ದತ್ತಾತ್ರಿ ಅವರ ‘ ಒಂದೊಂದು ತಲೆಗೂ ಒಂದೊಂದು ಬೆಲೆ’

ಎಂ.ಆರ್.ದತ್ತಾತ್ರಿಯವರು ವೃತ್ತಿಯಿಂದ ಸಾಫ್ಟ್ವೇರ್ ಇಂಜಿನಿಯರರಾದರೂ ಪ್ರವೃತ್ತಿಯಿಂದ ಲೇಖಕರು.  “ಅಲೆಮಾರಿ ಕನಸುಗಳು” (ಕವನಸಂಕಲನ), “ಪೂರ್ವ-ಪಶ್ಚಿಮ”(ಅಂಕಣ ಬರಹಗಳ ಸಂಗ್ರಹ),”ದ್ವೀಪವ ಬಯಸಿ” (ಕಾದಂಬರಿ),”ಮಸುಕು ಬೆಟ್ಟದ ದಾರಿ” (ಕಾದಂಬರಿ) ಮತ್ತು”ತಾರಾಬಾಯಿಯ ಪತ್ರ” (ಕಾದಂಬರಿ) ಇವರ ಪ್ರಕಟಿತ ಕೃತಿಗಳು. ಇತ್ತೀಚೆಗೆ ಬಿಡುಗಡೆಯಾದ “ಒಂದೊಂದು ತಲೆಗೂ ಒಂದೊಂದು ಬೆಲೆ” ದತ್ತಾತ್ರಿಯವರ ನಾಲ್ಕನೆಯ ಕಾದಂಬರಿ.

ಕಥಾನಾಯಕ ಶಿವಸ್ವಾಮಿಯವರು ಮೂಲತಃ ಕರ್ನಾಟಕದವರಾದರೂ ವೃತ್ತಿಯ ನಿಮಿತ್ತ ಮೂವತ್ತೈದು ವರ್ಷಗಳನ್ನು ಹಿಂದಿ ಭಾಷಿಕ ಪ್ರದೇಶವಾದ ಘಾಜಿಯಾಬಾದಿನಲ್ಲೇ ಕಳೆದಿದ್ದಾರೆ. ಭಾರತ ಸರ್ಕಾರದ ಅಧೀನದಲ್ಲಿರುವ ಬಿ.ಇ.ಎಲ್.ಸಂಸ್ಥೆಯಲ್ಲಿ ಮೂವತ್ತೈದು ವರ್ಷಗಳ ಕಾಲ ದುಡಿದು ಎಜಿಎಮ್ ಆಗಿ ನಿವೃತ್ತರಾದ ಶಿವಸ್ವಾಮಿಯವರು ಬೆಂಗಳೂರಿನ ಡಿ.ಟಿ.ಗ್ರೂಪ್ಸ್ಎಂಬ ಸಂಸ್ಥೆಯಲ್ಲಿ ಎಚ್.ಆರ್.ಮ್ಯಾನೇಜರ್  ಉದ್ಯೋಗಕ್ಕೋಸ್ಕರ ಸಂದರ್ಶನಕ್ಕೆ ತೆರಳುವುದರೊಂದಿಗೆ ಕಾದಂಬರಿ ಆರಂಭವಾಗುತ್ತದೆ.

ಶಿವಸ್ವಾಮಿಯವರು ನಿವೃತ್ತ ಜೀವನವನ್ನು ನೆಮ್ಮದಿಯಾಗಿ ಕಳೆಯಲುದ್ದೇಶಿಸಿ ಬೆಂಗಳೂರಿನಲ್ಲಿ ಲಖಾನಿ ಬಿಲ್ಡರ್ಸನವರು ನಿರ್ಮಿಸುತ್ತಿರುವ ಅನೂಪ್ಗಾರ್ಡೇನಿಯಾದಲ್ಲಿ ಒಂದು ಪ್ಲಾಟು ಕೊಳ್ಳಲು ನಿರ್ಧರಿಸುತ್ತಾರೆ. ಇಲ್ಲಿಂದಲೇ ಶಿವಸ್ವಾಮಿಯವರ ಸಮಸ್ಯೆಗಳು ಆರಂಭವಾಗುತ್ತವೆ. ಹಣದ ವಿಷಯದಲ್ಲಂತೂ ಲಖಾನಿ ಬಿಲ್ಡರ್ಸಿನವರದು ತೀರದ ದಾಹ. ಮುಕ್ಕಾಲು ಪಾಲು ಹಣ ಕಟ್ಟಿದರೂ ಮನೆಗಳ ಕೆಲಸ ಅರ್ಧದಷ್ಟೂ ಮುಗಿದಿಲ್ಲ. ಅದಕ್ಕೆ ಇದಕ್ಕೆ ಎಂದು ಹಣವಸೂಲು ಮಾಡುತ್ತಲೇ ಇದ್ದಾರೆ. ಮನೆಯ ಕೆಲಸ ಪೂರ್ಣವಾಗಲು ಎಂಟು ಲಕ್ಷ ಕಟ್ಟಲೇ ಬೇಕೆಂಬ ಷರತ್ತು ಶಿವಸ್ವಾಮಿಯರನ್ನು ವಿಚಲಿತ ಗೊಳಿಸುತ್ತದೆ.ಇಷ್ಟುವರ್ಷಗಳ ಕಾಲ ಸಂಪಾದಿಸಿದ ಹಣ, ಉಳಿತಾಯದ ಹಣ ಎಲ್ಲವೂ ಮಕ್ಕಳ ವಿದ್ಯಾಭ್ಯಾಸ, ಮಗಳ ಮದುವೆ ಎಂದು ಖರ್ಚಾಗಿದೆ. ಉಳಿದ ಅಲ್ಪಸ್ವಲ್ಪಹಣದಲ್ಲಂತೂ ಮನೆಯ ಕೆಲಸ ಪೂರ್ಣಗೊಳಿಸುವುದು ಅಸಾಧ್ಯ.

ಸ್ವಂತ ಮನೆ ಮಾಡಿಕೊಳ್ಳುವುದಕ್ಕೋಸ್ಕರ ಎಂಟು ಲಕ್ಷ ಹೊಂದಿಸುವ ಉದ್ದೇಶದಿಂದ ಶಿವಸ್ವಾಮಿಯವರು ತಮ್ಮ ಅರವತ್ತರೆಡನೆಯ ವಯಸ್ಸಿನಲ್ಲಿ ಡಿ.ಟಿ.ಗ್ರೂಪ್ ಕಂಪನಿಯ ಎಚ್.ಆರ್.ಮ್ಯಾನೇಜರ್ ಸಂದರ್ಶನಕ್ಕೆ ಹಾಜರಾಗಿ ಅವಮಾನಿತರಾಗ ಬೇಕಾಗುತ್ತದೆ. ಸಂದರ್ಶಕರಾದ  ರವಿ ಥಕ್ಕರ್, ಪ್ರಭು ಮತ್ತು ಶ್ಯಾಮಲರಿಗೆ  ಶಿವಸ್ವಾಮಿಯವರ  ವೃತ್ತಿ ಜೀವನದ ಪರಿಣತಿಯಾಗಲೀ, ಅನುಭವವಾಗಲೀ ಬೇಕಾಗಿಲ್ಲ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಕೋನದಿಂದ ನೋಡುತ್ತ, ಲಾಭ-ನಷ್ಟಗಳ ಲೆಕ್ಕಾಚಾರದಲ್ಲೇ ಮುಳುಗಿರುವ ಅವರಿಗೆ ಶಿವಸ್ವಾಮಿಯಂತಹವರು ಬೇಕಾಗಿಲ್ಲ. ಶಿವಸ್ವಾಮಿಯವರ ಪರಿಣತಿ ಮತ್ತು ಅನುಭವ ಸಂದರ್ಶಕರಿಗೆ ಹಳೆಯ ಕಾಲದ ವೇದಾಂತದಂತೆ ಕಾಣುವುದು ವಿಪರ್ಯಾಸ.

ರವಿ, ಪ್ರಭು ಮತ್ತು ಶ್ಯಾಮಲರಿಂದ ತಿರಸ್ಕೃತರಾದರೂ ಕಂಪನಿಯ ಮಾಲೀಕರಾದ ಧಾವಲ್ಥಕ್ಕರ್ ಮಾತ್ರ ಶಿವಸ್ವಾಮಿಯ ಪರಿಣತಿ ಮತ್ತು ಅನುಭವವನ್ನು ಗುರುತಿಸಿ ಅವರಿಗೆ ಅದಕ್ಕಿಂತ ದೊಡ್ಡ ಹುದ್ದೆ ನೀಡುತ್ತಾರೆ. ಧಾವಲರೊಂದಿಗಿನ ಆತ್ಮೀಯ ಸಂದರ್ಶನ ಶಿವಸ್ವಾಮಿಯವರಲ್ಲಿ ತಾನಿಲ್ಲಿ ಕೆಲಸ ಮಾಡಬಲ್ಲೆನೆಂಬ ಆತ್ಮ ವಿಶ್ವಾಸ ಮೂಡಿಸುತ್ತದೆ.

ಆದರೆ ರವಿ, ಪ್ರಭು ಮತ್ತು ಶ್ಯಾಮಲರಿಗೆ ಮಾತ್ರ ಶಿವಸ್ವಾಮಿಯವರ ನೇಮಕಾತಿ ತಮ್ಮದೇನೂ ನಡೆಯದಂತೆ ನೋಡಿಕೊಳ್ಳಲು ಧಾವಲರು ಮಾಡಿದ ವ್ಯವಸ್ಥಿತ ಸಂಚಿನಂತೆ ಕಾಣುತ್ತದೆ. ಶಿವಸ್ವಾಮಿಯವರ ಆಗಮನ ರವಿಯ ಗುಂಪಿನವರಲ್ಲಿ ಅಸಹನೆ ಹೆಚ್ಚಾಗುವಂತೆ ಮಾಡುತ್ತದೆ.

ವಾಸ್ತವವಾಗಿ  ಡಿ.ಟಿ.ಗ್ರೂಪ್ಸ್  ಕಂಪನಿಯಲ್ಲಿ  ಅನೇಕ ಆಂತರಿಕ ಸಮಸ್ಯೆಗಳಿವೆ. ಶೂನ್ಯದಿಂದ ಆರಂಭಿಸಿ ಕೋಟ್ಯಂತರ ರೂಪಾಯಿ ಮೌಲ್ಯದ  ಬೃಹತ್ ವ್ಯಾಪಾರಿ ಸಂಸ್ಥೆಯಾಗಿ ಬೆಳೆಸಿದ ಧಾವಲ್ ಥಕ್ಕರರಿಗೆ ಸಹಜವಾಗಿಯೇ ತಮ್ಮ ಕಂಪನಿಯ ಕುರಿತು ಅಪಾರ ಮೋಹವಿದೆ. ಕಂಪನಿಯ ಪ್ರತಿಯೊಂದು ಕೆಲಸಗಳೂ ತಮ್ಮ ಅಣತಿಯಂತೆಯೇ  ನಡೆಯ ಬೇಕೆಂಬುದು ಅವರ ಇಂಗಿತ. ತಾನು ಮಾಡುತ್ತಿರುವುದೆಲ್ಲ ಕಂಪನಿಯ ಒಳಿತಿಗಾಗಿ, ತಾನಿಲ್ಲದಿದ್ದರೆ ಕಂಪನಿಯ ಸ್ಥಿತಿ ಏನಾಗುವುದೋ? ಎಂಬ ಅವರ ಮನಸ್ಥಿತಿ ಮಗ ರವಿ ಮತ್ತು ಸೊಸೆ ಧೃತಿಗೆ ಸ್ವಲ್ಪವೂ ಹಿಡಿಸುತ್ತಿಲ್ಲ. ಮಗ ಮತ್ತು ಸೊಸೆಗೆ ಬೇಕಾಗಿರುವುದು ಧಾವಲರ ನಿವೃತ್ತಿ.

ಡಿ.ಟಿ.ಗ್ರೂಪ್ಸ್ ಕಂಪನಿಯ ಶಾಖೆಯಾದ ಸಾಫ್ಟವೇರ್ ಕಂಪನಿಯಲ್ಲಿ ಮೇಲುಗೈ ಸಾಧಿಸಲು ತಂದೆ-ಮಗನ ಮುಸುಕಿನ ಗುದ್ದಾಟ ನಡೆದೇ ಇದೆ. ಇಂತಹ ಸಂದರ್ಭದಲ್ಲಿ ಕಂಪನಿ  ಪ್ರವೇಶಿಸುವ ಶಿವಸ್ವಾಮಿಯವರಿಗೆ ಈ ಕೌಟುಂಬಿಕ ವ್ಯವಹಾರ ಮತ್ತು ರಾಜಕೀಯ ಜುಗುಪ್ಸೆ ಹುಟ್ಟಿಸಿದರೂ ಎಂಟು ಲಕ್ಷ ಹೊಂದಿಸಲೇ ಬೇಕಾದ ಅನಿವಾರ್ಯತೆ ಮತ್ತು ಧಾವಲರ ಸ್ನೇಹ ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತದೆ. ಬಿ.ಇ.ಎಲ್.ನಲ್ಲಿನ ಮೂವತ್ತೈದು ವರ್ಷಗಳ ಅವರ ಅನುಭವ ಇಲ್ಲಿ ನೆರವಿಗೆ ಬಂದು ಎರಡೂ ಬಣಗಳ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ.

ವಾಸ್ತವದಲ್ಲಿ ಧಾವಲ್ ಮತ್ತು ರವಿಯ ನಡುವಿನ ಸಂಘರ್ಷ ಹೊಸ ತಲೆಮಾರು ಮತ್ತು ಹಳೆ ತಲೆಮಾರಿನ ನಡುವಿನ ಭಿನ್ನಾಭಿಪ್ರಾಯಗಳಂತೆ ಕಂಡುಬಂದರೂ ಸೊಸೆ ಧೃತಿ ಮತ್ತು ಅವಳ ತಂದೆಯ ಅನಗತ್ಯ ಮೂಗು ತೂರಿಸುವಿಕೆ ಧಾವಲರನ್ನು ಕಂಗಾಲಾಗಿಸಿದೆ. ಕಣ್ಣಿಗೆ ಕಾಣುವುದಷ್ಟೇ ಪ್ರಾಡಕ್ಟು ಇಲ್ಲದಿದ್ದರೆ ಅದು ಪ್ರಾಡಕ್ಟಲ್ಲ ಎಂಬ ಮನೋಭಾವದವರು ಎಂದು ಧಾವಲರನ್ನು ದೂರುವ ರವಿಯ ಗುಂಪಿನವರಿಗೆ ಧಾವಲರ ನಿಜವಾದ ಕಾಳಜಿ ಅರ್ಥವಾಗುತ್ತಿಲ್ಲ. ಅದೇ ರೀತಿ ತಮ್ಮ ಸಾಫ್ಟ್ವೇರ್ ಶಾಖೆ ಅತಿಹೆಚ್ಚು ಲಾಭ ತಂದು ಕೊಡುತ್ತಿದ್ದರೂ ಅದನ್ನು ಪ್ರತ್ಯೇಕ ಸಂಸ್ಥೆಯಾಗಿ  ಬೆಳೆಯಗೊಡಲು ಧಾವಲ್ ಸಿದ್ಧರಿಲ್ಲ. ಇಲ್ಲಿ ಎರಡೂ ಬಣದವರಿಗೆ ತಮ್ಮ ಹಠವೇ ಮುಖ್ಯ.

ಶಿವಸ್ವಾಮಿಯವರ  ಸ್ನೇಹ  ಧಾವಲರಲ್ಲಿ ಹೊಸ ಉತ್ಸಾಹ ತರುವುದರೊಂದಿಗೆ ತಮ್ಮ ಮನಸ್ಸಿನಲ್ಲಿರುವ ಅನೇಕ ಹಳವಂಡಗಳನ್ನು ಮರುಪರಿಶೀಲಿಸುವಂತೆ ಮಾಡುತ್ತದೆ. ಶಿವಸ್ವಾಮಿಯವರೊಂದಿಗೆ ಮಾಡುವ ಧರ್ಮಸ್ಥಳ ಯಾತ್ರೆ ಧಾವಲರಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಕೊನೆಗೂ ಧಾವಲರು ಡಿ.ಟಿ.ಗ್ರೂಪ್ಸ್ ಕಂಪನಿಯಿಂದ ನಿವೃತ್ತರಾಗಿ, ಮಕ್ಕಳಿಗೆ ಅಧಿಕಾರ ಹಸ್ತಾಂತರಿಸಲು ನಿರ್ಧರಿಸುವುದು ಗಮನಾರ್ಹ.

ಶಿವಸ್ವಾಮಿಯವರು ಹಲವು ಬಗೆಯಲ್ಲಿ ಧಾವಲರಿಗೆ ನೆರವಾದರೂ ತಮ್ಮದೇ ಆದ ಕೆಲವು ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗಿಲ್ಲ. ಲಖಾನಿ  ಬಿಲ್ಡರ್ಸಿನವರ ಅನೂಪ್ ಗಾರ್ಡೇನಿಯಾದ ಮನೆಯ ಸಮಸ್ಯೆ ಮುಗಿಯುವಂತೆ ಕಾಣುತ್ತಿಲ್ಲ. ಹೆಂಡತಿ ರೇವತಿ, ಮಗಳು ಸಂಜನಾ ಮತ್ತು ಮಗ ತೇಜಸ್ ಅಮೇರಿಕದಲ್ಲಿದ್ದಾರೆ. ಇಲ್ಲಿ ಪ್ಲಾಟು ಕೊಂಡ ಓನರುಗಳು ಓನರ್ಸ್ ಅಸೋಸಿಯೇಷನ್ ಹೆಸರಲ್ಲಿ ಎರಡು ಗುಂಪುಗಳಾಗಿ ಕಾದಾಡುತ್ತಿದ್ದಾರೆ. ಇನ್ನು ಲಖಾನಿ ಬಿಲ್ಡರ್ಸಿನವರ ಜೊತೆಗಿನ ಹೋರಾಟ ಯಾವುದೇ ತಾರ್ಕಿಕ ಅಂತ್ಯಕ್ಕೆ ಬರುತ್ತಿಲ್ಲ. ಹೆಂಡತಿ, ಮಕ್ಕಳು ಅಮೇರಿಕಕ್ಕೆ ಬರಲು ಒತ್ತಾಯಿಸಿದರೂ ಹೊಸದಾಗಿ ಸೇರಿದ ಕೆಲಸ ಬಿಟ್ಟು ಹೋಗಲು ಶಿವಸ್ವಾಮಿಯವರಿಗೆ ಮನಸ್ಸಿಲ್ಲ.

ಧರ್ಮಸ್ಥಳ ಯಾತ್ರೆಯ ನಂತರ ಧಾವಲರು ಶಿವಸ್ವಾಮಿಯವರ ಮನೆಯ ಸಮಸ್ಯೆ ಬಗೆಹರಿಸಿ, ಅವರನ್ನು ಮಗಳ ಬಳಿ ಹೋಗುವಂತೆ ಒತ್ತಾಯಿಸುತ್ತಾರೆ. ಶಿವಸ್ವಾಮಿಯಂತಹ ಮಧ್ಯಮವರ್ಗದವರಿಗೆ ತುಂಬ ಜಟಿಲವಾಗಿದ್ದ ಲಖಾನಿ ಬಿಲ್ಡರ್ಸಿನವರ ಮನೆಯ ಸಮಸ್ಯೆಯನ್ನು ಧಾವಲರು ಚಿಟಿಕೆ ಹೊಡೆದಂತೆ ಪರಿಹರಿಸಿ ಬಿಡುತ್ತಾರೆ. ಶಿವಸ್ವಾಮಿ ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಘಟನೆಗಳು ಜರುಗಿ ಅವರಿಗೆ ಇನ್ನಷ್ಟು ದೊಡ್ಡ  ಹಾಗೂ ವ್ಯವಸ್ಥಿತ ಪ್ಲಾಟು ದೊರೆಯುವಂತಾಗುತ್ತದೆ. ಇದನ್ನು ಸ್ವೀಕರಿಸಲೋ? ಬೇಡವೋ? ಎಂಬ ದ್ವಂದ್ವದಲ್ಲೇ ಕಾದಂಬರಿ ಮುಗಿಯುತ್ತದೆ.

ಧಾವಲರು ಲಖಾನಿ  ಬಿಲ್ಡರ್ಸಿನವರ ಮನೆಯ ವಿಚಾರದಲ್ಲಿ ಶಿವಸ್ವಾಮಿಯವರಿಗೆ ಸ್ನೇಹದಿಂದಲೇ ಸಹಾಯ ಮಾಡಿದರೂ ಸಹ ಶಿವಸ್ವಾಮಿಯವರಿಗೆ ಅದು ತಮ್ಮ ತಲೆಗೆ ಕಟ್ಟಿದ ಬೆಲೆಯೇ? ಎಂಬ ಸಂಶಯ ಮೂಡಿಸುವುದು ಗಮನಾರ್ಹ. ಗುಜರಾತಿ ವ್ಯಾಪಾರಿಗಳಾದ ಧಾವಲರ ಬದುಕಿನಲ್ಲಿ ವೈಯಕ್ತಿಕ ಜೀವನ ಮತ್ತು ವ್ಯಾಪಾರ ಎರಡೂ ಇನ್ನಿಲ್ಲದಂತೆ ಬೆರೆತು ಹೋಗಿವೆ. ಅಂತಹವರು ಏನೇ ಮಾಡಿದರೂ ಅದರಲ್ಲಿ ವ್ಯಾವಹರಿಕತೆ ಕಾಣಿಸುವುದು ಸಹಜ.

ಶಿವಸ್ವಾಮಿಯವರ ಪ್ರಪಂಚವೇ ಬೇರೆ. ತಾವು, ಹೆಂಡತಿ ರೇವತಿ, ಮಗ ತೇಜಸ್ ಮತ್ತು ಮಗಳು ಸಂಜನಾಳಿರುವ ಪುಟ್ಟ ಸುಖೀ ಕುಟುಂಬ. ಈ ಪುಟ್ಟ ಕುಟುಂಬದ ನಾಲ್ವರಿಗಷ್ಟೇ ತಿಳಿದ ಭಯಾನಕ ರಹಸ್ಯವೊಂದಿದೆ. ಹದಿಹರೆಯದ ಸಂಜನಾ ದುರುಳರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಆ ದುರ್ದಿನವನ್ನು ಅವರಾರೂ ಮರೆಯಲು ಸಾಧ್ಯವೇ ಇಲ್ಲ. ಶಿವಸ್ವಾಮಿಯವರ ಎದೆಯಲ್ಲಿ ಅದೊಂದು ಆರದ ಗಾಯವಾಗುಳಿದಿದೆ. ಈ ಘಟನೆಯ ನಂತರ ಮಗಳ ಕುರಿತು ಚಿಂತಿಸುವಾಗ ಅವರಲ್ಲಿ ಇನ್ನಿಲ್ಲದಂತಹ ಮಾರ್ದವತೆ ಕಾಣುತ್ತದೆ.

ಮೇಲ್ನೋಟಕ್ಕೆ “ಒಂದೊಂದು ತಲೆಗೂ ಒಂದೊಂದು ಬೆಲೆ” ಕಾದಂಬರಿ ಶಿವಸ್ವಾಮಿಯವರ ಕಥೆಯಂತೆ ಕಂಡರೂ ಧಾವಲರ ಪಾತ್ರವೂ ಸಹ ಅಷ್ಟೇ ಸಮತೂಕದಿಂದ ಕೂಡಿದೆ. ಕಾರ್ಪೋರೇಟ್  ಜಗತ್ತಿನ ಒಳಸುಳಿಗಳು, ಲಾಭವೇ ಮುಖ್ಯವಾಗಿ ನಡೆಯುವ ಸ್ಪರ್ಧೆ ಮತ್ತು ವ್ಯಾಪಾರಿ ಕುಟುಂಬಗಳ ರಾಜಕೀಯ ತುಂಬ ಚೆನ್ನಾಗಿ ಮೂಡಿಬಂದಿದೆ.

ಈ ಕಾದಂಬರಿಯ ಇನ್ನೊಂದು ವಿಶೇಷವೆಂದರೆ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಒಳ್ಳೆಯ ಉದಾಹರಣೆಯಂತಿರುವ ಲಖಾನಿ ಬಿಲ್ಡರ್ಸಿನವರ ಅನೂಪ್ ಗಾರ್ಡೇನಿಯಾದ ಮನೆಯ ಸಮಸ್ಯೆ. ಲಖಾನಿ  ಬಿಲ್ಡರ್ಸ ಕಂಪನಿಯಂತಹ ನೂರಾರು ಕಂಪನಿಗಳು ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆ ಮಾಡಿಕೊಳ್ಳುವ ಕನಸು ಕಂಡ ಸಾವಿರಾರು ಜನ ಮಧ್ಯಮವರ್ಗದ ಅಮಾಯಕರನ್ನು ಯಾವ ರೀತಿ ಶೋಷಿಸುತ್ತಿದ್ದಾರೆ ಎಂಬುದನ್ನು ದತ್ತಾತ್ರಿ ತುಂಬ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

ದತ್ತಾತ್ರಿಯವರು “ಒಂದೊಂದು ತಲೆಗೂ ಒಂದೊಂದು ಬೆಲೆ” ಕಾದಂಬರಿಯಲ್ಲಿ  ಸ್ಟ್ಯಾಂಡರ್ಡ್ ಕನ್ನಡವನ್ನೇ ಬಳಸಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ನಡೆಯುವ ಕಥೆಯಾದ್ದರಿಂದ ಅಲ್ಲಲ್ಲಿ ಇಂಗ್ಲೀಷ್ ಪದಗಳನ್ನು ಉಪಯೋಗಿಸಿದ್ದಾರೆ. ಖಂಡಿತವಾಗಿಯೂ ಇದೊಂದು ದೋಷವಲ್ಲ. ಸಮಕಾಲೀನ ನಗರಜೀವನದ ಚಿತ್ರಣ ಕೊಡುವಾಗ ಇಂತಹ ಪ್ರಚಲಿತ ಭಾಷೆಯ ಬಳಕೆ ಅನಿವಾರ್ಯ.

ದತ್ತಾತ್ತ್ರಿಯವರ ಕಾದಂಬರಿಯನ್ನು ಓದುವಾಗ ಕನ್ನಡದ ಖ್ಯಾತ ಕಾದಂಬರಿಕಾರರಾದ ವ್ಯಾಸರಾಯ ಬಲ್ಲಾಳರು ನೆನಪಾಗುತ್ತಾರೆ. ಧಾವಲ್ ಥಕ್ಕರರ ಐಷಾರಾಮಿ ಆಫೀಸಿನ ಬಣ್ಣದ ಗಾಜು ಕೂಡಿಸಿದ ಬಹುದೊಡ್ಡ ಕಿಟಕಿಯಿಂದ ಕಾಣುವ ಪಕ್ಕದ ರಸ್ತೆಯ ಬಸ್ಟ್ಯಾಂಡಿನಲ್ಲಿ ಕಳೆದೊಂದು ಗಂಟೆಯಿಂದ ಬಸ್ಸಿಗಾಗಿ  ಕಾಯುತ್ತಿರುವ ತಾಯಿ-ಮಗಳು ಧಾವಲರಲ್ಲಿ ಚಡಪಡಿಕೆ ಉಂಟು ಮಾಡುತ್ತಾರೆ. ಸ್ವಲ್ಪ ಸಮಯದ ನಂತರ ಆ ಬಸ್ಟ್ಯಾಂಡಿನಲ್ಲಿ ತಾಯಿ-ಮಗಳು ಕಾಣದಾದಾಗ ಧಾವಲರು ಆ ತಾಯಿ-ಮಗಳಿಗೆ ಬಸ್ಸು ಸಿಕ್ಕಿತೆಂದು  ಸಂಭ್ರಮಿಸುತ್ತಾರೆ. ಅದೇ ರೀತಿ ಶಿವಸ್ವಾಮಿಯವರ ಮಗಳ ದುರಂತದ ಬಗೆಗೆ ತಿಳಿಯ ಬಯಸುವ ಧಾವಲರು ಶಿವಸ್ವಾಮಿಯವರು ಅದನ್ನು ಹೇಳದಿದ್ದರೂ ಅರ್ಥ ಮಾಡಿಕೊಳ್ಳುತ್ತಾರೆ. ಮುಂದೆ ಧರ್ಮಸ್ಥಳದಲ್ಲಿ ಧಾವಲರು ಶಿವಸ್ವಾಮಿಯವರ ಜೊತೆಗೂಡಿ ತಾವೂ ಅವರ ಮಗಳಿಗೋಸ್ಕರ ಪ್ರಾರ್ಥಿಸುತ್ತಾರೆ. ದತ್ತಾತ್ರಿ ಇಂತಹ ಸಣ್ಣ ಸಣ್ಣ ಆದರೂ ಓದುಗರ ಮೇಲೆ ಪ್ರಭಾವ ಬೀರಬಲ್ಲ ಸಂಗತಿಗಳನ್ನು ಕಾದಂಬರಿಯಲ್ಲಿ ಚೆನ್ನಾಗಿ ತಂದಿದ್ದಾರೆ. ಇಂತಹ ಭಾವಸೂಕ್ಷ್ಮಗಳು ಒಬ್ಬ ಕಾದಂಬರಿಕಾರನಲ್ಲಿ ಅಗತ್ಯವಾಗಿಯೂ ಇರಬೇಕಾದವು.

ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅನೇಕ ಜನ ಲೇಖಕರು ಕಾದಂಬರಿ ಬರೆಯುತ್ತಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಕಾದಂಬರಿಗಳೂ ಬರುತ್ತಿವೆ. ಆದರೆ ಹೀಗೆ ಬರುತ್ತಿರುವ ಕಾದಂಬರಿಗಳಲ್ಲಿ ಕಾಳೆಷ್ಟು? ಜೊಳ್ಳೆಷ್ಟು? ಎಂಬ ಪ್ರಶ್ನೆಗೆ ಉತ್ತರ ಪ್ರಾಜ್ಞರಾದ ಓದುಗ ಮಹಾಶಯರಿಗೆ ಗೊತ್ತೇ ಇದೆ. ಸದ್ಯ ಕನ್ನಡ ಕಾದಂಬರಿ ಪ್ರಕಾರದಲ್ಲಿ ಒಳ್ಳೆಯ ಕೃತಿಗಳನ್ನು ಕೊಡುತ್ತ ಮುಂದೆ ಬಹುದೂರ ಸಾಗಬಲ್ಲರೆಂಬ ಭರವಸೆ ಮೂಡಿಸಿರುವ ಕೆಲವೇ ಕೆಲವು ಲೇಖಕರಿದ್ದಾರೆ. ಅಂತಹ ಭರವಸೆಯ ಲೇಖಕರಲ್ಲಿ ಮುಂಚೂಣಿಯಲ್ಲಿರುವವರು ಎಂ.ಆರ್.ದತ್ತಾತ್ರಿ. “ಒಂದೊಂದು ತಲೆಗೂ ಒಂದೊಂದು ಬೆಲೆ” ಕಾದಂಬರಿಯನ್ನು ಓದಿದ ನಂತರ ಕಾದಂಬರಿಕಾರ ದತ್ತಾತ್ರಿಯವರ ಕುರಿತಾಗಿರುವ ಇಂತಹ ಭರವಸೆ ಇನ್ನಷ್ಟು ಹೆಚ್ಚಾಗುತ್ತದೆ. ದತ್ತಾತ್ರಿಯವರಿಂದ ಇಂತಹ ಇನ್ನಷ್ಟು ಒಳ್ಳೆಯ  ಕಾದಂಬರಿಗಳು ಹೊರಬರಲೆಂದು ನಾನಂತೂ ಅಪೇಕ್ಷಿಸುತ್ತೇನೆ.

********

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ದತ್ತಾತ್ರಿ ಅವರ ‘ ಒಂದೊಂದು ತಲೆಗೂ ಒಂದೊಂದು ಬೆಲೆ’”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter