ತಿರುವು 

ಮನೆಯ ಮುಂಭಾಗದ ಮೆಟ್ಟಿಲ ಬಳಿ ಬೆಳೆದಿದ್ದ ಮಲ್ಲಿಗೆಯ ಗಿಡಕ್ಕೆ ಅಂಜಲಿ ಎಂದಿನಂತೆ ಮುಂಜಾನೆ ನೀರೆರೆಯುತ್ತಿದ್ದಳು. ಕಾಂಪೌಂಡಿಗೆ ಹೊಂದಿಕೊಂಡು ಘನವಾಗಿ ಬೆಳೆದುನಿಂತ ಬೇವಿನಮರದ ದಟ್ಟ ಹಸಿರೆಲೆಗಳ ಎಡೆಯಿಂದ ತೂರಿಬಂದ ಬಿಸಿಲಕೋಲುಗಳು ಅಂಗಳದಲ್ಲೆಲ್ಲ ಹರಡಿ ಮಿದುವಾಗಿ ಅಂಜಲಿಯ ಕೆನ್ನೆಗೆ ಮುತ್ತಿಟ್ಟು ಬಿಸುಪಿನ ರಂಗೇರಿಸಿದ್ದವು. ಸೊಂಪಾಗಿ ತಾರಸಿಯವರೆಗೂ ಬೆಳೆದಿದ್ದ ಮಲ್ಲಿಗೆಯ ಗಿಡಕ್ಕೆ ಈಗ ಅವಳ ದಾಂಪತ್ಯದ ಹರೆಯ. ಮದುವೆಯಾಗಿ ಈ ಮನೆಗೆ ಬಂದ ಹೊಸದರಲ್ಲಿ ಹುರುಪಿನಿಂದ ನೆಟ್ಟ ಪುಟ್ಟ ಗಿಡ ಈಗ ಎತ್ತರಕ್ಕೆ ಬೆಳೆದು ಮೈತುಂಬ ಹೂಬಿಡುತ್ತದೆ. ವರ್ಷವಿಡೀ ಬಿಡುವ ಹೂವು ಮನೆಯ ಒಳಹೊರಗೆ ಆಡುವ ಪಿಸುಗಾಳಿಯಲ್ಲಿ ಘಮದ ಅಮಲನ್ನು ಹೊತ್ತು ಮತ್ತೇರಿಸುತ್ತದೆ. ಅಂಜಲಿಗೆ ಈ ಮಲ್ಲಿಗೆ ಗಿಡದ ಸಾಂಗತ್ಯ ಖಾಸಗಿ ಬದುಕಿನ ಒಂದು ಭಾಗವಾಗಿ ಬಿಟ್ಟಿದೆ. ತನ್ನ ಕಷ್ಟ ಸುಖಗಳಿಗೆ ಸ್ಪಂದಿಸುವಂತೆ ಕಾಣುವ, ಮೈಮನಸ್ಸುಗಳನ್ನು ಉಲ್ಲಸಿತಗೊಳಿಸುವ ಬಳ್ಳಿಯನ್ನು ತಡವಿದಾಗಲೆಲ್ಲ  ಅವಳಲ್ಲಿ ಎಲ್ಲಿಲ್ಲದ ಸಾಂತ್ವನ. ಅದರ ಬಳಿ ತನ್ನೆಲ್ಲ ನೋವನ್ನು ಮೌನವಾಗಿ ದಾಟಿಸುವ ಸ್ಪರ್ಶಭಾವ.

         ಅಂಗಳದ ಮೂಲೆಯಲ್ಲಿ ನಿಂತು ಎತ್ತಲೋ ನೋಡುತ್ತ ಸಿಗರೇಟು ಸೇದುತ್ತಿದ್ದ ಅವಿನಾಶ ಅವಳಿಗೆ ಬೇರೆಯದೇ ಆದ ವ್ಯಕ್ತಿಯಂತೆ ಕಾಣಿಸಿದ. ಅವನ ನಿಂತ ನಿಲುವು, ಸಿಗರೇಟಿನ ಹೊಗೆಯಂತೆ ಎಲ್ಲಿಯೋ ತೇಲುತ್ತಿರಬಹುದಾದ ಅವನ ಮನಸ್ಸು ಅವಳನ್ನು ಒಂದಿಷ್ಟು ಹೊತ್ತು ಯೋಚಿಸುವಂತೆ ಮಾಡಿತು. ಈಗ ಅವನ ವಿಚಾರಗಳು ವಿಕಾರಗಳ ಪರಿಕಲ್ಪನೆಯಲ್ಲಿಯೇ ತೇಲುತ್ತಿರಬೇಕು. ಅವನೊಳಗೆ ಇಲ್ಲಿ ರೂಪುಗೊಳ್ಳುವ ವಿಕಾರತೆ ರಾತ್ರಿಯಾದಂತೆ ಮಾತುಗಳ ಮೂಲಕ ಜೀವ ಪಡೆಯುತ್ತಿರಬೇಕು ಅನಿಸಿತು. ಆದರೆ ಅವನ ವಿಕೃತ ವರ್ತನೆ ಫಸಲೊಡೆಯುವ ಭೂಮಿಕೆಯ ಬಗ್ಗೆ ಅವಳಿಗೆ ಸುಳಿವೇ ಸಿಗುವುದಿಲ್ಲ. ದಿನದ ಹೆಚ್ಚಿನ ಹೊತ್ತು ಅವನಿರುತ್ತಿದ್ದುದು ಗೆಳೆಯರ ಸಾಂಗತ್ಯದಲ್ಲಿ. ಪ್ರಭಾವಿ ರಾಜಕಾರಣಿಯೊಬ್ಬರ ವರ್ತುಲದಲ್ಲಿ ಗುರುತಿಸಿಕೊಂಡ ಅವನ ಗೆಳೆಯರ ಬಳಗ ದೊಡ್ಡದೆ ಇದೆ. ಅಲ್ಲಿ ನಡೆಯುವ ಸಂಗತಿಗಳು, ತೆರೆಮರೆಯ ಆಟಗಳು ಸುದ್ದಿಗಳಾಗಿ ಅವಳ ಕಿವಿಯವರೆಗೂ ತಲುಪಿವೆ. ಕೆಟ್ಟಸಂಗದಲ್ಲಿ ಮನಸ್ಸು ಕೆಡಲು ಎಷ್ಟು ಹೊತ್ತು ಬೇಕು. ಕೆಲವೊಮ್ಮೆ ಇವೆಲ್ಲಕ್ಕೂ ಪೂರಕವಾಗಿ ಅವನ ತಿಂಡಿ ತೀರ್ಥ ಎಲ್ಲವೂ ಅಲ್ಲಿ ಯಾವ ಅಡ್ಡಿ ಆತಂಕಗಳಿಲ್ಲದೆ ಸಾಗುತ್ತದೆ. ಹಾಗಂತ ತಾನು ಯಾವತ್ತೂ ಅವಿನಾಶನ ನಿಯತ್ತನ್ನು ಸಂಶಯದ ಒರೆಗೆ ಹಚ್ಚಿರಲಿಲ್ಲ. ಕಾರಣ ಮೊನ್ನೆ ಮೊನ್ನೆಯ ತನಕ ಅವನ ನಡೆನುಡಿಯಲ್ಲಿ ಎತ್ತಿ ಆಡುವ ಯಾವ ಲೋಪವೂ ಕಂಡಿರಲಿಲ್ಲ. ಕೆಲಸವೂ ಇಲ್ಲದೆ ಹೀಗೆ ದೇವರಿಗೆ ಬಿಟ್ಟ ಗೂಳಿಯಂತೆ ಅಡ್ಡಾಡುತ್ತ ಮನಸ್ಸನ್ನು ಬೇಡದ ವಿಷಯಗಳಿಗೆ ತೆರೆದುಕೊಳ್ಳುತ್ತಾ ಹೋದರೆ ಎಷ್ಟು ದಿನ ಅದು ತನ್ನತನವನ್ನು ಉಳಿಸಿಕೊಂಡೀತು.    

          ಯೋಚಿಸುವುದೊಂದನ್ನು ಬಿಟ್ಟರೆ ಈಗ ಅವಳಲ್ಲಿ ಮತ್ತೇನು ಉಳಿದಿರಲಿಲ್ಲ. ಅಷ್ಟು ದೂರದಲ್ಲಿ ಉಗುಳುತ್ತಿದ್ದ ಸಿಗರೇಟಿನ ಹೊಗೆವಾಸನೆ ಅಲ್ಲೆಲ್ಲ ತುಂಬಿಕೊಂಡಿತು. ಸುತ್ತಲ ಪರಿಸರವನ್ನು ಕಲುಷಿತಗೊಳಿಸಿದ ಆ ಘಾಟು ಸಹಿಸಲಸಾಧ್ಯವಾಗಿದ್ದರೂ ಅವಳು ಅದಕ್ಕೆ ಅರಿವಿಲ್ಲದೆ ಯಾವತ್ತೋ ಒಗ್ಗಿಯಾಗಿತ್ತು. ಸಂಜೆ ಕತ್ತಲಾವರಿಸುತ್ತಿದ್ದಂತೆ ಬಣ್ಣ ಬದಲಿಸುವ ಅವನ ನಡೆ ಉತ್ತರವಿಲ್ಲದ ಹತ್ತಾರು ಪ್ರಶ್ನೆಗಳನ್ನು ಅವಳಲ್ಲಿ ದಿನಾ ಹುಟ್ಟುಹಾಕುತ್ತಿದ್ದವು. ಅದಿಲ್ಲವಾದರೆ ಅಮಾಯಕನಂತೆ ನಿನ್ನೆ ಏನೂ ನಡೆದೇ ಇಲ್ಲವೇನು ಅನ್ನುವ ಪರಿಯಲ್ಲಿ ಹೀಗೆ ನಿರಾಳವಾಗಿ ಇರುವುದಕ್ಕೆ ಹೇಗೆ ಸಾಧ್ಯ. ರಾತ್ರಿಯಾಯಿತೆಂದರೆ ನರಕವಾಗುವ ತನ್ನ ಜೀವನದ ಅನುಕ್ಷಣಗಳ ಬಗ್ಗೆ ಅವಳಿಗೆ ದುಗುಡವಿದೆ. ದಿನವೂ ನೋವಿನಿಂದ ನಲುಗಿ ಹತಾಶೆಯ ಚಿಪ್ಪಿನೊಳಗೆ ಮುದುಡುವ ಅಂಜಲಿ ಬದುಕಿಗೆ ಜೀವ ತುಂಬುವ ಬಣ್ಣದ ಕನಸು ಕಾಣುವುದನ್ನು ಎಂದೋ ಬಿಟ್ಟಿದ್ದಾಳೆ. ಮತ್ತದೇ ಸಂಜೆ… ಅದೇ ಗೋಳು ಬಿಟ್ಟರೆ ಮತ್ತ್ಯಾವ ಲವಲವಿಕೆಯೂ ಅವಳ ಬಳಿ ಸುಳಿಯುವುದಿಲ್ಲ.

         ಈಗೀಗ ಹತ್ತಿರ ಹತ್ತಿರ ಐದು ವರ್ಷವಾಯಿತು. ದಿನಾ ಸಂಜೆ ಕಂಠಮಟ್ಟ ಏರಿಸಿಕೊಂಡು ಬರುವ ಅವಿನಾಶ ಮನೆಯೊಳಗೆ ಕಾಲಿಟ್ಟರೆ ಸಾಕು ಅಂಜಲಿಯ ಹೃದಯ ಭಯದಿಂದ ಕಂಪಿಸುತ್ತದೆ. ಮನೆಯೊಳಗಿನ ವಾತಾವರಣ ಭೀಕರತೆಯನ್ನು ಉಸಿರಾಡುತ್ತದೆ. ತನ್ನಷ್ಟು ಎತ್ತರಕ್ಕೆ ಬೆಳೆದುನಿಂತ ಮಗ, ಇತ್ತೀಚೆಗೆ ಮನೆತುಂಬಿಸಿಕೊಂಡ ಸೊಸೆ ಆ ಸಮಯದಲ್ಲಿ ಅವರ ಗಣನೆಗೆ ಬರುವುದೇ ಇಲ್ಲ. ಆ ಅಮಲಿನಲ್ಲಿ ಅವರಿಗೆ ತಾನು ಏನು ಮಾತಾನಾಡುತ್ತಿದ್ದೇನೆ ಅನ್ನುವ ಅರಿವಾದರೂ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಿತ್ಯವೂ ಅವರ ಆರೋಪಗಳು, ಸಂಶಯಗಳ ಕೊಳಕು ಮಾತುಗಳು ತನ್ನ ಸುತ್ತಲೂ ಗಿರಕಿಹೊಡೆಯುವುದನ್ನು ಕಂಡರೆ ಅವನ ಮನದಾಳದಲ್ಲಿ ಸ್ರವಿಸುವ ವಿಷದ ಅನುಭವ ಅಂಜಲಿಗಾಗುತ್ತದೆ. ಅವಿನಾಶನ ಮಾತುಗಳು ತೂಕತಪ್ಪಿದಂತೆ ಮಗ ಸುಮೇಶ್ ಸದ್ದಿಲ್ಲದೆ ತನ್ನ ಕೋಣೆ ಸೇರಿ ಬಾಗಿಲಿಕ್ಕುತ್ತಾನೆ. ಸೊಸೆ ಹೃತಿಕಾ ಅಸಹನೆಯಿಂದ ತುಚ್ಛೀಕಾರವಾಗಿ ಮಾವನೆಡೆಗೆ ಕಣ್ಣುಬಿಡುತ್ತಾಳೆ.

          ತಂದೆಯ ಈ ನಡೆ ಮಗ ಸುಮೇಶನಿಗೆ ಸ್ವಲ್ಪವೂ ಹಿಡಿಸುವುದಿಲ್ಲ. ಹಾಗಂತ ಎದುರು ನಿಂತು ವಾದಿಸುವ ಎದೆಗಾರಿಕೆ ಅವನಲ್ಲಿಲ್ಲ. ಹಿಂದೊಮ್ಮೆ ಈ ವಿಷಯದಲ್ಲಿ ನಡುವೆ ಬಾಯಿಹಾಕಿದಾಗ ಅವಿನಾಶ ಮತ್ತಷ್ಟು ವ್ಯಗ್ರನಾಗಿದ್ದ. ಅಂದಿನಿಂದ ತಂದೆಯನ್ನು ಇಂತಹ ಸಂದರ್ಭದಲ್ಲಿ ಪ್ರಶ್ನಿಸುವುದನ್ನು ಬಿಟ್ಟುಬಿಟ್ಟಿದ್ದ. ಹಗಲು ಹೊತ್ತಿನಲ್ಲಿ ಮಾತಿಲ್ಲದೆ ತಣ್ಣಗೆ ಕೂತ ಅವಿನಾಶನನ್ನು ಸುಮೇಶ್ ಮಾತಿಗೆಳೆದು ರಾತ್ರಿಯ ಘಟನೆಗಳ ಬಗ್ಗೆ ಅಸಮಾಧಾನ ಹೊರಹಾಕಿದರೂ ಆತನದ್ದು ‘ನಿನಗಿದೆಲ್ಲ ಗೊತ್ತಿಲ್ಲ. ಸುಮ್ಮನಿರು’ ಅನ್ನುವ ದುಡುಕಿನ ಉತ್ತರ. ತಾಯಿಯ ಶೀಲದ ಬಗ್ಗೆ ಯಾವತ್ತೂ ಇಲ್ಲದ ಅನುಮಾನ ತಂದೆಯಲ್ಲಿ ಇದ್ದಕ್ಕಿದ್ದ ಹಾಗೆ ಒಮ್ಮೆಲೇ ಹೀಗೆ ಹುಟ್ಟಿದ್ದಾದರೂ ಹೇಗೆ ಅನ್ನುವುದು ಅವನಿಗೆ ಅರ್ಥವಾಗುವುದಿಲ್ಲ. ತಾಯಿಯ ಬಗ್ಗೆ ಅವನಿಗೆ ಅಪಾರವಾದ ಮಮತೆಯಿದೆ. ಅವಳ ಚಾರಿತ್ರ್ಯದ ಬಗ್ಗೆ ನಂಬಿಕೆಯಿದೆ. ಹೀಗಾಗಿ ತಂದೆಯ ಅನೀತಿಯ ಬೈಗುಳಗಳು ಅವನನ್ನು ಘಾಸಿಗೊಳಿಸುತ್ತಿದ್ದರೂ ಅದು ಸತ್ಯವಲ್ಲ ಎನ್ನುವ ಸಮಾಧಾನದ ಅರಿವಿದೆ. ಆದರೆ ಅವೆಲ್ಲವನ್ನೂ ಕೇಳಿಸಿಕೊಂಡು ಸುಮ್ಮನೆ ಕೂಡುವ ತಾಯಿಯ ಬಗ್ಗೆ ಸಹಿಸಲಾಗದ ಅಪಾರ ನೋವಿದೆ. ಈ ವಯಸ್ಸಿನಲ್ಲೂ ಅಪ್ರತಿಮ ಚೆಲುವನ್ನು ಹೊಂದಿದ ತಾಯಿಗೆ ರೂಪವೇ ಮಾರಕವಾಗಿರಬಹುದೇ ಎನ್ನುವ ಅನುಮಾನ ಅವನನ್ನು ಕಾಡಿದ್ದಿದೆ.  

          ಇವೆಲ್ಲದರ ಮಧ್ಯೆ ತಪ್ಪಿಸಿಕೊಂಡು ಹೋಗಲಾರದ ಸ್ಥಿತಿ ಅಂಜಲಿಯದ್ದು. ಡ್ರಾಯಿಂಗ್ರೂಂ ನಲ್ಲಿ ಕೂತ ಅವಳು ಅವನ ಏರುದನಿ ಹೊರಗೆ ಕೇಳಿಸದಿರಲಿ ಅಂತ ದೊಡ್ದದಾಗಿ ಟಿವಿ ಹಾಕಿಕೊಂಡು ಎಲ್ಲದಕ್ಕೂ ಕಿವುಡಾಗುತ್ತಾಳೆ. ಅಲ್ಲಿ ಅವನು ತನ್ನನ್ನು ಕೆಕ್ಕರಿಸಿ ನೋಡುವ ಪರಿ, ಕಣ್ಣುಗಳಲ್ಲಿ ಉಗುಳುವ ಸಿಟ್ಟು ಎಲ್ಲವೂ ಮಾತಿನಲ್ಲಿ ಹೊರಬರುತ್ತದೆ. ಬಾಯಿ ತೆರೆದರೆ ಸಾಕು ಬರುವ ಅಶ್ಲೀಲ ಬೈಗಳು, ಮೈಮೇಲೆ ಮುಳ್ಳೇಳುವಂತಿರುವ ಅಸಹ್ಯ ಪದಗಳು, ಕಂಡವರ ಜೊತೆಯಲ್ಲೆಲ್ಲ ಹೆಂಡತಿಯನ್ನು ಸೆರಗುಹಾಸಿ ಆಡುವ ಹೇಸಿಗೆ ಬರಿಸುವ ಮಾತುಗಳನ್ನು ಕೇಳಿ ಕೇಳಿ ಅವಳು ಜಡ್ಡುಗಟ್ಟಿಹೋಗಿದ್ದಾಳೆ. ಅವಳ ಚಾರಿತ್ರ್ಯವನ್ನು ಸೀಳಿ ಸಾಗುವ ಶೂಲದಂತಹ ಅವನ ಮಾತಿನ ಇರಿತ ಅವಳೆದೆಯಲ್ಲಿ ಮಾಸದ ನೋವಿನ ಗಾಯವನ್ನು ಉಳಿಸಿದೆ.  ದಾಂಪತ್ಯದ ಹಾದಿಯಲ್ಲಿ ಅರಳಬೇಕಾದ ನವಿರಾದ ಭಾವಗಳು ಈಗ ಅವಳಲ್ಲಿ ಕಮರಿಹೋಗಿವೆ. ತನ್ನ ಮಾನವನ್ನು ಮಾತಿನಲ್ಲಿ ಹರಾಜುಹಾಕುತ್ತ ತನ್ನನ್ನು ಕೀಳಾಗಿ ಪರಿಭಾವಿಸುವ ಅವನ ವಿಕೃತಿಗೆ ಎದುರಾಡಿದರೆ ಸಾಕು ಕೆರಳಿ ಕೆಂಡವಾಗುತ್ತಾನೆ. ಕುಡಿದ ಅಮಲಿನಲ್ಲಿ ಮುಖ ಮೈ ನೋಡದೆ ತದುಕುತ್ತಾನೆ. ಹೀಗಾಗಿ ಅವಳು ಈಗ ಎಲ್ಲವನ್ನೂ ಸಹಿಸುತ್ತ ಮೌನಕ್ಕೆ ಶರಣಾಗಿದ್ದಾಳೆ. ಅನುದಿನದ ಈ ಪರಿಸ್ಥಿತಿಗೆ ಅನಿವಾರ್ಯವಾಗಿ ಹೊಂದಿಕೊಂಡಂತೆ ಕಂಡರೂ ಅವಳೊಳಗಿನ ನೋವಿನ ಜ್ವಾಲಾಮುಖಿ ಕುದಿಯುವ ಎಸರಾಗುತ್ತಿದೆ.

          ತನ್ನ ಬಗ್ಗೆ ಗಂಡ ಈ ರೀತಿಯಾಗಿ ನಡೆದುಕೊಳ್ಳುವ ನೋವಿಗಿಂತ ಬೆಳೆದುನಿಂತ ಮಗ ಮತ್ತು ಈಗ ಮನೆಗೆ ಹೊಸತಾಗಿ ಬಂದ ಸೊಸೆ ತನ್ನನ್ನು ಯಾವ ರೀತಿಯಲ್ಲಿ ಸ್ವೀಕರಿಸಿರಬಹುದು ಎನ್ನುವ ಚಿಂತೆ ಅವಳನ್ನು ಇನ್ನಿಲ್ಲದಂತೆ ಕಾಡುತ್ತದೆ. ತನ್ನೆಲ್ಲ ಸಂಯಮ, ಶೀಲವನ್ನು ಜತನದಿಂದ ಕಾಪಾಡಿಕೊಂಡರೂ ಗಂಡನ ಆರೋಪಗಳಿಂದಾಗಿ ಅವರೆದುರು ಎಲ್ಲಿ ಸಣ್ಣವಳಾಗುತ್ತಿದ್ದೇನೇನೋ ಎನ್ನುವ ಅಳುಕು ಅವಳಲ್ಲಿ. ಆಡಲು ಬಾರದ ಈ ಚಿಂತೆ ಅವಳನ್ನು ಇನ್ನಷ್ಟು ಹಿಂಡುತ್ತದೆ. ಗಂಡನ ಹೊಲಸು ಮಾತುಗಳಿಗೆ ತನ್ನಲ್ಲಿರುವ ದೋಷವಾದರೂ ಏನು ಅಂತ ಎಷ್ಟು ಯೋಚಿಸಿದರೂ ಅವಳಿಗೆ ಯಾವ ಕಾರಣವೂ ಹೊಳೆಯುವುದಿಲ್ಲ. ಇತ್ತೀಚೆಗೆ ತಾನು ಬ್ಯಾಂಕಿಗೆ ಹೊರಡುವಾಗ ಅವನು ನೋಡುವ ವ್ಯಂಗಭರಿತ ನೋಟ, ಮಾತಿಲ್ಲದ ಆ  ನೋಟದ ಇರಿತದಲ್ಲಿ ಲೆಕ್ಕಾಚಾರಕ್ಕೆ ಸಿಗದ ಅವನ ಸಂಶಯ ತನ್ನನ್ನು ಪಾತಾಳಕ್ಕೆ ತಳ್ಳುತ್ತದೆ. ಹಾಗೆಂದು ತಾನೇನು ಈಗ ವಿಶೇಷವಾಗಿ ಸಿಂಗರಿಸಿಕೊಂಡು ಹೋಗುವುದಿಲ್ಲ. ಎಂದಿನಂತೆ ಉಡುವ ಮೈತುಂಬ ಉಬ್ಬಿನಿಲ್ಲುವ ಕಾಟನ್ ಸೀರೆ, ದುಂಡನೆಯ ಮುಖಕ್ಕೆ ತೆಳುವಾಗಿ ಲೇಪಿಸುವ ಸುಗಂಧಭರಿತ ಕ್ರೀಮ್, ಹಣೆಗೆ ಯಾವತ್ತೂ ಅಂಟಿಸುವ ಕೆಂಪನೆಯ ಟಿಕ್ಲಿ, ತುಟಿಯ ಮೇಲೊಂದಿಷ್ಟು ತೆಳು ಲಿಪ್ಸ್ಟಿಮಕ್, ಹಿತವೆನಿಸುವ ರೀತಿಯ ಕೇಶಾಲಂಕಾರ, ಸೀರೆಯ ಮೇಲೆ ಅಲ್ಲಿಲ್ಲಿ ಸಿಂಪಡಿಸುವ ಡಿಯೋಡ್ರೆಂಡ್ ಬಿಟ್ಟರೆ ಮತ್ತೇನು ಅಲಂಕಾರ ತನಗೆ ಬೇಕಿಲ್ಲ. ಇಷ್ಟರಲ್ಲೇ ತನ್ನ ಅಂದ ಎದ್ದು ಕಾಣುವಂತಿದ್ದರೆ ಅದರಲ್ಲಿ ತನ್ನ ತಪ್ಪೇನಿದೆ. ಕಂಡು ಕರುಬಿದ ಯಾರಾದರೂ ಚುಚ್ಚಿಕೊಟ್ಟ ಮಾತಿಗೆ ಇವನೆಲ್ಲಿ  ಹೀಗೆ ಹಿತ್ತಾಳೆಯ ಕಿವಿಯಾದನೆ ಅನ್ನುವ ಗುಮಾನಿಯೂ ಬರುತ್ತದೆ. ಯಾವುದಕ್ಕೂ ಪುರಾವೆಯ ಕೊರತೆ.

          ಮೊದಲಿನಿಂದಲೂ ಅಲಂಕಾರದಲ್ಲಿ ಒಂದಿಷ್ಟು ಹೆಚ್ಚೇ ಅನ್ನಬಹುದಾದ ಆಸಕ್ತಿಯನ್ನು ಬೆಳೆಸಿಕೊಂಡವಳು ತಾನು. ಮದುವೆಯಾದ ಹೊಸದರಲ್ಲಿ ತಾನು ಸಿಂಗರಿಸಿ ಹೊರಬರುವುದನ್ನೇ ಕಾಯುತ್ತಿದ್ದ ಅವಿನಾಶ ಮೆಚ್ಚುಗೆಯಿಂದ ಅದೆಷ್ಟು ಸಾರಿ ಬರಸೆಳೆದು ತನ್ನನ್ನು ಅಪ್ಪಿಕೊಂಡಿರಲಿಲ್ಲ. ತುಟಿಯ ಮೇಲಿನ ತೆಳುರಂಗು ಮಾಸಿ ಕೆಂಪೇರುವಂತೆ ಮಾಡಿರಲಿಲ್ಲ. ಹಾಗೆ ನೋಡಿದರೆ ತನ್ನ ಸಿಂಗಾರಕ್ಕೆಲ್ಲ ಒತ್ತಾಸೆಯಾಗಿ ನಿಂತು ಹುರಿದುಂಬಿಸಿದವನೇ ಅವನು. ಬ್ಯಾಂಕಿಗೆ ಹೊರಡುವಾಗ ತನ್ನನ್ನು ಪೂರ್ತಿಯಾಗಿ ಕಣ್ತುಂಬಿಕೊಳ್ಳುತ್ತಿದ್ದ ಅವನ ಕಣ್ಣಲ್ಲಿ ಪ್ರಶಂಸೆಯ ಹೊಳಪಿರುತ್ತಿತ್ತು. ಅವನಲ್ಲಿ ಆಗ ಕಾಡದ ತನ್ನ ಶೀಲದ ಚಿಂತೆ  ಈಗೇಕೆ ವಕ್ರತೆಯನ್ನು ತುಂಬಿಸಿಕೊಂಡಿದೆ? ಗೆಳೆಯರ ಸಹವಾಸವೋ ಇಲ್ಲಾ ಈಗಿನ ಸಮಾಜದಲ್ಲಿ ಮುಚ್ಚುಮರೆಯಿಲ್ಲದೆ ನಡೆಯುವ ಅನೈತಿಕ ಸಂಬಂಧಗಳ ಸಂಶಯದ ವಾಸನೆಯೋ ಒಟ್ಟಾಗಿ ತನ್ನನ್ನು ವೇಶ್ಯೆಯೊಬ್ಬಳ ನೆಲೆಯಲ್ಲಿ ಕಂಡರಿಸಿದ್ದನ್ನು ಅವಳಿಂದ ಜೀರ್ಣಿಸಿಕೊಳ್ಳಲಾಗುತ್ತಿಲ್ಲ.  

         ಅವಿನಾಶ ಮೊದಲು ಹೀಗಿರಲಿಲ್ಲ. ತಮ್ಮಿಬ್ಬರ ಪರಿಚಯದ ಹೊಸದರಲ್ಲಿ ಅವನೊಳಗಿನ ಅವಿನಾಶ ಬೇರೆಯೇ ಆಗಿದ್ದ. ಸ್ಫುರದ್ರೂಪಿಯಾಗಿದ್ದಅವನ ನಿಲುವಿನಲ್ಲೇ ಒಲವಿನ ನೆರಳಿತ್ತು. ಮುಖ ತುಂಬ ನಗು, ನಗುವಿನಲ್ಲೇ ಮೋಡಿಯ ಮಾತು, ಯಾರಿಗೂ ನೋವುಣಿಸದಂತಹ ಚರ್ಯೆ ಅವನ ವ್ಯಕ್ತಿತ್ವದ ಹೆಗ್ಗುರುತುಗಳಾಗಿದ್ದವು. ಹೀಗಾಗಿ ಅಲ್ಲವೇ ಆಗ ಆತನ ಮಾತು, ನಡೆನುಡಿಯಲ್ಲಿ ಇರುತ್ತಿದ್ದ ಆತ್ಮೀಯತೆ, ಪ್ರೀತಿಯ ಆಸರೆ, ಒಡನಾಟದಲ್ಲಿ ಸಿಗುತ್ತಿದ್ದ ಭದ್ರತೆಯ ಭಾವ ತನ್ನೊಳಗೆ ಬೇರುಬಿಟ್ಟು ಬದುಕಿಗೆ ಬೇರೆಯದೇ ಆದ ಬಣ್ಣವನ್ನು ಬಳಿದಿದ್ದು. ಅಲ್ಲಿ ಪ್ರತಿಕ್ಷಣವೂ ಸಂಭ್ರಮದ ಜಿನುಗಿರುತ್ತಿತ್ತು. ಅಂತರ್ಜಾತೀಯ ವಿವಾಹವಾದರೂ ಎಲ್ಲೂ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುವ ಪರಸ್ಪರ ಭರವಸೆಯ ಬಳ್ಳಿ ತಮ್ಮಿಬ್ಬರನ್ನು ಒಂದಾಗಿ ಸುತ್ತಿಕೊಂಡು ಬೆಳೆದಿತ್ತು. ಬದುಕು ಎಷ್ಟೊಂದು ಸುಂದರ ಅಂದುಕೊಂಡವಳಿಗೆ ಅದರ ಇನ್ನೊಂದು ಮುಖದ ಅರಿವೇ ಇರಲಿಲ್ಲ.

          ಬ್ಯಾಂಕ್‍ ಶಾಖೆಯೊಂದರಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಾಗ ಅವಿನಾಶನ ಬಾಡಿಗೆಯ ಮನೆಯಲ್ಲೇ ಅಂಜಲಿ ತಳವೂರಿದ್ದಳು. ಅವಿನಾಶ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಪದವೀಧರನಾದ ಅವನು ಕೆಲಸಕ್ಕೆ ಸೇರಿ ಸಂಪಾದಿಸುವ ತುರ್ತು ಇರಲಿಲ್ಲ. ಯಾಕೆಂದರೆ ಹೆತ್ತವರು ಕಟ್ಟಿಸಿದ ನಗರದ ಮುಖ್ಯರಸ್ತೆಯಲ್ಲಿರುವ ಬೃಹತ್ತಾದ ಸಂಕೀರ್ಣದ ಮಳಿಗೆ ಮತ್ತು ಮನೆಗಳಿಂದ ಬರುವ ಬಾಡಿಗೆಯೇ ಸಾಕಷ್ಟಿತ್ತು. ಒಬ್ಬನೇ ಮಗನಾದುದರಿಂದ ಹೆತ್ತವರು ಇಲ್ಲವಾದ ನಂತರದಲ್ಲಿ ಇದ್ದ ಆಸ್ತಿಗೆಲ್ಲ ಈತನೆ ವಾರಸುದಾರನಾದ. ಕೈತುಂಬ ಬರುತ್ತಿದ್ದ ಬಾಡಿಗೆ ದುಡಿಯುವ ಅವಕಾಶವನ್ನು ಕಸಿದುಕೊಂಡಿತ್ತು. ದೂರದ ಊರಿಂದ ಒಂಟಿಯಾಗಿ ಬಂದು ನೆಲೆಸಿದ ಅಂಜಲಿಗೆ ಆಗ ಬಂಧನವೊಂದರಿಂದ ಕಳಚಿಕೊಂಡ ಭಾವವಿತ್ತು. ಅಡಿಗಡಿಗೆ ಜಾಗೃತೆಯ ಮಾತುಗಳನ್ನೇ ಬಂಡವಾಳವಾಗಿಸಿ ಹಿಡಿತದಲ್ಲಿಟ್ಟ ತಾಯಿಯ ನೆನಪು ಮೊದಮೊದಲು ಅವಳನ್ನು ಬಹಳವಾಗಿ ಕಾಡುತ್ತಿದ್ದರೂ ಕ್ರಮೇಣ ಅದು ನೆನಪಿಗಷ್ಟೇ ಸೀಮಿತವಾಗತೊಡಗಿತು. ಕೈತುಂಬ ಸಂಬಳ, ಬೇಡಗಳ ಬಂಧನಗಳಿಲ್ಲದ ಸ್ವಾತಂತ್ರ್ಯ ಅವಳಲ್ಲಿ ಹೊಸಹುರುಪಿನ ಚೈತನ್ಯವನ್ನು ತುಂಬಿಸಿತ್ತು. ಅವಿನಾಶನ ಬಾಡಿಗೆ ಮನೆಯಲ್ಲಿದ್ದ ಅಂಜಲಿಗೆ ಅವನ ಭೇಟಿ ಅಪರೂಪವೇನಾಗಿರಲಿಲ್ಲ. ಬ್ಯಾಂಕಿಗೆ ಹೋಗಿಬರುವಾಗಲೆಲ್ಲ ಅವನು ಅನಾಯಾಸವಾಗಿ ಇದಿರಾಗುತ್ತಿದ್ದ. ಬಾಡಿಗೆ ಕೊಡುವ ಸಂದರ್ಭದಲ್ಲಿ ಮತ್ತು ಬ್ಯಾಂಕಿಗೆ ಬಂದು ವ್ಯವಹರಿಸುವ ನೆಪದಲ್ಲಿ ಅವಿನಾಶ ಇನ್ನಷ್ಟು ಹತ್ತಿರವಾಗಿದ್ದ. ಮಾತುಗಳಿಂದ ಆಪ್ತನಾಗಿದ್ದ. ಅಂಜಲಿಯಾದರೋ ತುಂಬು ಮೈಕಟ್ಟಿನ ಚೆಲುವೆ. ಅಷ್ಟೇನು ಎತ್ತರವಲ್ಲದ ನಿಲುವು. ಬಣ್ಣ ನಸುಗಪ್ಪಾದರೂ ಮುಖದಲ್ಲಿನ ಆಕರ್ಷಕ ಕಳೆ ಅವಳ ಒಟ್ಟಂದಕ್ಕೆ ಇಟ್ಟ ಬೊಟ್ಟಿನಂತಿತ್ತು. ಯೌವನದ ತುಡಿತ, ನೂರಾರು ಕಲ್ಪನೆ, ಕಾತರಗಳಲ್ಲಿ ಅರಳಿದ ಕನಸುಗಳು, ವಯಸ್ಸಿಗೆ ಸಹಜವಾಗಿರುವ ದೈಹಿಕ ವಾಂಛೆ ಅವಳನ್ನು ಸಮಯ ಸಂದರ್ಭಗಳಿಲ್ಲದೆ ಕಾಡತೊಡಗಿದ್ದವು. ತನ್ನೊಳಗೆ ಆಗೆಲ್ಲ ಸುಳಿದಾಡುತ್ತಿದ್ದ ಅವಿನಾಶ ಒಂದುದಿನ ನೇರವಾಗಿ ಮದುವೆಯ ಪ್ರಸ್ತಾಪವಿಟ್ಟಾಗ ಅಂಜಲಿಗೆ ಬೇಡವೆನ್ನಲು ಕಾರಣಗಳಿರಲಿಲ್ಲ. ಆದರೆ ಈಗ… ತನ್ನ ಅನುರಕ್ತತೆ ಕುರುಡು ಪ್ರೀತಿಗೆ ಸಾಕ್ಷಿಯಾದಂತಿದೆ.

        ಯೋಚಿಸಿದಷ್ಟು ಸಿಕ್ಕಾಗುವ ತನ್ನ ಯಾತನಾಮಯ ಬದುಕಿಗೆ ನಲುಮೆಯ ಬೆಳಕಿನ ಕಿಂಡಿ ಶಾಶ್ವತವಾಗಿ ಮುಚ್ಚಿದಂತೆ ಅಂಜಲಿಗೆ ಭಾಸವಾಗುತ್ತಿದೆ. ಜೀವನದಲ್ಲಿ ಯಾವುದಕ್ಕೂ ಕೊರತೆ ಇಲ್ಲದ ಅವಳಿಗೆ ಗಂಡನ ನಡವಳಿಕೆಯೊಂದೇ ನುಂಗಲಾರದ ತುತ್ತಾಗುತ್ತಿದೆ. ಅವನು ಬದಲಾಗುವ ಯಾವ ಲಕ್ಷಣಗಳೂ ಗೋಚರಿಸುವುದಿಲ್ಲ. ಹಾಗೆಂದು ಇಬ್ಬರೇ ಇದ್ದಾಗ ಎಷ್ಟು ಸಲ ಅವನನ್ನು ರಮಿಸಿ ತಿಳಿಹೇಳಿದ್ದಿದೆ. ಅವನ ವಿಚಾರ, ಚಿಂತನೆಗಳು ಹಾದಿ ತಪ್ಪಿವೆ ಎನ್ನುವುದನ್ನು  ಮನದಟ್ಟು ಮಾಡಿದ್ದಿದೆ. ಮಾತಿನಲ್ಲಿ ನೇರವಾಗಿ ಹೇಳಲಾರದ್ದನ್ನು ಇಷ್ಟುದ್ದ ಬರೆದು ಮಲಗುವ ಕೋಣೆಯಲ್ಲಿ ಅವನಿಗೆ ತಟ್ಟನೆ ಕಾಣುವಂತೆ ಇಟ್ಟದ್ದಿದೆ. ಓದಿದ ಅವನು ಒಂದಾದರೂ ಮಾತಾಡಿದ್ದರೆ ಹಿತವೆನಿಸುತ್ತಿತ್ತು. ಸಾಂತ್ವನ ಬಯಸಿದ್ದ ತನ್ನ ಮನಸ್ಸನ್ನು ಅರಿತು ಆತ್ಮೀಯವಾಗಿ ಅಪ್ಪಿಕೊಂಡಿದ್ದರೆ ಅವನ ನಡತೆ ಬದಲಾಗುವ ನಿರೀಕ್ಷೆಯಲ್ಲಿ ಇರಬಹುದಿತ್ತು. ಆದರೆ ಎಲ್ಲದಕ್ಕೂ ಮೌನಮೂರ್ತಿಯಾಗುವ ಅವನ ಮನಸ್ಸೇ ತನಗೆ ಅರ್ಥವಾಗುತ್ತಿಲ್ಲ. ತನ್ನ ಪ್ರಯತ್ನಗಳ ಮುಂದೆಲ್ಲ ಮೌನವಾಗಿರುವ ಅವನು ಕುಡಿದು ಬಂದಾಗ ಮಾತ್ರ ಇಂತಹ ವಿಷಯಗಳಲ್ಲಿ ಯೋಚಿಸಲೂ ಬಾರದಷ್ಟು ನಿಕೃಷ್ಟನಾಗುತ್ತಾನೆ. ತನ್ನೊಡನೆ ಮೊದಲಿನಂತೆ ಸುಖಿಸಲು ಸಾಧ್ಯವಾಗದ ಅವನ ಐಬಿಗೆ ತಾನು ಬಲಿಪಶುವಾದೆನೆ ಅನಿಸುತ್ತದೆ. ಆ ಸುಖವೊಂದೇ ಬದುಕಲ್ಲ ಎಂದು ತಿಳಿದವಳು ತಾನು. ಸುಖಿಸುವ ಕಾಲದಲ್ಲಿ ಹೀಗಾಗಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಹಾಗಿದ್ದಾಗ ನೇರವಾಗಿ ಹೇಳಲು ಅವನಿಗೆ ಯಾಕೆ ಸಾಧ್ಯವಾಗುತ್ತಿಲ್ಲ? ಕೀಳರಿಮೆಯೇ? ಸಣ್ಣತನದ ಅಂಜಿಕೆಯೇ? ಮುಖಕೊಟ್ಟು ಮಾತನಾಡದ ಅವನ ಒಳಗನ್ನು ಅರಿಯುವುದಾದರೂ ಹೇಗೆ? ಇಷ್ಟು ವರ್ಷಗಳ ದಾಂಪತ್ಯದಲ್ಲಿ ಇದ್ದುದನ್ನು ಹೇಳಿ ಹಗುರಾಗಲು ಇರುವ ಹಿಂಜರಿಕೆಯಾದರೂ ಎಂತದ್ದು? ನನ್ನ ನಡತೆಯಲ್ಲಿಯೇ ಲೋಪ ಹುಡುಕಹೊರಟವನಿಗೆ ತನ್ನ ನೆಲ ಕುಸಿಯುತ್ತಿರುವ ಅರಿವಾದರೂ ಇದೆಯೇ? ಎಲ್ಲ ಕಡೆಯಿಂದಲೂ ಪ್ರಶ್ನೆಗಳೇ ಎದುರಾದಾಗ ಅಂಜಲಿಗೆ ಬದುಕೇ ಬೇಡವೆನಿಸುತ್ತದೆ.

          ಅಂಜಲಿ ಒಂದಿಷ್ಟು ನೆಮ್ಮದಿಯಿಂದ ಉಸಿರಾಡುತ್ತಿದ್ದುದು ಬ್ಯಾಂಕಿನಲ್ಲಿ ಮಾತ್ರ. ಅಲ್ಲಿನ ಕೆಲಸದ ಒತ್ತಡ, ಒತ್ತಡದ ನಡುವೆಯೂ ಆತ್ಮೀಯರಾಗಿದ್ದ  ಅಲ್ಲಿನ ಸಹೋದ್ಯೋಗಿಗಳು, ಅವರ ಮಾತು, ಹರಟೆ, ಮಧ್ಯಾಹ್ನ ಹಂಚಿ ಉಣ್ಣುವ ಸಂಭ್ರಮ, ಅವರಿವರ ಮನೆಯ ಸುಖದುಃಖದ ಸಂಗತಿಗಳು…. ಎಲ್ಲ ಅವಳ ಬಾಳಿನಲ್ಲಿ ನೋವನ್ನು ಮರೆಸುವ ಗಳಿಗೆಗಳಾಗುತ್ತಿದ್ದವು. ಆಗ ಅಲ್ಲಿ ತಪ್ಪಿಯೂ ಅವಿನಾಶನ ಕಹಿನೆನಪು ಅವಳಲ್ಲಿ ಮಿಸುಕಾಡುತ್ತಿರಲಿಲ್ಲ. ತನ್ನ ಸೌಂದರ್ಯದ ಬಗ್ಗೆ ಅವಿನಾಶನಿಗೆ ಕರುಬಿದ್ದರೆ, ಅದರಿಂದಾಗಿ ತಾನು ಕಂಡವರ ತೋಳಿನಲ್ಲಿ ಸುಖಿಸುತ್ತಿದ್ದೇನೆ ಎನ್ನುವ ಸಂಶಯವಿದ್ದರೆ ತನಗೆ ತಿಳಿಯದಂತೆ ಬೇಹುಗಾರಿಕೆಯನ್ನೂ ಆತ ನಡೆಸಬಹುದಿತ್ತು. ಅದಕ್ಕೆ ಅವನಿಗೆ ಬೇಕಾದಷ್ಟು ಜನರೂ ಸಿಗುತ್ತಿದ್ದರು. ಅದ್ಯಾವುದೂ ಇಲ್ಲದೆ ಕಲ್ಪನೆಯಲ್ಲಿಯೇ ತನ್ನ ಊಹೆಗಳನ್ನು ದೊಡ್ಡದು ಮಾಡುವ ಅವನ ಕ್ಷುಲ್ಲಕತನ ಅವಳಿಗೆ ಎಳ್ಳಷ್ಟೂ ಹಿಡಿಸುತ್ತಿರಲಿಲ್ಲ. ಅಂಜಲಿಗೆ ತನ್ನ ರೂಪದ ಬಗ್ಗೆಯೂ ಗಮನವಿದೆ. ಅದೊಂದು ಹೆಮ್ಮೆಯ ವಿಷಯವಾಗಿದ್ದರೂ ಎಂದೂ ತಪ್ಪು ಹೆಜ್ಜೆಯನ್ನಿಡಲು ಅದು ಪ್ರೇರಕವಾಗಿರಲಿಲ್ಲ. ತಾನು ಕೆಲಸ ಮಾಡಿದ ಶಾಖೆಗಳಲ್ಲಿ ಅವಳ ಸಾಮೀಪ್ಯವನ್ನು ಬಯಸುವ, ಮಾತಿಗೆ ಹಾತೊರೆಯುವ ಸಹೋದ್ಯೋಗಿಗಳಿಗೇನು ಕೊರತೆಯಿರಲಿಲ್ಲ. ಬ್ಯಾಂಕಿನ ಗ್ರಾಹಕರೂ ಅವಳನ್ನು ಆಸೆಯ ಕಣ್ಣಿಂದ ನೋಡಿದವರೆ. ಕೆಲಸದ ನೆಪದಲ್ಲಿ ಹತ್ತಿರ ಸರಿದು ಸೀರೆಯ ಅಂಚು ತಾಕಿದರೂ ಸಂಭ್ರಮಿಸುವ ಗಂಡಸರಿದ್ದರು. ಅಪ್ಪಿತಪ್ಪಿ ಕೆಲಸದ ಮಧ್ಯೆ ಕೈ ಸ್ಪರ್ಶವಾದರೂ ದೊಡ್ಡ ಸಾಹಸ ಮಾಡಿದವರಂತೆ ಹೇಳಿಕೊಳ್ಳುವವರಿದ್ದರು. ಅದಕ್ಕೆಲ್ಲ ಯಾವತ್ತೂ ಸೊಪ್ಪು ಹಾಕದ ಜಾಯಮಾನ ಅಂಜಲಿಯದಾಗಿತ್ತು. ಅಂತಹವರನ್ನೆಲ್ಲ ಒಂದು ಅಂತರದಲ್ಲಿಟ್ಟು ಅವಳು ವ್ಯವಹರಿಸುತ್ತಿದ್ದಳು. ಅವಿನಾಶನ ಮೇಲಿನ ಉತ್ಕಟ ಪ್ರೇಮ ಅವಳಿಗಲ್ಲಿ ರಕ್ಷಾಕವಚವಾಗಿತ್ತು. ಆದರೆ ಈಗ ತನಗೆ ಕೂತರೂ ತಪ್ಪು ನಿಂತರೂ ತಪ್ಪು ಅನ್ನುವ ತಪ್ಪಿತಸ್ಥಳ ಪಟ್ಟ!

          ಕೆಲವೊಮ್ಮೆ ಅಂಜಲಿ ವಿರುದ್ಧವಾದ ದಿಕ್ಕಿನಲ್ಲಿ ಯೋಚಿಸುತ್ತಿದ್ದಳು. ಅವಿನಾಶ ಆರೋಪಿಸಿದಂತೆ ತಾನು ತನ್ನ ನೆಮ್ಮದಿಯನ್ನು ಯಾಕೆ ಇತರರಲ್ಲಿ ಹುಡುಕಬಾರದು. ಅದರಲ್ಲಿ ತಪ್ಪೇನಿದೆ? ಹೇಗೂ ಗಂಡ ತನ್ನನ್ನು ಆ ಪಟ್ಟಿಯಲ್ಲಿ ಸೇರಿಸಿಬಿಟ್ಟಿದ್ದಾನೆ. ಮನಸ್ಸು ಮಾಡಿದರೆ ತನಗದು ಕಷ್ಟವೂ ಅಲ್ಲ. ತನ್ನ ಪಾವಿತ್ರ್ಯವನ್ನು  ಎದೆ ಬಗೆದು ತೋರಿಸಿದರೂ ನಂಬುವ ವ್ಯಕ್ತಿ ಅವನಲ್ಲ. ಅವಳ ನರನಾಡಿಗಳಲ್ಲೆಲ್ಲ ಈ ರೀತಿಯ ಪ್ರತೀಕಾರದ ಭಾವ ಜಾಗೃತವಾದಾಗಲೆಲ್ಲ ಬೆಳೆದು ನಿಂತ ಮಗ ತಟ್ಟನೆ ಕಣ್ಣೆದುರು ಹಾಯುತ್ತಾನೆ. ತನ್ನ ಶೀಲದ ಬಗ್ಗೆ ಸಂಶಯದ ಒಳಸುಳಿಗಳನ್ನು ಬಿಚ್ಚಿಡುವ ತಂದೆಯ ಮಾತನ್ನು ಅವನೆಷ್ಟು ನಂಬಿರಬಹುದು ಎನ್ನುವ ಅಳುಕು ಅವಳಲ್ಲಿ ಸದಾ ಕೊರೆಯುತ್ತಿರುತ್ತದೆ. ಈ ಸಂದೇಹವನ್ನು ನೇರವಾಗಿ ಒಮ್ಮೆ ಅವನೊಡನೆ ಪ್ರಸ್ತಾಪಿಸಿದಾಗ ಅವನು ಪ್ರಬುದ್ಧನಾಗಿಯೇ ಉತ್ತರಿಸಿದ್ದ. ಕುಡಿದ ಅಮಲಿನಲ್ಲಿ ತಂದೆ ಆಡುವ ಮಾತುಗಳನ್ನು ನೀನು ಮನಸ್ಸಿಗೆ ಹಚ್ಚಿಕೊಳ್ಳಬೇಡಮ್ಮ… ಅಂತ ಅನುಕಂಪದ ಮಾತಾಡಿದ್ದ. ಅಷ್ಟರಮಟ್ಟಿಗೆ ತಾನು ಧನ್ಯೆ ಅಂತೆನಿಸಿತ್ತು ಅಂಜಲಿಗೆ. ಅಲ್ಲದೆ ಈಗಿನ ತನ್ನ ಯೌವನ ದಾಟಿದ ವಯಸ್ಸಿನಲ್ಲಿ ಇದೆಲ್ಲ ಎಷ್ಟು ಸರಿ ಅಂತನೂ ಯೋಚಿಸಿದ್ದಳು. ಆದರೂ ಮಾಗಿದ ಬದುಕಿನಲ್ಲಿ ಬೇಕೆನಿಸುವ ಆಪ್ತತೆಯ ಬಯಕೆಯಿಂದ ಅವಳಿಗೆ ಹೊರಬರಲಾಗಿರಲಿಲ್ಲ. ಅಲ್ಲಿಯ ಕೊರತೆಯ ನೋವೊಂದು ಸಣ್ಣಗೆ ಸಿಡಿಯುತ್ತಲೇ ಇತ್ತು.

          ಇಷ್ಟೆಲ್ಲ ಸರಹದ್ದುಗಳಿದ್ದರೂ ಅವಳ ಮನಸ್ಸಿನಾಳದಲ್ಲಿ ಎಲ್ಲೋ ಒಂದೆಡೆ ನೋವಿನಾಳದಿಂದ ಪುಟಿದೇಳುವ ಸಾಂತ್ವನ ಅರಸುವ ಬಯಕೆ ಬೆಳೆಯುತ್ತಲೇ ಇತ್ತು. ತನ್ನ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನೆಲ್ಲ ಸಹನೆಯಿಂದ ಕೇಳುತ್ತಾ ಮೈದಡವುತ್ತ ಸಂತೈಸುವ ಭಾವಜೀವಿಯ ಅಗತ್ಯ ಎಂದಿಗಿಂತ ಇಂದು ಹೆಚ್ಚಾಗಿ ಅವಳಿಗೆ ಬೇಕೆನಿಸಿತ್ತು. ಅಂತಹ ವ್ಯಕ್ತಿಯೊಬ್ಬ ತನ್ನ ಹತ್ತಿರವಿದ್ದರೆ ಅದು ಎಷ್ಟೊಂದು ಅಪ್ಯಾಯಮಾನವಾದ ಸನ್ನಿವೇಶವಾಗಿರಬಹುದು ಅನ್ನುವ ಕಲ್ಪನೆಯಲ್ಲಿಯೇ ಅವಳು ವಿಹರಿಸುತ್ತಿದ್ದಳು. ಆ ವಿಹಾರದಲ್ಲಿ ಧುತ್ತನೆ ಮಿಹಿರ ಎದುರಾಗುತ್ತಿದ್ದ. ಇದು ಒಂದೆರಡು ದಿನಗಳ ಕತೆಯಲ್ಲ. ಎರಡು ವರ್ಷಗಳ ಹಿಂದೆ ವರ್ಗಾವಣೆಹೊಂದಿ ಅಧಿಕಾರಿಯಾಗಿ ಬಂದ ಮಿಹಿರನ ಸಾಮೀಪ್ಯವೇ ಅವಳಲ್ಲಿ ಅರಿವಾಗದ ನೆಮ್ಮದಿಯನ್ನು ಹುಟ್ಟುಹಾಕುತ್ತಿತ್ತು. ತನ್ನ ಬಗ್ಗೆ ಅವನ ಮಾತಿನಲ್ಲಿರುವ ಕಾಳಜಿ, ಕೆಲಸದಲ್ಲಿ ನೆರವಾಗುವ ರೀತಿ, ಅವಳ ಕಷ್ಟಗಳನ್ನೆಲ್ಲ ತಾಳ್ಮೆಯಿಂದ ಕೇಳುತ್ತ ಸಮಾಧಾನಿಸುವ ಪರಿಯೆಲ್ಲೆಲ್ಲ ಅವನು ಇನ್ನಷ್ಟು ಹತ್ತಿರವಾಗುತ್ತಿದ್ದ. ವಯಸ್ಸಿನಲ್ಲಿ ತನಗಿಂತ ಚಿಕ್ಕವನಾದರೂ ಅವನಿಗೆ ಬದುಕಿನ ಅನುಭವ ಅಗಾಧವಾಗಿತ್ತು. ಮದುವೆಯ ವಯಸ್ಸು ಮೀರಿದ್ದರೂ ಆತ ಯಾವ ಕಾರಣದಿಂದಲೋ ಏನೋ ಮದುವೆಯಾಗಿರಲಿಲ್ಲ. ಆತ್ಮೀಯತೆಯ ಒಡನಾಟವಿದ್ದರೂ ಅದರ ಬಗ್ಗೆ ಅಂಜಲಿ ಯಾವತ್ತೂ ಅವನನ್ನು ಪ್ರಶ್ನಿಸಿರಲಿಲ್ಲ. ತನ್ನ ತಾಯಿಯ ಜೊತೆ ಅವನಿರುತ್ತಿದ್ದುದು ಮಾತ್ರ ಅವಳಿಗೆ ಗೊತ್ತಿರುವ ವಿಷಯ.

         ಇತ್ತೀಚೆಗೆ ಮಧ್ಯಾಹ್ನದ ಬುತ್ತಿಯೂಟವನ್ನು ಅವರಿಬ್ಬರೇ ಕೂತು ಹಂಚಿ ತಿನ್ನುತ್ತಿದ್ದ ಕಾರಣ ಅವರ ಮಧ್ಯೆ  ಮಾತಿಗೆ  ಸಾಕಷ್ಟು ಅವಕಾಶವಿರುತ್ತಿತ್ತು. ಅಲ್ಲಿ ಯಾವ ರೀತಿಯ ಸಂಕೋಚ, ನಿರ್ಬಂಧಗಳಿಲ್ಲದೆ ಅವರ ಮಾತು ಸಾಗುತ್ತಿತ್ತು. ಅಂಜಲಿ ತನ್ನ ಜೀವನದ ಬಹಳಷ್ಟು ಸಂಗತಿಗಳನ್ನು ಅಲ್ಲಿ ಸಂಕೋಚವಿಲ್ಲದೆ ಹೊರಗೆಡಹಿದ್ದಳು ಯಾಕೋ ಮಿಹಿರನಲ್ಲಿ ಅವಳಿಗೆ ಎಲ್ಲಿಲ್ಲದ ವಿಶ್ವಾಸ. ನಡತೆಯಲ್ಲಿ ಅಪ್ಪಟ ಪಾರದರ್ಶಕತೆಯನ್ನು ಹೊಂದಿದ ವ್ಯಕ್ತಿತ್ವ ಅವನದ್ದು. ಅವಳಿಗೆ ಬೇಕೆನಿಸುತ್ತಿದ್ದ ಆಪ್ತತೆಯನ್ನು ಮಿಹಿರ ಅರಿವಿಲ್ಲದೆ ಮಾತಿನಲ್ಲಿ ದಾಟಿಸುತ್ತಿದ್ದ. ಒಂದು ರೀತಿಯ ಸ್ನೇಹಾಕರ್ಷಣೆಯ ವರ್ತುಲದಲ್ಲಿ ಇಬ್ಬರೂ ಬಂಧಿಯಾಗಿದ್ದರು. ಈ ನಡೆಯಲ್ಲಿ ಅಂಜಲಿ ಯಾವ ತಪ್ಪನ್ನು ಕಂಡಿರಲಿಲ್ಲ ಕಾರಣ ಸಮಾಜ ದೂರಬಹುದಾದ ಎಲ್ಲೆಯನ್ನು ಅವರು ದಾಟಿರಲಿಲ್ಲ. ಅನ್ಯೋನ್ಯವಾಗಿದ್ದ ಅವರಿಬ್ಬರ ನಡೆ ಬ್ಯಾಂಕಿನಲ್ಲಿ ಕಿವಿಮಾತುಗಳಿಗೆ ಆಹಾರವಾಗಿದ್ದರೂ ಮದುವೆಯಾದ ಅಂಜಲಿಯ ಬಗ್ಗೆ ಉಸುರಲು ಎಲ್ಲರೂ ಅಂಜುತ್ತಿದ್ದರು.

          ಅಂಜಲಿಯ ಕಳೆದ ಹುಟ್ಟುಹಬ್ಬಕ್ಕೆ ಮಿಹಿರ ಮುತುವರ್ಜಿಯಿಂದ ಕೊಟ್ಟ ಮೊಬೈಲ್ ಫೋನ್ ಅವಳ ಸಾಂಗತ್ಯದಲ್ಲಿ ಬೆಚ್ಚನೆ ಧ್ವನಿಸುತ್ತಿತ್ತು. ಅದನ್ನು ಮುಟ್ಟಿದಾಗಲೆಲ್ಲ ಅವಳೊಳಗೆ ನವಿರಾದ ಕಂಪನ. ಆ ಕಂಪನದಲ್ಲಿ ಪಸರಿಸುವ ಅವನ ನೆನಪು ಅವಳನ್ನು ಬಲವಾಗಿ ಬಂಧಿಸಿತ್ತು. ರಜೆಯ ದಿನಗಳಲ್ಲೂ ಅವಳು ತಪ್ಪದೆ ಮಿಹಿರನಿಗೆ ಕರೆ ಮಾಡುತ್ತಿದ್ದಳು. ಸುದೀರ್ಘವಾಗಿ ಮಾತನಾಡುತ್ತಿದ್ದಳು. ಮಾತನಾಡಿದಷ್ಟು ಬಾಕಿಯಾಗುವ ಭಾವ ಅವಳನ್ನು ತಪ್ಪದೆ ಪೀಡಿಸುತ್ತಿತ್ತು. ಈ ಭಾವಬಂಧನಕ್ಕೆ ಯಾವ ಹೆಸರಿಡಬೇಕು…. ?ಏನೆಂದು ಕರೆಯಬೇಕು? ಆಕೆಯಲ್ಲಿ ಇವೆಲ್ಲ ಉತ್ತರವಿಲ್ಲದ ಪ್ರಶ್ನೆಗಳು. ಆದರೂ ಮನಸ್ಸಿನ ತುಂಬ ಯಾವತ್ತೂ ಇಲ್ಲದ ನೆಮ್ಮದಿಯ ಶಾಂತತೆ. ತನಗೆ ಬೇಕಾದ ಆಪ್ತತೆಯ ನೆಲೆಯನ್ನು ಕಂಡ ತೃಪ್ತಿ. ಒಂದೆರಡು ಬಾರಿ ಅವರು ಹೊಟೇಲಿಗೆ ಹೋಗಿ ಉಪಹಾರವನ್ನೂ ಮಾಡಿದ್ದರು. ಆಗೆಲ್ಲ ಮಿಹಿರನ ಮನದಲ್ಲಿ ಈ ಸಾಂಗತ್ಯಕ್ಕೊಂದು ಅಚ್ಚಳಿಯದ ನೆನಪಿನ ಮುದ್ರೆಯೊತ್ತುವ ಹಂಬಲ. ಹಾಗಂತ ಅದನ್ನು ನೇರವಾಗಿ ಪ್ರಸ್ತಾಪಿಸುವ ಎದೆಗಾರಿಕೆ ಅವನಲ್ಲಿಲ್ಲ. ಹೇಳಿದರೆ ಅವಳು ತನ್ನ ಬಗ್ಗೆ ಏನೆಂದು ತಿಳಿದುಕೊಳ್ಳಬಹುದು ಅನ್ನುವ ಅಳುಕು. ತಾನು ಇತರರಿಗಿಂತ ಭಿನ್ನವಾಗಿಲ್ಲ ಎನ್ನುವ ನಿಲುವಿಗೆ ಅವಳು ಬಂದರೆ… ಬೇಡಪ್ಪ… ಆ ಸಂದರ್ಭವನ್ನು ಊಹಿಸಲೂ ಒಲ್ಲದ ವಿವೇಕ ಅವನನ್ನು ಎಚ್ಚರಿಸುತ್ತಿತ್ತು. ತಮ್ಮ ನಡುವಿನ ಗೆಳೆತನದ ಉದ್ದೇಶ ಇದರಲ್ಲಿ ಕೊನೆಯಾಗುವುದೇ ಬೇಡವೆಂದು ಅವನು ತನ್ನ ಸಂಯಮಕ್ಕೊಂದು ಲಕ್ಷ್ಮಣರೇಖೆ ಎಳೆದುಬಿಟ್ಟಿದ್ದ. ಬ್ಯಾಂಕಿನ ಸಮಯದಲ್ಲಿ ಮಿಹಿರನ ಸಾಂಗತ್ಯದಲ್ಲಿ ಅಂಜಲಿ ಯಾವತ್ತೂ ಹರ್ಷಿತಳಾಗಿಯೇ ಇರುತ್ತಿದ್ದಳು. ಮಿಹಿರನೂ ಅವಳ ಅಂತರಂಗವನ್ನು ಆತ್ಮೀಯ ಮಾತುಗಳಿಂದ ಮುದಗೊಳಿಸುತ್ತಿದ್ದ. 

         ನಿಶ್ಚಿತ ಗುರಿಯಿಲ್ಲದ ಅಂಜಲಿಯ ಬದುಕು ನಿರ್ಜೀವವಾಗಿ ಸಾಗುತ್ತಲೇ ಇತ್ತು. ಉಸಿರಿದ್ದರೂ, ಮೈಮನ ಮಿಡುಕುತ್ತಿದ್ದರೂ ಭಾವತೀವ್ರತೆಯ ಅಭಾವ. ಕಳೆದ ದಿನಗಳ ನೋವುನಲಿವುಗಳ ನೆನಪಲ್ಲಿ ಕಳೆದುಹೋಗುವ ದಿನಚರಿ. ಏರುಪೇರಿಲ್ಲದ ಏಕತಾನತೆಯ ಆಲಾಪನೆ. ಕುಳಿತಲ್ಲೇ ಕೂತು ಕಳೆದುಹೋದ ದಿನಗಳ ಮೆಲುಕಿನಲ್ಲಿ ಇಳಿದುಬಿಡುವ ಪರಿ  ಅವಳಿಗೆ ಹೊಸತೇನಲ್ಲ.   ಎಷ್ಟು ಹೊತ್ತು ಕೂತರೂ, ಯೋಚಿಸಿದರೂ ಮತ್ತವೇ ಮನಸ್ಸನ್ನು ಘಾಸಿಗೊಳಿಸುವ  ಸುಳಿಗಳು. ಅದರ ಆಳಕ್ಕೆ ಇಳಿದಂತೆ ತಾನು ಸೋಲುತ್ತಿರುವ ಭಾವ.

ತನ್ನ ಮೊಬೈಲಿನಲ್ಲಿ ಸಂದೇಶದ ಸೂಚನೆಯೊಂದು ಬಂದಾಗ ಒಲ್ಲದ ಮನಸ್ಸಿನಿಂದ ಮೇಲೆದ್ದ ಅಂಜಲಿ ಒಳನಡೆದಳು. ಮೊಬೈಲ್ ಕೈಗೆತ್ತಿಕೊಂಡಾಗ ಮಿಹಿರನ ಸಂದೇಶ ತೆರೆದುಕೊಂಡಿತು.

ಪ್ರೀತಿಯ ಅಂಜು,

ಬಹುಶಃ ಈ ಪ್ರೀತಿ ಎನ್ನುವ ಶಬ್ದ ನಿನಗೆ ಖಂಡಿತ ಬೇಸರ ತರಿಸದು ಅಂದುಕೊಂಡಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ನಮ್ಮ ನಡುವಿನ ಸಾಕಷ್ಟು ಮಾತುಕತೆಗಳಲ್ಲಿ ಸಹಾನುಭೂತಿ, ಅನುಕಂಪ, ಕನಿಕರ ಎಲ್ಲವೂ ಪ್ರೀತಿಯ ರೂಪದಲ್ಲಿ ಇಬ್ಬರ ಹೃದಯವನ್ನು ತಟ್ಟಿರಲೂಬಹುದು. ಹಾಗೆಂದು ಅದನ್ನು ಒಪ್ಪಿಕೊಂಡು ವ್ಯಕ್ತಪಡಿಸುವಲ್ಲಿ ನಾವು ಹಿಂದೇಟು ಹಾಕಿರಲೂಬಹುದು. ಆದರೆ ನಮ್ಮ ನಡುವಿನ ಸಂಬಂಧದಲ್ಲಿ ಅನುರಾಗದ ಎಳೆಯೊಂದು ಸಣ್ಣಗೆ ನೇಯ್ದುಕೊಂಡು ಹೋದ ಅನುಭವ ನನಗಾಗಿದೆ.

         ನಾನೀಗ ನೇರ ವಿಷಯಕ್ಕೆ ಬರುತ್ತೇನೆ ಅಂಜು. ನನಗೆ ಉತ್ತರಭಾರತದ ನಮ್ಮೂರಿನ ಹತ್ತಿರದ ಶಾಖೆಗೆ ವರ್ಗಾವಣೆಯಾಗಿದೆ. ಅಧಿಕೃತ ಆದೇಶ ಬರುವುದರ ಮೊದಲು ನನ್ನ ಸಹೋದ್ಯೋಗಿಗಳ ಮೂಲಕ ನನಗಿದು ತಿಳಿದು ಬಂದಿದೆ. ಇದನ್ನು ಕೇಳಿ ನಿನಗೆ ತುಂಬ ಬೇಸರವಾಗುವುದಂತೂ ಸತ್ಯ. ಆದರೆ ಏನು ಮಾಡುವುದು? ನಮ್ಮ ವೃತ್ತಿಜೀವನದಲ್ಲಿ ಇದೆಲ್ಲ ಮಾಮೂಲು ಅಲ್ಲವೇ? ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವ ಧೈರ್ಯ ನಮ್ಮಲ್ಲಿರಬೇಕು ಅಷ್ಟೆ. ನಿನ್ನ ಸಂಪರ್ಕದಿಂದ ನನ್ನ ಅನುಭವಕ್ಕೆ ಬಾರದ ಜೀವನದ ಎಷ್ಟೋ ಮಜಲುಗಳ ಮಗ್ಗುಲುಗಳೆರಡನ್ನು ನಾನು ಅರಿತಂತಾಯಿತು. ಬದುಕೆನ್ನುವುದು ವ್ಯಕ್ತಿಗತವಾಗಿ ರೂಪುಗೊಳ್ಳುವ ಒಂದು ಸಂಕೀರ್ಣ ಪ್ರಕ್ರಿಯೆ. ಅದಕ್ಕೆ ಕಾರಣಗಳು ನಮಗೆ ಗೊತ್ತಿಲ್ಲದಿರುವಂತೆ ಅದು ರೂಪುಗೊಳ್ಳುವ ಕ್ರಿಯೆಯೂ ಅನೂಹ್ಯವೆ. ನಿನ್ನ ಈಗಿನ ಪರಿಸ್ಥಿತಿಯಲ್ಲಿ ಯಾವ ಕಿವಿಮಾತನ್ನೂ ಹೇಳಲು ನಾನು ಅಸಮರ್ಥನಾಗಿದ್ದೇನೆ. ನಿನ್ನ ಒಳ್ಳೆಯತನಕ್ಕೆ ಹೀಗಾಗಬಾರದಿತ್ತು ಅಂತಲೂ ನಾನು ಬಹಳಷ್ಟು ಸಲ ಚಿಂತಿಸಿದ್ದೇನೆ. ಬದುಕಿನಿಂದ ದೂರ ಓಡುವ ದಾರಿಯೂ ಯುಕ್ತವಲ್ಲ. ನಾಳಿನ ಭರವಸೆಯಲ್ಲಿ ವರ್ತಮಾನವನ್ನು ಕಳೆಯುವುದು ಜಾಣತನ. ಹೆಚ್ಚಿಗೆ ಹೇಳಲು ನಾನು ನಿನಗಿಂತ ಸಣ್ಣವನು. ಮುಂದೆ ನಿನಗೆ ನನ್ನೊಡನೆ ಮಾತನಾಡಬೇಕೆನಿಸಿದರೆ ನನ್ನ ಮನಸ್ಸಿನ ಬಾಗಿಲು ಸದಾ ತೆರೆದಿರುತ್ತದೆ. ಕಷ್ಟಗಳನ್ನು ಸಮಮನಸ್ಕರಲ್ಲಿ ಹಂಚಿಕೊಂಡರೆ ತಾನೆ ಮನಸ್ಸು ಹಗುರಾಗುವುದು.

ನಿನ್ನ ಒಳಿತನ್ನೇ ಬಯಸುವ ಭಾವಸಂಗಾತಿ

ಮಿಹಿರ

ಸಂದೇಶವನ್ನು ಓದುತ್ತಿದ್ದಂತೆ ಅಂಜಲಿಯ ಕಣ್ಣಾಲಿಗಳು ತುಂಬಿ ಬಂದವು. ಇಷ್ಟು ಬೇಗ ಮಿಹಿರನ ಸಾನ್ನಿಧ್ಯಕ್ಕೆ ಅಂತ್ಯವೇ? ಸತ್ಯವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಅರಗಿಸಿಕೊಳ್ಳುವುದಂತೂ ದೂರದ ಮಾತು. ತನ್ನ ಬದುಕಿನಲ್ಲೇ ಯಾಕೆ ಇವೆಲ್ಲಾ ಪ್ರಹಾರಗಳು? ತನ್ನ ಬದುಕೇ ಒಂದು ಪ್ರಶ್ನೆಯಾಗುತ್ತಿದ್ದಂತೆ ಅವಳೊಳಗೆ ಪಲ್ಲವಿಸಿದ್ದ ಸಾಂತ್ವನದ ಭಾವಬೆಸುಗೆಯ ಕೊಂಡಿಯೊಂದು ಹಠಾತ್ತನೆ ಕಳಚಿ ಬಿದ್ದಂತಾಯಿತು.           

         ***********************

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

12 thoughts on “ತಿರುವು ”

  1. Raghavendra Mangalore

    ಅಂಜಲಿಯ ವ್ಯಕ್ತಿತ್ವವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ. ಜೊತೆಗೆ ಆಕೆಯ ಮನಸಿನ ತುಮುಲ ಸಹಾ. ಕಥೆಯನ್ನು ಹೇಳಿದ ರೀತಿ ಚೆನ್ನಾಗಿದೆ. ಅಭಿನಂದನೆಗಳು ಸಾರ್

  2. Prakash Kundapur

    ಅನಿರೀಕ್ಷಿತ ತಿರುವು
    ಕತೆ ತುಂಬ ಚೆನ್ನಾಗಿದೆ

  3. ಕಥೆ ಚೆನ್ನಾಗಿ ಮುಡಿಬಂದಿದೆ
    ಸರ್ಕಾರಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಈ ಒಂದು ಮಾನಸಿಕ ಒತ್ತಡದಿಂದ ಯಾವಾಗಲೂ
    ಇರುತ್ತಾರೆ ಎಂಬುದು ಕಟುಸತ್ಯ
    ಅಭಿನಂದನೆಗಳು
    ನಾರಾಯಣ ರಾವ ಗಂಗಾವತಿಯಿಂದ

  4. ಸುನೀತ ಶ್ರೀಪಾದ

    ಹೆಣ್ಣಿನ ಅಂತರಂಗದ ತುಮುಲಗಳನ್ನು ನೀವು ಬರೆದಿರುವ ರೀತಿ ನಿಜಕ್ಕೂ ಶ್ಲಾಘನೀಯ.

  5. ಶೇಖರಗೌಡ ವೀ ಸರನಾಡಗೌಡರ್

    ನೈತಿಕತೆಯ ಭಾವ ಅಂಜಲಿಯನ್ನು ಹಿಡಿದಿಟ್ಟಿದೆ. ಮನದಾಳದ ಭಾವನೆಗಳ ಸೊಗಸಾದ ಚಿತ್ರಣ. ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter