ನೋಡಲೇಬೇಕಾದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ

ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ಬಿ.ಸಿ.ರೋಡಿನ ಸಂಚಯಗಿರಿ ಎಂಬಲ್ಲಿ ಸ್ಥಾಪನೆಗೊಂಡಿರುವ ʻರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರʼವು ಕಳೆದು ಹೋದ ಸ್ಥಳೀಯ ಇತಿಹಾಸವನ್ನು, ಅದರ ಪರಂಪರೆಯನ್ನು ಪುನರಪಿ ಕಟ್ಟಿ ತೋರುವ ಹವಣಿಕೆಯಲ್ಲಿ -ಕಳೆದ ಮೂರು ದಶಕಗಳಿಂದ- ದುಡಿಮೆಗೈಯುತ್ತಲಿದೆ. ಇಬ್ಬರು ಕಾಲೇಜು ಪ್ರಾಧ್ಯಾಪಕ ದಂಪತಿಗಳು ಏಕ ಮನಸ್ಕರಾಗಿ ತಮ್ಮ ತುಳುವ ನಾಡನ್ನು ಒಂದೊಮ್ಮೆ ಆಳಿದ – ಪೋರ್ಚುಗೀಸರನ್ನು ಹೊಡೆದೋಡಿಸಿ ಶೌರ್ಯ ಮೆರೆದ – ಅಬ್ಬಕ್ಕ ರಾಣಿಯ ಚರಿತ್ರೆಯನ್ನು ಚಿರಸ್ಥಾಯಿ ಮಾಡಹೊರಟಿದ್ದಾರೆ. ಅಧ್ಯಯನ ಕೇಂದ್ರದಲ್ಲಿ ಅಬ್ಬಕ್ಕನ ಕಾಲದ ಹಳೆಯ ಕಡತಗಳು, ಶಾಸನಗಳು, ಪಾತ್ರೆ ಪಗಡಿಗಳು, ಕೃಷ್ಯಾಯುಧಗಳು, ನಾಣ್ಯಗಳು, ಗ್ರಂಥಗಳು, ಮನೆಮಠದ ಪಳೆಯುಳಿಕೆಗಳು- ಮುಂತಾದುವನ್ನು ಸಂಗ್ರಹಿಸಿ, ಜೋಡಿಸಲಾಗಿದೆ. ಆ ಕಾಲದ ತೌಳವ – ಅದರಲ್ಲೂ ಮುಖ್ಯವಾಗಿ ಚೌಟ, ಅಲೂಪ ಮುಂತಾದ ಅರಸರ ಚರಿತ್ರೆಯನ್ನು ಅಲ್ಲಿನ ಸಂಗ್ರಹದ ಮೂಲಕವೇ ಪುನರ್ನಿರ್ಮಾಣ ಮಾಡಿ ಕೊಡುವ ಮಹತ್ತರವಾದ ಉದ್ದೇಶವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲಾಗಿದೆ.. ಅದಕ್ಕಾಗಿ ಹುಟ್ಟಿದ ಬಹುಮಹಡಿಯ ಬೃಹತ್ತಾದ ಕಟ್ಟಡ. ಆ ಕಟ್ಟಡದೊಳಗೆ ಎಲ್ಲೆಲ್ಲಿ ಏನೇನು ಎಂಬುದು ಪೂರ್ವ ನಿಗದಿತ. ವಿಶಾಲವಾದ ವಸ್ತು ಸಂಗ್ರಹಾಲಯ. ಅದರ ಒಳಗಾಗಲೀ ಹೊರಗಾಗಲಿ ಕಸವೋ ಜೇಡರ ಬಲೆಯೋ ಸಿಗಬಹುದೆಂಬ ಅಭಿಪ್ರಾಯ ಹೊತ್ತು ಒಳಪ್ರವೇಶಿಸಿದರೆ ನಿರಾಶೆಯಾಗುವುದು ಖಂಡಿತ. ಒಂದೊಂದು ಪಳೆಯುಳಿಕೆಯೂ ಅತಿಶುಭ್ರವಾಗಿ -ತನ್ನ ಪೂರ್ವಸ್ಥಿತಿಗೆ ಚ್ಯುತಿಯಾಗದಂತೆ- ಆ ಕಾಲವನ್ನೇ ಕಣ್ಣಮುಂದೆ ತರುವಂತೆ ಕುಳಿತಿದೆ. ಅಲ್ಲೊಂದು ಕನಸಿನ ಪುಟ್ಟ ʻಸ್ವಚ್ಛ ಭಾರತʼವೇ ಮೈದಾಳಿದೆ.


ಡಾ. ತುಕಾರಾಮ ಪೂಜಾರಿ ಹಾಗೂ ಡಾ. ಆಶಾಲತಾ ಎಸ್.‌ ಸುವರ್ಣ ತಮ್ಮ ದುಡಿಮೆಯನ್ನೆಲ್ಲ ಈ ಮಹತ್ಕಾರ್ಯಕ್ಕೆ ಧಾರೆಯೆರೆದು ಸಂಚಯನಗರವನ್ನು ನಿಜದ ಅರ್ಥದಲ್ಲಿ ಸಂಚಯ ಕೇಂದ್ರವನ್ನಾಗಿಸಿದ್ದಾರೆ. ಅದೊಂದು ದಾಖಲೆಯೆ.


ಇದು ಕೇವಲ ಎಲ್ಲೆಲ್ಲೋ ಸಿಕ್ಕ ಪ್ರಾಚ್ಯವಸ್ತುಗಳ ಸಂಗ್ರಹವಲ್ಲ. ಇಲ್ಲಿ ಇಡೀ ರಾಜ್ಯದ ಪುರಾತನ ವಸ್ತುಗಳನ್ನು ತಂದು ತುರುಕಿ ಸಂಗ್ರಹದ ತೀಟೆ ತೀರಿಸಿಕೊಳ್ಳುವ ಪ್ರಯತ್ನವಂತೂ ಅಲ್ಲವೇ ಅಲ್ಲ. ಇದು ತುಳುವ ದೊರೆಗಳ ಕಾಲಕ್ಕಷ್ಟೇ ಸೀಮಿತ. ಚೌಟ, ಅಲೂಪರೇ ಮೊದಲಾದ ಅರಸರ ಆಳ್ವಿಕೆಯ ಕಾಲದಲ್ಲಿ ಜನರು ಬಳಸುತ್ತಿದ್ದ ಮರದ ಹಾಗೂ ಕಬ್ಬಿಣದ ವಸ್ತುಗಳೇ ಇದರಲ್ಲಿ ಅಧಿಕ. ಉದಾಹರಣೆಗೆ, ಆ ಕಾಲದ ಒಂದು ಅಡುಗೆ ಮನೆಯನ್ನು ತೆಗೆದುಕೊಳ್ಳೋಣ. ಅದನ್ನು ಪುನರ್ಸ್ಥಾಪಿಸುವುದಿದ್ದರೆ ಆ ಕಾಲದ ಅಡುಗೆ ಮನೆಯಲ್ಲಿ ಯಾವ್ಯಾವ ವಸ್ತುಗಳು ಇದ್ದುವೋ ಅವೆಲ್ಲವೂ ಅಲ್ಲಿವೆ! ಇಂದು ನಾವು ಬಳಸುವ ವಸ್ತುಗಳಿಗೆ ಅಂದಿನ ಪರ್ಯಾಯ ಏನಾಗಿದ್ದುವು ಎಂದು ತಿಳಿಯುವುದಕ್ಕೆ- ಅದರಲ್ಲೂ ಆ ಕಾಲದಲ್ಲಿ ತೌಳವರು ಏನೆಲ್ಲ ಬಳಸುತ್ತಿದ್ದರು ಎಂಬುದನ್ನು ಅರಿಯುವುದಕ್ಕೆ- ಸಂಚಯಗಿರಿಗೆ ಬರಬೇಕು. ತುಳುನಾಡು ಬಿಟ್ಟರೆ ಇಲ್ಲಿ ಅನ್ಯ ಪ್ರದೇಶಗಳ ವಸ್ತುಗಳಿಗೆ ಅವಕಾಶವಿಲ್ಲ. ಸಂಗ್ರಹಕಾರರ ಉದ್ದೇಶ ಅದಲ್ಲವೇ ಅಲ್ಲ. ಒಂದು ಶಿಸ್ತಿಗೆ ಇಡಿಯ ಸಂಗ್ರಹಾಲಯವನ್ನೇ ಅಳವಡಿಸಲಾಗಿದೆ.


ಅಧ್ಯಯನ ಕೇಂದ್ರದಲ್ಲಿ ಮೊದಲಿಗೆ ನಾವು ನೋಡುವುದೇ ರಾಣಿ ಅಬ್ಬಕ್ಕನ ಆಡಳಿತ ವೈಖರಿಯನ್ನು ತೋರಿಸುವ ವರ್ಣಚಿತ್ರಗಳನ್ನು. ಪ್ರಖ್ಯಾತ ಚಿತ್ರಕಾರರ ದುಡಿಮೆಯದು. ಅಬ್ಬಕ್ಕ ರಾಣಿಯ ಬದುಕಿನ ಒಂದೊಂದು ಘಟ್ಟವನ್ನು ಮೊದಲಿಗೆ ಅರಿತುಕೊಂಡು, ಆಕೆಯ ಸಾಧನೆಯ ಚಿತ್ರಣವೊಂದನ್ನು ಮನಸ್ಸಿಗೆ ತಂದುಕೊಂಡು ಬಳಿಕ ವಸ್ತು ಸಂಗ್ರಹಾಲಯದೊಳಕ್ಕೆ ಪ್ರವೇಶ ಮಾಡಬೇಕು. ಆಗ ನಾವು ಅಬ್ಬಕ್ಕನ ಕಾಲಕ್ಕೆ ಪ್ರವೇಶಮಾಡುವುದು ಸುಲಭವಾಗುತ್ತದೆ. ಅಬ್ಬಕ್ಕನ ಚರಿತ್ರೆಯ ಮೇಲೆ ನಮ್ಮ ಆಸಕ್ತಿ ಖಂಡಿತವಾಗಿಯೂ ಅರಳತೊಡಗುತ್ತದೆ.


ಅಲ್ಲಿರುವ ಮೂರ್ನಾಲ್ಕು ಸಾವಿರ ವಸ್ತುಗಳ ವೈಶಿಷ್ಟ್ಯವನ್ನು ಇಲ್ಲಿ ಬಣ್ಣಿಸಹೋಗುವುದಿಲ್ಲ. ಅದು ತೀರದ ಕೆಲಸ. ಅದೊಂದು ಸಂಗ್ರಹದ ಮೊತ್ತ. ಅದನ್ನು ಅಬ್ಬಕ್ಕ ರಾಣಿ ವಸ್ತು ಸಂಗ್ರಹಾಲಯವೆಂದು ಕರೆಯದೆ ʻಅಬ್ಬಕ್ಕರಾಣಿ ತುಳು ಅಧ್ಯಯನ ಕೇಂದ್ರʼವೆಂದು ಕರೆದುದರಲ್ಲೇ ವಿಶೇಷತೆಯಿದೆ. ನಿಜದಲ್ಲಿ ಅದೊಂದು ಅಧ್ಯಯನ ಕೇಂದ್ರವೆ. ಅಲ್ಲಿ ತುಳುವ ಸಂಸ್ಕೃತಿ, ತುಳುವ ದೊರೆಗಳ ಆಳ್ವಿಕೆ, ತುಳುವರ ಪರಂಪರೆಯ ಅಧ್ಯಯನಕ್ಕೆ ಸಂಬಂಧಿಸಿದ ಕಮ್ಮಟಗಳನ್ನು ನಡೆಸುವ ಎಲ್ಲ ವ್ಯವಸ್ಥೆಯಿದೆ. ಅದಕ್ಕಾಗಿಯೇ ಸಭಾಂಗಣಗಳಿವೆ. ಬರಿಯ ಪ್ರಾಚ್ಯವಸ್ತುಗಳನ್ನು ನೋಡಿಕೊಂಡು ಹೊರಟುಹೋದರೆ ಏನು ಕಲಿತಂತಾಯಿತು? ಅಲ್ಲವೆ? ಅದನ್ನು ಅಧ್ಯಯನ ಮಾಡುವುದಕ್ಕಾಗಿಯೇ ಊರ ಒಳಗಿನ, ಹೊರಗಿನ ವಿದ್ಯಾರ್ಥಿಗಳು, ಅಧ್ಯಯನಶೀಲರು, ಸಂಶೋಧಕರು ಅಲ್ಲಿಗೆ ಬರುತ್ತಲೇ ಇರುತ್ತಾರೆ. ದೇಶ, ವಿದೇಶಗಳಿಂದಲೂ ಬರುತ್ತಾರೆ. ಅದೊಂದು ಕಲಿಕೆಯ ಕೇಂದ್ರವೂ ಹೌದು.


ತನ್ನ ಬದುಕಿಗೆ ಒಂದು ಧ್ಯೇಯವಿದೆ ಎಂಬುದನ್ನು ಪ್ರೊ. ತುಕಾರಾಮ ಪೂಜಾರಿಯವರು ಮೊದಲೇ ಕಂಡುಕೊಂಡಿದ್ದರು. ಆ ಧ್ಯೇಯಕ್ಕೆ ತನ್ನನ್ನು ಒಪ್ಪಿಸಿಕೊಂಡಿದ್ದರು. ಅವರ ಪುಣ್ಯವೆಂದರೆ ಅವರ ಶ್ರೀಮತಿ ಪ್ರೊ.ಆಶಾಲತಾ ಸುವರ್ಣರವರು ಕೂಡ ಆ ಆಸಕ್ತಿಯನ್ನು ತನ್ನದಾಗಿಸಿಕೊಂಡದ್ದು! ಇಬ್ಬರೂ ಸೇರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರವನ್ನು ಕಟ್ಟಿ ಬೆಳೆಸಿದ ಪರಿ ಅನನ್ಯ.


ಯುರೋಪಿನ ಅನೇಕ ಪುಟ್ಟ ಪುಟ್ಟ ಪ್ರದೇಶಗಳಲ್ಲಿ ಸ್ಥಳಚರಿತ್ರೆಗೆ ಸಂಬಂಧಪಟ್ಟ ಸಂಗ್ರಹಾಲಯಗಳು ಇರುತ್ತವೆ. ಪ್ರತಿ ಕೌಂಟಿಯಲ್ಲೂ ಇಂಥವನ್ನು ನೋಡಬಹುದು. ನಾವು ಭಾರತೀಯರು ಆ ಥರದ ಯೋಚನೆಯನ್ನು ಕನಿಷ್ಠ ಪ್ರಮಾಣದಲ್ಲಷ್ಟೆ ಮಾಡಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಇಂಥ ಸಂಗ್ರಹಗಳನ್ನು ಮಾಡುವುದು ಸಾಧ್ಯವಾದಲ್ಲಿ ಆಯಾ ಸ್ಥಳಗಳ ಚರಿತ್ರೆಗೆ ವಿಶೇಷ ಮಹತ್ವ ಬರುತ್ತದೆ. ಕೊನೆಗೊಮ್ಮೆ ದೇಶೀಯ ನೆಲೆಯಲ್ಲಿ -ಪ್ರಾದೇಶಿಕ ಸಂಸ್ಕೃತಿಗಳನ್ನೆಲ್ಲ ಒಂದುಗೂಡಿಸಿದಾಗ- ಜಗತ್ತು ನಮ್ಮ ದೇಶವನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಪ್ರೊ. ತುಕಾರಾಮ ಪೂಜಾರಿಯವರ ಪ್ರಯತ್ನ ಇತರ ಸ್ಥಳಗಳಲ್ಲಿ ಇಂತಹ ಸಂಗ್ರಹಾಲಯ ನಿರ್ಮಾಣವಾಗುವುದಕ್ಕೆ ಪ್ರೇರಣೆಯಾಗಲಿ. ಒಂದೊಂದು ಜಿಲ್ಲೆಯೂ ಇಂತಹ ಸಂಗ್ರಹದಲ್ಲಿ ತೊಡಗಿದರೆ ಭಾರತದ ಒಟ್ಟಾರೆ ಚರಿತ್ರೆಗೆ ವಿಶೇಷ ಆಯಾಮವೇ ಒದಗಬಹುದು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter