ಚುನಾವಣೆ ಮುಂಚೆ ಭರವಸೆಗಳ ಸುರಿಮಳೆಯತ್ತ ರಾಜಕೀಯ ಪಕ್ಷಗಳು ನೀಡುವ ಆಶ್ವಾಸನೆ/ ಭರವಸೆಗಳ ಸುರಿಮಳೆಯತ್ತ ಒಂದು ವ್ಯಂಗ್ಯ ನೋಟ…..
‘ಬೋಗಸ್’ ಪಕ್ಷದ ರಾಜ್ಯ ಚುನಾವಣೆ ಆಶ್ವಾಸನೆಗಳ ಸಮಿತಿಯ ಅಧ್ಯಕ್ಷ ಮತ್ತು ಆ ಪಕ್ಷದ ಪ್ರಧಾನ ಕಾರ್ಯದರ್ಶಿ ಗುಂಡಣ್ಣ ಉರ್ಫ್ ನುಂಗಣ್ಣನ ಆಫೀಸ್ ಕಡೆಯಿಂದ ‘ಚುನಾವಣೆ ಆಶ್ವಾಸನೆಗಳ / ಭರವಸೆಗಳ’ ಬಿಡುಗಡೆಯ ಕಾರ್ಯಕ್ರಮದ ನಿಮಿತ್ತ ಪಕ್ಷದ ಆಫೀಸಿನಲ್ಲಿ ಏರ್ಪಡಿಸಿದ ಪ್ರೆಸ್ ಕಾನ್ಫರೆನ್ಸ್ ಸಂಜೆ ಐದು ಘಂಟೆಗೆ ಇದೆ ಎಂದು ಟಿ ವಿ ಮತ್ತು ಮುದ್ರಣ ಮಾಧ್ಯಮದ ಸೋದರರಿಗೆ ತಿಳಿಸಿದಾಗ ಮಧ್ಯಾಹ್ನ ಒಂದು ಘಂಟೆ. ಟಿ ವಿ 111 (ಮೂರು ನಾಮ) ದ ಸಂಪಾದಕರು ಮುಖ್ಯ ವರದಿಗಾರ ಚಂದ್ರುಗೆ ಈ ವಿಷಯ ಮರು ತಿಳಿಸಿದಾಗ ವೇಳೆ ಅಪರಾಹ್ನ ಒಂದು ಘಂಟೆ ಒಂದು ನಿಮಿಷ… ಕೇವಲ ಒಂದೇ ನಿಮಿಷದ ಅಂತರದಲ್ಲಿ ಸಂಪಾದಕರು ಮುಖ್ಯ ವರದಿಗಾರನಿಗೆ ಪ್ರೆಸ್ ಕಾನ್ಫರೆನ್ಸ್ ವಿಷಯವನ್ನು ಫಾರ್ವರ್ಡ್ ಮಾಡಿದ್ದರು. ಏಕೆಂದರೆ ಟಿವಿ 111(ಮೂರು ನಾಮ) ಕ್ಷಣ ಕ್ಷಣದ ವರದಿಯನ್ನು ಲೈವ್ ಕೊಡುವಲ್ಲಿ ರಾಜ್ಯದ ಅತ್ಯಂತ ಜನಪ್ರಿಯ ವಾಹಿನಿಯಾಗಿ ಹೆಸರು ಪಡೆದಿತ್ತು! ಸರಿಯಾಗಿ ಐದು ಘಂಟೆಗೆ ನೆರೆದ ವರದಿಗಾರರಿಗೆಲ್ಲ ಸಂಜೆಯ ಸ್ನಾಕ್ಸ್ ಸಪ್ಲೈ ಅದ ಕೂಡಲೇ ರಾ. ಚು. ಆ/ಭ ಕೊ.ಸ.(ರಾಜ್ಯ ಚುನಾವಣೆ ಆಶ್ವಾಸನೆಗಳು / ಭರವಸೆಗಳನ್ನು ಕೊಡುವ ಸಮಿತಿ ) ಅಧ್ಯಕ್ಷ ಮತ್ತು ಪ್ರ. ಕಾ (ಪ್ರಧಾನ ಕಾರ್ಯದರ್ಶಿ ) ಗುಂಡಣ್ಣ ಉರ್ಫ್ ನುಂಗಣ್ಣ ಪದಾಧಿಕಾರಿಗಳ ಮಧ್ಯೆ ಕೂತು ಕಿರು ಭಾಷಣ ಶುರು ಮಾಡಿದ… “ನಮ್ಮ ‘ಬೋಗಸ್’ ಪಕ್ಷವನ್ನು ನಾವು ರಾಜ್ಯಾದ್ಯಾಂತ ಬೆಳೆಸಲು ನೀವೆಲ್ಲ ತುಂಬು ಹೃದಯದ ಸಹಾಯ ಮಾಡಿದ್ದೀರಿ. ಜನಗಳು ಪ್ರೀತಿಯಿಂದ ‘ಬೋಗಸ್’ ಪಕ್ಷ ಎಂದು ಕರೆಯುತ್ತಾರೆ ಅಷ್ಟೇ… ಆದರೆ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಳೆದೆರಡು ಚುನಾವಣೆಯಲ್ಲಿ ಸೋತರೂ ರಾಜ್ಯದ ಜನತೆಯ ‘ಸೇವೆ’ ಮಾಡುವಲ್ಲಿ ನಾವು ಎಂದೂ ಹಿಂದೆ ಬಿದ್ದಿಲ್ಲ ಎನ್ನುವದನ್ನು ನಿಮ್ಮ ಗಮನಕ್ಕೆ ತರುತ್ತಿರುವೆ. ಇನ್ನು ಎರಡು ತಿಂಗಳಲ್ಲಿ ಮತ್ತೆ ಚುನಾವಣೆಗಳು ಬರುತ್ತಿವೆ. ನಮ್ಮ ಪಕ್ಷದ ನಾಯಕರು ಅನೇಕ ಬಾರಿ ಹಲವು ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಸಭೆ ಸೇರಿ ಒಂದೆರಡು ದಿನ ರಾತ್ರಿ ‘ ಮತದಾರನ ಹಿತದ ‘ ಬಗ್ಗೆ ಯೋಚಿಸುತ್ತ ಸರಿಯಾಗಿ ನಿದ್ದೆ ಕೂಡ ಮಾಡದೆ ಚಿಂತನ – ಮಂಥನ ಮಾಡಿ ರಾಜ್ಯದ ಜನತೆಗೆ ಈ ಕೆಳಗಿನ ಆಶ್ವಾಸನೆಗಳನ್ನು ಪಕ್ಷದ ಪರವಾಗಿ ಕೊಡಲು ನನಗೆ ತಿಳಿಸಿದ್ದಾರೆ. ಆದರೆ ನಮ್ಮ ಚುನಾವಣೆ ಆಶ್ವಾಸನೆಗಳು ಖಂಡಿತ ‘ಬೋಗಸ್’ ಅಲ್ಲ ಬದಲಾಗಿ ನಮ್ಮ ಪಕ್ಷ ಗೆದ್ದು ಬಂದರೆ ತುರ್ತಾಗಿ ಕೈಗೊಳ್ಳುವ ‘ಕ್ರಮಗಳು’ ಎಂದು ಈ ಸಂದರ್ಭದಲ್ಲಿ ಜನತೆಯ ಮುಂದೆ ನಮ್ಮ ‘ಬೋಗಸ್’ ಪಕ್ಷದ ವಕ್ತಾರನಾಗಿ ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿರುವೆ.. ನಮ್ಮ ‘ಬೋಗಸ್’ ಭರವಸೆಗಳ ಸರಮಾಲೆ ಇಂತಿದೆ. ಓದುತ್ತೇನೆ. ದಯವಿಟ್ಟು ಗಮನದಿಂದ ಕೇಳಿ. ನಮ್ಮ ಪಕ್ಷದ ಆಶ್ವಾಸನೆಗಳ ಅಥವಾ ಭರವಸೆಗಳ ಹ್ಯಾಂಡ್ ಬಿಲ್ ಪ್ರತಿ ಈಗಾಗಲೇ ನಿಮ್ಮ ಕೈಯಲ್ಲಿದೆ… ” ಹೈ ಸ್ಕೂಲ್ ವರೆಗೆ ಇರುವ ಫ್ರೀ ಶಿಕ್ಷಣವನ್ನು ಡಿಗ್ರಿ / ಪಿ ಜಿ ವರೆಗೆ ಮುಂದುವರೆಕೆ… ಸ್ಕೂಲಿನಲ್ಲಿ ಮಧ್ಯಾಹ್ನ ಬಿಸಿ ಊಟದ ಜೊತೆ ಬಾಳೆಹಣ್ಣು /ಮೊಟ್ಟೆ ಫ್ರೀ…ಪಠ್ಯ ಪುಸ್ತಕಗಳು – ನೋಟ್ ಪುಸ್ತಕಗಳು ಫ್ರೀ… ಯುನಿಫಾರ್ಮ್ ಫ್ರೀ.. ಮಕ್ಕಳಿಗೆ ಬೈಸಿಕಲ್ ಫ್ರೀ… ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಿಗೆ ಸ್ಕೂಟಿ ಫ್ರೀ…ನೂತನ ಯುವ ಮತದಾರರಿಗೆ ಲ್ಯಾಪ್ ಟ್ಯಾಪ್ ಫ್ರೀ…ಎಲ್ಲ ಮತದಾರರ ಮನೆಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ವಿದ್ಯುತ್ ಫ್ರೀ…ರೈತರ ಪಂಪ್ ಸೆಟ್ ಗಳಿಗೆ ಕರೆಂಟ್ ಸಪ್ಲೈ ಫ್ರೀ…ಸ್ತ್ರೀ ಮತದಾರರಿಗೆ ಮಿಕ್ಸಿ ಅಥವಾ ವಾಷಿಂಗ್ ಮಷೀನ್ ಅಥವಾ ಟಿ ವಿ ಸೆಟ್ ಇತ್ಯಾದಿಗಳು ಫ್ರೀ…ಅಡುಗೆಗೆ ಪಾಮ್ ಆಯಿಲ್ ಫ್ರೀ… ತಿಂದದ್ದು ಚೆನ್ನಾಗಿ ಜೀರ್ಣವಾಗಲು ಕೊಡುವ ಶುದ್ಧ ತುಪ್ಪ ಫ್ರೀ… ವರ್ಷಕ್ಕೆ 3 ಅಡುಗೆ ಅನಿಲದ ಸಿಲಿಂಡರ್ ಫ್ರೀ…ಮಕ್ಕಳನ್ನು ಸ್ಕೂಲಿಗೆ ಕಳಿಸುವ ತಾಯಂದಿರಿಗೆ ಮಾಸಿಕ ಸಹಾಯ ಧನ… ಬಡ ಕುಟುಂಬದ ಮಹಿಳೆಗೆ ಮಾಸಿಕ ನೆರವು ₹1000/-… ವಿದ್ಯಾವಂತ ನಿರುದ್ಯೋಗಿಗಳಿಗೆ ತಿಂಗಳಿಗೆ ₹ 2500/- ಸಹಾಯ ಭತ್ಯೆ… ಸಣ್ಣ ರೈತರಿಗೆ ಎರಡು ಲಕ್ಷದವರೆಗೆ ಒಂದು ಬಾರಿ ಸಾಲ ಮನ್ನಾ… ಪ್ರತಿ ವರ್ಷ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ… ಬಿ ಪಿ ಎಲ್ ಕಾರ್ಡ್ ಮೇಲೆ ತಿಂಗಳಿಗೆ ಒಂದು ಕುಟುಂಬಕ್ಕೆ ಬೇಕಾದ ಪಡಿತರ ಫ್ರೀ ಅದೂ ಈ ಬಾರಿ ಫಲಾನುಭವಿಯ ಮನೆಯ ಬಾಗಿಲಿಗೆ!… ವಯಸ್ಕರ ಮತ್ತು ವಿಧವಾ ವೇತನದಲ್ಲಿ ಹೆಚ್ಚಳ… ಹೆಚ್ಚು ಕಡಿಮೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ಸುಮಾರು ₹ 50000/- ರೂಪಾಯಿಯಷ್ಟು ಸಹಾಯ ಧನ ದೊರಕುತ್ತದೆಂದು ಒಂದು ಅಂದಾಜು” ಎಂದು ವಾಗ್ದಾನಗಳ ಸರಮಾಲೆಯನ್ನು ‘ಮತದಾರ’ ನ ಕೊರಳಿಗೆ ಹಾಕಲು ಸಜ್ಜಾದ ಗುಂಡಣ್ಣ ಉರ್ಫ್ ನುಂಗಣ್ಣ ಮತ್ತು ಅವನ ಪಕ್ಷದ ನೇತಾರರು. “ಹನುಮನ ಬಾಲದನಂತಹ ಆಶ್ವಾಸನೆಗಳ ಪಟ್ಟಿ ಮುಗಿಯಿತೆ?” ಎಂದು ಪ್ರಶ್ನಿಸಿದರು ಪತ್ರಕರ್ತರಲ್ಲೊಬ್ಬರು ವ್ಯಂಗ್ಯವಾಗಿ… “ಇಲ್ಲ.. ಇಲ್ಲ..ಈ ಬಾರಿ ಯಾವ ಪಕ್ಷವೂ ಇಲ್ಲಿಯವರೆಗೆ ಊಹಿಸಲೂ ಆಗದಂತಹ ನೂತನ ಮತ್ತು ಕ್ರಾಂತಿಕಾರಿ ಆಶ್ವಾಸನೆಯನ್ನು ನಾವು ನಮ್ಮ ಗೌರವಾನ್ವಿತ ಮತದಾರ ಪ್ರಭುಗಳಿಗೆ ನೀಡಲಿದ್ದೇವೆ. ಅದೇನೆಂದರೆ ಉಚಿತ ದವಸ ಧಾನ್ಯ ಕೊಟ್ಟರಷ್ಟೇ ಸಾಲದು, ಬದಲಿಗೆ ಅವಶ್ಯ ಬಿದ್ದರೆ ಆಶಕ್ತರು , ವೃದ್ಧರು ಮತ್ತು ಸೇವೆಯ ಸೌಲಭ್ಯ ಪಡೆಯಬೇಕೆನ್ನುವವರು ನಮ್ಮ ಆಫೀಸಿನ ‘ಉಚಿತ ಟೋಲ್’ ನಂಬರಿಗೆ ಕರೆ ಮಾಡಿದರೆ, ಅವರವರ ಮನೆಗಳಲ್ಲಿಯೇ ಅಡುಗೆ ಮಾಡಿ ಊಟ ಮಾಡಿಸಿ ಬರಲು ಸ್ತ್ರೀ – ಪುರುಷರ ಸ್ವಯಂ ಸೇವಕರನ್ನು ನಾವು ನೇಮಕ ಮಾಡುತ್ತೇವೆ. ಅದಲ್ಲದೇ ನಮ್ಮ ‘ಗೌರವಾನ್ವಿತ ಮತದಾರ’ ಚುನಾವಣೆಗಳು ಬಂದಾಗ ತನ್ನ ಮನೆ – ಗುಡಿಸಲು ಎನ್ನುವ ಭೇದವಿಲ್ಲದೆ ‘ಗೂಡಿನಿಂದ’ ಹೊರ ಬಂದು ‘ಪವಿತ್ರ ಮತದಾನ’ ಮಾಡಿ ಮತ್ತೆ ತನ್ನ ‘ಗೂಡು’ ಸೇರುವವರೆಗೆ ಅವನಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಫ್ರೀ ಆಗಿ ನೀಡುತ್ತೇವೆ…. ಆ ಘನ ಕಾರ್ಯ ಮುಗಿಯುವವರೆಗೆ ನಾವು ಒಂದು ಕ್ಷಣ ವಿಶ್ರಾಂತಿಯನ್ನು ಸಹ ತೆಗೆದುಕೊಳ್ಳುವದಿಲ್ಲ….ಇದು ನಮ್ಮ ಪಕ್ಷದ ಅಖಂಡ ಗುರಿ” ಎಂದು ಗುಂಡಣ್ಣ ಉರ್ಫ್ ನುಂಗಣ್ಣ ಗರ್ವದಿಂದ ಪತ್ರಿಕಾ ಗೋಷ್ಠಿ ಮುಕ್ತಾಯಗೊಳಿಸಲು ಸಿದ್ಧನಾಗಿ ನೆರೆದ ಮಾಧ್ಯಮ ಮಿತ್ರರತ್ತ ಮತ್ತೊಮ್ಮೆ ದೃಷ್ಟಿ ಹಾಯಿಸಿ ಹೇಳಿದ…. “ಸದ್ಯ ಪ್ರೆಸ್ ಕಾನ್ಫರೆನ್ಸ್ ಮುಗಿಯಿತು… ಆದರೆ ವಿರೋಧ ಪಕ್ಷಗಳು ಇನ್ನಷ್ಟು ‘ಫ್ರೀ’ ಕೊಡುಗೆಗಳನ್ನು ಘೋಷಣೆ ಮಾಡಿದರೆ ನಮ್ಮ ಅಸ್ತಿತ್ವಕ್ಕಾಗಿ ನಾವು ಕೂಡಲೇ ‘ಮತದಾರ ಪ್ರಭು’ ಗಳಿಗೆ ಮತ್ತಷ್ಟು ನಮ್ಮ ಪಕ್ಷದ ‘ಫ್ರೀ’ ಘೋಷಣೆಗಳ ಮೂಲಕ ಅವರಿಗೆ ತಕ್ಕ ಉತ್ತರ ನೀಡುತ್ತೇವೆ…ಎಲ್ಲ ಮಾಧ್ಯಮ ಮಿತ್ರರಿಗೆ ನನ್ನ ಮನವಿ ಏನೆಂದರೆ ನಮ್ಮ ಚುನಾವಣೆ ಆಶ್ವಾಸನೆಗಳು ಮತದಾರನ ಮನ ಮುಟ್ಟುವದಕ್ಕೆ ನಿಮ್ಮ ಸಹಕಾರ ಅತ್ಯಗತ್ಯ. ನಿಮಗೆಲ್ಲರಿಗೂ ನಮ್ಮ ‘ಬೋಗಸ್’ ಪಕ್ಷದಿಂದ ಮತ್ತೊಮ್ಮೆ ಧನ್ಯವಾದಗಳು ” ಎಂದು ಹೇಳಿ ಪ್ರೆಸ್ ಕಾನ್ಫರೆನ್ಸ್ ಮುಗಿಸಿ ಮೇಲೆ ಎದ್ದ ಗುಂಡಣ್ಣ… ಪ್ರೆಸ್ ಕಾನ್ಫರೆನ್ಸ್ ಮುಗಿದ ಒಂದು ವಾರದವರೆಗೆ ಟಿ. ವಿ 111(ಮೂರು ನಾಮ)ದ ಮುಖ್ಯ ವರದಿಗಾರನಾದ ಚಂದ್ರುಗೆ ನಿದ್ದೆಯೇ ಇಲ್ಲ…ಕಾರಣ ಒಂದು ವೇಳೆ ‘ಬೋಗಸ್’ ಪಕ್ಷ ಅಥವಾ ‘ಬಂಡಲ್’ ಇಲ್ಲಾ ‘ಭೂಗತ’ ಪಕ್ಷದಲ್ಲಿ ಯಾವುದೇ ಗೆದ್ದು ಬಂದರೂ ಮುಂದೆ ಸರ್ಕಾರದ ಚುಕ್ಕಾಣಿ ಹಿಡಿದು ಚುನಾವಣೆಯ ಮುಂಚೆ ನೀಡಿದ ನೂರಾರು ಆಶ್ವಾಸನೆಗಳನ್ನು ಹೇಗೆ ಈಡೇರಿಸುತ್ತವೆ ಮತ್ತು ಅದಕ್ಕಾಗಿ ಸರ್ಕಾರದ ಆರ್ಥಿಕ ‘ಸಂಪನ್ಮೂಲಗಳನ್ನು’ ಹೇಗೆ ಹೊಂದಿಸುತ್ತವೆ ಎಂಬುದರ ಬಗ್ಗೆ ಹಗಲೂ ರಾತ್ರಿ ಚಿಂತೆ ಮಾಡಿ – ಮಾಡಿಯೇ ಪಾಪ ಸೊರಗಿಬಿಟ್ಟ ಚಂದ್ರು…ತನ್ನ ಸ್ನೇಹಿತರ- ಬಂಧುಗಳು ಮತ್ತು ಸಹೋದ್ಯೋಗಿಗಳ ಹತ್ತಿರ ತನ್ನ ಸಂದೇಹವನ್ನು ಹೇಳಿಕೊಂಡ… ಆದರೆ ಯಾರಿಂದಲೂ ತೃಪ್ತಿಕರ ಉತ್ತರ ಸಿಗಲಿಲ್ಲ. ಆಗ ಇದ್ದಕಿದ್ದಂತೆ ನೆನಪಾಯಿತು ‘ಬೋಗಸ್’ ಪಕ್ಷದ ನಾಯಕ ಗುಂಡಣ್ಣ ಉರ್ಫ್ ನುಂಗಣ್ಣ ತನ್ನ ಕುಚುಕು – ಕುಚುಕು ಎಂದು… ತಾವಿಬ್ಬರು ಲಂಗೋಟಿ ಹಾಕುವ ಮುಂಚೆಯೇ ದೋಸ್ತರು ಎಂಬುದನ್ನು ಮರೆಯದ ಚಂದ್ರು ಕೂಡಲೇ ಫೋನ್ ಮಾಡಿ ತನ್ನ ‘ಸಂದೇಹಗಳನ್ನು’ ಹೇಳಿದ. ಇಂತಹವುಗಳನ್ನೆಲ್ಲ ಚೆನ್ನಾಗಿ ನಿಭಾಯಿಸಿಯೇ ನಾಯಕನಾಗಿದ್ದ ಗುಂಡಣ್ಣ ಉರ್ಫ್ ನುಂಗಣ್ಣ ಅಂದು ರಾತ್ರಿಯೇ ತನ್ನ ಗೆಸ್ಟ್ ಹೌಸ್ ಗೆ ಬಂದು ತನ್ನನ್ನು ಭೇಟಿಯಾಗಿ ತನ್ನ ‘ಗುಂಡು ಮೇಜಿನ ಪರಿಷತ್’ ಪಾರ್ಟಿಯಲ್ಲಿ ಭಾಗವಹಿಸಲು ಚಂದ್ರುಗೆ ಆಹ್ವಾನವಿತ್ತ. ಅದನ್ನೇ ಕಾಯುತಿದ್ದ ಚಂದ್ರು ಕೂಡಲೇ ಓಕೆ ಎಂದು ಒಪ್ಪಿಗೆಯಿತ್ತ. ರಾತ್ರಿ ಒಂಭತ್ತಕ್ಕೆ ಚಂದ್ರು ‘ ಬೋಗಸ್ ‘ ಪಕ್ಷದ ನಾಯಕನನ್ನು ಭೇಟಿಯಾಗಲು ಬಂದ. ಗುಂಡಣ್ಣ ಉರ್ಫ್ ನುಂಗಣ್ಣನ ಶಿಷ್ಯರು ಆಗಲೇ ಟೇಬಲ್ ಸುತ್ತುವರೆದಿದ್ದರು… ಚಂದ್ರು ಬಂದಕೂಡಲೇ ಗುಂಡಣ್ಣ ಉರ್ಫ್ ನುಂಗಣ್ಣನ ಬಂಟರು ಅವನ ಮೊಬೈಲ್ ವಶ ಪಡಿಸಿಕೊಂಡು ಅಲ್ಲಿ ನೆರೆದ ಹತ್ತಿರದ ಯಾರ ಮೊಬೈಲ್ ನಲ್ಲೂ ‘ಮೈಕ್ ಆನ್’ ಇರದಂತೆ ಜಾಗೃತಿ ವಹಿಸಿದರು! ಗುಂಡಣ್ಣ ಉರ್ಫ್ ನುಂಗಣ್ಣನ ಪಕ್ಕದಲ್ಲಿ ಆಸೀನನಾದ ಚಂದ್ರು ‘ ಕಾಕ್ ಟೈಲ್ ‘ ನ್ನು ನಿಧಾನವಾಗಿ ಹೀರುತ್ತ ಒಂದೊಂದೇ ‘ಪೀಸು’ ಗಳನ್ನು ಬಾಯಲ್ಲಿ ಎಸೆದುಕೊಳ್ಳುತ್ತಾ ತನ್ನ ಸಂದೇಹಗಳ ‘ಪೆಟ್ಟಿಗೆಯನ್ನು’ ಓಪನ್ ಮಾಡಿದ. ಚಂದ್ರುವಿನ ಎಲ್ಲ ಸಂದೇಹಗಳ ಪಟ್ಟಿ ಮಾಡಿಕೊಂಡ ಗುಂಡಣ್ಣ ಉರ್ಫ್ ನುಂಗಣ್ಣ ಅವುಗಳನ್ನು ಎರಡು ಭಾಗವಾಗಿ ವಿಂಗಡಿಸಿ ಒಂದರ ನಂತರ ಮತ್ತೊಂದನ್ನು ಹೇಳಲು ಅನುಕೂಲವಾಗುವಂತೆ ಒಂದು ಬಾರಿ ಗ್ಲಾಸಿಗೆ ವಿಸ್ಕಿಯನ್ನು ಸುರುವಿಕೊಂಡು ಮೆಲ್ಲನೆ ಹೀರುತ್ತ ಹೇಳಲು ಶುರು ಮಾಡಿದ ಮತ್ತು ತನ್ನಲ್ಲಿ ಅಡಗಿದ ರಾಜಕೀಯ ಪ್ರಜ್ಞೆಯ ವಿಶ್ವ ರೂಪವನ್ನು ನಿಧಾನವಾಗಿ ಆ ‘ಮಂದ ಬೆಳಕಿನ’ ವಾತಾವರಣದಲ್ಲಿ ಅನಾವರಣ ಮಾಡತೊಡಗಿದ… ಒಂದು ವೇಳೆ ನಮ್ಮ ‘ಬೋಗಸ್’ ಪಕ್ಷ ಅಧಿಕಾರಕ್ಕೆ ಬಂದರೆ : “ಮೊದಲು ‘ಬಂಡಲ್’ ಅಥವಾ ‘ಭೂಗತ’ ಪಕ್ಷಗಳು ‘ಮತದಾರನ ನಾಡಿ’ ಹಿಡಿಯಲು ವಿಫಲವಾಗಿ ನಮ್ಮ ‘ಬೋಗಸ್’ ಪಕ್ಷ ಗೆದ್ದು ಬಂದರೆ ನಾವು ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳನ್ನು ಶೀಘ್ರವಾಗಿ ಜಾರಿಗೊಳಿಸಲು ಇರುವ ಅಡ್ಡಿ ಆತಂಕಗಳನ್ನು ಮತ್ತು ಈ ಕೆಳಗಿನ ಕಾರಣಗಳನ್ನು ಶ್ರೀಸಾಮಾನ್ಯ ಮತದಾರನ ಮುಂದಿಟ್ಟು ಮನದಟ್ಟು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ….” * ಸಾಮೂಹಿಕ ನಾಯಕತ್ವದ ಮೇಲೆ ನಮ್ಮ ಪಕ್ಷ ಗೆದ್ದಿರುವ ಕಾರಣ ಸರಕಾರ ‘ಟೇಕ್ ಆಫ್’ ಆಗಲು ಸಾಮೂಹಿಕ ನಾಯಕರ ಮಧ್ಯೆ ಮೊದಲು ಸಮನ್ವಯ ಮೂಡಿಸಲು ಸಮಯ ಬೇಕಾಗುತ್ತದೆ…. * ಹಿಂದಿನ ಸರ್ಕಾರ ‘ಖಜಾನೆ’ ಯನ್ನು ಪೂರ್ತಿ ಕೊಳ್ಳೆ ಹೊಡೆದು ‘ಖಾಲಿ’ ಮಾಡಿರುವದರಿಂದ ಅದನ್ನು ತುಂಬಲು ಕೆಲವು ತಿಂಗಳ ( ವರ್ಷಗಳ!) ಕಾಲಾವಕಾಶ ಅಗತ್ಯ. ಪ್ರಜೆಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು…. * ನಮ್ಮ ಹೊಸ ಸರ್ಕಾರಕ್ಕೆ ‘ಹನಿಮೂನ್’ ಟೈಮ್’ ಎಂದರೆ ಕನಿಷ್ಠ ‘ನೂರು’ ದಿನಗಳ ಅವಕಾಶ ಕಡ್ಡಾಯವಾಗಿ ನಮ್ಮ ಮಾಧ್ಯಮ ಮಿತ್ರರು ನಮ್ಮ ಸರ್ಕಾರಕ್ಕೆ ಕೊಡಲು ಮನವಿ ಮಾಡುತ್ತೇವೆ…. * ಹಳೆಯ ಸರ್ಕಾರ ‘ಮಳೆರಾಯ’ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಮ್ಮ ಅವಧಿಯಲ್ಲಿ ‘ರಾಜ್ಯದಲ್ಲಿ’ ಸಾಕಷ್ಟು ಮಳೆ ಸುರಿಸಿಕೊಂಡು ತೀರಾ ಚುನಾವಣೆ ಘೋಷಣೆಯಾದಾಗ ಆ ಒಪ್ಪಂದವನ್ನು ರದ್ದು ಪಡಿಸಿದ್ದಕ್ಕೆ ‘ಬರಗಾಲ’ ದ ಬವಣೆಯನ್ನು ನಾವು ಅನುಭವಿಸಬೇಕಾಯಿತು. ಹೀಗಾಗಿ ಆರ್ಥಿಕ ಸಮಸ್ಯೆಯ ತೀರ್ವತೆಯನ್ನು ಎದುರಿಸಬೇಕಾಯಿತು…. * ಪಕ್ಷಕ್ಕಾಗಿ ‘ನಿಷ್ಠೆ’ ಯಿಂದ ದುಡಿದ ಕಾರ್ಯಕರ್ತರಿಗೆ ನಾವು ‘ಬೋರ್ಡ್ – ಮಂಡಳಿ’ ಗಳನ್ನು ರಚಿಸಿ ಅವರನ್ನು ಸಮಾಧಾನ ಪಡಿಸುವದಕ್ಕೆ ಸ್ವಾಭಾವಿಕವಾಗಿ ಸ್ವಲ್ಪ ಸಮಯ ಬೇಕಾಗುತ್ತದೆ…. * ಜನರ ‘ಸೇವೆ’ ಗಾಗಿ ತಮ್ಮ ಕುಟುಂಬವನ್ನು ತೊರೆದು ಹಗಲಿರುಳು ಶ್ರಮಿಸುವ ಶಾಸಕರ, ಮಂತ್ರಿಗಳ ವೇತನ – ಭತ್ಯೆಗಳ ಹೆಚ್ಚಳಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ನಾವು ಕೈಗೊಂಡ ಎಲ್ಲ ಕೆಲಸಕ್ಕೂ ‘ವಿರೋಧ’ ಮಾಡುವ ವಿರೋಧ ಪಕ್ಷದ ನಾಯಕರು ಮತ್ತು ಇತರ ಎಲ್ಲ ಸದಸ್ಯರು ಇದಕ್ಕೆ ಮಾತ್ರ ‘ಸಂಪೂರ್ಣ ಸಹಕಾರ’ ನೀಡಿದ್ದಾರೆ. ಆದರೆ ಇದನ್ನು ಜಾರಿಗೊಳಿಸಲು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ ತುಸು ವಿಳಂಬವಾಗುತ್ತದೆ…. * ನಾವು ನಮ್ಮ ಚುನಾವಣೆ ಆಶ್ವಾಸನೆಗಳನ್ನು ಈಡೇರಿಸಲು ಆರ್ಥಿಕ ಮಾರ್ಗೋಪಾಯಗಳನ್ನು ಮತ್ತು ಹಣವನ್ನು ಕ್ರೋಢಿಕರಿಸಲು ಸಮಯ ಬೇಕಾಗುತ್ತದೆ. ಅಲ್ಲದೇ ಹಿಂದಿನ ‘ಜನವಿರೋಧಿ’ ಸರ್ಕಾರ ನಮಗೆ ಹೊಸ ಸಾಲವನ್ನು ಮಾಡುವ ಅವಕಾಶದಿಂದ ನಾವು ವಂಚಿತರಾಗಬೇಕೆಂದೇ ಕೊನೆಗೆ ಆರ್. ಬಿ. ಐ. ನಿಂದ ಕೂಡ ಬೇಕಾಬಿಟ್ಟಿ ಸಾಲ ಎತ್ತುವಳಿ ಮಾಡಿ ನಮ್ಮನ್ನು ಆರ್ಥಿಕ ‘ಗಾಡಾಂಧಿಕಾರ’ ಕ್ಕೆ ದೂಡಿದೆ. ಹೀಗಾಗಿ ಹೊಸದಾಗಿ ‘ವರ್ಲ್ಡ್ ಬ್ಯಾಂಕ್’ ನಿಂದ ಸಾಲ ಎತ್ತಲು ಸ್ವಲ್ಪ ಕಾಲಾವಕಾಶ ಬೇಕು…. * ನಮ್ಮ ಪ್ರತಿ ಬಜೆಟ್ ಗಳಲ್ಲಿ ಮಧ್ಯಮ ವರ್ಗದವರ ಜೇಬಿಗೆ ಅವರಿಗೆ ಗೊತ್ತೇ ಆಗದಂತೆ ಚಂದವಾಗಿ ಹೇಗೆ ಕತ್ತರಿ ಹಾಕಬೇಕು ಮತ್ತು ಉಚಿತ ಸೌಲಭ್ಯಗಳಿಗೆ ಅವರಿಂದ ಹಣ ಪೀಕಿಸಲು (ಕ್ರೋಢಿಕರಿಸಲು) ನೆರವಾಗಿ ಮಾರ್ಗದರ್ಶನ ಮಾಡಲು ಒಂದು ಸಮಿತಿ ನೇಮಕ ಮಾಡುತ್ತೇವೆ…. * ನಾವು ಚುನಾವಣೆ ಭರವಸೆಗಳನ್ನು ಈಡೇರಿಸಲು ಕ್ರಮ ಕೈಗೊಂಡಾಗ ವಿರೋಧ ಪಕ್ಷಗಳು ಅನಾವಶ್ಯಕವಾಗಿ ‘ನೂರೆಂಟು’ ಕಾರಣಗಳಿಂದ ಅಡ್ಡಿ ಪಡಿಸಿ ನಮಗೆ ಒಳ್ಳೆಯ ಹೆಸರು ಬರಬಾರದೆಂದು ‘ಪಿತೂರಿ’ ಮಾಡುತ್ತವೆ. ಅವುಗಳನ್ನು ಎದುರಿಸಲು ನಮಗೆ ಸ್ವಲ್ಪ ಸಮಯ ಬೇಕು…. * ಸುಲಭ ಆಶ್ವಾಸನೆಗಳನ್ನು ಮೊದಲು ಈಡೇರಿಸುತ್ತೇವೆ. ನಂತರ ಮಿಕ್ಕ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸಲು ನಮ್ಮ ಸರ್ಕಾರ ಕಟಿಬದ್ಧ. ಒಂದು ವೇಳೆ ತುಂಬಾ ತಡವಾದರೆ ಕೆಲವೊಂದನ್ನು ಮುಂದಿನ ‘ಐದು’ ವರ್ಷದ ಅವಧಿಗೆ ‘ಪೋಸ್ಟ್ ಫೋನ್’ ಮಾಡುತ್ತೇವೆ. ಅದಕ್ಕಾಗಿ ಇನ್ನೊಂದು ಅವಧಿಗೆ ತಾವು ಮತ ಹಾಕಿ ನಮ್ಮನ್ನು ಗೆಲ್ಲಿಸಿದರೆ ನಮ್ಮ ಆಶ್ವಾಸನೆಗಳನ್ನು 100% ಈಡೇರಿಸುತ್ತೇವೆ ಎಂದು ಮಾನ್ಯ ಮತದಾರರಲ್ಲಿ ಮನವಿ ಮಾಡುತ್ತದೆ ನಮ್ಮ ‘ಬೋಗಸ್’ ಪಕ್ಷ ” ಎಂದು ಗುಂಡಣ್ಣ ಉರ್ಫ್ ನುಂಗಣ್ಣನಲ್ಲಿ ಅಡಗಿದ ‘ರಾಜಕೀಯ ಮುತ್ಸದ್ದಿತನ’ ಹೊರಬಂದು ಮಾತು ಮುಗಿಸಿದಾಗ ಚಂದ್ರು ಮೂರ್ಛೆ ಹೋಗದೆ ಹಾಗೇ ಇದ್ದದ್ದು ಸೋಜಿಗವೆ ಸರಿ!…. ಒಂದೆರಡು ನಿಮಿಷದ ‘ಬ್ರೇಕ್’ ಪಡೆದು ಮತ್ತೆ ರಾ. ಚ ( ರಾಜಕೀಯ ಚತುರ) ಗುಂಡಣ್ಣ ಉರ್ಫ್ ನುಂಗಣ್ಣನು ಬಾಟಲಿಯಿಂದ ಗ್ಲಾಸ್ ಗೆ ಸ್ವಲ್ಪ ದ್ರವವನ್ನು ಸುರುವಿಕೊಂಡು ಮೆಲ್ಲನೆ ಗುಟುಕರಿಸುತ್ತ ಮಾತು ಮುಂದುವರೆಸಿದ…. ಒಂದು ವೇಳೆ ‘ಬೋಗಸ್’ ಪಕ್ಷಕ್ಕೆ ಅಧಿಕಾರ ಸಿಗದಿದ್ದರೆ… : ದುರದೃಷ್ಟವಶಾತ್ ನಮ್ಮ ಪಕ್ಷಕ್ಕೆ ‘ಮತದಾರ’ನ ಒಲವು ಸಿಗದಿದ್ದರೆ ತುಂಬಾ ಸಂತೋಷ… ಏಕೆಂದರೆ ನಮ್ಮ ಸದಸ್ಯರಿಗೆ ಎರಡು ‘ಪಂಚ ವಾರ್ಷಿಕ’ ಅವಧಿಯಷ್ಟು ವಿರೋಧ ಪಕ್ಷದ ‘ಬೆಂಚ್’ ಮೇಲೆ ಕೂತು ಅಭ್ಯಾಸವಾಗಿದೆ.. ಈಗ ಇನ್ನೊಂದು ನೆಮ್ಮದಿಯ ಮತ್ತು ಸಮಾಧಾನದ ವಿಷಯವೇನೆಂದರೆ ‘ಚುನಾವಣೆ ಆಶ್ವಾಸನೆಗಳನ್ನು’ ಈಡೇರಿಸುವ ಗೋಜು ಇರುವುದಿಲ್ಲ…ಬದಲಾಗಿ ‘ಅಡಳಿತ ಪಕ್ಷದವರು’ ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಗಳ ಬೆನ್ನು ಹತ್ತಿ ಅವುಗಳನ್ನು ಈಡೇರಿಸುವತ್ತ ಸರ್ಕಾರ ಗಮನ ಹರಿಸಲಿ ಎಂದು ಮತ್ತೆ ಮತ್ತೆ ಒತ್ತಾಯಿಸುವದು… ಅಲ್ಲದೇ ಅದಕ್ಕಾಗಿ ಜಿಲ್ಲಾವ್ಯಾಪಿ – ರಾಜ್ಯವ್ಯಾಪಿ ಮುಷ್ಕರ ಹಮ್ಮಿಕೊಳ್ಳುವದು… ಮಂತ್ರಿಗಳಿಗೆ ಘೇರಾವು ಹಾಕುವದು… ಆಡಳಿತ ಪಕ್ಷವನ್ನು ಬಯ್ಯುತ್ತ ಇಡೀ ಐದು ವರ್ಷ ಸುಗಮವಾಗಿ ಕಾಲ ಕಳೆಯಲು ನಮಗೆ ಇದು ಸಕಾಲ.. ಒಂದು ರೀತಿ ಪಕ್ಷ ಅಧಿಕಾರಕ್ಕೆ ಬರುವ ಬದಲು ಸೋತರೆನೇ ಹೆಚ್ಚು ಅನುಕೂಲ…” ಎಂದು ಮಾತುಮುಗಿಸಿದಾಗ ಏನೋ ಕಾಲಿಗೆ ಆಡರಿದಂತಾಗಿ ಬಗ್ಗಿ ನೋಡಿದರೆ ಗುಂಡಣ್ಣ ಉರ್ಫ್ ನುಂಗಣ್ಣನ ಕಾಲಿಗೆ ದೀರ್ಘ ನಮಸ್ಕಾರ ಹಾಕುತ್ತಾ ಚಂದ್ರು ಕಂಡ… ಒಂದು ನಿಮಿಷದ ಬಳಿಕ ನಂತರ ನೆಲದ ಮೇಲೆಯೇ ಕೂತು ನುಡಿದ ಚಂದ್ರು… ” ಗುಂಡಣ್ಣ… ನೀನು ನನ್ನ ಕುಚುಕು – ಕುಚುಕು ಗೆಳೆಯನಾದರೂ ನಾನು ನಿನ್ನ ಪಾದಕ್ಕೆ ಎರಗಿದ್ದು ತಪ್ಪಲ್ಲ…ಏಕೆಂದರೆ ನಿನ್ನ ರಾಜಕೀಯ ಪರಿಜ್ಞಾನ ಅಂತಹುದು… ಅದಕ್ಕೆ ಸಾವಿರ ನಮಸ್ಸುಗಳು…ಮುಂದೆ – ಮುಂದೆ ನಿನ್ನ ‘ಬೋಗಸ್’ ಪಕ್ಷ ನಿನ್ನನ್ನು ಸರಿಯಾಗಿ ಉಪಯೋಗಿಸಿಕೊಂಡು ನಿನ್ನ ಸಲಹೆ ಸೂಚನೆ ಪಡೆದರೆ ನಿನಗಲ್ಲ ಆ ಪಕ್ಷಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಉಜ್ವಲ ಭವಿಷ್ಯ ಇದೆ..ಇಷ್ಟು ಮಾತ್ರ ಗ್ಯಾರಂಟಿ..”ಎಂದು ಗುಂಡಣ್ಣ ಉರ್ಫ್ ನುಂಗಣ್ಣನ ಪಾದಗಳಿಗೆ ಮತ್ತೊಮ್ಮೆ ನಮಸ್ಕರಿಸಿ ಎದ್ದ ಟಿ. ವಿ ( ಮೂರು ನಾಮ ) ದ ಮುಖ್ಯ ವರದಿಗಾರ ಚಂದ್ರು… ***** |
12 thoughts on “ಚುನಾವಣೆ ಮುಂಚೆ ಭರವಸೆಗಳ ಸುರಿಮಳೆ ……”
Nice. It looks like AAP Promises
Thank you
ಚುನಾವಣೆ ಮುಂಚೆ ಭರವಸೆಗಳ ಸುರಿಮಳೆ ಚಿಕ್ಕ ಕಥೆ ಚನ್ನಾಗಿ ಮೂಡಿಬಂದಿದೆ. ಕಥೆಗಾರ ರಾಘವೇಂದ್ರ ಮಂಗಳೂರವರು, ಮೇಲಿಂದಮೇಲೆ ಬಣ್ಣ ಬದಲಾಯಿಸುವ ರಾಜಕೀಯ ಪಕ್ಷಗಳ ಹೂರಣವನ್ನು ವಿಡಂಬನಾತ್ಮಕವಾಗಿ ಹೊರಹಾಕಿದ್ದಾರೆ. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆದ್ದರೆ ಲಾಭ್, ಸೋತರೆ ನಷ್ಟವಿಲ್ಲ ಎನ್ನುವುದರ ಜೊತೆಗೇ, ಬೋಳೇ ಮತದಾರನಿಗೆ ಬಳೆಯಲು ವಿವಿಧ ಬಣ್ಣಗಳು ಸಿದ್ಧವಾಗಿರುವುದನ್ನೂ ಬಯಲುಮಾಡಿದ್ದಾರೆ. ಅಭಿನಂದನೆಗಳು.
ಧನ್ಯವಾದಗಳು
ರಾಜಕೀಯ ವಿಡಂಬನಾತ್ಮಕ ಬರಹ ಸೊಗಸಾಗಿ ಮೂಡಿಬಂದಿದೆ
ಧನ್ಯವಾದಗಳು
ಬೋಗಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆಗಳ ಭರಪೂರ ಪ್ರವಾಹವೇ ಇದೆ. ಆ ಪ್ರವಾಹದಲ್ಲಿ ಪ್ರಜೆಗಳು ಕೊಚ್ಚಿ ಹೋಗಬಹುದು. ಈಗಿನ ರಾಜಕೀಯ ಪಕ್ಷಗಳಿಗೆ ಗೆದ್ದರೂ ಹಬ್ಬ, ಸೋತರೂ ಹಬ್ಬ ಎಂಬುದನ್ನು ಪರೋಕ್ಷವಾಗಿ ಪರಿಣಾಮಕಾರಿಯಾಗಿ ತೋರಿಸಿದ್ದೀರಿ. ಅಭಿನಂದನೆಗಳು.
ಪ್ರಸ್ತುತ ರಾಜಕೀಯ ಪಕ್ಷಗಳಲ್ಲಿ ನಡೆಯುವ ವ್ಯವಹಾರ ಗಳನ್ನು ವ್ಯಂಗ್ಯ ವಾಗಿ ನಿರೂಪಿಸುವ ಪ್ರಯತ್ನ ಮಾಡುವಲ್ಲಿ ಯಶಸ್ವಿ ಆಗಿದ್ದೀರಿ. ನಿಮ್ಮ ಬರಹ ಚೆನ್ನಾಗಿದೆ.
ಅಭಿನಂದನೆಗಳು
ಧನ್ಯವಾದಗಳು ಸಾರ್ 🙏
ವಿಡಂಬನಾತ್ಮಕ ಬರಹ ಚೆನ್ನಾಗಿದೆ. ಎಲ್ಲಾ ಪಕ್ಷಗಳೂ ಹೀಗೇ ಮಾಡುತ್ತಾರೆ ಅನ್ನುವದು ವಾಸ್ತವ.
ಧನ್ಯವಾದಗಳು
nimma rajakiya vidambane bahu channa
MURALIDHAR JOSHI
GANGAVATHI