ಕಾಸರಬೆಟ್ಟು ತಾಲೂಕಿನ ಅಡ್ಡಪಡ್ಪು ಗ್ರಾಮದವರಾದ ಲಕ್ಷ್ಮಣ ಮತ್ತು ಸರೋಜ ಸುಮಾರು ಇಪ್ಪತ್ತು ಮಂದಿ ಸದಸ್ಯರಿದ್ದ ಅವಿಭಕ್ತ ಕುಟುಂಬದಲ್ಲಿ ಜನಿಸಿದವರು. ಕೃಷಿಯೇ ಈಕುಟುಂಬದ ಜೀವಾಳ. ಇವರ ಹಿರಿಯರು ಯಾರೂ ವಿದ್ಯೆ ಕಲಿತವರಲ್ಲ. ತಮ್ಮ ಜೀವಿತಾವಧಿಯನ್ನು ಪೂರ್ತಿ ಬೇಸಾಯಕ್ಕೆ ಸಮರ್ಪಿಸಿಕೊಂಡು, ‘ಕಾಯಕವೇ ಕೈಲಾಸ’ ಎಂಬ ನಾಣ್ಣುಡಿಗೆ ತಕ್ಕ ಹಾಗೆಬಾಳಿ ಬದುಕುತ್ತ ಬಂದವರು ಹಾಗೂ ತಮ್ಮ ಮಕ್ಕಳು ಕೂಡಾಭೂಮಾತೆಯ ಸೇವೆಯಲ್ಲಿಯೇ ಜೀವನ ಸಾರ್ಥಕ್ಯವನ್ನು ಪಡೆಯಬೇಕು ಎಂದು ಆಶಿಸಿದವರು. ಆದರೆ ಸುತ್ತಲಿನ ಜಗತ್ತು ಮೆಲ್ಲಮೆಲ್ಲನೆ ತನ್ನ ಹಸುರು ವೈಭವವನ್ನು ಕಳೆದುಕೊಂಡು ಆಧುನಿಕತೆಯ ತೆಕ್ಕೆಗೆ ಸರಿಯುತ್ತಿದ್ದುದನ್ನು ಗಮನಿಸುತ್ತ ಬಂದವರಿಗೆ, ಇನ್ನು ತಮ್ಮ ಮಕ್ಕಳಿಗೂ ವಿದ್ಯೆಯ ಅವಶ್ಯಕತೆಯಿದೆ ಎಂದೆನ್ನಿಸತೊಡಗಿತು. ಆದರೂ ಹೆಚ್ಚಿನ ಶಿಕ್ಷಣದ ಅಗತ್ಯವಿಲ್ಲ. ವ್ಯವಹಾರಕ್ಕೆಷ್ಟು ಬೇಕೋ ಅಷ್ಟನ್ನು ಓದಿ, ಬರೆಯಲು ಕಲಿತರೆ ಸಾಕು ಎಂಬ ಧೋರಣೆ ಅವರದ್ದಾಗಿತ್ತು.
ಲಕ್ಷ್ಮಣ ತೆಳ್ಳಗೆ ಕೆಂಪಗೆ ಓಟಗಾರನಂಥ ದೇಹಸಿರಿಯ ತರುಣ. ಇಂದಿನ ಹುಡುಗರ ಹಾಗೆ ಜಿಮ್‍ಗೆ ಹೋಗಿ ಗಂಟೆಗಟ್ಟಲೆ ಬೆವರಿಳಿಸಿ, ಬೇಕು ಬೇಡದ್ದನ್ನೆಲ್ಲ ತಿಂದು,‘ವರ್ಕ್‍ಔಟ್’ ಮಾಡಿ ಬೆಳೆಸಿಕೊಳ್ಳುವ ‘ಸಿಕ್ಸ್ ಪ್ಯಾಕ್ ’ಲಕ್ಷ್ಮಣನಿಗೆ ರಕ್ತಗತವಾಗಿ ಬಂದಿತ್ತು. ಚಿಕ್ಕಪ್ಪ ಮಾವ ಅತ್ತೆ ಮತ್ತು ಅಣ್ಣಂದಿರ ಪ್ರೀತಿ, ವಾತ್ಸಲ್ಯದೊಂದಿಗೆ ತನ್ನ ಅತಿಯಾದ ತುಂಟತನ, ಕೀಟಲೆಗಳಿಗೆ ಪ್ರತಿಯಾಗಿ ಆಗಾಗ ಬಿಸಿಬಿಸಿ ಕಜ್ಜಾಯ ಸೇವೆಯೂ ಅವರಿಂದಲೇ ಯಥೇಚ್ಛವಾಗಿ ಸ್ವೀಕರಿಸುತ್ತಿದ್ದವನು ಮಹಾ ಪೋಕರಿಯಾಗಿ ಬೆಳೆಯುತ್ತಿದ್ದ. ತನ್ನನ್ನು ಸುಖಾಸುಮ್ಮನೆ ಕೆಣಕಿದವರನ್ನು ಮಣ್ಣುಮುಕ್ಕಿಸದೆ ಬಿಡುವವನಲ್ಲ. ಒಂದೊಮ್ಮೆ ಕೋಪದ ಪಿತ್ತನೆತ್ತಿಗೇರಿತೆಂದರೆ ದೊಡ್ಡವರು ಸಣ್ಣವರೆಂಬ ಬೇಧಭಾವವಿಲ್ಲದೆ ಎಂಥವರೊಡನೆಯೂ ಹೊಡೆದಾದಲು ಮುಂದಾಗುವವನು. ಆದರೆ ಕೆಲವೊಮ್ಮೆ ತನ್ನ ಅಜಾಗರೂಕತೆಯಿಂದಲೇ ಜಾರಿ ಬೀಳುವುದಿತ್ತಾದರೂ ಆಗೆಲ್ಲಾ, ‘ಹೇ ಹೋಗಿರನಾ…! ಏನೋ ಆಯ ತಪ್ಪಿ ಬಿದ್ದೆನಷ್ಟೆ. ನಾನೇನು, ಒಮ್ಮೊಮ್ಮೆ ಮಠದ ಆನೆಯೂ ಬೀಳುತ್ತದಂತೆ!’ ಎನ್ನುತ್ತ ತನ್ನ ಚಿಗುರು ಮೀಸೆಯನ್ನು ಕುಣಿಸಿ ಅಂಗಿಯ ರಾಜ್‍ಕುಮಾರ್ ಕಾಲರನ್ನು ರಪ್ಪನೆ ಕೊಡವಿ ಎದೆ ಸೆಟೆಸಿ ನಿಲ್ಲುತ್ತಿದ್ದ.
ಸರೋಜ,ಲಕ್ಷ್ಮಣನ ತಂದೆಯ ಸಹೋದರಿ, ಚಿನ್ನಕ್ಕನ ಮಗಳು. ಅವಳು ತನ್ನ ಉಳಿದ ದಾಯಾದಿಗಳನ್ನು ಅಣ್ಣತಮ್ಮಂದಿರೆಂದೇ ಭಾವಿಸುತ್ತಿದ್ದಳಾದರೂ ಲಕ್ಷ್ಮಣ ಮಾತ್ರ ಅವಳಿಗೆ ಬಾಲ್ಯದಿಂದಲೂ ಪ್ರತ್ಯೇಕನಾಗಿ ಮತ್ತು ಎಲ್ಲರಿಗಿಂತಲೂ ಆತ್ಮೀಯನಾಗಿಬಿಟ್ಟಿದ್ದ. ಹಾಗಾಗಿ ಆಟೋಟವಿರಲಿ ಅಥವಾ ಇನ್ನಿತರ ಕೆಲಸಕಾರ್ಯಗಳಿರಲಿ ಎಲ್ಲದರಲ್ಲೂ ಅವಳು ಅವನ ಒಡನಾಟವನ್ನು ಬಯಸುತ್ತ ಅವನಿಗಂಟಿಕೊಂಡೇ ಇರಲು ಇಷ್ಟಪಡುತ್ತಿದ್ದಳು. ಅತ್ತ ಲಕ್ಷ್ಮಣನೂ ಅವಳನ್ನು ಅಷ್ಟೇ ಹಚ್ಚಿಕೊಂಡಿದ್ದ. ಆದರೂ ಕೆಲವೊಮ್ಮೆ ಇಬ್ಬರ ನಡುವೆ ಸಣ್ಣಪುಟ್ಟ ವಿಷಯಕ್ಕೆ ಮನಸ್ತಾಪವೇಳುತ್ತಿದ್ದುದುಂಟು. ಬಳಿಕ ಅದು ತಟ್ಟನೆ ಮುನಿಸಿಗೂ ತಿರುಗಿಮತ್ತೆ ಮೂರು ನಾಲ್ಕು ದಿನಗಳ ಕಾಲಅವನ ಮುಖ ಆಚೆಗೆ, ಇವಳ ಮುಖ ಈಚೆಗೆ ಎಂಬಂತೆ ತಿರುಚಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.ಅಂಥ ಸಮಯದಲ್ಲಿಆಗಾಗ ಇಬ್ಬರೂ ಹಾವು ಮುಂಗುಸಿಗಳ ಹಾಗೆ ಕಚ್ಚಾಡಿಕೊಳ್ಳುತ್ತಿದ್ದರಾದರೂ ಕೊನೆಯಲ್ಲಿ ತನ್ನ ಕೋಪದ ಹೆಡೆಯನ್ನು ತಣ್ಣಗೆ ಮುದುಡಿಸಿಕೊಂಡುಅವಳತ್ತ ಬರುವ ಸರಧಿ ಲಕ್ಷ್ಮಣನದ್ದಾಗಿರುತ್ತಿತ್ತು. ಲಕ್ಷ್ಮಣನ ಕೆಚ್ಚೆದೆಯ ಸ್ವಭಾವ ಮತ್ತುತನ್ನ ಸುತ್ತಮುತ್ತಲಿನ ಇತರ ಪಡ್ಡೆ ಹುಡುಗರಿಗಿಂತ ಇವನ ನಡೆನುಡಿಗಳು ಭಿನ್ನವಾಗಿದ್ದುದನ್ನು ಕಾಣುತ್ತ ಬೆಳೆದ ಸರೋಜಾಳಲ್ಲಿ ಅವನ ಮೇಲೆ ಅವಳಿಗೇ ಅರ್ಥವಾಗದಂಥ ಆಕರ್ಷಣೆಯೊಂದು ಚಿಗುರಿಬಿಟ್ಟಿತ್ತು. ಜೊತೆಗೆ ಅವಳು ಅವನಲ್ಲಿ ಮೆಚ್ಚಿದ್ದ ಇನ್ನೊಂದು ವಿಶೇಷ ಗುಣವೆಂದರೆ ಅವನು ಆವರೆಗೆ ಬೇರೆ ಯಾವ ಹುಡುಗಿಯರ ಸೆಳೆತಕ್ಕೂ ಸಿಲುಕಿದವನಲ್ಲ ಎಂಬುದು. ಆದ್ದರಿಂದಲೇ ಅವಳಿಗೆ ಲಕ್ಷ್ಮಣನ ಮೇಲೆ ವಯೋಸಹಜವಾದ ಮೋಹಕ ಒಲವು ಅರಳಲು ಕಾರಣವಾಯಿತು.
ಲಕ್ಷ್ಮಣನಿಗಿಂದ ಸರೋಜ ಒಂದು ವರ್ಷ ಚಿಕ್ಕವಳು.ಆಗಷ್ಟೇ ಹದಿನೆಂಟರ ಹರೆಯಕ್ಕೆ ಕಾಲಿಟ್ಟಿದ್ದ ಅವಳು ಮೈಕೈ ತುಂಬಿಕೊಂಡು ದಂತದ ಗೊಂಬೆಯಂತಿದ್ದಳು.ಹಾಗಾಗಿ ಆಸುಪಾಸಿನ ಯುವಕರ ಆಸೆಯ ಕಣ್ಣುಗಳು ಸದಾ ಅವಳನ್ನು ಹಿಂಬಾಲಿಸುತ್ತ ಅವಳ ಸೌಂದರ್ಯವನ್ನು ಸವಿಯಲು ಹವಣಿಸುತ್ತಿದ್ದುವು. ಆದರೆ ಅವಳ ಕನಸು ಮನಸಿನಲ್ಲೂ ಲಕ್ಷ್ಮಣನೇ ತುಂಬಿರುತ್ತಿದ್ದ. ಅವನ ಒಡನಾಟದಲ್ಲಿ ಅವಳ ಮೈಮನಸ್ಸುಗಳು ಸದಾ ಅರಳಿ ನಳನಳಿಸುವ ಹೂಗಳಾಗುತ್ತಿದ್ದವು. ಅವನಿಂದ ಸಿಗುತ್ತಿದ್ದ ಮೃದು ಮಧುರವಾದ ಭದ್ರತೆಯೊಂದು,ಅವನೇ ತನ್ನ ಜೀವದ ಗೆಳೆಯನೆಂದು ಅವಳು ನಿರ್ಧರಿಸುವಂತೆ ಮಾಡಿತ್ತು. ಹೀಗಾಗಿ ಅವಳು ಅವನ ಸ್ನೇಹ ಮತ್ತುಸಾಮಿಪ್ಯಕ್ಕಾಗಿ ಪ್ರತಿಕ್ಷಣವೂ ಹಂಬಲಿಸುತ್ತಿದ್ದಳು.ಆದರೆ ಆರಂಭದಲ್ಲಿ ಕೆಲವು ಕಾಲ ಇಂಥ ಮನಸ್ಥಿತಿಯು ಅವಳಲ್ಲಿ ತಪ್ಪಿತಸ್ಥಭಾವನೆಯನ್ನೂ ಭಯವನ್ನೂ ಸೃಷ್ಟಿಸಿ ಅವನಿಂದ ದೂರವಿರುವಂತೆ ಮಾಡುತ್ತಿತ್ತು. ಆಗೆಲ್ಲಒಂಟಿಯಾಗಿ ಕುಳಿತು ಯೋಚಿಸುತ್ತಿದ್ದವಳು,ತಾವಿಬ್ಬರೂ ರಕ್ತ ಸಂಬಂಧಿಗಳಲ್ಲವಾ…? ನಮ್ಮನ್ನು ಗಂಡ ಹೆಂಡತಿಯರಾಗಲು ಮನೆಯವರು ಒಪ್ಪುತ್ತಾರಾ…? ಎಂದುಕೊಂಡು ವಿಚಲಿತಳಾಗುತ್ತಿದ್ದಳು. ಮರುಕ್ಷಣಇಲ್ಲ, ಇಲ್ಲ.ಖಂಡಿತಾ ಯಾರೂ ಒಪ್ಪಲಿಕ್ಕಿಲ್ಲ. ಯಾಕೆಂದರೆ ನಮ್ಮಿಬ್ಬರನ್ನೂ ಅವರುಅಣ್ಣ ತಂಗಿಯರಂತೆಯೇ ಬೆಳೆಸಿದವರು ಮತ್ತು ನಾವು ಕೂಡಾ ಹಾಗೆಯೇ ಇರುವಂತೆ ಸೂಕ್ಷ್ಮವಾಗಿ ಎಚ್ಚರಿಸುತ್ತಲೂ ಬಂದವರು. ಹೀಗಾಗಿ ನಮ್ಮ ಸಂಬಂಧದ ಬಗ್ಗೆ ತಿಳಿದರೆ ಸುಮ್ಮನಿರುತ್ತಾರಾ? ಅಷ್ಟಲ್ಲದೆ ಆನಂತರ ಅವರ ಮುಂದೆ ತಲೆಯೆತ್ತಿ ತಿರುಗುವುದಾದರೂ ಹೇಗೆ…? ಎಂದೆಲ್ಲ ಚಿಂತಿಸುತ್ತ ಮೌನವಾಗಿ ಕಣ್ಣೀರಿಡುತ್ತಿದ್ದಳು.ಆದರೆ ಮತ್ತೆ,ಅದೇನೇ ಆದರೂನನ್ನ ಲಕ್ಷ್ಮಣನನ್ನು ಬಿಟ್ಟು ಬದುಕುವ ಶಕ್ತಿ ಖಂಡಿತಾ ತನಗಿಲ್ಲ. ಅವನು ನನ್ನ ಪ್ರಾಣ! ನಾನು ಮದುವೆಯೆಂದು ಆಗುವುದಾದರೆ ಅವನನ್ನೇ ಹೊರತು ಬೇರೆ ಯಾರನ್ನೂ ಕಣ್ಣೆತ್ತಿಯೂ ನೋಡುವುದಿಲ್ಲ! ಎಂದು ನಿರ್ಧರಿಸಿನಿರಾಳಳಾಗುತ್ತಿದ್ದಳು. ಹೀಗೆಸರಿ, ತಪ್ಪುಗಳು ಯಾವುವು? ಎಂದರಿಯದ ವಯಸ್ಸಿನಲ್ಲಿದ್ದ ಅವಳುಲಕ್ಷ್ಮಣನ ಮೇಲಿನ ರಕ್ತ ಸಂಬಂಧವೆಂಬ ಭಾವಬಂಧನದಿಂದ ನಿಧಾನವಾಗಿ ಕಳಚಿಕೊಂಡುಬಿಟ್ಟಳು.
ಆದರಿತ್ತ ಲಕ್ಷ್ಮಣನ ಸ್ಥಿತಿ ಹೇಗಿತ್ತೆಂದರೆ, ತನ್ನ ಮನೆಮಂದಿಯೆಲ್ಲ, ‘ನಿನ್ನ ಸಹೋದರಿ ಸಮಾನಳು!’ ಎಂದೆನ್ನುತ್ತಿದ್ದ ಹುಡುಗಿಯೊಬ್ಬಳನ್ನುತನ್ನ ಸಂಗಾತಿಯೆಂದು ಅಥವಾ ಗಂಡೊಂದು ಹೆಣ್ಣನ್ನು ಬಯಸುವ ರೀತಿಯಲ್ಲಿ ಸರೋಜಾಳಷ್ಟು ಬೇಗನೇ ಮತ್ತು ಅದೇತೀವ್ರತೆಯಲ್ಲಿಬಯಸಲು ಹಾಗೂಮನಸಾರೆ ಒಪ್ಪಿಕೊಳ್ಳಲುಅವನ ಮನಸ್ಸಿನ್ನೂ ಪರಿಪಕ್ವವಾಗಿರಲಿಲ್ಲ. ಹಾಗಾಗಿ ಪುಟ್ಟ ಬಾಲಕಿಯಾಗಿ ಚುರುಕಿನ ಹುಡುಗಿಯಾಗಿ ಆಪ್ತ ಗೆಳತಿಯಾಗಿ ಒಡನಾಡುತ್ತ ಬೆಳೆದವಳೊಬ್ಬಳು ವಯಸ್ಸಿಗೆ ಬಂದ ಮೇಲೆತನ್ನನ್ನು ಕಾಣುವಾಗಲೆಲ್ಲ ವಯ್ಯಾರದಿಂದ ವರ್ತಿಸುತ್ತವಿಚಿತ್ರ ನಾಚಿಕೆಯಿಂದ, ‘ಏನೋ ಒಂಥರಾ…!’ ನೋಡತೊಡಗಿದ್ದುದುಮತ್ತು ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕುಳಿತಲ್ಲಿಸದಾ ತನ್ನ ಸಾಂಗತ್ಯವನ್ನೇ ಬಯಸುತ್ತಿದ್ದುದರಒಳಾರ್ಥವುಅವನಿಗೆ ಮೊದಮೊದಲು ಹೊಳೆಯಲೇ ಇಲ್ಲ. ಆದರೆಆ ‘ಏನೋ ಒಂಥರಾ!’ಕ್ಕೆ ಸಂಬಂಧಿಸಿದ ಭಾವನೆ, ಯೋಚನೆಗಳು ತನ್ನೊಳಗೂ ಮೂಡುತ್ತಿದ್ದುದು ಮಾತ್ರಅವನಿಗೂ ಅಚ್ಚರಿಯೆನಿಸುತ್ತಿತ್ತು.
ಆಗೀಗೊಮ್ಮೆ ತಮ್ಮ ನಡುವೆ ಹುಟ್ಟುತ್ತಿದ್ದ ಮುನಿಸು, ಕಚ್ಚಾಟದಲ್ಲಿ ನಾವು ಒಬ್ಬರನ್ನೊಬ್ಬರು ಬಯಸುವ ರೀತಿಯನ್ನು ಗಮನಿಸುತ್ತಬರುತ್ತಿದ್ದ ಹೆತ್ತವರು ನಮ್ಮನ್ನು ಸೂಕ್ಷ್ಮವಾಗಿ ಎಚ್ಚರಿಸಲೆಂದೋ ಅಥವಾ ಖುಷಿಯಿಂದಲೋ,‘ಹೇ, ಲಕ್ಷ್ಮಣಾ ಯಾಕೆ ಮಾರಾಯಾ ಅವಳನ್ನು ಯಾವಾಗಲೂ ಸತಾಯಿಸುತ್ತೀ…? ನಿನ್ನ ತಂಗಿಯಲ್ಲವನಾ ಅವಳು! ಹಾಗೆಲ್ಲ ನೋಯಿಸಬಾರದನಾ…!’ ಎನ್ನುತ್ತಿದ್ದವರು, ‘ಲೇ, ಸರೋಜಾನೀನೂ ಯಾಕೆ ಮಾರಾಯ್ತೀ ಅವನಿಗೆ ಸರಿಸಮವಾಗಿ ಜಗಳಕ್ಕೆ ನಿಲ್ಲುತ್ತೀ…? ಅವನೊಡನೆ ಗುದ್ದಾಡಿ ಗೆಲ್ಲಲು ಸಾಧ್ಯ ಉಂಟಾ ನಿನ್ನಿಂದ!ಅವನು ನಿನ್ನ ಅಣ್ಣನಲ್ಲವನಾ…ಯಾಕೆ ಗೋಳುಹೊಯ್ದುಕೊಳ್ಳುತ್ತೀ…?’ ಎಂದು ಮೃದುವಾಗಿ ಗದರಿಸುತ್ತಿದ್ದುದೂ ಲಕ್ಷ್ಮಣನನ್ನು ಆಗಾಗ ಗೊಂದಲಕ್ಕೀಡು ಮಾಡುತ್ತಿತ್ತು. ಆದರೂ,‘ಸರೋಜ ತನ್ನ ತಂಗಿಯ ಸಮಾನಳು!’ ಎಂಬ ಭಾವನೆಯು ಅವನಲ್ಲೆಂದೂ ಹುಟ್ಟಿರಲಿಲ್ಲ. ಅಷ್ಟಲ್ಲದೇ ಅವನು ಯಾವ ವಿಷಯವನ್ನೇ ಆಗಲಿ ಅಷ್ಟೊಂದು ಗಂಭೀರವಾಗಿಯೋಚಿಸುವ, ಸ್ವೀಕರಿಸುವ ಸ್ವಭಾವದವನೂ ಅಲ್ಲ ಮಾತ್ರವಲ್ಲದೇಅಂಥದ್ದನ್ನೆಲ್ಲ ತರ್ಕಿಸುತ್ತ ಕೂರುವವಯಸ್ಸೂ ಅವನದಾಗಿರಲಿಲ್ಲ.
ಆದ್ದರಿಂದ ಸರೋಜಾಳ ಮೇಲೆಅವನಲ್ಲೂ ವಿಶೇಷ ಆಕರ್ಷಣೆಯೊಂದು ಮೊಳೆತುಅದಕ್ಕೆ ಸರಿಯಾಗಿ ಹದಿಹರೆಯದ ಕಾಮನೆಗಳೆದ್ದು ಅವಳ ಸೌಂದರ್ಯದ ಮೂಲಕ ಅವನನ್ನು ಕಾಡಲಾರಂಭಿಸಿದವು. ಅವನ ಅಂಥ ಭಾವನೆಗಳಿಗೆ ಇನ್ನಷ್ಟು ಇಂಬು ನೀಡುತ್ತಿದ್ದಇನ್ನೊಂದು ಮುಖ್ಯ ಸಂಗತಿಯೆಂದರೆ,‘ನಮ್ಮ ಸರೋಜಹೋಲಿಕೆಯಲ್ಲಿ ಥೇಟ್ ಸಿನೇಮಾ ತಾರೆ ಶ್ರೀದೇವಿಯಂತೆಯೇ ಇದ್ದಾಳಲ್ಲವಾ!’ ಎಂದು ಮನೆಮಂದಿಯು ಆಗಾಗಅವನೆದುರು ಹೊಗಳುತ್ತಿದ್ದುದೂ ಅವನೊಳಗೆ ಮಾರ್ದನಿಸುತ್ತ,ಮೋಹಕ ತಾರೆ ಶ್ರೀದೇವಿಯೇ ಸರೋಜಾಳ ರೂಪದಲ್ಲಿ ತನ್ನೊಂದಿಗಿರುವಂತೆ ಅವನು ಭಾವಿಸುತ್ತಿದ್ದವನುಅದೇ ಭ್ರಮೆಯಿಂದ ಅವಳನ್ನು ಗಾಢವಾಗಿ ಪ್ರೇಮಿಸತೊಡಗಿದ್ದ. ಹೀಗಿದ್ದವರು ಆವತ್ತೊಂದು ದಿನ ಸಂಜೆ ಸೂರ್ಯನ ಹೊಂಗಿರಣಗಳು ತೋಟದೊಳಗೆಲ್ಲ ಮೃದುವಾಗಿ ಹರಡಿದ್ದ ಸಮಯದಲ್ಲಿ ಹಕ್ಕಿಪಕ್ಷಿಗಳ ಇಂಪಾದ ಕಲರವದ ನಡುವಿನ ಮನೋಹರ ಪರಿಸರದೊಳಗೆಸುಮಾರು ಹೊತ್ತು ಜೋಡಿ ಹಕ್ಕಿಗಳಂತೆ ವಿಹರಿಸುತ್ತ ಮುದಗೊಂಡರು. ಆದರೆ ತಮ್ಮೊಳಗಿನಹತ್ತಿಕ್ಕಲಾರದಂಥ ಭಾವತೀವ್ರತೆಗಳೆಲ್ಲಿ ಎಲ್ಲೇ ಮೀರುತ್ತವೋ ಎಂದು ಭಯಪಟ್ಟವರು ಕತ್ತಲಾಗುವ ಮೊದಲೇ ಮನೆಗೆ ಹಿಂದಿರುಗಿದರು.
ಸರೋಜಾ, ಕೈಕಾಲು ತೊಳೆಯಲೆಂದು ಬಚ್ಚಲು ಕೋಣೆಯನ್ನು ಹೊಕ್ಕವಳು ತನ್ನ ಉದ್ದ ಲಂಗವನ್ನು ಮೊಣಗಂಟಿನವರೆಗೆತ್ತಿ ಸೊಂಟಕ್ಕೆ ಸಿಲುಕಿಸಿಕೊಂಡು ಹಂಡೆಯಿಂದ ನೀರನೆತ್ತಿ ಕಾಲು ತೊಳೆಯಲು ಬಾಗಿದಳು. ಆಗಲೂಅವಳ ಹಿಂದೆಯೇ ಬಂದಿದ್ದ ಲಕ್ಷ್ಮಣನು ಅವಳ ಬಾಗಿದ ಭಂಗಿಯನ್ನು ಕಂಡು ಒಂದುಕ್ಷಣ ತನ್ನನ್ನು ತಾನು ಮರೆತು ಅವಳ ಹಿಂದಿನಿಂದ ಬಾಚಿ ತಬ್ಬಿಕೊಂಡುಬಿಟ್ಟ. ಸರೋಜಾ ಒಮ್ಮೆಲೆ ಬೆಚ್ಚಿಬಿದ್ದಳು. ಮರುಕ್ಷಣ ಅವಳಿಗೆ ವಿಪರೀತ ಭಯವಾಗಿ ದೇಹವಿಡೀ ಕಂಪಿಸಿತು.ರಪ್ಪನೇ ಅವನಿಂದ ಕೊಸರಾಡಿ ತಪ್ಪಿಸಿಕೊಂಡು ಒಳಗೆ ಓಡಿದಳು. ಆದರೆ ಕೋಣೆಗೆ ಹೋಗಿ ಕುಳಿತವಳು ನಡುಗುತ್ತಿದ್ದ ತನ್ನ ದೇಹವನ್ನೂ ತಾಳ ತಪ್ಪಿದ ಹೃದಯನ್ನೂ ಹಿಡಿತಕ್ಕೆ ತಂದುಕೊಳ್ಳಲು ಹೆಣಗುತ್ತ ಅದೇ ಘಟನೆಯ ಬಗ್ಗೆ ಯೋಚಿಸಿದಳು. ಆಗ ಅವಳಿಗೆ ತನ್ನ ಅಂಥ ಸ್ಥಿತಿಯಲ್ಲೂ ಒಂದು ವಿಷಯ ಸ್ಪಷ್ಟವಾಯಿತು. ‘ಲಕ್ಷ್ಮಣನೂ ತನ್ನನ್ನು ಬಯಸುತ್ತಿದ್ದಾನೆ!’ಅಷ್ಟನ್ನಿಸುತ್ತಲೇ ಅವಳಮನಸ್ಸು ಅರಳಿ ಹೂವಾಯಿತು. ಆವತ್ತಿನಿಂದ ಇಬ್ಬರೂ ಸಂಪೂರ್ಣ ಬದಲಾಗಿಬಿಟ್ಟರು. ಮನೆಮಂದಿಯ ಜೊತೆಯಲ್ಲಿರುವಾಗ ಏನೂ ಅರಿಯದ ಮುಗ್ಧರಂತೆ ಇರುತ್ತಿದ್ದವರಿಗೆ ಒಂದಿಷ್ಟುಏಕಾಂತ ದೊರಕುತ್ತಲೇ ಅವರೊಳಗಿನ ಪ್ರೀತಿಯ ಭಾವನೆಗಳುಗರಿಗೆದರಿ ಕುಣಿಯುತ್ತಿದ್ದವು. ಹಗಲಲ್ಲಿ,ಮನೆಯಲ್ಲಿ ಯಾರೂ ಇಲ್ಲದ ಸಮಯ ಮತ್ತುಇದ್ದರೂ ಅವರು ಮಧ್ಯಾಹ್ನದ ಹೊತ್ತು ನಿದ್ರಿಸುವ ಸಣ್ಣ ವೇಳೆಯೂ ಈ ಪ್ರೇಮಿಗಳಿಗೆ ರಸಮಯಸಂದರ್ಭವಾಗುತ್ತಿತ್ತು. ಆಗೆಲ್ಲಾ ವಿಶಾಲವಾದದನದ ಹಟ್ಟಿಯ ಮೇಲಿನ ಅಟ್ಟವೂಮತ್ತು ಹಿತ್ತಲ ತೋಟದ ಗಿಡಮರ, ಬಳ್ಳಿಗಳೂ ಇವರ ಪ್ರೇಮ ಸಲ್ಲಾಪದ ಮಾಧುರ್ಯಕ್ಕೆ ಸಾಕ್ಷಿಯಾಗುತ್ತಿದ್ದವು.
ಸುಮಾರು ನಾಲ್ಕೈದು ತಲೆಮಾರುಗಳು ಬದುಕಿ ಬಾಳಿದಂಥ ತುಂಡುಪ್ಪರಿಗೆಯ ಮನೆ ಸರೋಜ ಮತ್ತು ಲಕ್ಷ್ಮಣರದ್ದು. ಮನೆಯ ಹಿಂದುಗಡೆ ಮಾವು, ಗೇರು, ಹುಣಸೆ, ಅಂಬಟೆ, ನುಗ್ಗೆ ಮತ್ತು ಹಲಸಿನ ಮರಗಳಿದ್ದ ಕಾಡಿನಂಥವಿಶಾಲತೋಟ. ಅದರಲ್ಲಿ ಮನೆಯಷ್ಟೇ ಪುರಾತನವಾದ ಮತ್ತು ಮೂರಾಳುಗಳು ಬಳಸಿ ಹಿಡಿಯುವಷ್ಟು ಅಗಲವಾದ ಹಲಸಿನ ಮರವೊಂದಿತ್ತು.ಹಿಂದಿನಿಂದಲೂ ಸಮೃದ್ಧ ಫಲ ನೀಡುತ್ತಿದ್ದ ಆ ಮರದ ‘ಬಕ್ಕೆ’ ಹಣ್ಣುಗಳನ್ನು ತಿನ್ನುತ್ತಅದರ ಸುತ್ತಮುತ್ತ ಖುಷಿಯಿಂದ ಓಡಾಡುತ್ತ ಮರ ಕೋತಿ, ಮುಟ್ಟಾಟಗಳನ್ನಾಡುತ್ತ ಬೆಳೆದ ಸರೋಜ, ಲಕ್ಷ್ಮಣರ ಇಂದಿನ ಪ್ರಣಯದಾಟಕ್ಕೂ ಅದೇ ಮರವುರಹಸ್ಯ ವೇದಿಕೆಯಾಗಿ ಮಾರ್ಪಟ್ಟಿತ್ತು. ಆ ಮರವೂ ತನ್ನ ದೈತ್ಯ ರೆಂಬೆಕೊಂಬೆಗಳನ್ನು ಚಾಚಿಕೊಂಡು ಎಳೆಯ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತ ಅವರ ಹದಿಹರೆಯದ ನವಿರು ಭಾವನೆಗಳಿಗೆ ಜೀವ ತುಂಬುತ್ತಿತ್ತು. ಈ ವರ್ಷವೂ ಆ ಮರತನ್ನ ಮೈತುಂಬಾನೂರಾರು ಹಲಸುಗಳನ್ನು ತುಂಬಿಕೊಂಡು ಪ್ರಸವಕ್ಕೆ ಅಣಿಯಾದ ಬಸುರಿಯಂತೆ ಕಾಣುತ್ತಿತ್ತು. ಅದೊಂದು ಸಂಜೆಯ ಹೊತ್ತು ಈ ಪ್ರೇಮಿಗಳು, ಮರದದೈತ್ಯ ಕೊಂಬೆಯೊಂದರ ಮೇಲೆ ಮರೆಯಾಗಿ ಕುಳಿತುಕೊಂಡು ಸರಸ ಸಲ್ಲಾಪದಲ್ಲಿ ಮೈಮರೆತಿದ್ದರು.
ಇತ್ತ ಸರೋಜಾಳ ತಂದೆ ವಿಶ್ವನಾಥ ಆ ಮರದಲ್ಲಿ ಬಲಿತಿದ್ದ ಕೆಲವು ಹಲಸುಗಳನ್ನು ಹಿಂದಿನ ದಿನವೇ ಗುರುತಿಸಿ ಇಟ್ಟಿದ್ದ. ಆದರೆ ನಾಳೆ ಕೊಯ್ದರಾಯ್ತೆಂದು ಕೊಂಡ ಮರುದಿನ ಗದ್ದೆಯ ಕೆಲಸ ಮುಗಿಸಿ ಸೀದಾ ತೋಟ ಹೊಕ್ಕುಮರದ ಬುಡಕ್ಕೆ ಬಂದು ನಿಂತ. ಮತ್ತೊಮ್ಮೆ, ‘ಎಷ್ಟು ಹಲಸುಗಳು ಬಲಿತಿವೆ…?’ ಎಂದು ಕೊರಳೆತ್ತಿ ಪರೀಕ್ಷಿಸತೊಡಗಿದ.ಅದೇ ಸಮಯಕ್ಕೆ ಸಿಹಿಮುತ್ತಿನ ಲೋಕದಲ್ಲಿ ಕಳೆದು ಹೋಗಿದ್ದ ಯುವ ಜೋಡಿಗೆ ಮರದ ಕೆಳಗೆ ಯಾರೋ ಬಂದು ನಿಂತದ್ದು ಅರಿವಿಗೆ ಬರಲೇಇಲ್ಲ. ಇತ್ತ ಯಾರದೋ ಗುಸುಗುಸು ಸದ್ದು, ಮುಲುಗುವಿಕೆಯನ್ನು ಆಲಿಸಿದ ವಿಶ್ವನಾಥ, ‘ಯಾರದು…?’ ಎಂದು ಜೋರಾಗಿ ಅಂದವನು ಸುತ್ತಲೊಮ್ಮೆ ದಿಟ್ಟಿಸಿದ. ಯಾರೂ ಕಾಣಿಸಲಿಲ್ಲ. ಅನುಮಾನದಿಂದ ಉಸಿರು ಬಿಗಿ ಹಿಡಿದು ಕಿವಿಗೊಟ್ಟ. ಸಂಭಾಷಣೆಯು ಮರದ ಮೇಲಿನಿಂದ ಬರುತ್ತಿದ್ದುದು ತಿಳಿಯಿತು.
ಕಾಡು ಮಂಗನಂತೆ ನಿಶ್ಶಬ್ದವಾಗಿ ಮರ ಹತ್ತಿದ. ಆದರೆ ಅಲ್ಲಿನ ದೃಶ್ಯವನ್ನು ಕಂಡು ಅವಕ್ಕಾದ.‘ಅಯ್ಯಯ್ಯೋ, ಹಡಬೆಗಳೇ…! ಇದೆಂಥದನಾ ನಿಮ್ಮಕೆಲಸಾ…? ಥೂ…ಇಳಿರಾ ಬೇವರ್ಸಿಗಳಾ…!’ ಎಂದು ಗುಡುಗಿದ. ಲಕ್ಷ್ಮಣ ಮತ್ತು ಸರೋಜ ಅವನನ್ನು ಕಂಡವರು ಬೆಚ್ಚಿಬಿದ್ದರು. ಲಕ್ಷ್ಮಣ,ಮಾವನನ್ನು ಗಾಬರಿಯಿಂದ ದಿಟ್ಟಿಸಿದವನು ತಲೆತಗ್ಗಿಸಿ ಕುಳಿತುಬಿಟ್ಟ. ಸರೋಜಾಳ ಮೈಯಿಡೀಭಯದಿಂದ ಕಂಪಿಸುತ್ತಿತ್ತು. ಅವಳು,‘ಅಯ್ಯಯ್ಯೋ…ಅಪ್ಪಾ…!’ ಎಂದು ಕಿರುಚಿ ಬೆಕ್ಕಿನ ಮರಿಯಂತೆ ತಲೆಯನ್ನು ಮೊಣಗಂಟುಗಳೊಳಗೆ ತೂರಿಸಿ ಬಿಕ್ಕಳಿಸುತ್ತ ಕುಳಿತಳು. ವಿಶ್ವನಾಥ ರೋಷದಿಂದಮರವಿಳಿದವನು,‘ಥೂ! ಮಾನಮರ್ಯಾದೆ ಬಿಟ್ಟ ನಾಯಿಗಳೆಲ್ಲಿಯಾದರೂ…! ಇಳಿತಿರಾ ಇಲ್ವಾ…!’ ಎಂದು ಮತ್ತೊಮ್ಮೆ ಅಬ್ಬರಿಸಿದ.
ಆಗ ಇಬ್ಬರೂ ಅಳುಕುತ್ತ ಇಳಿದರು. ಲಕ್ಷ್ಮಣ ಕೆಳಗಿಳಿಯುತ್ತಲೇವಿಶ್ವನಾಥ ರಪ್ಪನೆ ಅವನ ಕತ್ತಿನ ಪಟ್ಟಿಯನ್ನು ಹಿಡಿದುರಪರಪನೆಕೆನ್ನೆಗೆ ಬಾರಿಸುತ್ತ,‘ಬೋಳಿಮಗನೇ, ಯಾವತ್ತಿನಿಂದ ನಡೀತಾ ಇದೆಯಾ ಈ ನಿಮ್ಮ ಹಲ್ಕಟ್ ಕಿತಾಪತಿ…? ನಿನ್ನ ತಂಗಿಯಂಥವಳ ಮೇಲೆಯೇ ಕಣ್ಣು ಹಾಕಿಬಿಟ್ಟೆಯಲ್ಲವನಾ ನಾಯೀ…!’ ಎಂದೆನ್ನುತ್ತ ಅವನನ್ನು ಒದ್ದು ದೂರ ತಳ್ಳಿದವನು, ಮಗಳ ಜುಟ್ಟು ಹಿಡಿದು ಬೆನ್ನಿಗೆ ದಬದಬನೇ ಗುದ್ದುತ್ತ ಮನೆಯತ್ತ ಎಳೆದೊಯ್ದ. ಮಾವನ ಒರಟು ಹಸ್ತದೇಟಿಗೆ ಲಕ್ಷ್ಮಣನ ಕೆನ್ನೆಗಳೆರಡೂ ನೋವಿನಿಂದ ಚುರ್ರ್ ಗುಟ್ಟುತ್ತಿದ್ದವು. ಅತ್ತ ಅಪ್ಪನ ಹೊಡೆತ ತಾಳಲಾಗದೆ ಸರೋಜಾಳೂ ಚೀರುತ್ತ ಹೋಗುತ್ತಿದ್ದಳು. ಅದನ್ನು ಕಂಡ ಲಕ್ಷ್ಮಣನಿಗೆರೋಷ ಉಕ್ಕಿ ಬಂತು. ಆದರೆ ಅದರ ಹಿಂದೆ ತಮ್ಮ ಕಳ್ಳಾಟ ಬಯಲಾದ ದಿಗಿಲೂ ಅವನನ್ನು ಕಾಡತೊಡಗಿತು. ಆದ್ದರಿಂದಕೋಪದಿಂದ ಕೈಕೈ ಹಿಸುಕಿಕೊಳ್ಳುತ್ತ ಗುಡ್ಡದ ಕಡೆಗೆ ದಾಪುಗಾಲಿಕ್ಕಿದ.
ಆಹೊತ್ತು ಚಿನ್ನಕ್ಕ ದನದ ಕೊಟ್ಟಿಗೆಯಲ್ಲಿ ಸೊಪ್ಪು ಹರಡುತ್ತಿದ್ದಳು.ಆದರೆ ದೂರದಿಂದ ಕೇಳಿ ಬರುತ್ತಿದ್ದ ಮಗಳ ಬೊಬ್ಬೆಯನ್ನು ಕೇಳಿ ಗಾಬರಿಯಿಂದ ಹೊರಗೆ ಧಾವಿಸಿ ಬಂದಳು. ಅಷ್ಟೊತ್ತಿಗೆ ವಿಶ್ವನಾಥ ಮಗಳನ್ನು ಎಳೆದು ತಂದವನು ಅಂಗಳದಲ್ಲಿ ಕೊಡವಿ ಒಂದೇ ಸಮನೆ ಬಡಿಯುತ್ತಿದ್ದ.‘ಅಯ್ಯಯ್ಯೋ ದೇವರೇ…! ಯಾಕೆ ಮಾರಾಯ್ರೇ ಮಗುವನ್ನು ಹಾಗೆ ಹೊಡೆಯುತ್ತೀರಿ…?’ಎಂದ ಚಿನ್ನಕ್ಕ ರುಮ್ಮನೇ ಧಾವಿಸಿ ಗಂಡನೊಂದಿಗೆ ಉರುಡಾಡಿ ಮಗಳನ್ನುಬಿಡಿಸಿಕೊಂಡಳು. ಆಗ ವಿಶ್ವನಾಥನ ಕೋಪ ತಟ್ಟನೆ ಹೆಂಡತಿಯತ್ತ ಹೊರಳಿತು. ಮರುಕ್ಷಣ ತಾನು ಕಂಡ ಘಟನೆಯನ್ನು ಅವಳಿಗೂಅಸಹ್ಯ ಹುಟ್ಟುವಂತೆವಿವರಿಸಿದವನು,‘ಎಲ್ಲಾ ನಿನ್ನಿಂದಲೇ ಆಗಿದ್ದುರಂಡೆ! ಪ್ರಾಯಕ್ಕೆ ಬಂದ ಹೆಣ್ಣು ಮಗಳನ್ನು ಸ್ವಲ್ಪ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದರೆ ಇವತ್ತು ಅಪ್ಪನಾದವನು ಇಂಥ ದರಿದ್ರವನ್ನು ನೋಡಲಿಕ್ಕಿತ್ತಾ? ಮೊದಲು ನಿನಗೆ ತುಳಿಯಬೇಕು ನಾಯಿ! ತೊಲಗು ಇಲ್ಲಿಂದ!’ ಎಂದು ಹೆಂಡತಿಗೂ ನಾಲ್ಕೇಟು ತುಳಿದು ದೂರ ತಳ್ಳಿದ. ಚಿನ್ನಕ್ಕ ಅಷ್ಟು ದೂರ ಹೋಗಿ ಬಿದ್ದವಳು ಜೋರಾಗಿ ಅಳತೊಡಗಿದಳು. ವಿಶ್ವನಾಥ ಮಗಳನ್ನು ಧರಧರನೇ ಎಳೆದೊಯ್ದು ಕೋಣೆಯೊಳಗೆ ತಳ್ಳಿರಪ್ಪನೆ ಬಾಗಿಲು ಹಾಕಿದವನು ಪಡಸಾಲೆಗೆ ಬಂದು ಕೆರಳಿದ ಹೋರಿಯಂತೆ ಶತಪಥ ಹಾಕುತ್ತ ಭಾವ ವಾಸುವನ್ನು ಕಾಯತೊಡಗಿದ.
ಲಕ್ಷ್ಮಣನ ಅಪ್ಪ ಐವತ್ತರ ಹರೆಯದ ವಾಸುವುವಿಶ್ವನಾಥನಂತೆ ದುಡುಕು ಸ್ವಭಾವದವನಲ್ಲ. ಅವನುಬಹಳ ಸಂಯಮಿಮತ್ತು ಮಿತಭಾಷಿ ಮನುಷ್ಯ. ದಿನವಿಡೀ ಒಂದಿಲ್ಲೊಂದು ಕೃಷಿಗೆಲಸದಲ್ಲಿ ತೊಡಗುವ ಶ್ರಮಜೀವಿ. ಆದ್ದರಿಂದ ಆವತ್ತೂ ಹೊತ್ತು ಕಂತುವವರೆಗೆ ತನ್ನ ಹೊಲಗದ್ದೆಗಳಲ್ಲಿ ಅವಿರತವಾಗಿ ದುಡಿದವನು ಕೆಲಸ ಮುಗಿಸಿ ಎತ್ತರದ ಕಟ್ಟದ ಹುಣಿಯ ಮೇಲೆ ಹೋಗಿ ನಿಂತುಕೊಂಡು ತಾನು ಉತ್ತು ಹದ ಮಾಡಿದ ಗದ್ದೆಗಳನ್ನೊಮ್ಮೆ ಉದ್ದಕ್ಕುದ್ದ ದಿಟ್ಟಿಸಿಸಂತೃಪ್ತಿಗೊಂಡ.ಬಳಿಕ ತನ್ನ ನೆಚ್ಚಿನ ಕೋಣಗಳನ್ನು ಅಟ್ಟಿಕೊಂಡು ಮನೆಯತ್ತ ಬಂದವನುಕೋಣಗಳನ್ನು ಹಟ್ಟಿಯಲ್ಲಿ ಕಟ್ಟಿ,ಹುಲ್ಲು ನೀರಿಟ್ಟು ಮನೆಯೊಳಗೆ ಹೆಜ್ಜೆಯಿಟ್ಟ.
ವಿಶ್ವನಾಥ ಭಾವನನ್ನು ಕಂಡವನು,‘ಓಹೋ,ಬಂದಿಯಾ ಭಾವಾ, ಬಾ ಬಾ! ಇವತ್ತು ನೀನೇ ಒಂದು ವಿಷಯವನ್ನು ತೀರ್ಮಾನ ಮಾಡಬೇಕು!’ ಎಂದು ಸಿಡಿಮಿಡಿಗುಟ್ಟುತ್ತ ಅಂದ.
ಅಷ್ಟು ಕೇಳಿದ ವಾಸುವು ಅವಕ್ಕಾಗಿ,‘ಏನಾಯಿತು ಮಾರಾಯಾ…? ಯಾಕೆ ಕೋಪದಲ್ಲಿದ್ದಿ…?’ಎಂದ ಮೃದುವಾಗಿ.
‘ಏನಾಯ್ತು ಅಂತ ಕೇಳ್ತೀಯಾ…? ಥೂ! ನಿನ್ನ ಬಿಲಾಸು ಬಿಟ್ಟ ಮಗ ಹೀಗೆ ಮಾಡುವುದಾ…?’
ವಾಸುವು ಮತ್ತಷ್ಟುವಿಚಲಿಸಿತನಾಗಿ,‘ಅಂಥದ್ದೇನಾಯಿತನಾ..? ಅವನೇನು ಮಾಡಿದ ನಿಂಗೆ?’ಎಂದಉದಾಸೀನದಿಂದ.
‘ಇನ್ನೇನು ಮಾಡಲಿಕ್ಕುಂಟು ಭಾವಾ! ಒಂದೇ ಕುಟುಂಬದ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಇವತ್ತು ನೋಡಿದರೆ ಮದವೇರಿ ಹಲಸಿನ ಮರದ ಮೇಲೆ ಕುಳಿತು ಒಬ್ಬರನ್ನೊಬ್ಬರು ಗಟ್ಟಿಯಾಗಿಅಮರಿಕೊಂಡಿದ್ದರು. ಅದನ್ನು ನೋಡಿದಾಕ್ಷಣ ನನ್ನ ಎದೆಗೆ ಕಲ್ಲು ಹಾಕಿದಂತಾಯಿತು ಗೊತ್ತುಂಟಾ…? ಇಂಥವುಗಳನ್ನು ಏನು ಮಾಡಬೇಕೆಂದು ನೀನೇ ಹೇಳಬೇಕು. ನನಗಂತೂ ಅವುಗಳನ್ನು ಕತ್ತರಿಸಿ ಅದೇ ಮರದ ಬುಡದಲ್ಲಿ ಹೂತು ಹಾಕುವ ಅಂತನ್ನಿಸುತ್ತಿದೆ. ಮಾನಗೆಟ್ಟವೆಲ್ಲಿಯಾದರೂ!’ ಎಂದಅಸಹನೆಯಿಂದ. ವಾಸುವು ಒಮ್ಮೆಲೇ ದಿಗ್ಭ್ರಾಂತನಾಗಿ ಅಯ್ಯೋ ದೇವರೇ, ಈ ಮಕ್ಕಳಿಗ್ಯಾಕೆ ಇಂಥ ದುರ್ಬುದ್ಧಿ ಬಂತಪ್ಪಾ…! ಎಂದುಕೊಂಡವನಿಗೆ ಅಸಹ್ಯವೆನಿಸಿತು.
‘ಛೀ! ನೀನೆಂಥದು ಮಾರಾಯಾಮಾತಾಡುವುದು…ಸರಿಯಾಗಿ ನೋಡಿಕೊಂಡು ಮಾತಾಡ್ತಿದ್ದೀಯಾಹೇಗೇ…?’
‘ಇನ್ನು ನನ್ನ ಬೊಜ್ಜ ನೋಡುವುದೊಂದು ಬಾಕಿ ಭಾವಾ. ಅವುಗಳ ದರಿದ್ರದ ಆಟವನ್ನು ಇದೇ ಹಾಳು ಕಣ್ಣುಗಳಿಂದ ಈಗಷ್ಟೇ ನೋಡಿ ಬಂದೆ. ಸುಳ್ಳು ಹೇಳಲಿಕ್ಕೆನಂಗೇನು ಹುಚ್ಚು ಹಿಡಿದಿದೆಯಾ…?’ ಎಂದು ವಿಶ್ವನಾಥ ಇನ್ನಷ್ಟು ಕುದಿಯುತ್ತ ಅಂದ.
‘ಥೂ! ಈ ಮಕ್ಕಳಿಗೆ ಎಂಥ ಚರ್ಬಿ ಬಂತಪ್ಪಾ…! ಎಲ್ಲಿದ್ದಾವೆ ಅವು? ಕರೆ ಆ ನಾಯಿಗಳನ್ನು…!’
‘ನಿನ್ನ ಮಗ ಎತ್ತಲೋ ಓಡಿ ಹೋಗಿದ್ದಾನೆ. ಇವಳನ್ನು ಹಿಡಿದು ತಂದು ಕೋಣೆಯಲ್ಲಿ ಕೂಡಿ ಹಾಕಿದ್ದೇನೆ!’ ಎಂದ ವಿಶ್ವನಾಥನಿಗೆ ಭಾವನೂ ಕೆರಳಿದ್ದು ಒಣ ಪೊದೆಗೆ ಬೆಂಕಿಯಿಟ್ಟಂತಾಯಿತು.
‘ಯಾವುದಕ್ಕೂ ಅವನೊಮ್ಮೆ ಮನೆಗೆ ಬಂದುಕೊಳ್ಳಲಿ. ಇಬ್ಬರ ಹುಚ್ಚನ್ನೂ ಒಟ್ಟಿಗೆ ಬಿಡಿಸಲಿಕ್ಕುಂಟು!’ ಎಂದು ವಿಶ್ವನಾಥ ಧುಮುಗುಟ್ಟುತ್ತ ಹೊರಗೆ ನಡೆದ. ಈ ವಿಷಯವು ಕೂಡಲೇ ಮನೆಮಂದಿಗೆಲ್ಲ ತಿಳಿಯಿತು. ಲಕ್ಷ್ಮಣನ ತಾಯಿ ರತ್ನಕ್ಕ, ಅಜ್ಜ, ಅಜ್ಜಿ, ಅಕ್ಕ, ತಂಗಿ, ಅಣ್ಣ, ತಮ್ಮಂದಿರೂಮತ್ತು ಪುಟ್ಟಮಕ್ಕಳೆಲ್ಲ ವರಾಂಡದಲ್ಲಿ ಸೇರಿ, ‘ಅಯ್ಯಯ್ಯೋ ದೇವರೇ! ಮುಂದೆನಾಗುವುದೋ…?’ಎಂಬಭಯ, ದುಃಖದಿಂದ ಮಂಕಾಗಿ ಕುಳಿತುಕೊಂಡರು. ಒಂದು ಗಳಿಗೆಯ ಹಿಂದಷ್ಟೇ ಆನಂದೊಲ್ಲಾಸದಿಂದ ತುಂಬಿ ತುಳುಕುತ್ತಿದ್ದ ಆ ಮನೆಯು ಕ್ಷಣಾರ್ಧದಲ್ಲಿ ತೀವ್ರ ವಿಷಾದದ ಸುಳಿಯಲ್ಲಿ ಸಿಲುಕಿ ನರಳತೊಡಗಿತು.
(ಮುಂದುವರೆಯುವುದು)