ಶಾಕ್ಯಮುನಿಯ ನುಡಿಗಳು

ದೇಹಕೆ ಮುಪ್ಪು ತಪ್ಪದು ಎಂದು

ಕಾಯಿಲೆ,ಸಾವು ತಪ್ಪದು ಎಂದು

ವಿರಕ್ತಪಥವೂ ಒಂದಿದೆ ಎಂದು
                ಕಂಡನು ಗುರುವರ ಶಾಕ್ಯಮುನಿ


ಆಸೆಯು ದು:ಖದ ಅಡಿಪಾಯವೆಂದು

ಆಶಾರಹಿತತೆ ಉಪಾಯವೆಂದು

ಎಲ್ಲ ಅತಿಗಳೂ ಅಪಾಯವೆಂದು
             ಕಂಡನು ಗುರುವರ ಶಾಕ್ಯಮುನಿ



ದ್ವೇಷ, ಸುಳ್ಳು ,ಕಠೋರಮಾತು!

ಅನ್ಯರ ಸೊತ್ತನು ಬಯಸುತ ಸೋತು

ಪಾಳುಗೈಯುವಿರ ಬಾಳಿನ ಧಾತು?
            ಮರುಗಿದ ಗುರುವರ ಶಾಕ್ಯಮುನಿ


"ಜಗದಲ್ಲಾವುದೂ ಅಳಿಯುವುದಿಲ್ಲ"

"ಬದಲಾಗದೆಯೇ ಉಳಿಯುವುದಿಲ್ಲ"

"ಕರ್ಮದ ನಿಯಮ ಇರುವುದು"ಎಂದು

       ಶೋಧಿಸಿದನು ಗುರು ಶಾಕ್ಯಮುನಿ



ಕಳದಿರಿ ಕೊಲದಿರಿ ಹುಸಿಯಾಡದಿರಿ

ಮದಿರೆಯನೆಂದೂ ಮುಟ್ಟದಿರೆಂದು

ಪರನಾರಿಯರನು ಬಯಸದಿರೆಂದು

       ಬೋಧಿಸಿದನು ಗುರು ಶಾಕ್ಯಮುನಿ 


ಇಹವಿದು, ಇಲ್ಲಿ ದು:ಖವೆ ಇಹುದು!

ದು:ಖಕೆ ಮೂಲ,ಕೊನೆಯೂ ಇಹುದು!

ಭಾಂತೇ, ಮಧ್ಯಮ ಪಥ ತೆರೆದಿಹುದು!

          ಸಾರಿದ ಗುರುವರ ಶಾಕ್ಯಮುನಿ

                                                                                                                                                                                      
ಯುಕ್ತ ದೃಷ್ಟಿ ,ಚಿಂತನ,ನಡೆ,ನುಡಿ

ಕಾಯಕ,ಯತ್ನ,ಎಚ್ಚರ,ಧ್ಯಾನ-

ಮಾರ್ಗದ ಅಷ್ಟಾಂಗಗಳಿವು ಕಾಣಾ 

      ತೋರಿದ  ಗುರುವರ ಶಾಕ್ಯಮುನಿ 


ಬುದ್ಧಂ ಶರಣಂ ಗಚ್ಛಾಮಿ

ಸಂಘಂ ಶರಣಂ ಗಚ್ಛಾಮಿ

ಧಮ್ಮಂ ಶರಣಂ ಗಚ್ಛಾಮಿ

                ರಕ್ಷಿಸು ನಮ್ಮನು ಶಾಕ್ಯಮುನಿ

          🙏ಬುದ್ಧವಂದನಾ 🙏     
                                     *ಚಿಂತಾಮಣಿ ಕೊಡ್ಲೆಕೆರೆ*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಶಾಕ್ಯಮುನಿಯ ನುಡಿಗಳು”

  1. Raghavendra Mangalore

    ಉತ್ತಮ ಅರ್ಥಗರ್ಭಿತ ಮತ್ತು ಸಕಾಲಿಕ ಕವಿತೆ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter