ಮಹಾನಾಯಕ ಶ್ರೀ ಗುಂಡಣ್ಣ. (ಟ್ಯಾಗ್ ಲೈನ್ – ನಮ್ಮ ಊರ ದೇವರು!) 

ಸೂರ್ಯ ಮತ್ತು ಚಂದ್ರ  ಇಬ್ಬರೂ ಚಡ್ಡಿ ಹಾಕಲು  ಶುರು ಮಾಡಿದಾಗಿನಿಂದಲೇ ‘ಕುಚುಕು – ಕುಚುಕು’ ಗೆಳೆಯರು.  ಓದಿನಲ್ಲಿ ಸತತವಾಗಿ ಫೇಲ್ ಆದರೂ ‘ತಿರುಗಾಟ’ ದಲ್ಲಿ ಮಾತ್ರ ಡಾಕ್ಟರೇಟ್ ಪಡೆದು ಮನೆಯವರಿಂದ, ವಿದ್ಯೆ ಕಲಿಸಲು ಹೋಗಿ ‘ಪೆಟ್ಟು’ ತಿಂದ  ಶಿಕ್ಷಕರಿಂದ,  ಹಿರಿಯರಿಂದ  ಅಷ್ಟೇ ಅಲ್ಲ ಹಳ್ಳಿ ನಾರಿಯರಿಂದ ಕೂಡ ‘ದಂಡ ಪಿಂಡಗಳು’ ಎಂದು ಬಿರುದು ಪಡೆದ  ಸ್ನೇಹಿತರಿಗೆ ‘ಸ್ವಾಭಿಮಾನ’ ಎಂದರೆ ಏನೋ ಗೊತ್ತಿರಲಿಲ್ಲ ಪಾಪ!… ಹಾಗೂ ಹೀಗೂ ಹೈಸ್ಕೂಲ್  ಕಟ್ಟಿ ಹತ್ತಿದವರು  ಮತ್ತೇ ಕೆಳಗಿಳಿಯಲಿಲ್ಲ…’ಓದು ಒಕ್ಕಾಲು – ಬುದ್ಧಿ ಮುಕ್ಕಾಲು’ ಎನ್ನುವ ನಾಣ್ಣುಡಿಯನ್ನು  ಅಕ್ಷರಶಃ ನಿಜವಾಗಿಸಿದ  ‘ಅಪೂರ್ವ ಸ್ನೇಹಿತರು’  ಸೂರ್ಯ ಮತ್ತು ಚಂದ್ರ… ವಯಸ್ಸು ಅವರ  ದೇಹಕ್ಕೆ ಆಯಿತೇ ಹೊರತು ಬುದ್ಧಿ ಅಂತೂ ದೂರವೇ  ಉಳಿಯಿತು!

ಇದ್ದ ದೊಡ್ಡ ಹಳ್ಳಿಯಲ್ಲಿ ಇಬ್ಬರೂ ಸೇರಿ ಮಾಡದ  ‘ಸ್ಟಾರ್ಟಪ್’ (ಮೊಬೈಲ್ ಶಾಪ್,  ಗಿಫ್ಟ್ & ಜೆರಾಕ್ಸ್ ಸೆಂಟರ್, ಕೂಲ್ ಡ್ರಿಂಕ್ಸ್ ಕಾರ್ನರ್, ಲಸ್ಸಿ  ಪಾಯಿಂಟ್, ಒನ್ ಇಂಡಿಯ ಸರ್ವಿಸ್, ಲೇಡೀಸ್ ಕಾರ್ನರ್, ಗ್ರೋಸರಿ ಹಬ್… ಇತ್ಯಾದಿ) ಇಲ್ಲ!.. ಎಲ್ಲದರಲ್ಲೂ   ಸ್ವಲ್ಪ ಸ್ವಲ್ಪ ಅನುಭವವಾಯಿತೇ ಹೊರತು  ಲಾಭವಂತೂ ಕಾಣಲಿಲ್ಲ. ಕೊನೆಗೊಂದು ದಿನ ಹೆತ್ತವರನ್ನು  ಕಾಡಿ – ಬೇಡಿ, ಪೀಡಿಸಿ ಅವರಿಂದ  ಹಣ  ಪೀಕಿ, ಬಂಧುಗಳಿಂದ  ಒಂದಷ್ಟು ಸಾಲ ಎತ್ತಿ, ಜೊತೆಗೊಂದಿಷ್ಟು ಸ್ನೇಹಿತರ ಜೇಬು ಖಾಲಿ ಮಾಡಿಸಿ ‘ದೇಶ  ಸುತ್ತು – ಕೋಶ  ಓದು’! (ರೊಕ್ಕ ಖರ್ಚು  ಮಾಡು – ಮಜಾ ನೋಡು!) ಎನ್ನುವ ಸ್ಕೀಮಿನಲ್ಲಿ ಗೆಳೆಯರಿಬ್ಬರು ಹಳೆಯ  ‘ರಾಯಲ್ ಏನ್ ಫೀಲ್ಡ್ ‘  ಹತ್ತಿ ಹುಟ್ಟೂರಿನ ಗಡಿ  ದಾಟಿ ‘ದೇಶಾಂತರ’ ಪಯಣ  ಶುರು  ಮಾಡಿಯೇ ಬಿಟ್ಟರು ಒಂದು ಶುಭ  ಮುಹೂರ್ತ ನೋಡಿ… ಮಿತ್ರರಿಬ್ಬರೂ  ಹಲವು  ತಿಂಗಳಲ್ಲಿ ಅನೇಕ ಹಳ್ಳ ಕೊಳ್ಳ, ಕೆರೆ ಕಟ್ಟೆಗಳನ್ನು, ನದಿಗಳನ್ನು   ದಾಟಿ, ನೂರಾರು ಹಳ್ಳಿಯ ಕಚ್ಚಾ  ದಾರಿಗಳನ್ನು ಬಳಸಿ… ಹಲವು ಮಹಾ ನಗರಗಳನ್ನು ಫೋರ್ ವೇ, ಸಿಕ್ಸ್ ವೇಗಳ  ರಸ್ತೆ ಮುಖಾಂತರ  ‘ಜಾಲಿ’ ರೈಡು  ಮಾಡುತ್ತಾ  ಹಲವಾರು ಜಿಲ್ಲೆಗಳನ್ನು ಸುತ್ತುತ್ತಾ ಸಂತೋಷವಾಗಿ ದಿನಗಳನ್ನು  ಕಳೆದರು.ಬರಬರುತ್ತಾ ಇಬ್ಬರ ‘ವಾಲೆಟ್’ ನಲ್ಲಿನ ಹಣ ಕರಗುತ್ತಾ ಬಂತು… ‘ಡಿಜಿಟಲ್ ವಾಲೆಟ್’  ಅಂತೂ ಎಂದೋ ಖಾಲಿಯಾಗಿತ್ತು…ಇನ್ನೊಂದು ನಾಲ್ಕು ದಿನಕ್ಕೆ  ದೀರ್ಘ ‘ಪ್ರವಾಸ’ (ಪ್ರಯಾಸ!) ಮುಗಿಸಿ ಮತ್ತೆ ತಮ್ಮ ‘ತವರಿನ ಹಳ್ಳಿಯತ್ತ’  ಮುಖ  ಮಾಡಲು  ನಿರ್ಧರಿಸಿದರು.

ರಾತ್ರಿಯೆಲ್ಲಾ ಪ್ರಯಾಣಿಸಿ ಮುಂಜಾನೆ ‘ಆನಂದ ಪುರ’ ನಗರಕ್ಕೆ  ತಲುಪಿದರು. ತುಂಬಾ ಹಸಿವಾದ್ದರಿಂದ  ‘ಹೋಟೆಲ್ ಉಡುಪಿ ಕೃಷ್ಣ’  ಹೊಕ್ಕು ಹೊಟ್ಟೆ ತುಂಬಾ   ತಿಂಡಿ ತಿಂದು ಎರಡು  ದೊಡ್ಡ ಕಪ್ ನಲ್ಲಿ ಫಿಲ್ಟರ್ ಕಾಫಿ ಕುಡಿದು ‘ಡರ್ರೆಂದು’ ಡೇಗಿದರು  ತೃಪ್ತಿಯಿಂದ ಮಿತ್ರರು. ಬಿಲ್  ಕೊಡಲು  ಹೋದಾಗ ಹೋಟೆಲ್ ಮಾಲಕರು  ಬರೀ  ತಿಂಡಿಗಷ್ಟೇ  ಪಡೆದು, ಕಾಫಿ ಹಣ  ತೆಗೆದುಕೊಳ್ಳಲಿಲ್ಲ. ಚಂದ್ರ ಅದನ್ನೇ ಕೇಳಿದರೆ ಮಾಲಕರು  ಎದುರಿನ ಗೋಡೆಗೆ  ನೇತು ಹಾಕಿದ ಎರಡೂ  ಹಸ್ತಗಳನ್ನು ಜೋಡಿಸಿ ಕೈ  ಮುಗಿಯುವ ಭಂಗಿಯ,  ಮುಗುಳುನಗೆ ಬೀರುತ್ತಿರುವ ದೊಡ್ಡ ಭಾವಚಿತ್ರ ತೋರಿಸಿ,  ಅವರು ‘ಮಹಾನಾಯಕ ಶ್ರೀ ಗುಂಡಣ್ಣ…( ಟ್ಯಾಗ್ ಲೈನ್ –  ನಮ್ಮ ಊರ  ದೇವರು!)’   ಎಂದು ಪರಿಚಯಿಸಿದರು.  ‘ಉಚಿತ  ಬಿಸಿ ನೀರಿನ ಭಾಗ್ಯ’ ಯೋಜನೆಯಲ್ಲಿ ಇಲ್ಲಿನ  ಸಮಸ್ತ ನಾಗರಿಕರಿಗೆ 24 / 7  ಕಾಫಿ – ಟೀ  ಫ್ರೀ ಕೊಡಲು  ನಮಗೆ  ನಿರ್ದೇಶನ  ನೀಡಿದ್ದಾರೆ. ಹೀಗಾಗಿ ನಿಮ್ಮಿಂದ ನಾನು ಕೇವಲ ತಿಂಡಿಯ  ಬಿಲ್ ಮಾತ್ರ ಪಡೆದಿರುವೆ ” ಎಂದು ಮಾತು ಮುಗಿಸಿದ  ಬಳಿಕ, ಭಯ  ಭಕ್ತಿಯಿಂದ ‘ಕಾಫಿ ದಾತ’  ಶ್ರೀ ಗುಂಡಣ್ಣನಿಗೆ  ಒಂದು ದೊಡ್ಡ ಸೆಲ್ಯೂಟ್ ಹೊಡೆದರು  ಗೆಳೆಯರಿಬ್ಬರು.

ಮಾಡಲು  ಏನೂ ಕೆಲಸವಿಲ್ಲದ ಗೆಳೆಯರು  ‘ನಗರ  ಪ್ರದಕ್ಷಿಣೆ’ ಗೆ ಹೊರಟರು. ಊರಿನ ಎಲ್ಲ ಆಯಕಟ್ಟಿನ ಜಾಗಗಳಲ್ಲಿ  ಹಾಗೂ ಪ್ರಮುಖ ಸರ್ಕಲ್ ಗಳಲ್ಲಿ ಚುನಾವಣೆ ಸಮಯದಲ್ಲಿ  ‘ವಿನೀತ’  ಭಾವವನ್ನು  ಸೂಸುವ ಮುಖವನ್ನು ಹೊತ್ತು ಎರಡೂ ಕೈಗಳನ್ನು ಜೋಡಿಸಿ ‘ಆತ್ಮೀಯ  ನಮಸ್ಕಾರ’   ಮಾಡುತ್ತಿರುವ  ಭಂಗಿಯಲ್ಲಿನ  ‘ಮಹಾನಾಯಕ ಶ್ರೀ ಗುಂಡಣ್ಣ… (ಟ್ಯಾಗ್ ಲೈನ್ – ನಮ್ಮ ಊರ  ದೇವರು!)’  ಅವರ ಬೃಹದಾಕಾರದ  ಭಾವಚಿತ್ರಗಳು ಆಕಾಶದೆತ್ತರದ ಫ್ಲೆಕ್ಸ್ ಬೋರ್ಡ್ ಗಳಲ್ಲಿ ರಾರಾಜಿಸುತ್ತಿದ್ದವು. ಮಧ್ಯಾಹ್ನ ಉರಿಬಿಸಿಲು… ಭಯಂಕರ ಹಸಿವು  ಬೇರೆ…ಬಸ್ ಸ್ಟಾಂಡ್ ಪಕ್ಕದಲ್ಲಿ ‘ಮಹಾನಾಯಕ ಶ್ರೀ ಗುಂಡಣ್ಣ ಕ್ಯಾಂಟೀನ್’   ಬೋರ್ಡ್ ನೋಡಿದ ಕೂಡಲೇ  ‘ಮರಳುಗಾಡಿನಲ್ಲಿ  ಒಯಾಸಿಸ್’ ಸಿಕ್ಕಂತಾಗಿ (  ಸಾಹಿತಿಗಳ ಜನಪ್ರಿಯ  ಹಳೆಯ  ವಾಕ್ಯ ) ಸಂತೋಷದಿಂದ ಒಳ ಹೊಕ್ಕರು ಮಿತ್ರರು. ಕೆಲವೇ  ಕ್ಷಣಗಳಲ್ಲಿ ಅಲ್ಲಿನ ‘ಉಚಿತ  ಊಟ (ಪ್ರಸಾದ)  ಭಾಗ್ಯ’ ದ  ಹೊಸ ಫಲಾನುಭವಿಗಳಾಗಲು  ಸಿದ್ಧರಾದರು.

ಅಲ್ಲಿ ಊಟ ಬಡಿಸುವವರು   ಮಿತ್ರರನ್ನು ಒಮ್ಮೆ ಗೋಡೆಯತ್ತ ಮೊದಲು   ನೋಡಿ ಊಟ ಮಾಡಲು ಸೂಚಿಸಿದರು.  ಸೂರ್ಯ – ಚಂದ್ರರು ಗೋಣೆತ್ತಿ ನೋಡಿದರೆ  ಅಲ್ಲೂ  ಕರ  ಮುಗಿಯುತ್ತಿರುವ  ದೊಡ್ಡ ಭಾವ ಚಿತ್ರದ ಜೊತೆ ‘ಮಹಾನಾಯಕ ಶ್ರೀ ಗುಂಡಣ್ಣ.. (ಟ್ಯಾಗ್ ಲೈನ್ – ನಮ್ಮ ಊರ ದೇವರು!)’  ಎಂದು ದಪ್ಪ ಅಕ್ಷರಗಳಲ್ಲಿ  ಎದ್ದು ಕಾಣುತ್ತಿತ್ತ ಊಟದ  ಬಳಿಕ  ಕ್ಯಾಂಟೀನ್ ನಿಂದ  ಹೊರಬರುತ್ತಾ ‘ಅನ್ನದಾತ  ಶ್ರೀ ಗುಂಡಣ್ಣ ಸುಖೀಭವ’ ಎಂದು  ಗೆಳೆಯರು ಮನದಲ್ಲೇ  ಸ್ಮರಿಸಿದರು.ಸಂಜೆ ಯಥಾ ರೀತಿ’ ಉಚಿತ ಬಿಸಿನೀರಿನ ಭಾಗ್ಯ’ ದ ಅಡಿಯಲ್ಲಿ ಎರಡೆರಡು  ಕಪ್ ಬಿಸಿ ಬಿಸಿ ಚಹಾ  ಗುಟುಕರಿಸಿದರು ಮಿತ್ರರು ಪುಕ್ಕಟೆಯಾಗಿ  ಹತ್ತಿರದ  ಹೋಟೆಲ್ ನಿಂದ.

ರಾತ್ರಿ ಸ್ವಲ್ಪ ರಂಗೇರುವ  ಸಲುವಾಗಿ ‘ಫೆವಿಕಾಲ್’ ಗೆಳೆಯರು ಹತ್ತಿರದ ‘ಕೈಲಾಸ  ಬಾರ್’ ಹೊಕ್ಕರು. ಅಲ್ಲಿ ಅದೂ ಇದೂ ಎಂದು ಸ್ನಾಕ್ಸ್   ತಿನ್ನುತ್ತಾ ‘ಡ್ರಿಂಕ್ಸ್’ ಆರ್ಡರ್ ಮಾಡಿದರೆ  ‘ಒಂದು ಪೆಗ್ ಡ್ರಿಂಕಿಗೆ (ಸೋಮ  ಪಾನ) ಮತ್ತೊಂದು ಪೆಗ್ ಡ್ರಿಂಕ್ ಫ್ರೀಯಾಗಿ  ಸಿಗುತ್ತದೆ  ಸಾರ್.. ನಮ್ಮ ‘ಮಹಾನಾಯಕ ಶ್ರೀ ಗುಂಡಣ್ಣ (ಟ್ಯಾಗ್ ಲೈನ್ – ನಮ್ಮೂರಿನ ದೇವರು!)’  ಕೊಡುವ ‘ ಉಚಿತ ತಂಪು  ಪಾನೀಯ  ಭಾಗ್ಯ’ ದ ಅಡಿಯಲ್ಲಿ  ಎಂದು ಹೇಳಿದ ಸಪ್ಲೈರ್ ಸಣ್ಣಪ್ಪ…ಗೆಳೆಯರು  ಎರಡೆರಡು ಪೆಗ್ ಆರ್ಡರ್ ಮಾಡಿ  ಪುಕ್ಕಟೆಯಾಗಿ ಬಂದ  ಮತ್ತೆರಡು  ಪೆಗ್ ಗಳನ್ನು  ನಿಧಾನವಾಗಿ ಗುಟುಕರಿಸಲು  ಶುರು  ಮಾಡಿದರು. ಅಷ್ಟರಲ್ಲಿ ” ಮಹಾನಾಯಕ  ಶ್ರೀ ಗುಂಡಣ್ಣನಿಗೆ ಜೈ.. ” ಎನ್ನುವ  ಜೈಕಾರದೊಂದಿಗೆ ಒಂದು ದೊಡ್ಡ ತಂಡವೇ  ಬಂದಿತು  ಬಾರೊಳಗೆ. ತಂಡದ ಅಜಾನುಭಾವ ನಾಯಕ  ಮರಿಗುಂಡ  “ಶ್ರೀ ಗುಂಡಣ್ಣ ಅಭಿಮಾನಿ ಸಂಘದ” ಅಧ್ಯಕ್ಷನೆಂದು  ತನ್ನನ್ನು ತಾನು ಸ್ವಯಂ ಪರಿಚಯಿಸಿಕೊಳ್ಳುತ್ತ   ಗೆಳೆಯರ ಎದುರಿನ ಟೇಬಲ್  ಆಕ್ರಮಿಸಿದ (ಅತಿಕ್ರಮಿಸಿದ!).   ಆತನ  ಪಟಾಲಂ  ಹಿಂಬಾಲಿಸಿ ನಾಯಕನ  ಹಿಂದಿನ ಚೇರುಗಳಲ್ಲಿ  ಅಲ್ಲಲ್ಲಿ ಆಸೀನರಾದರು.

ಎದುರಿಗೆ ಕೂತವರು ಈ ಭಾಗಕ್ಕೆ ಹೊಸಬರು  ಎಂದು ಅರಿತ  ಮರಿಗುಂಡ ಒಂದೆರಡು   ಪುಕ್ಕಟೆ  ಪೆಗ್ ಗಳನ್ನು ಗಂಟಲಲ್ಲಿ ಇಳಿಸಿದ ಬಳಿಕ  ಕಿಕ್ (ಹುಮ್ಮಸ್ಸು) ಹೆಚ್ಚಾಗಿ ತನ್ನ ‘ವಿಶ್ವ ರೂಪ’ ತೋರಿಸತೊಡಗಿದ. ತನ್ನ ಮೆಚ್ಚಿನ    ‘ಮಹಾನಾಯಕ ಶ್ರೀ ಗುಂಡಣ್ಣ (ಟ್ಯಾಗ್ ಲೈನ್ – ನಮ್ಮೂರ ದೇವರು!) ಈ ಊರಿನ  ಪ್ರಜೆಗಳಿಗಾಗಿ ಎಂತೆಂತಹ  ‘ ಉಚಿತ  (ಬಿಟ್ಟಿ) ಭಾಗ್ಯ’ ಗಳನ್ನು  ಕರುಣಿಸಿದ್ದಾರೆ ಎನ್ನುವ ಪಟ್ಟಿಯನ್ನು ಹೆಮ್ಮೆಯಿಂದ ಸಾವಕಾಶವಾಗಿ ಹೇಳಲು ಶುರು  ಮಾಡಿದ. ” ಎಲ್ಲ ಸಾರ್ವಜನಿಕರಿಗೆ  ಉಚಿತ ಬಿಸಿನೀರಿನ ಭಾಗ್ಯ – ತಂಪು  ಪಾನಿಯ  ಭಾಗ್ಯ – ಅನ್ನ ಭಾಗ್ಯ – ಕುಡಿಯುವ ನೀರಿನ ಭಾಗ್ಯ  – ವಿದ್ಯಾರ್ಥಿಗಳಿಗೆ ಯುನಿಫಾರ್ಮ್ ಭಾಗ್ಯ – ಶೂಸ್  ಭಾಗ್ಯ- ವಿದ್ಯೆ ಭಾಗ್ಯ – ಟ್ಯೂಷನ್ ಭಾಗ್ಯ- ಸೈಕಲ್ ಭಾಗ್ಯ…ಬಸ್ ಪಾಸ್ ಭಾಗ್ಯ –  ದೊಡ್ಡವರಿಗೆ  ಅರೋಗ್ಯ ಭಾಗ್ಯ –  ವಿಧವೆಯವರಿಗೆ & ವೃದ್ಧರಿಗೆ  ಪಿಂಚಣಿ ಭಾಗ್ಯ…ವಿದ್ಯಾವಂತ ನಿರುದ್ಯೋಗಿಗಳಿಗೆಮಾಸಿಕ ಸ್ಟೈಪೆಂಡ್ ಭಾಗ್ಯ… ಅಂಗವಿಕಲರಿಗೆ ಸ್ಕೂಟರ್ ಭಾಗ್ಯ… ಕಾರ್ಮಿಕರಿಗೆ ನೆರವು ಭಾಗ್ಯ…ಹಾಲಿನ ಭಾಗ್ಯ – ಮೊಟ್ಟೆಯ ಭಾಗ್ಯ -ಮದುವೆ ಭಾಗ್ಯ – ಔಷಧಿ ಭಾಗ್ಯ – ತಲೆ ನೋವಿನ ಭಾಗ್ಯ – ಕೆಮ್ಮಿನ ಭಾಗ್ಯ – ನೆಗಡಿ  ಭಾಗ್ಯ…ಇನ್ನೂ ಇಂತಹ ಅನೇಕ ಭಾಗ್ಯಗಳು  ಇವೆ.. ಸದ್ಯಕ್ಕೆ  ಕೆಲವು ನೆನಪಾಗುತ್ತಿಲ್ಲ…” ಎಂದು  ಚಿಕ್ಕ ಮಕ್ಕಳು ಪದ್ಯಗಳನ್ನು  ‘ಕಂಠಪಾಠ’ ಮಾಡಿ ಟೀಚರ್ ಮುಂದೆ ಒಪ್ಪಿಸಿದಂತೆ ಶಿಸ್ತಾಗಿ ಯುವ ನಾಯಕ ಮರಿಗುಂಡ ಎಲ್ಲವನ್ನೂ ಹೊಸ ಗೆಳೆಯರ  ಮುಂದೆ ಹೇಳಿ ಹಗುರಾಗಿ ರಾತ್ರಿ ಸುಖವಾಗಿ ನಿದ್ದೆ ಮಾಡಿದ..

ನಿಜ ಹೇಳಬೇಕೆಂದರೆ ‘ಆನಂದ ಪುರ’ ಪ್ರಜೆಗಳಿಗೆ ಮಾಡಲು  ಏನೂ ಕೆಲಸವಿರದಿದ್ದರಿಂದ ದಿನಾಲೂ ಫೇಸ್ಬುಕ್, ವಾಟ್ಸಪ್ಪ್  ಮತ್ತು ಮೊಬೈಲ್ ಸೆಲ್ಫಿ, ಚಾಟಿಂಗುಗಳಲ್ಲೇ ಕಾಲ  ಕಳೆಯುತ್ತಿದ್ದರು…  ಹೆಂಗಸರು  ‘ಡೈಲಿ  ಸೀರಿಯಲ್’ ಗಳನ್ನು ನೋಡುತ್ತಾ ದಿನಗಳನ್ನು  ದೂಡುತ್ತಿದ್ದರೆ  ಗಂಡಸರು   ಹಗಲೂ – ರಾತ್ರಿ  ಗುಂಪು ಗುಂಪಾಗಿ ಸೇರಿ ಹರಟೆ  ಹೊಡೆಯುತ್ತಾ, ರಸ್ತೆಗಳನ್ನು ಅಳೆಯುತ್ತ ಹೊತ್ತು ಕಳೆಯುತ್ತಿದ್ದರು..  ಇಲ್ಲಿನ ‘ಘನತೆವೆತ್ತ ಪ್ರಜೆ’ ಗಳಿಗೆ  ಸರ್ವವೂ ಉಚಿತ  ಭಾಗ್ಯದಲ್ಲಿ ಸಿಗುತ್ತಿದ್ದವು ‘ಮಹಾನಾಯಕ  ಶ್ರೀ ಗುಂಡಣ್ಣ.. (ಟ್ಯಾಗ್ ಲೈನ್ – ನಮ್ಮೂರ  ದೇವರು!)’ ನವರ  ದಯೆಯಿಂದ –  ವ್ಯಕ್ತಿಯ ‘ಸ್ವಯಂ ಉಸಿರಾಟದ’   ಹೊರತು’! (ಉಸಿರಾಡುವ ಸ್ವಂತ ಕೆಲಸ ಮಾತ್ರ ಪ್ರಜೆಗಳದ್ದೇ…)

“ಎಂತಹ  ಅದ್ಭುತ ನಗರವಿದು.. ಮಾಡಲು ಏನೂ ಕೆಲಸವಿಲ್ಲ…ಎಲ್ಲವೂ ಪುಕ್ಕಟೆಯಾಗಿ ಸಿಗುವ  ಊರು ಅಂತ ಈ ಪ್ರಪಂಚದಲ್ಲಿ ಏನಾದರೂ ಇದ್ದರೆ ಅದು ‘ಆನಂದ ಪುರ ದಲ್ಲಿ ಮಾತ್ರ… ಎಂದು ಅಭಿಮಾನದಿಂದ  ಹೇಳಿದ  ಚಂದ್ರ  ಮಿತ್ರ ಸೂರ್ಯನಿಗೆ.” ಹೌದು ಗೆಳೆಯ… ಇದು ಒಂದು ರೀತಿಯಲ್ಲಿ  ‘ಭೂ ಲೋಕ’  ಸ್ವರ್ಗ…ಅಂದ ಹಾಗೆ “ಮಹಾನಾಯಕ ಶ್ರೀ ಗುಂಡಣ್ಣ… (ಟ್ಯಾಗ್ ಲೈನ್ –  ನಮ್ಮೂರ ದೇವರು!)” ಅವರ  ದಿವ್ಯ ಭಾಷಣವಿದೆಯಂತೆ ಮುನ್ಸಿಪಲ್ ಮೈದಾನದಲ್ಲಿ… ಕೂಡಲೇ ಹೋಗೋಣ ನಡೆ….”  ಎಂದು ಸೂರ್ಯ ಗೆಳೆಯ ಚಂದ್ರನಿಗೆ ಅವಸರ  ಮಾಡಿದ  ಸಭೆಗೆ  ಹೋಗಲು… ಮೈದಾನದಲ್ಲಿ ಕಿಕ್ಕಿರಿದ   ಜನ… ಸಾವಿರಾರು ಅಭಿಮಾನಿಗಳು. ಎಲ್ಲರ ದೃಷ್ಟಿ ಒಂದೇ ಕಡೆ ಮೈಕನ್ನು  ಹಿಡಿದು ಜನಗಳ  ಚಪ್ಪಾಳೆಯ ಮಧ್ಯೆ ಮಹಾನಾಯಕ ಶ್ರೀ ಗುಂಡಣ್ಣ… (ಟ್ಯಾಗ್ ಲೈನ್ – ನಮ್ಮೂರ  ದೇವರು!)’ ಭಾಷಣ  ಆರಂಭಿಸಿದರು.

“ಅಕ್ಕ ತಂಗಿಯರೇ, ಮಾತೆಯರೇ, ಒಡ ಹುಟ್ಟಿದ ಅಣ್ಣ ತಮ್ಮಂದಿರೇ,  ಯುವತಿ – ಯುವಕರೇ  ಮತ್ತು ‘ಆನಂದ  ಪುರದ ‘ ನನ್ನ ಪ್ರೀತಿಯ ಸಮಸ್ತ ಬಂಧು  ಬಾಂಧವರೇ,ಎಲ್ಲರಿಗೂ ನನ್ನ ಹೃದಯಪೂರ್ವಕ ನಮಸ್ಕಾರಗಳು. ಕಳೆದ  ಎಂಟು ಬಾರಿ  ನನ್ನನ್ನು ಸತತವಾಗಿ ತಮ್ಮ ಅಮೂಲ್ಯ ಮತದಾನದ ಮೂಲಕ  ನಿಮ್ಮ ಸೇವೆಯನ್ನು ನಿರಂತರವಾಗಿ  ಮಾಡಲು  ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾನು ಯಾವತ್ತೂ ಚಿರಋಣಿ… ಈ ಸಲವೂ  ನನಗೆ  ಅಖಂಡ ಬೆಂಬಲ ನೀಡಿ ಗೆಲ್ಲಿಸುವದರೊಂದಿಗೆ  ‘ ಸೋಲಿಲ್ಲದ  ಸರದಾರ’ ಎನ್ನುವ ಬಿರುದು ದಯಪಾಲಿಸುತ್ತೀರೆಂಬ ವಿಶ್ವಾಸ ನನಗಿದೆ…ಇಲ್ಲಿಯವರೆಗೆ ನಾನು ಅನೇಕ ಉಚಿತ  ಭಾಗ್ಯಗಳನ್ನು  ತಮಗಾಗಿ ಜಾರಿಗೆ ತಂದರೂ  ತಮ್ಮ ಹೊಟ್ಟೆ ತುಂಬಿಲ್ಲ… ಮನಸಿಗೆ  ಸಮಾಧಾನವಾಗಿಲ್ಲ ಎಂದು ನಾನು ಬಲ್ಲೆ…ಅದಕ್ಕಾಗಿ ಈ ಬಾರಿ ಅದ್ಭುತ ಪ್ಲಾನ್  ಒಂದನ್ನು ನಿಮ್ಮ ಮುಂದೆ ಇಡುತ್ತಿರುವೆ… ಅದನ್ನು ಕೇಳಿದ  ಬಳಿಕ  ತಾವೆಲ್ಲ ಜೀವನಪರ್ಯಂತ ನನ್ನನ್ನೇ ಆಯ್ಕೆ ಮಾಡುತ್ತೀರಿ… ಅದರಲ್ಲಿ  ಎಳ್ಳಷ್ಟೂ ಸಂಶಯವಿಲ್ಲ… ನೀವೆಲ್ಲ ಅಲ್ಲಾವುದ್ದಿನ್ ಅದ್ಭುತ ದೀಪದ ಕಥೆ  ಕೇಳಿರುತ್ತೀರಿ…ನೀವು ಏನು ಕೇಳುತ್ತೀರೋ ಅದನ್ನು ಇನ್ನು ಮುಂದೆ ಕ್ಷಣಾರ್ಧದಲ್ಲಿ ಅದರಂತೆ ಹಾಗೂ ಇನ್ನೂ ಹೆಚ್ಚಿನ ವೇಗದಲ್ಲಿ ಈ ‘ ಶ್ರೀ ಗುಂಡಣ್ಣನ ಅದ್ಭುತ ದೀಪ’ ನೀಡುತ್ತದೆ.

ಅದು ನಿಮ್ಮ ಮನೆಯಲ್ಲಿದ್ದರೆ ಯಾವುದೇ ಉಚಿತ ಭಾಗ್ಯಗಳ (ಯೋಜನೆಗಳ)  ಅವಶ್ಯಕತೆ ಇರೋದಿಲ್ಲ…ಅದಕ್ಕಾಗಿ  ವಿದೇಶಗಳಿಂದ  ಪ್ರಖ್ಯಾತ ವಿಜ್ಞಾನಿಗಳನ್ನು  ಮತ್ತು ನಮ್ಮ ದೇಶದೊಳಗಿನ  ದೊಡ್ಡ ದೊಡ್ಡ ಮಂತ್ರವಾದಿಗಳನ್ನು  ಕರೆಸುತ್ತಿರುವೆ. ಮುಂದೆ ಅವರು  ಜಂಟಿಯಾಗಿ ತಯಾರು  ಮಾಡುವ  ‘ಶ್ರೀ ಗುಂಡಣ್ಣ ಅದ್ಭುತ ದೀಪ’ ಗಳನ್ನು  (ಇದು ಥೇಟ್ ಅಲ್ಲಾವುದ್ದಿನ್ ಅದ್ಭುತ ದೀಪದಂತೆ ಕೆಲಸ ಮಾಡುವದು ಎಂದು ನಾನು ಬೇರೆ ಹೇಳಬೇಕಾಗಿಲ್ಲ..) ಮನೆ ಮನೆಗೆ ಹಂಚುತ್ತೇನೆ..ನಂತರ ಸಾಯುವವರೆಗೆ  ನೀವು ನೆಮ್ಮದಿಯಿಂದ ಬದುಕಬಹುದು. ಆಹಾರಕ್ಕೆ, ಬಟ್ಟೆಗೆ, ನೀರಿಗೆ  ಮತ್ತು ಯಾವುದಕ್ಕಾದರೂ ಸರಿ… ಎಲ್ಲದಕ್ಕೂ ಅದೇ  ಶ್ರೀ ಗುಂಡಣ್ಣ ಅದ್ಭುತ ದೀಪವೇ ಸಾಕು!…ಇನ್ನು ಮುಂದೆ ದೀಪ  ನಿಮಗೆ – ಅಮೂಲ್ಯ ಮತ  ನನಗೆ… ” ಎಂದು ಮಾತು ಮುಗಿಸಿದಾಗ  ಮತ್ತೊಮ್ಮೆ ಚಪ್ಪಾಳೆಯ ಸುರಿಮಳೆ…

ಮರುದಿನದಿಂದ ಸೂರ್ಯ – ಚಂದ್ರ   ಎನ್ನುವ ಗೆಳೆಯರಿಬ್ಬರು  ‘ಶ್ರೀ ಗುಂಡಣ್ಣ ಅದ್ಭುತ ದೀಪದ’ ಆಗಮನದ ನಿರೀಕ್ಷೆಯಲ್ಲೇ ಕಾಲ  ಕಳೆಯುತ್ತ ತಮ್ಮ ‘ತೌರು ಮನೆ’ಯಂತಹ ಸ್ವಂತ ಹಳ್ಳಿಗೆ ಹೋಗುವ ನಿರ್ಧಾರವನ್ನು  ಸಂಪೂರ್ಣವಾಗಿ ಕೈ ಬಿಟ್ಟರು!

     *****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ಮಹಾನಾಯಕ ಶ್ರೀ ಗುಂಡಣ್ಣ. (ಟ್ಯಾಗ್ ಲೈನ್ – ನಮ್ಮ ಊರ ದೇವರು!) ”

  1. ಧರ್ಮಾನಂದ ಶಿರ್ವ

    ವಿಡಂಬನಾ ಬರಹ ಈಗಿನ ಉಚಿತ ಸವಲತ್ತುಗಳನ್ನು ಅಣಕಿಸುವ ಧಾಟಿಯಲ್ಲಿ ಸೊಗಸಾಗಿ ಮೂಡಿಬಂದಿದೆ.
    ಅಭಿನಂದನೆಗಳು

      1. ವಿಡಂಬನಾತ್ಮಕ ಬರಹದಲ್ಲಿ ನೀವು ನಿಸ್ಸೀಮರು. ಮಹಾನಾಯಕ ಗುಂಡಣ್ಣ ಹಾಗು ಸೋಮಾರಿ ಸ್ನೇಹಿತರು ಚಂದ್ರ, ಸೂರ್ಯ ನಿರೂಪಣೆ ಚೆನ್ನಾಗಿದೆ. ಇಂತಹ ಅನೇಕ ಲೇಖನಗಳು ನಿಮ್ಮ ಲೇಖನಿಯಿಂದ ಮೂಡಿಬರಲಿ ಎಂದು ಆಶಿಸುವೆ.

  2. ಬಿ.ಟಿ.ನಾಯಕ್ರ್

    ತುಂಬಾ ಚೆನ್ನಾಗಿ ಬಂದಿದೆ ರಾಘವೇಂದ್ರ ಸರ್. ಅಭಿನಂದನೆಗಳು.

  3. ಮಹಾನಾಯಕ ಗುಂಡಣ್ಣನವರ ಅದ್ಭುತ ದೀಪದ ಕಾರ್ಯಕ್ರಮದ ವಿವರ ಕೇಳಿದ ಯಾರಿಗಾದರೂ (ಸೋಮಾರಿಗಳಿಗೆ) ಆಸೆ ಮೂಡುವುದು ಸಹಜವೇ ತಾನೇ? ಅದೇ ತೆರನಾಗಿ‌ ನಮ್ಮ ಸೂರ್ಯ ಚಂದ್ರರೂ ತಮ್ಮೂರನ್ನು ಮರೆತು‌ ಅಲ್ಲೇ ನೆಲೆಯಾಗಿ ನಿಂತುದನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ.
    ಒಳ್ಳೆಯ ಲೇಖನ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter