ಕವಿ ಮತ್ತು ಸಹೃದಯಿ

ಕವಿ ಹೃದಯಕ್ಕೆ ಸಮಾನವಾದ  ಹೃದಯವುಳ್ಳವನು ಸಹೃದಯಿ. ಕಾವ್ಯವನ್ನು ಓದುವಾಗ ಕವಿಯ ಹೃದಯದೊಂದಿಗೆ ಇವನ ಹೃದಯವು ಸಮಾನವಾಗಿ  ಮಿಡಿಯುತ್ತದೆ. ಸಹೃದಯಿ ಕವಿಯ ಇಂಗಿತ, ಆಶಯಗಳನ್ನು ಸಹಾನುಭೂತಿಯಿಂದ ಅರಿತು ಕವಿಯ ಅನುಭವಗಳಿಗೆ ಸಕಾರಾತ್ಮಕವಾಗಿ  ಸ್ಪಂದಿಸುತ್ತಾನೆ. ಪ್ರತಿಭಾ ಶಾಲಿಯಾದ ಕವಿಯಿಂದ ಸೃಷ್ಟಿಸಲ್ಪಟ್ಟ ಕಾವ್ಯವೃಕ್ಷ  ಫಲ ನೀಡುವುದು ಸಹೃದಯಿಯಿಂದಲೇ, ಸಹೃದಯಿಯಲ್ಲಿಯೇ. ಯಾವುದೇ ಕವಿಯ ಕಾವ್ಯಸೃಷ್ಟಿಗೆ ಸಾರ್ಥಕತೆ ಸಿಗುವುದು ಸಹೃದಯಿ ಓದುಗನು ಅದನ್ನು ಓದಿ ಮೆಚ್ಚಿ ಭಾವಪರವಶನಾದಾಗ ಮಾತ್ರ.

ಕವಿಯೊಬ್ಬನ ಕಾವ್ಯ ಪ್ರವರ್ಧಮಾನಕ್ಕೆ ಬರಲು ಕಾರಣರಾದವರು ಸಹೃದಯಿಗಳಾದ  ಓದುಗರು. ಸಹೃದಯಿಗಳಾದ ಓದುಗರ ನಾಡಿ ಮಿಡಿತವನ್ನು ಅರಿತವನು ಮಾತ್ರ ಯಶಸ್ವಿ ಕವಿಯಾಗಲು ಸಾಧ್ಯ. ಕವಿಗೆ ಒಬ್ಬನೂ ಸಹೃದಯಿ ಸಿಗದೇ ಹೋದಾಗ ಉಂಟಾಗುವ ತೀವ್ರ ನಿರಾಶಾದಾಯಕ ಸ್ಥಿತಿಯ ಕುರಿತು ಸುಭಾಷಿತವೊಂದಿದೆ.

ದೇವರೇ, ಯಾವ ಕರ್ಮಫಲವನ್ನಾದರೂ ನನ್ನ ಹಣೆಯ ಮೇಲೆ ಬರೆ,

ಆದರೆ ಯಾವತ್ತೂ ಅರಸಿಕರ ಮುಂದೆ ಕಾವ್ಯವನ್ನು ಓದುವುದನ್ನು ಮಾತ್ರ

ಬರೆಯಬೇಡ, ಬರೆಯಬೇಡ, ಬರೆಯಬೇಡ”

ಈ ಸುಭಾಷಿತದ ಕೊನೆಯಲ್ಲಿ  ಕವಿ ಮೂರು ಬಾರಿ ಬರೆಯಬೇಡ ಎಂದು ಆರ್ತನಾಗಿ ಬೇಡಿಕೊಂಡಿರುವುದು ಸಹೃದಯಿಗಳಿಲ್ಲದಿದ್ದರೆ ಕವಿಯ ಪರಿಸ್ಥಿತಿ ಏನಾಗುತ್ತದೆಯೆಂಬುದರ ಪರಿಣಾಮಕಾರಿ ಚಿತ್ರಣವಾಗಿದೆ. ಕವಿಗಳು ಮತ್ತು ಸಹೃದಯಿಗಳ ನಡುವೆ ಮಧುರ ಬಾಂಧವ್ಯ ಇದ್ದಾಗ ಮಾತ್ರ ಕಾವ್ಯಸೃಷ್ಟಿ ಸಾರ್ಥಕವಾಗಲು ಸಾಧ್ಯ.

ಕವಿ ಮತ್ತು ಸಹೃದಯಿಗೆ ಅತ್ಯುತ್ತಮ ಉದಾಹರಣೆಯೆಂದರೆ ಕವಿ ಪು.ತಿ.ನ. ಮತ್ತು ಕಾವ್ಯಮೀಮಾಂಸಕ ತೀ.ನಂ.ಶ್ರೀ.ಯವರು. ತೀ.ನಂ.ಶ್ರೀ.ಯವರು ಕವಿಯೂ ಹೌದು ಸಹೃದಯಿಯೂ ಹೌದು. ಆದ್ದರಿಂದಲೇ ಅವರು ಕನ್ನಡಕ್ಕೆ “ಭಾರತೀಯ ಕಾವ್ಯಮೀಮಾಂಸೆ”ಯಂತಹ ಅಭಿಜಾತ ಕೃತಿ ನೀಡಲು ಸಾಧ್ಯವಾದದ್ದು. ಪು.ತಿ.ನ. ಅವರ ಕಾವ್ಯ ವೃಕ್ಷಕ್ಕೆ ನೀರೆರೆದು ಪೋಷಿಸಿದವರು ತೀ.ನಂ.ಶ್ರೀ.ಯವರು. ಪು.ತಿ.ನ. ಅವರು ತಮ್ಮ ಕಾವ್ಯ ವಿಕಾಸಕ್ಕೆ ನೆರವಾದ ತೀ.ನಂ.ಶ್ರೀಯವರ ಸಹೃದಯತೆಯನ್ನು ಅನೇಕ ಬಾರಿ ತುಂಬ ಪ್ರೀತಿಯಿಂದ ನೆನೆದಿದ್ದಾರೆ.

ತೀ.ನಂ.ಶ್ರೀಯವರ “ಒಲುಮೆ” ಕೃತಿ ಕನ್ನಡದ ಮೊದಲ ಪ್ರೇಮಕವಿತೆಗಳ ಸಂಕಲನ.  ಕೆ.ಎಸ್.ನರಸಿಂಹಸ್ವಾಮಿಯವರಿಗೆ ಅವರ ಮದುವೆಯಲ್ಲಿ ತೀ.ನಂ.ಶ್ರೀಯವರು ತಮ್ಮ “ಒಲುಮೆ” ಕವನ ಸಂಕಲನವನ್ನು ಉಡುಗೊರೆಯಾಗಿ ಕೊಡುವ ಮೂಲಕ ಕೆ.ಎಸ್.ನರಸಿಂಹಸ್ವಾಮಿಯವರಿಗೆ ಕಾವ್ಯ ದೀಕ್ಷೆ ನೀಡಿದರು. ಮುಂದೆ ಕೆ.ಎಸ್.ನರಸಿಂಹಸ್ವಾಮಿಯವರು “ಮೈಸೂರು ಮಲ್ಲಿಗೆ” ಕವನ ಸಂಕಲನದ  ಮೂಲಕ ‘ಪ್ರೇಮಕವಿ’ಯೆಂದು ಕನ್ನಡ ನಾಡಿನಾದ್ಯಂತ ಅಪಾರ ಖ್ಯಾತಿ ಪಡೆದದ್ದು ಈಗ ಇತಿಹಾಸ.

ಪ್ರಸ್ತುತ ಕನ್ನಡ ಕಾವ್ಯಲೋಕದ ಪರಿಸ್ಥಿತಿ ತುಂಬ ಭಿನ್ನವಾಗಿದೆ. ಕನ್ನಡದಲ್ಲಿ ಓದುವವರಿಗಿಂತ ಬರೆಯುವವರು, ಕೇಳುವವರಿಗಿಂತ ಹಾಡುವವರು ಹೆಚ್ಚಾಗಿದ್ದಾರೆ. ಕನ್ನಡದಲ್ಲಿ ಕವಿಗಳ ಸಂಖ್ಯೆಗೆ ಹೋಲಿಸಿದರೆ ಸಹೃದಯರ ಸಂಖ್ಯೆ ತುಂಬ ಎಂದರೆ ತುಂಬ ಕಡಿಮೆ. ಇತ್ತೀಚೆಗಂತೂ ಕಾವ್ಯದ ಓದುಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸದ್ಯ ಕನ್ನಡದಲ್ಲಿ ಬರೆಯುತ್ತಿರುವ ಅನೇಕ ಉದಯೋನ್ಮುಖ ಕವಿಗಳಲ್ಲಿ ಶೇಕಡ ಎಂಬತ್ತರಷ್ಟು ಜನರಿಗೆ ಕನ್ನಡ ಕಾವ್ಯ ಪರಂಪರೆಯ ಬಗೆಗೆ ಅರಿವೇ ಇಲ್ಲ. ನಮ್ಮ ಬಹುತೇಕ ಮಹತ್ವದ ಕವಿಗಳನ್ನು ಇಂತಹವರು ಓದಿರುವುದೇ ಇಲ್ಲ. ಇನ್ನೂ ಕೆಲವು ಮಹಾಶಯರು ನಮ್ಮ ಮಹತ್ವದ ಕವಿಗಳ ಹೆಸರೇ ಕೇಳಿರುವುದಿಲ್ಲ.

ಪ್ರಕಟಣೆ ಸುಲಭವಾಗಿರುವ ಇಂದಿನ ದಿನಗಳಲ್ಲಿ ನಾಲ್ಕು ಸಾಲು ಬರೆಯುವವರೆಲ್ಲ ಕವಿಗಳೆಂದು ಸ್ವಯಂ ಘೋಷಿಸಿಕೊಳ್ಳುತ್ತಾರೆ. ಇಂತಹ ಸ್ವಯಂಘೋಷಿತ ಕವಿಗಳು ಪುಸ್ತಕ ಪ್ರಕಟಣೆ, ಗಲ್ಲಿ ಗಲ್ಲಿಗಳಲ್ಲಿ ಉಡುಪಿ ಹೊಟೇಲುಗಳಂತೆ ತಲೆಯೆತ್ತಿರುವ ಪ್ರತಿಷ್ಠಾನಗಳು ನೀಡುವ ಪ್ರಶಸ್ತಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಲೈಕು, ಕಮೆಂಟು ಮತ್ತು ಶೇರುಗಳನ್ನು ಸಂಭ್ರಮಿಸಿ ಸುಖಿಸುತ್ತಾರೆ. ಅನೇಕ ಉದಯೋನ್ಮುಖ ಕವಿಗಳು, ಕವಯತ್ರಿಯರಲ್ಲಿ ಈ ಗೀಳು ಹೆಚ್ಚಾಗಿಯೇ ಕಂಡು ಬರುತ್ತದೆ. ಇನ್ನು ಅನೇಕ ಉದಯೋನ್ಮುಖ ಕವಿಗಳು ಸಾಮಾಜಿಕ ಜಾಲತಾಣಗಳಲ್ಲಿಯೇ ಹುಟ್ಟಿ, ಬೆಳೆದು, ಖ್ಯಾತರಾಗಿ ಕೊನೆಗೆ ಅಲ್ಲಿಯೇ ಸಾಯುತ್ತಾರೆ. ಇರಲಿ, ಕವಿಗಳು ಮತ್ತು ಸಹೃದಯಿಗಳಿಗೆ ಸಂಬಂಧಿಸಿದ ಕೆಲವು ಪ್ರಸಂಗಗಳು ತುಂಬ ಸ್ವಾರಸ್ಯಕರವಾಗಿವೆ.

ಇತ್ತೀಚೆಗೆ ಎರಡು ಕವನ ಸಂಕಲನ ಪ್ರಕಟಿಸಿದ್ದ ಉದಯೋನ್ಮುಖ  ಕವಿಯೊಬ್ಬನಿಗೆ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರ ಕುರಿತು ಕೇಳಿದಾಗ ಆ ಉದಯೋನ್ಮುಖ  ಕವಿ “ಹೌದು ಸರs ಗೊತ್ತೈತಿ  ಕೆಎಸ್ಆರ್ಟಿಸಿ ಡ್ರೈವರ್ ಇದ್ದರು. ಬಾಳs ಅಂದ್ರ ಬಾಳs ಸಂಪನ್ನ ಮನುಷಾ ಇದ್ದರು.  ಹಾವೇರಿ – ಹಾನಗಲ್ ಲೈನಿನ್ಯಾಗ ಓಡಾಡೂ ಬಸ್ಸಿನ್ಯಾಗ  ಬಾಳs ಸರತೆ ನೋಡಿನಿs” ಎಂದ. ಮೂರು ಕವನ ಸಂಕಲನ ಪ್ರಕಟಿಸಿದ ಮತ್ತೊಬ್ಬ ಲೋಕಲ್  ಕವಿಗೆ ಸು.ರಂ.ಎಕ್ಕುಂಡಿ ಅವರ ಕುರಿತು ಕೇಳಿದಾಗ “ಯಾರ್ರೀ ಅವ್ರು? ನಮ್ಮ ಗುರುಗಳ ಪೈಕಿ ಒಬ್ರು ಗಜೇಂದ್ರಗಡದಾಗ ಪೋಸ್ಟ್ ಮಾಸ್ಟರ್ ಇದ್ದರು ಅವ್ರs ಏನು ಮತ್ತs? ವಿಳಾಸ  ಕೊಡ್ರಿ ನನ್ನ ಕವನ ಸಂಕಲನ ಕಳಸತೇನಿ. ಪಾಪ, ಓದಲಿ!” ಎಂದು ಹೇಳಿದ. ನಿಸಾರ್ ಅಹಮದ್ ಮತ್ತು ಸು.ರಂ.ಎಕ್ಕುಂಡಿ ಅವರಂತಹ ಹಿರಿಯ ಲೇಖಕರ ಕುರಿತು ಈ ಮೂರ್ಖ ಶಿಖಾಮಣಿಗಳು ಆಡಿದ ಮಾತು ಕೇಳಿ ತುಂಬ ವಿಷಾದವಾಯಿತು.

ಒಬ್ಬ ನಿಸಾರ್ ಅಹಮದ್ ಅವರನ್ನು ಕೆಎಸ್ಆರ್ಟಿಸಿ ಡ್ರೈವರ್ ಮಾಡಿದರೆ, ಮತ್ತೊಬ್ಬ ಸು.ರಂ.ಎಕ್ಕುಂಡಿ ಅವರನ್ನು ಪೋಸ್ಟ್ ಮಾಸ್ಟರ್ ಮಾಡಿದ್ದ. ಇಂತಹ ಶತಮೂರ್ಖರ ಜೊತೆ ನನ್ನಂತಹ  ಸಹೃದಯರು ಇನ್ನೇನು ತಾನೆ ಮಾತನಾಡಲು ಸಾಧ್ಯ? ದುರ್ದೈವವಶಾತ್ ಇಂತಹ ಕೂಪಮಂಡೂಕಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ.

ಉತ್ತರ ಕರ್ನಾಟಕದ ಸಣ್ಣ ಪಟ್ಟಣವೊಂದರಲ್ಲಿ ಇತ್ತೀಚೆಗೆ ಅರವತ್ಮೂರು ಜನ ಹೆಣ್ಣು ಮತ್ತು ಗಂಡು ಕವಿಗಳು ತಲಾ 250=00 (ಇನ್ನೂರಾ ಐವತ್ತು ರೂಪಾಯಿಗಳು ಮಾತ್ರ) ಹಾಕಿ ಕವಿಗೋಷ್ಠಿಯೊಂದನ್ನು ಏರ್ಪಡಿಸಿದ್ದರು. ಊರಿನ ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಮತ್ತು ಉದಯೋನ್ಮುಖ ಕವಯತ್ರಿಯಾದ ಲತಾ ಹಂಚಿನಮನಿ ಕವಿಗೋಷ್ಠಿ ನಡೆಸಲು ತಮ್ಮ ಮಹಿಳಾ ಸಂಘದ ಸಭಾಂಗಣವನ್ನು ಉಚಿತವಾಗಿ ನೀಡಿದ್ದಳು.

ಕವಿಗೋಷ್ಠಿಯ ಮತ್ತೊಂದು ಆಕರ್ಷಣೆಯೆಂದರೆ ಆ ಊರಿನ ಪ್ರಖ್ಯಾತ ಬಸವಣ್ಣೀ ಉಪಾಹಾರ ಮಂದಿರದಿಂದ ಮೈಸೂರು ಪಾಕು, ಉಪ್ಪಿಟ್ಟು, ಖಾರಾಡಾಣಿ ಮತ್ತು ಚಹದ ವ್ಯವಸ್ಥೆ ಮಾಡಲಾಗಿತ್ತು. ನಿಗದಿತ ಸಮಯದಲ್ಲಿ ಕವಿಗೋಷ್ಠಿ ಆರಂಭವಾಯಿತು. ಆ ಊರಿನ ಕವಿಗಳು, ಕವಯತ್ರಿಯರಿಗೆಲ್ಲ ಗುರುವಾದ ಬಂಡಾಯ ಕವಿ ಮಂಜುನಾಥ ಹೊನ್ನತ್ತಿ ಅಧ್ಯಕ್ಷನಾದರೆ, ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆಯಾದ ಲತಾ ಹಂಚಿನಮನಿ ಮುಖ್ಯ ಅತಿಥಿಯಾದಳು. ಹೊನ್ನತ್ತಿ ಮತ್ತು ಹಂಚಿನಮನಿ ಇಬ್ಬರೂ ಕವಿಗೋಷ್ಠಿ ಏರ್ಪಡಿಸಿದ ಸಂಘಟಕರನ್ನು ಮನಸಾರೆ ಅಭಿನಂದಿಸಿದರು.

ಅಧ್ಯಕ್ಷ ಹೊನ್ನತ್ತಿಯಂತೂ ಭರ್ಜರಿ ಭಾಷಣ ಮಾಡಿದ. “ಇಲ್ಲಿರೂs ಎಲ್ಲಾ ಕವಿಗಳು, ಕವಯತ್ರಿಯರು ಒಂದಲ್ಲ ಒಂದು ವಿಧದೊಳಗ ನನಗ ಸಂಬಂಧಪಟ್ಟವರs ಅದೀರಿs. ಬಹುಶಃ ನಾನು ಮುನ್ನುಡಿ, ಹಿನ್ನುಡಿ, ಬೆನ್ನುಡಿ ಬರೀಲಾರದ ಮಕ್ಕಳು ಒಬ್ರೂs ಇಲ್ಲಿಲ್ಲ… ಒಂದರ್ಥಾಗ ನೋಡಿದ್ರ ನೀವೆಲ್ಲಾ ನಾನು ಬೆಳೆಸಿದ ಮಕ್ಕಳು! ಆದರೇನಾತುs ಇವತ್ತಿನ ದಿನಾ ಕೆಲೂs ಮಂದಿ ನನ್ನ ವೈರಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡಾಕತ್ಯಾರs. ಅಲ್ರೋs ಮಕ್ಕಳಾs ಮುನ್ನುಡಿ, ಬೆನ್ನುಡಿ ಕೇಳಾಕ ಬರ್ತೀರಿs… ಆದ್ರ ನನಗ ತ್ರಾಸ ಬಂದಾಗ ಒಬ್ರರs ಇದ್ರೇನ್ರಲೇs?” ಎಂದು ಆವೇಶಭರಿತರಾಗಿ ಕೇಳಿದ. ಹೊನ್ನತ್ತಿ ಹೀಗೆ ಕೇಳಿದ್ದೇ ತಡ ಗಯ್ಯಾಳಿಯೆಂದೇ ಹೆಸರಾದ ಬಂಡಾಯ ಕವಯತ್ರಿ ಅನುಪಮಾ ಎದೆಯ ಮೇಲಿದ್ದ ವೇಲನ್ನು ಸೊಂಟಕ್ಕೆ  ಬಿಗಿದು ಕಟ್ಟಿ “ಸರs ಎಂಥಾ ಟೈಮು ಬಂತ್ರೀs ನಿಮ್ಮ ವಿರುದ್ಧ ಮಾತೂಡೂs ಕೂಸೂs ಹುಟ್ಟ್ಯಾವೇನ್ರಿs? ಯಾರಂತ ಜರಾ ಹೇಳ್ರಲ್ಲs  ಆಮ್ಯಾಕ ನೋಡ್ರೀs ಅಂಥಾ ಮಂದಿs ಪರಿಸ್ಥಿತಿ ಏನಾಕ್ಕೇತಿs ಅಂಥಾs” ಎಂದು ಹೂಂಕರಿಸಿದಳು.

ಅವಳ ಪ್ರೇಮಿ  ಬೆಂಕಿ ಬಸು ಇದನ್ನೆಲ್ಲ ನೋಡಿ ಆವೇಶಭರಿತನಾದ. ತೊಟ್ಟಿದ್ದ ಜುಬ್ಬಾ ಕಿತ್ತೆಸೆದು “ಏs ಯಾಂವಲೇ ಅಂವಾs ನಮ್ಮ ಗುರುಗಳಿಗೆ ಮಾತಾಡಾಂವs. ಧಮ್ ಇದ್ದರ  ನನ್ನ ಮುಂದ ಬರ್ರೆಲೇs, ನಾ ಯಾರಂತ ತಿಳಿದೀರಿs ಬೆಂಕಿ ಬಸ್ಯಾ ಅದೀನಿs ಬೆಂಕಿ ಬಸ್ಯಾs. ನಮ್ಮ ದೇವ್ರಂಥಾ ಗುರುಗಳ ತಡವಿ ನೋಡರಿs ಅಂಥಾ ಮಂದಿ ಪರಿಸ್ಥಿತಿ ಏನಾಕ್ಕೇತಿs ಅನ್ನೂದು ಸವದತ್ತಿ ಯಲ್ಲಮ್ಮತಾಯಿಗs ಗೊತ್ತು. ಈ ಬೆಂಕಿ ಬಸ್ಯಾ ಅಂದ್ರs ಬಾಳs ಖತರ್ನಾಕ್ ಮಗಾs…” ಎಂದು ಸಿಟ್ಟಿಗೆದ್ದು ಚೀರಾಡಿದ. ಈ ಅನುಪಮಾ-ಬಸು ಜೋಡಿಯನ್ನು ಸಮಾಧಾನ ಪಡಿಸಲು ಅಲ್ಲಿದ್ದವರಿಗೆ ಸಾಕು ಬೇಕಾಯಿತು.

ಹೊನ್ನತ್ತಿಗೆ  ಉದಯೋನ್ಮುಖರು ಆವೇಶಕ್ಕೊಳಗಾಗಿದ್ದನ್ನು ಕಂಡು ತುಂಬ ಸಂತೋಷವಾಯಿತು. ಆತ ಸಮಾಧಾನದಿಂದ ಭಾಷಣ ಮುಂದುವರಿಸಿದ. “ಕೆಲೂs ಮಂದಿ ನನಗಿರೂs ಹೆಂಗರುಳಿನ ಬಗಿಗೆ ತಪ್ಪು ತಿಳಕೊಂಡು ಬಾಯಿಗೆ ಬಂದಂಗs ಮಾತಾಡಕತ್ಯಾರs. ಹೌದು, ನಾನು ಹೆಂಗರುಳಿನ ಮನಷಾ ಅದೀನಿs, ಸ್ತ್ರೀವಾದಿ ಲೇಖಕ ಅದೀನಿs ಕೆಪಾಸಿಟಿ ಇದ್ರ ನೀವೂs  ನನ್ನಂಗ ಹೆಣ್ಣುಮಕ್ಕಳ ಕಲ್ಯಾಣಾ ಮಾಡ್ರೀs ಅದನ್ನ ಬಿಟ್ಟು ನಮ್ಮಂಥಾ ಸಂಪನ್ನ ಮಂದಿ ಕಂಡು ಯಾಕ ಹೊಟ್ಟ್ಯಾಗ ಬೆಂಕಿ ಹಾಕ್ಕೋತಿರಿs” ಎಂದು ಸಂತಪ್ತನಾಗಿ ಮಾತಾಡಿದ.

ಬಸವಣ್ಣೀ ಉಪಾಹಾರ  ಮಂದಿರದ  ಮಾಲೀಕಳಾದ  ಬಳ್ಳಾರಿ  ಭಾಗ್ಯಮ್ಮನ ಕುರಿತು ಮಾತನಾಡುವಾಗ  ಹೊನ್ನತ್ತಿ ತುಂಬ ಭಾವೋದ್ವೇಗಕ್ಕೋಳಗಾದ. “ಇಡೀ ಕನ್ನಡ ದೇಶದೊಳಗs ಭಾಗ್ಯಮ್ಮನಷ್ಟು  ಚೆಂದ ಯಾರದರಾs? ಅಕೀ ಹಂಗ ಉಪ್ಪಿಟ್ಟು ಮಾಡೂs ಹೆಂಗಸು ಈ ಸ್ವತಂತ್ರ ಭಾರತದಾಗ ಯಾರಾರs  ಇದ್ರ ತೋರಸರಿ ಮತ್ತs ನೋಡೂಣುs. ದೇವ್ರು ಅಷ್ಟು ಸೌಂದರ್ಯ, ಇಷ್ಟು ಪ್ರತಿಭಾ, ಇನ್ನಷ್ಟು ಬುದ್ಧಿವಂತಿಕೆ, ಮತ್ತಷ್ಟು ಚಾಣಾಕ್ಷತನಾ ಹಾಕಿ ಮಾಡಿದ ಗೊಂಬಿs ಈ ಬಳ್ಳಾರಿ ಭಾಗ್ಯಮ್ಮ!!” ಎಂದು ಹೇಳಿದಾಗ ಸೂರು ಹಾರಿಹೋಗುವಂತೆ ಕರತಾಡನವಾಯಿತು. ಹೊನ್ನತ್ತಿ ಕೊನೆಗೆ ಬಳ್ಳಾರಿ ಭಾಗ್ಯಮ್ಮನ  ಕುರಿತು ಬರೆದ “ಬಂಗಾರದ ಬೊಂಬೆ” ಎಂಬ ಕವನವಾಚನ  ಮಾಡಿ ಅಂತೂ ಇಂತೂ ತನ್ನ ಉಗ್ರ ಭಾಷಣ ಮುಗಿಸಿದ.

ಬಳ್ಳಾರಿ ಭಾಗ್ಯಮ್ಮ ಚೆಲುವೆ ಮತ್ತು ಅಧ್ಯಕ್ಷರ ಅನೇಕ ಕವಿತೆಗಳಿಗೆ ಸ್ಫೂರ್ತಿ ನೀಡಿದ ಕಾವ್ಯ ಸುಂದರಿ ಎಂಬ ವಿಷಯ ಕವಿಗೋಷ್ಠಿ ಮುಗಿದ ನಂತರ ತಿಳಿಯಿತು. ಇರಲಿ, ಮಂಜುನಾಥ ಹೊನ್ನತ್ತಿ-ಬಳ್ಳಾರಿ ಭಾಗ್ಯಮ್ಮ ಜೋಡಿ ಏನಾದರೂ ಮಾಡಿಕೊಳ್ಳಲಿ. ಮತ್ತೊಬ್ಬರ ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ತಲೆಬಿಸಿ ಮಾಡಿಕೊಳ್ಳುವುದು ಸಜ್ಜನರ ಲಕ್ಷಣವಲ್ಲ!

ಕವಿಗೋಷ್ಠಿಯಲ್ಲಿದ್ದವರು  ಅರವತ್ಮೂರು ಜನ ಮಾತ್ರ. ಈ ಕವಿಗೋಷ್ಠಿಯ ವಿಶೇಷತೆಯೆಂದರೆ ಇಲ್ಲಿ ಕವಿಗಳು ಮತ್ತು ಸಹೃದಯಿಗಳ ನಡುವೆ ವ್ಯತ್ಯಾಸವಿರಲಿಲ್ಲ. ‘ಕವಿಗಳೆಲ್ಲ ಸಹೃದಯಿಗಳೇ! ಸಹೃದಯಿಗಳೆಲ್ಲ ಕವಿಗಳೇ!’ ಒಬ್ಬರು ಕವನವಾಚನ ಮಾಡಿದರೆ ಉಳಿದವರು ಆಲಿಸುತ್ತಿದ್ದರು. ಕವಯತ್ರಿಯರು ಕವನ ವಾಚನ ಮಾಡಿದಾಗ ಚಪ್ಪಾಳೆಯ ಸದ್ದು ಜೋರಾಗುತ್ತಿತ್ತು. ಹರೆಯದ ಚೆಲುವೆಯರು ಕವನ ವಾಚನ ಮಾಡಿದಾಗ  ಜೋರಾದ ಚಪ್ಪಾಳೆಯ ಜೊತೆ ಶಿಳ್ಳೆಗಳೂ ಬೀಳುತ್ತಿದ್ದವು.

ಕೆಲವು ಹುಡುಗರಂತೂ ಕಂಟ್ರೋಲ್ ಕಳೆದುಕೊಂಡು “ಒನ್ಸ್ ಮೋರ್ ಸ್ಮಿತಾ”, “ಒನ್ಸ್ ಮೋರ್ ಅನುಪಮಾ”, “ಒನ್ಸ್ ಮೋರ್ ನಂದಿನಿ”, “ಒನ್ಸ್ ಮೋರ್ ಚಂದ್ರಿಕಾ”, “ಒನ್ಸ್ ಮೋರ್ ಮಾಲಾ” ಎಂದು ಚೀರುತ್ತಿದ್ದವು. ‘ಒನ್ಸ್ ಮೋರ್’ ಎಂದು ಹುಡುಗರು ಹುರಿದುಂಬಿಸಿದಂತೆಲ್ಲ  ಕವಯತ್ರಿಯರು  ಉತ್ತೇಜಿತರಾಗುತ್ತಿದ್ದರು. ತಾವು ಕವಿಗೋಷ್ಠಿಗೆ ಬಂದದ್ದಕ್ಕೆ ಸಾರ್ಥಕವಾಯಿತೆಂದು ಬೀಗುತಿದ್ದರು.

ಕವಿಗೋಷ್ಠಿಯ ಕೊನೆಯಲ್ಲಿ  ಉಪಾಹಾರದ  ಮೇಲ್ವಿಚಾರಣೆ ನೋಡಿಕೊಳ್ಳುವ  ಬೆಂಕಿ ಬಸೂನ ಮೇಲೆ ಹುಡುಗಿಯರು ಮತ್ತು ಮಹಿಳೆಯರಿಗೆ ಹೆಚ್ಚು ಮೈಸೂರು ಪಾಕು ಮತ್ತು ಉಪ್ಪಿಟ್ಟು ನೀಡುತ್ತಿದ್ದನೆಂಬ ಆಪಾದನೆ ಬಂದಿತು. ಅದರಲ್ಲೂ ಬಂಡಾಯ ಕವಯತ್ರಿ ಅನುಪಮಳಿಗೆ  ವಿಶೇಷ  ಕಾಳಜಿ ತೋರಿಸುತ್ತಿದ್ದ ಬೆಂಕಿ ಬಸೂನ ನಡೆಯನ್ನು ಉಳಿದವರೆಲ್ಲ  ಒಕ್ಕೊರಲಿನಿಂದ ಖಂಡಿಸಿದರು. ಅನುಪಮಳಿಗೋಸ್ಕರ ಪ್ರಾಣ ಬಿಡಲು ತಯಾರಿದ್ದ ಬೆಂಕಿ ಬಸೂನಿಗೆ ಇಂತಹ ಸಣ್ಣ ಪುಟ್ಟ ವಿರೋಧಗಳು ಯಾವ ಲೆಕ್ಕ? ಇಂತಹ ಕೆಲವು  ಕ್ಷುಲ್ಲಕ ಘಟನೆಗಳನ್ನು ಹೊರತು ಪಡಿಸಿ ಕವಿಗೋಷ್ಠಿ  ಯಶಸ್ವಿಯಾಗಿ ನಡೆಯಿತೆನ್ನಬಹುದು.

ಇತ್ತೀಚೆಗೆ ನಾನು ಮತ್ತು ನನ್ನ ಸ್ನೇಹಿತನೊಬ್ಬ ಗದುಗಿನ ‘ದುರ್ಗಾ ವಿಲಾಸ’ದ  ಹತ್ತಿರ ಮಾತನಾಡುತ್ತ ನಿಂತಿದ್ದಾಗ ನಾಲ್ಕೂವರೆ ಫೂಟು ಎತ್ತರ, ನಲವತ್ತೈದು ಕೆಜಿ ತೂಕವಿರಬಹುದಾದ ಸಣಕಲು ಆಸಾಮಿಯ ಪ್ರವೇಶವಾಯಿತು. ಅಚ್ಚ ಬಿಳಿಯ ಬಣ್ಣದ ಜುಬ್ಬಾ ಪೈಜಾಮ ಧರಿಸಿ, ಹೆಗಲಲ್ಲೊಂದು ಪುಸ್ತಕಗಳು ತುಂಬಿದ ಬ್ಯಾಗನ್ನು ಹಾಕಿಕೊಂಡಿದ್ದ ಆ ವ್ಯಕ್ತಿ ಒಂದು ಕೋನದಿಂದ ಕಮ್ಯೂನಿಷ್ಟನಂತೆಯೂ, ಇನ್ನೊಂದು ಕೋನದಿಂದ ನಷ್ಟದಲ್ಲಿರುವ ನಾಟಕ ಕಂಪನಿಯ ಮಾಲೀಕನಂತೆಯೂ ಕಾಣುತ್ತಿದ್ದನು. ನಮ್ಮ ಬಳಿ ಬಂದವನೇ ಮುಗುಳ್ನಗುತ್ತಾ  ತಾನೊಬ್ಬ ಕವಿಯೆಂದು ಪರಿಚಯಿಸಿಕೊಂಡು ನಮಸ್ಕರಿಸಿದ. ತುಂಬ ಖುಷಿಯಿಂದ ಮಾತನಾಡುತ್ತಿದ್ದ ನನ್ನ ಗೆಳೆಯ ಅವನನ್ನು ನೋಡಿದ್ದೆ ಹಾವು ಕಂಡವನಂತೆ  ಬೆಚ್ಚಿಬಿದ್ದ. ಮೊದಲೇ ಇವನನ್ನು ನೋಡಿದ್ದರೆ ಯಾವುದಾದರೂ ಓಣಿ ಬಿದ್ದು ಓಡಿ ಹೋಗಬಹುದಿತ್ತು. ಆದರೆ ಅದಕ್ಕೆ ಅವಕಾಶವೇ ಸಿಗಲಿಲ್ಲ.

ಸಣಕಲು ಕವಿ ನಮ್ಮಿಬ್ಬರನ್ನು ಕಂಡ ಕೂಡಲೇ ‘ದುರ್ಗಾ ವಿಲಾಸ’ಕ್ಕೆ ಬಲವಂತವಾಗಿ ಕರೆದೊಯ್ದು ಟೊಮಾಟೊ  ಗಿರ್ಮಿಟ್, ಮಿರ್ಚಿ ಮತ್ತು ಖಡಕ್ ಚಹಾ ಕೊಡಿಸಿ ತನ್ನ ಹೊಸ ಕವನ ಸಂಕಲನದ ಕುರಿತು ಒಂದೂವರೆ ಗಂಟೆ ಕೊರೆದ. ನಮ್ಮೆದುರು ತನ್ನ ಹೊಸ ಸಂಕಲನದಿಂದ ಆಯ್ದ ಕೆಲವು ಕವಿತೆಗಳನ್ನು ತುಂಬ ಉತ್ಸಾಹದಿಂದ ವಾಚನ ಮಾಡಿದ. ಕವನ ವಾಚನ ಮಾಡುವಾಗ ಆವೇಶಕ್ಕೊಳಗಾದ. ಸ್ವರ್ಗೀಯ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರನ್ನು ನೆನೆದು  ಗಳಗಳನೆ ಅತ್ತ. ತನ್ನ ಪ್ರೇಮ ಕವಿತೆಗಳಿಗೆ ಸ್ಫೂರ್ತಿಯಾದ, ತಾನು ವಾಸಿಸುವ ಬೀದಿಯ ಕೊನೆಯ ಮನೆಯ ಜೇಬುನ್ನಿಸಳ ಕುರಿತ ಕವಿತೆ ಓದುವಾಗ ಸಂತೋಷದಿಂದ  ಗಹಗಹಿಸಿ ನಕ್ಕ. ಬಂಡಾಯ ಕವಿತೆಯನ್ನು ಓದುವಾಗ ಬಲಪಂಥೀಯ ಸರ್ಕಾರಕ್ಕೆ ಓಟು ಹಾಕಿದ ಮಹಾಜನತೆಯನ್ನು ಮನಸಾರೆ ಶಪಿಸಿದ. ಕೊನೆಗೆ  ಕಮ್ಯೂನಿಸಂ ಕುರಿತ ಕವಿತೆ ಓದಿ “ಕ್ರಾಂತಿ ಚಿರಾಯುವಾಗಲಿ” ಎಂದು ಚಿಟ್ಟನೆ ಚೀರಿದ.

ನಮಗೆ ಬೇರೆ ಕೆಲಸವಿದೆ ಎಂದು ಪರಿಪರಿಯಾಗಿ ಬೇಡಿಕೊಂಡ ನಂತರ ತನ್ನ ಬ್ಯಾಗಿನೊಳಗಿಂದ ಕವನ ಸಂಕಲನದ ಎರಡು ಪ್ರತಿಗಳನ್ನು ತೆಗೆದು ಮೊದಲ ಪುಟದಲ್ಲಿ ‘ಸಹೃದಯಿಗಳಾದ… ಪ್ರೀತಿಯಿಂದ…’ ಎಂದು ಸ್ವಹಸ್ತಾಕ್ಷರದಲ್ಲಿ ಬರೆದುಕೊಟ್ಟ. ಆತನಿಂದ ಪುಸ್ತಕ ಪಡೆದು ಹಿಂತಿರುಗಿ ನೋಡದೇ ಓಡಿದೆವು. ಈಗಲೂ ‘ದುರ್ಗಾ ವಿಲಾಸ’ದ ಕಡೆ ಹೋಗಲು ಮನಸ್ಸಾದರೂ ಸಹ ಸಣಕಲು ಕವಿಯನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಈ ಸಣಕಲು ಕವಿಯನ್ನು ಕಂಡರೆ ಖಾವಿ  ತೊಟ್ಟ  ಮಠಾಧೀಶರು, ಖಾದಿ ತೊಟ್ಟ ಪುಢಾರಿಗಳು ಮತ್ತು ಖಾಕಿ ತೊಟ್ಟ ಪೊಲೀಸರು ಸಹ ಹೆದರುತ್ತಿದ್ದರೆಂದ ಮೇಲೆ ಸಾಮಾನ್ಯ ಬಾಲಕರಾದ ನಾವು ಹೆದರದೆ ಇರಲು ಸಾಧ್ಯವೇ?

ಒಂದುದಿನಹುಬ್ಬಳ್ಳಿಯಸಾಹಿತ್ಯ ಭಂಡಾರದಿಂದ ಕೆಲವು ಪುಸ್ತಕಗಳನ್ನು ಖರೀದಿಸಿ ಹಾವೇರಿಗೆ ತೆರಳಲು ಹುಬ್ಬಳ್ಳಿ ರೈಲ್ವೆ  ನಿಲ್ದಾಣದಲ್ಲಿ ಬೆಂಗಳೂರು ಕಡೆ ಹೋಗುವ ರೈಲನ್ನೇರಿದೆ. ಪ್ಯಾಸೆಂಜರ್  ರೈಲು  ಪ್ರಯಾಣಿಕರಿಂದ ಭರ್ತಿಯಾಗಿತ್ತು. ಪುಸ್ತಕಗಳನ್ನು  ಓದದಿದ್ದರೂ ಸಹ ಪುಸ್ತಕ ಓದುವವರನ್ನು ಗೌರವಿಸುವ ಕೆಲವು ಹಳ್ಳಿಯ ಪ್ರಯಾಣಿಕರು ನನ್ನ ಕೈಯಲ್ಲಿ ಪುಸ್ತಕಗಳನ್ನು ನೋಡಿದ ಕೂಡಲೇ ನನಗೆ ಕೂತುಕೊಳ್ಳಲು ಜಾಗ ಮಾಡಿ ಕೊಟ್ಟರು.

ರೈಲಿನಲ್ಲಿ ಸೀಟು ಸಿಕ್ಕ ಮೇಲೆ ನಾನು ಕೊಂಡ ಪುಸ್ತಕಗಳನ್ನು ತಿರುವಿ ಹಾಕತೊಡಗಿದೆ.  ನನ್ನ ಎದುರಿನ ಸೀಟಿನಲ್ಲಿ ಕುಳಿತಿದ್ದ ಒಂದಿಬ್ಬರು ಕಾಲೇಜು  ಹುಡುಗಿಯರು ನಾನು ಪುಸ್ತಕ ಓದುವುದನ್ನು ಅದೊಂದು ವಿಚಿತ್ರ ಸಂಗತಿಯೆಂಬಂತೆ ನೋಡ ತೊಡಗಿದರು. ಕೆಲವು ಹಳ್ಳಿಯ ಪ್ರಯಾಣಿಕರು ನಾನು ಪುಸ್ತಕ ಓದುವುದನ್ನು ತುಂಬ ಮೆಚ್ಚುಗೆಯಿಂದ ಗಮನಿಸುತ್ತಿದ್ದರು.

ಇದೇ ಸಮಯದಲ್ಲಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಒಬ್ಬ ರೇಷ್ಮೆ ಸೀರೆಯುಟ್ಟ ಜೋಡೆಲುಬಿನ  ಮಹಿಳೆಯ ಪರಿಚಯವಾಯಿತು. ರೇಷ್ಮೆ ಸೀರೆಯ ಮಹಿಳೆ ಪುಸ್ತಕ ಓದುವ ನನ್ನ ಹವ್ಯಾಸವನ್ನು ಪ್ರಶಂಸಿದಳು. ನನ್ನ ಪುಸ್ತಕ ಪ್ರೀತಿಯನ್ನು ಕೊಂಡಾಡಿ ನಾನು ಕವಿತೆ ಬರೆಯಬೇಕೆಂದು ಆಗ್ರಹಿಸಿದಳಲ್ಲದೇ ನನಗೆ ಒತ್ತಾಯ ಮಾಡಿ ಭಾರತೀಯ ರೈಲ್ವೆಯ ಚಹದಂತೆ ಕಾಣುವ ಬಿಸಿನೀರನ್ನೂ ಕುಡಿಸಿದಳು. ಈ ಮಹಿಳೆ ಸಹ ಒಬ್ಬ ಉಪನ್ಯಾಸಕಿ ಮತ್ತು ಕವಯತ್ರಿ. ಆಕೆ ಸಹೃದಯಿಯ ಹುಡಾಕಾಟದಲ್ಲಿದ್ದಾಗ  ಸರಿಯಾಗಿ ನಾನು ಹುಬ್ಬಳ್ಳಿ – ಬೆಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಕಣ್ಣಿಗೆ ಬಿದ್ದೆ. ಈ ರೇಷ್ಮೆ ಸೀರೆಯ ಮಹಿಳೆ ನನ್ನ ಫೋನ್ ನಂಬರ್ ಪಡೆದು ತನ್ನ ಚಿತ್ರ-ವಿಚಿತ್ರ ಕವಿತೆಗಳ ಮುಖಾಂತರ ಮುಂದೆ ನನಗೆ ಸಾಕಷ್ಟು ಹಿಂಸೆ ಕೊಟ್ಟಳು. ಹೇಗೋ ಹರಸಾಹಸ ಪಟ್ಟು ಈ ಕವಯತ್ರಿಯ ಉಪಟಳದಿಂದ ಪಾರಾದೆ.

ಸಹೃದಯಓದುಗನೂ, ಪುಸ್ತಕ ಪ್ರೇಮಿಯೂ ಆದನನ್ನಬಳಿಸಹಜವಾಗಿಯೇಸಾಕಷ್ಟು ವೈವಿಧ್ಯಮಯವಾದ ಪುಸ್ತಕಗಳಿವೆ. ನನ್ನ ಸ್ಟಡಿ ರೂಮು ಒಂದು ಪುಟ್ಟ ಗ್ರಂಥಾಲಯದಂತೆ ಕಂಗೊಳಿಸುತ್ತಿದೆ. ನನ್ನ ಬಹು ದೊಡ್ಡ ಪುಸ್ತಕ ಸಂಗ್ರಹ ಮತ್ತು ನನ್ನ ಓದಿನ ಆಸಕ್ತಿ ಕಂಡು ನಾನೂ ಒಬ್ಬ ಕವಿ ಅಥವಾ ಲೇಖಕ ನಿರಬಹುದೆಂಬ ಸಂಶಯ ಕೆಲವರಿಗಾದರೂ ಉಂಟಾಗುವುದು ಸಹಜ. ನನ್ನ ಕೆಲವು ಮಿತ್ರರು ನನ್ನ ಪುಸ್ತಕ ಪ್ರೇಮವನ್ನು ಮೆಚ್ಚುತ್ತಾರಾದರೂ ನಾನು ಕವಿಯಾಗುವುದನ್ನು ಮಾತ್ರ ಸಹಿಸಲಾರರು. ನನ್ನ ಸ್ನೇಹಿತರು “ನೀನು ಕವಿತೆ ಬರೆಯುತ್ತಿಲ್ಲತಾನೆ?” ಎಂದು ಆಗಾಗ ನನ್ನನ್ನು ಕೇಳುತ್ತ ನಾನು ಕವಿತೆ ಬರೆಯುತ್ತಿಲ್ಲವೆಂಬುದನ್ನು ಖಚಿತ  . ನಾನು ಸಹ ಕವಿಯಾಗಿ ಎಲ್ಲಿ ಹಾಳಾ ಗಿಹೋಗುತ್ತೇನೋ? ಎಂಬುದು ಅವರ ಭಯ ಮತ್ತು ಕಾಳಜಿ. ಸುದೈವವವಾತ್ನಾನು ಕವಿಯಲ್ಲ! ಸಹೃದಯಿ.

ನಮ್ಮಪಕ್ಕದಮನೆಯಲ್ಲೊಂದು ನಾಲ್ಕೈದು ವರ್ಷದ ಮುದ್ದಾದ ಮಗುವಿದೆ. ಆ ಮಗುವಿನ ಹೆಸರು ರೋಹಿಣಿ. ಆ ಪುಟ್ಟ ಮಗುವಿಗೂ ಸಹನಾನೊಬ್ಬ ಕವಿಯಿರ ಬೇಕೆಂಬ ಸಂಶಯವಿತ್ತು. ನಾನು ಯಾವಾಗಲೂ ಏನಾದರೂ ಓದುತ್ತ, ಬರೆಯುತ್ತ ಇರುವುದು. ಆಗಾಗ ಮನೆಗೆ ಅಂಚೆ/ಕೊರಿಯರ್ಮೂಲಕ ಪುಸ್ತಕಗಳು ಬರುವುದು. ನಾನೂ ಸಹ ಆಗಾಗ ಪುಸ್ತಕಗಳನ್ನ ಹಿಡಿದು ಕೊಂಡು ಓಡಾಡುವುದನ್ನು ಆ ಮಗು ಮರೆಯಿಂದ ಗಮನಿಸುತ್ತಿತ್ತು. ನಾನು ಪ್ರೀತಿಯಿಂದ ಕರೆದರೂ ಸಹ ಬರಲೋ? ಬೇಡವೋ? ಎಂದು ಅನುಮಾನಿಸುತ್ತಿತ್ತು. ಆ ಮಗುವಿಗೆ ತುಂಬ ಪ್ರಿಯವಾದ ಕೇಕು, ಚಾಕಲೇಟು ಮತ್ತು ಬಿಸ್ಕತ್ತು ಕೊಟ್ಟ ನಂತರ ನಿಧಾನವಾಗಿ ಸ್ನೇಹ ಬೆಳೆಯಿತು.

ಮಗುವಿನ ಸ್ನೇಹವಾದ ನಂತರವೇ ಮಗುನನ್ನ ಬಳಿ ಬರಲು ಭಯಪಡುವುದಕ್ಕೆನಿಜವಾದ ಕಾರಣ ತಿಳಿದಿದ್ದು. ಈಗಾಗಲೇ ಆ ಮಗುವಿಗೆ ಅದರ ಮಮ್ಮಿ-ಡ್ಯಾಡಿ ಮತ್ತು ಮ್ಯಾಮುಗಳು ಓದಿ ಬರೆಯಲು ಸಾಕಷ್ಟು ಪೀಡಿಸುತ್ತಿದ್ದರು. ಇಷ್ಟೊಂದು ಪುಸ್ತಕ ಹೊಂದಿರುವ, ಓದುವ – ಬರೆಯುವ ಹವ್ಯಾಸಉಳ್ಳ ನಾನು ಆ ಮಗುವಿನ ದೃಷ್ಟಿಯಲ್ಲಿ ಕವಿ ಅಥವಾ ಲೇಖಕನಾಗಿ ಬಿಟ್ಟಿದ್ದೆ. ನಾನು ಸಹ ಅದಕ್ಕೆ ಓದಿ ಬರೆಯಲು ಒತ್ತಾಯಿಸುತ್ತೇನೆಂಬ ಅಳುಕಿನಿಂದ ಆ ಮಗುನನ್ನ ಬಳಿ ಬರಲು ಹೆದರುತ್ತಿತ್ತು. ನಂತರ ನಾನು ಕವಿಯಲ್ಲ, ಬರೀ ಪುಸ್ತಕ ಓದುತ್ತೇನೆಂದು ತಿಳಿಸಿ ಹೇಳಿದೆ. ಆ ಮಗುವಿಗೆ ಪೂರ್ಣಚಂದ್ರ ತೇಜಸ್ವಿಯವರ “ಹಕ್ಕಿ ಪುಕ್ಕ” ಪುಸ್ತಕದ ಚಿತ್ರಗಳನ್ನು ತೋರಿಸುತ್ತ ಹೋದಂತೆ ಮಗು ನಿಜಕ್ಕೂ ತುಂಬ ಆಸಕ್ತಿಯಿಂದ ಹಕ್ಕಿಗಳ ಚಿತ್ರ ನೋಡುತ್ತ ಮುಗ್ಧ ಪ್ರಶ್ನೆಗಳನ್ನು ಕೇಳುತ್ತ ಹೋಯಿತು. ಈಗ ಮಗುವಿಗೆ ನಿಜಕ್ಕೂ ನಾನೊಬ್ಬ ಕವಿಯಿರ ಬೇಕೆಂಬ ಸಂಶಯ ಮತ್ತು ಪುಸ್ತಕಗಳ ಕುರಿತ ಭಯ ಎರಡೂ ನಿವಾರಣೆಯಾಗಿತ್ತು. ಈ ಮಗು ಸಹ ಮುಂದೆ ಸಹೃದಯಿಯಾಗಿ ಬೆಳೆಯಲೆಂಬುದು ನನ್ನ ಆಶಯ.

ಇರಲಿ, ನಾನೊಬ್ಬ ಸಹೃದಯ ಓದುಗನೆಂಬುದರ ಕುರಿತು ಸಹಜವಾಗಿಯೇ ನನಗೆ ತುಂಬ ಹೆಮ್ಮೆಯಿತ್ತು. ಅನೇಕ ಜನ ಖ್ಯಾತ ಲೇಖಕರು  ನನ್ನೊಳಗಿನ ಸಹೃದಯಿಯನ್ನು ಗುರುತಿಸಿ  ಸ್ವಹಸ್ತಾಕ್ಷರ ಹಾಕಿದ  ತಮ್ಮ ಕೃತಿಗಳ ಗೌರವ ಪ್ರತಿಗಳನ್ನು ಪ್ರೀತಿಯಿಂದ ಕೊಡತೊಡಗಿದರು. ನಾನು ಸಹ ಅಂತಹ ಕೃತಿಗಳನ್ನು ಪ್ರೀತಿಯಿಂದ ಓದಿ ಲೇಖಕರೊಂದಿಗೆ ಚರ್ಚಿಸುತ್ತಿದ್ದೆ. ಇಂತಹ ಸಹೃದಯತೆಯ ದೆಸೆಯಿಂದ ಅನೇಕ ಒಳ್ಳೆಯ ಲೇಖಕರ ಒಡನಾಟ ಸಿಕ್ಕುವಂತಾಗಿದ್ದು ವಿಶೇಷ  ಸಂಗತಿ.

ನಿಜಕ್ಕೂ ನನಗೆ ಸಹೃದಯಿಯೊಬ್ಬನ  ಸಂಕಷ್ಟಗಳ ಕುರಿತು ಅರಿವಾಗ ತೊಡಗಿದ್ದು ಉದಯೋನ್ಮುಖ ಸಾಹಿತಿಗಳು ಪರಿಚಯವಾದ ನಂತರ. ಉದಯೋನ್ಮುಖ ಕವಿಗಳು/ಕವಯತ್ರಿಯರು ತಮ್ಮ ಕವನ ಸಂಕಲನಗಳ ಪ್ರತಿಗಳನ್ನು ಉಚಿತವಾಗಿ ನೀಡುವುದರೊಂದಿಗೆ ನನ್ನ ಸಹೃದಯತೆಯನ್ನು ಹಾಡಿ ಹೊಗಳತೊಡಗಿದರು. ಕನ್ನಡದಲ್ಲಿ ಸದ್ಯ ಕಲ್ಲು ಹೃದಯದ ವಿಮರ್ಶಕರೇ  ಹೆಚ್ಚಾಗಿದ್ದಾರೆಂದೂ ಅಂತಹವರಿಂದ ತಮಗೆ ಯಾವುದೇ ಪ್ರಯೋಜನವಿಲ್ಲವೆಂದೂ ಹೇಳತೊಡಗಿದರು. ಸಹೃದಯನಾದ ನನ್ನಂತಹ ವ್ಯಕ್ತಿ ವಿಮರ್ಶಕನಾಗ ಬೇಕೆಂದೂ ತಮ್ಮ ಕೃತಿಗಳ ಕುರಿತು ದೀರ್ಘವಾದ ಮತ್ತು ಸುಂದರವಾದ ವಿಮರ್ಶಾ  ಲೇಖನಗಳನ್ನು ಬರೆಯ ಬೇಕೆಂದೂ ಒತ್ತಾಯಿಸ ತೊಡಗಿದರು.

ಇನ್ನು ಕೆಲವು ಉದಯೋನ್ಮುಖರು ನನಗೆ ಪರಿಚಿತರಾದ ಹಿರಿಯ ಲೇಖಕರಿಂದ ಮುನ್ನುಡಿ, ಬೆನ್ನುಡಿ ಬರೆಯಿಸಿ ಕೊಡ ಬೇಕೆಂದು ಕಾಡತೊಡಗಿದರು. ಮತ್ತೆ ಕೆಲವರು ನಿಮಗೆ ಪರಿಚಿತರಾದ ಇಂತಿಂತಹ ದೊಡ್ಡ  ಸಾಹಿತಿಗಳು ಇಂತಿಂತಹ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದಾರೆ. ಆ ಲೇಖಕರ  ಬಳಿ ಪ್ರಶಸ್ತಿಗಾಗಿ ತಮ್ಮ ಬಗ್ಗೆ ಶಿಫಾರಸ್ಸು ಮಾಡ ಬೇಕೆಂದು ಕೇಳ ತೊಡಗಿದರು. ಕೆಲವು ಕವಿಗಳಂತೂ ತಮ್ಮ ಕವನ ಸಂಕಲನದ ಇಪ್ಪತ್ತು-ಮೂವತ್ತು ಪ್ರತಿಗಳನ್ನು ನನಗೆ ಕೊಟ್ಟು ಅವನ್ನೆಲ್ಲ ಮಾರಾಟ  ಮಾಡಿಸಿ ಕೊಡ ಬೇಕೆಂದು ಒತ್ತಾಯಿಸ ತೊಡಗಿದರು. ಇಂತಹವರ ಕಾಟದಿಂದ ತಪ್ಪಿಸಿ ಕೊಳ್ಳುವಷ್ಟರಲ್ಲಿ ನನಗೆ ಸಾಕು ಬೇಕಾಯಿತು. ಇರಲಿ, ಸಹೃದಯಿಯಾದ ಮೇಲೆ ಇಂತಹ ಸಾಹಿತ್ಯಿಕ ಸುಖ-ದುಃಖಗಳು ಬರುವುದು ಸಾಮಾನ್ಯ. ಏನೇ ಆದರೂ ಸಹ ಕನ್ನಡದಲ್ಲಿ ಸಹೃದಯಿಗಳ ಸಂಖ್ಯೆ ಹೆಚ್ಚಾಗಲಿ ಎಂಬುದು ನನ್ನ ಹೃತ್ಪೂರ್ವಕ ಆಶಯ ಮತ್ತು ಹಾರೈಕೆ.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಕವಿ ಮತ್ತು ಸಹೃದಯಿ”

  1. ಧರ್ಮಾನಂದ ಶಿರ್ವ

    ಸಹೃದಯಿಯೊಬ್ಬನ ಬವಣೆಯನ್ನು ಲಘುಬರಹ ಚೆನ್ನಾಗಿ ಕಟ್ಟಿಕೊಟ್ಟಿದೆ. ಲೇಖಕರು ಹೇಳಿರುವಂತೆ ಈಗ ಓದುವವರಿಗಿಂತ ಬರೆಯುವವರೇ ಹೆಚ್ಚಾಗಿದ್ದಾರೆ. ಚೋದ್ಯವೆಂದರೆ ಬರಹಗಾರರೆಂದೆನಿಸಿಕೊಂಡವರು, ಕರೆಯಿಸಿಕೊಳ್ಳುವವರು ತಾವು ಓದುವುದಕ್ಕಿಂತ ಬರೆಯುವುದೇ ಹೆಚ್ಚು. ಹೀಗಿರುವಾಗ ಅವರಿಗೆ ಹೆಸರಾಂತ ಸಾಹಿತಿಗಳ ಹೆಸರನ್ನು ಕೇಳಿಯಾದರೂ ಗೊತ್ತಿರುವ ಸಂದರ್ಭ ವಿರಳವೇ.
    ಇನ್ನು ಯುವ ಪೀಳಿಗೆಯವರು ಬರೆಯುವ ಸಾಹಿತ್ಯ, ಶೈಲಿ, ವಾಕ್ಯರಚನೆ, ವ್ಯಾಕರಣ, ಪದಶುದ್ಧಿ, ಕಾಗುಣಿತ… ಇತ್ಯಾದಿ ದೇವರಿಗೇ ಪ್ರೀತಿ….
    ಅಂತೂ ಇಂತೂ ನಾಲ್ಕಕ್ಷರ ಗೀಚಿದವರೆಲ್ಲ ಬರಹಗಾರರೇ….

  2. ವಿಶಾಲಾ ಆರಾಧ್ಯ

    ಸಾಹಿತ್ಯ ಲೋಕದ ಪ್ರತಿಯೊಂದು ಪಾತ್ರಗಳೂ ಆತ್ಮಾವಲೋಕನ ಮಾಡಿಕೊಳ್ಳುವಂತಹ ವಿಡಂಬನಾತ್ಮಕ ಬರಹ ಚೆನ್ನಾಗಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter