ನಿನ್ನ ನಾಣಣ್ಣ

ಚಿತ್ರ : ಮಂಗಳಾ ಶೆಟ್ಟಿ

ನಾನು ಹುಟ್ಟಿದ ಮೇಲೆ ನಾಣಣ್ಣ ಬದುಕಿದ್ದು ಹನ್ನೆರಡು ವರುಷಗಳು ಮಾತ್ರ. ಹಾಗಾಗಿ ನನ್ನ ಪಾಲಿಗೆ ನಾಣಣ್ಣನ ನೆನಪು ಉಳಿದಿರುವುದು ಐದಾರು ವರುಷಗಳದ್ದಷ್ಟೇ. ಅಡಿಕೆಹಾಳೆಯ ಮೇಲೆ ನಾಣಣ್ಣ ನನ್ನನ್ನು ಕೂರಿಸಿಕೊಂಡು ಅಂಗಳದ ಆ ತುದಿಯಿಂದ ಈ ತುದಿಯವರೆಗೂ ಎಳೆದುಕೊಂಡು ಹೋಗುತ್ತಿದ್ದ ಎನ್ನುವುದು ನೆನಪಿದೆ; ಹಾಳೆ ಹರಿದುಹೋಗುವವರೆಗೂ ನಾನು ಅವನ ಕೈಯನ್ನು ಹಿಡಿದುಕೊಂಡು ಕುಳಿತಿರುತ್ತಿದ್ದೆ ಎನ್ನುವುದೂ! ನಾಣಣ್ಣ ನನ್ನನ್ನು ಬೀಳಿಸುವುದಿಲ್ಲ ಎನ್ನುವ ಭರವಸೆ. ತನ್ನ ಹೆಗಲಮೇಲೆ ಕೂರಿಸಿಕೊಂಡು ದೇವಸ್ಥಾನದ ಅಂಗಳದಲ್ಲಿದ್ದ ರಾಜನೆಲ್ಲಿಕಾಯಿಯನ್ನು ಕೊಯ್ಯಲು ಸಹಾಯ ಮಾಡುತ್ತಿದ್ದ. ಎರಡೂ ಕೈಗಳಲ್ಲಿ ನೆಲ್ಲಿಕಾಯಿ ತುಂಬಿದ ಕೊಟ್ಟೆಯನ್ನು ಹಿಡಿದುಕೊಂಡ ನನ್ನ ಸವಾರಿ ಮನೆ ತಲುಪುವವರೆಗೂ ಆತನ ಹೆಗಲಮೇಲೆಯೇ ಇರುತ್ತಿತ್ತು ಎನ್ನುವ ನೆನಪೂ ಇದೆ. ಆಗಾಗ ಪ್ಲಾಸ್ಟಿಕ್ ಕೊಟ್ಟೆ ಅವನ ಕೆನ್ನೆಗೆ ತಾಕಿದರೆ, “ಸರಿಯಾಗಿ ಹಿಡ್ಕೊಂಡಿಲ್ಲ ಅಂದ್ರೆ ಬೀಳಿಸಿಬಿಡ್ತೀನಿ ನೋಡು” ಎಂದು ಗದರಿಸುತ್ತಿದ್ದ. ಆಗ ನಾನು ಎರಡೂ ಕೈಗಳನ್ನೂ ಮೇಲಕ್ಕೆತ್ತಿ, ನೆಲ್ಲಿಕಾಯಿಯ ಕೊಟ್ಟೆಯನ್ನು ಗಾಳಿಯಲ್ಲಿ ತೂಗಾಡಲು ಬಿಟ್ಟು ರಾಜ್ಯವನ್ನು ಗೆದ್ದ ರಾಜಕುಮಾರಿಯ ಗತ್ತಿನಲ್ಲಿ ಮನೆ ಸೇರುತ್ತಿದ್ದೆ. ಮಾರಿಜಾತ್ರೆಯಲ್ಲಿ ತಂದಿದ್ದ ಕೆಂಪು ಪ್ಲಾಸ್ಟಿಕ್ ಬಸ್ಸಿಗೆ ಅದೇ ಬಣ್ಣದ ಒಂದು ಪ್ಲಾಸ್ಟಿಕ್ ದಾರವನ್ನೂ ಅವನೇ ಕಟ್ಟಿಕೊಟ್ಟಿದ್ದ. ಅವನು ಸತ್ತುಹೋದಮೇಲೂ ಆ ದಾರ ಮಾತ್ರ ಸ್ವಲ್ಪವೂ ಬಣ್ಣ ಕಳೆದುಕೊಂಡಿರಲಿಲ್ಲ. ನಾನು ಆ ಬಸ್ಸನ್ನು ಎಳೆಯುವುದನ್ನು ಬಿಟ್ಟಮೇಲೆ ದಾರವನ್ನು ಬಸ್ಸಿನ ಹೊಟ್ಟೆಗೆ ಸುತ್ತಿ ನನ್ನ ಪಾಟಿಚೀಲವನ್ನು ಇಡುತ್ತಿದ್ದ ಮರದ ಟಿಪಾಯಿಯ ಒಂದು ಮೂಲೆಯಲ್ಲಿ ಇಟ್ಟುಕೊಂಡಿದ್ದೆ. ಆ ಬಸ್ಸು ನಾಣಣ್ಣನ ನೆನಪಿನ ಮೂರ್ತರೂಪದಂತೆ ಎಷ್ಟೋ ವರ್ಷಗಳ ಕಾಲ ಟಿಪಾಯಿಯ ಮೇಲೆಯೇ ಇತ್ತು.


ನಾಣಣ್ಣ ಹಾಗೆ ಸತ್ತುಹೋಗಬಹುದೆಂದು ಯಾರಿಗೆ ಗೊತ್ತಿತ್ತು! ಆ ಹೊಳೆಯೇನೂ ಅಂಥ ದೊಡ್ಡ ಹೊಳೆಯೇನಲ್ಲ. ಮಳೆಗಾಲ ಮುಗಿದಮೇಲೆ ತೋಟಕ್ಕೆ ನೀರು ಹಾಯಿಸಲೆಂದು ಒಂದು ಒಡ್ಡು ಕಟ್ಟಿದ್ದರಷ್ಟೇ. ಅದೂ ಕಲ್ಲು, ಮಣ್ಣು, ಕುಂಟೆ ಇವುಗಳನ್ನೇ ಬಳಸಿ ಕಟ್ಟಿದ್ದ ಒಂದು ಕಟ್ಟು. ಮೇಲೊಂದಿಷ್ಟು ಒಣಗಿದ ತೆಂಗಿನಗರಿಗಳನ್ನು ಹೊದೆಸಿದ್ದರು. ನಿಂತ ನೀರಿನ ಆಳವನ್ನಾಗಲೀ, ತಳದಲ್ಲಿದ್ದ ಅರಲಿನ ಪ್ರಮಾಣವನ್ನಾಗಲೀ ಯಾರೂ ಲೆಕ್ಕವಿಟ್ಟಿರಲಿಲ್ಲ. ಅತ್ತ ಚಳಿಯೂ ಅಲ್ಲದ, ಸೆಕೆಯೂ ಇಲ್ಲದ ಮಧ್ಯಾಹ್ನದ ಸಮಯದಲ್ಲಿ ನಾಣಣ್ಣ ಅಲ್ಲಿಗೆ ಈಜಲು ಹೋಗಿದ್ದ. ನಾನು, ಪ್ರವೀಣ ಶನಿವಾರ ಶಾಲೆ ಮುಗಿಸಿ ಬಂದವರೇ ಜನವರಿ ಇಪ್ಪತ್ತಾರರ ಭಾಷಣ ಬರೆಸಿಕೊಳ್ಳಲೆಂದು ಯುನಿಫಾರ್ಮನ್ನೂ ಬಿಚ್ಚದೇ ನಾಣಣ್ಣನ ಮನೆಗೆ ಓಡಿದರೆ ಅವನು ಮನೆಯಲ್ಲಿರಲಿಲ್ಲ. ಟವೆಲ್ಲು ತೆಗೆದುಕೊಂಡು ಹೋಗಿದ್ದಾನೆಂದು ಗೊತ್ತಾಗಿದ್ದೇ ನಾವೂ ಸೀದಾ ಹೊಳೆಕಟ್ಟು ಹಾಕಿದ್ದ ಜಾಗಕ್ಕೆ ಬರಿಗಾಲಲ್ಲೇ ಓಡಿದ್ದು ನೆನಪಿದೆ. ಈ ನೆನಪಿಗೆ ಹತ್ತು-ಹಲವು ಮುಖಗಳೇನೋ ಎನ್ನಿಸುತ್ತದೆ ಒಮ್ಮೊಮ್ಮೆ; ಒಂದರ ಹಿಂದೊಂದು ಅಂಟಿಕೊಂಡೇ ಇರುವಂತೆ! ಅಲ್ಲಿ ನಾಣಣ್ಣನ ತಿಳಿಹಸಿರು ಬಣ್ಣದ ಬನಿಯನ್ನಿನಂತಹ ಟಿ ಶರ್ಟು ಏಲಕ್ಕಿಹಿಂಡಿನ ಮೇಲೆ ಹೌದೋ ಅಲ್ಲವೋ ಎನ್ನುವಂತೆ ನೇತಾಡುತ್ತಿತ್ತು. ನಾವು ಯಾವತ್ತಿನಂತೆ ಅವನಿಗೆ ಕೂ ಹಾಕಿದ್ದು, ಅವನು ಉತ್ತರಿಸದೇ ಇದ್ದಿದ್ದು, ನಾವು ಮನೆಗೆ ಹೋಗಿ ವಿಷಯ ಮುಟ್ಟಿಸಿದ್ದು, ಎಲ್ಲರೂ ಸೇರಿ ಅರಲಿನಲ್ಲಿ ಹುಗಿದುಹೋಗಿದ್ದ ಅವನ ಜೀವವಿಲ್ಲದ ಶರೀರವನ್ನು ಎತ್ತಿದ್ದು ಎಲ್ಲ ನಿನ್ನೆ-ಮೊನ್ನೆ ಜರುಗಿದಂತಿದೆ. ಅಷ್ಟೇನೂ ಆಳವಿಲ್ಲದ, ಸುಳಿಯೂ ಇಲ್ಲದ, ಯಾವ ಅಪಾಯದ ಸುಳಿವೂ ಕಾಣಸಿಗದ ಅಂಥದ್ದೊಂದು ಹೊಳೆಕಟ್ಟಿಗೆ ಬಿದ್ದು ಯಾರಾದರೂ ಸತ್ತುಹೋಗುವಂತಿದ್ದರೆ ಸಾವೆಷ್ಟು ಸಸಾರದ ವಿಷಯ ಎಂದು ಈಗ ಅಂದುಕೊಳ್ಳುತ್ತೇನೆ.


ಅದಾಗಿ ಐದಾರು ವರ್ಷಗಳಾಗಿರಬಹುದು! ಪ್ರವೀಣ ಸುಮಾರು ನಾಣಣ್ಣನ ಎತ್ತರಕ್ಕೇ ಬೆಳೆದುನಿಂತಿದ್ದ. ಅವನು ಅಣ್ಣನ ಮಗಳನ್ನು ಹೆಗಲಮೇಲೆ ಹೊತ್ತು ತಿರುಗುವಾಗಲೆಲ್ಲ ನನಗೆ ನಾಣಣ್ಣ ನೆನಪಾಗುತ್ತಲೇ ಇರುತ್ತಿದ್ದ. ಆ ಸಮಯದಲ್ಲಿಯೇ ವಿದ್ಯಕ್ಕ ನಾಣಣ್ಣನನ್ನು ಹುಡುಕಿಕೊಂಡು ಬಂದಿದ್ದು. ಅವಳನ್ನು ನಾವ್ಯಾರೂ ಮೊದಲು ನೋಡಿರಲೇ ಇಲ್ಲ. ಅಚಾನಕ್ಕಾಗಿ ಒಂದು ದಿನ ವ್ಯಾನಿಟಿ ಬ್ಯಾಗಿನೊಂದಿಗೆ ಬಂದ ವಿದ್ಯಕ್ಕನನ್ನು ಮೊದಲು ನೋಡಿದ್ದೇ ನಾನು. ಬೆಳಗ್ಗೆ ಹತ್ತುಗಂಟೆಯ ಸುಮಾರಿಗೆ ಕೊಟ್ಟಿಗೆ ಪಕ್ಕದಲ್ಲಿ ಬೆಳೆದಿದ್ದ ದೂರ್ವೆ ಕೊಯ್ಯುತ್ತಿದ್ದವಳಿಗೆ ಹಸಿರು ಬಣ್ಣದ ಬ್ಯಾಗ್ ಹಾಕಿಕೊಂಡು ಒಡ್ಡೆ ಇಳಿಯುತ್ತಿದ್ದ ವಿದ್ಯಕ್ಕ ಕಾಣಿಸಿದ್ದಳು. ನನಗೆ ಆ ಕ್ಷಣಕ್ಕೆ ನೆನಪಾಗಿದ್ದು ನಾಣಣ್ಣನ ಟಿ ಶರ್ಟು. ವಿದ್ಯಕ್ಕ ಹತ್ತಿರ ಬಂದವಳೇ ನಾಣಣ್ಣನ ಮನೆ ಯಾವುದು ಎಂದು ವಿಚಾರಿಸಿದ್ದಳು. ಅವನಿನ್ನೂ ಬದುಕಿರುವ ನಂಬಿಕೆಯಲ್ಲಿ ಅವಳ ಭುಜಕ್ಕೆ ನೇತಾಡುತ್ತಿದ್ದ ಕೊಂಚ ಭಾರವೇ ಇದ್ದಿರಬಹುದಾಗಿದ್ದ ವ್ಯಾನಿಟಿ ಬ್ಯಾಗಿಗೂ, ನಾವು ಹೆಗಲಮೇಲೆ ಹೊತ್ತು ತಿರುಗುತ್ತಿದ್ದ ಆತನ ನೆನಪುಗಳಿಗೂ ನನಗೆ ಅಂತಹ ವ್ಯತ್ಯಾಸವೇನೂ ಕಾಣಿಸಿರಲಿಲ್ಲ. ಅವಳು ಯಾರು, ಎಲ್ಲಿಂದ ಬಂದವಳು ಯಾವುದನ್ನೂ ಯಾರೂ ವಿಚಾರಿಸಲೂ ಇಲ್ಲ. ನಾಣಣ್ಣನ ಬದುಕಿನೊಂದಿಗೆ ಬೆಸೆದುಕೊಂಡಿದ್ದ ಏನಾದರೂ ಸರಿಯೇ, ನಮ್ಮ ಮಧ್ಯ ಇರುವುದು ಎಲ್ಲರಿಗೂ ಬೇಕಾಗಿತ್ತು. ಎರಡು ದಿನ ಎಲ್ಲವನ್ನೂ ಕಳೆದುಕೊಂಡವಳಂತೆ ಕುಳಿತಿದ್ದ ವಿದ್ಯಕ್ಕ ಮೂರನೆಯ ದಿನ ಬೆಳಗ್ಗೆ ನನ್ನೊಂದಿಗೆ ದೂರ್ವೆ ಕೊಯ್ಯಲು ಬಂದವಳೇ “ದೇವಸ್ಥಾನದಲ್ಲಿ ಈಗಲೂ ರಾಜನೆಲ್ಲಿಕಾಯಿ ಮರ ಇದೆಯೇ?” ಎಂದು ವಿಚಾರಿಸಿದ್ದಳು. ಅವಳ ಕಣ್ಣೀರಿನ ಒಂದು ಹನಿ ಕೈಯಲ್ಲಿದ್ದ ದೂರ್ವೆಯ ಮೇಲೆ ಬಿದ್ದಿತ್ತು. ನಾನು ಅತ್ತಾಗಲೆಲ್ಲ ಗದರಿಸುತ್ತಿದ್ದ ನಾಣಣ್ಣ ವಿದ್ಯಕ್ಕನ ಕಣ್ಣೀರಿಗೆ ಕಾರಣನಾಗಿದ್ದು ನನಗಂತೂ ಚೂರೂ ಸರಿ ಕಾಣಿಸಿರಲಿಲ್ಲ.


ಆ ಕಣ್ಣೀರಿನಲ್ಲಿ ನನಗೆ ನಾಣಣ್ಣ ಮರಳಿ ಸಿಕ್ಕಿದ್ದ ಎಂದರೆ ಸ್ವಾರ್ಥವಾದೀತು! ಆದರೂ ಅವಳ ತ್ಯಾಗದೆದುರು ನನ್ನ ಚಿಕ್ಕದೊಂದು ಸ್ವಾರ್ಥ ಲೆಕ್ಕಕ್ಕಿರಲಿಲ್ಲ.


ವಿದ್ಯಕ್ಕ ನಾಣಣ್ಣನನ್ನು ಮೊದಲಸಲ ನೋಡಿದ್ದು ಮಾರಿಮಕ್ಕಿ ತೇರಿನಲ್ಲಿ. ಸಂಜೆ ಸಂಗೀತ ಕಾರ್ಯಕ್ರಮಕ್ಕೆ ಮುಂಚೆ ಸ್ವಾಗತಗೀತೆ ಹಾಡಲೆಂದು ಅವಳು ಗಂಟಲು ಸರಿಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ನಾಣಣ್ಣ ಮೈಕ್ ಟೆಸ್ಟ್ ಮಾಡುತ್ತಿದ್ದನಂತೆ. ಅವನ ಬಲಭಾಗದ ಪರದೆಯ ಪಕ್ಕದಲ್ಲಿ ನಿಂತಿದ್ದವಳಿಗೆ ಮೊದಲು ಕಾಣಿಸಿದ್ದೇ ಅವನ ಉದ್ದವಾದ ಮೂಗಂತೆ. “ಗಜಮುಖನೆ ಸಿದ್ಧಿದಾಯಕನೆ” ಎಂದು ಪ್ರಾಕ್ಟಿಸ್ ಮಾಡುತ್ತಿದ್ದವಳು ಒಮ್ಮೆ ನಿಲ್ಲಿಸಿ, ನಾಣಣ್ಣನ ಮೂಗನ್ನೇ ನೋಡುತ್ತಿದ್ದಳಂತೆ. ಅವನು ಇವಳೆಡೆಗೆ ತಿರುಗಿ ನಕ್ಕಾಗ, ತಡವರಿಸಿ ದೃಷ್ಟಿ ತಿರುಗಿಸಿದ್ದಳಂತೆ. ಇದನ್ನೆಲ್ಲ ಹೇಳುವಾಗ ಅವಳ ನೀಳವಾದ ಕಣ್ಣುಗಳಲ್ಲೊಂದು ವಿಶಿಷ್ಟವಾದ ಹೊಳಪು ಕಾಣಿಸುತ್ತಿತ್ತು. ಅದನ್ನು ನೋಡಲೆಂದೇ ನಾನು ಮತ್ತೆಮತ್ತೆ “ಮುಂದೇನಾಯಿತು” ಎಂದು ಅವಳ ನೆನಪುಗಳನ್ನು ಕೆದಕುತ್ತಿದ್ದೆ. ಅವಳು “ಕಳ್ಳಿ ನೀನು” ಎನ್ನುತ್ತ ನನ್ನ ಮೂಗನ್ನೊಮ್ಮೆ ಹಿಡಿದು ಅಲ್ಲಾಡಿಸಿ, “ನಿನ್ನ ಮೂಗು ಕೂಡಾ ನಿನ್ನ ನಾಣಣ್ಣನ ಮೂಗಿನಂತೆಯೇ ಇದೆ” ಎನ್ನುತ್ತಿದ್ದಳು. ಅವಳ ಬಾಯಿಯಿಂದ ಸಾಕಷ್ಟು ಸಲ ಆ ಮಾತನ್ನು ಕೇಳಿಸಿಕೊಂಡ ನನಗೆ ಆಮೇಲಾಮೇಲೆ ನಾಣಣ್ಣನ ಎಲ್ಲ ನೆನಪುಗಳೂ ನನ್ನ ಮೂಗಿನ ಮೇಲೇ ಇವೆಯೇನೋ ಅನ್ನಿಸುತ್ತಿತ್ತು. ನೆನಪು ಉಳಿದುಕೊಂಡಿರುವ ಜಾಗವನ್ನು ಮಾತ್ರ ನಾನು, ವಿದ್ಯಕ್ಕ ಇಬ್ಬರೂ ಕೆದಕುತ್ತಿರಲಿಲ್ಲ. ನಮಗಿಬ್ಬರಿಗೂ ಆ ನೆನಪುಗಳ ನಾಜೂಕು ಸ್ಪರ್ಶ ಮಾತ್ರವೇ ಬೇಕಿತ್ತು.


“ಆ ವರ್ಷ ಮಳೆಗಾಲದಲ್ಲಿ ಕೊಚ್ಚಿಕೊಂಡು ಹೋದ ಒಡ್ಡನ್ನು ಮತ್ತೆ ಕಟ್ಟಲೇ ಇಲ್ಲ” ಎಂದೆ ನಾನು. ಅವಳು ತೋಟದ ಅಂಚಿನಲ್ಲಿದ್ದ ಅತ್ತಿಮರದ ಬೇರಿನ ಮೇಲೆ ಕುಳಿತು, ಎರಡೂ ಕಾಲುಗಳನ್ನು ನೀರಿನಲ್ಲಿ ಇಳಿಬಿಟ್ಟು ಹರಿಯುವ ನೀರನ್ನೇ ನೋಡುತ್ತ ಕುಳಿತಿದ್ದಳು. ನಾನು ಏಲಕ್ಕಿಹಿಂಡಿನ ಜಾಗದಲ್ಲಿ ಬೆಳೆದಿದ್ದ ಗೆಂಟಿಗೆಯ ಮೊಗ್ಗುಗಳನ್ನು ಕೊಯ್ದು ಮುಷ್ಟಿಯಲ್ಲಿ ತುಂಬಿಸಿಕೊಳ್ಳುತ್ತಿದ್ದೆ. ವಿದ್ಯಕ್ಕ ದೃಷ್ಟಿ ಕದಲಿಸದೇ “ನಿನ್ನ ನಾಣಣ್ಣ ನನಗೊಂದು ಗೆಂಟಿಗೆಮಾಲೆ ತಂದುಕೊಟ್ಟಿದ್ದ. ನನ್ನ ಜಡೆಗಿಂತ ಉದ್ದ ಇತ್ತು ಅದು” ಎಂದಳು. ಅವಳು “ನಿನ್ನ ನಾಣಣ್ಣ” ಎನ್ನುವಾಗಲೆಲ್ಲ, ಅವಳು ಅವನನ್ನು ಏನೆಂದು ಕರೆಯುತ್ತಿದ್ದಿರಬಹುದು ಎನ್ನುವ ಕುತೂಹಲವೊಂದು ನನ್ನಲ್ಲಿ ಹುಟ್ಟಿಕೊಳ್ಳುತ್ತಿದ್ದರೂ ಯಾವತ್ತೂ ಅವಳನ್ನು ಕೇಳಲೇ ಇಲ್ಲ. ನಿಜ ಹೇಳಬೇಕೆಂದರೆ ನಾಣಣ್ಣನ ಹೆಸರು ಲಕ್ಷ್ಮೀನಾರಾಯಣನೋ ಅಥವಾ ಬರೀ ನಾರಾಯಣನೋ ಎನ್ನುವುದೂ ನನಗೆ ಗೊತ್ತಿಲ್ಲ. ನನಗೆ ಅವನು ಸೊರ್ ಸೊರ್ ಎಂದು ಶಬ್ದ ಮಾಡುತ್ತ ಚಾ ಕುಡಿಯುತ್ತಿದ್ದದ್ದು ಗೊತ್ತು, ಜೋರಾಗಿ ಯಕ್ಷಗಾನದ ಪದ ಹೇಳುತ್ತ ಕೊಟ್ಟಿಗೆ ತೊಳೆಯುತ್ತಿದ್ದದ್ದು ಗೊತ್ತು, ನನ್ನ-ಪ್ರವೀಣನ ಕಣ್ತಪ್ಪಿಸಿ ವಾಲಿಬಾಲ್ ಆಡಲು ಹೋಗುತ್ತಿದ್ದದ್ದು ಕೂಡಾ ಗೊತ್ತು; ಆದರೆ ಅವನ ಪೂರ್ಣ ಹೆಸರಾಗಲೀ, ಅವನು ವಿದ್ಯಕ್ಕನನ್ನು ಎಲ್ಲಿ ಭೇಟಿ ಮಾಡುತ್ತಿದ್ದ ಎನ್ನುವುದಾಗಲೀ, ಸಾಯುವ ಕೊನೆಕ್ಷಣದಲ್ಲಿ ಅವನು ಯಾರನ್ನು ನೆನಪಿಸಿಕೊಂಡಿರಬಹುದು ಎಂಬುದಾಗಲೀ ಗೊತ್ತಿಲ್ಲ. ಆ ಕೊನೆಯ ಮುಖ ನನ್ನದೇ ಆಗಿದ್ದರೆ ನಾನೂ ಅವನೊಂದಿಗೆ ಸತ್ತುಹೋಗಿದ್ದೇನೆ; ಅದು ವಿದ್ಯಕ್ಕನದಾಗಿದ್ದರೆ ಅವಳಿಗಾಗಿಯೇ ನಾನು ಬದುಕಿದ್ದೇನೆ. ನಾಣಣ್ಣನ ಹೊರತಾಗಿ ನನ್ನ ಬದುಕಿಗೆ ಅಸ್ತಿತ್ವವೆಂಬುದು ಇದೆಯೋ ಇಲ್ಲವೋ ಎನ್ನುವುದೇ ನನಗೆ ಗೊತ್ತಿಲ್ಲ. ದೇವಸ್ಥಾನಕ್ಕೆ ಕೊಡಲೆಂದು ನಾನು ನಾಣಣ್ಣನಿಗೆ ಕೊಟ್ಟಿದ್ದ ಗೆಂಟಿಗೆಮಾಲೆಯನ್ನು ಅವನು ವಿದ್ಯಕ್ಕನಿಗೆ ಕೊಟ್ಟಿದ್ದು ನನಗೆ ಈಗ ಗೊತ್ತು; ಅದು ಅವಳಿಗೆ ಗೊತ್ತಿಲ್ಲ. ಆ ಮಾಲೆ ಬಿಳಿ ಬಣ್ಣದ್ದಾಗಿತ್ತೋ ಅಥವಾ ನೇರಳೆ ಬಣ್ಣದ್ದೋ ಎನ್ನುವುದು ಮಾತ್ರ ನೆನಪಾಗಲಿಲ್ಲ.


ಅದಾಗಿ ಎಷ್ಟೋ ವರ್ಷಗಳ ನಂತರವೂ ನಾನು ಮತ್ತು ವಿದ್ಯಕ್ಕ ನಾಣಣ್ಣ ಜೇನು ಕೀಳುವುದು, ಮಾವಿನಕಾಯಿ ಕೊಯ್ಯುವುದು, ಮಾನಿಹೊಳೆಯಲ್ಲಿ ಮುಳುಗೇಳುವುದು ಎಲ್ಲದರ ಬಗ್ಗೆಯೂ ಮಾತನಾಡುತ್ತಿದ್ದೆವು. “ಗಂಡುದಿಕ್ಕಿಲ್ಲದ ಮನೆಗೆ ನೀನು ಬಂದಿರಲಿಲ್ಲ ಎಂದರೆ ನಾನು ಏನು ಮಾಡ್ತಿದ್ನೋ ಏನೋ” ಎಂದು ದುಃಖವನ್ನೂ ಸಂತಸವನ್ನೂ ಒಟ್ಟಿಗೇ ವ್ಯಕ್ತಪಡಿಸುತ್ತ ದೊಡ್ಡಾಯಿ ಕವಳದ ಎಲೆಗೆ ಸುಣ್ಣ ಹಚ್ಚುವಾಗಲೆಲ್ಲ ವಿದ್ಯಕ್ಕ ನಾಣಣ್ಣನ ನೆನಪಲ್ಲಿ ಮುಳುಗಿಹೋಗುತ್ತಾಳೆ ಎನ್ನುವುದು ಅವಳ ಮುಖಭಾವದಿಂದಲೇ ಗೊತ್ತಾಗುತ್ತಿತ್ತು. ಹಾಗೆ ಬರೀ ನೆನಪುಗಳಲ್ಲೇ ತನ್ನ ಜೀವನ ಮುಗಿದುಹೋಗುತ್ತಿರುವುದಕ್ಕೆ ಅವಳಿಗೆ ದುಃಖವೇನೂ ಇದ್ದಂತಿರಲಿಲ್ಲ. ನಾಣಣ್ಣ ಒಮ್ಮೆ ಅವಳ ಕೈ ಹಿಡಿದುಕೊಂಡು “ನನಗೇನಾದರೂ ಆದರೆ ನೀನು ದೊಡ್ಡಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು” ಎಂದು ಹೇಳಿದ್ದನ್ನು ವಿದ್ಯಕ್ಕ ನನ್ನ ಹತ್ತಿರ ಹೇಳಿದ್ದಳು. “ದೊಡ್ಡಾಯಿ ವಿಷಯ ಹೇಳುವಾಗ ಬಿಟ್ಟರೆ ಇನ್ಯಾವತ್ತೂ ನಿನ್ನ ನಾಣಣ್ಣ ನನ್ನ ಕೈ ಕೂಡಾ ಹಿಡಿದುಕೊಂಡಿಲ್ಲ ನೋಡು. ಅವನ ಮೂಗನ್ನು ಒಮ್ಮೆಯಾದರೂ ಎಳೆಯಬೇಕು ಎನ್ನುವ ಆಸೆಯೂ ಹಾಗೇ ಉಳಿದುಹೋಗಿದೆ. ಮುಂದಿನ ಜನ್ಮವೇನಾದರೂ ಇದ್ದರೆ ನಾವಿಬ್ಬರೂ ಅವಳಿಗಳಾಗಿ ಹುಟ್ಟುವ ಬಯಕೆಯಿದೆ ನನಗೆ. ಅಮ್ಮನ ಹೊಟ್ಟೆಯಲ್ಲಿಯೂ ನಾನವನ ಮೂಗನ್ನು ಹಿಡಿದೆಳೆಯುತ್ತೇನೆ” ಎಂದಿದ್ದಳು ವಿದ್ಯಕ್ಕ. ಅವಳ ಆ ಮಾತಿಗೆ ಮೈಮೇಲೆಲ್ಲ ಚಳಿಗುಳ್ಳೆಗಳೆದ್ದ ಅನುಭವವಾಗಿ ಮಾತು ಮರೆತಿದ್ದೆ. ಹೆಸರಿಲ್ಲದ, ಸ್ವಾರ್ಥವಿಲ್ಲದ, ಕೊನೆಯೂ ಇಲ್ಲದ ಅವಳ ಪ್ರೀತಿಯ ಉದ್ದ-ಅಗಲಗಳನ್ನು ಕೆದಕುವ ಮನಸ್ಸು ಯಾವತ್ತಿಗೂ ಆಗಲೇ ಇಲ್ಲ. ಮೇಲ್ನೋಟಕ್ಕೆ ಕಾಣಿಸದ ಹೊಳೆಯ ಕಟ್ಟಿನ ಆಳ ನಾಣಣ್ಣನ ದೇಹವನ್ನು ಎಳೆದುಕೊಂಡಾಗ ಅವನ ಮೂಗಿಗಂಟಿದ್ದ ಕೊನೆಯ ಉಸಿರು ವಿದ್ಯಕ್ಕನ ಕಣ್ಣುಗಳಲ್ಲಿ ಉಳಿದುಹೋದಂತೆನ್ನಿಸಿತ್ತು.


ಅಷ್ಟಕ್ಕೂ ನಾನು, ವಿದ್ಯಕ್ಕನನ್ನು ಹೊರತುಪಡಿಸಿ ಉಳಿದವರೆಲ್ಲ ನಾಣಣ್ಣನ ನೆನಪುಗಳಿಂದಲೂ ದೂರವಾಗಿ ಬದುಕಲು ಕಲಿತಾಗಿತ್ತು. ಹೊಳೆ ಮಾತ್ರ ಯಾವತ್ತಿನಂತೆ ತನ್ನ ಪಾಡಿಗೆ ತಾನು ತಣ್ಣಗೆ ಹರಿಯುತ್ತಿತ್ತು. ವಿದ್ಯಕ್ಕ ದಿನಕ್ಕೊಮ್ಮೆಯಾದರೂ ಹೊಳೆಯಲ್ಲಿ ಓಡಾಡುತ್ತ ಹರಿವ ನೀರಿನಲ್ಲಿ ನಾಣಣ್ಣನ ನೆರಳನ್ನು ಅರಸುತ್ತಿದ್ದಳು. ಅವನ ಸಾವಾಗಲೀ ಅಥವಾ ಹೊಳೆಯಂತೆ ಎಲ್ಲಿಂದೆಲ್ಲಿಗೋ ಹರಿಯುತ್ತಿರುವ ತನ್ನ ಬದುಕಾಗಲೀ ಅವಳನ್ನು ತಲ್ಲಣಗೊಳಿಸುತ್ತಿರುವಂತೆ ಒಮ್ಮೆಯೂ ಅನ್ನಿಸಲಿಲ್ಲ. ಕಣ್ಣೀರನ್ನು ಮರೆತಿದ್ದಳೋ, ಮುಚ್ಚಿಟ್ಟಿದ್ದಳೋ ನನಗಂತೂ ಅರ್ಥವಾಗುತ್ತಿರಲಿಲ್ಲ. “ಹತ್ತು ಎಣಿಸುವಷ್ಟರಲ್ಲಿ ಆಚೆದಡಕ್ಕೆ ತಲುಪಬೇಕು” ಎನ್ನುತ್ತಲೋ, “ಇವತ್ತು ಕಣ್ಣು ಮುಚ್ಚಿಕೊಂಡು ಹೊಳೆ ದಾಟಬೇಕು” ಎಂದು ಹೇಳುತ್ತಲೋ ನನ್ನ ಕೈಹಿಡಿದು ಎಳೆಯುತ್ತ ನೀರಿನಲ್ಲಿ ಇಳಿಯುತ್ತಿದ್ದಳು. ಅವಳ ಬದುಕಿನ ಗತಿಗಳೆಲ್ಲವೂ ಹೊಳೆಯ ಹರಿವಿನೊಂದಿಗೆ ಒಂದಾಗಿಹೋದಂತೆ, ಪ್ರತಿಕ್ಷಣವೂ ಹೊಸನೀರಿಗಾಗಿ ಕಾಯುವುದನ್ನುಳಿದು ಬೇರಾವ ಕಾರಣವೂ ಅವಳ ಬದುಕಿಗಿದ್ದಂತೆ ಅನ್ನಿಸುತ್ತಿರಲಿಲ್ಲ. ಒಮ್ಮೊಮ್ಮೆ ದೊಡ್ಡಾಯಿಯನ್ನೂ ಕೈಹಿಡಿದು ಹೊಳೆಗೆ ಕರೆದುಕೊಂಡು ಹೋಗಿ ನೀರಿಗಿಳಿಸಿ, ಅವಳ ಸೀರೆ ಒದ್ದೆಯಾಗದಂತೆ ತಾನೇ ಎತ್ತಿಹಿಡಿದುಕೊಂಡು ನಿಂತಿರುತ್ತಿದ್ದಳು. ಅಂತಹ ಸಮಯದಲ್ಲೆಲ್ಲ ದೊಡ್ಡಾಯಿಗೂ ನಾಣಣ್ಣ ನೆನಪಾಗುತ್ತಿದ್ದಿರಬಹುದೆಂದು ನನಗೆ ಅನ್ನಿಸಿದರೂ, ಅವಳ ಕಣ್ಣುಗಳಲ್ಲೇನೂ ದುಃಖದ ಯಾವ ಛಾಯೆಯೂ ಕಾಣಿಸುತ್ತಿರಲಿಲ್ಲ. ಆಗೆಲ್ಲ ನನಗೆ ಇನ್ನೊಬ್ಬರ ಸಾವನ್ನು ಒಪ್ಪಿಕೊಂಡು, ತನ್ನ ಸಮಯ ಬಂದಾಗ ಸಾವಿಗಾಗಿ ಕಾಯುತ್ತ ಬದುಕುವುದಷ್ಟೇ ಬದುಕಿನ ನಿಜವಾದ ಅರ್ಥವಿರಬಹುದೇ ಎನ್ನಿಸಿ ಕಳವಳವಾಗುತ್ತಿತ್ತು.


ಈಗಲೂ ವಿದ್ಯಕ್ಕ ಪ್ರತಿದಿನವೂ ತಪ್ಪದೆ ಹೊಳೆಗೆ ಭೇಟಿಕೊಡುತ್ತಾಳೆ. ಬೇಸಿಗೆಯಲ್ಲಿ ನೀರು ಬತ್ತಿಹೋದರೆ ಮಳೆಗಾಗಿ ಕಾಯುತ್ತಾಳೆ; ಮಳೆಗಾಲದಲ್ಲಿ ಹೊಳೆಯ ರಭಸ ಇಳಿಯಲೆಂದು ಹಂಬಲಿಸುತ್ತಾಳೆ. ಅವಳ ಕಣ್ಣುಗಳಲ್ಲಿನ ಹೊಳಪು ಹಾಗೆಯೇ ಇದೆ. ಗೆಂಟಿಗೆಗಿಡವಿದ್ದ ಜಾಗದಲ್ಲಿ ಸಂಪಿಗೆಯನ್ನು ನೆಟ್ಟಿದ್ದಾಳೆ. ರಾಜಿ, ಕೆಂಪಿ, ಮುಗ್ಧೆ ಹೀಗೆ ಕೊಟ್ಟಿಗೆಯ ತುಂಬ ಇರುವ ಕರುಗಳನ್ನು ಬಾಯ್ತುಂಬ ಕರೆಯುತ್ತ ಮುದ್ದುಮಾಡುತ್ತಾಳೆ. “ದೃಷ್ಟಿ ತಾಗಿದವಮ್ಮ ಗೋವ್ಗಳಿಗೆ… ಗೋಪಾಲಕೃಷ್ಣನ ಆಕಳುಗಳಿಗೆ” ಎಂದು ಹಾಡುತ್ತ ದೀಪಾವಳಿಯಂದು ದೃಷ್ಟಿ ತೆಗೆಯುತ್ತಾಳೆ. ಆಗೆಲ್ಲ ನನಗೆ ಹಸುಗಳಿಗೆ ಸೊಳ್ಳೆ ಕಚ್ಚದಿರಲೆಂದು ತಾನು ಮಲಗುವ ಮುಂಚೆ ಕೊಟ್ಟಿಗೆಗೆ ಅಡಿಕೆಸಿಪ್ಪೆಯ ಹೊಗೆ ಹಾಕುತ್ತಿದ್ದ ನಾಣಣ್ಣ ನೆನಪಾಗುತ್ತಾನೆ. ಹೀಗೆ ನನ್ನ ನೆನಪಿನ ಪ್ರಪಂಚದ ತುಂಬ ನಾಣಣ್ಣನೇ ತುಂಬಿಕೊಂಡಿದ್ದಾನೋ ಅಥವಾ ಅವನ ನೆನಪುಗಳನ್ನುಳಿದು ಬೇರೆ ಯಾವ ನೆನಪುಗಳೂ ನನಗೆ ಬೇಕಾಗಿಯೇ ಇಲ್ಲವೋ ಅರ್ಥವಾಗದೇ ಚಡಪಡಿಸುವಾಗಲೆಲ್ಲ ವಿದ್ಯಕ್ಕ “ನಿನ್ನ ನಾಣಣ್ಣ” ಎನ್ನುತ್ತ ಇನ್ಯಾವುದೋ ನೆನಪುಗಳನ್ನು ಹೊತ್ತು ಬಳಿಬರುತ್ತಾಳೆ. ಅವಳು ಎಲ್ಲಿಂದ ಬಂದಳು, ಎರಡನೇ ಸಲ ನಾಣಣ್ಣನನ್ನು ಎಲ್ಲಿ ಭೇಟಿಯಾದಳು, ನಾಣಣ್ಣ ಅವಳೊಂದಿಗೆ ಏನು ಮಾತಾಡುತ್ತಿದ್ದ ಈ ಯಾವ ಪ್ರಶ್ನೆಗಳನ್ನೂ ನಾನವಳ ಹತ್ತಿರ ಈಗಲೂ ಕೇಳುವುದಿಲ್ಲ. ಉತ್ತರ ಹುಡುಕುವ ಹಂಬಲದಲ್ಲಿ ನೆನಪುಗಳು ಮಾತಾಗಿ ಮುಗಿದುಹೋಗುವುದು ನನಗೆ ಬೇಕಿಲ್ಲ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “<em>ನಿನ್ನ ನಾಣಣ್ಣ</em>”

  1. Raghavendra Mangalore

    ‘ ನೆನಪುಗಳನ್ನು ಕೆದಕುತ್ತಿದ್ದಿಲ್ಲ…ಅವುಗಳ ಸ್ಪರ್ಶ ಸಾಕು ‘ ಇಂತಹ ಹಲವು ವಾಕ್ಯಗಳು ಕಥೆಯನ್ನು ತುಂಬಾ ಕೌತಕದಿಂದ ಓದುವಂತೆ ಮಾಡಿದೆ. ಮಲೆ ನಾಡಿನ ಭಾಷೆ, ಪರಿಸರದ ಬಗ್ಗೆ ಒಂದಷ್ಟು ತಿಳಿದುಕೊಳ್ಳಲು ಸಹಾಯ ಮಾಡಿತು. ಒಟ್ಟಿನಲ್ಲಿ ಒಳ್ಳೆಯ ಕಥೆ ಓದಿದ ಅನುಭವ ಸಿಕ್ಕಿತು.

  2. ಬಾಲ್ಯದ ಸಂಬಂಧಗಳ ಮಜಲನ್ನು ಸೂಕ್ಷ್ಮವಾಗಿ, ಅಷ್ಟೇ ಸರಳವಾಗಿ ನಿರೂಪಿಸಿದ್ದೀರಿ. ಸಾಮಾನ್ಯ ಪತ್ತೇದಾರಿಯೋ, ಅಳುಬುರುಕ, ಅಗಲಿಕೆಯ, ಆಲಾಪವಾಗಿಬಿಡಬಹುದಾಗಿದ್ದ ಕಥೆಯನ್ನು ನವಿರಾಗಿ ನೋವನ್ನು ಸಂಕಟವಾಗಿಸದೆ ನೀಡಿದ್ದೀರಿ. ಅಭಿನಂದನೆಗಳು. ಅಲಕ ತೀರ್ಥಹಳ್ಳಿ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter