ಶ್ರೀನಿವಾಸ ವೈದ್ಯ ಅವರ ಆಯ್ದ ಕಥೆಗಳು

ಶ್ರೀನಿವಾಸ ವೈದ್ಯ ಕನ್ನಡದ ವಿಶಿಷ್ಟ ಲೇಖಕರಲ್ಲೊಬ್ಬರು. ತುಂಬ ತಡವಾಗಿ ಬರವಣಿಗೆ ಆರಂಭಿಸಿದ ವೈದ್ಯರು ಬರೆದ ಕೃತಿಗಳ ಸಂಖ್ಯೆ ಕೇವಲ ಎಂಟು. “ಮನಸುಖರಾಯನ ಮನಸು”, “ತಲೆಗೊಂದು ತರ ತರ”, “ರುಚಿಗೆ ಹುಳಿಯೋಗರು”, “ಅಗ್ನಿಕಾರ್ಯ”, “ಕಪ್ಪೆ ನುಂಗಿದ ಹುಡುಗ”, “ಇನ್ನೊಂದು ಸಂತೆ”, “ಕರ್ನಲನಿಗೆ ಯಾರೂ ಬರೆಯುವುದೇ ಇಲ್ಲ” ಮತ್ತು “ಹಳ್ಳ ಬಂತು ಹಳ್ಳ” ಅವರ ಪ್ರಕಟಿತ ಕೃತಿಗಳು. “ಹಳ್ಳ ಬಂತು ಹಳ್ಳ” ಕಾದಂಬರಿ ಓದುಗರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದ ಉತ್ಕೃಷ್ಟ ಕಾದಂಬರಿ. “ಹಳ್ಳ ಬಂತು ಹಳ್ಳ” ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ.

ಪ್ರಸ್ತುತ “ಶ್ರೀನಿವಾಸ ವೈದ್ಯ ಅವರ ಆಯ್ದಕಥೆಗಳು”ಪುಸ್ತಕಅವರ ಆಯ್ದಏಳು ಕಥೆ-ಪ್ರಬಂಧಗಳನ್ನುಹೊಂದಿದೆ. “ಕೆ.ವಿ.ಸುಬ್ಬಣ್ಣ ನೆನಪಿನ ಮೊದಲ ಓದು ಪುಸ್ತಕ ಮಾಲೆ”ಯಲ್ಲಿ ಈ ಪುಸ್ತಕವನ್ನು ಅಕ್ಷರ ಪ್ರಕಾಶನದವರು ತುಂಬ ಅಂದವಾಗಿ ಪ್ರಕಟಿಸಿದ್ದಾರೆ.

ಈ ಸಂಕಲನದಲ್ಲಿ “ಪರಕಾಯ”, “ಶ್ರದ್ಧಾ”, “ತ್ರಯಸ್ಥ”, “ಗಂಡಭೇರುಂಡ”, “ರುದ್ರಪ್ರಯಾಗ”, “ಸಹಪ್ರಯಾಣ” ಮತ್ತು “ಅಗ್ನಿಕಾರ್ಯ” ಎಂಬ ಕಥೆ-ಪ್ರಬಂಧಗಳಿವೆ.  ಪ್ರಸ್ತುತ ಲೇಖನದಲ್ಲಿ ಈ ಸಂಕಲನದಲ್ಲಿರುವ ಕೆಲವು ಉತ್ತಮ ಕಥೆ-ಪ್ರಬಂಧಗಳ ಕುರಿತು ಚರ್ಚಿಸಿದ್ದೇನೆ.

“ಶ್ರದ್ಧಾ” ತಂದೆ-ಮಗನ ನಡುವಿನ ಹೃದಯಾರ್ದ್ರ ಸಂಬಂಧವನ್ನು ತುಂಬ ಸೊಗಸಾಗಿ ನಿರೂಪಿಸಿರುವ ಕಥನ-ಪ್ರಬಂಧ. ನಿರೂಪಕನ ತಂದೆಯದು ತುಂಬ ವಿರೋಧಾಭಾಸಗಳಿಂದ ಕೂಡಿದ ವಿಶಿಷ್ಟ ವ್ಯಕ್ತಿತ್ವ. ಮಕ್ಕಳನ್ನು ಕಠೋರ  ಶಿಸ್ತಿನಿಂದ ಬೆಳೆಸ ಬೇಕೆಂದು ಪಣ ತೊಟ್ಟಿದ್ದ ನಿರೂಪಕನ ತಂದೆ ಮಕ್ಕಳ ಮೇಲೆ ಪ್ರೀತಿ, ಮಮತೆಯಿದ್ದರೂ ತೋರಗಟ್ಟವರಲ್ಲ. ಮಕ್ಕಳಿಗೆ ಅತಿಯಾಗಿ ಪ್ರೀತಿ ತೋರಿಸಿದರೆ ಮಕ್ಕಳು ಕೆಟ್ಟು ಹೋದಾರೆಂಬ ಭಯದಿಂದ ತುಂಬ ಕಠಿಣವಾಗಿ ನಡೆದು ಕೊಳ್ಳುವ ವ್ಯಕ್ತಿ. ಇಲ್ಲಿ ಬರುವ ತಂದೆ-ಮಗನ ನಡುವಿನ ಸಂಬಂಧ ಜೈಲರ್-ಖೈದಿಯ ನಡುವಿನ ಸಂಬಂಧದಂತೆ. ತಂದೆ ತಮ್ಮ ಸಿಟ್ಟನ್ನು ಮಗನ ಮೇಲೆ ತೋರಿಸುವ ರೀತಿಯೂ ಸಹ ಅಷ್ಟೇ ವಿಶಿಷ್ಟವಾದದ್ದು. ‘ತಲೆ ಬೋಳಿಸಿಕೊ’ ಎಂಬ ಪದ ನಿರೂಪಕನ ತಂದೆಗೆ ಅತ್ಯಂತ ಪ್ರಿಯವಾದದ್ದು.

‘ಕುಮಾರ ಕಂಠೀರವ ಅವರಿಗೆ ಸ್ನಾನಾ ಮಾಡಿ ತಲೀ ಬೋಳಿಸಿ ಕೊಳ್ಳಲಿಕ್ಕೆ ಹೇಳ್ರೀ”

“ಯುವರಾಜರು ಊಟಾ ಮುಗಿಸಿ ತಲೀ ಬೋಳಿಸಿಗೋತಾರೇನು ಕೇಳ್ರಿ”

“ಪಡಸಾಲ್ಯಾಗಿಂದು ಆ ದರಿದ್ರ ಮಾರೀ ಸಾಯಿಕಲ್ ಹೊರಗಿಟ್ಟು ತಲೀ ಬೋಳಿಸಿಕೊ ಅನ್ನರಿ ನಿಮ್ಮ ಚಿರಂಜೀವರಿಗೆ”

“ಇವತ್ತು ಗುರುವಾರ ಅದs ರಾಯರ ವಾರs. ನಿಮ್ಮ ಮಿರ್ಜಾ ಸಾಹೇಬರಿಗೆ ಸ್ನಾನಾ ಮುಗಿಸಿ ಒಂದಿಷ್ಟು ಗುರುಸ್ತೋತ್ರ ಅಂದು ತಲೀ ಬೋಳಿಸಿಕೊಳ್ಳಲಿಕ್ಕೆ ಹೇಳ್ರೀ”

“ನಿಮ್ಮ ಪುತ್ರರತ್ನರಿಗೆ ಸ್ವಲ್ಪ ನಾರಾಯಣಾಚಾರ ಮನೀ ತನಕ ಹೋಗಿ ವೈಷ್ಣವರ ಏಕಾದಶಿಯಂದs… ಅಂತ ಕೇಳಿಕೊಂಡ ಬಂದು ತಲೀ ಬೋಳಿಸಿಕೊಳ್ಳಲಿಕ್ಕೆ ಹೇಳ್ರೀ”

(ಶ್ರದ್ಧಾ, ಪುಟ 12)

ಟಿಳಕರ ಭಕ್ತರೂ, ಗಾಂಧೀಜಿಯವರ ಅನುಯಾಯಿಯೂ ಆಗಿದ್ದ ನಿರೂಪಕನ ತಂದೆ ಒಬ್ಬ ಆದರ್ಶವಾದಿ. ಸಾಮಾನ್ಯವಾಗಿ ಆದರ್ಶವಾದಿಗಳ ಆದರ್ಶ ವ್ಯಾವಹಾರಿಕ ಜಗತ್ತಿನಲ್ಲಿ ಕೆಲಸಕ್ಕೆ ಬರುವುದಿಲ್ಲ. ಸತ್ಯ, ನ್ಯಾಯ, ನೀತಿ ಎಂದು ಧರ್ಮಿಷ್ಠ ಜೀವನ ಮಾಡುವವರಿಗೆ ಇದು ಕಾಲವಲ್ಲ! ಎಲ್ಲ ಆದರ್ಶವಾದಿಗಳಿಗೆ ಬರುವ ದುಸ್ಥಿತಿಯೇ ನಿರೂಪಕನ ತಂದೆಗೂ ಬಂದಿತ್ತು. ಆದರ್ಶವಾದದ ಕಲ್ಪನಾ ಜಗತ್ತಿಗೂ ಕ್ರೂರವಾದ ವಾಸ್ತವ ಜಗತ್ತಿಗೂ ಇರುವ ಅಜಗಜಾಂತರ ವ್ಯತ್ಯಾಸ ಆದರ್ಶವಾದಿಯಾದ ನಿರೂಪಕನ ತಂದೆಯನ್ನು ದಿಗ್ಭ್ರಾಂತಿಗೊಳಿಸಿ ಮನುಷ್ಯರ ಮೇಲೆಯೇ ನಂಬಿಕೆ ಕಳೆದುಕೊಳ್ಳುವಂತೆ ಮಾಡಿತ್ತು. ಇಷ್ಟೆಲ್ಲ ಕಠಿಣ ಸ್ವಭಾವದ ವ್ಯಕ್ತಿಯಾದರೂ ನಿರೂಪಕನ ತಂದೆಗೆ ಮಕ್ಕಳ ಮೇಲೆ ಅಪಾರ ಪ್ರೀತಿ, ಮಮತೆ ಇದ್ದೇ ಇತ್ತು. ಆದರೆ ಅದನ್ನು ತೋರಿಸುವ ರೀತಿ ಮಾತ್ರ ವಿಶಿಷ್ಟವಾಗಿತ್ತು.

ಮುಂಡನ ಮಿಶ್ರ, ಹಿರಣ್ಯಕಶಿಪು ಬಿರುದಾಂಕಿತ ನಿರೂಪಕನ ತಂದೆ ನಿರೂಪಕ ಪದವಿ ಮುಗಿಸಿ ಕೆಲಸಕ್ಕೆಂದು ಮುಂಬಯಿಗೆ ಹೊರಟಾಗ ಮಗನ ಅಗಲಿಕೆ ತಡೆಯಲಾರದೆ ಒಳಗೊಳಗೇ ತಳಮಳಿಸುತ್ತ ರೈಲು ಬಿಡುವ ಕೆಲವೇ ನಿಮಿಷಗಳ ಮೊದಲು ಓಡೋಡಿ ಬಂದು ಮಗನನ್ನು ಕಣ್ತುಂಬಿಕೊಳ್ಳುವ ದೃಶ್ಯ ಈ ಕಥನ-ಪ್ರಬಂಧದ ಹೈಲೈಟ್.

“ನಮ್ಮ ಹಿರಣ್ಯಕಶಿಪು ತಂದೆ, ಧಾರವಾಡ ಸ್ಟೇಶನದ ಬೃಹತ್ ಲೋಹದ ಕಂಬಕ್ಕೆ ಆತುಗೊಂಡು ನಿಂತು, ಬಲಗೈಯಿಂದ ಧೋತರ ಚುಂಗಿನಿಂದ ಕಣ್ಣೊರಿಸಿಕೊಳ್ಳುತ್ತ ತಮ್ಮ ನಡುಗುವ ಎಡಗೈ ಮೇಲೆತ್ತಿ ನನಗೆ ವಿದಾಯ ಹೇಳುತ್ತಿದ್ದರು. ಅವರ ಮುಖದ ಮ್ಯಾಲೆ ಇನ್ನಿಲ್ಲದ ದೈನ್ಯ ಒಟ್ಟುಗೂಡಿ ಒಂದು ತೆರದ ಅನಾಥ ಪರದೇಶಿ ಕಳೆ ಸುರೀಲಿಕ್ಕೆ ಹತ್ತಿತ್ತು. ಅವರು ಒಮ್ಮೆಲೆ ಒಂದಿಪ್ಪತ್ತು ವರುಷ ಹೆಚ್ಚಿದ ನಿರ್ವಿಣ್ಣ, ನಿತ್ರಾಣ ಮುದುಕನಂತೆ ಕಾಣಸಲಿಕ್ಕೆ ಹತ್ತಿದ್ದರು”.

(ಶ್ರದ್ಧಾ, ಪುಟ 17-18)

ರೈಲು ಹೊರಟರೂ ಬೃಹತ್ಗಾತ್ರದ ಲೋಹದ ಕಂಬಕ್ಕೆಆತು ನಿಂತುಕೊಂಡು ಬಲಗೈಯಿಂದ ಧೋತರದ ಚುಂಗಿನಿಂದ ಕಣ್ಣೀರು ಒರೆಸಿ ಕೊಳ್ಳುತ್ತ ನಡುಗುವ ಎಡಗೈ ಮೇಲೆತ್ತಿವಿದಾಯ ಹೇಳುತ್ತಿರುವ ವೃದ್ಧ ತಂದೆಯ ಚಿತ್ರ ನಿರೂಪಕನೊಂದಿಗೆ ಓದುಗರ ಮನಸ್ಸಿನಲ್ಲಿ ಸಹ ಅಚ್ಚಳಿಯದಂತೆ ದಾಖಲಾಗುತ್ತದೆ. ತಂದೆ-ಮಗನ ನಡುವಿನ ಅಂತಃಕರಣವನ್ನು ತುಂಬ ವಿಶಿಷ್ಟ ರೀತಿಯಲ್ಲಿ ದಾಖಲಿಸಿರುವ “ಶ್ರದ್ಧಾ” ಕಥನ-ಪ್ರಬಂಧ ಕನ್ನಡದ ಶ್ರೇಷ್ಠ ಪ್ರಬಂಧಗಳ ಸಾಲಿಗೆ ನಿರಾಯಾಸವಾಗಿ ಸೇರುತ್ತದೆ.

“ಗಂಡಭೇರುಂಡ”ಶ್ರೀರಂಗಪಟ್ಟಣದ ರಂಗಸ್ವಾಮಿ-ಅಲುಮೇಲುವಿನ ಸರಸ-ವಿರಸಗಳಿಂದೊಡಗೂಡಿದ ದಾಂಪತ್ಯವನ್ನು ಉತ್ಪ್ರೇಕ್ಷೆಯ ವ್ಯಂಗ್ಯದಲ್ಲಿ ಕಟ್ಟಿಕೊಟ್ಟಿರುವ ಹಾಸ್ಯಮಯ ಕಥನ-ಪ್ರಬಂಧ. ರಂಗಸ್ವಾಮಿ ಮೆಟ್ಟುಗಳು ಮತ್ತು ಬೂಟುಗಳ ಕುರಿತು ವಿಪರೀತ ವ್ಯಾಮೋಹ ಹೊಂದಿರುವ ವ್ಯಕ್ತಿ.ಅಲಮೇಲು ನುಚ್ಚಿನುಂಡೆ ಮತ್ತು ಬೆಂಡೆ ಹುಳಿಯ ಪರಿಣಿತೆ .ಒಂದು ದಿನ ಕಛೇರಿಯಲ್ಲಿ ಮಂಡ್ಯದ ಗೌಡನ ಜೊತೆಯುಂಟಾದ ಜಗಳದಿಂದ ನೊಂದ ರಂಗಸ್ವಾಮಿ ಮನೆಗೆ ಬಂದ ತಕ್ಷಣ ಗಂಡಭೇರುಂಡದಂತೆ ತಿರುಗಾಮುರಾಗಾ ಇಟ್ಟಿದ್ದ ಮೆಟ್ಟುಗಳನ್ನು ನೋಡಿ ರೋಸಿ ಹೆಂಡತಿಯೊಂದಿಗೆ ಜಗಳವಾಡಿಕೊಂಡು ಊರೇ ಬಿಟ್ಟು ಹೊರಡುತ್ತಾನೆ. ಯಾವುದೋ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಹೋದ ವೆಂಕಟರಾಮಯ್ಯನವರಿಗೆ ಖಾನಾವಳಿಯೊಂದರಲ್ಲಿ ಥೇಟ್ ಹುಬ್ಬಳ್ಳಿಯವನಂತೆಯೇ ಬದಲಾದ ರಂಗಪ್ಪ ಉರುಫ್ ರಂಗಸ್ವಾಮಿ ಕಾಣುತ್ತಾನೆ. ಅದರ ಕುರಿತು ಖಾನಾವಳಿಯ ಯಜಮಾನಿಯ ಹತ್ತಿರ ವಿಚಾರಿಸಲು ‘ಅಮ್ಮ’ ಎಂದು ಗೌರವ ಪೂರ್ವಕವಾಗಿ ಸಂಭೋದಿಸಿದ್ದೇ ತಡ ರೊಚ್ಚಿಗೆದ್ದ ಆ ಮಹಾಮಹಿಳೆ ವೆಂಕಟರಾಮಯ್ಯನವರನ್ನು ಹಿಗ್ಗಾಮುಗ್ಗಾ ಝಾಡಿಸುತ್ತಾಳೆ.

“ಯಾರಲಾ ಅವ ನನಗ ‘ಅಮ್ಮಾ’ ಅನ್ನಾವ… ಯಾಕೋ ಗಂಡಮಗನ, ಹ್ಯಾಂಗ ಕಾಣತೈತಿ?.. .ಸುದ್ಧ ನಿಂಗಾಯಿ ತರ ಗರತಿ ಹೆಣಮಗಳನಾ… ಹಣಿ ತುಂಬ ಈ ಬತ್ತಿ ಬಳಕೊಂಡು ದೆವ್ವನ್ಹಂಗಕುಂತೇನು…ತೆಲಿ ತುಂಬ ಕೂದಲದಾವು… ರೂಪಾಯಿದಗಲಕ್ಕ ಕುಂಕುಮಾ ಬಳದೇನು ದುರಗವ್ವ ಗದ್ಯಾಮವ್ವಗ ಬಳದಿರತಾರಲ್ಲ ಹಂಗ…ಇಷ್ಟೆಲ್ಲ ಇದ್ದೂ ನಿನಗ ನಾ ಹಾರೂರ ರಂಡಿ ಮುಂಡಿಗತೆ ಕಾಣತೇನ?…ಕಣ್ಣೋ ಏನ ಪರಟಿತೂತ ಅದಾವೋ ನಿನ್ನವು… ಅಮ್ಮಅಂತ ಅಮ್ಮ…ಕೊಳ್ಳಾಗಿನ ಗುಳದಾಳಿಅರ ಕಾಣತೈತೋ ಇಲ್ವೋ ಯಜಮಾನಾ… ಈಗ ನಮ್ಮ ಹಿರಿಯಾ ಬಂದಾ ಅಂದ್ರ ನಿನ್ನ ಜಜ್ಜೀ ಹಿಂಡೀ ಮಾಡಿ ದನಕ್ಕ ಹಾಕ್ತಾನು… ಅಮ್ಮಂತ ಅಮ್ಮ.. . ಯಾವ ದೇಸದವನೋ ನೀನು… ಅದೇನು ಜುಟ್ಟಾಬಿಟ್ಟಿದೀ… ಅದಕ್ಕ ಹೆಣಮಕ್ಕಳಗತೆ ಅದೇನು ಗಂಟ ಹಾಕೀದಿ… ಮ್ಯಾಗ ನಾಲ್ಕು ದಿನದ ಬಿಳೀಗಡ್ಡ… ಇಷ್ಟss ಸೋಗ ಸಾಕಾಗಲಿಲ್ಲಂತ ಮ್ಯಾಗ ಹುಬ್ಬಿನ ನಡಕ ಕುಂಕುಮಾ ಬ್ಯಾರೆ ಹಚ್ಚೀದೀ… ಏನಿದ ಅವತಾರನಿಂದ… ಜೋಗಪ್ಪ ಏನೋ ನೀ…ಜೋಗಪ್ಪ ಆಗಿದ್ದರ ಗುಡ್ಡಕ್ಕ ಹೋಗು ಇಲ್ಲ್ಯಾಕ ಬಂದೀ… ನಮ್ಮಂತಹ ಗರತಿ ಹೆಣಮಗಳ ಇದ್ದಲ್ಲೆ ನಾಕಮಂದಿಗತೆ ಮರ್ವಾದಿಯಿಂದ ಕಚ್ಚಿ ಬಿಗದಧ್ವಾ ತರಾ ಉಡಾಕ ಏನ ಬ್ಯಾನಿ ನಿನಗ?… ಅದೊಂದು ಬಿಳೇದು ಅರಬೀ ಅಡ್ಡಸುತಗೊಂಡು ಬಂದಾನ ಹಂಗ ಬಯಲ ಕಡೆ ಹೋಗಾವರಗತೆ…”

(ಗಂಡಭೇರುಂಡ,ಪುಟ54)

ಖಾನಾವಳಿಯ ಯಜಮಾನಿ ವೆಂಕಟರಾಮಯ್ಯನವರನ್ನು ಝಾಡಿಸುವುದು ಕಂಡ ರಂಗಸ್ವಾಮಿ ಕೊನೆಗೂ ವೆಂಕಟರಾಮಯ್ಯನವರ ಗುರುತು ಹಿಡಿದು ಅವರ ಜೊತೆ ಮರಳಿ ಶ್ರೀರಂಗಪಟ್ಟಣಕ್ಕೆ ಹೋಗಲು ತಯಾರಾಗುತ್ತಾನೆ. ಖಾನಾವಳಿಯ ಯಜಮಾನಿ ಮತ್ತು ಅವಳ ಗಂಡ ಮಗನಂತೆ ಸಾಕಿದ ರಂಗಸ್ವಾಮಿಯ ಅಗಲಿಕೆಯಿಂದ ನೊಂದರೂ ರಂಗಸ್ವಾಮಿಗೆ ಹೆಂಡತಿ ಅಲಮೇಲುವನ್ನು ಬಿಟ್ಟು ಬಂದದ್ದು ತಪ್ಪೆಂದು ಬಜಾಯಿಸಿ ಶ್ರೀರಂಗಪಟ್ಟಣಕ್ಕೆ ಮರಳಿ ಕಳಿಸಲು ಸಿದ್ಧರಾಗುತ್ತಾರೆ. ಈ ಸಂದರ್ಭದಲ್ಲಿ ಖಾನಾವಳಿಯ ಯಜಮಾನ ರಂಗಸ್ವಾಮಿಗೆ ಹೇಳುವ ಮಾತುಗಳು ಸ್ವಾರಸ್ಯಕರವಾಗಿವೆ.

“ಹೋಗಿ ಬಾ ಮಗಾ… ಹಾಂಗ ಲಗ್ಗಣದ ಹ್ಯಾಂತಿನ್ನ ಬಿಟ್ಟಬರೂದು ಜವಾಬ್ದಾರಿ ಮಂದಿ ಮಾಡು ಕೆಲಸಅಲ್ಲ… ಅಷ್ಟಲ್ಲದs ನೀಅರ ಏನ ಉಪ್ಪುಂಡ ಮನಿಶಾ.. .ಅಲ್ಲಿ ಊರಾಗ ಲಗ್ಗಣದ ಹೇಣ್ತಿನ್ನ ಬಿಟ್ಟು ಇಲ್ಲೆ ದಿನಾ ಮಧ್ಯಾಣದಾಗ ಹುಬ್ಬಳ್ಳಿಷ್ಟ್ಯಾಂಡಮ್ಯಾಗ ನಿಂತಕೊಂಡ ಯಲ್ಲಮ್ಮನ ಗುಡ್ಡಕ ಹೋಗೋ ಸೂಳ್ಯಾರನ್ನ ನೋಡಿಕೊಂತ ನಿಂದರತಿದ್ದೀ… ಅದೇನು ಛಂದ ಹೇಳ…ಒಮ್ಮೆ ಲಗ್ಗಣಾ ಅಂತ ಆದಮ್ಯಾಲ ಬಿಡಿಸಿ ಕೊಳ್ಳಾಕ ಬರೂದುಲ್ಲ…ಹೋಗಿ ಬಾ…ಹಂಗೇನಾರs ಭಾಳ ತ್ರಾಸ ಆದರ ಈಸರೇ ಸೋಡಚೀಟಿ ಕೊಟ್ಟ ಬಂದಬಿಡು”

(ಗಂಡಭೇರುಂಡ,ಪುಟ56)

ವೆಂಟರಾಮಯ್ಯನವರ ವಿಶ್ವಪ್ರಯತ್ನದಿಂದ ರಂಗಸ್ವಾಮಿ- ಅಲುಮೇಲು ದಂಪತಿಗಳು ಕೊನೆಗೂ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿಯ ಸಾನ್ನಿಧ್ಯದಲ್ಲಿ ಒಂದಾಗುವ ಮೂಲಕ ಗಂಡಭೇರುಂಡ ಕಥನ-ಪ್ರಬಂಧ ಸುಖಾಂತ ಕಾಣುತ್ತದೆ. ಇಲ್ಲಿ ನಿಜಕ್ಕೂ ವೈದ್ಯರ ಭಾಷೆ ಮತ್ತು ಶೈಲಿ ಗಂಡಭೇರುಂಡದಂತ ಬಳಕೆಯಾಗಿದೆ. ಧಾರವಾಡದ ದೇಸಿ ಕನ್ನಡ ಮತ್ತು ಹಳೆ ಮೈಸೂರಿನ  ಶಿಷ್ಟ ಕನ್ನಡ ಎರಡರ ಸೊಗಸು ಮತ್ತು ಸೊಗಡನ್ನು ವೈದ್ಯರು ತುಂಬ ಯಶಸ್ವಿಯಾಗಿ  ಬಳಸಿಕೊಂಡಿದ್ದಾರೆ. ಸಂಭಾಷಣೆಗಳನ್ನು ಬಳಸುವ ಸಂದರ್ಭದಲ್ಲಿ ಧಾರವಾಡ ಕನ್ನಡದ ಸೊಗಸು ಮತ್ತಷ್ಟು ಹೆಚ್ಚಾಗಿರುವಂತೆ ಕಾಣುತ್ತದೆ. ವೈದ್ಯರು ನಿರೂಪಣೆ ಮತ್ತು ಸಂಭಾಷಣೆಗಳನ್ನು ಬಳಸಿಕೊಳ್ಳುವಲ್ಲಿ ತುಂಬ ಜಾಣ್ಮೆ ಮೆರೆದಿದ್ದಾರೆ.

“ರುದ್ರಪ್ರಯಾಗ” ಗುರಣ್ಣ, ಕೃಷ್ಣಕ್ಕ ಮತ್ತು ಸುಸಾನಳ ಚಾರಧಾಮ ಯಾತ್ರೆಯ ಕಥೆ. ಕೃಷ್ಣಕ್ಕ ತನಗೊದಗಿದ ಎಲ್ಲ ಅನಿಷ್ಟಕ್ಕೂ ಮುಳಗುಂದದ ಸಕೇಶಿಯ ಶಾಪವೇ ಕಾರಣವೆಂದು ದೃಢವಾಗಿ ನಂಬಿದ್ದಾಳೆ. ಕೃಷ್ಣಳಕ್ಕಳ ಗಂಡನ ಉಪಪತ್ನಿಯಾದ ಮುಳಗುಂದದ ಹೆಂಗಸು ಮತ್ತು ಅವಳ ಮಗ ಬಿಂದ್ಯಾಕೃಷ್ಣಕ್ಕಳ ಆಜನ್ಮ ವೈರಿಗಳು. ತೀರ್ಥಯಾತ್ರೆಗೆ ಹೋದರೂ ಮುಳಗುಂದದ ಹೆಂಗಸು ಮತ್ತು ಅವಳ ಮಗ ಬಿಂದ್ಯಾಕೃಷ್ಣಕ್ಕಳ ಮನಸ್ಸಿನಿಂದ ಹೊರಹೋಗಿಲ್ಲ. ಯಾವತ್ತೂ ಅವರ ಕುರಿತು ಕರೆಕರೆ ಮಾಡುತ್ತ ಬಂದಿರುವ ಕೃಷ್ಣಕ್ಕ ಗುರಣ್ಣನ ನೆಮ್ಮದಿ ಹಾಳು ಮಾಡಿದ್ದಾಳೆ. ಇತ್ತ ತಾಯಿ ಕೃಷ್ಣಕ್ಕ ಮತ್ತು ಮೊಮ್ಮಗಳು ಸುಸಾನಳ ನಡುವೆ ಗುರಣ್ಣ ಕಂಗಾಲಾಗಿದ್ದಾನೆ.

ಕೃಷ್ಣಕ್ಕನ  ದತ್ತು ಮಗನಾದ ಗುರಣ್ಣನದು ದ್ವಂದ್ವ ಜೀವನ. ಚಿಕ್ಕ ವಯಸ್ಸಿನಲ್ಲೇ ಕೃಷ್ಣಕ್ಕನ ದತ್ತು ಮಗನಾಗಿ ಬಂದ ಗುರಣ್ಣನಿಗೆ ಕೃಷ್ಣಕ್ಕನ  ಅಂಕೆ ಮೀರಲಾಗದೆ ಬದುಕುವುದು ರೂಢಿಯಾಗಿಬಿಟ್ಟಿದೆ. ಗುರಣ್ಣನಿಗೆ ಹೆಂಡತಿ ತೀರಿ ಹೋದ ದುಃಖ ಒಂದೆಡೆಯಾದರೆ ಇರುವ ಒಬ್ಬನೇ ಮಗ ಅಮೇರಿಕಾದಲ್ಲಿ ಬಿಳಿಯಳೊಬ್ಬಳನ್ನು ಮದುವೆಯಾಗಿ ದೂರವಾಗಿರುವ ದುಃಖ ಇನ್ನೊಂದೆಡೆ. ಇವರೆಲ್ಲರನ್ನು ಬೆಸೆಯಬಲ್ಲ ಏಕಮಾತ್ರ ಕೊಂಡಿಯೆಂದರೆ ಗುರಣ್ಣನ ಮೊಮ್ಮಗಳು ಸುಸಾನ. ಆದರೆ ಗುರಣ್ಣ ಮತ್ತು ಕೃಷ್ಣಕ್ಕಳಿಗೆ ಅಮೇರಿಕದಲ್ಲಿ ಹುಟ್ಟಿ ಬೆಳೆದ ಆಧುನಿಕ ಹುಡುಗಿಯಾದ ಸುಸಾನಳನ್ನು ಹೇಗೆ ಸ್ವೀಕರಿಸ ಬೇಕೆಂಬುದೇ ತಿಳಿಯದಂತಾದರೂ ವಂಶದ ಏಕೈಕ ಕುಡಿಯಾದ ಅವಳೊಂದಿಗೆ ಅನಿವಾರ್ಯವೆಂಬಂತೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕೃಷ್ಣಕ್ಕಮತ್ತು ಗುರಣ್ಣ ಪುಣ್ಯಸಂಪಾದನಾರ್ಥವಾಗಿ ಚಾರಧಾಮ ಯಾತ್ರೆ ಕೈಗೊಂಡರೂ ಅವರಿಗೆ ನೆಮ್ಮದಿಯಿಲ್ಲ. ಗುರಣ್ಣನಿಗೆ ತೀರಿ ಹೋದ  ಹೆಂಡತಿ, ವಿದೇಶದಲ್ಲಿರುವ ಮಗ ಮತ್ತು ಮೊಮ್ಮಗಳು ಸುಸಾನಳ ಕುರಿತ ಚಿಂತೆಯಾದರೆ  ಕೃಷ್ಣಕ್ಕಳಿಗೆ ಸದಾ ಮುಳಗುಂದದ ಸಕೇಶಿ ಮತ್ತು ಅವಳ ಮಗ ಬಿಂದ್ಯಾನ ಕುರಿತ ಚಿಂತೆ. ಒಟ್ಟಿನಲ್ಲಿ ಕೃಷ್ಣಕ್ಕ ಮತ್ತು ಗುರಣ್ಣ ಮತ್ತೆ ಮತ್ತೆ ಕಾಡುವ ಹಳೆಯ ನೆನಪುಗಳಿಂದ ಬಾಧಿತರಾಗಿ  ದೈವ ಸಾನ್ನಿಧ್ಯದಲ್ಲಿದ್ದರೂ ಅಶಾಂತರಾಗಿದ್ದಾರೆ. ಇವರಿಬ್ಬರ ಮನಸ್ಸಿನ ದ್ವಂದ್ವ ಕಥೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ.

“ಸಹಪ್ರಯಾಣ” ವಯಸ್ಕ ದಂಪತಿಗಳ ಪ್ರಬುದ್ಧ ಪ್ರೇಮದ ಬಗೆಗಿನ ಕಥೆ. ಹುಬ್ಬಳ್ಳಿಯಿಂದ ಮದುವೆ ಮುಗಿಸಿಕೊಂಡು ಮುಂಬೈಗೆ ಹೊರಟಿರುವ ದಿಬ್ಬಣವೊಂದರ ಸದಸ್ಯನಾದ ಅಪ್ಪಣ್ಣನಿಗೆ ನವದಂಪತಿಗಳನ್ನು ನೋಡಿ ತನ್ನ ಹರೆಯದ ದಿನಗಳು ಮತ್ತು ಮದುವೆಯ ಕುರಿತ ನೆನಪುಗಳು ಮತ್ತೆ ಮತ್ತೆ ಕಾಡಲಾರಂಭಿಸುತ್ತವೆ. ಒಂದು ಕಾಲದಲ್ಲಿ ಅಲಕಾ ಆಪ್ಟೆ ಎಂಬ ಮರಾಠಿ ಹುಡುಗಿಯ ಪ್ರೇಮಪಾಶದಲ್ಲಿ ಬಂಧಿತನಾಗಿದ್ದ ಅಪ್ಪಣ್ಣನಿಗೆ ಅಲಕಾ ಆಪ್ಟೆ ಕೈಕೊಟ್ಟು ಹೋದರೂ ಅವಳನ್ನ ಮರೆಯಲಾಗುವುದಿಲ್ಲ.

ಕೊನೆಗೂ ಪ್ರೀತಿ, ಪ್ರೇಮಕ್ಕಿಂತ ಜೀವನ ದೊಡ್ಡದು ಎಂಬ ಜ್ಞಾನೋದಯವಾದ ನಂತರ ಅಪ್ಪಣ್ಣ ಮಾಲಿನಿಯನ್ನು ಮದುವೆಯಾಗುತ್ತಾನೆ. ಹೆಂಡತಿ ಮಕ್ಕಳು, ಕರಿಯರ್ರು ಎಂದು ಸುಖವಾಗಿಯೇ ಜೀವನ ನಡೆಸುತ್ತಿದ್ದ ಅಪ್ಪಣ್ಣನಿಗೆ ಹೆಂಡತಿಯ ಹಳೆಯ ಟ್ರಂಕಿನಲ್ಲಿ ಆಕಸ್ಮಿಕವಾಗಿ ರಾಘವೇಂದ್ರ ಪಾಟೀಲ ಎಂಬ ಹುಡುಗನ ಫೋಟೋ ಸಿಕ್ಕಾಗ ವಿಹ್ವಲಗೊಳ್ಳುತ್ತಾನೆ. ಮಾಲಿನಿ ಮತ್ತು ರಾಘವೇಂದ್ರ ಪಾಟೀಲನ ನಡುವಿನ ಸಂಬಂಧದ ಕುರಿತು ಇನ್ನಿಲ್ಲದಂತೆ ಚಿಂತಿಸಿ ವ್ಯಾಕುಲಗೊಳ್ಳುತ್ತಾನೆ. ರಾಘವೇಂದ್ರ ಪಾಟೀಲ ಮಾಲಿನಿಯ ಮೇಲೆ ಮನಸ್ಸಿಟ್ಟುಕೊಂಡು ಕೊನೆಯವರೆಗೂ ಮದುವೆಯಾಗದೆ ಕುಡಿದು ಸತ್ತನೆಂದು ತಿಳಿದ ನಂತರ ಅಪ್ಪಣ್ಣನಿಗೆ ರಾಘವೇಂದ್ರ ಪಾಟೀಲನ  ಕುರಿತು ಮರುಕ ಹುಟ್ಟುತ್ತದೆ.

ಅಪ್ಪಣ್ಣ-ಮಾಲಿನಿಯ ಮದುವೆಯಾಗಿ ಇಪ್ಪತ್ತು-ಇಪ್ಪತ್ತೈದು ವರುಷಗಳು ಕಳೆದರೂ ಅಪ್ಪಣ್ಣನಿಗೆ ರಾಘವೇಂದ್ರ ಪಾಟೀಲ ಆಗೀಗ ಕಾಟ ಕೊಡುತ್ತಲೇ ಇದ್ದಾನೆ. ಹೆಂಡತಿಯ ಕುರಿತು ಹುಟ್ಟುವ ಅನುಮಾನಗಳು ಅಪ್ಪಣ್ಣನ ನೆಮ್ಮದಿ ಕೆಡಿಸಿದರೂ ಮಾಲಿನಿ ತೋರುವ ಪ್ರೀತಿ, ವಾತ್ಸಲ್ಯದ  ಮುಂದೆ ಇಂತಹ ವ್ಯರ್ಥ ಅನುಮಾನಗಳು ಕರಗಿ ಹೋಗುತ್ತವೆ. ಗಂಡ, ಮಕ್ಕಳು ಮತ್ತು ಕುಟುಂಬದ ಬಗ್ಗೆ ಅಪಾರ ಪ್ರೀತಿಯಿಟ್ಟುಕೊಂಡ ಮಾಲಿನಿ ಈಗ ಒಬ್ಬ ಜವಾಬ್ದಾರಿಯುತ  ಗೃಹಿಣಿ. ಒಂದು ಕಾಲದಲ್ಲಿ ತನ್ನನ್ನು ಮೆಚ್ಚಿದ್ದ ರಾಘವೇಂದ್ರ ಪಾಟೀಲನ ಕುರಿತು ಮಾಲಿನಿ ತೋರುವ ಪ್ರತಿಕ್ರಿಯ ಕೂಡ ಸಮಯೋಚಿತವಾಗಿದೆ. ಮಾಲಿನಿಯ ಪ್ರಬುದ್ಧತೆಯ ಮುಂದೆ ಅವಳ ಬಗೆಗಿರುವ ಎಲ್ಲ ಅನುಮಾನಗಳು ತುಂಬ ಕ್ಷುಲ್ಲಕವೆನಿಸುತ್ತವೆ. ಕೊನೆಗೂ ಅಪ್ಪಣ್ಣನಿಗೆ ರಾಘವೇಂದ್ರ ಪಾಟೀಲ ಮತ್ತು ಮಾಲಿನಿಯ ಕುರಿತಾಗಿರುವ ಎಲ್ಲ ಸಂಶಯಗಳು ದೂರವಾಗಿ ಮನಸ್ಸು ನಿರಾಳವಾಗುತ್ತದೆ. ಕಥೆಯ ಕೊನೆಯಲ್ಲಿ ಅಪ್ಪಣ್ಣ ಮತ್ತು ಮಾಲಿನಿಗೆ ಪರಸ್ಪರರಲ್ಲಿರುವ ಪ್ರೇಮ ಇನ್ನಷ್ಟು ಗಾಢವಾಗುತ್ತದೆ. ಅಪ್ಪಣ್ಣ ಮಾಲಿನಿಯೇ ಏಳೇಳು ಜನ್ಮಕೂ ತನ್ನ ಹೆಂಡತಿಯಾಗಲೆಂದು ದೇವರಲ್ಲಿ ಬೇಡಿಕೊಳ್ಳುವುದು ಅರ್ಥಪೂರ್ಣವಾಗಿದೆ. ವೈದ್ಯರು ಈ ಕಥೆಯಲ್ಲಿ ದಾಂಪತ್ಯ ಜೀವನದ ಸಾಮರಸ್ಯವನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದಾರೆ.

“ಅಗ್ನಿಕಾರ್ಯ”ವಿಫಲ ವಿವಾಹ ಮತ್ತು ಕೌಟುಂಬಿಕ ಹಿಂಸೆಯಿಂದ ನೊಂದ ಮಾಯಕ್ಕಳ ಕಥೆ. ನಿರೂಪಕ ಬೆಂಗಳೂರಿನ ಬನಶಂಕರಿಯ ರೈಲ್ವೆ ಟಿಕೆಟ್ ಬುಕಿಂಗ್ ಆಫೀಸಿನಲ್ಲಿ ಮಾಯಕ್ಕನನ್ನೇ ಹೋಲುವ ಮಹಿಳೆಯೊಬ್ಬಳನ್ನು ಕಾಣುತ್ತಾನೆ. ಆ ಮೂಲಕ ಫ್ಲ್ಯಾಶ್ಬ್ಯಾಕ್ನಲ್ಲಿ ನಿರೂಪಕನ ಚಿಕ್ಕಮ್ಮ ಮಾಯಕ್ಕಳ ಜೀವನದ ವಿವರಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ನಿರೂಪಕನ ತಾಯಿಯ ಕೊನೆಯ ತಂಗಿಯಾದ ಮಾಯಕ್ಕಮನೆಯವರು ಮತ್ತು ಮಕ್ಕಳಿಗೆಲ್ಲ ಅತ್ಯಂತ ಪ್ರಿಯವಾದ ವ್ಯಕ್ತಿ. ಮಾಯಕ್ಕಳ ವ್ಯಕ್ತಿತ್ವವನ್ನು ವೈದ್ಯರು ಕೆಲವೇ ಸಾಲುಗಳಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

“ಕೆಲ ಕೆಲವು ಸ್ತ್ರೀಯರು ಹುಟ್ಟಾತಾಯಂದಿರು ಆಗಿಯೇ ಹುಟ್ಟಿರತಾರೋ ಏನೋ! ಮುಂದೆ ಅವರು ಪಕ್ವವಾಗಿ ಬದುಕಿಗೆ ಹತ್ತಿದ ಮ್ಯಾಲಂತೂ ಅವರ ಮುಖದಮ್ಯಾಲ ಅನುಕಂಪದ್ದು ,ವಾತ್ಸಲ್ಯದ್ದು ಒಂದು ನಿರಂತರ ಜಿನುಗು ಜಿನಗತಿರತದ. ಅದೇ ಅವರ ಚಲುವಿಕೆಯ ಲಕ್ಷಣ. ಮಾಯಕ್ಕ ಹಿಂಗs ಇದ್ದಳು.ಭಾಳ ಛಂದ ಕಾಣಸತಿದ್ದಳು”.

(ಅಗ್ನಿಕಾರ್ಯ, ಪುಟ94)

ಮಕ್ಕಳಿಗೆಲ್ಲ ಅತ್ಯಂತ ಪ್ರೀತಿ ಪಾತ್ರಳಾಗಿದ್ದ ಮಾಯಕ್ಕ ಮದುವೆಯ ನಂತರ ಸಂಪೂರ್ಣ ಭಿನ್ನವ್ಯಕ್ತಿಯಾಗಿ ಬದಲಾಗುತ್ತಾಳೆ. ಕ್ರೌರ್ಯವೇ ಮೈವೆತ್ತಂತಿರುವ ಮಾಯಕ್ಕಳ ಗಂಡ ಮತ್ತು ಅವಳ ಗಂಡನ ಮನೆಯವರ ಕ್ರೌರ್ಯ ಮತ್ತು ಹಿಂಸೆಗೆ ಬಲಿಯಾಗಿ ಪಡಬಾರದ ಕಷ್ಟ ಪಡುತ್ತಾಳೆ. ನಿರಂತರ ಹಿಂಸೆಯಿಂದ ನೊಂದು ಕಂಗೆಟ್ಟ ಮಾಯಕ್ಕ ಗಂಡನ ಹಿಂಸೆ ತಾಳಲಾರದೆ ಅವನ ಮೇಲೆ ಹಲ್ಲೆಮಾಡಿ ನಾಪತ್ತೆಯಾಗುತ್ತಾಳೆ.

ಮಾಯಕ್ಕಳ ಕುರಿತು ನಂತರದ ದಿನಗಳಲ್ಲಿ ಅನೇಕ ಊಹಾಪೋಹಗಳು ಶುರುವಾಗುತ್ತವೆ. ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದ್ದಾಳೆಂಬ ವದಂತಿ ಮಾಯಕ್ಕಳ ಬಂಧುಗಳು ಚಿಂತಾಕ್ರಾಂತರಾಗುವಂತೆ ಮಾಡುತ್ತದೆ.ಕಥೆಯ ಕೊನೆಯಲ್ಲಿ ನಿರೂಪಕನ ಮನೆಯವರು ಮಾಯಕ್ಕಳ ಭೇಟಿಗಾಗಿ ತುಂಬ ಕಾತರದಿಂದ ನಿರೀಕ್ಷಿಸಿದರೂ ಮುಸ್ಲಿಂಧರ್ಮಕ್ಕೆ ಮತಾಂತರ ಹೊಂದಿದ ಮಾಯಕ್ಕ ಕೊನೆಗೂ ಬರುವುದೇ ಇಲ್ಲ.

ಕೌಟುಂಬಿಕ ಹಿಂಸೆಯಿಂದ ತೀವ್ರವಾಗಿ ನೊಂದ ಮಾಯಕ್ಕಳಿಗೆ ಬೇರೇ ಆಯ್ಕೆಗಳೇ ಇಲ್ಲದಂತಾದಾಗ ಹೇಗಾದರೂ ಬದುಕ ಬೇಕೆಂಬ ಆಸೆಯೇ ಅವಳನ್ನು ವೈವಾಹಿಕ ಜೀವನದಿಂದ ಪರಿತ್ಯಕ್ತಳಾಗುವಂತೆ ಮಾಡುತ್ತದೆ. ತವರು ಮನೆ ಮತ್ತು ಬಂಧು-ಬಳಗವಿದ್ದರೂ ಅವರಿಂದ ಮಾಯಕ್ಕಳಿಗೆ ಯಾವುದೇ ರೀತಿಯ ಸಹಾಯ ಸಿಗುವುದಿಲ್ಲ. ಮಾಯಕ್ಕ ಅಪಾರ ಹಿಂಸೆಗೊಳಗಾಗಿ ನೊಂದರೂ ಆಶ್ರಯ ನೀಡದ ಜನ ಅವಳು ಮುಸ್ಲಿಂಧರ್ಮಕ್ಕೆ ಮತಾಂತರ ಹೊಂದಿದ್ದೇ ಅಪರಾಧಎಂಬಂತೆ ವರ್ತಿಸುವುದು ವಿಷಾದನೀಯ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಮತ್ತು ಬೌದ್ಧ ಸೇರಿದಂತೆ ಯಾವುದೇ ಜಾತಿ-ಮತಗಳಿಗಿಂತ ಮನುಷ್ಯತ್ವ ಬಲು ದೊಡ್ಡದು. ಆದೃಷ್ಟಿಯಿಂದ ನೋಡಿದಾಗ ಮಾಯಕ್ಕಳನಿರ್ಧಾರ ಉಚಿತವೆನಿಸುತ್ತದೆ.ಕಥೆಯಅಂತ್ಯ ತುಂಬ ಅರ್ಥವತ್ತಾಗಿದೆ.

ನಮ್ಮ ದೇಶದಲ್ಲಿ ಮಾಯಕ್ಕಳಂತಹ ಸಾವಿರಾರು ಮಹಿಳೆಯರು ಇಂದಿಗೂ ಸಹ ಹತ್ತುಹಲವು ವಿಧದ ಕೌಟುಂಬಿಕ ಹಿಂಸೆಗೆ ಬಲಿಯಾಗುತ್ತಿದ್ದಾರೆ.  ವೈದ್ಯರು “ಅಗ್ನಿಕಾರ್ಯ” ಕಥೆಯ ಮೂಲಕ ಕೌಟುಂಬಿಕ ಹಿಂಸೆಯ ದುಷ್ಪರಿಣಾಮವನ್ನು ತುಂಬ ಸೊಗಸಾಗಿ ಚಿತ್ರಿಸಿದ್ದಾರೆ.

“ತ್ರಯಸ್ಥ” ಹೊಸ ಹರೆಯದಲ್ಲುಂಟಾಗುವ ಮೊದಲ ಪ್ರೇಮದ ಮಧುರ ಸ್ಮೃತಿಗಳ ಕುರಿತ ಕಥೆ. ನಿರೂಪಕ ಶೀನೂನ ಬಾಲ್ಯಕಾಲದ ಗೆಳತಿ ಮತ್ತು ಪ್ರೇಯಸಿ ಕಮಲಿ. ಶೀನೂನ ಮೊದಲ ಆಕರ್ಷಣೆ ಮತ್ತು ಮೊದಲ ಪ್ರೇಮದ ಅನುಭವಗಳು ಈಗ ನೆನಪು ಮಾತ್ರ. ಶೀನೂ ಮತ್ತು ಕಮಲಿ ಬೇರೆ ಬೇರೆಯವರನ್ನು ಮದುವೆಯಾಗಿ ಸುಖದಿಂದಲೇ ಇದ್ದಾರೆ. ಆದರೆ ಶೀನೂಗೆ ಕಮಲಿಯನ್ನು ಮರೆಯುವುದು ಅಸಾಧ್ಯ. ಏಕೆಂದರೆ ಜೀವನದ ಮೊದಮೊದಲ ಅನುಭವಗಳು ಉಂಟುಮಾಡುವ ರೋಮಾಂಚನ, ಅವುಗಳು ಕೊಡುವ ಹಿತವಾದ ಸುಖವನ್ನು ಮರೆಯುವುದು ಯಾರಿಗಾದರೂ ಸರಿ ಕಷ್ಟವೇ.

ಶೀನೂ ಮತ್ತು ಕಮಲಿ ಬಾಲ್ಯದಿಂದಲೂ ಕೂಡಿ ಆಡಿ ಬೆಳೆದವರು. ಅವರಿಬ್ಬರ ಕುಟುಂಬಗಳ ನಡುವೆಯೂ ಘನಿಷ್ಠ ಸ್ನೇಹ-ಸಂಬಂಧವಿದೆ. ಶೀನೂ ಮತ್ತು ಕಮಲಿ ಹೊಸ ಹರೆಯಕ್ಕೆ ಕಾಲಿಟ್ಟೊಡನೆ ಅವರ ನಡುವಿನ ಸಂಬಂಧ ಹೇಳಲಾಗದಂತಹ ಭಾವನೆಗಳ ಸೆಳವಿಗೆ ಸಿಕ್ಕು ಸಂಕೀರ್ಣ ರೂಪ ಪಡೆಯುತ್ತದೆ. ಶೀನೂ ಮತ್ತು ಕಮಲಿಗೆ ಪರಸ್ಪರ ಇಷ್ಟವಿದ್ದರೂ ಅದನ್ನು ಹೇಳಿಕೊಳ್ಳಲಾಗದ ಸ್ಥಿತಿಯಿದೆ. ಹೊಸ ಹರೆಯದ ಕಮಲಿಯ ಸ್ಪರ್ಶ ಶೀನೂವಿಗೆ ತೆರೆದು ತೋರಿಸುವ ಹೊಸ ಲೋಕ ಮತ್ತು ಅದು ಆತನಲ್ಲಿ ಉಂಟು ಮಾಡುವ ವಿಚಿತ್ರ ತಳಮಳವನ್ನು ವೈದ್ಯರು ತುಂಬ ಸೊಗಸಾಗಿ ವಿವರಿಸಿದ್ದಾರೆ.

“ಮನುಷ್ಯರು ಬಹಳ ವಿಚಿತ್ರ ಇರತಾರ. ಅವತ್ತs ಅಂದರs ಆ ಮಧ್ಯಾಹ್ನ ಅಡ್ಡಮಳಿ ಹೊಡೆದ ದಿವಸ ನನಗ ಯಾವದೋ ಒಂದು ದಿವ್ಯ ಯಕ್ಷಿಣೀ ಲೋಕದ ಪರಿಚಯ ಮಾಡಿಸಿ ಕೊಸರಿಕೊಂಡು ಓಡಿಹೋದ ಕಮಲಿ ಮುಂದ ಎರಡು ದಿವಸ ನಮ್ಮ ಮನಿಗೇ ಬರಲಿಲ್ಲ. ಆ ಮ್ಯಾಲೆ ಬಂದಳು ಬಂದರ ಸಹಿತ ನಮ್ಮಿಬ್ಬರ ನಡುವೆ ಬಿಲ್ಕುಲ್ ಏನೂ ನಡದೇ ಇಲ್ಲೇನೋ ಅನ್ನವರ ಹಂಗ ಅತ್ಯಂತ ಸಹಜವಾಗಿ ಇದ್ದುಬಿಟ್ಟಳು. ನನಗ ಒಮ್ಮೊಮ್ಮೆ ಕಮಲಿ ಕಪಟತನ ನೋಡಿ ಶಿಟ್ಟು ಬರತಿತ್ತು. ಈ ತಹ ತಹ ಬಡೋದು ಈ ಯಾತನಾ, ವೇದನಾ, ನಿದ್ದೆಗೆಡೋದು ಯಲ್ಲಾ ನನ್ನ ಪಾಲಿಗೆ ಬರದಾನೇನೋ ದೇವರು ಅನಸತಿತ್ತು. ಆದರ ಆಕಿ ಯಷ್ಟು ತಪ್ಪಿಸಿದರೂ ಒಮ್ಮೊಮ್ಮೆ ನಮ್ಮಿಬ್ಬರ ಕಣ್ಣು ಹೆಣಕೊಂಡು ಬಿಡುತ್ತಿದ್ದವು. ತಮ್ಮ ಪರಸ್ಪರ ಅಂತಃಕರಣವನ್ನು ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದವು. ಆವಾಗ ಸ್ವಲ್ಪ ನೆಮ್ಮದಿ ಅನಸತಿತ್ತು. ಭರವಸೆ ಬರತಿತ್ತು”.

(ತ್ರಯಸ್ಥ, ಪುಟ 30-31)

ಕಾಲಾಂತರದಲ್ಲಿ ಶೀನೂ ಮತ್ತು ಕಮಲಿಯರು ತಮ್ಮದೇ ಬದುಕಿನ ಜಂಜಾಟದಲ್ಲಿ ಮುಳುಗಿಹೋದರೂ ಮೊದಲ ಪ್ರೇಮದ ನೆನಪುಗಳು ಮಾತ್ರ ಅವರಲ್ಲಿ ತಾಜಾ ಆಗಿಯೇ ಉಳಿದಿವೆ. ಭೌತಿಕವಾಗಿ ಕಮಲಿ ದೂರವಾದರೂ ಶೀನೂನ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿ ಬಿಟ್ಟಿದ್ದಾಳೆ. ಶೀನೂನ ಮನಸ್ಸನ್ನು ಆವರಿಸಿಕೊಂಡಿರುವ ಕಮಲಿಯ ಕುರಿತ ನೆನಪುಗಳು ಎಷ್ಟು ಗಾಢವಾಗಿವೆ ಎಂಬುದನ್ನು ಕೆಳಗಿನಸಾಲುಗಳುಸಾಬೀತು ಪಡಿಸುತ್ತವೆ.

“ಆದರ ಎಷ್ಟು ಆತ್ಮ ವಂಚನೆ ಮಾಡಿಕೊಂಡರ, ಎಷ್ಟು ಸುಳ್ಳ ಸಮಾಧಾನ ಮಾಡಿಕೊಂಡರ ಏನದ? ಖರೇ ಅಂದ್ರ ಕಮಲಿ ನನ್ನ ಬಿಟ್ಟು ಹೋಗಿದ್ದೇ ಇಲ್ಲ. ಆಕಿ ನನ್ನ ರಕ್ತದೊಳಗ, ಮಾಂಸದೊಳಗ, ಆತ್ಮದೊಳಗ, ಎಂದೆಂದೂ ಅಗಲಧಂಗ ಬೆರೆತುಕೊಂಡುಬಿಟ್ಟಿದ್ದಳು. ಅದು ನನಗೂ ಗೊತ್ತಿದ್ದಿದ್ದಿಲ್ಲ. ಒಮ್ಮೆ ಈ ಮೇಲ ಮೇಲಿನ ಮಬ್ಬು ಮಂಜು ಕರಗಿದ ಮೇಲೆ ಮತ್ತೆ ಪ್ರಕಟವಾಗಿ ಬಿಟ್ಟೂ ಬಿಡದ ಸದೋದಿತ ಕುಟೂ ಕುಟೂ ಅಂತ ವೇಳೆ ಅವೇಳೆ ಅನ್ನದೇ ಜೀವಾ ತಿನ್ನಲಿಕ್ಕೆ ಹತ್ತಿದಳು. ಹೃದಯದ ಮ್ಯಾಲ ಹಗೂರಾಗಿ ಸೂಜಿ ಯಳೀಲಿಕ್ಕೆ ಹತ್ತಿದಳು. ಅಂಕುಡೊಂಕು ಗೆರಿ ಎಳೆಧಂಗ. ಶಿವರಾತ್ರಿ ಮುಂದಿನ ನಿಂಬೀ ಹಣ್ಣಿನ ಬಣ್ಣದ ಬಿಸಿಲಿನ ಸಂಗತಿ ಬರಲಿಕ್ಕೆ ಹತ್ತಿದಳು. ಉಳೀ ಬಸಪ್ಪನ ಜಾತ್ರಿ ಮುಂದಿನ ಧೋ ಧೋ ಮಳಿಯಾಗಿ ಬಂದಳು. ದೀಪಾವಳಿ ಆರತಿಯೊಳಗಿನ ಜ್ಯೋತಿಯಾಗಿ ಬೆಳಗಿದಳು. ಕಾರಹುಣ್ಣಿವಿ ಗಾಳಿ ಪಟದ ಧಾರ ಇಳಕೋತ ಬಂದಳು. ಡಿಸೆಂಬರ್ ಛಳಿಯೊಳಗ ಎರಡು ಮೂರು ರಗ್ಗು ತೂರಿ ಒಳಗ ಹೊಕ್ಕು ಕಚಗುಳಿ ಇಡಲಿಕ್ಕೆ ಹತ್ತಿದಳು. ಅಂತೂ ಯಾವಾಗ ಬೇಕ ಆವಾಗ ಹೊತ್ತಿಲ್ಲದ ಹೊತ್ತಿನ್ಯಾಗ ಮತ್ತ ಮತ್ತ ಬಂದು ನನ್ನ ನೆನಪಿನ ಬಾಗಲಾ ಹಾರ ಹೊಡೀಲಿಕ್ಕೆ ಹತ್ತಿದಳು”.

(ತ್ರಯಸ್ಥ, ಪುಟ 42)

ಕರಬೇವು ಕೀಳುವ ಸ್ಪರ್ಧೆಯಲ್ಲಿ ತನಗಾರೂ ಸಮಾನರಿಲ್ಲ ಎಂದು ಬೀಗುವ ಶೀನೂಗೆ ಆಘಾತವಾಗುವುದು ಹಿರಿಯ ಪೊಲೀಸ್ ಅಧಿಕಾರಿಯಾದ ಕಮಲಿಯ ಗಂಡ ಎಚ್.ಬಿ.ದೇಸಾಯಿ ಬೇರಾರೂ ಆಗಿರದೇ ತನಗೆ ಬಾಲ್ಯದಲ್ಲಿ ಸಾಕಷ್ಟು ಕಿರುಕುಳ ಕೊಟ್ಟ ಹಣಿಮ್ಯಾ ಎಂದು ತಿಳಿದಾಗ! ಇದು ಶೀನೂಗೆ ಇನ್ನಷ್ಟು ದುಃಖವಾಗುವಂತೆ ಮಾಡುತ್ತದೆ. ಈ ಕರಿಬೇವು ಕೀಳುವ ಪ್ರಸಂಗ ಹಾಸ್ಯಮಯವಾದರೂ ತುಂಬ ರೋಮ್ಯಾಂಟಿಕ್ಕಾಗಿದೆ.

“ನನಗ ಏನಾದರೂ ಕಾಲಚಕ್ರಕ್ಕೆ ಒಂದು ಧೊಡ್ಡ ಬ್ರೇಕ್ ಹಾಕಿ, ಅದನ್ನ ಎಲ್ಲಿ ಬೇಕಲ್ಲಿ ನಿಲ್ಲಿಸಿ ಬಿಡುವ ಸಾಮರ್ಥ್ಯ ಇದ್ದಿದ್ದರ, ಆವತ್ತಿನ ಮಧ್ಯಾಹ್ನ ಕಮಲಿ ನನ್ನ ಕನಸ ಕೇಳಿ ಬಿದ್ದು ಎದ್ದು ಕಣ್ಣಾಗ ನೀರು ತುಳಕಿಸಿಕೋತ, ಹೊಟ್ಟೆ ಹಿಡಿದುಕೊಂಡು ನಕ್ಕಳಲ್ಲ ಅವತ್ತ ನಿಲ್ಲಿಸಿ ಬಿಡತಿದ್ದೆ”.

(ತ್ರಯಸ್ಥ, ಪುಟ 34)

“ತ್ರಯಸ್ಥ” ಕಥೆಯ ಸೊಬಗನ್ನು ಓದಿಯೇ ಸವಿಯಬೇಕು. ಕನ್ನಡದಲ್ಲಿ ಅಸಂಖ್ಯ ಪ್ರೇಮಕಥೆಗಳು ಬಂದಿವೆ. ಹೊಸ ಹರೆಯ ಅಥವಾ ಕಿಶೋರ ಪ್ರಣಯದ ಕುರಿತ ಕಥೆಗಳು ಸಂಖ್ಯೆಯಲ್ಲಿ ಕಡಿಮೆಯಾದರೂ ಬಂದಿವೆ. ಆದರೆ ಶ್ರೀನಿವಾಸ ವೈದ್ಯರ “ತ್ರಯಸ್ಥ” ಕಥೆ ಇವೆಲ್ಲವುಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇದು ಕಿಶೋರ ಪ್ರಣಯದ ಮಧುರ ಅನುಭವಗಳನ್ನು ತುಂಬ ಕುಶಲವಾಗಿ ಚಿತ್ರಿಸುತ್ತದೆ. ಇಲ್ಲೆಲ್ಲೂ ಕಾಮ ಅಥವಾ ಶೃಂಗಾರದ ವಾಸನೆಯಿಲ್ಲ. ಇಲ್ಲಿರುವುದು ದಿವ್ಯ ಪ್ರೇಮದ ಅನುಭೂತಿ. ಕಿಶೋರಾವಸ್ಥೆಯಲ್ಲುಂಟಾಗುವ ಮೊದಲ ಪ್ರೇಮದ ಸಿಹಿ-ಕಹಿ ಅನುಭವಗಳನ್ನು ವೈದ್ಯರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಶ್ರೀನಿವಾಸ ವೈದ್ಯರ “ತ್ರಯಸ್ಥ” ಕನ್ನಡದ ಶ್ರೇಷ್ಠ ಪ್ರೇಮಕಥೆಗಳಲ್ಲೊಂದು.

ಶ್ರೀನಿವಾಸ ವೈದ್ಯರ “ಹಳ್ಳ ಬಂತು ಹಳ್ಳ” ಕಾದಂಬರಿಗೆ ಸಿಕ್ಕಷ್ಟು ಖ್ಯಾತಿ ಮತ್ತು ಜನಪ್ರಿಯತೆ ಅವರ ಇನ್ನುಳಿದ ಕೃತಿಗಳಿಗೆ ಸಿಕ್ಕಿಲ್ಲ. ವೈದ್ಯರ ಕೆಲವು ಒಳ್ಳೆಯ ಲಲಿತ ಪ್ರಬಂಧ ಮತ್ತು ಸಣ್ಣಕಥೆಗಳಿಗೂ ಸಹ ಕನ್ನಡದ ಪ್ರಾತಿನಿಧಿಕ ಆ್ಯಂಥಾಲಜಿಗಳಲ್ಲಿ ಸ್ಥಾನ ಸಿಗದಿರುವುದು ಬೇಸರದ ಸಂಗತಿ. ಇನ್ನಾದರೂ ವೈದ್ಯರ ಕಥೆ-ಪ್ರಬಂಧಗಳ ಮಹತ್ವವನ್ನು ಗುರುತಿಸಬೇಕಾದ ಅಗತ್ಯವಿದೆ. “ಶ್ರೀನಿವಾಸ ವೈದ್ಯ ಅವರ ಆಯ್ದ ಕಥೆಗಳು”ಪುಸ್ತಕ ಮೊದಲ ಬಾರಿಗೆ ಶ್ರೀನಿವಾಸ ವೈದ್ಯರ ಕಥೆ-ಪ್ರಬಂಧಗಳನ್ನೋದುವವರಿಗೆ ಅವರ ಸಾಹಿತ್ಯದ ಕುರಿತು ಆಸಕ್ತಿಯನ್ನುಂಟು ಮಾಡುವಲ್ಲಿ ಯಶಸ್ವಿಯಾಗಿದೆ.

*******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಶ್ರೀನಿವಾಸ ವೈದ್ಯ ಅವರ ಆಯ್ದ ಕಥೆಗಳು”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter