ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’ : ಮಾನವೀಯ ನೆಲೆಗಳ ಶೋಧ

ಹಲವು ದಶಕಗಳ ಕಾಲ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ‘ಒಡಪುಗಳು’, ‘ಪ್ರತಿಮೆಗಳು’, ‘ದೇಸಗತಿ’, ‘ಮಾಯಿಯ ಮುಖಗಳು’, ‘ಎಷ್ಟು ಕಾಡತಾವ ಕಬ್ಬಕ್ಕೀ’ (ಕಥಾಸಂಕಲನಗಳು) ಬಾಳವ್ವನ ಕನಸುಗಳು, ತೇರು, ಅಮೃತವಾಹಿನಿ (ಕಾದಂಬರಿಗಳು) ಎಂಬ ಕೃತಿಗಳನ್ನು ಪ್ರಕಟಿಸಿದ ರಾಘವೇಂದ್ರ ಪಾಟೀಲರು ಇತ್ತೀಚೆಗೆ ಪ್ರಕಟಿಸಿದ ‘ಗೈರ ಸಮಜೂತಿ’ ಎಂಬ ಕಾದಂಬರಿಯು ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವೆನಿಸುತ್ತದೆ. ವ್ಯಾಸರಾಯ ಬಲ್ಲಾಳರ ‘ಹೆಜ್ಜೆಗುರುತು’, ಎಚ್. ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿಗಳನ್ನು ಹೊರತು ಪಡಿಸಿ ಹೇಳುವುದಾದರೆ, ವಿಧವೆಯರ ವೈಯಕ್ತಿಕ ಬಾಳಿನ ಮೇಲೆ ಮಾತ್ರ ಗಮನವನ್ನು ಹರಿಸಿಕೊಂಡು ಬೆಳಕು ಕಂಡ ಮಾಸ್ತಿಯವರ ‘ಶೇಷಮ್ಮ’, ಶಿವರಾಮ ಕಾರಂತರ ‘ನಿರ್ಭಾಗ್ಯ ಜನ್ಮ’, ಎಂ. ಕೆ. ಇಂದಿರಾ ಅವರ ‘ಫಣಿಯಮ್ಮ’, ‘ಸದಾನಂದ’, ನಿರಂಜನರ ‘ಸ್ಮರಣೆಯೊಂದೇ ಸಾಲದೇ?’ ರಚನೆಗಳಿಗಿಂತ ಹೆಚ್ಚಿನ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಈ ಕೃತಿಯು ಕಾದಂಬರಿಯ ಚೌಕಟ್ಟನ್ನು ಮೀರಿ ಬೆಳೆದಿದೆ. ಬೆಳಗಾವಿ ಪ್ರದೇಶದ ಆಡುಮಾತಿನ ಸೊಗಡಿನೊಂದಿಗೆ ಪೌರಾಣಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳು ಹಾಸು ಹೊಕ್ಕಿರುವುದರಿಂದ ಚರ್ಚಿತ ಸಮಸ್ಯೆಗಳನ್ನು ಕುಟುಂಬ, ಪ್ರಾಂತ್ಯಗಳ ಎಲ್ಲೆಗಳನ್ನು ಮೀರಿ, ದೇಶದ ಮಟ್ಟದಲ್ಲಿ ಚಿಂತಿಸುವಂತೆ ಮಾಡಲು ಸಾಧ್ಯವಾಗಿದೆ. ಇವುಗಳೊಂದಿಗೆ ವೇದ, ಉಪನಿಷತ್ತುಗಳ ಜೊತೆಗೆ ಪ್ರಚಲಿತ ವಿದ್ಯಮಾನಗಳನ್ನು ಬೆಸೆದು ನಿರೂಪಿಸುವ ಕಲೆಯು ಲೇಖಕರ ಕಥನ ಕೌಶಲಕ್ಕೆ ಸಾಕ್ಷಿಯಾಗಿದೆ. ಕೃತಿಯ ಕೇಂದ್ರವಾಗಿರುವ ವಚ್ಚಕ್ಕ ಮಾತ್ರವಲ್ಲದೆ ವ್ಯಾವಹಾರಿಕ ಬದುಕಿನ ಅರ್ಥವನ್ನು ಗ್ರಹಿಸಿದ ಶಾಮರಾಯ, ಸಮಾಜವು ರೂಢಿಸಿಕೊಂಡು ಬಂದ ಶಿಷ್ಟಾಚಾರ, ಪುರಾಣಾದಿ ಸಾಹಿತ್ಯಗಳು ಮೂಡಿಸಿದ ವಿಶಿಷ್ಟ ಸಂಸ್ಕøತಿಯ ಪ್ರಭಾವವನ್ನು ಬೀರುವ ಸತ್ಯಬೋಧ, ಪಾಪಪ್ರಜ್ಞೆಯಿಂದ ನರಳುವ ರಾಘಣ್ಣ, ಜನಸೇವೆಯನ್ನೇ ಉಸಿರಾಗಿಸಿಕೊಂಡ ರಾಧಜ್ಜಿ, ದೇಹವನ್ನು ಪ್ರೀತಿಸಿಯೂ ಇಂದ್ರಿಯಗಳನ್ನು ಮೀರಿ ನಿಲ್ಲುವ ಕುಮಾರಿಲ ಭಟ್ಟರು ಹೀಗೆ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಬದುಕನ್ನು ನೋಡುವ ಮೂಲಕ ಸರ್ವಸಾಕ್ಷಿ ಪ್ರಜ್ಞೆ ಕಾಣಿಸುತ್ತದೆ.

ಇಪ್ಪತ್ತನೇ ಶತಮಾನದ ಮೂರನೇ ದಶಕದಿಂದ ಅರಂಭಗೊಳ್ಳುವ ಈ ಕಾದಂಬರಿಯಲ್ಲಿ ಗೈರ ಸಮಜೂತಿ (ತಪ್ಪು ತಿಳುವಳಿಕೆ) ಯು ಕುಟುಂಬ ಜೀವನ ಮತ್ತು ರಾಷ್ಟ್ರ ಜೀವನವನ್ನು ಹಾಳುಗೆಡವಿದ ಬಗೆಗಳನ್ನು ಕಾಣುತ್ತೇವೆ. ಆಂಗ್ಲರ ಹಿಡಿತದಲ್ಲಿದ್ದ ಭಾರತವನ್ನು ಬಿಡುಗಡೆಗೊಳಿಸಲು ಸುಭಾಷ್ ಚಂದ್ರ ಬೋಸರ ಸಶಸ್ತ್ರ ಹೋರಾಟಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುತ್ತಿದ್ದ ಕೃಷ್ಣಾಜಿಯ ಬದಲು ಆತನನ್ನು ಹೋಲುತ್ತಿದ್ದ ಅಣ್ಣನ ಮಗ ಅಚ್ಯುತನನ್ನು ಕೊಲ್ಲುವ ಪೋಲೀಸರು, ಗುರುಗಳ ಅಪ್ಪಣೆಯಂತೆ ಸೂಳೆಯನ್ನು ಉದ್ಧರಿಸಲು ಹೊರಟ ಕುಮಾರಿಲ ಭಟ್ಟರ ಬಗ್ಗೆ ಕೆಟ್ಟದಾಗಿ ಆಡಿಕೊಳ್ಳುವ ಸಹೋದ್ಯೋಗಿಗಳು, ವಚ್ಚಕ್ಕನ ಮನಸ್ಸನ್ನು ಅರ್ಥಮಾಡಿಕೊಳ್ಳದ ಶೇಷ, ಅವನ ಲಂಪಟತನವನ್ನು ಅರಿಯದ ವಚ್ಚಕ್ಕ, ಗಾಂಧೀಜಿಯ ಬಗ್ಗೆ- ಹಿಂದೂ ಮುಸ್ಲಿಂ ವಿವಾದಗಳ ಕುರಿತು ಪೂರ್ವಾಗ್ರಹಗಳನ್ನು ಹೊಂದಿದ ವ್ಯಕ್ತಿಗಳು, ಗಾಂಧೀಜಿಯವರ ಹತ್ಯೆಯಾದಾಗ ಸೂತಕ ಸಭೆಯ ಆಹ್ವಾನವನ್ನು ತಿಳಿಯಲಾರದ ಸತ್ಯಬೋಧರು ಮತ್ತು ಅವರನ್ನು ಕೊಂದ ಪೈಲ್ವಾನರು ಇವರೆಲ್ಲರೂ ಗೈರ ಸಮಜೂತಿಗೆ ಉದಾಹರಣೆಗಳಾಗಿದ್ದು ಗೈರ ಸಮಜೂತಿಯು ಕಥನದ ಒಳಹರಿವಾಗಿ ಚಲಿಸುತ್ತದೆ. ಪೋಲೀಸರ ಗುಂಡೇಟಿಗೆ ಬಲಿಯಾಗುವ ಅಚ್ಯುತನ ಮರಣವು ಇಲ್ಲಿ ಕಂಡು ಬರುವ ಮುಖ್ಯವಾದ ಗೈರ ಸಮಜೂತಿ. ಇದರಿಂದಾಗಿ ಪ್ರಸ್ತದ ದಿನಗಳಲ್ಲೇ ವಿಧವೆಯಾಗುವ ವಚ್ಚಕ್ಕನು ತನ್ನ ಬಾಳುವೆಯಲ್ಲಿ ಎದುರಾಗುವ ಅಗ್ನಿ ಪರೀಕ್ಷೆಗಳನ್ನು ಎದುರಿಸಿ ಮಾನವೀಯತೆಯ ವಿಕಾಸದ ಮಜಲನ್ನು ಮುಟ್ಟುವ ಕತೆಯು ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ. ಮದುವೆ ಎಂಬುದರ ಅರ್ಥವನ್ನು ತಿಳಿಯುವ ಮೊದಲೇ ಸೋದರ ಮಾವನಾದ ಅಚ್ಯುತನನ್ನು ವರಿಸಿ, ಬಾಲ್ಯಾವಸ್ಥೆಯು ದಾಟಿ, ಹದಿಹರಯಕ್ಕೆ ಕಾಲಿಟ್ಟು ದಾಂಪತ್ಯದ ಸುಖವನ್ನು ಸವಿಯುವ ಮೊದಲೇ ವಿಧವೆಯಾದ ವಚ್ಚಕ್ಕನ ಪರಿಸ್ಥಿತಿ, ಅಚ್ಯುತನ ಸಾವಿನ ಸುದ್ದಿಯು ಅವನ ಗೆಳೆಯ ಅಮೃತ ಮತ್ತು ವಚ್ಚಕ್ಕನ ಮನೆಯವರಿಗೆ ತಲುಪಿದ ಸನ್ನಿವೇಶವು ಮರ್ಮಭೇದಕವಾಗಿದೆ. ವಚ್ಚಕ್ಕನ ಯಾತನೆಗೆ ಶಿಕ್ಷಣದ ಮೂಲಕ ಪರಿಹಾರವನ್ನು ನೀಡಲು ಬಯಸಿದ ಸತ್ಯಬೋಧರು ಆಕೆಗೆ ಅಕ್ಷರಾಭ್ಯಾಸವನ್ನು ಆರಂಭಿಸಿ, ಕನ್ನಡ ಮತ್ತು ಸಂಸ್ಕøತ ಕಾವ್ಯಗಳನ್ನು ಅಧ್ಯಯನ ಮಾಡಿಸಿ, ಕಠೋಪನಿಷತ್ತನ್ನು ಬೋಧಿಸುತ್ತಾರೆ. ಅವರ ಬೋಧನೆಯ ಹಿನ್ನೆಲೆಯಲ್ಲಿ ರೂಪು ತಳೆಯುವ ರಾಧಜ್ಜಿ, ಕುಮಾರಿಲ ಭಟ್ಟರು, ಗಾಂಧೀಜಿ ಮೊದಲಾದವರು ಭೌತಿಕವಾಗಿ ಎದುರಿಗೆ ಇರದಿದ್ದರೂ ವಿಶೇಷ ಪ್ರಭಾವಳಿಯಾಗಿದ್ದುಕೊಂಡೇ ಹೊಸ ಆಶೋತ್ತರಗಳನ್ನು ನಿರ್ದೇಶಿಸುತ್ತಾರೆ. ವೈಯಕ್ತಿಕ ನೋವನ್ನು ಮೀರಿ ಬದುಕಿಗೆ ಸಮಾಜಮುಖಿ ಆಯಾಮವನ್ನು ಬೆಳೆಸಲು ಆಧಾರವಾಗುತ್ತಾರೆ. ಅವರಿಂದ ಪ್ರಭಾವಿತಳಾದ ವಚ್ಚಕ್ಕ ಆದರ್ಶಗಳನ್ನು ಪಾಲಿಸಲು ಹೊರಟಾಗ ಆಕೆ ಎದುರಿಸುವ ಸಮಸ್ಯೆಗಳನ್ನು ವೈಯಕ್ತಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ನೋಡಲಾಗಿದೆ. ವಚ್ಚಕ್ಕನ ಕೂದಲಿನಿಂತೆ ಬದುಕು ಬೋಳಾದರೂ ಆಕೆಯ ಜೀವನದ ನೈಸರ್ಗಿಕ ಒತ್ತಡವನ್ನು ಬೋಳಿಸುವುದು ಅಷ್ಟು ಸುಲಭವಲ್ಲ. ಕೂದಲಿನಂತೆ ಚಿಗುರಿ ಬರುವ ಬಯಕೆ, ಭಾವನೆ, ಹಂಬಲಗಳನ್ನು ನೀಗಲು ಧರ್ಮಶಾಸ್ತ್ರದ ಭಾಗವಾದ ಕಠೋಪನಿಷತ್ತೇ ಬೇಕಾಗುತ್ತದೆ. ಭಾರತದಲ್ಲಿ ಆಂಗ್ಲರ ಆಧಿಪತ್ಯದ ಫಲವಾಗಿ ಹುಟ್ಟಿದ ಹೊಸ ಪ್ರಜ್ಞೆಯ ಪ್ರವೇಶದಿಂದಾಗಿ ಸ್ಥಿರವೆಂದು ತೋರುವ ಜೀವನಕ್ರಮಗಳಲ್ಲಿ ಪಲ್ಲಟಗಳು ಕಾಣಿಸಿಕೊಂಡಿದ್ದರೂ, ತನ್ನದೇ ಆದ ನಂಬಿಕೆಗಳು, ರೀತಿ ರಿವಾಜುಗಳು, ಸಂಸ್ಥೆಗಳು ಮತ್ತು ಮೌಲ್ಯ ವ್ಯವಸ್ಥೆಯಲ್ಲಿ ಬದುಕುತ್ತಿರುವ ಸಮಾಜವೊಂದು ಹೊಸ ಭಾಷೆ, ಸಾಹಿತ್ಯ, ಶಿಕ್ಷಣ, ಧರ್ಮ, ಆಡಳಿತ ವ್ಯವಸ್ಥೆ, ಭೌತಿಕ ವಸ್ತುಗಳು, ಜೀವನಶೈಲಿ, ನಡಾವಳಿಗಳಿಗೆ ತೆರೆದುಕೊಂಡಾಗ ಅವುಗಳ ಪ್ರಭಾವ ಮತ್ತು ಒತ್ತಡಗಳಿಂದ ಕಂಪಿಸುವ, ಬದಲಾಗುವ ವಿದ್ಯಮಾನಗಳು ಸಹಜವಾದರೂ, ಇಲ್ಲಿ ಸಂಸ್ಕøತ ಉಪನಿಷತ್ತು ಮತ್ತು ಇತರ ಕೃತಿಗಳ ಅಧ್ಯಯನದಿಂದ ಬದುಕನ್ನು ವಿಕಾಸದತ್ತ ಕೊಂಡೊಯ್ಯುವ ಪ್ರಕ್ರಿಯೆಯನ್ನು ಕಾಣುತ್ತೇವೆ. ಸಮಾಜವು ಆಧುನಿಕತೆಯ ಕಡೆಗೆ ತೆರೆದುಕೊಳ್ಳುವ ಹೊತ್ತಿನಲ್ಲಿ ಇದು ಹಿಮ್ಮುಖ ಚಲನೆಯಂತೆ ಕಂಡರೂ ವ್ಯಕ್ತಿತ್ವ ವಿಕಾಸದ ದೃಷ್ಟಿಯಿಂದ ಇದು ಪ್ರಗತಿಪರ ಧೋರಣೆಯೇ ಆಗಿದೆ. ಆಧುನಿಕತೆ ಇರಲಿ, ಸಂಪ್ರದಾಯ ನಿಷ್ಠೆಯೇ ಇರಲಿ ಯಾವುದೇ ರೀತಿಯ ಪಲ್ಲಟಗಳಿಗೆ ಒಬ್ಬ ವ್ಯಕ್ತಿ ಅಥವಾ ಒಂದು ಅಂಶ ನಿರ್ದಿಷ್ಟವಾಗಿ ಕಾರಣವಲ್ಲದಿರಬಹುದು. ಆದರೂ ಒಂದು ರೀತಿಯ ಪ್ರಭಾವ ಮತ್ತು ಪ್ರೇರಣೆಯನ್ನು ಒಬ್ಬ ವ್ಯಕ್ತಿಯಲ್ಲಿ ಸಾಂಕೇತಿಕವಾಗಿ ಘನೀಕರಿಸಿ ನೋಡುವುದೂ ಅಷ್ಟೇ ಸಹಜ. ಹಾಗಾಗಿ ಧ್ಯಾನ ಅಧ್ಯಯನಗಳಿಂದ ಸುಖದ ಕ್ಷಣಿಕತೆಯನ್ನು ಅರಿತು ಮಾಗುತ್ತಾ ಹೋಗುವ ವಚ್ಚಕ್ಕನು ಕೇವಲ ವ್ಯಕ್ತಿಯಲ್ಲ. ಹೊಸ ವಿದ್ಯಮಾನ, ಬದಲಾವಣೆಗಳಿಗೆ ಪ್ರತೀಕ. ಅದರೆ ಅವಳ ಕಷ್ಟಗಳು ಅಲ್ಲಿಗೆ ಮುಗಿಯುವುದಿಲ್ಲ. ದೇಶ ವಿಭಜನೆಯ ಪರಿಣಾಮದ ರೂಪದಲ್ಲಿ ಅವುಗಳು ತಮ್ಮ ವಿರಾಟ್ ಸ್ವರೂಪವನ್ನು ತೋರಿಸುತ್ತವೆ.

ಆಧುನಿಕ ಭಾರತೀಯ ಇತಿಹಾಸದಲ್ಲಿ ದೇಶದ ವಿಭಜನೆಯು ಕಪ್ಪು ಚುಕ್ಕೆಯೇ ಸರಿ. ಅದರ ಪರಿಣಾಮಗಳು ವಾಸಿಯಾಗದ ಹುಣ್ಣುಗಳಂತೆ ಈಗಲೂ ಕಾಡುತ್ತವೆ. ದೇಶದ ಸ್ವಾತಂತ್ರ್ಯದ ಸಂಭ್ರಮವನ್ನು ಶಾಶ್ವತವಾಗಿ ಕಿತ್ತುಕೊಂಡ ನೋವು ಅದು. ಈ ನೋವು ಉತ್ತರ ಕನ್ನಡದ ಹಳ್ಳಿಗಳಿಗೂ ಬಾಧಿಸಿತ್ತು. ವಿಭಜನೆಯ ಕಾರಣದಿಂದ ಹುಟ್ಟಿದ ಘಟನೆಗಳು ಊಹೆಗೆ ನಿಲುಕದಷ್ಟು ಅರ್ಥಹೀನವೂ ಅಸಂಗತವೂ ಆಗಿದ್ದವು. ಹಿಂಸೆಗೆ ಕಾರಣವೇ ಇರಲಿಲ್ಲ. ಅಷ್ಟು ವರ್ಷ ಒಂದೇ ಹಳ್ಳಿಯಲ್ಲಿ, ಒಂದೇ ಊರಿನಲ್ಲಿ, ನೆರೆಹೊರೆಯವರಾಗಿ ಬಾಳುತ್ತಿದ್ದವರು ಇದ್ದಕ್ಕಿದ್ದಂತೆ ಸಮೂಹಸನ್ನಿಗೆ ಒಳಗಾಗಿ ದೊಡ್ಡ ಪ್ರಮಾಣದ ಲೂಟಿ, ಮಾನಭಂಗ, ಕೊಲೆ, ಸುಲಿಗೆಗೆ ಇಳಿದದ್ದು ಸುಲಭ ವ್ಯಾಖ್ಯಾನ, ವಿಶ್ಲೇಷಣೆಗಳಿಗೆ ಸಿಗುವಂಥದ್ದಲ್ಲ. ಅದು ಪರಕೀಯರು ನಡೆಸಿದ ದಾಳಿಯಲ್ಲ. ಒಟ್ಟಾಗಿ ಬದುಕಿದ್ದ ಜನ ಸಮೂಹಗಳಲ್ಲಿ ದ್ವೇಷ ಹಿಂಸೆಗಳು ಇಷ್ಟೊಂದು ಪ್ರಮಾಣದಲ್ಲಿ ಸುಪ್ತವಾಗಿದ್ದವೇ ಎಂದು ದಿಗ್ಭ್ರಾಂತರಾಗುವಂತೆ ಈ ಕಥನಗಳಿಗೆ ಎದುರಾಗುತ್ತೇವೆ. ಈ ಕಥನಲೋಕವನ್ನು ಪ್ರವೇಶಿಸುತ್ತಿದ್ದಂತೆ ಅಮಾಯಕರ ಚೀತ್ಕಾರ, ದಾಳಿಕೋರರ ಅಟ್ಟಹಾಸ, ಕೇಕೆಗಳ ಸದ್ದು ಕಿವಿಗಳನ್ನು ತುಂಬುತ್ತವೆ. ಹಲವು ಬಗೆಯ ಹಿಂಸೆಯ ದೃಶ್ಯಗಳು ಕಣ್ಣಿಗೆ ರಾಚುತ್ತವೆ. ನೆತ್ತರ ವಾಸನೆಯು ಮೂಗಿಗೆ ಅಡರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸತ್ಯಬೋಧರ ಹತ್ಯೆ ಮತ್ತು ಊರೊಳಗಿನ ಪ್ರಪಂಚವು ಹೊರಜಗತ್ತಿನ ಸೂಕ್ಷ್ಮರೂಪವಾಗಿ ಕಂಡುಬರುತ್ತದೆ. ಆ ಸಂದರ್ಭದಲ್ಲಿ ವಚ್ಚಕ್ಕನು ಹೆರಿಗೆ ನೋವಿನಿಂದ ನರಳುತ್ತಿರುವ ಮುಸ್ಲಿಂ ಹೆಂಗಸನ್ನು ಉಳಿಸಲು ಹೊರಡುವಾಗ ತನ್ನವರಿಂದಲೇ ವಿರೋಧವನ್ನು ಎದುರಿಸಬೇಕಾಗುತ್ತದೆ. ಆದರ್ಶ ಮತ್ತು ವಾಸ್ತವಗಳನ್ನು ಸಮತೋಲನಗೊಳಿಸಬೇಕಾದ ಇಕ್ಕಟ್ಟನ ಪ್ರಶ್ನೆಯನ್ನು ಆಕೆ ಜಾತ್ಯತೀತ ನೆಲೆಯಲ್ಲಿ ಎದುರಿಸುತ್ತಾಳೆ. ಶಾಂತಿಗೆ ಸಂಕೇತವಾದ ಹಕ್ಕಿಗಳ ಗುಂಪಿನೊಂದಿಗೆ ಇಡೀ ಪ್ರಕೃತಿಯೇ ಅವಳ ಜೊತೆಗೆ ಇದೆ. ಬಿಳಿ ಸೀರೆಯನ್ನುಟ್ಟುಕೊಂಡು ತನ್ನ ಕಾರ್ಯಕ್ಷೇತ್ರಕ್ಕೆ ಹೊರಡುವ ಆಕೆಯು ತಾಳ್ಮೆ, ಸಹಬಾಳ್ವೆ ಮತ್ತು ಶಾಂತಿಯ ಪ್ರತೀಕವಾಗಿ ಮೂಡಿ ಬರುತ್ತಾಳೆ. ದ್ವೇಷ, ಹಿಂಸೆ, ಶೋಷಣೆಗಳ ನಡುವೆಯೂ ಜೀವನ ಪ್ರವಾಹವು ಎಲ್ಲವನ್ನೂ ಅರಗಿಸಿಕೊಂಡು ಮುಂದುವರಿಯುವ ಪರಿಯನ್ನು ಕಾದಂಬರಿಯು ಹಲವು ವಿವರಗಳು ಮತ್ತು ಪಾತ್ರಗಳ ದಟ್ಟ ವಿನ್ಯಾಸದಲ್ಲಿ ಸೆರೆ ಹಿಡಿಯುತ್ತದೆ.

ಈ ಕಾದಂಬರಿಯು ಉತ್ತರ ಕನ್ನಡ ಜಿಲ್ಲೆಯ ಐನಾಪುರ ಎಂಬ ಸಣ್ಣ ಊರಿನಲ್ಲಿ ತನ್ನದೇ ಅದ ಕಟ್ಟು ಕಟ್ಟಳೆಗಳೊಂದಿಗೆ ಬದುಕುತ್ತಿರುವ ಬ್ರಾಹ್ಮಣ ಸಮುದಾಯದ ದೈನಂದಿನ ಜೀವನದ ಸುಖದುಃಖಗಳ, ಇಕ್ಕಟ್ಟು ಬಿಕ್ಕಟ್ಟುಗಳ ಚಿತ್ರಣ ಅಥವಾ ವಚ್ಚಕ್ಕನೆಂಬ ವಿಧವೆಯ ಕತೆಯಷ್ಟೇ ಅಲ್ಲ. ಬದುಕಿನಲ್ಲಿ ಅನಿರೀಕ್ಷಿತವಾಗಿ ಬರುವ ದುರಂತಗಳನ್ನು ಸವಾಲಾಗಿ ಸ್ವೀಕರಿಸಿ, ಅದರೊಂದಿಗೆ ಬೆಳೆಯುತ್ತಾ ಬೇರೂರುವ ಪ್ರಕ್ರಿಯೆಯು ಮಾಗುವಿಕೆಯ ಪರಿಪೂರ್ಣ ಅಭಿವ್ಯಕ್ತಿಯಾಗಿದೆ. ಮನುಷ್ಯ ಪ್ರಯತ್ನಗಳಲ್ಲಿ, ಸಾಧ್ಯತೆಗಳಲ್ಲಿ ಹೆಚ್ಚಿನ ನಂಬಿಕೆ ಬಂದಿದೆ. ಧರ್ಮವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ, ಮಾನವೀಯ ಮೌಲ್ಯಗಳ ಹುಡುಕಾಟಗಳಲ್ಲಿ ತನ್ನ ಸ್ವರೂಪವನ್ನು ಕಂಡುಕೊಂಡಿರುವ ಈ ಕಾದಂಬರಿಗೆ ಮಹಾಕಾವ್ಯದ ಬೀಸು ಮತ್ತು ಮಹತ್ವಾಕಾಂಕ್ಷೆಗಳು ಇವೆ. ಏಕಕಾಲದಲ್ಲಿ ವ್ಯಕ್ತಿ, ಕುಟುಂಬ, ಊರು ಮತ್ತು ರಾಷ್ಟ್ರವೊಂದರ ಕತೆಯನ್ನು ಹೇಳುವ ಈ ಕೃತಿಯ ಒಟ್ಟು ಬಂಧದಲ್ಲಿ ಎಲ್ಲ ಕತೆಗಳು ಒಂದಕ್ಕೊಂದು ಬೆಸೆದುಕೊಂಡು, ಒಂದು ನಿರ್ದಿಷ್ಟ ಕಾಲ ದೇಶದ ಸ್ವರೂಪವು ಅದರ ಎಲ್ಲ ಸಂಕೀರ್ಣತೆಯೊಂದಿಗೆ ನಮ್ಮೆದುರು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಪರಂಪರಾಗತ ಸಾಮಾಜಿಕ ಅವರಣವನ್ನು ನಿರ್ದಿಷ್ಟ ಐತಿಹಾಸಿಕ ಕಾಲಘಟ್ಟದಲ್ಲಿ ಪ್ರವೇಶಿಸುವ ಆಧ್ಯಾತ್ಮಿಕ ಪ್ರಜ್ಞೆ ವಚ್ಚಕ್ಕನ ರೂಪದಲ್ಲಿ ಮೂರ್ತವಾಗುತ್ತದೆ. ಈ ಚಿತ್ರಣವನ್ನು ಭಾರತದ ಇತಿಹಾಸದ ಮುಖ್ಯ ಕಾಲಾವಧಿಯ ವಿದ್ಯಮಾನಗಳ ಜೊತೆಯಲ್ಲಿ ಕಟ್ಟಿ ಕೊಟ್ಟಿರುವುದರಿಂದ ಈ ಕಾದಂಬರಿಯು ಸ್ಥಿರ, ನಿಶ್ಚಲ, ಮಾನವಶಾಸ್ತ್ರೀಯ ದಾಖಲೆಯಾಗಿಬಿಡುವ ಅಪಾಯದಿಂದ ತಪ್ಪಿಸಿಕೊಂಡಿದೆ. ಸೂಕ್ಷ್ಮವಾಗಿ ನೋಡಿದರೆ ಹೊಸ ಕಾಲದ ಭಾಷೆ, ಶಿಕ್ಷಣ ಮತ್ತು ಜೀವನರೀತಿಗಳು ಇವರ ಮೇಲೆ ಪ್ರಭಾವವನ್ನು ಬೀರದಿದ್ದರೂ ಬದುಕಿನ ಕಂಪನ- ಪಲ್ಲಟಗಳು, ಸಂಪ್ರದಾಯ ನಿಷ್ಠರಾಗಿದ್ದುಕೊಂಡೇ ಪ್ರತಿಕ್ರಿಯಿಸುವ ರೀತಿ, ಜಾತಿಧರ್ಮಗಳ ಮಿತಿಯನ್ನು ದಾಟುವ ವಿಧಾನಗಳು ಸ್ವಾತಂತ್ರ್ಯೋತ್ತರ ಭಾರತಕ್ಕೆ ಹೊಸ ಸಂದೇಶವನ್ನು ನೀಡುತ್ತವೆ. ಈ ಕಾದಂಬರಿಯಲ್ಲಿ ಬರುವ ಹಿಂದೂ ಮುಸ್ಲಿಂ ಸಮುದಾಯಗಳು ಪರಸ್ಪರ ಭಿನ್ನವಾಗಿದ್ದರೂ ಒಂದನ್ನೊಂದು ಅವಲಂಬಿಸಿ ಬದುಕುತ್ತಿರುವ ಸಂಕೀರ್ಣ ವಿನ್ಯಾಸಗಳನ್ನು ಹೊಂದಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಇವರೆಲ್ಲ ಪರಸ್ಪರ ಪ್ರೀತಿ ದ್ವೇಷಗಳ ಸಂಬಂಧದಲ್ಲಿ ಅನಿವಾರ್ಯವೆಂಬಂತೆ ಒಟ್ಟು ಬದುಕೊಂದನ್ನು ಬದುಕುತ್ತಿದ್ದಾರೆ. ಎಲ್ಲ ಬಗೆಯ ಕ್ರೌರ್ಯ, ಸಾವು ನೋವುಗಳ ನಡುವೆಯೂ ಮಾನವೀಯತೆಯನ್ನು ಕಾಣಬಹುದು. ಕುಟುಂಬದೊಳಗಿನ ಇಕ್ಕಟ್ಟುಗಳನ್ನೂ, ಅಶಾಂತ ಜ್ವಾಲಾಮುಖಿಗಳನ್ನೂ ಅಷ್ಟೇ ಸಂಕೀರ್ಣವಾಗಿ ನಮ್ಮ ಮುಂದಿಡುವ ಈ ಕಾದಂಬರಿಯು ಕೇವಲ ಒಂದು ಕುಟುಂಬ ಮತ್ತು ರಾಷ್ಟ್ರದ ಕತೆಯನ್ನು ಮಾತ್ರವಲ್ಲ, ಒಂದು ಕಾಲಾವಧಿಯ, ಒಂದು ಮನಸ್ಥಿತಿಯ ಅಧ್ಯಯನವನ್ನು ಮಾಡುತ್ತದೆ. ಇಲ್ಲಿ ಹೆಣ್ಣು ಅಬಲೆಯಂತೆ, ಶೋಷಿತೆಯಂತೆ ಏಕ ಆಯಾಮದಲ್ಲಿ ಸೃಷ್ಟಿಗೊಂಡಿಲ್ಲ. ಕಥನದ ವ್ಯಾಪ್ತಿಯು ವಿಧವೆಯ ಸ್ಥಿತಿಗತಿಗಳ, ಚಿಂತನೆಗಳ ಆಚೆಗೆ ವ್ಯಾಪಿಸಿಕೊಂಡು, ಜಾತಿಧರ್ಮಗಳನ್ನು ಮೀರಿದ ಸಹಬಾಳ್ವೆಯನ್ನು ನೆಚ್ಚಿಕೊಳ್ಳುತ್ತದೆ. ಇದು ಕಾಲ ದೇಶಗಳಿಗೆ ಅತೀತವಾದ ಸ್ಥಿತಿಗತಿಗಳಿಗೆ ಲೇಖಕರ ಪ್ರತಿಕ್ರಿಯೆಯೂ ಹೌದು; ಪ್ರತಿಸ್ಪಂದನೆಯೂ ಹೌದು.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter