ಹುಡುಕಾಟ

“ಯಾಕೋ ತುಂಬಾ ಲೇಟಾಯಿತಲ್ಲ…?”

                “ಆಫೀಸಿನಲ್ಲಿ ಪಾರ್ಟಿ ಇತ್ತು.”

                “ಫೋನ್‍ಮಾಡಿ ಹೇಳುವುದಕ್ಕೇನು ಧಾಡಿ…!”

                “ನಾನು ಟ್ರೈ ಮಾಡಿದಾಗ ನಿಂದು ನಾಟ್ ರೀಚೆಬಲ್ ಇತ್ತು.”

                “ಉತ್ಕರ್ಷ, ನಾನು ಬಹಳ ಹೊತ್ತಿನಿಂದ ಪ್ರಯತ್ನಿಸಿದೆ. ನೀನು ನನ್ನ ಕರೆಯನ್ನು ಸ್ವೀಕರಿಸಲಿಲ್ಲ.”

                “ಹೌದೇನೇ ಸುವನಾ?” ಎಂದೆನ್ನುತ್ತಾ ಉತ್ಕರ್ಷ ಫೋನ್ ಚೆಕ್ ಮಾಡಿದ.

                “ಸಾರಿ ಸುವನಾ, ಫೋನ್ ಸೈಲೆಂಟ್ ಮೋಡ್ನಲ್ಲಿ ಇಟ್ಟಿದ್ದೆ. ನೋಡಿಲ್ಲ ಕಣೇ.” 

                “ಊಟ…?”

                “ನಂದು ಊಟ ಅಲ್ಲೇ ಆಯಿತು. ನಿಂದು…?”

                “ನಿನಗೆ ಕಾದು, ಕಾದು ಈಗಷ್ಟೇ ಮಾಡಿದೆ. ಟೈಮ್ ಆಗಲೇ ಹನ್ನೊಂದಾಗಿದೆಯಲ್ಲ?”

                “ಒಳ್ಳೇದೇ ಆಯಿತು ಬಿಡು.”

                “ನಿದ್ರೆ ಬರುತ್ತಿದೆ ಮಲಗುವಾ. ನಾಳೆ ಶನಿವಾರ ಇರುವುದರಿಂದ ಮಾಮೂಲಿನಂತೆ ಬೆಳಿಗ್ಗೆ ಬೇಗನೇ ಏಳುವ ಧಾವಂತವಿಲ್ಲವಲ್ಲ, ಅದೇ ಖುಷಿಯ ವಿಚಾರ.” ಸುಮನಾ ಗಂಡ ಉತ್ಕರ್ಷನನ್ನು ಹೊರಡಿಸಿಕೊಂಡು ಬೆಡ್ ರೂಮಿಗೆ ಹೊರಟಳು. ಹಾಸಿಗೆಗೆ ಮೈ ಒಡ್ಡುತ್ತಿದ್ದಂತೆ ಉತ್ಕರ್ಷ ಆ ಕಡೆಗೆ ಮುಖ ಮಾಡಿ ಮಲಗಿದಾಗ ಸುವನಾ ಅವನನ್ನು ಮೇಲೆಳೆದುಕೊಳ್ಳಲು ಮುಂದಾದಳು.

                “ಸುವನಾ, ಯಾಕೋ ಸುಸ್ತಾಗಿದೆ. ನಿದ್ರೆನೂ ಬಂದಿದೆ. ಪ್ಲೀಜ್ ಕಣೆ.”

                “ಜ್ವರ-ಗಿರ ಬಂದಿದೆಯೇನೋ?” ಎಂದೆನ್ನುತ್ತಾ ಸುವನಾ ಗಾಬರಿಯಿಂದ ಗಂಡನ ಹಣೆ, ಕೊರಳು, ಮೈ ಮುಟ್ಟಿ ಪರೀಕ್ಷಿಸಿದಳು. ಹಾಗೇನೂ ಅವನ ಮೈ ಬಿಸಿ ಇಲ್ಲದ್ದರಿಂದ ಸಮಾಧಾನದಿಂದ ನಿಟ್ಟುಸಿರು ಬಿಟ್ಟಳು.

                “ಹಾಗೇನು ಮೈ ಬಿಸಿ ಇಲ್ಲ ಕಣೋ. ಆಫೀಸಿನಲ್ಲಿ ತುಂಬಾ ಕೆಲಸಾನಾ…?” ತುಂಬಾ ಕಳಕಳಿ, ಕಾಳಜಿಯಿಂದ ಅವನ ಹಣೆಗೆ ಮುತ್ತಿಟ್ಟು, “ಹಾಯಾಗಿ ನನ್ನೆದೆಯ ಮೇಲೆ ಮಲಗು. ದಣಿವು ತನ್ನಿಂದ ತಾನೇ ಮಾಯವಾಗುತ್ತೆ. ಬೆಳಗಾಗುವಷ್ಟರಲ್ಲಿ ಫ್ರೆಷ್ ಆಗುವಿ. ನಾಳಿನ ವೀಕೆಂಡ್ ಪ್ರೋಗ್ರ್ಯಾಂ ಬಗ್ಗೆ ಬೆಳಿಗ್ಗೇನೇ ನಿರ್ಧರಿಸೋಣ.” ಸುವನಾ ಉತ್ಕರ್ಷನ ಮುಖವನ್ನು ತನ್ನೆದೆಗೆ ಅವುಚಿ ಹಿಡಿಕೊಂಡು ಮುಂಗುರುಳನ್ನು ತೀಡುತ್ತಾ ನುಣುಪಾದ ತಲೆಗೂದಲಲ್ಲಿ ನವಿರಾಗಿ ಬೆರಳಾಡಿಸತೊಡಗಿದಳು. ಸುವನಾಳ ನಿಷ್ಕಲ್ಮಷ ಪ್ರೀತಿ, ಆತ್ಮೀಯತೆ, ಭಾವುಕತೆಗೆ ಉತ್ಕರ್ಷನ ಹೃದಯ ತುಂಬಿ ಬಂದಿತ್ತು. ಅವನ ಹೃದಯದಲ್ಲಿ ಒಂದು ರೀತಿಯ ಕಂಪನ. ತುಸು ಹೊತ್ತಿನ ನಂತರ ಮುಖವೆತ್ತಿ ಹೆಂಡತಿಯ ಮುಖ ದಿಟ್ಟಿಸಿದ. ಕಣ್ಮುಚ್ಚಿ ಮಲಗಿದ್ದ ಅವಳು ಆಗಲೇ ನಿದ್ರಾದೇವಿಗೆ ಶರಣಾಗಿದ್ದು ಅವನ ಅರಿವಿಗೆ ಬಂತು. ಮುಗ್ಧ ಮಗುವಿನಂತೆ ಕಂಡಳು ಸುವನಾ. ಎಲ್ಲೋ ಓದಿದ, “ಹುಡುಗರ ಮನಸ್ಸು ಮಗುವಿನಂತೆ, ಹುಡುಗಿಯರ ಮನಸ್ಸು ಕೋತಿಯಂತೆ” ಎಂಬ ಮಾತು ತನ್ನ ಜೀವನದಲ್ಲಿ ಉಲ್ಟಾ ಆಗಿದೆ ಎಂದು ಅಂದುಕೊಂಡ. ಪಕ್ಕಕ್ಕೆ ಹೊರಳಿ ಅಂಗಾತ ಮಲಗಿ ನಿದ್ರಿಸಲು ಪ್ರಯತ್ನಿಸಿದ ಉತ್ಕರ್ಷನಿಗೆ ನಿದ್ರಾದೇವಿ, “ನಿನ್ನ ಸಮೀಪ ನಾ ಸುಳಿಯಲೊಲ್ಲೆ” ಎಂದ ಹಾಗಾಯಿತು. ಅಂದಿನ ಸಂಜೆಯ ಸುಂದರ, ರಸಮಯ ಕ್ಷಣಗಳು ಅವನ ಮನದಲ್ಲಿ ಅಚ್ಚೊತ್ತಿ ನಿಂತು ಅಟ್ಟಹಾಸ ಮೆರೆಯತೊಡಗಿದವು.

****

                “ಉತ್ಕರ್ಷ, ನೀನು ತುಂಬಾ ವಿಶಿಷ್ಠ ವ್ಯಕ್ತಿತ್ವದ ಹುಡುಗ ಕಣೋ.”

                “ಕ್ಷಿತಿಜಾ, ಹಾಗೆಂದರೆ…? ನನಗೆ ಅರ್ಥವಾಗಲಿಲ್ಲ…?”

                “ಮೊದಲನೆಯದಾಗಿ ನಿನ್ನ ಹೆಸರಲ್ಲೇ ವಿಶಿಷ್ಠತೆ ಇದೆ. ಎರಡನೆಯದಾಗಿ ನಿನ್ನ ಜೀನ್ಸ್‍ನಲ್ಲಿ ಮ್ಯೂಟೇಷನ್ ಆಗಿರಬೇಕು ಅಂತ ನನ್ನ ಅನಿಸಿಕೆ.”

                “ಅಂದರೆ?”

                “ಹೇಳಿದರೆ ತಪ್ಪಾಗಿ ಭಾವಿಸುವುದಿಲ್ಲ ತಾನೇ…?”

                “ಇರಲಿ ಹೇಳೇ ಸುಬ್ಬಿ? ರಾಗವೇಕೆ…?”

                “ನಿನ್ನ ಅಪ್ಪ ನೋಡಿದರೆ ಪಕ್ಕಾ ಸಂಪ್ರದಾಯಸ್ಥ. ನೀನೋ ಅವರಿಗೆ ತದ್ವಿರುದ್ಧ. ಅವರು ಪೂಜೆ-ಪುನಸ್ಕಾರ, ಆಚಾರ-ವಿಚಾರ, ಸಂಪ್ರದಾಯ, ಸಂಸ್ಕಾರ, ಕಟ್ಟುಪಾಡುಗಳು ಅದೂ ಇದೂ ಅಂತ ತುಂಬಾ ಕಟ್ಟು-ನಿಟ್ಟಿನ ವ್ಯಕ್ತಿ. ಆದರೆ ನಿನಗೆ ಅದ್ಯಾವ ಕಟ್ಟುಪಾಡುಗಳಿಲ್ಲ. ನೀನು, ನಿನ್ನ ಹವ್ಯಾಸಗಳನ್ನು ಗಮನಿಸಿದರೆ ನೀನು ಅವರ ಮಗನು ಹೌದೋ ಅಲ್ಲವೋ ಎಂಬ ಅನುಮಾನ ಸಹಜವಾಗಿ ಶುರುವಾಗುತ್ತೆ ಅಂತರಾಳದಲ್ಲಿ.”

                “ಹೀಗಂತಿಯಾ?”

                “ಮತ್ತಿನ್ನಿನ್ನೇನು? ನಿನ್ನ ತಂದೆಯವರು ಟೀ ಟೋಟ್ಲರ್. ಆದರೆ ನೀನು…? ನಿನಗೆ ಗುಂಡೂ ಬೇಕು, ತುಂಡೂ ಬೇಕು. ಮನೆಯಲ್ಲಿ ದಂತದ ಬೊಂಬೆಯದಂಥ ಮನದನ್ನೆ ಇರುವಾಗಲೂ ನನ್ನಂಥಹ ಬೆಡಗಿಯರೂ ಬೇಕು. ನಿಮ್ಮಪ್ಪನೋ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಂತೆ ಏಕ ಪತ್ನೀವ್ರತಸ್ಥರು. ನಿನ್ನಮ್ಮ ಅವರ ಜೀವನದಲ್ಲಿ ಬಂದಿರುವ ಏಕೈಕ ಹೆಂಗಸು ಎಂದು ನನಗೆ ಗೊತ್ತಿದೆ.”

                “ಏಯ್ ಸುಬ್ಬೀ, ಅವರೂ ನಮ್ಮ ಜೊತೆಗೆ ಹುಟ್ಟಿದ್ದರೆ ಅಂದರೆ ನಮ್ಮ ವಯಸ್ಸಿನವರಾಗಿದ್ದರೆ ನಮ್ಮಂತೆಯೇ ಇರುತ್ತಿದ್ದರೇನೋ? ಅವರ ಕಾಲಘಟ್ಟವೇ ಬೇರೆ. ನಮ್ಮ ಕಾಲಘಟ್ಟವೇ ಬೇರೆ. ಈಗ ಹುಟ್ಟಿದ್ದರೆ ಸದ್ಯದ ಜಾಗತೀಕರಣದ ಹೊಳೆಯ ಪ್ರವಾಹದಲ್ಲಿ ಅವರೂ ನಮ್ಮಂತೆ ಕೊಚ್ಚಿ ಹೋಗುತ್ತಿದ್ದರೇನೋ?”

                “ಅದು ಹಾಗಲ್ಲ, ನಿನ್ನ ವಯಸ್ಸಿನವರೆಲ್ಲರೂ ನಿನ್ನಂತೆ ಇದ್ದಾರೆಯೇ? ಇಲ್ಲವಲ್ಲಾ? ಅದಕ್ಕೇ ನಾನು ಹೇಳಿದ್ದು, ನೀನೊಬ್ಬ ಇಂಡಿಫರೆಂಟ್ ಪರ್ಸನಾಲಿಟಿಯ ಮನುಷ್ಯ ಎಂದು.”

                “ನೀನು ಹೂವಿನಿಂದ ಹೂವಿಗೆ ಹಾರುವ ಚೆಂದದ ದುಂಬಿ ಎಂಬುದು ನಮ್ಮ ಕಂಪನಿಯ ಬಹಳಷ್ಟು ಹುಡುಗರಿಗೆ ತಿಳಿದದ್ದೇ ಅಲ್ಲವೇ? ನನ್ನ ಹಾಗೆ ನೀನೂ ಇಂಡಿಫರೆಂಟ್ ವ್ಯಕ್ತಿತ್ವದ ಹುಡುಗಿ ಎಂದರೆ ತಪ್ಪಾಗಲಾರದು ಎನ್ನಲೇ?”

                “ನಿನ್ನ ಮಾತಿಗೆ ನಾನು ಇಲ್ಲವೆನ್ನಲಾರೆ. ನಾನು ಇಂಡಿಫರೆಂಟ್ ವ್ಯಕ್ತಿತ್ವದ ಹುಡುಗೀನೇ. ನನಗೇನೂ ಬೇಸರವಿಲ್ಲ. ಏಕೆಂದರೆ ನನ್ನ ಅಪ್ಪ, ಅಮ್ಮ ಇಬ್ಬರೂ ತುಂಬಾ ಫ್ಲರ್ಟ್‍ಗಳೇ. ತಾತ, ಮುತ್ತಾತ, ಅಜ್ಜಿ, ಮುತ್ತಜ್ಜಿಯರೂ ಅಪ್ಪ, ಅಮ್ಮನಿಗಿಂತ ಒಂದು ಕೈ ಹೆಚ್ಚಿಗೇ ಇದ್ದರೇನೋ? ಅದಕ್ಕೇ ಅವರ ಜೀನ್ಸ್‍ಗಳು ನನ್ನ ರಕ್ತದಲ್ಲಿ ಹಾಸು ಹೊಕ್ಕಾಗಿವೆ. ಅದರಲ್ಲಿ ಅಂಥಹದ್ದೇನು ವಿಶೇಷವಿಲ್ಲವೆಂಬುದು ನನ್ನ ಅನಿಸಿಕೆ. ಆದರೆ ನಿನ್ನದು ಹಾಗಲ್ಲ. ನಿನ್ನ ವಂಶವಾಹಿನಿಯಲ್ಲಿ ಅದೇನೋ ಒಂಥರ ಚೇಂಜ್ ಇದೆ. ನೀನು ನಿನ್ನ ಮೂಲವನ್ನು ಅರಸುತ್ತಾ ಹೊರಟರೆ ಸೋಜಿಗದ ಸಂಗತಿಗಳು ಗೋಚರಿಸಬಹುದು. ಹೀಗೆ ಹೇಳುತ್ತಿರುವುದರಿಂದ ನಿನಗೆ ಬೇಸರವಾಗುವುದಿಲ್ಲ ತಾನೇ?”

                ಕ್ಷಿತಿಜಾಳ ಮಾತಿನಿಂದ ಉತ್ಕರ್ಷ ಕ್ಷಣ ಹೊತ್ತು ಮೌನಿಯಾದ, ಚಿಂತಿತನಾದ. ಅವಳ ಮಾತುಗಳನ್ನೇ ಮೆಲುಕು ಹಾಕಿದ. ತನ್ನಪ್ಪನ ಮತ್ತು ತನ್ನ ಗುಣಗಳಿಗೆ ಹೋಲಿಕೆ ಮಾಡತೊಡಗಿದ. “ಹೌದೌದು, ನನ್ನ ಮತ್ತು ಅಪ್ಪನ ವ್ಯಕ್ತಿತ್ವದಲ್ಲಿ ಅಜಗಜಾಂತರ ವ್ಯತ್ಯಾಸವಿದೆ.” ಮನದೊಳಗೇ ಅಂದುಕೊಂಡ.

                “ನನಗೇಕೆ ಬೇಸರ…? ನಾನಂತೂ ಲೈಫ್‍ನ್ನು ಫುಲ್ ಎಂಜಾಯ್ ಮಾಡುತ್ತಿದ್ದೇನೆ. ಇರಲಿ ಬಿಡು ಕ್ಷಿತಿಜಾ. ಇಂಥಹ ರಸಮಯಗಳಿಗೆಯಲ್ಲಿ ಇದೆಲ್ಲಾ ಬೇಕಿತ್ತಾ ನಿನಗೆ?” ಮನದೊಳಗೆ ಅವಲಕ್ಕಿ ಕುಟ್ಟಿದ ಅನುಭವವಾಗುತ್ತಿದ್ದರೂ ಮಾತನ್ನು ತೇಲಿಸಿ ಕ್ಷಿತಿಜಾಳ ನಳಿದೋಳುಗಳೊಳಗೆ ತನ್ನ ತೋಳುಗಳನ್ನು ಸೇರಿಸಿದ. ಅವನ ತುಂಟಾಟದಲ್ಲಿ ಎಂದಿನ ಉತ್ಕರ್ಷವಿಲ್ಲದ್ದನ್ನು ಕ್ಷಿತಿಜಾ ಗಮನಿಸದೇ ಇರಲಿಲ್ಲ.

                “ಯಾಕೋ, ಇಂದು ನೀನು ತುಂಬಾ ಸಪ್ಪೆ ಎಂದು ಅನಿಸುತ್ತಿದೆ. ಈ ಸಮಯದಲ್ಲಿ ನಾನು ಆ ವಿಷಯ ಹೇಳಬಾರದಿತ್ತಲ್ಲವೇ? ಅದು ನಿನ್ನ ಮಿದುಳನ್ನು ಕೊರೆಯುತ್ತಿರಬಹುದು. ಅದಕ್ಕೇ ನಿನ್ನ ಸ್ಪಂದನದಲ್ಲಿ ಭಾವವಿಲ್ಲ. ಸಾರಿ.” ಪರಿತಪಿಸುವಂತಿತ್ತು ಕ್ಷಿತಿಜಾಳ ಧ್ವನಿ.

                “ಇಟ್ಸ್ ಓಕೆ. ನಥಿಂಗ್ ಟು ವರಿ ಕ್ಷಿತಿಜಾ.” ಉತ್ಕರ್ಷನ ದನಿಯಲ್ಲಿ ಗೆಲುವಿರಲಿಲ್ಲ. ಕ್ಷಿತಿಜಾಳ ಹೃದಯ ಮಮ್ಮಲ ಮರುಗಿತು.

****

                ಉತ್ಕರ್ಷ ಮರಳಿ ವಾಸ್ತವಕ್ಕೆ ಬಂದ. “ಯಾವುದೇ ಪೂಛ್-ತಾಚ್ ಇಲ್ಲದೇ ಚುಪ್-ಚಾಪ್ ಆಗಿ ನಾನು ಹೇಳಿದ್ದನ್ನೆಲ್ಲಾ ನಂಬಿ ಮಲಗಿರುವ ಸುವನಾ ತುಂಬಾ ಮುಗ್ಧಳಾಗಿ ಕಾಣುತ್ತಿದ್ದಾಳೆ. ಅದೆಷ್ಟು ಕಳಕಳಿ ನನ್ನ ಆರೋಗ್ಯದ ಬಗ್ಗೆ ಅವಳಿಗೆ. ಸುಸ್ತು ಅಂದ ತಕ್ಷಣ ಹಣೆ, ಕುತ್ತಿಗೆ ಮುಟ್ಟಿ ನೋಡಿದಳಲ್ಲ? ಅದೆಂಥಹ ಆತ್ಮೀಯ, ಹಿತವಾದ ಸ್ಪರ್ಶ ಅವಳ ಟಚ್ಚಲ್ಲಿ…? ಆತಂಕಗೊಂಡಿದ್ದ ಅವಳ ಕಣ್ಗಳಲ್ಲಿ ನೂರೆಂಟು ಭಾವನೆಗಳೇ ಮೂಡಿದ್ದವಲ್ಲ? ಇಂಥಹ ಆತ್ಮೀಯ, ಒಲವಿನ ಜೀವನ ಸಂಗಾತಿಗೆ ದ್ರೋಹ ಬಗೆಯುತ್ತಿರುವೆನಲ್ಲವೇ?

                ಸುಸ್ತು ಏತಕ್ಕಾಗಿದೆ ಎಂದು ಲಜ್ಜೆಗೆಟ್ಟು ಹೇಗೆ ಹೇಳಲಿ? ಕ್ಷಿತಿಜಾಳ ಕರಡಿಯಂಥಹ ಹಿಡಿತದಲ್ಲಿ ನಾನು ನುಜ್ಜು-ಗುಜ್ಜಾಗಿ ಸುಸ್ತಾಗಿದ್ದನ್ನು ಬಹಿರಂಗ ಪಡಿಸಲಿಕ್ಕಾಗುತ್ತದೆಯೇ? ನನ್ನ ವ್ಯಕ್ತಿತ್ವದ ಬಗೆಗಿನ ಹೊಸ ಕ್ಯಾರೆಕ್ಟರ್ಸ್‍ಗಳ ಬಗ್ಗೆ ಕ್ಷಿತಿಜಾ ಹೇಳಿದ್ದನ್ನು ಸುವನಾಗೆ ತಿಳಿಸಲೇ? ಉಹೂಂ ಬೇಡ. ಅನಾವಶ್ಯಕ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಸುವನಾಳ ಅಚ್ಚ ಮಲ್ಲಿಗೆಯಂಥಹ ನಿಚ್ಚಳ ಪ್ರೀತಿಗೆ ದ್ರೋಹ ಬಗೆಯುತ್ತಿರುವ ನಯವಂಚಕ ನಾನು. ಮನಸಾರೆ ಪ್ರೀತಿಸಿ ನನ್ನನ್ನೇ ನಂಬಿಕೊಂಡು ಬಂದಿರುವ ಅವಳ ಪ್ರಾಂಜಲ ಪ್ರೀತಿಗೆ ಯಾವ ಧಕ್ಕೆಯೂ ಆಗದಂತೆ ನೋಡಿಕೊಳ್ಳುವುದು; ಅರ್ಥೇಚ, ಧರ್ಮೇಚ, ಕಾಮೇಚ….ನಾತಿಚರಾಮಿ ಅಂತ ಹೇಳಿ ಅವಳ ಕೈ ಹಿಡಿದಿರುವ ನನ್ನ ಆದ್ಯ ಕರ್ತವ್ಯ.

                ಹೌದು, ಕ್ಷಿತಿಜಾ ಹೇಳಿದ ಮಾತುಗಳಲ್ಲಿ ಸತ್ಯವಿದೆ. ನನ್ನ ಮತ್ತು ಅಪ್ಪನ ಗುಣಗಳಲ್ಲಿ ಬಹಳಷ್ಟು ವ್ಯತ್ಯಾಸವಿರುವುದಂತೂ ನಿಜ. ಅದೇಕೆ ಹೀಗೆ? ಬೇರುಗಳು ಎಲ್ಲಿ, ಹೇಗೆ ತೊಡರಿಕೊಂಡಿರಬಹುದು? ಮೂಲ ಬೇರುಗಳು ಯಾವಾಗ ಟಿಸಿಲು ಒಡೆದಿರಬಹುದು? ಏಕೆ ಸಿಕ್ಕುಗಟ್ಟಿರಬೇಕು?”

                ಯೋಚನೆಯಲ್ಲಿ ಮುಳುಗಿದ್ದ ಉತ್ಕರ್ಷ ಒಂದೂ ಅರ್ಥವಾಗದೇ ತೊಳಲಾಡಿದ. ಅವನ ತಲೆ ಕೆಟ್ಟ ಮೊಸರು ಗಡಿಗೆಯಂತಾಗಿತ್ತು. “ಮಹರಾಯಿತಿ ಕ್ಷಿತಿಜಾ ಇದೊಳ್ಳೆ ಹುಳವನ್ನು ನನ್ನ ತಲೆಯಲ್ಲಿ ಬಿಟ್ಟು ಬಿಟ್ಟಳಲ್ಲ, ಅದೂ ಅಂಥಹ ಸುಂದರ ರಸಮಯ ಸಮಯದಲ್ಲಿ! ಸಮಯ, ಸಂದರ್ಭ ಒಂದೂ ಗೊತ್ತಾಗೋದಿಲ್ಲ ಅವಳಿಗೆ. ಪೂರ್ ಗರ್ಲ್. ಖುಷಿಯನ್ನು ಅರಸಿಕೊಂಡು ಬಂದಿದ್ದ ಅವಳೇ ತನ್ನ ಖುಷಿಯನ್ನು ಹಾಳು ಮಾಡಿಕೊಂಡಳಲ್ಲವೇ? ತನ್ನ ಮಾತಿಗೆ ತಾನೇ ಒಗ್ಗರಣೆ ಹಾಕುವವಳಂತೆ, ಉತ್ಕರ್ಷ, ಇಂದೇಕೋ ನಿನ್ನ ಸ್ಪಂದನೆಯಲ್ಲಿ ವೇಗೋತ್ಕರ್ಷವಿಲ್ಲ ಎಂದು ಭಾವತೃಪ್ತಿ ಅನುಭವಿಸದ ಅವಳೇ ಬಾಯಿ ಬಿಟ್ಟಿದ್ದಳಲ್ಲ? ಲಜ್ಜೆಗೆಟ್ಟ ಹೆಣ್ಣು! ನಿಂಫೋಮೇನಿಯಾ…? ನಾನೂ ಅದೇ ಅಲ್ಲವಾ…?

                ಈ ವಿಷಯದ ಬಗ್ಗೆ ಅರಿವೇ ಇಲ್ಲದೇ ಹಾಯಾಗಿದ್ದ ನನ್ನ ಮನಸ್ಸು ಈಗ ಕಲ್ಲೆಸೆದ ತಿಳಿ ಕೊಳದಂತಾಗಿ ಬಿಟ್ಟಿದೆಯಲ್ಲ? ಮೂಲ ಹೇಗೆ ಕಂಡು ಹಿಡಿಯುವುದು…? ಹುಡುಕಾಟಕ್ಕೆ ದಾರಿ ಮಾಡಿಕೊಟ್ಟಳು ಅಷ್ಟೇ.” ಉತ್ಕರ್ಷನ ಮನಸ್ಸು ಗೊಂದಲದ ಗೂಡಾಗಿತ್ತು.

****

                “ಈ ವಿಚಾರ ನನ್ನ ಮನದಲ್ಲಿ ಎಂದೂ ಹಾದು ಹೋಗಿರಲಿಲ್ಲ. ಆ ಬಣ್ಣದ ಚಿಟ್ಟೆ ಏನೋ ಹೇಳಿದಳೆಂದು ನಾನೇಕೆ ಈ ಪರಿ ತಲೆ ಕೆಡಿಸಿಕೊಳ್ಳಬೇಕು…? ಎಂದೂ ಇಲ್ಲದ ಈ ವಿಚಾರ ಇಂದೇಕೆ? ಸುಮ್ಮನೇ ಮಲಗಿದರಾಯಿತು” ಎಂದು ತನ್ನ ಮನಸ್ಸಿಗೆ ತಾನೇ ಸಮಾಧಾನ ಮಾಡಿಕೊಂಡು ಸುವನಾಳ ತೆಕ್ಕೆಯಿಂದ ಮೆಲ್ಲಗೇ ಜಾರಿ ಅಂಗಾತ ಮಲಗಿ ಕಣ್ಮುಚ್ಚಿ ನಿದ್ರಿಸಲು ಮುಂದಾದ. ತುಸು ಹೊತ್ತು ಹಾಗೇ ಸರಿದು ಹೋಯಿತು. ನಿದ್ರೆ ಅವನನ್ನು ಅಪ್ಪಿಕೊಳ್ಳಲು ಮನಸ್ಸು ಮಾಡಲಿಲ್ಲ. ಬೋನಿಗೆ ಬಿದ್ದ ಚಿರತೆ ಭುಸುಗುಡುವಂತೆ ಯೋಚನೆಗಳು ಭುಸುಗುಡತೊಡಗಿದ್ದವು. ತಲೆಯಲ್ಲಿ ಯೋಚನೆಗಳ ತಾಕಲಾಟ, ಹುಣ್ಣಿಮೆಯ ಕಡಲಿನಂತೆ ಭೋರ್ಗರೆತ, ಅಬ್ಬರ. ಅಬ್ಬರವಿರುವಾಗ ನಿದ್ರೆ ಬಂದೀತಾದರೂ ಹೇಗೆ? ಉಹೂಂ, ಸಾಧ್ಯವಿಲ್ಲ. ಪರಪರನೇ ತಲೆಯನ್ನು ಕೆರೆದುಕೊಳ್ಳಬೇಕೆಂದು ಅನಿಸಿತು ಉತ್ಕರ್ಷನಿಗೆ. ಮತ್ತೊಮ್ಮೆ ಪತ್ನಿ ಸುವನಾಳ ಕಡೆಗೆ ದೃಷ್ಟಿ ಹರಿಸಿದ. ಅದೇ ಮುಗ್ಧ ನಗೆ ಲಾಸ್ಯವಾಡುತ್ತಿತ್ತು ಅವಳ ಚೆಂದುಟಿಯಲ್ಲಿ. ಮೈಯಲ್ಲಿ ವಿದ್ಯುತ್ ಸಂಚಲನೆಯ ಅನುಭವ. ಮುದ್ದಿಸಿಬಿಡಲೇ ಎಂದು ಅಂದುಕೊಂಡ. ತಕ್ಷಣ, ಬೇಡ ಬೇಡ. ಅವಳ ನಿದ್ರೆ ಹಾಳಾಗುತ್ತೆ ಎಂದು ಮನಸ್ಸು ಎಚ್ಚರಿಸಿದ್ದರಿಂದ ತಟಸ್ಥನಾದ.

                “ಹೌದು, ಇದರ ಬಗ್ಗೆ ಯಾರಲ್ಲಿ ವಿಚಾರಿಸಲಿ? ನೇರವಾಗಿ ಅಪ್ಪನನ್ನೇ ಕೇಳಲೇ? ಏನಂತ ಕೇಳಲಿ? ಹೇಗೆ ಕೇಳಲಿ? ತಾತ, ಮುತ್ತಾತರು ಹೇಗಿದ್ದರು ಎಂದು ಪೀಠಿಕೆ ಹಾಕಲೇ? ಸದ್ಗುಣ ಸಂಪನ್ನರೋ, ಕಚ್ಚೆ ಹರುಕರೋ ಎಂದು ಕೇಳಲೇ? ಛೇ, ಛೇ. ಹಾಗೆ ಕೇಳಿದರೆ ಹೇಗೆ…? ಹಾಗೆ ಕೇಳಿದರೆ ಸೌಜನ್ಯತೆಯ ಎಲ್ಲೆ ಮೀರಿದಂತಾಗುವುದಿಲ್ಲವೇ? ಹಾಗಾದರೆ ನಮ್ಮ ವಂಶಜರ ಪೂರ್ವೇತಿಹಾಸ ತಿಳಿದುಕೊಳ್ಳುವುದ್ಹೇಗೆ? ನಾನೇಕೆ ಈ ಥರ ಚಿಣಿಗ್ಯಾವಿನಂತೆ ಹಾರಾಡುತ್ತಿದ್ದೇನೆ? ರೂಪೇಶು ಲಕ್ಷ್ಮಿಯಂಥ ಚಂದನದ ಬೊಂಬೆಯೇ ನನ್ನವಳಾಗಿರುವಾಗ ಬೇರೆ ಹೆಣ್ಣುಗಳಿಗೇಕೆ ಹಪಹಪಿಸುತ್ತಿದ್ದೇನೆ? ನನ್ನ ಬಗ್ಗೆ ನನಗೇ ಥೂ ಇಸ್ಸೀ ಎಂದೆನಿಸುತ್ತಿದೆ. ತುಂಬಾ ಕೊಳಕನಲ್ಲವೇ ನಾನು. ಮನೆಯಲ್ಲಿನ ಮೃಷ್ಠಾನ್ನವನ್ನು ಸವಿದು ತೃಪ್ತನಾಗುವುದನ್ನು ಬಿಟ್ಟು ಎಂಜಲೆಲೆಯ ಮೇಲಿನ ಅನ್ನವನ್ನು ತಿನ್ನಲು ಹಂಬಲಿಸುತ್ತಿದೆಯಲ್ಲವೇ ನನ್ನ ಹುಚ್ಚುಕೋಡಿ ಮನಸ್ಸು…? ತೃಪ್ತಿ ಎಂಬುದೇ ಇಲ್ಲವಲ್ಲ? ಯಯಾತಿ ಮಹಾರಾಜನ ಗುಣಗಳು ನನ್ನ ರಕ್ತದಲ್ಲಿ ಹರಿದಾಡುತ್ತಿವೆ ಎಂದೆನಿಸುತ್ತಿದೆಯಲ್ಲವೇ?

                ಹಾಗಾದರೆ ಮತ್ಯಾರನ್ನು ಕೇಳಲಿ…? ತನ್ನ ಮಗುವಿಗೆ ತಂದೆ ಯಾರೆಂದು ಹೆತ್ತೊಡಲಿಗೆ ಗೊತ್ತಿರುತ್ತದೆಯಂತೆ. ಹಾಗಾದರೆ… ಹಾಗಾದರೆ… ಅಮ್ಮನನ್ನು ಕೇಳಲೇ…? ಛೇ, ಛೇ ಎಂಥ ಮಾತಂತ ಕೇಳುವುದು…? ಇದು ಅಮ್ಮನನ್ನು ಕೇಳುವಂಥ ಮಾತೇ…? ಅಮ್ಮನ ನೈತಿಕತೆಯನ್ನೇ ಅನುಮಾನಿಸುವುದೇ…? ಥೂ, ಧಿಕ್ಕಾರವಿರಲಿ ಇಂಥಹ ವಿಚಾರಕ್ಕೆ, ಈ ನಡೆಗೆ. ತಿಳಿದುಕೊಳ್ಳುವುದರಲ್ಲಿ ತಪ್ಪೇನಿದೆ…? ತಪ್ಪಾಗಿದ್ದರೂ ಆಗಿನ ಮನಸ್ಥಿತಿ, ಸಂದರ್ಭ ಹೇಗಿತ್ತೋ ಏನೋ? ಆಗಿನ ಅವರ ನಿರ್ಧಾರ ಸರಿಯಾಗಿತ್ತೋ ಏನೋ? ಆದರೆ ಹೇಗೆ ವಿಚಾರಿಸುವುದು…? ನಾನೇನು ಪಾಟಿ ಸವಾಲು ಹಾಕುವ ವಕೀಲನೇ? ಇಲ್ಲ, ಇಲ್ಲ. ಅಮ್ಮನನ್ನು ನೇರವಾಗಿ ಕಟಕಟೆಯಲ್ಲಿ ನಿಲ್ಲಿಸುವುದು ಅಷ್ಟು ಸಮಂಜಸವಾಗಿ ಕಾಣುತ್ತಿಲ್ಲ. ಸತ್ಯ ತುಂಬಾ ಕಹಿಯಾಗಿರುತ್ತೆ. ಸತ್ಯವನ್ನು ಹೇಳಬೇಕಾದರೂ ನಯವಾಗಿಯೇ ಹೇಳಬೇಕಂತೆ. ನೇರವಾಗಿ ವಿಚಾರಿಸಲು ಸಾಧ್ಯವಿಲ್ಲವಾದರೆ ವ್ಹಾಯಾ ಮೀಡಿಯಾ ಹೋಗಬೇಕು. ಹೇಗೆ…? ಹೇಗೆ…? ಅಂದರೆ ಈ ವ್ಹಾಯಾ ಮೀಡಿಯಾ ಯಾವುದು…? ಯಾವುದು…? ಕ್ಷಿತಿಜಾಳ ಅನುಮಾನದ ಗುಂಗಿ ಹುಳ ನನ್ನೆದೆಯನ್ನು ಕೊರೆಯುತ್ತಿದೆಯಲ್ಲ…?               ಈ ವಿಷಯದಲ್ಲಿ ಮುಂದುವರಿಯುವುದು ಸರಿಯೇ? ಇಂತಹದನ್ನೆಲ್ಲಾ ಕೆದಕಿ ಏನಾಗಬೇಕಿದೆ? ಸತ್ಯ ಆಘಾತಕಾರಿಯಾಗಿದ್ದರೆ…? ಸಹಿಸಿಕೊಳ್ಳಲು ಸಾಧ್ಯವೇ…? ಶಾಂತವಾಗಿದ್ದ ನನ್ನ ಮನಸ್ಸನ್ನು ಅನುಮಾನದ ಭೂತ ಸುಮ್ಮನೇ ಕೊರೆಯುತ್ತಿದೆಯಲ್ಲ? ಎಲ್ಲವೂ ಕಲಸು ಮೇಲೋಗರ. ಚಡಪಡಿಕೆ ಸಹಿಸಲಸಾಧ್ಯವಾಗುತ್ತಿದೆಯಲ್ಲ? ಹೇಗೆ ಮುಂದುವರಿಯಲಿ?

                ಹೀಗೆ ಮುಂದುವರಿದರೆ ಹೇಗೆ…? ಅದೇ ವ್ಹಾಯಾ ಮೀಡಿಯಾ ಎಂದೆನಲ್ಲವೇ? ಅಮ್ಮನ ಖಾಸಾ ಗೆಳತಿ, ಸಹಪಾಠಿ ಸಹನಾ ಆಂಟಿಯನ್ನು ಕಾಂಟ್ಯಾಕ್ಟ್ ಮಾಡಿದರೆ ಹೇಗೆ? ಏನಾದರೂ ಕ್ಲ್ಯೂ ಸಿಗಬಹುದೇ? ಅಮ್ಮ ಮತ್ತು ಸಹನಾ ಆಂಟಿ ಇಬ್ಬರೂ ಎಂಎವರೆಗೂ ಸಹಪಾಠಿಗಳು. ಅವರಿಗೆ ಅಮ್ಮನ ಒಳಗು, ಹೊರಗು ಎಲ್ಲವೂ ತಿಳಿದಿರುತ್ತದೆ. ಹೌದು, ಇದೇ ಸರಿಯಾದ ಮಾರ್ಗ. ವೀಕೆಂಡ್‍ಗೆ ಎಲ್ಲಿಗೆ ಹೋಗೋಣ ಎಂಬುದರ ಬಗ್ಗೆ ನಾಳೆ ಬೆಳಿಗ್ಗೆ ಮಾತಾಡೋಣ ಎಂದು ಸುವನಾ ಹೇಳಿದಳಲ್ಲವೇ? ಹಾಗಾದರೆ ನಾಳೆ ಮೈಸೂರಿಗೆ ಹೋಗೋಣ. ಸಹನಾ ಆಂಟಿಯನ್ನು ಭೆಟ್ಟಿಯಾಗಿ ಬರೋಣ ಎಂದು ಹೇಳಬೇಕು. ಇನ್ಮುಂದಾದರೂ ನಾನು ನನ್ನ ಸುವನಾಳಿಗೆ ನಿಷ್ಠೆಯಿಂದ ಇರಬೇಕು. ಹೊರಗಿನ ನನ್ನ ಈ ಚಾಳಿಗೆ ಚರಮಗೀತೆ ಹಾಡಬೇಕು. ನಾನು ಸುವನಾಳಿಗೊಬ್ಬಳಿಗೇ.” ಮನಸ್ಸಿನಲ್ಲಿದ್ದ ತಾಕಲಾಟಕ್ಕೆ ಒಂದು ಆಕಾರ ಬರುವಷ್ಟರಲ್ಲಿ ಉತ್ಕರ್ಷನ ಮನಸ್ಸಿಗೆ ಸಮಾಧಾನವೆನಿಸತೊಡಗಿತ್ತು. ನಿಧಾನಕ್ಕೆ ನಿದ್ರೆಗೆ ಜಾರಿದ.

*****

                “ಏಯ್ ಸೋಂಭೇರಿ ಅದೆಷ್ಟು ಹೊತ್ತು ಮಲಗುವಿಯೋ? ರಾತ್ರಿ ನಿದ್ರೆ ಮಾಡದೇ ಜಪ ಮಾಡುತ್ತ ಕುಳಿತಿದ್ದಿಯೇನೋ? ಸಾಕಿನ್ನು ಏಳು” ಎಂದೆನ್ನುತ್ತಾ ಸುವನಾ ನವಿರಾಗಿ ಉತ್ಕರ್ಷನ ಕೆನ್ನೆ ಹಿಂಡಿದಾಗ ಕಣ್ಬಿಟ್ಟಿದ್ದ.

                “ಹೌದು, ಇಂದು ಎಲ್ಲಿಗೆ ಹೋಗೋಣ? ಅಥವಾ ಹೀಗೇ ನಿದ್ದೆ ಮಾಡಿಬಿಡುವಿಯಾ ಲೋಫರ್?” ಸುವನಾ ಗಂಡನನ್ನು ತನ್ನ ಎದೆಗಾನಿಸಿಕೊಳ್ಳುತ್ತಾ ಕಣ್ಣುಬ್ಬು ಹಾರಿಸುತ್ತಾ ಕೇಳಿದಳು.

                “ಸುವು, ನಾನು ನಿಜ್ವಾಗ್ಲೂ ಲೋಫರ್‍ನೇ” ಎಂದು ಮನದಲ್ಲೇ ಅಂದುಕೊಂಡು, “ಮೈಸೂರಿಗೆ ಹೋಗೋಣವೇ…?” ಎಂದು ಉತ್ಕರ್ಷ ಕೇಳಿದ್ದಕ್ಕೆ, “ಓಕೆ” ಎಂದು ಸುವನಾ ಒಪ್ಪಿಗೆಯ ಷರಾ ಬರೆಯುವಷ್ಟರಲ್ಲಿ, “ನಿನ್ನೆ ರಾತ್ರಿ ನೀನು ಏನೋ ಕೇಳಿದಂತಿತ್ತು…?” ಎಂದೆನ್ನುತ್ತಾ ಅವಳನ್ನು ತನ್ನ ಮೇಲೆಳೆದುಕೊಂಡಿದ್ದ.

                “ಥೂ ಕಳ್ಳ, ಹೊತ್ತು, ಗೊತ್ತು ಒಂದೂ ಇಲ್ಲ ನಿನ್ನ ತುಂಟಾಟಕ್ಕೆ.” ಹುಸಿ ಮಿನಿಸು ತೋರಿಸುತ್ತಾ ಸುವನಾ ಗಂಡನ ವಾಂಛೆಗೆ ಸಹಕರಿಸಿದ್ದಳು.

                “ಖುಷಿನಾ…? ರಾತ್ರಿ ಏಕೋ ತುಂಬಾ ಡಲ್ಲಾಗಿದ್ದೆ. ಆಯಿತು, ಈಗಲಾದರೂ ಹೊರಡು. ಬೇಗ ಬೇಗ ತಯಾರಾಗು” ಎಂದೆನ್ನುತ್ತಾ ಉತ್ಕರ್ಷನ ಕೆನ್ನೆ ಹಿಂಡಿ ಸುವನಾ ಸ್ನಾನದ ಮನೆಯತ್ತ ಹೆಜ್ಜೆ ಹಾಕಿದಳು.

                ಉತ್ಕರ್ಷ ರೆಡಿಯಾಗುವಷ್ಟರಲ್ಲಿ ಸುವನಾ ತಿಂಡಿ ರೆಡಿ ಮಾಡಿದ್ದಳು. ಇಬ್ಬರೂ ತಿಂಡಿ ತಿಂದು ಗಾಡಿಯೇರಿದಾಗ ಮೈಸೂರಿನತ್ತ ಪಯಣ ಹೊರಟಿತು. ಉತ್ಕರ್ಷ ತುಂಬಾ ಉಲ್ಲಸಿತನಾಗಿದ್ದಾನೆ ಎಂದು ಅನಿಸಿತು ಸುವನಾಳಿಗೆ.

                “ರಾತ್ರಿಯ ನೀರಸ ಪ್ರತಿಕ್ರಿಯೆ, ಬೆಳಗಿನ ಸೂಪರ್ ಸ್ಪಂದನಕ್ಕೆ ಕಾರಣ ಗೊತ್ತಾ ಉತ್ಕು…?”

                “ಗೊತ್ತು, ಎಲ್ಲವನ್ನೂ ಮಾತಿನಲ್ಲಿ ಪೋಣಿಸಲಿಕ್ಕೆ ಆಗುವುದಿಲ್ಲ.”

                “ಹೌದೇ? ಸೂಜಿ ಕೊಡಲೇ? ಪೋಣಿಸುವಿಯಾ? ಏಯ್ ಗೂಬೆ, ರಾತ್ರಿ ನನ್ನೆದೆಯ ಮೇಲೆ ಪವಡಿಸಿದ್ದರಿಂದ ಪೊಜಿಟಿವ್ ಎನರ್ಜಿ ಟ್ರಾನ್ಸಫರ್ ಆಗಿ ನೀನು ಚೈತನ್ಯದ ಚಿಲುಮೆಯಾಗಿರುವಿ, ಅದಕ್ಕೇ. ಹೌದು ತಾನೇ?” ಕಿಚಾಯಿಸಿದಳು ಸುವನಾ.

                “ನಿಜವಾದ ಕಾರಣ ನನಗಷ್ಟೇ ಗೊತ್ತಿದೆ. ಇನ್ಮುಂದೆ ಅವಳೊಂದಿಗೆ ಹೀಗೇ ತುಂಬಾ ಕ್ರಿಯಾಶೀಲನಾಗಿರಬೇಕು” ಎಂದು ಮನದಲ್ಲೇ ಅಂದುಕೊಂಡು, “ಹೌದೌದು ಸುವಿ. ನೀನು ಹೇಳಿದ್ದು ನಿಜ” ಎಂದ ಉತ್ಕರ್ಷ. ಹೀಗೆ ಪರಸ್ಪರ ಕಿಚಾಯಿಸುತ್ತಿರುವಾಗ ಮೈಸೂರು ಬೇಗ ಬರದೇ ಇದ್ದೀತೇ? ಸುವನಾಳಿಗೆ ತಾಯಿ ಚಾಮುಂಡೇಶ್ವರಿದೇವಿ ಅಂದರೆ ತುಂಬಾ ಭಕ್ತಿ. ಉತ್ಕರ್ಷನ ಗಾಡಿ ನೇರವಾಗಿ ಬೆಟ್ಟವನ್ನು ಏರಿತ್ತು. ರಂಗನತಿಟ್ಟು, ಅಲ್ಲಿ, ಇಲ್ಲಿ ಸುತ್ತಾಡಿ ಸಂಜೆಗೆ ಸಹನಾ ಆಂಟಿಯ ಮನೆಗೆ ಹೊರಟ. ಸುವನಾ ಹಾದಿಯಲ್ಲಿದ್ದ ತನ್ನ ಗೆಳತಿಯ ಮನೆಗೆ ಹೋಗುವುದಾಗಿ ತಿಳಿಸಿದ್ದರಿಂದ ಅವಳಿಗೆ ಡ್ರಾಪ್‍ಕೊಟ್ಟು ಒಂದು ತಾಸಿನಲ್ಲಿ ಪುನಃ ಬಂದು ಪಿಕಪ್ ಮಾಡುವುದಾಗಿ ಹೇಳಿದ.

*****

                ಅನಿರೀಕ್ಷಿತವಾಗಿ ಆಗಮಿಸಿದ ಉತ್ಕರ್ಷನನ್ನು ಕಂಡು ಸಹನಾ ಅವರಿಗೆ ಖುಷಿಯ ಜೊತೆಗೆ ಆಶ್ಚರ್ಯವೂ ಆಗಿತ್ತು. ನಗುಮೊಗದ ಸ್ವಾಗತ ಸಿಕ್ಕಿತ್ತು. ಮನೆಯಲ್ಲಿ ಅಂಕಲ್ ಇರದೇ ಆಂಟಿ ಒಬ್ಬರೇ ಇದ್ದುದರಿಂದ ಉತ್ಕರ್ಷ ಆರಾಮವಾಗಿ ಉಸಿರು ಹಾಕಿದ್ದ. ಉಭಯ ಕುಷಲೋಪರಿ, ಕಾಫಿಯ ಸೇವನೆಯ ನಂತರ ಉತ್ಕರ್ಷನ ಮಾತಿಗೆ ವೇಗೋತ್ಕರ್ಷ ಸಿಕ್ಕಿತ್ತು.

                ವಿಷಯ ತುಂಬಾ ಸೂಕ್ಷ್ಮವಾಗಿದ್ದರಿಂದ ಉತ್ಕರ್ಷ ಸುತ್ತಿ, ಬಳಸಿ ನಂತರ ಮುಖ್ಯ ವಿಷಯಕ್ಕೆ ಪೀಠಿಕೆ ಹಾಕಿದ್ದ. “ಆಂಟಿ, ನನ್ನ ಕೆಲವೊಂದಿಷ್ಟು ಅಸಂಬದ್ಧ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರ, ಸಮಜಾಯಿಸಿ ಬೇಕು. ನನ್ನ ಮಾತುಗಳಿಂದ ಬೇಸರಿಸಿಕೊಳ್ಳಬಾರದು, ವಿಶೇಷ ಅರ್ಥವನ್ನೂ ಕಲ್ಪಿಸಿಕೊಳ್ಳಬಾರದು. ನಮ್ಮಿಬ್ಬರ ಮಾತುಗಳು ನಮ್ಮಿಬ್ಬಿರಲ್ಲೇ ಉಳಿಯಬೇಕು” ಎಂದಿದ್ದ.

                “ಉತ್ಕರ್ಷ, ತುಂಬಾ ಒಗಟಾಗಿ ಮಾತಾಡುತ್ತಿರುವಿ…! ಇರಲಿ, ನೀನು ಹೇಳಿದಂತೆ ನಡೆದುಕೊಳ್ಳುವೆ. ಈ ವಯಸ್ಸಿನಲ್ಲಿ ನನಗೇನಾಗಬೇಕಿದೆ…? ವಿಷಯ ನನಗೆ ತಿಳಿದಿದ್ದರೆ ನಿನ್ನ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸುವೆ. ಆದರೆ ಒಂದು ಮಾತು, ಇದರಿಂದ ಇನ್ನೊಬ್ಬರ ವ್ಯಕ್ತಿತ್ವಕ್ಕೆ ಧಕ್ಕೆ ಬರಬಾರದು ಅಷ್ಟೇ” ಎಂದು ಸಹನಾ ಹೇಳಿ, “ಇವನು ಮನದಲ್ಲೇನೋ ಅನುಮಾನವಿಟ್ಟುಕೊಂಡು ಬಂದಿದ್ದಾನೆ ಎಂಬುದು ನನ್ನ ಮನದರಿವಿಗೆ ಬರಲಾರದೇ? ತನ್ನ ಊಹೆಗೆ ಸ್ಪಷ್ಟ ರೂಪ ಕಂಡುಕೊಳ್ಳಲು ಬಂದಿರುವ ಹಾಗಿದೆ. ಮೇಲೆ ಅದೇನೋ ಅಸಂಬದ್ಧ ಪ್ರಶ್ನೆಗಳು ಎಂದು ಹೇಳುತ್ತಿದ್ದಾನೆ. ಅದೇನು ಪ್ರಶ್ನೆಗಳೋ ಏನೋ?” ಎಂಬುದನ್ನು ಮನದಲ್ಲೇ ಅಂದುಕೊಂಡರು.                 “ಉತ್ಕರ್ಷ, ಅದೇನೋ ಅಸಂಬದ್ಧ ಪ್ರಶ್ನೆಗಳು ಅಂತ ಹೇಳ್ತಿದ್ದೀಯಲ್ಲ, ಅದೇನಪ್ಪ ಅಂಥದ್ದು…?” ಪುನಃ ಸಹನಾ ಮನದಲ್ಲಿದ್ದ ಅನುಮಾನ, ಕುತೂಹಲಗಳಿಗೆ ಒಂದು ನಿರ್ಧಿಷ್ಟ ರೂಪ ಸಿಗಬಹುದೇನೋ ಎಂದು ಅಂದುಕೊಂಡು ಪ್ರಶ್ನಿಸಿದರು.

                “ಸತ್ಯದ ಅನ್ವೇಷಣೆ ಇರುವುದರಿಂದ ಅಸಂಬದ್ಧ ಎಂದೆನಿಸಬಹುದು. ಆಂಟಿ ದಯವಿಟ್ಟು ಸಹಿಸಿಕೊಳ್ಳಿರಿ” ಎಂದೆನ್ನುತ್ತಾ ಉತ್ಕರ್ಷ ಸಹನಾ ಅವರ ಮುಖ ದಿಟ್ಟಿಸಿದ.

                “ಓಕೆ, ಓಕೆ. ನೋ ಪ್ರಾಬ್ಲೆಮ್. ಕೇಳು. ನನಗೆ ಗೊತ್ತಿದ್ದರೆ ತಿಳಿಸುವೆ.” ಯಾರಿಗೂ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲವೆಂದು ಇಬ್ಬರೂ ಪ್ರಮಾಣ ವಚನ ಸ್ವೀಕರಿಸಿದ ನಂತರ ಉತ್ಕರ್ಷ ಮಾತಿಗೆ ಮುಂದಾಗಿದ್ದ. 

                “ಆಂಟಿ, ನನ್ನಮ್ಮ ಮದುವೆಗೆ ಮುಂಚೆ ಯಾರನ್ನಾದರೂ ಲವ್ ಮಾಡಿದ್ದಳಾ?” ಡಮಾರೆಂದು ಬಾಂಬ್ ಸಿಡಿದ ಅನುಭವ ಸಹನಾರಿಗೆ. ತುಸು ಹೊತ್ತಿನ ಮೌನ ಇಬ್ಬರ ಮಧ್ಯೆ. ಯಾವ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದೇ ಸಹನಾ ಪಿಳಿ ಪಿಳಿ ಕಣ್ಬಿಡುತ್ತಾ ಉತ್ಕರ್ಷನನ್ನೇ ನೋಡುತ್ತಿದ್ದರು.  

                “ಆಂಟಿ, ನನ್ನ ನಿಜವಾದ ತಂದೆ ಯಾರು…?” ಮತ್ತೊಂದು ಪವರ್‍ಫುಲ್ ಬಾಂಬ್ ಸಿಡಿದಿತ್ತು ಉತ್ಕರ್ಷನಿಂದ.

                “ನಿನ್ನ ತಂದೆಯೇ ನಿಜವಾದ ತಂದೆ. ಇದೆಲ್ಲಾ ಈಗ್ಯಾಕೆ….? ನಿನ್ನಮ್ಮನ ನಡತೆಯನ್ನೇ ಪ್ರಶ್ನಿಸುವಂತಿದೆ…?” ತೊದಲಿದರು ಸಹನಾ.

                “ಆಂಟಿ ನನಗೆ ಸತ್ಯ ಬೇಕು. ಇದು ನಿಜವಾಗಿದ್ದರೆ ನನಗದೇ ಖುಷಿ. ಇದೇ ಸತ್ಯವೂ ಆಗಿರಲಿ ಎಂದು ನಾನು ನಿರೀಕ್ಷಿಸುತ್ತೇನೆ. ಸತ್ಯ ಬೇರೆಯಾಗಿದ್ದರೂ ಅದನ್ನು ವಿಶಾಲ ಮನಸ್ಸಿನಿಂದ ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ. ಅಮ್ಮ ನನ್ನಮ್ಮನೇ. ಈಗಿರುವ ಪ್ರೀತಿಯೇ ಮುಂದುವರಿಯುತ್ತೆ. ಅಮ್ಮನ ಮೇಲೆ ಯಾವ ಗುಮ್ಮವನ್ನೂ ಕೂಡಿಸುವುದಿಲ್ಲ. ಮೊದಲೇ ತಿಳಿಸಿದಂತೆ ಇದು ತುಂಬಾ ಕಾನ್ಫಿಡೆನ್ಸಿಯಲ್.” ತಾನು ಹೇಳಿದ್ದೇ ಸತ್ಯ ಎಂದು ಸಹನಾ ಪ್ರತಿಪಾದಿಸಿದರಾದರೂ ಉತ್ಕರ್ಷ ಒಪ್ಪಿಕೊಳ್ಳಲಿಲ್ಲ. ಕೊನೆಗೂ ಅವರು ಸತ್ಯವನ್ನು ಬಯಲಿಗಿಟ್ಟಿದ್ದರು.

                “ಉತ್ಕರ್ಷ, ಎಂಎ ನಂತರ ನಿನ್ನಮ್ಮ ಅರುಂಧತಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಒಮ್ಮೆ ಅವರ ಕಾಲೇಜಿನಲ್ಲಿ ಹೆಲ್ತ್ ಕ್ಯಾಂಪ್ ಒಂದನ್ನು ಆಯೋಜಿಸಿದ್ದಾಗ ಡಾ.ಆದರ್ಶನ ಪರಿಚಯವಾಗಿತ್ತು ಅವಳಿಗೆ. ಗೈನಾಕಾಲಜಿಯಲ್ಲಿ ಎಂಡಿ ಮಾಡಿಕೊಂಡಿದ್ದ ಆದರ್ಶ ವೈದ್ಯಕೀಯ ಕಾಲೇಜಿಲ್ಲಿ ಕೆಲಸ ಮಾಡುತ್ತಿದ್ದ. ಚೆಲುವಿನ ಚಿತ್ತಾರದ ನಿನ್ನಮ್ಮ ಆದರ್ಶನಿಗೆ ಇಷ್ಟವಾಗಿದ್ದಳು. ಹ್ಯಾಂಡ್ಸಮ್ ಗೈ ಆದರ್ಶ ನಿನ್ನಮ್ಮನ ಮನಸ್ಸನ್ನು ಕದ್ದಿದ್ದ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬೆಳೆಯಲು ಬಹಳ ದಿನಗಳು ಬೇಕಾಗಲಿಲ್ಲವಂತೆ. ಪ್ರೀತಿಯ ಸಲುಗೆಯಲ್ಲಿ ಆದರ್ಶ ದೈಹಿಕ ಸಂಬಂಧಕ್ಕೆ ಬೇಡಿಕೆ ಇಟ್ಟಿದ್ದನಂತೆ. ಅದಕ್ಕೆ ನಿನ್ನಮ್ಮ ಹಿಂದೆ-ಮುಂದೆ ನೋಡಿದಾಗ, “ಹೇಗೂ ನಾವು ಮದುವೆಯಾಗುವವರಿದ್ದೇವೆ. ಅಡಗೂಲಜ್ಜಿಯಂತೆ ವರ್ತಿಸಬೇಡ. ಇದು ಇಪ್ಪತ್ತೊಂದನೇ ಶತಮಾನ. ಮೈ ಹೂಂನ ಡಾಕ್ಟರ್…? ಲೆಟಸ್ ಎಂಜಾಯ್” ಎಂದು ಏನೇನೋ ಬಣ್ಣದ ಮಾತುಗಳಿಂದ ಮರುಳುಮಾಡಿ ಅರುಂಧತಿಯನ್ನು ಅನುಭವಿಸಿದ್ದನಂತೆ ಒಂದು ದಿನ. ಆನಂತರ ಆದರ್ಶ ತನ್ನ ಮಾತನ್ನು ಉಳಿಸಿಕೊಳ್ಳದೇ ಅವಳ ನಂಬಿಕೆಗೆ ದ್ರೋಹವೆಸಗಿದ್ದ. ಅವನ ಬಗ್ಗೆ ಹಿಂದು-ಮುಂದು ಒಂದೂ ವಿಚಾರಿಸಿರಲಿಲ್ಲವಂತೆ ನಿನ್ನಮ್ಮ. ಆ ಘಟನೆಯ ನಂತರ ಹದಿನೈದು ದಿನಗಳವರೆಗೆ ಆದರ್ಶನ ಸುಳಿವು ಸಿಗಲಿಲ್ಲವಂತೆ. ಮೆಡಿಕಲ್ ಕಾಲೇಜಿನಲ್ಲಿ ವಿಚಾರಿಸಿದಾಗ ತರಬೇತಿಗಾಗಿ ದೆಹಲಿಗೆ ಹೋಗಿದ್ದಾರೆ, ರಜೆಯ ಮೇಲೆ ಇದ್ದಾರೆ ಎಂಬ ಜಾರಿಕೆಯ ಮಾತುಗಳ ಮಾಹಿತಿ ಸಿಕ್ಕಿತ್ತು. ಇಪ್ಪತ್ತನೆಯ ದಿನ ಅವನ ಕಾಲೇಜಿಗೆ ಹೋದಾಗ, ಮೊನ್ನೆಯಷ್ಟೇ ಅವರ ಮದುವೆಯಾಯಿತು, ನಿನ್ನೆ ತಮ್ಮ ಹೆಂಡತಿಯ ಜೊತೆಗೆ ಮಧುಚಂದ್ರಕ್ಕೆಂದು ಊಟಿಗೆ ಹೋಗುತ್ತಿದ್ದಾಗ ಕಾರ್ ಅಪಘಾತದಲ್ಲಿ ಇಬ್ಬರೂ ಹೋಗಿಬಿಟ್ಟರು ಎಂಬ ಆಘಾತಕಾರಿ ಸಮಾಚಾರ ಸಿಕ್ಕಿತ್ತು. ಹಣದಾಸೆಗಾಗಿ ಆದರ್ಶ ಬೇರೊಬ್ಬ ಡಾಕ್ಟರ್ ಹುಡುಗಿಯನ್ನೇ ವರಿಸಿದ್ದ. ಮೊದಲಿನಿಂದಲೂ ಅವನು ಚಪಲ ಚೆನ್ನಿಗರಾಯನೆಂದು ಆಮೇಲೆ ತಿಳಿದು ಬಂದಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಪಾಪಿಗೆ ಈ ಜನ್ಮದಲ್ಲೇ ತಕ್ಕ ಪ್ರಾಯಶ್ಚಿತ್ತವಾಗಿತ್ತು.

                ತನ್ನ ಪರಿಸ್ಥಿತಿಯನ್ನು ಯಾರೊಂದಿಗೆ ಹೇಳಿಕೊಳ್ಳಬೇಕೆಂಬ ದ್ವಂದ್ವದಲ್ಲಿದ್ದ  ಅವಳು ನನ್ನ ಒತ್ತಾಯಕ್ಕೆ ಮಣಿದು ಕೊನೆಗೆ ಎಲ್ಲವನ್ನೂ ನನಗೆ ತಿಳಿಸಿದ್ದಳು. ಜೊತೆಗೆ ತಾನು ಆ ತಿಂಗಳು ಹೊರಗಾಗಿಲ್ಲವೆಂಬುದನ್ನೂ ಹೇಳಿದ್ದಳು. ಅಬಾರ್ಷನ್ ಮಾಡಿಸಿಕೊಳ್ಳುವೆ, ತನಗೆ ಮದುವೇನೇ ಬೇಡ ಎಂದು ಹಟ ಹಿಡಿದಿದ್ದಳು. ಅಬಾರ್ಷನ್ ಬೇಡವೆಂದು ಹೇಗೋ ಒಪ್ಪಿಸಿದ್ದೆ. ಆಗ ಅವಳ ಅದೃಷ್ಟಕ್ಕೆಂಬಂತೆ ಬೇರೊಂದು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಈಗಿನ ನಿಮ್ಮಪ್ಪನೊಂದಿಗೆ ಮದುವೆಯಾಯಿತು. ನಿನ್ನಮ್ಮ, ಡಾ.ಆದರ್ಶನ ಕುಡಿ ನೀನು. ನಿನ್ನ ಜನನದ ನಂತರ ನಿನ್ನಮ್ಮನಿಗೆ ಮತ್ತೆ ಮಕ್ಕಳೇ ಆಗಲಿಲ್ಲ.

                ಈಗಿನ ನಿನ್ನಪ್ಪ ದೇವರಂಥ ಮನುಷ್ಯ. ನಿನ್ನಮ್ಮನೂ ಅಷ್ಟೇ. ನಿನ್ನಮ್ಮ ನೈತಿಕತೆಗೆ ಒತ್ತು ಕೊಡುವವಳೇ. ಅದೇನು ವಿಷ ಗಳಿಗೆಯೋ ಏನೋ ಆದರ್ಶನ ಮಾತಿಗೆ ಮರುಳಾಗಿ ಜಾರಿಬಿಟ್ಟಳು ಅಷ್ಟೇ. ನಿನ್ನಪ್ಪನಿಗೆ ನಿನ್ನಮ್ಮನ ಮೇಲೆ ಎಂದೂ ಅನುಮಾನ ಬಂದಿಲ್ಲ. ಇಬ್ಬರದೂ ಅನ್ಯೋನ್ಯ ದಾಂಪತ್ಯ. ನಿನ್ನಮ್ಮ ತುಂಬಾ ನೋವನ್ನು ಅನುಭವಿಸಿದ್ದಾಳೆ. ಆದರೂ ಬ್ಲೆಸ್ಸಿಂಗ್ ಇನ್ ಡಿಸ್‍ಗೈಜ್ ಎಂಬಂತೆ ನೀನು ಆಶಾಕಿರಣವಾದೆ. ಉತ್ಕರ್ಷ, ನಿನ್ನಮ್ಮ ಹೀಗೆ ಅಂತ ಕೆಟ್ಟ ಒಪಿನಿಯನ್ ಫಾರ್ಮ ಮಾಡಿಕೊಳ್ಳಬೇಡ. ಅವಳೊಂದಿಗೆ ಅಪ್ಪಿ-ತಪ್ಪಿಯೂ ಈ ವಿಷಯವೆತ್ತಬೇಡ.” ಸಹನಾ ವಿವರಿಸಿದಾಗ ಉತ್ಕರ್ಷ ದಿಗ್ಮೂಢನಾಗಿದ್ದ. ಅವನ ಕುತೂಹಲ ತಣಿದಿತ್ತಾದರೂ ಮನಸ್ಸಿಗೊಂಥರ ಆಘಾತವಾಗಿತ್ತು. “ನನ್ನ ಹುಟ್ಟಿಗೆ ಕಾರಣನಾದ ನನ್ನಪ್ಪ ದೇವರಂಥ ನನ್ನಮ್ಮನ ಕೈ ಬಿಟ್ಟನೇ? ಹುಟ್ಟುವುದಕ್ಕಿಂತ ಮುಂಚೇನೇ ತಂದೆಯನ್ನು ಕಳೆದುಕೊಂಡ ಪರದೇಶಿಯೇ ನಾನು? ಸತ್ಯ ತುಂಬಾ ಕಹಿ.” ಮನದೊಳಗೇ ಅಂದುಕೊಂಡು ಮರುಗಿದ ಉತ್ಕರ್ಷ. ತಂದೆಯ ಫೋಟೋ ಸಿಗಬಹುದೇ ಎಂದು ಕೇಳಿದ. ಇಲ್ಲವೆಂದು ಸಹನಾ ಮೇಡಂ ಹೇಳಿದಾಗ ನಿರಾಸೆಯಿಂದ ಸುಮ್ಮನಾದ.

                ಉತ್ಕರ್ಷ ತನ್ನ ವಿಶಿಷ್ಠ ವ್ಯಕ್ತಿತ್ವ, ಹಪಹಪಿಯ ಬಗ್ಗೆ ತಿಳಿಸಿದ್ದ. ಹಾಗೇ ತಾನು ಇನ್ಮುಂದೆ ಸನ್ಮಾರ್ಗದಲ್ಲಿ ನಡೆಯುವುದಾಗಿ ತೆಗೆದುಕೊಂಡಿರುವುದರ ಗಟ್ಟಿ ನಿರ್ಧಾರದ ಬಗ್ಗೇನೂ ಹೇಳಿದ. ಸಹನಾ ಖುಷಿ ವ್ಯಕ್ತಪಡಿಸಿದರು. ಅವರಿಗೆ ಧನ್ಯವಾದ ತಿಳಿಸಿ, ಆಶೀರ್ವಾದ ಪಡೆದು ನೊಂದ ಮನಸ್ಸಿನಿಂದ ಉತ್ಕರ್ಷ ಅಲ್ಲಿಂದ ಹೆಜ್ಜೆ ಹಾಕಿದ.

                ಉತ್ಕರ್ಷನ ಅನ್ವೇಷಣೆ ಅಲ್ಲಿಗೇ ನಿಲ್ಲಲಿಲ್ಲ. ಅಪ್ಪನ ಹಳ್ಳಿ ಊರಿಗೂ ಹೋಗಿ ಬಂದ. ಎಂಭತ್ತೈದರ ವಯಸ್ಸಿನ ತಾತನ ಗೆಳೆಯನೊಬ್ಬ ಸಿಕ್ಕ. ತನ್ನ ತಾತ, ಮುತ್ತಾತನ ಬಗ್ಗೆ ವಿಚಾರಿಸಿದ. ಮುದುಕ ಯಾವುದನ್ನೂ ಮುಚ್ಚಿಡದೇ ಮುಕ್ತ ಮನಸ್ಸಿನಿಂದ ವಿಷಯ ಹಂಚಿಕೊಂಡಿದ್ದ. ತಾತ, ಮುತ್ತಾತ ಇಬ್ಬರೂ ಒಳ್ಳೇ ಸದ್ಗುಣ ಸಂಪನ್ನರಾಗಿದ್ದರಂತೆ. ಅವರಂತೆ ಅವರ ಮಗ ಅಂದರೆ ಉತ್ಕರ್ಷನ ಈಗಿನ ಅಪ್ಪನೂ ಸದ್ಗುಣ ಸಂಪನ್ನ. ಅಂದರೆ ಅವರ ಗುಣಗಳು ತನಗೆ ಬಂದಿಲ್ಲ. ಅವರ ವಂಶವಾಹಿನಿಗಳು ತನ್ನ ರಕ್ತದಲ್ಲಿ ಬರುವ ಸಾಧ್ಯತೆಯೇ ಇಲ್ಲವಲ್ಲ ಎಂದು ಉತ್ಕರ್ಷ ಅಂದುಕೊಂಡ. ತನ್ನ ನಿಜ ತಂದೆಯ ಗುಣಗಳು ತನಗೆ ಬಂದಿದ್ದು ಖಾತ್ರಿಯಾಗಿತ್ತು ಉತ್ಕರ್ಷನಿಗೆ.

                “ಕ್ಷಿತಿಜಾ, ಅಂದು ನಿನ್ನ ಅನುಮಾನದ ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿದೆ. ಇನ್ಮುಂದೆ ನಾನು ನಿನ್ನಂಥಹ ಯಾರನ್ನೂ ಬಯಸುವುದಿಲ್ಲ. ನನ್ನ ಸುವನಾಳೇ ನನಗೆ ಎಲ್ಲಾ. ಬೈ” ಎಂದು ಫೋನಲ್ಲಿ ತಿಳಿಸಿ ಅವಳ ಉತ್ತರಕ್ಕೆ ಕಾಯದೇ ಫೋನ್ ಕಟ್ ಮಾಡಿದ್ದ.                 “ನನ್ನ ಜೀವನದ ಮೂಲ ಬೇರುಗಳು ಹೀಗೆ ಸಿಕ್ಕುಗಳಾಗಿವೆ. ಯಾರ್ಯಾರ ಜೀವನದ ಬೇರುಗಳು ಹೇಗೇಗೆ ಸಿಕ್ಕುಗಟ್ಟಿಕೊಂಡಿವೆಯೋ, ಎಲ್ಲೆಲ್ಲಿ ಕವಲೊಡೆದಿವೆಯೋ, ಟಿಸಿಲೊಡೆದಿವೆಯೋ ಬಲ್ಲವರಾರು ಎಂದು ನಿಟ್ಟುಸಿರು ಹಾಕಿದ.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “ಹುಡುಕಾಟ”

  1. JANARDHANRAO KULKARNI

    ಕಥೆ ಚನ್ನಾಗಿ ಓದಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು ಶೇಖರಗೌಡರಿಗೆ.

  2. ಧರ್ಮಾನಂದ ಶಿರ್ವ

    ಕುತೂಹಲವನ್ನು ಉಳಿಸಿಕೊಂಡು ಸಾಗಿದ ಕಥೆ ಚೆನ್ನಾಗಿದೆ. ಅಭಿನಂದನೆಗಳು

  3. Raghavendra Mangalore

    ಸಿಕ್ಕುಗಳನ್ನು ಬಿಡಿಸುವ ಪ್ರಯತ್ನದಲ್ಲಿ ನಾಯಕನಿಗೆ ಹೊಸ ಅನುಭವ ನೀಡಿದ್ದು ಸುಳ್ಳಲ್ಲ . ಕಥೆ ಸೊಗಸಾಗಿದೆ. ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter