ಸಾಮೂಹಿಕ ಅನುಭವದ ಕುರಿತು ಮಾತನಾಡುವ  ಬಂಡಾಯ ಸಾಹಿತ್ಯ: ನಾಲ್ಕು ದಶಕ

ಜುಲೈ 23 ಮತ್ತು 24,  2022 ರಂದು ದಾವಣಗೆರೆಯಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ಜರಗಿತು.ಈ ಸಂದರ್ಭದಲ್ಲಿ  ಹಿಂದಿನ ಬಂಡಾಯದ ಕೆಲವು ನೆನಪುಗಳನ್ನು ಹಂಚಿಕೊಳ್ಳಬೇಕೆನಿಸಿತು. ನನ್ನ ಸಾಹಿತ್ಯದ ಆರಂಭದ ದಿನಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿದ್ದ  ಡಾ. ಆರ್.ಕೆ.ಮಣಿಪಾಲ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ಕೇಶವ ಶರ್ಮ….ಮೊದಲಾದವರೆಲ್ಲರ ಸಾಹಿತ್ಯವು ನನ್ನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ, ಚಳುವಳಿಯ ಕುರಿತು ಆಸಕ್ತಿ ಮೂಡಿಸಿದ್ದವು. ಅನಂತರದ ದಿನಗಳಲ್ಲಿ ಡಾ.ಬರಗೂರು ರಾಮಚಂದ್ರಪ್ಪ, ಚಂಪಾ, ಶೂದ್ರ ಶ್ರೀನಿವಾಸ, ಆರ್.ಜಿ.ಹಳ್ಳಿ ನಾಗರಾಜ್, ಡಾ.ಸರಜೂ ಕಾಟ್ಕರ್, ಜಿ.ರಾಜಶೇಖರ, ಚೆನ್ನಣ್ಣ ವಾಲೀಕಾರ…. ಮೊದಲಾದವರೆಲ್ಲ ಆಪ್ತರಾದರು.ಅವರು ಸಾಹಿತ್ಯ ಕೃತಿಗಳ ಮೂಲಕ  ಮಾರ್ಗದರ್ಶಕರಾಗಿದ್ದರು. ಮುಂಬಯಿಯಲ್ಲಿದ್ದೇ ನಾನು ಇವರೆಲ್ಲರ ಜೊತೆ ಪತ್ರವ್ಯವಹಾರ ಮಾಡುತ್ತಾ ಬಂದಿದ್ದೆ.

ಕೆಲ ಸಮಯದ ಹಿಂದೆ ಮುಂಬಯಿ ವಿ.ವಿ.ಕನ್ನಡ ವಿಭಾಗದ ಮುಖ್ಯಸ್ಥರಾದ  ಡಾ.ಜಿ.ಎನ್. ಉಪಾಧ್ಯ ಅವರು  ‘ಬಂಡಾಯ ಸಾಹಿತ್ಯ’ ಕುರಿತು  ವಿಶೇಷ ಉಪನ್ಯಾಸ ಮಾಡಲು  ವಿಭಾಗಕ್ಕೆ ಆಹ್ವಾನಿಸಿದ್ದರು. ಸಮ್ಮೇಳನದ ಈ ಸಂದರ್ಭದಲ್ಲಿ  ಆ   ಉಪನ್ಯಾಸ ಪ್ರಬಂಧ ರೂಪದಲ್ಲಿ ಇಲ್ಲಿದೆ.

——

ಅದು ಎಪ್ಪತ್ತರ ದಶಕ. ಮಾರ್ಕ್ಸ್ ವಾದಿ ಚಿಂತನೆಯ ಎಡಪಂಥೀಯ ವಿಚಾರಧಾರೆಗಳು ಯುವ ಸಾಹಿತಿಗಳನ್ನು ಆಕರ್ಷಿಸುತ್ತಿತ್ತು. ಆವಾಗಲೇ ವಿಜೃಂಭಿಸುತ್ತಿದ್ದ ನವ್ಯ ಸಾಹಿತ್ಯದ ಮೇಲೆ ಒಂದು ಬಗೆಯ ಅಸಹನೆ ಅಲ್ಲಿ ಇಲ್ಲಿ ಹೊರ ಬರುತ್ತಿತ್ತು. ಬರಗೂರು ರಾಮಚಂದ್ರಪ್ಪ ಅವರು 1973ರಲ್ಲಿ ‘ಮರಕುಟಿಗ’ ಕವನ ಸಂಕಲನವನ್ನು ಪ್ರಕಟಿಸಿದಾಗಲೇ ನವ್ಯ ಸಾಹಿತ್ಯಕ್ಕೆ ಸಡ್ಡು ಹೊಡೆದಿರುವುದು ಸ್ಪಷ್ಟವಾಗಿತ್ತು. ನವ್ಯದ ಗೋಪಾಲಕೃಷ್ಣ ಅಡಿಗರಿಗೆ ಬರಗೂರರು ಕಾವ್ಯ ಸಂವಾದ ನಡೆಸಿದ್ದು, ಹೊಸ ಸಾಹಿತ್ಯ ಚಳುವಳಿಯ ಮಾರ್ಗವೊಂದು ಆ ದಿನಗಳಲ್ಲಿ  ಹೊರ ಬರುವ ಲಕ್ಷಣಗಳು ಗೋಚರಿಸುತ್ತಿತ್ತು.

1979ರ ಮಾರ್ಚ್ ತಿಂಗಳ 10 ಮತ್ತು 11 ರಂದು ಬೆಂಗಳೂರಿನಲ್ಲಿ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಅದಕ್ಕಿಂತ ಎರಡು ವರ್ಷಗಳ ಮೊದಲು 1977ರಲ್ಲಿಯೇ ‘ಕಪ್ಪು ಜನರ ಕೆಂಪು ಕಾವ್ಯ’ ಕವನ ಸಂಕಲನವೊಂದು (ನವ್ಯಕ್ಕೆ ಸವಾಲು ಹಾಕಿ) ಪ್ರಕಟವಾಗಿತ್ತು. ಈ ಕವನ ಸಂಕಲನದ ಸಂಪಾದಕರಾದ ವಿಜಯ ಪಾಟೀಲ ಮುನ್ನುಡಿಯಲ್ಲಿ ಹೇಳಿರುವ ಮಾತನ್ನು ಗಮನಿಸಿದರೆ ಈ ಅಂಶ ಎದ್ದು ಕಾಣುವುದು –

“ಓ ನವ್ಯ ಕವಿಗಳು! ಕನ್ನಡ ಸಾಹಿತ್ಯದಲ್ಲಿ ಹೊಸ ಮನ್ವಂತರ ಶುರು ಮಾಡಿದವರು! ನಿಮಗೆ ನನ್ನ ನಮಸ್ಕಾರಗಳು, ಜೊತೆಗೆ ಒಂದಿಷ್ಟು ಸಲಹೆಗಳು, ಒಂದೆರಡು ಸವಾಲುಗಳು. ಎಲ್ಲರಿಗೂ ತಿಳಿಯದಂತೆ ಬರೆಯುವುದನ್ನೇ ವೈಶಿಷ್ಟ್ಯವನ್ನಾಗಿರಿಸಿಕೊಂಡಿರುವ ನಿಮ್ಮ ಒಂದು ಕವನ ಅರ್ಥೈಸಿಕೊಳ್ಳಲು ಹತ್ತು ಪುಟಗಳ ವಿಶ್ಲೇಷಣೆ (ಅದೂ ಪೂರ್ತಿ ತಿಳಿಯುವುದಿಲ್ಲ ಬಿಡಿ) ಓದುವಂತೆ ಮಾಡಿರುವ ಅಡಿಗರೇ, ಅಡಿಗರ ಅನಂತರದವರೇ, ಕೊಳ್ಳಿ ಇಡಿ ನಿಮ್ಮ ಸಂಕೀರ್ಣತೆಗೆ, ಕ್ಲಿಷ್ಟತೆಗೆ ಕಲ್ಲು ಹಾಕಿ ಜಜ್ಜಿ ಬಿಡಿ…..”

ಇಲ್ಲಿನ ಮಾತುಗಳನ್ನು ಗಮನಿಸಿದರೆ ನವ್ಯ ಸಾಹಿತ್ಯ ಸಂದರ್ಭದ ದಿನಗಳ ತೀವ್ರ ಅಸಮಾಧಾನ ಎದ್ದು ಕಾಣುತ್ತದೆ. ಕೊನೆಯಲ್ಲಿ ಸಂಪಾದಕ ವಿಜಯ ಪಾಟೀಲ ಸಲಹೆ ನೀಡುತ್ತಾರೆ ಹೀಗೆ – “ನಿಮ್ಮ ಕವನಗಳು ಓದಿ ಹೇಳಿದರೆ ಮಣ್ಣಿನ ಮಕ್ಕಳಿಗೂ ಅರ್ಥವಾಗುವಂತಿರಲಿ, ತಿಳಿಯಾಗಿರಲಿ, ನೇರವಾಗಿರಲಿ, ಸ್ಪಷ್ಟವಾಗಿರಲಿ, ಶ್ರೀ ಸಾಮಾನ್ಯನ ಸಮಸ್ಯೆಗಳಿಗೂ ಸಂಬಂಧಪಟ್ಟಿರಲಿ. ಅವರೂ ವಿಚಾರ ಮಾಡುವಂತೆ ಪ್ರೇರೇಪಿಸಲಿ, ಬದುಕಿನ ಹೋರಾಟಕ್ಕೆ ಅಣಿಗೊಳಿಸಲಿ.”

ಈ ಸಂಕಲನದಲ್ಲಿ ಬಂಡಾಯದ ಪಂಚಾಂಗವೊಂದು ಕಾಣಿಸಿಕೊಂಡಿರುವುದು ನಾವು ಒಪ್ಪಬಹುದೇನೋ. ಈ ಸಂಕಲನದಲ್ಲಿ ಕವನಗಳನ್ನು ನೀಡಿರುವ ಕವಿಗಳು ಇಪ್ಪತ್ತೈದು. ಅನಂತರದ ದಿನಗಳಲ್ಲಿ ಈ ಇಪ್ಪತ್ತೈದು ಕವಿಗಳಲ್ಲಿ ಅನೇಕರು ಬಂಡಾಯ ಸಾಹಿತ್ಯ ಚಳುವಳಿಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡು ಬಂದವರಾಗಿದ್ದಾರೆ.

ಹಾಗೆ ನೋಡಿದರೆ ಎಪ್ಪತ್ತರ ದಶಕ ಹೊಸಗನ್ನಡ ಸಾಹಿತ್ಯ ಚರಿತ್ರೆಯ ಇತಿಹಾಸದಲ್ಲಿ ಮೂರು ಪ್ರಮುಖ ಸಮ್ಮೇಳನಗಳನ್ನು ನೀಡಿರುತ್ತದೆ. 1974ರಲ್ಲಿ ಮೈಸೂರಲ್ಲಿ ಜರಗಿದ ‘ಕನ್ನಡ ಬರಹಗಾರರ ಕಲಾವಿದರ ಒಕ್ಕೂಟದ ಸಮ್ಮೇಳನ, 1976ರಲ್ಲಿ ದಾವಣಗೆರೆಯಲ್ಲಿ ಜರಗಿದ ‘ಪ್ರಗತಿ ಪಂಥ’ದ ಪ್ರಥಮ ಸಮ್ಮೇಳನ, ಹಾಗೂ 1979ರಲ್ಲಿ ಬೆಂಗಳೂರಿನಲ್ಲಿ ಜರಗಿದ ‘ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನ’, ಹೀಗೆ ಸಮ್ಮೇಳನಗಳ ದಶಕವೆಂದು ಹೇಳಿರುವುದು ಒಪ್ಪಬೇಕು. ಪ್ರೊ. ಚಂದ್ರಶೇಖರ ನಂಗಲಿ ಅವರಂತೂ ‘ವಸ್ತು ನಿಷ್ಠತೆ ಮತ್ತು ಆತ್ಮ ರತಿಗಳಿಂದ ತನ್ನ ಮೇಲೆ ತಾನೆ ಕೈಯಿಟ್ಟುಕೊಂಡು ಅಸುನೀಗಿದ ನವ್ಯ ಕಾವ್ಯ…’ ಎಂಬ ವಿಶ್ಲೇಷಣೆಯನ್ನೂ ಮಾಡಿದ್ದರು.

1976ರಲ್ಲಿ ಧರ್ಮಸ್ಥಳದಲ್ಲಿ ಜರಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚೆನ್ನಣ್ಣ ವಾಲೀಕಾರ – ಜಂಬಣ್ಣ ಅಮರ ಚಿಂತ …. ಮೊದಲಾದವರು ದಲಿತ ಸಾಹಿತ್ಯದ ಕುರಿತು ಗೋಷ್ಠಿ ಇಡಬೇಕೆಂದು ಕೇಳಿಕೊಂಡರೆ “ಸಾಹಿತ್ಯದಲ್ಲಿ ದಲಿತ ಬಲಿತ ಕಲಿತ ಅಂತಿಲ್ಲ’ ಎನ್ನುವ ಉತ್ತರವನ್ನು ಆಗಿನ ಅಧ್ಯಕ್ಷರು ನೀಡಿದಾಗ ಯುವ ಸಾಹಿತಿಗಳೆಲ್ಲ ಅದರಲ್ಲೂ ಎಡ ಪಂಥೀಯ ವಿಚಾರಧಾರೆಯುಳ್ಳವರು ಆಕ್ರೋಶಗೊಂಡರು. ಮುಂದೆ ಎಪ್ಪತ್ತರ ದಶಕದ ಕೊನೆಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆ (ಚಳುವಳಿ) ಹುಟ್ಟಿಕೊಂಡು 1979ರಲ್ಲಿ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನವು ಜರಗಿತು.

ರಾಜ್ಯ ಬಂಡಾಯ ಸಾಹಿತ್ಯ ಸಂಘಟನಾ ಸಮಿತಿಯವರು ಆ ದಿನಗಳಲ್ಲಿ ಪ್ರಕಟಿಸಿದ ಬಂಡಾಯ ಸಾಹಿತ್ಯ ಸಂಘಟನೆ ಪ್ರಣಾಳಿಕೆ ಮತ್ತು ಸಂವಿಧಾನದಲ್ಲಿ ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖಿಸಬೇಕಾಗಿದೆ: “ನಮ್ಮ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಅನೇಕ ವರ್ಷಗಳಿಂದ ಕಂಡು ಬರುತ್ತಿರುವ ಪ್ರಗತಿಪರ ಧೋರಣೆಗಳು ತೆಗೆದುಕೊಂಡ ತಿರುವುಗಳು ಎದುರಿಸಿದ ಸಮಸ್ಯೆಗಳು ಮತ್ತು ತಲುಪಿದ ಕ್ಷೀಣ ನೆಲೆಗಳನ್ನು ಗಮನಿಸಿದಾಗ ಅವುಗಳಿಂದ ಪಾಠ ಕಲಿತ ವ್ಯಾಪಕ ಸ್ವರೂಪದ ಸಂಘಟನೆಯ ಅಗತ್ಯ ಗೊತ್ತಾಗುತ್ತದೆ. ಒಕ್ಕೂಟ ಪ್ರಗತಿ ಪಂಥಗಳ ಸಾಫಲ್ಯ – ವೈಫಲ್ಯಗಳ ದಾಖಲೆ ನಮಗೊಂದು ಎಚ್ಚರದ ಸಂಗತಿಯೂ ಆಗಿದೆ. ನಮ್ಮ ದೇಶದ ಚಾರಿತ್ರಿಕ, ರಾಜಕೀಯ ಬೆಳವಣಿಗೆಗಳ ಸ್ವರೂಪದಿಂದಾಗಿ ಉದ್ಭವಿಸಿದ ಇಂದಿನ ವಿಶಿಷ್ಟ ಸಂದರ್ಭದ ಹಿನ್ನೆಲೆಯಲ್ಲಿ ನಮ್ಮ ಹೋರಾಟದ ನೆಲೆಯನ್ನು ಕಂಡುಕೊಳ್ಳಬೇಕಾಗಿದೆ. ಜನ ವಿರೋಧಿ ನಿಲುವುಗಳು ವಿವಿಧ ಮುಖವಾಡಗಳ ಮರೆಯಲ್ಲಿ ಒಂದಾಗಿ ವಿಜೃಂಭಿಸುತ್ತಿರುವ ಈ ಸಂದರ್ಭ ಪ್ರಗತಿಪರ ಧೋರಣೆಯ ಎಲ್ಲರಿಗೂ ಒಂದು ಸವಾಲು. ಈ ಸವಾಲಿಗೆ ನಮ್ಮ ಉತ್ತರ ಎಲ್ಲ ವಾಮ ಪಂಥೀಯರ ಸಂಘಟನೆ, ಮತ್ತೂ ಸ್ಪಷ್ಟಪಡಿಸುವುದಾದರೆ ಸಮಕಾಲೀನ ಚರಿತ್ರೆಯ ಬೆಳವಣಿಗೆಯ ಸ್ವರೂಪದಿಂದಾಗಿ ಎಲ್ಲ ವಾಮಪಂಥೀಯರ ಸಾಂಸ್ಕೃತಿಕ ಒಗ್ಗಟ್ಟು ಈಗ ಅತ್ಯಂತ ಮುಖ್ಯವಾದದ್ದು. ಈ ದಿಕ್ಕಿನಲ್ಲಿ ಬಂಡಾಯ ಸಾಹಿತ್ಯ ಚಳುವಳಿಯು ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅತ್ಯಂತ ವ್ಯಾಪಕವಾಗಿ ಹಬ್ಬುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಶೋಷಿತ ಜನತೆಯ ಪರವಾದ ನಿಲುವುಗಳನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಗೊಳಿಸುವುದು ನಮ್ಮ ಮುಖ್ಯ ಗುರಿಗಳಲ್ಲೊಂದಾಗಬೇಕು. ನಮ್ಮ ಹೋರಾಟ ಪ್ರಧಾನವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದು, ದೇಶದ ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭಗಳು ಪರಸ್ಪರ ಸಂಬಂಧವುಳ್ಳವು ಎಂಬ ನಿಲುವಿನಿಂದ ಹೊರಟದ್ದು. ಸಾಹಿತಿಗೆ ಸಾಮಾಜಿಕ, ರಾಜಕೀಯ ಪ್ರಜ್ಞೆ ಇರಬೇಕೆಂಬ ಆಶಯ ಇಲ್ಲಿ ಮುಖ್ಯವಾದದ್ದು. ಅಸ್ಪಶ್ಯತೆ, ಜಾತಿಪದ್ಧತಿ ಮತ್ತು ಲಿಂಗಭೇದ ನೀತಿಯ ವಿರುದ್ಧ ಹೋರಾಟವನ್ನು ಕಟ್ಟುವುದು ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದು. ಎಲ್ಲ ಜನಪರ ನಿಲುವುಗಳಿಗೆ ನಮ್ಮ ಬೆಂಬಲ….” (1981– ಬರಗೂರು ರಾಮಚಂದ್ರಪ್ಪ)

ಆಗಲೇ ಬಹುಮುಖೀ ಸಂಸ್ಕೃತಿಯ ಬಗ್ಗೆ ಆಸಕ್ತಿಯೊಂದು ಬರಹಗಾರರಲ್ಲಿ ಮೂಡಿತ್ತು.

ಜೂನ್ 1980ರಲ್ಲಿ ರಮಜಾನ್ ದರ್ಗಾ ಅವರು ‘ಬಂಡಾಯ ಸಾಹಿತಿ’ ಎನ್ನುವ 16 ಪುಟಗಳ ಕಿರು ಹೊತ್ತಿಗೆಯನ್ನು ತಂದಿದ್ದು ಅದರಲ್ಲಿ ಬಂಡಾಯ ಸಾಹಿತಿ ಯಾರು? ಬಂಡಾಯ ಸಾಹಿತಿ ಮತ್ತು ಸೌಂದರ್ಯ ಪ್ರಜ್ಞೆ, ಬಂಡಾಯ ಮತ್ತು ಸಂಸ್ಕೃತ ಭಾಷೆ, ಸಾಹಿತಿಗಳು ಮತ್ತು ರಾಜಕಾರಣ, ಕನ್ನಡ ಸಾಹಿತ್ಯ ಪರಿಷತ್ತು, ಬಂಡಾಯ ಸಾಹಿತ್ಯ ಸಂಘಟನಾ ಸಮಿತಿ, ಯಾರು ಬಂಡಾಯಗಾರರು?, ಬಂಡಾಯ ಸಾಹಿತ್ಯ ಕ್ಷಣಿಕವೇ? ಬಂಡಾಯ ಕಾವ್ಯದ ಒಂದು ಪರಿಚಯ… ಇತ್ಯಾದಿ ವಿಷಯಗಳ ಬಗ್ಗೆ ವಿಶ್ಲೇಷಣೆಯನ್ನು ಮಾಡಿದ್ದಾರೆ. ಕೊನೆಯಲ್ಲಿ ‘ಪ್ರಣಾಳಿಕೆ’ ಇದೆ. ಅದು ಹೀಗಿದೆ –

“ನಾವು ದುಡಿಯುವ ಜನ

ನಮ್ಮ ಅಧಿಕಾರ ಬಂದಾಗ

ಪೊಲೀಸರನ್ನು, ನ್ಯಾಯಾಧೀಶರನ್ನು ಮನುಷ್ಯರನ್ನಾಗಿ ಮಾಡುತ್ತೇವೆ.

ಬ್ಯಾಂಕುಗಳು ಬುಲ್‌ಡೋಜರ್ ಆಗುತ್ತವೆ

ತಗ್ಗು ದಿನ್ನೆಯ ನೆಲಸಮವಾಗುತ್ತದೆ. ಬಂದೂಕಿನ ಬಾಯಲ್ಲಿ ಗುಬ್ಬಿ ಗೂಡು ಕಟ್ಟುತ್ತವೆ…

ಕೆಂಪುದೀಪ’ದ ಕೆಳಗೆ ಉದ್ಯಾನವನಗಳೇಳುತ್ತವೆ.

ಒಂದೇ ಒಂದು ಸಲ ಅವಕಾಶ ಸಿಗಲಿ ಭೂಗೋಳದ ತುಂಬೆಲ್ಲ

ಶಾಂತಿಯ ಬೀಜ ಬಿತ್ತುತ್ತೇವೆ.”

ಮುಂದೆ

“ನಮ್ಮ ಮಕ್ಕಳು ಶಬ್ದಕೋಶ ತಿರುವಿ ವೀರಗಲ್ಲುಗಳ ಅರ್ಥ ಹುಡುಕುತ್ತಾರೆ.”

(ಕಾವ್ಯ ಬಂತು ಬೀದಿಗೆ)

ಇದನ್ನೆಲ್ಲ ಗಮನಿಸಿದರೆ ಮಾರ್ಕ್ಸ್‌ ವಾದಿ ಚಿಂತನೆಯ ಎಡಪಂಥೀಯ ವಿಚಾರಧಾರೆಗಳು ಬಂಡಾಯ ಸಾಹಿತ್ಯದಲ್ಲಿ ಎದ್ದು ಕಾಣುತ್ತವೆ. ನವ್ಯ ಸಾಹಿತ್ಯ, ಗೋಪಾಲಕೃಷ್ಣ ಅಡಿಗರು, ಕನ್ನಡ ಸಾಹಿತ್ಯ ಪರಿಷತ್ತು…. ಇವೆಲ್ಲ ಅಂದಿನ ಬಂಡಾಯ ಸಾಹಿತಿಗಳಿಗೆ ಆ ದಿನಗಳಲ್ಲಿ ‘ವಿರೋಧಿ’ಗಳಾಗಿದ್ದವರು.

‘ಬಂಡಾಯ ಸಾಹಿತಿ’ಯನ್ನು ತಮ್ಮ ಕಿರುಹೊತ್ತಿಗೆಯಲ್ಲಿ ರಮಜಾನ ದರ್ಗಾ ಅವರು ಈ ರೀತಿ ಹೇಳಿದ್ದರು – ”ಜಾತಿವಾದಿಗಳು, ಪುರೋಹಿತ ಶಾಹಿಗಳು, ಅಧಿಕಾರ ಶಾಹಿಗಳು ಈ ದೇಶದಲ್ಲಿ ಕ್ರೂರ ವಾತಾವರಣವನ್ನು ನಿರ್ಮಿಸಿದ್ದಾರೆ. ಅಲ್ಲಿ ಅವರ ಸಂಸ್ಕೃತಿ ಕೊಳೆತು ನಾರುತ್ತಿದ್ದರೂ ಅದು ಶ್ರೇಷ್ಠವೆಂದೇ ವಾದಿಸುತ್ತಾರೆ. ಇಂಥ ಪರಿಸರದಲ್ಲಿ ಜನ ಸಾಮಾನ್ಯರು ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡು ಅಪಮಾನಿತ ಬದುಕನ್ನು ಬದುಕುತ್ತಿದ್ದಾರೆ. ಇಂಥ ಬದುಕನ್ನು ಅನೇಕ ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಚಿತ್ರಿಸಿರಬಹುದು. ಆದರೆ ಆ ಸಾಹಿತಿಗಳು ಕೊನೆಯಲ್ಲಿ ಯಾವ ವರ್ಗದ ಹಿತವನ್ನು ಬಯಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಬಂಡಾಯ ಸಾಹಿತಿ ತನ್ನ ಕೃತಿಯಲ್ಲಿ ಮತ್ತು ಕಾರ್ಯದಲ್ಲಿ ಸದಾ ದುಡಿಯುವ ವರ್ಗದ ಪರವಾಗಿ ನಿಲ್ಲುತ್ತಾನೆ. ಈ ವ್ಯವಸ್ಥೆಯಲ್ಲಿ ಸಾಮಾಜಿಕ – ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಹಿಂದುಳಿದವರ ಹಕ್ಕಿಗಾಗಿ ಹೋರಾಡುತ್ತಾನೆ. ಮನುಷ್ಯನ ಒಳ್ಳೆಯ ಬದುಕಿಗೆ ಬೇಕಾಗುವ ಎಲ್ಲಾ ಸಂಸ್ಕೃತಿ ಮತ್ತು ಕಲೆ, ಭಾವನೆ ಮತ್ತು ವಸ್ತುಗಳ ಸಂರಕ್ಷಕನಾಗಿದ್ದಾನೆ. ಅಲ್ಲದೆ ಆತ ಮಾನವ ವಿರೋಧಿ ವಸ್ತುಗಳ ಮತ್ತು ಭಾವನೆಗಳ ವಿರುದ್ಧ ಸದಾ ಹೋರಾಡುತ್ತಾನೆ. ಈ ಬಂಡಾಯ ಸಾಹಿತಿಗೆ ಭಾಷೆ ಮುಖ್ಯವಲ್ಲ, ಭಾವನೆಗಳು ಮುಖ್ಯ. ಮಾನವನ ಅಭ್ಯುದಯಕ್ಕೆ ಬೇಕಾದ ಭಾವನೆಗಳು ಯಾವ ಭಾಷೆಯಲ್ಲಿದ್ದರೇನು? ಮಾನವತೆಗಾಗಿ ಬರೆಯುವ – ಹೋರಾಡುವ ಯಾವುದೇ ಪ್ರದೇಶದ ದೇಶದ ಕವಿ ಬಂಡಾಯ ಸಾಹಿತಿಗೆ ತೀರ ಹತ್ತಿರದವನಾಗುತ್ತಾನೆ. ಬದುಕಿನಲ್ಲಿರುವ ಕ್ರೌರ್ಯದ ವಿರುದ್ಧ ಹೋರಾಡುತ್ತ ಅದರ ಸೌಂದರ್ಯವನ್ನು ಕಾಪಾಡುವುದೇ ಬಂಡಾಯ ಸಾಹಿತಿಯ ಮುಖ್ಯ ಉದ್ದೇಶ.”

”ಬಂಡಾಯ ಸಾಹಿತಿ ಬದುಕಿನ ಬಗ್ಗೆ ಅತೃಪ್ತನಾಗಿದ್ದಾನೆ. ಅದೇ ಅವನ ಜೀವಂತಿಕೆಯ ಲಕ್ಷಣ. ಆದರೆ ಆತ ಅಷ್ಟಕ್ಕೇ ಸುಮ್ಮನಿರದೆ ಮಾನವನ ಬದುಕು ಹೀನವಾಗಿದ್ದುದರ ಹಿನ್ನೆಲೆಯನ್ನು ಹುಡುಕಿಕೊಂಡು ಹೋಗುತ್ತಾನೆ. ಆಗ ಎಲ್ಲ ಹೂರಣ ಹೊರಬೀಳುತ್ತದೆ.”

”ಬಂಡಾಯದವರು ಸಂಸ್ಕೃತ ಭಾಷೆಯನ್ನು ವಿರೋಧಿಸುತ್ತಾರೆ ಎಂಬುದು ಸರ್ವತಾ ತಪ್ಪು ಮತ್ತು ಬಂಡಾಯದ ಘನತೆಗೆ ಮಸಿ ಬಳಿಯುವ ಪ್ರಯತ್ನ. ಕನ್ನಡವು ಸಂಸ್ಕೃತದ ಶಬ್ದ ಭಂಡಾರವನ್ನೇ ತನ್ನ ಗರ್ಭದಲ್ಲಿ ಹೊತ್ತಿರಬಹುದು. ಆದರೆ ಅದು ಸಂಸ್ಕೃತದ ಕ್ರಿಯಾ ಪದಗಳನ್ನು ಎಂದೆಂದಿಗೂ ತೆಗೆದುಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಸಂಸ್ಕೃತವು ನಾಮಪದಗಳೇ ಮುಂತಾದ ಶಬ್ದಗಳ ರೂಪದಲ್ಲಿ ಮತ್ತು ಗಾದೆ ಮಾತುಗಳಲ್ಲಿ ಮಾತ್ರ ಜೀವಂತವಾಗಿದೆ ಹೊರತಾಗಿ ಪ್ರತ್ಯೇಕವಾದ ಅಸ್ತಿತ್ವವನ್ನು ಇಟ್ಟುಕೊಂಡು ಜೀವಂತವಾಗಿಲ್ಲ. ಆದ್ದರಿಂದ ಐತಿಹಾಸಿಕ ದಾಖಲೆಗಳನ್ನು ಹೊತ್ತುನಿಂತ ಸಂಸ್ಕೃತದಂಥ ಮೃತ ಭಾಷೆಗಳನ್ನು ಸಂಶೋಧನೆಯ

ಸಂಬಂಧವಾಗಿ ಅಭ್ಯಸಿಸಬೇಕೇ ವಿನಾ; ಜೀವಂತ ಭಾಷೆಗಳ ಮಗ್ಗಲು ತಂದಿಡಲಿಕ್ಕಲ್ಲ.”

‘ಬಂಡಾಯ ಸಾಹಿತಿ’ ಹೊತ್ತಿಗೆಯ ‘ಬಂಡಾಯ ಕಾವ್ಯದ ಒಂದು ಪರಿಚಯ’ದಲ್ಲಿ ರಮಜಾನ ದರ್ಗಾ ಇನ್ನೊಂದು ಅಭಿಪ್ರಾಯ ಪಡುತ್ತಾರೆ ಹೀಗೆ –

“ಇಂದು ದೇಶದ ವಿವಿಧ ಕಡೆಗಳಲ್ಲಿರುವ ಪುರೋಗಾಮಿ ಕವಿಗಳಂತೆ ಕರ್ನಾಟಕದಲ್ಲಿ ಬಂಡಾಯ ಕವಿಗಳು ಕೂಡಾ ಒಂದೇ ಉದ್ದೇಶದಿಂದ ಒಂದುಗೂಡಿದ್ದಾರೆ. ಹೊಸ ಮಾನವೀಯ ವ್ಯವಸ್ಥೆಯನ್ನು ರಚಿಸುವುದೇ ಅವರ ಉದ್ದೇಶವಾಗಿದೆ. ಬಂಡಾಯ ಕವಿಗಳು ಜನರ ನೋವು ಮತ್ತು ಕನಸುಗಳಿಗೆ ಮೂರ್ತ ಸ್ವರೂಪ ಕೊಡುತ್ತಿದ್ದಾರೆ. ಈ ದೇಶದ ಎಡ ಪಕ್ಷಗಳು ಅವರ ಕನಸನ್ನು ನನಸಾಗಿಸಲು ಹೋರಾಡುತ್ತಿವೆ. ಮಾನವನ ಅನಿಸಿಕೆಗಳಿಗೆ ಚಿಗುರೊಡೆಸುತ್ತ, ಜಡತ್ವಕ್ಕೆ ಬೆಂಕಿ ಇಡುತ್ತ ಬಂಡಾಯ ಕವಿಗಳು ಮಾತನಾಡುವ ಸಾಧ್ಯತೆಗಳಿಲ್ಲದ ಮನುಷ್ಯರ ಪರವಾಗಿ ತಮ್ಮ ಕವನಗಳಲ್ಲಿ ಕೂಡ ಮಾತನಾಡುತ್ತ, ಮನುಷ್ಯ ಮನುಷ್ಯರ ನಡುವಿನ ಗೋಡೆಗಳನ್ನು ನಾಶಗೊಳಿಸುತ್ತ ಕಂದಕಗಳನ್ನು ತುಂಬುತ್ತ ಹೋಗುತ್ತಾರೆ.”

ಹೀಗೆ 1980 ರ ಸಮಯದಲ್ಲಿ ಬಂಡಾಯ ಸಾಹಿತ್ಯದ ಆರಂಭದ ದಿನಗಳಲ್ಲಿ ಅವರ ಉದ್ದೇಶ, ಗುರಿ ಏನಿತ್ತು ಎಂಬುದನ್ನು ಈ ಮೇಲಿನ ಮಾತುಗಳಿಂದ ನಾವು ಅರ್ಥೈಸಿಕೊಳ್ಳಬಹುದಾಗಿದೆ. ಯಾಕೆಂದರೆ ನಾಲ್ಕು ದಶಕಗಳಲ್ಲಿ ( 1980-2020) ಬಂಡಾಯ ಸಾಹಿತ್ಯ ಬೆಳೆದು ಬಂದ ಮಾರ್ಗವನ್ನು ಗಮನಿಸಿದಾಗ 1979-1980 ರ ದಿನಗಳನ್ನು ನೆನಪಿಸಿಕೊಳ್ಳಲೇಬೇಕಾಗಿದೆ. ಬಂಡಾಯ ಸಾಹಿತ್ಯದ ಉದ್ದಕ್ಕೂ ಕಾವ್ಯ ಪ್ರಕಾರವೇ ವಿಜೃಂಬಿಸಿತ್ತು.

ಬಂಡಾಯ ಸಾಹಿತ್ಯ ಎಂದ ಕೂಡಲೇ ಅನೇಕರು ಕೇಳುವ ಒಂದು ಸಾಮಾನ್ಯ ಪ್ರಶ್ನೆ ಏನೆಂದರೆ ‘ಬಂಡಾಯದಲ್ಲಿ ಬಂದಿರುವ ಹತ್ತು ಶ್ರೇಷ್ಠ ಕೃತಿಗಳ ಹೆಸರುಗಳನ್ನು ಹೇಳುವಿರಾ?’ ಎನ್ನುವುದು. ಕೆಲವು ಬಂಡಾಯ ಸಾಹಿತಿಗಳು ತಕ್ಷಣ ಹತ್ತಲ್ಲ, ಇಪ್ಪತ್ತು ಕೃತಿಗಳ ಹೆಸರನ್ನೂ ಹೇಳಬಹುದು. ಆದರೆ ಬಂಡಾಯ ಸಾಹಿತ್ಯ ಚಳುವಳಿಯ ಮುಖ್ಯ ಗುರಿ ಸಾಹಿತ್ಯ ಸೃಷ್ಟಿಯೊಂದೇ ಅಲ್ಲ ಎನ್ನುವುದನ್ನು ಬರಗೂರು ರಾಮಚಂದ್ರಪ್ಪ ಅಂದೇ ಸ್ಪಷ್ಟಪಡಿಸಿದ್ದಾರೆ – “ಜನಪದ ಸಾಹಿತ್ಯದಲ್ಲಿ, – ವಚನ, ದಾಸ ಸಾಹಿತ್ಯದಲ್ಲಿ ಯಾವುದಾದರೂ ಒಂದು ಕೃತಿ ಶ್ರೇಷ್ಟ, ಒಬ್ಬ ಕವಿ ಶ್ರೇಷ್ಠ ಎಂದು ಯಾರಾದರೂ ಗುರುತಿಸಲು ಹೋಗುತ್ತಾರೋ? ಒಂದು ಶ್ರೇಷ್ಠ ಕಾವ್ಯ, ಒಬ್ಬ ಶ್ರೇಷ್ಠ ಕವಿ ಇದು ಚಳುವಳಿ ಮಾಡುವ ಕೆಲಸವಲ್ಲ. ಆ ಸಮೂಹವೇ ಶ್ರೇಷ್ಟ ಆಗಬೇಕು” ಎನ್ನುವ ಮಾತೇ ಉತ್ತರ.

‘ಬಂಡಾಯ ಸಾಹಿತ್ಯದಿಂದ ಶ್ರೇಷ್ಠ ಕೃತಿ ಬಂದಿಲ್ಲ ಎಂಬ ತಕರಾರು ಮಾಡುವವರಿಗೆ ‘ಬಂಡಾಯ ಎಂಬುದು ಸಾಹಿತ್ಯ ಕೃತಿ ಸೃಷ್ಟಿಸುವ ಒಂದು ಫ್ಯಾಕ್ಟರಿ ಎಂಬ ಭ್ರಮೆ ಇದ್ದಂತಿದೆ. ಬಂಡಾಯ ಒಂದು ಮನೋಧರ್ಮವನ್ನು ವ್ಯಾಪಕಗೊಳಿಸುವ ಚಳುವಳಿ’ ಎಂದೂ ಹೇಳಿದ್ದಾರೆ. ಹಾಗಿದ್ದೂ ಬಂಡಾಯದ ಆರಂಭದ ವರ್ಷಗಳಲ್ಲಿ ಕೆಲವು ಗೊಂದಲಗಳೂ ಕಾಣಿಸಿದ್ದವು.

ಆರ್.ಜಿ.ಹಳ್ಳಿ ನಾಗರಾಜ್‌ ಸಂಪಾದಕತ್ವದ ಅನ್ವೇಷಣೆ ಸಂಚಿಕೆ 11-12 (ಸೆ-ಅ 1985) ರಲ್ಲಿ ‘ಬಂಡಾಯ ಸಾಹಿತ್ಯ ಸಂಘಟನೆ; ಎರಡು ಪತ್ರಗಳು’ ಎಂದು ಆರ್.ವಿ.ಭಂಡಾರಿ ಮತ್ತು ಭಗವಾನ್ ಮೈಸೂರು ಅವರ ಬರಹಗಳು ಪ್ರಕಟವಾಗಿತ್ತು.

ಅದರಲ್ಲಿ ಆರ್.ವಿ.ಭಂಡಾರಿಯವರು ಒಂದು ‘ಬೈಲಾ’ ಬೇಕು ಎನ್ನುತ್ತಾ “ಧಾರವಾಡದಲ್ಲಿ ನಡೆದ ಸಮ್ಮೇಳನದಲ್ಲಿ ಸಂಘಟನೆಗೆ ಒಂದು ಶಿಸ್ತು, ತಾತ್ವಿಕ ಖಚಿತತೆ ಹಾಗೂ ತಾಂತ್ರಿಕ ನಿಖರತೆ ಇರಬೇಕಾದರೆ ಅದಕ್ಕೆ ಒಂದು ಬೈಲಾ ಬೇಕು ಎಂದು ದಕ್ಷಿಣಕನ್ನಡ ಮತ್ತು ಉತ್ತರಕನ್ನಡದಿಂದ ಹೋದ ಕೆಲವು ಮಿತ್ರರು ಪ್ರಸ್ತಾಪ ಮಾಡಿದೆವು. ಆದರೆ ಅದು ಯಾವುದೋ ತಪ್ಪು ತಿಳುವಳಿಕೆಯಿಂದ ಬಿದ್ದು ಹೋಯಿತು. ಆದರೂ ಒಂದು ಬೈಲಾ ಬೇಕು ಎಂದು ಸಂಘಟನೆಯ ಮುಂಚೂಣಿಯಲ್ಲಿರುವವರ ಅಭಿಪ್ರಾಯವೂ ಇತ್ತು. ನಾವು ಉತ್ತರಕನ್ನಡ, ದಕ್ಷಿಣಕನ್ನಡದ ಕೆಲ ಗೆಳೆಯರು ಒಂದು ಬೈಲಾ ಕರಡನ್ನು ಸಿದ್ಧಪಡಿಸಿದೆವು. ಈ ಕರಡನ್ನು ಸಿದ್ಧಪಡಿಸುವಲ್ಲಿ ಹೆಚ್ಚು ಶ್ರಮ ಮತ್ತು ಆಸಕ್ತಿ ತೋರಿದವರು ವಾಸುದೇವ ಉಚ್ಚಿಲ್. ಸದಸ್ಯರನ್ನು ನೊಂದಾಯಿಸುವಿಕೆ ಮತ್ತು ಇತರ ಸಂಗತಿಗಳೂ ಇದರಲ್ಲಿದ್ದವು. ಅದೇನೇ ಇದ್ದರೂ ಸಂಘಟನೆ ಬಲವಾಗಬೇಕು. ಅದು ಚಳುವಳಿಯಾಗಬೇಕು ಎಂತಿದ್ದರೆ ಅದಕ್ಕೊಂದು ಶಿಸ್ತು, ಸದಸ್ಯರಲ್ಲಿ ಬದ್ಧತೆ, ಚಳುವಳಿಯನ್ನು ಬೆಳೆಸುವಲ್ಲಿ ಉತ್ಸಾಹ, ಯುವಶಕ್ತಿಯ ಕುರಿತು ಪ್ರೀತಿ ಹಾಗೂ ಭರವಸೆ ಬೇಕು – ಅಲ್ಲವೇ? ಆದರೆ ತನ್ಮಧ್ಯೆ ವಿಶ್ವಕನ್ನಡ ಸಮ್ಮೇಳನದಲ್ಲಿ ಸಂಘಟನೆಯ ಶಿಸ್ತನ್ನು ಮೀರಿ ಮುಂಚೂಣಿಯಲ್ಲಿರುವವರೇ ಭಾಗವಹಿಸಿ ಸಂಘಟನೆಯನ್ನು ಎಡಬಿಡಂಗಿ ಮಾಡಿದರು. ಇದರ ಪ್ರತಿಭಟನಾರ್ತ ಉತ್ತರಕನ್ನಡದ ಸಂಘಟಕರಲ್ಲೊಬ್ಬರಾದ ಗೆಳೆಯ ಜಿ.ಎಸ್‌.ಅವಧಾನಿ ಸಂಘಟನೆಗೆ ರಾಜೀನಾಮೆ ಕೊಟ್ಟು ಪತ್ರಿಕಾ ಹೇಳಿಕೆಯನ್ನೂ ಕೊಟ್ಟರು. 29 ಡಿಸೆಂಬರ್ ‘ಅಭಿಮಾನಿ’ ವಾರಪತ್ರಿಕೆಯಲ್ಲಿ ಬಂಡಾಯದ ಮುಂಚೂಣಿಯ ಪ್ರಮುಖರ ಬಗ್ಗೆ ಚಂದ್ರಶೇಖರ ತೌಡೂರು ಒಂದು ಲೇಖನ ಬರೆದಿದ್ದರು. ನಮ್ಮ ಮುಂಚೂಣಿಗಳ ದೌರ್ಬಲ್ಯ ಸಮಯ ಸಾಧಕತನವನ್ನು (ಅದು ಹೌದೇ ಆದರೆ) ಚೆನ್ನಾಗಿ ಅನಾವರಣಗೊಳಿಸಿದ್ದಾರೆ. ನೀವು ಹೇಳಿದ ಹಾಗೆ ಇವೆಲ್ಲ ಬೆಳವಣಿಗೆ

ಬಂಡಾಯವನ್ನು ನಂಬಿರುವ ಸಾವಿರಾರು ಯುವಕರಿಗೆ ನಿರಾಶೆಯಾಗದೇ ಇರಲು ಹೇಗೆ ಸಾಧ್ಯ?” ಎಂದು ಪ್ರಶ್ನೆ ಮುಂದಿಟ್ಟಿದ್ದರು.

ಎರಡನೇ ಪತ್ರ – ಭಗವಾನ್ ಮೈಸೂರು ಇವರದ್ದು. “ಕಳೆದ ಆರು ವರ್ಷಗಳ ಅವಧಿಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ನಡೆಸಿಕೊಂಡು ಬಂದಿರುವ ಚಟುವಟಿಕೆಗಳನ್ನು ಗಮನಿಸಿದರೆ ಅನ್ವೇಷಣೆ ಸಂಪಾದಕರು ಎತ್ತಿದ ಕೆಲವು ಮೂಲಭೂತ ಪ್ರಶ್ನೆಗಳು ಹೆಚ್ಚು ಅರ್ಥಪೂರ್ಣ ಚಳುವಳಿಯನ್ನಾಗಿ ಮಾಡಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಸಂಘಟನೆಗಳೂ ಉದಾತ್ತ ವಿಚಾರಗಳಿಂದಲೇ ಆರಂಭವಾಗುತ್ತವೆ. ಆದರೆ ಆ ವಿಚಾರಗಳು ಮುಕ್ಕಾಲು ಪಾಲು ಕಾರ್ಯಗತವಾಗುವುದಿಲ್ಲ. ಮೇಲು ನೋಟಕ್ಕೆ ಇದು ವಿಚಾರಗಳ ಸೋಲಿನಂತೆ ಕಂಡುಬಿಡುತ್ತದೆ. ಆದರೆ ಇದು ವಾಸ್ತವವಾಗಿ ವಿಚಾರಗಳ ಸೋಲಲ್ಲ. ಆದರ್ಶಗಳನ್ನು ಕಾರ್ಯರೂಪಕ್ಕೆ ಇಳಿಸುವವರ ವೈಯುಕ್ತಿಕ ಇಷ್ಟಾನಿಷ್ಟಗಳ ಪ್ರಭಾವದ ಫಲ, ಆಗ ಪ್ರಬಲವಾಗಿ ಬೆಳೆಯಬೇಕಾಗಿದ್ದ ಸಂಘಟನೆ ಕೆಲವೇ ವ್ಯಕ್ತಿಗಳ ಆಟಿಕೆಯಾಗಿ ಬಿಡುತ್ತದೆ. 1979ರಲ್ಲಿ ಮೂಡಿ ಬಂದ ಬಂಡಾಯ ಸಾಹಿತ್ಯ ಸಂಘಟನೆ: ಪ್ರಜಾ ಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ ಎಂದರೆ ನೋವಾಗುತ್ತದೆ. ಈವರೆಗೆ ಯಾವುದೇ ಪದಾಧಿಕಾರ ಸ್ಥಾನಕ್ಕೆ ಒಮ್ಮೆಯಾದರೂ ಆಯ್ಕೆಯಾಗಲೀ ಚುನಾವಣೆಯಾಗಲೀ ಜರುಗಿದಂತೆ ಕಾಣುವುದಿಲ್ಲ, ಅಥವಾ ಚುನಾವಣೆಯ ನಾಟಕವನ್ನಾದರೂ ಆಡದಷ್ಟು ಕಲಾಹೀನವಾಗಿ ಬಿಟ್ಟಿದ ಸಂಘಟನೆ, ಚುನಾವಣೆ ನಡೆಯುತ್ತಿದ್ದರೆ ಯಾರು ಕ್ರಿಯಾಶೀಲ ಸಂಘಟನಕಾರರು ಎಂಬುದು ಅರಿವಾಗುತ್ತದೆ…. ಸಂಪದಾಯಿಕ ಸಮ್ಮೇಳನಗಳಿಂದ ಸಂಘಟನೆ ಸತ್ವಹೀನವಾಗುತ್ತದೆ…” ಎಂದು ಎಚ್ಚರಿಸಿದ್ದರು.

ಭಗವಾನ್‌ ರ ಈ ಪ್ರತಿಕ್ರಿಯೆಯನ್ನು ಗಮನಿಸಿದರೆ ಹೋರಾಟದ ಹಿನ್ನೆಲೆಯಲ್ಲಿ ಸಾಹಿತ್ಯ ಸೃಷ್ಟಿಸುವವರೂ ಆರಂಭದಿಂದಲೇ ಸಂಘಟನೆಯನ್ನು ವಿಮರ್ಶಿಸುತ್ತಾ ಬಂದದ್ದು ನಿಜ. (ಈ ಬಗ್ಗೆ ಅನ್ವೇಷಣೆ ಸಂಪಾದಕರಲ್ಲಿ ಇತ್ತೀಚೆಗೆ ನಾನು ಮಾತನಾಡಿದಾಗ “ರಸೀದಿ ನೀಡಿ ಸದಸ್ಯತನ ನೀಡುವುದು ಸಂಘಟನೆಯ ಉದ್ದೇಶವೇ ಅಲ್ಲ, ಬಂಡಾಯ ಮನೋಭಾವದ ಸಾಹಿತ್ಯವನ್ನು ಬೆಳೆಸುವುದು. ಅಂತಹ ಬಂಡಾಯ ಸಾಹಿತಿಗಳೆಲ್ಲರೂ ನಮ್ಮ ಸಂಘಟನೆಯ ಸದಸ್ಯರೇ ಆಗಿದ್ದಾರೆ” ಎಂಬ ಮಾತನ್ನು ಹೇಳಿದ್ದರು).

‘ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎನ್ನುವುದು ಬಂಡಾಯ ಸಾಹಿತ್ಯ ಮತ್ತು ಚಳುವಳಿಯ ತಾತ್ವಿಕ ನಿಲವು ಆಗಿತ್ತು. ಬಂಡಾಯ ಸಾಹಿತ್ಯ ಸಂಘಟನೆಗೆ ಹತ್ತು ವರ್ಷ ತುಂಬಿದಾಗ 1990ರಲ್ಲಿ ‘ಬಂಡಾಯ ಹತ್ತು ವರ್ಷ’ ಎನ್ನುವ ಸಂಕಲನವೊಂದನ್ನು ಅನ್ವೇಷಣೆ ಸಂಪಾದಕ ಆ‌.ಜಿ. ಹಳ್ಳಿ ನಾಗರಾಜ್‌ ಪ್ರಕಟಿಸಿದ್ದಾರೆ. ಸಂಘಟನೆಯ ಒಳಗಿದ್ದು ಸಕ್ರಿಯರಾದವರನ್ನು ಮತ್ತು ಸಂಘಟನೆಯ ಹೊರಗಿದ್ದು ಇಂಥ ಚಳುವಳಿಯನ್ನು ಗಮನಿಸಿದವರನ್ನು ಸಂಪರ್ಕಿಸಿ ಪಡೆದ ಉತ್ತರಗಳನ್ನು ಅದರಲ್ಲಿ ದಾಖಲಿಸಿದ್ದರು. “ಬಂಡಾಯ ಎಂಬುದು ಒಂದು ಮನೋಧರ್ಮ ಎಂದು, ಈಗಾಗಲೇ ಹಲವು ಸಾರಿ ಸ್ಪಷ್ಟಪಡಿಸಿರುವುದರಿಂದ ‘ಬಂಡಾಯ’ ಅಂದರೆ ಯಾರೂ ಮೂಗು ಮುರಿಯಬೇಕಿಲ್ಲ. ಬಂಡಾಯವನ್ನು ತೆರೆದ ಕಣ್ಣುಗಳಿಂದ ನೋಡುವ ಮನಸ್ಸುಗಳು ಬೇಕು. ಮುಖ್ಯವಾಗಿ ಇಲ್ಲಿನ ಸಾಹಿತ್ಯವನ್ನು ಅಭ್ಯಾಸಿಸುವ ಹೃದಯಗಳು ಬೇಕು. ಬಂಡಾಯದವರು ಕೂಡಾ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಓದಿ ಚರ್ಚಿಸಬೇಕು. ಸಾಹಿತ್ಯ ಚರಿತ್ರೆಯ ಸ್ಪಷ್ಟ ಅರಿವು ಇವರಿಗೆ ಇರಲೇಬೇಕು. ಇಲ್ಲವಾದರೆ ಪೂರ್ವಾಗ್ರಹ ಪೀಡಿತ ವಿಚಾರಗಳೇ ಎಲ್ಲೆಲ್ಲೂ ಮೆರೆಯುವ ಅಪಾಯವಿದೆ….” ಎಂಬ ಎಚ್ಚರಿಕೆಯನ್ನೂ ಇರಿಸಿರುವುದು ಈ ‘ಬಂಡಾಯ ಹತ್ತು ವರ್ಷ’ ಸಂಕಲನದ ಮಹತ್ವವನ್ನು ಹೆಚ್ಚಿಸಿದೆ. ಬಂಡಾಯ ಸಾಹಿತ್ಯ ಚಳುವಳಿಯ ಇತಿಹಾಸದಲ್ಲಿ ಅನ್ವೇಷಣೆಯ ಈ ಕೊಡುಗೆ ದಾಖಲಾರ್ಹವೆನಿಸಿದೆ.

ಬರಗೂರರು ತಮ್ಮ ‘ಬಂಡಾಯ ಸಾಹಿತ್ಯ ಚಳುವಳಿಯ ತಾತ್ವಿಕ ನೆಲೆಗಳು ಲೇಖನದಲ್ಲಿ ಹೇಳಿದಂತೆ ”ಬಂಡಾಯ ಸಾಹಿತ್ಯದಲ್ಲಿ ಬಹುಪಾಲು ಅನುಭವ ದ್ರವ್ಯ – ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದೆ. ಇದಿಷ್ಟೆ ಮುಖ್ಯವಲ್ಲ. ಈ ಅನುಭವ ದ್ರವ್ಯವನ್ನು ಕಲೆಗೆ ಒಗ್ಗಿಸುವ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಹಿಕೆಯ ಕ್ರಮ ಮತ್ತು ಸ್ಫೋಟದ ನೆಲೆಗಳು ‘ಊಟದ ಮುಖಾಂತರ ‘ವೇಳೆ’ಯನ್ನು ಗುರುತಿಸುವ ಸಂಸ್ಕೃತಿಗೆ ಸಂಬಂಧಿಸಿದೆ….. ಗ್ರಾಮೀಣ ಬದುಕಿನ ವಸ್ತು ಹೊಸ ಒಳನೋಟ ಮತ್ತು ತಾತ್ವಿಕ ನೆಲೆಗಳನ್ನು ಪಡೆದುಕೊಂಡದ್ದು ಬಂಡಾಯ, ಸಾಹಿತ್ಯ ಚಳುವಳಿಯ ಒಂದು ಪ್ರಮುಖ ಕೊಡುಗೆ ಎಂಬ ಮಾತು ಗ್ರಾಮೀಣ ಬದುಕಿಗೆ ಮಹತ್ವ ನೀಡಿದ್ದು ಹೌದು”.

ಆರ್.ಜಿ.ಹಳ್ಳಿಯವರ ಸಂಪಾದಕತ್ವದ ‘ಬಂಡಾಯ ಹತ್ತು ವರ್ಷ’ ಸಂಕಲನಕ್ಕೆ ಬೆನ್ನುಡಿ ಬರೆದವರು ಡಾ. ಬಸವರಾಜ ಸಬರದ. ಆದರೆ ಇದೇ ಸಬರದರವರು ಪ್ರಜಾವಾಣಿಯ ‘ಸಂವಾದ’ದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಘಟನೆಯ ಲೋಪದೋಷಗಳನ್ನು ಬಹಳ ಖಾರವಾಗಿ ಹೇಳಿಕೊಂಡಿದ್ದೂ ಇದೆ – ಬಂಡಾಯ ಸಾಹಿತ್ಯ ಎಡವಿದ್ದು ಎಲ್ಲಿ? ಎನ್ನುವ ಅವರ ಲೇಖನದಲ್ಲಿ ಬಂಡಾಯದ ಮುಂಚೂಣಿಯಲ್ಲಿದ್ದ ಕೆಲವು ನಾಯಕರನ್ನೂ ತರಾಟೆಗೆ ಎಳೆದಿದ್ದರು.

“ಬಂಡಾಯ ಚಳುವಳಿಯ ಮೂಲಕ ಹುಟ್ಟಿದ ಬಂಡಾಯ ಸಾಹಿತ್ಯ ಇಂದು ಬೇರೆ ಬೇರೆ ಪ್ರಕಾರಗಳಲ್ಲಿ ವೈವಿಧ್ಯಮಯವಾಗಿ ಬೆಳೆದು ನಿಂತಿದೆ. ಆದರೆ ಅದರಲ್ಲಿ ಕಾಳೆಷ್ಟು-ಜೊಳ್ಳೆಷ್ಟು ಎಂದು ಪರಿಶೀಲಿಸಿದರೆ ಬಹಳ ನಿರಾಶೆಯಾಗುತ್ತದೆ. ಈ ಎರಡು ದಶಕ ಕಳೆದು ಹೋದರೂ ಇಕ್ರಲಾ ವದೀರ್ಲಾ…. ಕಾವ್ಯ ಮಾದರಿಯ ಪರಂಪರೆಗಳು ಬೆಳೆದವೇ ಹೊರತು ಮಹತ್ವದ್ದೆಂದು ಹೇಳಿಕೊಳ್ಳುವ ಕಾವ್ಯ ಬಂದದ್ದು ವಿರಳ, ಬಂಡಾಯ ಸಾಹಿತ್ಯದಲ್ಲಿ ಬೋರು ಹೊಡೆಸುವ ಒಣ ಭಾಷಣಗಳೇ ತುಂಬಿವೆಯೆಂದು ಓದುಗರು ಆಡಿಕೊಳ್ಳುತ್ತಿರುವುದು ನಮಗೆ ಕೇಳುತ್ತಿಲ್ಲವೇನು? ನವೋದಯ – ನವ್ಯರನ್ನು ಟೀಕಿಸಿ ಮುಂದೆ ಬಂದ ನಾವು ಏನು ಸಾಧಿಸಿದ್ದೇವೆ? ಅದೇ ಗೌಡ – ಕುಲಕರ್ಣಿಯವರನ್ನು ನಮ್ಮ ಕತೆಗಳಲ್ಲಿ ಬಯ್ಯುವ ಪ್ರಸಂಗ. ಈ ಕೆಲಸವನ್ನು ಇನ್ನೂ ಎಷ್ಟು ದಿವಸ ಮಾಡಲು ಸಾಧ್ಯ? ನಮ್ಮ ಕಾವ್ಯ ಖಡ್ಗವಾಯಿತೇ ಹೊರತು ಜನರ ನೋವಿಗೆ ಮಿಡಿಯುವ ಪಾಣಮಿತ್ರವಾಗಲಿಲ್ಲವೇಕೆ? ನಾವು ರಚಿಸಿರುವ ಕೆಲವು ಹಾಡುಗಳು ಜಾತಾಗಳಲ್ಲಿ ಹಾಡಲು ಉಪಯೋಗವಾದವೇ ಹೊರತು ಕುವೆಂಪು ಬೇಂದ್ರೆಯವರ ಕವಿತೆಗಳಂತೆ ಜನಮನದಲ್ಲೇಕೆ ಉಳಿಯಲಿಲ್ಲ…?”

ಇದು ಡಾ. ಸಬರದ ಅವರ ಪ್ರತಿಕ್ರಿಯೆ, ದಶಕದ ನಂತರ ಇಂತಹ ಅಸಹನೆಗಳು ಅಲ್ಲಲ್ಲಿ ಕಾಣಿಸತೊಡಗಿದವು.

ಈ ನಡುವೆ ‘ದಲಿತ – ಬಂಡಾಯ ಸಾಹಿತ್ಯ’ ಚರ್ಚೆ ನಡೆಯುತ್ತಿದ್ದಂತೆ ”ಶೂದ್ರ’ ಪತ್ರಿಕೆಯಲ್ಲಿ ಅರವಿಂದ ಮಾಲಗತ್ತಿ ಅಂತವರು ಬಂಡಾಯದಿಂದಾಗಿ ದಲಿತ ಸಾಹಿತ್ಯಕ್ಕೆ ನಷ್ಟವೇ ಆಗುತ್ತಿದೆ ಎಂಬರ್ಥದಲ್ಲಿ ಲೇಖನ ಬರೆದು ಚರ್ಚೆಯೂ ನಡೆದದ್ದಿದೆ. ಅದಕ್ಕೆ ಬರಗೂರರು ನಂತರ ತಮ್ಮ ಪ್ರತಿಕ್ರಿಯೆಯ ಮೂಲಕ ಸಮರ್ಪಕ ಉತ್ತರವನ್ನೂ ನೀಡಿದ್ದಿದೆ. ದಲಿತ ಮತ್ತು ಬಂಡಾಯದ ನಡುವೆ ಬಿರುಕುಗಳನ್ನೂ ಕೆಲವರು ಹುಡುಕಿದರು.

ಮುಂಬಯಿಯ ಗೋರೆಗಾಂವ್‌ ವಿಚಾರ ಭಾರತಿ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಬಂದಿದ್ದ (2003) ಡಾ. ಸಿದ್ಧಲಿಂಗಯ್ಯ ಅವರನ್ನು ನಾನು ಸಂದರ್ಶನ ಮಾಡಿದಾಗ ಈ ಪ್ರಶ್ನೆಯನ್ನು ಅವರ ಮುಂದಿಟ್ಟದ್ದೂ ಇದೆ. ಆಗ ಡಾ. ಸಿದ್ಧಲಿಂಗಯ್ಯನವರು “ದಲಿತ ಸಾಹಿತ್ಯಕ್ಕೆ ಬಂಡಾಯದಿಂದ ನಷ್ಟ ಆಗಿಲ್ಲ. ದಲಿತರು ಬಂಡಾಯ ಸಂಘಟನೆ ಇಲ್ಲದಿದ್ದರೆ ಸೀಮಿತ ಚೌಕಟ್ಟಿನಲ್ಲಿ ಬಂಧಿಯಾಗಿ ಬಿಡುತ್ತಿದ್ದರೇನೋ. ಕರ್ನಾಟಕದ ದಲಿತರು ಮಹಾರಾಷ್ಟ್ರದ ದಲಿತರಿಗಿಂತ ಭಿನ್ನ ಆಗಿರುವುದಕ್ಕೆ ಅವರು ಬಂಡಾಯದವರ ಜೊತೆ ಸೇರಿದ್ದರಿಂದಲೇ ಸಾಧ್ಯವಾಯಿತು. ದಲಿತರ ಬೌದ್ಧಿಕ ಬೆಳವಣಿಗೆಗೆ ಇಲ್ಲಿ ಲಾಭವಾಗಿದೆ. ಕರ್ನಾಟಕದಲ್ಲಿ ದಲಿತರ ಹೋರಾಟದಲ್ಲಿ ಬೇರೆ ಪಕ್ಷ, ಸಂಘಟನೆಗಳ ಜನರೂ ಸೇರುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ಕೇವಲ ದಲಿತರಷ್ಟೇ ಸೇರುತ್ತಾರೆ” ಎಂದು ಹೇಳಿದ್ದನ್ನು ಕಂಡಾಗ ಬಂಡಾಯ ಸಾಹಿತ್ಯ ಚಳುವಳಿಯ ಸಾಧನೆಗೆ ಅವರೂ ಪ್ರಶಂಸೆ ನೀಡಿದಂತಾಗಿದೆ.

ಬಸವರಾಜ ಕಟ್ಟಿಮನಿ ಅವರು ಹೇಳಿದಂತೆ – “ಬಂಡಾಯ ಚಳುವಳಿ ಆರಂಭವಾಗುವ ಮೊದಲೇ ಸಿದ್ದಲಿಂಗಯ್ಯ ಪರಿಣಾಮಕಾರಿಯಾದ ಬಂಡಾಯ ಕಾವ್ಯ ರಚಿಸಿದ್ದರು, ಈಗ ಅದನ್ನು ‘ದಲಿತ ಕಾವ್ಯ’ ಎನ್ನುವುದು ತಪ್ಪು. ಸಿದ್ಧಲಿಂಗಯ್ಯ ಬರೆದದ್ದು ಎಲ್ಲ ಬಡವರ ಪರವಾಗಿ, ಕುವೆಂಪು ಅವರ ತರುವಾಯ ಸಿದ್ದಲಿಂಗಯ್ಯ ಅವರೇ ನಂ.2, ಅವರಷ್ಟು ಭಕ್ತಿ ಪೂರ್ವಕವಾಗಿ ಬಂಡಾಯದವರಲ್ಲಿ ಬೇರೆ ಯಾರೂ ಬರೆದಿಲ್ಲ. ಕಾವ್ಯ ನಿಜವಾದ ಖಡ್ಗ ಆದದ್ದು ಸಿದ್ಧಲಿಂಗಯ್ಯನವರ ಕೈಯಲ್ಲಿ” ಎಂದದ್ದಿದೆ. ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ದನಿ ಎತ್ತುವ ಯಾವುದೇ ಪ್ರಗತಿಪರ ಚಿಂತನೆಯ ಹಿನ್ನೆಲೆಯ ಬರಹಗಾರರನ್ನು ಬಂಡಾಯ ಸಾಹಿತಿ ಎಂದು ಸಾಮಾನ್ಯವಾಗಿ ಗುರುತಿಸಲಾಗುತ್ತದೆ. ಜಾತಿವರ್ಗ ರಹಿತ ಮನುಷ್ಯನ ನಿರ್ಮಾಣ ಬಂಡಾಯ ಸಾಹಿತ್ಯದ ಆಶಯವೆಂದು ಅದರ ನಾಯಕರು ಹೇಳಿಕೊಂಡು ಬಂದವರು.

ವಿಮರ್ಶಕ ಡಾ. ಪುರುಷೋತ್ತಮ ಬಿಳಿಮಲೆಯವರು ತಮ್ಮ ‘ಬಂಡಾಯ – ದಲಿತ ಸಾಹಿತ್ಯ’ ಕೃತಿಯಲ್ಲಿ “ಬಂಡಾಯ ಬರಹಗಾರರೊಂದಿಗೇ ಇದ್ದರೂ ತಮ್ಮ ಅನಾದೃಶವಾದ ಜೀವನಾನುಭವದಿಂದಾಗಿ ದಲಿತರಿಗೆ ಅತ್ಯಂತ ಮಹತ್ವದ ಕೃತಿಗಳನ್ನು ಕೊಡಲು ಸಾಧ್ಯವಾಗಿದೆ’ ಎಂದು ಅಭಿಪ್ರಾಯ ಪಡುತ್ತಾರೆ. (ಪುಟ – 82)

ಕನ್ನಡ ಸಾಹಿತ್ಯದಲ್ಲಿ ಪ್ರತಿಭಟನೆ ಎನ್ನುವುದು ಕಾಲಕಾಲಕ್ಕೆ ಕಾಣಿಸಿಕೊಂಡಿದ್ದರೂ ಪ್ರತಿಭಟನೆಯೇ ಸಾಹಿತ್ಯವಾದುದು ಬಂಡಾಯ ಚಳುವಳಿಯ ಕಾಲದಲ್ಲಿ, ಅದಕ್ಕಿಂತ ಹಿಂದೆ ಪ್ರಗತಿಶೀಲ ಸಾಹಿತ್ಯವೂ ಕಮ್ಯುನಿಸಂ ಪ್ರಭಾವದಲ್ಲೇ ಬೆಳೆದದ್ದು, ಆದರೆ ಬಂಡಾಯ ಸಾಹಿತ್ಯವು ಮಾರ್ಕ್ಸ್ ವಾದದ ಜೊತೆಜೊತೆಗೆ ಲೋಹಿಯಾವಾದ, ಅಂಬೇಡ್ಕರ್ ವಾದ, ಗಾಂಧಿ ವಾದ… ಇತ್ಯಾದಿಗಳಿಂದಲೂ ಪ್ರಭಾವಿತಗೊಂಡಿರುವುದು ಅದರ ಹೆಗ್ಗಳಿಕೆ.

‘ಬಂಡಾಯ ಸಾಹಿತಿ ಮೂಲತಃ ಎಲ್ಲ ಬಗೆಯ ಅಸಮಾನತೆಯ ವಿರುದ್ಧ ತನ್ನ ಸಿಟ್ಟನ್ನು ದಾಖಲಿಸುವವನು.’

ದಲಿತ ಕಾಳಜಿ, ಸ್ತ್ರೀಪರ ಕಾಳಜಿ, ಮುಸ್ಲಿಂ ಸಂವೇದನೆ….. ಇವೆಲ್ಲ ಬಂಡಾಯ ಸಾಹಿತ್ಯ ಚಳುವಳಿಯ ನಂತರವೇ ಹೆಚ್ಚು ಚರ್ಚೆಗೆ ಬಂದಿದೆ. ಬೀದಿ ನಾಟಕ, ಹಾಡು, ಸಾಂಸ್ಕೃತಿಕ ಜಾಥಾಗಳ ಮೂಲಕ ಬಂಡಾಯ ಸಂಘಟನೆ ಜನಜಾಗೃತಿ ಮೂಡಿಸಿತು. ಕೆಳ ವರ್ಗದ ಬರಹಗಾರರಲ್ಲಿ ‘ಆತ್ಮಸ್ಥೈರ್ಯ’ ಮತ್ತು “ಸ್ವಾಭಿಮಾನ’ವನ್ನು ಮೂಡಿಸಿತು.

ದಲಿತ ಮತ್ತು ಬಂಡಾಯ ಸಾಹಿತ್ಯ ಹುಟ್ಟಿಕೊಂಡಿರುವುದೇ ಪ್ರತಿಭಟನೆಯ ನೆಲೆಯಿಂದ ಅದು ಸಾಮೂಹಿಕ ಅನುಭವದ ಕುರಿತು ಮಾತನಾಡುತ್ತದೆ. ಜೊತೆಗೆ ಸಾಹಿತಿಯಾದವನಿಗೆ ಸಾಮಾಜಿಕ, ರಾಜಕೀಯ ಪ್ರಜ್ಞೆ ಇರಬೇಕೆಂದು ಬಂಡಾಯ ಬಯಸುತ್ತದೆ… ಇವೆಲ್ಲ ಬಂಡಾಯ ಸಾಹಿತಿಗಳು ಆಗಾಗ ಹೇಳಿಕೊಂಡು ಬಂದಿರುವ ಮಾತುಗಳು.

‘ಖಡ್ಗವಾಗಲಿ ಕಾವ್ಯ” ಎಂಬ ಮಾತನ್ನು ಮುಂದಿಟ್ಟು ನಾನೊಮ್ಮೆ ಬರಗೂರು ರಾಮಚಂದ್ರಪ್ಪ ಅವರನ್ನು ಸಂದರ್ಶಿಸಿದಾಗ ಒಂದು ಮಾತು ಕೇಳಿದ್ದೆ – ‘ಕಾವ್ಯ ಖಡ್ಗವಾಗುವುದು ಯಾವ ರೀತಿ?’

ಆ ಬಗ್ಗೆ ಸ್ಪಷ್ಟಪಡಿಸುತ್ತಾ “ಖಡ್ಗವಾಗಲಿ ಕಾವ್ಯ ಅಂದರೆ ಇದರ ಆಶಯ ಕಾವ್ಯಕ್ಕೆ ಕೂಡಾ ಒಂದು ಕರ್ತವ್ಯ ಇದೆ ಎನ್ನುವುದೇ ಆಗಿದೆ. ಸಾಹಿತ್ಯ ಅರಾಜಕತೆ ಆಗಬಾರದು ಎಂದು ಸೂಚಿಸುವುದು ಇಲ್ಲಿನ ಆಶಯ”ಎಂದಿರುವರು. ಜೊತೆಗೆ- “ಬಂಡಾಯ ಎಂಬುದು ಸಾಹಿತ್ಯ ಕೃತಿ ಸೃಷ್ಟಿಸುವ ಒಂದು ಫ್ಯಾಕ್ಟರಿ ಎಂಬ ಭ್ರಮೆ ಇರಿಸಬೇಡಿ” ಎಂದದ್ದೂ ಇದೆ.

ಬಂಡಾಯ ಸಾಹಿತ್ಯ ಚಳುವಳಿಗೆ ಹತ್ತು ವರ್ಷ ಆದಾಗ, ಇಪ್ಪತ್ತು ವರ್ಷ ಆದಾಗ ಹಲವು ಬಂಡಾಯ ಲೇಖಕರೇ ಪತ್ರಿಕೆಗಳಲ್ಲಿ ತಮ್ಮತಮ್ಮ ಅಸಹನೆ ಬೇಸರವನ್ನು ವ್ಯಕ್ತಪಡಿಸಲು ಆರಂಭಿಸಿದ್ದೂ ಅಷ್ಟೇ ಮಹತ್ವ ಪಡೆದಿದೆ, ಆಗಲೇ ಬಂಡಾಯ ಸಾಹಿತ್ಯಕ್ಕೆ ಬೆಂಬಲವಾಗಿ ನಿಂತಿದ್ದ ಸಂಕ್ರಮಣ, ಶೂದ್ರ, ಅನ್ವೇಷಣೆಯಂತಹ ಸಾಹಿತ್ಯಕ ಪತ್ರಿಕೆಗಳು ಸಾಕಷ್ಟು ಸಂವಾದ – ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದವು. ನವ್ಯ ಕಾವ್ಯಕ್ಕೆ ‘ಸಾಕ್ಷಿ’ “ರುಜುವಾತು’ಗಳು ಹೇಗೆ ಬೆಂಬಲಿಸಿದವೋ ಹಾಗೆ ಬಂಡಾಯ ಕಾವ್ಯಕ್ಕೆ ‘ಸಂಕ್ರಮಣ’ ಪತ್ರಿಕೆ ಆಗಲೇ ಸಾಕಷ್ಟು ಕೊಡುಗೆ ನೀಡಿತ್ತು, ಸಾಹಿತ್ಯಕ್ಕೆ ಪ್ರಧಾನವಾಗಿ ಸಾಮಾಜಿಕ ಮುಖ ಇರಬೇಕು ಎಂದು ಬಂಡಾಯ ತೋರಿಸಿತು.

ಬಂಡಾಯ ಸಾಹಿತ್ಯದ ಒಂದು ಸ್ಪಷ್ಟ ಚಿತ್ರಣ ಸಿಗಬೇಕಾದರೆ ‘ಬಂಡಾಯದ ಬರಗೂರು’ ಎಂಬ ಬೃಹದ್ ಕೃತಿಯನ್ನು ಓದಬೇಕು. ಬಹುಶಃ ಅದನ್ನು ‘ಬಂಡಾಯದವರ ಭಗವದ್ಗೀತೆ’ ಅಂತ ನಾನು ತಿಳಿದುಕೊಂಡಿರುವೆ. ಇಡೀ ಬಂಡಾಯ ಸಾಹಿತ್ಯ ಚಳುವಳಿ ನಡೆದು ಬಂದ ಹಾದಿಯನ್ನು ಬರಗೂರರ ಸಾಹಿತ್ಯ ಸಾಧನೆಗಳ ಮೂಲಕ ಅಲ್ಲಿ ಓದುಗರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ಗುಡಿಹಳ್ಳಿ ನಾಗರಾಜ್‌ ಹೇಳಿದಂತೆ ಬಂಡಾಯ ವಿಚಾರಧಾರೆಗೆ ಆರ್ಪಿಸಿಕೊಂಡವರು ಬರಗೂರು ಸಾಹಿತ್ಯವನ್ನು ಪಠ್ಯದ ರೀತಿಯಲ್ಲಿ ಓದುತ್ತಾರೆ. ಬರಗೂರರು ‘ಬಂಡಾಯ ಸಾಹಿತ್ಯ’ ಎನ್ನುವ ಮಾಸಿಕವನ್ನೂ ಕೆಲಕಾಲ ಪ್ರಕಟಿಸಿದ್ದೂ ಇದೆ. ಆನಂತರ ಅದು ನಿಂತು ಹೋಯಿತು.

ಕ.ಸಾ.ಪ.ಬಗ್ಗೆ : ಒಂದು ರೀತಿಯಲ್ಲಿ ‘ಕನ್ನಡ ಸಾಹಿತ್ಯ ಪರಿಷತ್’ನ ವಿರುದ್ಧವಾಗಿ ನಿಂತಿದ್ದ ಬಂಡಾಯ ಸಾಹಿತ್ಯ ಸಂಘಟನೆಯ ಪರಿಷತ್‌ನ ನಿಲುವಿನ ಕುರಿತಂತೆ ‘ಬಂಡಾಯ ಸಾಹಿತಿ’ಯಲ್ಲಿ ದರ್ಗಾ ಬರೆದಿದ್ದಾರೆ – “ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಬಂಡಾಯ ಸಾಹಿತಿಗೆ ವೈರತ್ವವಿಲ್ಲ. ಆದರೆ ಅದೊಂದು ಸತ್ವಹೀನ ಸಂಸ್ಥೆಯಾಗಿರುವುದರಿಂದ ಅದರ ಬಗ್ಗೆ ಆಕರ್ಷಣೆಯೂ ಇಲ್ಲ. ಈ ಪರಿಷತ್ತು ಪರಾವಲಂಬಿ ಸಂಸ್ಥೆಯಾಗಿರುವುದರಿಂದ ಯಾವಾಗಲೂ ಆಳುವ ಪಕ್ಷದ ಕೃಪಾ ಕಟಾಕ್ಷವನ್ನು ಬಯಸುತ್ತದೆ. ಒಂದು ವೇಳೆ ಫ್ಯಾಸಿಸ್ಟ್ ಸರ್ಕಾರ ಬಂದರೆ ಆ ಸರ್ಕಾರದ ಮುಖ್ಯಮಂತ್ರಿಯೇ ಈ ಪರಿಷತ್ತಿನ ಸಮ್ಮೇಳನದ ಉದ್ಘಾಟಕರಾಗಿ ಬರುವುದರಲ್ಲಿ ಆಶ್ಚರ್ಯವಿಲ್ಲ. ಆದ್ದರಿಂದ ಇಂಥ ಪರಿಷತ್ತಿನೊಂದಿಗೆ ಸಂಬಂಧವಿಟ್ಟುಕೊಳ್ಳುವುದು ಸಾಧ್ಯವಿಲ್ಲ. ಈ ಪರಿಷತ್ತು ಬರೀ ಸಾಹಿತ್ಯದ ಬಗ್ಗೆ ಮಾತನಾಡುತ್ತದೆ. ಸಮ್ಮೇಳನಗಳಿಗಾಗಿ ಜನತೆಯ ಲಕ್ಷಾವಧಿ ರೂಪಾಯಿಗಳನ್ನು ರಾಜ್ಯ ಬೊಕ್ಕಸದ ಮುಖಾಂತರ ಪೋಲು ಮಾಡುತ್ತದೆ. ಆದರೆ ಇಲ್ಲಿಯ ಜನರ ದರಿದ್ರ ಬದುಕಿನ ಬಗ್ಗೆ ಚಕಾರ ಶಬ್ದವನ್ನೂ ಎತ್ತುವುದಿಲ್ಲ, ಆದ್ದರಿಂದ ಇಂಥ ಪರಿಷತ್ತು ಜನತೆಯ ಬದುಕಿನಿಂದ ದೂರ ಉಳಿಯುವುದರಲ್ಲಿ ಆಶ್ಚರ್ಯವೇನಿಲ್ಲ.”

ಹೀಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದಶಕಗಳ ಕಾಲ ದೂರವಿದ್ದ ಬಂಡಾಯ ಸಾಹಿತಿಗಳು ಅನಂತರ ಒಬ್ಬೊಬ್ಬರೇ ಪರಿಷತ್ತಿನ ವೇದಿಕೆಗಳಲ್ಲಿ ಕಾಣಿಸಿಕೊಂಡರು. 1990 ರ ಜೂನ್ 30 ಮತ್ತು ಜುಲೈ 1 ರಂದು ಕ.ಸಾ.ಪರಿಷತ್ತು ‘ಬಂಡಾಯ ಸಾಹಿತ್ಯ ಸಮಾವೇಶ’ವನ್ನೇ ನಡೆಸಿತು, ಅದನ್ನು ಉದ್ಘಾಟಿಸಿದವರು ಬರಗೂರು. ಅಲ್ಲಿ ಅವರು “ರಾಜನನ್ನು ದೈವತ್ವದಿಂದ ಬೇರ್ಪಡಿಸಿದ್ದು ಭಕ್ತಿ ಪಂಥದ ಸಾಧನೆಯಾದರೆ ಬಂಡಾಯ ಜನರನ್ನು ರಾಜ ಮತ್ತು ದೈವತ್ವಗಳೆರಡರಿಂದಲೂ ಬೇರ್ಪಡಿಸುತ್ತಿರುವ ಸಾಧನೆಯಾಗಿದೆ” ಎಂದರು. ಆಲ್ಲಿಂದ ಅನೇಕ ಬಂಡಾಯ ಸಾಹಿತಿಗಳಲ್ಲಿ ಒಬ್ಬೊಬ್ಬರೇ ಸರಕಾರದ ಸಂಸ್ಥೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಯುವ ಸಾಹಿತಿಗಳಲ್ಲಿ ಗೊಂದಲಗಳು ಮೂಡಿದ್ದನ್ನೂ ಮರೆಯುವಂತಿಲ್ಲ.

2002ರಲ್ಲಿ ಡಾ.ರಂಗರಾಜ್ ವನದುರ್ಗ ಅವರು ‘ಬಂಡಾಯ ಸಾಹಿತ್ಯ ಸಂವೇದನೆ’ ಎಂಬ ಲೇಖನಗಳ ಕೃತಿಯೊಂದನ್ನು ಸಂಪಾದಿಸಿರುವುದು ಇಲ್ಲಿ ಉಲ್ಲೇಖಿಸುತ್ತೇನೆ. ಸಂಪಾದಕರು ಹೇಳಿದಂತೆ “ಬಂಡಾಯ ಸಾಹಿತ್ಯ ಮತ್ತು ಸಂಘಟನೆಯಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡ ಗೆಳೆಯರೇ ಇಲ್ಲಿಯ ಲೇಖಕರು. ಬದುಕು ಮತ್ತು ಬರಹಗಳ ನಡುವೆ ಸದಾ ಬದ್ಧತೆ ಇರಬೇಕೆಂದು ಬಯಸಿದವರು. ಹೀಗಾಗಿ ಪ್ರಸ್ತುತ ‘ಬಂಡಾಯ ಸಾಹಿತ್ಯ ಸಂವೇದನೆ’ಗೆ ಸಹಜವಾಗಿಯೇ ಮೌಲಿಕತೆ ಬಂದಿದೆ ಎಂಬುದು ನನ್ನ ಭಾವನೆ” ಎಂದಿದ್ದಾರೆ. ಈ ಕೃತಿಯಲ್ಲಿ  (ನನ್ನ ಲೇಖನವೂ ಸೇರಿ)14 ಲೇಖಕರು ಬಂಡಾಯ ಸಾಹಿತ್ಯ ಮತ್ತು ಬಂಡಾಯ ಸಂಘಟನೆಯ ಕುರಿತಂತೆ ಬೆಳಕು ಚೆಲ್ಲಿದ್ದಾರೆ.

ಆರ್.ಜಿ.ಹಳ್ಳಿ ನಾಗರಾಜ್‌ 1990ರಲ್ಲಿ ಪ್ರಕಟಿಸಿದ ‘ಬಂಡಾಯ ಹತ್ತು ವರ್ಷ’ ಸಂಕಲನದ ನಂತರ 2002ರಲ್ಲಿ ಹೊರಬಂದ ಡಾ.ರಂಗರಾಜ ವನದುರ್ಗ ಅವರ ‘ಬಂಡಾಯ ಸಾಹಿತ್ಯ ಸಂವೇದನೆ’ ಸಂಕಲನ ಈ ಎರಡು ಕೃತಿಗಳು ಸಾಹಿತ್ಯದ ವಿದ್ಯಾರ್ಥಿಗಳಿಗೆ ಬಂಡಾಯ ಸಾಹಿತ್ಯವನ್ನು ಅರಿತುಕೊಳ್ಳಲು ಹೆಚ್ಚು ಸಹಕಾರಿಯಾಗಬಲ್ಲುದು. ಇದರ ಜೊತೆ ಡಾ. ಜಿ.ಆರ್.ತಿಪ್ಪೇಸ್ವಾಮಿ 2012ರಲ್ಲಿ ಸಂಪಾದಿಸಿದ ‘ಬಂಡಾಯದ ಬರಗೂರು ಸಂಕಲನ ಬಂಡಾಯ ಸಾಹಿತ್ಯ ಚಳುವಳಿ ನಡೆದು ಬಂದ ಹಾದಿಯನ್ನು ಸ್ಪಷ್ಟವಾಗಿ ತೆರೆದಿಡುತ್ತವೆ. ಬರಗೂರರ ಕೃತಿಗಳೆಲ್ಲವೂ ಸಾಹಿತ್ಯ ಸಂಶೋಧಕರಿಗೆ ಆಕರಗ್ರಂಥಗಳೇ.

2019ಕ್ಕೆ ಬಂಡಾಯ ಸಾಹಿತ್ಯ ಸಂಘಟನೆಗೆ ನಾಲ್ಕು ದಶಕಗಳು ಸಂದಿತು. 2018ರಲ್ಲಿ ‘ಬಂಡಾಯ  ನಲುವತ್ತು – ಚಿತ್ರದುರ್ಗದಲ್ಲಿ ಆಕ್ಟೋಬರ್ 13-14 ‘  ರಂದು ಮುಕ್ತ ಸಂವಾದ ಏರ್ಪಡಿಸಿ ನಡೆದ ಹೆಜ್ಜೆಗಳನ್ನು ವಿಮರ್ಶಿಸಿಕೊಂಡಿತು. ಆದರ ಆಹ್ವಾನ ಪತ್ರದ ಮಾಹಿತಿಯಲ್ಲಿ “ಬಂಡಾಯ ಸಾಹಿತ್ಯ ಸಂಘಟನೆಗೆ ಈಗ ನಲವತ್ತು ವರ್ಷ. ಈ ಅವಧಿಯಲ್ಲಿ ಅನೇಕ ಏಳುಬೀಳುಗಳ ನಡುವೆಯೂ ಬಂಡಾಯ ಮನೋಧರ್ಮವನ್ನು ವಿಸ್ತರಿಸುವಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯು ಪ್ರಮುಖ ಪಾತ್ರ ವಹಿಸಿದೆ. ಸಾಮಾಜಿಕ ಜವಾಬ್ದಾರಿಯು ಸಾಹಿತಿಗಳ ಸೃಷ್ಟಿ ಶೀಲತೆಯ ಅವಿಭಾಜ್ಯ ಅಂಗವೆಂಬ ತಾತ್ವಿಕ ದೃಷ್ಟಿಕೋನವನ್ನು ಗಟ್ಟಿಗೊಳಿಸಿದೆ. ಒಟ್ಟು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಗತಿಪರ ಆಶಯಗಳು ಮುನ್ನೆಲೆಗೆ ಬಂದು ಸಾಮಾಜಿಕ – ಆರ್ಥಿಕ ಕೆಡುಕುಗಳಿಗೆ ಪ್ರತಿರೋಧ ಒಡ್ಡುವ ಕ್ರಿಯಾ ಶೀಲತೆಗೆ ಕಾರಣವಾಗಿದೆ. ಎಡ ಮತ್ತು ಸದಾ ಸತ್ಯಾತ್ಮಕ ಚಿಂತನೆಗಳ ಒಂದು ವಿಶಿಷ್ಟ ಒಕ್ಕೂಟವಾಗಿ ಕೆಲಸ ಮಾಡಿದ ಹೆಗ್ಗಳಿಕೆಗೆ ಬಂಡಾಯ ಸಾಹಿತ್ಯ ಸಂಘಟನೆಯು ಪಾತ್ರವಾಗಿದೆ…. ಬಹುಮುಖ್ಯ ತಳ ಸಮುದಾಯಗಳನ್ನೂ ಒಳಗೊಂಡಂತೆ ಎಲ್ಲ ಪ್ರಗತಿಪರ ಮನಸ್ಸುಗಳಲ್ಲಿ ಆತ್ಮವಿಶ್ವಾಸ ತುಂಬಿದ್ದು ಬಂಡಾಯ ಸಾಹಿತ್ಯ ಸಂಘಟನೆಯ ಒಂದು ಗಟ್ಟಿ ಸಾಧನೆ. ಆದರೆ ಇತ್ತೀಚಿನ ಕೆಲಕಾಲದಲ್ಲಿ ನಿರೀಕ್ಷಿತ ರೀತಿಯಲ್ಲಿ ಕ್ರಿಯಾಶೀಲವಾಗಿರಲಿಲ್ಲ ಎಂಬುದನ್ನು ನಾವು ಒಪ್ಪುತ್ತೇವೆ, ಈಗ ಮತ್ತೆ ಸಮಕಾಲೀನ ಅಗತ್ಯಕ್ಕನುಗುಣವಾಗಿ ಸಂಘಟನೆಯನ್ನು ಬಲಗೊಳಿಸಲು ಮುಂದಾಗಿದ್ದೇವೆ….. ಬಂಡಾಯ ಸಾಹಿತ್ಯ ಸಂಘಟನೆಯು ತನ್ನ ವಿವಿಧ ಕ್ರಿಯೆಗಳ ಜೊತೆಗೆ ‘ಸಾಹಿತ್ಯ ಸಂವಾದ’ ಎಂಬ ಕಾರ್ಯಕ್ರಮವನ್ನು  ಆರಂಭಿಸಲಿದೆ…..”

ಬಂಡಾಯ ಸಂಘಟನೆ ಈ ದಿನಗಳಲ್ಲಿ ಸಾಹಿತ್ಯ ಸಂವಾದದತ್ತ ಒಲವು ತೋರಿಸುತ್ತಿದೆ. ‘ಬಡ್ಡವಾಗಲಿ ಕಾವ್ಯ: ಜನರ ನೋವಿಗೆ ಮಿಡಿವ ಪಾಣ ಮಿತ್ರ’ ಎಂಬ ಆರಂಭದ ತಾತ್ವಿಕ ನಿಲುವುಗಳನ್ನು ದಾಟಿ ‘ಬಂಡಾಯ ಒಂದು ಮನೋಧರ್ಮ, ಪ್ರತಿಭಟನೆ ಒಂದು ಮೌಲ್ಯ’ ಎಂಬತ್ತ ಮುಖ ಮಾಡಿರುವುದು.

ಎಪ್ಪತ್ತರ ದಶಕದ ಮಧ್ಯಕಾಲ ಅಂದರೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದ ಕಾಲ. ಇದನ್ನು ವಿರೋಧಿಸಿ ಎಲ್ಲ ಎಡಪಂಥೀಯ ಮತ್ತು ಸಮಾಜವಾದಿ ಚಿಂತಕರು ಒಗ್ಗಟ್ಟು ಪ್ರದರ್ಶಿಸಿದ ಕಾಲ. ಅತ್ತ ಸಾಹಿತ್ಯದಲ್ಲೂ ಹೊಸ ಯುವಕರ ಪ್ರವೇಶವಾಗಿತ್ತು. ಮೈಸೂರಿನಲ್ಲಿ ಹುಟ್ಟಿದ ‘ಬರಹಗಾರರು ಕಲಾವಿದರ ಒಕ್ಕೂಟ’ ಎಲ್ಲರ ಗಮನ ಸೆಳೆದಿತ್ತು. ಮುಂದೆ 1979ರಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡಿತು.

 ಬಂಡಾಯ ಸಾಹಿತ್ಯ ಸಂಘಟನೆ ಈ ದಿನಗಳಲ್ಲಿ ಕರ್ನಾಟಕದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಬಳ್ಳಾರಿಯಲ್ಲಿ ಎರಡು ದಿನಗಳ ಕಾರ್ಯಕ್ರಮ ಹಗರಿ ಬೊಮ್ಮನಹಳ್ಳಿ, ತಾಲೂಕ ಸಮ್ಮೇಳನಗಳು, ಬೆಳಗಾವಿಯಲ್ಲಿ ಬೆಂಗಳೂರಿನಲ್ಲಿ… ಹೀಗೆ ವಿವಿಧೆಡೆ ಅರ್ಥಪೂರ್ಣ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿರುವುದು ಇಲ್ಲಿ ಗಮನಿಸಬಹುದು. ದೇಶದ ವಿವಿಧ ಭಾಷೆಗಳಲ್ಲಿ ಬಂಡಾಯ ಸಾಹಿತ್ಯ ನಡೆದು ಬಂದುದನ್ನು ಇಲ್ಲೆಲ್ಲ ಚರ್ಚಿಸಲಾಗಿದೆ. 1992ರಲ್ಲಿ ಕರ್ನಾಟಕದಾದ್ಯಂತ 26 ಜಿಲ್ಲೆಗಳಲ್ಲಿ ಪುಸ್ತಕ ಜಾಥಾವನ್ನು ಹಮ್ಮಿಕೊಂಡು ಓದುವ ಸಂಸ್ಕೃತಿಯನ್ನು ಬೆಳೆಸಲು ಪ್ರಯತ್ನ ಕೈಗೊಂಡಿದ್ದನ್ನೂ ಇಲ್ಲಿ ಶ್ಲಾಘಿಸಬೇಕು. ಅನೇಕ ಸಿದ್ಧಾಂತಗಳು ಒಟ್ಟುಗೂಡಿದ ಚಳವಳಿಯೇ ಬಂಡಾಯ ಸಾಹಿತ್ಯ ಚಳುವಳಿ ಎನ್ನಬಹುದು, ಮುಂದೆ ಬಂಡಾಯದ ಹೊರಗಿದ್ದವರೂ ಬಂಡಾಯದ ಬಗ್ಗೆ ಮಾತನಾಡಿರುವುದು ಆದರ ಸಾಧನೆಯೂ ಹೌದು. ಬಂಡಾಯ ಕಾವ್ಯ, ಬಂಡಾಯ ಕಥಾಸಂಕಲನ….ಇಂತಹ ಬೃಹತ್ ಸಂಕಲನಗಳೂ ಬಂದಿವೆ. ಆರ್.ಜಿ.ಹಳ್ಳಿಯವರು ‘ಆನ್ವೇಷಣೆ’ ಸಂಚಿಕೆ – 70ರಲ್ಲಿ ಹೇಳಿದಂತೆ (ಆಕ್ಟೋಬರ್ 2018) 10 ವರ್ಷಗಳ ಬಂಡಾಯದ ನಡೆ, ಏಳು ಬೀಳುಗಳಿಂದ ಕೂಡಿದೆ. ಅಂದಿನ ಯುವಕರು ಇಂದು ನಾಡಿನ ಹಿರಿಯ ಪ್ರಜೆಗಳಾಗಿದ್ದಾರೆ. ಅವರೆಲ್ಲ ಬದಲಾದ ಕಾಲಘಟ್ಟದಲ್ಲಿ ಯುವ ಮನಸ್ಸುಗಳನ್ನು ಸೆಳೆದು ಬಂಡಾಯ ಕಟ್ಟುವ ಕೆಲಸವನ್ನು ಮಾಡಬೇಕು. ಬಂಡಾಯ ಒಂದು ಮನೋಧರ್ಮ ಎಂದು ಒಪ್ಪಿಕೊಂಡ ನಾವು ಮಾನವೀಯತೆಯನ್ನು ಒಂದು ಮೌಲ್ಯವಾಗಿ ಹಿಡಿದಿಡಬೇಕಾಗಿದೆ. ಮೌಲ್ಯದ ಕಾಳುಗಳನ್ನು ಬಿತ್ತಿ ನೀತಿಯ ಮರಗಳನ್ನು ಬೆಳೆಸುವ ದೃಷ್ಟಿಯಲ್ಲಿ ಇವತ್ತು ಬಂಡಾಯ ಮತ್ತೆ ಚಿಗುರೊಡೆದು ಹಸಿರಿನಿಂದ ಕೂಡಿದ ಮರವಾಗಿ ನಳನಳಿಸಬೇಕಾಗಿದೆ. ಬಂಡಾಯದ ಬೇರುಗಳು ಸದಾ ಭದ್ರವಾಗಿದ್ದು ವೈಚಾರಿಕ ನೆಲೆಗಟ್ಟಿನ ನೆರಳು ಮತ್ತು ಫಲವನ್ನು ನೀಡಬೇಕಾಗಿದೆ…..”

ಕಳೆದ ನಲವತ್ತೆರಡು ವರ್ಷಗಳಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯು ಪ್ರತಿಭಟನೆ ಸಂವಾದ ಪ್ರತಿಕ್ರಿಯೆಗಳ ಮೂಲಕ ತನ್ನ ಪ್ರಗತಿಪರ ಜನಪರ ಕಾಳಜಿಯನ್ನು ದಾಖಲಿಸುತ್ತಾ ಬಂದಿದೆ. ತನ್ನ ಆರಂಭದ ದಿನಗಳಲ್ಲಿನ ಪ್ರಣಾಳಿಕೆಯಲ್ಲೂ ಹಲವು ಪರಿವರ್ತನೆಗಳನ್ನು ಕಾಣಿಸಿದೆ. ಕ.ಸಾ.ಪ. ಬಗ್ಗೆಯೂ ಮೃದು ಧೋರಣೆಯನ್ನೂ ತಳೆದಿದೆ.

———******———

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಸಾಮೂಹಿಕ ಅನುಭವದ ಕುರಿತು ಮಾತನಾಡುವ  ಬಂಡಾಯ ಸಾಹಿತ್ಯ: ನಾಲ್ಕು ದಶಕ”

  1. ಜೋಕಟ್ಟೆ ಯವರ ಈ ಲೇಖನ ಬಹಳ ಸೊಗಸಾಗಿದೆ . ಸುದೀರ್ಘ ವಾದ ಅಧ್ಯಯನ ಮತ್ತು ಪೂರ್ತಿ ಮಾಹಿತಿ ಈ ಲೇಖನದಲ್ಲಿ ದಾಖಲಾಗಿದೆ . ಅಭಿನಂದೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter