ವಿವಶ (ಧಾರಾವಾಹಿ ಭಾಗ-17)

ಅಂದು ಪ್ರೇಮಾಳ ಮನೆಯಲ್ಲಿ ಮಾರಿಯೌತಣದ ಆತಿಥ್ಯವನ್ನು ಗಡದ್ದಾಗಿ ಸ್ವೀಕರಿಸಿದ ತೋಮ ನಂತರದ ದಿನಗಳಲ್ಲಿ ಹೆಚ್ಚಾಗಿ ಅವಳ ಮನೆಯಲ್ಲೇ ಇರತೊಡಗಿದ. ಪ್ರೇಮಾಳ ಮನೆಯಲ್ಲಿ ಯಾವುದೇ ಸಣ್ಣಪುಟ್ಟ ವಿಶೇಷವಿರಲಿ ಅಥವಾ ದೊಡ್ಡ ಹಬ್ಬಹರಿದಿನಗಳಿರಲಿ,ಅವಳು ಅಥವಾ ಅಂಗರನಿಂದ ಅವನಿಗೆ ತಪ್ಪದೆ ಹೇಳಿಕೆ ಹೋಗುತ್ತಿತ್ತು. ಆಗ ಅದೇ ನೆಪದಲ್ಲಿ ಹೋಗುತ್ತಿದ್ದನು ನಾಲ್ಕೈದು ದಿನಗಳ ಕಾಲ ತನ್ನ ಪ್ರೇಯಸಿಯ ಸಹಚರ್ಯದಲ್ಲೂ ಅಂಗರನ ವಯೋಸಹಜ ಏಕಾಂಗಿತನದಲ್ಲೂ ಜೊತೆಯಾಗುತ್ತ ಅಲ್ಲಿಯೇ ಝಾಂಡ ಹೂಡುತ್ತಿದ್ದ. ಜೊತೆಗೆ ತನ್ನ ದುಡಿಮೆಯಲ್ಲಿ ಒಂದಿಷ್ಟನ್ನು ಪ್ರೇಮಾಳ ಕೈಗೂ,ಅಂಗರನ ಶರಾಬು ಖರ್ಚಿಗೂ ಒತ್ತಾಯಿಸಿ ಕೊಡುತ್ತಿದ್ದ. ಅಷ್ಟಲ್ಲದೆ ಮನೆಗೆ ಬೇಕಾದ ಹೊರಗಿನ ದಿನಸಿ, ಮೀನು ಮತ್ತು ಮಾಂಸವನ್ನು ಆಗಾಗ ಹೊತ್ತೊಯ್ದು ಕೊಟ್ಟು ದುರ್ಗಕ್ಕನನ್ನು ತೃಪ್ತಿಪಡಿಸುತ್ತ ಎಲ್ಲರನ್ನೂ ಅಂಕೆಯಲ್ಲಿಟ್ಟುಕೊಂಡಿದ್ದ. ಹೀಗಾಗಿ ಅವನು ಬಹಳ ಬೇಗನೇ ಅವರೆಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರನಾಗಿ ಬಿಟ್ಟ. ತೋಮನಂಥ ಗಟ್ಟಿ ಆಳೊಬ್ಬ ತಮ್ಮ ಮನೆ ಮಗನಂತೆಯೇ ಇದ್ದುದು ಅಂಗರ ಮತ್ತು ದುರ್ಗಕ್ಕನಿಗೆ ಸಂತಸ, ಹೆಮ್ಮೆಯ ವಿಷಯವಾಗಿತ್ತು. ಆದರೆ ಅಶೋಕನಿಗೆ ಮಾತ್ರ ಅದು ಹಿಡಿಸುತ್ತಿರಲಿಲ್ಲ. ತೋಮ ಮನೆಗೆ ಬಂದು ಹೋಗುತ್ತಿದ್ದುದಕ್ಕೆ ಅವನ ಆಕ್ಷೇಪವಿರಲಿಲ್ಲ. ಆದರೆ ತನ್ನ ಅಕ್ಕನೊಂದಿಗೆ ಅವನಿಗಿದ್ದ ಅತಿಯಾದ ಸಲುಗೆ ಮತ್ತು ರಾತ್ರಿ ಹಗಲೆನ್ನದೇ ಅವನು ದಿನಗಟ್ಟಲೆ ತನ್ನ ಮನೆಯಲ್ಲೇ ಬಿದ್ದುಕೊಳ್ಳುತ್ತಿದ್ದುದು ಅವನಿಗೆ ಚೂರೂ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಅವನು ಅದನ್ನು ಕೆಲವು ಬಾರಿ ಅಪ್ಪ ಅಮ್ಮನಿಗೆ ಸೂಕ್ಷ್ಮವಾಗಿ ತಿಳಿಯಪಡಿಸಿದ್ದ.ಆದರೆ ಅಂಗರ ಮತ್ತು ದುರ್ಗಕ್ಕನಿಗೆ ತೋಮನ ಮೇಲೆ ಅದಾಗಲೇ ಅತಿಯಾದ ನಂಬಿಕೆ, ಪ್ರೀತ್ಯಾದರಗಳು ಬೆಳೆದು ಬಿಟ್ಟಿದ್ದುವು. ಆದ್ದರಿಂದ ಮಗ ಆ ವಿಷಯ ಎತ್ತಿದಾಗಲೆಲ್ಲ ಅವರು ಅವನಿಗೇ ಬುದ್ಧಿ ಹೇಳುತ್ತ ಅಥವಾ ಬೈಯ್ಯುತ್ತಲೋ ಸುಮ್ಮನಾಗಿಸುತ್ತಿದ್ದರು.
ಅಶೋಕ ಮನೆ, ಕಟ್ಟಡ ನಿರ್ಮಿಸುವ ಮೇಸ್ತ್ರಿ ವೃತ್ತಿಯವನು. ಅವನು ಆವತ್ತೊಂದು ಶನಿವಾರ ಸಂಜೆ ತನ್ನ ಕೆಲಸಗಾರರಿಗೆ ವಾರದ ಮಜೂರಿಯನ್ನು ಬಟವಾಡೆ ಮಾಡಿದವನು, ಗಂಗರಬೀಡಿನ ಪೇಟೆಯಲ್ಲಿರುವ ಪದ್ದು ಮಡಿವಾಳನ ಸೆಲೂನಿಗೆ ತಲೆಕೂದಲು ಕತ್ತರಿಸಿ ಕೊಳ್ಳಲು ಹೋದ. ಪದ್ದುವು ಅಶೋಕನ ಬಾಲ್ಯ ಸ್ನೇಹಿತ. ಆದ್ದರಿಂದ ಅವರ ನಡುವೆ ಹೆಚ್ಚಿನ ಸಲುಗೆಯಿತ್ತು. ಇವತ್ತು ಅಶೋಕ ಸೆಲೂನು ಹೊಕ್ಕ ಹೊತ್ತಿಗೆ ಪದ್ದುವು ಹುಡುಗನೊಬ್ಬನ ಕ್ಷೌರ ಮಾಡುತ್ತಿದ್ದ. ಆದರೆ ಗೆಳೆಯನನ್ನು ಕಂಡವನು ಎಂದಿನಂತೆ ಆಪ್ತತೆಯಿಂದ ಆಹ್ವಾನಿಸಿ ಅವನಿಗೊಂದು ರಹಸ್ಯ ತಿಳಿಸುವ ಆತುರದಲ್ಲಿದ್ದ. ಹಾಗಾಗಿ,‘ಓಹೋ ಬಂದಿಯಾ ಮಾರಾಯಾ…! ಬಾ, ಬಾ. ಕುಳಿತುಕೋ. ನಿನ್ನನ್ನೇ ಕಾಯುತ್ತಿದ್ದೆ. ಸ್ವಲ್ಪ ಮಾತಾಡುವುದಿತ್ತು!’ ಎಂದ. ಅಶೋಕ ಗೆಳೆಯನ ಮಾತಿನಲ್ಲಿದ್ದ ಆತಂಕದೆಳೆಯನ್ನು ಗಮನಿಸಿ ಸ್ವಲ್ಪ ಗೊಂದಲಗೊಂಡ.
‘ಅಂಥದ್ದೇನಾಯ್ತು ಮಾರಾಯಾ…?’ ಎಂದ ನಗುತ್ತ.
‘ಏನಿಲ್ಲ ಮಾರಾಯಾ,ನಿನ್ನ ಹತ್ರ ಒಂದು ಮುಖ್ಯ ಸಂಗತಿ ಮಾತಾಡುವುದಿತ್ತು. ಹಾಗಾಗಿ ಗಡಿಬಿಡಿ ಮಾಡಬೇಡ.ಸ್ವಲ್ಪ ತಾಳ್ಮೆಯಿಂದಿರು!’ಎಂದ ಪದ್ದು ಗಂಭೀರವಾಗಿ.
‘ಅಯ್ಯೋ, ಮಾರಾಯಾ…ಇಡೀ ಊರಿನ ಸುದ್ದಿಗಳು ಬಂದು ನಿನ್ನ ಕಿವಿಗೆ ಬೀಳುತ್ತವೆ.ಕೂದಲು ಕತ್ತರಿಸಲು ಬರುವ ಕೆಲವರು ಸುಮ್ಮನೆ ಅದನ್ನು ಕತ್ತರಿಸಿಕೊಂಡು ಹೋಗುವುದನ್ನು ಬಿಟ್ಟು ತಮ್ಮ ಬಾಯಿ ಚಪಲಕ್ಕೋ,ಮಂಡೆ ಹಗುರ ಮಾಡಿಕೊಳ್ಳಲಿಕ್ಕೋ ಎಂಬಂತೆ ನೆರೆಕರೆಯ, ಊರಿನ ಇಲ್ಲಸಲ್ಲದ ಸಮಾಚಾರಗಳಿಂದ ಹಿಡಿದು ತಮ್ಮ ಹೆಂಡತಿ ಮಕ್ಕಳ ವಿಚಾರಗಳನ್ನೂ ಹರಟುತ್ತ ನಿನ್ನ ತಲೆಗೆ ಹುಳ ಬಿಟ್ಟು ಹೋಗುತ್ತಾರೆ.ಆಮೇಲೆ ನೀನಾದರೂ ಸುಮ್ಮನಿರುತ್ತೀಯಾ ಹೇಳು? ಅವನ್ನೆಲ್ಲಾ ಎಷ್ಟು ಬೇಗ ಸಾಧ್ಯವೋ ಅಷ್ಟು ತುರಂತಾಗಿ ಯಾರ್ಯಾರ ತಲೆಗೋ ದಾಟಿಸದಿದ್ದರೆ ನಿನ್ನ ಕೈಯಲ್ಲಿ ಕತ್ತರಿಯೇ ಆಡುವುದಿಲ್ಲ ಬಿಡು!’ ಎಂದು ಅಶೋಕ ಹಾಸ್ಯ ಮಾಡಿ ನಕ್ಕ. ಆದರೆ ಹಿಂದೆಲ್ಲ ಗೆಳೆಯನ ಮಾತಿಗೆ ಚುಡಾಯಿಸಿ, ರೇಗಿಸಿ ನಗುತ್ತಿದ್ದ ಪದ್ದುವು ಇವತ್ತು,‘ಏನು ಮಾಡುವುದು ಮಾರಾಯಾ. ಹೊತ್ತು ಹೋಗ ಬೇಕಲ್ಲಾ…?’ಎಂದಷ್ಟೇ ಉತ್ತರಿಸಿ ತನ್ನ ಕೆಲಸದಲ್ಲಿ ನಿರತನಾದ. ಸ್ವಲ್ಪ ಹೊತ್ತಲ್ಲಿ ಹುಡುಗನ ಹೇರ್ಕಟ್ಟಿಂಗ್ ಮುಗಿಸಿ ದುಡ್ಡು ಪಡೆದು ಅವನನ್ನು ಕಳುಹಿಸಿದವನು ಅಶೋಕನನ್ನು ಕುಳ್ಳಿರಿಸಿಕೊಂಡ. ಬಳಿಕ ಅವನೊಡನೆ ಅದೂ ಇದೂ ಮಾತಾಡುತ್ತ ತಾನು ಹೇಳಬೇಕಾದ ವಿಷಯವನ್ನಾರಂಭಿಸಿದ.
‘ನೋಡು ಅಶೋಕ, ನೀನು ನನ್ನ ಬಹಳ ಹತ್ತಿರದ ದೋಸ್ತಿ ಎಂಬ ಸಲುಗೆಯಿಂದಲೇ ಒಂದು ಮಾತು ಹೇಳುತ್ತೇನೆ. ನೀನದನ್ನು ತಪ್ಪು ತಿಳಿಯಬಾರದು!’ ಎಂದು ಅವನ ಉತ್ತರಕ್ಕೆ ಕಾದ.
‘ಅರೇ…! ಅಂಥದ್ದೇನಾಯ್ತನಾ? ಹೇಳು ಪರ್ವಾಗಿಲ್ಲ!’ ಎಂದ ಅಶೋಕ ಸಹಜವಾಗಿ.
‘ಈ ಸಂಗತಿ ನನಗೆ ನಿನ್ನೆಯಷ್ಟೇ ತಿಳಿಯಿತು ಮಾರಾಯಾ. ಆದರೆ ಕೇಳಿ ಒಮ್ಮೆ ಮಂಡೆ ಹಾಳಾಯ್ತು ನೋಡು! ಅದು ಸತ್ಯವಾ, ಸುಳ್ಳಾ ಆಮೇಲಿನ ಮಾತು.ಆದರೆ ನೀನು ಯಾವುದಕ್ಕೂ ಸ್ವಲ್ಪ ಜಾಗ್ರತೆಯಿಂದಿರುವುದು ಒಳ್ಳೆಯದು!’ಎಂದ ಮೃದುವಾಗಿ. ಆಗ ಅಶೋಕನ ಆತಂಕವು ಮೆಲ್ಲನೆ ಇಮ್ಮಡಿಯಾಯಿತು. ಅವನು ಕೂಡಲೇ,‘ಹೇ, ಸರಿ ಸರಿ ಮಾರಾಯಾ. ನೀನೇನಿದ್ದರೂ ನನ್ನ ಒಳ್ಳೆಯದಕ್ಕೇ ಹೇಳುತ್ತಿ ಅಂತ ಗೊತ್ತಿದೆ ನಂಗೆ. ಈಗ ಮೊದಲು ವಿಷಯಕ್ಕೆ ಬಾ!’
‘ನಿನ್ನೆ ಸಂಜೆ ಅಂಬರಬೆಟ್ಟಿನ ಅಣ್ಣಯ ಪಂಡಿತರ ಕೆಲಸದವನು ಭೈರನಾಯ್ಕ ಬಂದಿದ್ದ.ಅವನೊಂದಿಗೆ ಹೀಗೆಯೇ ಮಾತಾಡುತ್ತಿದ್ದೆ. ಆಗ ಅವನು ಒಂದು ಸುದ್ದಿಹೇಳಿದ. ಆದರೆ ನನಗದನ್ನು ನಂಬಲಿಕ್ಕೇ ಆಗಲಿಲ್ಲ ನೋಡು! ಅಷ್ಟಲ್ಲದೇ ಅವನು ಆ ವಿಷಯವನ್ನು ನಿನಗೆ ತಿಳಿಸ ಬೇಕೆಂತ ಒತ್ತಾಯ ಮಾಡಿ ಹೋದ!’ ಎಂದ ಪದ್ದುವಿಗೆ ಮುಂದಿನ ವಿಷಯವನ್ನು ಹೇಳಲು ಅಳುಕು ಕಾಡಿತು. ಆದ್ದರಿಂದ ಅವನು ಮತ್ತೆ ಮೌನವಾಗಿ ಗೆಳೆಯನ ಪ್ರತಿಕ್ರಿಯೆಗೆ ಕಾದ.
‘ಅರೇ, ನನಗೆ ತಿಳಿಸುವ ವಿಷಯವಾ? ಅದೆಂಥದ್ದು ಮಾರಾಯಾ…?’ಎಂದ ಅಶೋಕ ಕುತೂಹಲದಿಂದ.
‘ಹೌದು. ಆದರೆ ಅದನ್ನು ಹೇಗೆ ಹೇಳಬೇಕೆಂದೇ ತಿಳಿಯುತ್ತಿಲ್ಲ ಮಾರಾಯಾ…!’ ಎಂದು ಪದ್ದು ಮತ್ತೆ ರಾಗವೆಳೆದ.ಆಗ ಅಶೋಕನ ತಾಳ್ಮೆ ತಪ್ಪಿತು. ‘ಹೇ ನಾಯೀ… ಹೆಚ್ಚು ಸತಾಯಿಸ ಬೇಡ.ಸುಮ್ಮನೆ ವಿಷಯವೇನೆಂಬುದನ್ನು ಬೊಗಳಿ ಸಾಯಿ! ನೀನು ಹೀಗೆ ಸಸ್ಪೆನ್ಸ್ ಸಿನ್ಮಾದ ಥರಾ ವಿಷಯವನ್ನು ಎಳೆದೆಳೆದು ಹೇಳುತ್ತಿದ್ದರೆ ನನ್ನ ತಲೆ ಚಿಟ್ಟು ಹಿಡಿಯುತ್ತದೆಯಷ್ಟೆ!’ ಎಂದ ಅಸಹನೆಯಿಂದ.ಹಾಗಾಗಿ ಪದ್ದು ಮತ್ತೆ ತಡಮಾಡಲಿಲ್ಲ.
‘ಪ್ರೇಮಕ್ಕನಿಗೆ ಮೊನ್ನೆ ಹುಷಾರಿರಲಿಲ್ಲವಂತೆ ಹೌದಾ…?’
‘ಹುಷಾರಿರಲಿಲ್ಲವಾ, ಯಾರು ಹೇಳಿದ್ದು? ಆರಾಮವಾಗಿಯೇ ಇದ್ದಾಳಲ್ಲಾ…!’
“ಅಲ್ಲ ಮಾರಾಯಾ, ಮೊನ್ನೆ ಒಂದು ದಿನ ಅವಳಿಗೆ ಪದೇಪದೇ ವಾಂತಿಯಾಯಿತಂತೆ. ಅದಕ್ಕೆ ದುರ್ಗಕ್ಕ ಅಣ್ಣಯ ಪಂಡಿತರ ಮನೆಗೆ ಕರೆದುಕೊಂಡು ಹೋಗಿದ್ದರಂತೆ. ಪಂಡಿತರು ಅವಳನ್ನು ಪರೀಕ್ಷಿಸಿ ವಾಂತಿಗೆ ಮದ್ದು ಕೊಟ್ಟು ಕಳುಹಿಸಿದರಂತೆ. ಪಂಡಿತರಿಗೆ ಬೇಕಾಗುವ ಮದ್ದುಗಳನ್ನು ಅರೆಯುವುದು, ಕೊಡುವುದು ಭೈರನೇ ಅಲ್ಲವಾ…? ಹಾಗಾಗಿ ಅವನೆದುರು ಪಂಡಿತರು,‘ಪ್ರೇಮಾಳಿಗೆ ಗರ್ಭ ನಿಂತು ಮೂರು ತಿಂಗಳಾಗಿದೆ!’ಎಂದರಂತೆ. ಆಗ ದುರ್ಗಕ್ಕ ಕುಸಿದು ಕುಳಿತು ಅತ್ತರಂತೆ. ಈ ಸುದ್ದಿಯನ್ನು ಬಹುಶಃ ದುರ್ಗಕ್ಕ ನಿನಗೆ ತಿಳಿಸಿರಬಹುದೆಂದು ಭಾವಿಸಿದ್ದೆ!” ಎಂದು ಪದ್ದುವು ಮೆತ್ತಗೆ ವಿವರಿಸಿದ.
ಆದರೆ ಅಷ್ಟು ಕೇಳಿದ ಅಶೋಕನಿಗೆ ಸಿಡಿಲೆರಗಿದಂತಾಯಿತು.ಅವಮಾನದಿಂದ ಗೆಳೆಯನಿಗೆ ಮುಖ ತೋರಿಸಲಾಗದೆ ಕೆಲವು ಕ್ಷಣ ಚಡಪಡಿಸಿದ.ಅತ್ತ ಪದ್ದು ಗೆಳೆಯನ ತಲೆ ಕೂದಲು ಕತ್ತರಿಸುತ್ತಲೇ ಇದ್ದ.
‘ಛೇ! ಛೇ! ಅಂಥದ್ದೆಲ್ಲ ಏನೂ ಆಗಿಲ್ಲ ಮಾರಾಯಾ. ನಮ್ಮನೆಯಲ್ಲಿ ಅದೇನು ನಡೆದರೂ ನನಗೆ ತಿಳಿಯದಿರುತ್ತದಾ ಹೇಳು? ಅಮ್ಮ ನಂಗೆ ಎಲ್ಲವನ್ನೂ ಹೇಳುತ್ತಾಳೆ. ಇದೆಲ್ಲ ಯಾರೋ ನಮಗಾಗದವರು ಹಬ್ಬಿಸಿರುವ ಸುಳ್ಳು ಸುದ್ದಿಯಷ್ಟೆ!’ ಎಂದ ಅಶೋಕ ಬೇಸರದಿಂದ.
“ಇರಬಹುದು ಮಾರಾಯಾ.ಮೊದಲು ನಾನೂ ಹಾಗೆಯೇ ಅಂದುಕೊಂಡೆ. ಆದರೆ ಭೈರ ಅಂಥವನಲ್ಲ. ಅವನು ಆ ವಿಷಯದಲ್ಲೆಲ್ಲ ಸುಳ್ಳು ಯಾಕೆ ಹೇಳುತ್ತಾನೆ? ಅಷ್ಟಲ್ಲದೇ, ‘ನೋಡು ಪದ್ದು, ಅಶೋಕ ನಿನ್ನ ದೋಸ್ತಿ ಎನ್ನುವ ಕಾರಣಕ್ಕಾಗಿಯೇ ನಾನಿದನ್ನು ನಿನಗೆ ತಿಳಿಸಿದ್ದು.ಈ ವಿಷ್ಯವನ್ನು ಬಹಳ ರಹಸ್ಯವಾಗಿಡಬೇಕು ಆಯ್ತಾ!’ ಎಂದು ಕೈಮುಗಿದು ಹೇಳಿ ಹೋಗಿದ್ದಾನೆ ಪಾಪ! ಹಾಗಾಗಿ ಅದೇನೇ ಇರಲಿ. ನೀನು ಮಾತ್ರ ಬಹಳ ತಾಳ್ಮೆಯಿಂದ ಪ್ರೇಮಕ್ಕನನ್ನು ವಿಚಾರಿಸಿ ನೋಡು. ಈ ಕೆಲಸವು ಬೆಣ್ಣೆಯಲ್ಲಿ ಕೂದಲು ಎಳೆದಷ್ಟು ಸಲೀಸಾಗಿ ಆಗಬೇಕು. ಇಲ್ಲದಿದ್ದರೆ ಮನೆಯ ಮಾನ ಮರ್ಯಾದೆ ಬೀದಿಪಾಲಾದೀತು. ಒಂದು ವೇಳೆ ಇದು ಸತ್ಯವೇ ಆಗಿದ್ದರೂ ನೀನು ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಬಿಡು.ಅದನ್ನು ತೆಗೆಸುವ ಮದ್ದನ್ನೂ ಭೈರನೇ ಕೊಡುತ್ತಾನಂತೆ!’ ಎಂದು ಪದ್ದುವು ಗೆಳೆಯನಿಗೆ ಧೈರ್ಯ ತುಂಬಿದ. ಆದರೆ ಅಶೋಕ ಸಂಪೂರ್ಣ ಅಶಾಂತನಾದವನು ಉಧ್ರಿಕ್ತನಾಗಿ ಮನೆಯತ್ತ ದಾಪುಗಾಲಿಕ್ಕಿದ.
ಓಹೋ…! ನನ್ನ ಮನೆಯ ಕಥೆ ಈಗ ಈ ಮಟ್ಟಕ್ಕೆ ಬಂದು ಬಿಟ್ಟಿದೆಯಾ..? ಅದಕ್ಕೇ ಇರಬೇಕು ಅಮ್ಮ ಮಗಳಿಬ್ಬರೂ ಮೂರು ದಿನಗಳಿಂದಲೂ ನೆತ್ತಿಯ ಮೇಲೆ ತೆಂಗಿನಕಾಯಿ ಅಪ್ಪಳಿಸಿದವರ ಹಾಗೆ ಕುಳಿತಿದ್ದುದು!ಇವಳನ್ನು ಯಾವನು ಬಸುರು ಮಾಡಿದ? ಹೆಡ್ಡಿ ನಾಯ್ಕರ ಮಕ್ಕಳಾ…? ಈ ಬಿಕನಾಸಿ ಮೂರು ಹೊತ್ತು ಅಲ್ಲೇ ಬಿದ್ದು ಕೊಂಡಿರುತ್ತಾಳಲ್ಲಾ? ಎಂದು ಮೊದಲು ಶಂಕಿಸಿದ. ಆದರೆ ಮರುಕ್ಷಣ, ಛೇ, ಛೇ! ಅವರ ಮಕ್ಕಳು ಬಹಳ ಒಳ್ಳೆಯವರು. ಹಾಗೆಲ್ಲ ಮಾಡಲಿಕ್ಕಿಲ್ಲ. ಇಂಥ ಹಲ್ಕಟ್ ಕೆಲಸವನ್ನು ಆ ತೋಮನೇ ಮಾಡಿರಬೇಕು. ನಾಲ್ಕೈದು ತಿಂಗಳಿನಿಂದ ಪದೇಪದೇ ಗುಳ್ಳೆ ನರಿಯಂತೆ ಅವನು ಮನೆಯತ್ತ ಸುಳಿಯುತ್ತಿದ್ದಾಗಲೇ ನನಗೆ ಅನುಮಾನ ಬರುತ್ತಿತ್ತು. ಅದಕ್ಕಾಗಿಯೇ ಅವನನ್ನು ಮನೆಗೆ ಬಂದು ಬಿದ್ದುಕೊಳ್ಳಲು ಬಿಡಬೇಡಿ. ನೆರೆಕರೆಯವರು ತಪ್ಪು ತಿಳಿದುಕೊಳ್ಳುತ್ತಾರೆ ಅಂತ ಅಮ್ಮ ಅಪ್ಪನಲ್ಲಿ ಎಷ್ಟೊಂದು ಸಾರಿ ಬಡಕೊಂಡೆ!ಆದರೆ ನನ್ನ ಮಾತನ್ನವರು ಕಿವಿಗೇ ಹಾಕಿಕೊಳ್ಳಲಿಲ್ಲ. ಅದಕ್ಕೆ ಸರಿಯಾಗಿ ಆ ಬೋಳಿಮಗ ಸರಿಯಾದ ಬತ್ತಿ ಇಟ್ಟುಬಿಟ್ಟ!ಎಂದು ಕೋಪದಿಂದ ಕುದಿಯುತ್ತ ಮನೆಯಂಗಳಕ್ಕೆ ಬಂದು ನಿಂತ.ಆ ಹೊತ್ತು ಅಮ್ಮ ಮಗಳಿಬ್ಬರೂ ಅಂಗಳದಲ್ಲಿ ಮಡಲು ಹೆಣೆಯುತ್ತಿದ್ದರು.ಅಶೋಕ ಇಬ್ಬರನ್ನೂ ಕೆಕ್ಕರಿಸುತ್ತ ಒಳಗೆ ಹೋದವನು ಕೆಲವು ಕ್ಷಣ ಮೌನವಾಗಿ ಕುಳಿತ. ಬಳಿಕ,‘ಅಮ್ಮಾ…!’ ಎಂದು ಕೋಪದಿಂದ ಅರಚಿದ. ಅವನ ಬೊಬ್ಬೆಗೆ ದುರ್ಗಕ್ಕ ಬೆಚ್ಚಿಬಿದ್ದಳು. ಮಗ ಎಂದೂ ಹೀಗೆ ಕೂಗದವನಿಗೆ ಇವತ್ತೇನಾಯಿತ್ತಪ್ಪಾ?ತಮ್ಮ ಗುಟ್ಟೇನಾದರೂ ರಟ್ಟಾಗಿ ಬಿಟ್ಟಿತಾ…? ಎಂದು ಯೋಚಿಸಿದವಳಿಗೆ ತಟ್ಟನೆ ಭಯವೆದ್ದಿತು. ಆದರೂ ತೋರಿಸಿಕೊಳ್ಳದೆ,‘ಏನಾಯ್ತು ಮಾರಾಯಾ,ಬಂದೆ ಇರು…!’ ಎನ್ನುತ್ತ ಎದ್ದು ಒಳಗೆ ಹೋದಳು. ಪ್ರೇಮಾಳಿಗೂ ಅನುಮಾನವಾಯಿತು. ದೇವರೇ ಮುಂದೇನು ಕಾದಿದೆಯೋ…! ಎಂದು ಚಡಪಡಿಸಿದವಳ ಕೈಬೆರಳುಗಳು ಉದಾಸೀನದಿಂದ ಮಡಲಿನ ಒಲಿಗಳನ್ನು ನೆಯ್ಯುತ್ತಿದ್ದವು. ಇತ್ತ ಒಳಗೆ ಹೋದ ದುರ್ಗಕ್ಕನಿಗೆ ಮಗನೆದುರು ನಿಲ್ಲಲ್ಲು ಅಂಜಿಕೆಯಾಯಿತು. ಅವನತ್ತ ನೋಡದೆಅಡುಗೆ ಕೋಣೆಗೆ ಹೋದಳು.
ಅಮ್ಮನಿಗೆ ನನ್ನ ಅಸಹನೆ ತಿಳಿದರೂ ಅದನ್ನವಳು ಲೆಕ್ಕಿಸದೆ ಒಳಗೆ ಹೋದುದನ್ನು ಕಂಡ ಅಶೋಕ ಮತ್ತಷ್ಟು ಕೆರಳಿದವನು,‘ಅಂದರೆ…,ನಿನಗೆಲ್ಲ ಗೊತ್ತಿದ್ದೂ ಏನಾಯ್ತು ಅಂತ ಕೇಳ್ತಿದ್ದೀಯಾ…? ಹಾಗಾದರೆ ಇನ್ನು ನನ್ನ ಬೊಜ್ಜವೊಂದು ಆಗಲಿಕ್ಕೆ ಬಾಕಿ ಉಂಟು ಎಂದಾಯ್ತು! ಮತ್ತೆಲ್ಲವನ್ನೂ ಅಮ್ಮ ಮಗಳು ಸೇರಿ ಮುಗಿಸಿ ಬಿಟ್ಟಿದ್ದೀರಿ.ಅವಳೆಲ್ಲಿ ಆ ಮಾನಗೆಟ್ಟವಳು?ಅವಳನ್ನೂ ಒಳಗೆ ಕರೆ! ಮನೆಯ ಮಾನಮರ್ಯಾದೆಯನ್ನು ಊರಿಡೀ ಹರಾಜು ಹಾಕುತ್ತ ಬಂದವಳು ಈಗ ಏನೂ ತಿಳಿಯದ ಹಸುವಿನಂತೆ ಕೂತಿದ್ದಾಳಲ್ಲ ಅವಳ ಬಾಯಿಯಿಂದಲೇ ಇವತ್ತು ನನಗೊಂದು ಸತ್ಯ ಗೊತ್ತಾಗಬೇಕು!’ ಎಂದು ಗರ್ಜಿಸಿದ. ಆಗ ದುರ್ಗಕ್ಕನಿಗೆ ವಿಷಯ ಸ್ಪಷ್ಟವಾಯಿತು. ಆದ್ದರಿಂದ ಧೈರ್ಯ ತಂದು ಕೊಂಡವಳು,‘ಏ, ಹೇ…, ಮಾನಗೆಟ್ಟವನೇ…! ಸ್ವಲ್ಪ ಮೆತ್ತಗೆ ಮಾತಾಡು ಮಾರಾಯಾ! ನೀನಂದುಕೊಂಡಂತೆ ಆ ಸಂಗತಿ ಇನ್ನೂ ಯಾರ ಕಿವಿಗೂ ಬಿದ್ದಿಲ್ಲ. ಇನ್ನು ನಿನ್ನ ಮರ್ಲಿನಿಂದಲೇ ಊರಿಡೀ ಹರಡ ಬೇಕಷ್ಟೆ. ಸ್ವಲ್ಪ ತಾಳ್ಮೆಯಿಂದ ಯೋಚಿಸಿ ಪರಿಹಾರದ ದಾರಿ ಹುಡುಕುವ. ಆ ತೋಮನನ್ನು ಮನೆ ಮಗನಂತೆ ಭಾವಿಸಿದ್ದು ನಮ್ಮದೇ ದೊಡ್ಡ ತಪ್ಪಾಯಿತು. ಅವನು ಉಂಡ ಮನೆಯನ್ನೇ ದೋಚುತ್ತಾನೆಂದು ಯಾರಿಗೆ ಗೊತ್ತಿತ್ತು! ಅದರ ಮೇಲೆ ಇನ್ನು ನೀನೂ ರಂಪಾಟ ಮಾಡಬೇಡ. ಇಂಥ ವಿಚಾರವನ್ನು ಬಹಳ ಜಾಗ್ರತೆಯಿಂದ ಸರಿ ಪಡಿಸಬೇಕು ಮಗಾ…!’ಎಂದು ದುರ್ಗಕ್ಕ ಮಗನನ್ನು ಸಮಾಧಾನಿಸಲು ಪ್ರಯತ್ನಿಸಿದಳು. ಅತ್ತ ಅಮ್ಮ ಮತ್ತು ತಮ್ಮನ ಬಿರುಸಿನ ಸಂಭಾಷಣೆ ಪ್ರೇಮಾಳ ಕಿವಿಗೂ ಬಿದ್ದುದರಿಂದ ಅವಳಿಗೆ ದುಃಖ ಒತ್ತರಿಸಿ ಬಂತು.ತನ್ನ ಕೆಲಸವನ್ನು ಅರ್ಧಕ್ಕೆ ಬಿಟ್ಟೆದ್ದು ಅಳುತ್ತ ಕೋಣೆ ಹೋಗಿ ಬಾಗಿಲು ಹಾಕಿಕೊಂಡಳು.
ಅದನ್ನು ಕಂಡ ದುರ್ಗಕ್ಕನಿಗೆ ದಿಗಿಲಾಗಿ,ಅಯ್ಯೋ ದೇವರೇ…ಮಗಳೇನಾದರೂ ಅನಾಹುತ ಮಾಡಿಕೊಂಡರೇ…? ಎಂದು ಯೋಚಿಸುತ್ತ ಅತ್ತ ಧಾವಿಸಿದವಳು,‘ಹೇ, ಪ್ರೇಮಾ…! ಬಾಗಿಲು ತೆಗಿಯಮ್ಮಾ. ಅಂಥದ್ದೇನೂ ಆಗುವುದಿಲ್ಲ ಮಾರಾಯ್ತೀ. ಹೆದರಬೇಡ. ಹೊರಗೆ ಬಾ…!’ ಎನ್ನುತ್ತ ಬಾಗಿಲು ಬಡಿದಳು.ಪ್ರೇಮಾಳ ಅಳು ಮತ್ತಷ್ಟು ಜೋರಾಯಿತು.ಅದನ್ನು ಕಂಡು ದುರ್ಗಕ್ಕ ರಪ್ಪನೆ ಮಗನತ್ತ ತಿರುಗಿದವಳು,‘ನೋಡು ಮಗಾ… ನಾವೀಗ ದುಡುಕ ಬಾರದು. ಆದಷ್ಟು ಬೇಗ ಅವಳಿಗೊಂದು ಮದುವೆ ಮಾಡಬೇಕು. ಈ ವಿಷಯ ನಿನ್ನ ಅಪ್ಪನಿಗೆ ಗೊತ್ತಾದರೆ ದೊಡ್ಡ ಗಲಾಟೆಯಾದೀತು. ಅಣ್ಣಯ ಪಂಡಿತರ ಹತ್ತಿರ ಮಾತಾಡಿದ್ದೇನೆ. ಅವರು ಇವಳನ್ನು ನಾಳೆಯೇ ಕರೆದುಕೊಂಡು ಬರಲು ಹೇಳಿದ್ದಾರೆ!’ ಎಂದಳು ಮೃದುವಾಗಿ. ಆದರೂ ಅಶೋಕನ ಸಿಟ್ಟು ತಣ್ಣಗಾಗಲಿಲ್ಲ. ಅವನು, ‘ನೀವೇನಾದರೂ ಮಾಡಿಕೊಂಡು ಸಾಯಿರಿ ಅತ್ಲಾಗೇ! ನನ್ನ ಮರ್ಯಾದೆಯೆಲ್ಲ ಹಾಳಾಗಿ ಹೋಯ್ತು! ಇನ್ನು ಮುಂದೆ ನಾನೀ ಮನೆಯಲ್ಲಿ ಒಂದು ಕ್ಷಣವೂ ಇರುವುದಿಲ್ಲ!’ಎಂದು ರೇಗಾಡಿದ.
‘ಅಯ್ಯೋ ದೇವರೇ…! ಹಾಗೆಂದರೇನಾ ಮಗಾ…? ಅಂಥ ಮಾತನ್ನೆಲ್ಲ ಆಡಬಾರದು ನೀನು. ಈಗ ಮೊದಲು ಹೋಗಿ ಸ್ನಾನ ಮಾಡಿಕೊಂಡು ಬಾ. ಕೂದಲು ಕತ್ತರಿಸಿಕೊಂಡವನು ಹಾಗೆಯೇ ಒಳಗೆ ಬಂದು ಬಿಟ್ಟಿದ್ದಿಯಲ್ಲ! ತಲೆಗೆ ನೀರು ಚಿಮುಕಿಸಿಕೊಂಡು ಬರಬೇಕೆಂಬ ಪರಿಜ್ಞಾನ ಬೇಡವಾ ನಿಂಗೇ!’ಎಂದು ದುರ್ಗಕ್ಕ ಅವನಿಗೆ ಗದರಿಸಿದಂತೆ ನಟಿಸುತ್ತ ಉಕ್ಕಿ ಬಂದ ಕಣ್ಣೀರನ್ನು ಸೆರಗಿನ ಮರೆಯಲ್ಲಿ ಒರೆಸಿಕೊಂಡಳು. ಆದರೆ ಮಗ ಅದನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಬದಲಿಗೆ ತಾಯಿ ಹೇಳಿದ ವಿಷಯ ಮಾತ್ರ ಅವನಿಗೂ ತಟ್ಟನೆ ನೆನಪಾಗಿ ಏನೋ ಒಂಥರಾ ಕಸಿವಿಸಿಯೆನಿಸಿತು.ಕೂಡಲೇ ಬಚ್ಚಲಿಗೆ ಹೋಗಿ ಸ್ನಾನ ಮಾಡಿದ. ಅವನು ಹೊರಗೆ ಬರುವ ಹೊತ್ತಿಗೆ ದುರ್ಗಕ್ಕ ಅವನಿಗೆ ಊಟ ಬಡಿಸಿದ್ದಳು. ಅಮ್ಮನ ಒತ್ತಾಯಕ್ಕೆ ಮಣಿದು ಊಟಕ್ಕೆ ಕುಳಿತ. ಅಷ್ಟರಲ್ಲಿ ನಾಯಿಗಳೆರಡೂ ಆಕಾಶ ಬಿರಿಯುವಂತೆ ಬೊಗಳುತ್ತ ತೋಟದ ತೊಡಮೆಯತ್ತ ಧಾವಿಸಿದವು.ಬಂದ ವ್ಯಕ್ತಿಯ ಗುರುತು ಹತ್ತುತ್ತಲೇ ಬಾಲ ಅಲ್ಲಾಡಿಸಿಕೊಂಡು ಕ್ಞೂಂಗುಟ್ಟುತ್ತ ಅವನೊಂದಿಗೇ ಜಗುಲಿಯವರೆಗೆ ಬಂದು ಬೀಳ್ಕೊಟ್ಟು ತಮ್ಮ ಸ್ವಸ್ಥಾನವನ್ನು ಸೇರಿದುವು.
ಬಂದವನು ತೋಮ. ಅವನು ಯಾವತ್ತೂ ಸರಿಯಾದ ಸಮಯ, ಸಂದರ್ಭದಲ್ಲಿಯೇ ಬರುತ್ತಿದ್ದವನು ಇಂದೇಕೋ ಬರಬಾರದ ಸಮಯಕ್ಕೇ ಬಂದು ಬಿಟ್ಟಿದ್ದ.ಅವನನ್ನು ಕಂಡ ಅಶೋಕ ಕೆರಳಿ ಕೆಂಡವಾದ! ಬಾಯಿಗಿಡಲಿದ್ದ ತುತ್ತನ್ನು ರಪ್ಪನೆ ಬಟ್ಟಲಿಗೆಸೆದವನು ರೋಷದಿಂದೆದ್ದು,‘ರಂ…ಮಗನೇ…! ಮತ್ತ್ಯಾಕೆ ಬಂದೆಯಾ ಇಲ್ಲಿಗೇ…? ಹೀಗೆ ಇನ್ನೆಷ್ಟು ಹೆಣ್ಣು ಮಕ್ಕಳ ಬಾಳನ್ನು ಹಾಳು ಮಾಡಿದ್ದೀಯಾ…? ಕೊಚ್ಚಿ ಹಾಕಬೇಕುನಿನ್ನನ್ನು…!’ ಎಂದು ಅವುಡುಗಚ್ಚಿ ತೋಮನ ಮೇಲೆರಗಿದವನು ಯದ್ವಾತದ್ವ ಹೊಡೆಯ ತೊಡಗಿದ. ಅಶೋಕನ ಅನಿರೀಕ್ಷಿತ ದಾಳಿಯಿಂದ ತೋಮ ಒಮ್ಮೆಲೆ ಅವಕ್ಕಾದ! ಆದರೆ ತನ್ನ ಮುಸುಡಿಗೆ ಬೀಸಿ ಬೀಸಿ ಬಂದು ಬಿದ್ದ ನಾಲ್ಕೈದು ಏಟುಗಳು ಅವನನ್ನೂ ಕೆರಳಿಸಿಬಿಟ್ಟವು. ತನ್ನ ಬಾಲ್ಯದಲ್ಲಿ ಗೆಳೆಯರೊಂದಿಗೆ ಕೂಡಿ ಅಲ್ಪಸ್ವಲ್ಪ ಕಲಿತಿದ್ದ ಕಳರಿ ಕಾಳಗವು ಇನ್ನೂ ಅವನ ನೆನಪಿನಲ್ಲಿತ್ತು. ಮುಂದಿನ ಕ್ಷಣ ಅಶೋಕ ಎಣಿಸಲಾರದ ರೀತಿಯಲ್ಲಿ ಅವನಿಗೆರಡೇಟು ಬೀಸಿದ. ಅಶೋಕ,‘ಅಯ್ಯಯ್ಯಮ್ಮಾ…!’ ಎಂದು ಕಿರುಚಿ ಕಣ್ಣು ಕತ್ತಲಿಟ್ಟಂತಾಗಿ ನೆಲಕ್ಕುರುಳಿದ. ಅವರಿಬ್ಬರ ಬಡಿದಾಟ ಕಂಡ ಅಮ್ಮ, ಮಗಳಿಗೆ ಹೃದಯವೇ ಬಾಯಿಗೆ ಬಂದಂತಾಯಿತು. ಒಂದೇ ಉಸಿರಿಗೆ ಅವರತ್ತ ಧಾವಿಸಿದರು.ದುರ್ಗಕ್ಕ ರಪ್ಪನೆ ಮುನ್ನುಗ್ಗಿದವಳು ಮಗನ ಎದೆಯ ಮೇಲೆ ಕುಳಿತು ದಬದಬನೇ ತದುಕುತ್ತಿದ್ದ ತೋಮನ ಜುಟ್ಟು ಹಿಡಿದುಅವನ ತಲೆಯನ್ನು ಕಡೆವ ಕಲ್ಲಿನಂತೆ ರೋಷದಿಂದ ಬೀಸುತ್ತ, ‘ಹೇ, ದರ್ವೇಶಿ…ಬಿಡಾ ನನ್ನ ಮಗನನ್ನು…! ಮಾಡಬಾರದ್ದನ್ನು ಮಾಡಿ ಈಗ ಮನೆಗೆ ನುಗ್ಗಿ ಅತ್ರಾಣ ಮಾಡ್ತಿದ್ದೀಯಾ…?’ಎನ್ನುತ್ತ ಅವನ ಕೆನ್ನೆಗೆ ರಪರಪನೇ ಬಾರಿಸ ತೊಡಗಿದಳು.ಅತ್ತ ಅಲ್ಲಿಯ ತನಕ ಮರಗಟ್ಟಿದಂತಿದ್ದ ಪ್ರೇಮ ಅಮ್ಮನ ರೌದ್ರಾವತಾರವನ್ನು ಕಂಡು ತಾನೂರುಮ್ಮನೆ ಧಾವಿಸಿ ಅವಳೊಡನೆ ಉರುಡಾಡಿ ತನ್ನ ಪ್ರೇಮಿಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದಳು. ಆಗ ತೋಮ ಅಶೋಕನನ್ನು ಬಿಟ್ಟೆದ್ದವನು, ‘ಹೇ, ಬೇವರ್ಸಿ…ಹೌದನಾ, ಹೌದು! ನಿನ್ನ ಅಕ್ಕನನ್ನು ಬಸಿರು ಮಾಡಿದವನು ನಾನೇ! ಅದೇನು ಮಾಡ್ಕೊಳ್ತೀಯಾ ಮಾಡ್ಕೋ, ಹೋಗ್…!’ ಎಂದು ಕಿರುಚುತ್ತ ಹರಿದು ಧೂಳು ಮೆತ್ತಿದ್ದ ತನ್ನ ಲುಂಗಿ ಮತ್ತು ಅಂಗಿಯನ್ನುಕೊಡವಿ ಸರಿಪಡಿಸಿಕೊಂಡು ಏದುಸಿರು ಬಿಡುತ್ತ ಹೊರಟು ಹೋದ.
ತೋಮನಿಂದ ಏಟು ತಿಂದು ಸೋತು ಕುಳಿತಿದ್ದ ಅಶೋಕನ ಕ್ರೋಧವು ರಪ್ಪನೆ ಪ್ರೇಮಾಳ ಮೇಲೆ ತಿರುಗಿತು. ಅವನು ದಢಕ್ಕನೆದ್ದವನು,‘ಥೂ!ಇವಳು, ಇವಳಿದ್ದಾಳಲ್ಲ…ಈ ಮೂರು ಕಾಸಿನ ನಾಯಿ…! ಇವಳಿಂದಲೇ ಮನೆಯ ಮಾನಮರ್ಯಾದೆ ಎಲ್ಲ ಹಾಳಾಗಿ ಹೋಗಿದ್ದು. ಇನ್ನುಇವಳನ್ನು ಕೊಂದರೂ ಪಾಪ ಬರಲಿಕ್ಕಿಲ್ಲ!’ ಎಂದವನು ಅಕ್ಕನನ್ನು ಹಿಡಿದು ನೆಲಕ್ಕೆ ಕೆಡವಿ ಮುಖ ಮೂತಿ ನೋಡದೆ ಒಂದೇ ಸಮನೆ ಹೊಡೆದು, ತುಳಿದು ಹಾಕಿದ. ಅದನ್ನು ಕಂಡ ದುರ್ಗಕ್ಕ ಜೋರಾಗಿ ಬೊಬ್ಬಿಟ್ಟು ಅವನಿಂದ ಮಗಳನ್ನು ಬಿಡಿಸಿಕೊಳ್ಳಲು ಹೆಣಗುತ್ತ,‘ಅಯ್ಯಯ್ಯೋ ದೇವರೇ…! ನನ್ನ ಇಡೀ ಮನೆತನದಲ್ಲೇ ಇಂಥ ಹೀನ ಕೆಲಸವನ್ನು ಯಾರೂ ಮಾಡಲಿವಲ್ಲ ಮಾರಾಯ್ತಿ? ನಿನಗಾದರೂ ಯಾಕೆ ಬಂತನಾ ಇಂಥ ದುರ್ಬುದ್ಧಿ…? ಓ, ಪಂಜುರ್ಲಿಯೇ…! ಇಂಥ ಅಸಹ್ಯವನ್ನು ನೋಡುವುದಕ್ಕಾ ನೀನಿನ್ನೂ ನನ್ನನ್ನು ಉಳಿಸಿರುವುದು…? ಸಾಕಾಯ್ತಪ್ಪಾ… ಒಮ್ಮೆ ಕೊಂಡು ಹೋಗೋ ದೈವವೇ…!’ ಎನ್ನುತ್ತ ಅಳತೊಡಗಿದಳು.
ಅಷ್ಟೊತ್ತಿಗೆ ಅದೆಲ್ಲೋ ಇದ್ದ ನಾಯಿಗಳು ಮತ್ತೆ ಕುಂಯ್ಞ್ ಗುಟ್ಟುವಸದ್ದು ಕೇಳಿಸಿತು. ಅವು ತಮ್ಮ ಯಜಮಾನ ಅಂಗರನನ್ನು ಕಂಡವು ಆಗಷ್ಟೇ ಮನೆಯಲ್ಲಿ ನಡೆದ ರಂಪಾಟವನ್ನು ತಮ್ಮ ಮೂಕ ಭಾಷೆಯಲ್ಲಿ ಅವನಿಗೆ ವಿವರಿಸುತ್ತ ಹಿಂಬಾಲಿಸಿದವು. ಅಂಗರ ಕುಡಿದು ಡಿಂಗಾಗಿದ್ದವನು ಒಂದು ಚೀಲದ ತುಂಬಾ ಗಬ್ಬದ ಬೂತಾಯಿ ಮೀನುಗಳನ್ನು ಕೊಂಡು ತಂದಿದ್ದ. ಆದರೆ ಅಂಗಳದಲ್ಲಿ ತಲೆಗೆ ಕೈಹೊತ್ತು ಕುಳಿತಿದ್ದ ಮಗ,ಹೆಂಡತಿ ಮತ್ತು ಮಗಳ ಅಳುವನ್ನೂ ಕಂಡವನಿಗೆ ತಾನು ಕುಡಿದಿದ್ದರಲ್ಲಿ ಅರ್ಧಕ್ಕರ್ಧ ಇಳಿದುಬಿಟ್ಟಿತು. ಹೆಂಡತಿಯ ಸಮೀಪ ಬಂದು ಕುಕ್ಕರಗಾಲಲ್ಲಿ ಕುಳಿತವನು,‘ಏನಾಯ್ತನಾ ದುರ್ಗಿ…?’ ಎಂದು ಅನುಕಂಪದಿಂದ ವಿಚಾರಿಸಿದ. ಆಗ ಆತಂಕಿತಳಾದ ದುರ್ಗಕ್ಕ,ಇನ್ನು ತನ್ನ ಗಂಡನಿಂದ ಹೆಚ್ಚು ಕಾಲ ವಿಷಯವನ್ನು ಮುಚ್ಚಿಡುವುದು ತಪ್ಪಾಗುತ್ತದೆ ಎಂದು ದುಃಖದ ಭರದಲ್ಲೇ ಯೋಚಿಸಿದವಳು ಬಡಬಡನೇ ಎಲ್ಲವನ್ನೂ ಅವನಿಗೆ ವಿವರಿಸಿ ಗೋಳೋ ಎಂದು ಅತ್ತಳು.ಅಷ್ಟು ಕೇಳಿದ ಅಂಗರನಿಗೆ ಮೊದಲಿಗೆ ಏನೂ ತೋಚಲಿಲ್ಲ. ಕೆಲವು ಕ್ಷಣ ಹೆಂಡತಿಯ ಮುಖವನ್ನೇ ದಿಟ್ಟಿಸುತ್ತ ಕುಳಿತವನು ಒಮ್ಮೆಲೇ ವಿಕಾರನಾದ. ಬಣ್ಣ ಮಾಸಿ ಗುಳಿ ಬಿದ್ದಿದ್ದ ಅವನ ಕಿರಿದಾದ ಕೆಂಪು ಕಣ್ಣುಗಳಿಂದ ಕೋಪದ ಕಿಡಿಗಳು ಕಾಣಿಸಿದವು. ಅದರೊಂದಿಗೆ ಉಳಿದ ಅಮಲು ಕೂಡಾ ಇಳಿದು ಬಿಟ್ಟಿತು. ದಢನೆದ್ದವನು ತಾನೂ ಮಗನಂತೆಯೇ ಬುಸುಗುಟ್ಟುತ್ತ ಕತ್ತಿಯನ್ನು ಹುಡುಕ ತೊಡಗಿದ. ಅದನ್ನು ಕಂಡ ದುರ್ಗಕ್ಕನಿಗೆ ತನ್ನ ತಪ್ಪಿನರಿವಾಯಿತು.ಅವಳು ಕೂಡಲೇ ಗಂಡನನ್ನು ಹಿಡಿದುಕುಕ್ಕಿ ಕುಳ್ಳಿರಿಸಿದವಳು, ‘ಅಯ್ಯೋ ದೇವರೇ…! ಸಾಕು,ಸಾಕು ಮಾರಾಯ್ರೇ ನಿಲ್ಲಿಸಿ ನಿಮ್ಮ ಗಂಡಸುತನವನ್ನು! ಮೊದಲು ಈ ನಾಯಿ ಮುಟ್ಟಿದ ಮಡಕೆಯನ್ನು ಏನು ಮಾಡುವುದು ಅಂತ ಯೋಚಿಸಿ. ಆಮೇಲೆ ಬೇಕಾದರೆ ಒಬ್ಬರನೊಬ್ಬರು ಕಡಿದುಕೊಂಡು ಸತ್ತು ಹೋಗಿ ಅತ್ಲಾಗೆ!’ ಎಂದು ಗುಡುಗಿದಳು.
“ಹೇ, ರಂಡೆ…! ಎಲ್ಲಾ ನಿನ್ನಂದಲೇ ಆಗಿದ್ದನಾ! ಆ ದಗಲ್ಬಾಜಿ ನನ್ಮಗ ದಿನಾ ಬಂದು,‘ದುರ್ಗಕ್ಕಾ… ದುರ್ಗಕ್ಕಾ… ನೀವು ಮಾಡುವ ಕೋಳಿ ಸುಕ್ಕ ಎಂಥ ರುಚಿ ಮಾರಾಯ್ರೇ…! ನೀವು ಕರಿಯುವ ಮೀನಂತೂ ಭಯಂಕರ ಮಾರಾಯ್ರೇ…!’ ಅಂತೆಲ್ಲ ಹೊಗಳಿ ಅಟ್ಟಕೇರಿಸುತ್ತಿದ್ದಾಗ ನೀನವನಿಗೆ ಮಾಡಿ ಮಾಡಿ ಬಡಿಸಿದ್ದೇನು, ಅವನ ದೊಂಡೆಗೆ ತುರುಕಿಸಿದ್ದೇನು? ಆ ಹೊತ್ತು ಅದೆಂಥ ಕೋಮಾಟಿಕೆ ಇತ್ತು ನಿಮ್ಮಿಬ್ಬರದ್ದು. ಆದರೆ ಆವಾಗ ಎಲ್ಲಿಗೆ ಹೋಗಿತ್ತನಾ ಈ ನಿನ್ನ ಜಾಗ್ರತೆಯ ಬುದ್ಧಿ…? ಬಂದವನನ್ನು ಯಾರು ಎತ್ತಾಂತ ವಿಚಾರಿಸದೆ ಅಮ್ಮ,ಮಗಳಿಬ್ಬರೂ ಕುಳ್ಳಿರಿಸಿಕೊಂಡು ಉಪಚರಿಸಿದ್ದೇ ಉಪಚರಿಸಿದ್ದು.ಈಗ ಅದರ ಫಲವನ್ನು ಅನುಭವಿಸಿ ಎಲ್ಲರೂ! ನಾನು ಮಾತ್ರ ಆ ಬೇವರ್ಸಿಯನ್ನು ಸುಮ್ಮನೆ ಬಿಡುವುದಿಲ್ಲ. ಹಿಡಿದು ಕೊಚ್ಚಿ ಹಾಕಿಯೇ ಶುದ್ಧ!’ ಎಂದು ವೀರಾವೇಶದಿಂದ ಕೂಗಾಡಿದ.
ಈಗ ದುರ್ಗಕ್ಕನಿಗೆ ಇನ್ನಷ್ಟು ರೋಸಿತು.‘ಹೌದೌದು! ನನ್ನನ್ನು ಅವನ ಹೊಗಳಿಕೆಯೂ ಚಕ್ಕಂದದ ಮಾತುಗಳೂ ಮಂಕು ಬಡಿಸಿದವು. ನಂಬಿ ಬಿಟ್ಟೆ.ನಿಮಗಾದರೂ ಏನಾಗಿತ್ತು…? ಅವನು ತಂದು ಕೊಡುತ್ತಿದ್ದ ಸಾರಾಯಿಗೆ ಮಲೆಮಂಗನಂತಾಗಿ ಬಾಯಿಗೆ ಬಂದಂತೆ ಅವನನ್ನು ಹೊಗಳುತ್ತ ಪುಸಲಾಯಿಸುತ್ತಿದ್ದಿರಲ್ಲ ಆವಾಗ ನಿಮಗೂ ಒಬ್ಬಳು ಪ್ರಾಯಕ್ಕೆ ಬಂದ ಮಗಳಿದ್ದಾಳೆ ಅನ್ನುವ ಜ್ಞಾನವಿರಲಿಲ್ಲವಾ…?’ ಎಂದು ಪ್ರತಿಯಾಡಿದಳು. ಅಷ್ಟು ಕೇಳಿದ ಅಂಗರನು,‘ಏನಂದೆಯಾ ರಂಡೇ…!’ ಎನ್ನುತ್ತ ಎದ್ದು ಹೆಂಡತಿಗೆ ತುಳಿಯಲೇ ಮುಂದಾದ. ಆದರೆ ಅತ್ತ ಹತಾಶೆಯಿಂದ ಕುದಿಯುತ್ತಿದ್ದ ಅಶೋಕ ದಢಕ್ಕನೆದ್ದು ಬಂದು ಅಪ್ಪನ ಕೆನ್ನೆಗೊಂದೇಟು ಬೀಸಿ ಬಾರಿಸಿದವನು,‘ನೀವು ಮೂವರು ಕೂಡಿಯೇ ಆಡಿದ ನಾಟಕವಿದು. ಅನುಭವಿಸ ಬೇಕಾದವರೂ ನೀವೇ!ಸಾಯಿರಿ ಅತ್ಲಾಗೆ! ಇನ್ನು ಈ ಮನೆಯಲ್ಲಿ ನಾನಿದ್ದರೆ ಅಲ್ಲವಾ ಇದೆಲ್ಲ ತಲೆಬಿಸಿ ನಂಗೆ? ನಾಳೆಯೇ ಹೊರಟು ಹೋದರೇ…!’ ಎಂದವನು ಸರಸರನೇ ಒಳಗೆ ನಡೆದು ಮುಸುಕೆಳೆದು ಮಲಗಿಬಿಟ್ಟ. ಅಷ್ಟು ಕೇಳಿದ ದುರ್ಗಕ್ಕನ ಅಳು ತಾರಕಕ್ಕೇರಿತು.
(ಮುಂದುವರೆಯುವುದು)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ವಿವಶ (ಧಾರಾವಾಹಿ ಭಾಗ-17)”

  1. ಅನಿತಾ ಪಿ. ಪೂಜಾರಿ ತಾಕೊಡೆ

    ವಿಶ್ವಧ್ವನಿಯಲ್ಲಿ ಪ್ರತಿವಾರ ಪ್ರಕಟವಾಗುತ್ತಿರುವ ವಿವಶ ಧಾರಾವಾಹಿ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತಿದೆ. ಮುಂದೇನು ಎಂಬ ಕುತೂಹಲವನ್ನು ಕಾಯ್ದಿಟ್ಟುಕೊಂಡು ಮುಂದುವರಿಯುತ್ತಿದೆ.
    ಅಚ್ಚುಕಟ್ಟಾಗಿ ಪ್ರಕಟಿಸುತ್ತಿರುವ ವಿಶ್ವಧ್ವನಿ ಅಂತರ್ಜಾಲ ಪತ್ರಿಕೆಗೂ ಲೇಖಕ ಗುರುರಾಜ್ ಸನಿಲ್ ಅವರಿಗೂ ವಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter