ಬಾವಲಿಗಳ ನಗರ – ಆಸ್ಟಿನ್ ಟಿ.ಎಕ್ಸ್

ಆಂಗ್ಲ ಮೂಲ : ಎಸ್. ಸುಂದರ್ ರಾಜನ್
ಅನುವಾದ : ಡಾ. ಮಾಧವಿ ಎಸ್. ಭಂಡಾರಿ.
45 ವರ್ಷಗಳ ಬಳಿಕ ಅಮೇರಿಕಾದ ಆಸ್ಟಿನ್ ನಲ್ಲಿ ನನ್ನ ಶಾಲಾ ದಿನಗಳ ಸಹಪಾಠಿಗಳನ್ನು ಕಾಣುವ ಸುಸಂದರ್ಭ ಒದಗಿ ಬಂದಿತ್ತು. ಅವರ ಭೇಟಿಯಿಂದಾಗಿ ಶಾಲಾ ಜೀವನದ ಹಲವು ನೆನಪುಗಳು ಹಸಿರಾದವು. ಸಂಜೆ ಹೊತ್ತು ನಾವೆಲ್ಲ ಒಟ್ಟಿಗೆ ಸೇರಿ ‘ಲೇಡಿ ಬರ್ಡ್ ಲೇಕ್’ನ ಸುತ್ತ ಹರಟುತ್ತ ತಿರುಗಾಡುವುದೆಂದು ತೀರ್ಮಾನಿಸಿದೆವು. ಅಲ್ಲಿಂದ ಹಿಂದಿರುಗುವ ಹೊತ್ತಲ್ಲಿ ಸರೋವರದ ದಡದಲ್ಲಿ ಹಲವರು ಗುಂಪುಗೂಡಿ ನಿಂತಿರುವುದನ್ನು ಕಂಡು ನನಗೆ ಆಶ್ಚರ್ಯವಾಯಿತು. ಕೊಲೆರಾಡೋ ನದಿಯ ಸೇತುವೆಯ ಮೇಲೆ ಬಹುದೊಡ್ಡ ಜನಜಾತ್ರೆಯೇ ನೆರೆದಿತ್ತು. ಕೌತುಕವನ್ನು ಕಣ್ಣಲ್ಲಿ ತುಂಬಿಕೊಂಡು ಕೆಳಗಡೆ ಹರಿವ ನೀರನ್ನು ನೋಡುತ್ತಿದ್ದರು. ನನ್ನ ಕಣ್ಣುಗಳಲ್ಲೂ ಕೌತುಕ ತುಂಬಿಕೊಂಡಿದ್ದವು. ಅದನ್ನು ಕಂಡು ಆಸ್ಟಿನ್ ನಿವಾಸಿ ನನ್ನ ಮಿತ್ರ ಹೇಳಿದ, “ಮಾರ್ಚ್-ಅಕ್ಟೋಬರ್ ನಡುವೆ ಸಂಜೆ ಹೊತ್ತು ಇಲ್ಲಿ ಜನಜಾತ್ರೆಯೇ ಸೇರುತ್ತದೆ. ಸೂರ್ಯಾಸ್ತದ ಹೊತ್ತು ಬಾವಲಿಗಳು ತಮ್ಮ ವಾಸಸ್ಥಾನದಿಂದ ಹೊರಗಡೆ ಬರುವುದನ್ನು ನೋಡಲು ಇಲ್ಲಿಯ ಜನರು ತಂಡೋಪತಂಡವಾಗಿ ಬರುತ್ತಾರೆ. ಈ ವಿಸ್ಮಯಕಾರಿ ಸ್ಥಳ ಇಂದಿಗೂ ಅದೆಷ್ಟೋ ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಹೆಚ್ಚಿನ ದೇಶಗಳಲ್ಲಿಯ ಜನರು ಬಾವಲಿಗಳನ್ನು ಅಪಶಕುನವೆಂದು ಪರಿಗಣಿಸುತ್ತಾರೆ. ಸಾವು, ಪುನರ್ಜನ್ಮ, ವಿಪತ್ತು ಎಂಬಿತ್ಯಾದಿಯಾಗಿ ಪರಿಗಣಿಸುತ್ತಾರೆ. ಕೇವಲ ಚೀನಿಯರಷ್ಟೇ ಬಾವಲಿಗಳನ್ನು ಪೂಜಿಸುತ್ತಾರೆ..” ನಾನು ಬೆರಗುಗಣ್ಣುಗಳಿಂದ ಅವನತ್ತ ನೋಡುತ್ತಿರುವುದನ್ನು ಕಂಡ ನನ್ನ ಆಸ್ಟಿನ್ ಮಿತ್ರ ನನಗೆ ಆಸ್ಟಿನ್ ನಲ್ಲಿಯ ಬಾವಲಿಗಳ ಇತಿಹಾಸದ ಕುರಿತಾಗಿ ಹೇಳತೊಡಗಿದ, “ಈ ಬಾವಲಿಗಳು ಮೆಕ್ಸಿಕೋದಿಂದ ಇಲ್ಲಿಗೆ ಬರುತ್ತವೆ. ಇವುಗಳಿಗೆ ಬಾಲವಿರುವುದಿಲ್ಲ. ನಗರದ ಬಾವಲಿಗಳಲ್ಲಿ ಇವುಗಳೇ ಬಹುಸಂಖ್ಯಾತರು. ಇವು ಪ್ರತಿವರ್ಷ ಬೇಸಿಗೆಯಲ್ಲಿ ಮಾರ್ಚ್-ಅಕ್ಟೋಬರ್ ನಡುವೆ ಮೆಕ್ಸಿಕೋದಿಂದ ಯು.ಎಸ್.ಗೆ ಬರುತ್ತವೆ. ಯು.ಎಸ್ ನಲ್ಲಿ ಶೀತಕಾಲ ಆರಂಭವಾಗುತ್ತಿದ್ದಂತೆ ಮೆಕ್ಸಿಕೋಗೆ ಮರಳುತ್ತವೆ. ಕಾಂಗ್ರೆಸ್ ಅವೆನ್ಯೂ ಸೇತುವೆಯ ಹೆಸರಿನಿಂದ ಪ್ರಸಿದ್ಧವಾಗಿರುವ ಆಸ್ಟಿನ್ ನ ಅತ್ಯಂತ ಹಳೆಯ ಸೇತುವೆ ‘ಲೇಡಿ ಬರ್ಡ್ ಲೇಕ್’ನ್ನು ದಾಟಿಹೋಗುತ್ತದೆ. ಟೆಕ್ಸಾಸ್ನ ನಲವತ್ತಾರನೆಯ ಗವರ್ನರ್ ಹೆಸರಿನಲ್ಲಿ 16, ನವೆಂಬರ್ 2006ರಂದು ಎನ್.ಡಬ್ಲೂ. ರಿಚರ್ಡ್ಸ್ ಕಾಂಗ್ರೆಸ್ ಅವೆನ್ಯೂ ಸೇತುವೆಯೆಂದು ಮರುನಾಮಕರಣ ಮಾಡಲಾಗಿದೆ. ಇದನ್ನು ಸೌತ್ ಕಾಂಗ್ರೆಸ್ ಅವೆನ್ಯೂ ಬ್ರಿಜ್ ಎಂದೂ ಕರೆಯುತ್ತಾರೆ.
1980ರಲ್ಲಿ ಸೇತುವೆಯನ್ನು ದುರಸ್ತಿ ಮಾಡಲಾಯಿತು. ಆಗ ಬಾವಲಿಗಳು ನವನಿರ್ಮಿತ ಸೇತುವೆಯ ಅಡಿಭಾಗದಲ್ಲಿ ಗಚ್ಚುಗಳ ನಡುವೆ ತಮ್ಮ ವಾಸಸ್ಥಾನಕ್ಕಾಗಿ ಸ್ಥಳವನ್ನು ಆಯ್ಕೆಮಾಡಿಕೊಂಡವು. ಕಾಂಕ್ರೀಟ್ ಘಟಕ ಜೋಡಣೆಗಳ ನಡುವಿನ ಖಾಲಿ ಜಾಗದಲ್ಲಿರುವ ರಸ್ತೆ ಡೆಕ್ ಗಳು ಅವುಗಳಿಗೆ ಕೂರಲು ಸೂಕ್ತವಾದ ಸ್ಥಳ ಒದಗಿಸುತ್ತವೆ. ಬಲುಬೇಗ ಇದು ಮೆಕ್ಸಿಕನ್ ನ ಪ್ರವಾಸಿ ಬಾಲರಹಿತ ಬಾವಲಿಗಳಿಗೆ ಜಗತ್ತಿನಲ್ಲೇ ಅತ್ಯಂತ ವಿಶಾಲವಾದ ನಗರೀಯ ಬಾವಲಿಗಳ ಕಾಲೋನಿಗೆ ನೆಲೆಯಾಗಿಬಿಟ್ಟಿತು.
ಆರಂಭದಲ್ಲಿ ಅಲ್ಲಿಯ ನಾಗರಿಕರು ಇದನ್ನು ವಿರೋಧಿಸಿದರು ಜೊತೆಗೆ ಬಾವಲಿಗಳನ್ನು ತೆರವುಗೊಳಿಸುವುದಕ್ಕೆ ಸರಕಾರಕ್ಕೂ ಈ ಕುರಿತಾಗಿ ಮನವಿ ಸಲ್ಲಿಸಿದರು. 1986ರಲ್ಲಿ ಬಾವಲಿಗಳು ಅಪಶಕುನವೆಂಬ ಅಭಿಯಾನ ವ್ಯಾಪಕವಾಗಿ ಪ್ರಚಾರಪಡೆಯಿತು. ಆ ದೊಡ್ಡ ಕಾಲೋನಿಯಲ್ಲಿ ವಿನಾಶದ ಅಪಾಯ ಗೋಚರಿಸತೊಡಗಿತು. ಆದರೆ ಶೀಘ್ರದಲ್ಲೇ ಅಲ್ಲಿಯ ನಿವಾಸಿಗಳು ಈ ಋತುಮಾನದ ಅತಿಥಿಗಳನ್ನು ಒಪ್ಪಿಕೊಂಡರು ಜೊತೆಗೆ ಸ್ಥಳೀಯರು ಈ ಸಸ್ತನಿಗಳನ್ನು ತಮ್ಮ ನೆರೆಮನೆಯವರು ಎಂಬಂತೆ ಅಪ್ಪಿಕೊಂಡರು. ಯಾವ ಪ್ರದೇಶದಲ್ಲಿ ಮೊದಮೊದಲು ಈ ಬಾವಲಿಗಳನ್ನು ವಿಚಿತ್ರ ಪ್ರಾಣಿಗಳೆಂದು ತಿಳಿಯುತ್ತಿದ್ದರೋ, ಆದರೀಗ ಅವುಗಳು ‘ಕೀಪಿಂಗ್ ಇಟ್ ವೀಯರ್ಡ್’ ಎಂಬಂತೆ ಆ ಪ್ರದೇಶದ ಗುರುತು ಮತ್ತು ಹೆಮ್ಮೆಯ ಸಂಕೇತವಾಗಿದೆ.
ಈ ರೂಪಾಂತರಕ್ಕೆ ಕಾರಣಪುರುಷ ‘ಬ್ಯಾಟ್ ಕನ್ಸರ್ವೇಶನ್ ಇಂಟರ್ನ್ಯಾಷನಲ್ ನ ಸಂಸ್ಥಾಪಕ ಮರ್ಲಿನ್ ಟಟ್ಟಲ್ ಎಂಬವವರು. ಅವರು ಆಸ್ಟಿನ್ ಗೆ ಸ್ಥಳಾಂತರಗೊಂಡ ನಂತರ, ಆಸ್ಟಿನ್ ಸಮುದಾಯದ ನಾಯಕರ ಒಕ್ಕೂಟ, ಸಾರ್ವಜನಿಕ ಆರೋಗ್ಯ ಹಾಗೂ ಸುದ್ದಿ ಮಾಧ್ಯಮದ ಸಹಕಾರದಿಂದ ಶೈಕ್ಷಣಿಕ ಪ್ರಸಾರಕಾರ್ಯವನ್ನು ಕೈಗೊಂಡರು. ಇದರಿಂದಾಗಿ ಬಾವಲಿಗಳ ಬಗೆಗೆ ಜನರಿಗಿದ್ದ ತಪ್ಪು ಕಲ್ಪನೆಗಳು ಹಿಮ್ಮೆಟ್ಟುವುದಕ್ಕೆ ಸಾಧ್ಯವಾಯಿತು. ತದನಂತರ ಅವರು ಬಾವಲಿಗಳಿರುವ ಸೇತುವೆಯ ಕಾಲೋನಿಯನ್ನು ಆಸ್ಟಿನ್ ಗಾಗಿ ಅತ್ಯಂತ ಲಾಭದಾಯಕ ಪ್ರವಾಸಿ-ಕೇಂದ್ರದ ರೂಪದಲ್ಲಿ ಬದಲಾಯಿಸಿದರು.
ಪ್ರತಿ ಬೇಸಿಗೆಯಲ್ಲಿ ಸರಾಸರಿ 1.5 ಮಿಲಿಯ ಬಾವಲಿಗಳು ಈ ಪ್ರದೇಶವನ್ನು ತಮ್ಮ ವಸತಿಯನ್ನಾಗಿಸಿಕೊಳ್ಳುತ್ತವೆ. ಇದು ಅವುಗಳ ಮಟ್ಟಿಗೆ ಪ್ರಸೂತಿ ಕಾಲೋನಿಯಾಗಿಬಿಟ್ಟಿದೆ. ಗರ್ಭಿಣಿ ಬಾವಲಿಗಳು ವಸಂತಕಾಲದಲ್ಲಿ ಇಲ್ಲಿ ಬಂದು ನೆಲೆಸುತ್ತವೆ. ಗ್ರೀಷ್ಮದಿಂದ ಶಿಶಿರದ ವರೆಗೆ ಅಲ್ಲಿಯೇ ಇರುತ್ತವೆ. ಮರಿ ಹೊರ ಬರುವ ತನಕ ಗಂಡು ಬಾವಲಿಗಳು ಸೇತುವೆಯಿಂದ ದೂರವೇ ಇರುತ್ತವೆ. ಹೆಣ್ಣು ಬಾವಲಿಗಳು ಒಂದು ಪ್ರಸವದಲ್ಲಿ ಒಂದೇ ಮರಿಯನ್ನಿಡುತ್ತವೆ. ಹುಟ್ಟುವ ಮರಿಗಳು ಐದು ವಾರಗಳ ಬಳಿಕ ಹಾರುವುದನ್ನು ಕಲಿಯುತ್ತವೆ. ತಾವಾಗಿಯೇ ಹುಳು-ಹುಪ್ಪಡಿಗಳನ್ನು ಹುಡುಕಿ ತಿನ್ನುತ್ತವೆ. ಒಂದು ಬಾರಿಗೆ ಸಾವಿರಾರು ಮರಿಗಳು ಹುಟ್ಟುತ್ತವೆಯಾದರೂ ತಾಯಿ ಬಾವಲಿ ಸುಲಭವಾಗಿ ತನ್ನ ಮರಿಯನ್ನು ಗುರುತಿಸುತ್ತದೆ. ಸೂರ್ಯಾಸ್ತದ ನಂತರ 7.30 ರಿಂದ 9.45ರ ನಡುವೆ ಈ ಬಾವಲಿಗಳು ತಮ್ಮ ವಾಸಸ್ಥಾನದಿಂದ ಹೊರಗಡೆ ಬರುತ್ತವೆ. ಹೀಗೆ ಹೊರಗೆ ಬರುವುದಕ್ಕೆ 45 ನಿಮಿಷ ಬೇಕಾಗುತ್ತದೆ. ಅವುಗಳು ಆಗಸದಲ್ಲಿ ಹಾರಾಡುವಾಗಲಂತೂ ದಟ್ಟ ಕಾರ್ಮೋಡವೇ ತುಂಬಿಕೊಂಡಂತೆ ಭಾಸವಾಗುತ್ತದೆ. ಹೀಗೆ ಹಾರುತ್ತ ಅವು ಲೇಡಿ ಬರ್ಡ್ ಲೇಕ್ ನ ಇನ್ನೊಂದು ದಡಕ್ಕೆ ಹೋಗುತ್ತವೆ. ಅವುಗಳು ಹುಳು-ಹುಪ್ಪಡಿಗಳಲ್ಲದೆ, ಪತಂಗ, ಚಿಟ್ಟೆ ಇರುವೆಗಳನ್ನೂ ಆಹಾರಕ್ಕಾಗಿ ಬೇಟೆಯಾಡುತ್ತವೆ. ಪ್ರತಿರಾತ್ರಿ ಅವುಗಳು 30,000 ಪೌಂಡ್ ನಷ್ಟು ಕೀಟಗಳನ್ನು ಕಬಳಿಸುತ್ತವೆ. ಅಲ್ಲದೆ ಇವುಗಳು ದಕ್ಷ ಪರಾಗಸ್ಪರ್ಶಕಗಳಾಗಿವೆ. ಇಲ್ಲಿರುವ 90,000 ನಿವಾಸಿಗಳಿಗಿಂತಲೂ ಈ ಪ್ರವಾಸಿ ಬಾವಲಿಗಳ ಸಂಖ್ಯೆ ಅಧಿಕವಾಗಿದೆ. ಅವುಗಳು ಹೆಚ್ಚು-ಕಡಿಮೆ 30,000 ಸ್ಥಳೀಯರ ಜತೆಗೆ 10000 ಪ್ರವಾಸಿಗರನ್ನು ತಮ್ಮೆಡೆಗೆ ಆಕರ್ಷಿಸುತ್ತವೆ. ಇದರಿಂದ ಸುಮಾರು ಎಂಟು ಮಿಲಿಯ ಡಾಲರಿನಷ್ಟು ಆದಾಯವಾಗುತ್ತದೆ. ಇದು ಅಲ್ಲಿಯ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ಸೇತುವೆಯ ಮೇಲೆ ವಿಪರೀತ ಜನಜಂಗುಳಿಯಿಂದಾಗಿ ಪ್ಯಾರಾಪೆಟ್ ಗೋಡೆಯ ಬಳಿ ಸ್ಥಳಾವಕಾಶಕ್ಕಾಗಿ ನೂಕುನುಗ್ಗಲು ಹೆಚ್ಚಾಗುತ್ತಿತ್ತು. ನದಿಯ ದಡದ ಮೇಲಂತೂ ಹಲವರು ಜಮಖಾನೆ ಹಾಸಿಕೊಂಡಿದ್ದರು, ಇನ್ನು ಹಲವರು ನಿಂತುಕೊಂಡಿದ್ದರು. ಹೆಚ್ಚಿನವರು ತಮ್ಮ ಕ್ಯಾಮರಾ ಹಾಗೂ ವಿಡಿಯೋ ಸಿದ್ಧಪಡಿಸಿಕೊಂಡಿದ್ದರು. ಎಲ್ಲರೂ ತಯಾರಾಗಿ ನಿಂತಿದ್ದರಾದರೂ ಏನೋ ಒಂದು ರೀತಿಯ ಕಾತರ-ಕಳವಳದೊಂದಿಗೆ ಆಸೆಗಣ್ಣುಗಳಿಂದ ಕೆಳಗಡೆ ತಗ್ಗಿ-ಬಗ್ಗಿ ನೋಡುತ್ತಿದ್ದರು. ನಾವೂ ಅಲ್ಲಿಗೆ ಹೋದೆವು. ಒಂದೊಳ್ಳೆ ಪ್ರಶಸ್ತವಾದ ಸ್ಥಳವನ್ನು ಹುಡುಕಿಕೊಂಡು ಅತ್ಯುತ್ಸಾಹದಿಂದ ಅಲ್ಲಿಯ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಸಿದ್ಧರಾದೆವು. ರಾಯಲ್ ಬಟ್ಲರ್ ಹ್ಯಾಕ್ ಮೇಲೆ ಸೇತುವೆಗೆ ಲಗತ್ತಾಗಿದ್ದ ಸ್ಟೇಟ್ಸ್ ಮನ್ ಬ್ಯಾಟ್ ಆಬ್ಸರ್ ವೇಶನ್ ಸೆಂಟರ್ ಮತ್ತು ಲೇಡಿಬರ್ಡ್ ಲೇಕ್ ನಲ್ಲಿ ಬಾಯಿಕ್ ಟ್ರೇಲ್ ಅಥವಾ ದೋಣಿ ಪ್ರವಾಸದ ಮೂಲಕವೂ ಈ ದೃಶ್ಯವನ್ನು ವೀಕ್ಷಿಸುವ ಸುರಕ್ಷಿತ ಅವಕಾಶವಿದೆ.
ಎಂಟು ಗಂಟೆಯ ಹೊತ್ತಿಗೆ ನಿಧಾನವಾಗಿ ಸರಪರ ಸದ್ದು ಕೇಳಿಸುತ್ತಿದ್ದಂತೆ ನಾವೆಲ್ಲ ಜಾಗ್ರತರಾದೆವು. ಬಾವಲಿಗಳ ಪುಟ್ಟ ಹಿಂಡು ಮೊದಲು ಹೊರಬಿತ್ತು. ನೋಡುತ್ತಿದ್ದಂತೆ ಮೋಡಗಳ ಸಾಲುಗಳೋಪಾದಿಯಲ್ಲಿ ಅವುಗಳು ತಾವು ವಾಸಿಸುತ್ತಿದ್ದ ಬಿರುಕುಗಳಿಂದ ಹೊರಬಿದ್ದವು. ಸುತ್ತೆಲ್ಲ ಸಂತಸದ ಕಟ್ಟೆ ಒಡೆದಂತಹ ಸ್ಥಿತಿ. ಕ್ಯಾಮರಾ ಹಾಗೂ ವಿಡಿಯೋಗಳಿಗಂತೂ ಪುರುಸೊತ್ತೇ ಇಲ್ಲದ ಪರಿಸ್ಥಿತಿ. ನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಆ ಬಾವಲಿಗಳೆಲ್ಲ ಕಾರ್ಮೋಡಗಳಂತೆ ಆಗಸದ ತುಂಬೆಲ್ಲ ಪಸರಿಸಿದವು. ನಾನೂ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದೆನಾದರೂ ಹೆಚ್ಚಿನ ಸಮಯ ಅವುಗಳ ಚಲನವಲನಗಳನ್ನು ನೋಡುವುದರಲ್ಲೇ ಕಳೆದೆ. ಬಾವಲಿಗಳು ಒಂದು ಸರಿದು ಇನ್ನೊಂದಕ್ಕೆ ಸ್ಥಳಾವಕಾಶ ಮಾಡಿಕೊಡುವ, ಸಮಾನ ಗತಿಯಲ್ಲಿ ಜೊತೆ-ಜೊತೆಯಾಗಿ ಹಾರುವ ಭಂಗಿಯನ್ನು ನೋಡುತ್ತ ಮೂಕವಿಸ್ಮಿತನಾಗಿ ನಿಂತುಬಿಟ್ಟೆ. ಮನಸ್ಸು ಹಿಮ್ಮುಖವಾಗಿ ಯೋಚಿಸಲಾರಂಭಿಸಿತು. ಕೊರೋನಾ ಕಾಲಘಟ್ಟದಲ್ಲಿ ಸುರಕ್ಷಿತವಾದ ಅಂತರ ಕಾಪಾಡಿ ಕೊಳ್ಳುವಂತೆ ಸರಕಾರ ನಮ್ಮಿಂದ ನಿರೀಕ್ಷೆ ಇಟ್ಟುಕೊಂಡಿತ್ತಷ್ಟೆ, ಇದರಲ್ಲಿ ನಮ್ಮಲ್ಲಿಯ ಅದೆಷ್ಟು ಜನರು ಯಶಸ್ವಿಯಾಗಿದ್ದಾರೆ?
ಸೇತುವೆಯ ಮೇಲೆ ನಿಂತವರಿಗೆ ಬಾವಲಿಗಳೆಲ್ಲ ಸಂಪೂರ್ಣವಾಗಿ ಮೇಲೆ ಬಂದಮೇಲಷ್ಟೆ ನೋಡುವುದು ಸಾಧ್ಯವಾಗುತ್ತಿತ್ತು. ಆದರೆ ಅವರಿಗಾಗುವ ಲಾಭವೆಂದರೆ, ಅವುಗಳ ಏರುವಿಕೆಯನ್ನು ಹತ್ತಿರದಿಂದ ನೋಡುವುದು ಸಾಧ್ಯವಾಗುತ್ತಿತ್ತು. ಕೆಳಗಡೆ ನೆಲದಮೇಲೆ ನಿಂತವರು ಬಾವಲಿಗಳು ತಮ್ಮ ವಾಸಸ್ಥಾನದಿಂದ ಹೊರಗಡೆ ಬರುವಾಗಲೇ ನೋಡುವುದು ಸಾಧ್ಯವಿತ್ತು. ಆದರೆ ಹತ್ತಿರದಿಂದಲ್ಲ, ದೂರದಿಂದಷ್ಟೇ ನೋಡಬಹುದಾಗಿತ್ತು. ಈ ಕ್ರಿಯಾಕಲಾಪ ಎಷ್ಟೊಂದು ಜನಪ್ರಿಯವಾಯಿತೆಂದರೆ, ಪ್ರತಿವರ್ಷ ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಆಸ್ಟಿನ್ ಬ್ಯಾಟ್ ಫೆಸ್ಟ್ ಎಂಬ ವಿನೂತನ ಕಾರ್ಯಕ್ರಮವನ್ನು ಸಪ್ತಾಹ ಪೂರ್ತಿ ನಡೆಸಲಾಗುತ್ತದೆ. ತನ್ಮೂಲಕ ಬಾವಲಿಗಳನ್ನು ಅನಧಿಕೃತವಾಗಿ ಶುಭಕಾರಿಯೆಂಬಂತೆ ನೋಡಲಾಗುತ್ತದೆ. ನನಗೆ ತುರ್ತಾಗಿ ಹಿಂದಿರುಗಲೇ ಬೇಕಾದ ಅನಿವಾರ್ಯತೆಯಿತ್ತು. ಹಾಗಾಗಿ ಬ್ಯಾಟ್ ಫೆಸ್ಟ್ ನೋಡುವ ಭಾಗ್ಯ ನನಗಿರಲಿಲ್ಲ.
ಟೆಕ್ಸಾಸ್ ಸಾರಿಗೆ ಇಲಾಖೆಯು ಬಿ.ಸಿ.ಐ.ಯ ಸಹಯೋಗದೊಂದಿಗೆ ಬಾವಲಿಗಳು ವಾಸಿಸಲು ಸರಿಹೊಂದುವಂತೆ ಸೇತುವೆ ನಿರ್ಮಾಣದ ಅಧ್ಯಯನ ಮಾಡುವುದಕ್ಕಾಗಿ ‘ಬಾವಲಿಗಳು ಮತ್ತು ಸೇತುವೆಗಳು’ ಎಂಬ ಅಧ್ಯಯನ ನಡೆಸಿತು. ಆಸ್ಟಿನ್ ನಲ್ಲಿ ಬಾವಲಿಗಳು ಅಲ್ಲಿಯ ಹೆಮ್ಮೆ ಮತ್ತು ಗುರುತಿನ ಪ್ರತೀಕವಾಗಿಬಿಟ್ಟಿವೆ. ಉದಾಹರಣೆಗಾಗಿ ಹೇಳುವುದಾದರೆ ಆಸ್ಟಿನ್ ಐಸ್ ಬ್ಯಾಟ್ಸ್ ಮೈನರ್ ಲೀಗ್ ಹಾಕಿ ತಂಡವು ಸಂಕೇತದ ರೂಪದಲ್ಲಿ ಬಾವಲಿಗಳನ್ನು ಅಳವಡಿಸಿಕೊಂಡಿದೆ. ಕಿಮ್ಯಾ ಡಾಸನ್ ಮತ್ತು ರಾಪರ್ ಈಸೋಪ್ ರಿಂದ ಸಿದ್ಧವಾದ ‘ಬ್ಯಾಟ್ಸ್ ಸಾಂಗ್’ ಈ ಬಾವಲಿಗಳಿಂದಲೇ ಪ್ರೇರಣೆಗೊಂಡಿದ್ದು.
ಜನಸಂದಣಿ ಕರಗುತ್ತಿದ್ದಂತೆ ನಾವೂ ಸೇತುವೆಯಿಂದ ಹೊರಗಡೆ ಬಂದೆವು. ಆದರೆ ನಮ್ಮ ನೋಟ ಮಾತ್ರ ಆಗಸದತ್ತವೇ ನೆಟ್ಟಿತ್ತು. ಕರಿಮುಗಿಲ ಸಾಲುಗಳಂತಿದ್ದ ಹಾರುವ ಬಾವಲಿಗಳನ್ನು ತದೇಕಚಿತ್ತರಾಗಿ ನೋಡುತ್ತಿದ್ದೆವು. ಹಾಗೆ ನೋಡಿದರೆ ಕತ್ತಲು ದಟ್ಟವಾಗುತ್ತ ಸಾಗಿತ್ತು ಆದರೂ ದೂರದ ವರೆಗೆ ಬಾವಲಿಗಳನ್ನು ಬರಿಗಣ್ಣುಗಳಿಂದ ನೋಡುವುದು ಸಾಧ್ಯವಿತ್ತು. ಇದೊಂದು ಕಾಲ್ಪನಿಕ ಉಡ್ಡಯನದಂತೆ ಭಾಸವಾಗುತ್ತಿತ್ತು.
ಬಾವಲಿಗಳು ಪ್ರತಿ ಮುಂಜಾನೆ ಸೂರ್ಯೋದಯಕ್ಕಿಂತ 30 ನಿಮಿಷ ಮುಂಚಿತವಾಗಿ ಬರುತ್ತವೆ. ಮರುದಿನ ಅವುಗಳನ್ನು ಸ್ವಾಗತಿಸಲು ನಾವು ಅಲ್ಲಿಗೆ ಬರುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಎಂದು ಎಣಿಸಿದೆವು. ಹೇಗೆ ಈ ಬಾವಲಿಗಳು ಮೊದಲು ಗಟ್ಟಿಮುಟ್ಟಾದ ವಾಸ್ತವ್ಯವನ್ನು ಹುಡುಕಿಕೊಂಡವು. ಅವುಗಳು ಹೇಗೆ ಪ್ರತಿವರ್ಷವೂ ಅದೇ ಸ್ಥಳಕ್ಕೆ ಬಂದು ಬೀಡು ಬಿಡುತ್ತವೆ. ಇದನ್ನು ಯೋಚಿಸಿಯೇ ನನಗೆ ಆಶ್ಚರ್ಯವಾಯಿತು. ಅದಕ್ಕಿಂತ ಹೆಚ್ಚು ಆಶ್ಚರ್ಯವಾದದದ್ದು, ಅವು ರಾತ್ರಿಯ ಹಾರಾಟದ ಬಳಿಕ ನೇರವಾಗಿ ಹೇಗೆ ತಮ್ಮದೇ ಕುಟುಂಬ, ತಮ್ಮದೇ ಮನೆಗೆ ಹೊರಳಿ ಬರುತ್ತವೆ. ನಾವು ಮನುಷ್ಯರು ಜಿ.ಪಿ.ಎಸ್.ನಂತಹ ತಾಂತ್ರಿಕತೆಯನ್ನು ಹೊಂದಿಯೂ ನಮ್ಮ ಗಂತವ್ಯ ತಲುಪಲು ಹರಸಾಹಸ ಪಡುತ್ತೇವೆ. ಅವುಗಳ ಸಮಯ ಪ್ರಜ್ಞೆ ದಂಗು ಬಡಿಸುತ್ತದೆ. ಮನುಷ್ಯರಿಗೆ ಹೋಲಿಸಿದರೆ ಅವುಗಳು ಎಷ್ಟೋಪಾಲು ಸ್ಮಾರ್ಟ್ ಆಗಿವೆ.
ನಾನಿಲ್ಲಿ ಇನ್ನೂ ಒಂದು ವಿಷಯವನ್ನು ಜೋಡಿಸಬಯಸುತ್ತೇನೆ, ಕೆಲವರ ಸಂಘಟಿತ ಪ್ರಯತ್ನದಿಂದಾಗಿ ಮುಂಬರುವ ಪೀಳಿಗೆಗೆ ಚಿತ್ರವಾಗುಳಿಯಬಲ್ಲ, ಕಣ್ಮರೆಯಾಗಬಲ್ಲ ಸಸ್ತನಿಯನ್ನು ಜಗತ್ತೇ ಅನುಸರಿಸುವಂತೆ ಮಾಡಿ ಇದನ್ನು ಪರಿಸರದ ಪ್ರದರ್ಶನದ ರೂಪದಲ್ಲಿ ಪರಿವರ್ತಿಸಲಾಗಿದೆ.

@@@@@

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter