ಆಡು ಮುಟ್ಟದ ಸೊಪ್ಪಿಲ್ಲ, ಗುಂಡಣ್ಣ ಮಾಡದ ವ್ಯಾಪಾರವಿಲ್ಲ!
ಗುಂಡಣ್ಣನ ಇತ್ತೀಚಿನ ಎರಡು ವ್ಯಾಪಾರ ವಹಿವಾಟುಗಳು ಇಂತಿವೆ.
ಸಾಕಷ್ಟು ಶ್ರೀಮಂತ ಕುಟುಂಬದಲ್ಲಿ ಜನಿಸಿದ ಗುಂಡಣ್ಣನಿಗೆ ಓದು ಅಷ್ಟಕ್ಕಷ್ಟೇ….ಆದರೆ ಕನ್ನಡ ಸಾಹಿತ್ಯದ ಗೀಳು ಅವನ ಬೆನ್ನು ಬಿಡಲಿಲ್ಲ… ಚಿಕ್ಕಂದಿನಿಂದ ಊರಿನ ಹಿರಿ ಕಿರಿ (ಕೆಲವೊಮ್ಮೆ ಕಿರಿ ಕಿರಿ ಮಾಡುವ) ಕವಿಗಳು ಬರೆದ ಕವಿತೆಗಳನ್ನು ಓದುತ್ತಾ… ಓದುತ್ತಾ… ಕ್ರಮೇಣ ತಾನು ಕೂಡಾ ಒಬ್ಬ ‘ಪ್ರಭುದ್ದ ಕವಿ’ ಎಂದು ಭ್ರಮಿಸ ತೊಡಗಿದ. ಆಗಾಗ್ಗೆ ‘ಕವಿ ಮೇಳ’ ಗಳನ್ನು ತನ್ನ ನೇತೃತ್ವದಲ್ಲಿ (ಸ್ವಂತ ಹಣದಿಂದ) ಆಯೋಜಿಸಿ ಉತ್ತಮ ಸಂಘಟಕ ಎಂದು ಹೆಸರು ಬೇರೆ ಗಳಿಸಿದ. ಜೊತೆಗೆ ‘ಕವಿ ಮೇಳ’ ಕ್ಕೆ ಕಾಡಿ – ಬೇಡಿ – ಒತ್ತಾಯದಿಂದ ಹೆಚ್ಚು (ಕೆಲವು ಬಾರಿ ಸಾಹಿತ್ಯದ ಗಂಧ ಗೊತ್ತಿಲ್ಲದ ಮುಗ್ಧ) ಜನರನ್ನು ಸೇರಿಸುತ್ತಿದ್ದುದರಿಂದ ‘ಜನ ಕವಿ’ ಎಂದು ಗುಂಡಣ್ಣ ಅನತಿ ಕಾಲದಲ್ಲೇ ಪ್ರಖ್ಯಾತನಾದನು.
ಯಾರೋ ತಲೆ ಮಾಸಿದ ಪುಸ್ತಕ ಪ್ರಕಾಶಕರು ಗುಂಡಣ್ಣನ ಮೇಲಿನ ಹೊಟ್ಟೆ ಕಿಚ್ಚನಿಂದ ಅವನು ಬರೆದ ‘ಇವು ಜನತೆಯ ಕವಿತೆಗಳು ಅಲ್ಲ…ಬದಲಾಗಿ ಜನ ಜಾಗ್ರತೆಯ ಮೇಳಗಳು’ ಎನ್ನುವ ಮೊದಲ ಕವನ ಸಂಕಲನ (ಹೆಚ್ಚು ಹಣ ಬೇರೆ ಪಡೆದು!) ಪ್ರಕಟಿಸಿ ಕೈ ತೊಳೆದುಕೊಂಡರು. ಒಂದು ದೊಡ್ಡ ಸಮಾವೇಶ ನಡೆಸಿ ಅದರಲ್ಲಿ ತಮ್ಮ ಜಾತಿಯ ಮಠದ ಗುರುಗಳ ದಿವ್ಯ ಸಾನಿಧ್ಯದಲ್ಲಿ, ಕವಿ ಪುಂಗವರು, ಕಥಾ ಲೇಖಕರು ಅಲ್ಲದೇ ಕನ್ನಡಕ್ಕಾಗಿ ತಮ್ಮ ‘ಬದುಕನ್ನೇ ‘ (ಚಂದಾ ಹಣ ಎತ್ತುವದಕ್ಕೆ ಮೀಸಲಿಟ್ಟ) ಕನ್ನಡದ ಹುಟ್ಟು ಹೋರಾಟಗಾರರ ಹಾಗೂ ‘ಕನ್ನಡ ತೇರು’ ಎಳೆಯಲು ಸದಾ ಸಿದ್ಧರಾದ ಸಾಹಿತ್ಯ ಪ್ರೇಮಿಗಳ (ಹೆಚ್ಚಾಗಿ ತಮ್ಮ ಜಾತಿಯವರ) ಸಮ್ಮುಖದಲ್ಲಿ ಒಳ್ಳೆಯ ಭೋಜನ ಕೂಟ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ ಬಳಿಕ ಗುಂಡಣ್ಣ ವೀರಾವೇಷದಿಂದ ತನ್ನ ಕವಿತಾ ಗುಚ್ಛವನ್ನು ‘ಲೋಕಾರ್ಪಣೆ’ (ಓದುಗರಿಗೆ ಅಲ್ಲ…ಕಾಣದ ಲೋಕಕ್ಕೆ ಅರ್ಪಣೆ ಅಷ್ಟೇ!) ಮಾಡಿ ಕನ್ನಡದ ‘ ಜನ ಕವಿ’ ತನ್ನ ಜನ್ಮ ಸಾರ್ಥಕ ಪಡಿಸಿಕೊಂಡ.
ಕನ್ನಡ ಸಾರಸ್ವತ ಲೋಕಕ್ಕೆ ಅದೊಂದು ಭಯಂಕರ ದೊಡ್ಡ ತಿರುವು.. ಮುಂದೆ ಗುಂಡಣ್ಣನಂತಹ ಜನಪ್ರಿಯ ‘ಜನ ಕವಿ’ ಯನ್ನು ಪುಸ್ತಕ ಪ್ರಕಾಶಕನನ್ನಾಗಿಸಿತು… ಕಾರಣ ಇಷ್ಟೇ.. ಗುಂಡಣ್ಣನ ಕವಿತೆಗಳ ಭೋರ್ಗರತೆಯನ್ನು ತಡೆಯಲು (ಪ್ರಕಟಿಸಲು) ಯಾವ ಪುಸ್ತಕ ಪ್ರಕಾಶಕರು ಮುಂದೆ ಬರಲಿಲ್ಲ….ಕೊನೆಗೆ ಕನ್ನಡಕ್ಕಾಗಿ ಆಗಲೇ ಎತ್ತಿದ ‘ ಕೈ ‘ ಇಳಿಸಲಾಗದೆ ಗುಂಡಣ್ಣ ತಾನೇ ಸ್ವಯಂ ಪ್ರಕಾಶಕನಾದ. “ಸ್ವಂತ ಕವಿತೆಗಳು – ಸ್ವಂತ ಪ್ರಕಾಶನ” ತತ್ವದ ಅಡಿಯಲ್ಲಿ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿ “ಕನ್ನಡ ತಾಯಿ” ಯ ಮಡಿಲು ತುಂಬಿದ. ತಾನು ನಿರ್ವಹಿಸಿದ ‘ಕಾವ್ಯ ಮೇಳ’ ಗಳಲ್ಲಿ ಭಾಗವಹಿಸಿದ ಸಾಹಿತ್ಯ ಪ್ರೇಮಿಗಳಿಗೆ ತನ್ನ ಪುಸ್ತಕಗಳನ್ನು ಪುಕ್ಕಟೆಯಾಗಿ ಹಂಚಿ ಮನೆಯಲ್ಲಿನ ತನ್ನ ಪ್ರಕಟಿತ (ರಟ್ಟಿನ ಬಾಕ್ಸ್ ಗಳಲ್ಲಿ ತುಂಬಿಟ್ಟ) ‘ಸಾಹಿತ್ಯ ಭಂಡಾರದ’ ಭಾರವನ್ನು ಕಡಿಮೆ ಮಾಡಿದ…
ನಂತರ ಬರಬರುತ್ತಾ ‘ಸಹಕಾರದ’ ( 75% ಕವಿ – 25% ಪ್ರಕಾಶಕರ ಪಾಲುದಾರಿಕೆ) ತತ್ವದಡಿಯಲ್ಲಿ ಬೇರೆ ಕವಿ ಪುಂಗವರ ಅಸಂಖ್ಯಾತ ಕವಿತೆಗಳ ಸಂಕಲನಗಳನ್ನು ‘ಕಗ್ಗತ್ತಲಿನಿಂದ ಬೆಳಕಿಗೆ’ ತಂದ ಸಾಕ್ಷಾತ್ ದೇವರು ‘ಪುಣ್ಯಮೂರ್ತಿ’ ಗುಂಡಣ್ಣ! ಮೊದ ಮೊದಲು ಕವಿಗಳ ಪ್ರೀತಿಯ ಒತ್ತಾಯಕ್ಕೆ ಮಣಿದು ಬಹಳ ಪುಸ್ತಕಗಳನ್ನು ಗುಂಡಣ್ಣ ಪುಕ್ಕಟೆಯಾಗಿ ಪ್ರಕಟಿಸಿದ… ಅವುಗಳು ಮಾರಾಟವಾಗದೆ ಗುಂಡಣ್ಣನ ಗೋಡೌನ್ ತುಂಬಿದವು…. ಸ್ವಲ್ಪ ಜ್ಞಾನ ಬಂದ ಬಳಿಕ….ಬರು ಬರುತ್ತಾ ಕವಿಗಳ ಕರುಣೆಯ ಮನವಿಗೆ ಬಗ್ಗದೆ, ಜಗ್ಗದೆ ‘ಸೆಟದು’ ನಿಂತು ನಿರಾಕರಿಸಿ ‘ನಷ್ಟ’ ದ ಸುಳಿಯಿಂದ ಹೊರಬಂದು ಒಂದು ಒಳ್ಳೆಯ ದಿನದಂದು ತನ್ನ ಪುಸ್ತಕ ‘ಪ್ರಕಾಶನ’ ಸಂಸ್ಥೆಗೆ ಗುಂಡಣ್ಣ ಖಾಯಂ ಬೀಗ ಹಾಕಿ ‘ಕನ್ನಡಮ್ಮನ ಸೇವೆಗೆ’ ಮಂಗಳ ಹಾಡಿಬಿಟ್ಟ.
ಹೆಚ್ಚು ಕಡಿಮೆ ಐವತ್ತರ ಹತ್ತಿರವಿದ್ದ ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’ ಗುಂಡಣ್ಣನಿಗೆ ಇನ್ನೂ ‘ಕಲ್ಯಾಣ ಭಾಗ್ಯ’ ಒಲಿದಿಲ್ಲ… ಗುಂಡಣ್ಣನ ಹೆತ್ತವರು ಎಲ್ಲ ಪ್ರಯತ್ನ ಮಾಡಿ ಸೋತು ಬಸವಳಿದರು.. ಗುಂಡಣ್ಣನಿಗೆ ಇಷ್ಟವಾಗುವ ‘ವಧು’ ಮಾತ್ರ ಕಳೆದ ಹತ್ತು – ಇಪ್ಪತ್ತು ವರ್ಷಗಳಿಂದ ಕುಟುಂಬದ ಸದಸ್ಯರೆಲ್ಲರೂ ಸೇರಿ ಭಗೀರಥ ಪ್ರಯತ್ನ ಮಾಡಿದರೂ ಸಿಗಲಿಲ್ಲ ಪಾಪ!… ಮನೆಯ ಹಿರಿಯ ಪುರೋಹಿತರು ಗುಂಡಣ್ಣನ ಎರಡು ಭುಜಗಳಿಗೆ ಮತ್ತೆರಡು ಭುಜಗಳನ್ನು ಜೋಡಿಸುವ ಅವಿರತ ಶ್ರಮದಲ್ಲಿ ವಿಫಲರಾಗಿ ಕೊನೆಗೂ ಗುಂಡಣ್ಣನ ‘ಚತುರ್ಭುಜ’ ( ಅರ್ಥಾತ್ ಮದುವೆ!) ನೋಡಲಾಗದೆ ಅದೇ ಚಿಂತೆಯಲ್ಲಿ ಕೊರಗುತ್ತಾ ‘ಶಿವನ ಪಾದ’ ಸೇರಿದರು. ಈಗ ಅವರ ವಾರಸುದಾರ ಮಗ ಮನೆಯ ಯುವ ಪುರೋಹಿತನಿಗೆ ಗುಂಡಣ್ಣನಿಗೆ ‘ತಕ್ಕ ವಧು’ ವನ್ನು ಹುಡುಕುವದು ದೊಡ್ಡ ಸವಾಲಾಯಿತು. ಅದೇ ವಿಷಯಕ್ಕೆ ಬಹಳ ತಲೆ ಕೆಡಿಸಿಕೊಂಡು ಒಮ್ಮೆ ಯೋಚಿಸಿದ.. ಮತ್ತೊಮ್ಮೆ ಯೋಚಿಸಿದ.. ಮಗದೊಮ್ಮೆ ಯೋಚಿಸಿದ….ಕೊನೆಗೊಂದು ಬಾರಿ ತಲೆಯಲ್ಲಿ ಹೊಸ ‘ಐಡಿಯಾ’ ಮಿಂಚಿ ಹೊಳೆಯಿತು.
ಗುಂಡಣ್ಣನಿಗೆ ಹೇಗೂ ವಿವಿಧ ವ್ಯಾಪಾರ ವಹಿವಾಟುಗಳನ್ನು ನಿರ್ವಹಿಸಿದ (ಹೆಚ್ಚು ನಷ್ಟವನ್ನೇ ಕಂಡು) ಅನುಭವ ಇದ್ದುದರಿಂದ ಅವನಿಂದ ಹೊಸ ಸ್ಯಾರಿ ಸೆಂಟರ್ ಪ್ರಾರಂಭಿಸಿದರೆ ಅಲ್ಲಿಗೆ ನಿತ್ಯ ಭೇಟಿ ಕೊಡುವ ನೂರಾರು ಚಂದದ ಯುವತಿಯರಲ್ಲಿ ತನಗೆ ಹಿಡಿಸಿದ ಯಾರನ್ನಾದರೂ ಗುಂಡಣ್ಣ ಕೈ ಹಿಡಿಯುವ ಅವಕಾಶ ಇರುತ್ತದೆ…ಇದನ್ನೇ ಗುಂಡಣ್ಣನಿಗೆ ಹೇಳಿದಾಗ ಆತನಿಗೆ ರೊಟ್ಟಿ ತುಪ್ಪದಲ್ಲಿ ಜಾರಿ ಬಿದ್ದಂತಹ ಹಿತವಾದ ಅನುಭವವಾಯಿತು. ಒಂದು ಶುಭ ಮಹೂರ್ತದಲ್ಲಿ ಗಾಂಧಿ ನಗರದ ಗಾಂಧಿ ಬಜಾರಿನ ಗಾಂಧಿ ಚೌಕಿನಲ್ಲಿ ಗಾಂಧಿ ಪ್ರತಿಮೆಯ ಎದುರಿನ ಶಾಪಿನಲ್ಲಿ ‘ಗುಂಡಣ್ಣ ಸ್ಯಾರಿ ಸೆಂಟರ್’ ಪ್ರಾರಂಭಗೊಂಡಿತು. ಗುಂಡಣ್ಣನ ತಂಡ ಸ್ಯಾರಿ ಸೆಂಟರ್ ಓಪನ್ ಆಗಿ ಒಂದು ತಾಸಾದರೂ ಗ್ರಾಹಕರು ಬರದೇ ಚಡಪಡಿಸುತ್ತಿತ್ತು… ಕೊನೆಗೂ ದೇವರು ಕಣ್ಣು ತೆಗೆದ… ಪರಿಣಾಮ ಇಬ್ಬರು ಯುವತಿಯರು ಅಂಗಡಿಯಲ್ಲಿ ಪ್ರತ್ಯಕ್ಷರಾದರು. ಸ್ಯಾರಿ ಸೆಂಟರಿನ ಹೊಸ ಸೇಲ್ಸ್ಮನ್ ತಂಡದ ನಾಯಕ ಚಂದ್ರುವಿನ ನೇತೃತ್ವದಲ್ಲಿ ಅವರಿಗೆ ಬಾಗಿಲಲ್ಲೇ ಗುಲಾಬಿ ಹೂ ನೀಡಿ ಸಂಭ್ರಮದಿಂದ ಸ್ವಾಗತಿಸಿದರು.
ಸೇಲ್ಸ್ಮನ್ ನೀಡಿದ ಕೂಲ್ ಡ್ರಿಂಕ್ಸ್ ನಿಧಾನವಾಗಿ ಕುಡಿದ ಇಬ್ಬರು ಗೆಳತಿಯರು ಸೀರೆಗಳತ್ತ ಮೆಲ್ಲನೆ ಗಮನ ಹರಿಸಿದರು. ” ಜಿಂಕೆ ಗೊಂಬೆಗಳ ಮಧ್ಯೆ ಇರುವ ಸೀರೆಗೆ ಸಿಂಹ ಚಿತ್ರಗಳ ಅಂಚಿನ (ಬಾರ್ಡರಿನ) ಸೀರೆ ಇದೆಯಾ…? ” ಎಂದು ಪ್ರಶ್ನಿಸಿದಳು ಪುಷ್ಪ. ಶಾಕ್ ಹೊಡೆದವನಂತೆ ಕಕ್ಕಾಬಿಕ್ಕಿಯಾಗಿ ನೋಡಿದ ಚಂದ್ರು ಹೊಸ ಸ್ಯಾರಿ ಸೆಂಟರ್ ನ ಮೊಟ್ಟ ಮೊದಲ ಕಸ್ಟಮರ್ ಳನ್ನು…ನಂತರ ಸಾವರಿಸಿಕೊಂಡು ಉಗುಳು ನುಂಗುತ್ತಾ “ಇಲ್ಲಾ.. ಮೇಡಂ” ಎಂದ ಕ್ಲುಪ್ತವಾಗಿ. ಆಕೆಯ ‘ನೂತನ ತರಹದ ಟೇಸ್ಟಿಗೆ’ ಬೇಸ್ತು ಬಿದ್ದ ಇಬ್ಬರು ಮೂವರು ಸೇಲ್ಸ್ ಮೆನ್ ಗಳು ಆಕೆಯನ್ನೇ ಭಯ ಭಕ್ತಿಯಿಂದ ದಿಟ್ಟಿಸಿ ನೋಡತೋಡಗಿದರು. “ಮೇಡಂ.. ಇದನ್ನು ನೋಡಿ… ಗೆರೆ ಬಿಚ್ಚಿದ ನವಿಲಿನ ಡಿಸೈನ್ ಇರುವ ಸ್ಯಾರಿ ನಿಮಗೆ ತುಂಬಾ ಹಿಡಿಸುತ್ತೆ…”ಎಂದ ಸೇಲ್ಸ್ ಮನ್ ಕ್ಯಾಪ್ಟನ್ ಚಂದ್ರು.” ಅದು ಔಟ್ ಡೇಟೆಡ್…ಬೇಡ ಬೇಡ… ಹೆಡೆ ಎತ್ತಿದ ನಾಗರ ಹಾವುಗಳ ಚಿತ್ರ ಸೆಂಟರ್ ನಲ್ಲಿ ಇರಬೇಕು…ಅದರ ಅಂಚಿಗೆ ಮುಂಗುಸಿ ಚಿತ್ರಗಳು ಇದ್ದರೆ ಚೆನ್ನ… ಅಂತಹ ಸಾರಿ ತೋರಿಸಿ.. ” ಉತ್ಸಾಹದಿಂದ ಮತ್ತೆ ನುಡಿದಳು ಪುಷ್ಪ.
“ನೀವು ಇನ್ನೂ ನ್ಯಾಷನಲ್ ಜಾಗ್ರಫಿ ಚಾನಲ್ ಜೋನ್ ನಿಂದ ಹೊರಬಂದಂತಿಲ್ಲ…” ಎಂದು ಹೆಚ್ಚು ಕಡಿಮೆ ಜೋರಾಗಿ ಕೂಗಿದ ಚಂದ್ರು… ಆದರೆ ದೇವರ ದಯೆ.. ಪುಷ್ಪಗೆ ಅದು ಕೇಳಿಸಲಿಲ್ಲ…ನಂತರ ಮೆಲ್ಲಗೆ ನುಡಿದ “ಸಾರಿ ಮೇಡಂ… ಅಂತಹ ಸ್ಯಾರಿಗಳು ನಮ್ಮಲ್ಲಿ ಇಲ್ಲ… ” ಅಷ್ಟರಲ್ಲಿ ಮತ್ತಷ್ಟು ಗ್ರಾಹಕರು ಬಂದರು ಶಾಪಿನೊಳಗೆ. “ಹೋಗಲಿ… ಸೆಂಟರಿನಲ್ಲಿ ಸ್ವಾತಿ ಮಳೆ ಹನಿ ಬಿಂದುವಿನ ಚಿತ್ರಗಳಿಗೆ ಹೊಂದುವ ನಾಯಿ ಕೊಡೆಗಳ ಅಂಚಿನ ಸ್ಯಾರಿ ಇದೆಯಾ..?” ಎಂದು ಮತ್ತೊಮ್ಮೆ ಗಂಭೀರ ಸ್ವರದಲ್ಲಿ ಪುಷ್ಪ ಕೇಳಿದಳು.
ಆ ಪ್ರಶ್ನೆಗೆ ಚಂದ್ರು ಕ್ಷಣ ಕಾಲ ನಡುಗಿದ ನಿಂತಲ್ಲೇ. ಈಕೆ ಮಾಮೂಲಿ ಹೆಣ್ಣಲ್ಲ… ಯಾಕೋ ಎಲ್ಲೋ ಇವಳಲ್ಲಿ ಸ್ವಲ್ಪ ವ್ಯತ್ಯಾಸ ಇದ್ದಂತೆ ಕಾಣುತ್ತದೆ ಎಂದೆನಿಸಿತು ಚಂದ್ರುಗೆ…ಗ್ರಾಹಕ ದೇವತೆ! ಏನೂ ಮಾಡೋ ಹಾಗಿಲ್ಲ. ಆದರೂ ಸಾವರಿಸಿಕೊಂಡು “ಇದು ನೋಡಿ ಮೇಡಂ ಹೊಸ ಡಿಸೈನ್ ಸ್ಯಾರಿ… ನಿನ್ನೆಯೇ ಅಹಮದಾಬಾದಿನಿಂದ ಬಂದ ಹೊಸ ಸ್ಟಾಕ್… ಇದರಲ್ಲಿ ನಿಮಗೆ ಬೇಕಾದ ಕಲರ್ಸ್ ಸಿಗುತ್ತವೆ.” ಹೆಚ್ಚು ಕಡಿಮೆ ಗೋಗರೆಯುತ್ತ ನುಡಿದ ಚಂದ್ರು. “ಹೊಸ ಶಾಪ್ ಅಂತೀರಿ.. ಎಲ್ಲ ಹಳೇ ಡಿಸೈನ್ – ಪ್ಯಾಟರ್ನ್ ಸ್ಯಾರಿಗಳೇ ತೋರಿಸ್ತಿದಿರಿ..” ಎಂದು ಮತ್ತೆ ರಾಗ ಎಳೆದಳು ಪುಷ್ಪ. ಪುಷ್ಪಳ ಅಂದ ಚಂದವನ್ನು ಕ್ಯಾಶ್ ಕೌಂಟರ್ ನಿಂದಲೇ ಅಳೆದು ತೂಗಿ ನೋಡುತ್ತಿದ್ದ ಐವತ್ತರ ಹರೆಯದ ಸಲ್ಮಾನ್ ಖಾನ್ ನಂತಹ ಮೋಸ್ಟ್ ಬ್ಯಾಚಲರ್ ಗುಂಡಣ್ಣ… ಒಂದೈದು ನಿಮಿಷದ ಮೌನದ ಬಳಿಕ.. “ಹೋಗಲಿ… ಗಿಟಾರ್ ಬೊಂಬೆಯ ಚಿತ್ರಗಳಿಗೆ ಮ್ಯಾಚ್ ಆಗುವ ತಬಲಾ ಚಿತ್ರಗಳ ಅಂಚಿನ ಸ್ಯಾರಿ ಇದೆಯಾ ನಿಮ್ಮಲ್ಲಿ….”ಎಂದು ಚಂದ್ರುವನ್ನು ಕೆಕ್ಕರಿಸಿ ನೋಡುತ್ತಾ ವ್ಯಂಗ್ಯವಾಗಿ ಕೇಳಿದಳು ಪುಷ್ಪ.
ಅಂದ ಚಂದದ ಸೌಂದರ್ಯವತಿ ಪುಷ್ಪಳನ್ನು ಫಾಲೋ ಮಾಡುವಂತೆ ನೆರೆದ ಐದಾರು ಕಸ್ಟಮರ್ಸ್ (ಮುಖ್ಯವಾಗಿ ಗಂಡಸರು) ಆಕೆಯನ್ನೇ ನೋಡುತ್ತಿದ್ದರು. ಬಾಯಿ ತೆಗೆದರೆ ಕರ್ಣ ಕಠೋರ ಶಬ್ದಗಳು…. ಆದರೆ ಸಂಗೀತ ನುಡಿಸುವ ವಾದ್ಯಗಳ ಡಿಸೈನ್ ಇರುವ ಸ್ಯಾರಿಗಳು ಬೇಕೆನ್ನುವ ಪುಷ್ಪಳ ಟೇಸ್ಟಿನ ಬಗ್ಗೆ ಸ್ವತಃ ನೋಡಿ ತಲೆ ಸುತ್ತಿದಂತಾಗಿ… ಬಾಯಿ ಒಣಗಿದಂತಾಗಿ ನಿಂತಲ್ಲೇ ಕುಸಿದ ಚಂದ್ರು… ಕ್ಯಾಶ್ ಕೌಂಟರ್ ಬಿಟ್ಟು ಗುಂಡಣ್ಣ ಓಡೋಡಿ ಬಂದು ಉಳಿದ ಸೇಲ್ಸ್ಮನ್ ಜೊತೆ ಪುಷ್ಪಳ ಬಳಿ ಕೈ ಕಟ್ಟಿ ನಿಂತ…. ಶಾಪಿಗೆ ಬಂದ ಒಂದು ತಾಸಿನಲ್ಲಿ ನೂರಾರು ಸ್ಯಾರಿಗಳನ್ನು ಪುಷ್ಪ ಗೆಳೆತಿಯ ಜೊತೆ ಸೇರಿ ತೆಗೆಸಿ – ಬಿಚ್ಚಿಸಿ – ಹರಡಿಸಿದ್ದನ್ನು ನೋಡಿದ ಓನರ್ ಗುಂಡಣ್ಣನಿಗೆ ಬಿ. ಪಿ ಸರ್ರನೆ ಏರುತ್ತಿದ್ದರೂ ಆ ಕ್ಷಣದಲ್ಲಿ ಯುವ ಪುರೋಹಿತನ ಮಾತು ನೆನಪಾಗಿ ಪಾಪ ಸುಮ್ಮನಾದ..
ಬಿಚ್ಚಿದ ಸ್ಯಾರಿಗಳನ್ನು ಮಡಚಿ ಮೊದಲಿನಂತೆ ಕವರುಗಳಲ್ಲಿ ಇಡಲು ದೊಡ್ಡ ಹೋರಾಟವನ್ನೇ ಮಾಡುತ್ತಿತ್ತು ಚಂದ್ರುವಿನ ತಂಡ. “ಆಯ್ತು… ಸರಿ…ನಿಮ್ಮಲ್ಲಿ ರಂಗೋಲಿ ಡಿಸೈನ್ ಸೀರೆಗಳು ಇರಬೇಕಲ್ಲ… ಅವನ್ನು ತೋರಿಸಿ ಸ್ವಲ್ಪ..” ಎಂದಳು ಅಸಹನೆಯಿಂದ ಪುಷ್ಪ. ರಂಗೋಲಿ ಡಿಸೈನ್ ಸ್ಯಾರಿಗಳು ಅಂದಕೂಡಲೇ ರಾಶಿ ರಾಶಿ ಹಾಕಿ ತೋರಿಸಿದರು ಚಂದ್ರು ಮತ್ತು ಅವನ ತಂಡದವರು ಉತ್ಸಾಹದಿಂದಲೇ….ಸ್ಯಾರಿಗಳನ್ನು ಮುಟ್ಟಿ ನೋಡುತ್ತಾ ಮತ್ತೆ ಪ್ರಶ್ನಿಸಿದಳು ಪುಷ್ಪ ” ದೊಡ್ಡ ರಂಗೋಲಿ ಡಿಸೈನ್ ಮಧ್ಯದಲ್ಲಿದ್ದು ಬಾರ್ಡರಿನಲ್ಲಿ ಅದೇ ಸೀರೆ ಅಂಚಿನಲ್ಲಿ ಮುದ್ದಾಗಿ ಕುಳಿತ ನಾಯಿ ಚಿತ್ರಗಳು ಸಾಲು ಸಾಲಾಗಿ ಇದ್ದರೆ ಚೆನ್ನಾಗಿರುತ್ತವೆ.. ಅಂತಹವುಗಳನ್ನು ಒಂದೆರಡು ತೋರಿಸಿ ನೋಡೋಣ… “
ಈ ಸಾರಿ ಧಪ್ ಎಂದು ಯಾರೋ ಪಕ್ಕದಲ್ಲಿ ಬಿದ್ದ ಶಬ್ದವಾಯಿತು… ಗುಂಡಣ್ಣ ಮೊದಲು ತನ್ನ ಸ್ಟಾಫ್ ಎಲ್ಲರನ್ನೂ ಎಣಿಸಿಕೊಂಡ.. ಲೆಕ್ಕ ಸರಿ ಇತ್ತು….ಅಂದರೆ ಬಿದ್ದ ವ್ಯಕ್ತಿ ಕಸ್ಟಮರ್ ಇರಬೇಕು ಎಂದುಕೊಂಡ…ಅಷ್ಟರಲ್ಲಿ ಒಬ್ಬ ಹೆಂಗಸು ಬಿದ್ದ ವ್ಯಕ್ತಿಯನ್ನು ಇನ್ನೊಬ್ಬ ಕಸ್ಟಮರ್ ಸಹಾಯದಿಂದ ಎತ್ತಿ ಛೇರಿನ ಮೇಲೆ ಕೂಡಿಸಿ ನೀರನ್ನು ಮುಖಕ್ಕೆ ಚಿಮುಕಿಸಿದಳು… ಸ್ವಲ್ಪ ಎಚ್ಚರಗೊಂಡ ಬಳಿಕ ಆ ವ್ಯಕ್ತಿ ಪುಷ್ಪಳನ್ನು ಭಯದಿಂದ ನೋಡುತ್ತಾ ಅಲ್ಲಿಯ ಸೇಲ್ಸ್ಮನ್ ರತ್ತ ಪಾಪ ಪ್ರಜ್ಞೆ, ಅನುಕಂಪ ಮತ್ತು ಕರುಣಾಜನಕ ಭಾವದಿಂದ ಒಮ್ಮೆ ದೃಷ್ಟಿಸಿ ನೋಡಿದ. ಬಳಿಕ ಜೊತೆಗೆ ಬಂದಿದ್ದ ಹೆಂಗಸನ್ನು ಶಾಪಿನಿಂದ ಹೊರಗೆ ಒತ್ತಾಯದಿಂದ ಕರೆದೋಯ್ದ…
ಪುಷ್ಪ ಕೇಳುತ್ತಿರುವ ಸ್ಯಾರಿಯ ಡಿಸೈನ್ ಗಳನ್ನು ಹತ್ತಿರದಿಂದ ಸ್ವಲ್ಪ ಹೊತ್ತು ನೋಡಿದ ಬಳಿಕವೇ ಆ ವ್ಯಕ್ತಿ ಮೂರ್ಛೆ ಬಂದು ಬಿದ್ದದ್ದು ಎಂದು ಗುಂಡಣ್ಣನಿಗೆ ಖಾತ್ರಿ ಆಯ್ತು.. ಆದರೆ ಏನೂ ಮಾಡೋ ಹಾಗಿಲ್ಲ…ಇದು ನಾರಿಯರ ಸ್ಯಾರಿ ಸೆಂಟರ್ ಮತ್ತು ತನ್ನ ಹಣೆಬರಹ.
” ಅಮ್ಮಾ… ನಮ್ಮ ಗುಂಡಣ್ಣ ಸ್ಯಾರಿ ಸೆಂಟರ್ ಇವೊತ್ತೇ ಓಪನ್ ಆಗಿದೆ. ನಿಮ್ಮಂತಹ ‘ಸ್ಪೆಷಲ್ ಕಸ್ಟಮರ್’ ಟೇಸ್ಟ್ ಏನು ಅಂತ ಈಗ ತಾನೆ ಗೊತ್ತಾಗ್ತಿದೆ.. ದಯವಿಟ್ಟು ಆ ಪ್ರಾಣಿ – ಪಕ್ಷಿ – ಸಂಗೀತ ವಾದ್ಯಗಳ ಭಾವಚಿತ್ರಗಳ ಡಿಸೈನ್ ಬಿಟ್ಟು ಬಿಡಿ… ಲೇಟೆಸ್ಟ್ ಆಗಿ ಪುಟ್ಟ ಪುಟ್ಟ ಹೂವಿನ ಡಿಸೈನ್ ಇರುವ ಸ್ಯಾರಿಗಳು ಸಾಕಷ್ಟು ಇವೆ… ಅವನ್ನು ನೋಡಿ ತಾಯಿ… ” ಕಣ್ಣೀರನ್ನು ಕರವಸ್ತ್ರದಿಂದ ಒರೆಸಿಕೊಳ್ಳುತ್ತ ನುಡಿದ ಚಂದ್ರು. ಪಾಪ ಆತನ ಸಹಾಯಕರು ದೈನ್ಯದಿಂದ ನೋಡಿದರು ತಂಡದ ನಾಯಕನತ್ತ…
ಗುಂಡಣ್ಣನ ಮುಖದಲ್ಲಿ ಈಗ ಮೊದಲಿನ ಉತ್ಸಾಹದ ಕಳೆ ಇಲ್ಲ.. ಹಾಗಂತ ಪ್ರೇತ ಕಳೆ ಕೂಡಾ ಇಲ್ಲ…ಬೊಂಬೆ ತರಹ ನಿಂತು ಬಿಟ್ಟ ಅಷ್ಟೇ. “ಸರಿ.. ಸರಿ… ಈ ಗುಲಾಬಿ ಹೂವಿನ ಡಿಸೈನ್ ಚೆನ್ನಾಗಿದೆ… ಆದರೆ ಬೇರೆ ಕಲರಿಲ್ವಾ… ಸೆರಗಿನ ಡಿಸೈನ್ ಗೆ ಮ್ಯಾಚ್ ಆಗ್ತಾ ಇಲ್ಲ…ಈ ಕಲರ್ ಸೀರೆ ಓಕೆ.. ಆದರೆ ಡಿಸೈನ್ ಸರಿ ಇಲ್ಲ..ಪ್ಲೇನ್ ಸೀರೆಗಳು ಬಹಳ ಇಲ್ಲವಲ್ಲ…..ಈ ಸ್ಯಾರಿ ಅಂಚಿನ ಬಣ್ಣ ಸೂಪರ್.. ಆದರೆ ಸ್ಯಾರಿ ಕಲರ್ ಮ್ಯಾಚ್ ಆಗ್ತಿಲ್ಲ…ನಾನು ಕೇಳಿದ್ದು ನೀವು ತೋರಿಸ್ತಾ ಇಲ್ಲ.. ನೀವು ತೋರಿಸಿದ್ದು ನನಗೆ ಹಿಡಿಸ್ತಾ ಇಲ್ಲ…” ಎಂದು ಮತ್ತೆ ಪೇಚಾಡಿದಳು ಪುಷ್ಪ.
ಪುಷ್ಪ ಮೊದಲ ಕಸ್ಟಮರ್.. ಆಕೆ ಫಸ್ಟ್ ಅರಿಸಲಿ.. ನಂತರ ನಾವು ನೋಡೋಣ ಎಂದು ನೆರೆದ ಕಸ್ಟಮರ್ಸ್ ಎಲ್ಲ ಆಕೆಗೆ ಗೌರವ ಕೊಟ್ಟು ಸುಮ್ಮನೆ ಕೂತಿದ್ದರು. ಚೀಫ್ ಸೇಲ್ಸ್ ಮ್ಯಾನ್ ಚಂದ್ರು ಮತ್ತು ಅವನ ತಂಡದವರು ಪುಷ್ಪಳಿಗೆ ಕೈ ಮುಗಿಯುತ್ತಾ ” ಅಮ್ಮಾ… ಇಂದೇ ಈ ಸ್ಯಾರಿ ಸೆಂಟರ್ ಓಪನ್ ಆಗಿದೆ… ತಮಗೆ ಸ್ಯಾರಿ ಹಿಡಿಸದಿದ್ದರೆ ಕಡೇ ಪಕ್ಷ ಒಂದು ಬ್ಲೌಸ್ ಪೀಸ್ ಆದರೂ ಖರೀದಿಸಿ… ನೀವು ಮೊದಲ ಕಸ್ಟಮರ್ ಬರಿಗೈಲಿ ಹಿಂದಿರುಗಿ ಹೋಗಬಾರದೆಂದು ನಮ್ಮ ಕಳ ಕಳಿಯ ಮನವಿ… ಪ್ಲೀಸ್ ತಾಯಿ.. “ಎಂದು ಕೊರಸ್ ಆಗಿ ಪ್ರಾರ್ಥಿಸಿದರು.
“ಶಾಪ್ ಹೊಸದು …ಆದರೆ ಸ್ಯಾರಿ ಡಿಸೈನ್ ಗಳು ಎಲ್ಲ ಔಟ್ ಡೇಟೆಡ್ ಇವೆ.. ನನಗೆ ಹಿಡಿಸದೆ ನಾನು ಏನನ್ನೂ ಸೆಲೆಕ್ಟ್ ಮಾಡುವದಿಲ್ಲ ಕಡೆಗೆ ನನ್ನ ಕೈ ಹಿಡಿಯುವ ಬಕರಾ ಗಂಡನನ್ನು ಕೂಡಾ! ಒಂದು ಕೆಲಸ ಮಾಡಿ.. ನಾನು ಬರೋ ವಾರ ಬರ್ತೇನೆ.. ಅಷ್ಟರೊಳಗೆ ಮತ್ತಷ್ಟು ಹೊಸ ಡಿಸೈನ್ ಸ್ಯಾರಿಗಳನ್ನು ತರಿಸಿ….ಬಾರೆ ಹೋಗೋಣ..” ಎಂದು ಗೆಳತಿಯನ್ನು ದರ ದರ ಹೊರಗೆ ಎಳೆದೋಯ್ದಳು ಪುಷ್ಪ.ಇಡೀ ಸ್ಯಾರಿ ಸೆಂಟರಿಗೇ ಈಗ ಗರ ಬಡಿದಂತಾಯ್ತು… ಗುಂಡಣ್ಣನ ಬಿ ಪಿ ಹೆಚ್ಚಾಗಿ ಎಲ್ಲರಿಗೂ ಕೇಳುವ ಸ್ವರದಲ್ಲಿ ಕೋಪದಿಂದ ಆರಚಿದ ‘ಕ್ಲೋಸ್ ದ ಶಾಪ್ ಡೋರ್’ ಎಂದು ತನ್ನ ಸಿಬ್ಬಂದಿಯನ್ನು ಉದ್ದೇಶಿಸಿ. ಕೂಡಲೇ ಶಾಪ್ ಡೋರ್ ಕ್ಲೋಸ್ ಆಯ್ತು. ಮತ್ತೆ ಮರು ದಿನದಿಂದ ಕ್ಲೋಸ್ ಆದ ಸ್ಯಾರಿ ಸೆಂಟರ್ ಡೋರ್ ಓಪನ್ ಆಗಲೇ ಇಲ್ಲ!
ಅದೇ ಕೊನೆ ಗುಂಡಣ್ಣನಿಗೆ ಮತ್ತೆ “ಸರಿಯಾದ ವಧು ದೊರಕಲಿಲ್ಲ ಮತ್ತು ಮಾಡೋಕೆ ಸರಿಯಾದ ಬಿಸಿನೆಸ್ ಸಿಗಲಿಲ್ಲ!”
****
10 thoughts on “ಗುಂಡಣ್ಣನ ಸಾಹಿತ್ಯ ಸೇವೆ & ಸ್ಯಾರಿ ಸೆಂಟರ್….”
ವಿಶ್ವ ದ್ವನಿ ಬ್ಲಾಗ್ ನಲ್ಲಿ ಪ್ರಕಟವಾದ ರಾಘವೇಂದ್ರ ಮಂಗಳೂರು ಅವರ ‘ ಗುಂಡಣ್ಣನ ಸಾರಿ ಸೆಂಟರ್ ‘ ವಿಡಂಬನೆ ಲೇಖನ ಅತ್ಯುತ್ತಮವಾಗಿದೆ. ಅವರು ಬರೆದ ರೀತಿ ಬಳಸಿದ ಭಾಷೆ ಅವರ ಸಾಹಿತ್ಯ ಪ್ರೌಢಿಮೆಯನ್ನು ಉನ್ನತವಾಗಿಸಿದೆ. ಅಭಿನಂದನೆಗಳು ರಾಘಣ್ಣ . 🎉🎉🎉🎉
ಧನ್ಯವಾದಗಳು 🙏🏼
‘ಗುಂಡಣ್ಣನ ಸಾರಿ ಸೆಂಟರ್’ ವಿಡಂಬನಾತ್ಮಕ ಲೇಖನ ಬರಿ ಚೆನ್ನಾಗಿದೆ ಎಂದರೆ ಸಾಲದು. ಗುಂಡಣ್ಣ ಸರಸ್ವತಿ ಕೃಪಾಕಟಾಕ್ಷ ವಂಚಿತ ನಾದರೂ ಧೃತಿಗೆಡದೇ ತನ್ನ ಕಾಯಕವನ್ನು ಮುಂದುವರಿಸಿದ. ಬರಹ ಹಾಗೂ ಪ್ರಕಾಶನದಿಂದ ಪ್ರಾರಂಭ ಮಾಡಿ ಸಾರಿ ಸೆಂಟರ್ ವರೆಗೆ ಹೋಗಿರುವದನ್ನು ವಿವರಿಸುವ ಶೈಲಿ ನಿಮ್ಮಲ್ಲಿ ಇರುವ ಸಾಹಿತ್ಯ ಪ್ರತಿಭೆ ಎದ್ದು ಕಾಣುತ್ತದೆ.
ಹೀಗೆ ನಿಮ್ಮ ಸಾಹಿತ್ಯ ಪಯಣ ಮುಂದುವರೆಸಿ.
ಶುಭಾಶಯಗಳು
ಧನ್ಯವಾದಗಳು 🙏🏼
‘ಗುಂಡಣ್ಣನ ಸ್ಯಾರಿ ಸೆಂಟರ್’ ನ ಜನಕವಿ ಗುಂಡಣ್ಣ ಸೀರೆ ವ್ಯಾಪಾರ ಬಂದ್ ಮಾಡಿ ಪುನಃ ಸಾಹಿತ್ಯ ಸೇವೆಗೆ ಹಿಂದಿರುಗಿರಬಹುದು. ಶ್ರೀ ರಾಘವೇಂದ್ರ ಮಂಗಳೂರು ಅವರು ಏಕಕಾಲಕ್ಕೆ ಒಂದು ವಿಷಯವನ್ನು ಪ್ರತ್ಯೇಕವಾಗಿ ಇನ್ನೊಂದನ್ನು ಪರೋಕ್ಷವಾಗಿ ತಿಳಿಸುವಲ್ಲಿ ನಿಪುಣರು. ವಧು ಅನ್ವೇಷಣೆಯ ಜೊತೆಗೆ ಹೆಂಗಸರಿಗೆ ಸೀರೆ ಮಾರುವ ಕಷ್ಟವನ್ನು ಮಾರ್ಮಿಕವಾಗಿ ಬಯಲು ಮಾಡಿದ್ದಾರೆ. ವಿಡಂಬನೆಯ ಈ ಪುಟ್ಟಕಥೆ ಚನ್ನಾಗಿ ಮೂಡಿದೆ. ಶ್ರೀ ಮಂಗಳೂರವರ ಸಾಹಿತ್ಯದ ಸಾರೋಟು ಮುಂದುವರೆಯಲಿ. ಅಭಿನಂದನೆಗಳು.
ಧನ್ಯವಾದಗಳು
‘ಗುಂಡಣ್ಣನ ಸಾಹಿತ್ಯ ಸೇವೆ ಮತ್ತು ಸ್ಯಾರಿ ಸೆಂಟರ್’ ವಿಡಂಬನಾತ್ಮಕ ಲೇಖನ ಚೆನ್ನಾಗಿದೆ. ಕಚಗುಳಿಯಿಡುವ ನವಿರಾದ ಹಾಸ್ಯ ಬರಹಕ್ಕೆ ಮೆರುಗು ನೀಡಿದೆ. ಪಾಪ ಗುಂಡಣ್ಣ ಅತ್ತ ಸ್ಯಾರಿ ಸೆಂಟರಿನ ವ್ಯಾಪಾರವೂ ಕೈಹಿಡಿಯದೆ ಇತ್ತ ಹುಡುಗಿಯೂ ಸಿಗದೆ ಏಕಾಂಗಿಯಾಗಿ ಉಳಿಯುವ ಸ್ಥಿತಿ ಬೇಸರ ತಂದಿತು.
ಅಭಿನಂದನೆಗಳು
ಧನ್ಯವಾದಗಳು
ಈಗಿನ ತಲೆಮಾರಿನ ಗ್ರಾಹಕರ ಟೇಸ್ಟೇ ಗೊತ್ತಾಗುವುದಿಲ್ಲ. ಕಥೆ ಕಟ್ಟುವ ನಿಮ್ಮ ಚಾಕಚಕ್ಯತೆ ಮೆಚ್ಚುವಂಥಹುದು. ಮುಂದಿನ ದಿನಗಳಲ್ಲಿ ಆದರೂ ಗುಂಡಣ್ಣನಿಗೆ ಕಂಕಣಬಲ ಕೂಡಿ ಬರಲಿ ಎಂದು ಹಾರೈಸುವೆ.
ಧನ್ಯವಾದಗಳು