ಲಂಡನ್ ಟು ವ್ಯಾಟಿಕನ್ ಸಿಟಿ’

Travel is that only thing you buy that makes you richer.’
‘ಇದು ಲಂಡನ್ ಟು ವ್ಯಾಟಿಕನ್ ಸಿಟಿ’ (ಎಂಟು ದೇಶ – ನೂರೆಂಟು ವಿಶೇಷ) ಕೃತಿಯ ಮೊದಲ ಅಧ್ಯಾಯದ ಮೊದಲ ಸಾಲು. ಹೌದು, ನಿಜಕ್ಕೂ ಈ ಮಾತು ಪ್ರವಾಸಿಗರನ್ನು ಕೇಳಿದಾಗ, ಪ್ರವಾಸದ ಬಗ್ಗೆ ಅದರಿಂದ ಸಿಗುವ ಆನಂದದ ಬಗ್ಗೆ ಅನುಭವವದ ಬಗ್ಗೆ ಹೇಳುತ್ತಾರೆ. ಪ್ರವಾಸಪ್ರಿಯಳಾದ ನನಗೂ ಸಹ ಕವಿ ಲೇಖಕ ಗೋಪಾಲ ತ್ರಾಸಿಯವರ ಈ ಪ್ರವಾಸ ಕಥನ ಕೈಗೆ ಸಿಕ್ಕಿದಾಗ (ನನ್ನ ಕೋರಿಕೆ ಮೇರೆಗೆ ಅವರು ಮುತುವರ್ಜಿಯಿಂದ ಪೋಸ್ಟಿನಲ್ಲಿ ಕಳಿಸಿದ್ದರು), ಸಣ್ಣ ಮಕ್ಕಳು ಸಿಹಿ ತಿಂಡಿ ಸಿಕ್ಕಿದಾಗ ಚೂರು ಚೂರೇ ತಿನ್ನುತ್ತಾರಲ್ಲ, ಬೇಗ ಮುಗಿಯಬಹುದೆಂಬ ಆತಂಕದಿಂದ!!! ಹಾಗೇ ಕಾಳಜಿ ವಹಿಸಿ ನನಗಾಗಿ ಸ್ವಲ್ಪ ಸ್ವಲ್ಪವೇ ಓದುತ್ತ ಹೋದೆ. ತ್ರಾಸಿ ಅವರು ಅನುಭವಿಸಿದ ಕಾಲಂಶವಾದರೂ ನಾನು ಆ ಸಂತೋಷವನ್ನು ನನ್ನೊಳಗೆ ತುಂಬಿಸಿಕೊಳ್ಳುತ್ತಿದ್ದೆ.

ಗೋಪಾಲ್ ಅವರು ಈ ಪ್ರವಾಸ ಕಥನ ಬರೆದ ರೀತಿ ನನಗಿಷ್ಟವಾಗಲು ಮೂಲ ಕಾರಣ – ಎಲ್ಲೂ ಇದು ವರದಿ ತರಹ ಆಗಲಿಲ್ಲ. ಪ್ರತಿಯೊಂದು ವಾಕ್ಯದಲ್ಲೂ ಸಹಜತೆ ಇದೆ. ಆರಂಭದಲ್ಲಿ ಲಂಡನ್ ವೀಸಾಕ್ಕೆ ಅರ್ಜಿ ಸಲ್ಲಿಸದ ಕ್ಷಣದಿಂದ ಅವರು ಅನುಭವಿಸಿದ ತುಮುಲ, ಸಿಕ್ಕಿದಾಗ ಸಿಕ್ಕ ಆನಂದವನ್ನು ಅವರು ಕಟ್ಟಿಕೊಟ್ಟ ರೀತಿ ಓದುಗರಾದ ನಮಗೂ ಅದೇ ಫೀಲ್ ಆದಂತೆ. ಪ್ರವಾಸದ ಪೂರ್ವ ತಯಾರಿಯಲ್ಲಿ ವಿದೇಶ ಪ್ರವಾಸಕ್ಕೆ ಬೇಕಾಗುವ ಮುಖ್ಯವಾಗಿ ಯೂ.ಕೆ., ಕಾಗದ ಪತ್ರಗಳ ಸಂಪೂರ್ಣ ಮಾಹಿತಿ (ಪುಟ1-9) ಓದಿ ಆಶ್ಚರ್ಯದಿಂದ ನನ್ನ ಹುಬ್ಬೇರಿತು !. ನಮ್ಮ ಬದುಕಿನ ಹೆಚ್ಚಿನ ಎಲ್ಲಾ ವಿವರಗಳನ್ನು ನೀಡಲೇ ಬೇಕು. ಪ್ರತಿಯೊಂದು ವಾಕ್ಯದಲ್ಲಿ ಪ್ರಕಟಗೊಂಡ ಸಂತೋಷ, ಆನಂದ ಅವರ ಆ ಮುಗ್ಧತೆ ಅತೀ ಸುಂದರ.

‘ಅಪೂರ್ವ’ ಅಂದರೆ ಮೊದಲೆಂದೂ ನೋಡದ್ದು; ತೀರಾ ಹೊಸತು. ಅಪೂರ್ವನ ಮೊದಲ ಪಾಸಪೂರ್ಟ್, ಮೊದಲ ವಿದೇಶ ಪ್ರವಾಸ, ಅದೂ ಲಂಡನ್ನಿಗೆ ! ಇದು ಅವರು ತಮ್ಮ ಚಿಕ್ಕ ಮಗನ ಕುರಿತು ಬರೆದದ್ದು. ಕುಟುಂಬ ಸಮೇತ ( ಚಿಕ್ಕ ಮಕ್ಕಳಿಬ್ಬರು) ಎಂಟು ದೇಶಗಳ ಪ್ರವಾಸ ಕೈಗೊಂಡ ತ್ರಾಸಿ ಈಸ್ ರಿಯಲಿ ಗ್ರೇಟ್.

ಕೃತಿಯ ಮುನ್ನುಡಿಯಲ್ಲಿ ಹಿರಿಯ ಪತ್ರಕರ್ತ ಲೇಖಕ ಗಣೇಶ ಅಮೀನಗಡ ಬರೆದಂತೆ – ಎಂಟು ದೇಶಗಳ ಕುರಿತು ಮಾಹಿತಿ ಒಳಗೊಂಡ ಈ ಕೃತಿ ಹೆಚ್ಚು ತ್ರಾಸ ಕೊಡದೆ ಓದಿಸಿಕೊಂಡು ಹೋಗುತ್ತದೆ ಎನ್ನುವುದು ಸತ್ಯ. ಕುಂದಾಪುರ ತಾಲೂಕಿನ ತ್ರಾಸಿಯಂತಹ ಪುಟ್ಟ ಹಳ್ಳಿಯಲ್ಲಿ ಜನಿಸಿದ ಗೋಪಾಲ – ಲಂಡನ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವರ ಕಣ್ಣಾಲಿಗಳು ತುಂಬಿದಾಗ, ಓದುಗರಿಗೂ ಸಹ ಕಣ್ಣು ತುಂಬಿದಂತಾಗ ಬೇಕೆಂದರೆ ಅವರು ಕಟ್ಟಿ ಕೊಟ್ಟ ರೀತಿ ಹಾಗೆ ಇದೆ.

ಪ್ರತಿಯೊಂದು ದೇಶದ ಕಿರು ಪರಿಚಯದ ಇತಿಹಾಸದೊಂದಿಗೆ ಅವರ ಅನುಭವಗಳನ್ನು ಉಲ್ಲೇಖಿಸಿದ್ದಾರೆ. ಅವರ ಕಾವ್ಯಾತ್ಮಕ ಭಾಷೆ ಕೃತಿಗೆ ಹೊಸ ಮೆರಗನ್ನು ಕೊಟ್ಟು ಎಲ್ಲೂ ಶುಷ್ಕವಾಗದಂತೆ ಮೆಚ್ಚುಗೆಗೆ ಪಾತ್ರವಾಗಿಸುತ್ತದೆ ಎಂದು ಬೆನ್ನುಡಿಯಲ್ಲಿ ಕವಿ, ನಾಟಕಕಾರ ಸಾ.ದಯಾ ಹೇಳಿದ್ದು ಸಮರ್ಪಕವಾಗಿದೆ. ಈ ಕೃತಿಯಲ್ಲಿ ಗೋಪಾಲರು ಪ್ರತಿ ದೇಶದ ಅಧ್ಯಾಯಕ್ಕೆ ಕೊಟ್ಟ ಶೀರ್ಷಿಕೆ ನೂತನವಾಗಿವೆ. ಆ ಹೆಸರುಗಳೇ ನಮ್ಮ ಕುತೂಹಲವನ್ನು ಮತ್ತೂ ಹೆಚ್ಚಿಸುತ್ತವೆ.

ಲೇಖಕ ತ್ರಾಸಿಯವರ ಹೃದಯ ಶ್ರೀಮಂತಿಕೆ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕೆನ್ನಿಸುತ್ತದೆ. ತಮ್ಮ ಜೊತೆಯ ತಂಡದಲ್ಲಿದ್ದ ಸಹ ಪ್ರವಾಸಿಗರ ಬಗ್ಗೆ, ಅವರೆಲ್ಲ ಅಪರಿಚಿತರಾದರೂ ತೋರಿದ ಸ್ನೇಹ, ವಾತ್ಸಲ್ಯ ವಿವಿಧ ಪ್ರದೇಶದ ಆಯಾ ವಯಸ್ಸಿನ ಜನರನ್ನು ಗೌರವಿಸಿದ ಪರಿ ನನಗೆ ಹಿತವೆನಿಸಿತು. ಕೇವಲ ಪ್ರವಾಸವೇ ಮುಖ್ಯವಲ್ಲ, ಆ ಹತ್ತು ಹನ್ನೆರಡು ದಿನಗಳಲ್ಲಿ ಏರ್ಪಟ್ಟ ಬಾಂಧವ್ಯವನ್ನೂ ಮರೆಯಲಾಗದ ರೀತಿಯಲ್ಲಿ ಬರೆದಿರುವರು.

ಟುಲಿಪ್ – ಗಾರ್ಡನ್ ಆಫ್ ಯೂರೋಪ್ .
‘…. ಪ್ರಪಂಚದ ಚೆಲುವೆಲ್ಲಾ ಧಾರೆಯೆರೆದಂತೆ ಮೈದಳೆದ ಹೂವುಗಳ ಇನ್ನಿಲ್ಲವೆಂಬಂತಹ ಬಿಂಕ ಬಿನ್ನಾಣ…..’ ವಾವ್ ! ಕವಿ ಮನಸ್ಸೇ !!! ಇಡೀ ಪುಟವನ್ನು ಪುನ: ಪುನ: ಓದಿದೆ. ‘ …. ಹಳದಿ ಅಂದರೆ ಬರೇ ಒಂದು ಬಣ್ಣವಲ್ಲ. ಕೆಂಪಿನಲ್ಲಿ ಅದೆಷ್ಟು ಕೆಂಪು. ನೀಲಿಯಲ್ಲಿ….. ಬಿಳಿಯಲ್ಲೂ…! ಯಾರಿರಿಸಿರುವರು ಮುಗಿಲಾ ಮೇಲಿಂದಿಲ್ಲಿಗೇ ತಂದು..ಈಗ ಇಲ್ಲಿಗೇ ತಂದು….. ‘ ತ್ರಾಸಿಯವರಿಗೆ ವರ ಕವಿ ಬೇಂದ್ರೆಯವರ ನೆನಪು. ‘ ಒಂದೊಂದು ಜಾತಿಯ ಹೂಗಿಡಗಳ ಪುಟ್ಟ ಪುಟ್ಟ ಗುಂಪು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಂತೆ’. ಲೇಖಕರು ತನ್ನ ದೇಶ ಪ್ರೇಮವನ್ನು ಸಾದರ ಪಡಿಸಿದ ರೀತಿಗೊಂದು ಸಲಾಮ್.

ಪ್ಯಾರಿಸಿನ ಪರಫ್ಯೂಮ್ ಮಾಲ್ ನಲ್ಲಿ ವಿಫಲ ಚೌಕಾಶಿ –
ಚೌಕಾಶಿ ಭಾರತೀಯರ ಜನ್ಮಸಿದ್ಧ ಹಕ್ಕು. ಈ ಚೌಕಾಶಿಯ ಸಂದರ್ಭ ನಡೆದ ಹಾಸ್ಯಮಯ ಸನ್ನಿವೇಶವನ್ನು ಚಿತ್ರಿಸಿದ ರೀತಿ ತುಂಬಾ ಚೆನ್ನಾಗಿದೆ. ಕೊನೆಯಲ್ಲಿ, ‘ ಹೀಗೊಂದು ಸುಂದರ ಪರಿಮಳಯುಕ್ತ ಸಂಜೆ ಪ್ಯಾರಿಸಿನ ಪರಫ್ಯೂಮ್ ಮಾರ್ಕೇಟಿನಲ್ಲಿ ಕಳೆಯಿತು.’
‘ಸ್ವಿಝರಲ್ಯಾಂಡಿನ ಬೆಳಗೆಂದರೆ ಶುಭ್ರ ಕೊಳದ ತಿಳಿ ನೀರು. ಪ್ರಕೃತಿಯ ಅಸೀಮ ದಿವ್ಯತೆಗೆ ಹೀಗೇ ಸುಮ್ಮನೆ ಮುಖವೊಡ್ಡಿ ಧ್ಯಾನ ಮಗ್ನವಾಗುವ ಬಯಕೆ…’ ವಾವ್ !!!
‘ …. ಪ್ರವಾಸವೆಂದರೆ ದೇಶ – ವಿದೇಶಗಳಿಗೆ ಸುತ್ತುವುದು ಅಥವಾ ಜಗತ್ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳ ಭೇಟಿ ಮಾತ್ರ ಅಂತ ಯೋಚಿಸಬೇಕಿಲ್ಲ. ಪ್ರವಾಸಕ್ಕೆ ಸ್ಥಳ ಮುಖ್ಯವೇ ಅಲ್ಲ. ಹೊಸ ಗಾಳಿ ಹೊಸ ಪರಿಸರ ಹೊಸ ಜನರು ಭಿನ್ನ ಆಚಾರ- ವಿಚಾರಗಳನ್ನು ನೋಡಿ ತಿಳಿದು ಕೊಳ್ಳಬೇಕೆಂಬ ಮನಸ್ಸು ಮುಖ್ಯ. ಮನೆಯೆಂಬ ನಾಲ್ಕು ಗೋಡೆಯಿಂದ ಆಚೆ ಹೋಗಬೇಕೆಂಬ ಬಯಕೆ ಇರಬೇಕು. ‘ ತ್ರಾಸಿಯವರ ಈ ವಿಚಾರ ನನಗೂ ಒಪ್ಪಿಗೆ. ಹಳ್ಳಿಯಲ್ಲಿ ಹುಟ್ಟಿದ ನಾನು ಸಂಜೆ ಹೊತ್ತು ಮನೆ ಎದುರು ಹರಿಯುತ್ತಿರುವ ಸೀತಾ ನದಿಯ ದಡದಲ್ಲಿ ಕುಳಿತು ಸೂರ್ಯ ಮುಳುಗುವ ಆ ದೃಶ್ಯವನ್ನೇ ದಿನವೂ ನೋಡಿ ಆನಂದಿಸುತ್ತಿದ್ದೆ. ಹೊಳೆಯಲ್ಲಿ ಹಾದು ಹೋಗುವ ಹಾಯಿ ದೋಣಿಗಳನ್ನು ಲೆಕ್ಕ ಹಾಕುವುದು.. ಮೇಲೆ ಆಕಾಶದಲ್ಲಿ ಗೂಡಿಗೆ ಮರಳುವ ಹಕ್ಕಿಗಳನ್ನು ಎಣಿಸುತ್ತ ಕುಶಿ ಪಡುವುದು.. ಎಂಥಾ ಆನಂದ ಉಲ್ಲಾಸ. ನನ್ನ ಪುಣ್ಯ ಹೆತ್ತವರು ಕರ್ನಾಟಕದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು, ಕೈ ಹಿಡಿದವರು ದೇಶದ ಕೆಲವು ನಗರಗಳನ್ನು, ಮತ್ತೆ ಮಕ್ಕಳು ದೇಶದ ಉದ್ದಗಲ ತೋರಿಸಿದ್ದರು. ಈಗ ಗೋಪಾಲ ತ್ರಾಸಿಯವರ ಈ ಪುಟ್ಟ ಪುಸ್ತಕ (144 ಪುಟ) ಓದಿದ ನಂತರ ಒಂದಷ್ಟು ಬಟ್ಟೆಗಳನ್ನು ಜೋಳಿಗೆಗೆ ತುಂಬಿಸಿಕೊಂಡು ಇಡೀ ಪ್ರಪಂಚ ಸುತ್ತಿ ಬರುವ ಬಯಕೆ ಉಂಟಾಗಿದೆ. ಹೌದಲ್ಲವಾ, life is journey, not a destination.

(ಮೀನಾ ಕಾಳವಾರ. ಲೇಖಕಿ ಕತೆಗಾರ್ತಿ, ಮುಂಬೈ.)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter