“ಮಂಜು, ನಾನು ಕಣೇ ಸುಮನಾ. ನೀನು, ನಿನ್ನ ಯಜಮಾನರು, ಮಕ್ಕಳು ಹೇಗಿರುವಿರಿ? ನಿನ್ನ ಜೊತೆಗೆ ಮಾತಾಡದೇ ಬಹಳ ದಿನಗಳೇ ಆದವಲ್ಲವೇ…?” ಅಂದು ರವಿವಾರವಾಗಿದ್ದರಿಂದ ಶಾಲೆಗೆ ಹೋಗುವ ಕರ್ತವ್ಯ ಇಲ್ಲವಾದ್ದರಿಂದ ಮಂಜುಳಾ ಆಗಷ್ಟೇ ಊಟಮಾಡಿ ಹಾಸಿಗೆಗೆ ಬೆನ್ನೊಡ್ಡಿದ್ದಳು. ಸುಮನಾ ಮಂಜುಳಾಳ ಅತ್ತಿಗೆ ಅಂದರೆ ಮಂಜುಳಾಳ ದೊಡ್ಡಪ್ಪನ ಮಗನ ಹೆಂಡತಿ. ಇಬ್ಬರೂ ಹೆಚ್ಚುಕಡಿಮೆ ಒಂದೇ ವಯಸ್ಸಿನವರು. ಇಬ್ಬರಲ್ಲೂ ಆತ್ಮೀಯತೆ, ಆಪ್ತತೆ ತುಂಬಾ ಚೆನ್ನಾಗಿ ಬೆಳೆದು ಬಂದಿತ್ತು.
“ಸುಮಿ, ನಾ ಚೆನ್ನಾಗಿರುವೆ. ನೀನು ಹೇಗಿರುವಿ? ನೀನೇಳಿದಂತೆ ನಮ್ಮಿಬ್ಬರಲ್ಲಿ ಮಾತಿಲ್ಲದೇ ತುಂಬಾ ದಿನಗಳೇ ಆದವು. ಮನೆಯಲ್ಲಿ ಅಣ್ಣ, ದೊಡ್ಡಪ್ಪ, ದೊಡ್ಡಮ್ಮ, ನಿನ್ನ ಮಕ್ಕಳು ಹೇಗಿದ್ದಾರೆ…?”
“ಮಂಜು, ನಾವೆಲ್ಲರೂ ಇಲ್ಲಿ ಚೆನ್ನಾಗೇ ಇದ್ದೇವೆ. ಈಗ ನಾನು ಫೋನ್ ಹಚ್ಚಿದ್ದೇಕೆ ಅಂದ್ರೆ, ನಿನ್ನ ತಾಯಿ ಅಂದರೆ ನಿನ್ನ ಚಿಕ್ಕಮ್ಮನ ಆರೋಗ್ಯ ತುಂಬಾ ಹದಗೆಟ್ಟಿದೆ. ನಮ್ಮ ಜೊತೆಗೆ ಬಂದಿರಲು ಆಕೆಗೆ ಸ್ವಾಭಿಮಾನ ಅಡ್ಡ ಬರುತ್ತಿದೆ. ಇಲ್ಲಿ ಆಕೆಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅದಕ್ಕೇ ನೀನು ಬಂದು ನಿನ್ನ ಜೊತೆಗೆ ಕರೆದುಕೊಂಡು ಹೋಗಿದ್ದರೆ ಚೆನ್ನಾಗಿತ್ತೇನೋ…?
`ನಾನು ಚಿಕ್ಕವಳಿದ್ದಾಗಲೇ ನನ್ನಮ್ಮ ತೀರಿ ಹೋದಳಲ್ಲ? ನನಗ್ಯಾರಿದ್ದಾರೆ ಅಲ್ಲಿ ಅಮ್ಮ ಎನ್ನುವವರು…? ಅದೇ ನೀನು ನನ್ನ ಮಲತಾಯಿ ಅಂದರೆ ಚಿಕ್ಕಮ್ಮನ ಬಗ್ಗೆ ಹೇಳುತ್ತಿರುವುದನ್ನು ನಾನು ಬಲ್ಲೆ. ಚಿಕ್ಕಮ್ಮ ನನ್ನನ್ನು ಹೇಗೆ ನೋಡಿಕೊಂಡಳು ಎಂಬುದನ್ನು ನೀನು ಚೆನ್ನಾಗಿ ಬಲ್ಲೆ. ಚಿಕ್ಕಮ್ಮನ ಮಕ್ಕಳು ಇದ್ದಾರಲ್ಲ, ಆಕೆಯನ್ನು ನೋಡಿಕೊಳ್ಳಲು? ಮಗ, ಮಗಳು ಇಬ್ಬರೂ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸುವ ಉದ್ಯೋಗದಲ್ಲಿದ್ದಾರಲ್ಲ? ಚಿಕ್ಕಮ್ಮ ಅವರ ಹತ್ತಿರ ಹೋಗಿ ಇರಬಹುದಲ್ಲ? ಅದೂ ನನಗೆ ಗೊತ್ತು, ಅಪ್ಪ ತೀರಿಕೊಂಡ ನಂತರ ಮಕ್ಕಳು ಚಿಕ್ಕಮ್ಮನ ಹತ್ತಿರ ತುಸು ದಿನಗಳ ಮಟ್ಟಿಗಾದರೂ ಬಂದು ಇದ್ದಿದ್ದಾಗಲೀ, ಚಿಕ್ಕಮ್ಮನನ್ನು ತಮ್ಮ ಜೊತೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾಗಲೀ ನನಗೆ ನೆನಪಿಲ್ಲ. ಅಪ್ಪ ತೀರಿಕೊಂಡಾಗ ಕಾಟಾಚಾರಕ್ಕೆಂದು ಕೆಲವು ದಿನಗಳ ಮಟ್ಟಿಗೆ ಊರಿಗೆ ಬಂದವರು ಚಿಕ್ಕಮ್ಮನ ಜೊತೆಗಿದ್ದರು ಅಷ್ಟೇ. ಚಿಕ್ಕಮ್ಮ ನನ್ನನ್ನು ಹೇಗೇ ನೋಡಿಕೊಂಡಿದ್ದರೂ, ಅಪ್ಪ ಕೈಲಾಸವಾಸಿಯಾದ ನಂತರ ನಾನು ಅವರನ್ನು ನನ್ನ ಜೊತೆಗೆ ಕರೆದುಕೊಂಡು ಬರಲು ಪ್ರಯತ್ನಿಸಿದ್ದು ನಿನಗೆ ಗೊತ್ತೇ ಇದೆ. ಆದರೆ ಚಿಕ್ಕಮ್ಮ ಸುತಾರಾಂ ಒಪ್ಪಲಿಲ್ಲ. ಚಿಕ್ಕಮ್ಮ ಇನ್ನೂ ನನ್ನನ್ನು ತನ್ನ ಗಂಡನ ಮೊದಲ ಹೆಂಡತಿಯ ಮಗಳೆಂದು ಒಪ್ಪಿಕೊಂಡಿಲ್ಲವೆಂಬುದೂ ನಿನಗೆ ಗೊತ್ತು. ಅಂಥಹುದರಲ್ಲಿ ಅವರನ್ನು ನನ್ನ ತಾಯಿ ಎಂದು ಹೇಗೆ ಕರೆಯಲಿ…? ಆಕೆಗೆ ನಾನಿನ್ನೂ ಮಲಮಗಳೇ!’ ಹೀಗೆ ಹೇಳಿದರೆ ಹೇಗೆ ಎಂಬ ವಿಚಾರಗಳು ಮಂಜುಳಾಳ ಮನಸ್ಸಿನಲ್ಲಿ ಸುಳಿದಾಡಿದವಾದರೂ ಹೇಳಿ ಖುಷಿಪಡುವಂಥಹ ಹೀನ ಮನಸ್ಸಿನವಳು ಅವಳಲ್ಲ. ಮಾತಿಲ್ಲದೇ ಒಂದಿಷ್ಟು ಸಮಯ ಸರಿದು ಹೋಗಿತ್ತು.
“ಯಾಕೇ ಮಂಜು, ಸುಮ್ಮನಾಗಿಬಿಟ್ಟೆಯಲ್ಲ…? ತವರಿಗೆ ಬಂದು ಕರೆದುಕೊಂಡು ಹೋಗುವ ಮನಸ್ಸಿಲ್ಲವೇ…?”
“ಹಾಂ, ಹೂಂ! ಇಲ್ಲ ಸುಮಿ, ಹಾಗೇನಿಲ್ಲ. ಅದಿರಲಿ, ಚಿಕ್ಕಮ್ಮನಿಗೆ ಯಾವಾಗಿನಿಂದ ಹುಷಾರಿಲ್ಲ? ಹುಷಾರಿಲ್ಲ ಅಂದರೆ ಏನಾಗಿದೆ? ಡಾಕ್ಟರಿಗೆ ತೋರಿಸಿದ್ದಾರೆಯೇ…? ಬೆಂಗಳೂರಿನಿಂದ ತಮ್ಮ, ತಂಗಿ ಬಂದು ಮಾತಾಡಿಸಿಕೊಂಡು ಹೋದರೇ…?”
“ಅಬ್ಬಬ್ಬಾ! ಇದೇನೇ ನಿನ್ನ ಪ್ರಶ್ನೆಗಳ ಸುರಿಮಳೆ? ಒಂದೇ ಎರಡೇ? ಇಷ್ಟು ಪ್ರಶ್ನೆಗಳನ್ನು ಒಮ್ಮೆಲೇ ಕೇಳಿದರೆ ನಾನ್ಹೇಗೆ ಉತ್ತರಿಸಲಿ?”
“ಸಾರಿ ಕಣೇ. ಮತ್ತೊಮ್ಮೆ ಒಂದೊಂದಾಗಿ ಪ್ರಶ್ನೆ ಕೇಳಲೇ ಹೇಗೆ…?”
“ಬೇಡ, ಬೇಡ. ಮಂಜು, ನಿನ್ನಪ್ಪ ತೀರಿಕೊಂಡ ನಂತರ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ತನ್ನನ್ನು ಹಚ್ಚಿಕೊಳ್ಳುತ್ತಿಲ್ಲವಲ್ಲ ಎಂದು ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ ನಿನ್ನ ಚಿಕ್ಕಮ್ಮ. ಅದೇ ಕೊರಗನ್ನು ಮನಸ್ಸಿಗೆ ಹಚ್ಚಿಕೊಂಡು ಪೇಚಾಡುತ್ತಿದ್ದಾಳೆ. `ನನಗೆ ಎಲ್ಲವೂ ಇದೆ. ಆದರೆ ಏನೂ ಇಲ್ಲದವಳಂತೆ ಜೀವನ ಮಾಡಬೇಕಾಗಿದೆಯಲ್ಲ ಎಂಬ ನೋವು ಅವಳೆದೆಯೊಳಗೆ.”
`ಅವಳು ಮಾಡಿದ್ದನ್ನು ಅವಳೇ ಉಣ್ಣುತ್ತಿದ್ದಾಳಲ್ಲವೇ? ಅವಳು ಮಾಡಿದ ಕರ್ಮ ಅವಳನ್ನೇ ತಿನ್ನುತ್ತಿದೆ. ಮಾಡಿದ್ದುಣ್ಣೋ ಮಹರಾಯಿತಿ ಎಂಬಂತಾಗಿದೆ ಚಿಕ್ಕಮ್ಮನ ಬಾಳು.’ ಹೀಗೆ ಮನದೊಳಗೇ ಮಂಜುಳಾ ಅಂದುಕೊಂಡಳಾದರೂ ಬಾಯಿಬಿಟ್ಟು ಹೇಳಲು ಮನಸ್ಸಾಗಲಿಲ್ಲ.
“ಸುಮಿ, ಹೇಗೂ ನಾಡದು ಸೂಟಿ ಇದೆಯಲ್ಲ, ಆವತ್ತು ನಾನು ಊರಿಗೆ ಬರುವೆ. ನಾನೇನು ನನ್ನ ಜೊತೆಗೆ ಚಿಕ್ಕಮ್ಮನನ್ನು ಕರೆದುಕೊಂಡು ಬರಲು ಸಿದ್ಧಳಿದ್ದೇನೆ. ಆಕೆ ನನ್ನ ಜೊತೆಗೆ ಬರುತ್ತಾಳೋ ಇಲ್ಲವೋ ಗೊತ್ತಿಲ್ಲ. ಇಬ್ಬರೂ ಪ್ರಯತ್ನಿಸೋಣ. ಓಕೇನಾ…?”
“ಸರಿ ಕಣೆ. ನೀ ಊರಿಗಂತೂ ಬಾ. ಪ್ರಯತ್ನಿಸೋಣ. ಆಕೆ ನಿನ್ನ ಜೊತೆಗೆ ಬರಲು ಒಪ್ಪಬಹುದೆಂದು ನನ್ನ ಮನಸ್ಸು ಹೇಳುತ್ತಿದೆ.”
“ಸರಿ ಸುಮಿ.” ಗೆಳತಿಯರಿಬ್ಬರೂ ಮಾತು ಮುಗಿಸಿದ್ದರು. ಮಳೆ ನಿಂತರೂ ಮರದ ಕೆಳಗಿನ ಹನಿಗಳು ನಿಲ್ಲುವುದಿಲ್ಲವೆಂಬಂತೆ ಮಂಜುಳಾಳ ಮನದಂಗಳದಲ್ಲಿ ನೆನಪುಗಳ ಸುರಿಮಳೆ ಹನಿಯತೊಡಗಿತು.
****
`ಅಮ್ಮನ ಪ್ರೀತಿ ಆಕಾಶದಂತೆ ಸದಾ ತೆರೆದಿರುತ್ತದೆ, ವಿಶಾಲವಾಗಿರುತ್ತದೆ. ಮಕ್ಕಳಿಗೆ ಅಮ್ಮನ ಮೇಲಿನ ಪ್ರೀತಿ ಬೆಲೂನಿನಂತೆ. ಅಮ್ಮಂದಿರು ಪ್ರೀತಿಯ ಗಾಳಿ ಹಾಕಿದಾಗ ಊದಿಕೊಳ್ಳುತ್ತದೆ’ ಎಂದು ಹೇಳುತ್ತಾರೆ. ಆದರೆ ಮಂಜುಳಾಳಿಗೆ ಅಮ್ಮನ ಪ್ರೀತಿ ಸಿಗಲೇ ಇಲ್ಲ. ಅಮ್ಮನ ಪ್ರೀತಿಯ ಬೆಚ್ಚನೆಯ ತೋಳುಗಳಲ್ಲಿ ಬಚ್ಚಿಟ್ಟುಕೊಂಡು ನಲಿದಾಡುವ ಮುಂಚೇನೇ ಅವಳ ಅಮ್ಮ ಕೈಲಾಸ ಸೇರಿಕೊಂಡುಬಿಟ್ಟಳು. ಜಗದೀಶ ಮತ್ತು ಸುಜಾತಾ ದಂಪತಿಗಳಿಗೆ ಮಂಜುಳಾ ಮಗಳಾಗಿ ಜನಿಸಿದಾಗ ಅವರ ದಾಂಪತ್ಯಕ್ಕೆ ಆಗಲೇ ಭರ್ತಿ ಮೂರು ವರ್ಷಗಳು. ಮದುವೆಯಾಗಿ ವರ್ಷ ತುಂಬುವಷ್ಟರಲ್ಲಿ ಆ ಮನೆಯಲ್ಲಿ ತೊಟ್ಟಿಲು ತೂಗಬೇಕು ಎನ್ನುವ ಕಾಲವದು. ಮೊದಲನೇ ಮಗು ಗಂಡಾಗಿದ್ದರೆ ಚೊಲೋ ಇತ್ತೇನೋ ಎನ್ನುವ ಸಂದಿಗ್ಧ ಕಾಲದಲ್ಲಿ ಹೆಣ್ಣು ಮಗುವಾಗಿತ್ತು ಚೊಚ್ಚಲ ಹೆರಿಗೆಯಲ್ಲಿ ಸುಜಾತಾಳಿಗೆ. ಜಗದೀಶ ಪಕ್ಕದೂರಿನ ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ಶಿಕ್ಷಕ. ತನ್ನೂರಿನಲ್ಲಿದ್ದುಕೊಂಡೇ ಶಾಲೆಗೆ ಹೋಗಿ ಬಂದು ಮಾಡುತ್ತಿದ್ದ. ಊರಿನಲ್ಲಿ ತನ್ನ ಭಾಗದ ಜಮೀನುಗಳ ದೇಖರೇಕಿಯ ಜೊತೆಗೆ ಶಾಲೆಯ ಡ್ಯೂಟಿ ಮಾಡುತ್ತಿದ್ದ.
ಮಂಜುಳಾಗೆ ಆಗಷ್ಟೇ ಮೂರು ವರ್ಷಗಳು ತುಂಬಿದ್ದವು. ಸುಜಾತಾಳ ಒಡಲು ಮತ್ತೊಮ್ಮೆ ತುಂಬಿಕೊಂಡಿತು. ಹೆರಿಗೆ ಸಮಯದಲ್ಲಿ ತೊಂದರೆಯಾಗಿ ನವಶಿಶು ಧರೆಗಿಳಿದು ಬರದೇ ತಾಯಿಯ ಹೊಟ್ಟೆಯಲ್ಲೇ ಕೊನೆಯುಸಿರೆಳೆದು ತಾಯಿಯನ್ನೂ ತನ್ನ ಜೊತೆಗೆ ಬಾರದ ಲೋಕಕ್ಕೆ ಕರೆದುಕೊಂಡು ಹೋಗಿತ್ತು. ನಾಲ್ಕು ವರ್ಷದ ಮಂಜುಳಾ ತಾಯಿ ಇಲ್ಲದ ತಬ್ಬಲಿಯಾದರೆ ಜಗದೀಶ ಮುದ್ದಿನ ಮಡದಿಯನ್ನು ಕಳೆದುಕೊಂಡು ಮೂವತ್ತನೇ ವಯಸ್ಸಿಗೆ ವಿಧುರನಾಗಿಬಿಟ್ಟ. ಜಗದೀಶನ ಮನಸ್ಸಿಗೆ ಕತ್ತಲು ಆವರಿಸಿತು. ಒಂದಿಷ್ಟು ದಿನ ಮೌನಕ್ಕೆ ಶರಣಾದ. ಸ್ಮಶಾನ ವೈರಾಗ್ಯ ಆವರಿಸಿತು ಮೈಮನಗಳಲ್ಲಿ. ಅಜ್ಜಿಯ ಮಡಿಲಲ್ಲಿ ಮಂಜುಳಾ ಸಾಂತ್ವನ ಕಂಡುಕೊಳ್ಳತೊಡಗಿದಳು. ಕಾಲಚಕ್ರ ಒಂದೇ ಕಡೆಗೆ ನಿಲ್ಲಲು ಸಾಧ್ಯವೇ? ಸುಜಾತಾ ತೀರಿಕೊಂಡು ಆಗಲೇ ಆರುತಿಂಗಳು ಗತಿಸಿದ್ದವು. ಜಗದೀಶನಿಗೆ ಅಪ್ಪ-ಅಮ್ಮನಿಂದ ಮರುಮರುವೆಯಾಗಲು ನಿತ್ಯವೂ ಬೋಧನೆ. ಅವನದೂ ಉಪ್ಪು, ಹುಳಿ, ಖಾರ ಉಣ್ಣುವ ದೇಹವಲ್ಲವೇ? ಸ್ಮಶಾನ ವೈರಾಗ್ಯ ದೂರಾಗಿ ಹೆಣ್ಣಿನ ಸಾಂಗತ್ಯ ಬೇಕೆನ್ನುತ್ತಿದ್ದವು ಆಗಲೇ ಅವನ ಮೈಮನಸ್ಸುಗಳು. ಮೊದಮೊದಲು ಮಗಳು ಮಂಜುಳಾಳಿಗೆ ಮಲತಾಯಿಯನ್ನು ತರುವುದು ಬೇಡವೆನ್ನುತ್ತಿದ್ದ. ಬಂದವಳು ಮಗಳನ್ನು ತನ್ನ ಮಗಳಂತೆಯೇ ನೋಡಿಕೊಳ್ಳದಿದ್ದರೆ ಹೇಗೆ ಎಂಬ ಅನುಮಾನ ಅವನ ಮನಸ್ಸನ್ನಾವರಿಸಿತ್ತು. ಸ್ವಂತ ದೈಹಿಕ ಬಯಕೆಗಳ ಆರ್ಭಟದ ಮುಂದೆ ಆ ಅನುಮಾನ ತನ್ನಿಂದ ತಾನೇ ದೂರಾಗಿತ್ತು. ತಂದೆ-ತಾಯಿಗಳ ಮಾತಿಗೆ ಹೂಂ ಎಂದ. ತಾಯಿಯ ಕಡೆಗಿನ ಸಂಬಂಧಿಕರ ಹೆಣ್ಣೊಂದನ್ನು ಕೊನೆಗೂ ಒಪ್ಪಿಕೊಂಡು ಕೈಹಿಡಿದ. ಒಂದಿಷ್ಟು ಹಲ್ಲುಬ್ಬಿಯಾಗಿದ್ದರಿಂದ ವಯಸ್ಸು ಇಪ್ಪತ್ತೆರಡಾದರೂ ಕಂಕಣಬಲ ಕೂಡಿಬಂದಿರದಿದ್ದ ರಾಜೇಶ್ವರಿ ಜಗದೀಶನಿಗೆ ಹೆಂಡತಿಯಾಗಿ ಬಂದಳು. ಹಲ್ಲುಬ್ಬಿಯಾಗಿದ್ದರೂ ರಾಜೇಶ್ವರಿಯ ತುಂಬಿದೆದೆಗೆ ಮಾರು ಹೋಗಿದ್ದ ಜಗದೀಶನ ದಾಂಪತ್ಯದ ಎರಡನೇ ಇನ್ನಿಂಗ್ಸ್ ಶುರುವಾಯಿತು. ಮೆತ್ತಗೇ ಜಗದೀಶನ ಮೈಮನಗಳನ್ನು ತುಂಬಿದ ರಾಜೇಶ್ವರಿ ದಿನಗಳೆದಂತೆ ಮನೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳತೊಡಗಿದಳು. ಮನೆಯ ಆಡಳಿತದ ಚುಕ್ಕಾಣಿ ಹಿಡಿದಳು. ತನ್ನಿಚ್ಛೆಯಂತೆ ಮನೆಯ ಕಾರ್ಯಗಳೆಲ್ಲವೂ ನಡೆಯಬೇಕು ಎಂಬ ಅವಳ ಧೋರಣೆ ದಿನದಿಂದ ದಿನಕ್ಕೆ ಗಟ್ಟಿಯಾಗತೊಡಗಿತು. `ನಾನೇ ಇಚ್ಛೆಪಟ್ಟು ರಾಜೇಶ್ವರಿಯನ್ನು ಸೊಸೆಯಾಗಿ ತಂದೆ. ನಾನು ಸಾಕಿದ ನಾಯಿ ನನಗೇ ಗುರ್ರೆನ್ನುವಂತೆ ರಾಜೇಶ್ವರಿ ನನಗೇ ಗುರ್ರೆನ್ನತೊಡಗಿದ್ದಾಳೆ’ ಎಂಬ ಬೇಸರ, ಇರಿಸು-ಮುರಿಸು ಜಗದೀಶನ ತಾಯಿಗೆ.
ಮುಂದಿನ ದಿನಗಳಲ್ಲಿ ಜಗದೀಶ ಹೆಂಡತಿಯ ಮಾತುಗಳನ್ನು, ಮಾತುಗಳೇನು ಬಂತು ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸತೊಡಗಿದ. ರಾಜೇಶ್ವರಿ ತಾನು ಆಡಿದ್ದೇ ಆಟ, ಮಾಡಿದ್ದೇ ಮಾಟ ಎಂಬಂತಾಗತೊಡಗಿತು. ಜಗದೀಶ ಒಂದು ರೀತಿ ಬೋಳೆ ಶಂಕರನಂತಾದ. ಅವಳಾಡಿಸಿದಂತೆ ಕುಣಿಯತೊಡಗಿದ. ರಾಜೇಶ್ವರಿ ಕಣ್ಣೋಟದಲ್ಲೇ ಜಗದೀಶನನ್ನು ಕುಣಿಸತೊಡಗಿದಳು. ಅವನೇನಾದರೂ ಅವಳ ಮಾತುಗಳನ್ನು ಪಾಲಿಸಲು ಹಿಂದೆಮುಂದೆ ನೋಡಿದರೆ ಆ ರಾತ್ರಿ ಅವಳು ಅವನನ್ನು ಮಗ್ಗಲು ಕರೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಜಗದೀಶ ರಾಜೇಶ್ವರಿಯ ಗುಲಾಮನಂತಾಗಿಬಿಟ್ಟ, ದಾಸಾನುದಾಸನಂತಾಗಿಬಿಟ್ಟ. ಸಾಕು ಮಗಳು ಮಂಜುಳಾಳ ಬಾಳಂತೂ ದೇವರೇ ಬಲ್ಲ. ಅವಳ ಬಾಲ್ಯಾವಸ್ಥೆ, ಹದಿಹರೆಯದ ಯೌವನಾವಸ್ಥೆ ಬರೀ ಮನೆಗೆಲಸ, ಹೊಲದ ಕೆಲಸಗಳಲ್ಲಿ ಕಳೆದು ಹೋಯಿತು.
ಮದುವೆಯಾಗಿ ಐದು ವರ್ಷಗಳು ತುಂಬುವಷ್ಟರಲ್ಲಿ ರಾಜೇಶ್ವರಿ ಇಬ್ಬರು ಮಕ್ಕಳಿಗೆ ತಾಯಿಯಾದಳು. ಚೊಚ್ಚಲ ಗಂಡು ಮಗು. ವಿವೇಕ್ ಅಂತ ಹೆಸರಿಟ್ಟು ಕರೆದರು. ನಂತರ ಹೆಣ್ಣು ಮಗು. ವೈಭವಿ ಅಂತ ನಾಮಕರಣ ಮಾಡಿ ಸಂತಸದ ಸಂಭ್ರಮದಲ್ಲಿ ತೇಲಾಡಿದರು ಜಗದೀಶ ಮತ್ತು ರಾಜೇಶ್ವರಿ ದಂಪತಿಗಳು. ಸೊಸೆಯ ವಿಭಿನ್ನ, ಸರ್ವಾಧಿಕಾರಿ ನಡೆಗೆ ಬೇಸತ್ತು ಜಗದೀಶನ ತಂದೆ-ತಾಯಿಗಳು ಜಗದೀಶನ ಮನೆಬಿಟ್ಟು ಇನ್ನೊಬ್ಬ ಮಗನ ಮನೆ ಸೇರಿಕೊಂಡರು. ಆವಾಗ ರಾಜೇಶ್ವರಿಗೆ ಯಾರ ಲಂಗೂ, ಲಗಾಮೂ ಇಲ್ಲದಂತಾಯಿತು.
ಮಂಜುಳಾ ಬೆಳೆಯುತ್ತಾ ಬೆಳೆಯುತ್ತಾ ಜಗದೀಶ ಮತ್ತು ರಾಜೇಶ್ವರಿಯ ಮನೆಯಲ್ಲಿ ಮನೆಗೆಲಸದ ಹುಡುಗಿಯಾಗಿಬಿಟ್ಟಳು. ಮನೆಯಲ್ಲಿ ಕಸಮುಸುರೆ, ಪಾತ್ರೆ ತೊಳೆಯುವುದು, ನೀರು ತರುವುದು, ಬಟ್ಟೆ ತೊಳೆಯುವುದು, ದನದ ಕೊಟ್ಟಿಗೆಯಲ್ಲಿ ಸಗಣಿ ಬಾಚುವುದರಿಂದ ಹಿಡಿದು ದನಕರುಗಳಿಗೆ ಮೇವು-ಮಿಡಚಿ ಹಾಕುವುದು, ನೀರುನಿಡಿ ಕುಡಿಸುವುದು ಎಲ್ಲವೂ ಮಂಜುಳಾಳ ಪಾಲಿಗೇ ಬಿದ್ದವು. ಮನೆಗೆಲಸಗಳ ಜೊತೆಗೆ ಒಂದಿಷ್ಟು ಓದುವುದೂ ಮುಂದುವರಿದಿತ್ತು. ಅದೇನೇ ಕೆಲಸ ಇದ್ದರೂ ಅದು ತನ್ನದೇ ಪಾಲಿನ ಕೆಲಸ ಎಂದು ಭಾವಿಸಿಕೊಂಡು ಕೆಲಸ ಮಾಡುವುದನ್ನು ಮಂಜುಳಾ ರೂಢಿಸಿಕೊಂಡಳು. ಇವುಗಳ ಜೊತೆಗೆ ವಿವೇಕ್ ಮತ್ತು ವೈಭವಿಯ ದೇಖರೇಕಿಯೂ ಅವಳ ಪಾಲಿನದೇ ಆಗಿತ್ತು. ಅಷ್ಟೆಲ್ಲಾ ಕೆಲಸ ಮಾಡುತ್ತಿದ್ದರೂ ರಾಜೇಶ್ವರಿ ಅವಳಿಗೆ ತಿನ್ನಲು ಕೊಡುತ್ತಿದ್ದುದು ತಂಗಳು-ಬಂಗಳು, ಇಲ್ಲವೇ ತನ್ನ ಮಕ್ಕಳು ತಿಂದು ಮಿಗಿಸಿದ್ದ ಎಂಜಲು. ಆಗಾಗ ರಾಜೇಶ್ವರಿಯ ಹೊಡೆತಗಳು ಮಂಜುಳಾಳ ಮೈಮೇಲೆ ಬಾಸುಂಡೆಗಳನ್ನು ಮೂಡಿಸುವುದು ಸಾಮಾನ್ಯವಾಗಿತ್ತು. ಇಷ್ಟೆಲ್ಲಾ ಕೆಲಸಗಳ ಮಧ್ಯೆಯೂ ಮಂಜುಳಾ ಹೇಗೋ ಎಸ್ಸೆಸ್ಸೆಲ್ಸಿ ಪಾಸೂ ಆದಳು. ಜಗದೀಶ ಮನಸ್ಸು ಮಾಡಿದ್ದರೆ ಅವಳನ್ನು ಒಳ್ಳೇ ಕಾಲೇಜಿಗೆ ಸೇರಿಸಬಹುದಾಗಿತ್ತು. ಆದರೆ ಮನೆಯಲ್ಲಿ ಅವನ ಮಾತೇನೂ ನಡೆಯುತ್ತಿರಲಿಲ್ಲವಾದ್ದರಿಂದ ಊರಲ್ಲಿಯೇ ಇದ್ದ ಸರಕಾರಿ ಪದವಿಪೂರ್ವ ಕಾಲೇಜಿಗೆ ಸೇರಿಸಬೇಕಾಯಿತು. ಮನೆಗೆಲಸಗಳ ಜೊತೆಗೆ ಹೇಗೋ ಪಿಯುಸಿ ಎರಡು ವರ್ಷ ಮುಗಿಸಿಕೊಂಡಾಗ ಅವಳಿಗೆ ವಿದ್ಯೆ ಸಾಕಿನ್ನು ಎಂದು ರಾಜೇಶ್ವರಿ ಫರ್ಮಾನು ಹೊರಡಿಸಿದಳು. ಚಿಕ್ಕಮ್ಮನ ಮಲತಾಯಿಯ ಧೋರಣೆಯ ಬಿಗಿಹಿಡಿತದಲ್ಲಿ ಮಂಜುಳಾ ನಲುಗಿದ್ದಂತೂ ಸತ್ಯ. ಮನೆಯಲ್ಲಿ ಅದೆಷ್ಟೇ ಕೆಲಸಗಳಿದ್ದರೂ ಹೇಗಾದರೂ ಮಾಡಿ ಪದವಿಯನ್ನು ಮಾಡಿಕೊಳ್ಳಬೇಕೆಂಬ ಹಂಬಲ ಮಂಜುಳಾಳ ಎದೆಯಲ್ಲಿ ತುಡಿಯುತ್ತಿತ್ತಾದರೂ ಸರ್ವಾಧಿಕಾರಿಣಿಯಂತೆ ವರ್ತಿಸುತ್ತಿದ್ದ ಚಿಕ್ಕಮ್ಮನ ಮಾತಿನಂತೆ ಎಲ್ಲವೂ ನಡೆಯುತ್ತಿದ್ದುದೂ ಅವಳ ಮನದರಿವಿಗೆ ಬಂದಿತ್ತು. ಚಿಕ್ಕಮ್ಮನ ಮುಂದೆ ತಂದೆಯ ಮಾತೇನೂ ನಡೆಯುತ್ತಿಲ್ಲ ಎಂಬುದೂ ಅವಳಿಗೆ ಗೊತ್ತಿದ್ದಿದ್ದೇ. ಮಂಜುಳಾಳ ಪಿಯುಸಿ ಮುಗಿಯುತ್ತಿದ್ದಂತೆ ರಾಜೇಶ್ವರಿ ತನ್ನ ತವರುಮನೆಯ ಸಂಬಂಧದ ರೈತಾಪಿ ಹುಡುಗ ಮಲ್ಲಿಕಾರ್ಜುನನಿಗೆ ಮಂಜುಳಾಳನ್ನು ಕೊಟ್ಟು ತಾಬಡಾ-ತೂಬಡಾ ಮದುವೆಮಾಡಿ ತನ್ನ ಮನೆಯಿಂದ ಸಾಗಹಾಕಿಬಿಟ್ಟಳು ಪೀಡೆ ತೊಲಗಿತು ಎಂಬಂತೆ. ಶಿಕ್ಷಕನಾಗಿದ್ದ ಜಗದೀಶ ಮನಸ್ಸು ಮಾಡಿದ್ದರೆ ಒಳ್ಳೇ ನೌಕರಿಯಲ್ಲಿ ಇರುವ ಹುಡುಗನಿಗೆ ಕೊಟ್ಟು ಅವಳ ಮದುವೆ ಮಾಡಬಹುದಾಗಿತ್ತು. ಹೆಂಡತಿಯ ದಾಸಾನುದಾಸನಾಗಿದ್ದ ಜಗದೀಶ್ ಮಗಳ ಭವಿಷ್ಯ ರೂಪಿಸುವುದರಲ್ಲಿ ಎಡವಿದ್ದ.
****
`ಅಂದುಕೊಳ್ಳುವುದು ಒಂದಾದರೆ ಆಗುವುದೇ ಇನ್ನೊಂದು’ ಎಂಬಂತೆ ರಾಜೇಶ್ವರಿಯ ಯೋಜನೆ ನೆಲಕಚ್ಚಿತ್ತು. ಮಲಮಗಳು ಗಂಡನ ಮನೆಯಲ್ಲೂ ಸುಖವಾಗಿರಬಾರದೆಂಬ ಉದ್ದೇಶದಿಂದಲೇ ಯಕಃಶ್ಚಿತ್ ರೈತಾಪಿ ಕುಟುಂಬದ ಮನೆಗೆ ಮಂಜುಳಾಳನ್ನು ಕೊಟ್ಟು ಮದುವೆ ಮಾಡಿದ್ದಳು. `ಎಲ್ಲಿದ್ದರೂ ನನ್ನದು ದುಡಿಯುವ ಜೀವ. ಮೈಮುರಿದು ದುಡಿದು ಉಣ್ಣುವ ಜೀವ. ಕೈಕಾಲು ಗಟ್ಟಿಮುಟ್ಟಾಗಿ ಇರೋತನಕ ದುಡಿದು ಉಂಡರಾಯಿತು’ ಎಂದು ಅಂದುಕೊಂಡು ಯಾವುದೇ ರೀತಿಯ ಗೊಣಗಾಟವಿಲ್ಲದೇ ಮಲ್ಲಿಕಾರ್ಜುನನ್ನು ಗಂಡನೆಂದು ಮನಸಾರೆ ಒಪ್ಪಿಕೊಂಡು ಮಂಜುಳಾ ಗಂಡನ ಮನೆ ಸೇರಿದ್ದಳು. ಅತ್ತೆ, ಮಾವನವರ ಬೇಕು-ಬೇಡಗಳನ್ನು ಅರಿತುಕೊಂಡು ನಡೆಯುವ ಮೆಚ್ಚಿನ ಸೊಸೆಯಾದಳು. ಗಂಡನಿಚ್ಛೆಗೆ ತಕ್ಕಂತೆ ಸ್ಪಂದಿಸುವ ಮನದನ್ನೆಯಾದಳು. ಅವಳ ನಿಷ್ಕಲ್ಮಶ ದುಡಿಮೆಯನ್ನು ಮೆಚ್ಚಿಕೊಂಡ ಸೃಷ್ಟಿಕರ್ತ ಅವಳಿಗೆ ಭಾಗ್ಯದ ಬಾಗಿಲನ್ನೇ ತೆರೆದ. ಎಸ್ಸೆಸ್ಸೆಲ್ಸಿ ಓದಿಕೊಂಡಿದ್ದ ಮಂಜುಳಾಳಿಗೆ ಕನಿಷ್ಠ ಟೀಚರ್ ಟ್ರೇನಿಂಗ್ ಕೋರ್ಸನ್ನಾದರೂ ಮಾಡಬೇಕೆಂಬ ಹಂಬಲವಿತ್ತು. ಒಂದಿನ ರಾತ್ರಿಯ ಏಕಾಂತದಲ್ಲಿ ಮಲ್ಲಿಕಾರ್ಜುನನಿಗೆ ತನ್ನ ಮನದಿಂಗಿತ ಹಂಚಿಕೊಡಾಗ ಅವನು ಎರಡು ಮಾತಿಲ್ಲದೇ ತನ್ನ ಸಮ್ಮತಿ ಸೂಚಿಸಿದ್ದ. ಬರೀ ಎಸ್ಸೆಸ್ಸೆಲ್ಸಿಗೆ ಮಲ್ಲಿಕಾರ್ಜುನನ ಓದು ಮೊಟಕುಗೊಂಡಿದ್ದರಿಂದ, `ಇವಳಾದರೂ ಓದಲಿ…’ ಎಂಬ ಭಾವವಿತ್ತು ಅವನೆದೆಯ ಮಾತಿನಲ್ಲಿ. ಅತ್ತೆ-ಮಾವನವರ ಜೊತೆಗೂ ತನ್ನ ಮನದಾಶೆ ಹೇಳಿಕೊಂಡಾಗ ಅವರೂ ಒಪ್ಪಿಗೆ ನೀಡಿದಾಗ, `ಸ್ವರ್ಗ ಮೂರೇ ಗೇಣಿನಷ್ಟು ದೂರದಲ್ಲಿದೆ’ ಎಂಬ ಭಾವ ಅವಳೆದೆಯಲ್ಲಿ ಮೂಡಿತ್ತು. ಮನೆಗೆಲಸಕ್ಕೆ ಯಾವುದೇ ರೀತಿಯ ಕುಂದು ಬರದಂತೆ ನೋಡಿಕೊಂಡು ತನ್ನ ಓದನ್ನು ಮುಂದುವರಿಸಿದಳು. ಎರಡು ಕಿಮೀ ದೂರದ ಪಕ್ಕದೂರಿನ ಕಾಲೇಜಿಗೆ ಸೇರಿಕೊಂಡಳು. ತರಬೇತಿ ಶಿಕ್ಷಣವನ್ನು ಲೀಲಾಜಾಲವಾಗಿ ಮುಗಿಸಿದಳು. ಸರಕಾರದ ಶಿಕ್ಷಕಿ ಹುದ್ದೆಗೆ ಅರ್ಜಿಯನ್ನೂ ಸಲ್ಲಿಸಿದಳು. ಯಾವುದೇ ಲಂಚ, ರುಷುವತ್ತು ಇಲ್ಲದೇ ಶಿಕ್ಷಕಿಯಾಗಿ ನೇಮಕಗೊಂಡಳು. ಐದು ಕಿಮೀ ದೂರದ ಊರಿನ ಶಾಲೆಯಲ್ಲಿ ಶಿಕ್ಷಕಿಯಾಗಿ ಉದ್ಯೋಗ ಪರ್ವವನ್ನೂ ಆರಂಭಿಸಿಬಿಟ್ಟಳು ಮಂಜುಳಾ. ಶಿಕ್ಷಕಿಯ ಕೆಲಸದ ಜೊತೆಗೆ ಮನೆಗೆಲಸಗಳನ್ನು ನಿಭಾಯಿಸುವ ಚಾಕಚಕ್ಯತೆಯನ್ನೂ ಬೆಳೆಸಿಕೊಂಡು ಜೀವನವೆಂಬ ನದಿಯಲ್ಲಿ ಸರಾಗವಾಗಿ ಈಜತೊಡಗಿದಳು. ತನ್ನ ತಾಳ್ಮೆ, ಪರಿಶ್ರಮ, ಶ್ರದ್ಧೆ, ಪ್ರಾಮಾಣಿಕ ಪ್ರಯತ್ನದಿಂದ ಮನೆ, ಶಾಲೆ ಎರಡೂ ಕಡೆಗೆ ತನ್ನ ವಿಶೇಷ ವ್ಯಕ್ತಿತ್ವಕ್ಕೆ ಮೆರುಗು ತಂದುಕೊಂಡಳು. ನಿಷ್ಕಲ್ಮಶ ಭಾವದ ಅವಳ ಮನಸ್ಸನ್ನು ಮೆಚ್ಚದವರೇ ಇರಲಿಲ್ಲ.
`ನಂಬಿ ಕರೆದಡೆ ಓ ಎನ್ನನೇ ಆ ಶಿವ…’ ಎಂಬ ಶರಣವಾಣಿಯಲ್ಲಿ ನಂಬಿಕೆ ಇಟ್ಟು ಜೀವನ ರಥ ಎಳೆಯುವ ಪರಿಪಾಠ ಇಟ್ಟುಕೊಂಡವಳು ಮಂಜುಳಾ. ಅವಳ ಪ್ರಾಂಜಲ ಮನದಿಚ್ಛೆಗೆ ದೈವಶಕ್ತಿಯೂ ಜೊತೆಗೂಡುತ್ತಿತ್ತು. ನೋಡನೋಡುತ್ತಲೇ ಮಂಜುಳಾ ಎರಡು ಮಕ್ಕಳ ತಾಯಿಯೂ ಆದಳು. ಮದುವೆಯಾದ ಮೂರನೇ ವರ್ಷಕ್ಕೆ ಸೃಷ್ಟಿ ಮತ್ತು ಐದನೇ ವರ್ಷಕ್ಕೆ ಭರತ್ ಮಂಜುಳಾ ಮತ್ತು ಮಲ್ಲಿಕಾರ್ಜುನ್ ದಂಪತಿಗಳ ಮಡಿಲು ತುಂಬಿ ಕುಟುಂಬದಲ್ಲಿ ನಗುವಿನ ಕಲರವ ಸೃಷ್ಟಿಸಿದ್ದರು. ಮೊದಲನೆಯ ಹೆರಿಗೆಯಾದಾಗ ಮಲತಾಯಿ ರಾಜೇಶ್ವರಿ ಜನನಿಂದೆಗೆ ಅಂಜಿಕೊಂಡು ಮಂಜುಳಾಳನ್ನು ತವರುಮನೆಗೆ ಕರೆದುಕೊಂಡು ಹೋಗಿದ್ದಳಾದರೂ ಅವಳ ನಡತೆಯ ಬಗ್ಗೆ ಅರಿವಿದ್ದ ಮಲ್ಲಿಕಾರ್ಜುನ್ ತಿಂಗಳು ತುಂಬುತ್ತಿದ್ದಂತೆ ಹೆಂಡತಿ ಮತ್ತು ಮಗುವನ್ನು ತನ್ನ ಊರಿಗೆ ಕರೆದುಕೊಂಡು ಹೋಗಿದ್ದ. ಮಂಜುಳಾ ಎರಡನೇ ಸಲ ಗರ್ಭಿಣಿಯಾಗಿದ್ದಾಗ ರಾಜೇಶ್ವರಿ ಅವಳ ಬಗ್ಗೆ ಕಿಂಚಿತ್ತೂ ಕಾಳಜಿ ಮಾಡಲಿಲ್ಲ. ಮಂಜುಳಾಳೂ ತವರುಮನೆಯ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಗಂಡನ ಮನೆಯಲ್ಲೇ ಹೆರಿಗೆ, ಬಾಣಂತನ ಆದವು. ಮಕ್ಕಳು ಬಿದಿಗೆಯ ಚಂದ್ರಮನಂತೆ ಬೆಳೆಯತೊಡಗಿದರು. ಸೃಷ್ಟಿ ಈಗ ಮೂರನೇ ತರಗತಿಯಲ್ಲಿ ಓದುತ್ತಿದ್ದರೆ ಭರತ್ ಒಂದನೇ ತರಗತಿಯಲ್ಲಿ ಓದುತ್ತಿರುವನು. ಮಂಜುಳಾಗೂ ಇದ್ದೂರಿನ ಶಾಲೆಗೇ ವರ್ಗವಾಗಿದ್ದು ತುಂಬಾ ಅನುಕೂಲವಾಗಿತ್ತು. ಹೀಗಾಗಿ ಅವಳಿಗೆ ಮನೆ ಮತ್ತು ಶಾಲೆಯ ಕರ್ತವ್ಯದ ಕಡೆಗೆ ಗಮನ ಹರಿಸಲು ಇನ್ನೂ ಹೆಚ್ಚಿನ ಸಮಯ ಲಭ್ಯವಾಗುತ್ತಿತ್ತು. ಅಷ್ಟರಲ್ಲಿ ಅವಳ ಫೋನ್, `ನಾನಿದ್ದೇನೆ…’ ಎಂದು ಎಚ್ಚರಿಸಿದ್ದರಿಂದ ಮಂಜುಳಾಳ ನೆನಪಿನ ಸುರಿಮಳೆ ಥಟ್ಟಂತ ನಿಂತಿತು. ಸುಮನಾಳ ಕರೆಯಾಗಿತ್ತು.
****
“ಮಂಜು, ಇನ್ನೊಂದು ವಿಷಯ ಹೇಳೋದು ಮರೆತಿದ್ದೆ…” ಸುಮನಾ ಪೀಠಿಕೆ ಹಾಕಿದಳು.
“ಅದೇನೆಂದು ಹೇಳು ಸುಮಿ? ರಾಗವೇಕೆ…?”
“ಹೋದ ಶನಿವಾರ ನಿನ್ನ ತಮ್ಮ ವಿವೇಕ್ ಬಂದಿದ್ದ. ಅದೇನೋ ಆಸ್ತೀನೆಲ್ಲ ತನ್ನ ಹೆಸರಿನಲ್ಲಿ ವರ್ಗಾಯಿಸಬೇಕೆಂದು ಕೇಳಿದನಂತೆ. ಹೊಲ-ಮನೆ ಎಲ್ಲಾ ಆಸ್ತಿ ತನಗೇ ಸೇರಬೇಕೆಂಬುದು ಅವನ ಅಹವಾಲು.” ಅಪ್ಪ ತೀರಿಕೊಂಡಾಗ ನಡೆದ ಘಟನೆ ಅವಳ ಮನದಲ್ಲಿ ಮೂಡಿತು. ಅಪ್ಪ ತೀರಿದ ಮೂರನೇ ದಿನವೇ ವಿವೇಕ್ ತಾಯಿಯ ಜೊತೆಗೆ ಆಸ್ತಿಯ ವಿವರಗಳನ್ನು ತಿಳಿದುಕೊಂಡು ಎಲ್ಲವನ್ನೂ ತನ್ನ ಹೆಸರಿನಲ್ಲಿ ಬದಲಾಯಿಸಬೇಕೆಂದು ಒತ್ತಾಯಿಸುತ್ತಿದ್ದ ಅವನ ಮಾತುಗಳು ಮಂಜುಳಾಳ ಕಿವಿಗೂ ಅಕಸ್ಮಾತ್ತಾಗಿ ಬಿದ್ದಿದ್ದವು. ವಿವೇಕನಿಚ್ಛೆಗೆ ಮನದಲ್ಲೇ ಮರುಗಿದ್ದೂ ಇದೆ.
“ಹೌದೇ…? ಅಪ್ಪನ ಆಸ್ತಿಗೆ ವಿವೇಕನೇ ವಾರಸುದಾರನಲ್ಲವೇ…? ಚಿಕ್ಕಮ್ಮ ಏನು ಹೇಳಿದಳಂತೆ…?”
“ಇರುವ ಆಸ್ತಿಯಲ್ಲಿ ಒಂದಿಷ್ಟು ಮಗಳು ವೈಭವಿಯ ಹೆಸರಿಗೂ ಬರೆಯುವ ಇಚ್ಛೆ ನಿನ್ನ ಚಿಕ್ಕಮ್ಮನಿಗೆ ಇದೆಯಂತೆ. ಅದು ಹಾಗಾಗಬಾರದೆಂದು ವಿವೇಕ್ ಮೊದಲೇ ತಾಯಿಗೆ ಎಲ್ಲವನ್ನೂ ಸ್ಪಷ್ಟಪಡಿಸಿರುವನಂತೆ.”
“ಚಿಕ್ಕಮ್ಮ ಏನು ಹೇಳಿದಳಂತೆ…?”
“ಅದೇನು ಹೇಳಿದಳು ಅಂತ ಗೊತ್ತಾಗಿಲ್ಲ. ಆದರೆ ಇಂಟರೆಸ್ಟಿಂಗ್ ವಿಷಯ ಏನೆಂದರೆ ಮೊನ್ನೆ ರವಿವಾರ ವೈಭವಿ ಬಂದಿದ್ದಳು. ಅವಳೂ ತನ್ನ ಹೆಸರಲ್ಲಿ ಒಂದಿಷ್ಟು ಆಸ್ತಿ ಬರೆಸಬೇಕೆಂದು ಕೇಳಿಕೊಂಡಳಂತೆ…?”
“ವೈಭವಿಯ ಡಿಮ್ಯಾಂಡ್ಯೂ ಸರಿಯಾದದ್ದೇ…?”
“ಮತ್ತೆ ನೀನು ನಿನ್ನಪ್ಪನ ಮಗಳು ಅಲ್ಲವೇನು…?”
“ಹೌದು. ಅದರಲ್ಲಿ ಅನುಮಾನವಿದೆಯೇ…?”
“ಹಾಗಿದ್ದಲ್ಲಿ ನೀನೇಕೆ ಆಸ್ತಿಯಲ್ಲಿ ನಿನ್ನ ಪಾಲು ಕೇಳಬಾರದು? ಹೇಗೂ ಈಗಿನ ಕಾನೂನಿನ ಪ್ರಕಾರ ಹೆಣ್ಣುಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಹಕ್ಕು ಇದೆಯಲ್ಲ…?”
“ಇದಾ ವಿಷ್ಯ…? ಅಪ್ಪನ ಆಸ್ತಿಯಲ್ಲಿ ಪಾಲು ಕೇಳಬೇಕೆಂಬ ಇಚ್ಛೆ ನನಗಿಲ್ಲ ಕಣೇ. ಇಲ್ಲಿ ನಮಗಿರುವ ಆಸ್ತಿಯೇ ನಮಗೆ ಸಾಕು.”
“ಮಂಜು, ನಿನಗಂಥ ದುರಾಸೆ ಇಲ್ಲವೆಂದು ನನಗೂ ಚೆನ್ನಾಗಿ ಗೊತ್ತು. ಆದರೂ ಸದ್ಯದ ಕಾಲಮಾನದಲ್ಲಿ ಅಷ್ಟು ಒಳ್ಳೆಯವರಾಗಿರೋದು ಒಳ್ಳೆಯದಲ್ಲ ಕಣೇ. ನೀನೇನು ಅಡ್ಡ ದಾರಿ ಹಿಡಿದು ಆಸ್ತಿಯಲ್ಲಿ ಪಾಲು ಕೇಳುವವಳಲ್ಲ ಎಂದು ನನಗೂ ಚೆನ್ನಾಗಿ ಗೊತ್ತು.”
“ಸುಮಿ, ನನ್ನ ಬಗ್ಗೆ ಇಷ್ಟು ತಿಳಿದುಕೊಂಡಿರುವಿಯಲ್ಲ, ಅದೇ ಸಾಕು. ಹೇಗೂ ನಾಡದು ಬರುವೆನಲ್ಲ, ಆವಾಗ ವಿವರವಾಗಿ ಮಾತಾಡೋಣ.”
“ಸರಿ ಕಣೇ. ನಿನ್ನ ಆಗಮನದ ಹಾದಿಯನ್ನೇ ನಿರೀಕ್ಷಿಸುತ್ತಿರುವೆ.” ಅಲ್ಲಿಗೆ ಮಂಜುಳಾ ಮತ್ತು ಸುಮನಾರ ಮಾತುಗಳು ಕೊನೆಗೊಂಡಿದ್ದವು.
****
ಮಂಜುಳಾ ತವರಿಗೆ ಹೋದವಳು ನೇರವಾಗಿ ಸುಮನಾಳ ಮನೆಗೇ ಹೋಗಿದ್ದಳು. ಗೆಳತಿ, ಅತ್ತಿಗೆ ಸುಮನಾಳ ಆದರಾತಿಥ್ಯ ಸ್ವೀಕರಿಸಿ ಅವಳ ಜೊತೆಗೆ ತನ್ನಪ್ಪನ ಮನೆಗೆ ಪಾದಹಾಕಿದ್ದಳು. ಚಿಕ್ಕಮ್ಮನ ಪಾದಸ್ಪರ್ಶಿಸಿ ಯೋಗಕ್ಷೇಮ ವಿಚಾರಿಸಿದಳು.
“ಹೀಗಿದ್ದೀನಿ ನೋಡವ್ವ! ಏನೋ ಒಂಟಿ ಜೀವ! ನನ್ಗ್ಯಾರಿದ್ದಾರೆ ದಿಕ್ಕು? ಎಲ್ಲಾ ಇದ್ದು, ಏನೂ ಇಲ್ದಂಗಾಗೇದ. ಆ ಶಿವ ಲಗೂನ ಕರ್ಕೋವಲ್ಲ…?” ಹತಾಶೆಯ, ನಿರಾಶೆಯ ಮಾತುಗಳು ಹೊರಹೊಮ್ಮಿದ್ದವು ರಾಜೇಶ್ವರಿಯ ಬಾಯಿಯಿಂದ. ಮಾತಿನ ನಡುನಡುವೆ ಖೊಕ್ ಖೊಕ್ ಅಂತ ಕೆಮ್ಮುತ್ತಿದ್ದಳು.
“ಅಮ್ಮಾ, ನಾವೆಲ್ಲಾ ಇರುವಾಗ ನೀ ಅದೆಂಗ್ ಒಂಟಿ ಆಗ್ತೀದಿ…?”
“ಅವ್ರು ಯಾರ್ಗೂ ಒಜ್ಜೆ ಆಗ್ಲಾರ್ದಂಗೆ ಲಟ್ಟಂತ ಹೋಗಿ ಚೊಲೋ ಮಾಡಿದ್ರು. ಈ ದಮ್ಮು-ಕೆಮ್ಮು, ಬಿಪಿ, ಶುಗರ್ ಅಂತ ಬಾಳ್ದಿನ್ದಿಂದ ನನ್ಗೆ ಗಂಟು ಬಿದ್ದಾವ. ಪಾಪಿ ಜೀವ ಇನ್ನೂ ಬದ್ಕೊಂಡೈತಿ. ಯಾರಿಗಾಗಿ ಜೀವ ಹಿಡ್ಕೊಂಡೈತೋ ಏನೋ? ಕೊರೋನಾ ಅನ್ನೋ ಹೆಮ್ಮಾರಿ ಯಾರ್ಯಾರನ್ನೋ ಹೊತ್ಕೊಂಡೋತಂತ. ನನ್ನೂ ಹೊತ್ಕೊಂಡೋಗಿದ್ರೆ ಅದ್ರದೇನು ಗಂಟು ಹೋಗ್ತಿತ್ತು…?”
“ಅಮ್ಮಾ, ಬಿಡ್ತು ಅನ್ನು. ಅಂಥದ್ದನ್ಯಾಕೆ ಬಯಸ್ತಿ? ಆ ಕೊರೋನಾ ಹೆಸ್ರೇ ಎತ್ಬ್ಯಾಡ.”
“ಜೀವ ಬ್ಯಾಸ್ರ ಆಗೈತಿ. ಅದ್ಕೇ ಹೇಳ್ಲಿಕತ್ತೀನಿ. ಮಕ್ಳು ಅನ್ನೋ ರೆಕ್ಕೆ ಬಲಿತ ಹಕ್ಕಿಗಳು ಪುರ್ರಂತ ಹಾರಿ ಹೋಗಿ ದೂರದ ಊರಿನ್ಯಾಗ ಗೂಡು ಕಟ್ಕೊಂಡಾವ. `ಏಯ್ ಮುದಿಗೂಬಿ, ನೀ ಹೆಂಗದೀದಿ?’ ಅಂತ ಕೇಳೋರ ದಿಕ್ಕೂ ಇಲ್ಲ ಈ ಬಿಕನಾಶಿಗೆ! ನಿಮ್ಮಪ್ಪ ಹೋದ್ಮ್ಯಾಲೆ ನಿನ್ನ ತಮ್ಮ, ತಂಗಿ ಬಂದಿದ್ದು ಬರೀ ಆಸ್ತಿ ಸಲುವಾಗಿ. ನನ್ ಯೋಗಕ್ಷೇಮ ವಿಚಾರಸ್ಲಿಕ್ಕೆ ಅಲ್ಲ. ನನ್ ಸೊಸಿ ಅನ್ನೋ ಮಹಾತಾಯಿ ಮದುವ್ಯಾಗ ಒಂದ್ಸಾರೆ ಇಲ್ಲಿಗೆ ಬಂದಿದ್ಳು. ನಿಮ್ಮಪ್ಪ ಸತ್ತಾಗ ಒಂದಿನ ಹೆಂಗೋ ಇದ್ದು ಹೋದಾಕಿ ಮತ್ತೆ ಈ ಕಡಿಗೆ ಮುಖ ಹಾಕಿಲ್ಲ. ಮಗ್ಳೂ ಅಷ್ಟೇ. ಹೊಕ್ಳ ಕಳ್ಳು ಕುಡಿ ಹರ್ಕೊಂಡು ನನ್ನೆದಿ ಹಾಲು ಕುಡ್ಕೊಂಡು ಬೆಳ್ದಿರೋ ಮಕ್ಳಿಗೇ ನಾ ಬ್ಯಾಡ ಆಗೀನಿ. ನೀನೂ ಆಸ್ತಿ ಕೇಳಾಕ ಬಂದೀಯೇನು…?” ಎಂದು ಕೆಮ್ಮುತ್ತಾ ಕೇಳಿದ ರಾಜೇಶ್ವರಿ ಮಂಜುಳಾಳನ್ನೇ ನೋಡತೊಡಗಿದಳು.
“ಅಮ್ಮಾ, ನಾ ಅಪ್ಪನ ಆಸ್ತಿಯೊಳ್ಗೆ ಭಾಗ ಕೇಳಾಕ ಬಂದಿಲ್ಲ. ಅಪ್ಪನ ಆಸ್ತೀನೆಲ್ಲ ನೀ ತಮ್ಮ, ತಂಗಿ ಇಬ್ರಿಗೇ ಕೊಟ್ಬಿಡು. ನಂದೇನೂ ತಕರಾರಿಲ್ಲ. ನೀ ಹೆಂಗದೀದಿ ಅಂತ ಕೇಳಾಕ ಬಂದೀನಿ. ನೀ ಹೂಂ ಅಂದ್ರೆ ನನ್ಜೊತಿಗೆ ಕರ್ಕೊಂಡು ಹೋಗಾಕ ಬಂದೀನಿ. ಸುಮಿ ನಿನ್ ಆರೋಗ್ಯ ಚೊಲೋ ಇಲ್ಲ ಅಂತ ಹೇಳಿದ್ಳು. ಅದ್ಕೇ ತಡಬಡಾಯ್ಸಿ ಬಂದೀನಿ. ಇಲ್ಲಿ ನೀ ಒಬ್ಬಾಕೀನೇ ಕೈಬಾಯಿ ಸುಟ್ಕೊಳ್ಳೋದು ಸರಿ ಕಾಣಂಗಿಲ್ಲ. ಅದಕ, ನೀ ನನ್ಜೊತಿಗೆ ಹೊರ್ಡು. ನಿನ್ನ ಕೂದ್ಲು ಕೊಂಕ್ಲಾರ್ದಂಗೆ ನೋಡ್ಕೊಳ್ಳೋ ಜವಾಬ್ದಾರಿ ನಮ್ದು. ನಾನು, ನಿಮ್ಮಳಿಯ, ಮೊಮ್ಮಕ್ಳು ಎಲ್ರೂ ಕೂಡ್ಕೊಂಡು ನಿನ್ನ ಚೊಲೋತ್ನಾಗಿ ನೋಡ್ಕೊಳ್ತೀವಿ.”
“ಏಯ್ ಸುಮ್ಮೀ, ಈಕಿ ಏನ್ ಹೇಳಾಕತ್ಯಾಳ…?”
“ಅತ್ತೆ, ಮಂಜು ಹೇಳೋದು ಸರೀನೇ ಐತೆ. ಇಲ್ಲಿ ನೀ ಒಬ್ಬಾಕೀನೇ ಬಾಳ ತ್ರಾಸು ತೊಗಳ್ಳಾಕತ್ತೀದಿ. ಹೊಲ, ಮನಿ ಚಿಂತಿಬಿಟ್ಟು ನೀ ಸುಮ್ನೇ ಮಂಜೂ ಜೊತಿಗೆ ಹೊರ್ಡು. ಈಕಿ ನಿಮ್ಮನ್ನ ಚೊಲೋತ್ನಾಗಿ ನೋಡ್ಕೊಳ್ಳತಾಳ.”
“ಸುಮ್ಮೀ, ನಾ ಮಂಜೂನ್ನ ಯಾವತ್ತಾದ್ರೂ ಸ್ವಂತ ಮಗ್ಳಂಗ ನೋಡ್ಕೊಂಡೀನೇನು…? ಉಹೂಂ. ಇಲ್ವೇ ಇಲ್ಲ. ಈಕೀಗೆ ನಾ ನಿಜ್ವಾಗ್ಲೂ ಮಲತಾಯೀನೇ ಆಗಿದ್ದೆ. ಈಕಿ ಮಲಮಗ್ಳೇ ಆಗಿದ್ಳು. ಈಕಿ ನಮ್ಮನಿ ಕೆಲ್ಸದ ಹುಡುಗಿಯಾಗಿದ್ಳೇ ವಿನಃ ಮನೆಮಗ್ಳೆಂದೂ ಆಗಿರ್ಲಿಲ್ಲ. ಈಕೀಗೇ ಬಾಳ ಅಂದ್ರೆ ಬಾಳ ತ್ರಾಸು ಕೊಟ್ಟೆ. ಕೊಡಬಾರ್ದ ಕಷ್ಟಕೊಟ್ಟೆ. ಆದ್ರೂ ಈಕೀಗೆ ನನ್ಮ್ಯಾಲೆ ಪ್ರೀತಿ, ಕಕ್ಕುಲಾತಿ, ಕರುಣೆ, ಕಾಳ್ಜಿ! ನನ್ ಹೊಟ್ಯಾಗುಟ್ಟಿದ ಮಕ್ಳಿಗೇ ನಾ ಬೇಕಾಗಿಲ್ಲ. ಅವ್ರ ಪಾಲಿಗೆ ಆಗ್ಲೇ ಸತ್ತೋಗೀನಿ. ದೇವ್ರು ನನ್ಗಿಂಥ ಪರಿಸ್ಥಿತಿ ತಂದಿಡ್ತಾನ ಅಂತ ನಾ ಎಂದೂ ಅಂದ್ಕೊಂಡಿರ್ಲಿಲ್ಲ.”
“ಅಮ್ಮಾ, ನೀ ನನ್ಗೆ ಕೊಡಬಾರ್ದ ಕಷ್ಟ ಕೊಟ್ಟಿ ಅಂತ ನಾ ಯಾವತ್ತೂ ಅಂದ್ಕೊಂಡಿಲ್ಲ. ನನ್ನ ಬೆಳೆಸಿದಿ, ಸಾಕಿದಿ. ಒಂದು ಮಟ್ಟದವರ್ಗೆ ಓದಿಸಿದಿ. ಬಂಗಾರ್ದಂಥ ಹುಡುಗನ ಜೊತಿಗೆ ಮದುವೇನೂ ಮಾಡಿಸಿದಿ. ಮಲ್ಲಿಕಾರ್ಜುನ ನಿಜ್ವಾಗ್ಲೂ ನನ್ಪಾಲಿನ ಶ್ರೀಶೈಲ ಮಲ್ಲಿಕಾರ್ಜುನನೇ. ದೇವ್ರಂಥ ಮನುಷ್ಯ. ನೀನು ನನ್ಗೆ ಒಳ್ಳೇದನ್ನೇ ಮಾಡೀದಿ. ಈಗ ನೀನು ತ್ರಾಸಿನ್ಯಾಗ ಅದೀದಿ. ಸುಮ್ನೇ ನನ್ಜೊತಿಗೆ ಹೊರಡು ಅಷ್ಟೇ.”
“ಮಂಜೂ, ನೀ ಅಪರಂಜಿ ಕಣೇ. ಚೊಕ್ಕ ಬಂಗಾರ. ನನ್ ಹೊಟ್ಯಾಗುಟ್ಟಿದ ಮಕ್ಳಿಬ್ರೂ ಕಾಗೆ ಬಂಗಾರಾನೇ. ಅವ್ರಿಗೆ ಕಳ್ಳು, ಕಕ್ಕುಲಾತಿ ಅನ್ನೋದೇ ಇಲ್ಲ. ಸುಮ್ಮೀ, ಈಗ ನಾ ಏನ್ ಮಾಡಂತೀ…?” ಎಂದೆನ್ನುತ್ತಾ ರಾಜೇಶ್ವರಿ ಸುಮನಾಳ ಕಡೆಗೆ ದೃಷ್ಟಿ ಹರಿಸಿದಳು ದೀನಳಾಗಿ.
“ಅತ್ತೆ, ನೀವು ಸುಮ್ನೇ ಮಂಜೂ ಜೊತಿಗೆ ಹೊಂಟುಬಿಡ್ರಿ ಅಷ್ಟೇ.”
“ಮಂಜೂ, ನನ್ ಔಷಧಿ ಖರ್ಚು ಬಾಳ ಐತೆವ್ವಾ. ಹೆಂಗ್ ಮಾಡ್ತೀ…?”
“ಅಮ್ಮಾ, ನಿನ್ ಔಷಧಿ ಖರ್ಚು ಎಷ್ಟೇ ಇದ್ರೂ ನಾ ನೋಡ್ಕೋತೀನಿ. ನೀ ಕಲಿಸಿದ ವಿದ್ಯೆಯಿಂದ ನಿನ್ ನೋಡ್ಕೊಳ್ಳೋ ತಾಕತ್ತು ನನ್ಗೆ ಸಿಕ್ಕಿದೆ.”
“ಸರಿ, ಹಾಗಾದ್ರೆ ಹಂಗೇ ಮಾಡ್ತೀನಿ.” ರಾಜೇಶ್ವರಿ ಒಪ್ಪಿಗೆ ನೀಡಿದಾಗ ಅಲ್ಲಿ ಸಂತಸದ ಅಲೆಗಳು ಝೇಂಕರಿಸತೊಡಗಿದವು.
“ಅಮ್ಮಾ, ನಿಮ್ಮ ಸೇವೆ ಮಾಡುವ ಭಾಗ್ಯ ಲಭಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗ್ತಿದೆ. ನನ್ನಂಥ ಅದೃಷ್ಟಶಾಲಿ ಯಾರೂ ಇಲ್ಲ. ನಿನ್ನ ಆಶೀರ್ವಾದ ಸದಾ ನನ್ನ ಮೇಲಿರಲಿ” ಎಂದೆನ್ನುತ್ತಾ ಮಂಜುಳಾ ರಾಜೇಶ್ವರಿಯ ಪಾದಗಳಿಗೆ ಎರಗಿದಾಗ ಅವಳನ್ನು ಮೇಲೆತ್ತಿ ಬಿಗಿದಪ್ಪಿಕೊಂಡು ರಾಜೇಶ್ವರಿ ಆನಂದಬಾಷ್ಪ ಸುರಿಸತೊಡಗಿದ ದೃಶ್ಯವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳತೊಡಗಿದಳು ಸುಮನಾ.
****
3 thoughts on “ಮಲಮಗಳು”
ಮಲ ಮಗಳು – ವಯಸ್ಸಾದ ಮಲ ತಾಯಿಯ ಸ್ವಂತ ಮಗಳಾಗಿ ( ಸ್ವಂತ ಮಕ್ಕಳ ಹೊಣೆಗೇಡಿತನ ಕಾರಣದಿಂದ ) ಕೊನೆಗೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತ ಕಥೆ ಮನ ಮಿಡಿಯುತ್ತದೆ. ಸುಂದರ ಕಥೆ.
ಸರಳ ಶೈಲಿಯ ಸರಾಗ ಓದಿನ ಕಥೆ ಚೆನ್ನಾಗಿದೆ.
ಅಭಿನಂದನೆಗಳು
Wonderful story. Proud of you Goudre. If only such things happen in the world then no one will think of SWARGA or departing from this earthly world.
Congratulations Goudre keep writing and let the society get the benefit