ತೋಟದಾಚೆಯ ನೆರಳು

ಯಾರು ಹಾಸಿಟ್ಟವರು...!
ದಂಡೆ ದುಂಡುಮಲ್ಲಿಗೆಯ ಸಿರಿಯಲಿ ನಡೆದಂತೆ
ಹನಿಹನಿ ಮೊಗ್ಗು ತನಿಯಾಗಿ ಸ್ಪರ್ಶಿಸಿದಂತೆ
ಲಜ್ಜೆಯ ಮುಸುಕಲಿ ಮೆದುಭಾವಗಳು ತಲ್ಲೀನವಾದಂತೆ 
ತೋಟದಾಚೆಗೂ ನೆರಳು

ಯಾರು ಚಿತ್ರಿಸಿದವರು...!
ತೇವಗೊಂಡ ನೆಲದ ಮೈಯಲಿ ಮೆರುಗು ಮೂಡುವಂತೆ
ಇಳೆಯ ಚೆಲುವು ಇಮ್ಮಡಿ ನೂರ್ಮಡಿಯಾಗುವಂತೆ
ಬಟ್ಟ ಬಯಲಿನ ಬೆಳಕನೇ ನಾಚಿಸುವಂತೆ
ನೀಲಿಮದ ಮೋರೆಯಲಿ ಮೂಡಿತೊಂದು ಕಾಮನಬಿಲ್ಲು

ಯಾರ ಹೆಜ್ಜೆಯ ಸದ್ದು...!
ಹೃದಯೋನ್ಮಾದಕೆ ಹಸಿ ಬೆರೆತಂತೆ
ಸ್ಥಾಯೀಭಾವಗಳು ವಿಹಾರಕೆ ಅಣಿಯಾದಂತೆ
ಒಲುಮೆಯ ಕಸುವು ಕವಲೊಡೆದಂತೆ
ತೋಟದೊಳಗಿನ ತಂಪನು ದಾಟಿ ಬರುವಂತೆ

ಬಂದು ಹೋದವರಾರಿರಬಹುದು...!
ವನಸುಮಗಳು ತೊನೆ ತೊನೆದು ಕುಸುಮಿಸುತಿವೆ
ತಂಗಾಳಿ ನೆರಿಗೆಯಲಿ ಪಕಳೆಗಳು ನಲಿಯುತಿವೆ
ಮೈಸವರಿ ಘಮ್ಮೆಂದು  ರಮಿಸುತಿವೆ
ಜಗದೊಡಲ ರಸಿಕತೆಗೆ ಕಚಗುಳಿಯಿಡುತಿವೆ

ನಿತ್ಯ ನೆರಳಿನಾಸರೆಯಿರದ ಬಯಲು 
ಹೀಗೆ ಸುಖದ ಸೋಗಿನಲಿರುವಾಗಲೇ
ಅನುವಾಗಿ ಮುದಗೊಂಡು ಹದಗೊಂಡು
ರಾಡಿಯಾದ ಮನಸುಗಳು ಮಡಿಗೊಂಡು 
ಆ ನೆನಪುಗಳಲೇ ನೆನೆದು ಧ್ಯಾನಸ್ಥರಾಗಬೇಕು 

ಮತ್ತೆಂದು ಬರುವರೋ ಏನೋ...!
ತೋಟದೊಳಗಿನ ನೆರಳಿನ ತಂಪು
ಬಯಲಲಿ ಒಡಮೂಡಲು
ಸಪ್ತ ರಂಗಿನ ರಾಗವನು ನುಡಿಸಲು
ಹೃದಯದ ಬಣ್ಣ ಸಂಪ್ರೀತಿಯಲಿ ಗಾಢವಾಗಲು
 ಕಾಯಬೇಕು ತೋಟದಾಚೆಯ ನೆರಳಿಗೆ

                              * ಅನಿತಾ ಪಿ. ತಾಕೊಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ತೋಟದಾಚೆಯ ನೆರಳು”

  1. Adv R.M. Bhandari, Mumbai

    ತೋಟದಚೆಯ ನೆರಳು – ಕವಿತೆ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು ಅನಿತರವರೆ 😊👍

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter