ಸಂಪಾದಕರು: ಡಾ ಕಮಲಾ ಹೆಮ್ಮಿಗೆ
ಮಾರುತಿ ಪ್ರಿಂಟರ್ಸ , ಬೆಂಗಳೂರು.
ಕೊರೋನಾ ಜಗತ್ತಿನ ಸಕಲ ಚಟುವಟಿಕೆಯ ಮೇಲೂ ನೆರಳು ಚೆಲ್ಲಿದ ರೋಗ. ಬದುಕಿನ ಬೆಳಕೇ ಮಂಕಾದಾಗ ಏನೆಲ್ಲ ನಡೆಯಿತು? ಎನ್ನುವುದನ್ನು ಕನ್ನಡದ ಕತೆಗಾರ ಕಥೆಗಾರ್ತಿಯರಿಂದ ಬರೆಸುವ ವಿಚಾರ ಬಂದಿದ್ದು ಡಾ ಕಮಲಾ ಹೆಮ್ಮಿಗಿಯವರಿಗೆ. ಸಂಪಾದಿತ ಪುಸ್ತಕವಾಗಿ ಕೊರೋನಾ ಕಾಲದ ಘಟನೆಗಳನ್ನು ಬರೆದುಕೊಡಿ ಎಂದು ನೂರಾರು ಲೇಖಕರನ್ನು ಕೇಳಿ ಬರೆಸಿ, ತಿದ್ದಿ ತೀಡಿ ಸುಂದರವಾದ ಪುಸ್ತಕ ಹೊರ ತರುವ ಸಾಹಸ ಮಾಡಿದ್ದಾರೆ. ಅದರಲ್ಲಿ ನಾನು ಬರೆದ ಸಂಕ್ರಮಣ ಎನ್ನುವ ಕಥೆಯೂ ಸೇರಿದೆ.
ಕಾಲ ಗತಿಸಿದಂತೆ ಕಷ್ಟಗಳೂ ಕೂಡ ಮಾಯ್ದ ಗಾಯದಂತಾಗುತ್ತದೆ. ಆದರೆ ಅದು ವ್ಯಕ್ತಿಯನ್ನು ಮಾಗುವಂತೆ ಮಾಡುತ್ತದೆ. ಕೊರೋನಾದ ಕಷ್ಟಗಳೂ ಹಲವರಿಗೆ ಪರೀಕ್ಷೆಯಾಗಿ ಪಕ್ವವಾಗಿಸಿದ್ದು ಈಗ ಇತಿಹಾಸವಾಗುತ್ತಿದೆ. ಆ ಕಾಲದಲ್ಲಿ ಏನೇನು ಆಯಿತು ಎನ್ನುವುದನ್ನು ಕಂಡು, ಅನುಭವಿಸಿದ ನೆಲೆಯಲ್ಲಿ ಸಶಕ್ತ ಕಥೆಗಳನ್ನು ಬರಹಗಾರರು ಹೆಣೆದಿದ್ದಾರೆ. ಜನಾರ್ಧನ ಭಟ್ಟರ ‘ಜೀವದಲಿ ಜಾತ್ರೆ ಮುಗಿದಂತೆ’ ಸತ್ಯಾನ್ವೇಷಣೆ ಮಾಡುತ್ತ ಸಾಗುವ ಕಥೆ ಚಿಂತನೆಗೆ ಹಚ್ಚುವಂತಿದೆ. ನೀತಾ ರಾವ್ ಅವರ ‘ಅತಂತ್ರ’ ಉದ್ಯೋಗ ಮತ್ತು ಕೃಷಿ ಬದುಕಿನ ನಡುವೆ ಹೊಯ್ದಾಡುವ ಯುವಕನ ಬದುಕಿನ ಚಿತ್ರಣವನ್ನು ಕೊಡುತ್ತದೆ. ವಿದ್ಯಾ ಕದಂ ಅವರ ‘ಟೆಸ್ಟ’ ಕಾಲಚಕ್ರ ತಿರುಗಿದಂತೆ ಕಥಾಪಾತ್ರಗಳ ಸ್ಥಿತಿ ಬದಲಾಗುವ, ಮಾನವೀಯ ಸಂಬಂಧಗಳ ಚಿತ್ತಾರ ಬಿಡಿಸುತ್ತಾ ಸಾಗುತ್ತದೆ. ಕಮಲಾ ಹೆಮ್ಮಿಗಿಯವರು ಅನುವಾದ ಮಾಡಿದ ಕ್ವಾರಂಟೇನ್ ವಿಶಿಷ್ಟವಾಗಿದೆ. ಲಾಕ್ಡೌನ್ ಎಂಬುದನ್ನೇ ಎದುರಿಸಲು ಕಷ್ಟ ಎನ್ನುವ ಕಥಾನಾಯಕ ಕ್ವಾರಂಟೇನ್ ಎದುರಿಸುವ ಪರಿಸ್ಥಿತಿ ಒದಗಿ ಅದು ಮುಗಿಯುವ ಹೊತ್ತಿಗೆ ಲಾಕ್ಡೌನೇ ಪರವಾಗಿಲ್ಲ ಎಂಬ ಮನಸ್ಥಿತಿಗೆ ಬರುವುದು. ಹೆಂಡತಿಯ ಗೃಹಕೃತ್ಯದಲ್ಲಿ ಪಾಲು ತೆಗೆದುಕೊಳ್ಳುವುದು, ತವರು ಮನೆಗೆ ನಾಲ್ಕು ದಿನ ಹೋಗಿ ಬಾ ಎನ್ನುವುದು… ಕಷ್ಟಗಳು ಮನುಷ್ಯನನ್ನು ಪಕ್ವವಾಗಿಸುತ್ತವೆ ಎನ್ನುವುದಕ್ಕೆ ಸಾಕ್ಷಿ ಹೇಳಿದಂತಿದೆ….
ಒಟ್ಟಾರೆಯಾಗಿ ವಿಭಿನ್ನ ಒಳನೋಟಗಳಿರುವ ಅತ್ಯುತ್ತಮ ಕಥೆಗಳೂ ಇರುವ ಈ ಸಂಕಲನ ಸಂಗ್ರಹ ಯೋಗ್ಯ ಎನ್ನಬಹುದು. ಈ ಹೊತ್ತಿಗೆಯನ್ನು ನಿವೇದಿತ ಪ್ರಕಾಶನ (ಫೋನ್ ನಂಬರ್ 9448733323 ) ಪ್ರಕಟಿಸಿದೆ. ವಾಸ್ತವದ ನೆಲದಲ್ಲಿ ಅರಳಿದ ಹೂಗಳ ಮಾಲೆಯಂತಹ ಈ ಕಥಾ ಸಂಕಲನ ಭವಿಷ್ಯದಲ್ಲಿ ಸುರಗಿಯ ಮಾಲೆಯಂತೆ ಪರಿಮಳಯುಕ್ತವಾಗಿರುತ್ತವೆ ಎಂಬ ಅನಿಸಿಕೆ ನನ್ನದು. ಇಳಿ ವಯಸ್ಸಿನಲ್ಲಿಯೂ ಇಂತಹ ಶ್ರಮ ಬೇಡುವ ಸಂಪಾದನೆಯ ಕೆಲಸಕ್ಕೆ ಕೈ ಹಾಕಿದ ಕಮಲಾ ಹೆಮ್ಮಗಿಯವರ ಸಾಹಸ ಶ್ಲಾಘನೀಯ. ಸತೀಶ್ ಕುಲಕರ್ಣಿಯವರ ಮೌಲಿಕವಾದ ಮುನ್ನುಡಿ, ಶ್ರೀಧರ ಬನವಾಸಿಯವರ ಬೆನ್ನುಡಿ ಪುಸ್ತಕದ ಘನತೆಯ್ನು ಹೆಚ್ಚಿಸಿವೆ.
-ಮಾಲತಿ ಹೆಗಡೆ
2 thoughts on “ಕಮಲಾ ಹೆಮ್ಮಿಗೆ ಸಂಪಾದಿತ ‘ಪ್ರಳಯದ ನೆರಳು’”
🙏🙏👏🏼
ಧನ್ಯವಾದಗಳು