ಬಾಗಿಲು ತೆರೆದು ಒಳಗಡಿಯಿಟ್ಟ ಪ್ರಣತಿ ಹೆಗಲಮೇಲಿದ್ದ ವ್ಯಾನಿಟಿ ಬ್ಯಾಗನ್ನು ಮಂಚದ ಮೇಲೆಸೆದು ನೇರವಾಗಿ ಬಚ್ಚಲಿಗೆ ನಡೆದಳು. ತಂಪನೆಯ ನೀರಿಂದ ಕೈಕಾಲು ತೊಳೆದು ಮುಖಕ್ಕೊಂದಿಷ್ಟು ರಭಸವಾಗಿ ನೀರೆರಚಿಕೊಂಡಾಗ ಅವಳಿಗೆ ಕೊಂಚ ಹಾಯೆನಿಸಿತು. ಯಾವತ್ತೂ ಇಲ್ಲದ, ಅದುವರೆಗೂ ಕಾಡದ ವಿಚಾರವೊಂದು ಅವಳ ಮನಸ್ಸಿನಲ್ಲಿ ಇಂದು ಸಣ್ಣಗಿನ ಅಲೆಗಳನ್ನು ಎಬ್ಬಿಸತೊಡಗಿತ್ತು. ಯೋಚಿಸಿದಂತೆಲ್ಲ ಆ ಚಿಂತೆಯೊಳಗೆ ತಾನು ಜರಿದು ಬೀಳುವಂತಹ ಅಳುಕು ಬೇರೆ. ಇವತ್ತ್ಯಾಕೆ ಹೀಗೆ ಎಂದು ಯೋಚಿಸುತ್ತಾ ಒಂದಿಷ್ಟು ವಿರಮಿಸಿದರೆ ಎಲ್ಲವೂ ಸರಿಹೋದೀತು ಎನ್ನುವ ಭಾವದಲ್ಲಿ ಮಂಚದ ಮೇಲೆ ಅಂಗಾತ ಬಿದ್ದುಕೊಂಡಳು. ಆದರೆ ಮನಸ್ಸು ಮತ್ತದೇ ವಿಚಾರದ ಸುತ್ತ ಎತ್ತೆತ್ತಲೋ ಸುಳಿದಾಡುತ್ತಿತ್ತು.
ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಣತಿ ಮೊದಲಿನಿಂದಲೂ ಗಟ್ಟಿಗಿತ್ತಿ. ಹಿಡಿದ ಕೆಲಸವನ್ನು ಬಿಡದೆ ಮುಗಿಸುವ ಛಲಗಾತಿ. ಧೈರ್ಯ ಮತ್ತು ಸಹನೆ ಅವಳ ರಕ್ತದಲ್ಲಿ ಉಸಿರಾಗಿ ಬೆರೆತಿತ್ತು. ಚಿಕ್ಕಂದಿನಿಂದಲೂ ಅಂತಹ ವಾತಾವರಣದಲ್ಲಿ ಬೆಳೆಯುತ್ತಿದ್ದ ಅವಳನ್ನು ಅವಳಿಷ್ಟದಂತೆ ಬದುಕಲು ತಂದೆತಾಯಿ ಬಿಟ್ಟಿದ್ದರು. ಯಾಕೆಂದರೆ ಇರುವ ಇಬ್ಬರು ಹೆಣ್ಣುಮಕ್ಕಳಲ್ಲಿ ಪ್ರಣತಿ ಹಿರಿಯವಳಾಗಿ ಜವಾಬ್ದಾರಿಕೆಯ ನಡೆಯನ್ನು, ಕೆಲಸಕಾರ್ಯಗಳಲ್ಲಿ ಅಚ್ಚುಕಟ್ಟುತನವನ್ನು ಮೈಗೂಡಿಸಿಕೊಂಡಿದ್ದಳು. ಮನೆತನದ ಘನತೆ, ಗೌರವಕ್ಕೆ ಎಂದೂ ಕುಂದುಂಟಾಗುವಂತಹ ಕೆಲಸಕ್ಕೆ ಅವಳು ಕೈ ಹಾಕಿದವಳಲ್ಲ. ಕಲಿಯುವುದರಲ್ಲಿ ಯಾವತ್ತೂ ಮುಂದಿದ್ದ ಅವಳು ಬಯಸಿದಂತೆ ಬದುಕನ್ನು ಕಟ್ಟಿಕೊಳ್ಳಲು ಹೆತ್ತವರು ನೆರವಾಗಿದ್ದರು. ಹಿರಿಮಗಳ ಮೇಲೆ ಒಂದು ತೂಕ ಜಾಸ್ತಿಯೇ ವಿಶ್ವಾಸ ಮತ್ತು ನಂಬಿಕೆಯನ್ನು ಇಟ್ಟುಕೊಂಡಿದ್ದರು.
ಹೆತ್ತವರ ಆಶಯಗಳಿಗೆ ಅನುಗುಣವಾಗಿ ಎಂ.ಕಾಂ. ಮುಗಿಸಿದ ಪ್ರಣತಿ ನೇರವಾಗಿ ಬ್ಯಾಂಕಿನ ಅಧಿಕಾರಿ ಹುದ್ದೆಗೆ ಪರೀಕ್ಷೆಯನ್ನು ಬರೆದು ಅದರಲ್ಲಿ ಯಶಸ್ಸನ್ನು ಕಂಡಿದ್ದಳು. ಮೊದಲ ಒಂದೆರಡು ವರ್ಷ ಸಹಾಯಕ ವ್ಯವಸ್ಥಾಪಕ ಹುದ್ದೆಯನ್ನು ನಿಭಾಯಿಸಿದ ಅವಳು ತನ್ನ ಕಾರ್ಯವೈಖರಿ ಮತ್ತು ಚುರುಕುತನದಿಂದ ಭಡ್ತಿ ಪಡೆಯುತ್ತ ಶಾಖಾ ವ್ಯವಸ್ಥಾಪಕ ಹುದ್ದೆಯನ್ನು ಸತತವಾಗಿ ನಿರ್ವಹಿಸುತ್ತಾ ಬಂದಿದ್ದಳು. ಕೆಲಸದಲ್ಲಿನ ಅವಳ ಬದ್ಧತೆ, ಶ್ರಮಕ್ಕೆ ಎಂದೂ ಚ್ಯುತಿ ಬಂದಿರಲಿಲ್ಲ. ದೊಡ್ದ ಹುದ್ದೆ, ಕೈತುಂಬ ಸಂಬಳ, ಜೀವನಕ್ಕೆ ಬೇಕಾಗುವ ಸಕಲ ಸವಲತ್ತುಗಳನ್ನು ಒದಗಿಸುತ್ತಿದ್ದ ಸಂಸ್ಥೆಗೆ ಅವಳೆಂದೂ ಎರಡು ಬಗೆದಿರಲಿಲ್ಲ. ನಿಯತ್ತು ಅವಳನ್ನು ಕೈಹಿಡಿದು ಆ ದಾರಿಯಲ್ಲಿ ನಡೆಸಿತ್ತು.
ಒಂದು ಹಂತದವರೆಗೆ ಹೆತ್ತವರು ಇಟ್ಟ ಕಾಳಜಿ ಕ್ರಮೇಣ ಮುಂದೆ ಪ್ರಣತಿ ಜವಾಬ್ದಾರಿಯುತಳಾಗಿ ಬೆಳೆದಂತೆಲ್ಲ ಸಡಿಲಗೊಂಡಿತ್ತು. ಅವಳ ನಿರ್ಧಾರಗಳಲ್ಲಿ ಅನಾವಶ್ಯಕವಾಗಿ ತಾವು ಮೂಗು ತೂರಿಸುವುದು ಸರಿಯಲ್ಲ ಎಂದು ಅರಿತಿದ್ದರು. ಅವಳ ಬದುಕು ಅವಳದ್ದು. ಅದನ್ನು ರೂಪಿಸುವ ಜವಾಬ್ದಾರಿಯೂ ಅವಳದ್ದೇ ಎಂದು ಮಗಳೊಡನೆ ಮಾತನಾಡುವಾಗೆಲ್ಲ ತಿಳಿಹೇಳುತ್ತಿದ್ದರು. ಪ್ರಣತಿ ವಿದ್ಯೆಬುದ್ಧಿಯಲ್ಲಿ ಎಷ್ಟು ಜಾಣೆಯೋ ಅಂದದಲ್ಲೂ ಅಪ್ರತಿಮ ಸುಂದರಿ. ಎತ್ತರದ ತೆಳ್ಳಗಿನ ನಿಲುವು, ಉದ್ದನೆಯ ಮುಖ, ಆ ಮುಖದಲ್ಲಿ ಸಂಮೋಹನಗೊಳಿಸುವಂತಹ ಚಕ್ಷುಗಳು, ನಿಡಿದಾದ ಮೂಗು, ಹಣೆಯ ಮೇಲೆ ಹೊರಳಾಡುವ ಮುಂಗುರುಳುಗಳು, ನೀಳ ವೇಣಿ, ತಿದ್ದಿ ತೀಡಿದಂತಹ ಅಂಗಸೌಷ್ಠವ…. ಹೀಗೆ ಪ್ರಣತಿಯನ್ನು ನೋಡಿದವರು ಯಾರೇ ಇರಲಿ ಮತ್ತೊಮ್ಮೆ ತಿರುಗಿ ನೋಡುವಂತಹ ಚೆಲುವು ಅವಳದಾಗಿತ್ತು. ತನ್ನ ಚೆಲುವಿನ ಬಗ್ಗೆ ಅವಳಲ್ಲಿ ಅಹಂಕಾರವಿಲ್ಲದಿದ್ದರೂ ಹೆಮ್ಮೆ ಇದ್ದುದು ಮಾತ್ರ ಸತ್ಯ.
ತನ್ನ ಮುಂದಿನ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಹೆಣ್ಣು ಪ್ರಣತಿ. ಸದಾ ಬ್ಯಾಂಕು, ಅಲ್ಲಿನ ಒತ್ತಡದ ಕೆಲಸ, ಸಹೋದ್ಯೋಗಿಗಳನ್ನು ಜತೆಯಲ್ಲಿ ಯಾವ ತಕರಾರು ಇಲ್ಲದಂತೆ ಕರೆದೊಯ್ಯುತ್ತ ಕೆಲಸ ಮಾಡಿಸಿಕೊಳ್ಳುವ ಚಾಕಚಕ್ಯತೆ ಎಲ್ಲದರಲ್ಲಿ ತನ್ನನ್ನು ತಾನು ಮರೆಯುತ್ತಿದ್ದಳು. ತನ್ನ ಮುಂದಿನ ಬದುಕಿನ ಬಗ್ಗೆಯೂ ಗಂಭೀರವಾಗಿ ಯೋಚಿಸುತ್ತಿರಲಿಲ್ಲ. ಆದರೆ ವಯಸ್ಸು ನಿಲ್ಲುತ್ತದೆಯೇ? ಹೆತ್ತವರು ಸಮಯ ಸಿಕ್ಕಾಗಲೆಲ್ಲ ಅವಳ ಮದುವೆಯ ಪ್ರಸ್ತಾಪವನ್ನು ಎತ್ತುತ್ತಿದ್ದರು. ಆಗೆಲ್ಲಾ ಅವಳು ಅದರ ಬಗ್ಗೆ ಯೋಚನೆಯನ್ನೇ ಮಾಡದೆ ಇರುವ ತನ್ನ ಸ್ಥಿತಿಯನ್ನು ಅವರಿಗೆ ಮನದಟ್ಟು ಮಾಡುತ್ತಿದ್ದಳು. ಹೆತ್ತ ಕರುಳಿಗೆ ಮಗಳು ಸಕಾಲದಲ್ಲಿ ಮದುವೆಯಾದರೆ ಒಳ್ಳೆಯದೆಂಬ ಬಯಕೆ. ಅವಳಿಗೂ ಅದರ ಅರಿವಿರಲಿಲ್ಲವೆಂದಲ್ಲ. ತನ್ನ ಹಿಂದೆ ಹುಟ್ಟಿದ ಪ್ರಶಾಂತಿಯೂ ಎಂಜಿನಿಯರಿಂಗ್ ಮುಗಿಸಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಯಾಗಿತ್ತು. ಮದುವೆಯಾಗುವ ವಯಸ್ಸಿಗೆ ಅವಳು ಬೆಳೆದು ನಿಂತಿದ್ದಳು. ಹೆತ್ತವರಿಗೆ ತಮ್ಮ ಮಕ್ಕಳ ಮದುವೆಯ ಚಿಂತೆ ಕಾಡುವುದು ಸಹಜವಾದರೂ ಇಬ್ಬರಿಗೂ ಅನುರೂಪನಾದ ವರ ಸಿಗುವ ವಿಚಾರದಲ್ಲಿ ಮಾತ್ರ ಚಿಂತೆ ಇದ್ದೇ ಇತ್ತು. ಪ್ರಣತಿಯಂತೂ ತಾನು ಹೇಳಿದುದನ್ನೇ ಸಾಧಿಸಿ ತೋರಿಸುವವಳು. ಅವಳ ಸಂಗಾತಿಯನ್ನು ಅವಳೇ ಆಯ್ಕೆ ಮಾಡಿಕೊಳ್ಳುವುದು ವಿಹಿತ ಎಂದರಿತ ಅವರು ಅವಳಿಗೆ ಸೂಚ್ಯವಾಗಿ ಅನುಮತಿಯನ್ನೂ ಕೊಟ್ಟಿದ್ದರು.
ಪ್ರಣತಿಗೆ ಮದುವೆಯ ವಯಸ್ಸು ಮೀರುತ್ತಿದ್ದರೂ ತನ್ನ ಸಂಗಾತಿ, ಮಕ್ಕಳುಮರಿ, ಸಂಸಾರದ ಬಗ್ಗೆ ಯಾವ ಖಚಿತತೆಯ ಕನಸುಗಳನ್ನು ಕಂಡವಳಲ್ಲ. ತಾನಾಯಿತು ತನ್ನ ಕೆಲಸವಾಯಿತು ಅನ್ನುವ ಪ್ರಪಂಚದಲ್ಲಿಯೇ ವಿಹರಿಸುತ್ತಿದ್ದಳು. ಮನೆಯಿಂದ ಮದುವೆಗೆ ಒತ್ತಡ ಬರತೊಡಗಿದಾಗ ತಾನೂ ಅದರ ಬಗ್ಗೆ ಒಂದಿಷ್ಟು ಯೋಚಿಸುವುದು ಒಳಿತು ಎಂದೆನಿಸಿತು ಅವಳಿಗೆ. ತನ್ನ ಆಶೋತ್ತರಗಳಿಗೆ ಸ್ಪಂದಿಸುವ, ಹೃದಯದ ಭಾವನೆಗಳಿಗೆ ಮಿಡಿಯುವ, ವೃತ್ತಿಪರ ಪ್ರಗತಿಗೆ ಸಹಕರಿಸಬಲ್ಲ, ಕನಸುಗಳಿಗೆ ನೀರೆರೆಯುವ ತಕ್ಕ ಸಂಗಾತಿ ಸಿಗಬಹುದೇ ಎನ್ನುವ ಆತಂಕ ಅವಳಿಗಿತ್ತು. ಸ್ನೇಹಪರವಾದ ಸಲುಗೆಯಲ್ಲಿ ಹುಡುಗನ ಆಂತರ್ಯವನ್ನು ಅರಿಯಲು ಸಾಧ್ಯವೆನ್ನುವ ನಿಲುವಿಗೂ ಅವಳು ಬಂದಿದ್ದಳು. ಆದರೆ ಇದುವರೆಗೆ ಆ ದೃಷ್ಟಿಯಿಂದ ಯಾವನೊಡನೆಯೂ ಸಾಮೀಪ್ಯವನ್ನು ಅವಳು ಬೆಳೆಸಿಕೊಂಡಿರಲಿಲ್ಲ. ಹೆಚ್ಚಿನ ಸ್ನೇಹಕ್ಕೂ ಹಾತೊರೆದಿರಲಿಲ್ಲ. ಹಾಗೆ ಈ ವಿಷಯದಲ್ಲಿ ಗಾಢವಾಗಿ ಯೋಚಿಸುತ್ತಿದ್ದವಳಿಗೆ ಫಕ್ಕನೆ ನೆನಪಾದವನು ಸುಖಾಂಶು. ಉತ್ತರಭಾರತದವನು. ತನ್ನಂತೆ ನೇರವಾಗಿ ಬ್ಯಾಂಕಿನ ಅಧಿಕಾರಿಯಾಗಿ ನೇಮಕಗೊಂಡು ಈಗ ತನ್ನ ಹಂತದಲ್ಲಿಯೇ ಪ್ರಾದೇಶಿಕ ಕಾರ್ಯಾಲಯದಲ್ಲಿರುವವನು.
ನಿಯಮಿತವಾಗಿ ನಡೆಯುತ್ತಿದ್ದ ಶಾಖಾ ವ್ಯವಸ್ಥಾಪಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಣತಿಗೆ ಅನಿವಾರ್ಯವಾಗಿ ಸುಖಾಂಶು ಎದುರಾಗುತ್ತಿದ್ದ. ಮಾತಿಗೆ ಸಿಗುತ್ತಿದ್ದ. ಆಗೆಲ್ಲ ಸುಖಾಂಶು ತನ್ನೊಡನೆ ಬೇರೆಯದೇ ಭಾವದಲ್ಲಿ ನಿಂತು ಮಾತನಾಡುತ್ತಿರುವಂತೆ ಅವಳಿಗೆ ಅನಿಸುತ್ತಿತ್ತು. ಭೇಟಿಯಾದಾಗಲೆಲ್ಲ ಅವನ ಕಣ್ಣೋಟ ತನ್ನನ್ನೇ ಹಿಂಬಾಲಿಸುವುದನ್ನು ಅವಳು ಮನಗಂಡಿದ್ದಳು. ಅವರಿಬ್ಬರ ನಡುವಿನ ಮಾತಿನಲ್ಲಿ ಹುರುಪಿನ ಹೊಳಪಿರುತ್ತಿತ್ತು. ಆದರೆ ಅವನೊಡನೆ ಅವಳೆಂದೂ ಸಭ್ಯತೆ ಮೀರಿ ನಡೆದುಕೊಂಡಿರಲಿಲ್ಲ. ಆತನ ನಡೆನುಡಿ, ಬ್ಯಾಂಕಿನ ಕೆಲಸದ ಕುರಿತಾಗಿ ಅವನು ಕರೆಮಾಡಿ ಮಾತನಾಡುತ್ತಿದ್ದ ರೀತಿ, ಅವನ ಅನುಭವ, ಕೆಲಸದ ವೈಖರಿ, ಕೆಳಗಿನವರಿಂದ ಕೆಲಸ ತೆಗೆದುಕೊಳ್ಳುತ್ತಿದ್ದ ಪರಿ, ಅವನ ಆಕರ್ಷಕ ರೂಪು, ನಿಲುವು ಪ್ರಣತಿಯಲ್ಲಿ ಕ್ರಮೇಣ ಅರಿಯದಿರುವ ಅನುರಾಗದ ಭಾವವೊಂದನ್ನು ಹಗುರವಾಗಿ ಮೀಂಟತೊಡಗಿತ್ತು. ಈ ಬಗ್ಗೆ ಪರಸ್ಪರ ಪ್ರಸ್ತಾಪವಾದಾಗ ಯಾವ ಅಡಚಣೆಯೂ ಇಲ್ಲದೆ ಮದುವೆಗೆ ಒಪ್ಪಿಗೆಯೂ ಸಿಕ್ಕಿತ್ತು. ಜಾತಿಧರ್ಮಗಳ ಕಟ್ಟುಪಾಡಿಲ್ಲದ ಸಂಬಂಧಕ್ಕೆ ಹೆತ್ತವರೂ ಅನುಮತಿಯನ್ನು ಕೊಟ್ಟಾಗಿತ್ತು.
ಮದುವೆಯಾಗುವವರು ನೀವು. ಮುಂದೆ ಬಾಳುವೆ ಮಾಡಬೇಕಾದವರೂ ನೀವೇ. ಹೀಗಾಗಿ ನೀವಿಬ್ಬರೂ ಚರ್ಚಿಸಿ ಸರಿಯಾದ ನಿರ್ಧಾರಕ್ಕೆ ಬರುತ್ತೀರೆನ್ನುವ ಭರವಸೆ ನಮಗಿದೆ ಎನ್ನುವ ಹೆತ್ತವರ ಹಿತನುಡಿ ಪ್ರಣತಿಯಲ್ಲಿ ಮದುವೆಯ ಬಗ್ಗೆ ಮುಂದುವರಿಯಬಹುದೆನ್ನುವ ಬಲವನ್ನು ನೀಡಿತ್ತು. ಅದುವರೆಗೆ ಅವರಿಬ್ಬರ ನಡುವೆ ಇದ್ದ ಪರಿಚಯ ಕ್ರಮೇಣ ಸ್ನೇಹಕ್ಕೆ ತಿರುಗಿ ಪರಸ್ಪರ ಅರಿತುಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರೀತಿಯಾಗಿ ಮಾರ್ಪಟ್ಟಿತ್ತು. ಎರಡು ಮನೆಯವರ ಒಪ್ಪಿಗೆಯ ಮುದ್ರೆಯೊಂದಿಗೆ ಪ್ರಣತಿ ಸುಖಾಂಶು ಒಂದು ಸುಮುಹೂರ್ತದಲ್ಲಿ ಸತಿಪತಿಗಳಾಗಿ ಅವರದೇ ಆದ ಸಂಸಾರದ ಹೊಸ್ತಿಲಲ್ಲಿ ಹೆಜ್ಜೆಯೂರಿದರು. ಮದುವೆಯಾಗುವುದಕ್ಕಿಂತ ಮೊದಲು ಇಬ್ಬರೂ ಮುಂದಿನ ಜೀವನ, ಮಕ್ಕಳ ಬಗ್ಗೆ ಸಾಕಷ್ಟು ಚರ್ಚಿಸಿದ್ದರು. ತಮ್ಮ ತಮ್ಮ ವೃತ್ತಿಜೀವನ, ಅಲ್ಲಿನ ಮಹತ್ವಾಕಾಂಕ್ಷೆಗಳ ಬಗ್ಗೆ ಹರಟಿದ್ದರು. ಸದ್ಯಕ್ಕೆ ಮಕ್ಕಳು ಬೇಡವೆನ್ನುವ ನಿರ್ಧಾರಕ್ಕೆ ಇಬ್ಬರೂ ಬಂದಾಗಿತ್ತು. ಪರಸ್ಪರ ಸಹಮತಿ ಮತ್ತು ಸಹಕಾರಗಳ ನೆಲೆಯಲ್ಲಿ ಅವರ ಜೀವನದ ತೇರು ನಿಧಾನಕ್ಕೆ ಚಲಿಸತೊಡಗಿತ್ತು.
ಪ್ರಣತಿಯ ಮದುವೆಯಾದ ಎರಡು ವರ್ಷಗಳ ಅನಂತರ ಪ್ರಶಾಂತಿಯ ಮದುವೆಯಾಯಿತು. ತಂದೆ ತಾಯಿ ನೋಡಿದ ಹುಡುಗನನ್ನೇ ಪ್ರಶಾಂತಿ ಒಪ್ಪಿದಳು. ಹುಡುಗ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದನು. ಮಕ್ಕಳಿಬ್ಬರೂ ಮದುವೆಯಾದ ಮೇಲೆ ಬೆಂಗಳೂರಿನಲ್ಲಿಯೇ ಇರುವುದು ಹೆತ್ತವರಿಗೆ ಸಮಾಧಾನ ತಂದಿತ್ತು.
ಪ್ರಣತಿ ಯೋಚನೆಯ ಜಾಡಿನಲ್ಲಿಯೇ ನಡೆದುದೆಲ್ಲವನ್ನೂ ಒಮ್ಮೆ ಸ್ಮರಿಸಿಕೊಂಡಳು. ಯಾಕೋ ಅವಳ ಹೃದಯ ಇಂದು ತುಂಬ ಭಾರವಾಗಿತ್ತು. ಸುಖಾಂಶು ಬೇರೆ ಆಫೀಸು ಕೆಲಸದ ಮೇಲೆ ಮುಂಬೈಗೆ ಹೋಗಿದ್ದ. ತನಗೊಬ್ಬಳಿಗೆ ಅಡುಗೆಯನ್ನು ನಿಧಾನಕ್ಕೆ ಮಾಡಿದರಾಯಿತು ಎಂದುಕೊಂಡಳು. ಇವತ್ತು ಯಾಕಿಷ್ಟು ತಾನು ವಿಚಲಿತಳಾಗಿದ್ದೇನೆ. ಕಾರಣ ಗೊತ್ತಿದ್ದರೂ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಅವಳಿರಲಿಲ್ಲ. ಒಂದುರೀತಿಯ ಹಟಸ್ವಭಾವವನ್ನು ಬೆಳೆಸಿಕೊಂಡೇ ಬದುಕಿದ ಜೀವಕ್ಕೆ ವ್ಯತಿರಿಕ್ತವಾದ ಭಾವನೆಯನ್ನು ಎದುರಿಸುವ ತಾಕತ್ತಿರಲಿಲ್ಲ. ಮಾನಸಿಕವಾಗಿ ತಾನು ಅಶಕ್ತಳಾಗುತ್ತಿದ್ದೇನೆಯೇ? ತನ್ನೊಳಗಿನ ದೃಢನಿರ್ಧಾರದ ಅಡಿಪಾಯ ಕುಸಿಯುತ್ತಿದೆಯೇ? ಚಿಂತನೆಯಲ್ಲಿ ಅವಳು ಇನ್ನಷ್ಟು ಕುಗ್ಗತೊಡಗಿದಳು.
ಇಂದು ಮಧ್ಯಾಹ್ನದ ಊಟವನ್ನು ತನ್ನ ಛೇಂಬರಿನಲ್ಲಿಯೇ ಮುಗಿಸಿದ ಪ್ರಣತಿಗೆ ಮೊಬೈಲಿನಲ್ಲಿ ಕರೆ ಬಂದಾಗ ಅದು ಖಂಡಿತಾ ಸುಖಾಂಶುವದ್ದೇ ಇರಬೇಕೆಂದುಕೊಂಡಳು. ಸಾಮಾನ್ಯವಾಗಿ ಮಧ್ಯಾಹ್ನದ ಊಟದ ನಂತರ ಒಂದೈದು ನಿಮಿಷ ಪ್ರಣತಿಯೊಂದಿಗೆ ಹರಟುವ ಪರಿಪಾಠ ಅವನದಾಗಿತ್ತು. ಆದರೆ ಬಂದ ಕರೆ ತಂಗಿ ಪ್ರಶಾಂತಿಯದ್ದು. ಬಹಳ ದಿನಗಳ ನಂತರ ಅವಳು ಕರೆ ಮಾಡಿದ್ದಳು. ಮದುವೆಯಾದ ಮರುವರ್ಷವೇ ತಾಯಿಯಾಗಿದ್ದ ಅವಳು ಹೆತ್ತ ಮನೆಗೂ ಹೊಕ್ಕ ಮನೆಗೂ ಪ್ರೀತಿಪಾತ್ರದವಳಾಗಿದ್ದಳು. ಅವಳ ಪುಟ್ಟ ಕಂದ ಕೌಸ್ತುಭ್‍ನಿಗೆ ಈಗ ವರುಷವಾಗುತ್ತಾ ಬಂದಿರಬೇಕು….
‘‘ಹಲೋ ಅಕ್ಕಾ… ನಾನು ಪ್ರಶಾಂತಿ ಮಾತಾಡ್ತಿರೋದು…’’
ಪ್ರಣತಿಯ ಯೋಚನೆಗೆ ಬ್ರೇಕ್ ಬಿದ್ದಂತಾಯಿತು.
‘‘ಏನೇ… ಈಗ ನೆನಪಾಯ್ತಿತೇನೇ ನಿನಗೆ… ಏನು ವಿಷಯ’’
“ಅಕ್ಕಾ ಇವತ್ತು ನಮ್ಮ ಪುಟ್ಟನ ಬರ್ತ್‍ಡೇ. ಆಫೀಸು ಮುಗಿಸಿ ಹಾಗೆ ನೇರವಾಗಿ ಇಲ್ಲಿಗೇ ಬಂದುಬಿಡು. ಜೊತೆಯಲ್ಲಿ ಭಾವನನ್ನೂ ಕರ್ಕೊಂಡು ಬಾ…’’
ಪ್ರಶಾಂತಿ ಅಕ್ಕರೆಯ ಆಮಂತ್ರಣವಿತ್ತಿದ್ದಿಳು. ಅವಳಿಗೆ ಅಕ್ಕನೆಂದರೆ ಮೊದಲಿನಿಂದಲೂ ಅಕ್ಕರೆ. ಯಾವುದೇ ಕೆಲಸವನ್ನು ಅವಳಿಗೆ ಹೇಳದೆ ಮಾಡುತ್ತಿರಲಿಲ್ಲ.
‘‘ನಾನಂತೂ ಬರ್ತೀನಿ ಕಣೆ… ಆದರೆ ಭಾವ ಊರಲ್ಲಿಲ್ಲ. ಮುಂಬೈಗೆ ಆಫೀಸು ಕೆಲಸದ ಮೇಲೆ ಹೋಗಿದ್ದಾರೆ’’
‘‘ಆಯಿತು. ನೀನು ಬಾ. ಮರೀಬೇಡ ಮತ್ತೆ…’’ ಹುಸಿ ಆಕ್ಷೇಪಣೆಯೊಂದಿಗೆ ಪ್ರಶಾಂತಿ ಕರೆ ಮುಗಿಸಿದ್ದಳು.
ಮಕ್ಕಳೆಂದರೆ ಮಮತೆಯ ಪ್ರತಿಬಿಂಬ ಎನ್ನುವ ಮಾತನ್ನು ಪ್ರಣತಿ ಹಾರ್ದಿಕವಾಗಿ ಯಾವತ್ತೂ ಒಪ್ಪುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಅವಳ ಯೋಚನೆಗಳು ಬೇರೆಯದೇ ದಾರಿಯಲ್ಲಿ ಕ್ರಮಿಸುತ್ತಿದ್ದವು. ಹಾಗೆಂದು ಮಕ್ಕಳನ್ನು ಕಂಡರೆ ಅವಳಿಗೆ ಪ್ರೀತಿಯೇ ಇಲ್ಲವೆಂದಲ್ಲ. ಚಿಕ್ಕವಳಿದ್ದಾಗ ತನ್ನ ಅಕ್ಕಪಕ್ಕದ ಮನೆಯ ಕಂದಮ್ಮಗಳು ಮನೆಗೆ ಬಂದಾಗ ಅವರನ್ನು ಎತ್ತಿ ಆಡಿಸಿ ಮುದ್ದಾಡುತ್ತಿದ್ದಳು. ಹೆಣ್ಣಿನ ಪ್ರಕೃತಿಸಹಜವಾದ ನಡವಳಿಕೆಯಂತೆ ಮುದ್ದುಮುದ್ದಾಗಿ ಮಾತನಾಡಿಸುತ್ತಿದ್ದಳು. ಆದರೆ ಯೌವನಕ್ಕೆ ಕಾಲಿಡುತ್ತಿದ್ದಂತೆ ಅವಳಲ್ಲಾದ ಬದಲಾವಣೆಯನ್ನು ಮನೆಯವರೂ ಗಮನಿಸಿರಲಿಲ್ಲ. ಮುಗ್ಧತೆ ಕಳೆದು ತಿಳಿವಳಿಕೆಯ ಹೊಸ್ತಿಲನ್ನು ದಾಟುವ ಪ್ರೌಢತೆಯಲ್ಲಿ ತಂತಾನೆ ಯಾಕೋ ಮಕ್ಕಳು ಅವಳಿಗೆ ಸುಲಲಿತ ಜೀವನಕ್ಕೆ ತೊಡಕಿನ ಭಾಗವಾಗಿ ಕಂಡಿತ್ತು. ಇದಕ್ಕೆ ಅವಳ ಮನೋಭೂಮಿಕೆಯಲ್ಲಿ ಬಿದ್ದು ಬೆಳೆದ ಬೀಜದ ಪರಿಯೇ ಕಾರಣವಾಗಿರಬಹುದು. ಸುತ್ತಲಿನ ಸಮಾಜದಲ್ಲಿ ಮಕ್ಕಳಿಂದಾಗಿ ಹೆತ್ತವರು ಪಡುತ್ತಿರುವ ಪಾಡು, ಮಕ್ಕಳ ಅನಾದರ, ತಮ್ಮ ಗುರಿಯ ಸಾಧನೆಗಾಗಿ ಹೆತ್ತವರನ್ನೇ ದೂರಮಾಡುತ್ತಿರುವ ಯುವಜನಾಂಗದ ಜೀವನಶೈಲಿ, ಸಾಂಕ್ರಾಮಿಕ ರೋಗಗಳಿಂದ, ಆಕಸ್ಮಿಕ ದುರ್ಘಟನೆಗಳಿಂದ ಹೆತ್ತವರನ್ನು ಕಳಕೊಂಡು ಅನಾಥರಾಗುತ್ತಿರುವ ಮಕ್ಕಳ ಆರ್ತನಾದ, ಬೀದಿಗಳಲ್ಲಿ ಭಿಕ್ಷೆಬೇಡುತ್ತಿರುವ ಅಂಕವಿಕಲ ಮಕ್ಕಳು…. ಹೀಗೆ ಸುತ್ತಮುತ್ತಲಿನ ಹತ್ತಾರು ಚಿತ್ರಣಗಳು ಪ್ರಣತಿಯಲ್ಲಿ ಮಕ್ಕಳ ಬಗೆಗಿದ್ದ ವ್ಯಾಮೋಹವನ್ನು ಕುಂಠಿತಗೊಳಿಸಿದ್ದವು. ಅಲ್ಲಿ ನೆಲೆನಿಂತ ಅವ್ಯಕ್ತ ಭೀತಿಯೋ ಇಲ್ಲಾ ತನ್ನ ಮಕ್ಕಳೂ ಹೀಗಾದರೆ ಹೇಗೆ ಎನ್ನುವ ಭವಿಷ್ಯತ್ತಿನ ಭಯವೋ ಅಂತೂ ಮಕ್ಕಳಿಲ್ಲದಿದ್ದರೆ ಚಿಂತೆಯೇ ಇಲ್ಲವೆನ್ನುವ ತಾರ್ಕಿಕ ನಿಲುವಿಗೆ ಅವಳು ಬಂದಾಗಿತ್ತು. ಸುಖಾಂಶು ಅವಳ ಯಾವ ಬೇಡಿಕೆಗಳಿಗೂ ಅಡ್ಡ ಮಾತನಾಡಿದವನಲ್ಲ. ಅವಳ ಸುಖ ನೆಮ್ಮದಿಯಲ್ಲಿ ತನ್ನ ಬದುಕಿನ ಬಿಂಬವನ್ನು ಕಂಡವನು ಅವನು.
ಮೊಬೈಲಿನ ಫೇಸ್‍ಬುಕ್, ವಾಟ್ಸ್ಯಾಪ್‍ಗಳಲ್ಲಿ ಹರಿದಾಡುವ ಪುಟ್ಟಮಕ್ಕಳ ನಾನಾರೀತಿಯ ಆಟಪಾಠಗಳು, ಮಾಡುವ ದೊಡ್ದವರ ಅನುಕರಣೆ, ಹಾಡು, ಕುಣಿತದ ವೀಡಿಯೋಗಳು, ಚಿತ್ರಗಳು ಅವಳನ್ನೆಂದೂ ಮುದಗೊಳಿಸುತ್ತಿರಲಿಲ್ಲ. ತನ್ನ ಇಂತಹ ವ್ಯಕ್ತಿತ್ವದ ಬಗ್ಗೆ ಅವಳೆಂದೂ ತಲೆಕೆಡಿಸಿಕೊಂಡಿರಲಿಲ್ಲ. ತಾನೇಕೆ ಹೀಗಾಗುತ್ತಿದ್ದೇನೆ ಎನ್ನುವ ದಾರಿಯಲ್ಲೂ ಕೊಂಚ ನಿಂತು ಯೋಚಿಸಿದವಳಲ್ಲ. ತನ್ನ ಸ್ವಾತಂತ್ರ್ಯ, ವೃತ್ತಿಪರ ಬದುಕಿನ ಗುರಿಗೆ ಮಕ್ಕಳು ತೊಡಕಾಗಬಹುದೆನ್ನುವ ಅಳುಕು ಅವಳ ಮನದ ಮೂಲೆಯಲ್ಲೆಲ್ಲೋ ಅವಿತುಕೂತಿರಬೇಕು. ಇಲ್ಲವಾದರೆ ಹುಟ್ಟುವ ಮಗು ತಾವೆಣಿಸಿದಂತೆ ಸಭ್ಯ ನಾಗರಿಕನಾಗಿ ಬೆಳೆಯದೆ ಕಂಟಕಪ್ರಾಯವಾದಲ್ಲಿ ತಮ್ಮ ಮುಂದಿನ ಮನಸ್ಥಿತಿಯ ಬಗ್ಗೆ ಅಂಜಿಕೆಯೋ ಗೊತ್ತಿಲ್ಲ ಒಟ್ಟಿನಲ್ಲಿ ಹೃದಯಕ್ಕೆ ಹತ್ತಿರವಾಗುವ ಮಗುಭಾವ ಅವಳೊಳಗೆ ಬೆಳೆಯಲೇ ಇಲ್ಲ. ಪ್ರಶಾಂತಿಗೆ ಅಕ್ಕನ ಈ ನಡೆ ತಿಳಿದಿದ್ದರೂ ಇಂತಹ ವೈಯಕ್ತಿಕ ವಿಷಯಗಳಲ್ಲಿ ತಲೆಹಾಕಲು ಹಿಂಜರಿದಿದ್ದಳು.
ಪ್ರಶಾಂತಿ ಕರೆದಳೆಂದ ಮೇಲೆ ಹೋಗದಿರಲಾಗುತ್ತದೆಯೇ? ಅದೂ ಕೌಸ್ತುಭ್‍ನ ಮೊದಲ ಹುಟ್ಟುಹಬ್ಬ. ಹೋಗಬೇಕೆಂದು ನಿರ್ಧರಿಸಿದವಳೇ ಸಂಜೆ ಬೇಗನೆ ಬ್ಯಾಂಕನ್ನು ಬಿಟ್ಟು ಹೊರಬಂದಳು. ಹತ್ತಿರದ ಮಕ್ಕಳ ಆಟಿಕೆಗಳ ಅಂಗಡಿಯಿಂದ ಆಕರ್ಷಕ ಆಟಿಕೆಗಳನ್ನು ಗಿಫ್ಟ್‌ರೂಪದಲ್ಲಿ ಕಟ್ಟಿಸಿಕೊಂಡು ಪ್ರಶಾಂತಿಯ ಮನೆಕಡೆ ಅಟೋ ಹತ್ತಿದಳು.
ಪ್ರಶಾಂತಿಯ ಅತ್ತೆ ಮಾವ ಕಟ್ಟಿಸಿದ ಮನೆಯಲ್ಲಿಯೇ ಪ್ರಶಾಂತಿ ಪ್ರದೀಪ ಎಲ್ಲರೂ ಜೊತೆಯಾಗಿಯೇ ಇರುತ್ತಿದ್ದರು. ವಿಜಯನಗರದ ಬಡಾವಣೆಯೊಂದರಲ್ಲಿ ಬಹಳ ಹಿಂದೆ ಕಟ್ಟಿಸಿದ ಎರಡು ಅಂತಸ್ತಿನ ಮನೆ ದೊಡ್ಡದಾಗಿಯೇ ಇತ್ತು. ಹಳೆಯ ಮನೆಯಾದರೂ ಬೇಕಾದ ಸವಲತ್ತುಗಳಿಗೆ ಅಲ್ಲಿ ಕೊರತೆಯಿರಲಿಲ್ಲ. ಕೌಸ್ತುಭ್‍ನ ಮೊದಲ ಹುಟ್ಟುಹಬ್ಬವಾದುದರಿಂದ ಸಂಭ್ರಮ ಅಲ್ಲಿ ಮನೆ ಮಾಡಿತ್ತು. ಪ್ರಣತಿಯ ತಂದೆ ತಾಯಿ ಅದಾಗಲೇ ಬಂದಾಗಿತ್ತು. ಅಕ್ಕಪಕ್ಕದವರು, ನೆಂಟರಿಷ್ಟರು ಅಂತ ಸುಮಾರು ಐವತ್ತು ಜನರಿಗಾಗುವಷ್ಟು ಎಲ್ಲ ವ್ಯವಸ್ಥೆಯನ್ನು ಮಾಡಿದ್ದರು. ಮನೆಯನ್ನು ಹೂಹಾರ, ಬಲೂನುಗಳಿಂದ ಅಲಂಕರಿಸಿದ್ದರು. ನೆರೆಹೊರೆಯ ಮಕ್ಕಳ ಕೇಕೆ ಆಗಲೇ ಮುಗಿಲು ಮುಟ್ಟಿತ್ತು.
ಪ್ರಣತಿಯ ಅಟೋ ಮನೆಯ ಮುಂದೆ ನಿಂತಿದ್ದೇ ತಡ ಪ್ರಶಾಂತಿ ಓಡೋಡಿ ಬಂದು ಅಕ್ಕನನ್ನು ಬರಮಾಡಿಕೊಂಡಳು. ಮೊದಲಿನಿಂದಲೂ ಬಾಯಿತುಂಬ ಮಾತನಾಡುವ ಅವಳು ಅಕ್ಕನನ್ನು ಎಡೆಬಿಡದೆ ಮಾತಿಗೆ ಹಚ್ಚಿದಳು. ಪ್ರದೀಪ ಅವನ ತಂದೆ ತಾಯಿ ಕೂಡ ಪ್ರಣತಿಯನ್ನು ಆದರದಿಂದ ಸತ್ಕರಿಸಿದರು. ಕೌಸ್ತುಭ್ ಕಂಡವರ ತೋಳಿನಲ್ಲಿ ಸಂಭ್ರಮಿಸುತ್ತಿದ್ದ. ಮುದ್ದಾದ ಗಂಧದ ಮೈಬಣ್ಣದ ಮಗುವಿಗೆ ಹಾಕಿದ ಆಕರ್ಷಕ ದಿರಿಸು, ಹಣೆ ಕೆನ್ನೆಗಿಟ್ಟ ಕಾಡಿಗೆಯ ಬೊಟ್ಟು, ಕೈಕಾಲಿಗೆ ತೊಡಿಸಿದ ಹಗುರವಾದ ಆಭರಣಗಳಿಂದ ನಿಜಕ್ಕೂ ಮುಗ್ಧತೆಯ ಕಿರುಮೂರ್ತಿಯಂತೆ ಅವನು ಶೋಭಿಸುತ್ತಿದ್ದ.
ಎಲ್ಲರ ಆಕರ್ಷಣೆಗೆ ಒಳಗಾದ ಅವನನ್ನು ಪ್ರಣತಿ ಎತ್ತಿಕೊಂಡಳು. ಪರಿಚಯವಿಲ್ಲದಿದ್ದರೂ ಸರಾಗವಾಗಿ ಕಂಡವರ ತೋಳಿಗೆ ಸಾಗುತ್ತಿದ್ದ ಅವನು ಎತ್ತಿಕೊಂಡೊಡನೆ ಅವಳೆಡೆ ಕಿರುನಗೆ ಬೀರುತ್ತಾ ‘ಅಮ್ಮಾ….’ ಅಂತ ತೊದಲಿದ. ಬಹುಶಃ ಅವನು ಅಕ್ಕತಂಗಿಯರಲ್ಲಿ ರೂಪಸಾಮ್ಯತೆಯನ್ನು ಕಂಡಿರಬಹುದು. ಆ ತೊದಲುವಿಕೆಯಲ್ಲಿ ಯಾವುದೋ ಒಂದು ಮಾಂತ್ರಿಕತೆಯಿತ್ತು. ಎಳಸುತನದ ಆ ನಿಷ್ಕಲ್ಮಶ ನಗು ಪ್ರಣತಿಯ ಎದೆಯಲ್ಲಿ ಕಲರವವನ್ನು ಎಬ್ಬಿಸಿತು. ಅವಳಿಗರಿವಿಲ್ಲದೆ ಅವಳ ಹೃದಯ ಅರಳುವ ಹೂವಾಗತೊಡಗಿತು. ಮಗುವಿನ ಬೆಚ್ಚನೆಯ ಬಿಸುಪು ಅವಳ ದೇಹದುದ್ದಕ್ಕೂ ಮಿಂಚಿನ ಸ್ಪರ್ಶವನ್ನು ಹರಿಯಿಸಿತು. ಅಲ್ಲೇನೋ ಅರಿವಿಗೆ ಬಾರದ ಅನುಭೂತಿ ಅವಳಲ್ಲಿ. ಪದಗಳಲ್ಲಿ ಹೇಳಲಾಗದ ಪುಟಿಯುವ ಹುಮ್ಮಸ್ಸು. ಪ್ರಣತಿ ಮಂತ್ರಮುಗ್ಧಳಂತೆ ಕೌಸ್ತುಭ್‍ನನ್ನು ಎದೆಗಪ್ಪಿಕೊಂಡೇ ಇದ್ದಳು. ಇದನ್ನು ಗಮನಿಸಿದಂತಹ ಪ್ರಶಾಂತಿ ನಗುತ್ತಾ ಅಕ್ಕನ ಹತ್ತಿರ ಬಂದವಳೇ
‘‘ಅಕ್ಕಾ… ಈಗಲಾದ್ರೂ ನಿನ್ನ ಮನಸ್ಸನ್ನ ಬದಲಿಸಿಕೋ. ಮಗುವೊಂದಿದ್ರೆ ನಿನ್ನ ಕೆಲಸದ ಒತ್ತಡ, ಬದುಕಿನ ಧಾವಂತಕ್ಕೆಲ್ಲ ಅಂತ್ಯ ಹಾಡಬಹುದು ಗೊತ್ತಾ… ಅದರ ಬೆಳವಣಿಗೆಯಲ್ಲಿ ನಮ್ಮದೆಲ್ಲವನ್ನೂ ಮರೆಯುತ್ತ ಸುಖಿಸಬಹುದು. ಹೆರುವ ಸಾಮಾರ್ಥ್ಯವಿದ್ದರೂ ಬಂಜೆ ಎಂದೆನಿಸಿಕೊಳ್ಳಬೇಡ…’’ ಎಂದು ಅಧಿಕಾರವಾಣಿಯಿಂದ ಮೆಲುನುಡಿದಳು. ತಕ್ಷಣ ತನ್ನ ಮಾತುಗಳನ್ನು ಇನ್ನಾರೂ ಕೇಳಿಸಿಕೊಂಡಿಲ್ಲವಲ್ಲ ಅಂತ ಖಾತ್ರಿಪಡಿಸಿಕೊಂಡಳು. ಪ್ರಶಾಂತಿಯ ಮಾತಿಗೆ ಆಗ ಪ್ರಣತಿಯ ನಗುವೊಂದೇ ಉತ್ತರವಾಗಿತ್ತು.
ಹುಟ್ಟುಹಬ್ಬದ ಕೇಕ್ ಕತ್ತರಿಸಲು ಎಲ್ಲರೂ ಹಾಲಿನಲ್ಲಿ ಜಮಾಯಿಸಿದರು. ಪ್ರಶಾಂತಿ ತನ್ನ ಕುಟುಂಬದವರೆಲ್ಲರನ್ನು ಸುತ್ತಲಿರಿಸಿ ಕೌಸ್ತುಭ್‍ನನ್ನು ತೊಡೆಯ ಮೇಲೆ ಕೂರಿಸಿಕೊಂಡಳು. ಪ್ರಣತಿಯನ್ನು ಮರೆಯದೆ ತನ್ನ ಪಕ್ಕದಲ್ಲಿರುವಂತೆ ನೋಡಿಕೊಂಡಿದ್ದಳು. ದೀಪ ಬೆಳಗಿಸಿದ ಪ್ರಣತಿ ಮಗುವಿನ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಕೇಕ್ ಕಟ್ ಮಾಡಿದಳು. ಎಲ್ಲರೂ ಒಕ್ಕೊರಳಿನಿಂದ ಹ್ಯಾಪಿ ಬರ್ತ್‍ಡೇ ಕೌಸ್ತುಭ್… ಅಂತ ಹಾಡಿದರು. ಹಚ್ಚಿಟ್ಟ ದೀಪದ ಬೆಳಕಿನಲ್ಲಿ ಕೌಸ್ತುಭ್‍ನ ಕಿಲಕಿಲ ನಗು ಮನೆಯೆಲ್ಲ ತುಂಬಿಕೊಂಡಿತ್ತು. ತುಂಡರಿಸಿದ ಕೇಕಿನ ತುಣುಕೊಂದನ್ನು ಕೌಸ್ತುಭ್‍ಗೆ ತಿನಿಸಿದಾಗ ಪ್ರಣತಿಯಲ್ಲಿ ಮಾತೃಭಾವ ಜಾಗೃತವಾದಂತಾಯಿತು. ಚಿಕ್ಕವರಿದ್ದಾಗ ತಾಯಿ ತಮ್ಮಿಬ್ಬರಿಗೂ ಪ್ರೀತಿಯಿಂದ ಹಾಡು ಹಾಡುತ್ತ ಕೈತುತ್ತು ತಿನಿಸಿದ ನೆನಪು ಆ ಕ್ಷಣ ಕಾಡತೊಡಗಿತು. ತಾನೇಕೆ ಇಂದು ಇಷ್ಟು ದುರ್ಬಲಳಾಗುತ್ತಿದ್ದೇನೆ ಎನ್ನುವ ಯೋಚನೆ ಅವಳಿಗೆ ಬಾರದಿರಲಿಲ್ಲ. ತನ್ನೊಳಗೆ ಗಟ್ಟಿಗೊಂಡಿದ್ದ ನಿರ್ಧಾರವೊಂದು ಸಣ್ಣಗೆ ಕರಗುವ ಭಾವ. ಹತ್ತಿರದಲ್ಲಿಯೇ ಇದ್ದ ಪ್ರಶಾಂತಿಯ ಅತ್ತೆ
‘‘ಪ್ರಣತಿ ನಿನಗೂ ಇಂತಹ ಮಗುವೇ ವರ್ಷ ಕಳೆಯುವುದರೊಳಗೆ ಮಡಿಲು ಸೇರಲಿ…’’ ಎಂದು ತುಂಬು ಮನಸ್ಸಿನಿಂದ ಹಾರೈಸಿದರು. ಪ್ರಣತಿಗೆ ಆ ಹಾರೈಕೆ ತನ್ನೊಳಗೆ ಫಲ ನೀಡಿದಂತೆ ಭಾಸವಾಯಿತು. ಅಲ್ಲಿಯ ವಾತಾವರಣವೆಲ್ಲವೂ ಆನಂದ ಲಹರಿಯಲ್ಲಿ ತೇಲುತ್ತಿರುವಂತೆ ಪ್ರಣತಿಗೆ ಅನಿಸಿತು. ತನ್ನತನದ ಗಡಸು ಬಿಂಬವೊಂದು ಎದುರು ನಿಂತು ಗಹಗಹಿಸಿ ನಕ್ಕಂತಾಯಿತು. ತಕ್ಷಣ ಆ ಬಿಂಬ ಮಾಯವಾದಂತೆ ಅನಿಸಿತು.
ಹೌದಲ್ಲ…. ತನ್ನಲ್ಲೇನೋ ಬದಲಾವಣೆ ಆದಂತಿದೆ. ಖಂಡಿತ ಇದು ಭ್ರಮೆ ಇರಲಾರದು. ಪ್ರಣತಿ ಮಲಗಿದಲ್ಲಿಯೇ ಮೈಮುಟ್ಟಿಕೊಂಡಳು. ದೇಹ ಕೊಂಚ ಬಿಸಿಯೇರಿದಂತಿತ್ತು. ಮಗುವಿಲ್ಲದ ಬದುಕು ಅಪೂರ್ಣವೇ? ತಾಯ್ತನ ಹೆಣ್ಣಿಗೆ ಅನಿವಾರ್ಯವೇ? ಅದಿಲ್ಲದೆ ಸಂಸಾರದಲ್ಲಿ ತಾನಿರಲು ಅಸಮರ್ಥಳೇ? ಮಕ್ಕಳಾಗುವ ಸಾಮಾರ್ಥ್ಯವಿದ್ದರೂ ಬಂಜೆ ಎಂದೆನಿಸಿಕೊಳ್ಳುವುದು ಈಗಿನ ಸಮಾಜದಲ್ಲೂ ಅಪಮಾನವೇ? ಲೆಕ್ಕವಿಲ್ಲದಷ್ಟು ಪ್ರಶ್ನೆಗಳು ಅವಳನ್ನು ಸತತವಾಗಿ ತಿವಿಯುತ್ತಲೇ ಇದ್ದವು. ‘ಹೆರುವ ಸಾಮಾರ್ಥ್ಯವಿದ್ದರೂ ಬಂಜೆ ಎಂದೆನಿಸಿಕೊಳ್ಳಬೇಡ….’ ತಂಗಿಯ ಮಾತು ಮತ್ತೆ ನೆನಪಾಗಿ ಕಾಡತೊಡಗಿತು.
ಯಾವ ಪ್ರಶ್ನೆಗಳಿಗೂ ಅವಳಲ್ಲಿ ಸಿದ್ಧ ಉತ್ತರವಿರಲಿಲ್ಲ. ಕ್ಷೋಭೆಗೊಳಗಾದ ಮನಸ್ಸಿನಾಳದಲ್ಲಿ ಕೌಸ್ತುಭ್‍ನ ಬಿಂಬ ಪದೇ ಪದೇ ಮೂಡಿ ಬರುತ್ತಿತ್ತು. ಆ ಬಿಂಬ ಹೃದಯಕ್ಕೆ ಹತ್ತಿರವಾಗುತ್ತಿದ್ದಂತೆ ಕವಿದ ಕಾರ್ಮೋಡ ತಿಳಿಯಾಗುತ್ತಿತ್ತು. ನಿರಭ್ರ ಆಕಾಶ ತನ್ನೆದೆಯೊಳಗೆ ತೂರಿಬಂದಂತೆ, ಆಕಾಶದ ತುಂಬ ಮಿನುಗುವ ನಕ್ಷತ್ರಗಳು ನಕ್ಕಂತೆ, ಅಲ್ಲಿಯ ಅನಂತತೆಯಲ್ಲಿ ಹಗುರವಾಗಿ ತೇಲಿದಂತೆ ಪ್ರಣತಿ ಸಂಭ್ರಮಿಸತೊಡಗಿದಳು. ಅವಳೊಳಗಿನ ವಿವೇಕ ಜಾಗೃತವಾಯಿತು.
‘ಇಲ್ಲ…. ನನ್ನ ಬದುಕಿಗೊಂದು ಅರ್ಥ ಕೊಡುವ ಬಾಳನ್ನು ತಾನು ಬಾಳಬೇಕು. ಇಷ್ಟು ದಿನ ನನ್ನೊಳಗೆ ಹೂತುಹೋಗಿದ್ದ ಮಗುಮುಕ್ತ ಜೀವನಶೈಲಿಗೆ ಅಂತ್ಯ ಹಾಡಬೇಕು. ಅಲ್ಲಿರುವ ಸುಖ ಸಂತಸಗಳನ್ನು ಎಲ್ಲರಂತೆ ಬಾಚಿಕೊಳ್ಳಬೇಕು. ಕಣ್ಣಿಗೆ ಕಂಡ ಕಷ್ಟಗಳೆಲ್ಲ ತನ್ನ ಜೀವನದಲ್ಲಿ ಗತಿಸಬೇಕೆಂದೇನಿಲ್ಲವಲ್ಲ. ಹೊಸ ಆಶಯದ ಭರವಸೆಯ ಬೆಳಕಿನಲ್ಲಿ ಹೆಜ್ಜೆ ಇಡಬೇಕಾದುದು ನನ್ನ ಧರ್ಮ. ಅದು ನನ್ನ ಕರ್ತವ್ಯವೂ ಹೌದು. ಇಲ್ಲವಾದರೆ ಹೇಡಿತನ ನನ್ನೊಳಗೆ ಶಾಶ್ವತವಾಗಿ ಬೇರುಬಿಟ್ಟೀತು. ಅದಕ್ಕೆ ವಿಮುಖವಾಗಿ ಸಮಾಜಮುಖಿಯಾಗಿ ಬಾಳುವುದರಲ್ಲಿಯೇ ಸೊಗಸಿದೆ. ಇದನ್ನು ಸುಖಾಂಶುವಿಗೆ ತಿಳಿಸಿದರೆ ಅವನೆಷ್ಟು ಖುಷಿಪಟ್ಟಾನು. ಅವನ ಆಂತರ್ಯದಲ್ಲೂ ನಮ್ಮ ಪ್ರತಿರೂಪವೊಂದು ಚಿಗುರೊಡೆಯುವ ಬಯಕೆಯ ಬೀಜವಿದ್ದಿರಬಹುದು. ಇನ್ನು ತಡಮಾಡುವುದು ಸರಿಯಲ್ಲ’.
ದಿಗ್ಗನೆ ಎದ್ದವಳೇ ಪ್ರಣತಿ ದೃಢ ನಿರ್ಧಾರದೊಂದಿಗೆ ಸುಖಾಂಶುವಿಗೆ ಕರೆಮಾಡತೊಡಗಿದಳು.
********************************
28 thoughts on “ನಿರ್ಧಾರ”
ಪ್ರಣತಿಯ ಮನಸ್ಥಿತಿ ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ. ಸದಾ ಉದ್ಯೋಗದ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದರೂ ಮಕ್ಕಳಿದ್ದರೆ ಬದುಕಿನ ಅನುಭೂತಿಯೇಬೇರೆ.. ಚಂದದ ಕಥೆ. ಅಭಿನಂದನೆಗಳು.
ಧನ್ಯವಾದಗಳು
Very nice story and it is reflecting status of mind of present working married women who are more concerned about carrier than married life/extended family.
Thank you Bhat
Kate Tumba sogasagide.
Prakrutiu Hennige taiyaguva bhgyavannu nidide. Adannu avalu anubavisidare Jeevana
Paripoornavaguttade.
Kateyalli e vishavannu chennagi heliddiri.
Thank you Prakash
Sri Dharmnand avare Nice Story written by you Hats off to you
Raghunandan Harwalker
Gulbarga
Thank you very much sir
Nice story. The present generation of working women is more concerned about their carrier.
Very nicely narrated the day to day thinking of the working class and the problems they encounter in their life journey.
Thank you Ramakrishna
ಮಗುವಿನ ಇರುವಿಕೆ ಎಷ್ಟು ಮುಖ್ಯ ಎಂಬುದನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ 👌👌👌
ಧನ್ಯವಾದಗಳು ಮೇಡಂ
ಈ ಕಥೆಯಿಂದ ನಿಮ್ಮ ಅಂತರಂಗದ ಹೆಂಗರುಳಿ ನ ಭಾವ ಪರಿಚಯವಾಯಿತು. ಎಂದಿನಂತೆ ಸರಾಗ ವೆನಿಸುವ ಶೈಲಿ ,ಮುದಕೊಡುವ ಕಥಾಚಿತ್ರಣ.
ಧನ್ಯವಾದಗಳು ಮೇಡಂ
‘ನಿರ್ಧಾರ’ ಕಥೆ ಚಿಕ್ಕದಾಗಿ ಇದ್ದರೂ ಚೊಕ್ಕದಾಗಿ ಇರುವದು. ಪ್ರಣತಿ ಹಾಗೂ ಪ್ರಶಾಂತಿ ಅಕ್ಕ ತಂಗಿಯರ ತಮ್ಮ ಜೀವನ ರೂಪಿಸಿಕೊಂಡದ್ದು ವಿಭಿನ್ನ. ತಂಗಿಯ ಒಂದು ವರ್ಷದ ಪುಟ್ಟ ಮಗುವಿನ ಹುಟ್ಟು ಹಬ್ಬಕ್ಕೆ ಬಂದ ಸಮಯದಲ್ಲಿ ಪ್ರಣತಿಗೆ ತನಗೂ ಮಗು ಬೇಕು ಎನ್ನುವ ನಿರ್ಧಾರಕ್ಕೆ ಬಂದಳು.
ಕಥೆ ಮೊದಲಿನಿಂದ ಕೊನೆಯವರೆಗೆ ಚೆನ್ನಾಗಿ ಮೂಡಿಬಂದಿದೆ. ಈ ಕಥೆಯ ಭಾಗ 2 ಬೇಕು ಎನ್ನುವುದು ನನ್ನ ಅನಿಸಿಕೆ.
ಅಭಿನಂದನೆಗಳು ಧರ್ಮಾನಂದ ಅವರೇ
.
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು
Very heart touching nice story
Thank you Kavita
ಹೆಣ್ಣಿನ ಮನಸನು ತುಂಬಾ ಚೆನ್ನಾಗಿ ನಿರೂಪಿಸಿದಿರಿ. ಅನುಭವಿಸಿದವರು ಕೂಡ ಇಷ್ಟು ಚೆನ್ನಾಗಿ ವಿವರಿಸಲಾರರು. ಧನ್ಯವಾದಗಳು 🙏🙏
ಧನ್ಯವಾದಗಳು
ತಾಯಿತನದ ಸೌಭಾಗ್ಯ ಹೆಣ್ಣಿಗೆ ದೈವದತ್ತ ವರ. ಅದನ್ನು ತಾವು ತಮ್ಮ ಲೇಖನ ದ ಮೂಲಕ ಸುಂದರವಾಗಿ ವರ್ಣಿಸಿದ್ದೀರಿ. ತಮ್ಮ ಯೀ ಬರವಣಿಗೆ ಹೀಗೆ ಮುಂದುವರೆಯಿಲಿ.
ಧನ್ಯವಾದಗಳು
I read this article twice. Your writing is so beautiful. You are great at conveying things literally. You are strong with your language and good in presentation.
The present generation of working ladies has to read this article. The sentiments, bondage of sisters, marriage, having child, family relationship are expressed in a attractive and in style. The heart touching family sentiments is the essence of the Article.
An article is very good. Pl keep on writing. Good luck.
Thank you very much Purushottam. I am really pleased with your comments.
Very kind of you
ಕಥೆ ಚೆನ್ನಾಗಿ ಮೂಡಿಬಂದಿದೆ.ಆಕರ್ಷಣೀಯ ಬರವಣಿಗೆ. ಕಥೆ ಇನ್ನೂ ಮುಂದು ವರೆದಿದ್ದರೆ
ಚೆನ್ನಾಗಿತ್ತು ಅನಿಸುತ್ತೆ.ಭಾಗ 2 ಬರೆಯಲು
ಶುರು ಮಾಡಿ.
ಧನ್ಯವಾದಗಳು
ಈ ಬಗೆಯ ಸ್ತ್ರೀ ಸಂವೇದನೆಯ ಕಥೆಗಳನ್ನು ಲೇಖಕರು ಬರೆಯುವುದು ವಿರಳವೇ. ಚೆನ್ನಾಗಿ ಬರೆದಿದ್ದೀರಿ ಸರ್.
ತುಂಬ ಧನ್ಯವಾದಗಳು ಮೇಡಂ