ಬೇಕಾಗಿದ್ದಾರೆ – ‘ಕಾರ್ಯಕರ್ತರು’

” ಈ ನಾಲ್ಕೂವರೆ ವರ್ಷಗಳು ಅದು ಹೇಗೆ ಕಳೆದವೋ ಗೊತ್ತಾಗಲೇ ಇಲ್ಲ…ಕ್ಷೇತ್ರದ ವ್ಯಾಪ್ತಿಯೊಳಗೆ ದಿನಕ್ಕೊಂದು ಶಂಕು ಸ್ಥಾಪನೆ, ರಿಬ್ಬನ್ ಕಟಿಂಗ್. ಕ್ಷೇತ್ರದಲ್ಲಿ ಪ್ರತಿದಿನ (ಸ್ವಂತಕ್ಕೆ!) ಒಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುವುದು… ಗುಡಿ ಗುಂಡಾರ, ಚರ್ಚು – ಮಸೀದಿಗೆ ಭೇಟಿ ಕೊಡುವುದು… ತೊಟ್ಟಿಲು, ಮದುವೆ ಹಾಗೂ ಸತ್ತವರ ಸಮಾರಂಭಗಳಿಗೆ ಮರೆಯದೆ ಹಾಜರಾಗುವುದು…ಕಂಡ ಕಂಡ ಹುಲ್ಲುಗಾವಲಿನಲ್ಲಿ ಸಿಕ್ಕಾ ಪಟ್ಟೆ ಮೇಯುವದು… ಸ್ವಂತ ಪಕ್ಷದ ಸ್ವಜಾತಿ ಹಿಂಬಾಲಕರನ್ನು ಆಯಕಟ್ಟಿನ ಜಾಗದಲ್ಲಿ ನಾಮ ನಿರ್ದೇಶನ ಮಾಡಿ ಕೂಡಿಸುವದು…ಸಂಧರ್ಭಕ್ಕೆ ತಕ್ಕಂತೆ ಆಶ್ವಾಸನೆಗಳ ಸುರಿ ಮಳೆಯನ್ನೇ ಸುರಿಸುವುದು… ಆಗಾಗ್ಗೆ ಸಾರ್ವಜನಿಕ ಸಮಾರಂಭಗಳಲ್ಲಿ ಕಣ್ಣೀರ ಕೋಡಿ ಹರಿಸಿ ಸಿಂಪಥಿ ಗಿಟ್ಟಿಸುವದು… ‘ಬಹು ಪರಾಕ್’ ತಂಡದ ಜೊತೆಗೇ ಹೊರಗೆ ಕಾಲಿಡುವುದು… ದಿನವಿಡೀ ಎ ಸಿ ಕಾರಿನಲ್ಲಿ ಸುತ್ತಾಟ, ರಾತ್ರಿ ಹಿಂಬಾಲಕರ ‘ಗುಂಡು’ ಮೇಜಿನ ಸತ್ಕಾರದಲ್ಲಿ ಪಾಲ್ಗೊಳ್ಳುವುದು
ಗನ್ ಮ್ಯಾನ್ ಇಲ್ಲದೆ ಹೊರಗೆ ‘ಹೆಜ್ಜೆ ಗುರುತು’ ಮೂಡಿಸಲು ಸಾಧ್ಯವಾಗದಿರುವದು… ಸ್ವರ್ಗ ಲೋಕದ ಇಂದ್ರನ ವೈಭವವನ್ನು ಭೂ ಲೋಕದಲ್ಲಿ ನೆನಪಿಸುವಂತಹ ಭವ್ಯ ನಿವಾಸದಲ್ಲಿ ವಾಸಿಸುವ ಭಾಗ್ಯ ಪಡೆದಿರುವುದು…ವಂಧಿ ಮಾಗದರ ಮಧ್ಯೆ ದಿನ ನಿತ್ಯ ರಾಜನಂತೆ ಮೆರೆಯುವುದು… ಒಟ್ಟಿನಲ್ಲಿ ಹಗಲೂ – ರಾತ್ರಿ ಸಾರ್ವಜನಿಕರ ಸೇವೆಗೆ ಇಡೀ ಜೀವನವನ್ನು ಮೀಸಲಿಟ್ಟು ಬಿಡುವು ಸಿಕ್ಕಾಗ ಮಾತ್ರ ಉಸಿರಾಡುವುದು…”

ಇವು ಎಲ್ಲವೂ ಒಮ್ಮೆಲೇ ಧೀಡಿರೆಂದು ನೆನಪಾಗಿ ಶಾಸಕ ಗುಂಡಣ್ಣನ ಮನಸು ವ್ಯಾಕುಲಗೊಂಡಿತು. ಐದು ವರ್ಷದ ರಸಭರಿತ, ಸ್ವಾದಿಷ್ಟ ಐಸ್ ಕ್ರೀಮ್ ಕರಗುತ್ತಾ ಕರಗುತ್ತಾ ಈಗ ಬರೀ ಕಡ್ಡಿಯೊಂದೇ ಕಣ್ಣಿಗೆ ಕಾಣತೊಡಗಿತು! ಮತ್ತೊಮ್ಮೆ ಇಂತಹ ಐಸ್ ಕ್ರೀಮ್ ಸಂಪಾದಿಸಲು ಎಷ್ಟು ಕಷ್ಟ ಪಡಬೇಕು… ಅದೆಷ್ಟು ಹಣವನ್ನು ನೀರಿನಂತೆ ಖರ್ಚು ಮಾಡಬೇಕೋ ಎಂದು ದಿಗಿಲಿಗೆ ಬಿದ್ದ. ಕಣ್ಣು ಮುಚ್ಚಿದರೆ ಸಾಕು ಬರೀ ‘ಈವಿಎಂ’ ಯಂತ್ರಗಳೇ ಕಾಣುವವು…ಮತಗಳ ತೋರಣಗಳು ಎಷ್ಟು ಬೇಡವೆಂದರೂ ಕಣ್ಣುಗಳ ಮುಂದೆ ಸುಳಿದಾಡುವವು… ಅಧಿಕಾರ ಎನ್ನುವುದು ‘ಡ್ರಗ್’ ಅಮಲಿನಂತೆ…ಮತ್ತೆ ಮತ್ತೆ ಅದೇ ಬೇಕೆನ್ನುವ ‘ಹುಚ್ಚು ಖೋಡಿ’ ಮನಸು ಸುಮ್ಮನಿದ್ದೀತೆ… ಅದಕ್ಕೆ ಪಾಪ ಗುಂಡಣ್ಣ ಹೊರತೇನು?… ಬಿಲ್ ಕುಲ್ ಇಲ್ಲ… ಎಷ್ಟೆಂದರೂ ಉಪ್ಪು, ಹುಳಿ, ಖಾರ ತುಸು ಹೆಚ್ಚು ತಿಂದ ದೇಹ ಗುಂಡಣ್ಣನದು!

ಇನ್ನು ತನ್ನ ಮನಸಿನ ಭಾರವನ್ನು, ತುಮುಲವನ್ನು ಹಂಚಿಕೊಳ್ಳಲು ಸದಾ ಸಿದ್ಧವಾಗಿರುವ ‘ಕಂಟ್ರಾಕ್ಟರ್ ನುಂಗಣ್ಣ’ ನಿಗೆ ಫೋನ್ ಮಾಡಿದ ಗುಂಡಣ್ಣ. ಆಪ್ತ ಮಿತ್ರ ಕೂಡಲೇ ಓಡೋಡಿ ಬಂದ ಅಪ ರಾತ್ರಿಯಾದರೂ. ಗೆಳೆಯ ಗುಂಡಣ್ಣನ ಬಾಡಿದ ಮುಖವನ್ನು ನೋಡಿ ಚಿಂತಾಕ್ರಾಂತನಾದ ನುಂಗಣ್ಣ “ಯಾಕ ದೋಸ್ತ… ಅಸೆಂಬ್ಲಿ ಏನು ಧಿಡೀರೆಂದು ರದ್ದು ಮಾಡೋ ಮಾಹಿತಿ ಏನಾದರೂ ಸಿಕ್ತಾ… ಅಥವಾ ನಿನ್ನ ನೂರಾರು ‘ ಭಾನಂಗಡಿಗಳಲ್ಲಿ ‘ (ಹಣ ಸಂಪಾದಿಸುವ ಆಕ್ರಮ ದಾರಿಗಳು) ಯಾವುದಾದರೂ ಒಂದನ್ನು ಟಿವಿ ಚಾನೆಲ್ ನವರು ಹೊರ ಹಾಕಿದರೋ ಹೇಗೆ…” ಎಂದು ಪ್ರಶ್ನಿಸಿದ.

“ಅದೇನಿಲ್ಲ… ಇನ್ನಾರು ತಿಂಗಳ ಹತ್ತಿರದಲ್ಲಿ ಬರೋ ಚುನಾವಣೆ ನೆನಸಿಕೊಂಡರೆ ಸಾಕು ಮೈಯೆಲ್ಲ ನಡುಗುತ್ತಿದೆ. ಅಲ್ಲದೇ ಯಾಕೋ ತುಂಬಾ ಭಯವಾಗುತ್ತಿದೆ…. ತೆಂಗಿನ ಚಿಪ್ಪಿನಂತಹ ಬೋಳು ತಲೆಯವರು ಬಹಳ ಜಾಣರಂತೆ…ಅಂತಹ ತಲೆಯ ಮಾಲಿಕ ನೀನು…ನಾನು ಮತ್ತೆ ಚುನಾವಣೆಯಲ್ಲಿ ಗೆದ್ದು ಬರಬೇಕಾದರೆ ಏನು ಮಾಡಬೇಕು… ಅದಕ್ಕಾಗಿ ನನಗೆ ಸೂಕ್ತ ಸಲಹೆಗಳನ್ನು ನೀನು ನೀಡಬೇಕು … ” ಎಂದು ಗೋಗರೆದ ಗುಂಡಣ್ಣ ಮಿತ್ರನ ಮುಂದೆ.

“ನಿನ್ನ ಎಲ್ಲ ಅವ್ಯವಹಾರದಲ್ಲಿ ನನಗೆ ಸರಿಪಾಲು ನೀಡಿರುವೆ…ನಿನ್ನೆಲ್ಲ ಬೇನಾಮಿ ಆಸ್ತಿಗಳಿಗೆ ನಾನೇ ಒಡೆಯ… ಮುಂದೆ ನೀನು – ನಿನ್ನ ನೆರಳು ನಾನು…ಅದಲ್ಲದೆ ನೀನು ಬಾಲ್ಯದ ಗೆಳೆಯ ಬೇರೆ… ನಿನಗ ಸಹಾಯ ಮಾಡದೆ ಇನ್ಯಾರಿಗೆ ಮಾಡಬೇಕು ದೋಸ್ತಾ..”ಎಂದು ರಾಗವಾಗಿ ನುಡಿದ ನುಂಗಣ್ಣ.

“ಏನಿಲ್ಲ…ಬರೋ ಚುನಾವಣೆಯಲ್ಲಿ ನಿಂತು ನಾನು ‘ಶತ್ರು ಸಂಹಾರ’ ಮಾಡಿ ಗೆಲ್ಲಲು ಬೇಕಾದ ಅಸ್ತ್ರಗಳಾದ – ಸ್ವಜನಪಕ್ಷಪಾತ, ಜಾತೀಯತೆ, ಮತಾಂಧತೆ, ಮಠಾಧೀಶರ ಬೆಂಬಲ, ಎದುರಾಳಿಯ ‘ವೀಕ್ನೆಸ್’, ರಾಜಕೀಯ ಮಾಡಿ ಇನ್ನೂ ಹತ್ತು ತಲೆಮಾರು ಕೂತು ತಿಂದರೂ ಕರಗದಷ್ಟು ಮಾಡಿರುವ ಹಣದ ರಾಶಿ, ಆಸ್ತಿ – ಪಾಸ್ತಿ, ಅಂತಸ್ತು ಎಲ್ಲವೂ ನನ್ನ ಬಳಿ ಇವೆ…ಆದರೆ ಚುನಾವಣೆ ಯುದ್ಧದಲ್ಲಿ ಮುಂದೆ ನಿಂತು ಕಾದಾಡುವ ಸೈನಿಕರೇ ಇಲ್ಲ! ಸಮಯ ಬಂದಾಗಲೆಲ್ಲ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯಲು ಸೈದ್ಧಾಂತಿಕ ನಿಲುವು, ಉಸಿರು ಗಟ್ಟಿಸುವ ವಾತಾವರಣ, ಪಕ್ಷದಲ್ಲಿ ಬೆಲೆ ಇಲ್ಲದ್ದು, ಕ್ಷೇತ್ರದ ಮತ್ತು ಮತದಾರರ ಅಭಿವೃದ್ಧಿಗಾಗಿ ಎಂದು ಇನ್ನಿತರ ಸುಟ್ಟು ಸುಡುಗಾಡು ಕಾರಣಗಳನ್ನು ಹೇಳಿ ಪಕ್ಷಾಂತರ ಮಾಡಿ ಮಾಡಿ ಈಗ ಯಾವ ಪಕ್ಷದಲ್ಲಿದ್ದೇನೆ ಎಂದು ಒಮ್ಮೊಮ್ಮೆ ನನಗೇ ನೆನಪಾಗುವುದಿಲ್ಲ!… ನನ್ನ ಹಿಂದೆ ಈಗ ನಿಷ್ಠಾವಂತ ಕಾರ್ಯಕರ್ತರು ಇದ್ದಾರಾ ಎನ್ನುವ ಅನುಮಾನ ಬೇರೆ ಶುರುವಾಗಿದೆ… ಹೀಗಾದರೆ ಮುಂದೆ ಹೇಗಪ್ಪ ಎಂದು ಬಹಳ ಚಿಂತೆಯಾಗಿದೆ ದೋಸ್ತಾ…” ಎಂದು ಮನಸಿನ ನೋವನ್ನು ಹೊರ ಹಾಕಿದ ಶಾಸಕ ಗುಂಡಣ್ಣ.

ನಸು ನಕ್ಕ ನುಂಗಣ್ಣ ನುಡಿದ. “ಕಾರ್ಯಕರ್ತರ ಬಗ್ಗೆ ಚಿಂತೆ ಬಿಡು…ನನ್ನ ಹೆಂಡತಿಯ ಕಡೆಯ ಬಂಧುಗಳದ್ದು ಒಂದು ಲೇಟೆಸ್ಟ್ ಕನ್ಸಲ್ಟೆನ್ಸಿ ಬೆಂಗಳೂರಲ್ಲಿ ಇದೆ.. ನಾಳೇನೇ ಅದರ ಸಂಭಂದ ಹೋಗೋಣ. ಸರೀನಾ…,” ಎಂದು ಧೈರ್ಯ ಹೇಳಿದಮೇಲೆ ಗುಂಡಣ್ಣ ಕೊಂಚ ಸಮಾಧಾನಗೊಂಡ.

ಮರುದಿನ ಶಾಸಕರ ಇನ್ನೋವಾ ಕಾರು ನುಂಗಣ್ಣನ ಜೊತೆಗೆ ಇತರ ಒಡ್ಡೋಲಗವನ್ನು ತುಂಬಿಸಿಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಕನ್ನಡ ತಾಯಿಯ ಸೇವೆ ಮಾಡಲು ಟೊಂಕ ಕಟ್ಟಿ ನಿಂತಿರುವ ಕನ್ನಡ ಸೇನಾನಿಯ ನಾಯಕರು ವಾಸ ಮಾಡುವ ಭವ್ಯ ಬಂಗಲೆಗಳ ಕಾಲೋನಿಯಲ್ಲಿ ನುಂಗಣ್ಣ ಹೇಳಿದ ಕನ್ಸಲ್ಟೆನ್ಸಿ ಇತ್ತು…ಹೀಗಾಗಿ ಗೂಗಲ್ ಮ್ಯಾಪ್ ಹಾಕಿ ಹುಡುಕುವ ಶ್ರಮವಿಲ್ಲದೆ ಬೇಗನೆ ಸಿಕ್ಕಿತು.

ಆಫೀಸಿನ ಹೊರಗೆ ‘ಕೈ ಮುಗಿದು ಒಳಗೆ ಬಾ ರಾಜಕೀಯ ನಾಯಕನೇ…ಇದು ನಿನ್ನ ಪವಿತ್ರ ದೇಗುಲ’ (ಈ ದೇಗುಲದಲ್ಲಿ ಕಾರ್ಯಕರ್ತರು ಲಭ್ಯವಿರುತ್ತಾರೆ) ಎನ್ನುವ ‘ಕ್ಯಾಚಿ’ (ಆಕರ್ಷಕ) ಬೋರ್ಡ್ ನೋಡಿ ಫಿದಾ ಆದ ಗುಂಡಣ್ಣತುಂಬಾ ಸಡಗರದಿಂದ ತನ್ನ ತಂಡದ ಜೊತೆ ಒಳ ಹೊಕ್ಕ. ಆಫೀಸ್ ರಿಸಿಪ್ಶನಿಸ್ಟ್ ‘ಆರ್ ಆರ್ ರುಕ್ಕಮ್ಮ’ ಕೈಯಲ್ಲಿನ ಮೊಬೈಲ್ ಮೇಲೆ ಬೆರಳಾಡಿಸುತ್ತಾ ಎಲ್ಲರನ್ನೂ ಕಣ್ಣಲ್ಲೇ ಸ್ವಾಗತಿಸಿ ಸೋಫಾದಲ್ಲಿ ಕೂಡಿಸಿ ನಗುತ್ತಾ ಕೇಳಿದಳು. “ಹೇಳಿ ಎಂತಹ ಕಾರ್ಯಕರ್ತರು ಬೇಕು ನಿಮಗೆ ಮತ್ತು ಯಾವ ಸಂದರ್ಭಕ್ಕೆ…?”

“ಅಂದರೆ ಬೇರೆ ಬೇರೆ ತರಹದ ಕಾರ್ಯಕರ್ತರು ಸಿಗುತ್ತಾರಾ ನಿಮ್ಮಲ್ಲಿ…” ಇದು ಹೊಸ ವಿಷಯ ಎನ್ನುವಂತೆ ಸ್ವಲ್ಪ ಅಚ್ಚರಿಯಿಂದ ಕೇಳಿದ ಗುಂಡಣ್ಣ. “ಹೌದೌದು…ಎಲ್ಲ ವಿವರಗಳು ಬ್ರೋಚರಿನಲ್ಲಿ ಸಿಗುತ್ತವೆ.. ಎಲ್ಲಾ ಸೇವೆಗಳ ಲಭ್ಯತೆ ಕುರಿತು ಸದ್ಯ ಒಂದು ವೆಬ್ ಸೈಟ್ ರೂಪುಗೊಳ್ಳುತ್ತಿದೆ…ಈಗ ಅರ್ಜೆಂಟ್ ಆಗಿ ನಿಮಗೆ ಹೆಚ್ಚಿನ ವಿವರಗಳು ಬೇಕೆಂದರೆ ನಮ್ಮ ಎಂ. ಡಿ ಯವರನ್ನು ಭೇಟಿಯಾಗಿ ತಾವು ತಿಳಿದುಕೊಳ್ಳಬಹುದು… ” ಎಂದು ಕ್ಲುಪ್ತವಾಗಿ ಉತ್ತರಿಸಿ ಮತ್ತೆ ಮೊಬೈಲ್ ಚಾಟಿಂಗ್ ಮುಂದುವರೆಸಿದಳು.

ಎಂ.ಡಿ ಎನ್ನುವ ಹೆಸರಿದ್ದ ಗ್ಲಾಸ್ ಡೋರ್ ತೆಗೆದು ಚೇಂಬರ್ ಪ್ರವೇಶಿಸಿದರು ಗುಂಡಣ್ಣ ಮತ್ತು ಆತನ ಬಲಗೈ ನುಂಗಣ್ಣ. ಸಪಾಟಾದ ತಲೆಯ ಮೇಲೆ ಒಂದೇ ಒಂದು ಕೂದಲು ಸಹ ಇಲ್ಲದ ಮಧ್ಯಮ ವಯಸ್ಸಿನ ಕಡು ಕಪ್ಪು ಬಣ್ಣದ ಧಡೂತಿ ಶುದ್ಧ ಬಿಳಿ ವಸ್ತ್ರಧಾರಿ ಆಸಾಮಿ ‘ಕರುಣಾನಿಧಿ ಚಶ್ಮಾ’ ( ಕಡು ಕಪ್ಪು ವರ್ಣದ ಚಾಳಿಸು) ಧರಿಸಿ ರಿವಾಲ್ವಿಂಗ್ ಛೇರಿನಲ್ಲಿ ಕೂತು ಗರಗರ ತಿರುಗುತ್ತಿದ್ದ. ಒಳಗೆ ಬಂದ ಜೋಡಿಯನ್ನು ನೋಡಿ ತಾನಾಡುತ್ತಿದ್ದ ‘ಕುರ್ಚಿ ಆಟ’ ನಿಲ್ಲಿಸಿ ಕೈಯಿಂದ ವಣಕ್ಕುಂ – ವೆಲ್ಕಮ್ ಎಂದು ಸ್ವಾಗತಿಸಿ ಎದುರಿನ ಕುರ್ಚಿಗಳತ್ತ ಕೈ ತೋರಿಸಿದ.

ಗೆಳೆಯರು ಆಸೀನರಾದ ಬಳಿಕ “ನಾನು ಭಂ ಭಂ ಭಂಡಣ್ಣ. ಈ ಕಂಪನಿಯ ಎಂ. ಡಿ…ಹೇಳಿ… ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಏನು ಸೇವೆ ಪಡೆಯಲು ಬಯಸಿ ಬಂದಿರುವಿರಿ ನಮ್ಮಲ್ಲಿಗೆ …”ಎಂದು ಶಾಂತ ಸ್ವರದಲ್ಲಿ ಪ್ರಶ್ನಿಸಿದ.

“ಏನಿಲ್ಲ…ನಿಮ್ಮಲ್ಲಿ ಕಾರ್ಯಕರ್ತರು ಸಿಗುತ್ತಾರೆ ಎಂದು ಹೊರಗೆ ಬೋರ್ಡ್ ಹಾಕಿದ್ದೀರಿ…ಸ್ವಲ್ಪ ವಿವರಗಳು ತಿಳಿಸಿದರೆ ಚೆನ್ನಾಗಿರುತ್ತದೆ” ಎಂದ ಗುಂಡಣ್ಣ. “ಓಕೆ..ಅದಕ್ಕೇನಂತೆ .. ನೋಟ್ ಮಾಡಿಕೊಳ್ಳಿ…” ಎಂದುಡೀಟೇಲ್ಸ್ ಹೇಳಲು ಶುರು ಮಾಡಿದ ಎಂ. ಡಿ ಭಂಡಣ್ಣ.

” ರಾಜಕೀಯ ಸಭೆಗಳಿಗೆ ಜನ ಬೇಕೆಂದರೆ ಕಾರ್, ಜೀಪ್, ಟ್ರಾಕ್ಟರ್, ಬಸ್, ಲಾರಿಗಳಲ್ಲಿ ಅವರನ್ನು ಜಮಾಯಿಸಿ ಸಭೆಗಳಿಗೆ ಕರೆ ತರುವ ಏಜೆಂಟರು ನಮ್ಮಲ್ಲಿ ಸಿಗುತ್ತಾರೆ…ವಿರೋಧ ಪಕ್ಷದವರನ್ನು ಬಾಯಿಗೆ ಬಂದಂತೆ ಬಯ್ಯಲು ಹಾಗೂ ಸಮಯ ಬಂದರೆ ಅವರ ಮೇಲೆ ಕಲ್ಲಿನ ದಾಳಿ ಮಾಡಲು ವಿಶೇಷ ತರಬೇತಿ ಪಡೆದ ಕಾರ್ಯಕರ್ತರು ಇದ್ದಾರೆ… ಆದರೆ ಅವರ ರೇಟ್ ಸ್ವಲ್ಪ ಜಾಸ್ತಿ ಅಷ್ಟೇ!… ಅವರಲ್ಲದೆ ಮನೆ ಮನೆಗೆ ಹೋಗಿ ಹೆಣ್ಣು ಮಕ್ಕಳಿಗೆ ಕುಂಕುಮ ಹಚ್ಚಿ ಹ್ಯಾಂಡ್ ಬಿಲ್ ಕೊಡುವವರು …ಹಸಿರು ಬಳೆ, ಸೀರೆ – ಕುಪ್ಪುಸ ಹಂಚುವ ಸುಮಂಗಲೆಯರು….ನೀವು ಮತ ಕೇಳಲು ಸ್ಲಂ ಏರಿಯಗಳಿಗೆ ಹೋದಾಗ ಬಡ ಮಕ್ಕಳನ್ನು ಬಲವಂತವಾಗಿ ಎತ್ತಿಕೊಂಡು ನೀವು ಅವರ ಸಿಂಬಳ ಒರೆಸುವಾಗ ಕ್ಲಿಕ್ಕಿಸಿ ಫೋಟೋ ತೆಗೆಯುವವರು…
ಲಂಬಾಡಿ ಮತ್ತು ಪ್ರತ್ಯೇಕ ತಂಡಗಳೊಂದಿಗೆ ನೀವು ಬೆರೆತು ಮಾತನಾಡುವ ಆಕರ್ಷಕ ಭಂಗಿಗಳ ಛಾಯಾಚಿತ್ರಗಳನ್ನು ಸೆರೆ ಹಿಡಿಯುವವರು… ನೀವು ಮುದುಕರು ಹಾಗೂ ಅಂಗವಿಕಲರ ಕೈಗಳನ್ನು ಆತ್ಮೀಯವಾಗಿ ಹಿಡಿದು ಅವರೊಂದಿಗೆ ಹೆಜ್ಜೆ ಹಾಕುವ ಫೋಟೋಗಳನ್ನು ತೆಗೆಯುವವರು… ವೋಟರ್ ಸ್ಲಿಪ್ ಬರೆದುಕೊಡುವವರು… ಪೋಲಿಂಗ್ ಬೂತ್ ಹತ್ತಿರ ನಿಮ್ಮ ಪಾರ್ಟಿಯ ಗುರುತನ್ನು ಸನ್ನೆ ಮಾಡಿ ಕರಾರುವಕ್ಕಾಗಿ ತೋರಿಸುವವರು…
ನೀವು ಗೆದ್ದಾಗ ಪಟಾಕಿ ಹಚ್ಚಿ (ಹಣ ನಿಮ್ಮದೇ!) ನೆರೆದವರ ಸಂಭ್ರಮ ಹೆಚ್ಚಿಸುವರು… ನಿಮ್ಮ ಮೇಲಿನ ಹುಚ್ಚು ಅಭಿಮಾನವನ್ನು, ಜನಪ್ರಿಯತೆಯನ್ನು ಎಲ್ಲರಿಗೂ ತೋರಿಸುವ ನೆಪದಲ್ಲಿ ಕೆಲ ಕಾರ್ಯಕರ್ತರು ಭುಜದ ಮೇಲೆ ನಿಮ್ಮನ್ನು ಹೊತ್ತುಕೊಂಡು ಉತ್ಸವ ಮೂರ್ತಿಯಂತೆ ಮೆರವಣಿಗೆ ಮಾಡಿ ನಿಮ್ಮ ಹಿಂಬಾಲಕರಿಗೆ ಜೋಷ್ ತರುವವರು… ಇಂತಹವು ಇನ್ನೂ ಹಲವಾರಿವೆ…ಒಂದೇ ಮಾತಿನಲ್ಲಿ ಹೇಳುವುದಾದರೆ ‘ ಕಾಸಿಗೆ ತಕ್ಕ ಕೂಲಿ’ ಎನ್ನುವದು ನಮ್ಮ ಸಿದ್ಧಾಂತ…” ಎಂದು ಸವಿಸ್ತಾರವಾಗಿ ವಿವರಿಸಿದ ಎಂ.ಡಿ. ಭಂ ಭಂ ಭಂಡಣ್ಣ.

” ನಿಮ್ಮ ವೆಬ್ ಸೈಟ್ ಓಪನ್ ಅದ ಮೇಲೆ ಅಥವಾ ಬ್ರೋಚರ್ ರೆಡಿ ಆದರೂ ವಾಟ್ಸಪ್ ಮುಖಾಂತರ ತಿಳಿಸಿ…ನಾವು ಬಂದು ನಮ್ಮ ಇಂಡೆಂಟ್ ತಿಳಿಸುತ್ತೇವೆ. ಬಲ್ಕ್ ಆರ್ಡರ್ ಮಾಡುತ್ತೇವೆ. ಆದ್ದರಿಂದ ಸಾಧ್ಯವಾದರೆ ಸ್ವಲ್ಪ ಡಿಸ್ಕೌಂಟ್ ಕೊಡಬೇಕು ತಾವು…” ಎಂದು ನಗುತ್ತಾ ಮನವಿ ಮಾಡಿದ ನುಂಗಣ್ಣ.

“ಅದಕ್ಕೇನಂತೆ ಕೊಡೋಣ.. ಆದರೆ ಕಂಡಿಷನ್ಸ್ ಅಪ್ಲೈ ಆಗುತ್ತವೆ ಅಷ್ಟೇ… ಕಾರ್ಯಕರ್ತರಿಗೆ ಸಮಯಕ್ಕೆ ಸರಿಯಾಗಿ ಗುಂಡು, ತುಂಡು, ಬಿರಿಯಾನಿ ಸಪ್ಲೈ ಆಗಬೇಕು… ನಿಮ್ಮ ಬಳಿ ಬಂದ ಕಾರ್ಯಕರ್ತರಿಗೆ ಸ್ವಲ್ಪ ಬಿಡುವು ಸಿಕ್ಕರೆ ಬೇರೆ ಪಕ್ಷದ ಪ್ರಚಾರ ( ಸಾಫ್ಟ್ವೇರ್ ಭಾಷೆಯಲ್ಲಿನ ಮೂನ್ ಲೈಟಿಂಗ್ ತರಹ) ಮಾಡುವರು…ಅದಕ್ಕೆ ತಾವು ಅನುಮತಿ ಕೊಡಬೇಕು… ಅವರಿಗೂ ನಿಮ್ಮ ಹಾಗೆ ಪಾಪ ಪಕ್ಷ ಭೇದ ಇರೋದಿಲ್ಲ!…ಬೆಳಿಗ್ಗೆ ಒಂದು ಪಕ್ಷದ ಝಂಡಾ ಹಿಡಿದು ತಿರುಗಿದರೆ, ಸಾಯಂಕಾಲ ಇನ್ನೊಂದು ಪಕ್ಷದ ಝಂಡಾ ಹಿಡಿದಿರುತ್ತಾರೆ… ಅಲ್ಲದೇ ನಮ್ಮಲ್ಲಿ ಈಗ ‘ ಯಾತ್ರಾ
ಸ್ಪೆಷಲಿಷ್ಟ್ ‘ ಸೀಜನಲ್ ಕಾರ್ಯಕರ್ತರು ಕೂಡಾ ಸಿಗುತ್ತಾರೆ… ಅವರ ರೇಟ್ ಸ್ವಲ್ಪ ಹೆಚ್ಚು ಅಷ್ಟೇ… ಇವರಲ್ಲದೆ ಇನ್ನೂ ನಿಮಗೆ ತುರ್ತಾಗಿ ಬೇಕಾದ ಬಾಡಿಗೆ ಕಾರ್ಯಕರ್ತರು ‘ಹೋಲ್ ಸೇಲ್ ದರದಲ್ಲಿ ರಿಟೇಲ್’ ಆಗಿ ಸಿಗುವರು. ನೀವು ಹಣದ ಥೈಲಿಯೊಂದಿಗೆ ಬಂದು ನಮ್ಮ ನಿಗದಿತ ‘ಸೇವಾ ಶುಲ್ಕ’ ನೀಡಿ. ಡಿಜಿಟಲ್ ಕರೆನ್ಸಿ ವ್ಯವಹಾರ ನಮ್ಮಲ್ಲಿ ಇಲ್ಲ. ಬರೀ ಹಾರ್ಡ್ ಕ್ಯಾಶ್ ಮಾತ್ರ ಸ್ವೀಕರಿಸುತ್ತೇವೆ. ಯಾವುದಕ್ಕೂ ರಶೀದಿ ಕೊಡುವುದಿಲ್ಲ. ಶುಲ್ಕ ನೀವು ನೀಡಿದ ನಂತರ ಯಾವುದಕ್ಕೂ ಚಿಂತೆ ಮಾಡದೆ ನೆಮ್ಮದಿಯಾಗಿ ಚುನಾವಣೆ ಎದುರಿಸಬಹುದು…” ಎಂದು ನಗುತ್ತಾ ನುಡಿದ
ಭಂ ಭಂ ಭಂಡಣ್ಣ…

” ಆಯ್ತು ಸಾರ್…ಕ್ಷೇತ್ರ ಮತ್ತು ಪಕ್ಷದ ಟಿಕೆಟ್ ಕನ್ಫರ್ಮ್ ಆದಕೂಡಲೆ ಆರ್ಡರ್ ಪ್ಲೇಸ್ ಮಾಡುತ್ತೇವೆ. ಫರ್ಸ್ಟ್ ಪ್ರಯಾರಿಟಿ ನಮಗೇ ಕೊಡಬೇಕು…ನಮಸ್ಕಾರ. ಮತ್ತೆ ಭೇಟಿಯಾಗೋಣ …” ಎನ್ನುತ್ತಾ ಮಾತು ಮುಗಿಸಿ ಎದ್ದ ಶಾಸಕ ಗುಂಡಣ್ಣ. ಯಥಾರೀತಿ ನೆರಳಿನಂತೆ ಹಿಂಬಾಲಿಸಿದ
ನುಂಗಣ್ಣ !
*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

18 thoughts on “ಬೇಕಾಗಿದ್ದಾರೆ – ‘ಕಾರ್ಯಕರ್ತರು’”

  1. Shivanand I Vadatille

    👌🏻🙏🏻 ಈಗಿನ ರಾಜಕೀಯದ ಬಗ್ಗೆ ಚನ್ನಾಗಿ ಮೂಡಿ ಬಂದಿದೆ ಸರ್

  2. Shivanand I Vadatille

    ಈಗಿನ ರಾಜಕೀಯದ ಬಗ್ಗೆ ಚನ್ನಾಗಿ ಮೂಡಿ ಬಂದಿದೆ ಸರ್

  3. Wonderful description of present day’s political situation. Presentation style is very nice. Hearty congratulations

  4. JANARDHANRAO KULKARNI

    ಇವತ್ತಿನ ರಾಜಕೀಯದಲ್ಲಿ ನಡೆಯುವ ಆಟಗಳ ಬಗ್ಗೆ ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ ರಾಘವೇಂದ್ರ ಮಂಗಳೂರು. ಅಭಿನಂದನೆಗಳು

  5. ಪಿ. ಜಯರಾಮನ್

    ರಾಜಕೀಯ ಚದುರಂಗದಾಟದಲ್ಲಿ ಎಂಥೆಂಥ ಆಟಗಾರರು ಇರುತ್ತಾರೆ ಎಂಬುದನ್ನು ಬಹಳ ವಿಡಂಬನಾತ್ಮಕವಾಗಿ ವಿವರಿಸಿದ್ದೀರಿ. ಇನ್ನಷ್ಟು ಈ ತರಹದ ಕಥೆಗಳು ಬರಲಿ.

  6. ಎಸ್ ಆರ್ ಸೊಂಡೂರು ಗಂಗಾವತಿ

    ಗಂಭೀರ ವಿಷಯದ ಬಗ್ಗೆ ಲಘು ಬರಹ

  7. A good satire on innovative emerging outsourcing services now evolving is good to read. The political scene nowadays has lost loyalty and people work for money taking as an employment opportunity.

  8. ಧರ್ಮಾನಂದ ಶಿರ್ವ

    ರಾಜಕೀಯ ವಿಡಂಬನಾ ಲೇಖನ ಖುಷಿಕೊಟ್ಟಿತು. ಕೆಲವೆಡೆ ವ್ಯಂಗ್ಯಮಿಶ್ರಿತ ಪಂಚ್ ನಗು ಉಕ್ಕಿಸುವಂತಿವೆ. ಇಂದಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಮತ್ತು ನೇಪಥ್ಯದ ಸತ್ಯವನ್ನು ತೆರೆದಿಟ್ಟ ಬರಹ ಸೊಗಸಾಗಿ ಮೂಡಿಬಂದಿದೆ.
    ಅಭಿನಂದನೆಗಳು

  9. ಶೇಖರಗೌಡ ವೀ ಸರನಾಡಗೌಡರ್

    ಅದ್ಭುತ ವಾಸ್ತವದ ಚಿತ್ರಣ. ಟೋಟಲಿ ಪಂಚಿಂಗ್ ಡೈಲಾಗ್ಸ್. ಇದುವರೆಗೂ ನಾನು ಇಂತಹ ಸೂಪರ್ ವಿಡಂಬನೆ ಓದಿರಲಿಲ್ಲ. ತುಂಬಾ ಖುಷಿಯಾಯಿತು.
    ಹಾರ್ದಿಕ ಅಭಿನಂದನೆಗಳು.

  10. Baburajendra Joshi

    Excellent write-up. It depicts the present days’ political drama enacted by the parties under the garb of working for the welfare of the general public.

  11. ಮ.ಮೋ.ರಾವ್ ರಾಯಚೂರು

    ಆಧುನಿಕ ಪ್ರಗತಿಯ ಆಧಾರವಾಗಿರುವ ಸ್ವಂತ ಉದ್ಯೋಗ ಮತ್ತು ಹೊರಗುತ್ತಿಗೆ ವ್ಯವಸ್ಥೆಯಲ್ಲಿ ಯಾರಾದರು ಸತ್ತಾಗ ಅಳುವುದಕ್ಕೂ ‘ಕೆಲಸಗಾರರು’ ಸಿಗುವಾಗ, ಚುನಾವಣೆಯ ಕೆಲಸಕ್ಕೆ ಎಂಥೆಲ್ಲ
    ಕಾರ್ಯಕರ್ತರು’ ದೊರೆಯಬಲ್ಲರು ಎಂದು
    ರಾಘವೇಂದ್ರ ಮಂಗಳೂರು ಬಯಲುಮಾಡಿ ತೋರಿಸಿದ್ದಾರೆ. ಕಥೆ ವಿಡಂಬನಾತ್ಮಕವಾಗಿ ಚನ್ನಾಗಿ ಮೂಡಿದೆ. ಪ್

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter