ಬೀಗುವ   ಸುಮಗಳು

ಹೊಳೆಯುವ ನಕ್ಷತ್ರಗಳಂದದಿ  
ಮರವನೇ ಸಿಂಗರಿಸಿ ನಿಂತ 
ಹೂವುಗಳು  ತೊಟ್ಟು ಕಳಚಿ 
ನೆಲಸೇರಿ ಘಮಲಿನ ಹಾಸು ಹಾಸಿದ ಹೊತ್ತು 
ತುಂಟ ಕುವರಿಯ ಕಿವಿಯೋಲೆಯಾಗಲು 
ತಾ ಬಯಸಿ  ಮತ್ತೆ ಮೆಲ್ಲನೆ ನಕ್ಕು 
ಮುತ್ತಿನ ಮಾಲೆಯಂತೆ
ಮುಡಿಯೇರಿ ಅಲ್ಲೆಲ್ಲಾ ತನ್ನಿರವನ್ನು 
ಜಾಹೀರುಪಡಿಸುವ ಬಕುಳೆಗೆ  ಗತ್ತು.. 

ಸೌರಭಕೆ ತಾನೇ ರಾಣಿಯೆಂದು ಬೀಗುತಾ 
ಶುಭ್ರನಗೆಯ ಬೀರುವ ಮಲ್ಲಿಗೆಗೆ
ಕವಿಹೃದಯದಲಿ ಹಾಡಾಗುವ ನೆಪವಿತ್ತು 
ಮಧುರ ಸಂಗಮದ ನಿರೀಕ್ಷೆಯ ಕಾತರಹೊತ್ತ 
ಮದುಮಗಳ ಅರೆನಿಮೀಲಿತ ನೇತ್ರದ್ವಯಗಳಲಿ 
ಆ ಹೂವೇ ತಾ ವಧುವಾಗಿ 
ನಲುಗುವ ಸುಖ ಸಂಭ್ರಮವಿತ್ತು. 

ನಸಹಳದಿ ವರ್ಣದಿ ಗಮನ ಸೆಳೆದು 
ಆ ಬನದಲೆಲ್ಲಾ  ಘಮದ ಅಮಲು ತುಂಬಿ   
ಬೀಗುತಿಹ ಸುರಲೋಕದ ಸುರಹೊನ್ನೆಗೆ 
ಯಕ್ಷಿಣಿಯರ  ಒಡನಾಟವಿತ್ತು 
ಮುದುಡಿ ಬಾಡಿಹೋದರೂ ಪರಿಮಳ ಪಸರಿಸಲು 
ಸಂಭ್ರಮಿಸುವ  ಅದಕೆ  ಹೊಸ ಆಸೆಯ ಕನಸಿತ್ತು. 

ಸದಾ ನಗುವ ಚೆಂಗುಲಾಬಿಗಂತೂ 
ತಾನೇ ಮದನನ ರಾಯಭಾರಿಯೆಂಬ 
ವಿಶೇಷ ಅಮಲಿತ್ತು 
ಪಕಳೆಪಕಳೆಯಲ್ಲೂ ಸೌಂದರ್ಯ ಹೊದ್ದು 
ಪ್ರೇಮಿಗಳ ಸಲ್ಲಾಪದಲಿ ಸಾಕ್ಷಿಯಾಗಿ 
ನಸುನಾಚಿದ ಇತಿಹಾಸವಿತ್ತು. ! 

ಮುಗುಳ್ನಗೆಯಲೇ,    ಕಣ್ಣಬೆಳಕಿನಲೇ, 
ನೂರು ಮಾತ ನುಡಿಯುವ ಮುಗುದೆಯರ
 ಮೃದು ಭಾವದ ಸಿಹಿ ಕಾತರಕೆ
ತಾವೇ ದೂತರಾದ ಹಮ್ಮಿತ್ತು !
ನಲುಗಿದರೂ ನಲಿಯುವ ಸುಮಗಳ ಕ್ಷಣಿಕ 
ಬಾಳಿಗೆ  ಸುಜನರ ಮನವ ಅರಳಿಸಿದ  ಧನ್ಯತೆಯಿತ್ತು !


*ಸವಿತಾ ಅರುಣ್ ಶೆಟ್ಟಿ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter