ಯೋಗ, ಧ್ಯಾನದ ಕುರಿತು ಪ್ರವಚನ ನಡೆದಿತ್ತು. ಪ್ರವಚನಕಾರರು ಪತಂಜಲಿಯ ಅಷ್ಟಾಂಗಯೋಗದ ವೈಶಿಷ್ಟ್ಯವನ್ನು ಸೇರಿದವರ ಮನ ತಟ್ಟುವಂತೆ ವಿವರಿಸುತ್ತಿದ್ದರು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ….. ಹೀಗೆ ಯಮದಿಂದ ಸಮಾಧಿಯವರೆಗಿನ ಸ್ಥಿತಿಗತಿಗಳ ಸೊಗಸಾದ ಚಿಂತನೆ ಅದಾಗಿತ್ತು. ಯೋಗ ಬೇರೆ ಯೋಗಾಸನ ಬೇರೆ. ಯೋಗ ನಮ್ಮನ್ನು ಪರಮಾತ್ಮನೊಡನೆ ಸೇರಿಸುವ ಕೊಂಡಿಯಾದರೆ ಯೋಗಾಸನ ದೈಹಿಕ ಕಸರತ್ತುಗಳಿಂದ ದೇಹವನ್ನು ದಂಡಿಸುವ ವಿದ್ಯೆ…. ಧ್ಯಾನವೇ ನಾವಾಗಬೇಕು. ಅದು ಧಾರಣ… ಆ ಸ್ಥಿತಿಯಲ್ಲಿ ನಮ್ಮತನದ ಅರಿವಿಲ್ಲದೆ ನಾವು ಆತನಲ್ಲಿ ಒಂದಾಗುವುದೇ ಸಮಾಧಿ… ಸಾಗಿದ ಪ್ರವಚನದುದ್ದಕ್ಕೂ ಸಭಿಕರು ಸಮಾಧಿಸ್ಥಿತಿಯಲ್ಲಿ ಆಗಲೇ ಮುಳುಗಿದಂತೆ ನನಗೆ ಭಾಸವಾಗತೊಡಗಿತು. ನಿಜಕ್ಕೂ ಅದ್ಭುತ ವರ್ಣನೆ ಅನಿಸಿತು.
ಹಾಗೆ ನೋಡಿದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಅರಿವಿಲ್ಲದೆ ಒಂದುರೀತಿಯಲ್ಲಿ ಯೋಗಸಾಧನೆಯಲ್ಲಿಯೇ ತೊಡಗಿಕೊಂಡಿರುತ್ತೇವೆ. ಇದು ಯೋಗ ಮತ್ತು ಯೋಗಾಸನದ ಯೋಗಾಯೋಗ ಮಿಶ್ರಣ. ನಾವು ಬಸ್ಟ್ಯಾಂಡಿನಲ್ಲಿ ಬಸ್ಸಿಗೆ ಕಾಯುತ್ತಿದ್ದೇವೆ ಅಂತಿಟ್ಟುಕೊಳ್ಳಿ. ನಮ್ಮ ಕತ್ತು ಬಸ್ಸು ಬರುವತ್ತ ಅದರ ನಿರೀಕ್ಷೆಯಲ್ಲಿ ಪದೇ ಪದೇ ಕೊಕ್ಕರೆಯಂತೆ ಉದ್ದುದ್ದಕ್ಕೆ ಇಣುಕುತ್ತಿರುತ್ತದೆ. ಕತ್ತಿಗೆ ಸಾಕಷ್ಟು ಕಸರತ್ತು ಕೊಡುವ ಇದು ಕೊಕ್ಕರಾಸನ. ಇನ್ನು ಬಸ್ಸು ಬಂದು ನಾವದರೊಳಗೆ ಹತ್ತಿ ಪುಣ್ಯಕ್ಕೆ ಕೂರಲು ಜಾಗ ಸಿಕ್ಕಿತೆಂದರೆ ದಢೂತರ ಮಧ್ಯೆ ಸಿಲುಕಿ ತೆಳ್ಳಗಾಗಿ ಅಲುಗಾಡದೆ ಕೂರುವುದೇ ಸ್ಥಿರಾಸನ. ಕೂರಲು ಜಾಗ ಸಿಗದೆ ರಶ್ಶಿನಲ್ಲಿ ಒಂಟಿಕಾಲಲ್ಲಿ ನಿಲ್ಲುವ ಕಷ್ಟವೇ ಏಕಪಾದಾಸನ. ರಸ್ತೆಯಲ್ಲಿ ನಡೆಯುವಾಗ ಇಲ್ಲಾ ಬೀದಿಬದಿ ಯಾರನ್ನಾದರೂ ಕಾಯುವ ಪ್ರಸಂಗ ಬಂತೆಂದರೆ ಅಲ್ಲಿ ಅಡ್ಡಾಡುವವರ ಅಂದಚಂದವನ್ನು ಕಣ್ಣೆವೆ ಮುಚ್ಚದೆ ನೋಡುತ್ತಿದ್ದರೆ ನೇತ್ರಾಸನ. ಇದು ಕಣ್ಣಿನ ದೃಷ್ಟಿಗೆ ಒಳ್ಳೆಯ ಕಸರತ್ತು! ಓದುವಾಗ ಅವರವರ ಅನುಕೂಲಕ್ಕೆ ತಕ್ಕಂತೆ ಕೂರುವ ಭಂಗಿಯೇ ವಾಚಾಸನ. ಅವಸರದಲ್ಲಿ ಓಡುವುದು ದೌಡಾಸನವಾದರೆ ಕೆಲಸವಿಲ್ಲದೆ ಕೂರುವುದು ಕೂರಾಸನ. ಹೀಗೆ ಚಲನವಲನಗಳಲ್ಲಿ ಸಾಕಷ್ಟು ಆಸನಗಳು ನಮ್ಮ ಗಮನಕ್ಕೆ ಬಾರದೆ ಆರೋಗ್ಯ ಭಾಗ್ಯವನ್ನು ಕಾಪಾಡುತ್ತಲೇ ಹೋಗುತ್ತವೆ. ಆದರೆ ಮಾನಸಿಕ ನೆಮ್ಮದಿಯನ್ನು ಇಲ್ಲೆಲ್ಲ ಕಾಪಿಡುವುದು ನಮ್ಮ ಜವಾಬ್ದಾರಿ.
ಅಷ್ಟಾಂಗಯೋಗದ ಬಗ್ಗೆ ಒಲವಿದ್ದ ನಾನು ನನ್ನ ಸಾಧನೆಯ ಬಗ್ಗೆ ಭಿನ್ನ ರೀತಿಯಲ್ಲಿ ಯೋಚಿಸ ತೊಡಗಿದೆ. ರವಿವಾರ ಬಂತೆಂದರೆ ಇದ್ದೆಲ್ಲ ಉದಾಸೀನವನ್ನು ಒದ್ದೋಡಿಸಿ, ಗಡಿಬಿಡಿಯಿಂದ ನಿತ್ಯವಿಧಿಗಳನ್ನು ಪೂರೈಸಿ ಧ್ಯಾನಕೇಂದ್ರವನ್ನು ಎಂಟರ ಮುಂಚೆ ನಾನು ಸೇರಬೇಕಾಗುತ್ತಿತ್ತು. ಹಾದಿಯುದ್ದಕ್ಕೂ ನನಗೆ ಎದುರಾಗುವ ಸಂಕಟಗಳನ್ನು ನೆನೆಸಿ ಕೊಂಡಾಗ ಧ್ಯಾನದ ಮೊದಲಿನ ಎಲ್ಲ ಹಂತಗಳನ್ನು ನಿರಾಯಾಸವಾಗಿ ಪಾರು ಮಾಡಿದಂತಹ ಅನುಭವ ನೆನಪಿಗೆ ಬಂತು.
ಬಸವಣ್ಣನವರು ಸಾರಿದ ಅಂತರಂಗ ಬಹಿರಂಗ ಶುದ್ಧಿಗಳೆರಡನ್ನೂ ಏಕಕಾಲಕ್ಕೆ ಆವಾಹಿಸಿಕೊಂಡು ನನ್ನ ದ್ವಿಚಕ್ರಿಯ ಮೇಲೆ ಕೂತು ರಸ್ತೆಗಿಳಿದಾಗ ಬೀದಿಗುಡಿಸುವ ಗಂಗಮ್ಮ ಎದುರಾಗುತ್ತಿದ್ದಳು. ತಳ್ಳುವ ಕಸದ ಗಾಡಿಯೊಂದಿಗೆ ಎರಡೂ ಕೈಗಳಲ್ಲಿ ಪೊರಕೆ ಹಿಡಿದು ಸರಬರನೆ ದೂಳೆಬ್ಬಿಸುತ್ತ ಗುಡಿಸುವ ಅವಳ ಪರಿಯಿಂದಾಗಿ ಆಗತಾನೆ ಮಿಂದು ಮಿರುಗುಟ್ಟುವ ನನ್ನ ತನುವಿಗೆ ದೂಳಿನ ಲೇಪನವಾಗುತ್ತಿತ್ತು. ಅಪಶಕುನದ ಭೂತ ಬೇರೆ. ಪಾಪ ಅವಳದೇನು ತಪ್ಪಿಲ್ಲ ಅನ್ನಿ. ಎಲ್ಲರೂ ಬೆಚ್ಚಗೆ ಮಲಗಿರುವ ಆ ಸಿಹಿಹೊತ್ತಿನಲ್ಲಿ ಕಾಯಕವೇ ಕೈಲಾಸವೆಂದು ಬೀದಿಗಿಳಿಯುವ ಬಡವಿ ಅವಳು. ಅವಳಿರುವುದರಿಂದಲೇ ಅಲ್ಲವೆ ಮನೆಯೆದುರಿನ ಬೀದಿಯಲ್ಲಿ ನಾವು ಉಸಿರು ಬಿಗಿಹಿಡಿಯದೆ ನಡೆದಾಡಲು ಸಾಧ್ಯವಾಗುವುದು. ಗಂಗಮ್ಮ ಎರಡು ದಿನ ಬಾರದಿದ್ದರೆ ನಮ್ಮ ಬೀದಿ ಗಬ್ಬುನಾರಲು ಶುರುವಾಗುತ್ತದೆ.
ನಮ್ಮ ಮನೆಯ ಪಕ್ಕದಲ್ಲಿ ಖಾಲಿ ನಿವೇಶನವೊಂದಿದೆ. ಈಗೀಗ ಅದು ಕಸದ ತೊಟ್ಟಿಯಾಗುತ್ತಿದೆ. ಅಲ್ಲಿ ಸರಿರಾತ್ರಿಯಲ್ಲಿ ಸದ್ದಿಲ್ಲದೆ ಕಸ ಸುರಿಯುವ ಸುಶಿಕ್ಷಿತರು ನಮ್ಮ ಸುತ್ತಮುತ್ತಲೇ ಇದ್ದಾರೆ. ಒಂದೊಮ್ಮೆ ಬಂದ ಅದರ ಮಾಲೀಕ ಮಹಾಶಯ ಕಸ ವಿಲೇವಾರಿ ಮಾಡಿಸಿ ಎತ್ತರದ ಕಾಂಪೌಂಡ್ ಕಟ್ಟಿಸಿ ’ನಿವೇಶನ ಮಾರಾಟಕ್ಕಿಲ್ಲ’ ಎನ್ನುವ ಕಸ ಹಾಕಲು ಖುದ್ದು ಆಹ್ವಾನ ಕೊಡುವಂತಹ ಬೋರ್ಡೊಂದನ್ನು ನೆಟ್ಟು ಮಾಯವಾದ. ಅವನು ಅತ್ತ ಹೋದ ವಾರವೊಂದರಲ್ಲಿ ಆ ನಿವೇಶನದ ನಾಲ್ಕೂ ನಿಟ್ಟಿನಿಂದ ಸುರಿದ ಕಸದಿಂದಾಗಿ ಅದೀಗ ಅಕ್ಷರಶಃ ತೊಟ್ಟಿಯಾಗಿ ತುಂಬತೊಡಗಿದೆ. ಕಟ್ಟಿದ ಕಾಂಪೌಂಡ್ ಗೋಡೆ ಈ ಕೃತ್ಯಕ್ಕೆ ಇನ್ನಷ್ಟು ಸಹಕಾರಿಯಾಗಿದೆ. ಗಂಗಮ್ಮ ಅಲ್ಲೇನು ಮಾಡುವಂತಿರಲಿಲ್ಲ. ಯಾಕೆಂದರೆ ’ಅತಿಕ್ರಮಿಸುವವರಿಗೆ ಸೂಕ್ತಶಿಕ್ಷೆ ವಿಧಿಸಲಾಗುವುದು’ ಎನ್ನುವ ಎಚ್ಚರಿಕೆಯ ಬರಹ ಬೇರೆ ಆ ಫಲಕದಲ್ಲಿ ನಮೂದಾಗಿದೆ. ಹೀಗಾಗಿ ಪಾಪ ಅವಳೇನು ಮಾಡಿಯಾಳು.
ನನ್ನ ಚಿಂತನೆಯ ಸರಣಿ ವಾಹನದ ವೇಗದೊಂದಿಗೆ ಜತೆಯಾಗಿ ಓಡುತ್ತಿತ್ತು. ಮುಂದೆ ಸಾಗಿದರೆ ಸಿಗುವ ಸಿಗ್ನಲ್ ಮುಂಜಾನೆ ಹೊತ್ತಿನಲ್ಲಿ ಹೆಸರಿಗಷ್ಟೇ ಸೀಮಿತವಾಗಿರುತ್ತಿತ್ತು. ವಾಹನ ಸವಾರರು ಕೆಂಪುದೀಪ ಉರಿಯುತ್ತಿದ್ದರೂ ಅಕ್ಕಪಕ್ಕ ಕಳ್ಳರಂತೆ ನೋಡಿ ಭರ್ರನೆ ಹಾರುವ ಅವರ ಸಾಹಸಕ್ಕೆ ನನಗೇನೋ ದಿಗಿಲು. ವಿಶೇಷವೆಂದರೆ ಹೆಣ್ಣುಮಕ್ಕಳೂ ಈ ಚಾಕಚಕ್ಯತೆಯಲ್ಲಿ ಹಿಂದೆ ಬಿದ್ದಿರಲಿಲ್ಲ. ಇಲ್ಲಿಯೂ ಅವರು ಸಮಾನತೆಯ ಝಂಡಾ ಊರುವ ಧೀರೆಯರೇ. ಇರಲಿ ಬಿಡಿ. ಕೆಂಪುದೀಪ ಆರಿ ಹಸಿರು ನಿಶಾನೆ ಮೂಡುವವರೆಗೆ ನಾನೊಬ್ಬನೇ ಪೆಕರನಂತೆ ನಿಂತು ಸಾಗುವ ನನ್ನನ್ನು ಹೆಚ್ಚಿನವರು ಯಾವುದೋ ಅನ್ಯಲೋಕದ ಜೀವಿಯಂತೆ ನೋಡುತ್ತಿದ್ದರು. ಇಲ್ಲದಿದ್ದರೆ ಕರ್ಕಶ ಹಾರ್ನಿನೊಂದಿಗೆ ನನಗೆ ಮಂಗಳಾರತಿ ಮಾಡಿ ಮುನ್ನಡೆಯುವಂತೆ ಕಣ್ಣಲ್ಲೇ ಸೂಚಿಸುತ್ತಿದ್ದರು. ಈ ಒಂದು ರಗಳೆಯಿಂದ ಪಾರಾಗುವ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ’ಯಮನಿಯಮ’ದ ಅನುಷ್ಠಾನದಲ್ಲಿ ನನಗೆ ನಂಬಿಕೆಯಿತ್ತು. ಪಾಲನೆಯ ಬಗ್ಗೆ ಹೆಮ್ಮೆ ಇತ್ತು.
ನಾನಿರುವ ನಗರದ ಯಾವ ರಸ್ತೆಗಳೂ ಸುಸ್ಥಿತಿಯ ಮುಖ ಕಂಡಿಲ್ಲ. ಬಾಯಿತೆರೆದು ನಗುವ ಗುಂಡಿಗಳು, ಬಣ್ಣಬಳಿಯದ ಹಂಪ್ಗಳು, ನೀರಿನ ಸಂಪರ್ಕಕ್ಕೆ ಮುಲಾಜಿಲ್ಲದೆ ರಸ್ತೆಯನ್ನು ಅಡ್ದಕ್ಕೆ ಬಗೆದು ನಿರ್ದಾಕ್ಷಿಣ್ಯವಾಗಿ ಹಾಗೆಯೇ ಬಿಟ್ಟ ಕಿರುಕಂದಕಗಳು, ತೇಪೆಯ ಹೆಸರಿನಲ್ಲಿ ಉಬ್ಬುತಗ್ಗುಗಳಿಂದ ಅಂದವನ್ನೇ ಕೆಡಿಸಿಕೊಂಡ ಬೀದಿಗಳು….ಒಂದೆರಡಲ್ಲ. ಇವೆಲ್ಲವನ್ನೂ ಲೀಲಾಜಾಲವಾಗಿ ಹಾದುಹೋಗಬೇಕಾದರೆ ನಾನು ಅಷ್ಟಾಂಗಯೋಗದ ಮೂರನೆಯ ನಿಯಮವನ್ನು ಪಾಲಿಸಲೇಬೇಕಾಗುತ್ತಿತ್ತು. ವಿವಿಧ ಭಂಗಿಗಳಲ್ಲಿ ಕೂತು ಅಡ್ಡಾದಿಡ್ಡಿಯಾಗಿ ಓಡಿಸುವ ವಾಹನದ ಮೇಲೆ ಹಲವೊಂದು ಆಸನಗಳು ವಿಧಿಯಿಲ್ಲದೆ ಪ್ರಯೋಗವಾಗುತ್ತಿದ್ದವು. ಅಲ್ಲಿಗೆ ಯೋಗದ ಮೂರನೆಯ ಹಂತವನ್ನು ತಲುಪಿದ ತೃಪ್ತಿಯಲ್ಲಿ ನಾನು ತೇಲುತ್ತಿದ್ದೆ.
ಬೇಗನೆ ತಲುಪಬೇಕೆನ್ನುವ ಧಾವಂತದಲ್ಲಿ ನಾನು ಸುತ್ತುಬಳಕೆಯ ಹಾದಿ ಬಿಟ್ಟು ಒಳಹಾದಿಗಳನ್ನು ಹುಡುಕಿಕೊಂಡಿದ್ದೆ. ಅವು ಕೂಡಾ ಸುಸಜ್ಜಿತ ರಸ್ತೆಗಳೇನಲ್ಲ. ಆದರೆ ಆ ಹಾದಿಯಲ್ಲಿ ಕ್ರಮಿಸುವ ನನಗೆ ನರಕದ ಸರ್ವದರ್ಶನವಾಗುತ್ತಿತ್ತು. ದುರ್ನಾತ ಬೀರುವ ರಾಜಕಾಲುವೆ, ಘನತ್ಯಾಜ್ಯ ಚೆಲ್ಲುವ ಆಯಕಟ್ಟಿನ ಜಾಗಗಳು, ಅವುಗಳ ಮೇಲೆ ಎಗ್ಗಿಲ್ಲದೆ ಹಾರಾಡುವ ಹದ್ದು, ಕಾಗೆಗಳು, ರಸ್ತೆಯ ಕೊನೆಯಲ್ಲೊಂದು ಸ್ಮಶಾನ…. ನಿತ್ಯ ಬದುಕಿನ ಎಲ್ಲ ಬವಣೆಗಳ ಸಾಕ್ಶ್ಯಚಿತ್ರದಂತೆ ಕಣ್ಣೆದುರು ತೆರೆದುಕೊಳ್ಳುವ ಇವೆಲ್ಲವನ್ನೂ ನಾನು ನಿರ್ವಾಹವಿಲ್ಲದೆ ದಾಟಬೇಕಿತ್ತು. ಮೂಗಿಗೆ ಬೇಡವೆಂದರೂ ಅಡರುವ ಎಲ್ಲ ನಮೂನೆಯ ಕೆಟ್ಟ ವಾಸನೆಯಲ್ಲಿ ಶ್ರಮವಿಲ್ಲದೆ ಪ್ರಾಣಾಯಾಮ ನಡೆದುಹೋಗುತ್ತಿತ್ತು. ಸ್ಮಶಾನ ಬಂದಾಗ ವೈರಾಗ್ಯದ ಭಾವ ಮೂಡುತ್ತಿದ್ದರೂ ತಪ್ಪಿಯೂ ಆ ಕಡೆ ಕಣ್ಣು ಹಾಯಿಸುತ್ತಿರಲಿಲ್ಲ. ಬದುಕಿನ ಮಾಯೆ ಎಷ್ಟಿದೆ ನೋಡಿ. ಒಂದು ದಿನ ಅಲ್ಲಿಗೆ ವಿಧಿಯಿಲ್ಲದೆ ಹೋಗಲೇಬೇಕಾಗಿರುವ ನಿಷ್ಠುರ ಸತ್ಯದ ಅರಿವಿದ್ದರೂ ಅವ್ಯಕ್ತವಾದ ಭಯ ಕಣ್ಣುಮುಚ್ಚುವಂತೆ ಮಾಡುತ್ತಿತ್ತು. ಸ್ಮಶಾನದೊಳಗಡೆ ಸಾಗುವ ಹೆಣಗಳ ಮೇಲೆ ಹಾಕಿದ ಭಾರವಾದ ಹೂಹಾರಗಳು ರಸ್ತೆಯ ಮೇಲೆ ಬಿದ್ದು ಅಪ್ಪಚ್ಚಿಯಾಗುತ್ತಿದ್ದವು. ಅವನ್ನು ತಪ್ಪಿಸಿಕೊಂಡು ಸರ್ಕಸ್ ಮಾಡುತ್ತ ನಾನು ಮುಖ್ಯರಸ್ತೆಗೆ ಸೇರುತ್ತಿದ್ದೆ.
ಮುಖ್ಯರಸ್ತೆ ತಲುಪುತ್ತಿದ್ದಂತೆ ತಿರುವಿನಲ್ಲಿ ಧುತ್ತನೆ ಎದುರಾಗುವ ಕಾಮಧೇನುಗಳ ಸ್ಥಾವರಭಂಗಿಗೆ ಏನೆನ್ನಲಿ? ನಮ್ಮ ಯಾವ ಅಬ್ಬರದ ಶಬ್ದಗಳಿಗೂ, ಬೆದರಿಕೆಗಳಿಗೂ ಬಗ್ಗದೆ ನಿಲ್ಲುವ ಅವುಗಳನ್ನು ನಾವು ಪ್ರದಕ್ಷಿಣೆ ಹಾಕಿಯೇ ಹೋಗಬೇಕಾಗುತ್ತಿತ್ತು. ಇವೆಲ್ಲವೂ ಪೂರ್ವಯೋಜಿತ ಕರ್ಮವಿರಬಹುದೇ ಎನ್ನುವ ಲೆಕ್ಕಾಚಾರದಲ್ಲಿ ಭಕ್ತಿಭಾವದ ಲಹರಿಯೊಂದು ನನ್ನೊಳಗೆ ಹರಿಯುತ್ತಿತ್ತು. ಹೊರಟಲ್ಲಿಂದ ಗುರಿ ಮುಟ್ಟುವವರೆಗಿನ ಈ ಎಲ್ಲ ಸ್ಥಿತ್ಯಂತರಗಳಲ್ಲಿ ನಾನು ನನ್ನ ಪಂಚೇಂದ್ರಿಯಗಳನ್ನು ಅವುಗಳ ಇಚ್ಛೆಗೆ ತಕ್ಕಂತೆ ಬಿಡುವಂತಿರಲಿಲ್ಲ. ಅವೆಲ್ಲವುಗಳ ಮೇಲೆ ನಿಯಂತ್ರಣವನ್ನು ಸಾಧಿಸುತ್ತ ಏಕಾಗ್ರತೆಯಲ್ಲಿ ಗಾಡಿ ಓಡಿಸುವ ಈ ಸ್ಥಿತಿಯೇ ಪ್ರತ್ಯಾಹಾರವಲ್ಲದೆ ಮತ್ತೇನು?.
ಹಾದಿಯುದ್ದಕ್ಕೂ ಎಲ್ಲ ಹಂತಗಳನ್ನು ನಾಜೂಕಾಗಿ ಅನುಭವಿಸುತ್ತ ಸಾಗುವ ನನ್ನ ಲಕ್ಷ್ಯ ಆಗಲೇ ಧ್ಯಾನದತ್ತ ವಾಲುತ್ತಿತ್ತು. ಮೊದಲ ಹಂತಗಳಲ್ಲಿ ಪಕ್ವವಾಗುತ್ತ ಸಾಗಿದ ಮನಸ್ಸು ಧ್ಯಾನವನ್ನು ಬೇಡುತ್ತಿತ್ತು. ಧ್ಯಾನಮಂದಿರವನ್ನು ಹೊಕ್ಕು ಧ್ಯಾನಕ್ಕೆ ಕುಳಿತವನಿಗೆ ಧಾರಣ, ಸಮಾಧಿಯ ಅರಿವೇ ಇರುತ್ತಿರಲಿಲ್ಲ. ಸಮಾಧಿಯನ್ನು ಮೀರಿದ ಸ್ಥಿತಿ ಇದಾಗಿರಬಹುದೇ ಎನ್ನುವ ಸಂಶಯ ನನ್ನನ್ನೀಗಲೂ ಕಾಡುತ್ತಿದೆ.
****************************
23 thoughts on “ಯೋಗದ ಭಿನ್ನಮುಖ ದರ್ಶನ ”
ದಿನ ನಿತ್ಯದ ಯೋಗದ ದರ್ಶನಗಳ ಬಗ್ಗೆಯ ವಿವರಣೆ ತುಂಬಾ ಹಾಸ್ಯದ ಧಾಟಿಯಲ್ಲಿದೆ. ಉತ್ತಮ ಲಘು ಲೇಖನ. ಅಭಿನಂದನೆಗಳು
ಧನ್ಯವಾದಗಳು
ನಿಜ ! ನಮಗೆ ಅರಿವಿಲ್ಲದೇ ಏಷ್ಟೋ ವಿಷಯಗಳು ಸಾಗುತ್ತಲಿರುತ್ತವೆ. ಆದರೇ, ನಮ್ಮ ಗಮನ ಏಲ್ಲೋ ಕೇಂದ್ರಿಕೃತವಾಗಿರುತ್ತದೆ. ಸೊಗಸಾಗಿದೆ. ಅಭಿನಂದನೆಗಳು. : ಬಿ.ಟಿ.ನಾಯಕ್.
ಧನ್ಯವಾದಗಳು
ಜೀವನ ದರ್ಶನವೇ ಅನಾವರಣಗೊಂಡಿದೆ ಅದ್ಭುತವಾಗಿ. ಅಭಿನಂದನೆಗಳು.
ಧನ್ಯವಾದಗಳು
ಲಘು ಹಾಸ್ಯ ಲೇಖನ ತುಂಬ ಅರ್ಥಪೂರ್ಣ ಬರಹವಾಗಿದೆ
ಧನ್ಯವಾದಗಳು ಮೇಡಂ
ದಿನ ನಿತ್ಯದ ಬದುಕಿನಲ್ಲಿ ಪ್ರತಿಯೊಂದು ಕಾರ್ಯದಲ್ಲಿ ಯೋಗ್ ವನ್ನು ಮಾಡುತ್ತಿದ್ದೇವೆ ಎಂದು ಅರಿಯದೆ ಯೋಗದ ಅನುಭವ ತಿಳಿಸಿಕೊಟ್ಟಿದ Dharmanand ಶಿರ್ವ ಅವರಿಗೆ ನಮಸ್ಕಾರಗಳು.
ನಾವೆಲ್ಲರೂ ಅನುಭವಿಸುತ್ತಿರುವ ಪ್ರತಿಯೊಂದು ನಗರದ ರಸ್ತೆಗಳ ಸ್ಥಿತಿ, ಗುಂಡಿಗಳು, ಸ್ವಚ್ಚತೆಯ ಅಭಾವ ಇದರಂದಾಗುವ ಯಾತನೆಗಳನ್ನು ಸಹಿಸಿಕೊಂಡು , ಸರ್ಕಾರ ಇವೆಲ್ಲವನ್ನೂ ಪರಿಗಣಿಸಿದೆ ಕುಳಿತಿರುವುದು ವಿಪರ್ಯಾಸ.
ತುಂಬಾ ಉತ್ತಮ ಲೇಖನ.
ಧನ್ಯವಾದಗಳು
ಲಘುಹಾಸ್ಯ ಲೇಖನ ತುಂಬಾ ಚೆನ್ನಾಗಿದೆ.
ಜೀವನದ ದಿನ ನಿತ್ಯದ ಅನುಭವವನ್ನು ಅವಲೋಕಿಸುವ ವಿಭಿನ್ನ ರೀತಿಯ ನಿಮ್ಮ ಬರಹ
ನನಗೆ ತುಂಬ ಹಿಡಿಸಿತು.
Really we will do so many dyanas and aasanas in our daily routine. Lekhan cennagide
ಧನ್ಯವಾದಗಳು
ಧನ್ಯವಾದಗಳು
ಧನ್ಯವಾದಗಳು
ವಿಡಂಬನಾತ್ಮಕ ಲೇಖನ ಬರೆಯುವುದಕ್ಕೆ ಪ್ರವಚನ ನಿಮಗೆ ಪ್ರಭಾವ ಬೀರಿದೆ. ಬರಹ ತುಂಬಾ ಚೆನ್ನಾಗಿ ಮೂಡಿಬಂದಿದೆ.
ಅಭಿನಂದನೆಗಳು
ಧನ್ಯವಾದಗಳು ಸರ್
Very nicely explained yoga and Yogasana. I was not knowing that me too doing yoga and Yogasana without my knowledge.
Thank you
Very nice article. Knowingly or unknowingly everybody is doing yoga everyday. Pl keep on writing such articles. Good going.
Thank you very much
ಅನುಭವದ ಲೇಖನ ತುಂಬಾ ಚೆನ್ನಾಗಿದೆ 👌👌
ಧನ್ಯವಾದಗಳು ಮೇಡಂ