ಚಿಕ್ಕವನಿದ್ದಾಗ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ನಿಧಾನವಾಗಿ ನಡಿಯಲು ಕಲಿತ ಗುಂಡಣ್ಣ ಶಾಲೆಯಲ್ಲೂ ಸಹಾ ಒಂದೊಂದೇ ತರಗತಿಯಲ್ಲಿ ಎರಡೆರಡು ವರ್ಷಗಳು ತಳ ಊರಿ ಸಾವಕಾಶವಾಗಿ ಎಸ್ ಎಸ್ ಎಲ್ ಸಿ ಮುಗಿಸುವದರೊಳಗೆ
ಇಪ್ಪತ್ತೈದರ ಯುವಕನಾಗಿಬಿಟ್ಟ.
ಹೆತ್ತ ತಾಯಿಗೆ ಮಗ ‘ ಮುದ್ದು ಗುಂಡ ‘ ನಾದರೆ ತಂದೆಗೆ ‘ ಸೋಮಾರಿ ಗುಂಡ ‘ ನಾದ. ಊರವರ ಬಾಯಲ್ಲಿ ಮಾತ್ರ ‘ ದಂಡ ಪಿಂಡ ‘ ನಾಗಿಬಿಟ್ಟ ಗುಂಡಣ್ಣ.
ಒಂದು ಸುದಿನದಂದು “ನಾನೇಕೆ ಹೀಗೆ ಕೆಲಸಕ್ಕೆ ಬಾರದ ಗುಂಡನಾಗಿಬಿಟ್ಟೆ…”ಎಂದು ತಂದೆ ಭಂಡಣ್ಣನ ಮುಂದೆ ಅವಲತ್ತುಕೊಂಡ. ಗುಂಡನ ಬಾಲ ಲೀಲೆಗಳನ್ನು ನೋಡಿ ನೋಡಿ ಬೇಸತ್ತಿದ್ದ ಹಾಗೂ ಇದ್ದಕ್ಕಿದ್ದಂತೆ ಬಿ ಪಿ ಹೆಚ್ಚಾಗಿ ತಾಳ್ಮೆ ಕಳೆದುಕೊಂಡ ಭಂಡಣ್ಣ ” ನನ್ನ ಕೇಳಿದರೆ ಏನು ಗೊತ್ತಾಗುತ್ತೆ ಗುಂಡಾ…?. ಹೊರಗೆ ಹೋಗಿ ನಿನ್ನನ್ನು ಭುವಿಗೆ ಕಳಿಸಿದ ಆ ದೇವರನ್ನು ಕೇಳು ” ಎಂದು ಕೋಪದಿಂದ ಬುಸುಗುಡುತ್ತಾ ಮುದ್ದು (ಮೊದ್ದು!) ಮಗನನ್ನು ಬಲವಂತದಿಂದ ಹೊಸ್ತಿಲು ದಾಟಿಸಿ ಹೊರ ದಬ್ಬಿ ಮನೆಯ ಬಾಗಿಲು ಹಾಕಿಬಿಟ್ಟ.
ಬಿಸಿರಕ್ತದ ತರುಣ ಗುಂಡಣ್ಣನಿಗೆ ಕೋಪ ಬಂದರೆ ಸುಮ್ಮನಿರುತ್ತಾನೆಯೇ…ಆದದ್ದಾಗಲಿ ಆ ದೇವರನ್ನು ಹುಡುಕಿ
ಆತನನ್ನೇ ಕೇಳಿದರಾಯಿತೆಂದು ಸರ ಸರ ಮನೆಯಿಂದ ಹೊರಟೇಬಿಟ್ಟ ಉಟ್ಟ ಬಟ್ಟೆಯಲ್ಲಿಯೇ.
ಗುಂಡಣ್ಣ ಓಣಿ – ಊರು – ನಗರಗಳಲ್ಲೆಲ್ಲ ಅಲೆದಾಡುತ್ತಾ ದೇವರನ್ನು ಹುಡುಕುತ್ತಾ ಹೊರಟ. ದೇವರು ಎಲ್ಲೂ ಎದುರಾಗಲಿಲ್ಲ!
ಅಲ್ಲಿ ಇಲ್ಲಿ ಸುತ್ತಾಡುತ್ತಾ ಕೊನೆಗೊಂದು ದಿನ ದಟ್ಟ ಕಾಡು ಪ್ರವೇಶಿಸಿದ. ಅಲ್ಲಿ ತನ್ನಂತೆ ದೇವರನ್ನು ಅರಸುತ್ತಾ ಇರುವ ಒಬ್ಬ ಕಾಷಾಯಧಾರಿ ಸನ್ಯಾಸಿ ಕಂಡ. ಒಂದು ದೊಡ್ಡ ಮರದ ಕೆಳಗೆ ನೆಲವನ್ನು ಮುತ್ತಿಕ್ಕಲು ಸಿದ್ಧವಾದ ಗಡ್ಡ, ಪೊದೆಯಂತೆ ಸಿಕ್ಕಾ ಪಟ್ಟೆ ಅಸ್ತವ್ಯಸ್ತವಾಗಿ ಬೆಳೆದ ತಲೆಯ ಕೂದಲಿನೊಂದಿಗೆ ಕಣ್ಣು ಮುಚ್ಚಿ ಧ್ಯಾನದಲ್ಲಿ ಮಗ್ನನಾಗಿ ಕೂತ ಸನ್ಯಾಸಿಯ ಮುಂದೆ ಭಕ್ತಿಯಿಂದ ಕೈ ಜೋಡಿಸಿ ನಿಂತ ಗುಂಡಣ್ಣ. ಬಹುಶಃ ಈತನೇ ದೇವನಿರಬಹುದೆಂದು ಅನುಮಾನಿಸಿದ… ಮುಖದಲ್ಲಿ ಬಿದ್ದ ಸೂರ್ಯನ ಕಿರಣಗಳ ತಾಪಕ್ಕೆ ಸನ್ಯಾಸಿ ಕಣ್ಣು ತೆರೆದ. ಕೂಡಲೇ ಗುಂಡಣ್ಣ ಆತನ ಕಣ್ಣುಗಳನ್ನು ದಿಟ್ಟಿಸಿ ನೋಡುತ್ತಾ ” ನೀನೇ ದೇವರು…ಹೌದಾ?” ಎಂದು ಪ್ರಶ್ನಿಸಿದ. ” ನನ್ನ ಗಯ್ಯಾಳಿ ಹೆಂಡತಿಯ ಕಾಟ ತಡೆಯಲಾರದೆ ಮನಶ್ಯಾಂತಿಗಾಗಿ ನಾನು ಇಲ್ಲಿ ಬಂದು ದೇವರಿಗೋಸ್ಕರ ಘೋರ ತಪಸ್ಸು ಮಾಡುತ್ತಿರುವೆ…ದಿವಿನಾಗಿ ಬೆಳೆದ ನನ್ನ ಗಡ್ಡ ನೋಡಿದರೆ ನಿನಗೆ ಗೊತ್ತಾಗುತ್ತಿಲ್ಲವೇನು ಮೂರ್ಖ ಎಷ್ಟು ವರ್ಷದಿಂದ ಈ ಅಡವಿಯಲ್ಲಿ ಕಾಲ ನೂಕುತ್ತಿರುವೆ ಅಂತ…”
ಎಂದು ದೇವರ ಬದಲು ಗುಂಡಣ್ಣನಂತಹ ನರ ಪ್ರಾಣಿ
ಪ್ರತ್ಯಕ್ಷ ಆಗಿದ್ದು ನೋಡಿ ಕೋಪದಿಂದ ಒಮ್ಮೆ ಜೋರಾಗಿ ಚಿಟ್ಟನೆ ಚೀರಿ ಮತ್ತೆ ತಪಸ್ಸು ಮುಂದುವರೆಸಿದ ಸನ್ಯಾಸಿ. ಆ ಭೀಕರ ಚಿರುವಿಕೆಯ ಶಬ್ದಕ್ಕೆ ಬೆದರಿ ಅಲ್ಲಿಂದ ಸುಮ್ಮನೆ ಕಾಲ್ಕಿತ್ತ ಗುಂಡಣ್ಣ.
ಬೇಡಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವರ ವಾಸಸ್ಥಾನ ‘ ಗುಡಿ ‘ ಎಂದು ತನ್ನ ಟ್ಯೂಬ್ ಲೈಟ್ ತಲೆಯಲ್ಲಿ ತಡವಾಗಿ ಹತ್ತಿದ ಬೆಳಕು ಗುಂಡಣ್ಣನನ್ನು ಸೀದಾ ಅಡವಿಯಿಂದ ನಾಡಿಗೆ ಬರುವಂತೆ ಮಾಡಿತು… ತನಗರಿಲ್ಲದಂತೆ ಒಂದು ಭವ್ಯ ದೇವಸ್ಥಾನದ ಮುಂದೆ ಬಂದು ನಿಂತ ಗುಂಡಣ್ಣ… ಗುಡಿಯಲ್ಲಿ ಪ್ರತಿಷ್ಠಾಪಿಸಿದ ಕಲ್ಲಿನ ದೇವರ ಮೂರ್ತಿಗೆ ದೂರದಿಂದ ಭಕ್ತರು ಅಡ್ಡಡ್ಡ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡಲು ಚುನಾವಣೆಯ ದಿನ ಬೂತಿನ ಮುಂದೆ ನಿಂತ ಮತದಾರರ ದೊಡ್ಡ ಸಾಲಿನಂತೆ ಶಿಸ್ತಾಗಿ ನಿಂತಿದ್ದರು. ಗುಂಡಣ್ಣ ಅವರೊಂದಿಗೆ ಒಂದಾಗಿ ಒಳ ಪ್ರವೇಶಿಸಿದ… ಈತ ದೇವರೇ?… ಯಾರೊಂದಿಗೂ ಮಾತನಾಡುತ್ತಿಲ್ಲ…ಮತ್ತೆ ಶಿಲೆಯಂತೆ ಸ್ಥಿರವಾಗಿ ಒಂದು ಕಡೆ ಕೂತು ಬಿಟ್ಟಿದ್ದಾನಲ್ಲ… ಇಂತಹ ದೇವರನ್ನು ನೀನು ದೇವರಾ ಎಂದು ಹೇಗೆ ಕೇಳುವುದು?.. ಸಂಧಿಗ್ದಕ್ಕೆ ಸಿಲುಕಿದ ಗುಂಡಣ್ಣ… ಬಹುಶಃ ಭಕ್ತಾದಿಗಳು ಬಹಳ ಇದ್ದಾರಲ್ಲ ಅದಕ್ಕೆ ದೇವನು ಮೌನವಾಗಿ ಇದ್ದಾನೇನೋ? ನೋಡೋಣ… ಭಕ್ತರ ಸಂಖ್ಯೆ ಕಡಿಮೆ ಆದ ಮೇಲೆ ದೇವನು ಮಾತನಾಡಬಹುದೆಂಬ ಆಶಯದಿಂದ ಯಾರಿಗೂ ಕಾಣದಂತೆ ಗುಡಿಯ ಹಿಂದೆ ಹೋಗಿ ಅಡಗಿ ಕುಳಿತನು ಗುಂಡಣ್ಣ. ಕ್ರಮೇಣ ಗುಡಿಯಲ್ಲಿನ ಭಕ್ತರ ಸಾಲು ಮತ್ತು ಗಂಟೆಯ ಶಬ್ದ ಕಡಿಮೆಯಾಯಿತು….
ಭಕ್ತರ ದರ್ಶನದ ಸಮಯ ಮುಗಿಯಿತು. ಅಲ್ಲದೇ ತನ್ನ ಡೂಟಿ ಟೈಮ್ ಸಹ ಆಯ್ತೆಂದು ಪೂಜಾರಿ ಗುಡಿಗೆ ಬೀಗ ಹಾಕಿ ಮನೆಯತ್ತ ಹೊರಟ.
ಈಗ ಗುಡಿಯಲ್ಲಿ ಉಳಿದವರು ದೇವರು ಮತ್ತು ಗುಂಡಣ್ಣ ಇಬ್ಬರೇ! ನಂದಾ ದೀಪದ ಬೆಳಕಿನ ಮುಂದೆ ಸ್ಥಿತಪ್ರಜ್ಞನಂತೆ ಕುಳಿತ ದೇವರನ್ನು ಕೇಳಿದ ಗುಂಡಣ್ಣ. ” ಭಕ್ತರ ಹರಕೆಗಳನ್ನು ಸಾಕ್ಷಾತ್ಕಾರ ಮಾಡುವುದು ನೀನೇ ಅಲ್ಲಾ… ನಿಜ ಹೇಳು ನೀನು ದೇವರು ತಾನೇ…” ಎಂದು ಒಂದಲ್ಲ ಹತ್ತು ಬಾರಿ ಪ್ರಶ್ನಿಸಿದರೂ ದೇವರಿಂದ ಉತ್ತರವಿಲ್ಲ… ಇನ್ನು ಪ್ರಯೋಜನವಿಲ್ಲ… ಏನೊಂದೂ ಉತ್ತರ ಕೊಡದೆ ಶಿಲೆಯಂತೆ ಸುಮ್ಮನಿರುವ ‘ ದೇವರು ದೇವರೇ ಅಲ್ಲ ‘ ಎಂಬ ನಿರ್ಧಾರಕ್ಕೆ ಬಂದು ಮೌನವಾಗಿ ಗುಡಿಯ ಹಿಂಬಾಗಿಲಿನಿಂದ ಹೊರ ಹೋದ ಗುಂಡಣ್ಣ…
ಬೆಳಕು ಹರಿಯುವದರೊಳಗೆ ದೇವರಿಗಾಗಿ ಮತ್ತೆ ಹುಡುಕಾಟ ಶುರು ಮಾಡಿದ ಗುಂಡಣ್ಣ. ಹಾಗೇ ನಡೆಯುತ್ತಾ, ಹುಡುಕುತ್ತಾ ಒಂದು ದೊಡ್ಡ ಮಹಾ ನಗರವನ್ನು ಪ್ರವೇಶಿಸಿದನು. ಒಂದೇ ಕಡೆ ಸಾವಿರಾರು ಜನರು ಸೇರಿದ್ದು ನೋಡಿ ಬಹುಶಃ ಎಲ್ಲರೂ ನನ್ನಂತೆ ದೇವರನ್ನು ಹುಡುಕುತ್ತಾ ಇಲ್ಲಿಗೆ ಬಂದಿರಬಹುದೆಂದುಕೊಂಡ. ಅವನ ಮನಸಿನ ಆಲೋಚನೆಯನ್ನು ಅರ್ಥ ಮಾಡಿಕೊಂಡವರಂತೆ
ಕೆಲವರು ‘ ನಮ್ಮ ದೇವರು… ನಮ್ಮ ಮನೆ ದೇವರು…ನಮ್ಮ ಆರಾಧ್ಯ ದೇವರು…’ ಎಂದು ಜೋರಾಗಿ ಅರಚತೊಡಗಿದರು.
“ಅಬ್ಬಬ್ಬಾ…ಇಷ್ಟು ದಿನದ ನನ್ನ ನಿರೀಕ್ಷೆಗೆ ಫಲ ಇಂದು ಸಿಕ್ಕಂತಾಯಿತು…” ಎಂದು ಮನದಲ್ಲೇ ಸಂಭ್ರಮಿಸುತ್ತಾ ಗುಂಡಣ್ಣ ಕೇಳಿದ
” ಎಲ್ಲಿ ದೇವರು?…ಎಲ್ಲಿದ್ದಾನೆ ನಿಮ್ಮ ದೇವರು?…” ಎಂದು ನೆರೆದ ಭಕ್ತರಲ್ಲೊಬ್ಬನನ್ನು ಉದ್ದೇಶಿಸಿ.
“ನೋಡು… ಅಲ್ಲಿ ನೋಡು…
ಸಾವಿರಾರು ಅಲ್ಲ ಲಕ್ಷಾಂತರ ಭಕ್ತರು ಆ ದೇವರನ್ನು ನೋಡಲು ಬಂದಿದ್ದಾರೆ…ಆದರೆ ಆ ದೇವರ ದರ್ಶನ ಅಷ್ಟು ಸುಲಭವಲ್ಲ…” ಎಂದು ನುಡಿದ ಅಲ್ಲಿದ್ದ ಭಕ್ತನೊಬ್ಬ ಭಾವಪರವಶನಾಗಿ.
ಅಷ್ಟರಲ್ಲಿ ಒಬ್ಬನನ್ನು ಸಿಮೆಂಟ್ ಕಂಬಕ್ಕೆ ಕಟ್ಟಿ ಹಲವರು ಹೊಡೆಯತೊಡಗಿದರು ಕೈಗೆ ಸಿಕ್ಕ ಆಯುಧಗಳಿಂದ.
“ಅವನನ್ನು ಯಾಕೆ ಹೊಡೆಯುತ್ತಿರುವಿರಿ…” ಎಂದು ಅಮಾಯಕನಂತೆ ಪ್ರಶ್ನಿಸಿದ ಗುಂಪಿನಲ್ಲಿನ ಒಬ್ಬನನ್ನು ಗುಂಡಣ್ಣ.
“ಅವನು ನಮ್ಮ ದೇವನನ್ನು ಬಾಯಿಗೆ ಬಂದಂತೆ ಬಯ್ದರೆ ಸುಮ್ಮನಿರಲಿಕ್ಕೆ ಆಗುತ್ತದೆಯೆ?… ನಮ್ಮ ದೇವರನ್ನು ದೂಷಿಸಿದ್ದನ್ನು ಕೇಳಿಯು ಶಾಂತವಾಗಿರಲು ನಾವೇನು ಕೈಯಲ್ಲಿ ಬಳೆ ಹಾಕಿಕೊಂಡ ಸಾಮಾನ್ಯ ಜುಜುಬಿ ಭಕ್ತರೇ?…ಆ ನೀಚ ಕೆಲಸ ಮಾಡಿದ ಅವನನ್ನು ದನಕ್ಕೆ ಬಡಿಯುವಂತೆ ಬಡಿಯುತ್ತಿರುವೆವು…ನಮ್ಮ ದೇವರ ಬಗ್ಗೆ ಯಾರೂ ಏನೂ ಅನ್ನುವಂತಿಲ್ಲ…ಈ ಜಗತ್ತಿನಲ್ಲಿ ನಮ್ಮ ದೇವರೇ ನಂಬರ್ ಒನ್… ಗೊತ್ತಾಯ್ತಾ…ನಮ್ಮ ದೇವರು ನಮಗೆ ತಂದೆ ಸಮಾನ…ತಂದೆ ಸಲುವಾಗಿ ಅವಶ್ಯ ಬಿದ್ದರೆ ನಮ್ಮ ಉಟ್ಟ ಬಟ್ಟೆಗಳನ್ನು ಹರಿದುಕೊಂಡು ಊರಲ್ಲೆಲ್ಲ ಉರಿ ಬಿಸಿಲಲ್ಲಿ ಕೂಡ ಘೋಷಣೆ ಕೂಗುತ್ತಾ ಸುತ್ತುತ್ತೇವೆ… ಸಮಯ ಬಂದರೆ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಹುತಾತ್ಮರಾಗುತ್ತೇವೆ… ತಿಳಿಯಿತಾ… ಯಾರನ್ನಾದರೂ ಹೊಡಿ ಬಡಿ ಎಂದು ನಮ್ಮ ದೇವರು ಹೇಳಿದರೆ ಮುಗಿಯಿತು ಅವರ ಕಥೆ…” ಎಂದು ವೀರಾವೇಶದಿಂದ ನುಡಿದನು ಒಬ್ಬ ‘ ದೇವರ ‘ ಭಕ್ತ.
ಅಂತಹ ಅತೀವ ಭಕ್ತ (ಜನ) ಸಾಗರದಲ್ಲಿ ದೇವರನ್ನು ನೋಡುವ ಭಾಗ್ಯ ತನಗಿಲ್ಲವೆಂದು ಅರಿವಾಗಿ ನಿರಾಶೆಯಿಂದ ಕೇಳಿದ ಗುಂಡಣ್ಣ ” ಆ ದೇವರು ಯಾರು…? ” ಎಂದು ಎದುರಿಗೆ ಬಂದ ಭಕ್ತನನ್ನು. ಆ ‘ ಮಹಾನ್ ಭಕ್ತ ‘
ಗುಂಡಣ್ಣನನ್ನು ಅಡಿಯಿಂದ ಮುಡಿಯವರೆಗೆ ಅಚ್ಚರಿಯಿಂದ ನೋಡುತ್ತಾ…” ನೀನು ಸಿನಿಮಾಗಳನ್ನು ನೋಡುವದಿಲ್ಲೇನು?…” ಎಂದು ರೋಷದಿಂದ ಪ್ರಶ್ನಿಸಿದ. ಅಷ್ಟರಲ್ಲಿ ಪಕ್ಕದಲ್ಲಿದ್ದ ಭಕ್ತನೊಬ್ಬ ಕೇಳಿದ ” ಅಂದರೆ ನೀನು ನಮ್ಮಹೀರೋನ ಕಟ್ಟಾ ಅಭಿಮಾನಿಯಲ್ಲವೇನು ?…” ಎಂದು ಕೋಪದಿಂದ ಪ್ರಶ್ನಿಸಿದ. ಅಷ್ಟರಲ್ಲಿ ತಲ್ವಾರ್ ಜೋರಾಗಿ ಝಳಪಿಸುತ್ತಾ ಹತ್ತಿರ ಬರತೊಡಗಿದ ಮತ್ತೊಬ್ಬ ವೀರಾಭಿಮಾನಿ…
ಇನ್ನು ಅಲ್ಲಿದ್ದರೆ ದೇವರಿಗೆ ‘ ಬಲಿ ‘ ಯಾಗಿಬಿಡುತ್ತೇನೆ ಎಂಬ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಓಡುತ್ತಾ ಮನೆಯ ದಾರಿ ಹಿಡಿದ ಗುಂಡಣ್ಣ.
ತುಂಡು ಉಡುಗೆ ಧರಿಸಿದ ಹೀರೋಯಿನ್ ಜೊತೆ ದೆವ್ವ ಹಿಡಿದವರ ರೀತಿ ಡ್ಯಾನ್ಸ್ ಮಾಡುವ…ನೂರಾರು ವಿಲನ್ ಗಳನ್ನು ಹೊಡೆದು ಕ್ಷಣದಲ್ಲೇ ಚಿಂದಿ ಚಿತ್ರಾನ್ನ ಮಾಡುವ ‘ ಸಿನಿಮಾ ದೇವ ‘ ರನ್ನು ನೋಡುವ ಅದೃಷ್ಟ ಕೊನೆಗೂ ಸಿಗಲೇ ಇಲ್ಲ ಪಾಪ ಗುಂಡಣ್ಣನಿಗೆ!… ದೇವರ ಮತ್ತೊಂದು ಅವತಾರ ನೋಡುವ ಅವಕಾಶದಿಂದ ವಂಚಿತನಾದದ್ದು ಗುಂಡಣ್ಣನ ದುರದೃಷ್ಟವಲ್ಲದೆ ಮತ್ತೇನು…?
1 thought on “ದೇವರೆಲ್ಲಿದ್ದಾನೆ…?”
ದೇವರೆಲ್ಲಿದ್ದಾನೆ ಹುಡುಕಾಟ ಸೊಗಸಾಗಿದೆ