ಸೇಡು!

ಕೀವ್ ನಗರದ ಅಪಾರ್ಟಮೆಂಟಲ್ಲಿ ಮುದುರಿದಂತೆ ಮಲಗಿದ್ದ ನನಗೆ ತಡರಾತ್ರಿ ನಿದ್ದೆ ಬಂದಿತ್ತು. ಸುಟ್ಟ ವಾಸನೆಯ ಹೊಗೆ ಕುಡಿದು ಕುಡಿದು ಗಂಟಲು ಮೂಗು, ಕಣ್ಣು ಉರಿಯುತ್ತಿತ್ತು. ಮಗ ಸೊಸೆ ಮೊಮ್ಮಕ್ಕಳು ಎಲ್ಲಿಯವರೆಗೆ ಹೋದರೋ ಎನೋ. ಸುರಕ್ಷಿತವಾಗಿ ಯುಕ್ರೇನಿನ ಗಡಿ ದಾಟಿದರೆ ಸಾಕು ಎಂದುಕೊಂಡೆ.

ರಷ್ಯಾದ ಸೈನಿಕರು ಕೀವ್ ನಗರಕ್ಕೆ ಮುತ್ತಿಗೆ ಹಾಕುತ್ತಾರೆ ಎನ್ನುವ ಸುದ್ದಿ ಕಿವಿಗೆ ಬಿದ್ದಾಗಿನಿಂದಲೂ ‘ಇಲ್ಲಿಂದ ಹೊರಡಿ’ ಎಂದು ಮಗನಿಗೆ ದುಂಬಾಲು ಬಿದ್ದಿದ್ದೆ. ‘ಹೊರಡಿ ಎನ್ನುವುದೇತಕೆ. ಹೊರಡೋಣ ಎಂದು ಹೇಳು ಮಮ್ಮಿ” ಹೋಗುವುದಾದರೆ ಎಲ್ಲರೂ ಹೋಗೋಣ. ಇಲ್ಲ ಇಲ್ಲಿಯೇ ಇದ್ದು ಎಲ್ಲರೂ ಒಟ್ಟಿಗೇ ಸಾಯೋಣ’ ಎಂದಿದ್ದ ಮಗ.

 ‘ನೋ..  ನಾ ಬರಲಾರೆ.. ಆದರೆ ನೀವು ಹೋಗಲೇಬೇಕು. ನಿಮ್ಮ ಪುಟ್ಟ ಮಕ್ಕಳನ್ನು ಉಳಿಸಿ ಬೆಳೆಸುವ ಹೊಣೆ ನಿಮಗಿದೆ. ಹೊರಡಿ ಇದು ನನ್ನ ಆಣತಿ’ ಎಂದು ಗಟ್ಟಿದನಿಯಲ್ಲಿ ನುಡಿದೆ.

 ಮಗಳೆಂಬಂತೆ ಪ್ರೀತಿ ತೋರುತ್ತಿದ್ದ ಸೊಸೆ ಹತ್ತಿರ ಬಂದು ತಬ್ಬಿಕೊಂಡಳು. ಮನದಲ್ಲಿ ನೂರು ಭಾವ.. ಹೆಗಲು ಸೊಸೆಯ ಕಣ್ಣೀರಿನಿಂದ ಒದ್ದೆಯಾದಾಗ ಮನಸ್ಸೂ ತೋಯ್ದು ತೊಪ್ಪಡಿಯಾಗಿತ್ತು. ಮಮತೆಯಿಂದ ಅವಳ ತಲೆ ಸವರಿ ‘ಟ್ರಾಲಿ ಬ್ಯಾಗಿನಲ್ಲಿ ಅತ್ಯವಶ್ಯಕ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳಿ. .. ಎಂದು ಅವಸರಿಸಿದೆ. ಬೆನ್ನಿಗೆ ಹಾಕಿಕೊಳ್ಳುವ ಒಂದು ಬ್ಯಾಗ್, ಎರಡು ಟ್ರಾಲಿ ಸಿದ್ದಪಡಿಸುತ್ತ ಆಗಾಗ ದೀನ ದೃಷ್ಟಿ ಬೀರುತ್ತಿದ್ದ ಮಗನೆಡೆ ನೋಡದೇ ಮೊಮ್ಮಕ್ಕಳತ್ತ ದೃಷ್ಟಿ ಹಾಯಿಸಿದೆ.

     ಪರಿಸ್ಥಿತಿಯ ಅರಿವಿಲ್ಲದ ಮೊಮ್ಮಕ್ಕಳಿಬ್ಬರು ಆಟ ಆಡುತ್ತಿದ್ದರು. . ‘ಇದು ಬಿಪಿ, ಶುಗರಿಗೆ ತೆಗೆದುಕೊಳ್ಳುವ ಮಾತ್ರೆ. ಇವೆಲ್ಲಾ ಎಮರ್ಜೆನ್ಸಿ ಮೆಡಿಸಿನ್ಸ’ ಎನ್ನುತ್ತಾ  ಸೊಸೆ ಒಂದೆಡೆ ಅವನ್ನೆಲ್ಲ ಜೋಡಿಸಿದಳು. ಮಗ ಅದನ್ನೆಲ್ಲ ನೋಡುತ್ತಿದ್ದವನು  ‘ಅಯ್ಯೋ ಇದೇಕೆ ಇದರೊಂದಿಗಿದೆ? ಇದು ಇಲಿ ಪಾಶಾಣ .. ಎಂದು ಒಂದು ಪ್ಯಾಕೆಟನ್ನೆತ್ತಿ ಟಾಯ್ಲೆಟ್ಟಿನ ಮೂಲೆಯ‌ ಕಬೋರ್ಡಿನಲ್ಲಿ ಹಾಕಿಟ್ಟು ಬಂದ. ..

‘ಅದೃಷ್ಟ ಇದ್ದರೆ ಮತ್ತೆ ಭೇಟಿಯಾಗೋಣ’ . ಎಂದು ಭಾರವಾದ ಮನದಿಂದಲೇ ಅವರನ್ನು ಬೀಳ್ಕೊಟ್ಟೆ.  ‘ಯುದ್ಧ ಮುಗಿಯಲಿ’…ಎಲ್ಲರ ಮನದಲ್ಲಿಯೂ ಸ್ಥಾಯಿ ಭಾವ.

 ನಾಲ್ಕು ದಿನ ಕಳೆಯಿತು. ಹಲವರು ನಗರ ತೊರೆದರೂ ಇನ್ನೂ ಹುಟ್ಟಿ ಬೆಳೆದ  ಮನೆಯನ್ನು ಬಿಟ್ಟು ಹೋಗಲಾರದ  ಒಂದಿಷ್ಟು ಜನರೂ ನನ್ನಂತೆಯೇ ಕೀವ್ ನಲ್ಲಿ ನಲ್ಲಿಯೇ  ಇದ್ದರು. ಹಲವರು ಮನೆಗಳನ್ನು ತೊರೆದು ಬಂಕರ್ ಗಳಲ್ಲಿ, ರಂಗಮಂದಿರದಲ್ಲಿ ಸೇರಿ ಕೊಂಡಿದ್ದಾರೆ  ಎಂಬ ಸುದ್ದಿ ಸಿಗುತ್ತಿತ್ತು. ಯದ್ದ ಪ್ರಾರಂಭವಾಗ ಹದಿನೈದು ದಿನವಾದರೂ ಫಲಪ್ರದವಾಗದ ಸಂಧಾನ ಮಾತುಕತೆಯಿಂದಾಗಿ ಯುದ್ಧ ಮುಂದುವರಿದುಕೊಂಡೇ ಇತ್ತು. ಹತಾಶೆಯಿಂದ ರಷ್ಯಾದ ಸೈನಿಕರು ನರಮೇಧ ಎಸಗಲಾರಂಭಿಸಿದ್ದರು.  ನಾಗರೀಕರು ವಾಸಿಸುವ ಸ್ಥಳ , ಅಸ್ಪತ್ರೆ..ಎಲ್ಲೆಡೆ ಬಾಂಬ್ ಹಾಕಲಾರಂಭಿಸಿದ್ದರು.

ನಮ್ಮ ಅಪಾರ್ಟಮೆಂಟ್ ಇದಿರು ಅನತಿ ದೂರದಲ್ಲಿ ಇರುವ ಬೃಹತ್ ಆಸ್ಪತ್ರೆ ಯ  ಮೇಲೆ ಬಿದ್ದಬಾಂಬ್ ನ ಹೊಡೆತಕ್ಕೆ ನಮ್ಮ ಮನೆಯ ಕಿಟಕಿ ಗಾಜುಗಳೆಲ್ಲ ಒಡೆದು ಇಡೀ ಅಪಾರ್ಟ ಮೆಂಟ್ ಕರ್ರಗೆ ಮಸಿ ಬಡಿದುಕೊಂಡಂತಾಗಿತ್ತು. ಒಡೆದ ಕಿಟಿಕಿಯಿಂದಾಚೆ ದೃಷ್ಟಿ ಹಾಯಿಸಿದೆ.  ಮುರಿದು ಬಿದ್ದ ಆಸ್ಪತ್ರೆ. ಕರಟಿ ಬಿದ್ದ ಜೀವಗಳು.. ರುಂಡವಿಲ್ಲವ ಮಂಡಗಳು. ತುಂಡಾಗಿಬಿದ್ದ ಕಾಲು ಕೈಗಳು. ಜೀವನದಲ್ಲಿ ಹಿಂದೆಂದೂ ಕಂಡರಿಯದ ಭಯಾನಕ ದೃಶ್ಯ.. ಎದೆ ತಲ್ಲಣಿಸಿತು. ನೋಡಲಾಗದೇ ಕಣ್ಮುಚ್ಚಿಕೊಂಡು ಮನೆಯ ಮೂಲೆಯಲ್ಲಿ ಕುಸಿದು ಕುಳಿತೆ.

ಮೊಮ್ಮಕ್ಕಳ ನೆನಪಾಗುತ್ತಿತ್ತು. ಹಕ್ಕಿಗಳ ಚಿಲಿಪಿಲಿ, ಶಾಲಾಮಕ್ಕಳ ಮಾತುಕತೆಯ ಕಲರವ, ದೂರದ ಕಲಾಶಾಲೆಯ ಮೆಲು ವಾದ್ಯಘೋಷ, … ಎಲ್ಲವೂ ಕರಗಿ ಬಾಂಬಿನ ಭೀಕರ ಸ್ಪೋಟದ ಸದ್ದೊಂದೇ ಸತ್ಯ ಎನ್ನುವಂತೆ ಆಯ್ತಲ್ಲ. ಅಯ್ಯೋ  ಎಂಬ ಭಾವದಲ್ಲಿ ಅದೆಷ್ಟೋ ಹೊತ್ತು ಕುಳಿತೇ ಇದ್ದೆ. ಇಷ್ಟೆಲ್ಲ ಸಂಕಟದ ನಡುವೆಯೂ ಹಸಿವಾಗುತ್ತದೆಯಲ್ಲ. ಜೀವ ಹಿಡಿವಾಸೆಗೆ ಎದ್ದು ಕೇಕ್ ಮಾಡಲುತೊಡಗಿದೆ.

‘ಇಲ್ಲಿ ಯಾರಿದ್ದೀರಿ! ? ಕೂಗು ಕಿವಿಗೆ ಬಿತ್ತು. ಕಿಟಕಿಯಲ್ಲಿ ಇಣುಕಿದೆ. ಆರು ರಷ್ಯನ್ ಸೈನಿಕರು ನಿಂತಿದ್ದರು. ಬಳಲಿದ್ದರು. ನೀರು… ಸರಿ ಸುಮಾರು ನನ್ನ ಮಗನ ವಯಸ್ಸಿನವರೇ…. ಅಡುಗೆ ಮನೆಗೆ ಹೋಗಿ ಎರಡು ಲೀಟರ್ ನೀರು ತುಂಬಿದ ಪುಟ್ಟ ಕ್ಯಾನ್ ಒಂದನ್ನು ಅವರ ಕೈಗಿತ್ತೆ.    ಯುಗ ಯುಗಗಳಿಂದ ಬಾಯಾರಿದವರಂತೆ ಅವರು ಗಟಗಟನೇ ನೀರು ಕುಡಿದರು.. ಅವರತ್ತ ಬೆನ್ನು ಮಾಡಿ  ಮನೆಯತ್ತ ತಿರುಗಿದೆ. ಯಾರೋ ಕೂಗಿದಂತಾಯ್ತು.  ಒಬ್ಬ ಸೈನಿಕ ನನ್ನ ಹಿಂದೆಯೇ ಬರುತ್ತಿದ್ದ. ‘ಏನು ಬೇಕಪ್ಪಾ?’ ಎಂದು ಕೇಳಿದೆ.

‘ನಿಮಗೆ ಸಾಕಷ್ಟು ಹಣ ಕೊಡುತ್ತೇವೆ ಏನಾದರೂ ತಿನ್ನಲು ಕೊಡುತ್ತೀರಾ?’ ಸುಮ್ಮನೆ ತಲೆ ಆಡಿಸಿದೆ. ಅರ್ಧ ಗಂಟೆ ಸಮಯ ಕೊಡಿ.. ಏನಾದರೂ ಕೊಡುವೆ. ಇನ್ನೇನು ಕತ್ತಲಾಯಿತು. ಯುದ್ದವೇನೂ ಮಾಡಲು ಸಾಧ್ಯವಿಲ್ಲ ಅಪಾರ್ಟ್ಮೆಂಟ್ ಇದಿರು ಕೂತಿರಿ’ ಎಂದೆ.’ಆಗಲಿ’ ಎಂದ ಹಸಿದ ಸೈನಿಕನ ಮೊಗದಲ್ಲಿ ಆಹಾರಕೊಡುವೆ ಎಂದಾಗ ಯುದ್ಧ ಗೆದ್ದ ಸಂತೋಷ!

ಅಡುಗೆ ಮನೆಗೆ ಹೋದವಳೆ ಕೇಕಿಗೆಂದು ತೆಗೆದಿಟ್ಟ ಮೈದಾ ಹಿಟ್ಟಿನ ಪಾತ್ರೆಗೆ ಮತ್ತಿಷ್ಟು ಹಿಟ್ಟು ಸುರಿದು ಸಕ್ಕರೆ ಪುಡಿ ಸೇರಿಸಿದೆ. ಮೊಟ್ಟೆ ಬೀಟ್ ಮಾಡಿ ಹಾಕುವಾಗ ಮೊಮ್ಮಕ್ಕಳ ನೆನಪಾಗಿ ಕಣ್ತುಂಬಿ ಬಂತು. ಅಜ್ಜಿ ‘ಕ್ಯಾನ್ ಐ ಹೆಲ್ಪ ಯು’ ಎನ್ನುತ್ತ ಮೊಟ್ಟೆ ಬೀಟ್ ಮಾಡುವುದು ಮೊಮ್ಮಗಳ ಕೆಲಸವಾಗಿತ್ತು. ಎರಡು ಪುಟ್ಟ ಕೈಗಳನ್ನು ಅಗಲವಾಗಿ ಚಾಚಿ ಅಜ್ಜಿ ನನಗೆ ಇಷ್ಟು ದೋ…ಡ್ಡ ಕೇಕ್ ಎಂದು ಮುದ್ದಾಗಿ ನುಡಿಯುತ್ತಿದ್ದ ಮೊಮ್ಮಗ. . .

ಎಷ್ಟು ನೆಮ್ಮದಿ ಇತ್ತು ಈ ಮನೆಯಲ್ಲಿ. ಈ ದೇಶದಲ್ಲಿ… ಛೇ ನಾನೇನು ಮಾಡುತ್ತಿದ್ದೇನೆ? ಯಾರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ್ದಾರೋ ಆ ಸೈನಿಕರಿಗೆ ಆಹಾರವನ್ನಿತ್ತು ಅವರ ಜೀವ ಉಳಿಸಲು ನೆರವಾಗುತ್ತಿದ್ದೇನೆಯೇ? ಕೂಡದು ನಾನು ಈ ಕೆಲಸ ಮಾಡಬಾರದು…ಹಿಟ್ಟು ಕಲೆಸುತ್ತಿದ್ದ ಕೈಗಳು ಸ್ಥಬ್ದವಾದವು. ಕಣ್ಮುಚ್ಚಿದೆ…  ಯುಕ್ರೇನಿನ ಉಳಿವಿಗಾಗಿ ಹೋರಾಡಿ ಮಡಿದ ಅಸಂಖ್ಯಾತ ಸೈನಿಕರ, ದೇಶ ತೊರೆದು ಹೋದ ನಾಗರೀಕರ ನೋವು ಸಂಕಟ ನೆನಪಾಯ್ತು.. ಈ ದೇಶಕ್ಕಾಗಿ ನಾನೇನು ಮಾಡಬಹುದು? ಥಟ್ಟೆಂದು ನೆನಪಾಯ್ತು ಮಗ ಟಾಯ್ಲೆಟ್ ಮೂಲೆಯಲ್ಲಿಟ್ಟ ಇಲಿ ಪಾಶಾಣ!

ವೆನಿಲ್ಲಾ ಫೇವರಿನ ಸುಂದರವಾದ ಕೇಕು ಸಿದ್ಧವಾಯ್ತು. ತೆಗೆದುಕೊಂಡು ಸೈನಿಕರ ಕಡೆಗೆ ಹೊರಟೆ… ಸದಾ ಮಾನವೀಯತೆಯ ಬಗ್ಗೆ  ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕಿಯಾದ ನಾನು ಯುಕ್ರೇನಿನ  ಸೈನಿಕಳಾಗಿ ಬದಲಾಗಿದ್ದೆ.ನಸು ನಗುತ್ತಾ ಕೃತಕ ಮಮತೆಯಿಂದ ಕೇಕನ್ನು  ರಷ್ಯನ್ ಸೈನಿಕರ ಕೈಗಿತ್ತೆ. ಹಣವನ್ನೂ ನಿರಾಕರಿಸಿದೆ..  ಧನ್ಯವಾದಗಳನ್ನು ಅರ್ಪಿಸಿದ ಸೈನಿಕರು ಗಬ ಗಬನೇ ಕೇಕು ತಿನ್ನಲಾರಂಭಿಸಿದರು.. ಲಗುಬಗೆಯಿಂದ ಮನೆಯತ್ತ ತಿರುಗಿ ಹೊರಟೆ. ಅಪಾರ್ಟ ಮೆಂಟ ಇದಿರು ಇರುವ ಕಂಬದ ಮರೆಯಲ್ಲಿ ನಿಂತು ನೋಡಿದೆ. ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬೀಳುತ್ತ ವಿಲ ವಿಲ ಒದ್ದಾಡಲಾರಂಭಿಸಿದರು. ಇಲಿ ಪಾಶಾಣ ಚೆನ್ನಾಗಿ ಕೆಲಸ ಮಾಡಿತ್ತು….

– ಮಾಲತಿ ಹೆಗಡೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಸೇಡು!”

  1. ಧರ್ಮಾನಂದ ಶಿರ್ವ

    ಯುದ್ಧಕಾಲದ ವಾತಾವರಣವನ್ನು, ಅದು ನಮ್ಮೊಳಗೆ ತುಂಬಬಹುದಾದ ಭಯ, ಆತಂಕ, ಅಗಲಿಕೆಯ ನೋವನ್ನು ಕಥೆ ಚೆನ್ನಾಗಿ ಕಟ್ಟಿಕೊಟ್ಟಿದೆ.
    ಓರ್ವ ನಾಗರಿಕಳಾಗಿ ರಷ್ಯನ್ ಸೈನಿಕರ ಅಂತ್ಯಕ್ಕೆ ಕಾರಣವಾದ ಸಂದರ್ಭ ಓದುಗನ ಮನಸ್ಸಿನಲ್ಲಿ ತಪ್ಪಿನ ಭಾವವನ್ನು ಕ್ಷಣಕಾಲ ಹುಟ್ಟುಹಾಕಿದರೂ ಮಾನವೀಯತೆಯ ಎದುರು ತನ್ನ ದೇಶ ಯುದ್ಧದಿಂದ ಬರ್ಬರಿಕವಾಗಿ ನಾಶವಾಗುವ ಸನ್ನಿವೇಶವೇ ಮೇಲುಗೈಯಾಗಿ ಕೈಗೊಂಡ ನಿರ್ಧಾರ ಕಥಾಂತ್ಯದ ಮಾನವಸಹಜ ಸೇಡನ್ನು
    ಪ್ರತಿಧ್ವನಿಸುತ್ತದೆ.

  2. Sowmya Praveen

    ಅಬ್ಬಾ! ಬಹಳ ಚೆನ್ನಾಗಿ ಕಥೆ ಹೆಣೆದಿರುವಿರಿ ಮೇಡಂ…ದೃಶ್ಯ ಕಣ್ಣ ಮುಂದೆ ಬಂದಂತಾಯಿತು…

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter