ಅಬಕಾರಿ ದಾಳಿಯ ದಿನ ಆಂಥೋನಿ ಮತ್ತು ತಾಮಸರು ಬೇಕೆಂದೇ ಬೆಳಿಗ್ಗೆ ಬೇಗನೆದ್ದವರು, ದಾಳಿ ನಡೆದರೆ ಯಾವ ರೀತಿ ವರ್ತಿಸಬೇಕು? ಎಂಬುದನ್ನೆಲ್ಲ ತಾಯಿ ಮತ್ತು ಅಕ್ಕನಿಗೆ ವಿವರಿಸಿ, ಧೈರ್ಯ ತುಂಬಿ ಶಿವಕಂಡಿಕೆಗೆ ಹೊರಟು ಹೋಗಿದ್ದರು. ತಾಮಸ ತನ್ನ ಆಪ್ತ ಗೆಳೆಯರಾದ ಸೂರ್ಯ ಮತ್ತು ವಾಲ್ಟರನೊಂದಿಗೆ ಸುಪ್ರಭಾ ಟಾಕೀಸಿಗೆ ಮಾರ್ನಿಂಗ್ ಶೋ ಸಿನೇಮಾ ನೋಡಲು ಹೋಗಿದ್ದ. ಆಂಥೋನಿಯು ಮುಂದಿನ ಒಂದು ವಾರಕ್ಕೆ ಕಂಟ್ರಿ ಬೇಯಿಸಲು ಬೇಕಾಗುವಷ್ಟು ಕಚ್ಚಾವಸ್ತುಗಳನ್ನು ಕೊಂಡುಕೊಳ್ಳುವ ಹೊತ್ತಿಗೆ ಮಧ್ಯಾಹ್ನ ಸಮೀಪಸಿತು. ಆದ್ದರಿಂದ ತನ್ನ ಮನೆಯ ದಾರಿಯನ್ನು ತಿಳಿದಿದ್ದ ಮಾಮೂಲಿ ರಿಕ್ಷಾವೊಂದನ್ನು ಗೊತ್ತುಪಡಿಸಿ ಅದರಲ್ಲಿ ಮಾಲು ತುಂಬಿಸಿ ಕಳುಹಿಸಿಕೊಟ್ಟವನು ರಘುರಾಮ ಶೆಟ್ಟರ ಮಿಲಿಟರಿ ಹೊಟೇಲಿಗೆ ಹೋಗಿ ಗಡದ್ದಾಗಿ ಉಂಡ ಬಳಿಕ ಮೊದಲೇ ಯೋಚಿಸಿದ್ದಂತೆ ತನ್ನ ರಾಯಲ್ ಎನ್ಫೀಲ್ಡ್ ಬೈಕನ್ನು ಸಿಂಗಾರ ಕೇರಿಯ ವೇಶ್ಯೆ ಜಾನಕಿಯ ಮನೆಯತ್ತ ಓಡಿಸಿದ.
ಸಂಜೆಯ ಹೊತ್ತಿಗೆ ಅಣ್ಣತಮ್ಮ ಇಬ್ಬರೂ ತಂತಮ್ಮ ತುರ್ತು ಕೆಲಸಕಾರ್ಯಗಳನ್ನು ಮುಗಿಸಿಕೊಂಡು ಆರಾಮವಾಗಿ ಹಿಂದಿರುಗಿದರು. ಆದರೆ ಅಷ್ಟೊತ್ತಿಗಾಗಲೇ ಮನೆ ಪೂರ್ತಿ ರಂಭಾರೂಟಿಯಾಗಿತ್ತು.ಅಣ್ಣ ತಮ್ಮಂದಿರು ಮನೆಯಂಗಳಕ್ಕೆ ಕಾಲಿಡುವ ಹೊತ್ತಿಗೆ ದಾಳಿಯ ಆಘಾತಕ್ಕೊಳಗಾಗಿದ್ದ ಜೆಸಿಂತಾ ಬಾಯಿಯು ಜಗುಲಿಯಲ್ಲಿ ಕುಳಿತು ಮೌನವಾಗಿ ಕಣ್ಣೀರಿಡುತ್ತಿದ್ದರೆ ತಮ್ಮಂದಿರನ್ನು ಕಂಡ ಗ್ರೆಟ್ಟಾ ಕೂದಲು ಕೆದರಿಕೊಂಡು ಹೆಡೆ ತುಳಿದ ಸರ್ಪದಂತೆ ಬುಸುಗುಟ್ಟುತ್ತ ಅಬಕಾರಿ ಅಧಿಕಾರಿಗಳಿಗೆ ವಾಚಮಗೋಚರವಾಗಿ ಬೈಯ್ಯತೊಡಗಿದಳು. ಪಾತ್ರೆ ಪರಡಿಗಳು, ಕಪಾಟಿನ ಬಟ್ಟೆಬರೆ ಇನ್ನಿತರ ವಸ್ತುಗಳೆಲ್ಲ ಒಡೆದು ಚೆಲ್ಲಾಪಿಲ್ಲಿಯಾಗಿದ್ದವು. ಕೋಣೆಯೊಂದರ ಹಳೆಯ ಬಾಗಿಲು ಕೂಡಾ ಮುರಿದು ಬಿದ್ದಿತ್ತು. ಆ ದಾಳಿಯ ತೀವ್ರತೆಯನ್ನು ಗಮನಿಸಿದರೆ ಕಿರಿಸ್ತಾನರ ಮೇಲೆ ಶಾಸಕ ವಿಷ್ಣುಪತಿಯವರಿಗಿದ್ದ ಕ್ರೋಧವನ್ನೂ,ವೈದಿಕರ ಹತಾಶೆಗಳನ್ನೂ ಕೆಲವು ಅಧಿಕಾರಿಗಳು ತಮ್ಮ ಮೇಲೂ ಆವಾಹಿಸಿಕೊಂಡು ಆಂಥೋನಿಯ ಮನೆಯನ್ನು ಪುಡಿಗೈದಿರುವಂತೆ ಭಾಸವಾಗುತ್ತಿತ್ತು. ಅಬಕಾರಿ ಆಕ್ರಮಣದ ಮುನ್ಸೂಚನೆ ದೊರೆತಿದ್ದ ಅಣ್ಣ ತಮ್ಮಂದಿರು ತಮ್ಮ ಮನೆಯೊಳಗೂ, ಹೊರಗೂ ಕಳ್ಳಭಟ್ಟಿ ಬೇಯಿಸುವ ಯಾವ ಸುಳಿವೂ ಸಿಗದಂತೆ ಜಾಗ್ರತೆವಹಿಸಿಯೇ ಹೋಗಿದ್ದರು. ಆದರೂ ಆ ಅಧಿಕಾರಿಗಳು ಈ ಮಟ್ಟದ ಧಾಂದಲೆಯೆಬ್ಬಿಸಿ ಹೋಗುತ್ತಾರೆಂದು ಅವರು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಹಾಗಾಗಿ ಇಬ್ಬರೂ ಕೆರಳಿದ ಕಾಡು ಹಂದಿಗಳಂತಾದರು!
ಗಂಗರಬೀಡಿನಲ್ಲಿ ಸಾರಾಯಿ ಬೇಯಿಸುವ ಎಲ್ಲಾ ಮನೆಗಳಿಗೂ ಏಕಕಾಲದಲ್ಲಿ ದಾಳಿ ನಡೆದಿದೆಯೆಂದರೆ ಇದೊಂದು ಪೂರ್ವ ನಿರ್ಧರಿತ ಸಂಚೆಂದೇ ಲೆಕ್ಕ! ಹಾಗಾದರೆ ಅಂಥ ಕೆಲಸವನ್ನು ಯಾರು ಮಾಡಿರ ಬಹುದು? ತಮ್ಮ ಮೇಲೆಯೇ ಕಂಪ್ಲೆಂಟು ಕೊಟ್ಟು ದಾಂಧಲೆ ನಡೆಸುವಷ್ಟು ಅಹಂಕಾರ ಈ ಊರಿನಲ್ಲಿ ಯಾವ ಮಗನಿಗಿದೆ…?ಎಂದು ಸಹೋದರರಿಬ್ಬರೂ ಯೋಚಿಸುತ್ತ ಹೈರಾಣಾದರು. ಅದೇ ರೋಷದಿಂದ ಅಂಥವರನ್ನು ಕೂಡಲೇ ಪತ್ತೆ ಹಚ್ಚಲು ಮುಂದಾದರು. ಆದ್ದರಿಂದ ಗಂಗರಬೀಡಿನ ಇಡೀ ವೈದಿಕ ವರ್ಗವೇ ಕಿರಿಸ್ತಾನರನ್ನು ಸದೆ ಬಡಿಯಲು ಮಾರಿಬಲೆ ಹೆಣೆದಿರುವುದು ಮತ್ತು ಆ ಕಾರ್ಯತಂತ್ರದ ಮುಖ್ಯ ರೂವಾರಿ ಮಾಧವ ಸಾಮಗರು ಎಂಬುದು ರಾಮಭಟ್ಟನಿಂದ ಮಥಾಯಸನಿಗೂ, ಅವನಿಂದ ತಾಮಸನಿಗೂ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.ತಮ್ಮನ ಬಾಯಿಯಿಂದ ಸಾಮಗರ ಹೆಸರು ಹೊರಬೀಳುತ್ತಲೇ ಆಂಥೋನಿ ಅವಕ್ಕಾದ! ಏಕೆಂದರೆ ಸಾಮಗರು ಇಡೀ ಊರಿಗೆ ಬೇಕಾದ ಉತ್ತಮ ನಡೆನುಡಿಯ ಸುಸಂಸ್ಕøತ ಮನುಷ್ಯರಾಗಿದ್ದವರು. ಅಷ್ಟಲ್ಲದೇ ಸರಕಾರಿ ವಲಯದಿಂದ ಹಿಡಿದು ಮಂತ್ರಿ ಮಹೋದಯರವರೆಗೆ ಬಹುತೇಕರು ಅವರ ಆಪ್ತರೂ,ಪರಿಚಿತರೂ ಆಗಿದ್ದರು. ಅಲ್ಲದೆ ಈಗಿನ ಶಾಸಕರು ವಿಷ್ಣುಪತಿಯವರಿಗೂ ಅವರೆಂದರೆ ಬಲು ಸಲುಗೆ ಮತ್ತು ಅಭಿಮಾನ ಎಂಬುದನ್ನೂ ಅವನು ಕೇಳಿದ್ದ. ಇವೆಲ್ಲಕ್ಕಿಂತ ಮೇಲಾಗಿ ತನ್ನ ಅಪ್ಪನನ್ನೂ ತಮ್ಮ ಮನೆತನವನ್ನೂ ಬಹಳವೇ ಗೌರವಿಸುವವರಲ್ಲಿ ಅವರೂ ಒಬ್ಬರಾಗಿದ್ದರು. ಅಂಥವರು ಹೀಗೇಕೆ ಮಾಡಿದರು? ಎಂದು ತಲೆಕೆಡಿಸಿಕೊಂಡ. ಅದೇ ಹೊತ್ತಿಗೆ ಮಥಾಯಸನ ತಾಯಿ ಮಗ್ಗಿಬಾಯಿ ತನ್ನ ಮಗನೊಂದಿಗೆ ಅವನ ಮನೆಗೆ ಬಂದವಳು,‘ಅಯ್ಯಯ್ಯೋ… ಆಂಥೋನೀ ಹೋಯ್ತಲ್ಲ ಮಾರಾಯಾ…!ನಾನೆಷ್ಟೋ ದಿನಗಳಿಂದ ಕಷ್ಟಪಟ್ಟು ಭಟ್ಟಿ ಇಳಿಸಿ ಜೋಪಾನವಾಗಿ ತೆಗೆದಿರಿಸಿದ್ದ ಹತ್ತು ಲೀಟರ್ ಸಾರಾಯಿಯನ್ನು ಆ ಅಬಕಾರಿ ನಾಯಿಗಳು ಚೂರೂ ಬಿಡದೆ ಹೊತ್ತೊಯ್ದರಲ್ಲಾ…! ನಾಡಿದ್ದು ದುಬೈಯಿಂದ ಮಗಳೂ, ಅಳಿಯಂದಿರೂ ಮತ್ತವರ ಸಂಬಂಧಿಕರೆಲ್ಲ ಬರುತ್ತಿದ್ದಾರೆ. ಅವರಿಗೆಲ್ಲ ನಾನೇನು ಕೊಡಲೀ…!ಹೇಗೆ ಅವರನ್ನೆಲ್ಲ ಉಪಚರಿಸಲಿ ದೇವಾ…?’ ಎಂದು ಲಬಲಬನೇ ಬಾಯಿ ಬಡಿದುಕೊಂಡು ಅಳ ತೊಡಗಿದಳು. ಅಷ್ಟೊತ್ತಿಗೆ ಮೊಂತು ನಾಯ್ಕನೂ, ತೇಂಕು ನಾಯ್ಕನೂ ಮತ್ತು ಲಿಲ್ಲಿಬಾಯಿಯೂ ತಂತಮ್ಮ ಕುಟುಂಬ ಸಮೇತ ಪಟಲಾಮು ಕಟ್ಟಿಕೊಂಡು ಬಂದವರು ಅಬಕಾರಿ ದಾಂಧಲೆಯ ಬಗ್ಗೆ ತಮ್ಮಲ್ಲೂ ಅಡಗಿದ್ದ ದುಃಖ, ಆಕ್ರೋಶವನ್ನು ಅವನ ಮುಂದೆ ಬಗೆಬಗೆಯಿಂದ ಪ್ರದರ್ಶಿಸುತ್ತ ಆ ದುಡುಕು ಸ್ವಭಾವಿ ಅಣ್ಣತಮ್ಮಂದಿರ ಕೋಪಾಗ್ನಿಗೆ ಮತ್ತಷ್ಟು ತುಪ್ಪ ಸುರಿದು ಅದು ಕ್ಷಣದಲ್ಲಿ ಧಗಧಗಿಸುವಂತೆ ಮಾಡಿಬಿಟ್ಟರು.
ತಮ್ಮ ಜಾತಿಬಾಂಧವರ ಮೇಲೆ ನಡೆದ ದೌರ್ಜನ್ಯ ಮತ್ತು ಅದನ್ನವರು ತೋಡಿಕೊಂಡ ರೀತಿಯು ಆಂಥೋನಿಯ ರಕ್ತವನ್ನು ಕೊತಕೊತನೇ ಕುದಿಸಿತು. ಅವನು ರೋಷದಿಂದ ಹಲ್ಲು ಕಡಿದವನು ರಪ್ಪನೆ ತಮ್ಮನೆಡೆಗೆ ಉಗ್ರ ದೃಷ್ಟಿಯನ್ನು ಬೀರಿದ. ಅವನು ಕೂಡಲೇ ಅಣ್ಣನ ಇಂಗಿತವನ್ನು ಅರ್ಥೈಸಿಕೊಂಡವನು ತಾನೂ ಅದನ್ನೇ ಕಾಯುತ್ತಿದ್ದವನಂತೆ ಮಥಾಯಸನತ್ತ ಕೆಂಗಣ್ಣು ಹರಿಸಿದ.ಮಥಾಯಸನನ್ನು ಅವನ ಹೆತ್ತವಳ ಆಕ್ರಂದನವು ಮೊದಲೇ ಕೆರಳಿಸಿ ಬಿಟ್ಟಿತ್ತು.ಇಬ್ಬರೂ ಸೆಟೆದೆದ್ದವರು ಬಿರಬಿರನೆ ಸಾಮಗರ ಮನೆಯತ್ತ ದಾಪುಗಾಲಿಕ್ಕಿದರು.ಅವರ ಮನೆಯ ಬಾಗಿಲು ಮುಚ್ಚಿದ್ದರಿಂದ ಒದ್ದು ಒಳಗೆ ನುಗ್ಗಿದರು.ಸಾಮಗರ ಪತ್ನಿ ಅನಸೂಯಮ್ಮ ಅಡುಗೆಕೋಣೆಯಲ್ಲಿದ್ದವರು ಬಾಗಿಲು ಮುರಿದ ಶಬ್ದಕ್ಕೆ ಅದುರಿ ಬಿದ್ದು ಹೊರಗೆ ಧಾವಿಸಿದರು. ಅಷ್ಟರಲ್ಲಿ ದಾಂದಲೆಕೋರರು ಮದವೇರಿದ್ದ ಗೂಳಿಗಳಂತೆ ಅಬ್ಬರಿಸುತ್ತ ಕೈಗೆ ಸಿಕ್ಕಿಸಿಕ್ಕಿದ್ದನ್ನೆಲ್ಲಾ ಗೋಡೆಗೂ ನೆಲಕ್ಕೂ ಅಪ್ಪಳಿಸುತ್ತ ಪುಡಿಗೈಯ್ಯತೊಡಗಿದರು. ಇತ್ತ ವಿಷಯವೇನೆಂದು ಅರಿಯದ ಅನಸೂಯಮ್ಮ ಹೆದರಿ ಕಂಗೆಟ್ಟು,‘ಅಯ್ಯಯ್ಯೋ ದೇವರೇ..! ಏನಾಯ್ತ್ರೋ ನಿಮ್ಗೆಲ್ಲಾ…? ಯಾಕೆ ಹೀಗಾಡುತ್ತಿದ್ದೀರಾ?ನಿಮ್ಮ ದಮ್ಮಯ ಮಾರಾಯ್ರಾ…! ಕೈಮುಗಿತೀನಿ ಬಿಟ್ಟು ಬಿಡ್ರೋ…! ಅಯ್ಯೋ ದೇವರೇ…!’ ಎಂದು ಅಂಗಲಾಚುತ್ತ ಅಳತೊಡಗಿದರು. ತಾಮಸ ಮತ್ತು ಮಥಾಯಸರ ಕ್ರೂರ ಪ್ರತಾಪವನ್ನೂ ಅನಸೂಯಮ್ಮನ ಬೊಬ್ಬೆಯನ್ನೂ ಕೇಳಿಸಿಕೊಂಡ ನೆರೆಕರೆಯ ಐದಾರು ಮನೆಗಳ ಕಿಟಕಿ ಬಾಗಿಲುಗಳು ದಢಾರ್ ಬಢಾರ್ ಎಂದು ಮುಚ್ಚಿಕೊಂಡವು.
ಕೋಪದಿಂದ ಉನ್ಮತ್ತನಾಗಿದ್ದ ತಾಮಸನು,‘ಹೇ ಬ್ರಾಣ್ದೀ, ನಿನ್ನ ಗಂಡ…? ಕರಿಯೇ ಅವನನ್ನು ಹೊರಗೆ. ಅದೆಷ್ಟು ಕೊಬ್ಬೋ ಅವನಿಗೆ…? ನಮ್ಮ ಮೇಲೆನೇ ಕಂಪ್ಲೇಂಟ್ ಕೊಡುತ್ತಾನಾ ಅವನು!ಇವತ್ತು ಅವನನ್ನು ಕಡಿದುಹೂತು ಹಾಕಿ ಹೋಗಲಿಕ್ಕೇ ಬಂದಿರುವುದು ನಾವು! ನೀವೆಲ್ಲ ಏನೆಂದುಕೊಂಡಿದ್ದೀರಿ ನಮ್ಮನ್ನು…? ಗಂಗರ ಬೀಡಿನಲ್ಲಿ ನಿಮ್ಮದೇ ರಾಜ್ಯಭಾರವಾಗಿ ಹೋಯ್ತಾ…!’ ಎನ್ನುತ್ತ ಯದ್ವಾತದ್ವ ಕಿರುಚಾಡಿದ. ಮೂಲೆಯೊಂದಲ್ಲಿ ನಿಂತುಕೊಂಡು ತರತರ ಕಂಪಿಸುತ್ತ ಅಳುತ್ತಿದ್ದ ಅನಸೂಯಮ್ಮ,‘ಹಾ…ಅವು…ಅವ್ರು… ಕಾಲೇಜಿಗೆ ಹೋಗಿದ್ದಾರೆ…!ನಮ್ಮಿಂದ ಎಂಥ ತಪ್ಪಾಗಿದ್ದರೂ ಅವರು ಬಂದ ಕೂಡಲೇ ನಿಮ್ಮ ಮನೆಗೇ ಕಳುಹಿಸಿ ಕ್ಷಮೆ ಕೇಳಿಸುತ್ತೇನೆ. ಈಗ ದಯವಿಟ್ಟು ತೊಂದರೆ ಕೊಡದೆ ಹೊರಟು ಹೋಗಿರೋ. ನಿಮ್ಮ ದಮ್ಮಯ್ಯ ಮಾರಾಯ್ರಾ!’ ಎಂದು ಮತ್ತಷ್ಟು ಆದ್ರ್ರವಾಗಿ ಬೇಡಿಕೊಂಡರು. ಆದರೆ ಅಷ್ಟರಲ್ಲಾಗಲೇ ಮನೆಯ ಬಹುತೇಕ ಅಮೂಲ್ಯ ವಸ್ತುಗಳನ್ನೆಲ್ಲಾ ಪುಡಿಗೈದಿದ್ದ ತಾಮಸ, ಮಥಾಯಸರ ಕೋಪಾಗ್ನಿಯೂ ಸ್ವಲ್ಪ ತಣ್ಣಗಾಗಿತ್ತು. ಆದ್ದರಿಂದ,‘ಇದೇ ಕೊನೆ! ಇನ್ನೊಮ್ಮೆ ನಮ್ಮ ಕಸುಬಿಗೆ ನಿಮ್ಮಲ್ಲಿ ಯಾರಾದರೂ ತಲೆ ಹಾಕಿದರೋ…ಅಂಥವರನ್ನು ಹಿಡಿದು ಕೈಕಾಲು ಕಡಿದು ಮೂಲೆಗೆ ಹಾಕುವುದು ಖಂಡಿತಾ! ಈ ಮಾತನ್ನುನಿನ್ನ ಆ ಮಾಸ್ಟರ್ ಗಂಡನಿಗೆ ಥಾಮಸ ಹೇಳಿದ್ದಾನೆ ಅಂತ ತಿಳಿಸು!’ಎಂದು ಗುಡುಗಿದ ತಾಮಸ ಗೆಳೆಯನೊಂದಿಗೆ ಹೊರಟು ಹೋದ. ಆದರೆ ಅನಸೂಯಮ್ಮನವರಿಗೆ ಆಘಾತದಿಂದ ಹೊರಗೆ ಬರಲು ಸುಮಾರು ಹೊತ್ತು ಹಿಡಿಯಿತು.
ತಾಮಸ, ಮಥಾಯಸರ ಆವೇಶವಿಳಿದು ಅವರು ಹೊರಟು ಹೋದ ನಂತರ ಅನಸೂಯಮ್ಮನ ನೆರೆಕರೆಯವರೆಲ್ಲ ಒಬ್ಬೊಬ್ಬರಾಗಿ ಅವರ ಮನೆಗೆ ಬಂದರು. ಗರಬಡಿದಂತೆ ಮೂಲೆ ಸೇರಿ ಕುಳಿತಿದ್ದ ಅವರನ್ನು ಸಾಂತ್ವನಿಸುತ್ತ, ಹಿಂಸಾಚಾರಿಗಳಿಗೆ ಮನಬಂದಂತೆ ಬೈದು ಶಪಿಸುತ್ತ ಮನೆಯನ್ನು ಸುಮಾರಾಗಿ ಸ್ವಚ್ಛಗೊಳಿಸಿದರು. ಅಷ್ಟರಲ್ಲಿ ಸ್ವಲ್ಪ ಚೇತರಿಸಿಕೊಂಡ ಅನಸೂಯಮ್ಮ ತಮ್ಮ ತೋಟದಾಳು ನೆರೆಮನೆಯ ಕೆಂಪನನ್ನು ಕರೆದರು. ಅವನುಈ ರಾದ್ಧಾಂತ ಆರಂಭವಾಗುವ ಮುನ್ನ ತನ್ನ ಅಂಗಳದಲ್ಲಿ ಕುಳಿತು ಮಡಲು ಹೆಣೆಯುತ್ತಿದ್ದನು ತಾಮಸನನ್ನು ಕಂಡು ವಿಪರೀತ ಭಯಗೊಂಡು ಬೆಕ್ಕಿನ ಮರಿಯಂತೆ ಗುಡಿಸಲು ಸೇರಿ ತಟ್ಟಿಯ ಬಾಗಿಲನ್ನು ಭದ್ರಪಡಿಸಿಕೊಂಡು ಕುಳಿತುಬಿಟ್ಟಿದ್ದ. ಗೌಜಿಗದ್ದಲವೆಲ್ಲಾ ಮುಗಿದ ಮೇಲೆಏನೂ ತಿಳಿಯದವನಂತೆ ಹೊರಗೆ ಬಂದು ಎಲ್ಲರೊಂದಿಗೆತಾನೂ ಸಾಮಗರ ಮನೆಯತ್ತ ಬಂದಿದ್ದ. ಅನಸೂಯಮ್ಮಅವನ ಕೈಗೆ ಹತ್ತು ರೂಪಾಯಿ ತುರುಕಿಸಿ,‘ಈಗಲೇ ಕಾಲೇಜಿಗೆ ಹೋಗಿ ಇವರಿಗೆ ಸುದ್ದಿ ಮುಟ್ಟಿಸಿ ಒಟ್ಟಿಗೆ ಕರೆದುಕೊಂಡೇ ಬರಬೇಕು ಕೆಂಪಾ!’ ಎಂದು ಅಳುತ್ತ ಆಜ್ಞಾಪಿಸಿದರು. ಹತ್ತು ರೂಪಾಯಿಯ ಹೊಸ ನೋಟು ಕೆಂಪನ ಕಣ್ಣು ಕುಕ್ಕಿತು. ಅವನು ಸರಸರನೆ ತನ್ನ ಗುಡಿಸಲಿಗೆ ಹೋದವನು ತುಂಡು ಮುಂಡೊಂದನ್ನು ಸೊಂಟಕ್ಕೆ ಬಿಗಿದುಕೊಂಡು ಬಣ್ಣ ಮಾಸಿದ ಬೈರಾಸನ್ನು ಹೆಗಲಿಗೇರಿಸಿ ಹೊರಟ.
ಕೆಂಪ ಶಿವಕಂಡಿಕೆಯ ಅಭ್ಯುದಯ ಕಾಲೇಜಿನ ವಠಾರವನ್ನು ಪ್ರವೇಶಿಸುವ ಹೊತ್ತಿಗೆ ಮಾಧವ ಸಾಮಗರು ತಮ್ಮ ಡ್ಯೂಟಿ ಮುಗಿಸಿ ಮನೆಗೆ ಮರಳುವುದರಲ್ಲಿದ್ದರು. ಆಗ ಕೆಂಪನನ್ನು ಕಂಡವರು,‘ಏನೋ ಕೆಂಪ ಇತ್ಲಾಗೆ?’ ಎಂದರು ಅಚ್ಚರಿಯಿಂದ.
‘ಓಹೋ, ಅಣ್ಣೆರೇ…! ನೀವಿಲ್ಲಿದ್ದೀರಾ? ಬನ್ನಿ ಬನ್ನಿ ಬೇಗ ಮನೆಗೆ ಹೋಗುವ. ನಿಮ್ಮ ಮನೆಯಲ್ಲಿ ದೊಡ್ಡ ರಂಪಾಟ ನಡೆದುಬಿಟ್ಟಿದೆ. ಆ ನಸ್ರಾಣಿ ಪರ್ಬು ಮಕ್ಕಳು ಬಂದು ನಿಮ್ಮ ಮನೆಯಲ್ಲಿ ಭಯಂಕರ ಆಂಕಾರ ತೋರಿಸಿ ಹೋದರು. ಅಕ್ಕೆರ್ (ಅಕ್ಕವರು) ಈಗಲೇ ನಿಮ್ಮನ್ನು ಕರೆದುಕೊಂಡು ಬರಲು ಹೇಳಿದರು. ಹ್ಞೂಂಹೊರಡಿ. ಆ ಬೇರ್ವಸಿ ನಾಯಿಗಳನ್ನುಇವತ್ತು ಬಿಡಬಾರದು. ನೀವು ಪೊಲೀಸ್ ಕಂಪ್ಲೇಂಟ್ ಕೊಡಬೇಕು. ಸಾಕ್ಷಿ ಹೇಳಲು ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ!’ಎಂದು ಎಂಜಲು ಹಾರಿಸುತ್ತ ನುಡಿದ.ಅಷ್ಟು ಕೇಳಿದ ಸಾಮಗರಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಅಯ್ಯೋ ದೇವರೇ ಏನು ಅನಾಹುತವಾಯ್ತಪ್ಪಾ…! ಎಂದು ತಳಮಳಿಸುತ್ತ ತಮ್ಮ ಬಜಾಜ್ ಚೇತಕ್ ಸ್ಕೂಟರ್ ಹತ್ತಿ ಕೆಂಪನನ್ನು ಕೂರಿಸಿಕೊಂಡು ಮನೆಯತ್ತ ಧಾವಿಸಿದರು.
ಮನೆಗೆ ಬಂದ ಸಾಮಗರು ತಮ್ಮ ಮನೆಯ ಅವಸ್ಥೆಯನ್ನೂ, ಪತ್ನಿಯ ಗೋಳಾಟವನ್ನೂ ಕಂಡು ಕೆಲಹೊತ್ತು ಏನೂ ತೋಚದೆ ಕಂಗೆಟ್ಟುಬಿಟ್ಟರು.ಬಳಿಕ ಎಲ್ಲವನ್ನೂ ಗ್ರಹಿಸಿದವರ ರಕ್ತದ ಕಣಕಣಗಳೂ ಕುದಿಯ ತೊಡಗಿದವು. ತಮ್ಮ ಕೆಲವು ನೆಚ್ಚಿನ ಶಿಷ್ಯಂದಿರ ಅಪ್ಪಂದಿರೂ, ಅಣ್ಣತಮ್ಮಂದಿರೂ ಘೋರ ಅಪರಾಧದ ಹಿನ್ನೆಲೆಯುಳ್ಳವರು. ಅಂಥವರು ಏನು ಮಾಡಲೂ ಹಿಂಜರಿಯುವವರಲ್ಲ ಮತ್ತು ನನ್ನ ಯಾವ ಮಾತನ್ನೂ ತಳ್ಳಿ ಹಾಕುವವರಲ್ಲ.ಅವರನ್ನೇ ಕರೆಯಿಸಿ ಈ ಅಡ ಕಸುಬಿಗಳ ಮನೆಗಳಿಗೆ ನುಗ್ಗಿಸಿ ಎಲ್ಲವನ್ನೂ ಪುಡಿಮಾಡಿಸಿ ಸೇಡಿಗೆ ಸೇಡು ತೀರಿಸಿಕೊಂಡರೆ ಹೇಗೇ…! ಎಂದು ಯೋಚಿಸಿದರು.ಆದರೆಆ ಹುಚ್ಚು ನಾಯಿಗಳಂತೆ ತಾವೂ ವರ್ತಿಸುವುದು ತಮ್ಮ ಘನತೆ, ಗೌರವಗಳಿಗೂ, ಮೇಲಾಗಿ ಕುಲೀನ ಜಾತಿ, ಮನೆತನದಲ್ಲಿ ಹುಟ್ಟಿದ ತಮ್ಮಂಥವರು ಆ ನೀಚರ ಮಟ್ಟಕ್ಕಿಳಿಯುವುದು ಎಂದೂ ಶೋಭೆ ತರುವ ಸಂಗತಿಯಲ್ಲ ಎಂದು ಅವರ ವಿವೇಕ ಎಚ್ಚರಿಸಿತು. ಆದರೂ ಆ ದುಷ್ಟರ ಸೊಕ್ಕನ್ನು ಮುರಿಯದೆ ಬಿಡಬಾರದು! ಎಂದೂ ನಿರ್ಧರಿಸಿದರು.ಹಾಗಾಗಿ ಆಂಥೋನಿ ಮತ್ತು ತಾಮಸರ ಮೇಲೆ ಪೊಲೀಸು ದೂರು ದಾಖಲಿಸುವುದೇ ಸರಿಯೆಂದೆನಿಸಿತು. ಜೊತೆಗೆ ತಮ್ಮ ಮತ್ತು ಕಿರಿಸ್ತಾನರ ನಡುವಿನ ವೈಷಮ್ಯಕ್ಕೆ ಕಾರಣರಾದ ಅನಂತ್ರಾಯ ಭಟ್ಟರಿಗೂ, ಗೋಪಾಲಕೃಷ್ಣ ಭಟ್ಟರಿಗೂ ವಿಷಯವನ್ನು ತಿಳಿಸಿ ಅವರ ಸಹಾಯದೊಂದಿಗೇ ಈ ಕಾರ್ಯವನ್ನು ಸಾಧಿಸಬೇಕು ಎಂದೂ ತೀರ್ಮಾನಿಸಿದವರು ಕೋಪವನ್ನು ಅವುಡುಗಚ್ಚಿ ನುಂಗಿಕೊಂಡು ಪತ್ನಿಯನ್ನು ಸಾಂತ್ವನಿಸಿದರು. ಬಳಿಕ ಕೂಡಲೇ ಇಬ್ಬರು ಹಿರಿಯರ ಮನೆಗಳಿಗೂ ಧಾವಿಸಿದರು.ಸಾಮಗರಿಂದ ವಿಷಯ ತಿಳಿದ ಗೋಪಾಲಕೃಷ್ಣ ಭಟ್ಟರೂ ಕಿಡಿಕಿಡಿಯಾದರು ಮತ್ತುಉಟ್ಟುಡುಗೆಯಲ್ಲೇ ಸಾಮಗರೊಂದಿಗೆ ಹೊರಟರು. ಇತ್ತ ಅನಂತ್ರಾಯ ಭಟ್ಟರು ಅಂದು ತಮ್ಮ ಕೆಲಸದಾಳುಗಳು ಕೆಲಸ ಬಿಡುವ ಹೊತ್ತಿಗೆ ತೋಟಕ್ಕೆ ಹೋಗಿದ್ದವರು ಆಗಷ್ಟೇ ಹಿಂದಿರುಗಿ ಬಂದು ವರಾಂಡದ ಆರಾಮ ಕುರ್ಚಿಯಲ್ಲಿ ಕುಳಿತು ಕಾಫಿ ಹೀರುತ್ತಿದ್ದರು.
ಗೋಪಾಲಕೃಷ್ಣ ಭಟ್ಟರೂ, ಸಾಮಗರೂ ತಮ್ಮ ಮನೆಗೆ ಬರುತ್ತಿದ್ದುದನ್ನೂ ಮತ್ತವರ ನಡಿಗೆಯ ರೀತಿಯಿಂದಲೇ ಅವರಲ್ಲಿ ಕುದಿಯುತ್ತಿದ್ದ ಅಸಹನೆಯನ್ನೂಸೂಕ್ಷ್ಮವಾಗಿ ಗ್ರಹಿಸಿದ ಅನಂತ್ರಾಯ ಭಟ್ಟರು ಸ್ವಲ್ಪ ವಿಚಲಿತರಾದರು. ಆದರೂ,‘ಹೋ,ಹೋ, ಹೋ… ಬನ್ನಿ, ಬನ್ನಿ ಗೋಪಾಲ ಭಟ್ಟರೇ… ಬಾ ಮಾರಾಯಾ ಮಾಧವ ಏನಾಯಿತು…? ಈ ಹೊತ್ತಿನಲ್ಲಿ ಇಷ್ಟೊಂದು ಗಡಿಬಿಡಿಯಿಂದ ಬರುವುದನ್ನು ನೋಡಿದರೆ ಸಂಗತಿ ಬಹಳ ಗಹನವಾದ್ದೇ ಇರಬೇಕು. ಬನ್ನಿ ಕುಳಿತು ಕೊಳ್ಳಿ!’ ಎಂದು ಆತ್ಮೀಯವಾಗಿ ಸ್ವಾಗತಿಸಿದವರು, ‘ಹೇ, ಪದ್ಮಾ… ಗೋಪಾಲಭಟ್ಟರೂ, ಸಾಮಗನೂ ಬಂದಿದ್ದಾರೆ. ಅವರಿಗೆ ಕಾಫಿ ತಗೊಂಡು ಬಾ ಮಾರಾಯ್ತೀ…!’ ಎಂದು ಪತ್ನಿಗೆ ಕೂಗಿ ಹೇಳಿದರು.ಬಳಿಕ ಸಾಮಗರ ಮುಖದಲ್ಲಿ ಅಶಾಂತಿ ಹೊಗೆಯಾಡುತ್ತಿದ್ದುದನ್ನು ಕಂಡವರು,‘ಏನಾಯ್ತು ಮಾಧವ…?’ ಎಂದು ಮೃದುವಾಗಿ ಪ್ರಶ್ನಿಸಿದರು. ಆಗ ಸಾಮಗರು ನಡೆದುದೆಲ್ಲವನ್ನೂವಿವರಿಸಿ,‘ಆ ಹಾಳು ಮುಂಡೆ ಮಕ್ಕಳನ್ನು ಸುಮ್ಮನೆ ಬಿಡಬಾರದು ರಾಯರೇ!ಹತ್ತು ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಬೇಕು ನಾಯಿಗಳನ್ನು!’ ಎಂದು ರೋಷದಿಂದ ಹಲ್ಲು ಕಡಿದರು. ವಿಷಯ ತಿಳಿದಅನಂತ್ರಾಯರೂಅವಕ್ಕಾದರು. ಆದರೆ ಸಾಮಗರಂತೆ ಅವರಲ್ಲೂ ಕೋಪ ಉಕ್ಕುವ ಬದಲು ಅವ್ಯಕ್ತ ಭಯವೊಂದು ಹುಟ್ಟಿಕೊಂಡು ದುಡುಕಲಿದ್ದಬುದ್ಧಿಯನ್ನು ತಟ್ಟನೆಯೋಚನೆಗೆ ಹಚ್ಚಿತು. ಕಿರಿಸ್ತಾನರ ಮೇಲೆ ದೂರು ನೀಡಿದವರಲ್ಲಿ ತಾವೂ ಪ್ರಮುಖರೇ ಅಲ್ಲವಾ! ಆ ಶನಿಗಳು ಅದನ್ನು ತಿಳಿದರೆ ತಮ್ಮ ಮನೆಗೂ ನುಗ್ಗದೆ ಬಿಡುತ್ತಾರಾ?ಅವು ದರಿದ್ರದವು ಯಾವುದಕ್ಕೂ ಹೇಸುವ ಮೃಗಗಳಲ್ಲ! ಒಂದುವೇಳೆ ಹಾಗೆಲ್ಲಾದರೂ ಆದರೆ ತಮ್ಮ ಅವಸ್ಥೆ ದೇವರೇ ಗತಿ! ಎಂದುಕೊಂಡು ಒಳಗೊಳಗೆ ಚಡಪಡಿಸಿದರು. ಬಳಿಕ,ಈ ವಿಷಮ ಸಮಸ್ಯೆಯನ್ನು ಬಹಳ ಉಪಾಯವಾಗಿ ಬಗೆಹರಿಸಿಕೊಳ್ಳಬೇಕು ಎಂದೂ ಯೋಚಿಸಿದರು.
‘ಶಿವ ಶಿವಾ…! ಆ ಹಡಬೆಗೆ ಹುಟ್ಟಿದವು ಇಷ್ಟೊಂದು ಮುಂದುವರೆದು ಬಿಟ್ಟವಾ…? ಓ, ಮಹಾಲಿಂಗೇಶ್ವರಾ…! ಬ್ರಾಹ್ಮಣರೆಂದರೆ ಏನೆಂದು ಕೊಂಡಿದ್ದಾವೆ ಆ ಮೂರು ಕಾಸಿನವು? ಇನ್ನು ಮುಂದೆ ಅವುಗಳ ದುರ್ವಿದ್ಯೆಗಳಿಗೆ ಕಡಿವಾಣ ಹಾಕದೆ ಬಿಡಲಿಕ್ಕುಂಟಾ? ಆವತ್ತು ನಮ್ಮೂರಿಗೆ ದೇಹಿ ಎಂದು ಬಂದವರಿಗೆ ನಮ್ಮ ಹಿರಿಯರು ಆಸರೆ ಕೊಟ್ಟು ಸದರ ತೋರಿಸಿದ್ದೇ ತಪ್ಪಾಯಿತಾ ಹಾಗಾದರೆ! ಇಂಥ ನೀಚರನ್ನು ಬೃಂದಾವನದಂಥ ತಮ್ಮೂರೊಳಗೆ ಬಿಟ್ಟುಕೊಂಡ ತಪ್ಪಿಗೆ ಇವತ್ತು ನಮ್ಮ ಕೊರಳಿಗೇ ಕುತ್ತು ತಂದಿಟ್ಟರಲ್ಲ ಪರದೇಶಿಗಳು ಥೂ! ಇದಕ್ಕೆಲ್ಲ ನಮ್ಮವರೇ ಕಾರಣ!’ ಎಂದು ಅವರೊಂದಿಗೆ ತಮ್ಮ ಹಿರಿಯರನ್ನೂ ಒಂದಷ್ಟು ಜರೆದರು.
‘ಇಂಥ ಅನ್ಯಾಯಕ್ಕೆಲ್ಲ ನಾವ್ಯಾರೂ ಸುಮ್ಮನಿರಬಾರದು ಮಾಧವ. ಆದರೆ ದುಡುಕಬಾರದು ನೋಡು. ಯುಕ್ತಿಯಿಂದಲೇ ಅವುಗಳಿಗೆ ಪಾಠ ಕಲಿಸಬೇಕು.ಒಮ್ಮೆಲೆ ಹೋಗಿ ಪೊಲೀಸ್ ಕಂಪ್ಲೇಂಟ್ ಕೊಡುವುದು ಬೇಡ. ಅವರು ಹೇಸಿಗೆ ತಿನ್ನುವ ಕ್ರೂರ ಜನ! ನಾಳೆ ಅದೇ ಕೋಪದಲ್ಲಿ ಇನ್ನೇನಾದರೂ ಮಾಡುವುದಕ್ಕೂ ಹಿಂಜರಿಯುವವರಲ್ಲ. ಆದ್ದರಿಂದ ಮುಳ್ಳನ್ನು ಮುಳ್ಳಿಂದಲೇ ತೆಗೀಬೇಕು ಅಂತ ಗಾದೆನೇ ಉಂಟು.ನಾಳೆಯವರೆಗೆ ಸುಮ್ಮನಿರು. ಮೊದಲಿಗೆ ನಮ್ಮವರು ಒಂದಷ್ಟು ಮಂದಿ ಕೂಡಿ ಅವರ ಮನೆಗೆ ಹೋಗುವ. ರಾಬರ್ಟ ಒಳ್ಳೆಯವನು. ಅವನೊಡನೆ ಮಾತಾಡಿ ನೋಡುವ. ಪ್ರಯೋಜನವಾದರೆ ಆಯ್ತು. ಇಲ್ಲದಿದ್ದರೆ ಮುಂದಿನದ್ದು ಕಾನೂನಿನ ಮೂಲಕ ಇದ್ದೇ ಇದೆಯಲ್ಲ, ದಂಡಂ ದಶ ಗುಣಂ ಅಂತ ಧೂಳೆಬ್ಬಿಸಿಯೇ ಬಿಡುವುದು!’ ಎಂದು ತಾವೂ ಅಬ್ಬರದಿಂದ ಅಂದರು.
ಅನಂತ್ರಾಯರ ಯೋಚನೆ ಸಾಮಗರಿಗೂ, ಗೋಪಾಲಕೃಷ್ಣಭಟ್ಟರಿಗೂ ಸರಿ ಎನಿಸಿತು.ಆದ್ದರಿಂದ ಅವರು ತುಸು ಶಾಂತರಾದರು. ಮರುದಿನ ಸಂಜೆ ಮೂವರು ಸೇರಿ ಇತರ ನಾಲ್ಕೈದು ಮಂದಿ ಬ್ರಾಹ್ಮಣ ಹಿರಿಯರೊಂದಿಗೆ ರಾಬರ್ಟರ ಮನೆಗೆ ಹೋದರು. ರಾರ್ಬಟರು ತಮ್ಮನ್ನು ಬೆಂಬಿಡದೆ ಕಾಡುತ್ತಿದ್ದ ಮಧುಮೇಹ ಮತ್ತು ರಕ್ತದೊತ್ತಡದ ಕಾಯಿಲೆಗಳಿಂದ ಹಣ್ಣಾಗಿದ್ದವರು ಪದೇಪದೇ ಚಾಪೆ ಹಿಡಿಯುತ್ತಿದ್ದರು. ಆದರೆ ಈಚೆಗೆ ಎರಡು ದಿನಗಳ ಹಿಂದಷ್ಟೇ ಸ್ವಲ್ಪ ಚೇತರಿಸಿಕೊಂಡಿದ್ದರು. ಅಂದು ಬ್ರಾಹ್ಮಣ ಪ್ರಮುಖರು ತಮ್ಮ ಮನೆಗೆ ಆಗಮಿಸುವ ಹೊತ್ತಿಗೆ ಅವರು ಹೊರಗಡೆ ಮರದ ಕಟ್ಟೆಯ ಮೇಲೆ ಕುಳಿತಿದ್ದರು.ಆಂಥೋನಿ ಮತ್ತು ತಾಮಸರ ಸಂಜೆಯ ಕಂಟ್ರಿ ವ್ಯಾಪಾರವು ಆಗಷ್ಟೇ ಆರಂಭವಾಗಲಿದ್ದುದರಿಂದ ಅವರು ಅದರ ತಯಾರಿಯಲ್ಲಿದ್ದರು. ಆದರೆ ತಮ್ಮ ತೋಟದ ತೊಡಮೆ ದಾಟಿ ಬರುತ್ತಿದ್ದ ಬ್ರಾಹ್ಮಣರ ಗುಂಪನ್ನು ದೂರದಿಂದಲೇ ಗಮನಿಸಿದ ತಾಮಸನು ಕಿಡಿಕಿಡಿಯಾದ. ಅಷ್ಟೊತ್ತಿಗೆ ವಿಪ್ರರನ್ನು ಕಂಡ ರಾಬರ್ಟರೂ ಅಚ್ಚರಿಯಿಂದ ಎದ್ದು ನಿಂತರು.ಅಪ್ಪನನ್ನು ಕಂಡ ತಾಮಸ ಅವುಡುಗಚ್ಚಿ ಹಿಂದೆ ಸರಿದು ಅಣ್ಣನಿಗೆ ತಿಳಿಸಲು ಹಿತ್ತಲಿಗೆ ಧಾವಿಸಿದ. ಅಂಗಳಕ್ಕೆ ಬಂದು ನಿಂತ ಬ್ರಾಹ್ಮಣರನ್ನು ಕಂಡ ರಾರ್ಬಟರಿಗೆ,ವೈದಿಕರ ಮೇಲೆ ತಮಗೆ ರಕ್ತಗತವಾಗಿ ಬಂದಿದ್ದ ಗೌರವಾದರಗಳು ತಟ್ಟನೆ ಜಾಗ್ರತಗೊಂಡವು. ಸಂಕೋಚದಿಂದ ಹಿಡಿಯಾಗಿ ಕೈಮುಗಿದು ಎದುರುಗೊಂಡವರು,‘ಓಹೋ..ಬನ್ನಿ, ಬನ್ನಿ…ಕುಳಿತುಕೊಳ್ಳಿ.ಏನು ಬಹಳ ಅಪರೂಪಕ್ಕೆ ಅನಂತಭಟ್ಟರು ಊರ ಹಿರಿಯರ ಸಮೇತ ಈ ಬಡವನ ಮನೆಗೆ ಪಾದ ಬೆಳೆಸಿದ್ದು…?’ ಎಂದು ವಿನಯದಿಂದ ಸ್ವಾಗತಿಸಿ ಕುಳಿತು ಕೊಳ್ಳಲು ಹಲಸಿನಕಟ್ಟೆಯ ಕಲ್ಲುಚಪ್ಪಡಿಯನ್ನು ತೋರಿಸಿದವರು, ಆಳು ಅಪ್ಪು ನಾಯ್ಕನನ್ನು ಕರೆದು,‘ನೋಡನಾ ಒಂದ್ಹತ್ತು ಒಳ್ಳೆಯ ಬೊಂಡ ಕೊಯ್ದು ಕೆತ್ತಿಕೊಂಡು ಬಾ…!’ ಎಂದು ಆಜ್ಞಾಪಿಸಿ ತಾವೂ ಕುಳಿತು ಅವರೊಡನೆ ಮಾತುಕತೆಗಿಳಿದರು.
ರಾರ್ಬಟರ ಗೌರವಾದರಗಳಿಗೆ ಅನಂತ್ರಾಯ ಭಟ್ಟರು ಕರಗಿ ಹೋದರು.ಪಾಪ! ಈ ಮುದುಕನಿಗೆ ತನ್ನ ಮಕ್ಕಳು ಮಾಡಿರುವ ಅನಾಚಾರ ಗೊತ್ತಿರಲಿಕ್ಕಿಲ್ಲ.ಹೇಗಪ್ಪಾ ಇವನ ಮನಸ್ಸು ನೋಯಿಸುವುದು…? ಎಂದು ಖೇದಗೊಂಡರು.ಆದರೆ ಸಾಮಗರ ಕಣ್ಣುಗಳು ಮಾತ್ರ ಅಣ್ಣತಮ್ಮಂದಿರತ್ತಲೇ ನೆಟ್ಟುಅವರನ್ನು ಸುಟ್ಟು ಬಿಡುವಷ್ಟು ಕಿಡಿಕಾರುತ್ತಿದ್ದವು. ಅದನ್ನು ಗ್ರಹಿಸಿದ ಭಟ್ಟರಿಗೆ ತಾವು ಬಂದ ಕಾರ್ಯದ ಗಂಭೀರತೆಯ ಅರಿವಾಯಿತು. ಮರುಕ್ಷಣ ಸೆಟೆದು ಕುಳಿತವರುತಾಮಸ ಮತ್ತು ಮಥಾಯಸರು ನಡೆಸಿದ ಹಿಂಸಾಚಾರವನ್ನು ಒರಟಾಗಿ ರಾಬರ್ಟರಿಗೆ ವಿವರಿಸಿದರು. ಅಷ್ಟು ಕೇಳಿದ ರಾರ್ಬಟರ ಮುಖವು ನೋವಿನಿಂದ ಕಳೆಗುಂದಿತು. ತಮ್ಮ ಮಕ್ಕಳ ಹೊಸ ಸಾರಾಯಿ ದಂಧೆ ಆರಂಭವಾಗಿ ಮನೆಗೆ ಅಬಕಾರಿ ದಾಳಿ ನಡೆಯ ತೊಡಗಿದ್ದುದೂ ಮತ್ತು ಮನೆಯ ವ್ಯವಹಾರವೂ ಮಕ್ಕಳ ಕೈ ಸೇರಿ ತಾವು ಮೂಲೆ ಗುಂಪಾಗಿದ್ದುದೇಅವರಿಗೆ ದೊಡ್ಡ ಆಘಾತ ನೀಡಿತ್ತು. ಅದರೊಂದಿಗೆ ಮಕ್ಕಳಿಂದು ಇಂಥ ಕೃತ್ಯಗಳಿಗೂ ತೊಡಗಿರುವುದನ್ನು ಊರ ಪ್ರಮುಖರಿಂದಲೇ ತಿಳಿದವರಿಗೆ ಅಂಥ ನೋವು ಮತ್ತು ಅವಮಾನವನ್ನು ಸಹಿಸುವುದು ಕಷ್ಟವಾಯಿತು. ಹಿಂದೆ ಒಂದಾನೊಂದು ಕಾಲದಲ್ಲಿ ನಿಲ್ಲಲೊಂದು ಗಟ್ಟಿಯಾದ ನೆಲೆಯಿಲ್ಲದೆ ಅಲೆಮಾರಿಗಳಾಗಿದ್ದಂಥ ನಮ್ಮವರಿಗೆ ಈ ಊರಿನಲ್ಲಿ ಭದ್ರ ಆಸರೆ ಕೊಟ್ಟು ಬದುಕಲೊಂದು ದಾರಿಯನ್ನೂ ಮಾಡಿಕೊಟ್ಟ ಊರಿನ ಸಭ್ಯ ಜನರ ಮೇಲೆಯೇ ತನ್ನ ಮಕ್ಕಳಿಂದು ಕೇಡು ಬಗೆದುಬಿಟ್ಟರಲ್ಲ! ಎಂದು ಯೋಚಿಸಿದ ಅವರು ಮತ್ತಷ್ಟು ಕುಗ್ಗಿದರು.
ಅನಂತ್ರಾಯರು ಮತ್ತೆ ಮಾತು ಮುಂದುವರೆಸಿದರು,‘ನೋಡು ರಾರ್ಬಟಾ, ನಾವು ನಿನ್ನ ಆತಿಥ್ಯ ಸ್ವೀಕರಿಸಲು ಬಂದವರಲ್ಲ. ನಿನ್ನ ಮಕ್ಕಳಿಂದ ನಮಗೆ ಬಹಳ ದೊಡ್ಡ ಅನ್ಯಾಯವಾಗಿದೆ. ಒಂದು ಕಾಲದಲ್ಲಿ ನಂದಗೋಕುಲದಂತಿದ್ದ ಈ ಊರು ನೀವು ಬಂದು ನೆಲೆಸಿದ ನಂತರ ಅದೆಂತೆಂಥ ದುರ್ವಿದ್ಯೆ, ದುವ್ರ್ಯಸನಗಳ ಬೀಡಾಗಿ ಬಿಟ್ಟಿದೆ ಎಂಬುದಕ್ಕೆ ನಿಮ್ಮವರದ್ದೇ ಉದಾಹರಣೆಯನ್ನು ನಾವು ತೆಗೆದುಕೊಳ್ಳಬಹುದು. ಆದರೆ ಅದನ್ನು ಬಿಟ್ಟುಬಿಡುವ. ಈಗ ನಮ್ಮ ಜಾತಿಯ ಬಂಗಾರದಂಥ ಯುವಕನೊಬ್ಬ ನಿತ್ಯ ಕುಡುಕನಾಗಿಬೀದಿಗೆ ಬಿದ್ದಿರುವುದು ಎಂಥ ಅನಾಹುತ! ಅದೆಲ್ಲ ನಿಮ್ಮವರಿಗೆ ಕಾಣಿಸಲಿಲ್ಲ ಅಲ್ಲವಾ?ನಿನ್ನ ಮಕ್ಕಳಿಗೆ ಅದೆಂಥ ಸಂಸ್ಕಾರ ಕೊಟ್ಟು ಬೆಳೆಸಿದ್ದಿ ಮಾರಾಯಾ ನೀನು…? ಊರ ಪಾಪದ ಬಡವರನ್ನು ಕುಡಿಸಿ ಹಾಳು ಮಾಡುತ್ತಿರುವುದು ಸಾಲದೆಂಬುದಕ್ಕೆ ನಮ್ಮಂಥ ಸಾತ್ವಿಕರ ಕುಲವನ್ನೂ ಅವರು ಕೆಡಿಸಲು ಹೊರಟಿದ್ದಾರೆಂದರೆ ಯಾವ ದೇವರಾದರೂಮೆಚ್ಚುವ ಕೆಲಸವಾ ಹೇಳು?ನಿನ್ನ ಮಕ್ಕಳು ಸಾಮಗರ ಮನೆಗೆ ನುಗ್ಗಿ ಸಾವಿರಾರು ರೂಪಾಯಿ ಬೆಲೆಬಾಳುವ ವಸ್ತುಗಳನ್ನೆಲ್ಲ ಧ್ವಂಸ ಮಾಡಿ ಬಂದರಲ್ಲಾ, ಅದರ ಪರಿಹಾರವನ್ನು ಯಾರು ಕೊಡುತ್ತಾರೆ…?ನಾವು ಧಾರ್ಮಿಕ ಮಾರ್ಗದಲ್ಲಿ,ಸತ್ಯದಿಂದ ಬಾಳುತ್ತ ಬಂದವರು ಮಾರಾಯಾ! ನಮಗೆ ಅನ್ಯಾಯ ಮಾಡುವುದೂ ಒಂದೇ, ಹೆತ್ತ ತಾಯಿಯ ಕೊರಳು ಕುಯ್ಯುವುದೂ ಒಂದೇ ಅಲ್ಲವಾ!’ ಎಂದು ಭಟ್ಟರು ಒರಟಾಗಿ ನುಡಿದರು. ಆದರೆ ಅದಕ್ಕೆ ಉತ್ತರವಾಗಿ ರಾರ್ಬಟರಿಂದ ಯಾವ ಮಾತುಗಳೂ ಹೊರಡಲಿಲ್ಲ. ಬದಲಿಗೆ ಅವರಿಗೆತಾವು ನಿಂತ ನೆಲವೇ ಬಾಯ್ತೆರೆದು ತಮ್ಮನ್ನು ನುಂಗಬಾರದೇಕೆ? ಎಂದೆನಿಸುತ್ತಿತ್ತು.ವೈದಿಕರೆದುರು ತಮ್ಮ ನಡುಗುವ ಕೈಗಳನ್ನು ನಮ್ರರಾಗಿ ಜೋಡಿಸಿ ಕಣ್ಣುಮುಚ್ಚಿ ನಿಂತುಬಿಟ್ಟರು.
ಆದರೆ ರಾಬರ್ಟರ ಮೌನವನ್ನು ಕಂಡ ಸಾಮಗರು ಇನ್ನಷ್ಟು ಕ್ಷೋಭೆಗೊಂಡರು. ಅವರ ತಲೆಯೊಳಗೆ,ತಮ್ಮ ಮುತ್ತಜ್ಜನ ನೆನಪಿಗಾಗಿ ತಾವು ಜತನದಿಂದ ಕಾಪಾಡಿಕೊಂಡು ಬಂದಂಥಸುಮಾರು ಇನ್ನೂರು ವರ್ಷಗಳಷ್ಟು ಪುರಾತನವಾದ ಬೀಟೆಮರದ ಮೇಜನ್ನೂ ಮತ್ತು ತಿಂಗಳ ಹಿಂದಷ್ಟೇ ಕೊಂಡು ತಂದಿದ್ದ ಹೊಸ ಟಿವಿಯನ್ನೂ ದುಷ್ಟದಾಳಿಕೋರರು ಪುಡಿ ಮಾಡಿದ್ದುದರ ನೋವು, ಕೋಪವೇ ತಾಂಡವವಾಡುತ್ತಿತ್ತು. ಆದ್ದರಿಂದ ಅವರು ರಪ್ಪನೆದ್ದು,‘ಅಲ್ಲಯ್ಯಾ ರಾಬರ್ಟಾ,ನನ್ನ ಮನೆಯ ಅಮೂಲ್ಯ ವಸ್ತುಗಳನ್ನೆಲ್ಲ ನಿನ್ನ ಹಡಬೆ ಮಕ್ಕಳು ಹಾಳು ಧೂಳುಮಾಡಿದ್ದಲ್ಲದೇ ನನ್ನ ಪತ್ನಿಯನ್ನೂ ಬೆದರಿಸಿ ಬಂದಿದ್ದಾರಲ್ಲ ಅದಕ್ಕೆ ನಾನೇನು ಕ್ರಮ ತೆಗೆದು ಕೊಳ್ಳಬೇಕು ಅಂತೀಯಾ?’ ಎಂದು ಗದರಿ ಕೇಳಿದವರು, ‘ಒಡೆದ ಅಷ್ಟೂ ವಸ್ತುಗಳನಷ್ಟ ಪರಿಹಾರಬೇಕು ನನಗೆ.ಕೊಡುತ್ತೀಯಾ? ಕೊಟ್ಟರೆ ಈ ಕಥೆ ಇಲ್ಲಿಗೇ ಮುಗಿಯುತ್ತದೆ. ಇಲ್ಲವಾದರೆ ನಿನ್ನ ಮಕ್ಕಳನ್ನು ಹತ್ತು ವರ್ಷ ಕಂಬಿ ಎಣಿಸುವಂತೆ ಮಾಡದೆ ಬಿಡುವವನಲ್ಲ ನಾನು! ಅವರೇನು ಈ ಊರಿನ ಪಾಳೇಗಾರರೆಂದು ತಿಳಿದಿದ್ದಾರಾ ಬಿಕನಾಸಿಗಳು…?’ ಎಂದು ಕೂಗಾಡಿಬಿಟ್ಟರು. ಸಾಮಗರ ಅಸಹನೆಯನ್ನು ಕಂಡು ಅನಂತ್ರಾಯ ಭಟ್ಟರಿಗೆ ತಟ್ಟನೆ ಪುಕುಪುಕು ಶುರುವಾಯಿತು.ಅವರು ಕೂಡಲೇ ಸಾಮಗರನ್ನು ತಣ್ಣಗಾಗಿಸಲು ಮುಂದಾದರು.
ಆದರೆ ಅಷ್ಟರಲ್ಲಿ ಸಮಯ ಮಿಂಚಿತ್ತು .ಸೊಂಟಕ್ಕೊಂದು ದೊಗಳೆ ಚಡ್ಡಿ ಸಿಲುಕಿಸಿಕೊಂಡು ಕಮಟು ವಾಸನೆಯ ಬೆವರಿನಿಂದ ತೊಯ್ದು ಕುಂಬಾಗಿ ಹತ್ತಾರು ತೂತು ಬಿದ್ದು ನೀರು ದೋಸೆಯಂತೆ ಕಾಣುತ್ತಿದ್ದ ಹಳದಿ ಬನಿಯಾನು ತೊಟ್ಟಿದ್ದ ಆಂಥೋನಿಯು ಅದಾಗಲೇ ಬಂದು ಒಳಗಿನ ಚಾವಡಿಯಲ್ಲಿ ಕುಳಿತು ಬ್ರಾಹ್ಮಣರ ಕೋಪದ ಆರೋಪವನ್ನೂ, ದಬ್ಬಾಳಿಕೆಯ ಮಾತುಗಳನ್ನೂ ಕೇಳಿಸಿಕೊಂಡವನು‘ನಿನ್ನ ಮಕ್ಕಳನ್ನು ಕಂಬಿ ಎಣಿಸುವಂತೆ ಮಾಡುತೇನೆ!’ ಎಂಬ ಸಾಮಗರ ಕೊನೆಯ ಮಾತಿಗೆ ಕೆರಳಿ ಕೆಂಡವಾಗಿದ್ದ. ಮರುಕ್ಷಣ ಹ್ಞೂಂಕರಿಸುತ್ತ ಹೊರಗೆ ನುಗ್ಗಿದವನು,‘ಹೇ… ಬಟ್ಟಾ..! ನನ್ನ ಮನೆ ಬಾಗಿಲಿಗೆ ಬಂದು ನಮಗೇ ಧಮಕಿ ಹಾಕುವಷ್ಟು ಕೊಬ್ಬು ಬಂತನಾ ನಿಮಗೆ…? ಎಲಾ ಬಿಕನಾಸಿಗಳೇ..! ಯಾವುದೋ ನಿಮ್ಮೂರು? ನಮ್ಮವರು ಬರುವ ಮೊದಲು ಹೇಗಿತ್ತಾ ಈ ಊರು…?ಬಡ ಕೂಲಿಗಳಾಗಿ ಬಂದ ನಮ್ಮವರನ್ನು ಹಗಲು ರಾತ್ರೆ ಕತ್ತೆ, ನಾಯಿ, ನರಿಗಳ ಹಾಗೆ ದುಡಿಸಿಕೊಂಡು ದೊಡ್ಡವರಾದ ನೀವುಗಳೆಲ್ಲ ಈಗ ನಮ್ಮ ಮೇಲೇನೇ ಸವಾರಿ ಮಾಡುವ ಮಟ್ಟಕ್ಕೆ ಬಂದ ಮೇಲೂ ಸಹಿಸಿಕೊಂಡು ಸುಮ್ಮನಿರಲು ನಾವೇನುನಮ್ಮ ಹಿಂದಿನವರಂತೆ ಬೆಪ್ಪು ತಕ್ಕಡಿಗಳೆಂದುಕೊಂಡಿರನಾ…? ಆ ಕಾಲ ಯಾವತ್ತೋ ನಮ್ಮ ಅಜ್ಜ, ಮುತ್ತಜ್ಜಂದಿರ ಹಿಂದೆಯೇ ಹೊರಟು ಹೋಯಿತನಾ! ಇನ್ನು ಮೇಲೆ ನಮ್ಮ ತಂಟೆಗೆ ಈ ಊರಲ್ಲಿ ಅದ್ಯಾರೇ ಬಂದರೂ ಅವರಿಗೆಉಳಿಗಾಲವಿಲ್ಲ ತಿಳ್ಕೊಳ್ಳಿ! ಏನಂದೆ ನೀನು…,ಕಂಪ್ಲೇಂಟ್ ಕೊಡುತ್ತೀಯಾ?ಹೋಗಿ ಕೊಡಬೇಕಿತ್ತನಾ. ಮತ್ತ್ಯಾಕೆ ಇಲ್ಲಿಗೆಓಡಿ ಬಂದಿದ್ದು?ಎಂದು ಗುಡುಗಿದವನು,‘ನೀನು ನಿನ್ನಂಥ ಕುತಂತ್ರ ಬುದ್ಧಿಯವರೆಲ್ಲ ಸೇರಿಕೊಂಡು ಒಳಗೊಳಗೇ ಮಸಲತ್ತು ನಡೆಸಿ ನಮ್ಮ ಮೇಲೆ ಅಬಕಾರಿಯವರಿಗೆ ದೂರು ಕೊಟ್ಟಾಗ ನಿಮ್ಮ ಆ ನಾಯಿಗಳು ಬಂದು ನಮ್ಮವರ ಮನೆಮನೆಗಳಿಗೂ ನುಗ್ಗಿ ರಂಬಾರೂಟಿ (ದಾಂಧಲೆ) ಮಾಡಿ ಹೋದರಲ್ಲ ಅದರ ಪರಿಹಾರ ಯಾರು ನಿಮ್ಮ ಅಪ್ಪಂದಿರು ಕೊಡುತ್ತಾರಾ…?’ ಎಂದು ಕೋಪದಿಂದ ನಡುಗುತ್ತ ಅಂದವನು ಮತ್ತೇನೋ ನೆನಪಿಸಿಕೊಂಡು, ‘ಇನ್ನೊಂದು ಮಾತು ಏನಂದಿರಿ ನೀವು…? ನಿಮ್ಮವರನ್ನು ನಾವು ಕೆಡಿಸುವುದಾ! ನಾವೆಂಥದನಾ ಕೆಡಿಸುವುದು? ನಿಮ್ಮವರಿಗೆ ಬುದ್ಧಿ ನೆಟ್ಟಗಿಲ್ಲವಾ? ಮಾಡಬಾರದ್ದನ್ನೆಲ್ಲ ಮಾಡುತ್ತ ಮಂಡೆ ಹಾಳಾದ ಕೂಡಲೇ ನಮ್ಮನ್ನು ತಣ್ಣಗೆ ಹುಡುಕಿಕೊಂಡು ಬಂದು ಕದ್ದುಮುಚ್ಚಿ ಮೂಗಿನ ಮಟ್ಟ ಕುಡಿದು ಹೋಗುತ್ತಾರಲ್ಲ ಅಂಥವರನ್ನು ನಿಮ್ಮಲ್ಲಿ ಯಾರಿಗಾದರೂ ತಾಕತ್ತಿದ್ದರೆ ಹದ್ದುಬಸ್ತಿನಲ್ಲಿಟ್ಟು ಕೊಳ್ಳಿ ನೋಡುವ…? ಅದನ್ನು ಬಿಟ್ಟು ನಮ್ಮನ್ನೇ ಹೆದರಿಸಲು ಬಂದಿರುವ ನಿಮಗೆಲ್ಲ ಅದೆಷ್ಟು ಅಹಂಕಾರವನಾ…?’ ಎಂದು ಗುಡುಗಿದ. ಅಷ್ಟೊತ್ತಿಗೆ ಗ್ರೆಟ್ಟಾ, ತಾಮಸರೂ ಬಂದು ಅಣ್ಣನೊಡನೆ ನಿಂತುಕೊಂಡು ಅವರೆಲ್ಲರನ್ನೂಕೊಚ್ಚಿ ಹಾಕುವಂಥಕೋಪದಿಂದ ದುರುಗುಟ್ಟುತ್ತಿದ್ದರು. ಮರುಕ್ಷಣ ಆಂಥೋನಿಯು ತಾಮಸನತ್ತ ತಿರುಗಿದವನು,‘ಹೇ ಥಾಮಸಾ ಹೋಗನಾ, ತಲವಾರ್ ತಕೊಂಡು ಬಾ! ಇವರನ್ನೀವತ್ತು ಸುಮ್ಮನೆ ಬಿಡಬಾರದು!’ಎಂದು ಅಬ್ಬರಿಸಿದ. ಅದನ್ನೇ ಕಾಯುತ್ತಿದ್ದ ತಾಮಸ ರಪ್ಪನೆ ಮನೆಯೊಳಗೆ ಹೊಕ್ಕು ಕ್ಷಣಾರ್ಧದಲ್ಲಿ ಹಿಂದಿರುಗಿದವನ ಕೈಯಲ್ಲಿ ಉದ್ದನೆಯ ಮಿಲಾವಿನ ಕತ್ತಿಯೊಂದು ಫಳಫಳ ಹೊಳೆಯುತ್ತಿತ್ತು. ಆಗ ಗ್ರೆಟ್ಟಾಳೂ ಕೆರಳಿದವಳು ಬ್ರಾಹ್ಮಣ ಹಿರಿಯರಿಗೆ ಕೆಟ್ಟದಾಗಿ ಬೈಯ್ಯತೊಡಗಿದಳು.
ಅಲ್ಲಿಯವರಗೆ ತಮ್ಮ ಹಿಡಿತದಲ್ಲೇ ಇದ್ದ ಪರಿಸ್ಥಿತಿಯು ಏಕಾಏಕಿ ಬಿರುಗಾಳಿ ಎದ್ದಂತೆ ತೀವ್ರ ವಿಕೋಪಕ್ಕೆ ತಿರುಗಿದ್ದನ್ನುಕಂಡ ಅನಂತ್ರಾಯರು ಮತ್ತು ಉಳಿದ ಬ್ರಾಹ್ಮಣರೂ ಒಮ್ಮೆಲೇ ಕಂಗಾಲಾಗಿ,‘ಅಯ್ಯೋ ಪರಮಾತ್ಮಾ..! ಎಲ್ಲಿ ಈ ರಾಕ್ಷಸದ್ವಯರು ಮಾಧವನೊಂದಿಗೆ ತಮ್ಮ ಮೇಲೂ ಹಲ್ಲೆ ಮಾಡುತ್ತಾರೋ…?’ ಎಂದು ಯೋಚಿಸಿದವರು, ದಡಬಡನೆದ್ದು ನಾಲ್ಕು ಹೆಜ್ಜೆ ಹಿಂದೆ ಸರಿದು ಕಂಪಿಸುತ್ತ ನಿಂತುಬಿಟ್ಟರು. ಆದರೆ ಮಾಧವ ಸಾಮಗರು ಒಂದಿಂಚೂ ಅಲ್ಲಾಡಲಿಲ್ಲ. ಅವರು ತಾವೂ ಆಂಥೋನಿ, ತಾಮಸರ ಮುಂದೆ ಎದೆ ಸೆಟೆಸಿ ನಿಂತು,‘ಏನ್ರೋ ಕಡಿಯುತ್ತೀರನಾ…? ಬನ್ನಿರಾ ನಾಯಿಗಳೇ…! ಅದನ್ನೂ ಒಮ್ಮೆ ನೋಡಿಯೇ ಬಿಡುವ!’ ಎಂದಬ್ಬರಿಸಿದರು.ತಮ್ಮ ಮಕ್ಕಳ ರೌದ್ರತೆಯನ್ನು ಕಂಡ ರಾಬರ್ಟರು, ‘ಹೇ ಜೀಸೆಸ್! ಎಂಥ ಮಕ್ಕಳನ್ನು ಕೊಟ್ಟೆಯಪ್ಪಾ…!’ ಎಂದು ಹತಾಶೆಯಿಂದ ಉದ್ಗರಿಸುತ್ತ ಧಿಗ್ಗನೆದ್ದವರು,‘ಹೇ, ಹೇ, ಏನಾ, ಏನಾ… ನಿಮ್ಮ ಅಹಂಕಾರ…? ಮನೆ ಬಾಗಿಲಿಗೆ ಬಂದ ಹಿರಿಯರನ್ನೇ ಹೊಡೆಯಲು ಮುಂದಾಗುತ್ತೀರಾ…? ಹಾಗಾದರೆ ಬನ್ನಿರಾ…ಮೊದಲು ನನ್ನನ್ನು ಕಡಿಯಿರನಾ…!’ ಎಂದು ಆವೇಶ ಬಂದವರಂತೆ ಧಾವಿಸಿ ಹೋಗಿ ಬ್ರಾಹ್ಮಣರಿಗೆ ಅಡ್ಡಲಾಗಿ ನಿಂತುಬಿಟ್ಟರು. ಅಷ್ಟರವರೆಗೆ ಮನೆಯೊಳಗೆ ಕುಳಿತು ಹೊರಗಿನ ಅವಾಂತರವನ್ನು ಆತಂಕದಿಂದ ಗಮನಿಸುತ್ತಿದ್ದ ಜೆಸಿಂತಬಾಯಿಯು ಕೂಡಲೇ ಹೊರಗ್ಹೋಡಿ ಬಂದವರು,ತಾಮಸನ ಕೈಯಿಂದ ಕತ್ತಿಯನ್ನು ಕಿತ್ತೊಗೆದು,‘ಅಯ್ಯಯ್ಯೋ ದೇವರೇ! ಏನು ಮಾಡ್ತಾ ಇದ್ದೀರನಾ ನೀವೆಲ್ಲಾ…? ಯಾರ ಮೇಲೆ ಕೈ ಮಾಡಲು ಹೊರಟಿದ್ದೀರಿ ಹಾಳಾದವುಗಳೇ…!’ಎನ್ನುತ್ತ ಮಕ್ಕಳಿಗೆ ಒಂದಷ್ಟು ಬೈಯ್ದು ಗಂಡನತ್ತ ತಿರುಗಿ ಅವರನ್ನು ಕಟ್ಟೆಯತ್ತ ಕರೆದೊಯ್ದು ಕುಳ್ಳಿರಿಸಿ ಕಣ್ಣೀರಿಡುತ್ತ ನಿಂತರು.
ರಾರ್ಬಟ್ ದಂಪತಿಯು ಅಡ್ಡ ಬರದಿದ್ದಲ್ಲಿ ಒಂದು ಕ್ಷಣದಲ್ಲಿ ನಡೆದು ಬಿಡುತ್ತಿದ್ದ ಭೀಕರ ಅನಾಹುತವನ್ನು ನೆನೆದ ವೈದಿಕ ಹಿರಿಯರೆಲ್ಲರೂ ಭಯ,ಅವಮಾನದಿಂದ ಕುಗ್ಗಿ ಹೋದರು. ಆದರೆ ಅನಂತ್ರಾಯರು ಈಗ ನಿಜವಾಗಿಯೂ ರಾರ್ಬಟರ ಮಕ್ಕಳ ಮೇಲೆ ಮುನಿಸಿಕೊಂಡರು. ‘ಆಯ್ತು ರಾಬರ್ಟ…ಎಲ್ಲಾ ಮುಗಿದು ಹೋಯಿತು! ನಿನ್ನ ಮನೆ ಬಾಗಿಲಿಗೆ ನ್ಯಾಯ ಕೇಳಲು ಬಂದ ನಮಗೆ ನಿನ್ನ ಮಕ್ಕಳು ಸರಿಯಾದ ಮರ್ಯಾದೆಯನ್ನೇ ಮಾಡಿದರು. ಆದ್ದರಿಂದ ಇದನ್ನು ನಾವ್ಯಾರೂ ಏಳೇಳು ಜನ್ಮಕ್ಕೂ ಮರೆಯುವುದಿಲ್ಲ.ಬಂಜರವಾಯ್ತು! ನಾವು, ನೀವು ಬಹಳ ಕಾಲದಿಂದಲೂ ಕಾಪಾಡಿಕೊಂಡು ಬಂದಂಥ ಬಾಂಧವ್ಯವೂ ಇವತ್ತಿಗೆ ಕಡಿದು ಹೋಯಿತು. ಇನ್ನು ನಾವು ಹೊರಡುತ್ತೇವೆ. ಆದರೆ ಇಂಥ ದೌರ್ಜನ್ಯವನ್ನು ನಾವು ಇಲ್ಲಿಗೇ ಬಿಟ್ಟುಬಿಡುತ್ತೇವೆಂದು ಮಾತ್ರ ಭಾವಿಸಬೇಡಿ. ಅನಾದಿಕಾಲದಿಂದಲೂ ಈ ಊರ ದೇವತೆ ಮಹಿಷಮರ್ಧಿನಿಯನ್ನೂ,ಹತ್ತು ಮಾಗಣೆಯ ಬ್ರಹ್ಮಲಿಂಗೇಶ್ವರನನ್ನೂ ನಾವೆಲ್ಲ ನಂಬಿಕೊಂಡು ಬಂದವರು ಹೌದು ಅನ್ನುವುದಾದರೆನಿನ್ನ ಮಕ್ಕಳ ಅಹಂಕಾರವನ್ನು ಅವರೇ ಮುರಿಯಲಿ! ಇದಕ್ಕೂ ಮೀರಿ ನಾನಾಗಲೀ, ನಮ್ಮವರಾಗಲೀ ಬೇರೇನೂ ಮಾತಾಡುವುದಿಲ್ಲ!’ ಎಂದು ಹತಾಶೆಯಿಂದ ಶಪಿಸಿದರು. ಬಳಿಕ ತಟ್ಟನೆ ಮಾಧವ ಸಾಮಗರತ್ತ ತಿರುಗಿ,‘ಮಾಧವ, ನೀನಿನ್ನು ಮನುಷ್ಯ ಮಾತ್ರರಲ್ಲಿ ಯಾವ ದೂರುಕೊಡುವ ಅಗತ್ಯವೂ ಇಲ್ಲ ಮಾರಾಯಾ. ನಿನ್ನ ಮೇಲೆ ನಡೆದ ಅನ್ಯಾಯದ ಸೇಡನ್ನು ಇಲ್ಲಿಗೇ ಬಿಟ್ಟುಬಿಡು.ಎಲ್ಲವನ್ನೂ ನಾವು ನಂಬಿದ ದೇವರೇ ನೋಡಿ ಕೊಳ್ಳುತ್ತಾರೆ. ಹ್ಞೂಂ ಹೊರಡುವ. ಎಲ್ಲರೂ ನಡೆಯಿರಿ!’ ಎಂದು ಒರಟಾಗಿ ಅಂದವರು ಧುರಧುರನೆ ಹಿಂದಿರುಗಿ ನಡೆದುಬಿಟ್ಟರು. ಆದರಿತ್ತ ತಮ್ಮ ಹೊಸ ಟಿವಿ ನಷ್ಟವಾದ ಬಾಬ್ತನ್ನಾದರೂ ಈ ಪರ್ಬು ಮಕ್ಕಳಿಂದ ಕಕ್ಕಿಸಬೇಕೆಂಬ ಇರಾದೆಯಿಂದಲೇ ಬಂದಿದ್ದ ಸಾಮಗರು ಅನಂತ್ರಾಯರ ಮಾತಿನಿಂದ ತೀವ್ರ ನಿರಾಶರಾಗಿ ನಿಂತುಬಿಟ್ಟರು. ಅದೂ ಅಲ್ಲದೆ ಇನ್ನು ಮುಂದೆ ಯಾವ ರೀತಿಯಿಂದಲಾದರೂ ನಷ್ಟ ವಸೂಲಿಗೆ ಪ್ರಯತ್ನಿಸಲು ಭಟ್ಟರ ಆಣೆ ಮತ್ತು ಶಾಪಗಳು ಅವರನ್ನು ಕಟ್ಟಿ ಹಾಕಿಬಿಟ್ಟವು. ಆದರೂ ಅವರೊಳಗೆ ಪ್ರತಿಕಾರದ ಬೆಂಕಿ ಧಗಧಗಿಸುತ್ತಿತ್ತು. ಆದ್ದರಿಂದ, ಯಾವುದಕ್ಕೂ ಸಮಯ ಕೂಡಿ ಬರಲಿ.ಈ ಹುಚ್ಚು ನಾಯಿಗಳ ಹುಟ್ಟಡಗಿಸದೆ ಬಿಡುವುದಿಲ್ಲ! ಎಂಬ ದ್ವೇಷದಿಂದ ಆಂಥೋನಿ, ತಾಮಸರನ್ನು ಕೆಕ್ಕರಿಸುತ್ತ ಅನಂತ್ರಾಯರನ್ನು ಹಿಂಬಾಲಿಸಿದರು.
ರಾಬರ್ಟ್ ದಂಪತಿ ತಮ್ಮ ದೇವರನ್ನು ಅದೆಂಥ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಿದ್ದರೋ ಅದೇ ಭಾವಭಕ್ತಿಯುಅವರಿಗೆ ತಮ್ಮೂರಿನ ಇತರ ಜಾತಿಯವರ ದೈವದೇವರುಗಳ ಮೇಲೂ ಇತ್ತು. ಆದ್ದರಿಂದಲೇ ಊರ ದೇವರ ಪೂಜೆ ಪುನಸ್ಕಾರಗಳಿಗೆ ತಮ್ಮ ಶಕ್ತ್ಯಾನುಸಾರ ಹೊರೆಕಾಣಿಕೆಯನ್ನೂ, ಆರ್ಥಿಕ ನೆರವನ್ನೂ ನೀಡುವ ಮೂಲಕ ತಮ್ಮ ಹಿರಿಯರು ಉಳಿಸಿಕೊಂಡು ಬಂದಂಥ ಗೌರವಾಭಿಮಾನಗಳನ್ನು ತಾವೂ ಕಾಪಾಡಿ ಕೊಂಡಿದ್ದರು. ಆದರೆ ಇವತ್ತು ತಮ್ಮ ಮನೆ ಬಾಗಿಲಿಗೆ ಬಂದ ಬ್ರಾಹ್ಮಣ ಪ್ರಮುಖರನ್ನು ಮಕ್ಕಳು ಕೆಟ್ಟದಾಗಿ ಅವಮಾನಿಸಿದ್ದು ಮತ್ತವರು ನೊಂದು ಶಾಪ ಹಾಕಿ ಹೋದುದೆಲ್ಲವೂ ಗಂಡಹೆಂಡತಿಯನ್ನು ತೀವ್ರ ಆತಂಕಕ್ಕೀಡುಮಾಡಿತು.ಹಾಗಾಗಿ ಇಬ್ಬರೂ ಧಾವಿಸಿ ಹೋಗಿ ವೈದಿಕರನ್ನು ನಿಲ್ಲಿಸಿ ತಮ್ಮ ಮಕ್ಕಳನ್ನು ಕ್ಷಮಿಸ ಬೇಕೆಂದು ಬಗೆಬಗೆಯಿಂದ ಬೇಡಿಕೊಂಡರು. ಆದರೆ ಅವರಲ್ಲಿ ಯಾರೊಬ್ಬರೂ ಇವರ ಮಾತಿಗೆ ಬೆಲೆ ಕೊಡುವುದಂತಿರಲಿ ಹಿಂದಿರುಗಿಯೂ ನೋಡದೆ ಹೊರಟು ಹೋದರು. ಆದ್ದರಿಂದ ಅವರು ತಮ್ಮ ಮಕ್ಕಳಿಗೆ ಬೈದು ಹೆದರಿಸುತ್ತ ಕ್ಷಮೆಯಾಚಿಸುವಂತೆ ಗೋಗರೆದರು.ಅವರು ಕ್ಷಮೆ ಕೇಳುವುದು ಹಾಗಿರಲಿ, ಅವಕಾಶ ಸಿಕ್ಕಿದರೆ ಇನ್ನೊಮ್ಮೆ ಬ್ರಾಹ್ಮಣರ ಮನೆಗಳಿಗೆ ನುಗ್ಗಿ ಧ್ವಂಸ ಮಾಡುವಷ್ಟು ಕುಪಿತರಾಗಿದ್ದರು. ಹಾಗಾಗಿ ರಾರ್ಬಟ್ ದಂಪತಿ ಮೌನವಾಗಿ ದುಃಖಿಸುತ್ತ ಒಳಗೆ ನಡೆದರು.
ಈ ಘಟನೆ ನಡೆದ ನಂತರ ಊರಲ್ಲಿ ಆಂಥೋನಿ,ತಾಮಸ ಮತ್ತು ಗ್ರೆಟ್ಟಾಳ ದೌರ್ಜನ್ಯಗಳು ಮಿತಿಮೀರುತ್ತ ಸಾಗಿದುವು. ಯಾವುದಾದರೂ ಸಣ್ಣಪುಟ್ಟ ಕಾರಣಗಳು ಸಿಕ್ಕಿದರೂ ನೆರೆಕರೆಯವರೊಡನೆ ಮುನಿಸು, ಜಗಳ ಮತ್ತು ಹೊಡೆದಾಟದಲ್ಲಿ ತೊಡಗಿ ಎಲ್ಲರಲ್ಲೂ ನಿಷ್ಠೂರ ಕಟ್ಟಿಕೊಳ್ಳತೊಡಗಿದರು. ತಮ್ಮ ವಿರುದ್ಧ ಯಾರೇ ಉಸಿರೆತ್ತಿದರೂ ಅಣ್ಣ ತಮ್ಮಂದಿರು ಅಂಥವರ ಮನೆಗೆ ನುಗ್ಗಿ ಹೆಡೆಮುರಿ ಕಟ್ಟಿ ಹೊತ್ತು ತಂದು ಹಿಗ್ಗಾಮುಗ್ಗ ಥಳಿಸುತ್ತಿದ್ದರು ಅಥವಾ ತಮ್ಮ ಮನೆಯ ಪಾಳು ಕೋಣೆಯೊಳಗೆ ಕೂಡಿ ಹಾಕಿ ಬಗೆಬಗೆಯಿಂದ ಹಿಂಸಿಸುವಷ್ಟರ ಮಟ್ಟಿಗೆ ಅವರ ಕ್ರೌರ್ಯಗಳು ಮಂದುವರೆದವು. ಆದರೆ ಅವರ ಅನಾಚಾರಗಳಿಗೆ ಬಲಿಯಾಗುತ್ತಿದ್ದ ಊರವರು ಅವರನ್ನೆದುರಿಸುವ ಧೈರ್ಯ, ಸಾಮಥ್ರ್ಯವಿಲ್ಲದೆ ತೀವ್ರವಾಗಿ ನೊಂದು ಕೊಳ್ಳುತ್ತಿದ್ದವರಿಗೆ ರಾಬರ್ಟರ ಕುಟುಂಬದ ಮೇಲೆಯೇ ಭಯ, ತಿರಸ್ಕಾರಗಳು ಬೆಳೆಯತೊಡಗಿದವು.
ಇತ್ತ ಊರವರೆಲ್ಲ ತಮ್ಮ ಮಕ್ಕಳನ್ನು ಶಪಿಸುತ್ತ ತುಚ್ಛವಾಗಿ ಬೈದುಕೊಳ್ಳುತ್ತಿದ್ದ ಛೀಮಾರಿಗಳು ರಾಬರ್ಟ್ ದಂಪತಿಯನ್ನೂ ಕಂಗೆಡಿಸುತ್ತಿದ್ದುವು.ಆದರೆ ಮಕ್ಕಳನ್ನು ಬೇರೆ ಯಾವ ಮಾರ್ಗದಿಂದಲೂ ತಿದ್ದಲು ಸಾಧ್ಯವಿಲ್ಲದ ಅವರು ಆಗಾಗ ಮೂವರನ್ನೂ ಕರೆದು ಸಹನೆಯಿಂದ ಬುದ್ಧಿ ಹೇಳುತ್ತಿದ್ದರು. ಆದರೆ ಅವರಲ್ಲಿ ಒಬ್ಬರೂ ಹೆತ್ತವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ ತಂದೆತಾಯಿಯನ್ನೇ ಹೆದರಿಸಿ ಬೆದರಿಸಿ ಸುಮ್ಮನಾಗಿಸುತ್ತಿದ್ದರು. ಅದರಲ್ಲೂ ಗ್ರೆಟ್ಟಾಳ ಉಗ್ರರೂಪವಂತೂಹೆತ್ತವರ ಬಾಯಿ ಮುಚ್ಚಿಸಿ ಮೂಲೆಯಲ್ಲಿ ಕೂರಿಸುವುದರಲ್ಲಿ ಬಹಳ ಬೇಗನೇ ಯಶಸ್ವಿಯಾಗುತ್ತಿತ್ತು. ಇದರಿಂದರಾಬರ್ಟ್ ದಂಪತಿಯೂ ಕೊನೆಕೊನೆಗೆ, ‘ನಿಮ್ಮ ಹಣೆಬರಹ. ಹೇಗಾದರೂ ಇದ್ದುಕೊಳ್ಳಿ. ಮಾಡಿದ್ದನ್ನು ಅನುಭವಿಸುತ್ತೀರಿ ಅಷ್ಟೇ!’ಎಂದುಕೊಳ್ಳುತ್ತ ಉದಾಸೀನರಾಗಿದ್ದು ಬಿಟ್ಟರು.
(ಮುಂದುವರೆಯುವುದು)
ವಿವಶ (ಧಾರಾವಾಹಿ ಭಾಗ-15)
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಗುರುರಾಜ್ ಸನಿಲ್, ತೆಂಕುಪೇಟೆ
ಶ್ರೀ ಗುರುರಾಜ್ ಸನಿಲ್ ಓರ್ವ ಖ್ಯಾತ ಉರಗತಜ್ಞ ಮತ್ತು ಸಾಹಿತಿಯಾಗಿ ನಾಡಿನಾದ್ಯಂತ ಪ್ರಸಿದ್ಧರು. ಇವರು ತಮ್ಮ ವಿಶೇಷ ಜೀವನಾನುಭವಗಳಿಂದ ಈವರೆಗೆ ಹತ್ತು ವಿಭಿನ್ನ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯಲೋಕಕ್ಕೆ ಮಹತ್ವದ ಕೊಡುಗೆ ನೀಡಿದವರು. ‘ಹಾವು ನಾವು (ಪರಿಷ್ಕøತ ಮೂರು ಆವೃತ್ತಿಗಳು) ’‘ದೇವರಹಾವು ನಂಬಿಕೆ, ವಾಸ್ತವ’‘ನಾಗಬೀದಿಯೊಳಗಿಂದ’‘ಹುತ್ತದ ಸುತ್ತಮುತ್ತ’‘ವಿಷಯಾಂತರ’‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’‘ನಾಗಬನವೆಂಬ ಸ್ವರ್ಗೀಯತಾಣ’ಎಂಬ ಕೃತಿಗಳೊಂದಿಗೆ ಕಥೆಗಾರರೂ ಆಗಿ‘ಗುಡಿ ಮತ್ತು ಬಂಡೆ’ಕಥಾಸಂಕಲನ ಹಾಗೂ ‘ವಿವಶ’ಮತ್ತು ‘ಆವರ್ತನ’ ಕಾದಂಬರಿಗಳನ್ನು ಬರೆದು ಕಾದಂಬರಿಕಾರಾಗಿಯೂ ಗುರುತಿಸಿಕೊಂಡಿದ್ದಾರೆ.
‘ಹಾವು ನಾವು’ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2010ನೇ ಸಾಲಿನ, ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ ಲಭಿಸಿದೆ. “ನಾಗಬೀದಿಯೊಳಗಿಂದ”ಕೃತಿಯ‘ನಮ್ಮ ನಂಬಿಕೆ ನಾಗನಿಗೆ ವರವೇ, ಶಾಪವೇ?’ಎಂಬ ಮುಖ್ಯ ಲೇಖನವು ಮಂಗಳೂರು ವಿಶ್ವವಿದ್ಯಾನಿಲಯದ 2017ರ ಪ್ರಥಮ ಬಿ.ಕಾಂ.ವಿದ್ಯಾರ್ಥಿಗಳಿಗೆ ಹತ್ತನೆಯ ಪಠ್ಯವಾಗಿದೆ. ಸನಿಲ್ ಅವರ ಅಧ್ಯಯನ ಮತ್ತು ಚಿಂತನೆಗಳು ಡಾಕ್ಟರೇಟ್ ಪದವಿಗೆ ಅರ್ಹವಾಗಿರುವಷ್ಟು ಉನ್ನತವಾಗಿರುವುದರಿಂದಲೇ, ‘ಕರುಣಾ ಎನಿಮಲ್ ವೆಲ್ ಫೇರ್ ಅವಾರ್ಡ್ (2004 ) ‘ ಅರಣ್ಯಇಲಾಖೆಯ ‘ಅರಣ್ಯ ಮಿತ್ರ (2013)’ ಕರ್ನಾಟಕ ಕಾರ್ಮಿಕ ವೇದಿಕೆಯ, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2016)’ ಸರಕಾರದ‘ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ(2016), ಸೌತ್ಕೆನರಾ ಫೋಟೋಗ್ರಾಫರ್ಸ್ ಅಸೋಸೀಯೆಷನ್ ಸಂಸ್ಥೆಯ‘ಉರಗ ಮಿತ್ರ (2017), ಹೊನ್ನಾವರದ ಕೃಷ್ಣಾನಂದ ಕಾಮತ ಪ್ರತಿಷ್ಠಾನವು ‘ಕೃಷ್ಣಾನಂದ ಕಾಮತ್ ಸಾಹಿತ್ಯ ಪ್ರಶಸ್ತಿ(2018)’ ಹಾಗೂ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯು, ‘ಸೇವಾರತ್ನ(2018) ಎಂಬ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದೆ.
ಹಸಿರು ಪರಿಸರದ ಕುರಿತು ಅಪಾರ ಕಾಳಜಿಯಿಂದ ಹುಟ್ಟಿಕೊಂಡ‘ನಮ್ಮ ಮನೆ ನಮ್ಮ ಮರ’ ಎಂಬ ಅಭಿಯಾನ ತಂಡದ ಮುಖ್ಯ ಸದಸ್ಯರಾಗಿರುವ ಇವರು ಈವರೆಗೆ 15000ಕ್ಕೂ ಮಿಕ್ಕ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಕಳೆದ 38 ವರ್ಷಗಳಿಂದ 26 ಸಾವಿರಕ್ಕೂ ಮಿಕ್ಕ ಹಾವುಗಳನ್ನು ಸಂರಕ್ಷಿಸುತ್ತ ಬಂದ ಸಂದರ್ಭಗಳಲ್ಲಿ ಹದಿಮೂರು ಬಾರಿ ವಿಷದ ಹಾವುಗಳ ಕಡಿತಕ್ಕೂ ಒಳಗಾಗಿ ಒಮ್ಮೆ ಕೆಲವು ದಿನಗಳ ಕಾಲ ‘ಕೋಮಾ’ ಸ್ಥಿತಿಯನ್ನು ಅನುಭವಿಸಿದ್ದರೂ ಧೃತಿಗೆಡದೆಸಾಹಿತ್ಯ, ಪರಿಸರ ಮತ್ತು ಉರಗ ಜೀವಿಗಳ ಕುರಿತು ಜನಜಾಗ್ರತಿ ಮೂಡಿಸುತ್ತ ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಿದ್ದಾರೆ.
All Posts