚಿತ ಸೋಲು ಅನುಭವಿಸಿದ ನಿರ್ಭಾವ ಮುಖವನ್ನು ಹೊತ್ತ ರಾಜಕಾರಿಣಿ.
ಜಡ್ಜ್ ಏನೊಂದೂ ಪ್ರಶ್ನಿಸದೆ ಕಣ್ಣ ಸನ್ನೆಯಲ್ಲೇ ಮಾತನಾಡಿದರು. ಬೋನಿನ ಕಟಕಟೆಯಲ್ಲಿ ನಿಂತ ಪುಢಾರಿ ಮಾತನಾಡಲು ಶುರು ಮಾಡಿದ.
“ನಾನು ಜನ ನಾಯಕ ಗುಂಡಣ್ಣ ಸಾರ್. ಮೊನ್ನೆ ನಡೆದ ವಿ (ನಿ) ಧಾನ ಸಭೆಯ ಚುನಾವಣೆಗೆ ನಾನು ನಿಂತಿದ್ದೆ…” ಎಂದ ಉಗುಳು ನುಂಗುತ್ತಾ…
” ಯಾರಾದರೂ ಅಷ್ಟೇ ಚುನಾವಣೆಗೆ ನಿಲ್ಲುತ್ತಾರೆ ಹೊರತು ಕೂಡುವುದಿಲ್ಲ…ಹೌದಲ್ಲವೇ?” ಎಂದು ಜಡ್ಜ್ ನಕ್ಕು ನುಡಿದರು. ಆ ‘ ಪಂಚ್ ‘ ಗೆ ಇಡೀ ಹಾಲೇ ಜೋರಾಗಿ ನಕ್ಕ ಶಬ್ದ. ಆದರೆ ಇಡೀ ಹಾಲು ಪ್ರತಿಕ್ರಿಯೆ ನೀಡಿದ್ದು ಇಷ್ಟವಾಗಲಿಲ್ಲ ಜಡ್ಜ್ ಸಾಹೇಬರಿಗೆ.
“ಕೋರ್ಟ್ ಸಮಯ ವ್ಯರ್ಥ ಮಾಡದೆ ಏನಾದರೂ ಹೇಳುವುದಿದ್ದರೆ ಬೇಗ ಹೇಳಬಹುದು…” ಎಂದು ಆರ್ಡರ್ ಮಾಡಿದರು ಜಡ್ಜ್ ಸಾಹೇಬರು.
” ಹೇಳುವುದು ಬಹಳ ಇದೆ ಸಾರ್…ಚುನಾವಣೆಗಾಗಿ ಅಂದುಕೊಂಡದ್ದಕ್ಕಿಂತ ಖರ್ಚು ಬಹಳ ಆಯ್ತು …” ಎಂದ ಕ್ಷೀಣ ಸ್ವರದಲ್ಲಿ ಗುಂಡಣ್ಣ.
” ಅದಕ್ಕೆ ಕೋರ್ಟು ಏನು ಮಾಡಬೇಕು?” ಮರು ಪ್ರಶ್ನಿಸಿದರು ಜಡ್ಜ್ ಸಾಹೇಬರು.
” ಸಾರ್…ನಾನು, ನನ್ನ ಕುಟುಂಬದವರು, ಹಿತೈಷಿಗಳು, ಗೆಳೆಯರು ಹಾಗೂ ಮುಖ್ಯವಾಗಿ ಜಾತಿ ಬಾಂಧವರು ಪಟ್ಟ ಕಷ್ಟ ಲೆಕ್ಕ ಹಾಕಲು ಸಾಧ್ಯವಿಲ್ಲ…” ಎಂದ ಗುಂಡಣ್ಣ ಉಗುಳು ನುಂಗುತ್ತಾ…
” ಚುನಾವಣೆಯಲ್ಲಿ ಗೆಲ್ಲಲು ನೀನು ಮಾಡಿದ ಉತ್ತಮ ಕೆಲಸಗಳು, ಅಭಿವೃದ್ಧಿ( ಸ್ವಂತ ಅಲ್ಲ!) ಕಾರ್ಯಗಳು ನೆರವಾಗಬೇಕೇ ಹೊರತು ಹಣ ವೆಚ್ಚ ಮಾಡಿದ್ದಲ್ಲ…” ಎಂದರು ಜಡ್ಜ್ ಸಾಹೇಬರು.
” ಅದು ನಿಜ …ತಪ್ಪು ತಿಳಿಯಬೇಡಿ… ತಾವು ಯಾವ ಕಾಲದಲ್ಲಿದ್ದೀರಿ ಸಾರ್… ಯಾವುದಕ್ಕೆ ಆಗಲಿ ಮೊದಲು ಬಂಡವಾಳ ಹಾಕಬೇಕು. ಹತ್ತು ರೂಪಾಯಿ ಹಾಕಿದರೆ ನೂರು…ನೂರು ರೂಪಾಯಿ ಹಾಕಿದರೆ ಸಾವಿರ…ಸಾವಿರ ಹಾಕಿದರೆ ಲಕ್ಷ…ಲಕ್ಷ ಹಾಕಿದರೆ ಕೋಟಿ…ಒಂದು ಕೋಟಿ ಹಾಕಿದರೆ ಹತ್ತಾರು ಕೋಟಿ…ಹೀಗೆ ಎಲ್ಲ ಗುತ್ತಿಗೆದಾರರು, ಸಿನಿಮಾ ನಿರ್ಮಾಪಕರು, ಉದ್ಯಮಿಗಳ ತರಹ ರಾಜಕೀಯ ನಾಯಕರು ಕೂಡ ಬಂಡವಾಳ ಹಾಕಲೇಬೇಕು ಸಾರ್..” ಎಂದ ಪೆಟಿಷನರ್ ಗುಂಡಣ್ಣ ತುಸು ನಗುತ್ತಾ.
” ಅಂದರೆ ನೀನು ಹೇಳೋದೇನು ರಾಜಕೀಯ ಕೂಡ ಒಂದು ವ್ಯಾಪಾರ ಅಥವಾ ಉದ್ಯಮ ಅಂತ ತಾನೇ…” ಜಡ್ಜ್ ಸಾಹೇಬರು ವ್ಯಂಗ್ಯವಾಗಿ ನುಡಿದರು.
” ನೂರಕ್ಕೆ ನೂರು ನಿಜ ಸಾರ್… ಯಾರಾದರೂ ಬಂಡವಾಳ ಹೂಡುವದು ಲಾಭದ ಸಲುವಾಗಿ ಅಲ್ವೇ?… ಈ ವ್ಯಾಪಾರಕ್ಕೆ ಓದಿನ ವಯಸ್ಸಿನ ಸಂಬಂಧ ಇಲ್ಲ. ಎಷ್ಟು ಬಂಡವಾಳ ಹಾಕಿದ್ದೇವೊ ಅದೆಲ್ಲವೂ ‘ ಚಕ್ರ ಬಡ್ಡಿ ‘ ಸಮೇತ ಐದು ವರ್ಷದಲ್ಲಿ ವಾಪಾಸು ಗಳಿಸಬಲ್ಲೆ ಎಂಬ ಆತ್ಮ ವಿಶ್ವಾಸ ಇದ್ದವರು ಮಾತ್ರ ಈ ಬಿಸಿನೆಸ್ಸಿಗೆ ಕೈ ಹಾಕಬೇಕು…” ಎಂದ ಗುಂಡಣ್ಣ.
” ಹೌದು…ಅದನ್ನು ನೀವು ಜನಗಳಿಗೆ ಮಾಡುವ ‘ ಜನತಾ ಸೇವೆ ‘ ಎಂದು ನಾವು ಭಾವಿಸುತ್ತೇವೆ. ಹೌದು ತಾನೇ?..” ಎಂದು ಜಡ್ಜ್ ಸಾಹೇಬರು ಶಾಂತವಾಗಿ ನುಡಿದರು.
” ಯಾವ ಸೇವೆಗಾದರೂ ‘ ಸೇವಾ ಶುಲ್ಕ ‘ ಅಂತ ಒಂದು ಇರುತ್ತೆ ಸಾರ್… ರಾಜಕೀಯ ಸೇವೆ ಸಹಾ ಅದಕ್ಕೆ ಹೊರತಲ್ಲ!” ಎಂದು ಉತ್ತರಿಸಿದ ಗುಂಡಣ್ಣ.
” ಅಂದರೆ…ಜನತಾ ಜನಾರ್ಧನರ ಸೇವೆ ‘ ಪೇಯ್ಡ್ ಸರ್ವೀಸ್ ‘ ಅಂತ ನಿನ್ನ ಅಭಿಪ್ರಾಯನಾ?… ಓಕೆ. ಅದಕ್ಕೆ ಬಂಡವಾಳ ಹಾಕಿರುವೆ ಅಂತ ನಿನ್ನ ಸಂಕಟ. ಆಯ್ತು…ಈಗ ನೀನು ಹೇಳೋದಾದರು ಏನು?…” ಜಡ್ಜ್ ಸಾಹೇಬರು ಗುಂಡಣ್ಣನನ್ನು ಉದ್ದೇಶಿಸಿ ಕೇಳಿದರು ವಿವರವಾಗಿ ಹೇಳು ಎನ್ನುವಂತೆ.
” ಬೇರೇ ಪ್ರತ್ಯೇಕವಾಗಿ ಹೇಳೋದೇನಿದೆ ಸಾರ್…ಕುದುರೆ ರೇಸಿನಲ್ಲಿ…ಇಸ್ಪೀಟ್ ಆಟದಲ್ಲಿ
ಆನ್ಲೈನ್ ಗೇಮಿನಲ್ಲಿ ಕಳೆದುಕೊಂಡಂತೆ ಚುನಾವಣೆಯಲ್ಲಿ ಕೂಡ ನಾನು ಸಾಕಷ್ಟು ಹಣ ಕಳೆದುಕೊಂಡು ನಷ್ಟ ಅನುಭವಿಸಿರುವೆ. ದಯವಿಟ್ಟು ತಾವು ಶಾಂತ ಮನಸಿನಿಂದ ನನ್ನ ಮನದಾಳದ ಮಾತುಗಳನ್ನು ಕೇಳಿ ಸಾರ್…ಚುನಾವಣೆ ಸಭೆಗಳಿಗೆ ಈ ಮೊದಲಿನಂತೆ ಜನ ಬರುತ್ತಿಲ್ಲ…ಬಂದರೂ ನಮ್ಮ ಮಾತು ಅಲಿಸುತ್ತಿಲ್ಲ…ನಮ್ಮ ಭರವಸೆ – ಅಶ್ವಾಸನೆ ಎಲ್ಲ ಬೋಗಸ್ ಎಂದು ಮುಖಕ್ಕೆ ಹೊಡೆದವರಂತೆ ಹೇಳುತ್ತಾರೆ ಮತದಾರರು. ಉಚಿತ ಮತ್ತು ಸಬ್ಸಿಡಿಗಳ ಬಗ್ಗೆ ಹೇಳಲು ಹೋದರೆ ” ನೀವೇನು ಪುಕ್ಕಟೆ ಕೊಡುತ್ತೀರಾ…ಅಲ್ಲದೆ ಅವುಗಳನ್ನು ಬಡ್ಡಿ ಸಮೇತ ಆಮೇಲೆ ಕಟ್ಟೋದು ನಾವೇ… ಎಲ್ಲ ಅಭ್ಯರ್ಥಿಗಳು ಕೋರಸ್ಸಾಗಿ ಅದನ್ನೇ ವಿಭಿನ್ನ ರಾಗದಲ್ಲಿ ಹಾಡುತ್ತಾರೆ ಅಷ್ಟೇ”…ಅದರ ಬದಲು ನಮ್ಮ ಕೈಗೆ ಕೂಡಲೇ ಮುಟ್ಟುವ ಬಗ್ಗೆ ಮಾತನಾಡಿ… ನೇರವಾಗಿ ವಿಷಯಕ್ಕೆ ಬರೋದಾದರೆ ಹಣ ಎಷ್ಟು ಕೊಡ್ತೀರಿ ಮೊದಲು ಅದನ್ನು ಹೇಳಿ…” ಎಂದು ಕಡ್ಡಿ ತುಂಡು ಮಾಡಿದಂತೆ ಕೇಳುತ್ತಾರೆ ಸಾರ್ ನಮ್ಮ ‘ ಗೌರವಾನ್ವಿತ ‘ ಮತದಾರರು.
” ಅಂದರೆ ನಿನ್ನ ಪ್ರಕಾರ ಮತ ಮಾರಾಟಕ್ಕಿದೆ…ಯಾರಾದರೂ ಅವುಗಳನ್ನು ಹಣ ಕೊಟ್ಟು ಖರೀದಿ ಮಾಡುತ್ತಾರಾ?… ಒಂದು ವೇಳೆ ಕೊಂಡರೆ ಅದು ಕಾನೂನಿನ ರೀತಿ ಅಪರಾಧ ಅಲ್ಲವೇನು?” ಎಂದರು ಜಡ್ಜ್ ಸಾಹೇಬರು ಸೀರಿಯಸ್ಸಾಗಿ.
” ವ್ಯಾಪಾರ ಅಂದ ಮೇಲೆ ರಿಸ್ಕ್ ತೆಗೆದುಕೊಳ್ಳದೆ ಇರೋಕೆ ಹೇಗೆ ಸಾಧ್ಯ ಸಾರ್…ಬೇರೆ ಅಭ್ಯರ್ಥಿಗಳು ಹಣ ಕೊಟ್ಟು ಓಟು ಖರೀದಿ ಮಾಡುತ್ತಿದ್ದರೆ ನೋಡಿ ಸುಮ್ಮನೆ ಹೇಗೆ ಇರೋಕಾಗುತ್ತೆ ಹೇಳಿ ಸಾರ್…
ಒಂದು ಓಟಿಗೆ ‘ಎರಡು ಸಾವಿರ ‘ ಅಂತ ನಿಗದಿ ಮಾಡಿ ಒಂದು ಕುಟುಂಬಕ್ಕೆ ಇಷ್ಟು, ಓಣಿಗಿಷ್ಟು ಮತ್ತು ವಾರ್ಡಿಗಿಷ್ಟು ಅಂತ ಲೆಕ್ಕ ಹಾಕಿ ನಮ್ಮವರ ಮುಖಾಂತರ ಹಣ ಹಂಚಿರುವೆ…ಅಲ್ಲದೆ ಇದಕ್ಕೂ ಮುನ್ನ ಮಾನ್ಯ ಮತದಾರರ ಸಂತೋಷಕ್ಕಾಗಿ ಲಿಕ್ಕರ್ ಮತ್ತು ಬಾಡೂಟಕ್ಕೆ ಅಂತ ಸಾಕಷ್ಟು ಖರ್ಚು ಬೇರೆ ಮಾಡಿರುವೆ. ಅದನ್ನೆಲ್ಲ ವಸೂಲಿ ಮಾಡೋಣವೆಂದರೆ ಈ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಮನೆ ಸೇರಿದೆ…” ನುಡಿದ ಗುಂಡಣ್ಣ ಅಸಮಾಧಾನದ ಸ್ವರದಲ್ಲಿ.
ಜಡ್ಜ್ ಸಾಹೇಬರು ಒಂದು ನಿಮಿಷ ಸುಮ್ಮನೆ ತಮ್ಮ ಟೇಬಲ್ಲಿನ ಮುಂದೆ ಇಟ್ಟ ಕಣ್ಣುಗಳಿಗೆ ಬಟ್ಟೆ ಕಟ್ಟಿದ ‘ ನ್ಯಾಯ ದೇವತೆ ‘ಯನ್ನು ನೋಡಿದರು.
ನಂತರ ತುಸು ಕೋಪದಿಂದ ಗುಂಡಣ್ಣನತ್ತ ದೃಷ್ಟಿ ಹಾಯಿಸಿ ಸಿಟ್ಟಿನಿಂದ ಗುಡುಗಿದರು.
” ನಿನ್ನ ಈ ಗೊಡ್ಡು ಗೋಳೆಲ್ಲ ಕೇಳಲು ಮತ್ತು ಕೋರ್ಟಿನ ಸಮಯ ವ್ಯರ್ಥ ಮಾಡುವದನ್ನು ನೋಡಲು ನಾವು ಇಲ್ಲಿ ಸುಮ್ಮನೆ ಕೂತಿರುವೆ ಎಂದು ನೀನು ಭಾವಿಸಿದಂತಿದೆ “
ಪೆಟಿಷನರ್ ಗುಂಡಣ್ಣನ ಕಡೆಯ ಸೀನಿಯರ್ ಲಾಯರ್ ರಂಗಣ್ಣ ಗುಂಡಣ್ಣನನ್ನು ಉದ್ದೇಶಿಸಿ ನುಡಿದ. ” ಸುತ್ತು ಬಳಸದೆ ನೇರ ವಿಷಯಕ್ಕೆ ಬಾ ಗುಂಡಣ್ಣ…”
” ಬೇರೆ ಪಕ್ಷದ ಅಭ್ಯರ್ಥಿ ಒಂದು ಓಟಿಗೆ ‘ ಮೂರು ಸಾವಿರ ‘ ಅಂತ ಫಿಕ್ಸ್ ಮಾಡಿ ಹೆಚ್ಚೆಚ್ಚು ಮತಗಳನ್ನು ಬುಟ್ಟಿಗೆ ಹಾಕಿಕೊಂಡು ನನಗೆ ಅತೀವ ನಷ್ಟ ಉಂಟು ಮಾಡಿದ. ಓಟಿನ ವ್ಯಾಪಾರದಲ್ಲಿ ಇದೆಲ್ಲ ಸಹಜ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಓಟು ಮಾರಾಟ ಮಾಡುವ ಹಕ್ಕು ನಮ್ಮ ಪ್ರಜಾಪ್ರಭುತ್ವದಲ್ಲಿ ಅನೂಚಿತವಾಗಿ ನಡೆದುಕೊಂಡು ಬಂದ ಪದ್ಧತಿ. ನನ್ನ ಲೆಕ್ಕಾಚಾರ ತಪ್ಪಾಗಿ ಕಡಿಮೆ ರೇಟ್ ನಾನು ಫಿಕ್ಸ್ ಮಾಡಿದೆ. ಇದು ಸ್ವಯಂಕೃತ ಅಪರಾಧ. ನಾನು ಒಪ್ಪುತ್ತೇನೆ. ಈಗ ಖರ್ಚು ಮಾಡಿದ ಹಣ ನನ್ನಲ್ಲಿ ಉಳಿದಿದ್ದರೆ ಬರೋ ಚುನಾವಣೆಗೆ ಅಥವಾ ಬೈ ಎಲೆಕ್ಷನ್ ಸಲುವಾಗಿ ನಾನು ಮತ್ತೆ ಬಂಡವಾಳವಾಗಿ ಉಪಯೋಗಿಸುತ್ತಿದ್ದೆ. ವರ್ಷಗಟ್ಟಲೆ ಸರ್ಕಾರಿ ಉದ್ಯೋಗಿಗಳ ಸ್ಥಾನವನ್ನು ಭರ್ತಿ ಮಾಡದೇ ಇರಬಹುದು…ಕೆಲವು ಸರಕಾರಿ ಸೇವೆಗಳು ಹಲವಾರು ವರ್ಷಗಳು ನಿಲ್ಲಬಹುದು… ಆದರೆ ಆರು ತಿಂಗಳೊಳಗೆ ತೆರವಾದ ಶಾಸಕ ಸ್ಥಾನಗಳಿಗೆ ಚುನಾವಣೆ ನಡೆಸದಿದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಉತ್ತಮ ಆಡಳಿತದಿಂದ ಜನರು ವಂಚಿತರಾಗಬಹುದು ಎನ್ನುವ ಕಾರಣದಿಂದ ‘ ಪ್ರಜಾಪ್ರಭುತ್ವದ ಮೌಲ್ಯಗಳನ್ನು ‘ ಮತ್ತೊಮ್ಮೆ ಎತ್ತಿ ಹಿಡಿಯಲು ಮತ್ತು ನನಗೆ ಇನ್ನೊಮ್ಮೆ ಅವಕಾಶ ಸಿಗಲು ಹಣ ಬೇಕಾಗುತ್ತದೆ ಸಾರ್…” ಎಂದು ವಿವರಿಸಿದ ರಾಜಕೀಯ ಮುತ್ಸದ್ದಿ ಗುಂಡಣ್ಣ.
” ಮತ್ತೆ ಹಣ ಬೇಕು…ಅಂದರೆ ಅರ್ಥವಾಗಲಿಲ್ಲ ನಿನ್ನ ಮಾತು..” ಎಂದು ಹುಬ್ಬು ಏರಿಸಿ ಕೇಳಿದರು ಜಡ್ಜ್ ಸಾಹೇಬರು.
” ಅರ್ಥವಾಗದಿರುವದಕ್ಕೆ ಇದರಲ್ಲಿ ಬೇರೆ ಗೂಡಾರ್ಥ ಏನು ಇಲ್ಲ ಸಾರ್…ನನ್ನ ಬಳಿ ಎರಡು ಸಾವಿರ ಅಂತ ಒಪ್ಪಿಕೊಂಡು’ ಒಪ್ಪಂದ ‘ ಮಾಡಿಕೊಂಡು ನಂತರ ಹಣ ತಗೊಂಡು ಬೇರೆ ಅಭ್ಯರ್ಥಿಗೆ ಮೂರು ಸಾವಿರಕ್ಕೆ ಮತ ಹಾಕಿದ್ದಾರೆ. ಇದು ಮೋಸವಲ್ಲದೆ ಇನ್ನೇನು?..ಹೀಗಾದರೆ ಪ್ರಜಾ ಪ್ರಭುತ್ವದ ಬೆಲೆ ಹೇಗೆ ಉಳಿಯಬೇಕು?… ನನ್ನಿಂದ ಹಣ ಪಡೆದು ‘ ಮತ ‘ ದ ಸರಕನ್ನು ಒಪ್ಪಂದದ ಪ್ರಕಾರ ನನಗೆ ‘ ಸಪ್ಲೈ’ ಮಾಡಿಲ್ಲ.. ಅದರಿಂದ ನನಗೆ ವ್ಯಾಪಾರ ದ್ರೋಹವಾಗಿದೆ. ಆ ಕಾರಣ ನಾನು ಯಾರ್ಯಾರಿಗೆ ಹಣವನ್ನು ಕೊಟ್ಟಿದ್ದೀನೋ ಅವರಿಂದ ತಾವು ನೋಟಿಸ್ ಕೊಟ್ಟು ವಸೂಲಿ ಮಾಡಿಸಿ ನನಗೆ ಮರಳಿ ವಾಪಾಸು ಬರುವಂತೆ ಮಾಡಬೇಕು.
ತಮಗೆ ಅನುಕೂಲವಾಗಲೆಂದು ಯಾವ ಯಾವ ‘ ಸೆಗ್ಮೆಂಟ್ ‘ ನಲ್ಲಿ ನನಗೆ ಮತ ಬಂದಿಲ್ಲ ಅಂತಹ ‘ ಮತ ದ್ರೋಹಿ ‘ ಗಳ ಪಟ್ಟಿ ಆಗಲೇ ತಮ್ಮ ಸನ್ನಿಧಾನಕ್ಕೆ ಒಪ್ಪಿಸಿರುವೆ ಸಾರ್…ನನ್ನ ಬಂಡವಾಳಕ್ಕೆ ಬಡ್ಡಿ ಬೇಡ ಕನಿಷ್ಠ ಅಸಲಾದರು ಹಿಂದಿರುಗಿಸಲು ತಾವು ಸಹಾಯ ಮಾಡಿದರೆ ಸಾಕು ನಾನು ಬರುವ ಚುನಾವಣೆಗೆ ಮತ್ತೊಮ್ಮೆ ನಿಲ್ಲಲು ಸಹಾಯವಾಗುತ್ತದೆ. ಈ ಬಾರಿ ಎದುರಾಳಿಗಿಂತ ಹೆಚ್ಚಿನ ಹಣವನ್ನು ಮತ್ತೊಮ್ಮೆ ನೀಡಿ ಈ ‘ ಪ್ರಜಾಪ್ರಭುತ್ವದ ಹಬ್ಬವನ್ನು ‘ ವಿಜೃಂಭಣೆಯಿಂದ ಆಚರಿಸಲು ದಯಾಳುಗಳಾದ ತಾವು ನನಗೆ ಅನುವು ಮಾಡಿಕೊಡಬೇಕು ಎಂದು ಸವಿನಯ ಪ್ರಾರ್ಥನೆ ಸಾರ್…” ಕೈ ಮುಗಿಯುತ್ತಾ ಮಾತು ಮುಗಿಸಿದ ಗುಂಡಣ್ಣ.
ಅರೆಕ್ಷಣ ಸೂಜಿ ಬಿದ್ದರೂ
ಶಬ್ದವಾಗುವಷ್ಟು ಮೌನ ಕೋರ್ಟಿನ ಹಾಲಿನಲ್ಲಿ.
ಸ್ವಲ್ಪ ಹೊತ್ತಿನ ಬಳಿಕ ಜಡ್ಜ್ ಸಾಹೇಬರಿಂದ ಎರಡೇ ಪದಗಳ ಶಬ್ದ ಗುಚ್ಛ ಹೊರ ಬಂತು.
” ಕೇಸ್ ಅಡ್ಜೋರ್ನಡ್…”
****
4 thoughts on “ಹಣ ವಾಪಾಸು ಮಾಡಿಸಿ…!”
Superb sir, this story is very much reletevily nearest and dearest to the current situations. Congratulations… Sir.
Thank you Sir
A very typical but serious problem faced by the democratic contry. The way in which the story is told is highly appreciable. Congratulations.
Thank you Sir