ಅನೇಕ ದಿನಗಳ ನಂತರ ಒಬ್ಬಳೇ ನಿಂತಿದ್ದೆ ಬಹುತೇಕ ಬೇಸರಗಳ ಸುತ್ತ ಈ ಕಡಲತಡಿಯಲ್ಲಿ ಅಲೆ ಅಲೆಗಳು ಹಾರಾಡುತ್ತಿವೆಯೋ ಕಿರುಚಾಡುತ್ತಿವೆಯೋ ಅರಿಯದೇ ನಿರುಕಿಸುತ್ತಿದ್ದೆ! ಅಡಿಗೆ ತಟ್ಟಿ ಮುಟ್ಟಿ ಮನದ ಮಣಭಾರವಿಳಿಸಲು ಮೊರೆಯುತ್ತಿತ್ತು ತೆರೆಯ ಪ್ರೀತಿಗೆ ಮಣಿದೆ ತೆರೆದುಕೊಂಡೆ ! ಕಡಲೊಡಲ ತೆಕ್ಕೆಯಲಿ ನನ್ನೊಡಲ ಬೆಂಕಿ ಹನಿ ಹನಿಯಾಗಿ ಬಸಿದು ಹಳೆಯ ಪ್ರವಾಹಕ್ಕೆ ನೋಟ ಮಂಜಾಯ್ತು ಅರೇ! ನನ್ನಂತೆ ಇವಳು ಉಕ್ಕುವದ ಕಂಡು ದಿಗಿಲಾದೆ ಕಣ್ಣರಳಿಸಿದೆ ಅದೇ ವೇದನೆ ಅಸಹನೆ ! ಕಾಲುಗಳ ಕಸುವು ಕುಸಿದಂತೆ ಮರಳ ಮಡಿಲಲ್ಲಿ ಕೂತೆ ಶರಧಿ ಉಗ್ಗುತ್ತಿದ್ದಳು ನಾನೂ ಉಗ್ಗುತ್ತಲೇ ತೋಡಿಕೊಂಡೆ ಹಗೂರ... ಹಗೂರ... ಹಗುರಾದೆ ಕಡಲಹನಿ ಕಣ್ಣಹನಿ ಒಂದಾಗಿದ್ದು ಅರಿವೇಯಿಲ್ಲ! ಎರಡೂ ಉಪ್ಪುಪ್ಪು! ಬದುಕು ಹೀಗೆ ಆತ್ಮಸಿಂಚನಕೆ ಬರಿ ಪನ್ನೀರೇ ಸಾಲದಂತೆ ಕಣ್ಣೀರೂ ಬೇಕಂತೆ! * ವಿಭಾ ಪುರೋಹಿತ ಬೆಂಗಳೂರು
ನನ್ನಂತೆಯೇ ಇವಳು ಉಕ್ಕುವುದು !
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ವಿಭಾ ಪುರೋಹಿತ
ವಿಭಾ ಪುರೋಹಿತ
ಸ್ನಾತಕೋತ್ತರ ಪದವಿಧರೆಯಾದ ಇವರು ಕನ್ನಡ ಬೋಧಕಿಯಾಗಿ ಕಾರ್ಯ ನಿರ್ವಹಿಸುತ್ತಿರುವರು.
"ಲೋಹಕಾರ್ಯ " ಎಂಬ ತಾಂತ್ರಿಕ ಮಾಸಿಕ ಪತ್ರಿಕೆಯ ಸಂಪಾದಕೀಯ ಸಹಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ.
ಹವ್ಯಾಸ : ಕವನ ರಚನೆ ಮತ್ತು ಇಂಗ್ಲೀಷ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವುದು.
ಪ್ರಕಟಿತ ಕೃತಿಗಳು: 1. ಮಲ್ಲಿಗೆ ಮತ್ತು ಇತರ ಕವಿತೆಗಳು
2. ದೀಪಹಚ್ಚು
3 . ಕಲ್ಲೆದೆ ಬಿರಿದಾಗ
4. ಬಾಲ್ಕನಿ ಕಂಡ ಕವಿತೆಗಳು
ಕವನ ಸಂಕಲನಗಳು ಧಾರವಾಡದ "ಅವನಿರಸಿಕರಂಗ " ಪ್ರಕಾಶನದಿಂದ ಬೆಳಕು ಕಂಡಿವೆ. ಇನ್ನೂ ಎರಡು ಕೃತಿಗಳನ್ನು ಹೊರತರುವ ತಯಾರಿಯಲ್ಲಿದ್ದಾರೆ.
ಅನುವಾದ : ವೈದ್ಯಕೀಯ ಕ್ಷೇತ್ರಕ್ಕೆ ಸಂಬಧಿಸಿದ ಪಿ.ಹೆಚ್. ಡಿ ಪ್ರಬಂಧವನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಪ್ರಶಸ್ತಿಗಳು: ಮೊದಲನೆ ಕವನ ಸಂಕಲನಕ್ಕೆ "ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ.(2015 ರಲ್ಲಿ).
* 'ಕಲ್ಲೆದೆ ಬಿರಿದಾಗ ' ಕಾವ್ಯ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ " ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿ" ದೊರಕಿದೆ.(2019)
* ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ " ಕನ್ನಡ ಸೇವಾರತ್ನ " ಪ್ರಶಸ್ತಿ 2020 ರಲ್ಲಿ ಲಭಿಸಿದೆ.
* ಧಾರವಾಡದ 84ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ.
ಅನೇಕ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಪುಣೆ,ಧಾರವಾಡ ಮತ್ತು ಬೆಂಗಳೂರಿನಲ್ಲಿ ಜರುಗಿದ ಕಾವ್ಯಮೇಳದಲ್ಲಿ ಪಾಲ್ಗೊಂಡಿದ್ದಾರೆ.
ವೃತ್ತಿ ಅನುಭವ:
* 4 ವರ್ಷ ಶಿಕ್ಷಕಿಯಾಗಿ ಖಾಸಗಿ ಶಾಲೆ ಯಲ್ಲಿ ಕಾರ್ಯನಿರ್ವಹಿಸಿದ್ದಾರೆ
* ಎರಡೂವರೆ ವರ್ಷ ಹಾಸನ ಆಕಾಶವಾಣಿ F.M. ಕೇಂದ್ರದಲ್ಲಿ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
* ಬೆಂಗಳೂರು ದೂರದರ್ಶನ ಚಂದನವಾಹಿನಿಯಲ್ಲಿ ವಾರ್ತಾ ವಾಚಕಿಯಾಗಿ ಕೆಲಸ ಮಾಡಿದ ಅನುಭವವಿದೆ.
All Posts