ವಿವಶ (ಧಾರಾವಾಹಿ ಭಾಗ-11)

ಬರಬರುತ್ತ ಗಂಗರಬೀಡಿನಲ್ಲಿ ಕಿರಿಸ್ತಾನರ ಪ್ರಾಬಲ್ಯವು ಬಲವಾಗತೊಡಗಿತು. ಆದರೆ ಇಲ್ಲಿನ ಮೂಲ ನಿವಾಸಿಗರು ಕೂಡಾ ತಮ್ಮ ಆಧಿಪತ್ಯವನ್ನುಅಷ್ಟು ಸುಲಭದಲ್ಲಿ ಯಾರಿಗೂ ಬಿಟ್ಟುಕೊಡದೆ ತಮಗೆ ಪರಂಪರಾಗತವಾಗಿ ಬಂದಂಥ ಬದುಕಿನ ಮೌಲ್ಯಗಳನ್ನು ಕಾಪಾಡಿಕೊಂಡೇ ಬಾಳುತ್ತಿದ್ದರು. ಸಾರಾಯಿ ಕುಡಿಯುವ ಚಟವು ಊರಿನ ಬಹುತೇಕ ಜಾತಿಯವರನ್ನು ಆವರಿಸಿತ್ತು. ಆದರೆ ತಮ್ಮ ದೈವ ದೇವರುಗಳ ಮೇಲಿನ ಭಯಭಕ್ತಿ, ಅದಕ್ಕೆ ಸಂಬಂಧಿಸಿದ ಆಚರಣೆ ಮತ್ತು ವಿವಿಧ ಸಂಪ್ರದಾಯಗಳು ಹಾಗೂ ಗುರುಹಿರಿಯರ ಮೇಲಿನ ಗೌರವಾದರಗಳು ಅವರನ್ನು ಆದಷ್ಟು ಅವನತಿಯ ದಾರಿ ತುಳಿಯದಂತೆ ರಕ್ಷಿಸಿಕೊಂಡು ಬರುತ್ತಿದ್ದುವು. ಇಲ್ಲಿನ ವೈದಿಕವರ್ಗ ತಮ್ಮ ಹಿತಮಿತವಾದ ಮಡಿಮೈಲಿಗೆ, ಸೌಮ್ಯ ನಡೆನುಡಿ ಮತ್ತಿತರ ಜಾತಿಯವರೊಂದಿಗಿನ ಪ್ರಾಮಾಣಿಕ ಸಾಮರಸ್ಯದ, ಸುಸಂಸ್ಕøತ ಜೀವನಶೈಲಿಯು ಅವರನ್ನು ಸಹಜವಾಗಿಯೇ ಊರಿನಲ್ಲಿ ಮೇಲ್ಪಂಕ್ತಿಯಲ್ಲಿ  ಉಳಿಯುವಂತೆ ಮಾಡಿತ್ತು. ಆದ್ದರಿಂದ ಉಳಿದ ಜಾತಿ, ಧರ್ಮದವರ ವಿಶೇಷ ಗೌರವಾದರಗಳು ಅವರಿಗೆ ಸದಾ ಸಲ್ಲುತ್ತಿದ್ದುವು. ಗಂಗರಬೀಡಿನ ವೈದಿಕರಲ್ಲಿ ಅನೇಕರು ಕಷ್ಟಪಟ್ಟು ಶಿಕ್ಷಣ ಪಡೆದು ಶಿವಕಂಡಿಕೆ, ಅನಂತೂರು ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ಸರಕಾರಿ ಬ್ಯಾಂಕು, ಕಛೇರಿ ಹಾಗು ಖಾಸಗಿ ಕಂಪನಿಗಳಲ್ಲಿ ಉತ್ತಮ ಸ್ಥಾನಮಾನದ ಉದ್ಯೋಗಗಳನ್ನು ಗಳಿಸಿಕೊಂಡು ಜೀವನ ನಡೆಸುತ್ತಿದ್ದರು.

   ಕಿರಿಸ್ತಾನರು ತಮ್ಮೂರಿಗೆ ಊಳಿಗಕ್ಕೆ ಬಂದವರು. ಅಂಥವರು ತಮ್ಮವರ ಆಸ್ತಿಪಾಸ್ತಿಯನ್ನು ಖರೀದಿಸುತ್ತ ಆಡಳಿತ ನಡೆಸತೊಡಗಿದ್ದನ್ನು ಗಮನಿಸುತ್ತ ಬಂದ ವೈದಿಕರ ಸಮೇತ ಊರಿನ ಇತರ ಮೂಲ ನಿವಾಸಿಗರೂ ಮೆಲ್ಲನೆ ಜಾಗ್ರತರಾದರು. ಇವರನ್ನು ಹೀಗೆಯೇ ಮುಂದುವರೆಯಲು ಬಿಟ್ಟರೆ ಮುಂದೊಂದು ದಿನ ತಮ್ಮೂರಲ್ಲಿ  ತಾವೇ ನಿರ್ಗತಿಕರಾಗಿ ಬದುಕಬೇಕಾದೀತು! ಎಂದು ಯೋಚಿಸಿದ ಒಂದೊಂದೇ ಜಾತಿ, ಪಂಗಡಗಳು ಎಚ್ಚೆತ್ತುಕೊಂಡು ತಂತಮ್ಮ ಕೃಷಿ ಭೂಮಿ ಮತ್ತು ಹೊಲಗದ್ದೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಾವೇ ಉತ್ತು ಬಿತ್ತಿ ಬೆಳೆದು ಕಾಪಾಡಿಕೊಳ್ಳಲು ಮನಸ್ಸು ಮಾಡಿದವು. ಆದರೆ ಹೀಗಿದ್ದ ಸಂದರ್ಭದಲ್ಲೇ ವಿಲಕ್ಷಣ  ಘಟನೆಯೊಂದು ನಡೆಯಿತು. 

ಗಂಗರಬೀಡಿನ ವೈದಿಕ ಪ್ರಮುಖರಲ್ಲಿ ಗೋಪಾಲಕೃಷ್ಣ ಭಟ್ಟರು  ಕೂಡಾ ಒಬ್ಬರು. ಭಟ್ಟರ ಮರಿಯಜ್ಜನ ಕಾಲದಿಂದಲೂ ಅವರ ತಲೆಮಾರು ಸುಮಾರು ಹತ್ತು ಶತಮಾನಗಳಷ್ಟು ಪ್ರಾಚೀನ ಇತಿಹಾಸವಿದ್ದ ಶಿವಕಂಡಿಕೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪೂಜೆಗೆ ಸ್ವಾಮಿಗಳ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸುತ್ತ ಬಂದವರು. ಆದ್ದರಿಂದ ವಾಡಿಕೆಯಂತೆ ಈ ಧಾರ್ಮಿಕ ಕಾಯಕವು ಗೋಪಾಲಕೃಷ್ಣ ಭಟ್ಟರಿಗೆ ದೊರಕಿದ್ದುದು, ಅವರ ನಿವೃತ್ತಿಯ ನಂತರ ಮಗ ರಾಮಭಟ್ಟನಿಗೆ ಲಭಿಸಿತ್ತು. ರಾಮಭಟ್ಟ ಇತ್ತೀಚಿನ ಆಧುನಿಕ ಕಾಲದ ಯುವಕ. ಹೀಗಾಗಿ ಅವನಿಗೆ ದೇವರ ಪೂಜೆ, ಪುನಸ್ಕಾರಗಳ ಕೈಂಕರ್ಯದಲ್ಲಿ ತನ್ನನ್ನು ಜೀವನ ಪರ್ಯಂತ ತೊಡಗಿಸಿಕೊಂಡು ಯಾಂತ್ರಿಕವಾಗಿ ಬದುಕುವುದು ಸುತಾರಾಂ ಇಷ್ಟವಿರಲ್ಲಿಲ್ಲ. ಕಾರಣ ಅವನ ಕನಸೇ ಬೇರಿತ್ತು. ತಾನು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟದ ಉದ್ಯೋಗವನ್ನು ಗಳಿಸಿ ಸ್ವತಂತ್ರವಾಗಿ ಬದುಕ ಬೇಕೆಂಬ ಹಂಬಲ ಅವನನ್ನು ನಿರಂತರ ಕಾಡುತ್ತಿತ್ತು. ಆ ಇಚ್ಛೆಯಿಂದಲೇ ಅವನು ಹೆಚ್ಚಿನ ವ್ಯಾಸಂಗ ಮಾಡಿದ್ದ.

ಆದರೆ ಬ್ರಹ್ಮಲಿಂಗೇಶ್ವರನ ಕೃಪೆಯಿಂದಲೇ ತಲತಲಾಂತರದಿಂದ ಸಾಕಷ್ಟು ಸ್ಥಿತಿವಂತರಾಗಿ, ಪೂಜ್ಯ ಸ್ಥಾನಮಾನಗಳಿಗೆ ಭಾಜನರಾಗಿ  ಗೌರವದಿಂದ ಬಾಳುತ್ತ ಬಂದಿದ್ದ ಗೋಪಾಲಕೃಷ್ಣ ಭಟ್ಟರು ಹಾಗೂ ಅವರ ಕುಟುಂಬಸ್ಥರು ಆ ಪವಿತ್ರ ಸೇವೆಯ ಹಕ್ಕನ್ನು ಕಳೆದುಕೊಳ್ಳಲು ಸುತಾರಾಂ ಇಚ್ಛಿಸಲಿಲ್ಲ. ಆದ್ದರಿಂದ ಗೋಪಾಲಕೃಷ್ಣ ಭಟ್ಟರು ಒಮ್ಮೆ ಮಗನ ಮನದಂಗಿತವನ್ನು ತಿಳಿದು ಆಘಾತಗೊಂಡರು.ಆದ್ದರಿಂದ ಹೇಗಾದರೂ ಮಾಡಿ ಮಗನನ್ನು ಸರಿದಾರಿಗೆ ತರಲೇಬೇಕು. ಇಲ್ಲದಿದ್ದರೆ ತಮ್ಮ ನಂತರದ ತಲೆಮಾರು ಗಂಗರಬೀಡಿನಿಂದ ಹೇಳಹೆಸರಿಲ್ಲದಂತಾಗಿ ದೇಶಾಂತರ ಹೋಗಿ  ಬದುಕಬೇಕಾದೀತು. ಹೀಗಿರುವಾಗ ಇವನು ತಾನು ಗುಲಾಮಗಿರಿಯ ಮೂಲಕವೇ ಬದುಕು ಕಟ್ಟಿಕೊಂಡು ಸಾಯಬೇಕೆನ್ನುವ ಹುಚ್ಚನ್ನು ಮೊದಲು ಬಿಡಿಸಬೇಕು! ಎಂದು ಅವರು ನಿರ್ಧರಿಸಿದರು ಹಾಗೂ ಆವತ್ತೊಮ್ಮೆ ಮಗನನ್ನು ಕರೆದು ಕುಳ್ಳಿರಿಸಿಕೊಂಡು,‘ನೋಡು ಮಗಾ, ಅನಾದಿಕಾಲದಿಂದಲೂ ಶ್ರೀ ಬ್ರಹ್ಮಲಿಂಗೇಶ್ವರನ ಸೇವೆಯೇ ನಮ್ಮ ಕುಟುಂಬಕ್ಕೆ ಶ್ರೀರಕ್ಷೆಯಾಗಿರುವುದು. ಆ ದೇವರ ದಯೆಯಿಂದಲೇ ನಮ್ಮ ಹತ್ತಾರು ತಲೆಮಾರುಗಳು ಇಲ್ಲಿಯವರೆಗೆ ಸುಖದಿಂದ ಬಾಳುತ್ತಿರುವುದು. ಆ ಕಾಯಕವು ನಮ್ಮ ಮನೆತನಕ್ಕೆ ಘನತೆ, ಗೌರವವನ್ನು ತಂದು ಕೊಡುವಂಥದ್ದು. ಇದನ್ನು ನೀನು ಅರ್ಥ ಮಾಡಿಕೊಳ್ಳಬೇಕು! ಎಲ್ಲೆಲ್ಲಿಯೋ, ಯಾರು ಯಾರದ್ದೋ ಕೈ ಕೆಳಗೆ ಹಾಳು ಆಳಾಗಿ ದುಡಿಯುತ್ತ ಸಂಪಾದಿಸುವುದಕ್ಕಿಂತ ತಾನಾಗಿ ಒದಗಿ ಬಂದಂಥ ಶ್ರೀದೇವರ ಸೇವೆಯಲ್ಲಿ ತೊಡಗಿಕೊಂಡು ಜೀವನ ಸಾರ್ಥಕಗೊಳಿಸಿಕೊಳ್ಳುವುದು ಮನುಷ್ಯನ ಬುದ್ಧಿವಂತಿಕೆ. ಈಗ ಆರಂಭದಲ್ಲಿ ಸ್ವಲ್ಪ ಕಾಲ ಮಾತ್ರವೇ ನಿನಗೆ ದೇವರ ಚಾಕರಿ ಮಾಡುವ ಅವಕಾಶ ದೊರಕುವುದು. ನಂತರ ದೇವಸ್ಥಾನದ ಮೇಲ್ವಿಚಾರಣೆಯ ವೃತ್ತಿಗೆಭಡ್ತಿ ಹೊಂದುವಂತೆ ನಾನೇಮಾಡುತ್ತೇನೆ.ಇಷ್ಟು ಒಳ್ಳೆಯ ಅವಕಾಶವನ್ನು ಧಿಕ್ಕರಿಸಿ ಏನೋನೋ ತಲೆಬುಡವಿಲ್ಲದ ಆಲೋಚನೆಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳಬೇಡ!’ ಎಂದು ಮೃದುವಾಗಿ ಬುದ್ಧಿವಾದ ಹೇಳಿದರು. ಆದರೆ ಅಪ್ಪನ ಯಾವ ಮಾತುಗಳು ರಾಮಭಟ್ಟನ ಮೇಲೆ ಪ್ರಭಾವಬೀರಲಿಲ್ಲ. ಬದಲಿಗೆಅವರ ಮಾತುಗಳು ಅವನಲ್ಲಿ ಜಿಗುಪ್ಸೆಯನ್ನು ತರಿಸಿಬಿಟ್ಟವು.

‘ನೋಡಿ ಅಪ್ಪಾ, ನನ್ನ ಜೀವನವನ್ನುನನ್ನಿಚ್ಛೆಯಂತೆಯೇ ರೂಪಿಸಿಕೊಳ್ಳುವ ಬುದ್ಧಿವಂತಿಕೆ ಮತ್ತುಪೂರ್ಣ ಸ್ವಾತಂತ್ರ್ಯ ನನಗಿದೆ. ಹಾಗಾಗಿ ನೀವು ತೋರಿಸಿದ ದಾರಿಯಲ್ಲಿ ನಡೆಯುವುದು ನನಗಿಷ್ಟವಿಲ್ಲ. ಯಾಕೆಂದರೆ ನಾನು ನಿಮ್ಮ ಮಗನೇ ಹೊರತು ಗುಲಾಮನಲ್ಲ!’ ಎಂದು ಆ ಕ್ಷಣವೇ ಕಡ್ಡಿ ಮುರಿದಂತೆ ನಿಷ್ಠೂರವಾಗಿ ಅಂದು ಬಿಡಬೇಕು ಎಂದು ರಾಮಭಟ್ಟನಿಗನ್ನಿಸಿತು. ಆದರೆ ಹಿರಿಯರಿಗೆ ಎಂದೂ ಎದುರಾಡದ ಮತ್ತು ಯಾರ ಮನಸ್ಸನ್ನೂ ನೋಯಿಸಲಿಚ್ಛಿಸದ ಸಂಸ್ಕಾರವಂತ ಮನೆತನದಲ್ಲಿ ಹುಟ್ಟಿ ಬೆಳೆದಿದ್ದ ಅವನ ಮನದ ಮಾತುಗಳು ಗಂಟಲಲ್ಲೇ ಹುದುಗಿ ಹೋದುವು. ಆದ್ದರಿಂದ,‘ಆಗಲಪ್ಪಾ…!’ ಎಂದಷ್ಟೇ ಹೇಳಿ ಭಾರವಾದ ಮನಸ್ಸಿನಿಂದ ಎದ್ದು ಹೋಗಿದ್ದ.

ಆವತ್ತಿನಿಂದ ರಾಮಭಟ್ಟನ ತಾಯಿ ಜಯಲಕ್ಷ್ಮಮ್ಮ ಮತ್ತು ಮಾವಂದಿರು ಕೂಡಾಸಮಯ ಸಿಕ್ಕಾಗಲೆಲ್ಲಾ ಆ ವಿಚಾರವಾಗಿ ಅವನ ಮೇಲೆ ನಾನಾ ರೀತಿಯಿಂದ ಒತ್ತಡ ಹೇರುತ್ತ ಬಂದು ಅವನ ಮನಸ್ಸನ್ನು ಬದಲಿಸಲು ಪ್ರಯತ್ನಿಸ ತೊಡಗಿದರು.ಹೀಗಾಗಿ ರಾಮಭಟ್ಟ ಸುಮಾರು ಕಾಲ ತನ್ನ ಮನಃಶಾಂತಿ ಕಳೆದುಕೊಂಡು ಗೊಂದಲಕ್ಕೀಡಾಗಿ, ತನ್ನಿಷ್ಟದ ಜೀವನವನ್ನು ಅರಸಿಕೊಂಡು ದೂರವೆಲ್ಲಾದರೂ ಓಡಿ ಹೋಗಬೇಕು! ಎಂದು ಯೋಚಿಸುತ್ತಿದ್ದ. ಆದರೂ ಅವನ ಮನೆತನದ ಸಂಸ್ಕಾರಗಳು ಅವನನ್ನು ಬಂಧಿಸಿದ್ದವು. ಹೀಗಾಗಿ ಅವನು, ಕೇವಲತನ್ನ ಸ್ವಾರ್ಥಕ್ಕಾಗಿ ಹೆತ್ತವರ ಸುಖ, ಸಂತೋಷಗಳಿಗೂ ಅವರ ಜೀವನಾದರ್ಶಗಳಿಗೂ ತಾನು ಅಪಚಾರವೆಸಗುವುದು ಪಾಪವಲ್ಲವೇ!’ ಎಂದುಸಹ ಯೋಚಿಸಿ ಅಧೀರನಾಗುತ್ತಿದ್ದ. ಆದ್ದರಿಂದ ಕೊನೆಗೊಮ್ಮೆ ಕುಟುಂಬದ ಇಚ್ಚೆಯೇ ಅವನೊಳಗೆ ಮೆಲುಗೈ ಸಾಧಿಸಿಬಿಟ್ಟಿತು.ವಿಧಿಯಿಲ್ಲದೆ ಕಷ್ಟಪಟ್ಟು ತನ್ನ ಕನಸುಗಳನ್ನು ಕೊಂದುಕೊಂಡು ದೇವಸ್ಥಾನದ ಸೇವೆಯಲ್ಲಿಯೇ ಮುಂದುವರೆದ.

ಆದರೆ ಅವನೊಳಗಿನ ಸೋಲು, ಹತಾಶೆಗಳು ಬಹಳ ಕಾಲ ಅವನನ್ನು ನೆಮ್ಮದಿಯಿಂದಿರಲು ಬಿಡಲಿಲ್ಲ. ತನ್ನ ಆದರ್ಶದ ಕನಸುಗಳು ಭಗ್ನಗೊಂಡ ಕೊರಗು ಅವನನ್ನು ನಿರಾಶೆಯ ಕೂಪಕ್ಕೆ ತಳ್ಳತೊಡಗಿತು. ಬರಬರುತ್ತ ಅವನ ಸ್ಥಿತಿಯು ತಾನಾಯಿತು ತನ್ನ ಕೆಲಸವಾಯಿತು ಎಂಬಷ್ಟರ ಮಟ್ಟಿಗೆ ತಲುಪಿದ್ದು,ನಿಧಾನಕ್ಕದು ಅವನಲ್ಲಿ ಖಿನ್ನತೆಯನ್ನೂ ಸೃಷ್ಟಿಸಿಬಿಟ್ಟಿತು. ಇತ್ತ ತಮ್ಮ ಮಗ ತಮ್ಮಿಚ್ಛೆಯಂತೆ ಬದುಕತೊಡಗಿದ್ದನ್ನು ಕಂಡು ಗೋಪಾಲಕೃಷ್ಣ ಭಟ್ಟರು ಮತ್ತು  ಜಯಲಕ್ಷ್ಮಮ್ಮನೂ  ನೆಮ್ಮದಿಯ ಉಸಿರುಬಿಟ್ಟರು. ಆದರೆ ಅವರ ಆ ಗೆಲುವು ಹೆಚ್ಚು ಕಾಲ ಉಳಿಯಲಿಲ್ಲ. ಆರಂಭದಲ್ಲಿ ಹುರುಪಿನಿಂದ ಕಾಯಕವನ್ನಾರಂಭಿಸಿದ್ದ ಮಗ ಈಚೀಚೆಗೆ ಯಾಕೋ ಮೌನಿಯಾಗುತ್ತ ಸಾಗುತ್ತಿದ್ದುದು ಅವರಲ್ಲಿ ಆತಂಕವನ್ನು ಮೂಡಿಸಿತ್ತು. ಹಾಗಾಗಿ ಮರಳಿ ಅವನನ್ನು ಕುಳ್ಳಿರಿಸಿಕೊಂಡು ತಮ್ಮ ಹಿಂದಿನ ಬುದ್ಧಿಮಾತುಗಳನ್ನೇ ಮತ್ತಷ್ಟು ಮುತುವರ್ಜಿಯಿಂದ  ಪುನಾರಾವರ್ತಿಸುತ್ತ ಅವನನ್ನು ಗೆಲುವಾಗಿಸಲು ಪ್ರಯತ್ನಿಸುತ್ತ ಬಂದರು. ಆದರೆ ಅದರಿಂದ ರಾಮಭಟ್ಟ ಇನ್ನಷ್ಟು ಬಿಗಡಾಯಿಸುತ್ತ ಹೋದನಲ್ಲದೇ, ಹೆತ್ತವರು ತನ್ನ ಮೇಲೆ ನಿಗಾ ಇಟ್ಟಿದ್ದಾರೆ. ಹಾಗಾಗಿ ಅವರಿಗೆ ನೋವಾಗುವಂತೆ ತಾನು ನಡೆದುಕೊಳ್ಳಬಾರದು!’ ಎಂದೂ ಯೋಚಿಸಿದವನು ಆನಂತರ ತನ್ನ ನಡೆನುಡಿಯಲ್ಲಿ ಚೈತನ್ಯದ ಮುಖವಾಡವನ್ನು ತೊಟ್ಟು ಓಡಾಡತೊಡಗಿದ. ಮಗನಲ್ಲಿ ಮತ್ತೆ ಬದಲಾವಣೆಯನ್ನು ಕಂಡ ಹೆತ್ತವರೂ ಗೆಲುವಾದರು. 

ಇಂಥ ಮನಸ್ಥಿತಿಯ ರಾಮಭಟ್ಟನು ಒಂದು ಮುಂಜಾನೆ ಅರುಣೋದಯಕ್ಕಿಂತ ಮುಂಚೆ ಎದ್ದು ಸ್ನಾನಾದಿ ಸಂಧ್ಯಾವಂದನೆಗಳನ್ನು ಮುಗಿಸಿ ಸುಮಾರು ಆರು ಮೈಲು ದೂರದ ದೇವಸ್ಥಾನಕ್ಕೆ ಕಾಲು ನಡಿಗೆಯಲ್ಲಿ ಹೊರಟು ಹೋದನೆಂದರೆ ಸಂಜೆಗತ್ತಲು ಆವರಿಸಿದ ಮೇಲೆ ಮನೆಯ ದಾರಿ ಹಿಡಿಯುತ್ತಿದ್ದ. ವಾಸ್ತವದಲ್ಲಿ ಅವನ ಬದುಕು ಭಿನ್ನಗೊಂಡ ಕಲ್ಲಿನ ಮೂರ್ತಿಯಷ್ಟೇ ಜಡವಾಗಿ ಬಿಟ್ಟಿತ್ತು. ಆದರೂ ತನ್ನ ವೃತ್ತಿಯು ಬಯಸುವ ನೇಮನಿಷ್ಠೆಗೆ ಅವನು ಬದ್ಧನಾಗಿ ನಡೆದುಕೊಳ್ಳುತ್ತಿದ್ದ. ಇದರಿಂದ ಮನೆಮಂದಿಯ ಭರವಸೆ ಮತ್ತು ಗೌರವಕ್ಕೂ ಪಾತ್ರನಾಗಿದ್ದ.ಆದರೆ ತನ್ನೊಳಗಿನ ಹತಾಶೆಯನ್ನು ಮಾತ್ರ ಹತ್ತಿಕ್ಕಿಕೊಳ್ಳಲು ಸಾಧ್ಯವೇ ಆಗದಿದ್ದ ಅವನೊಮ್ಮೆ ಏಕಾಏಕಿ ಅಡ್ಡ ದಾರಿಯೊಂದನ್ನು ಹಿಡಿದುಬಿಟ್ಟ. ಆ ಮಾರ್ಗವನ್ನು ಅವನ ಕಾಲೇಜು ಸಹಪಾಠಿಯಾಗಿದ್ದ  ಮಥಾಯಸನು ಅವನಿಗೆ ತೋರಿಸಿಕೊಟ್ಟ. ಮಥಾಯಸ ಮತ್ತು ರಾಮಭಟ್ಟನ ಗೆಳೆತನವು ‘ಹಂದಿಯೊಂದಿಗೆ ಕೂಡಿ ಹಸುವೂ ಹೇಸಿಗೆ ತಿಂದಿತು!’ ಎಂಬ ತುಳು ಗಾದೆಯನ್ನು ನಿಜ ಮಾಡಿಬಿಟ್ಟಿತ್ತು. ರಾಮಭಟ್ಟತನ್ನ ಕೆಲಸ ಮುಗಿಸಿ ಮನೆಗೆ ಮರುಳುವ ಹೊತ್ತಲ್ಲಿ ಮಾಥಾಯಸ  ಆಗೀಗೊಮ್ಮೆ ಅವನಿಗೆ ಮಾತಿಗೆ ಸಿಗುತ್ತಿದ್ದ.

ರಾಮಭಟ್ಟನ ಮನೆಗೆ ಹೋಗುವ ದಾರಿಯಲ್ಲಿ ಹಳೆಯ ಗೋಳಿಮರವೊಂದು ವಿಶಾಲವಾಗಿ ಹರಡಿಕೊಂಡಿತ್ತು. ಊರವರು ಆ ಮರದ ಸುತ್ತಲೂ ಎತ್ತರದ ಕಟ್ಟೆಯನ್ನು ಕಟ್ಟಿಸಿ, ದಾರಿ ಹೋಕರು ವಿಶ್ರಾಂತಿ ಪಡೆಯಲು ವ್ಯವಸ್ಥೆಯನ್ನು ಮಾಡಿದ್ದರು.ಆದರೆ ಆ ಕಟ್ಟೆಯ ಮೇಲೆ ಯಾವಾಗಲೂ ಕೆಲಸವಿಲ್ಲದ ಸೋಮಾರಿಗಳೇ ಕುಳಿತು ಹರಟುತ್ತಲೋ ನಿದ್ರಿಸುತ್ತಲೋ ಕಾಲ ಕಳೆಯುತ್ತಿದ್ದುದರಿಂದಅದು ಕ್ರಮೇಣ,‘ಸೋಮಾರಿಕಟ್ಟೆ’ ಎಂದೇ ಪ್ರಸಿದ್ಧವಾಗಿತ್ತು. ಈ ಗೆಳೆಯರಮಾತುಕತೆಗಳೂ ಅದೇ ಕಟ್ಟೆಯಲ್ಲಿ ಸಾಗುತ್ತಿದ್ದುವು. ಆದರೆ ಅದೆಂತಹ ಗಹನವಾದ ಮತ್ತುಕುತೂಹಲಕರಚರ್ಚೆಯಿದ್ದರೂ ರಾಮಭಟ್ಟಅದರಲ್ಲಿ ಹೆಚ್ಚು ಹೊತ್ತು ಖುಷಿಯಿಂದ ತೊಡಗುತ್ತಿರಲಿಲ್ಲ. ಅವನು ಮಾತಿಗಿಳಿದ ಸ್ವಲ್ಪ ಹೊತ್ತಿನಲ್ಲಿಯೇ ನಿರಾಶನಾಗುತ್ತಿದ್ದವನು,‘ನೀನು ಏನೇ ಹೇಳು ಮಥಾಯಸಾ,ಆವತ್ತಿನ ನಮ್ಮ ಬಾಲ್ಯ ಮತ್ತು ಶಾಲಾ ಕಾಲೇಜು ದಿನಗಳೇ ಬಹಳ ಚೆಂದವಿದ್ದವು ಮಾರಾಯಾ.ಅವೆಲ್ಲ ಕಳೆದು ಹೋದುವಲ್ಲ.ಇನ್ನೇನಿದ್ದರೂ ಯಾರು ಯಾರಿಗಾಗಿಯೋ ಕತ್ತೆಯಂತೆ ದುಡಿಯುತ್ತ ಇಷ್ಟವಿಲ್ಲದ ಬಾಳನ್ನು ಸಾಯುವತನಕ ಬದುಕಬೇಕಷ್ಟೇ! ಇಲ್ಲಿ ನಾವೆಣಿಸಿದ್ದು ಯಾವುದೂನಡೆಯುವುದಿಲ್ಲ.ಅಂಥ ವಿಧಿಯಾಟಕ್ಕೆ ಬಲಿಯಾಗುವ ನಮ್ಮ ಜೀವನ ನಿಜಕ್ಕೂ ವ್ಯರ್ಥವಲ್ಲವಾ ಮಾರಾಯಾ…?’ ಎಂದೆನ್ನುತ್ತ ಮೌನಿಯಾಗುತ್ತಿದ್ದ.

ತನ್ನ ಗೆಳೆಯನ ಆಸೆ, ಆಕಾಂಕ್ಷೆಗಳೆಲ್ಲ ಅವನ ಮನೆಯವರಿಂದಲೇ ಮಣ್ಣುಪಾಲಾಗಿದ್ದನ್ನು ಮತ್ತುಆ ಕಾರಣದಿಂದಲೇ ಅವನಲ್ಲಿ ಜೀವನೋತ್ಸಾಹ ಬತ್ತಿ ಹೋಗಿದ್ದುದನ್ನುಮಥಾಯಸನೂ ಕಾಣುತ್ತ ಬಂದಿದ್ದ. ಆದ್ದರಿಂದ ಗೆಳೆಯನ ಮೇಲೆ ಅವನಲ್ಲಿ ವಿಶೇಷ ಅನುಕಂಪ ಮೂಡಿತ್ತು.ಅವನನ್ನು ಆದಷ್ಟು ಸಂತೋಷದಿಂದಿಡುವ ವಿಷಯವನ್ನೇ ತಾನೂಮಾತಾಡುತ್ತಅವನಲ್ಲಿ ಭರವಸೆ ಮೂಡಿಸಲು ಪ್ರಯತ್ನಿಸುತ್ತಿದ್ದ. ಆದರೆ ಅತ್ತ ಇನ್ನೊಂದು ವಿಷಾದದ ಸಂಗತಿಯೆಂದರೆ, ಮಥಾಯಸನ ಜೀವನಕ್ಕೂ ಒಂದು ಗೊತ್ತುಗುರಿ ಎಂಬುದಿರಲಿಲ್ಲ. ಅವನ ಅಪ್ಪ ಹುಟ್ಟು ಕುಡುಕ. ತಾಯಿ ಮಗ್ಗಿಬಾಯಿ ತನ್ನ ಅಪ್ಪನಿಂದ ದೊರೆತ ಸಣ್ಣ ತೆಂಗಿನ ತೋಟವೊಂದನ್ನೂ ಮತ್ತು ಸಾರಾಯಿ ದಂಧೆಯನ್ನೂ ನೆಚ್ಚಿಕೊಂಡು ಗಂಡ ಮತ್ತು ಮಗನನ್ನು ಸಾಕುತ್ತಿದ್ದಳು. ಇಂಥ ಪರಿಸ್ಥಿತಿಯಲ್ಲಿದ್ದ ಮಥಾಯಸನಿಗೆ ಒಮ್ಮೆ ಗೆಳೆಯನ ಮನಸ್ಸನ್ನು ಹಗುರಗೊಳಿಸುವಂತಹ ಉಪಾಯವೊಂದು ಹೊಳೆದುಬಿಟ್ಟಿತು. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಮೊದಲಿಗೆ ಅಳುಕಿದ.ನಂತರ ಕೊಂಚ ಯೋಚಿಸಿದ. ಕೊನೆಯಲ್ಲಿ ಆ ಮಾರ್ಗವೇ ಸೂಕ್ತವೆಂದು ಅವನಿಗೆ ತೋರಿತು. ಆದ್ದರಿಂದ, ಯಾವುದಕ್ಕೂ ಒಮ್ಮೆ ಪ್ರಯತ್ನಿಸಿ ನೋಡುವ. ಅವನಿಗಿಷ್ಟವಾದರೆ ಆಯಿತು. ಇಲ್ಲದಿದ್ದರೆ ಒತ್ತಾಯ ಮಾಡುವುದು ಬೇಡ! ಎಂದು ನಿರ್ಧರಿಸಿದ.

***

ಮಗ್ಗಿಬಾಯಿಯು, ರುಚಿಕಟ್ಟಾದ ಮತ್ತು ಅಷ್ಟೇ ನಶೆ ನೀಡುವಂಥ ಮದಿರೆಯನ್ನು ತಯಾರಿಸುವುದರಲ್ಲಿಬಹಳ ನಿಪುಣೆ! ಎಂದು ಕಿರಿಸ್ತಾನರೊಳಗೆ ಹೆಸರು ಮಾಡಿದವಳು. ಆ ಒಂದು ಕಾರಣಕ್ಕಾಗಿಯೇಅವಳ ಸಂಬಂಧಿಕರೂ ಹಾಗೂ ನೆರೆಕರೆಯವರೂ ಆಗಾಗ ಅವಳನ್ನರಸಿ ಬಂದು ಹೋಗುವ ಬಾಂಧ್ಯವನ್ನಿಟ್ಟುಕೊಂಡಿದ್ದರು. ಮಥಾಯಸನೂ ಆವತ್ತು ಅಮ್ಮನ ಆದ್ರಾಕ್ಷಾರಸವನ್ನು ಸುಮಾರು ಅರವತ್ತು ಮಿಲಿ ಲೀಟರ್‍ನಷ್ಟನ್ನು ಖಾಲಿ ಬಾಟಲಿಯೊಂದಕ್ಕೆ ತುಂಬಿಸಿಕೊಂಡೊಯ್ದು  ಸೋಮಾರಿಕಟ್ಟೆಯಲ್ಲಿ ಕಾಯುತ್ತಿದ್ದ ತನ್ನ ಗೆಳೆಯನಿಗೆ ಪ್ರೀತಿಯಿಂದ ನೀಡುತ್ತ,‘ಹೇ ಭಟ್ಟ, ತಗೋ ಮಾರಾಯಾ…ಇದನ್ನು ಸ್ವಲ್ಪ ಕುಡಿದು ನೋಡು. ಆಮೇಲೆ ನಿನ್ನ ಅದೆಂಥ ಮಂಡೆಬಿಸಿಯಿದ್ದರೂ ಒಂದೇ ಪೆಟ್ಟಿಗೆ ಓಡಿ ಹೋಗುತ್ತದೆ. ಅಷ್ಟು ಒಳ್ಳೆಯ ಔಷಧಿಯಿದು! ಇದನ್ನು ಸಾರಾಯಿ ಎಂದುಕೊಳ್ಳಬೇಡ. ಕೇವಲ ದ್ರಾಕ್ಷಿಹಣ್ಣುಗಳಿಂದಲೇ ಮಾಡಿರುವಂಥದ್ದು ಇದು. ಇದರ ಅಮಲು ಕೂಡಾ ಬೇರೆಯೇ! ಹಾಗಾಗಿ ಅಷ್ಟೇ ದುಬಾರಿ ಮಾಲು. ಅಷ್ಟುಮಾತ್ರವಲ್ಲ ಇದನ್ನು ಕುಡಿದವರಿಗೆ ಅದೆಂಥ ಚಿಂತೆಯಿದ್ದರೂರಾತ್ರಿ ಗಟ್ಟಿ ನಿದ್ದೆ ಬರುತ್ತದೆ. ನಮ್ಮ ಹಬ್ಬ ಹರಿದಿನಗಳಲ್ಲಿ ಮತ್ತು ಆಪ್ತೇಷ್ಟರ ಕೂಟಗಳಲ್ಲಿ ಮಾತ್ರ ಇದನ್ನು ನಾವು ಕುಡಿಯುತ್ತೇವೆ. ಇದರ ಇನ್ನೊಂದು ವಿಶೇಷವೇನು ಗೊತ್ತಾ,ಎಷ್ಟು ಕುಡಿದರೂಇದರ ವಾಸನೆಯೇಬರುವುದಿಲ್ಲ. ಬೇಕಿದ್ದರೆ ಒಂದು ಗುಟುಕು ಟೇಸ್ಟ್ ಮಾಡು. ಲಾಯ್ಕ್ ಎನಿಸಿದರೆ ಆಮೇಲೆ ನೀನೇ ದಮ್ಮಯ್ಯ ದಕ್ಕಯ್ಯ ಹಾಕಿ ಕೇಳುತ್ತಿ ನೋಡು!’ ಎಂದು ಆ ಸಾರಾಯಿಯು ಆಗತಾನೇ ಸಮುದ್ರ ಮಥನದಿಂದ ಕಡೆದು ತೆಗೆದ ಅಮೃತ ರಸವೆಂಬಂತೆಯೇ ಹೊಗಳಿದ.

ಆದರೆ ರಾಮಭಟ್ಟ ಅದನ್ನು ಕುಡಿಯಲು ಹಿಂಜರಿದವನು,‘ಥೂ! ಥೂ! ನೀನೆಂಥದನ ಪರ್ಬು…? ದರಿದ್ರದ ಸಾರಾಯಿ ತಂದು ಕೊಟ್ಟು ಅದನ್ನು ಈ ಮಟ್ಟಕ್ಕೆ ಹೊಗಳುವುದಾ…? ಅದು ಎಂಥ ರುಚಿಯಿದ್ದರೂ ಗಂಗಸರ, ಗಂಗಸರವೇ ಅಲ್ಲವಾ ಮಾರಾಯಾ? ಅದೂ ಅಲ್ಲದೆ ನಮ್ಮ ವಂಶದಲ್ಲೇ ಈವರೆಗೆ ಯಾರೂ ಸಾರಾಯಿ ಕುಡಿದವರಲ್ಲ. ಅಂಥದ್ದರಲ್ಲಿ ನಾನು ಕುಡಿದೆನೆಂದರೆ ನನ್ನ ಮನೆತನದ ಮರ್ಯಾದೆ ಮೂರು ಕಾಸಾದೀತು. ನನಗೆ ಬೇಡ ಮಾರಾಯ!’ ಎಂದು ಆತಂಕ, ಉದಾಸೀನವನ್ನು ಒಟ್ಟಿಗೆ ತೋರಿಸಿದ. ಆದರೆ ಮಥಾಯಸನು ಹೇಗಾದರೂ ಮಾಡಿ ತನ್ನ ಗೆಳೆಯನನ್ನು ಖುಷಿಯಾಗಿಡಲೇ ಬೇಕೆಂಬ ಪ್ರಾಮಾಣಿಕ ಪ್ರಯತ್ನದಲ್ಲಿದ್ದವನಲ್ಲವೇ?ಹಾಗಾಗಿ ಅವನೂ ಪಟ್ಟುಬಿಡದೆ, ‘ಅಲ್ಲವಾ ಭಟ್ಟ, ಇಲ್ಲದ್ದನ್ನು ಸುಳ್ಳು ಹೇಳಿ ನಂಬಿಸಲು ನನಗೆ ನಿನ್ನ ಮೇಲೇನಾದರೂ ಹಳೆಯ ದ್ವೇಷ ಉಂಟಾ ಹೇಳು? ಈ ಮಾಲು, ಎಲ್ಲರೂ ಕುಡಿದು ಮತ್ತೇರಿ ಜೀವನ ಹಾಳು ಮಾಡಿಕೊಳ್ಳುವಂಥ ಆ ಶರಾಬಿನ ಸಾಲಿಗೆ ಸೇರುವುದಿಲ್ಲ ಮಾರಾಯ. ಹಾಗಾಗಿ ನಮ್ಮಲ್ಲಿ ಎಲ್ಲರೂ ಇದನ್ನು ಕುಡಿಯುತ್ತಾರೆ. ಆದರೂ ದಾರಿ ತಪ್ಪುವುದಿಲ್ಲ ಮತ್ತು ಎಷ್ಟು ಕುಡಿದರೂ ಯಾರಿಗೂ ತಿಳಿಯುವುದಿಲ್ಲ. ಈ ಮೂಲಕವಾದರೂ ನಿನ್ನ ಮನಸ್ಸಿನ ನೋವು,ನಿರಾಶೆಯನ್ನು ಸ್ವಲ್ಪ ಕಡಿಮೆ ಮಾಡುವ ಅಂತ ತೋರಿತು. ಅದಕ್ಕಾಗಿ ತಂದೆನೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ. ಆದರೂ ಇನ್ನು ನಿನ್ನಿಷ್ಟ. ನನ್ನ ಒತ್ತಾಯವಿಲ್ಲ!’ಎಂದು ರಾಮಭಟ್ಟನ ಮನ ಕರಗುವಷ್ಟು ಮೃದುವಾಗಿ ಹೇಳಿದ. ಅದರಿಂದನಿಜವಾಗಿಯೂ ರಾಮಭಟ್ಟನ ಮನಸ್ಸು ಬದಲಾಯಿತು. ಜೊತೆಗೆ,‘ಎಂಥ ಚಿಂತೆಯಿದ್ದರೂ ರಾತ್ರಿ ಗಟ್ಟಿ ನಿದ್ರೆ ಬರುತ್ತದೆ!’ ಎಂಬ ಗೆಳೆಯ ಮಾತು ಅವನೊಳಗನ್ನು ನಾಟಿತು. ಆದ್ದರಿಂದ ಅರೆಮಾಗಿದ ವಯಸ್ಸಿನ ಸ್ಥಿತಿಯೋ, ಜೀವನದ ಕುರಿತು ಅದಾಗಲೇ ಉದ್ಭವಿಸಿದ್ದ ನಿರಾಶೆಯ ಫಲವೋ ಒಟ್ಟಾರೆ ದೇವಸ್ಥಾನದ ಚಾಕರಿಗೆ ಸೇರಿದಂದಿನಿಂದ ರಾಮಭಟ್ಟನ ರಾತ್ರಿಯ ನಿದ್ರೆಗೆ ಕಲ್ಲು ಬಿದ್ದಿತ್ತು. ಹಾಗಾಗಿ ಅವನು ಇತ್ತೀಚೆಗೆಸರಿಯಾಗಿ ನಿದ್ರಿಸದೆ ತಿಂಗಳುಗಳೇ ಕಳೆದಿದ್ದವು.

ಇತ್ತ, ತಾನು ಇಷ್ಟೊಂದು ವಿವರಿಸಿ ನಂಬಿಕೆ ಹುಟ್ಟಿಸಲು ಪ್ರಯತ್ನಿಸಿದರೂ ಗೆಳೆಯ ತನ್ನ ಅಮೃತಪಾನ ಮಾಡಲು ಮೀನಾಮೇಷ ಎಣಿಸುವುದನ್ನು ಕಂಡ ಮಥಾಯಸನಿಗೆ ಕೋಪ ಬಂತು. ‘ನೀನೆಂಥದು ಮಾರಾಯಾ ಅಷ್ಟೊಂದು ಯೋಚಿಸುವುದು? ನಾನೇನು ವಿಷ ಕೊಡುತ್ತಿದ್ದೇನಾ! ನಮ್ಮ ಗೆಳೆತನದ ಮೇಲೆ ಅಷ್ಟೂ ನಂಬಿಕೆ ಇಲ್ಲವಾ ನಿಂಗೆ…?’ ಎಂದು ಹುಬ್ಬುಗಂಟಿಕ್ಕಿದ. ಗೆಳೆಯನ ಬೇಸರ ಕಂಡರಾಮಭಟ್ಟ ಇನ್ನೂ ತಣ್ಣಗಾದ. ‘ಅಯ್ಯೋ…ಹಾಗಲ್ಲವಾ ಪರ್ಬು, ನಿನಗಾದರೂ ಅದೆಲ್ಲ ಅಭ್ಯಾಸವಿದೆ. ನನಗಿಲ್ಲವಲ್ಲ. ಒಮ್ಮೆಲೇ ಹೇಗೆ ಕುಡಿಯುವುದು ಅಂತ ಯೋಚಿಸುತ್ತಿದ್ದೆ!’ ಎಂದವನು ರಪ್ಪನೇ ಸಾರಾಯಿ ಬಾಟಲಿಯತ್ತ ನೋಡಿ, ‘ಅಯ್ಯೋ, ಇದನ್ನು ಹೇಗೆ ಕುಡಿಯುವುದನಾ ಸಾವು…!’ ಎಂದು ಮೈಹಿಂಡುತ್ತ ಅಂದವನು ಹೆಬ್ಬೆರಳು ಮತ್ತು ತೋರುಬೆರಳಿನಿಂದ ಮೂಗನ್ನು ಅಮುಕಿ ಹಿಡಿದುಕೊಂಡು, ಒಂದೆರಡು ಗುಟುಕನ್ನು ಗಂಟಲಿಗೇರಿಸಿಯೇ ಬಿಟ್ಟ. ಮರುಕ್ಷಣ ಎಂಥದ್ದೋ ಸಿಹಿಸಿಹಿ, ಕಹಿಕಹಿ,ಒಗರು ಒಗರಾದ ಜಿಗುಟು ದ್ರವವು ತಲತಲಾಂತರದಿಂದಲೂ ಶಾಖಾಹಾರಿಯಾಗಿದ್ದ ಅವನ ಮೃದುವಾದ ಹೊಟ್ಟೆಗಿಳಿಯಿತು. ಮುಂದಿನ ಕ್ಷಣ ಅವನ ಕಣ್ಣು,ಕಿವಿ ಮತ್ತು ಮೂಗಿನೊಳಗಿನ  ರಕ್ತನಾಳಗಳೆಲ್ಲ ರಪ್ಪನೆ ಚುರುಕಾಗಿ ಅಲ್ಲೆಲ್ಲ ಬಿಸಿರಕ್ತವು ನುಗ್ಗಿದಂತಾಗಿ ತೀರಾ  ಕಳವಳಗೊಂಡ. ಆದರೆ ಅದರ ಬೆನ್ನಿಗೆ ಅದೆಂಥದ್ದೋ ಆಹ್ಲಾದವೆನಿಸುವ ಭಾವವೂ ಹುಟ್ಟಿದಾಗ ತುಸು ಹಿತವೆನಿಸಿತು. ‘ಹೋವ್…! ಪರ್ವಾಗಿಲ್ವಾ ಪರ್ಬು,ಇದು ಬಹಳ ಮಜವಾಗಿದೆ.ಯಬ್ಬೇ…!ಇದರ ಧಮ್ಮು ಇಷ್ಟೇನಾ! ಇದನ್ನು ಯಾರುಬೇಕಾದರೂ ಕುಡಿಯಬಹುದಲ್ಲವ ಮಾರಾಯಾ!’ ಎಂದು ಗೆಲುವಿನಿಂದ ಉದ್ಘರಿಸಿದವನು ಗೆಳೆಯನೊಡನೆ ಹರಟುತ್ತಲೇ ಸಣ್ಣ ಬಾಟಲಿಯನ್ನು ಪೂರ್ತಿ ಖಾಲಿ ಮಾಡಿಬಿಟ್ಟ. ನಂತರ ಅವನಿಂದ ಬೀಳ್ಗೊಂಡು ಮನೆಗೆ ಹೊರಟ. ಆದರೆ ಹಿಂದೆಂದಿಗಿಂತಲೂ ಇಂದುಹಸಿವು ದುಪ್ಪಟ್ಟಾದಂತೆ ಭಾಸವಾಯಿತವನಿಗೆ. ಹಾಗಾಗಿ ಅಮ್ಮ ಬಡಿಸಿದ್ದನ್ನು ಉಸಿರೆತ್ತದೆ ಹೊಟ್ಟೆ ತುಂಬ ಉಂಡುಕೋಣೆ ಸೇರಿಬಾಗಿಲು ಹಾಕಿಅಂಗಾತ ಮಲಗಿದವನನ್ನು ಗಾಢ ನಿದ್ರೆ ಆವರಿಸಿಕೊಂಡಿತು.

(ಮುಂದುವರೆಯುವುದು)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter