ಹೊಂಬೆಳಕ ಹರಡುತಾ ಯುಗಾದಿಯ ಹೊನಲು ಸಿಂಗರಿಸಿದೆ ಇಳೆಯ ಮೂಡಣದಲ್ಲಿ ಮಳೆಬಿಲ್ಲು ಮೂಡಿ ಮುಗಿಲು ಸಿಂಗರಿಸಿದೆ ಇಳೆಯ ಹೊಂಗೆಯ ಸುಮ ಕಂಪು ದುಂಬಿ ಝೇಂಕಾರಕೆ ನಲಿಯುತಿದೆ ಜಗವು ಕೋಗಿಲೆ ಹಾಡಿಗೆ ಬಿರಿದ ಮಲ್ಲಿಗೆ ಘಮಲು ಸಿಂಗರಿಸಿದೆ ಇಳೆಯ ವಸಂತನಾಗಮನಕೆ ಚಿಗುರಿದ ಬನದ ಹೂ ಕಾಯಿ ಬಳಕುತಿವೆ ಬೇವು ಬೆಲ್ಲದ ಜೊತೆ ಹುಳಿ ಮಾವಿನ ಫಸಲು ಸಿಂಗರಿಸಿದೆ ಇಳೆಯ ಸುರಿದ ಮಳೆಗೆ ಧಾರಿಣಿ ಗಂಧ ಬೀರಲು ಬಾನು ರಂಗೇರಿತು ಕಂಡು ಕಾಮನಬಿಲ್ಲು ಕುಣಿಯುತಾ ನವಿಲು ಸಿಂಗರಿಸಿದೆ ಇಳೆಯ ಶಿವ ಗಿರಿಜೆ ಮಿಲನಕೆ ಕುಸುಮ ತೋರಣ ಕಟ್ಟಿ ಕಾದಿದೆ ಲೋಕ ಮಾವು ಬೇವಿನ ಬಾಸಿಂಗ ಕರಡಿ ಮಜಲು ಸಿಂಗರಿಸಿದೆ ಇಳೆಯ ಆದಿ ಅಂತ್ಯವಿಲ್ಲದ ಸೃಷ್ಟಿಯು ಒಲವ ಚೈತನ್ಯ ತಂದಿದೆ ಹಾಕಿದ ಅನುರಾಗದ ರಂಗೋಲಿ ಬಯಲು ಸಿಂಗರಿಸಿದೆ ಇಳೆಯ ನಿರಾಕಾರನ ಒಲಿಸುವ "ಪ್ರಭೆ" ಯ ಭ್ರಮೆಗೆ ಏನು ಹೇಳುವೆ ಎದೆಯಲಿ ಕುಣಿವ ಮನ್ಮಥನ ಕನಸ ಅಮಲು ಸಿಂಗರಿಸಿದೆ ಇಳೆಯ
ಗಜಲ್
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಪ್ರಭಾವತಿ ಶಾಂತಮಲ್ಲಪ್ಪ ದೇಸಾಯಿ
ಕಾವ್ಯನಾಮ 'ಪ್ರಭೆ', ಅಂಕಿತ ನಾಮ 'ಶಾಂತಪ್ರಭೆ'.
ಸಾಹಿತ್ಯ ರಚನೆ ಹಾಗೂ ಪ್ರಕಟಿತ ಸಂಕಲನಗಳು :
ಕಾವ್ಯ ಸಂಕಲನಗಳು :
ಮೌನ ಕೋಗಿಲೆ ಮತ್ತು ಮಿಶ್ರಕಾವ್ಯ
ಹನಿಗವನ ಸಂಕಲನಗಳು :
ಮುಂಗಾರು ಹನಿಗಳು ಮತ್ತು ಮಧುಸಾರ
ವಚನಗಳ ಸಂಕಲನಗಳು :
ಶಾಂತಪ್ರಭೆಯ ನವ ವಚನಗಳು, ವಚನ ಪ್ರಭೆ (ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇವರು ಪ್ರಕಟಿಸಿದ್ದಾರೆ), ವಚನ ಮಿಂಚು
ಕನ್ನಡ ಗಜಲ್ ಸಂಕಲನಗಳು :
ಮೌನ ಇಂಚರ, ಮಿಡಿತ, ನಿನಾದ, ಭಾವಗಂಧಿ
ಪ್ರಬಂಧಗಳ ಸಂಕಲನಗಳು :
ಮೊಬಾಯಿಲ್ ಪಯಣ, ಸ್ವಚ್ಛ ಭಾರತ ಹಾಗೂ ಇತರ ಪ್ರಬಂಧಗಳು, ಕಪ್ಪು ಹಣ ಹಾಗೂ ಇತರ ಪ್ರಬಂಧಗಳು
ಕಥಾಸಂಕಲನ :
ಮುಸ್ಸಂಜೆ
ಪ್ರವಾಸ ಕಥನ :
ಪಕ್ಷಿ ನೋಟ(ಲಂಡನ್ ಪ್ರವಾಸ ಕಥನ)
ಸಂಪಾದಕಿಯ ಕೃತಿ :
ರಂಗ ಸ್ಪಂದನ (ಒಟ್ಟು 17 ಕೃತಿಗಳು ಪ್ರಕಟವಾಗಿವೆ)
ಬಂದ ಪ್ರಶಸ್ತಿಗಳು(ಮುಖ್ಯವಾದವುಗಳು) :
- ಕನಾ೯ಟಕ ರಾಜ್ಯ ಸರಕಾರ ನೀಡುವ ರಾಜ್ಯ ಮಟ್ಟದ 'ಕಿತ್ತೂರು ರಾಣಿ ಚೆನ್ನಮ್ಮಪ್ರಶಸ್ತಿ'
- ಕನಾ೯ಟಕ ರಾಜ್ಯ ಸರಕಾರ ನೀಡುವ ಜಿಲ್ಲಾ ಮಟ್ಟದ 'ರಾಜ್ಯೋತ್ಸವ ಪ್ರಶಸ್ತಿ'
- ರಾಷ್ಟ್ರಮಟ್ಟದ 'ಮಾ ಶಾರದ ಪ್ರಶಸ್ತಿ'
- ರಾಜ್ಯ ಮಟ್ಟದ 'ಸಿದ್ಧಸಿರಿ ಪ್ರಶಸ್ತಿ'
- ರಾಷ್ಟ್ರಮಟ್ಟದ 'ಡಾ. ಪರವೀನ ಬಾನು ಪ್ರಶಸ್ತಿ'
ಇನ್ನೂ ಅನೇಕ ಜಿಲ್ಲಾ ಮಟ್ಟದ ಪ್ರಶಸ್ತಿಗಳು ಹಾಗೂ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನಗಳು ಬಂದಿವೆ.
ಕಲಬುರಗಿ ವಿಶ್ವವಿದ್ಯಾಲಯದವರು ಇವರ ಪ್ರಬಂಧವನ್ನು ಪಠ್ಯದಲ್ಲಿ ಸೇರಿಸಿ ಕೊಂಡಿದ್ದಾರೆ. ವಿಜಯಪುರದ ಅಕ್ಕಮಹಾದೇವಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿನಿ ಇವರ ಬದುಕು ಬರಹದ ಬಗ್ಗೆ ಎಮ್ ಫಿಲ್ ಮಾಡಿದ್ದಾಳೆ. ಇಲ್ಲಿ ಅನೇಕ ವಿದ್ಯಾರ್ಥಿನಿಯರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಎಮ್ಎ ವಿದ್ಯಾರ್ಥಿಗಳು ಇವರ ಸಾಹಿತ್ಯ ಬಗ್ಗೆ ಡೆಜೆಟ್ ವರ್ಕ್ ಮಾಡಿದ್ದಾರೆ. ಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿಜಯಪುರ ಇವರು ಪ್ರಸಾಂಗ ವಿಭಾಗದಿಂದ ಪ್ರಕಟವಾದ ಕೃತಿಗಳಲ್ಲಿ ಇವರ ಲೇಖನಗಳು, ಗಜಲ್ ಗಳು, ಪ್ರಬಂಧಗಳು ಪ್ರಕಟವಾಗಿವ. ಅನೇಕ ಪತ್ರಿಕೆಗಳಲ್ಲಿ ಇವರ ಕವನಗಳು, ಗಜಲ್ ಗಳು, ಪ್ರಬಂಧಗಳು ಪ್ರಕಟವಾಗಿವೆ.
All Posts