‘ಮೂಲಿಮನಿ ಸುಬ್ಬಮ್ಮ ಯಾತ್ರೆ ಹೋಗ್ತಾರಂತೇರಿ….’
ಹೆಂಡತಿ ಮಂದ ಮೆತ್ತಗೆ ಮಂದಣ್ಣನ ಕಿವಿಕಚ್ಚಿದಳು.
‘ಯಾವ ಯಾತ್ರೆ ಅಂತೆ’ ಕುತೂಹಲ ತಡೆಯಲಾರದೆ ಮಂದಣ್ಣ ಕೇಳಿದ.
ಸುಬ್ಬಮ್ಮನಿಗೆ ಈಗ ಏನಿಲ್ಲೆಂದರೂ ಅರವತ್ತು ದಾಟಿದ ಹರೆಯ. ಇದ್ದೊಬ್ಬ ಮಗ ಕಲಿತು ಬದುಕನ್ನು ಅರಸುತ್ತ ಅಮೆರಿಕ ಸೇರಿದ್ದ. ಗಂಡನನ್ನು ಕಳೆದುಕೊಂಡು ಏಕಾಂಗಿಯಾದಾಗ ಕನಿಕರ ತೋರಿ ಖಾಸಾ ತಮ್ಮ ಪಾಂಡುರಂಗ ಅವಳಿಗೆ ಆಶ್ರಯ ಕೊಟ್ಟಿದ್ದ. ಮಗ ನರೇಶ ಮನಸ್ಸಿಗೆ ಬಂದರೆ ಮುದುಕಿಗೆ ಒಂದಷ್ಟು ಹಣ ಕಳುಹಿಸಿಕೊಡುತ್ತಾನೆ. ಅದೂ ಕೇಳಿದರೆ ಮಾತ್ರ. ಹೀಗೆ ತಮ್ಮನ ಮನೆಯಲ್ಲಿ ಅವರಿಗೆ ಭಾರವಾಗಿ ಬದುಕು ಸವೆಸುತ್ತಿರುವ ಸುಬ್ಬಮ್ಮನಿಗೆ ಈಗಲಾದರೂ ಯಾತ್ರೆಯ ಭಾಗ್ಯ ಕೂಡಿ ಬಂತಲ್ಲ ಎಂದು ಮಂದಣ್ಣ ಸಂತಸಗೊಂಡ. ಅವನ ಚಿಂತನೆಗೆ ಬ್ರೇಕ್ ಹಾಕಿದಂತೆ ಮಂದಾಕಿನಿ
‘ಗೊತ್ತಿಲ್ಲರಿ… ಪಕ್ಕದ ಮನೆ ಶಾರು ಹೇಳಿದಳು’ ಅಂತ ಕಿವಿಯಿಂದ ಕಿವಿಗೆ ರವಾನೆಯಾದ ಸುದ್ದಿಯನ್ನು ಮಂದಣ್ಣನೆದುರು ಬಿತ್ತರಿಸಿದಳು.
‘ನೀವೊಂದಿದ್ದೀರಿ…. ಅಲ್ಲ.. ನಮ್ಮ ಆಯುಷ್ಯದ ಅರ್ಧಭಾಗ ಆಗಲೇ ಮುಗಿದೋಯ್ತು. ಈ ಹೊತ್ತಲ್ಲಾದ್ರು ಯಾವುದಾದ್ರು ಒಂದು ಬದರಿ, ಕೇದಾರ, ದ್ವಾರಕ, ವೈಷ್ಣೋದೇವಿ, ಅಮರನಾಥ, ಕೈಲಾಸ ಮಾನಸ ಸರೋವರ ದರ್ಶನ ಮಾಡಿಸಿದಿರೇನ್ರಿ…’ ಅವಳ ಅಂತರಾಳದಲ್ಲಿ ಕುದಿಯುತ್ತಿದ್ದ ಲಾವ ಮಾತಾಗಿ ಹೊರಬಿತ್ತು.
‘ಅಲ್ವೆ…. ಸುದ್ದಿ ಕೇಳ್ತಿಲ್ಲೇನೆ…. ಈ ಯಾವ ಯಾತ್ರೆಗಳೂ ಈಗ ಸುರಕ್ಷಿತವಾಗಿ ಉಳಿದಿಲ್ಲ ಕಣೆ. ಕೆಲವೆಡೆ ಮದ್ದುಗುಂಡುಗಳೇ ಮಾತಾಡ್ತಾವೆ. ಭೂಕಂಪ, ಜಲಪ್ರಳಯ, ಅತಿವೃಷ್ಟಿ, ಭೂಕುಸಿತ, ಹಿಮಪಾತಗಳ ಭಯ ಬೇರೆ. ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನುವ ಆತಂಕದಲ್ಲಿ ದೇವರ ಮೇಲೆ ಭಕ್ತಿ ಹುಟ್ಟುತ್ತೇನೇ…. ಇದೆಲ್ಲವನ್ನೂ ಜೀವನ ಭಾರವಾಗೋ ಕೊನೆಕಾಲ್ದಲ್ಲಿ ಇಟ್ರೆ ಎಲ್ರಿಗೂ ಕ್ಷೇಮ. ಹೋದ್ರೆ ಅತ್ತ ಕೈಲಾಸ. ಬದುಕಿ ಬಂದ್ರೆ ಇತ್ತ ಸಫಲ ಯಾತ್ರೆಯ ಪುಣ್ಯ….’ ಮಂದಣ್ಣ ಸದ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಅನ್ನುವ ಲೆಕ್ಕಾಚಾರದಲ್ಲಿ ತನ್ನ ಭಯಾಸ್ತ್ರವನ್ನು ಆಕೆಯ ಮೇಲೆ ಪ್ರಯೋಗಿಸಿದ.
ಆತನ ಸಮಜಾಯಿಷಿಯ ಮಾತನ್ನು ಅವಳು ನಿರ್ದಾಕ್ಷಿಣ್ಯವಾಗಿ ಕಸದಂತೆ ಒತ್ತಟ್ಟಿಗೆ ಸರಿಸಿ
‘ಹೌದುರೀ… ನಿಮಗೆ ಎಲ್ಲದಕ್ಕೂ ಒಂದು ಪಿಳ್ಳೆ ನೆವ ಸಿಗುತ್ತೆ. ಹೋಗಲಿ ಬಿಡಿ. ನನ್ನ ಮುಖಕ್ಕೆ ಹತ್ತಿರವಿರುವ ಆ ಹಾಳು ಹಂಪಿನಾದ್ರು ತೋರ್ಸಿದ್ದೀರಾ ಹೇಳಿ….’ ಅಲವತ್ತುಕೊಂಡಳು.
‘ನಿನ್ನ ಸುಂದರ ವದನವನ್ನು ಆ ಹಾಳು ಹಂಪಿಗೆ ಹೋಲಿಸಬೇಡ್ವೆ…. ಮನಸ್ಸು ಚುರ್ ಅನ್ನುತ್ತೆ…’ ಎಂದು ನಗುತ್ತಾ ಮಂದಣ್ಣ ಮಾತನ್ನು ತೇಲಿಸಿಬಿಟ್ಟ. ಅವನ ಗುಣಗಾನ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿದಂತೆ ಕಂಡಿತು. ಮಂದಾಕಿನಿ ಸಾಸಿವೆ ಸಿಡಿದಂತೆ ಸಿಡುಕುತ್ತಾ ಅಡುಗೆಮನೆ ಸೇರಿದಳು.
ಈ ವಯಸ್ಸಿನಲ್ಲಿ ಒಬ್ಬಂಟಿಯಾಗಿ ಸುಬ್ಬಮ್ಮ ಯಾವ ಯಾತ್ರೆಗೆ ಹೊರಟಿರಬಹುದು. ಜೊತೆಗೆ ಯಾರಿರಬಹುದು… ಇಲ್ಲಾ… ಪ್ಯಾಕೇಜ್ ಟೂರೋ…. ಪಾಪ ಅವಳ ಯಾತ್ರೆ ಸುಗಮವಾಗಲಿ ಎಂದು ಮಂದಣ್ಣ ಮನಸ್ಸಿನಲ್ಲಿಯೇ ಧ್ಯಾನಿಸುತ್ತ ಗೋಡೆಯ ಮೇಲೆ ಚೌಕಟ್ಟಿನಲ್ಲಿ ಬಂಧಿಯಾಗಿ ನಗುತ್ತಿದ್ದ ಶ್ರೀಕೃಷ್ಣನಲ್ಲಿ ಮೊರೆಯಿಟ್ಟ.
ಪಕ್ಕದ ಮನೆ ಶಾರದ ತಂದ ಸುದ್ದಿಯನ್ನು ಕೇಳಿದ ನಂತರ ಮಂದಾಕಿನಿಗೆ ಒಂದು ರೀತಿಯ ಚಡಪಡಿಕೆ ಶುರುವಾಗಿತ್ತು. ತನ್ನ ಮದುವೆಯಾಗಿ ಬೆಳ್ಳಿಹಬ್ಬದ ಸಂಭ್ರಮ ಕಂಡರೂ ಗಂಡನೆಂಬ ಪ್ರಾಣಿ ತನ್ನನ್ನು ಒಂದುದಿನವೂ ಎಲ್ಲಿಯೂ ಕರೆದುಕೊಂಡು ಹೋದದ್ದಿಲ್ಲ. ಅವರಿಗೆ ಟೂರೇನೋ ಬೋರ್ ನಿಜ. ಆದರೆ ಈಗೆಲ್ಲ ಮನಸ್ಸು ಮಾಡಿದರೆ ಜುಮ್ಮೆಂತ ಸಿಕ್ಕಲ್ಲೆಲ್ಲ ಹಾರಿ ಹೋಗಿ ಮಜಾ ಮಾಡುವವರು ಎಷ್ಟು ಮಂದಿ ಇಲ್ಲ. ಇರಲಿ ಬಿಡಿ.. ತನ್ನ ಹಣೆಬರಹವೇ ಇಷ್ಟು… ಸುಬ್ಬಮ್ಮನನ್ನು ಕಂಡು ಒಂದಿಷ್ಟು ಮಾತಾಡಿಸಿಕೊಂಡಾದರೂ ಬರೋಣವೆಂದು ಮಧ್ಯಾಹ್ನ ಮಂದಾಕಿನಿ ಮೂಲಿಮನಿಯತ್ತ ಪಾದ ಬೆಳೆಸಿದಳು.
ಮನೆಯಲ್ಲಿ ಎದುರುಗೊಂಡ ಸುಬ್ಬಮ್ಮನನ್ನು ಕಾಣುತ್ತಲೇ
‘ಸುಬ್ಬಮ್ಮ ಸುದ್ದಿ ಕೇಳಿ ತುಂಬ ಸಂತೋಷ ಆಯ್ತು. ಯಾತ್ರೆ ಹೊರಡ್ತೀರಂತೆ.. ಯಾವಾಗ’ ಕೇಳಿದಳು.
‘ಹೌದು ಮಂದ… ಮನೆಯಲ್ಲಿ ಕೂತು ಕೂತು ಬೇಜಾರಾಗಿದೆ ನೋಡು. ಮೊನ್ನೆ ಮಧುವನದಿಂದ ಅಣ್ಣ ಗಿರಿ ಬಂದಿದ್ದ. ಬಹಳ ವರ್ಷ ಅವನ ಸಂಪರ್ಕವೇ ಇರ್ಲಿಲ್ಲ. ಅವನಾದರೋ ರಾಜಕೀಯದಲ್ಲಿ ತುಂಬ ಬಿಜಿ. ಇವತ್ತು ಒಂದು ಪಕ್ಷವಾದರೆ ನಾಳೆ ಮತ್ತೊಂದು. ಎಲ್ಲವನ್ನೂ ನಿಭಾಯಿಸೋಕೆ, ಜೀರ್ಣಿಸಿಕೊಳ್ಳೋಕೆ ಅವನಲ್ಲಿ ಹಿಕ್ಮತ್ ಇದೆ ಬಿಡು.ಈಗ ಇಲೆಕ್ಷನ್ ಬೇರೆ ಹತ್ರ ಬರ್ತಾ ಇದೆ. ಕೇಳ್ಬೇಕಾ ಇವನ ದೌಲತ್ತು…. ಮೊನ್ನೆ ದಿನ ಬಂದವನೇ ಸುಬ್ಬಿ ನಮ್ಮೂರಲ್ಲಿ ಈ ಸಾರಿ ಪ್ರಜಾಹಿತ ಯಾತ್ರೆ ಇಂಟ್ಕೊಂಡಿವ್ನಿ… ನೀರಿಗಾಗಿ, ನ್ಯಾಯಕ್ಕಾಗಿ ಪಾದಯಾತ್ರೆ ಕೇಳಿಲ್ಲೇನು… ಅದ್ರಂಗೆ… ಕಾರ್ಯಕರ್ತರು ಊರೆಲ್ಲ ಓಡಾಡಿ ಮತದಾರರನ್ನು ಓಲೈಸಿ ಒಟ್ಹಾಕುತ್ತಾರೆ. ಬಹಳ ಮಂದಿ ಸೇರ್ತಾರೆ ಬಿಡು ತಂಗಿ. ಬಂದ ಅವ್ರೆಲ್ಲ ತಮ್ಮ ಬೇಡಿಕೆಗಳ್ನ ನಮ್ಮ ಮುಂದಿಡ್ತಾರೆ. ಅಲ್ಲೆಲ್ಲಾ ನಂದೇ ಉಸ್ತುವಾರಿ. ಜೊತೆಗೆ ನಮ್ಮೂರಿನ ಸಿದ್ರಾಮಪ್ಪನ ಜಾತ್ರೆ, ಪಕ್ಕದೂರು ಯಡೆಯೂರು ಜಾತ್ರೆ… ಕೇಳ್ತಿಯೇನು…. ನೀನು ಈ ಸಾರಿ ಬಂದೇ ತೀರ್ಬೇಕು….ಅಂತ ತಾಕೀತು ಮಾಡಿದ. ಅಂದಿನಿಂದ ತವರ ನೆನಪು ತುಂಬಾನೆ ಕಾಡ್ತಿದೆ ಮಂದ. ನಾಳೆನೇ ಹೊರಡ್ತೀನಿ… ‘ ಅಂದಳು.
ಅವಳ ಪ್ರಜಾಹಿತ ಯಾತ್ರೆಯ ವಿವರವನ್ನು ಕೇಳುತ್ತಲೇ ಮಂದಾಕಿನಿಗೆ ಮಾತೇ ನಿಂತು ಹೋಯಿತು. ಮೆಲ್ಲನೆ ಸುಧಾರಿಸಿಕೊಂಡು
‘ಆಗಲಿ ಸುಬ್ಬಮ್ಮ. ಎಲ್ಲವನ್ನೂ ಮುಗಿಸಿ ನಿಧಾನಕ್ಕೆ ಬನ್ನಿ. ನಿಮ್ಮ ಯಾತ್ರೆಗೆ ಶುಭವಾಗಲಿ….’ ಎಂದು ಮನಸಾರೆ ಹಾರೈಸಿ ಗಂಡನಿಗೆ ಈ ವಿಷಯ ಗೊತ್ತಾಗದಿರುವುದೇ ಲೇಸು ಎನ್ನುವ ಲೆಕ್ಕಾಚಾರದಲ್ಲಿ ಲಗುಬಗೆಯಿಂದ ಮನೆಯತ್ತ ಹೆಜ್ಜೆಹಾಕಿದಳು.
***********************








20 thoughts on “ಸುಬ್ಬಮ್ಮನ ಯಾತ್ರೆ”
ಸುಬ್ಬಮ್ಮನ ಯಾತ್ರೆಯ ಅಸಲೀ ಕಾರಣ ತಿಳಿದು ನಗು ಬಂತು. ಚೆನ್ನಾಗಿದೆ.
ಧನ್ಯವಾದಗಳು
ಏನೂ ಅರಿಯದ ಮುಗ್ಧೆ ಸುಬ್ಬಮ್ಮನನ್ನು ತನ್ನ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುವ ಸಹೋದರ . ವಾಸ್ತವಕ್ಕೆ ಕನ್ನಡಿ ಹಿಡಿದು ಅದಕ್ಕೆ ಹಾಸ್ಯದ ಲೇಪನದಿಂದ ಚಂದಗೊಳಿಸಿದ್ದೀರಿ.
ಧನ್ಯವಾದಗಳು ಮೇಡಂ
ಸುಬ್ಬಮ್ಮ ನಿಜವಾಗಿಯೂ ಕಾಶಿ, ಕೇದಾರನಾಥ ಬದರಿನಾಥ ಯಾತ್ರೆಗೆ ಹೋಗ್ತಾರೆ ಅಂತ ಅಂದ್ಕೊಂಡಿದ್ದೆವು. ಪಾಪ ಸುಬ್ಬಮ್ಮನಿಗೆ ಆ ಯಾತ್ರೆನೂ ಮಾಡಿಸಲಿಲ್ಲವಲ್ಲ ನೀವು ಅಂತ ಬೇಸರ ಅಷ್ಟೇ. ಶೈಲಿ ತುಂಬಾ ಹಿಡಿಸಿತು. ಓದಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು.
ತುಂಬಾ ಚೆನ್ನಾಗಿರುವ ಲೇಖನ ,ನಿಜವಾಗಿ ಎಲ್ಲರ ಮನೆಯಲ್ಲಿ ನಡೆಯುವ ಸಂವಾದ 👍😊
ಧನ್ಯವಾದಗಳು
ಧರ್ಮಾನಂದ ನಾಯಕ್ ಅವರ ಎಲ್ಲಾ ತರಹದ ಬರಹಗಳ ಭಾಷೆ, ಶೈಲಿ ಉತ್ತಮವಾಗಿರುತ್ತದೆ. ಚನ್ನಾಗಿ ಪಳಗಿದ್ದಾರೆ. ಈ ಲಘು ಬರಹ ಮತ್ತೊಂದು. ಅಭಿನಂದನೆಗಳು.
ತುಂಬ ಧನ್ಯವಾದಗಳು ಸರ್
The inherent qualities of an Indian women is well enumerated in the story.The author,s commond on
the language and and story telling style is really appreciable. Hearty
Congratualations to dear Sri Dharmanand Shirwa
Thank you very much Dalabanjan
Nimma lekhana Indinina samajada
Vastu stitige hidida kannadi. Mandakiniyantavaru namma Sutta iddare.
Antaye Subbammanatavaru Iddare.
Lekhana tumba chennagide.
ಧನ್ಯವಾದಗಳು ಪ್ರಕಾಶ್
Tumba channagide. Antu kutuhalakke rajakiyavagi tere yelediddiri. Munduvaresi tamma baravanige.
ವಾಸ್ತವಿಕ ಜೀವನದಾಗ ಬರುವಂತಹ ಪ್ರತಿಯೊಂದು ಆಗು ಹೋಗುಗಳನ್ನು ನಾಲಿಗೆಯ ರುಚಿಗೆ ತಕ್ಕಂತೆ ತೀಳಿ ಹೇಳಿದ್ದೀರಿ. ಎಲ್ಲ ತರಹದ ಭಾಷೆಯನ್ನು ಮನದಟ್ಟಾಗುವಂತೆ ಹೇಳುವ ನಿಮ್ಮ ಶೈಲಿಯ ತುಂಬಾ ಚೆನ್ನಾಗಿದೆ . ಧನ್ಯವಾದಗಳು.
ಧನ್ಯವಾದಗಳು
ಮೂಲಿಮನೆ ಸುಬ್ಬಮ್ಮ ನ ಯಾತ್ರೆ ಲಘು ಬರಹ ಅನ್ನುವದಕ್ಕಿಂತ ಹಾಸ್ಯ ಬರಹ ಎನ್ನುವುದು ಸೂಕ್ತ. ಪಕ್ಕದ ಮನೆಯ ಮಂದಾಕಿನಿ ಮಂದಣ್ಣ ಇವರ ಸಂಭಾಷಣೆ ಹಾಸ್ಯಮಯ ವಾಗಿದೆ.
ನಿಮಗೆ ಅಭಿನಂದನೆ
ಧನ್ಯವಾದಗಳು
ಪಾಪ ಸುಬ್ಬಮ್ಮ 👌👌
ನಿಮ್ಮ ಅನುಕಂಪದ ಉದ್ಗಾರಕ್ಕೆ ಧನ್ಯವಾದಗಳು ಮೇಡಂ