ಹಚ್ಚಿಟ್ಟ ಹಣತೆ

ಅಸ್ಮಿತೆಗಾಗಿ, ಸಮಾನತೆಗಾಗಿ, ಸ್ವಾವಲಂಬನೆಗಾಗಿ. . ಹೀಗೆ ನಾನಾ ಕಾರಣಕ್ಕಾಗಿ ಮಹಿಳೆಯರು ಇಂದಿಗೂ ಹೋರಾಡುತ್ತಲೇ ಇದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳಾ ಛಾಪನ್ನೊತ್ತಿದ ಈ ಮಹಿಳೆಯರ ಹೋರಾಟದ ಮನೋಭಾವ ನಮಗಾಗಲಿ ಸ್ಪೂರ್ತಿ..

ಕಿತ್ತೂರ ರಾಣಿ ಚೆನ್ನಮ್ಮ

ಖಡ್ಗಧಾರಿಣಿ

ಕನ್ನಡನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಯ ಹೆಸರು ಕಿತ್ತೂರರಾಣಿ ಚೆನ್ನಮ್ಮದ್ದು.ಧೈರ್ಯ ಪರಾಕ್ರಮಗಳ ಸಾಕಾರರೂಪದಂತಿದ್ದ ಇವಳು ಕಿತ್ತೂರಿನ ಅರಸ ಮಲ್ಲಸರ್ಜನ ಕಿರಿಯ ರಾಣಿ.ಪತಿ ಮಲ್ಲಸರ್ಜ ಹಾಗೂ ಮಗನಾದ ಶಿವಲಿಂಗ ರುದ್ರಸರ್ಜ ವಾರಸುದಾರರಿಲ್ಲದೇ ತೀರಿಕೊಂಡಾಗ ಚೆನ್ನಮ್ಮ ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡು ರಾಜ್ಯಭಾರ ನಡೆಸ ತೊಡಗಿದಳು. ಅದೇ ಸಮಯದಲ್ಲಿ ಧಾರವಾಡದ ಕಲೆಕ್ಟರ್‍ ಆಗಿದ್ದ ಥ್ಯಾಕರೆ ಚೆನ್ನಮ್ಮ ತೆಗೆದುಕೊಂಡ ದತ್ತಕವನ್ನು ನಿರಾಕರಿಸಿ ಶರಣಾಗುವಂತೆ ತಿಳಿಸಿದ.ಅದಕ್ಕೊಪ್ಪದ ಚೆನ್ನಮ್ಮನ ಮೇಲೆ ಸಿಟ್ಟಿಗೆದ್ದು ಕಿತ್ತೂರಿನ ಮೇಲೆ ಆಕ್ರಮಣ ಮಾಡಿದ.ಕದನದಲ್ಲಿ ಥ್ಯಾಕರೆ ಹತನಾದ.ರಾಜನಿಷ್ಠ ಬೆಂಬಲಿಗರೊಂದಿಗೆ ಹೋರಾಡಿದ ಚೆನ್ನಮ್ಮನ ಸಾಹಸ ಕನ್ನಡಿಗರ ಮನೆ ಮಾತಾಯಿತು. ಸುದ್ದಿ ತಿಳಿದ ಬ್ರಿಟೀಷರು ಅಪಾರ ಸೈನ್ಯದೊಂದಿಗೆ ಮತ್ತೊಮ್ಮೆ ಕಿತ್ತೂರನ್ನು ಆಕ್ರಮಿಸಿದರು.ರಾಜ್ಯದಲ್ಲಿರುವ ಕೆಲವು ವಿಶ್ವಾಸ ಘಾತಕರು ಬ್ರಿಟೀಷರ ಆಮಿಷಕ್ಕೊಳಗಾಗಿ ವಿಶ್ವಾಸ ದ್ರೋಹವೆಸಗಿದ್ದರಿಂದ ಚೆನ್ನಮ್ಮ ಸೆರೆಸಿಕ್ಕಳು. ಸೆರೆಮನೆಯಲ್ಲಿದ್ದಾಗಲೂ ಕೂಡಾ ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸುತ್ತಿದ್ದಳು. ಭಾರತೀಯ ನಾರಿಯರಲ್ಲಿರುವ ಸ್ವಾತಂತ್ರ್ಯದ ಹಂಬಲವನ್ನು, ಹೋರಾಟದ ಸಾಮರ್ಥ್ಯವನ್ನು ತಿಳಿಸಿದ ಮೊದಲ ಭಾರತೀಯ ಮಹಿಳೆ ಎಂದು ಚೆನ್ನಮ್ಮನನ್ನು ಗುರುತಿಸಲಾಗುತ್ತದೆ.

ಸರೋಜಿನಿ ನಾಯ್ಡು

ಭಾರತದ ಕೋಗಿಲೆ

ಭಾರತದ ಕೋಗಿಲೆ ಎಂದೊಡನೆ ಮನದಲ್ಲಿ ಮೂಡುತ್ತದೆ ಸರೋಜಿನಿ ನಾಯ್ಡುಅವರ ಹೆಸರು.ಅಘೋರನಾಥ ಚಟ್ಟೋಪಾಧ್ಯಾಯ ಹಾಗೂ ಬರದಾಸುಂದರೀದೇವಿ ಅವರ ಪುತ್ರಿಯಾದ ಸರೋಜಿನಿ ಜನಿಸಿದ್ದು ಫೆಬ್ರವರಿ 13, 1897ರಂದು.ಬಾಲ್ಯದಿಂದಲೂ ಪ್ರತಿಭಾವಂತೆ ಎಂದೇ ಗುರುತಿಸಲ್ಪಟ್ಟ ಇವರ ಉನ್ನತ ವಿದ್ಯಾಭ್ಯಾಸ ನಡೆದಿದ್ದು ಇಂಗ್ಲೆಂಡಿನಲ್ಲಿ.1905 ‘ವಂಗಭಂಗ’ ಚಳುವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಸ್ವಾತಂತ್ಯ್ರ ಹೋರಾಟದ ಕಣಕ್ಕಿಳಿದ ಸರೋಜಿನಿ ನಾಯ್ಡು ಭಾರತದ ಎಲ್ಲೆಡೆ ಸಂಚರಿಸಿದರು.ಮಹಿಳಾ ಸಬಲೀಕರಣ, ಸಾಮಾಜಿಕ ಅಭಿವೃದ್ಧಿ, ರಾಷ್ಟೀಯತೆ ಕುರಿತಾಗಿ ಸೊಗಸಾದ ಉಪನ್ಯಾಸಗಳನ್ನು ನೀಡುತ್ತಿದ್ದರು. ಆ ಕಾಲದಲ್ಲಿ ‘ಮನೆಯೇ ಸರ್ವಸ್ವ’ ಎಂದು ಕುಳಿತ ಮಹಿಳೆಯರನ್ನು ತಮ್ಮ ಮಾತುಗಳಿಂದ ಹುರಿದುಂಬಿಸಿ ರಾಷ್ಟ್ರೀಯ ಆಂದೋಲನಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಅಷ್ಟೇ ಅಲ್ಲದೇ ‘ವುಮೆನ್ಸಇಂಡಿಯನ್ ಅಸೋಸಿಯೇಷನ್’ ಪ್ರಾರಂಭಿಸಿದರು. ಪ್ಲೇಗ್‍ರೋಗ ಪೀಡಿತ ಪ್ರದೇಶಗಳಲ್ಲಿ ಧೈರ್ಯವಾಗಿ ಓಡಾಡಿ ರೋಗಿಗಳಿಗೆ ಅಪಾರ ಸೇವೆ ಸಲ್ಲಿಸಿದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರದ್ದು.‘ಕಾನೂನು ಭಂಗ ಚಳುವಳಿ’‘ಭಾರತ ಬಿಟ್ಟುತೊಲಗಿ’ ಚಳುವಳಿಗಳಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿದ್ದರು.

ಇವರ ಸಾಹಿತ್ಯ ಕ್ಷೇತ್ರದ ಸಾಧನೆಯೂ ಮಹತ್ತರವಾದದ್ದೇ. ‘ದಿ ಬ್ರೋಕನ್ಆ ಕ್ಸೆಸ್’‘ಗೋಲ್ಡನ್‍ಥ್ರೆಶೋಲ್ಢ’ಮುಂತಾದ ಕವನ ಸಂಕಲನಗಳಿಂದ ಸಾಹಿತ್ಯ ರಸಿಕರ ಮನ ಗೆದ್ದರು.ಭಾರತದ ಸಂವಿಧಾನ ರಚನೆಯಲ್ಲಿಯೂ ಮಹತ್ವದ ಪಾತ್ರವಹಿಸಿದ ಸರೋಜಿನಿಯವರು ಉತ್ತರಪ್ರದೇಶದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದರು. ಬ್ರಿಟೀಷ್ ಸರಕಾರ ಇವರಿಗೆ ‘ಹಿಂದ–ಎ-ಕೇಸರಿ’ ಸಮ್ಮಾನವನ್ನು ನೀಡಿ ಗೌರವಿಸಿತ್ತು. ಇವರ ಜನ್ಮದಿನವನ್ನು‘ಮಹಿಳಾ ದಿನ’ಎಂದು ಭಾರತದಾದ್ಯಂತ ಆಚರಿಸುತ್ತಾರೆ.

ಲಕ್ಷ್ಮೀ ಬಾಯಿ

       ಧೀರ ನಾಯಕಿ

1827ರಲ್ಲಿ ಜನಿಸಿದ ಲಕ್ಷ್ಮೀಬಾಯಿ ಬಾಲ್ಯದಿಂದಲೇ ಸಮರಕಲೆಯಲ್ಲಿ ಆಸಕ್ತಳು. ಕುದುರೇ ಸವಾರಿ,ಕತ್ತಿವರಸೆ, ಬಿಲ್ವಿದ್ಯೆಗಳಲ್ಲಿ ಪಾರಂಗತಳಾದ ಲಕ್ಷ್ಮಿಬಾಯಿಯ ವಿವಾಹವಾಗಿದ್ದು ಝಾನ್ಸಿಯ ರಾಜನಾದ ಬಾಲಗಂಗಾಧರರಾವ್‍ ಅವರೊಂದಿಗೆ.ಅವಳಿಗೆ ಜನಿಸಿದ ಮೊದಲ ಮಗು ಬಾಲ್ಯದಲ್ಲೇ ತೀರಿಕೊಂಡಾಗ ಮಾನಸಿಕ ಆಘಾತಕ್ಕೊಳಗಾದ ಅವಳ ಗಂಡನೂ ತೀರಿಕೊಂಡ.ಲಕ್ಷ್ಮೀಬಾಯಿ ಅನಿರೀಕ್ಷಿತವಾಗಿ ಒದಗಿದ ವೈಧವ್ಯಕ್ಕೆ ಕಂಗಾಲಾಗದೇ ಧೈರ್ಯತಾಳಿ ರಾಜ್ಯಭಾರದ ಸೂತ್ರ ಹಿಡಿದಳು. ದಾಮೋದರ್‍ರಾವ್‍ನನ್ನು ದತ್ತು ಪಡೆದಳು.ಪರಿಸ್ಥಿತಿಯ ದುರ್ಲಾಭ ಪಡೆದು ರಾಜ್ಯವನ್ನು ಕಬಳಿಸಲೆತ್ನಿಸಿದ ಡಾಲ್‍ಹೌಸಿ‘ ದತ್ತು ಮಕ್ಕಳಿಗೆ ರಾಜ್ಯದ ಹಕ್ಕಿಲ್ಲ’ಕಾಯ್ದೆಯನ್ನು ಮುಂದೊಡ್ಡಿದನು. ಅದೇ ಸಮಯದಲ್ಲಿ ಪ್ರಥಮ ಸ್ವಾತಂತ್ರ್ಯಸಂಗ್ರಾಮದ ಕಾವೇರಿತ್ತು. ಸ್ವಾಭಿಮಾನಿಯಾದ ಲಕ್ಷ್ಮೀಬಾಯಿ ಬ್ರಿಟೀಷರಿಗೆಂದೂ ಸೆಡ್ಡು ಹೊಡೆಯಲಾರೆ ಎಂದು ನಿರ್ಧರಿಸಿದ್ದಳು. ಝಾನ್ಸಿಯನ್ನು ವಶಪಡಿಸಿಕೊಳ್ಳುವ ಕನಸಿನೊಂದಿಗೆ ಬ್ರಿಟೀಷರು ಸರ್ ಹುಫ್‍ರೋಸ್‍ನ ನೇತೃತ್ವದಲ್ಲಿ ದಾಳಿ ಮಾಡಿದರು. ಲಕ್ಷ್ಮೀಬಾಯಿ ತನ್ನ ಸೈನಿಕರನ್ನು ಹುರಿದುಂಬಿಸುತ್ತಾ ರಣಚಂಡಿಯಂತೆ ಹೋರಾಡಿದಳು.ಅನೇಕ ಸ್ವಾತಂತ್ರ್ಯ ಹೋರಾಟಗಾರರೂ ಇವಳ ಹೋರಾಟಕ್ಕೆ ನೆರವಾದರು.ಬ್ರಿಟೀಷರೊಂದಿಗಿನ ಸೆಣಸಾಟದಲ್ಲಿ ವಿಫಲಳಾದರೂ ಅವರೆದೆಯಲ್ಲಿ ನಡುಕ ಹುಟ್ಟಿಸಿದ ರಾಣಿ ಇವಳು.ಸ್ವಾಭಿಮಾನ, ಶೌರ್ಯ, ಸಾಹಸಗಳಿಂದೊಡಗೂಡಿದ ಲಕ್ಷ್ಮೀಬಾಯಿ ಬ್ರಿಟೀಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವೇ ಅಗಿದ್ದಳು.

‘ಮೇಡಂಕಾಮಾ’

ಸೇವಾಕಾಂಕ್ಷಿ

ಭಿಖಾಯ್ಜಿಕಾಮಾ ಮುಂಬೈಯ ಪಾರ್ಸಿ ಕುಟುಂಬದವರು.ತಾಯಿ ಜೈಜಾಬಾಯಿ. ತಂದೆ ಸೊರಾಬ್ಜಿ ಪಟೇಲ.ಬಾಲ್ಯದಿಂದಲೂ ಪ್ರತಿಭಾಶಾಲಿ ಎಂದೇ ಗುರುತಿಸಲ್ಪಟ್ಟ ಭಿಖಾಯ್ಜಿ ತತ್ವಶಾಸ್ತ್ರ ಹಾಗೂ ಸಮಾಜಸೇವೆಯಲ್ಲಿ ಆಸಕ್ತರು.1896ರಲ್ಲಿ ಬಾಂಬೆ ಪ್ರಾಂತ್ಯವು ಭೀಕರ ಬರಗಾಲದಿಂದಲೂ, ಸಾಂಕ್ರಾಮಿಕ ರೋಗವಾದ ಪ್ಲೇಗಿನ ಹಾವಳಿಯಿಂಲೂ ತತ್ತರಿಸುತ್ತಿತ್ತು .ಭೀಖಾಯ್ಜಿ ಬಾಂಬೆಯ ಮೆಡಿಕಲ್‍ ಕಾಲೇಜಿನ ಪರಿಹಾರ ತಂಡ ಸೇರಿಕೊಂಡು ಹಗಲಿರುಳಿನ ಬೇಧವಿಲ್ಲದೇ ರೋಗಿಗಳ ಶುಶ್ರೂಷೆ ಮಾಡಿದರು.ಸಾವಿರಾರು ಜನರ ಪ್ರಾಣವುಳಿಸಿದರು. ನಿರಂತರವಾಗಿ ರೋಗಿಗಳನ್ನು ಉಪಚರಿಸಿದ ಪರಿಣಾಮವಾಗಿ ತಾವೇ ಪ್ಲೇಗ್‍ ರೋಗಕ್ಕೆ ತುತ್ತಾದರು, ವೀರ ಸಾವರ್ಕರ್, ದಾದಾಬಾಯಿ ನವರೋಜಿ ಮೊದಲಾದ ಚಳುವಳಿಗಾರರ ಸಂಪರ್ಕದಿಂದ ಪ್ರೇರೇಪಿತರಾದ ಇವರನ್ನು‘ಮೇಡಂಕಾಮಾ’ಎಂದೇ ಜನ ಗುರುತಿಸುತ್ತಿದ್ದರು. ಪತ್ರಿಕೆ ಹಾಗೂ ಭಾಷಣಗಳ ಮೂಲಕ ಇಂಗ್ಲೆಂಡ ಜನತೆಗೆ  ಬ್ರಿಟೀಷರು ಭಾರತೀಯರ ಮೇಲೆಸಗುತ್ತಿರುವ ದಬ್ಬಾಳಿಕೆಯರಿವು ಮೂಡಿಸುತ್ತಿದ್ದರು. ಭಾರತೀಯರ ಸ್ವಾತಂತ್ರ್ಯಕ್ಕೆ ವಿಶ್ವದಾದ್ಯಂತ ಜನಾಭಿಪ್ರಾಯ ರೂಪಿಸಿದರು.ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಕ್ರಿಸ್ಮಸ್ ಉಡುಗೊರೆಗಳನ್ನು ಕೊಡುತ್ತೇನೆಂದು ಬ್ರಿಟೀಷ್ ಅಧಿಕಾರಿಗಳನ್ನು ನಂಬಿಸಿ ಪಿಸ್ತೂಲು ಹಣ, ಬಾಂಬ್‍ ತಯಾರಿಸುವ ಕಚ್ಚಾವಸ್ತುಗಳನ್ನು ಒದಗಿಸುತ್ತಿದ್ದರು.ಇವರ ದೇಶಪ್ರೇಮವು ಶ್ಲಾಘನೀಯವಾದದ್ದು.

ವಿವಿಧ ಪ್ರಾಂತ್ಯಗಳಲ್ಲಿ ಹುಟ್ಟಿಬೆಳೆದ ಈ ನಾಲ್ವರು ಮಹಿಳೆಯರ ಹೋರಾಟದ ಕಾಲ, ದಾರಿ ಬೇರೆ ಬೇರೆಯಾದರೂ ಉದ್ದೇಶ ಒಂದೇ ಆಗಿತ್ತು.ಅವರು ಹಚ್ಚಿದ ಸ್ವಾಭಿಮಾನ, ಸ್ವಾತಂತ್ರ್ಯದ ಹಣತೆ ಎಂದಿಗೂ ಆರದಂತೆ ಕಾಪಾಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವೇ ಆಗಿದೆ . . .

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಹಚ್ಚಿಟ್ಟ ಹಣತೆ”

  1. ಶೈಲಜಾ ಭಟ್ಟ

    ತುಂಬಾ ಸುಂದರ ಉತ್ತಮ ಲೇಖನ.ಸ್ತ್ರೀಯರ ಉದಾತ್ತವಾದ, ಉನ್ನತವಾದ ದಿಟ್ಟತೆಗೆ ನಿದರ್ಶನ ತಮ್ಮ ಬವಣಿಗೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter