ಪಕ್ಕದ ಮನೆಯ ಲಕ್ಷ್ಮತ್ತಿಗೆ ಆಗಾಗ ನಮ್ಮ ಮನೆಯ ಮುಂಬಾಗಿಲಿಗೋ ಜಗುಲಿಗೋ ಬಂದು ನಿಂತು ‘ಶಾರದತ್ತಿಗೆ ಬೆಳಿಗ್ಗೆಯ ಆಸರಿಗೆ ಮುಗತ್ತ ಎಂದೋ ಊಟಾಯ್ತಾ ಎಂದೋ ಪ್ರಶ್ನಿಸಿ ಸುದ್ದಿ ಶುರುವಿಟ್ಟುಕೊಳ್ಳುತ್ತಿದ್ದಳು. ಆಯಿಯೂ ಮನೆಗೆಲಸದ ನಡುವೆ ಕೊಂಚ ಬಿಡುವು ಮಾಡಿಕೊಂಡು ಅವಳ ಬಳಿ ಕಷ್ಟ ಸುಖದ ಸುದ್ದಿ ಹಂಚಿಕೊಂಡು ಗೆಲುವಾಗುತ್ತಿದ್ದಳು..’ಒಂದೈದು ನಿಮಿಷಾ ಕೂತು ಮಾತಾಡೆ’ ಎಂದು ನಾವ್ಯಾರಾದರೂ ಲಕ್ಷ್ಮತ್ತಿಗೆಯ ಬಳಿ ಹೇಳಿದರೆ ಸಾಕು ‘ಇಲ್ಲ್ಯೆ ಒಲೆ ಮೇಲೆ ಹಾಲಿಟ್ಟಿದ್ದಿ ಎಂದೋ ಕೆಲಸದವರಿಗೆ ಚಹಾ ಮಾಡುವುದಿದೆಯೆಂದೋ’ ನೆವ ಹೇಳುತ್ತಿದ್ದಳು. ಅರ್ಧ ಮುಕ್ಕಾಲು ಗಂಟೆ ಮಾತಾಡುತ್ತಿದ್ದಳು. ‘ಕುಳಿತರೆ ಬೇರು ಬಿಡುವ ಚಿಂತೆ ಇದ್ದಂತಿದೆ’ ಎಂದು ನಾವು ಅತ್ತಿಗೆಗೆ ಕಾಡುತ್ತಿದ್ದೆವು.
ತುದಿ ಮನೆಯ ಲಲಿತಜ್ಜಿ ತನಗಿರುವ ಮೂರು ಗಂಡುಮಕ್ಕಳ ಮದುವೆಯಾಗಿ ಸೊಸೆಯರು ಬಂದ ಮೇಲೆ ಮನೆಯ ಅಡುಗೆ ಮನೆಯ ಯಜಮಾನತ್ಗೆಯನ್ನು ಮಾತ್ರ ಇಟ್ಟುಕೊಂಡು ಎಲ್ಲರಿಗೂ ಕೆಲಸಗಳನ್ನು ಹಂಚಿಕೊಟ್ಟು ಅಂಗಳದ ತುದಿಯ ಕಟ್ಟೆಯ ಮೇಲೆ ಕುಳಿತು ಊರಿಗೆ ಕುಳಿತು ಯಾರು ಬಂದರು ಎಷ್ಟು ಹೊತ್ತಿಗೆ ಎಲ್ಲಿಗೆ ಹೋದರು ಯಾಕೆ ಹೋದರು ಎಂಬ ಸುದ್ದಿಗಳನ್ನೆಲ್ಲ ಶ್ರದ್ಧೆಯಿಂದ ಸಂಗ್ರಹಿಸುತ್ತಿದ್ದಳು. ಊರಿನ ಹರಯದ ಹುಡುಗ ಹುಡುಗಿಯರ ಲವ್ವಿನ ಹಗರಣಗಳಿಂದ ಹಿಡಿದು ಸತ್ತವರ ಮನೆಯ ಸೂತಕದ ಲೆಕ್ಕಾಚಾರಗಳವರೆಗೆ ಎಲ್ಲವನ್ನು ಕರಾರುವಾಕ್ಕಾಗಿ ತಿಳಿದುಕೊಂಡು ಅವುಗಳನ್ನು ಮರು ಪರಿಶೀಲನೆಗೈಯುತ್ತಾ ಅಗತ್ಯವಿದ್ದಲ್ಲಿ ರೆಕ್ಕೆ ಪುಕ್ಕಗಳನ್ನು ಹಚ್ಚಿ ಎಲ್ಲಿಗೆ ಬೇಕೋ ಅಲ್ಲಿಗೆ ಹಾರಿಬಿಡುತ್ತಿದ್ದಳು. ತೊದಲು ಮಾತಾಡುವ ಕಂದಮ್ಮಗಳಿಂದಾದಿಯಾಗಿ ಮುಪ್ಪಿನ ಮುದುಕರವರೆಗೆ ಎಲ್ಲರೂ ಲಲಿತಜ್ಜಿಯ ಪ್ರಶ್ನೆಗಳಿಗೆ ಬೆದರುತ್ತಿದ್ದರು, ಬೆವರುತ್ತಿದ್ದರು. ಬದುಕಿರುವವರೆಗೂ ‘ಸುದ್ದಿ ಅಜ್ಜಿ’ ಎಂದೇ ಲಲಿತಜ್ಜಿ ಹೆಸರುವಾಸಿಯಾಗಿದ್ದರು. ನೆಂಟರ ಮನೆ ಸುದ್ದಿಯ ನಿಂತು ಹೇಳೆ ಅತ್ಗವ್ವ….. ಎಂದು ಅವಳು ಹಾಡಲಾರಂಭಿಸಿದರೆ ಸುದ್ದಿ ಹೇಳಲು ಬೇಸರಿಸಿ ಓಡುವಂತಾಗುತ್ತಿತ್ತು.
ಬೆಳಿಗ್ಗೆ ಐದೂವರೆಯಿಂದ ಏಳೂವರೆಯವರೆಗೆ ತೋಟ, ಬೆಟ್ಟ ಓಡಾಡಿದ ಅಪ್ಪ ತಿಂಡಿ ತಿನ್ನಲು ಬರುವುದಕ್ಕೆ ಸರಿಯಾಗಿ ರೇಡಿಯೋದಲ್ಲಿ ವಾರ್ತೆಯನ್ನು ಬಿತ್ತರಿಸುತ್ತಿದ್ದರು. ಆಯಿಗೆ ಅಂದು ದಿನವಿಡಿ ನಡೆಸಬೇಕಾದ ಕೃಷಿ ಕಾಯಕದ ಬಗ್ಗೆ ತಿಳಿದುಕೊಳ್ಳು ತವಕ…ಇರುತ್ತಿತ್ತು. ಇವತ್ತು ಎಷ್ಟು ಆಳುಗಳು ಬರ್ತ? ಆಸರಿಗೆ ಮಾಡಲ್ಲೆ ಗೊತ್ತಾಗ್ತಿಲ್ಲೆ ಹೇಳದಿದ್ರೆ ಎಂದೇನಾದರೂ ಪ್ರಶ್ನೆ ಹಾಕುತ್ತಿದ್ದಳು..ಥೂ ಒಂದು ಸ್ವಲ್ಪ ವಾರ್ತೆ ಮುಗಿಯವರೆಗೆ ಸುಮ್ಮನಿದ್ರೆ ನಿಂದೆಂಥಾ ಗಂಟು ಖರ್ಚಾಗ್ತಿತ್ತು? ಅಡಿಕೆ ಬಗ್ಗೆ ಮುಖ್ಯಮಂತ್ರಿ ಎಂತದೋ ಹೇಳ್ತಾ ಇರದು ಬರ್ತಾ ಇದ್ದಿತ್ತು. ಕೇಳಲ್ಲಾಜಿಲ್ಲೆ. ರೇಡಿಯೋದಲ್ಲಿ ಅವರು ನನಗಾಗಿ ಮತ್ತೊಮ್ಮೆ ಅದನ್ನು ಹೇಳತ್ವ? ಎಂದು ಅಪ್ಪ ಬೈಯಲಾರಂಭಿಸುತ್ತಿದ್ದ. ನಾವು ಮೂರು ಮಕ್ಕಳು ಒಮ್ಮೊಮ್ಮೆ ಅಪ್ಪನ ಪರವಾಗಿ ಒಮ್ಮೊಮ್ಮೆ ಆಯಿಯ ಪರ ವಕಾಲತ್ತು ಮಾಡಿ ತಾರಕಕ್ಕೇರಿದ ಅವರ ಜಗಳ ಸುಧಾರಿಸಬೇಕಾಗುತ್ತಿತ್ತು. ಆಕಾಶವಾಣಿಯಲ್ಲಿ ಕೆಲಸ ಮಾಡುವ ಅಳಿಯ( ನನ್ನವರು) ಸಿಕ್ಕಿದೊಡನೇ ನನ್ನ ಆಯಿ ಅವನೊಂದಿಗೆ ಹೇಳಿದ ಮಾತೆಂದರೆ ಊಟ ತಿಂಡಿಯ ಸಮಯದಲ್ಲಿ ವಾರ್ತೆ ಬರದೇ ಇರುವ ಹಾಗೆ ಮಾಡು ಎಂಬುದಾಗಿತ್ತು!.
ಅದೊಂದು ದಿನ ಒಲೆ ಮೇಲೆ ಹಾಲು ಕಾಯಿಸಲಿಟ್ಟಿದ್ದು ಮರೆತು ಒಂದು ತಾಸು ಪೇಪರ್ ಓದುತ್ತ ಕುಳಿತು ಬಿಟ್ಟಿದ್ದೆ. ಆಮೇಲೆ ನೆನಪಾಗಿ ತಟ್ಟನೆ ಒಳಗೋಡಿದೆ. ಒಲೆಯಮೇಲಿಟ್ಟ ಎರಡು ಲೀಟರ್ ಹಾಲಿನಲ್ಲಿರುವ ನೀರೆಲ್ಲ ಬತ್ತಿ ದಪ್ಪನೆಯ ದೋಸೆ ಹಿಟ್ಟಿನಂತಾಗಿತ್ತು. ಕೊಂಡ ಹಾಲು ಕೆಡಿಸುವುದೇನು ಎಂದು ಅದನ್ನೆ ಎರಡು ಚಮಚೆ ತೆಗೆದು ನೀರು ಸೇರಿಸಿ ಚಹಾ ಮಾಡಿದೆ. ಕುಡಿಯಲು ಸೇರದೇ ಚೆಲ್ಲಿದೆ. ಉಳಿದ ಖವಾಕ್ಕೆ ಡ್ರೈಫ್ರೂಟ್ಸ ಕೇಸರಿ ಎಸಳು ಸಕ್ಕರೆ ಸೇರಿಸಿ ಮತ್ತಷ್ಟು ಕುದಿಸಿ ಬಾಸುಂದಿ ಮಾಡಿ ಪೂರಿ ಮಾಡಿದೆ. ಅಷ್ಟರಲ್ಲಿ ಬಂದಮ್ಮವರ ಗೆಳೆಯ ಗೆಳೆಯನ ಪತ್ನಿಗೂ ಪೂರಿ ಬಾಸುಂದಿ ಹಾಕಿಕೊಟ್ಟೆ. ‘ಎಷ್ಟು ರುಚಿಯಾಗಿದೆ ಹೇಗೆ ಮಾಡುವುದು ಹೇಳಿಕೊಡಿ ಪ್ಲೀಸ್’ ಎನ್ನಬೇಕೇ ಅವರ ಪತ್ನಿ! ‘ಒಂದು ತಾಸು ಸಣ್ಣ ಉರಿಯಲ್ಲಿ ಎರಡು ಲೀಟರ್ ಹಾಲನ್ನಿರಿಸಿ ಒಂದು ತಾಸು ನ್ಯೂಸ್ ಪೇಪರ್ ಸುದ್ದಿಗಳನ್ನೋದಬೇಕು’.. ಎಂದು ನಾನು ಶುರು ಮಾಡಿದ ವಾಕ್ಯ ಮುಗಿಯುವುದರೊಳಗೆ ಅವಳು ‘ಅಯ್ಯ ಪೇಪರ್ನ್ಯಾಗಿಂದು ಇವತ್ತಿನ ಸುದ್ದಿ ನಾಳೆ ರದ್ದಿ ಬಿಡ್ರೀ.. ಯಾರರೇ ಗೆಳತ್ಯಾರು ಸಿಕ್ಕಿದರೆ ಒಂದು ತಾಸೇನು ಮೂರು ನಾಲ್ಕು ತಾಸು ಸಲೀಸಾಗಿ ಸುದ್ದಿ ಹೇಳಬಹುದು ನೋಡ್ರೀ’ ಎಂದಳು. ‘ಕೇಳೋರು ಸಿಕ್ಕಿದ್ರ ನಾಲ್ಕೇನು ಎಂಟು ತಾಸು ಬೇಕಾದ್ರೂ ಮಾತಾಡ್ತಿ ಅಷ್ಟರಾಗ ಹಾಲು ಬಾಸುಂದಿ ಆಗೋಬದ್ಲು ಹೊತ್ತಿದ ಹುರಗಡ್ಲಿ ಆಗಿರ್ತದ… ಅಲ್ಲೇನ್ರೀ ವೈನಿಯಾರ?’ ಎಂದು ಆಕಿ ಗಂಡ ಕೇಳಿದ. ವಿಷಯಾಂತರವಾಗಿ ನಾನು ಹೇಳಬೇಕಾದ ಅದ್ಬುತ ರೆಸಿಪಿಯ ವಿವರಗಳು ನನ್ನಲ್ಲೇ ಇಷ್ಟು ದಿನ ಉಳಿದುಹೋಗಿತ್ತು. ಈ ಸುದ್ದಿ ಪತ್ರಿಕೆಗಳ ಬಗ್ಗೆ ನನಗೆ ಎಲ್ಲಿಲ್ಲದ ಕುತೂಹಲ. ..
‘ರಾತ್ರಿ ಯಾರಾದ್ರೂ ಸತ್ರೆ ಬೆಳಿಗ್ಗೆ ಬರುವ ನಿಮ್ಮ ಪೇಪರಿನಲ್ಲಿ ಅವರ ಬಗ್ಗೆ ಎಷ್ಟೊಂದು ವಿವರಗಳನ್ನು ಪ್ರಕಟಿಸುತ್ತಿರಲ್ಲ. ಅದು ಹೇಗೆ ಎಂದು ಹೇಳೆ ಮಾರಾಯ್ತಿ? ಎಂದು ಪರ್ತಕರ್ತೆ ಗೆಳತಿಯೊಬ್ಬಳಲ್ಲಿ ಕೇಳಿದೆ. “ಪ್ರಸಿದ್ಧ ವ್ಯಕ್ತಿಗಳು, ರಾಜಕಾರಣಿಗಳು, ವೃದ್ಧರಾದ ನಟ ನಟಿಯರು ಅನಾರೋಗ್ಯ ಎಂದು ಆಸ್ಪತ್ರೆ ಸೇರಿದಾಗಲೇ ಮತ್ತೇನಾದ್ರೂ ಕೆಟ್ಟ ಸುದ್ದಿ ಬಂದ್ರೆ ಅಂತ ಮುಂಜಾಗ್ರತೆಯಿಂದ ಒಂದಿಷ್ಟು ಸುದ್ದಿಯನ್ನು ರೆಡಿ ಇಟ್ಟಿರುತ್ತೇವೆ. ಸತ್ತರೆ ತಕ್ಷಣ ವಿವರವಾಗಿ ಪ್ರಕಟಿಸಲು ಅನುಕೂಲ. ಪ್ರಸಿದ್ದರು ಸತ್ತರೆ ಹೀಗೆ. ಸಾಮಾನ್ಯರು ಸತ್ತರೆ ಸಿಂಗಲ್ ಕಾಲಂ ಸುದ್ದಿ. ಬಹಳ ಜನರು ಸತ್ತರೆ ಮುಖ್ಯ ಪುಟದ ಸುದ್ದಿ…..ಹೀಗೆಲ್ಲ ಹೇಳಿದರೆ ನಿನಗೆ ಕ್ರೌರ್ಯ ಎನಿಸಬಹುದು. ಆದರೆ ಪತ್ರಿಕೆಯ ಪ್ರಪಂಚ ಇರುವುದೇ ಹಾಗೆ” ಎಂದಳು!
‘ಟಿ. ವಿಯವರಂತೂ ಒಮ್ಮೊಮ್ಮೆ ನಿಮ್ಮ ಗಂಡ ಅನಿರೀಕ್ಷಿತವಾಗಿ ತೀರಿಕೊಂಡಿದ್ದಾರೆ ಈಗ ನಿಮಗೇನನಿಸುತ್ತದೆ?’ ಎಂದು ನಿರ್ಭಾವುಕವಾಗಿ ಪ್ರಶ್ನೆ ಮಾಡುತ್ತ ಮೈಕನ್ನು ಹೆಂಡತಿ ಎದುರು ಹಿಡಿದಿದ್ದನ್ನೊಮ್ಮೆ ನೋಡಿದ ಮೇಲೆ ಅಯ್ಯೋ ಇಷ್ಟೆಲ್ಲ ಹಸಿ ಬಿಸಿ ಸುದ್ದಿ ಬದುಕಿಗೆ ಬೇಕಾ ಎನಿಸುವುದು ಸುಳ್ಳಲ್ಲ..
ಸುದ್ದಿ ಕತೆ ಈಗಿನದೇ ಎನ್ನುವಂತಿಲ್ಲ ಅದಕ್ಕೆ ಇತಿಹಾಸ ಬಲು ಹಿಂದಿನಿಂದಲೂ ಇದ್ದೇ ಇದೆ. ರಾಜ ಮಹಾರಾಜರ ಕಾಲದಲ್ಲಿ ತಮ್ಮ ಆಡಳಿತದಲ್ಲಿ ಏನಾದರೂ ಲೋಪ ದೋಷಗಳಿದ್ದರೆ ಸರಿ ಪಡಿಸಿಕೊಳ್ಳಲೆಂದು ವೇಷ ಮರೆಸಿಕೊಂಡು ಪ್ರಜೆಗಳನ್ನು ಭೇಟಿ ಮಾಡಿ ಸುದ್ದಿ ಸಂಗ್ರಹಿಸುವ ಅನೇಕ ರಾಜರಿದ್ದರು. ನೆರೆ ರಾಜ್ಯದ ಸುದ್ದಿಗಳನ್ನು ಒಟ್ಟು ಮಾಡಲು ಬೇಹುಗಾರರನ್ನು ಇಟ್ಟುಕೊಳ್ಳುತ್ತಿದ್ದರು. ಅವರು ತರುವ ಸುದ್ದಿಗಳಿಂದ ಯುದ್ದ ಸಿದ್ದತೆ ಮಾಡಲು ಆಡಳಿತ ಸುಧಾರಿಸಿಕೊಳ್ಳಲು ಅನುಕೂಲವಾಗುತ್ತಿತ್ತು.
ರಾಮಾಯಣದಲ್ಲಿ ಮಂಥರೆ ಹೇಳಿದ ಚಾಡಿ ಸುದ್ದಿಗಳಿಂದ ಕೈಕೇಯಿ ರಾಮನನ್ನು ವನಕ್ಕಟ್ಟುವುದರಲ್ಲಿ ಯಶಸ್ವಿಯಾಗುತ್ತಾಳೆ. ಪತ್ನಿಗಾಗಿ ರಾವಣನೊಂದಿಗೆ ಕಾದಿ ಗೆಲಿದ ರಾಮ ಅಯೋಧ್ಯೆಯ ಪರಿಜನರಾಡುವ ಕಹಿ ಸುದ್ದಿಗಳನ್ನು ತಿಳಿದ ಮೇಲೆ ಸೀತಾ ಪರಿತ್ಯಾಗಕ್ಕೆ ಮನ ಮಾಡುತ್ತಾನೆ! ಮಹಾಭಾರತದಲ್ಲಿ ಕೌರವ ಪಾಂಡವರು ಸದಾ ಸರ್ವದಾ ಒಬ್ಬರ ಸುದ್ದಿಯನ್ನು ಇನ್ನೊಬ್ಬರು ತಿಳಿದುಕೊಳ್ಳುವಲ್ಲಿ ತುಂಬಾ ಆಸ್ಥೆ ವಹಿಸುತ್ತಿದ್ದರು. ಮಹಾಭಾರತ ಯುದ್ಧ ನಡೆಯುವಾಗ ಧೃತರಾಷ್ಟ ಪ್ರತಿಕ್ಷಣದ ಸುದ್ದಿಯನ್ನು ಸಂಜಯನ ಮೂಲಕ ತಿಳಿದುಕೊಳ್ಳುತ್ತಿದ್ದನಂತೆ!
ಹೀಗೆ ಕಾಲಾತೀತವಾಗಿ ಸುದ್ದಿ ಎನ್ನುವುದು ಸಮಾಜದಲ್ಲಿ ತನ್ನದೇ ಸ್ಥಾನಮಾನವನ್ನು ಗಳಿಸಿಕೊಂಡಿದೆ. ಸುದ್ದಿ ಹೇಳುವುದಕ್ಕಾಗಿಯೇ ಬಯಲು ಸೀಮೆಯ ಅನೇಕ ಹಳ್ಳಿಗಳಲ್ಲಿ ಹರಟೆಕಟ್ಟೆಗಳಿರುತ್ತವೆ! ಅದರಲ್ಲಿಯೇ ಕೆಲವರು ಅರ್ಧಆಯುಷ್ಯ ಕಳೆಯುತ್ತಾರೆ. ಆಪ್ತರು ಸತ್ತ ಸುದ್ದಿ ಕೇಳಿಯೇ ಇನ್ಯಾರೋ ಸಾಯುವುದು, ಕೆಟ್ಟ ಸುದ್ದಿಯನ್ನು ಕೇಳಿ ನಿದ್ದೆ ಬಾರದ ಇರುಳು ಕಳೆಯುವುದು, ಯಾರದ್ದೋ ಕತ್ತಿನ ಮಾಂಗಲ್ಯ ಕದ್ದ ಸುದ್ದಿ ಕೇಳಿ ತಮ್ಮ ಸರ ಮುಟ್ಟಿ ಇದೆಯೇ ಎಂದು ಖಾತ್ರಿ ಪಡಿಸಿಕೊಳ್ಳುವುದು, ಮನೆಗೆ ಹೊಸ ಜೀವದಾಗಮನವಾದ ಸುದ್ದಿ ಕೇಳಿ ಊರಿಗೆಲ್ಲ ಸಿಹಿ ಹಂಚುವುದು.. ಹೀಗೆ ಸುದ್ದಿಯ ಪರಿಣಾಮಗಳು ತರಹೇವಾರಿಯಾಗಿರುತ್ತವೆ. ಸುದ್ದಿ ಹೇಳುವವರ ಸಾಮರ್ಥಕ್ಕನುಸಾರವಾಗಿ ಕುಗ್ಗುತ್ತದೆ, ಹಿಗ್ಗುತ್ತದೆ, ರಾಗ ರಂಜಿತವಾಗುತ್ತದೆ. ಸುಳ್ಳು ಸುದ್ದಿಯಿಂದ ಸಂಸಾರ ಮುರಿದುಕೊಂಡವರನ್ನು, ಸಂತೋಷದ ಸುದ್ದಿ ಕೇಳಿದಾಗಲೂ ಎದೆ ಒಡೆದುಕೊಂಡವರನ್ನು ನೋಡುವಾಗ ಸುದ್ದಿಯ ಸ್ವಾರಸ್ಯ ಇರುವುದು ನಿಜಕ್ಕೂ ಸುದ್ದಿಯಲ್ಲಾ? ಅದನ್ನು ಗ್ರಹಿಸುವವರ ಸಾಮಥ್ರ್ಯದಲ್ಲಾ? ಖರೇನೂ ನಿರ್ಣಯಿಸಲು ಸೋಲುತ್ತೇನೆ
1 thought on “ಸುದ್ದಿ ಸ್ವಾರಸ್ಯ ಬಲ್ಲಿರೇನಯ್ಯಾ?”
Super