1
ಮಧ್ಯಾಹ್ನದ ಬಸ್ ಹತ್ತಿ ತೋರಣಕಟ್ಟೆಯಲ್ಲಿಳಿದಾಗ ಹೊತ್ತು ಮೀರಿತ್ತು. ಕಾವೇರಿ ಬಸ್ಸಿನಿಂದಿಳಿದು ಸುತ್ತಲೂ ನೋಡಿದಳು. ಗಂಡಸರೆಲ್ಲರೂ ಇಳಿದಾಯಿತು. ಆದರೆ ನಂಜುಂಡನಿಲ್ಲ. ಎಲ್ಲಿ ಹೋಗಿರಬಹುದು? ಆಚೀಚೆ ನೋಡುತ್ತಿದ್ದಂತೆ ಆತನು ಹತ್ತಡಿ ದೂರದ ರಸ್ತೆಯುದ್ದಕ್ಕೂ ದಾಪುಗಾಲಿಡುತ್ತಾ ಹೋಗುತ್ತ್ತಿರುವುದು ಕಾಣಿಸಿತು. ಎಲ್ಲರಿಗಿಂತಲೂ ಮೊದಲೇ ಬಸ್ಸಿನಿಂದಿಳಿದವರು ನನ್ನನ್ನೇಕೆ ಮರೆತರೋ? ಎಂದೆನಿಸಿ ಮನಸ್ಸು ಮೂಕವಾಯಿತು. ಅಬ್ಬ! ಅವರ ನಡಿಗೆಯೇ! ಕೆಸರುಕೊಚ್ಚೆ, ರಾಡಿನೀರೆಲ್ಲ ಲೆಕ್ಕವೇ ಅಲ್ಲ. ಎಲ್ಲವನ್ನೂ ಮೆಟ್ಟಿ ತಚಪಚ ಮಾಡುತ್ತಾ ನಡೆಯೋ ಗೌಜಿ ನೋಡಿದ್ರೆ ಮನೆವರೆಗೂ ನಡ್ಕೊಂಡೇ ಹೋಗ್ತಾರೇನೋ. ಕಾವೇರಿ ತನ್ನ ಸೀರೆಯ ಅಂಚನ್ನು ಕೊಂಚವೇ ಮೇಲೆತ್ತಿ ಕೊಳಚೆಯನ್ನು ದಾಟಿ ಬೇಗ ಬೇಗನೆ ನಡೆಯುತ್ತಾ ನಂಜುಂಡನನ್ನು ಸೇರಿಕೊಂಡಳು. ಜೋಡುಮಾರ್ಗ ತಲುಪಿದಾಗ ಅಲ್ಲೇ ಒಂದು ಕ್ಷಣ ನಿಂತ ನಂಜುಂಡ “ಎಹ್! ಎಂತ ಉರಿಸೆಕೆಯಪ್ಪಾ ಹಾಳಾದ್ದು!” ಎಂದು ಗೊಣಗುತ್ತಾ ಕಾವೇರಿಯತ್ತ ತಿರುಗಿದ. ದೂರದಿಂದ ಮೊಡವೆಗಳಂತೆ ತೋರುತ್ತಿದ್ದ ಮುಖದ ತುಂಬಾ ಸಿಡುಬಿನ ಕಲೆಗಳು. ಮುಂಭಾಗ ತುಸು ಬೋಳಾಗಿರುವ ತಲೆಯ ಅಲ್ಲಲ್ಲಿ ಇಣುಕುವ ಬಿಳಿಕೂದಲುಗಳು. ಕತ್ತಿನ ಸುತ್ತ ಕಟ್ಟಿನ ಹಾವಿನಂತೆ ಸುತ್ತಿಕೊಂಡ ಕಪ್ಪು ದಾರದ ಮಾಲೆ. ಶರ್ಟಿನ ಮೊದಲ ಎರಡು ಗುಂಡಿಗಳನ್ನು ಬಿಚ್ಚಿದಾಗ ತೆರೆದುಕೊಂಡ ಎದೆಯ ಮೇಲೆ ಬಿಳಿ, ಕಂದು ಮತ್ತು ಕಪ್ಪು ಬಣ್ಣದ ರೋಮಗಳು.
“ಇಷ್ಟೊತ್ತಿಗೆ ಬರ್ಬೇಕಿತ್ತಲ್ಲ ಕಾರು”
ಬಂಡೆಗಲ್ಲಿಗೆ ಗೆರಟೆ ಒರೆಸಿದಂಥ ಸದ್ದು. ಸ್ವಲ್ಪ ಹೊತ್ತಿನಲ್ಲೇ ಕಾರು ಅವರೆದುರಿನಿಂದ ಹಾದುಹೋದಾಗ ನಂಜುಂಡ ಬಲಗೈಯೆತ್ತಿ ‘ಹೋಯ್’ ಎಂದು ಅಬ್ಬರಿಸಿದ. ಕಾರು ಗಕ್ಕನೆ ನಿಂತಿತು. ಕೈ ಬೀಸಿ ಕರೆದಾಗ ವಿಧೇಯವಾಗಿ ಹಿಂದಕ್ಕೆ ಬಂತು. “ಎಂಜಿನು ಕೆಟ್ಟೋಗಿದೆ ಅಣ್ಣಾ. ರಿಪೇರಿಗೆ ಹೋಗ್ಬೇಕು” ಎನ್ನತೊಡಗಿದ ಡ್ರೈವರ್‍ನ ಮಾತನ್ನು ನಂಜುಂಡನ ನೀಳ ಫೂತ್ಕಾರವು ಕತ್ತರಿಸಿ ಹಾಕಿತು. “ನಮ್ಮನ್ನು ಮನೇಲಿ ಬಿಟ್ಟ ನಂತ್ರ ಸಾಕು ನಿಮ್ಮ ಎಂಜಿನ್ ರಿಪೇರಿ” ಎಂದು ನಂಜುಂಡ ಎದುರುಗಡೆಯಿಂದ ಹತ್ತಿ ಕುಳಿತವನೇ ರಪ್ಪನೆ ಬಾಗಿಲು ಮುಚ್ಚಿಬಿಟ್ಟ. ವಿಷಯವೇನೆಂದರಿಯದೆ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ನಿಂತಿದ್ದ ಕಾವೇರಿಯ ಕಡೆಗೆ ಗುರಾಯಿಸಿ ನೋಡುತ್ತಾ ಕುಳಿತಲ್ಲಿಂದಲೇ ಹಿಂದುಗಡೆಯ ಬಾಗಿಲನ್ನು ತೆರೆದುಕೊಟ್ಟು ‘ಹ್‍ಮ್’ ಎಂದ. ಅವಳು ಬಗ್ಗಿ ಒಳಹೊಕ್ಕು ಕುಳಿತಳು. ಚಲಿಸುವ ಕಾರಿನ ವೇಗಕ್ಕೆ ತಕ್ಕ ಹಾಗೆ ಕಿಟಿಕಿಯ ಮೂಲಕ ಗಾಳಿ ಬೀಸುತ್ತಿದಂತೆ ಅವಳ ಕಣ್ಣಿಗೆ ಜೊಂಪು ಹತ್ತತೊಡಗಿತು.
ನನ್ನ ಬಾಳು ಗೋಜಲು ಗೋಜಲಾದ ಬಲೆ. ಮುಟ್ಟಿದ್ದು ಕಲ್ಲು. ಮೆಟ್ಟಿದ್ದು ಮುಳ್ಳು. ಅಪ್ಪ-ಅಮ್ಮ ಬದುಕಿರ್ತಿದ್ರೆ ನನ್ನ ಬಾಳು ಹೀಗಿರುತ್ತಿತ್ತಾ? ಹೋಗ್ಲಿ. ಚಿಕ್ಕಪ್ಪ- ಚಿಕ್ಕಮ್ಮನಿಗಾದ್ರೂ ಮಗಳಾಗಿರುತ್ತಿದ್ರೆ? ಅವರ ಹಂಗಿನೂಟ ಉಣ್ತಿದ್ದ ನಮಗೆ ಹೊಸಬಟ್ಟೆಗಳ ಕೊರತೆಯಿದ್ರೂ ರಂಗು ರಂಗಿನ ಕನಸು ಕಾಣಲು ಯಾವುದೇ ಕೊರತೆ ಇರ್ಲಿಲ್ಲ. ಆದ್ರೆ ನೋವಿನ ತಡೆಯನ್ನು ಭೇದಿಸಿ ಹರಿಯುತ್ತಿದ್ದ ಕನಸುಗಳೇಕೆ ಯಾವತ್ತೂ ಕತ್ತಲ ಹಾದಿಯಲ್ಲಿ ನಿಂತುಬಿಡ್ತಾ ಇದ್ದವು?
ಇದ್ದಕ್ಕಿದಂತೆ ಮುಗ್ಗರಿಸಿದಂತಾಗಿ ಅಷ್ಟೇ ರಭಸದಿಂದ ಹಿಂದಿನ ಸೀಟಿಗೆ ಅಪ್ಪಳಿಸಿದಾಗ ಕಾವೇರಿಯ ಯೋಚನೆ ಚದುರಿ ಚಲ್ಲಾಪಿಲ್ಲಿಯಾಯಿತು. ಕಣ್ಣು ಕಣ್ಣು ಬಿಟ್ಟು ನೋಡುತ್ತಾಳೆ- ನೇರ ಮುಂಭಾಗದಲ್ಲಿ ನಿಂತಿದೆ ಮನೆ. ಸಾಮಾನ್ಯ ದೊಡ್ಡದಾಗಿರುವ, ಹಂಚು ಹೊದೆಸಿದ ಮಾಳಿಗೆ ಮನೆ. ಹಿಂದೆ ಬಾಲಮಂಗಳದಲ್ಲಿ ಓದಿದ ಕತೆಗಳು ನಿಜವೆಂದು ನಂಬಿಸುವ ಕತ್ತಲೆ ಮೂಲೆ. ಒಳಗೋಡೆಗಳಲ್ಲಿ ಚಿತ್ರ ಕೆತ್ತಿದ ಚಿತ್ತಾರಗಳು. ಮೊದಲ ನೋಟಕ್ಕೇ ಹೆದರಿಕೆ ಹುಟ್ಟಿಸುವಂತೆ ಗೋಡೆಯ ಸುತ್ತಲೂ ನೇತುಹಾಕಿದ ಹುಲಿಚರ್ಮ, ಕಡವೆಯ ಕೊಂಬು ಮತ್ತು ಖಡ್ಗ- ಗುರಾಣಿಗಳು. ರಾತ್ರಿಯ ಊಟವಾದ ಮೇಲೆ, ಚಲಿಸದ ಗಾಳಿಯಲ್ಲಿ ತುಂಬಿದ್ದ ಬೀಡಿಹೊಗೆಯ ಜಾಡು ಹಿಡಿದು ಮಲಗುವ ಕೋಣೆಯತ್ತ ನಡೆದಾಗ ಒಳಗೆ ದಪ್ಪಕಾಲಿನ ಅಗಲ ಮಂಚ. ಕಾವೇರಿ ಒಳಗೆ ಬಂದು ಕದವಿಕ್ಕಿ, ಬಲಗೈಯಲ್ಲಿ ಹಿಡಿದಿದ್ದ ಹಾಲಿನ ಲೋಟವನ್ನು ಅಲ್ಲೇ ಸ್ಟೂಲಿನ ಮೇಲಿಟ್ಟು, ಸೀರೆಯ ಗಂಟನ್ನು ನಾಚುತ್ತಾ ಸಡಿಲಿಸಿ ಹತ್ತಿರ ಬಂದಾಗ ಮಂಚದ ಮೇಲೆ ಗೊರಕೆ ಹೊಡೆಯುತ್ತಿದ್ದ ನಂಜುಂಡ.
ಬೆಳಗ್ಗಿನ ಚಹಾವನ್ನು ಲೋಟಕ್ಕೆ ಸುರಿಯುತ್ತಿದ್ದಂತೆ ನಂಜುಂಡನು ತನ್ನ ಒದ್ದೆ ತಲೆಯನ್ನು ಬೈರಾಸಿನಿಂದ ಒರೆಸುತ್ತಾ ಒಳಗೆ ಬಂದ. ಪಾದಸಪ್ಪಳಕ್ಕೆ ತಕ್ಕಂತೆ ಅಲುಗುತ್ತಿರುವ ಡೊಳ್ಳು ಹೊಟ್ಟೆಯನ್ನು ಕಂಡೂ ಕಾಣಲಿಲ್ಲ ಎಂಬಂತೆ ಕಾವೇರಿ ತಲೆತಗ್ಗಿಸಿ ಚಹಾದ ಲೋಟವನ್ನು ಅವನೆದುರು ಚಾಚಿದಳು. ಆದರೆ ನಂಜುಂಡನು ಅವಳತ್ತ ಕಡೆಗಣ್ಣಿನಿಂದಲೂ ನೋಡದೆ ಸೀದಾ ಒಳಗೆ ಹೋಗಿ ಕಣ್ಣಿಗೆ ಹೊಡೆಯುವ ಯಾವುದೋ ಒಂದು ದಪ್ಪನೆಯ ಶರ್ಟನ್ನು ಧರಿಸಿಕೊಂಡು ಬಂದ. ಆಕೆ ಕೊಟ್ಟ ಚಹಾವನ್ನು ಒಂದೇ ಗುಟುಕಿಗೆ ಕಷಾಯದಂತೆ ಕುಡಿದು ಎಡಗೈಯಿಂದ ಬಾಯಿಯನ್ನು ಒರೆಸುತ್ತಾ ಅಂಗಳವನ್ನು ದಾಟಿದವನು ಅರ್ಧಗಂಟೆ ಕಳೆದರೂ ಪತ್ತೆಯಿಲ್ಲ. ಕಡಲೆಕಾಯಿ ಹಾಕಿ ಮಾಡಿದ ಉಪ್ಪಿಟ್ಟನ್ನು ಮುಚ್ಚಿಟ್ಟು ಕಾದು ಕುಳಿತಲ್ಲೇ ಬಾಕಿ.
2
ತರಗೆಲೆ ಹಾಸಿದ ಕಾಲುದಾರಿಯಲ್ಲಾಗಿ ಕಾವೇರಿ ಹೆಜ್ಜೆಯಿಟ್ಟಳು. ದಾಸವಾಳದ ಗೊಂಚಲು, ಎಕ್ಕದ ಗಿಡ ಮತ್ತು ಕಮ್ಯೂನಿಸ್ಟ್ ಹೊದರುಗಳನ್ನು ನೋಡುತ್ತಾ ಮುಂದೆ ಸಾಗಿದಳು. ಮಣ್ಣಿನ ದಿನ್ನೆಯನ್ನೇರಿ ನಿಂತಾಗ ಬಹಳ ತಗ್ಗಾದ ಮನೆ ಕಾಣಿಸಿತು. ನಾಲ್ದೆಸೆಗೂ ಕೈ ಚಾಚಿದಂತೆ ತೋರುವ ಕಿಟಿಕಿಗಳು ಮತ್ತು ಒಂದೇ ಒಂದು ಬಾಗಿಲು. ಮನೆಯ ಮೆಟ್ಟಿಲು ಹತ್ತುವಾಗ ‘ದಿಗ್’ ಎಂದಿತು ಎದೆ. ಜೋತುಬಿದ್ದ ಚರ್ಮ, ಕಣ್ಣಿನ ಸುತ್ತಲೂ ಅಸಂಖ್ಯಾತ ಗೆರೆಗಳುಳ್ಳ, ತಲೆ ತುಂಬಾ ಬೆಳ್ಳಿಗೂದಲನ್ನು ಹರಡಿಕೊಂಡ ಕೋಲುಮುಖದ ಮುದುಕಿಯೊಬ್ಬಳು ಒದ್ದೆಬಟ್ಟೆಯನ್ನು ಹಿಡಿದುಕೊಂಡು ಜಗಲಿಯನ್ನು ಒರೆಸುತ್ತಾ ತೆವಳುತ್ತಿದ್ದಳು. ಬಂದದ್ದು ತಿಳಿಯಲಿ ಎಂದು ಕಾವೇರಿ ಸಣ್ಣಕ್ಕೆ ಕೆಮ್ಮಿದಳು. ಕತ್ತು ಹೊರಳಿಸಿದ ಮುದುಕಿ ಹಣೆಗಡ್ಡವಾಗಿ ಕೈ ಹಿಡಿದುಕೊಂಡು ನೋಡುತ್ತಾ ಕೇಳಿದಳು “ಹ್ಹ! ನಂಜುಂಡನ ಹೆಣ್ಣಲ್ಲವೋ?”
“ಹೌದು. ನನ್ನನ್ನು ಕಂಡ ಕೂಡ್ಲೇ ಹೇಗೆ ಗುರುತಿಸಿದ್ರಿ ನೀವು? ಓಹ್… ಮದುವೆಗೆ ಬಂದಿದ್ರೇನೋ ಅಲ್ವ?” ಎಂದಳು.
“ಯ್ಯೋಪ್ಪಾ… ನಂಗೆ ನಡೀಲಿಕ್ಕಾಗೂದಿಲ್ಲ ಮಗೂ. ನನ್ನ ಮಗ ಬಂದಿದ್ದ ಮದುವೆಗೆ. ಮದುಮಗ್ಳು ತುಂಬಾ ಚಂದ ಇದ್ದಾಳೆ ಅಂತ ಹೇಳಿದ. ಹಾಗೆ ಗುರ್ತ ಸಿಕ್ಕಿತು ನಿನ್ನನ್ನು” ಎಂದು ಬೊಚ್ಚು ಬಾಯಿ ಬಿಟ್ಟು ನಗತೊಡಗಿದಳು ಮುದುಕಿ. “ಹೌದಾ?!” ಕಾವೇರಿಗೆ ಒಳಗೊಳಗೆ ಹೆಮ್ಮೆಯೆನಿಸಿತು. “ನಿಮ್ಮ ಮಗ ಎಲ್ಲಿದ್ದಾನೆ? ಎಂತ ಮಾಡ್ತಾನೆ? ಎಂದು ಕೇಳುತ್ತಾ ಜಗಲಿ ಮೇಲಿನ ಬೆಂಚಿನ ಮೇಲೆ ಕುಳಿತಳು. “ಈಗ ಇದ್ದ ಇಲ್ಲೆಲ್ಲೋ…ಅದಿರಲಿ. ನೀನಿಲ್ಲಿಗೆ ಬಂದು ಇವತ್ತಿಗೆ ಒಂದು ವಾರ ಕಳೀತು. ಆದರೆ ನೀನು ಇವತ್ತಷ್ಟೇ ಇಲ್ಲಿಗೆ ಬಂದೆ. ಮದುವೆಯಾದ ಮರುದಿನವೇ ನಿಂಗೂ ನಂಜುಂಡನಿಗೂ ಇಲ್ಲಿಗೊಮ್ಮೆ ಬಂದು ಹೋಗಬಹುದಿತ್ತಲ್ಲ” ಹುಸಿಮುನಿಸಿನಲ್ಲೇ ಹೇಳಿದಳು ಮುದುಕಿ.
“ಓಹ್! ಅವರಿಗೆಲ್ಲುಂಟು ಪುರುಸೊತ್ತು? ಬೆಳಗಾದಾಗ ಎದ್ದು ಎಲ್ಲಿಗೋ ಹೋಗ್ತಾರೆ. ರಾತ್ರಿಯಾಗುವಾಗ ಬಂದ್ರೆ ಆಯ್ತು. ಇಲ್ಲದಿದ್ರೆ ಇಲ್ಲ” ಎಂದಳು ಕಾವೇರಿ ಉದಾಸೀನಳಾಗಿ. ಮೂಲೆಯಲ್ಲಿ ಮುದುಡಿದಂತೆ ಕುಳಿತಿದ್ದ ಮುದುಕಿ ಮೆಲ್ಲನೆದ್ದು ಕಾವೇರಿಯ ಬಳಿ ಬಂದು “ನಿನ್ನ ನಂಜುಂಡ ಇದ್ದಾನಲ್ಲ, ಅವ ಭಾರೀ ಜೋರಿನ ಮನುಷ್ಯ. ಅವನಿಗೆ ಎಂತೆಂಥದ್ದೋ ವೈವಾಟುಗಳುಂಟು. ನೀನು ಅವನಲ್ಲಿ ಹೆಚ್ಚೇನೂ ಹೇಳ್ಲಿಕ್ಕೆ, ಕೇಳ್ಲಿಕ್ಕೇನೂ ಹೋಗ್ಬೇಡ. ನಿನ್ನಷ್ಟಕ್ಕೇ ನೀನಿದ್ದುಬಿಡು ಸಾಕು” ಎನ್ನುತ್ತಿದ್ದಂತೆ ಅಸ್ಪಷ್ಟ ಭೀತಿಯೊಂದು ಕಾವೇರಿಯ ಮೈಯನ್ನು ಹೊಕ್ಕು ನಿಧಾನಕ್ಕೆ ಅವಳ ಅಂತರಂಗವನ್ನು ವ್ಯಾಪಿಸತೊಡಗಿತು. ಅವಳ ಮುಖದಲ್ಲಿ ದಟ್ಟವಾಗುತ್ತಿದ್ದ ಸಂಶಯದ ನೆರಳನ್ನು ಕಂಡು ಮುದುಕಿ “ನಿನ್ನತ್ರ ಇದನ್ನು ಹೇಳ್ಬಾರ್ದು ಅಂತ ಭಾವಿಸಿದ್ದೆ. ಆದ್ರೆ ನೀನೆಲ್ಲಾದ್ರೂ ಅವನನ್ನು ಪ್ರಶ್ನಿಸಿ ಬಿಟ್ರೆ ಅಂತ ಹೆದ್ರಿಕೆ ಆಯ್ತು. ಸಣ್ಣ ಸಂಗತಿ ಸಾಕು ಅವನಿಗೆ ಸಿಟ್ಟು ಮಾಡ್ಲಿಕ್ಕೆ. ಕೋಪ ಬಂದ್ರೆ ಅವ ಏನು ಮಾಡಿಯಾನು ಅಂತ ಹೇಳ್ಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಜಾಗ್ರತೆಗೆ ಅಂತ ಹೇಳಿದೆ ಮಗಳೇ. ಇನ್ನು ನೀನೇ ಅವನ ಮನಸ್ಸು ಬದಲಿಸಬೇಕು. ಪ್ರೀತಿಗೊಲಿಯದ ಗಂಡಸರು ಯಾರಿದ್ದಾರೆ ಲೋಕದಲ್ಲಿ?” ಎಂದು ಅವಳ ಮುಖವನ್ನೇ ನೋಡಿದಳು ಮುದುಕಿ. ಕಾವೇರಿ ಮಾತನಾಡಲಿಲ್ಲ. ಶ್ಯೋ ದೇವಾ ಈ ಮನುಷ್ಯನೊಟ್ಟಿಗೆ ಆಯುಷ್ಯಪೂರ್ತಿ ಜೀವನ ನಡೆಸೋದು ಹೇಗೆ? ಎಂಬ ಯೋಚನೆ ಅವಳನ್ನು ಇನ್ನಿಲ್ಲದಂತೆ ಬಿಗಿಯತೊಡಗಿತು. ಗಂಡಿಗೇ ಕೈತುಂಬ ಕೊಡಬೇಕಿದ್ದ ಸಂದರ್ಭದಲ್ಲಿ ಗಂಡೇ ಬಂದು ಇಂತಿಷ್ಟು ಕೊಡ್ತೇನೆ ಎಂದಾಗ ಬೇಡ ಎನ್ನುವಷ್ಟು ಪೆದ್ದನಾಗಿರಲಿಲ್ಲ ನನ್ನ ಚಿಕ್ಕಪ್ಪ. ಅಂತೂ ಅವರ ಹಣದ ಪೆಟ್ಟಿಗೆ ತುಂಬಿತು. ಇದ್ದ ಪ್ರಾರಬ್ಧವೊಂದು ತೊಲಗಿದ ಹಾಗೂ ಆಯ್ತು ಎಂದು ಹಳಿದುಕೊಂಡಳು.
ಕೈಗಳಿಗೆ ಏನೋ ತಣ್ಣಗೆ ತಾಗುತ್ತಿದೆಯಲ್ಲ ಎಂದೆನಿಸಿ ಫಕ್ಕನೆ ಕಣ್ಣು ತೆರೆದಳು ಕಾವೇರಿ. ಕತ್ತಲು ಹೆಪ್ಪುಗಟ್ಟಿತ್ತು. ಮಲಗಿದಲ್ಲಿಂದಲೇ ಮಂಚವನ್ನು ತಡವಿದಾಗ ಪಕ್ಕದಲ್ಲೇ ಕಾಲುಚಾಚಿ ಬಿದ್ದುಕೊಂಡಿದ್ದ ನಂಜುಂಡ. ಇವಳಿಗಿನ್ನೂ ನಿದ್ದೆಯ ಮಂಕು. ಆದರೆ ಅವನ ಬಳಿಯಿಂದ ಗವ್ವೆಂಬ ಮದ್ಯವಾಸನೆ. ಕಾವೇರಿಯ ತಲೆತಿರುಗಿ ವಾಕರಿಕೆ ಬರುವಂತಾಯಿತು. ಬಾಯಿಗೆ ಸೆರಗು ತುರುಕಿ ಗಡದ್ದು ನಿದ್ದೆ ಹೋಗಬಯಸಿದಳು. ಬಿಗಿಯಾಗಿ ಕಣ್ಣು ಮುಚ್ಚಿಕೊಂಡರೂ ನಿದ್ದೆ ಬಾರದು. ಉಗುಳಲೂ ಆಗದು. ನುಂಗಲೂ ಆಗದು.
“ಯಾವನೋ ನಂಗೆ ಹೊಡೀಲಿಕ್ಕೆ ಬರೋನು?”
ಹಠಾತ್ತನೆ ಊರಿಡೀ ಮೊಳಗುವಂತೆ ನಂಜುಂಡನ ಬೊಬ್ಬೆ. ಮತ್ತೆ ಗೊರಕೆ. “ಸುಮ್ಮನೆ ಮಲ್ಕೊಳ್ಳೀ” ಎಂದು ಕಾವೇರಿ ಒಲ್ಲದ ಮನಸ್ಸಿನಿಂದಲೇ ಅವನ ಎದೆಯಲ್ಲಿ ಮುಖ ಹುದುಗಿಸಿದಳು. ಆಗ ಅರೆತೆರೆದ ನಂಜುಂಡನ ತುಟಿಗಳಲ್ಲಿ ಮಂದಹಾಸ.
“ಓ ಪಾರೂ… ನನ್ನ ಕೊಬ್ಬಿನ ಮುದ್ದೇ… ಬಾ ನನ್ನ ಚಿನ್ನ ಬಾ”
ಅವನನ್ನು ಬಿಗಿದ ಕಾವೇರಿಯ ತೋಳುಗಳು ಒಮ್ಮೆಲೆ ಸಡಿಲಗೊಂಡವು. ಗಕ್ಕನೆ ಮೋರೆ ತಿರುಗಿಸಿ ದಿಂಬಿನೊಳಗೆ ಮುಖ ಹುದುಗಿಸಿಕೊಂಡಳು. ಸಂಶಯದ, ಅಸ್ವಸ್ಥತೆಯ ನೆರಳು ಮೈಯನ್ನು ಚಾದರದಂತೆ ಆವರಿಸತೊಡಗಿದರೂ ಅಭ್ಯಾಸಬಲದಿಂದ ರೂಢಿಸಿಕೊಂಡು ಬಂದಿದ್ದ ನಿರಾಳತೆಯನ್ನು ಮನಸ್ಸಿಗೆ ಎಳೆತರಲೆತ್ನಿಸುತ್ತಾ ಸೂರಿನ ಕತ್ತಲೆಗೆ ಕಣ್ಣು ನೆಟ್ಟಳು. ಆದರೆ ಒಳಗಿನಿಂದ ಒತ್ತರಿಸಿ ಬರುತ್ತಿದ್ದ ಸಂಕಟವು ನಿದ್ದೆಯನ್ನು ಹತ್ತಿರ ಸುಳಿಯಗೊಡಲಿಲ್ಲ.
3
ಒಲೆ ಉರಿಸಲು ಕಟ್ಟಿಗೆ ಇಲ್ಲದಿದ್ದುದರಿಂದ ಕಾವೇರಿ ಪಕ್ಕದ ಹಿತ್ತಿಲಿಗೆ ಹೋದಾಗ ಅಲ್ಲೇ ಬಗ್ಗಿ ನಿಂತು ತರಗೆಲೆ ಬಾಚುತ್ತಿದ್ದ ಮುದುಕಿ ಕೇಳಿದಳು “ಏನು? ಹುಲ್ಲಿಗೋ?”
“ಅಲ್ಲ. ಕಟ್ಟಿಗೆಗೆ” ಎಂದು ಅಲ್ಲೇ ಮುರಿದುಬಿದ್ದ ಒಣಕಲು ರೆಂಬೆಗಳನ್ನು ಹೆಕ್ಕಿ ಒಟ್ಟು ಮಾಡುತ್ತಿದ್ದಂತೆ ಮುದುಕಿ ಮಾತನಾಡಲಾರಂಭಿಸಿದಳು.
“ಪಾಪ ನನ್ನ ಮಗ ಗೋಪಾಲ ಅವನಪ್ಪ ಸತ್ತುದನ್ನು ಮನಸ್ಸಿಗೆ ಭಾಳ ಹಚ್ಕೊಂಡಿದ್ದಾನೆ. ಅವರು ಸಾಯೋಕ್ಮುಂಚೆ ನಾನಂತೂ ಮಗೂಗೆ ಹೇಳುವ ಹಾಗೆ ಹೇಳಿದ್ದೆ ‘ನೋಡೀ ಈಗ ನಂಜುಂಡನ ಪಾಲಾಗಿರೋ ಆ ಹೊಲ ನಮಗೆ ಬೇಡ’ ಅಂತ. ಹೊಲ ನಂದು. ನಾನು ಕಾಡು ಕಡ್ದು ಹೇಗೆ ಹೊಲ ಮಾಡಿದೆ ಅಂತ ನಿಂಗೂ ಗೊತ್ತು ಅಂತ ಉಳುಮೆ ಮಾಡಿಯೇ ಬಿಟ್ಟ. ಅದಾದ ಒಂದೇ ವಾರದೊಳಗೆ ಸತ್ತು ಹೋದ. ಸಿಡಿಲು ಬಿದ್ದು ಸತ್ತು ಹೋದ ಅಂತ ಹೇಳ್ತಾರೆ ಜನ.”
ಮುದುಕಿಯ ಮಾತಿನಿಂದ ಕಾವೇರಿಗೆ ಕಿರಿಕಿರಿಯಾಗುತ್ತಿದ್ದರೂ ತೋರಿಸಿಕೊಳ್ಳದೆ “ನಂಗೆ ಸ್ವಲ್ಪ ಅವಸರವುಂಟು” ಎಂದಷ್ಟೇ ಹೇಳಿ ಕಟ್ಟಿಗೆಯನ್ನು ಬಾಳೆಯ ನಾರಿನಿಂದ ಕಟ್ಟಲೂ ಪುರುಸೊತ್ತಿಲ್ಲವೆಂಬಂತೆ ಹಾಗೆಯೇ ಎತ್ತಿಕೊಂಡು ಮನೆಯ ಕಡೆ ನಡೆಯತೊಡಗಿದಳು.
“ನನ್ನ ಗೋಪಾಲ ಇದ್ದಾನಲ್ಲ ನಿನ್ನೆಜಮಾನ್ರ ಬಾಲ. ಬರೇ ಗೋಪಾಲಾಂದ್ರೆ ಯಾರಿಗೂ ಗೊತ್ತಾಗ್ಲಿಕ್ಕಿಲ್ಲ. ಗೋಸುಂಬೆ ಗೋಪಾಲಾಂತ್ಲೇ ಹೇಳ್ಬೇಕೂ” ಎಂದು ಹಿಂದಿನಿಂದ ಕಿರಿಚುತ್ತಲೇ ಇದ್ದಳು ಮುದುಕಿ.
ರಾತ್ರಿಯಾಗಿತ್ತು. ನಡೆಯಲಾರದೆ ನಡೆಯುತ್ತಾ ಬಂದಿದ್ದ ನಂಜುಂಡ. ಅವನು ಆಧರಿಸಿ ಹಿಡಿದುಕೊಂಡಿರುವುದು ಯಾರನ್ನು? ಹೊಸ್ತಿಲಾಚೆಗೆ ಹೋಗದೆ ಬಾಗಿಲ ಚೌಕಟ್ಟಿಗೆ ಮೈ ಒರಗಿಸಿ ನಿಂತು ನೋಡಿದಳು ಕಾವೇರಿ.
“ಗದ್ದೆ ಹುಣೀಲಿ ಬಿದ್ದಿದ್ರು. ಕರ್ಕೊಂಡು ಬಂದೆ”
ಎನ್ನುತ್ತಾ ಜೊತೆಯಲ್ಲಿದ್ದವನು ಹೊರಗಿನ ಬಲ್ಬಿನ ಬೆಳಕಿನಡಿಗೆ ಬರುತ್ತಲೇ ಕಾವೇರಿಯ ಕಣ್ಣುಗಳು ಅರಳಿದವು. ಉರುಟಾಗಿ ಉಬ್ಬಿದ ಮುಖ. ದುಡಿಮೆಯ ಫಲವಾಗಿ ತುಂಬಿದ ಮೈಮೇಲೆ ದೃಢಗೊಂಡು ಕುಣಿಯುವ ಮಾಂಸಖಂಡಗಳು.
“ನಿನ್ನೆ ನೀವು ನಮ್ಮನೇಗೆ ಬಂದಿದ್ರಂತೆ ಅಲ್ವ? ಅಮ್ಮ ಹೇಳಿದ್ಲು”
ಕಾವೇರಿ ತುಟಿ ಹಿಗ್ಗಿಸಿ ‘ಹೂಂ’ ಎಂದಷ್ಟೆ ಹೇಳಿ ಮಾತೇ ತೋಚದವಳಂತೆ ನಿಂತಳು. ಅವನು ಗೋಪಾಲನೆಂದು ತಿಳಿಯಲು ತಡವಾಗಲಿಲ್ಲ. ಕಾವೇರಿ ಗೋಪಾಲನನ್ನೂ, ನಂಜುಂಡ ಕಾವೇರಿಯನ್ನೂ ಬೇರೆ ಬೇರೆ ಕಾರಣಗಳಿಗಾಗಿ ನುಂಗುವಂತೆ ನೋಡುತ್ತಿರಲು “ನಾನಿನ್ನು ಬರ್ತೇನೆ” ಎಂದು ಗೋಪಾಲ ಹೊರಟು ಹೋದ. ಇಷ್ಟು ಸುಂದರವಾದ ಮುಖ ಉಳ್ಳವನಿಗೇಕೆ ಗೋಸುಂಬೆ ಎಂಬ ಅಡ್ಡ ಹೆಸರು? ಕಾವೇರಿ ಚಿಂತಿಸಿದಳು. ಬಹುಶಃ ನಂಜುಂಡ ಎಲ್ಲಾದ್ರೂ ಜಗಳವಾಡಿ ಸಿಕ್ಕಿಬಿದ್ದಾಗ ಸಮಯ ಸಂದರ್ಭ ನೋಡಿಕೊಂಡು ಅವನ ಪರವಾಗಿ ಹಲವವಾರು ಸಲ ಸುಳ್ಳುಸಾಕ್ಷಿ ಹೇಳುತ್ತಿದ್ದಿರಬೇಕು. ಆದ್ದರಿಂದ ಜನರು ಆ ಹೆಸರಲ್ಲಿ ತಮಾಷೆ ಮಾಡುತ್ತಿರಬಹುದು ಎಂದು ಒಳಗೊಳಗೆ ನಗುತ್ತಿದ್ದಂತೆ ಮುಸುಡು ಬೀಗಿಸಿಕೊಂಡ ನಂಜುಂಡ ತೊಡರುಗಾಲು ಹಾಕುತ್ತಾ ಮೆಟ್ಟಿಲೇರಿ ಬಂದವನೇ ಹೊಸ್ತಿಲೆಡವಿ ಮುಗ್ಗರಿಸಿದ. ಬೀಳದಂತೆ ಹಿಡಿದುಕೊಳ್ಳಲು ಹೋದಾಗ ಹೇಲು ಮುಟ್ಟಿಸಿಕೊಂಡವನಂತೆ ‘ಹ್ಯಕ್’ ಎಂದು ಕೈಕೊಡವಿದ.
“ಏಯ್… ಗೋಪಾಲನ ಮನೆಗ್ಯಾಕೆ ಹೋಗಿದ್ಯೇ ನಿನ್ನೇ?”
ನಂಜುಂಡ ಹಠಾತ್ತನೆ ಬೊಬ್ಬಿರಿದ. ಹೊಂಚುಹಾಕಿ ವಾಸನೆ ಹಿಡಿಯುವ ಮೃಗದಂತೆ ಕೋಣೆಯೊಳಗಿನ ಕತ್ತಲನ್ನು ಅಳೆಯುತ್ತಾ ‘ಯಾವನೋ ಅದು?’ ಎಂದು ಒಳನುಗ್ಗಿ ಅಲ್ಲಿ ಹಾಸಿಟ್ಟ ಚಾಪೆ ದಿಂಬುಗಳನ್ನು ಒದ್ದು ಹೊರ ಚಿಮ್ಮಿಸಿದ. ಅವಮಾನದಿಂದ ಕುದಿದ ಕಾವೇರಿ ಸಿಟ್ಟನ್ನು ಆದಷ್ಟು ನಿಯಂತ್ರಣದಲ್ಲಿಟ್ಟುಕೊಂಡೇ ಹೇಳಿದಳು “ನೀವೊಮ್ಮೆ ಮಲಗಿ ನೋಡುವಾ”
“ಹಾಗೆ ನನ್ನನ್ನು ಮಲಗಿಸಿಬಿಟ್ಟು ನೀನು ಸುಖ ಪಡ್ಬೇಡ ಹೆಣ್ಣೇ…”
ನಂಜುಂಡನ ಕಣ್ಣಿನ ಕೆಂಪಿನಿಂದ ಸುಟ್ಟು ಬೂದಿಯಾದಂತೆನಿಸಿತು ಕಾವೇರಿಗೆ.
“ನೀನು ಅವನಲ್ಲಿ ಎಂತ ಹೇಳಿದೆ? ಅವನು ನಿನ್ನಲ್ಲಿ ಎಂತ ಹೇಳಿದ? ಒಂದನ್ನೂ ಬಿಡದೆ ಹೇಳು. ಇಲ್ಲದಿದ್ರೆ ನಿನ್ನನ್ನು ಹಸಿಹಸಿ ತಿಂದು ಉಗಿದುಬಿಟ್ಟೇನು” ಎಂದು ಹಲ್ಲುಮಸೆದ. ಅವಳು ಇನ್ನೂ ಮಾತನಾಡದೇ ಇದ್ದುದನ್ನು ನೋಡಿ “ ಬಾಯಿ ಬಿಡ್ತೀಯೋ ಇಲ್ವೋ?” ಎನ್ನುತ್ತಾ ಬಂದವನೇ ಅವಳ ಸೆರಗಿಗೆ ಕೈಹಾಕಿ ದರಬರ ಎಳೆದ. ಆ ರಭಸಕ್ಕೆ ಅವಳು ‘ಆಹ್ ಆಹ್’ ಎಂದು ಗಿರಗಿರನೆ ಸುತ್ತುತ್ತಾ ಮಂಚದ ಮೇಲೆ ಅಂಗಾತ ಬಿದ್ದುಬಿಟ್ಟಳು.
4
ನಿನ್ನೆ ಏನೂ ಅಗಲಿಲ್ಲ ಎಂಬಂತೆ ನಂಜುಂಡ ಬೆಳಗ್ಗೆ ಕಾಫಿ ಕುಡಿಯುತ್ತಿದ್ದಾಗ ಹೊರಗಿನಿಂದ ಯಾರೋ ಗಂಟಲು ಕೆರೆದ ಸದ್ದಾಯಿತು.
“ಒಂದಿಷ್ಟು ಸಕ್ರೆ ಕೊಡ್ತೀರಾ ಚಾಯ ಮಾಡ್ಲಿಕ್ಕೆ? ಸಕ್ರೆ ಮುಗಿದಿತ್ತು ಅಂತ ಗೊತ್ತೇ ಅಗ್ಲಿಲ್ಲ”
ಹೊಸ್ತಿಲ ಬಳಿಯಲ್ಲಿ ಗೋಪಾಲ ನಿಂತಿದ್ದ. ಕಾವೇರಿ ಮುಖವರಳಿಸಿ ನಗುತ್ತಾ “ಸಕ್ರೆ ಯಾಕೆ? ಚಾ ನಾನೇ ಮಾಡಿಕೊಟ್ಟೇನಲ್ಲ ಬೇಕಾದ್ರೆ” ಎಂದುಬಿಟ್ಟಳು ಬಾಯಿತಪ್ಪಿ. ಮರುಕ್ಷಣವೇ ಎದೆ ಸಿಡಿದಂತಾಯಿತು. ಮಿಡುಕಿದಂತೆ ನಂಜುಂಡನನ್ನು ನೋಡಿದಳು. ಪುಣ್ಯಕ್ಕೆ ಅವನು ಕಾವೇರಿಯತ್ತ ನೋಡದೆ ಚಿತ್ರಾನ್ನ ಕಲಸಿ ತಿನ್ನುತ್ತಾ ಹೇಳಿದ “ಬೇಕಿದ್ರೆ ನೀನಿವತ್ತು ನಮ್ಮನೇಲೇ ಊಟ ಮಾಡಪ್ಪಾ ಗೋಪಾಲಾ. ಅಯ್! ಸಂಕೋಚ ಮಾಡ್ಬೇಡ್ವೋ. ದೇವ್ರು ನಂಗೇಂತ ಕೊಟ್ಟದ್ದು ಮಸ್ತಾಗೇ ಇದೆಯಿಲ್ಲಿ. ನಂದೆಲ್ಲಾ ನಿಂದೇ ಅಲ್ವನ ಮಾರಾಯಾ. ಆದ್ರೆ ಒಂದ್ಮಾತು ಗೋಪಾಲಾ. ಎದುರಿನ ಮರದಿಂದ ತೆಂಗಿನಕಾಯಿ ಕೊಯ್ದು ಕೊಡ್ಬೇಕು ಆಯ್ತಾ?”
ನಂಜುಂಡ ಹೇಳಿರದಿದ್ದರೂ ಸಹ ಕಾವೇರಿ ಚಹಾ ಕುದಿಸಿ ಬಾಳೆಲೆಯ ತುಂಬಾ ಬೆಂದು ಹಬೆಯಾಡುತ್ತಿರುವ ಗೆಣಸಿನ ತುಂಡುಗಳನ್ನು ಹಿಡಿದುಕೊಂಡು ಹತ್ತು ಗಂಟೆಗೆ ಸರಿಯಾಗಿ ತೆಂಗಿನ ಮರದ ಬುಡಕ್ಕೆ ಹೋದಳು. ಮರದ ತುದಿಯತ್ತ ನೋಡಿ ಗೋಪಾಲನನ್ನು ಕರೆಯಲೆಂದು ಬಾಯಿ ತೆರೆದವಳು ಹಾಗೆಯೇ ನಿಂತುಬಿಟ್ಟಳು. ಅಬ್ಬ! ಮೈ ಅಂದ್ರೆ ಅದೆಂಥ ಮೈ ಅವನದ್ದು! ಅಗಲವಾದ ಬೆನ್ನಲ್ಲಿ ಒಂದೇ ಸವನೆ ಏರಿಳಿವ ಸ್ನಾಯುಗಳು! ಇವನ ಹೆಂಡತಿಯಾಗುವವಳ ಭಾಗ್ಯವೋ ಭಾಗ್ಯ ಎಂದೆಲ್ಲ ಚಿಂತಿಸುತ್ತಿದ್ದವಳಿಗೆ ಗೋಪಾಲ ಸರಸರನೆ ಮರದಿಂದ ಇಳಿದದ್ದೇ ಗೊತ್ತಾಗಲಿಲ್ಲ. ಗೂಟದಲ್ಲಿ ಸಿಕ್ಕಿಸಿದ್ದ ಅಂಗಿಯನ್ನು ತೆಗೆದು ಧೊಪ್ಪನೆ ಕೊಡವಿದಾಗ ಕಿಡಿ ತಗುಲಿದವಳಂತೆ ಎಚ್ಚೆತ್ತ ಕಾವೇರಿ ನಾಚುತ್ತಾ ಚಾವಡಿಗೆ ಹೋಗಿ ಚೊಂಬಿನಿಂದ ನೀರು ಸುರಿದು ಕೊಟ್ಟಳು. ಗೋಪಾಲ ಕೈ ತೊಳೆಯುತ್ತಾ ನಕ್ಕು ಪಿಸುದನಿಯಲ್ಲಿ ಮಾತನಾಡಿಸಿದ.
“ಎಂಥ ಚೀತ್ಕಾರ ನಿಮ್ಮದು ನಿನ್ನೆ ರಾತ್ರಿ? ನಂಜುಂಡ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿದನೆಂದೇ ಭಾವಿಸಿದ್ದೆ. ಇವತ್ತು ನಿಮ್ಮನ್ನು ಜೀವಂತ ಕಂಡಾಗಲೇ ಸಮಾಧಾನವಾದದ್ದು”
“ನೀನು ಏನು ತಿಳ್ಕೊಂಡಿಯೋ ಏನೋ” ಎಂದಳು ಆಕೆ ಕಣ್ಣೆತ್ತುವ ಸಾಹಸ ಮಾಡದೆ. ಇವನು ಯಾಕಾದರೂ ಇತ್ತ ಬಂದನೋ ಎಂದೆನಿಸಿತು ಅವಳಿಗೆ. ಗೋಪಾಲನು ಅವಳ ಕುತ್ತಿಗೆಯ ಪಾಶ್ರ್ವ ಮತ್ತು ಹೊಕ್ಕುಳದ ಬಳಿಯ ಗೀರಗಳನ್ನು ಎವೆಯಿಕ್ಕದೆ ನೋಡುತ್ತಾ “ಏ ದೇವರೇ… ಎಂಥದಿದು ಉತ್ತ ಹೊಲದ ನೇಗಿಲ ಗೀರುಗಳ ಹಾಗೆ? ಛೆ! ಎಂಥ ಅನಾಗರಿಕ ಮೃಗವಪ್ಪಾ ಅವನು…” ಎಂದ. ಅಪರಾಧಿ ನಾನಲ್ಲ ಎಂಬ ಭಾವ ಕಾವೇರಿಯ ಕಣ್ಣಲ್ಲಿ ತೇಲಿ ನೀರುಕ್ಕಿತು. ಅದು ಗೋಪಾಲನಿಗೆ ಕಾಣಿಸಬಾರದೆಂದು ಮುಖವನ್ನು ಬೇರೆಡೆಗೆ ಹೊರಳಿಸಿ ಸೆರಗನ್ನು ಸರಿಪಡಿಸುತ್ತಾ ಮನೆಯತ್ತ ನಡೆಯುತ್ತಿದ್ದಂತೆ ಹಾವಿನ ಹಾಗೆ ಕುತ್ತಿಗೆಯನ್ನು ನಿಧಾನಕ್ಕೆ ಹಿಂದಕ್ಕೆ ತಿರುವಿ ಅವನನ್ನೇ ದಿಟ್ಟಿಸಿದಳು. ಅವನ ಸಾಂತ್ವನದ ಕಣ್ಣುಗಳು ಅವಳ ರವಿಕೆಯ ಹಿಂದಿನಿಂದ ಎದ್ದು ಕಾಣುವ ವಿಶಾಲವಾದ ಬೆನ್ನಿನ ಗೀರುಗಳನ್ನು ಸವರುತ್ತಲೇ ಇದ್ದಾಗ ಅವಳ ನೋವು ಇನ್ನಷ್ಟು ಹೆಚ್ಚಿ ಗಾಯಗಳು ಉರಿದೆದ್ದವು. ನಿಂತಲ್ಲೇ ಹಸಿಹಸಿಯಾದಳು. ನೀರಸ ರಾತ್ರಿಯಲ್ಲಿ ಉಕ್ಕಿ ಬರುವ ಭಾವದ ಆವೇಗದಲ್ಲಿ ದಿಂಬನ್ನು ಹಿಸುಕುತ್ತಾ ಮಗ್ಗುಲಾಗಿ ತೊಯ್ದು ಹೋದಳು.
***
“ಗೋಪಾಲಾ ಎಷ್ಟು ದಿನಗಳವರೆಗೆ ಹೀಗೆ…”
“ಹೇಗೆ?”
“ದಿನಾ ಕುಡಿದು ಎಲ್ಲೆಂದರಲ್ಲಿ ಬೀಳುವ ನಂಜುಂಡನನ್ನು ದಿನಾ ಇಲ್ಲಿಗೆ ಕರ್ಕೊಂಡು ಬರೋದು”
“ಯಾವತ್ತೂ”
“ಯಾವತ್ತೂ? ಇದೇ ರೀತಿ?”
“ಹೌದು. ಯಾಕೆ?”
“ಹೀಗೇ ಸುಮ್ಮನೆ” ಆಕೆ ಮುಖ ತಗ್ಗಿಸಿದಳು. ಬಾಗಿಲ ಚೌಕಟ್ಟನ್ನು ಬಿಗಿಯಾಗಿ ಹಿಡಿದಿದ್ದರೂ ಸುಮ್ಮನಿರಲು ಇಷ್ಟಪಡದ ಬೆರಳುಗಳು “ಅವತ್ತೆಲ್ಲಾ ನಂಜುಂಡ ತೂರಾಡುತ್ತಾ ಬರುವ ಹೊತ್ತಿಗೆ ದೇವರ ಕೋಣೆಯನ್ನು ಹೊಕ್ಕು ಚಿಲಕ ಹಾಕಿ ಕುಳಿತುಕೊಳ್ಳುತ್ತಿದ್ದೆ. ಬಾಗಿಲು ತೆರೆಯಬೇಕಿದ್ದರೆ ಅವನ ಬೊಬ್ಬೆ ಕಿರುಚಾಟಗಳೆಲ್ಲ ಮುಗಿದು ತಣ್ಣಗಾಗಬೇಕಿತ್ತು. ಆದರೂ ಯಾವಾಗ ಆಕ್ರಮಣವಾದೀತೆಂದು ಊಹಿಸಲಾಗದೆ ಜೀವವೇ ಒಂದು ಹಿಡಿಯಾಗುತ್ತಿತ್ತು. ನಿನ್ನ ದನಿ ಕೇಳುವಾಗಲೇ ಯಾವತ್ತೂ ಧೈರ್ಯ ಬರುತ್ತಿದ್ದುದು”
“ಹೀಗೆ ಹೆದರಿಕೊಂಡು ಕೂತರೆ ಸಾಯುವವರೆಗೂ ಹೀಗೇ ಇರಬೇಕಾದೀತು ಅಷ್ಟೆ”
“ಹೌದು. ಆದರೇನು ಮಾಡೋದು? ನಂಜುಂಡನೆದುರು ಎದೆ ಉಬ್ಬಿಸಿ ನಿಲ್ಲಬೇಕು ಎಂಬ ನಿರ್ಧಾರ ದಿನಾ ಗಟ್ಟಿಗೊಳ್ಳುತ್ತಿದ್ದರೂ ಅವನ ಕೆಮ್ಮಿನ ಸದ್ದು ಕೇಳಿದೊಡನೆ ನನ್ನ ಧೈರ್ಯವೇಕೆ ಸೋರಿಹೋಗುತ್ತದೆ ಅಂತ ಎಷ್ಟು ಯೋಚಿಸಿದ್ರೂ ಅರ್ಥವಾಗೋದಿಲ್ಲ”
“ಹೆದರಬೇಡ. ಎಲ್ಲಾ ಸರಿಯಾದೀತು”
“ಲೇ ಹೆಣ್ಣೇ”
ಒಳಕೋಣೆಯಿಂದ ಎರಗಿದ ನಂಜುಂಡನ ದನಿ ಅವರಿಬ್ಬರ ಮಾತಿನ ಧಾರೆಯನ್ನು ಕತ್ತರಿಸಿ ಹಾಕಿತು. ಮದ್ಯದ ಕೊನೆಯ ಹನಿಗಳನ್ನು ನಾಲಗೆಗೆ ಸುರಿದುಕೊಳ್ಳುತ್ತಾ ಹತ್ತಿರ ಬಂದ ನಂಜುಂಡ ತೇಲುಗಣ್ಣು ಬಿಡುತ್ತಾ ಕಾವೇರಿಯನ್ನೊಮ್ಮೆ ಸರಿಯಾಗಿ ನೋಡಿ
“ಹೆಣ್ಣೇ… ಈ ಗೋಪಾಲ ಅಂದ್ರೆ ಯಾರು ಅಂತ ಗೊತ್ತುಂಟ ನಿಂಗೆ? ಗದ್ದೆ ಹುಣೀಲಿ ಬಿದ್ದ ನನ್ನನ್ನು ಕಾಪಾಡಿದ ದೇವರು. ಅವನಪ್ಪ ಸಿಡಿಲು ಬಿದ್ದು ಸತ್ತ ಎರಡಂಗುಲ ಆಚೆ ಬಿದ್ದಿದ್ದೆ ನಾನು. ಶ್ಯೋ… ನನ್ನನ್ನು ಇಲ್ಲಿವರೆಗೆ ಕರ್ಕೊಂಡು ಬರ್ಲಿಕ್ಕೆ ಇವನೆಷ್ಟು ಕಷ್ಟ ಪಟ್ಟನೋ… ನೀ ನನ್ನ ಜೀವ ಕೇಳಿದ್ರೂ ಅಂಗೈ ಮೇಲಿಟ್ಟು ಕೊಟ್ಟು ಬಿಟ್ಟೇನು ಗೋಪಾಲ ದೇವರೇ…” ಎಂದು ಕುಳಿತಲ್ಲಿಂದಲೇ ಬಗ್ಗಿ ಗೋಪಾಲನ ಕಾಲುಗಳನ್ನು ಗಬಕ್ಕನೆ ಹಿಡಿದುಕೊಂಡ. ಸಮತೋಲನ ತಪ್ಪಿದ ಗೋಪಾಲ ‘ಓ ಓ’ ಎನ್ನುತ್ತಾ ಹಿಂದಕ್ಕೆ ವಾಲಿದರೂ ಕಿಟಿಕಿಯ ಸರಳುಗಳನ್ನು ಹಿಡಿದು ಬೀಳದಂತೆ ಸಾವರಿಸಿಕೊಂಡ.
“ನನ್ನಪ್ಪ ಹೇಗೆ ಸತ್ತಾಂತ ನಂಗೊತ್ತುಂಟು”
ಇದ್ದಕ್ಕಿದ್ದಂತೆ ಅಬ್ಬರಿಸಿದ ಗೋಪಾಲನ ಕಣ್ಣುಗಳು ಕೆಂಪಗಿನ ಕೆಂಡಗಳು! ಸಿಟ್ಟಿನ ಭರದಲ್ಲಿ ಭುಸುಗುಡುತ್ತಿದ್ದವನ ದೃಷ್ಟಿ ಕಾವೇರಿಯ ಮೇಲೆ ನೆಟ್ಟಾಗ ಅವನ ಮುಖದ ಗಂಟುಗಳು ಕ್ರಮೇಣ ಸಡಿಲಗೊಳ್ಳತೊಡಗಿದವು. ಏನೆಂದರಿಯದೆ ಏಕೆಂದರಿಯದೆ ಕಣ್ಣು ಬಾಯಿ ಬಿಟ್ಟು ತನ್ನನ್ನೇ ನೋಡುತ್ತಿದ್ದವಳ ಬಳಿ ಏನೋ ಹೇಳಲೆಂಬಂತೆ ಬಾಯಿ ತೆರೆದವನು ಮರುಕ್ಷಣವೇ ಸುಮ್ಮನಾಗಿಬಿಟ್ಟು ತಿರುಗಿ ಕೂಡಾ ನೋಡದೆ ಹೊರಟುಹೋದ. ಗೋಪಾಲನ ಆ ಅವತಾರವನ್ನು ನೋಡಿದ ಅವಳ ಎದೆಯ ಡವಡವ ಇನ್ನೂ ನಿಂತಿರಲಿಲ್ಲ. ಅವಳು ನಂಜುಂಡನ ಮುಖವನ್ನೊಮ್ಮೆ ನೋಡಿದಳು. ‘ಅವರಿಗೆ ಅಷ್ಟೇನೂ ಭಯವಾಗ್ಲಿಲ್ಲ. ಆದ್ರೆ ಪೆಚ್ಚಾಗಿದ್ದಾರೆ. ತಪ್ಪು ಮಾಡುತ್ತಿರುವಾಗ್ಲೇ ಸಿಕ್ಕಿಹಾಕಿಕೊಂಡ ಮಗುವಿನ ಹಾಗೆ’ ಎಂದೆನಿಸಿತು ಅವಳಿಗೆ.
ಅಸಾಧ್ಯ ರೋಷದಿಂದ ಮುಖ ಬಿಗಿದುಕೊಂಡಿದ್ದ ನಂಜುಂಡ ಒಮ್ಮೆಲೆ ಕುರ್ಚಿ ಬಿಟ್ಟೆದ್ದು ಕಾವೇರಿಯತ್ತ ಖಡ್ಗದಂಥ ನೋಟವನ್ನು ಬೀಸಿ ಎಸೆದ. ಸಿಗರೇಟು ಹಚ್ಚಿ ಕೆ.ಬಿ.ಟಿ. ಬಸ್ಸಿನಂತೆ ಹೊಗೆ ಬಿಡುತ್ತಾ “ಓಹ್…ಅವನನ್ನು ನಾನು…ಅವನನ್ನು ನಾನು…” ಎಂದು ಗೊಣಗುತ್ತಾ ನೆಲವೇ ಬಿರಿಯುವಂತೆ ಕಾಲೆತ್ತಿ ಶತಪಥ ಹಾಕತೊಡಗಿದ. ಅವನ ಮನಸ್ಸು ಸ್ಥಿಮಿತಕ್ಕೆ ಬರುವಲ್ಲಿವರೆಗೆ ಕಾವೇರಿ ತುಟಿ ಬಿಗಿದು ಕಾಯುತ್ತಿದ್ದಂತೆ ನಂಜುಂಡ ಗರ್ಜಿಸಿದ “ಊಟಾ”
ಬಡಿಸಿದ ಅನ್ನದ ತುತ್ತು ಗಂಟಲೊಳಗೆ ಇಳಿಯುವ ಮೊದಲೇ ಅವನು ತಟ್ಟೆಯನ್ನು ಮುಂದೆ ತಳ್ಳಿ
“ಎಂಥದಿದು? ಸಾಂಬಾರಿಗೆ ಉಪ್ಪೂ ಇಲ್ಲ ಮೆಣಸೂ ಇಲ್ಲ. ಯಾರಿಗೆ ಅಂತ ಕಟ್ಟಿಡ್ತಿ? ನಿನ್ನ ಆಚೆಯವನಿಗೋಸ್ಕರವಾ?” ಎನ್ನುತ್ತಿದ್ದಂತೆ ಅವಳಿಗರಿವಿಲ್ಲದಂತೆ ಮುಷ್ಠಿಗಳು ಬಿಗಿದುಕೊಂಡವು. ನಂಜುಂಡನನ್ನೇ ದುರುಗುಟ್ಟಿ ನೋಡತೊಡಗಿದ ಕಣ್ಣುಗಳು ಕಿಡಿಕಾರತೊಡಗಿದವು. ಮೈಮೇಲೆ ಬಂದಂತಾಗಿ ಕೈಯಲ್ಲಿದ್ದ ಸೌಟನ್ನು ಬೀಸಿ ಎಸೆದು ಅಬ್ಬರಿಸಿದಳು.
“ನೀನೇನು ಮನುಷ್ಯನಾ ಮೃಗವಾ? ಮರ್ಯಾದೆಯಿಂದ ಮಾತಾಡ್ಲಿಕ್ಕೆ ಅಗೋದಿಲ್ವಾ? ನಿನ್ನನ್ನು ಇದುವರೆಗೆ ಸಹಿಸಿಕೊಂಡಿದ್ದದ್ದೇ ತಪ್ಪು. ನಾನಾಗಿದ್ರಿಂದ ಸುಮ್ಮನಿದ್ದೇನೆ. ಬೇರೆ ಯಾರಾದ್ರೂ ಆಗ್ತಿದ್ರೆ ನಿನ್ನ ಸಂಪತ್ತನ್ನೂ ಮೂರು ಕಾಸಿನ ದೊಡ್ಡಸ್ತಿಕೆಯನ್ನೂ ಎಡಗಾಲಿಂದ ಒದ್ದು ಹೋಗ್ತಿದ್ರು. ಯಾರ್ಯಾರ ಮೇಲಿನ ಸಿಟ್ಟನ್ನು ನನ್ನ ಮೇಲೆ ಕಾರುತ್ತಿದ್ದೀಯಾ?”
ಅವಳ ದನಿಯಲ್ಲಿದ್ದ ಅನಿರೀಕ್ಷಿತ ಕೋಪಾವೇಶ ನಂಜುಂಡನನ್ನು ಒಮ್ಮೆ ನಡುಗಿಸಿತು. ಆ ಕ್ಷಣಕ್ಕೆ ಹೆಚ್ಚಬಹುದಾದ ಅವನ ಕ್ರ್ರೋಧದ ಅಂದಾಜಿದ್ದರೂ ಅವಳು ಹೆದರದೆ ನಿಂತಳು. ರೋಷ ಭುಗಿಲೆದ್ದ ನಂಜುಂಡ ಜಿಗಿದೆದ್ದು ಕಿರುಚಿದ. ನಿಂತಲ್ಲಿಂದಲೇ ಕೈಬೀಸಿ ‘ಫಟ್’ ಎಂದು ಬಾರಿಸಿದ್ದೊಂದೇ ನೆನಪು.
5
ಅವಳು ಹೆಣಗಾಡುತ್ತಲೇ ಕಣ್ಣು ಬಿಟ್ಟಳು. ಮೊದಲು ಕಪ್ಪು ಕಪ್ಪು ನೆರಳುಗಳು. ಆಮೇಲೆ ಬೆಳಕಿನ ಹೊಳಪು. ಮೆಲ್ಲ ಮೆಲ್ಲನೆ ರೂಪು ನಿಚ್ಚಳವಾಯಿತು. ಅಯ್ಯೋ! ನಾನೆಲ್ಲಿದ್ದೇನೆ? ಮಲಗಿದಲ್ಲಿಂದಲೇ ಕತ್ತು ಓರೆ ಮಾಡಿ ಸುತ್ತಲೂ ದಿಟ್ಟಿಸಿದಳು. ಸಂಶಯವಿಲ್ಲ. ಇದು ಮಲಗುವ ಕೋಣೆಯೇ. ಹೊದಿಕೆಯನ್ನು ಸರಿಸಿ ನೋಡಿದರೆ ಅಯ್! ಮೈಮೇಲೆ ಉಡಿನೂಲೂ ಇಲ್ಲ! ದಿಗ್ಗನೆ ಏಳಲು ಯತ್ನಿಸಿದರೆ ಆಹ್! ಮೈಕೈ ಇಡೀ ನೋವು. ಮಂಚದ ಬದಿಯಲ್ಲಿ ಮುದ್ದೆಗಟ್ಟಿ ಬಿದ್ದಿರುವ ಸೀರೆ ರವಿಕೆಗಳನ್ನು ನೋಡುತ್ತಲೇ ಅವಳಿಗೆಲ್ಲವೂ ಅರ್ಥವಾಯಿತು. ಓಹ್! ಏನು ಮಾಡಲಿ ನಾನು? ಬಟ್ಟೆಗಳನ್ನು ಧರಿಸುತ್ತಾ ಕಾವೇರಿ ಯೋಚಿಸಿದಳು. ಚೂರಿ ಹಾಕಲೇ ನಂಜುಂಡನಿಗೆ? ಕೊರಳು ಅಮುಕಿ ಎದೆಗೆ ಒದ್ದು ಚಚ್ಚಿ ಅಥವಾ ಅನ್ನಕ್ಕೆ ವಿಷ ಬೆರೆಸಿ… ಅವಳ ದವಡೆಯ ಎಲುಬುಗಳು ಕಂಪಿಸತೊಡಗಿದವು. ಊರಿಡೀ ಮೊಳಗುವಂತೆ ಚೀರಬೇಕು. ದೊಡ್ಡ ದನಿ ತೆಗೆದು ಅಳಬೇಕು. ಇಲ್ಲ. ಎರಡೂ ಆಗುವುದಿಲ್ಲ. ಗಂಟಲಿನಿಂದ ಸ್ವರವೇ ಹೊರಡುವುದಿಲ್ಲ. ಅಯ್ಯೋ! ನನ್ನ ಹಣೆಬರಹವೇ! ಮೂಗಿನ ಹೊಳ್ಳೆಗಳರಳುವಂತೆ ನಿಟ್ಟುಸಿರುಗರೆದು ಮಂಚವನ್ನು ಬಿಟ್ಟೆದ್ದಳು. ಕೂದಲನ್ನು ಹಿಂದಲೆಯಲ್ಲಿ ತಿರುಗು ಮುರುಗಾಗಿ ಗಂಟು ಹಾಕುತ್ತಾ ಬಾಗಿಲು ತೆರೆದಳು. ಮೊಗಸಾಲೆಗೆ ಬಂದು ಕಂಬವನ್ನು ನಿಲ್ಲುತ್ತಿದ್ದಂತೆ ಒಳಗಿನ ಸಂಕಟ, ತಿರಸ್ಕಾರ ಮತ್ತು ರೋಷ ಮರುಕಳಿಸುತ್ತಿದ್ದಂತೆ ರಕ್ತವೆಲ್ಲ ಒಟ್ಟುಗೂಡಿ ಹಾವಿನ ರೂಪ ಪಡೆದು ತಲೆಗೇರಿ ಹೆಡೆಯಪ್ಪಳಿಸತೊಡಗಿದಂತೆ ಭಾಸವಾಯಿತು. ಕಂಬವನ್ನು ಹಿಡಿದುಕೊಂಡೇ ನೆಲಕ್ಕೆ ಕುಸಿದು ಕುಳಿತಳು.
“ಕಾವೇರಿ”
ಒಮ್ಮೆಲೆ ತಲೆಯೆತ್ತಿದ ಆಕೆ ‘ಓಹ್’ ಎಂದು ಉದ್ಗರಿಸಿದಳು. ಕಣ್ಣುಗಳಲ್ಲಿದ್ದ ಗಾಬರಿ ಮಾಯವಾಗಿ ನಿರಾಳತೆ ಮೂಡಿತು “ಏನು ಗೋಪಾಲ?”
“ಏನೂ ಇಲ್ಲ. ನಾನೀಗ ಪೇಟೆಗೆ ಹೋಗ್ತಿದ್ದೇನೆ. ಮನೆಗೆ ಅಗತ್ಯವಾದ ತರಕಾರಿಯೋ ಮತ್ತಿನ್ನೇನಾದ್ರೂ…”
“ಅದನ್ನು ತರಲು ನಂಜುಂಡನಿಲ್ಲವಾ?”
“ಇನ್ನು ಅವ ಬರೋದು ಸಂಶಯವೇ”
“ಯಾಕೆ?”
“ನಿನ್ನೆ ರಾತ್ರಿ ಪ್ರಜ್ಞೆ ತಪ್ಪಿ ಬಿದ್ದಿದ್ದೆಯಲ್ಲ ನೀನು. ಮರ್ಮಕ್ಕೆ ಏಟು ಬಿದ್ದು ಏನಾದ್ರೂ ಹೆಚ್ಚುಕಮ್ಮಿ ಆಗಿರಬಹುದು ಅಂತ ಹೆದರಿ ತಲೆಮರೆಸಿಕೊಂಡಿರಬೇಕು”
“ಓಹ್! ಹಾಗೋ” ಎನ್ನುತ್ತಾ ಮೇಲೇಳುತ್ತಿದ್ದಂತೆ ಅವಳ ದೇಹದುದ್ದಕ್ಕೂ ಆಘಾತದ ತೆರೆಗಳು ಸಂಚರಿಸಿದವು “ನಿಂಗೆ ಹೇಗೆ ಗೊತ್ತಾಯ್ತು?”
ದಿಗಿಲು ಬಿದ್ದವಳ ಬಾಯಿಯಿಂದ ಹೊರಟ ಉದ್ಗಾರ ಲೆಕ್ಕ ಮೀರಿ ದೊಡ್ಡವಾದಾಗ ಗೋಪಾಲನ ಮಾತು ಅಲ್ಲಿಗೇ ನಿಂತಿತು. ಕರುಳಲ್ಲಿ ಸೇರಿಕೊಂಡ ಕಂಪನವನ್ನು ಹೇಗೆ ತಡೆಯುವುದೆಂದರಿಯದೆ ತಬ್ಬಿಬ್ಬಾಗಿ ಅವನ ಕಡೆಗೆ ನೋಡುತ್ತಿದ್ದವಳ ಕಣ್ಣುಗಳು ಅಗಲವಾಗತೊಡಗಿದವು. ಮನದೊಳಗೆ ಅಡಗಿರುವ ರಹಸ್ಯವನ್ನು ಶೋಧಿಸುವಂತೆ ಅವಳ ದೃಷ್ಟಿ ಅವನ ಕಣ್ಣುಗಳನ್ನು ಕೊರೆದು ಆಳಕ್ಕಿಳಿಯಿತು. ಅವನ ಮುಖವೇಕೆ ಬಿಳುಚಿಕೊಳ್ಳುತ್ತಿದೆ? ತುಟಿಗಳೇಕೆ ಅದುರುತ್ತಿವೆ?
“ಏನಾಯ್ತು ಕಾವೇರಿ? ಆರೋಗ್ಯ ಸರಿಯಿಲ್ವ?”
“ಇಲ್ಲ. ನಾನು ಸರಿಯಾಗಿದ್ದೇನೆ”
“ಮತ್ತೇನು ಮುಖದಲ್ಲೆಲ್ಲ ನೀರು ನೀರು?”
“ಹಾಗೇನಿಲ್ಲವಲ್ಲಾ”
“ಇಲ್ಲ ಕಾವೇರಿ. ನಿನ್ನೆಯ ಆಯಾಸ ನಿನ್ನ ಮುಖದಲ್ಲಿ ಇನ್ನೂ ಎದ್ದು ಕಾಣ್ತದೆ. ಸ್ವಲ್ಪ ವಿಶ್ರಾಂತಿ ತಗೋ. ನಾನು ಆಮೇಲೆ ಬಂದು ಎಲ್ಲವನ್ನೂ ಹೇಳ್ತೇನೆ. ನಿನ್ನತ್ರ ಏನನ್ನೂ ಮುಚ್ಚಿಡೋದಿಲ್ಲ. ಒಂದಲ್ಲಾ ಒಂದಿನ ನಿನಗೆಲ್ಲ ಗೊತ್ತಾಗಬೇಕಾದ್ದೇ”
ಅಯ್ಯೋ! ಅವನಿಗೇನು ಹೇಳುವುದಕ್ಕಿರಬಹುದು?
ಅವಳು ಹುಚ್ಚಿಯಂತೆ ತಿರುಗಾಡಿದಳು. ಕೈಗಳನ್ನು ಹಿಂಡಿ ಕಿತ್ತಾಡಿದಳು. ಅಸ್ವಸ್ಥ ಮಬ್ಬಿನಲ್ಲಿ, ಗುಂಗಿನಲ್ಲಿ ಸಿಲುಕಿದಳು. ಯೋಚನೆಗಳೆಲ್ಲ ಕಲಸಿಕೊಂಡಂತಾಗಿ ಬಸವಳಿದಳು. ಬೃಹತ್ತಾದ ಭಾರ ತಲೆಯ ಮೇಲೆ ಇಳಿದು ತನ್ನನ್ನು ನೆಲದಲ್ಲಿ ಹುಗಿಯುವಂತೆನಿಸಿತು. ಇಡೀ ದಿನ ಅನುಭವಿಸಿದ ಪ್ರಯಾಸ ಮರುಕಳಿಸಿ ವಿಷಮಾವಸ್ಥೆಯನ್ನು ಮುಟ್ಟಿದಾಗ ಅವಳು ಅತೀವ ಉದ್ವೇಗಕ್ಕೊಳಗಾದಳು. ಇದು ಹೀಗೆಯೇ ಮುಂದುವರಿದರೆ ತನ್ನ ಮೈ ಸ್ಪೋಟಿಸಬಹುದೆಂದು ಹೆದರಿದಳು. ಆದರೆ ಅವಳ ಮನಸ್ಸನ್ನು ತುಂಬಿಕೊಂಡಿದ್ದ ತ್ರಾಸ ಮತ್ತು ಕಲ್ಪನೆಗಳು ನಿರ್ವಿಣ್ಣವಾಗಿರಲಿಲ್ಲ. ಕಹಿಯಾಗಿರಲಿಲ್ಲ. ಬದಲಾಗಿ ಹೇಳಲಾಗದ ಪುಳಕವನ್ನು ಉಂಟುಮಾಡುತ್ತಿದ್ದವು. ಆದರೂ ಮನಸ್ಸಿನ ಯಾವುದೋ ಮೂಲೆಯಲ್ಲಿ ಸಿಟ್ಟು ಉಕ್ಕುತ್ತಿತ್ತು. ಸಂತೋಷವೂ ಆಗುತ್ತಿತ್ತು. ಭಯ ಒಸರುತ್ತಿತ್ತು. ಸಮಾಧಾನವೂ ಆಗುತ್ತಿತ್ತು.
6
ಇದ್ದಕ್ಕಿದ್ದಂತೆ ಯಾರೋ ಚೀರಿದಂತೆನಿಸಿ ಕಾವೇರಿಗೆ ಎಚ್ಚರವಾಯಿತು. ಗಡಬಡಿಸುತ್ತಾ ಎದ್ದು ಮೈಮೇಲಿನ ಹೊದಿಕೆಯನ್ನು ಸರಿಸಿ ಮಂಚದಿಂದಿಳಿದು ಕಿಟಿಕಿಯನ್ನು ತೆರೆದಾಗ ಹೊರಗಿನ ಕತ್ತಲು ಮುಖಕ್ಕೆ ಅಪ್ಪಳಿಸಿತು. ಟಾರ್ಚ್ ಹಾಯಿಸಿ ನೋಡಿದರೂ ಏನೂ ಕಾಣಲಿಲ್ಲ. ಇದೀಗ ಚೀರಾಟ ಕೇಳಿಸಿದ್ದು ಇಲ್ಲೇ ಹತ್ತಿರದಿಂದಲ್ಲವೇ? ದೇವರೇ! ಅದು ನಂಜುಂಡನ ದನಿಯಾಗಿರಬಹುದೇ? ಮೈಯಲ್ಲಿ ಬೆವರಿನ ಸೂಕ್ಷ್ಮ ತುಂತುರುಗಳು ಹೊಮ್ಮಿ ನಿಂತವು. ಇದು ಭ್ರಮೆಯೋ? ನಿಜವೋ? ಚೀರಾಟ ಮತ್ತೊಮ್ಮೆ ಕೇಳಿಸೀತೋ? ಥತ್! ಏನೂ ಕಾಣಿಸುತ್ತಿಲ್ಲ. ಕೇಳಿಸುತ್ತಿಲ್ಲ.
ಟಕ್ ಟಕ್ ಟಕ್
ಕುತ್ತಿಗೆಯನ್ನು ಗಕ್ಕನೆ ಹಿಂದಕ್ಕೆ ತಿರುವಿದ ಕಾವೇರಿಯ ದೃಷ್ಟಿ ಬಾಗಿಲಿನತ್ತ ನೆಟ್ಟಿತು. ಯಾರದು ಬಾಗಿಲು ತಟ್ಟುತ್ತಿರುವುದು? ಭಯದ ಕಣ್ಣುಗಳಿಂದ ಬಾಗಿಲನ್ನೇ ದಿಟ್ಟಿಸುತ್ತಿದ್ದಂತೆ ಮೈಯಲ್ಲಿ ಬೆವರಿನ ಪದರ ಕವಿಯುತ್ತಿರುವಂತೆನಿಸಿತು. ಹಣೆಯ ಮೇಲೆ ಬೆವರು. ಕೊರಳೆಲ್ಲ ಒದ್ದೆ. ಯಾರೇ ಆಗಿರಲಿ. ಬಡಿದು ಬೇಸತ್ತು ಹಿಂದಕ್ಕೆ ಹೋಗಿಬಿಡಲಿ ಎಂದು ಉಸಿರು ಬಿಗಿಹಿಡಿದುಕೊಂಡು ಸದ್ದು ನಿಲ್ಲುವ ಕ್ಷಣಕ್ಕಾಗಿ ಕಾಯತೊಡಗಿದಳು. ಇದು ಹೀಗೆಯೇ ಮುಂದುವರಿದರೆ ನೆರೆಕರೆಯವರಿಗೆಲ್ಲ ಎಚ್ಚರವಾದೀತು. ಅವರೆಲ್ಲಾದ್ರೂ ಎದ್ದು ನೋಡಿದ್ರೆ ನನ್ನ ಮಾನ ಹೋದೀತು. ಒಂದುವೇಳೆ ನಂಜುಂಡನಾಗಿದ್ದರೆ? ನಿಂತಲ್ಲಿ ನಿಲ್ಲಲಾಗದೆ ಕೂತಲ್ಲಿ ಕೂರಲಾಗದೆ ಕೈಗೆ ಕೈ ಹೊಸೆದು ತಳಮಳಿಸುತ್ತಾ ಬಾಗಿಲ ಕಡೆಗೆ ಅದುರುವ ಹೆಜ್ಜೆಗಳನ್ನಿಟ್ಟಳು. ಹಿಡಿಯನ್ನು ಮುಟ್ಟುತ್ತಿದ್ದಂತೆ ಅವಳ ರೋಮ ರೋಮವೂ ನೆಟ್ಟಗಾದಂತೆ, ಕೊರಳ ಹಿಂದಿನಿಂದ ಹನಿಯೊಂದು ಬೆನ್ನಹುರಿಯುದ್ದಕ್ಕೂ ಇಳಿದಂತೆ ಭಾಸವಾಗಿ ಕೈ ನಡುಗತೊಡಗಿತು. ಏನಾದರಾಗಲಿ ಎಂದುಕೊಂಡು ಬಾಗಿಲನ್ನು ಚೂರೇ ತೆರೆದು ಅದಕ್ಕೆ ಅಡ್ಡವಾಗಿ ನಿಂತು ನೋಡಿದಳು.
ಗೋಪಾಲ!
ತಿದಿಯೊತ್ತಿದಂತೆ ಹೊಮ್ಮುವ ಉಸಿರಿನ ಲಯಕ್ಕೆ ತಕ್ಕಂತೆ ಅವನ ಹೊಟ್ಟೆ-ರಟ್ಟೆಗಳು ಉಬ್ಬಿ ಕುಗ್ಗುತ್ತಿದ್ದವು. ಭಾರೀ ಕೆಲಸವೊಂದನ್ನು ಮುಗಿಸಿ ಬಂದಂತೆ ಅವನ ಮೈಯಿಂದ ಬೆವರಿಳಿಯುತ್ತಿತ್ತು. ಯಾವುದೋ ಒಂದು ವಿಷಯವನ್ನು ಹೇಳಲು ಅವರಿಬ್ಬರೂ ಒಟ್ಟಿಗೇ ಬಾಯಿ ತೆರೆದರು. ಅಜ್ಞಾತ ಪ್ರೇರಣೆಯಿಂದಲೋ ಎಂಬಂತೆ ಬಾಯಿ ತೆರೆದುಕೊಂಡೇ ನಿಂತರು.
*****