ಬ್ರಹ್ಮಾವರದ  ಚಂದ್ರಶೇಖರ  ಕೆದ್ಲಾಯರು….ಹೀಗೊಂದು ನೆನಪುಗಳು

ಕರಾವಳಿಯ ಗಾನಕೋಗಿಲೆ’ ಗಮಕಿ ಬ್ರಹ್ಮಾವರದ  ಚಂದ್ರಶೇಖರ  ಕೆದ್ಲಾಯರು….ಹೀಗೊಂದು ನೆನಪುಗಳು

ಪ್ರಸಿದ್ಧ ಗಾಯಕ,  ಗಮಕಿ, ನಿವೃತ್ತ ಶಿಕ್ಷಕ, ಆಕಾಶವಾಣಿ ದೂರದರ್ಶನ ಕಲಾವಿದ ಎಚ್ ಚಂದ್ರಶೇಖರ ಕೆದ್ಲಾಯ(72) ಅವರು ಮಂಗಳವಾರ ಜನವರಿ 24 ರಂದು ಬೆಳಗ್ಗೆ ಹೃದಯಾಘಾತದಿಂದ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಮ್ಮನ್ನು ಅಗಲಿದರು. ಚಂದ್ರಶೇಖರ ಕೆದ್ಲಾಯ ಅವರು  1950ರ ಎಪ್ರಿಲ್ 20ರಂದು ಜನಿಸಿದವರು. ಅವರ ಹುಟ್ಟೂರು ಉಡುಪಿ ಜಿಲ್ಲೆಯ ಹೆಸ್ಕುತ್ತೂರು ಗ್ರಾಮದ ಹಾರ್ಯಾಡಿ. ತಂದೆ ಗಣಪಯ್ಯ ಕೆದ್ಲಾಯ. ತಾಯಿ ಕಮಲಮ್ಮ, ಚಂದ್ರಶೇಖರ ಕೆದ್ಲಾಯ ಮಂಗಳೂರಿನ ಕೆನರಾ ಪ್ರೌಢ ಶಾಲೆಯಲ್ಲಿ ಮತ್ತು 35 ವರ್ಷಗಳ ಕಾಲ ಬ್ರಹ್ಮಾವರದ ನಿರ್ಮಲಾ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (1992-93), ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ (2008) ಯನ್ನು ಅವರು ಪಡೆದಿದ್ದರು. ಕೆದ್ಲಾಯರು  ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕೆದ್ಲಾಯ ಅವರ ಬ್ರಹ್ಮಾವರದ ಮನೆಗೆ  ಅನೇಕ ಬಾರಿ ನಾನು ಹೋಗಿದ್ದೇನೆ. ಸಂದರ್ಶನವನ್ನೂ ಮಾಡಿದ್ದೆ. ಈ ಸಂದರ್ಭದಲ್ಲಿ ಮತ್ತೆ ಅದನ್ನು ನೆನಪಿಸುತ್ತಿರುವೆ.

“ಸಾಹಿತ್ಯದ ಅರ್ಥ ಸ್ಪಷ್ಟತೆಗೆ ಹಾಡುಗಾರರಿಂದ ಧಕ್ಕೆ ಬರಬಾರದು” ಎನ್ನುತ್ತಿದ್ದವರು  ಎಚ್. ಚಂದ್ರಶೇಖರ ಕೆದ್ಲಾಯರು.

ಅವರು ಮುಂಬಯಿಗೆ ಬಂದಿದ್ದಾಗ ಒಮ್ಮೆ ನಮ್ಮ ವಸಾಯಿಯ ಮನೆಗೂ ಬಂದು ಹೋಗಿದ್ದರು. ನನ್ನ ಪತ್ನಿ ಜಯಲಕ್ಷ್ಮೀ ಬ್ರಹ್ಮಾವರದವರು. ಅವರ ಮನೆ ಪಕ್ಕದಲ್ಲೇ ಕೆದ್ಲಾಯರ ಮನೆಯೂ ಇರುವುದು.ಅವಳು ಕೆದ್ಲಾಯರ  ವಿದ್ಯಾರ್ಥಿನಿ. ಅದೇ ರೀತಿ ಜಯಲಕ್ಷ್ಮೀ ಸಹೋದರಿ ಪದ್ಮಿನಿ ಚಂದ್ರಶೇಖರ ಭಟ್ ಕೂಡಾ ಹಾಡುಗಾರ್ತಿ. ಕೆದ್ಲಾಯರ ಜೊತೆ ಶಾಲಾ ದಿನಗಳಲ್ಲಿ ಅನೇಕ ಕಡೆ ಹಾಡಲು ಅವರೂ ತೆರಳುತ್ತಿದ್ದರು. ಹಾಗಾಗಿ ನಾನು ಬ್ರಹ್ಮಾವರಕ್ಕೆ ಹೋದಾಗಲೆಲ್ಲ ಕೆದ್ಲಾಯರ ಮನೆಗೂ ಭೇಟಿ ನೀಡುತ್ತಿದ್ದೆ.ಅವರ ಮನೆಯ ತುಂಬಾ ಸ್ಮರಣಿಕೆಗಳು ,ಪ್ರಶಸ್ತಿ ಪತ್ರಗಳು.

ಕಳೆದ ನಲುವತ್ತು ವರ್ಷಗಳಿಂದ ಕರ್ನಾಟಕದ ಕರಾವಳಿ – ಜಿಲ್ಲೆಗಳ ಅತ್ಯುತ್ತಮ ಸುಗಮ ಸಂಗೀತ, ಭಾವಗೀತೆ, ಗಮಕಸಂಗೀತಗಳ ಕಲಾವಿದರಾಗಿ ಬಹು ಜನಪ್ರಿಯತೆ ಪಡೆದಿರುವ ಎಚ್.ಚಂದ್ರಶೇಖರ ಕೆದ್ಲಾಯ ಅವರ ಹಾಡು ಕೇಳದವರು ವಿರಳ ಎನ್ನಬಹುದು. 1971ರ ವಿದ್ಯಾರ್ಥಿ ದೆಸೆಯಿಂದಲೂ ಅವರು ಈ ಕ್ಷೇತ್ರದಲ್ಲಿ ಗಾಯಕರಾಗಿ – ಸುಪ್ರಸಿದ್ಧರಾಗಿದ್ದಾರೆ, ಮುಂಬಯಿ ಕನ್ನಡಿಗರು ಇವರ ಗಾಯನಕ್ಕೆ ಭಾವಪರವಶರಾಗಿರುವರು. ಇಲ್ಲಿನ  ಅನೇಕ ಕಾರ್ಯಕ್ರಮಗಳಲ್ಲಿ ನಾವೆಲ್ಲ ಇವರ ಗಾಯನ ಕಾರ್ಯಕ್ರಮದಲ್ಲಿ  ಪ್ರೇಕ್ಷಕರಾಗಿ ಸಂಗೀತ ಸವಿಯನ್ನು ಆಸ್ವಾದಿಸಿದವರಾಗಿದ್ದೇವೆ. 

ಉಡುಪಿಯ ಬ್ರಹ್ಮಾವರದ ನಿರ್ಮಲಾ ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವಾ ನಿವೃತ್ತರಾಗಿದ್ದ ಇವರು ಬಿ.ಎ.ಬಿ.ಎಡ್. ಪದವೀಧರರು.1975 ರಿಂದ  ಶಿಕ್ಷಕರಾಗಿ ಸೇವೆಗೈಯುತ್ತಿದ್ದು ನಿವೃತ್ತ ಜೀವನ ನಡೆಸುತ್ತಿದ್ದರು.

ಬ್ರಹ್ಮಾವರದ ಅಜಪುರ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿಯೂ ಇವರು ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದವರು.

ಉತ್ತಮ ಕಂಠ ಹೊಂದಿದ್ದ ಮಹಾನ್ ಕಲಾವಿದ ಗಾಯಕರಾಗಿದ್ದ ಚಂದ್ರಶೇಖರ ಕೆದ್ಲಾಯರು ಅಡಿಗರ,ಬೇಂದ್ರೆಯವರ ಕವನಗಳನ್ನು  ಹಾಡಿದರೆಂದರ ಸಭೆಯಲ್ಲಿ ನಿಶ್ಯಬ್ದರಾಗಿ ಆಸ್ವಾದಿಸುತ್ತಿದ್ದರು. 1971ರಲ್ಲಿ ಅಡಿಗರು ಲೋಕಸಭಾ ಚುನಾವಣೆಗೆ ನಿಂತ ಸಂದರ್ಭದಲ್ಲಿ ಕೆದ್ಲಾಯರು ಅಡಿಗರ ಪ್ರಮುಖ ಪ್ರಚಾರಕರೂ ಆಗಿದ್ದರು.

ಮುಂಬಯಿ ವಿಶ್ವವಿದ್ಯಾಲಯದ ಕನ್ಮಡ ವಿಭಾಗದ  ಹಲವಾರು ಕಾರ್ಯಕ್ರಮಗಳಲ್ಲಿ ಚಂದ್ರಶೇಖರ ಕೆದ್ಲಾಯರು ಹಾಡಿದ್ದರು.ಎಚ್ ಬಿ ಎಲ್ ರಾಯರ ಸಮ್ಮೇಳನಗಳಿಗೂ ಬಂದು ಹಾಡುತ್ತಿದ್ದವರು ಕೆದ್ಲಾಯರು.

ಕವಿ ಗೋಪಾಲಕೃಷ್ಣ ಆಡಿಗರು 1969 ರಲ್ಲಿ ಉಡುಪಿಯ ಪಿಪಿಸಿ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಸಮಯ.ಕೆದ್ಲಾಯರು ಆವಾಗ  ಚಿಕ್ಕಂದಿನಲ್ಲಿ ಭಜನೆ ಹಾಡುತ್ತಿದ್ದರು. ಒಮ್ಮೆ ಅಡಿಗರು ಹಾಡು ಹೇಳು ಎಂದಾಗ ಯಾವ ಮೋಹನ ಮುರಳಿ ಕರೆಯಿತು ಅದನ್ನು ಹಾಡಿದ್ದರು.ಆಗ ಕಟ್ಟುವೆವು ನಾವು…ಕವನ ಇದ್ದ  ಸಂಕಲನ‌ ಕೊಟ್ಟಿದ್ದರಂತೆ.

1971 ರಲ್ಲಿ ಅಡಿಗರು ಚುನಾವಣೆಗೆ ನಿಂತಾಗ ಕಾಲೇಜ್ ಗೆ ಚಕ್ಕರ್ ಹೊಡೆದು ಅಡಿಗರ ಕವನಗಳನ್ನು ಹಾಡುತ್ತಿದ್ದರು. ಚುನಾವಣೆಯ ಕೊನೆಯ ಭಾಷಣದ ದಿನ ವಾಜಪೇಯಿ ಬಂದಿದ್ದರು.ಅಲ್ಲಿ ಕಟ್ಟುವೆವು ನಾವು ಹೊಸ ನಾಡೊಂದನ್ನು…. ಹಾಡಿದ್ದರು. ವಾಜಪೇಯಿ ಇವರನ್ನು ಕರೆದು ಅಚ್ಚಾ ಹೈ ಎಂದು ಹಾಡನ್ನು ಹೊಗಳಿ ಹೂ ಕೊಟ್ಟು ಗೌರವಿಸಿದ್ದರು.

ಇಳಿದು ಬಾ ತಾಯಿ….ಅಥವಾ ,ಕಯ್ಯಾರರ ಐಕ್ಯಗಾನ..‌ ಹಾಡು ಚಂದ್ರಶೇಖರ ಕೆದ್ಲಾಯರ ಬಾಯಿಯಿಂದಲೇ ಕೇಳಬೇಕು. 

ಅಖಿಲ ಭಾರತ 71ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ಕರ್ನಾಟಕ ಶ್ರೀ’ ಪ್ರಶಸ್ತಿ, 1995ರ ಶಿಕ್ಷಕ ಪ್ರತಿಭಾ ಸ್ಪರ್ಧೆಯಲ್ಲಿ ಸಂಗೀತಕ್ಕಾಗಿ ರಾಜ್ಯಮಟ್ಟದ ಬಹುಮಾನ  ಪಡೆದಿದ್ದಾರೆ. ಅಂತೆಯೇ ತಲೆದಂಡ, ನಾಯಿಕತೆ, ಮೃತ್ಯು ಸಿಂಹಾಸನ ,ಏಕಲವ್ಯ, ಸುಯೋಧನ, ಚೋರ ಚರಣದಾಸ ಮುಂತಾದ ನಾಟಕಗಳಿಗೆ ನಾಟಕ ಸಂಗೀತಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ. 

ಗಿರಿಜಾ ಕಲ್ಯಾಣ ಗೀತ ರೂಪಕವನ್ನು ಭಾಮಿನೀ ಷಟ್ಪದಿಯಲ್ಲಿ ರಚಿಸಿದ್ದಾರೆ ಆಕಾಶವಾಣಿ ದೂರದರ್ಶನದ ಕಲಾವಿದರು ಆಗಿದ್ದರು. ದೆಹಲಿ ಬರೋಡ ಮುಂಬೈಯ ಅನೇಕ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಕೆದ್ಲಾಯರು  ತಮ್ಮ ಸುಗಮಸಂಗೀತದ ಗಾಯನ ರಸದೌತಣ ನೀಡಿದ್ದಾರೆ.ಕ್ಯಾಸೆಟ್ ಗಳಿಗೂ ಹಾಡಿದ್ದಾರೆ.

ದ.ಕ. ಜಿಲ್ಲಾ ಗಮಕ ಕಲಾ ಪರಿಷತ್ತು ಸಮ್ಮಾನ ಪತ್ರ, ಉಡುಪಿ ಜಿಲ್ಲಾ ಪ್ರಥಮ ಗಮಕ ಸಮ್ಮೇಳನದಲ್ಲಿ ಸನ್ಮಾನ, ಸುಮಸೌರಭ ಕನ್ನಡ ಕರಾವಳಿ ಸಾಹಿತ್ಯ ಪಾಕ್ಷಿಕ ಪತ್ರಿಕೆಯ ಸನ್ಮಾನ, ರೋಟರಾಕ್ಸ್ ಕ್ಲಬ್ ಕೋಟ-ಸಾಲಿಗ್ರಾಮದಿಂದ ಅಭಿನಂದನೆ ಪಡೆದಿರುತ್ತಾರೆ.

ಶಿಶುಗೀತೆ ರಚನೆ,ಗೀತರೂಪಕಗಳನ್ನು ರಚಿಸಿರುವ ಇವರು ಗಮಕ ಪ್ರೌಢ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್‌ ಪಡೆದಿದ್ದಾರೆ.

ಸಮೂಹ ಉಡುಪಿ ಸಂಯೋಜಿಸಿದ ಚಂದ್ರಶೇಖರ ಕೆದ್ಲಾಯರು ಸಂಗೀತ ಸಂಯೋಜನೆ ಮಾಡಿದ ‘ಶಬರಿ’ ನೃತ್ಯ ರೂಪಕವು ನೂರಕ್ಕೂ ಮಿಕ್ಕಿ ಪ್ರದರ್ಶನ ಕಂಡಿರುತ್ತದೆ.

ಅವರ ಸಂದರ್ಶನದ ಕೆಲವು ಪ್ರಶ್ನೆಗಳು ಇಲ್ಲಿವೆ:

ಪ್ರಶ್ನೆ: ನವ್ಯ ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯ ತಮ್ಮಲ್ಲಿ ಹೆಚ್ಚು ಪ್ರಭಾವ ಬೀರಿದಂತೆ ಕಾಣುತ್ತದೆ.

ಕೆದ್ಲಾಯರು: ಕಾಲೇಜು ದಿನಗಳಿಂದಲೂ ನನಗೆ ಆಡಿಗರ ಕವನ ಅಂದರೆ ಹೆಚ್ಚು ಇಷ್ಟ 1971ರಲ್ಲಿ ಅಡಿಗರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಆ ದಿನಗಳಲ್ಲಿ ಅವರ ಪರವಾಗಿ ಪ್ರಚಾರಕ್ಕೂ ಇಳಿದಿದ್ದೆ. ಒಂದು ರೀತಿಯಲ್ಲಿ ಅಡಿಗರೇ ನನಗೆ ಪ್ರೋತ್ಸಾಹ ನೀಡಿದವರು. ಅಡಿಗರ ಕವನ ಹಾಡಲು ತುಂಬಾ ಖುಷಿ. ಆದರೂ ನಾನು ಬೇಂದ್ರೆ, ಕಣವಿ ಮುಂತಾದವರ ಹಾಡುಗಳನ್ನು ಹೆಚ್ಚು ಆಸಕ್ತಿಯಿಂದ ಹಾಡುವವನು. ಅಡಿಗರ ‘ಯಾವ ಮೋಹನ ಮುರಳಿ ಕರೆಯಿತು’ ಇವೆಲ್ಲ ನಾನು ಹೆಚ್ಚಿನ ಕಡೆ ಹಾಡಿದವನು.

ಪ್ರಶ್ನೆ: ಇಂದು ಅನೇಕ ಕವಿಗಳು, ಕ್ಯಾಸೆಟ್ ಕವಿ ಗಳಾಗುತ್ತಿದ್ದಾರೆ. ಹಾಡುವ ಕವನಗಳತ್ತ ಮುಖ ಮಾಡಿ ಕವನದ ರಚನೆಯಾಗುತ್ತಿದೆ ಅನಿಸಿದೆಯೋ?

ಕೆದ್ಲಾಯರು: ಕ್ಯಾಸೆಟ್‌ಗಾಗಿ ಕವನ ಬರೆದರೂ ಒಂದು ಟ್ಯೂನ್ ಮನಸ್ಸಿನಲ್ಲಿ ಇಟ್ಟೇ ಅವರು ಕಾವ್ಯ ರಚಿಸುತ್ತಾರೆ. ಇಲ್ಲಿನ ಕಾವ್ಯಗಳಲ್ಲಿ, ಸಾಹಿತ್ಯ ಕೊಡಾ ಒಳ್ಳೆಯದಿರಬೇಕಾಗುತ್ತದೆ. ಇಲ್ಲವಾದರೆ ಸಂಗೀತೆ ಮಾತ್ರ ಉಳಿದು ಬಿಡುವ ಅಪಾಯ ಇರುತ್ತದೆ.

ಪ್ರಶ್ನೆ: ಈ ಟಿವಿಯಲ್ಲಿ ( 2006 ರ ಮಾತು) ರವಿವಾರ ರಾತ್ರಿ ಮಕ್ಕಳಿಗಾಗಿ ಬರುವ ಎಸ್‌.ಪಿ. ಬಾಲಬ್ರಹ್ಮಣ್ಯಂ ಅವರಿಂದ ‘ಎದೆ ತುಂಬಿ ಹಾಡುವೆನು ….’ ಸಂಗೀತ ಸ್ಪರ್ಧೆ ಬಹು ಜನಪ್ರಿಯ ಕಾರ್ಯಕ್ರಮ, ಇಂತಹ ಸ್ಪರ್ಧೆಯ ಬಗ್ಗೆ ತಮ್ಮ ಅನಿಸಿಕೆ.

ಕೆದ್ಲಾಯರು: ತುಂಬ ಮಕ್ಕಳು ಚೆನ್ನಾಗಿ ಹಾಡಿದ್ದಾರೆ. ಖುಶಿಯಾಗುತ್ತದೆ. ಆದರೆ ಮುಂದಿನ ಸುತ್ತಿಗೆ ಹೋಗದ ಕೆಲವು ಮಕ್ಕಳು ಅಳುವುದು ಕಂಡಾಗ ಸ್ಪರ್ಧೆಯ ಅಗತ್ಯವಿಲ್ಲ ಅನ್ನಿಸುತ್ತದೆ. ಇಲ್ಲಿ ಆ ಮಕ್ಕಳು ನಿರುತ್ಸಾಹ ತಾಳುವ ಅಪಾಯವೂ ಇರುತ್ತದೆ. ಆದ್ದರಿಂದ ಸ್ಪರ್ಧೆಯ ಬದಲು ಮಕ್ಕಳು ಹಾಡುವುದಕ್ಕೆ ಸೀಮಿತಗೊಂಡರೆ ಒಳ್ಳೆಯದು .

ಪ್ರಶ್ನೆ: ಇಂದು ಅನೇಕ ಹೊಸ ಹೊಸ ಸುಗಮ ಸಂಗೀತ ಗಾಯಕರು ಈ ಕ್ಷೇತ್ರಕ್ಕೆ ಬಂದಿದ್ದಾರೆ, ಅವರ ಬಗ್ಗೆ….

ಕೆದ್ಲಾಯರು:ನಿಜ. ಆದರೆ ಹೊಸ ಹಾಡುಗಾರರು ಸಾಹಿತ್ಯಕ್ಕೆ ಗಮನ ಕೊಡಬೇಕು, ಹಾಡುಗಾರರು ಸಾಹಿತ್ಯದ ಅರ್ಥ ಸ್ಪಷ್ಟತೆಗೆ ಧಕ್ಕೆ ಬಾರದಂತೆ ಹಾಡಬೇಕು. ಶಬ್ದಗಳನ್ನು ತುಂಡರಿಸುವಾಗ ಜಾಗೃತಿ ವಹಿಸಬೇಕು.

ಪ್ರಶ್ನೆ: ತಾವು ಗಮಕ ಕಲಾ ಪರಿಷತ್ತು ವಿನಿಂದ ಸಮ್ಮಾನ ಪಡೆದವರು, ಖ್ಯಾತ ಗಮಕ ವಾಚಕರೆಂದೂ ಪ್ರಸಿದ್ದರು. ಪ್ರಶಸ್ತಿ ಪ್ರಶಂಸೆ ಪಡೆದವರು. ಈಗ ಗಮಕ ಕಲೆಯನ್ನು ಜನ ಮರೆತಂತಿದೆಯಲ್ಲ …

ಕೆದ್ಲಾಯರು: ನಾನು ಗಮಕ ತರಗತಿಗಳನ್ನು ನಡೆಸಿದವ. ನಮ್ಮ ಪಠ್ಯ ಪುಸ್ತಕಗಳಲ್ಲಿ ಹಳೆ ಕಾವ್ಯ ಯಾಕೆ ? ಎನ್ನುವವರೂ ಇದ್ದಾರೆ. ಹಳೆ ಕಾವ್ಯ ಹಾಡಲು ಹೊರಟರೆ ಹೊಸ ಕಾಲದ ಸಂಗೀತ ಕೇಳಿದವರಿಗೆ ಅದು ಇಷ್ಟವಾಗುವುದಿಲ್ಲ, ಸಿನಿಮಾ ಸಂಗೀತ ಬಂತು ಅಂದ ಕೂಡಲೇ ಖುಶಿ ಕೊಡುತ್ತದೆ. ಸಂಗೀತಕ್ಕಿಂತ ಹೆಚ್ಚು ಅಲ್ಲಿ ಅದರ ರಿದಂ ಖುಷಿ ಕೊಡುತ್ತದೆ. ಆದರೆ ಗಮಕ ಹಾಗಲ್ಲ. ನಿಜವಾದ ಸಂಗೀತದ ಅಭಿರುಚಿ ಹೊಂದಿದವರು ಅದರ ಬಗ್ಗೆ ಆಸಕ್ತಿ ಉಳಿಸಿಕೊಂಡಿರುತ್ತಾರೆ.

ಪ್ರಶ್ನೆ: ಭಾವಗೀತೆಯನ್ನು ಹಾಡುವುದಕ್ಕೂ ‘ಶಬರಿ’ಯಂತಹ ನೃತ್ಯ ರೂಪಕದಲ್ಲಿ ಹಾಡುವುದಕ್ಕೂ ತಾವು ಯಾವ ರೀತಿಯ ಅಂತರ ಗಮನಿಸುವಿರಿ.

ಕೆದ್ಲಾಯರು: ಭಾವಗೀತೆ ಹಾಡುವಾಗ ನಮಗೆ ಹೆಚ್ಚು ಸ್ವಾತಂತ್ರ್ಯ ಇರುತ್ತದ. ನಾಳೆ ಬೇರೆಯೇ ರೀತಿಯಲ್ಲಿ ಹಾಡಬಹುದು. ನಿನ್ನ ಹಾಡಿದ್ದಕ್ಕಿಂತ ಭಿನ್ನವಾಗಿ ಹಾಡಬಹುದು, ಆದರೆ ನೃತ್ಯ ರೂಪಕದಲ್ಲಿ ಹಾಗಲ್ಲ, ಅವರ ಅಭಿನಯವನ್ನು ನಾವು ಗಮನಿಸಿ ಹಾಡಬೇಕು. ಭಾವಗೀತೆಯಲ್ಲಿ ಇಂತಹ ತೊಂದರೆ ಇಲ್ಲ. ನೃತ್ಯ ರೂಪಕದಲ್ಲಿ ನಾನು ಹಾಡಿದ್ದರಿಂದ ನನ್ನ ಹಾಡುಗಾರಿಕೆಗೆ ಹೆಚ್ಚಿನ “ಸಾಣೆ’ ಸಿಕ್ಕಿದಂತಾಗಿದೆ. 

ಪ್ರಶ್ನೆ: ತಮ್ಮನ್ನು ಕರಾವಳಿಯ ಗಾನ ಕೋಗಿಲೆ, ಭಾವಗೀತೆಯ ಮೋಡಿಗಾರ ಎಂದೆಲ್ಲ ಅಭಿಮಾನದಿಂದ ಕರೆಯುತ್ತಾರೆ, ತಾವು ಉದಯೋನ್ಮುಖ ಪ್ರತಿಭೆಗಳಿಗೆ ಏನಾದರೂ ಸಂದೇಶ ನೀಡುವುದಾದರೆ…

ಕೆದ್ಲಾಯರು: ಹಾಡುವುದಕ್ಕೆ ಅದು ಒಳಗಿನಿಂದಲೇ ಬರಬೇಕೇ ಹೊರತು ಇನ್ನೊಬ್ಬ ಹಾಡಿದ ಎಂದಲ್ಲ. ನನ್ನಲ್ಲಿ ‘ಒಳಗಿನ ಹಾಡುಗಾರಿಕೆ” ಇದೆಯೋ ಎನ್ನುವುದು ಮೊದಲು ಗಮನಿಸಬೇಕು. ಸತತ ಪರಿಶ್ರಮ, ನಿರಂತರ ಹಾಡಬೇಕು ಎನ್ನುವ ಉತ್ಸಾಹ ಮಕ್ಕಳಲ್ಲಿ ಮೂಡಿ ಬರಬೇಕು, ‘ಎದೆ ತುಂಬಿ ಹಾಡುವೆನು’ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಸ್ಪರ್ಧೆಯ ಗುರಿ ಮಾತ್ರ ಇರಬಾರದು. ತಾನು ಹೇಗೆ ಹಾಡುತ್ತೇನೆಂದೂ ತನಗೆ ಗೊತ್ತಿರಬೇಕು, ತುಂಬ ಮಕ್ಕಳು ಹಾಡುತ್ತಿದ್ದಾರೆ. ಕಲೆಯ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ ಎನ್ನುವಾಗ ಸಂತೋಷವಾಗುತ್ತಿದೆ. ನಾನು ಮೊದಲೇ ಹೇಳಿದ ಹಾಗೆ ಹಾಡುಗಾರರು ಸಾಹಿತ್ಯದ ಅರ್ಥ ಸ್ಪಷ್ಟತೆಗೆ ಧಕ್ಕೆ ಬಾರದಂತೆ ಹಾಡಬೇಕು.

ಕೆದ್ಲಾಯರು ಇನ್ನಿಲ್ಲ. ಅವರಿಗೆ ಭಾವಪುಇರ್ಣ ಶ್ರದ್ಧಾಂಜಲಿ.

———-

ಚಿತ್ರ.

ಚಂದ್ರಶೇಖರ ಕೆದ್ಲಾಯರು

ಶಾಲಾ ಶಿಕ್ಷಕರಾಗಿದ್ದಾಗ ಕೆದ್ಲಾಯರ ಶಿಷ್ಯೆಯರ ಗಾಯನ ಕಾರ್ಯಕ್ರಮ

ಶಿಕ್ಷಕ ಚಂದ್ರಶೇಖರ ಕೆದ್ಲಾಯರ ಶಿಷ್ಯಂದಿರು ಶಾಲಾ ತಂಡ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter