ದೇವರಿಗೊಂದು ಮಿಂಚಂಚೆ ಬರೆದೆ ವೈಯಕ್ತಿಕ ಭೇಟಿಗಾಗಿ ವಿನಂತಿಸಿದೆ ಮಾಡಿದ ತಪ್ಪನು ತಿಳಿಸಲು ಬೇಡಿದೆ ಶಿಕ್ಷೆಗೆ ಮುಂಚೆ ವಿವರಣೆ ಕೇಳಿದೆ ಉತ್ತರ ಬರಲಿಲ್ಲ ಅದಕೆ ಅದಕೆಂದೆ ದೂರವಾಣಿ ತುರ್ತು ಕರೆಮಾಡಿದೆ ವ್ಯಸ್ತ, ವ್ಯಸ್ತವಾಗಿದೆ ಎಂದಿತು ಧ್ವನಿ ಪತ್ರಬರೆದೆ,ಕೇಳುವವರಿಲ್ಲ ನನ್ನ ದನಿ ಅವನೂ ಕೆಲಸದೊತ್ತಡದಲ್ಲಿರಬೇಕು ನೆರವು ನೀಡಲು ಯಾರೂ ಇಲ್ಲದಿರಬೇಕು ತಾನೊಬ್ಬನೇ ಇಡೀ ಕೆಲಸ ಮಾಡಬೇಕು ಎಲ್ಲರ ಅಹವಾಲುಗಳ ಪರಿಶೀಲಿಸಬೇಕು ಆದರೂ ಅವನನ್ನು ಬಿಡುವೆನೆ ನಾನು? ಮತ್ತೆ ಉಸುರಿದ್ದೇನೆ ಅಹವಾಲನ್ನು ವಿವರಣೆಗಳ ದೀರ್ಘವಾಗಿ ಇತ್ತಿದ್ದೇನೆ ಇನ್ನೂ ಉತ್ತರಕೆ ಕಾಯುತ್ತಲಿದ್ದೇನೆ ಭೂಮಿಯಲ್ಲಿಹುದು ನ್ಯಾಯಕೋರ್ಟು ಅಧಿಪತಿಯದಕೊಬ್ಬ ಕರಿಕೋಟು! ಹೋರಾಡುವರು ಲಾಯರುಗಳು ನಿಜವ ಬಿಡಿಸಿ ಮನಕೆ ಮುಟ್ಟಿಸಲು ನಿನ್ನದೆಂತಹ ಕೋರ್ಟಿದಯ್ಯ? ಸಿಕ್ಕಿದಂತೆ ಶಿಕ್ಷೆಗೊಡ್ಡುವೆಯಲ್ಲಯ್ಯ? ವಿಚಾರಣೆಯ ಗೋಜೇ ಇಲ್ಲ ಸಮಜಾಯಿಷಿಗೆ ಸ್ಥಳವೇ ಇಲ್ಲ ನೀನೆ ಕೋರ್ಟು, ನೀನೇ ಲಾಯರು ನೀನೇ ಜಡ್ಜು, ನೀನೇ ಸಾಕ್ಷಿಜನ ಕೇಸುಹಾಕುವವನು ನೀನೇ ಕೇಸುವಾದಿಸುವವನೂ ನೀನೆ ತೀರ್ಮಾನ ನೀಡುವವನು ನೀನೆ ಶಿಕ್ಷೆ ಘೋಷಿಸುವವನು ನೀನೆ ಶಿಕ್ಷೆಕೊಡುವವನೂ ನೀನೇ ಸಿಂಗಲ್ ಟೀಚರ್ ಸ್ಕೂಲ್ ಹೆಡ್ಮಾಸ್ಟರ್? ಅಪರಾಧಿಗೊಂದು ಅವಕಾಶವುಂಟು ಸಾಧಿಸಿಕೊಳ್ಳಲು ಇಲ್ಲಿ ತನ್ನ ಪಟ್ಟು ಇಲ್ಲವೇ ಇಲ್ಲ ಹಿಯರಿಂಗ್ ಅಲ್ಲಿ! ದೇವನೇ ನಿನ್ನ ನ್ಯಾಯಲಯದಲ್ಲಿ ಒಂದೇ ದೂರು ನಿನ್ನಕೆಲಸದ ಬಗೆಗೆ ತಪ್ಪಿಗೆ ಶಿಕ್ಷೆಯಿರಲೇ ಬೇಕು, ವ್ಯಕ್ತಿಗೆ ತಪ್ಪು ಸರಿ ನಿರ್ಣಯವೆ ತಪ್ಪಾದರೆ? ನಿನ್ನ ಮೂಗೇ ನೇರವಾಗಿಲ್ಲದಿರೆ? ನೀನೊಮ್ಮೆ ಬುವಿಗೆ ಬರಲೇಬೇಕು ಸರಿತಪ್ಪು ಕಡತಗಳ ತರಲೇಬೇಕು ಕೆಟ್ಟ- ಒಳ್ಳೆ ಕೆಲಸಗಳ, ಪಟ್ಟಿ ಬೇಕು ದಸ್ತಾವೇಜು ನೀನು ಬಿಚ್ಚಿಡಲೇಬೇಕು ದೇವಕಿಗೆ ಮಗನಾಗಿ ಉದ್ಧರಿಸಿದೆ ನೀ ಯಶೋದೆಯ ಕಂದನೆನಿಸಿ ನಲಿದೆ ನೀ ಶಬರಿ ಇತ್ತ ಎಂಜಲನು ತಿಂದು ನಲಿದೆ ಅಹಲ್ಯೆಯ ಶಾಪ ಕ್ಷಣದೊಳೆ ತೊಳೆದೆ ಅವರಾರೂ ಪಾಪವನು ಮಾಡದವರೇನು ನಿನ್ನಲ್ಲಿ ನನ್ನ ಬಹುಕೃತ ಅಪರಾಧವೇನು ಅಜ್ಞಾನದಲಿ ನಾನು ಬಳಲಿದರೇನು? ತಿದ್ದಿ ಕಾಯ್ವುದು ನಿನ್ನ ಧರ್ಮವಲ್ಲವೇನು? ನೀನು ಕಂಡ ಅಳತೆಗೋಲ ಬಿಸುಡು ಕರುಣೆ ಸಮುದ್ರವನು ಹರಿಯಬಿಡು ಅಪರಾಧಿ ನಿರಪರಾಧಿಗಳ ಗುರುತಿಸು ನಿನ್ನ ಕ್ಷಮಾಗುಣವನೆಲ್ಲರಲಿ ಸುರಿಸು ಮಂದಮತಿಯೆನ್ನಇಷ್ಟೊಂದು ಕಾಡದಿರು ಮನಕನುದಿನದ ಶಾಂತಿಯ ನೀಡು ಸಂಸಾರದೀ ಜಂಜಾಟ ಬಗೆಹರಿಸು ಮತ್ತೊಮ್ಮೆ ಬುವಿಗೆ ಬಾರದಂತೆ ಹರಸು * ಡಾ.ಸತ್ಯವತಿ ಮೂರ್ತಿ
ಮಿಂಚಂಚೆ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಸತ್ಯವತಿ ಮೂರ್ತಿ ,ಇಂಗ್ಲೆಂಡ್
ಡಾ ಸತ್ಯವತಿ ಮೂರ್ತಿ.ಮ್ಯಾಂಚೆಸ್ಟರ್ , ಇಂಗ್ಲೆಂಡ್,B.Sc, B.A, M.A, B Ed.
ಬರಹಗಾರ್ತಿ, ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದೆ, ಇವರ ಪಿ.ಎಚ್.ಡಿ ಯ ನಿಬಂಧವೂ ಸೇರಿದಂತೆ 4 ಪುಸ್ತಕಗಳು ಪ್ರಕಟಗೊಂಡಿವೆ. ಸುಮಾರು 25 ವರ್ಷಗಳಿಂದ ಮ್ಯಂಚಸ್ಟರ್ ನಲ್ಲಿ ನೆಲೆಸಿದ್ದಾರೆ. ಇವರ ಬರಹ , ಕವನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಕವಿತೆ ಹಾಗೂ ನಾಟಕಗಳು ಬಹುಮಾನಗಳಿಸಿವೆ . ’ರೆಫ಼ೆರೆನ್ಸ್ ಏಷ್ಯಾ’ ಮೆನ್ ಅಂಡ್ ವಿಮೆನ್ ಆಫ಼್ ಅಛೀವ್ಮೆಂಟ್ಸ್ ನಲ್ಲಿ ಇವರ ಹೆಸರು ಉಕ್ತವಾಗಿದೆ.ಇಂಗ್ಲಿಂಡಿನಲ್ಲೂ ಕನ್ನಡ ಬಳಗ, ವೀರಶೈವ ಸಂಘ, ಮೆಟಫಿಸಿಕಲ್ ಸೊಸೈಟಿ , ಕಲಾ ಸಂಗಮ ಮೊದಲಾದ ಕಡೆಗಳಲ್ಲಿ ಇವರು ವಿವಿಧ ವಿಷಯಗಳನ್ನು ಕುರಿತು ಮಾತನಾಡಿ ಜನಮನವನ್ನು ಗೆದ್ದಿದ್ದಾರೆ. ಇಂಗ್ಲೆಂಡ್ ಸಕಾರದಿಂದ ’ ಹಿಂದೂ ಪ್ರಿಸನ್ ಮಿನಿಸ್ಟರ್’ ಆಗಿ ನೇಮಕಗೊಂಡಿದ್ದರು ಇತ್ತೀಚೆಗೆ ಕಂಪೆನಿಯೊಂದರ ಕಾರ್ಯಕರ್ತರಾಗಿ ನಿವೃತ್ತರಾದ ಇವರು , ಇಲ್ಲಿಯ ಮಕ್ಕಳಲ್ಲಿ ನಮ್ಮ ಸಂಸೃತಿಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ
All Posts
7 thoughts on “ಮಿಂಚಂಚೆ”
ಚೆನ್ನಾಗಿದೆ.
Dhanyavadagalu raghuram
Dhanyavadagalu raghu ram avarige
ತುಂಬಾ ಸೊಗಸಾಗಿದೆ.
ಮತ್ತೆ ಮತ್ತೆ ಓದಿಸುತಿದೆ ಈ ನಿಮ್ಮ ಕವಿತೆ,
ಭಕ್ತ-ಕವಿ ಸಂಗೀತಕಾರರ ಇದೇ ಧಾಟಿಯಲ್ಲಿ ಎಷ್ಟೋ ಬೇಡಿಕೆ-ತಕರಾರುಗಳನ್ನೂ ಕೇಳಿದ್ದೇನೆ, ಬರಹ- ಕವಿತೆಗಳನ್ನು ಓದಿದ್ದೇನೆ. ಇದು ಬಹಳ ಹಿಡಿಸಿತು. ಸುಲಲಿತವಾಗಿ ಹರಿದು ಕವಯಿತ್ರಿಯ ಪಾಪಗಳನ್ನು (ಇದ್ದರೆ) ತೊಳೆದುಕೊಂಡು ಹೋಗುವ ಝರಿಯಂತೆ ಇದು! ಭಲೇ!
ಶ್ರೀವತ್ಸ ಅವರು ಸ್ಪಂದಿಸಿದ್ದು ನನಗೆ ಬಹಳ ಖುಶಿ ಕೊಟ್ಟಿದೆ. ಕವಯಿತ್ರಿಯ ಪಾಪಗಳು ಇಲ್ಲವೇ ಇಲ್ಲ ಎಂದರೆ ಅದೇ ಒಂದು ಪಾಪವಾದೀತು. ಕವನ ನಿಮಗೆ ಇಷ್ಟವಾಯಿತು ಎಂದು ತಿಳಿದು ಬಹಳ ಸಂತೋಷವಾಯಿತು. ಅನಂತ ಧನ್ಯವಾದಗಳು .
ಅನಂತ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಪ್ರತಿಮಾ ಅವರೆ. ನಿಮ್ಮ ನಂಬರ್ ನನ್ನೊಡನೆ ಹಂಚಿಕೊಳ್ಳಬಹುದೆ?